“ತನಿಖಾ ಸುದ್ದಿಗಳಿಗೆ ಕೊರತೆಯಿಲ್ಲ; ಪ್ರಕಟಣೆಯ ಅವಕಾಶಗಳಿಗೆ ಕೊರತೆಯಷ್ಟೇ

ಮಾಧ್ಯಮಗಳು ಹೊಂದಿರಬೇಕಾದ ಸಾಮಾಜಿಕ ಹೊಣೆಗಾರಿಕೆಯ ರೂಪದಲ್ಲಿ ಮಹತ್ವ ಪಡೆಯುವ ತನಿಖಾ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದಲ್ಲಿ, ಮಾಧ್ಯಮಗಳು ವಿರೋಧಪಕ್ಷಗಳ ಸ್ವರೂಪ ಪಡೆದುಕೊಳ್ಳಬಲ್ಲವು. ದುರದೃಷ್ಟವೆಂದರೆ, ತನಿಖಾ ಪತ್ರಿಕೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ನಮ್ಮಲ್ಲಿ ನಡೆಯುತ್ತಿರುವುದು ಕಡಿಮೆ. ಈಚಿನ ಕೆಲವು ವರ್ಷಗಳಿಂದ ದೇಶದ ಪತ್ರಿಕಾ ವಲಯದಲ್ಲಿ ತನಿಖಾ ಪತ್ರಿಕೋದ್ಯಮ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣವಾಗಿದೆ. ಇಂಥ ಸಂಕ್ರಮಣ ಸಂದರ್ಭದಲ್ಲಿ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ನೀಡಿರುವ ಹೆಗ್ಗಳಿಕೆ ‘ಕಾರವಾನ್’ ಮ್ಯಾಗಜಿನ್‍ನದ್ದು. ‘ಕಾರವಾನ್’ನ ಹಲವು ವರದಿಗಳು ತನಿಖಾ ಪತ್ರಿಕೋದ್ಯಮದ ಹಲವು ಉನ್ನತ ಪ್ರಶಸ್ತಿಗಳನ್ನು ಪಡೆದಿದೆ. ಈ ಪತ್ರಿಕೆಯ ಕಾರ್ಯಕಾರಿ ಸಂಪಾದಕ ವಿನೋದ್ ಕೆ. ಜೋಸ್ ಅವರನ್ನು ತನಿಖಾ ಪತ್ರಿಕೋದ್ಯಮದ ಸ್ಥಿತಿಗತಿ ಹಾಗೂ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಅಂಬರೀಷ್ ಮಾತನಾಡಿಸಿದ್ದಾರೆ.

ಕೃಪೆ: The Wire.in

ಕೃಪೆ: The Wire.in

* ಭಾರತದಲ್ಲಿ ತನಿಖಾ ಪತ್ರಿಕೋದ್ಯಮದ ಸ್ಥಿತಿ ಹೇಗಿದೆ?

– ಐತಿಹಾಸಿಕವಾಗಿ ನೋಡಿದರೆ, ಜಾಗತಿಕ ಮಟ್ಟದಲ್ಲಿ ತನಿಖಾ ಪತ್ರಿಕೋದ್ಯಮವನ್ನು ಗುಣಮಟ್ಟದ ಪತ್ರಿಕೋದ್ಯಮದ ಹೆಗ್ಗುರುತು ಎಂದು ಪರಿಗಣಿಸಲಾಗುತ್ತದೆ. ಸಮಾಜದ ಅತ್ಯಂತ ಪ್ರಭಾವಿ ಹಿತಾಸಕ್ತಿಗಳು ಸಮಾಜದಿಂದ ಮುಚ್ಚಿಡುತ್ತಿರುವ ವಿಷಯಗಳನ್ನು ಸಮಾಜದ ಮುಂದೆ ತೆರೆದಿಡುವುದು ಕೇವಲ ಉದಾತ್ತ ಕಾರ್ಯ ಮಾತ್ರವಲ್ಲ, ಕಟು ಸತ್ಯವನ್ನು ಅಧಿಕಾರದ ಮುಂದಿಡುವುದೂ ಆಗಿದೆ. ಭಾರತದಲ್ಲಿ ತನಿಖಾ ಪತ್ರಿಕೋದ್ಯಮ ಒಂದು ರೀತಿಯಲ್ಲಿ ಜಾರು ಹಾದಿಯಲ್ಲಿದೆ ಎನ್ನಿಸುತ್ತದೆ. ಖಂಡಿತವಾಗಿಯೂ ಇದು ಚಿಂತೆಗೀಡು ಮಾಡುವ ಬೆಳವಣಿಗೆ. ದೊಡ್ಡ, ಹೆಗ್ಗಳಿಕೆ ಇರುವ ಪತ್ರಿಕೆಗಳೇ (Legacy Newspaper) ನಿರಾಸೆ ಹುಟ್ಟಿಸುತ್ತಿವೆ. ಇವೆಲ್ಲವೂ ದೊಡ್ಡ ಸುದ್ದಿಗಳನ್ನು ಹೊರಹಾಕಿದ ಮತ್ತು ಅಧಿಕಾರದಲ್ಲಿರುವವರನ್ನು ಭ್ರಷ್ಟಾಚಾರ ಹಾಗೂ ಆಡಳಿತದ ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡಿದ ಕೀರ್ತಿ ಹೊಂದಿದ್ದವು. ವರದಿಗಾರರು ಮತ್ತು ಸಂಪಾದಕರ ನಡುವೆ ಅಗಾಧವಾದ ಉತ್ಸಾಹವಿರುತ್ತಿತ್ತು ಮತ್ತು ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಸ್ಪರ್ಧೆ ಇರುತ್ತಿತ್ತು. ಆ ಉತ್ಸಾಹ ಸತತವಾಗಿ ಕಡಿಮೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ದೊಡ್ಡ ಸುದ್ದಿಗಳನ್ನು ಫಾಲೋ ಅಪ್ ಕೂಡ ಮಾಡಲಾಗುತ್ತಿಲ್ಲ. ದೇಶದಲ್ಲಿ 2014ರ ಮೊದಲ ಹಾಗೂ 2014ರ ನಂತರದ ಪತ್ರಿಕೋದ್ಯಮ, ಇತಿಹಾಸಕಾರರಿಗೆ ದೇಶದ ಪತ್ರಿಕೋದ್ಯದ ಗುಣಮಟ್ಟವನ್ನು ಅಳೆಯಲು ಸಿಗುವ ಗಮನಾರ್ಹ ಮಾನದಂಡದ ಅವಧಿ.

