ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಒಂದು ದುರದೃಷ್ಟಕರ ಸಾಂವಿಧಾನಿಕ ಮೇಲ್ಪಂಕ್ತಿ

ಪ್ರತಾಪ್ ಭಾನು ಮೆಹ್ತಾ ಬರೆಯುತ್ತಾರೆ : ಕೃಷಿ ಮಸೂದೆಗಳಲ್ಲಿನ ಸಮಸ್ಯೆಗಳು ಸಂಕೀರ್ಣವಾಗಿವೆ. ಆದರೆ ನೀವು ಯಾವ ಕಡೆ ಇದ್ದರೂ, ಸುಪ್ರೀಂ ಕೋರ್ಟ್ ತನ್ನ ಕಾರ್ಯವನ್ನು ಹೇಗೆ ವ್ಯಾಖ್ಯಾನಿಸುತ್ತಿದೆ ಎಂಬುದರ ಬಗ್ಗೆ ನೀವು ಈಗ ಚಿಂತಿಸಬೇಕು. ನ್ಯಾಯಾಲಯವು ಬಹುಶಃ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ  ಘಾತಕವೆನಿಸಿಸುವಂತೆ ಒಂದು ಸಾಮಾಜಿಕ ಚಳವಳಿಯ ಆವೇಗವನ್ನು ಮುರಿಯಲು ಪ್ರಯತ್ನಿಸುತ್ತಿದೆ.

ಇತ್ತೀಚೆಗೆ ಸುಪ್ರೀಂಕೋರ್ಟು ಹೆಚ್ಚಾಗಿ, ಅಸಂಬದ್ಧ ಆಕೃತಿಯುಳ್ಳ, ಯಾವ ಅಂದಾಜಿಗೂ ಸಿಗದ ವಿಚಿತ್ರಜೀವಿಯಾಗಿ ಕಂಡುಬರುತ್ತಿದೆ. ಭೀತಿ ಹುಟ್ಟಿಸುವ ಕೋರೆಹಲ್ಲುಗಳನ್ನು ಸೌಮ್ಯ ಮುಖದ ಹಿಂದೆ ಅಡಗಿಸಿ , ಸಮಯಕ್ಕೆ ತಕ್ಕಂತೆ ತನ್ನ ರೂಪವನ್ನು ನಿಗೂಢವಾಗಿ ಬದಲಾಯಿಸುತ್ತಿದೆ. ಇದು ಸಾಂವಿಧಾನಿಕ ನ್ಯಾಯಾಲಯವಾದರೂ, ಕಾನೂನುಗಳ ಸಂವಿಧಾನಾತ್ಮಕತೆಯ ಬಗ್ಗೆ ತೀರ್ಪುಗಳನ್ನು ನೀಡುವುದಿಲ್ಲ. ಬದಲಿಗೆ ಯಾವುದೇ ಅಗತ್ಯವಿಲ್ಲದಿದ್ದರೂ ಆಡಳಿತಾತ್ಮಕ ನಿರ್ವಹಣೆ ಮತ್ತು ರಾಜಕೀಯ ವಿದ್ಯಮಾನಗಳಿಗೆ  ಪ್ರವೇಶ ಮಾಡುತ್ತಿದೆ. ಪ್ರಜಾಪ್ರಭುತ್ವದ ಸಂರಕ್ಷಕನೆಂದು ತನ್ನನ್ನು ತಾನು ಗುರುತಿಸಿಕೊಳ್ಳುತ್ತಲೇ, ಸಂಸದೀಯ ಪ್ರಕ್ರಿಯೆಗಳನ್ನು ಅಣಕ ಮಾಡುತ್ತಲಿದೆ.  ಸಂಘರ್ಷ ನಿರ್ವಹಣೆಗೆಂದು ಇಳಿದು, ತಜ್ಙರ ಸಮಿತಿಯ ಪರದೆಯ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದೆ.  ವಿತರಣಾ ಸಂಘರ್ಷಗಳು ತಾಂತ್ರಿಕವಾದವುಗಳು ಎಂದು ನಾಟಕವಾಡುತ್ತಿದೆ. ಅಪ್ಪಟ ಪ್ರಜಾಸತ್ತಾತ್ಮಕ ಪ್ರತಿಭಟನೆಯೊಂದನ್ನು ಚದುರಿಸಲು ಷಡ್ಯಂತ್ರಗಳನ್ನು ಹೆಣೆಯುತ್ತದೆ. ಆದರೂ, ಕ್ರಮಬದ್ಧವಾದ ಮತ್ತು ಕಾನೂನು ಚೌಕಟ್ಟಿನ ಒಳಗಿನ ಪ್ರತಿಭಟನೆಯ ಅಭಿವ್ಯಕ್ತಿಗೆ ಅದು ಅವಕಾಶ ಮಾಡಿಕೊಡುವುದಿಲ್ಲ.

ಸರಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ದೂರುವ ತಾನು ಮಾತ್ರ ಸಂವಿಧಾನಾತ್ಮಕತೆಯನ್ನು ಮತ್ತು ನ್ಯಾಯವನ್ನು ಸಕಾಲಕ್ಕೆ ಉಚ್ಛರಿಸುವುದನ್ನು ನಿರಂತರವಾಗಿ ನಿರಾಕರಿಸುತ್ತಲೇ ಇದೆ. ಯಾರ ಪರವೂ ನಿಲ್ಲದೆ ತಟಸ್ಥ ನೀತಿಯ ಭಾಷೆಯಲ್ಲಿ ಮಾತನಾಡುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾಗಿರುವ ಕೊಡು – ಕೊಳ್ಳು ವ್ಯವಸ್ಥೆಯನ್ನು ಬೇಕಂತಲೇ ಕದಡುವ  ಕೆಲಸ ಮಾಡುತ್ತಿದೆ. ಕೃಷಿ ಮಸೂದೆಗಳನ್ನು ತಡೆಹಿಡಿಯುವ ನ್ಯಾಯಾಲಯದ ಆದೇಶವು ಅತಿ ಕೆಟ್ಟ ಸಾಂವಿಧಾನಿಕ ಪೂರ್ವನಿದರ್ಶನವಾಗಿದ್ದು, ಅಸಂಬದ್ಧ ತೀರ್ಮಾನವಾಗಿರುತ್ತದೆ. ಈ ಆದೇಶದ ಹಿಂದೆ ಸಿನಿಕತೆಯ ವಾಸನೆ ಬಡಿಯುತ್ತಿದೆ.

ಕೃಷಿ ಮಸೂದೆಯ ಸಮಸ್ಯೆಗಳು ಕ್ಲಿಷ್ಟ.  ಆದರೆ ನೀವು ಯಾರ ಪರವಾಗಿಯೇ ಇದ್ದರೂ, ಈಗ ಚಿಂತಿಸಬೇಕಿರುವುದು ಸುಪ್ರೀಂ ಕೋರ್ಟು ಈ ವಿಷಯದಲ್ಲಿ ತನ್ನ ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸುತ್ತಿರುವ ರೀತಿಯ ಬಗ್ಗೆ. ಅದು ಕೃಷಿ ಕಾಯ್ದೆಗಳನ್ನು ಅಮಾನತುಗೊಳಿಸಿ ಅದರಲ್ಲಿನ ಅನೇಕ ಕುಂದುಕೊರತೆಗಳನ್ನು ಖಚಿತಪಡಿಸಿಕೊಳ್ಳಲು ಸಮಿತಿಯೊಂದನ್ನು ರಚಿಸಿದೆ. ಆದರೆ ಯಾವ ಕಾನೂನಿನ ಆಧಾರದ ಮೇಲೆ ಈ ಅಮಾನತನ್ನು ಮಾಡಲಾಗಿದೆ ಎಂಬುದು ಸ್ಪಷ್ಟವಿಲ್ಲ. ನ್ಯಾಯಾಲಯದ ಈ ಆದೇಶವು ಮೊದಲನೋಟಕ್ಕೆ ಅಧಿಕಾರ ಪ್ರತ್ಯೇಕೀಕರಣದ ಉಲ್ಲಂಘನೆಯಂತೆ ತೋರುತ್ತಿದೆ. ಅಷ್ಟೇ ಅಲ್ಲದೆ ವಿತರಣಾ ಸಂಘರ್ಷಗಳನ್ನು ತಾಂತ್ರಿಕವಾಗಿ ಅಥವಾ ಕಾನೂನಾತ್ಮಕವಾಗಿ ಬಗೆಹರಿಸುವ ಬಗೆಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ.

