ಜಪಾನೀ ಕಾದಂಬರಿ “ಅಳಿವೆ ಮೇಲಿನ ಮಾರ್ದನಿ”

ಜಪಾನಿನ ಪ್ರಸಿದ್ಧ ಕಾದಂಬರಿಕಾರ, ಮಸಾತ್ಸುಗು ಓನೋ ಅವರ ಕಾದಂಬರಿ “ಎಕೋ ಆನ್ ದ ಬೇ” ಬಗೆಗಿನ ವಿಮರ್ಷಾ-ಪರಿಚಯ ಬರಹ ಇದು. ಕೆಲವು ಓದುಗರು ’ಓನೋ’ವನ್ನು ಮ್ಝಾರ್ಕ್ವೆಝ್ ಮತ್ತು ಸಿಮೆನೊನ್ ನ ಎರಕ ಎಂದು ಕರೆದರೆ, ಈ ಪುಸ್ತಕದ ತಂತ್ರಗಾರಿಕೆಯು ಹೊಗಳಿಕೆ-ತೆಗಳಿಕೆ ಯ ಚರ್ಚೆಗೂ ಬಹಳವೇ ಒಳಗಾಗಿದೆ. ಋತುಮಾನದ ಓದುಗರಿಗಾಗಿ ಈ ಬರಹ.

ಜಪಾನ್ ನ ಬೆಪ್ಪು-ಚ್ಸಿ ಎಂಬ ನಗರದ ಮಗ್ಗುಲಿನ ಕೊಲ್ಲಿಯಲ್ಲಿ ಬರೀ ಮೀನುಗಾರರೇ ಇರುವ ಒಂದು ಹಳ್ಳಿ ಓಯಿಟಾ. ಈ ಹಳ್ಳಿಯ ಹಿಂಸ್ರ ಇತಿಹಾಸವನ್ನು, ಭ್ರಮೆ-ವಾಸ್ತವಗಳ ನಡುವೆ ಚಿತ್ರಿಸಿದಂತಿರುವ ಕಾದಂಬರಿ, ` ಎಕೋ ಆನ್ ದಿ ಬೇ’ . ಈ ಇಂಗ್ಲಿಷ್ ಕಾದಂಬರಿಯನ್ನೊಮ್ಮೆ ಓದಿದರೆ, ನಮ್ಮನ್ನು ಎಲ್ಲೋ ಸೆರೆಹಿಡಿದಿಟ್ಟಿರುವಂತೆ ದಟ್ಟ ಅನುಭವವಾಗುತ್ತದೆ.

ಜೂನ್ ೨೦೨೦ ರಲ್ಲಿ ಹೊರಬಂದಿರುವ, ` ಏಕೋ ಆನ್ ದಿ ಬೇ ‘ ಕಾದಂಬರಿಯ ಕರ್ತೃ, ಜಪಾನ್ ನ ರಿಕ್ಕ್ಯೋ ಯೂನಿವರ್ಸಿಟಿಯಲ್ಲಿ ಫ್ರಾಂಕೋಫೋನ್ ಲಿಟರೇಚರ್ ನ ಪ್ರೊಫೆಸರ್ ಆಗಿರುವ, ಮಸತ್ಸುಗು ಓನೋ . ಇಂಗ್ಲಿಷ್ ಅನುವಾದ __ ಆ್ಯಗ್ನಸ್ ಟರ್ವಿಲ್. ಅಸಲಿಗೆ ಈ ಕಾದಂಬರಿಯನ್ನು, ೨೦೦೨ ರಲ್ಲಿ ಜಪಾನಿ ಭಾಷೆಯಲ್ಲಿ ` ಬೋಟ್ ಆನ್ ಎ ಚಾಪಿ ಬೇ ‘ ಎಂಬ ಶೀರ್ಷಿಕೆಯಲ್ಲಿ ಹೊರತರಲಾಗಿತ್ತು. ಜಪಾನ್ ನ ಪ್ರತಿಷ್ಠಿತ ಮಿಷಿಮಾ ಯುಕಿಯೋ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿಯಿದು.