ಹಾಗೆಂದು ತನಿಖಾ ಸುದ್ದಿಗಳಿಗೇನು ಕೊರತೆ ಇಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ತನಿಖಾ ವರದಿಗಳನ್ನು ಬರೆಯುತ್ತಿದ್ದ ಪತ್ರಿಕಾ ವರದಿಗಾರರು ಈಗ ನರೇಂದ್ರ ಮೋದಿ ಅವರ ಅವಧಿಯಲ್ಲಿಯೂ ಅದೇ ರೀತಿಯ ವರದಿಗಳನ್ನು ಬರೆಯುವಲ್ಲಿ ಅನುಭವಿಸುವ ಹತಾಶೆಯನ್ನು ಆಗಾಗ ಹೊರಹಾಕುತ್ತಲೇ ಇರುತ್ತಾರೆ. ದೊಡ್ಡಸುದ್ದಿಯನ್ನು ಬರೆದಿದ್ದರೂ ಅವರ ಸಂಸ್ಥೆ ಅದನ್ನು ಪ್ರಕಟಿಸುವುದಿಲ್ಲ.

‘ಕಾರಾವನ್’ ಪ್ರಕಟಿಸಿದ ದೊಡ್ಡ ಸುದ್ದಿಗಳು, ಉದಾಹರಣೆಗೆ ನ್ಯಾಯಮೂರ್ತಿ ಲೋಯ ಪ್ರಕರಣ ಅಥವಾ ರಫೇಲ್ ಕುರಿತ ಸುದ್ದಿಗಳು, ದೊಡ್ಡ ಸುದ್ದಿ ಸಂಸ್ಥೆಗಳು ಪ್ರಕಟಿಸಲು ನಿರಾಕರಿಸಿದಂತಹ ಸುದ್ದಿಗಳು. ಲೋಯ ಸುದ್ದಿಯ ವಿಷಯದಲ್ಲಿ ಮಾಹಿತಿ ಹಂಚಿಕೊಂಡ ವರದಿಗಾರನಿಗೆ ಕಾರವಾನ್ ಮೂರನೆಯ ಆಯ್ಕೆಯಾಗಿತ್ತು. ಆ ಸುದ್ದಿ ಬ್ರೇಕ್ ಮಾಡಿದ ವರದಿಗಾರ ನಿರಂಜಲ್ ಟಾಕ್ಲೆ ಒಂದು ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಸುದ್ದಿಯ ಪ್ರಕಟಣೆಗಾಗಿ ಅವರು ಇನ್ನೊಂದು ಸಂಸ್ಥೆಯನ್ನು ಎಡತಾಕಬೇಕಾಯಿತು. ನಾನು ಹೇಳುತ್ತಿರುವುದು ನ್ಯಾಯಮೂರ್ತಿ ಲೋಯ ಸರಣಿಯ ಮೊದಲೆರಡು ವರದಿಗಳ ಬಗ್ಗೆ. ಆ ಮೊದಲ ವರದಿಗಳನ್ನು ಪ್ರಕಟಿಸಿದ ನಂತರ ಕಾರಾವಾನ್ ತನ್ನ ಹಿರಿಯ ವರದಿಗಾರರನ್ನು – ನಿಖಿತಾ ಸಕ್ಸೇನಾ, ಅತುಲ್ ದೇವ್, ಅನೋಶ್ ಮಲಾಕರ್, ಆತಿರಾ ಕೋನಿಕ್ಕರಾ – ನಿಯೋಜಿಸಿ 27 ವಿಸ್ತøತ ವರದಿಗಳನ್ನು ಪ್ರಕಟಿಸಿತು.

ದೇಶ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ‘ಎನ್‍ಎಸ್‍ಎಸ್‍ಒ’ ಅಂಕಿ-ಅಂಶಗಳು ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟದಾಗಿದೆ ಎಂದು ಹೇಳುತ್ತದೆ. ಆರ್ಥಿಕ ಹಿಂಜರಿತ, ಆರ್ಥಿಕ ನೀತಿಗಳು, ಪ್ರಧಾನ ಮಂತ್ರಿಗಳ ಕಚೇರಿ ಹೇಗೆ ಕೆಲಸ ಮಾಡುತ್ತದೆ ಮುಂತಾದವುಗಳನ್ನು ಕುರಿತು ಸುದ್ದಿ ಮಾಡುವ ಹಲವು ಅವಕಾಶಗಳಿವೆ. ಇನ್ನೊಂದೆಡೆ, ಸರ್ಕಾರಿ ಕಚೇರಿಗಳಿಗೆ ಮುಕ್ತ ಪ್ರವೇಶ ಅವಕಾಶ ಕ್ಷೀಣಿಸುತ್ತಿದೆ ಎಂದೂ ವರದಿಗಾರರು ದೂರುವುದನ್ನು ನಾವು ಕೇಳುತ್ತಿದ್ದೇವೆ. ಬೀಟ್ ವರದಿಗಾರರು, ನಿರ್ದಿಷ್ಟ ಸುದ್ದಿಗಳನ್ನು ಬೆನ್ನು ಹತ್ತುತ್ತಿದ್ದಾರೆ. ಅವರಿಗೆ ಸರ್ಕಾರಿ ಕಚೇರಿಗಳಿಗೆ ಪ್ರವೇಶಿಸುವ ಅವಕಾಶ ಅಂದರೆ ಮಾಹಿತಿ ಪಡೆಯುವ ಅವಕಾಶ ಸಿಕ್ಕರೆ ದೊಡ್ಡ ಸುದ್ದಿಗಳ ಸುಳಿವನ್ನು ಹಿಡಿಯಬಲ್ಲರು.

