ಕ್ಯಾಲಿಗ್ರಾಫಿ ಮತ್ತು ಹಿಂದೂಗಳು

ಕನ್ನಡದಲ್ಲಿ ಮತ್ತು ಹಿಂದೂಗಳಲ್ಲಿ ಕ್ಯಾಲಿಗ್ರಫಿ ಕಲೆ ಇತ್ತೇ? ಇತರ ಅನೇಕ ಕಲಾಪ್ರಕಾರಗಳಲ್ಲಿ ಮಹತ್ವವಾದ್ದನ್ನು ಸಾಧಿಸಿದ ಹಿಂದೂ ಪರಂಪರೆಯಲ್ಲಿ ಈ ಕಲೆ ಅಷ್ಟೊಂದು ಪ್ರಮಾಣದಲ್ಲಿ ಏಕೆ ಉತ್ಪತ್ತಿಯಾಗಲಿಲ್ಲ? ಇದಕ್ಕಿರುವ ಕಾರಣಗಳೇನು? ಅದರ ಮಧ್ಯದಲ್ಲಿಯೂ ಕನ್ನಡದಲ್ಲಿ ಕ್ಯಾಲಿಗ್ರಫಿಯನ್ನು ಹೇಗೆ ಪ್ರಯತ್ನಿಸಲಾಯಿತು? ಕೆಲವು ಕುತೂಹಲಕರ ಟಿಪ್ಪಣಿಗಳನ್ನು ಕನ್ನಡದ ಸ್ವತಂತ್ರ ಇತಿಹಾಸಕಾರ ನಿಧಿನ್ ಓಲಿಕಾರ ದಾಖಲಿಸಿದ್ದಾರೆ.

ಕಳೆದ ಒಂದೆರಡು ದಿನಗಳಿಂದ ರಘು ಭಾಸ್ಕರನ್ ಅವರು ಮುಂದಿಟ್ಟ ಒಂದು ಅತ್ಯುತ್ತಮ ಪ್ರಶ್ನೆಯ ಬಗೆಗೆ ನಾನು ಆಲೋಚಿಸುತ್ತಿದ್ದೇನೆ. ಅವರ ಪ್ರಶ್ನೆ ಹೀಗಿತ್ತು. “ಇಸ್ಲಾಮ್ ನಾಗರೀಕತೆಯು ಗ್ರನಡಾದಿಂ ದೆಹಲಿಯವರೆಗೆ, ಎಲ್ಲೆಲ್ಲೂ ಅದಕ್ಕೆ ಸಾಟಿಯಿಲ್ಲದ ಸೌಂದರ್ಯದ ಕ್ಯಾಲೀಗ್ರಫಿ ಪಠ್ಯವನ್ನು ರಚಿಸಿದಂತೆ ಮತ್ತು ಲಾಟಿನ್ ಮತ್ತು ಬೈಝಂಟಿಯನ್ ಪರಂಪರೆಯ ಕ್ರಿಸ್ಚಿಯನ್ ನಾಗರೀಕತೆಯಂತೆ ಈ ನಿರ್ದಿಷ್ಠವಾದ ಕ್ಯಾಲೀಗ್ರಫಿ ಕ್ಷೇತ್ರದಲ್ಲಿ ಹಿಂದುಗಳು ಏಕೆ ಮುಂದುವರೆಯಲಿಲ್ಲ? ಚೀನಾದವರಲ್ಲೂ ಮತ್ತು ಜಪಾನೀಯರಲ್ಲೂ ಸಹ ಕ್ಯಾಲೀಗ್ರಫಿಯ ಅತೀ ಉತ್ತಮ ಉದಾಹರಣೆಗಳಿವೆ. ಗಣಿತ, ತರ್ಕ, ವಿಜ್ಞಾನ, ಎಂಜಿನಿಯರಿಂಗ್ ಮತ್ತು ಕಲೆಗಳ ಕ್ಷೇತ್ರಗಳಲ್ಲಿ ನಾವು ಶ್ರೇಷ್ಠತೆಯನ್ನು ತೋರಿದ್ದರೂ ಸಹ (ಸಾವಿರಾರು ವರ್ಷಗಳಿಂದ) ಈ ಕ್ಷೇತ್ರದಲ್ಲಿ ಮಾತ್ರಾ ನಾವು ಏಕೆ ಯಾರಿಗೂ ಸರಿಗಟ್ಟಿ ನಿಲ್ಲದೆ ಬಹಳ ಹಿಂದೆಯೇ ಉಳಿದಿದ್ದೆವು?