ಈ ಕಾದಂಬರಿ ಒಳಗೆ ಬರುವ ನಿರೂಪಕಿ, ಹದಿವಯಸ್ಸಿನ ಮೀಕೀ . ಇವಳ ತಂದೆ ಒಬ್ಬ ಅಸಮರ್ಥ ಪೊಲೀಸ್ ಆಫೀಸರ್. ಇಳಿಸಂಜೆಗಳಲ್ಲಿ ನಾಲ್ವರು ಬಾಲ್ಯಕಾಲದ ಗೆಳೆಯರನ್ನು ( ಸಿಲಿಕಾ ಫೋರ್ ಎಂದೇ ಕುಖ್ಯಾತರೆನ್ನಬಹುದಾದ ) ತನ್ನ ಮನೆಯ ಜಗುಲಿಮೇಲೆ ಕೂರಿಸಿಕೊಂಡು ಕುಡಿಯುತ್ತಾ, ಗಾಸಿಪ್ ಮಾತನಾಡುತ್ತಾ ಕಾಲ ವ್ಯಯಿಸಿವವ ಈತ. ಕಥೆ ಸಾಗಿದಂತೆ, ಒಂದು ಅನಾಥ ಶವವನ್ನು ಬೀಚ್ ಮೇಲೆ ನೋಡಿದೆನೆಂದು, ಕುಡುಕನೊಬ್ಬ ಹೇಳುತ್ತಾನೆ. ಈ ಸುದ್ದಿಯನ್ನು, ಮನೆಯೊಳಗಿದ್ದ ಮೀಕೀಯು ಆಲಿಸುತ್ತಾಳೆ. ಎತ್ನಾಲಜಿಸ್ಟ್ ಗಳಿಂದ ಇನ್ ಸ್ಪೈರ್ ಆದವಳಾಗಿರುವ ಒಬ್ಬ ವಿದ್ಯಾರ್ಥಿನಿ ಈಕೆ. ತಕ್ಷಣವೇ ಇವಳು ಟಿವಿ ಆನ್ ಮಾಡಿ ಘಟನೆಗೆ ಸಂಬಂಧಿಸಿದ ಕಥೆಗಳ ಹಿನ್ನೆಲೆಗಳೆಲ್ಲವನ್ನೂ ಕ್ರೋಡೀಕರಿಸಿಕೊಳ್ಳಲು ಮುಂದಾಗುತ್ತಾಳೆ. ಹಳ್ಳಿಗರ ಕಥೆಗಳೆಲ್ಲವೂ ಆ ಕೊಲೆಯ ಬಗೆಗಿನ ಊಹಾಪೋಹಗಳೊಂದಿಗೆ, ಈ ಕುಡುಕನ ಕುಟುಂಬದ ಸಂಬಂಧ ಜೋಡಿಸುತ್ತಾ ಹೋಗುತ್ತವೆ. ಕಾದಂಬರಿ ಸಾಗಿದಂತೆ ___ ಇವಿಷ್ಟರ ನಡುವೆಯೇ ಮೀಕೀಯು ತನ್ನ ಸೋಶಿಯಲ್ ಸ್ಟಡೀಸ್ ಮೇಷ್ಟ್ರೊಡನೆಯ ಅನೈತಿಕ ಸಂಬಂಧವನ್ನು ಮರೆಮಾಚಿಕೊಳ್ಳಲೆತ್ನಿಸುವುದೂ ನಮಗರಿವಾಗುತ್ತದೆ. ಎಂದೋ ಗತಿಸಿದ್ದ ಕೊಲೆಯ ವಿಚಾರವು , ಕ್ಸೆನೋಫೋಬಿಕ್ ನಂತಹ ಜನಾಂಗೀಯದ್ವೇಷ ಮತ್ತು ದುರಾಸೆಯ ಕಾರಣದಿಂದ ಮತ್ತೆ ಭೂಗತದಿಂದೆದ್ದು ಬಂದು ನಿಲ್ಲುತ್ತದೆ. ಸಂಕೀರ್ಣಗೊಂಡ ಗ್ರಾಮೀಣ ಸಮುದಾಯದೊಳಗಡೆಯ ಸಂಘರ್ಷವೇ ಕೊಲೆಗೆ ಕಾರಣವಾಗಿರುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ನಡೆಸಿದ್ದ ಕಾರ್ಯಾಚರಣೆಯಲ್ಲಿ ಕೊರಿಯಾ ಮತ್ತು ಮಂಚೂರಿಯಾದಲ್ಲಿ ಘಟಿಸಿದ್ದ ಗತ ಇತಿಹಾಸದ ಕರಾಳ ಕ್ರೌರ್ಯದ ಮೇಲೆ ಸಮಗ್ರವಾಗಿ ಬೆಳಕು ಚೆಲ್ಲಿದ್ದಾನೆ, ಕಾದಂಬರಿಕಾರ. ವಸಾಹತುಶಾಹಿ ವಿಸ್ತರಣಾವಾದದ ಇನ್ನೊಂದು ಭಯಾನಕ ಮುಖವನ್ನು ಇಲ್ಲಿ ನಾವು ಕಾಣಬಹುದು. ಇದೊಂದು ವಿಧದಲ್ಲಿ ` ನವ-ಇತಿಹಾಸವಾದ’ದ ( ನ್ಯೂ- ಹಿಸ್ಟಾರಿಸಿಸಂ ) ದೃಷ್ಟಿಕೋನದಲ್ಲಿ ರಚಿತವಾದ ಕಾದಂಬರಿ ಅನ್ನಿಸುತ್ತದೆ. ಏಕೆಂದರೆ, ಈ ಗ್ರಾಮೀಣರ ಮೌಖಿಕ ಪರಂಪರೆಯೊಳಗಿಂದಲೇ ಕಟ್ಟಿಕೊಡಲಾಗಿರುವ ಈ ಹಳ್ಳಿಯ ಬಗೆಗಿನ ಕಥೆಗಳೇ ಇತಿಹಾಸ-ಪುರಾಣಗಳ ನಡುವಿನ ರೇಖೆಯನ್ನು ಅಳಿಸಿ ಹಾಕುವಷ್ಟು ಗಾಢವಾಗಿ ಕಾಡುತ್ತವೆ.