* ಮುಖ್ಯವಾಹಿನಿಯ ಸುದ್ದಿ ಸಂಸ್ಥೆಗಳಲ್ಲಿ ವರದಿಗಾರಿಂದ ಪ್ರತಿ ದಿನ ಒಂದಕ್ಕಿಂತ ಹೆಚ್ಚು ವರದಿಗಳನ್ನು ನಿರೀಕ್ಷಿಸಲಾಗುತ್ತದೆ. ಹಾಗಾಗಿ ಪತ್ರಕರ್ತರಿಗೆ ತನಿಖಾ ಸುದ್ದಿಗಳಿಗೆ ಬೇಕಾದ ಸಮಯ ಸಿಕ್ಕುವುದಿಲ್ಲ. ಕೆಲವು ಸುದ್ದಿಗಳಿಗಂತೂ ತಿಂಗಳುಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇಂಥ ನಿರ್ಬಂಧಗಳ ನಡುವೆ ಸಾಂಪ್ರದಾಯಿಕ ಸುದ್ದಿ ಮನೆಯಲ್ಲಿ ಅಂಥ ಸುದ್ದಿಗಳನ್ನು ಬೆನ್ನು ಹತ್ತುವುದಕ್ಕೆ ಎಲ್ಲ ಪತ್ರಕರ್ತರಿಗೂ ಸಾಧ್ಯವಾಗುತ್ತದೆಯೇ? ಅಥವಾ ಸುದ್ದಿ ಮನೆಗಳನ್ನು ತನಿಖಾ ಪತ್ರಿಕೋದ್ಯಮಕ್ಕೆ ಅನುಕೂಲವಾಗುವಂತೆ, ಕಾರ್ಯಸ್ವರೂಪದಲ್ಲಿ ಬದಲಾವಣೆಯನ್ನು ತರುವ ಮಾರ್ಗವೇನಾದರೂ ಇದೆಯೇ?

ಇದೆ ಎಂದು ಖಂಡಿತವಾಗಿಯೂ ಅನ್ನಿಸುತ್ತದೆ. ಆದರೆ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ, ಹಾಗೆ ಬದಲಾವಣೆ ಮಾಡಬಲ್ಲರೇ ಎಂಬ ಅನುಮಾನವೂ ಅಷ್ಟೇ ಗಂಭೀರವಾಗಿ ಇದೆ. ಇದು ಬಿಜಿನೆಸ್ ಮತ್ತು ಸಂಪಾದಕೀಯ ಬಳಗದ ಆಯ್ಕೆ. ಬಹುಶಃ ಹೆಚ್ಚಿನ ಮಾಧ್ಯಮ ಸಂಸ್ಥೆಗಳು ತನಿಖಾ ಪತ್ರಿಕೋದ್ಯಮ ತೀವ್ರಗೊಳಿಸಬೇಕೆಂದು ಬಯಸಿದರೂ, ಮಾಡಲಾಗದ ಸ್ಥಿತಿಯಲ್ಲಿ ಇವೆ. ಭಾಗಶಃ ಈ ತೀರ್ಮಾನ ಸರ್ಕಾರದೊಂದಿಗೆ ನಿಮಗೆ (ಸುದ್ದಿ ಸಂಸ್ಥೆ) ಇರುವ ಸಂಬಂಧವನ್ನು ಆಧರಿಸಿರುತ್ತದೆ – ವ್ಯಕ್ತಿಗತವಾಗಿ ಮತ್ತು ಉದ್ಯಮದ ದೃಷ್ಟಿಯಿಂದ. ಉದ್ಯಮಿಗಳ ಕುಟುಂಬದ ವ್ಯಕ್ತಿಗಳು, ಸರ್ಕಾರಗಳೊಂದಿಗೆ ಸಾಮಾಜಿಕವಾದ ಅವಲಂಬನೆಯೊಂದನ್ನು ಬೆಳೆಸಿಕೊಂಡಿರುತ್ತಾರೆ. ಜಾಹೀರಾತುಗಳ ದೃಷ್ಟಿಯಿಂದ ಹಣಕಾಸಿನ ಅವಲಂಬನೆಯೂ ಇರುತ್ತದೆ. ಇದು ಆ ಸಂಸ್ಥೆಯ ಗಾತ್ರವನ್ನು ಆಧರಿಸಿರುತ್ತದೆ. ಅತಿ ಲಾಭವಿರುವ ಉದ್ಯಮವಲ್ಲದೇ ಇರುವುದರಿಂದ ಸಾಮಾನ್ಯವಾಗಿ ಶೇ. 10-30 ಜಾಹೀರಾತಿಗೆ ಸರ್ಕಾರವನ್ನು ಅವಲಂಬಿಸಲಾಗಿರುತ್ತದೆ. ಆ ಶೇ. 10 ಜಾಹೀರಾತು ಕೈ ತಪ್ಪಿದರೂ ನೀವು ಉದ್ಯಮವಾಗಿ ಸಕ್ರಿಯವಾಗಿರುವುದು ಅಸಾಧ್ಯವಾಗುತ್ತದೆ. ಸರ್ಕಾರಿ ಜಾಹೀರಾತಿನ ಮೇಲಿನ ಅವಲಂಬನೆ ಖಂಡಿತವಾಗಿಯೂ ಭಾರತೀಯ ಸುದ್ದಿಸಂಸ್ಥೆಗಳನ್ನು ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಉದಾಹರಣೆಗೆÉ, ಈಗಿರುವ ಸರ್ಕಾರವನ್ನೇ ನೋಡಿ. ಮಾಧ್ಯಮ ಸಂಸ್ಥೆಗಳನ್ನು ಸಂಕಷ್ಟದ ಸ್ಥಿತಿಗೆ ತರಲು ತನ್ನ ಅಧಿಕಾರವನ್ನು ಹೇಗೆ ಬಳಸಿಕೊಳ್ಳಬೇಕೆಂದು ಅದಕ್ಕೆ ತಿಳಿದಿದೆ.