ನಾನು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದು ಅವಕಾಶದಂತೆ (ಇದು ಹಗುರವಾದ ಪ್ರಶ್ನೆಯಂತೆ ಕಂಡರೂ ಇದು ನಿಗೂಢವಾಗಿಯೂ ಸಹ ತೋರುತ್ತದೆ) ನಾನು ನನ್ನ ಗೆಳೆಯರಾದ ಹಾಗೂ ಪುರಾತತ್ವ ಶಾಸ್ತ್ರಜ್ಞರಾದ ಡಾ. ಶಾಂತಾರಾಮ್ ಸಾಮಕ್ ಮತ್ತು ಶಿಲಾ ಶಾಸನ ತಜ್ಞರಾದ ಜಗದೀಶ್ ಅಗಸಿಬಾಗಿಲ್ ಇವರುಗಳೊಂದಿಗೆ ಸಂಭಾಷಣೆ ನಡೆಸಿದೆ.

ನಾವು ಮೂವರೂ ವಿಂಧ್ಯ ಪರ್ವತಗಳ ದಕ್ಷಿಣ ಪ್ರದೇಶಕ್ಕೆ ಸಂಬಂಧಿಸಿದ ಹಾಗೆ ಮಾತ್ರ ಮಾತನಾಡ ಬಲ್ಲೆವು ಎಂಬುದನ್ನು ದಯವಿಟ್ಟು ನೆನಪಿಡಿ.

ಡಾ. ಸಾಮಕ್‍ ರವರು ಕೆಲವು ಯಥೋಚಿತ ಅಂಶಗಳನ್ನು ಪಟ್ಟಿ ಮಾಡಿದರು.

1. ನಮಗೆ ಇಲ್ಲಿ ಬರೆಯಲು ಸಿಗುತ್ತಿದ್ದ ಸಾಮಾಗ್ರಿಗಳೆಂದರೆ ತಾಳೆಗರಿಯ ಓಲೆಗಳು ಮತ್ತು ತಾಮ್ರದ ತಗಡುಗಳು. ಅವುಗಳ ಮೇಲೆ ಬರೆಯಲು ಚೂಪು ಮಾಡಿದ ಮುಳ್ಳಿನ ಮೊನೆಯುಳ್ಳ ಕಂಟವಿರುತ್ತಿತ್ತು. ಇವು ಅಲಂಕಾರಿಕ ಮಾದರಿಗಳಲ್ಲಿ ಬರೆಯಲು ಸಾಧ್ಯವಾಗುವ ಸಾಧನಗಳಲ್ಲ. ಒಂದು ಸೂಜಿ ಮೊನೆಯಂಥಹ ಸಾಧನದಿಂದ ತಾಳೆಗರಿಯ ಮೇಲೆ ಒಂದು ಹಂಸವನ್ನು ಬಿಡಿಸುವುದನ್ನು ಕಲ್ಪಿಸಿಕೊಳ್ಳಿ!! ತಾಳೆಗರಿಯ ಒಳಗಿನ ನಾರುಗಳೂ ಸಹ ಅಡ್ಡಡ್ಡವಾಗಿ ಹರಿದಿರುತ್ತವೆ. ಚೂಪು ಕಂಟದಿಂದ ಅದರಲ್ಲಿ ಮೇಲಿನಿಂದ ಕೆಳಕ್ಕೆ ಆಳವಾಗಿ ಕೊರೆದು ಬರೆಯುವುದು ಸುಲಭವಲ್ಲ. ತಾಮ್ರದ ಪಟ್ಟಿಗಳ ಮೇಲಾಗಲೀ ಅಥವಾ ಸುಣ್ಣ ಕಲ್ಲಿನ ಬಳಪಗಳಿಂದ ಬರೆಯುತ್ತಿದ್ದ ಹತ್ತಿ ಬಟ್ಟೆಯ ಕಡತಗಳ ಮೇಲಾಗಲೀ ಹೆಚ್ಚಾಗಿ ಏನನ್ನು ಮಾಡಲೂ ಸಹ ಆಗುತ್ತಿರಲಿಲ್ಲ. ಈಜಿಪ್ಟ್ ದೇಶದವರು ಪಾಪೀರಸ್ಸಿನ ಮೇಲೆ ಬರೆಯುತ್ತಿದುದರಿಂದ, ಇದಕ್ಕೆ ತದ್ವಿರುದ್ಧವಾಗಿ ಮಧ್ಯ ಪ್ರಾಚ್ಯದಲ್ಲಿ, ಪೌರಾತ್ಯ ಭಾಗಗಳಲ್ಲಿ ಮತ್ತು ಯೂರೋಪಿನಲ್ಲಿ, ನಯವಾದ ತೊಗಲು ಹಾಳೆಗಳ ಮೇಲೆಯೂ ಮತ್ತು ಕಾಗದದ ಮೇಲೆಯೂ ಬರೆಯುತ್ತಿದ್ದರು. ತೊಗಲು ಹಾಳೆಗಳ ಮೇಲೆ ಮತ್ತು ಕಾಗದ ಮೇಲೆ ಮಸಿಯಿಂದ ಬರೆದರೆ ಅದ್ಭುತವಾದ ಕೈ ಬರಹಗಳೂ ಮತ್ತು ಕೈ ಬರಹದ ಕಲೆಯೂ ಮೂಡಲು ಸಾಧ್ಯವಾಗುತ್ತಿತ್ತು. ಕರುವಿನ ಚರ್ಮದಿಂದ ಮಾಡಿದ ತೊಗಲು ಹಾಳೆಯ ಉಪಯೋಗ ಧಾರ್ಮಿಕವಾಗಿ ವರ್ಜ್ಯವಾಗಿದ್ದುದರಿಂದ ಅದರ ಮೇಲೆ ಬರೆಯುವುದು ಇಲ್ಲಿ ಸಾಧ್ಯವಿರಲಿಲ್ಲ. ಮತ್ತು ಕಾಗದದ ಉಪಯೋಗ, ನಮ್ಮಲ್ಲಿ ಪ್ರಾರಂಭವಾದದ್ದು ಯೂರೋಪಿಯನ್ನರು ಇಲ್ಲಿಗೆ ಬಂದ ನಂತರವೇ.