ಧುತ್ತನೆ ಭೂತಕಾಲದಿಂದೆದ್ದು ಬಂದಂತೆ ಕಾಣುವ, ಘೋಸ್ಟ್ ಶಿಪ್ ನಂತಹ , ಖಾಲಿ ಖಾಲಿ ಬೋಟ್, ಅನಾಥವಾಗಿ ಈ ಅಳಿವೆಯ ನೀರ ದಡದಲ್ಲಿ ತೇಲುತ್ತಾ ನಿಂತಿರುವುದನ್ನು ಸ್ವಾಗತಿಸಲು ಯಾರೂ ಇಲ್ಲ ಇಲ್ಲಿ. ಇತಿಹಾಸ – ಪುರಾಣದ ಆಳಕ್ಕಿಳಿದು , ಅಗೆದು, ನಿಜ ವಿಚಾರಗಳನ್ನು ಹೊರಗೆಳೆಯಬಹುದೆಂದು ಕಾದಂಬರಿಯ ನಿರೂಪಕಿ ಹೇಳುತ್ತಾಳೆ. ಇಂತಹ ಸಂದರ್ಭದಲ್ಲಿ ಬರುವ ಸಾಲುಗಳು ಒಂದು ಅದ್ಭುತ ಮೆಟಫರಿಕಲ್ ಇಮೇಜರಿಯನ್ನು ಕಟ್ಟಿಕೊಡುತ್ತವೆ: “… a red tide becomes a `huge snake born of polluted water . ಒಂದು ತರಹದ ಹೀನಾಯ ಪರಿಸ್ಥಿತಿಯನ್ನು ನಿರ್ವಿಕಾರವಾಗಿ ತಿಳಿಸುವ, ಈ ಹಳ್ಳಿಗರ ಜೀವನದ ನಿರ್ಗತಿಕತನ, ಪೀಡೆ ಹಾಗೂ ಕ್ರೌರ್ಯವನ್ನು ಇಲ್ಲಿ ನಾವು ಕಾಣಬಹುದು. ಈ ಕೃತಿಯು ಬಳಸಿಕೊಂಡಿರುವ ನಿರೂಪಣಾ ತಂತ್ರವನ್ನು ಒಂದು ರೀತಿಯಲ್ಲಿ ` ಗ್ರೌಂಡ್ ಬ್ರೇಕಿಂಗ್’ ಎನ್ನಬಹುದೇನೋ : ಈ ಕಾದಂಬರಿಯ ಪ್ಲಾಟ್, ಹಾಗೂ ಘಟನಾವಳಿಗಳು ಯಾವುದೇ ಒಂದು ಕಾಲದ ಪರಿಮಿತಿಯಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಡಾರ್ಕ್ ಸೀಕ್ರೆಟ್ ಗಳನ್ನೊಳಗೊಂಡ ಹಳ್ಳಿಗರ ಮಾನಾಪಮಾನಗಳಡಿ ಸಿಲುಕಿ ಕಗ್ಗಂಟಾಗಿರುವ ಇಲ್ಲಿನ ಕಥಾವಳಿಗಳ ಘಟನೆಗಳು ಯಾವುದೇ ರೀತಿಯಿಂದಲೂ ಸಿಕ್ಕುಗಳನ್ನು ಬಿಡಿಸಿಕೊಳ್ಳಲಾರದಂತಿವೆ. ಒಂದು ರೀತಿಯಲ್ಲಿ ನೋಡಿದರೆ, ಪ್ಲೂರಲಿಸ್ಟಿಕ್ ಸಬಾಲ್ಟರ್ನ್ ಡಿಸ್ಕೋರ್ಸ್ ಅನ್ನೂ ಮೀರಿ ನಿಲ್ಲುತ್ತದೆನ್ನಬಹುದಾದ ಸಂಕಥನಾತ್ಮಕ ನಿರೂಪಣಾ ತಂತ್ರವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಇವು ಸಂಕಥನಾತ್ಮಕವಾಗಿ , ನೇರಸರಳರೇಖಾತ್ಮಕ ನಿರೂಪಣಾ ಎಳೆಯಾಗಿ ಹೊಮ್ಮಿ ಬರುವುದೇ ಇಲ್ಲ. ಈ ಕಾದಂಬರಿಯನ್ನು ಓದಿ ಮುಗಿಸುವ ಅಂತ್ಯದಲ್ಲಿ, ಆ ಭಿನ್ನ ಎಳೆಗಳು ಒಂದೆಡೆ ಮಿಳಿತವಾಗಿ ಎಲ್ಲಾ ಸೀಕ್ರೆಟ್ ಗಳು ವಿಶದವಾದ ಮೇಲೆಯೂ, ಓದುಗನ ಬಾಯಲ್ಲಿ ” ಆಹಾ !” ಎನ್ನುವ ಉದ್ಗಾರವೇ ಬಾರದು ಎನ್ನಿಸುವಂತಿವೆ . ಕಾರಣ ಇಷ್ಟೇ, ಮೊದಲ ಐವತ್ತು ಪುಟಗಳಲ್ಲಿ ಕಥೆಗಳೇ ಕಥೆಗಳು ಬರುತ್ತವೆ; ಕೊನೆಯ ಇಪ್ಪತ್ತು ಪುಟಗಳಿಗೆ ತಲುಪುವಷ್ಟರವರೆವಿಗೂ ಇವು ಹೊಸೆದಾಡುತ್ತಾ ಅಂತ್ಯಗಾಣಲು ಎಣೆಯಾಡುತ್ತವೆ; ಅವಷ್ಟೂ ಕಥನಗಳು ಪರಸ್ಪರ ತೆಕ್ಕೆ ಬೀಳುವಂತೆ ಒಂದು ಇನ್ನೊಂದಕ್ಕೆ ತೊಡರುಗಾಲು ಹಾಕುತ್ತವೆನ್ನಿಸುವಂತೆ ಒಂದನ್ನೊಂದು ಸುತ್ತುವರಿದಾವರಿಸಿಕೊಳ್ಳುತ್ತವೆ. ಇದು ಬಗೆಹರಿಯುವುದೇ ಇಲ್ಲವೇನೋ ಅನ್ನಿಸುತ್ತದೆ. ಈ ರೀತಿಯಲ್ಲಿ ಪೋಸ್ಟ್ ಮಾಡ್ರನ್ ಮೆಟಾಫಿಕ್ಷನ್ ಗೊಂದು ಉತ್ತಮ ಉದಾಹರಣೆಯಾಗಿ ಮೂಡಿಬಂದಿದೆ ಈ ಕಾದಂಬರಿ. ಆದರೆ, ಕಾದಂಬರಿಯ ಓದಿಗೆ ನಮ್ಮನ್ನು ಕಚ್ಚಿಕುಳ್ಳರಿಸುವ ಒಂದಂಶವೆಂದರೆ, ಮಸತ್ಸುಗು ಓನೋರವರು ನಿರೂಪಣಾ ತಂತ್ರದಲ್ಲಿ ಅಳವಡಿಸಿಕೊಂಡಿರುವ ___ ಕಾಲಕ್ರಮದ ಹಂಗಿಲ್ಲದಿರುವಿಕೆಯ ಕಥೆಯ ಓಘ! ಪ್ರತೀ ಕಥೆಯ ಪ್ರಾರಂಭದಿಂದಲೂ, ನೀವು ಹೊಂದಿರಬಹುದಾದ ಎಲ್ಲಾ ಕುತೂಹಲ, ನಿರೀಕ್ಷೆಯನ್ನೂ ಓನೋ , ಈ ಕಾದಂಬರಿಯುದ್ದಕ್ಕೂ ಒಳಸುರುಳಿಗಳಲ್ಲಿಡುತ್ತಾ ಹೋಗುತ್ತಾನೆ!

