ಏನೆಂದು ಶುಭಾಷಯ ಹೇಳುವುದು? ಹೇಗೆ ಧನ್ಯವಾದ ತಿಳಿಸುವುದು? ತಿರುಮಲೇಶರ ಕಾವ್ಯಕ್ಕೆ ಕೃತಜ್ಞತೆ ಹೇಳುವುದೋ ಅಥವಾ ಅವರ ವಿಸ್ತೃತವೂ, ಆಳವೂ ಆದ ವಿದ್ವತ್ತಿಗೆ ನಮಿಸುವುದೋ? ಬಹುಶ್ರುತ, ಕವಿ, ಅನುವಾದಕ, ಮಕ್ಕಳ ಸಾಹಿತ್ಯದಲ್ಲಿ ಕೆಲಸ – ಇಂಥದ್ದಿಲ್ಲ ಎಂದಿಲ್ಲ! ಅವರ ೮೦ನೇ ಜನ್ಮದಿನ ಇದು. ಕರ್ನಾಟಕದಿಂದ ಸದಾ ಹೊರಗೇ ಇದ್ದರೂ ಸಾಹಿತ್ಯಾಸಕ್ತರ ಮನಸ್ಸಿನಲ್ಲಿ ಎಂದೂ ಇದ್ದ ಅವರಿಗೆ ಋತುಮಾನ ಮತ್ತು ಎಲ್ಲ ಓದುಗರ ಪರವಾಗಿ ಪ್ರೀತಿ ಮತ್ತು ನಮಸ್ಕಾರ.
ಪೂರ್ಣಿಮಾ ಸುರೇಶ್ ಅವರು ಕೆ.ವಿ ತಿರುಮಲೇಶರ “ಸಂತೆ” ಕವಿತೆಯ ಭಾವಾಭಿನಯ ಪ್ರಸ್ತುತಿಯನ್ನು ಮಾಡಿದ್ದಾರೆ.
ಇನ್ನೇನು ಕಳೆದು ಬಿಟ್ಟರೆ ಎರಡು ರಾತ್ರೆ
ಸನ್ನಿಹಿತವಾಗುವುದು ಮುಂಡೋಡ್ಳು ಜಾತ್ರೆ
ಹನ್ನೆರಡು ಮುಡಿ ಗದ್ದೆ ಉದ್ದಗಲ ಸಂತೆ
ಕಿನ್ನರರ ನಗರಿಯೇ ಇಲ್ಲಿಗಿಳಿದಂತೆ
ಎಲ್ಲಿ ನೋಡಿದರಲ್ಲಿ ಎಂಥದೋ ಸೆಳಕು
ಎಲ್ಲರನು ಒಟ್ಟಿಗೇ ಸೆರೆಹಿಡಿವ ಥಳಕು
ಮಲ್ಲಿಗೆಯ ಹೂಗಳದೆ ಎಂಥೆಂಥ ಚೆಂಡು
ಚೆಲ್ಲು ಜವ್ವನೆಯರದು ಬಹು ದೊಡ್ಡ ಹಿಂಡು
ಯಾವ ಹೆಜ್ಜೆಯ ಹಿಡಿದು ಹೊರಟವನು ನೀನು?
ಯಾವ ನೋವನು ಮತ್ತೆ ನೆನೆಯ ಬಯಸುವನು ?
ನೋವ ಮರೆ ನಲಿವಪಡೆ ಗುಂಪಿನಲಿ ಸೇರು
ಧಾವಿಸುತ ಏರಿಳಿವ ತೊಟ್ಟಿಲಿಗೆ ಹಾರು
ನೋಡು ದೊಂಬರ ಹೆಣ್ಣ ಆಟ ಮೈ ಮಾಟ
ಆಡು ಮೂರೆಲೆಯಾಟ ಓಡಿಬಿಡು ಓಟ
ಕೂಡು ಸುಸ್ತಾದ ಕಡೆ ಸೇದೊಂದು ಬೀಡಿ
ಮಾಡು ನಿದ್ದೆಯನಾಗಸಕ್ಕೆ ಮುಖ ಮಾಡಿ
ಚಲ್ಲಿದರೆ ಬೆಳಕು ಇನ್ನೆಲ್ಲಿಯದು ಸಂತೆ!
ಅಲ್ಲಿರುವುದೆಲ್ಲ ಬರಿ ಕನಸುಗಳ ಕಂತೆ
ತಲ್ಲಣಿಸದಿರು ಮನವೆ ಕನಸುಗಳು ಇದ್ದೆ
ಎಲ್ಲರಿಗು ಬೀಳುವುದು ಪ್ರತಿರಾತ್ರಿ ನಿದ್ದೆ
ಪ್ರಸ್ತುತಿ: ಪೂರ್ಣಿಮಾ ಸುರೇಶ್
ಪೂರ್ಣಿಮಾ ಅವರು ರಂಗಭೂಮಿ,ಆಕಾಶವಾಣಿ ಕಲಾವಿದೆ. ಕಿರುತೆರೆ ಹಾಗೂ ಸಿನೇಮಾಗಳಲ್ಲಿ ಅಭಿನಯ. ಉದ್ಯೋಗ ಬಸ್ಸು ಉದ್ದಿಮೆ. ೬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ೩ ಕವನಸಂಕಲನಗಳು. DS Max ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ GSS ಪ್ರಶಸ್ತಿ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಗಳು ಇವರಿಗೆ ಸಂದಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಪೀಠದ ಸದಸ್ಯೆ.
ಕನ್ನಡದ ಪ್ರಜ್ಞೆಯನ್ನು ಕನ್ನಡೇತರ ನೆಲದಲ್ಲಿ ಸಾಕ್ಷೀ ಕರಿಸಿ ನಿಜವಾದ ಕನ್ನಡದ ಸಾಕ್ಷಿಪ್ರಜ್ಞೆ ಯಾದವರು ಕೆ.ವಿ. ತಿರುಮಲೇಶ್ ರು.
ನಮ್ಮ ನಡುವಿನ ವಿದ್ವತ್ ವಲಯದ ಮುಂಚೂಣಿಯ ಸಾಹಿತಿ ಗೆ ಸಾವಿರದ ಹಾರೈಕೆಗಳು.
ಡಿ. ಎಂ. ನದಾಫ್
ಅಫಜಲಪೂರ