2. ಇಸ್ಲಾಮ್ ಮತ್ತು ಕ್ರಿಸ್ಚಿಯನ್ ಧರ್ಮಗಳು ಒಂದು ಪುಸ್ತಕವನ್ನು ಆಧಾರಿಸಿದ ಧರ್ಮಗಳಾಗಿದ್ದವು. ಆದುದರಿಂದ ಮಾಹಿತಿಯನ್ನು ಬರವಣಿಗೆಯ ಮೂಲಕ ಪ್ರಸರಿಸುವುದು ಅವರಿಗೆ ಅತ್ಯಂತ ಮುಖ್ಯವಾಗಿತ್ತು. ಹಿಂದೂ ಧರ್ಮದವರು ತಮ್ಮ ಧರ್ಮ ಶಾಸ್ತ್ರಗಳನ್ನು ಮೌಖಿಕವಾಗಿ ಪಠಣೆಯ ಮೂಲಕ ಪ್ರಸರಿಸುತ್ತಿದ್ದರು. ಇಸ್ಲಾಮ್ ಧರ್ಮವು ಆಕಾರಗಳ ಚಿತ್ರ ಬಿಡಿಸುವುದನ್ನು ಮತ್ತು ರೂಪಿಸುವುದನ್ನು ನಿಶೇಧಿಸುತ್ತಿತ್ತು. ಆದುದರಿಂದ ಇಸ್ಲಾಮಿನ ಲ್ಲಿಪ್ಪಿಕಾರರಿಗೆ ತಮ್ಮ ಪದಗಳನ್ನು ಮತ್ತು ಅಕ್ಷರಗಳನ್ನೇ ಕಲಾತ್ಮಕವಾಗಿ ಬರೆಯುವುದು ಇನ್ನೂ ಹೆಚ್ಚು ಮುಖ್ಯವಾಯಿತು.

ತಾಳಗುಂದದ ಕಂದಂಬರ ಕಾಲದ ಬರಹ

3. ಕಲ್ಲಿನ ಮೇಲೆ ಕೊರೆದ ಇಸ್ಲಾಮಿನ ಕ್ಯಾಲಿಗ್ರಫಿ ಸಹ ಅತ್ಯಂತ ಸುಂದರವಾಗಿದೆ. ಆದರೆ ಕಲ್ಲಿನ ಮೇಲೆ ಕೊರೆದ ಆ ಬರಹಗಳು ಸಾಮಾಜಿಕ ಪಠ್ಯಗಳಾಗಿವೆಯೇ ಹೊರತು ಧಾರ್ಮಿಕವಲ್ಲ. ಆ ಕಲ್ಲಿನ ಮೇಲಿನ ಬರಹಗಳು ಬಹುತೇಕವಾಗಿ ದೇವಸ್ಥಾನಗಳಿಗೆ ನೀಡಿದ ದೇಣಿಗೆಗಳು, ಭೂದಾನಗಳು ಮತ್ತು ಸಂಗ್ರಹಿಸಿದ ತೆರಿಗೆಗಳ ಬಗ್ಗೆ ಬರೆದುವಾಗಿವೆ. ಒಂದಾದ ಮೇಲೆ ಒಂದರಂತೆ ಬಹು ಪೀಳಿಗೆಯ ಇಸ್ಲಾಮಿನ ಲಿಪಿಕಾರರಿಗೆ ಮತ್ತೆ ಮತೆ ್ತಅದೇ ಕುರಾನಿನ ಪಠ್ಯಗಳನ್ನು ಕಲ್ಲಿನ ಮೇಲೆ ಕೊರೆದು ಅಭ್ಯಾಸವಾಗಿ ಹೋಗಿರುತ್ತಿತ್ತು. ಅದೇ ಹಿಂದೂ ಲಿಪಿಕಾರರಿಗೆ ಅಥವಾ ಶಿಲ್ಪಿಗಳಿಗೆ ತಾವು ಮುಂದೆ ಏನನ್ನು ಬರೆಯಬೇಕೆಂಬುದರ ಬಗ್ಗೆ ತಿಳಿದಿರುತ್ತಿರಲಿಲ್ಲ! ಹಂಪೆಯಲ್ಲಿ ಮತ್ತು ಇನ್ನಿತರ ಅಸಂಖ್ಯಾತ ದೇವಾಲಯಗಳಲ್ಲಿ ಮಹಾಭಾರತವೂ ಕೂಡ ಸ್ಥಿರಚಿತ್ರದ ಕಲ್ಲಿನ ಪಟ್ಟಿಗಳಲ್ಲಿ (ಫ್ರೈಜ್) ಮತ್ತು ಗೋಡೆ ಚಿತ್ರಗಳಲ್ಲಿ ವಿಶದವಾಗಿ ವಿವರವಾಗಿ ಚಿತ್ರಿಸಲ್ಪಟ್ಟಿದೆ.