ಸಣ್ಣ ಪುಟ್ಟ ಟೌನ್ ಗಳ ಡಾರ್ಕ್ ಸೀಕ್ರೆಟ್ ಗಳನ್ನೊಳಗೊಂಡ ಕಥೆಗಳು ಸರ್ವೇಸಾಮಾನ್ಯ. ಕರಾಳ ರಹಸ್ಯಗಳನ್ನು ಗರ್ಭದಲ್ಲಿರಿಸಿಕೊಂಡುಬರುವ ದೊಡ್ಡದೊಡ್ಡ ಶಹರಗಳ ಕಥೆಗಗಳೂ ಸಾರ್ವಕಾಲಿಕವಾಗಿ ಸಿಗುವುದೂ ಉಂಟು. ಆದರೆ ಈ ಕಾದಂಬರಿಕಾರನ ತಥಾಕಥಿತ ಕಥನಶೈಲಿಯು ನಿಧಾನವಾಗಿ ಶುರುವಾಗುತ್ತಾ , ನಮಗರಿವಿಲ್ಲದಂತಹ ಈ ನೀರವ, ಅಳಿವೆಯ ಮೀನುಗಾರರ ಕೇರಿಗಳ ಚಿತ್ರಣವನ್ನು ತಣ್ಣಗೆ ತೆರೆದಿಡುತ್ತದೆ. ಕಾದಂಬರಿಯ ಮೊದಲ ಸಾಲುಗಳು: “Dad had a lot of things bothering him when he was stationed on the coast. There was the abandoned boat floating in the bay. There was the body that Mitsugu Azamui said was on the beach, but which nobody had never found. There were the boys who kept shooting bottle rockets at old Toshiko-bā’s house. And then there was me, in love with Mr.Yoshida, my social studies teacher”. .

ಮೊದಲ ಪುಟ ಶುರುವಾಗುವುದರ ಹಿಂದೆ ಓನೋಗಿದ್ದಿರಬಹುದಾದ ಎರಡು ಇಂಗಿತಗಳನ್ನು ಹೀಗೆ ಗ್ರಹಿಸಬಹುದು: ಮುಂದೆ ಭುಗಿಲೇಳಲಿರುವ ಕಾನ್ ಫ್ಲಿಕ್ಟ್ ನೆಡೆಗೆ ಓದುಗನನ್ನು ಮೊದಲಿನಿಂದಲೇ ಅಲರ್ಟ್ ಆಗಿಡಲು ಮತ್ತು ಅವನ ಓದಿಗೊಂದು ಸಡನ್ ಜೆರ್ಕ್ ಕೊಟ್ಟು ಮುಂದೋದಲು ಕುತೂಹಲ ಕೆರಳಿಸಲು! ಈ ಸಾಲುಗಳು ತೋರುವ ಕನ್ ಸರ್ನ್ ಅನ್ನು ಗಮನಿಸಿ: ಇಲ್ಲಿ ಬರುವ ಸಾಲುಗಳೆಲ್ಲವಕ್ಕೂ ಸಮಾನ ತೂಕ ಇದ್ದರೂ ಸಹ, ನಾಪತ್ತೆಯಾದ ಒಂದು ಶವ ಹಾಗೂ ಆ ಅಲೆಯಿರದ ಕೊಲ್ಲಿಯ ( ಆಳಿವೆಯ) ನೀರ ಮೇಲೆ ಅನಾಥವಾಗಿ ಬಿಟ್ಟಿದ್ದ ಬೋಟ್… ಇವೆರಡೂ ಗುರುತರವಾಗಿ ಓದುಗನನ್ನು ಕಾಡುವಂತೆ, ಬಾಟಲ್ ರಾಕೆಟ್ ಗಳು ಮತ್ತು ಸ್ಕೂಲ್ ನ ಫಸ್ಟ್ ಕ್ರಷ್ ಕಾಡುವುದಿಲ್ಲ.