* ಭಾರತದಲ್ಲಿ ಸುದ್ದಿ ಮಾಧ್ಯಮ ಸಂಸ್ಥೆಗಳು ಒಂಟಿಯಾಗಿ ಗುರುತಿಸಿಕೊಳ್ಳುತ್ತವೆ. ಒಂದು ಸಂಸ್ಥೆ ಪ್ರಕಟಿಸಿದ ವರದಿಯನ್ನು, ಇನ್ನೊಂದು ಸಂಸ್ಥೆ ಫಾಲೋ ಅಪ್ ಮಾಡುವುದಿಲ್ಲ. ಎರಡು ಭಿನ್ನ ಸಂಸ್ಥೆಗಳು ಕೂಡಿ ಕೆಲಸ ಮಾಡುವುದು ಅಪರೂಪ. ಈ ನಿಟ್ಟಿನಲ್ಲಿ ಡಿಜಿಟಲ್ ಮಾಧ್ಯಮ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದೆ ಎನಿಸುತ್ತದೆ. ಇತರೆ ಉದ್ಯಮಗಳಲ್ಲಿ ಇರುವಂತೆ ಸ್ಪರ್ಧೆ ಇಲ್ಲೂ ಅಗತ್ಯವೆ?

ಖಂಡಿತ. ನಾವು ಜೊತೆಯಾಗಿ ಕೆಲಸ ಮಾಡಬೇಕು. ಕೂಡಿ ಕೆಲಸ ಮಾಡುವ ಅವಕಾಶವಿದ್ದರೆ, ಅದು ಎಂದಿಗೂ ಒಳಿತು. ಸಹಯೋಗದಲ್ಲಿ ನಡೆಯುವ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ ಮತ್ತು ಅಸಾಧಾರಣವಾದ ಭಾವನೆಯನ್ನು ನೀಡುತ್ತದೆ. ಈ ವರ್ಷ, ಕಾರವಾನ್ ಸಂಸ್ಥೆ ‘ದಿ ವೈರ್’ ಮತ್ತು ‘ಸ್ಕ್ರಾಲ್’ ಜೊತೆಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಸುದ್ದಿಯನ್ನು ಪ್ರಕಟಿಸಿದೆವು. ಅತ್ಯಂತ ಮಹತ್ವದ ಸುದ್ದಿಯೊಂದಕ್ಕಾಗಿ ಬಹುಶಃ ಭಾರತೀಯ ಪತ್ರಿಕೋದ್ಯಮದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗ ನಡೆಯಿತು ಎನಿಸುತ್ತದೆ. ಉದ್ದೇಶಗಳು ಉತ್ತಮವಾಗೇ ಇದ್ದಾಗ, ಇದು ಕಷ್ಟವೇ ಆಗುವುದಿಲ್ಲ. ತನಿಖಾ ವರದಿಗಾರಿಕೆ ಎಷ್ಟು ದುಬಾರಿ ಮತ್ತು ಒಂದೇ ಸಂಸ್ಥೆ ಕಾನೂನು ವೆಚ್ಚ ಭರಿಸುವುದು ಎಷ್ಟು ಕಷ್ಟಕರ ಎಂಬುದನ್ನು ನೋಡಿದರೆ, ಜಂಟಿಯಾಗಿ ಕೆಲಸ ಮಾಡುವುದು ಉತ್ತಮ ಪತ್ರಿಕೋದ್ಯಮವನ್ನು ಮುಂದಕ್ಕೆ ಒಯ್ಯುತ್ತದೆ.

* 30 ವರ್ಷಗಳ ಹಿಂದೆ ಬೋಫೋರ್ಸ್ ಹಗರಣದ ವರದಿಗಾರಿಕೆ ವರ್ಸಸ್ ಕಳೆದ ವರ್ಷದ ರಫಾಲ್ ಹಗರಣ. ವರದಿಗಾರಿಕೆಯ ದೃಷ್ಟಿಯಲ್ಲಿ ಇವರೆಡನ್ನೂ ಹೇಗೆ ಹೋಲಿಕೆ ಮಾಡುತ್ತೀರಿ? ರಫಾಲ್ ವರದಿಗಾರಿಕೆಯಲ್ಲಿ ಏನಾದರೂ ನ್ಯೂನತೆಗಳಿದ್ದವೇ? ಇದನ್ನು ಹೇಗೆ ಉತ್ತಮವಾಗಿಸಬಹುದಿತ್ತು?

ಬಹಳ ದೊಡ್ಡ ವ್ಯತ್ಯಾಸವೆಂದರೆ ಬೋಫೋರ್ಸ್ ಹಗರಣದ ಸುದ್ದಿ ಹೊರಬಿದ್ದಿದ್ದು ಭಾರತದಲ್ಲಿ ಅಲ್ಲ, ಯುರೋಪಿನಲ್ಲಿ. ಸ್ವೀಡಿಶ್ ಪತ್ರಿಕೆಯೋ ಅಥವಾ ಅಲ್ಲಿನ ಒಂದು ಸಂಘಟನೆಯೋ ಸುದ್ದಿಯನ್ನು ಬಯಲು ಮಾಡಿತ್ತು. ಭಾರತೀಯ ಮಾಧ್ಯಮ ಸಂಸ್ಥೆಗಳು ಅದರ ಸುಳಿವು ಹಿಡಿದು ನಂತರ ಸುದ್ದಿಯ ಬೆನ್ನು ಹತ್ತಿದವು. ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾದ ಬಹಳ ಮುಖ್ಯವಾದ ಸಂಗತಿ ಎಂದರೆ, ಆಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಇಲ್ಲಿ ಪತ್ರಕರ್ತರ ಆಸಕ್ತಿಗಿಂತ ಹೆಚ್ಚಿನದೇನೊ ಇತ್ತು, ಮತ್ತು ಅದು ಸಾಲು ಸಾಲಾಗಿ ಕ್ರಿಯಾಶೀಲವೂ ಆಗಿತ್ತು. ‘ಇಂಡಿಯನ್ ಎಕ್ಸ್‍ಪ್ರೆಸ್’ನ ಪ್ರಕಾಶಕರಾಗಿದ್ದ ರಮಾನಾಥ್ ಗೊಂಯಿಕಾ ಅವರ ದೆಹಲಿಯ ಅತಿಥಿಗೃಹ, ಕೇವಲ ಪತ್ರಕರ್ತರಿಗಷ್ಟೇ ಅಲ್ಲ, ವಿರೋಧ ಪಕ್ಷದ ರಾಜಕಾರಣಿಗಳಿಗೂ ಅಡ್ಡಾ ಆಗಿಬಿಟ್ಟಿತ್ತು. ಬೋಫೋರ್ಸ್ ಸುದ್ದಿಯ ಸುತ್ತ ಹಲವಾರು ಹಿತಾಸಕ್ತಿಗಳಿಗೆ ವಿಶೇಷ ಆಸಕ್ತಿ ಇತ್ತು. ವಿರೋಧ ಪಕ್ಷವಾಗಿದ್ದ ಬಿಜೆಪಿ, ಹಿರಿಯ ರಾಜಕಾರಣಿ ವಿ.ಪಿ. ಸಿಂಗ್, ಎಡಪಕ್ಷಗಳು ಹಾಗೂ ಪತ್ರಕರ್ತರ ಸಂಘಟಿತ ಪ್ರಯತ್ನಗಳು ಬೋಫೋರ್ಸ್ ವರದಿಗಳಲ್ಲಿ ಸೇರಿದ್ದವು. ಈಗ ರಫಾಲ್ ಸುದ್ದಿಗೆ ಬರೋಣ. ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖಾ ಸಾಧ್ಯತೆಗಳು ಇದ್ದಿದ್ದಲ್ಲಿ, ಖಂಡಿತವಾಗಿಯೂ ರಫಾಲ್ ಒಪ್ಪಂದದಲ್ಲಿ ಇನ್ನಷ್ಟು ಹೆಚ್ಚಿನ ವರದಿಗಳು ಬರುತ್ತಿದ್ದವು.