4. ಹಾಗಾಗಿ ಅಕ್ಷರಗಳನ್ನು ಕಲಾತ್ಮಕವಾಗಿ ಅಲಂಕರಿಸಲು ಯಾವುದೇ ಪ್ರೇರಣೆಯಿರಲಿಲ್ಲ. ಏಕೆಂದರೆ ಇನ್ನೂ ಉತ್ತಮ ಮಟ್ಟದ ಆಲಾಂಕಾರಿಕ ವಿಧಾನಗಳಾದ ವರ್ಣ ಚಿತ್ರಕಲೆ ಮತ್ತು ಶಿಲ್ಪಕಲೆಗಳು ಹಿಂದೂಗಳಿಗೆ ಲಭ್ಯವಿದ್ದವು. ಇದೇ ಕಾರಣದಿಂದಾಗಿ ಕ್ರಿಸ್ಚಿಯನ್ನರೂ ಸಹ ಇಸ್ಲಾಮಿನವರಷ್ಟು ಕ್ಯಾಲೀಗ್ರಫಿಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿಲ್ಲ.

ಹಾಗಿದ್ದಾಗ್ಯೂ ಕೂಡ ನಿರಂತರವಾಗಿ ಹುಡುಕಾಟದಲ್ಲಿದ್ದ ಭಾರತೀಯ ಮನಸ್ಸು ಬುದ್ಧಿಗಳು ಏನನ್ನೂ ಮಾಡದೆ ಸುಮ್ಮನೆ ಕುಳಿತುಬಿಡಲಿಲ್ಲ ಎನ್ನುವುದು ತಿಳಿದಾಗ ನನಗೆ ಹರ್ಷ ತುಂಬಿದ ಅಚ್ಚರಿಯಾಯಿತು. ಕರ್ನಾಟಕದ ಒಂದು ಕಾಲಘಟ್ಟದಲ್ಲಿ ಕ್ಯಾಲೀಗ್ರಫಿಯ ತಂತ್ರಗಳನ್ನು ಪರಿಚಯಗೊಳಿಸುವುದು ಆರಂಭವಾಗಿತ್ತು.

ಈ ಕೆಳಗಿನ ಚಿತ್ರಗಳಲ್ಲಿ ಕೆಲವು ಉದಾಹರಣೆಗಳಿವೆ.

 

1.ತಾಳಗುಂದದಲ್ಲಿರುವ ಒಂದು ನಿಂತಿರುವಕಂಭದ ಮೇಲಿರುವ ಕದಂಬರ ಕಾಲದ ಕಲ್ಲಿನ ಮೇಲಿನ ಕೆತ್ತನೆಯಲ್ಲಿ ಇವನ್ನು ಕಾಣಬಹುದು – ಪ್ರತಿ ಅಕ್ಷರವೂ ಪ್ರಾರಂಭವಾಗುವ “ತಲೆಕಟ್ಟಿನ’ ಜಾಗದಲ್ಲಿ ಕಲಾತ್ಮಕವಾಗಿ ಒಂದು ಚಚ್ಚೌಕವಿದೆ. ಮತ್ತೂ ಇತರ ಅಕ್ಷರಗಳಿಗೆ ಬಾಲಗಳನ್ನೂ ಕೊಕ್ಕೆಗಳನ್ನೂ ಬಿಡಿಸಲಾಗಿದೆ. ರು ಮತ್ತು ಪ ವ್ಯಂಜನಗಳು + ಸ್ವರಗಳ ಬಾಲಗಳೂ ಸಹ ಉದ್ದವಾಗಿ ಎಳೆಯಲ್ಪಟ್ಟಿವೆ. ಅಲಂಕರಿಸುವ ಒಂದು ಪ್ರಯತ್ನ ಇಲ್ಲಿ ಪ್ರಾರಂಭವಾಗಿದೆ. ಮತ್ತೂ ಗಮನಿಸಿ. ಕೆಲವು ಅಕ್ಷರಗಳು ತೆಳುವಾಗಿ ಉದ್ದವಾಗಿವೆ. ಇದಕ್ಕೂ ಹಿಂದೆ ಶಾತವಾಹನರ ಕೆತ್ತನೆಗಳಲ್ಲಿ ಲಿಪಿಕಾರರು ಅಕ್ಷರಗಳ ಕಲಾತ್ಮಕತೆಗಾಗಿ ತಲೆಕಟ್ಟನ್ನು ಚಚ್ಚೌಕದ ಬದಲು ತ್ರಿಕೋನದಂತೆ ರೂಪಿಸುತ್ತಿದ್ದರು.