ಓಯಿಟಾ ದ ಮೀನುಗಾರರ ಸಣ್ಣ ಹಳ್ಳಿಗೆ ತನ್ನ ತಂದೆಯೊಬ್ಬನೇ ಪೊಲೀಸ್ ಆಫೀಸರ್ ಆಗಿ ಪ್ರಮೋಷನ್ ಆಗುತ್ತಿರುವ ವಿಚಾರವನ್ನು ಕಥಾ ನಿರೂಪಕಿ ಮೀಕೀ ಉತ್ಸಾಹದಿಂದ ಹೇಳಿಕೊಳ್ಳುವುದರೆಡೆಗೆ ಕಥೆಯು ನೆಗೆಯುತ್ತದೆ. ಕಾದಂಬರಿಯ ಮೊದಲನೇ ಪುಟದ ಎರಡನೇ ಪ್ಯಾರಾಕ್ಕೆ ನಮ್ಮ ಕಣ್ಣು ಓಡಿದರೂ, ಈ ಮೊದಲೇ ಉಲ್ಲೇಖಿಸಿದ ‘bothers’, ಅಂದರೆ ’ಮನದಲ್ಲಿ ಕಾಡುತ್ತಿರುವ ವಿಷಯಗಳ ಪಟ್ಟಿಯು ‘ ಈಗ ಮರೆತುಹೋದಂತೆನಿಸಿ ಅಲ್ಲಿನ ಸ್ಥಳೀಯ ಪಾತ್ರಗಳಿಂದ ತುಂಬಿದ ಒಂದು ವರ್ಣರಂಜಿತವಾದ ಲೋಕದಲ್ಲಿ ಆಫೀಸರ್ ಕುಳಿತು ಕುಡಿಯುವ ದೃಶ್ಯಕ್ಕೆ ನಾವು ತೆರೆದುಕೊಳ್ಳುತ್ತೇವೆ.

’ಎಕೋ ಆನ್ ದಿ ಬೇ ‘ ಯ ಮೊದಲಾರ್ಧ ಪೂರ್ತಿ ಓನೋ ಒಂದು ರೀತಿಯ ಲಘು ಹಾಸ್ಯದ ಧ್ವನಿಯಲ್ಲಿ ಬರೆಯುತ್ತಾನೆ. ಈ ಹಳ್ಳಿಗರು ಕುಡಿದ ಮತ್ತಿನಲ್ಲಿ ಉದುರಿಸಿದ ‘ ಲೋಕಲ್ ಸೀಕ್ರೆಟ್ ‘ ಗಳಿರುವ ಗಾಸಿಪ್ ಕಥೆಗಳನ್ನು ಮೀಕೀ ಕಲೆಹಾಕುತ್ತಾಳೆ. ಮೊದಮೊದಲು ಈ ಹಳ್ಳಿಗರು ಮೀಕೀಯ ತಂದೆಯ ಮುಂದಿಡುವ ಡಿಮ್ಯಾಂಡ್ ಗಳೇ ತುಂಬಾ ತಮಾಷೆಯಾಗಿವೆ. ಸ್ಥಳೀಯ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿ ಎರಡು ವಿರುದ್ಧ ಗುಂಪಿನ ವ್ಯಾಪಾರಿಗಳ ನಡುವೆ ಚಕಮಕಿ ನಡೆದಿರುತ್ತದೆ. ಅಣಕು ನಾಟಕವೆನ್ನುವಂತಾದರು ಸರಿ, ಇವರನ್ನು ಅರೆಸ್ಟ್ ಮಾಡಬೇಕೆಂದು ಡಿಮ್ಯಾಂಡ್! ಕೊನೆಯಪಕ್ಷ, ಎರಡೂ ಗುಂಪಿನಿಂದ ತಲಾ ಒಬ್ಬೊಬ್ಬರನ್ನು ರಾತ್ರಿಪೂರ ಜೈಲಿನಲ್ಲಿಡಬೇಕು. ಆದರವನು ಅರೆಮನಸ್ಸಿನಿಂದ, ತೋರ್ಪಡಿಕೆಗೆ ಮಾತ್ರ ಉದಾಸೀನದಿಂದಲೇ ಅರೆಸ್ಟ್ ಮಾಡುತ್ತಾನೆ. ಸೆಲ್ ನೊಳಗಿರುವವರೊಡನೆ ಇಡೀ ದಿನ ಪಚಿಂಕೊ ಆಟ ಆಡುತ್ತಾನೆ! (ಗೋಲಿಗಳನ್ನು ಬಳಸಿ ಆಡುವ ಒಂದು ವಿಧದ ಜಪಾನೀಯರ ಕ್ಯಾಸಿನೋಜೂಜು ಆಟ.) ಪುಸ್ತಕದ ಮಧ್ಯಭಾಗಕ್ಕೆ ಬರುವಷ್ಟರಲ್ಲಿ, ಘೋಸ್ಟ್ ಶಿಪ್ ಒಂದು ಕೊಲ್ಲಿಯ ದಡಕ್ಕೆ ಬರುತ್ತದೆ. ಕಥೆಯೇ ಪಲ್ಲಟಗೊಳ್ಳುತ್ತದೆ. ಬರೀ ಚಮತ್ಕಾರಿ ಹಾಸ್ಯರಸ ದಿಂದ ಕೂಡಿದ ಕಥೆಯು ತಕ್ಷಣವೇ ಹಿಂಸ್ರ, ಕ್ಸೆನೋಫೋಬಿಕ್ ಚರಿತ್ರೆಯೆಡೆಗೆ ತಿರುಗಿ, ಇಡೀ ನಗರವನ್ನೇ ವ್ಯಾಪಿಸುತ್ತದೆ. ಕಾದಂಬರಿಕಾರರು, ಬಲು ನಿಪುಣತೆಯಿಂದ, ತಣ್ಣಗೆ ನಿರ್ವಿಕಾರವಾಗಿ, ತಥಾಕಥಿತ ನಿರೂಪಣಾ ಶೈಲಿಯಲ್ಲಿ , ನಾನ್ ಲೀನಿಯರ್ ಆಗಿ ಕಥಿಸುತ್ತಾ ಹೋಗುವುದರ ಪರಿಣಾಮವಾಗಿ ಓದುಗನಿಗೆ ಭಾವತುಯ್ತವಾದಂತೆನಿಸುತ್ತದೆ. ಇಲ್ಲಿರುವ ಕಥೆಗಳನ್ನು ತುಂಬಾ ಕ್ಯಾಶುವಲ್ ಆಗಿ ವ್ಯಕ್ತಪಡಿಸಲಾಗಿದೆ. ಘಟಿಸುವ ಸಂಗತಿಗಳನ್ನು ಹೇಗಿವೆಯೋ ಹಾಗೇನೆ ಯಥಾವತ್ತಾಗಿ ನಮ್ಮ ಮುಂದಿಡುತ್ತಾ, ಜಡ್ಜ್ ಮೆಂಟಲ್ ಆಗದೇ, ಓನೋ, ವ್ಯವಸ್ಥಿತವಾಗಿ ಬಿಚ್ಚಿಡುತ್ತಾನೆ.ಕಥನಕ್ರಮದಲ್ಲಿ ಆಮೂಲಾಗ್ರವಾಗಿ ಕಾಯಾಪಲಟ್ ಆಗುವಂತಹ ಒಳನೋಟಗಳಿರುವ ಹಸ್ತಕ್ಷೇಪವನ್ನು, ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಮಾಡುತ್ತಾನೆ. ಇದರ ಉದ್ದೇಶ, ಇಲ್ಲಿರುವ ನಿರೂಪಕಿ (ಮೀಕೀ) ಯನ್ನೂ ನಾವು ಅತಿಯಾಗಿ ನಂಬಬೇಕಿಲ್ಲವೆಂದು ಅರಿಕೆ ಮಾಡಿಕೊಡಲು. (ಆದರೂ ಕೃತಿಕಾರನಿಲ್ಲಿ ಇಟ್ಟಿರುವ ಒಳಶುಂಠಿ ಗಮನಿಸಿ: ಮೀಕೀ ಎಂದರೆ ಜಪಾನಿ ಭಾಷೆಯಲ್ಲಿ ` ಸುಂದರವಾದ ಚರಿತ್ರೆ’ ` ಬ್ಯೂಟಿಫುಲ್ ಕ್ರಾನಿಕಲ್ ‘ ಎಂದಾಗುತ್ತದೆ.)