ಮೊದಲನೆಯದಾಗಿ, ಕಾಂಗ್ರೆಸ್‍ಗೆ ರಾಜಕಾರಣದಲ್ಲಿ ವಿರೋಧಿಸುವುದು ಹೇಗೆಂಬುದು ಗೊತ್ತಿಲ್ಲ. ಕಾಂಗ್ರೆಸ್‍ಗೆ ಗೊತ್ತಿರುವುದು ಆಡಳಿತದ ರಾಜಕಾರಣ ಮಾತ್ರ. ಇದೊಂದು ಐತಿಹಾಸಿಕ ಅಂಶ. ಒಂದು ಪ್ರಕರಣದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದು, ವಿವಿಧ ತಜ್ಞರ ಒಕ್ಕೂಟ ಏರ್ಪಡಿಸುವುದು ಕಾಂಗ್ರೆಸ್ ಮಟ್ಟಿಗೆ ನೆಹರೂ ಕಾಲದಲ್ಲಿಯೇ ನಿಂತುಹೋದ ಬೆಳವಣಿಗೆ.

The Hindu ಪತ್ರಿಕೆಯ ಸಂಪಾದಕ ಎನ್. ರಾಮ್

The Hindu ಪತ್ರಿಕೆಯ ಸಂಪಾದಕ ಎನ್. ರಾಮ್

ರಫಾಲ್ ಸುದ್ದಿಯನ್ನೇ ಗಮನಿಸಿ. ‘ಕಾರಾವಾನ್’, ‘ದಿ ವೈರ್’ ಅಥವಾ ‘ಇಂಡಿಯನ್ ಎಕ್ಸ್‍ಪ್ರೆಸ್’ನ ಸುಶಾಂತ್ ಸಿಂಗ್ ವರದಿ ಮಾಡಿದ ತನಿಖಾ ವರದಿಗಳ ಬಗ್ಗೆ ಕಾಂಗ್ರೆಸ್‍ನ ಪ್ರತಿಕ್ರಿಯೆ ಕೇವಲ ರಾಹುಲ್ ಗಾಂಧಿ ಎಂಬ ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರತಿಕ್ರಿಯೆಯಾಗಿಯೇ ಇರುತ್ತಿತ್ತು. ನನಗೆ ಇನ್ನೂ ನೆನಪಿದೆ, ರಫಾಲ್‍ಗೆ ಸಂಬಂಧಿಸಿದ ‘ಕಾರಾವಾನ್’ನ ಒಂದು ತನಿಖಾ ವರದಿ ಪ್ರಕಟಗೊಂಡು ಎರಡು ವಾರಗಳ ನಂತರ ಕಾಂಗ್ರೆಸ್ ಮಾಧ್ಯಮ ಸೆಕ್ರೆಟರಿ ನಮ್ಮನ್ನು ಸಂಪರ್ಕಿಸಿ ನಾವು ಪ್ರಕಟಿಸಿದ ವರದಿ ಏನು ಎಂದು ವಿಚಾರಿಸಿದ್ದರು. ಅಂದರೆ, ಕಾಂಗ್ರೆಸ್‍ನಂತಹ ಪಕ್ಷದ ಮಾಧ್ಯಮ ಸೆಕ್ರೆಟರಿಗೆ ರಫಾಲ್‍ಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿಯೊಂದರ ಬಗ್ಗೆ ಅರಿವೇ ಇರುವುದಿಲ್ಲ. ಇನ್ನು ಆ ಸುದ್ದಿಯ ರಾಜಕೀಯ ಲಾಭ ಪಡೆಯುವ ಮಾತೆಲ್ಲಿಂದ ಬಂತು? ಹೀಗಾಗಿ, ಬೋಫೋರ್ಸ್ ಹಗರಣದ ವರದಿಯ ಸಮಯದಲ್ಲಿ ಕಂಡುಬಂದ ವಿಭಿನ್ನ ವಿಚಾರಧಾರೆಗಳ ಒಕ್ಕೂಟ ರಫಾಲ್ ಒಪ್ಪಂದದ ಬಗೆಗಿನ ವರದಿಯಲ್ಲಿ ಕಂಡು ಬಂದಿಲ್ಲ.

ನ್ಯಾಯವಾದಿಗಳು, ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಪತ್ರಕರ್ತರ ಕೂಡಿಕೆಯ ಪರವಾಗಿ ನಾನು ಮಾತನಾಡುತ್ತಿಲ್ಲ. ತನಿಖಾ ವರದಿಗಳಿಂದ ರಾಜಕೀಯ ಪಕ್ಷಗಳು ಅಥವಾ ಸ್ವಹಿತಾಸಕ್ತಿ ಗುಂಪುಗಳು ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ಮಾಧ್ಯಮ ಸಂಸ್ಥೆಗಳು ಅವುಗಳಿಂದ ಅಂತರ ಕಾಯ್ದುಕೊಳ್ಳುವುದೇ ಉತ್ತಮ. ಆದರೆ, ಬೋಪೋರ್ಸ್ ಹಾಗೂ ರಫಾಲ್ ವರದಿಗಳ ಪರಿಣಾಮದಲ್ಲಿನ ವ್ಯತ್ಯಾಸದ ವಿಭಿನ್ನ ದೃಷ್ಟಿಕೋನಕ್ಕಾಗಿ ಇದನ್ನು ಹೇಳಿದೆನಷ್ಟೆ.