ಹೊಯ್ಸಳ ಕ್ಯಾಲಿಗ್ರಫಿ

2. ನಿಜ ಹೇಳಬೇಕೆಂದರೆ ಹೊಯ್ಸಳರು ತಮ್ಮ ಶಿಲ್ಪಗಳಂತೆಯೇ ಆ ಕಾಲದ ಅತ್ಯಂತ ಸುಂದರ ಕೆತ್ತನೆಗಳನ್ನೂ ಬರಹಗಳನ್ನೂ ರೂಪಿಸಿ ಅವುಗಳನ್ನು “ಮುತ್ತಿನ ಮಾಲೆ”- ಅಂದರೆ ಮುತ್ತುಗಳ ಹಾರ ಎಂದು ಕರೆದರು. ಚಿತ್ರದಲ್ಲಿ ಗಮನಿಸಿದರೆ ಅಕ್ಷರಗಳು ದುಂಡಾಗಿ ಮುತ್ತುಗಳಂತೆಯೇ ಕಾಣುತ್ತವೆ. “ಶ್ರೀ’ ಬರೆಯುವಾಗ ಮತ್ತು ವೃತ್ತಾಕಾರದ ಕಾಗುಣಿತದ ಚಿನ್ಹೆಗಳಿರುವ ಅಕ್ಷರಗಳನ್ನು ಗಮನಿಸಿದರೆ ಆ ಚಿನ್ಹೆಗಳನ್ನು ಅಕ್ಷರಗಳಿಗಿಂತ ಎತ್ತರಕ್ಕೆ ಏರಿಸಿ ಚಾವಣಿಯಂತೆ ರೂಪಿಸಿರುವುದನ್ನು ಕಾಣಬಹುದು. ಅಲ್ಲದೆ ಒಂದು ಸಾಲಿನ ಅಕ್ಷರಗಳ ಒತ್ತಕ್ಷರಗಳನ್ನು ಕೆಳಗಿನ ಸಾಲಿನ ಪಠ್ಯಗಳ ಮಧ್ಯೆ ಮಧ್ಯೆ ಕೂಡಿಸಿ ದೃಷ್ಟಿಗೆ ಸುಂದರವಾಗಿ ಕಾಣುವಂತೆ ಮಾಡಿರುವುದನ್ನೂ ಕಾಣಬಹುದು.

 

ಜೈನರ ತಾಮ್ರದ ಪಟ್ಟಿಯ ಮೆಲಿನ ಬರವಣಿಗೆ

3. ಮುಂದೆ ನಾವು ಒಂದು ತಾಮ್ರಪಟ್ಟಿಯ ಮೇಲೆ ಪಠ್ಯವನ್ನು ಅತ್ಯಂತ ಸುಂದರವಾಗಿ ಜೋಡಿಸಿರುವುದನ್ನು ಕಾಣುತ್ತೇವೆ! ಇದು ಒಂದು ಜೈನಧರ್ಮದ ಕೆತ್ತನೆ. ಇದರ ಮಧ್ಯದಲ್ಲಿ “ಓಂ ಮತ್ತು ಶ್ರೀ’ಗಳನ್ನು ಹೇಗೆ ಬರೆಯಲಾಗಿದೆ ಎಂಬುದನ್ನು ನೋಡಿ! ಆ ಓಂ ಮತ್ತು ಶ್ರೀ ಗಳ ಸುತ್ತ ವೃತ್ತಾಕಾರವಾಗಿ “ಓಂ ನಮೋ ಅರಿಹಂತಾಣಂ ಸ್ವಾಹ” ಎಂದು ಮತ್ತೆ ಮತ್ತೆ ಬರೆಯುತ್ತಾ ಹೋಗಿದೆ. ಒಳಗಿನ ಒಂದು ಮತ್ತು ಎರಡನೆಯ ಸುರಳಿಯ ವೃತ್ತಗಳ ಸ್ವರ ಮತ್ತು ವ್ಯಂಜನಗಳನ್ನು ನೋಡಿ.