ತಂದೆಯ ಜೊತೆ ಕುಡಿದು ಕುಳಿತವರ ಸಂಭಾಷಣೆಗಳೆಲ್ಲವನ್ನೂ ಮೀಕೀಯು ಆವಾಗಾವಾಗ ಪಕ್ಕದ ಕೋಣೆಯಿಂದ ಕೇಳಿಸಿಕೊಳ್ಳುವುದೆಲ್ಲವೂ ಸೆಕೆಂಡ್- ಹ್ಯಾಂಡ್ ಸ್ಟೋರಿಗಳು ಮತ್ತು ಥರ್ಡ್- ಹ್ಯಾಂಡ್ ಸ್ಟೋರಿಗಳು ಎಂಬುದು ನಮಗೆ ಅರಿವಾಗುತ್ತದೆ. ಇವೆಲ್ಲವೂ ಕೇವಲ ಕಲ್ಪಿತವಾದ, ಪುರಾಣದಂತಹ ಕಟ್ಟುಕಥೆ, ತಲತಲಾಂತರದಿಂದ ಹಾದುಬಂದವುಗಳು ಹಾಗೂ ಆ ಕಲ್ಪಿತ ಕಥೆಗಳ ವಿವರಗಳೆಲ್ಲವೂ ಇನ್ನೂ ಮುಂದುವರಿದು ಮತ್ತಷ್ಟು – ಮಿಥಿಕಲ್ – ಪುರಾಣಗಳೇ ಆಗುವಂತೆ ಕಾಣುತ್ತವೆ. ಒಂದು ರೀತಿಯಲ್ಲಿದು `ಪುರಾಣಗಳ ಸ್ವಾಭಾವಿಕ ವಿಕಾಸ ‘ ವೆನ್ನುವಂತೆ ಕಾಣಬರುತ್ತವೆ. ಕಾದಂಬರಿಯ ಕೊನೆಯಲ್ಲಿ ಇರುವ ತಲ್ಲಣವನ್ನು ಗಮನಿಸಿದರೆ – ಮೀಕೀ, ತಾನೇ ಕಣ್ಣಾರೆ ಕಂಡಂತೆ, ಅವಳ ಸ್ಥಾನದಲ್ಲಿ ನಿಂತು ನಾವು ನೋಡಿದರೆ – ಈ ಕಥನಕ್ರಮವೂ ಮಧ್ಯದಲ್ಲಿಯೇ ತುಂಡರಿಸಿದ ಅಂಡರ್ ಕಟ್ ಶೈಲಿಯಲ್ಲಿದೆ: ” I was relieved that the reality turned out to be what Toshi* saw and not what I saw. But if what I saw wasn’t real, then what was that appalling smell?” ಕೊನೆಗೆ, ಇಲ್ಲಿ, ಮೀಕೀ ಅನುಭವಿಸುವ ಅನಿರ್ದಿಷ್ಟತೆಗಳ ತಲ್ಲಣವಿದೆಯಲ್ಲ ಅದು ಒಂದು ರೀತಿಯಲ್ಲಿ ಓದುಗನು ಈಗಾಗಲೇ ಅನುಭವಿಸಿಯಾಗಿರುವ ಫೆಮಿಲಿಯರ್ ಆದಂತಹ ಅನುಭವ. ಆದರಿಲ್ಲಿ ಈ ಕ್ಷಣಕ್ಕಾಗಲೇ , ಅದಾಗಿಯೇ ಒದಗಿಬಂದುದಕ್ಕೊ ಏನೋ, ಓದುಗನು ತಾನು ಬಯಸದೇನೇ, ತನ್ನ ಕಣ್ಣಿಗೆ ರಾಚುವ ಅನಿರ್ದಿಷ್ಟತೆಗಳೆಡೆಗಿನ ಪ್ರತಿಸ್ಪಂದನೆಯಷ್ಟನ್ನೇ ದಕ್ಕಿಸಿಕೊಳ್ಳುವ ಸ್ಥಿತಿ ತಲುಪಿಯಾಗಿರುವನು. ಇವತ್ತಿನ ವಾಸ್ತವ ಜಗತ್ತಿನಲ್ಲಿಯೂ ಇಂತಹದೇ ಆದ ಅನಿರ್ದಿಷ್ಟತೆಗಳ ವರ್ತುಲಗಳು ನಮ್ಮ ಸುತ್ತಲೂ ಪರಿಭ್ರಮಿಸುತ್ತವೆ ಅಲ್ಲವೇ? ಆಳುವ ಸರ್ಕಾರಗಳು, ಸಮೂಹ ಮಾಧ್ಯಮಗಳು, ಆರ್ಗನೈಸೇಷನ್ ಗಳು (ಎನ್.ಜಿ.ಒ.) ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಸಹ ನಮ್ಮ ಸುತ್ತಲೂ ಘಟಿಸುವ ಕಥೆಗಳನ್ನು , ಸಮಾಚಾರಗಳನ್ನು ಆಯಾ ತತ್ ಸಂದರ್ಭದಲ್ಲಿಯೇ ತಂತಮ್ಮ ಲಾಭಕ್ಕೆಂದು ಮ್ಯಾನಿಪುಲೇಟ್ ಮಾಡಿಕೊಳ್ಳಬಹುದಾದಂತಹ ಸೆಲ್ಫ್ ಸೆಂಟರ್ಡ್ ವ್ಯಕ್ತಿಗಳ ಜಗತ್ತಿನಲ್ಲಿ, ಇಂದು ನಾವಿದ್ದೇವೆ. ಜಾಗತಿಕ ಅಂಟುಜಾಡ್ಯ ಪ್ಯಾಂಡೆಮಿಕ್ ಆಗಿ, ಎಲ್ಲರಿಗೂ ಇದರ ಅರಿವಾಗಿದೆ, ಅಲ್ಲದೇ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿದೆ. ಕಪ್ಪು ಜನಾಂಗದವರು ಯು.ಎಸ್.ಎ. ಯಲ್ಲಿ , ಮತ್ತಿತರ ದೇಶಗಳಲ್ಲಿ ತಂತಮ್ಮ ಜೀವ-ಜೀವನಕ್ಕಾಗಿ, ” ಬ್ಲ್ಯಾಕ್ ಲೈವ್ಸ್ ಮ್ಯಾಟರ್ ” ಎಂದು ಹೋರಾಡುತ್ತಿದ್ದಾರೆ. ಇವೆಲ್ಲವೂ ಬಹುಮುಖ್ಯ ಸಂಗತಿಗಳೇ ಆಗಿವೆಯೀಗ. ತುಂಬಾ ಜನರು, ಈ ನಾಗರೀಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕೆನ್ನುವ ಹಂಬಲದಲ್ಲಿ, ಬುದ್ಧಿ-ಬಲಗಳೆರಡನ್ನೂ ವ್ಯಯಿಸಿ, ತಮ್ಮ ಐಡೆಂಟಿಟಿಯನ್ನು ಗಳಿಸಿಕೊಂಡಿರುವರು. ಇಂಥವೇ ಘರ್ಷಣೆ, ತಿಕ್ಕಾಟಗಳನ್ನು ಈ ಕಾದಂಬರಿಯಲ್ಲಿ ಸ್ವಲ್ಪ ಮಟ್ಟಿಗೆ ಕಾಣಬಹುದು. ಒಂದು ಹಳ್ಳಿಯು ಅದರದೇ ಆದ ಅಸ್ಮಿತೆಯನ್ನು ಕಂಡುಕೊಳ್ಳುವ ತಿಕ್ಕಾಟದೊಳಗಿನಿಂದಲೇ, ನೆನ್ನೆಗಳ ರಾಕ್ಷಸೀಯ ಕೆಡುಕುಗಳಿಂದ ಹೊರಬಂದು ತನ್ನನ್ನು ತಾನು ಪಾಪಮುಕ್ತಗೊಳಿಸಿಕೊಳ್ಳುವ ಕಥೆಯೇ ಈ ಕಾದಂಬರಿಯ ಮೂಲವಸ್ತು ಎನ್ನಬಹುದು. ಈ ಕಾದಂಬರಿಯನ್ನು ಓದುತ್ತಾ, ಓದುಗ ತಾನು ನಿಲ್ಲಬಹುದಾದ ನೆಲೆಯನ್ನು ಕಂಡುಹಿಡಿದುಕೊಳ್ಳಲಾಗದಷ್ಟು, ಈ ಕಥೆಗಳು, ಬೆರಳ ಸಂದಿಗಳಿಂದ ಮರಳ ಕಣಗಳಂತೆ ನಿರಂತರ ಜಾರಿಹೋಗುತ್ತವೆ. ಅಷ್ಟರ ಮೇಲೂ ಓದುಗನಿಗೆ ಇಲ್ಲಿ ಬರುವ ಕಥೆಗಳ ಜಾಡು ಸಿಕ್ಕಿತೆನ್ನುವಷ್ಟರಲ್ಲಿಯೇ, ತಕ್ಷಣವೇ ಪಲ್ಲಟಗೊಂಡು ತನ್ನ ಸ್ವರೂಪವನ್ನು ಬದಲಿಸಿಕೊಂಡು ನಿಂತಂತಾಗುತ್ತದೆ. ಕೊನೆಗೂ, ಸಣ್ಣಪುಟ್ಟದ್ದೇನಾದರೂ ಅವನ ಹಿಡಿತಕ್ಕೆ ಸಿಕ್ಕಿದೆಯೆನ್ನುವಂತೆ ಕಾಣಬಂದರೂ, ಅದು ಕೇವಲ ಓದುಗ, ತಾನು ಸ್ವತಃ ನಿರೀಕ್ಷಿಸಿ ಕಲ್ಪಿಸಿಕೊಂಡಿದ್ದಿರಬಹುದಾದಷ್ಟು ಅನುಭೂತಿ ಮಾತ್ರ ಎನ್ನಬಹುದು. ಈ ನಿಟ್ಟಿನಲ್ಲಿ ಇದೊಂದು ಅಪ್ಪಟ ಪೋಸ್ಟ್-ಮಾಡ್ರನ್ ಕೃತಿ.