ಮರಳಿ ಬೋಫೋರ್ಸ್ ಮತ್ತು ರಫಾಲ್ ವರದಿಗಾರಿಕೆಯ ವ್ಯತ್ಯಾಸವನ್ನು ಗಮನಿಸುವುದಾದರೆ, ಯುರೋಪಿನಲ್ಲಿ ಬೋಫೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲ ಸುದ್ದಿಸಂಸ್ಥೆಗಳಲ್ಲಿ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿತ್ತು. ಆ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುವುದಕ್ಕೆ ಮತ್ತು ಫಾಲೋ ಅಪ್ ಮಾಡುವುದಕ್ಕೆ ಎಲ್ಲಾ ಸಂಸ್ಥೆಗಳು ಮುತುವರ್ಜಿ ವಹಿಸಿದವು. ಅದೇ ರಫಾಲ್ ವಿಷಯದಲ್ಲಿ ಸುದ್ದಿ ಪ್ರಕಟಿಸುವ ಬಗ್ಗೆ ಸುದ್ದಿಸಂಸ್ಥೆಗಳಲ್ಲಿ ನೀರವ ಮೌನ ಆವರಿಸಿತ್ತು. ಆರಂಭಿಕ ದಿನಗಳಲ್ಲಿ ‘ಕಾರವಾನ್’ ಮತ್ತು ‘ದಿ ವೈರ್’ ಈ ಸುದ್ದಿ ಬೆನ್ನು ಹತ್ತುವುದರಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಗಳು. ಸ್ವಲ್ಪ ದೀರ್ಘಕಾಲ ನಾವು ಸುದ್ದಿಯನ್ನು ಬಯಲು ಮಾಡುತ್ತಲೇ ಬಂದು ಸರಿಸುಮಾರು 7-8 ಮುಖ್ಯ ಸುದ್ದಿಗಳನ್ನು ವರದಿ ಮಾಡಿದ ಮೇಲೆ ಈ ವರ್ಷದ (2019) ಆರಂಭದಿಂದ ‘ದಿ ಹಿಂದು’ ಪತ್ರಿಕೆ ವರದಿಗಳನ್ನು ಪ್ರಕಟಿಸಲಾರಂಭಿಸಿತು. ಇದು ಸ್ವಾಗತಾರ್ಹ. ಆದರೆ, ಬಹಳ ದೀರ್ಘಕಾಲದವರೆಗೆ ಒಂದು ಮೌನ ವ್ಯಾಪಿಸಿಕೊಂಡಿದ್ದು ಹೌದು. ಒಂದು ದೊಡ್ಡ ಸುದ್ದಿಯಿದ್ದು, ಸರ್ಕಾರವೇ ಕಟಕಟೆಯಲ್ಲಿ ನಿಂತಿರುವಾಗ, ಹೆಗ್ಗಳಿಕೆಯ ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವ ನೂರಾರು, ಇನ್ನು ಕೆಲ ಸಂದರ್ಭಗಳಲ್ಲಿ ಸಾವಿರಾರು ಎನ್ನಬಹುದು – ಪತ್ರಕರ್ತರು ಏನು ಮಾಡುತ್ತಿದ್ದರು? ‘ಕಾರಾವನ್’ ಪತ್ರಿಕೆಗಿರುವುದು ಕೇವಲ 30-35 ಪತ್ರಕರ್ತರು. ‘ಇಂಡಿಯನ್ ಎಕ್ಸ್ಸ್‍ಪ್ರೆಸ್’ 700-800 ಪತ್ರಕರ್ತರನ್ನು ಹೊಂದಿದೆ, ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸುಮಾರು 2,000-3,000 ಪತ್ರಕರ್ತರಿದ್ದಾರೆ. ಇವರೆಲ್ಲರಿಗೂ ಇರುವ ದೊಡ್ಡ ಬ್ರ್ಯಾಂಡ್, ಯಾರನ್ನಾದರೂ ತಲುಪುವ ಅವಕಾಶ. ಈ ಅವಕಾಶ ಸುದ್ದಿಸಂಸ್ಥೆಗೆ ಇರುವ ದೊಡ್ಡ ಇತಿಹಾಸ ಅಥವಾ ಹಿರಿಮೆಯ ಕಾರಣದಿಂದಾಗಿ ದೊರೆಯುವಂತಹದ್ದು. ಇಂಥ ಅನುಕೂಲ ಉಳಿದ ಸಂಸ್ಥೆಗಳಿಗೆ ಕಡಿಮೆ ಇದೆ. ಆದರೆ ಇವರಾರಿಗೂ ಇದು ಸುದ್ದಿ ಎನ್ನಿಸಲಿಲ್ಲ. ನನಗೆ ವೈಯಕ್ತಿಕವಾಗಿ ತಿಳಿದುಬಂದ ಸಂಗತಿ ಎಂದರೆ, ಪ್ರಕಟಣೆಗೆ ನಮಗೆ ಬಂದ ಕೆಲವು ಸುದ್ದಿಗಳು ಆ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟಿಸಲು ನಿರಾಕರಿಸಿದ ಸುದ್ದಿಗಳು.

* ನಿರಂಜನ್ ಟಾಕ್ಲೆ ಅವರು ನ್ಯಾಯಮೂರ್ತಿ ಲೋಯ ಅವರ ಅನುಮಾನಸ್ಪದ ಸಾವಿನ ಕುರಿತ ಸುದ್ದಿ ವರದಿ ಮಾಡಿದ ಮೇಲೆ, ಅವರಿಗೆ ಎಲ್ಲೂ ಕೆಲಸ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ಸವಾಲುಗಳ ನಡುವೆ ಕೆಲಸ ಮಾಡುವ ಪತ್ರಕರ್ತರಿಗೆ ತನಿಖಾ ವರದಿಗಳನ್ನು ಮಾಡುವ ಮತ್ತು ಅವು ಪ್ರಕಟವಾಗುವಂತೆ ನೋಡಿಕೊಳ್ಳುವ ವಿಶಿಷ್ಟ ಮಾದರಿಗೆ ದೇಶ ತೆರೆದುಕೊಳ್ಳುವುದು ಇರುವ ತೊಂದರೆಗಳೇನು?