4. ಚಿತ್ರದುರ್ಗದ ಕ್ರಿಸ್ತ ಶಕ 1067ರ ಈ ಕೆತ್ತನೆ ಮತ್ತು ಭಾಷಾಚಂತರ ಅತ್ಯಂತ ಆಸಕ್ತಿಕರವಾಗಿವೆ. ಈ ಪಠ್ಯದ ಒಂದು ಭಾಗ ಹೀಗಿದೆ – “ಆನೆಯ ಸಿಂಘದ ಗಿಳಿಗಳ ನಾನಾರೂಪಗಳ ನಕ್ಕರಂಗಳೊಳೆಯಸೆಯಲು ತಾನಳವಡಿಸುವೆನೆಸೆದದೇನಿಂದಿತೆಮರು . .ದೆ ತೊದರೆ ಬರವಣವದೊಳ್ “. ಅಂದರೆ ಲಿಪಿಕಾರನೂ ಶಿಲ್ಪಿಯೂ ತಾನೇ ಆದ ಸೋವರಾಸಿಯು ಈ ಕಲೆಯಲ್ಲಿ ಎಷ್ಟು ನೈಪುಣ್ಯನಾಗಿದ್ದನೆಂದರೆ ಅವನು, ಅಕ್ಷರಗಳನ್ನು ಉಪಯೋಗಿಸಿ ಆನೆ, ಸಿಂಹ, ಗಿಳಿ ಮತ್ತಿತರ ರೂಪಗಳನ್ನು ಕೆತ್ತ ಬಲ್ಲವನಾಗಿದ್ದನು. ಹಾಗಾಗಿ 11ನೇ ಶತಮಾನದಲ್ಲಿ ತಮ್ಮ ಸಮಕಾಲೀನ ಇಸ್ಲಾಮ್ ಧರ್ಮದವರಂತೆಯೇ ಅಕ್ಷರಗಳನ್ನು ಪ್ರಾಣಿಗಳಂತೆ ಮತ್ತಿತರ ರೂಪಗಳಲ್ಲಿ ರಚಿಸಬಲ್ಲವರು ನಮ್ಮಲ್ಲಿಯೂ ಇದ್ದರು.

ಡಾ. ಜಗದೀಶ್ ಅಗಸಿಬಾಗಿಲ್‍ ರವರು ಇವೆಲ್ಲವನ್ನೂ ಬಹಳ ಆದರದಿಂದ ನನ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಮುಂದುವೆರೆದು ಹೀಗೆ ಹೇಳಿದರು. ” ಹೊಯ್ಸಳರ ಕಾಲದಲ್ಲಿ ಅತ್ಯಂತ ಉನ್ನತಿಯನ್ನು ಹೊಂದಿದ್ದ ಕನ್ನಡದ ಕಲೆಯ ಕೆತ್ತನೆಯ ಮತ್ತು ಶಿಲ್ಪದ ಸೊಗಸು, ಹೊಯ್ಸಳರ ಪತನದ ನಚಿತರ ಅವನತಿ ಹೊಂದಿತು. ಆಗ ಕೆತ್ತನೆಗಾಗಿ ಮೃದುವಾದ ಬಳಪದ ಕಲ್ಲಿನ ಬದಲಾಗಿ ಗಟ್ಟಿಯಾದ ಬೆಣಚು ಕಲ್ಲನ್ನು ಉಪಯೋಗಿಸಲು ಆರಂಭಿಸಿದರು. ಆ ಗಡುಸಾದ ಕಲ್ಲಿನ ಮೇಲೆ ಕೆತ್ತುವುದು ಕಠಿಣವಾಗಿತ್ತು. ಅದರ ಮೇಲೆ ತಮ್ಮ ಕೆತ್ತನೆಯ ಕೆಲಸದ ನೈಪುಣ್ಯತೆಯನು ತೋರಿಸಲೂ ಸಹ ಶಿಲ್ಪಿಗಳಿಗೆ ಮಿತಿಗಳಿದ್ದವು. ಅಲ್ಲಿಂದ ಮುಂದಕ್ಕೆ ಕನ್ನಡದ ಬರವಣಿಗೆಯೂ ಅವನತಿಯತ್ತ ನಡೆಯಿತು. ಹಾಗಾಗಿ ಅಲ್ಲಲ್ಲಿ ಅಕ್ಷರಗಳಲ್ಲಿ ತಪ್ಪುಗಳು ಕಾಣಸಿಗುತ್ತವೆ. ದೇವಾಲಯಗಳ ಸ್ಥಪತಿಗಳು ಇದೇ ಕಾಲದಲ್ಲಿ ತಮಿಳುನಾಡಿನಿಂದ ಬರುವುದಕ್ಕೆ ಆರಂಭಿಸಿದರು. ಕರ್ನಾಟಕದ ದೇವಸ್ಥಾನಗಳ ರೂವಾರಿಗಳ ಸಂಖ್ಯೆ ನಶಿಸತೊಡಗಿತ್ತು. ಹಾಗಾಗಿ 400 ವರ್ಷಗಳ ಈ ಕಲಾತ್ಮಕ ಬರವಣಿಗೆಯ ಬೆಳಕು ಕ್ಷೀಣಿಸತೊಡಗಿತ್ತು.