‘ಎಕೋ’ ಅಂದರೆ ಇಲ್ಲಿ, ಮಾರ್ದನಿ-ಪ್ರತಿಧ್ವನಿಗಳೆಲ್ಲವೂ ಕಾಲದೊಳಗಡೆ ಸಿಲುಕಿ ಹಾಕಿಕೊಂಡಿರದ, ದನಿ ಕಳೆದುಕೊಂಡು ಹೊರಹೊಮ್ಮಿದ ಯಃಕಶ್ಚಿತ್ `ಸಂದೇಶ’ ಗಳಷ್ಟೇ! ಇವು`ನಿನ್ನೆ’ಗಳಿಂದೆದ್ದು ಬರಲಿರುವ ಭೂತಗಳು; ಕಾಲಗತಿಯಲ್ಲಿ ಇವೆಲ್ಲವೂ ಕ್ಷೀಣಗೊಳ್ಳುತ್ತಾ ಹೋಗುತ್ತವೆ. ಇವುಗಳ ನಿಯತ್ತು ಹಾಗೂ ವಿಶ್ವಾಸಾರ್ಹತೆ ಬರುಬರುತ್ತಾ ಕುಂದಿಹೋಗುತ್ತದೆ. ಹಾಗೇನೆ, ಕೆಲವೊಮ್ಮೆ ಇವು ಯಾವುದೋ ಆಳದ ಅತಂತ್ರತೆಯಡಿ ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುತ್ತವೆ. ‘ಎಕೋ ಆನ್ ದಿ ಬೇ’ , ಒಂದು ಗಮನಾರ್ಹವಾದ ಮತ್ತು ಕೆಲವೊಮ್ಮೆ ಅನ್ನಿಸುವಂತೆ, ಒಂದು ವಿಲಕ್ಷಣ ಕಾದಂಬರಿ. ಆದರೆ ಇದರಲ್ಲಿರುವ ನಿಜವಾದ ಶಕ್ತಿಯುತ ಅಂಶವೇನೆಂದರೆ, ನಮ್ಮ ನಮ್ಮ ಪರಿಚಿತ ಪಾಪಗಳು ಕಥೆಯ ಕೇಂದ್ರದಲ್ಲಿ, ತೀವ್ರತರವಾದ ಪಲ್ಲಟನಾತ್ಮಕ ವಿವರಗಳೊಂದಿಗೇನೇ ಅಸ್ತಿತ್ವದಲ್ಲಿದ್ದು ಆ ಮೂಲಕ ಓದುಗರಿಗೆ ದಿಗ್ಬ್ರಮೆ ಮೂಡಿಸುವಂತದ್ದು.

____________________
* , ತೊಶಿ(Toshi) ಅಂತೆಯೇ ಚ್ಸಿ (shi)ಎಂದರೆ ಜಪಾನಿ ಭಾಷೆಯಲ್ಲಿ: ಸಿಟಿ (city).

2 comments to “ಜಪಾನೀ ಕಾದಂಬರಿ “ಅಳಿವೆ ಮೇಲಿನ ಮಾರ್ದನಿ””
  1. ಜಪಾನಿ ಕಾದಂಬರಿ ಪರಿಚಮಾಡಿಸಿಕೊಟ್ಟ ಈ ವಿಮರ್ಶಾ ಬರಹ ತುಂಬಾ ಚನ್ನಾಗಿ ಮೂಡಿ ಬಂದಿದೆ ….ಧನ್ಯವಾದಗಳು..

  2. ವಿಮರ್ಶೆ ಮನೋಹರವಾಗಿದೆ.ಈ ಮೂಲಕ ಕಾದಂಬರಿಯನ್ನು ಓದಬೇಕೆಂಬ ಹಂಬಲ ಹೆಚ್ಚುತ್ತದೆ.
    ……ಧನ್ಯವಾದಗಳು.

ಪ್ರತಿಕ್ರಿಯಿಸಿ