ಪತ್ರಕರ್ತ ನಿರಂಜನ್ ಠಾಕ್ಲೆ

ಪತ್ರಕರ್ತ ನಿರಂಜನ್ ಠಾಕ್ಲೆ

ನಿರಂಜನ್ ಟಾಕ್ಲೆ ಅವರು ಒಬ್ಬ ಹಿರಿಯ ಪತ್ರಕರ್ತ. ಅವರ ಹಿರಿತನಕ್ಕೆ ಸಮಾನವಾದ ಸಂಬಳವನ್ನು ಕೊಟ್ಟು ಅವರನ್ನು ಉಳಿಸಿಕೊಳ್ಳುವಲ್ಲಿ ‘ಕಾರಾವಾನ್’ಗೆ ಸಾಧ್ಯವಾಗಲಿಲ್ಲ. ‘ಕಾರಾವಾನ್’ ಇನ್ನೂ ಒಂದು ವಿಶೇಷ ವ್ಯವಸ್ಥೆಯಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿತಾದರೂ, ಅದು ಸಾಧ್ಯವಾಗಲಿಲ್ಲ. ಆದರೆ, ಈ ಒಂದು ಪ್ರಕರಣ (ನಿರಂಜನ್ ಟಾಕ್ಲೆ) ಒಂದು ನಾಗರಿಕ ಸಮಾಜವಾಗಿ ಭಾರತದಲ್ಲಿ, ಒಂದು ಬೆಂಬಲ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಬಹಳ ಹಿಂದೆ ಉಳಿದಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದೆ. ಹಣ ಇರುವವರು, ಇಂಥ ಪ್ರಯತ್ನಗಳಲ್ಲಿ ಹಣ ಹೂಡುವುದಕ್ಕೆ ಹಿಂಜರಿಯುತ್ತಾರೆ. ಯಾಕೆಂದರೆ ಇದನ್ನು ಸರ್ಕಾರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಣವುಳ್ಳವರು ಇಂಥ ಅಪಾಯ ಎದುರಿಸುವುದಕ್ಕೆ ಸಿದ್ಧರಿರುವುದಿಲ್ಲ. ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಫೌಂಡೇಷನ್‍ಗಳು, ಕುಟುಂಬಗಳು, ಸಮಾಜೋದ್ದಾರ ಉದ್ದೇಶ ಉಳ್ಳವರು (Phiಟಚಿಟಿಣhಡಿoಠಿisಣ) ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧರಿರುವವರು ಇದ್ದಾರೆ. ಅವರು ತನಿಖಾ ಪತ್ರಿಕೋದ್ಯೋಮವನ್ನು ಬೆಂಬಲಿಸುತ್ತಿದ್ದಾರೆ. ಜೊತೆಗೆ ಕಾನೂನು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶವನ್ನು ಒದಗಿಸುವುದಕ್ಕೆ ಬೆಂಬಲವಾಗಿದ್ದಾರೆ. ಇಲ್ಲಿ ಈ ಕಾರ್ಯವನ್ನು ಸರ್ಕಾರದ ವಿರುದ್ಧ ಎಂದು ನೋಡಲಾಗುತ್ತದೆ ಮತ್ತು ಅಲ್ಲದೆ ಇಂಥ ಪ್ರಯತ್ನಗಳಿಗೆ ಹಣ ಹೂಡುವವರ ಸಂಖ್ಯೆಯೂ ಹೆಚ್ಚಿಲ್ಲ.

* ಭಾರತದಲ್ಲಿ ತನಿಖಾ ಪತ್ರಿಕೋದ್ಯಮದ ಭವಿಷ್ಯ ಹೇಗಿದೆ? ತನಿಖಾ ಪತ್ರಿಕೋದ್ಯಮದ ಲಕ್ಷ್ಯ ಏನಿರಬೇಕು?