ಇದೂ ತುಂಬಾ ಆಸಕ್ತಿಕರವಾದ ವಿಷಯವಾಗಿದೆ. ಏಕೆಂದರೆ ಶಿವಮೊಗ್ಗ ಮತ್ತು ಸಾಗರದ ಬಳಿ ನನಗೆ ಇಡೀ ಭಾರತದಲ್ಲೇ ಅತಿ ಹೆಚ್ಚು ಸುಂದರವಾದ ಶ್ರೀಗಂಧದ ಕಲಾತ್ಮಕ ಕೆತ್ತನೆಯ ಕೆಲಸವು ದಕ್ಕಿದೆ. ಸಾಗರದ ಶ್ರೀಗಂಧದ ಕೆತ್ತನೆಯ ಪಿಠಾರಿಗಳು ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ ರವರ ಸಂಗ್ರಹದಲ್ಲೂ ಸ್ಕಾಟ್‍ಲ್ಯಾಂಡಿನ ಪೋವಿಸ್ ಕ್ಯಾಸಲ್ಲಿನ ಕ್ಲೈವ್‍ಕುಟುಂಬದವರಲ್ಲೂ ಇವೆ. ಮುಂಬೈನ ಈಗಿನ ಛತ್ರಪತಿ ಶಿವಾಜಿ ಸಂಗ್ರಹಾಲಯದ (ಹಿಂದಿನ ಪ್ರಿನ್ಸ್ ವೇಲ್ಸ್ ಸಂಗ್ರಹಾಲಯ) ಮೊದಲನೆ ಮಹಡಿಯ ನಟ್ಟ ನಡುವಿನ ಪ್ರದರ್ಶಿತ ವಸ್ತುವಾಗಿ ಸಾಗರದ ಒಚಿದು ಕಲಾತ್ಮಕ ಕೆತ್ತನೆಯ ಕೆಲಸ ಮಾಡಿದ ಪಿಠಾರಿಯನ್ನು ಇಡಲಾಗಿದೆ ! ಈಗ ಇಲ್ಲಿನ ಯಾವುದೇ ಒಬ್ಬ ಬಡಗಿಯೂ ಇದನ್ನು ಮಾಡಲು ಸಮರ್ಥನಲ್ಲ , ಏಕೆಂದರೆ ಈ ರೀತಿಯಾಗಿ ಶ್ರೀಗಂಧದ ಕೆತ್ತನೆಯ ಕೆಲಸ ಮಾಡುವುದನ್ನು ಅವರು ಮರೆತುಹೋಗಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಕಾನೂನು ಕಟ್ಟಲೆಗಳಿಂದಾಗಿ ಶ್ರೀಗಂಧದ ಮರವು ಅವರಿಗೆ ಲಭ್ಯವಾಗಿಯೂ ಇಲ್ಲ. ಸುಮಾರು 50 ವರ್ಷಗಳಿಂದ ಅವರು ಗಡಸು ಮರದ ಮೇಲೆ ಕೆತ್ತನೆ ಕೆಲಸಗಳನ್ನು ಮಾಡುತ್ತಾ ಬಂದಿರುವ್ಯದರಿಂದ ಅವರಿಗೆ ಆ ರೀತಿಯ ಕೆಲಸವನ್ನು ಮೃದುವಾದ ಶ್ರೀಗಂಧದ ಮರದ ಮೇಲೆ ಪ್ರತಿಕೃತಿಸುವುದು ಅಸಾಧ್ಯವಾಗಿದೆ. ಕಲೆಗಳು ಮತ್ತು ನೈಪುಣ್ಯಗಳು ಹೀಗೆಯೇ ನಶಿಸಿಹೋಗುವುದು !

ಒಂದು ಅತ್ಯಂತ ಕುತೂಹಲಕಾರೀ ಪ್ರಶ್ನೆಯ ಜಾಡು ಹಿಡಿದು ಹೋಗಿದ್ದು ಸಾರ್ಥಕವಾಯಿತು. ನನಗಿಂತಾ ಹೆಚ್ಚು ತಿಳಿದುಕೊಂಡಿರುವ ಗೆಳೆಯರನ್ನು ನಾನು, ಇದರ ಬಗ್ಗೆ ಅವರ ಅಮೂಲ್ಯವಾದ ವಿಚಾರಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಕೇಳಿಕೊಳ್ಳುತ್ತೇನೆ.