ದೊಡ್ಡ ಪತ್ರಿಕಾ ಸಂಸ್ಥೆಗಳು ಈ ದೇಶದ ಅತ್ಯಂತ ಪ್ರಭಾವಿ ಹಾಗೂ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ತನಿಖಾ ಪತ್ರಿಕೋದ್ಯಮ ನಡೆಸಬಹುದು ಎಂಬ ನಿರೀಕ್ಷೆ ನನಗಿಲ್ಲ. ಆದರೂ ಅವು ತನಿಖಾ ವರದಿಗಳನ್ನು ಪ್ರಕಟಿಸುತ್ತವೆ. ಆದರೆ ಆ ಸುದ್ದಿಗಳು ನಾನು ಪರಿಗಣಿಸುವ ಮುಖ್ಯ ಏಳು ಪ್ರಭಾವಿ/ಹಿತಾಸಕ್ತಿಗಳ ಸಂಬಂಧಿತ ಆಗಿರುವುದಿಲ್ಲ. ಈ ಏಳು ಪ್ರಭಾವಿ/ಹಿತಾಸಕ್ತಿ ವಲಯಗಳು ಯಾವುವೆಂದರೆ: 1. ಪ್ರಧಾನ ಮಂತ್ರಿ ಮತ್ತು ಪ್ರಧಾನಿ ಕಚೇರಿ, 2. ಗೃಹ ಸಚಿವಾಲಯ ಮತ್ತು ಗೃಹ ಮಂತ್ರಿ ಅಮಿತ್ ಶಾ ಮತ್ತು ಅವರ ರಾಜಕೀಯ ಮತ್ತು ಉದ್ಯಮ ಆಸಕ್ತಿಗಳು. 3. ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಅವರ ಕಚೇರಿ. 4. ರಿಲಯನ್ಸ್, 5. ಅದಾನಿ, 6. ಆರ್‍ಎಸ್‍ಎಸ್, 7. ರಕ್ಷಣಾ ಬಜೆಟ್. ನಮ್ಮ ದೇಶ ಪ್ರತಿ ವರ್ಷ 3 ಲಕ್ಷ ಕೋಟಿ ರೂಪಾಯಿಯಷ್ಟು ರಕ್ಷಣಾ ಬಜೆಟ್ ಹೊಂದಿದೆ. ರಕ್ಷಣಾ ಬಜೆಟ್‍ನ ದೊಡ್ಡ ಗಾತ್ರದಿಂದಾಗಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅದರ (ರಕ್ಷಣಾ ಬಜೆಟ್) ಸುತ್ತ ದೆಹಲಿಯಲ್ಲಿಯೇ ಸುತ್ತುತಿರುಗುವ ಮಧ್ಯವರ್ತಿಗಳು ಹಾಗೂ ಖರೀದಿದಾರರು ಇದ್ದೇಇರುತ್ತಾರೆ. ಇದ್ಯಾವುದೂ ವ್ಯಕ್ತಿಗತವಾದುದಲ್ಲ, ಆದರೆ ಈ ವ್ಯಕ್ತಿಗಳು ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದು. ಇವು ಬಹಳ ಶಕ್ತಿಶಾಲಿಯಾದ ಹಿತಾಸಕ್ತಿಗಳು. ಒಂದು ಚೈತನ್ಯಶೀಲ ಪ್ರಜಾಪ್ರಭುತ್ವ, ದೊಡ್ಡ ಪತ್ರಿಕೆಗಳು, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿಸಬೇಕು. ಆದರೂ ಈ ದೊಡ್ಡ ಸುದ್ದಿಸಂಸ್ಥೆಗಳು ಈ ವಿಷಯಗಳ ಬಗ್ಗೆ ತನಿಖೆ ನಡೆಸುತ್ತವೆ ಎಂಬ ಬಗ್ಗೆ ನನಗೆ ಅನುಮಾನವಿದೆ.

ತನಿಖಾ ಪತ್ರಿಕೋದ್ಯಮವೆಂದರೆ ಪ್ರಕರಣದ ಬೆಳವಣಿಗೆ, ತೀರ್ಪುಗಳು ಮತ್ತು ಕೋರ್ಟ್ ಪ್ರಕರಣಗಳ ಬಗ್ಗೆ ಬರೆಯುವುದಲ್ಲ. ನನ್ನ ಪ್ರಕಾರ ಯಾವುದೇ ತನಿಖಾ ಸುದ್ದಿ ಅಧಿಕಾರ ನಿಯಂತ್ರಿಸುವ ಕಚೇರಿಗಳನ್ನು ಮುಟ್ಟುವಂತಿರದೇ, ಅವುಗಳ ಪರ ವಾದ ಮಂಡಿಸುವಂತಿದ್ದರೆ, ನೀವು ಜನತೆಯ ಪರವಾಗಿ ಇಲ್ಲ ಎಂದರ್ಥ. ಜನರ ಪರವಾಗಿ ಇರುವುದರ ಬದಲಾಗಿ ನೀವು ಅಧಿಕಾರ ನಿಯಂತ್ರಿಸುವ ಕಚೇರಿಗಳ ಪರವಾಗಿದ್ದೀರಿ ಎಂದರ್ಥ.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


One comment to ““ತನಿಖಾ ಸುದ್ದಿಗಳಿಗೆ ಕೊರತೆಯಿಲ್ಲ; ಪ್ರಕಟಣೆಯ ಅವಕಾಶಗಳಿಗೆ ಕೊರತೆಯಷ್ಟೇ”
  1. ಹ ಹಾ, ಇವರೆಲ್ಲಾ ಯಾವಾಗ ಸುದಾರಿಸುತ್ತ್ರೋರೋ ಗೊತ್ತಿಲ್ಲ,
    ಇವರ ಒಂದೇ ಸಾಲಿನ ಅಜೆಂಡಾ ಮೋದಿ ವಿರೋಧಿಸಿ ಜೀವನ ಮಾಡೋದು, ಗುಜರಾತ್ ದಂಗೆ ಇರ್ಬೋದು,ಬಾಟ್ಲಾ encounter ಇರ್ಬೋದು, ಲೋಯ ಸಾವು ಇರಬೌದೂ ಇವನ್ನೆಲ್ಲ ದಶಕಗಳಿಂದ ಬಿಜೆಪಿ ಮತ್ತು ಮೋದಿ ಯವರನ್ನು ಸದೆಬಡಿಯಲು ಅಸ್ತ್ರ ದಂತೆ ಬಳಸಿಕೊಂಡಿದ್ದಾರೆ, ಆದರೆ ಇವರ ಪ್ರಯತ್ನ ಕೋರ್ಟ್ ನಲ್ಲೂ, ಮತ್ತು ಜನತಾ ಕೋರ್ಟ್ ನಲ್ಲಿ ದಾರುಣವಾಗಿ ವಿಫಲ ಆಯಿತು.
    ನಿಮಗೆ ಜ್ಞಾಪಕ ಇರ್ಬೋದು ಕೆಲ ದಿನಗಳ ಕೆಳಗೆ ಒಂದು ವಾರ್ತೆ ಬಂದಿತ್ತು ಇಂತ ಗಿರಾಕಿ ಗಳಿಗೆ ಚೀನಾ ದವರು ಒಂದು ವರ್ಷಕ್ಕೆ ಸುಮಾರು 4500 ಕೋಟಿ ಕರ್ಚು ಮಾಡುತ್ತಾರಂತೆ(ತಮಗೆ ವಿರುದ್ಧ ಇರುವರನ್ನು ನಿರಂತರವಾಗಿ ಪತ್ರಿಕೆಗಳಲ್ಲಿ ವಿಲನ್ ಆಗಿ ಬರುವಂತೆ ಮಾಡುವುದು) ಇವರೆಲ್ಲಾ ಅದರ ಗಂಜಿ ಗಿರಾಕಿಗಳು.
    ಚೀನಾದ ಅಮೆದ್ಯ ತಿಂದ ಋಣಕ್ಕೆ ಈ ತರ ಲೇಖನಗಳು…

ಪ್ರತಿಕ್ರಿಯಿಸಿ