ಈ ಬರಹದ ಚರ್ಚೆಯಲ್ಲಿ ಲೇಖಕರ ಜೊತೆ ಪಾಲ್ಗೋಂಡವರು ಡಾ. ಜಗದೀಶ್ ಅಗಸೀಬಾಗಿಲ್. ಅವರು ಕನ್ನಡದ ಪ್ರಸಿದ್ಧ ಎಪಿಗ್ರಾಫಿಸ್ಟ್ ಆಗಿದ್ದಾರೆ. ಅವರ ಅನೇಕ ಸಂಶೋಧನಾ ಪ್ರಬಂಧಗಳು ಮತ್ತು ಬರಹಗಳು ಭಾರತದ ಅನೇಕ ಜರ್ನಲ್ ಗಳಲ್ಲಿ ಪ್ರಕಟಗೊಂಡಿವೆ. ಕರ್ನಾಟಕ ಸರ್ಕಾರದ ಆರ್ಕಿಯಾಲಜಿ ಡಿಪಾರ್‍ಮೆಂಟ್ ನಲ್ಲಿ ಕಾರ್ಯನಿರ್ವಹಿಸಿದ ಇವರು ತಮ್ಮ “ಕರ್ನಾಟಕದಲ್ಲಿನ ಮಾಪನದ ವಿಧಾನಗಳು” ವಿಷಯದ ಕುರಿತಾಗಿ ಭಾರತದ ವಿದ್ವತ್-ವಲಯದಲ್ಲಿ ಪ್ರಸಿದ್ಧರು.

ಅನುವಾದ: ಜಯಶ್ರೀ ಜಗನ್ನಾಥ

3 comments to “ಕ್ಯಾಲಿಗ್ರಾಫಿ ಮತ್ತು ಹಿಂದೂಗಳು”
  1. ಒಳ್ಳೆಯ ಮಾಹಿತಿ. ಥ್ಯಾಂಕ್ಯೂ. ಈ ಬಗ್ಗೆ ಕುತೂಹಲ ಕೆರಳಿದೆ. ಹಲವು ಹಸ್ತ ಪ್ರತಿಗಳಲ್ಲಿ ಕ್ಯಲಿಗ್ರಫಿ ಅಲ್ಲದಿದ್ದರೂ ಅಂಚಿನಲ್ಲಿ ಅಲಂಕಾರ ಚಿತ್ರ ರಚನೆಗಳು ಕಾಣುತ್ತವೆ, ಅಲ್ಲವೆ?

  2. ಜೈನರ ತಾಮ್ರದ ಪಟ್ಟಿಯ ಉ ಊ, ಋ ಋಊ ಅಕ್ಷರಗಳು ತೆಲುಗಿನಂತಿವೆ. ಉತ್ತಮ ಮಾಹಿತಿ. ಓಎಲ್ ಎನ್ ಅಂದಂತೆ ಅಕ್ಷರದ ಅಲಂಕರಣ ಗರಿಯಂಚಿನ ಚಿತ್ತಾರಗಳು ಗಮನ ಸೆಳೆಯುವಂತಿವೆ.

  3. ” ಹಿಂದೂಗಳು”- ನಿದ್ದೆಯಂಥ ಸುಖವಿಲ್ಲ ,ಮುದ್ದೆಯಂಥ ಊಟವಿಲ್ಲ,ಸಿದ್ದಪ್ಪನಂಥ ದೇವರಿಲ್ಲ , ಇಂತ ಸಿದ್ದಾ೦ತವಿರುವ ಜನಾಂಗಗಳಲ್ಲಿ ಇಹಲೋಕದ ಇತರೆ ವಿಷಯಗಳಲ್ಲಿ ಏನನ್ನು ನೀರಿಕ್ಷಿಸುವುದು ಅಸಾಧ್ಯ , ಆದರೂ ಇಂತಹ ಸಣ್ಣ ಪ್ರಯತ್ನ ಅಲ್ಲಲ್ಲಿ ಕಾಣಸಿಗುತ್ತವೆ ,ಒಂದು ಅತ್ಯದ್ಭುತ ಲೇಖನ ಕ್ಯಾಲಿಗ್ರಾಫಿ ಬಹಳ ವರುಷಗಳಿಂದ ಈಬಗ್ಗೆ ಕಾಯುತ್ತಿದೆ ಓದಿ ಮನಸ್ಸು ಸಂತೋಷವಾಯಿತು ,ದಯವಿಟ್ಟು ಈತರಹ ಲೇಖನ ನಿಮ್ಮಿಂದ ಮೂಡಿಬರಲಿ
    ಧನ್ಯವಾದಗಳು .
    ಕಲ್ಲೇಶ ಮೈಸೂರು
    ೯೩೮೦೯೨೬೪೩೯

ಪ್ರತಿಕ್ರಿಯಿಸಿ