ನ್ಯಾಯಾಲಯದ ಕೆಲಸ ರಾಜಕೀಯ ವ್ಯಾಜ್ಯದ ಮಧ್ಯಸ್ಥಿಕೆ ವಹಿಸುವುದಲ್ಲ. ಅದರ ಕೆಲಸ ಅಸಂವಿಧಾನಿಕ ಅಥವಾ ಕಾನೂನುಬಾಹಿರತೆಯನ್ನು ನಿರ್ಧರಿಸುವುದು. ಹಾಗಿದ್ದೂ ಈ ಕಾನೂನುಗಳನ್ನು ಅಮಾನತುಗೊಳಿಸಿದರೂ, ಮೇಲ್ನೋಟಕ್ಕಾದರೂ ಅವುಗಳಲ್ಲಿ ನ್ಯೂನ್ಯತೆಗಳಿರಬೇಕು. ಆದರೆ ಒಂದು ವಸ್ತುವು ಒಕ್ಕೂಟ ವ್ಯವಸ್ಥೆಗೆ ಸವಾಲೆಸೆಯುವ ಸಾಧ್ಯತೆಯ ಬಗ್ಗೆ, ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯ ಸ್ಥಾನಭ್ರಷ್ಟತೆಯ ಸಾಧ್ಯತೆ ಮತ್ತು ಸವಾಲುಗಳ  ಬಗ್ಗೆ ವಿಚಾರಣೆ ನಡೆಸಿ, ನಂತರ ತಡೆಯಾಜ್ಞೆ ನೀಡಿಲ್ಲ. ಬದಲಿಗೆ ರೈತರ ಸಂಕಷ್ಟಗಳನ್ನು ಆಲಿಸಲು ಒಂದು ಸಮಿತಿ ರಚಿಸಲಾಗುವುದೆಂದು ಸುಖಾಸುಮ್ಮನೆ ತೀರ್ಮಾನ ಮಾಡಿ ರಾಜಕೀಯ ಕ್ಷೇತ್ರಕ್ಕೆ ಜಾರಿದಂತಾಗಿದೆ.

ಕೃಷಿಕ್ಷೇತ್ರದ ಆಡಳಿತದ ಚೌಕಟ್ಟಿಗೆ ಗಂಭೀರ ಸುಧಾರಣೆಗಳ ಅವಶ್ಯಕತೆಯಿದೆ. ಈ ಸುಧಾರಣೆಗಳ ಉದ್ದೇಶ ರೈತರ ಆದಾಯವನ್ನು ಮತ್ತು ಯೋಗಕ್ಷೇಮವನ್ನು ಉತ್ತಮಗೊಳಿಸುವುದು, ಬೆಳೆಗಳ ವೈವಿಧ್ಯತೆಯನ್ನು ಹೆಚ್ಚಿಸುವುದು, ಕೃಷಿಯನ್ನು ಪರಿಸರ ಪೂರಕವಾಗಿಸುವುದು, ಸಬ್ಸಿಡಿಗಳ ಅನುತ್ಪಾದಕತೆಯನ್ನು ಕಡಿಮೆ ಮಾಡುವುದು, ಆಹಾರ ದುಬ್ಬರವನ್ನು ಇಳಿಮುಖವಾಗಿಸುವುದು ಮತ್ತು ಸರ್ವರಿಗೂ ಪೌಷ್ಠಿಕತೆ ತಲುಪುವಂತೆ ನೋಡಿಕೊಳ್ಳುವುದು ಆಗಬೇಕು. ಪಂಜಾಬಿನಂತಹ ರಾಜ್ಯದಲ್ಲಿ ಈ ಎಲ್ಲಾ ಉದ್ದೇಶಗಳನ್ನು ಸಾಧಿಸುವುದು ಸುಲಭದ ಮಾತಲ್ಲ. ಕೃಷಿಯಲ್ಲಿ ಹೊಸ ಆಡಳಿತ ಕ್ರಮವನ್ನು ಜಾರಿಗೆ ತರಲು ಅಪಾರವಾದ ವಿಶ್ವಾಸದಿಂದ ಮುನ್ನಡೆಯಬೇಕು. ಕೃಷಿಯ ಸುಧಾರಣೆಗಳ ಅವಶ್ಯಕತೆಯ ಬಗೆಗಿನ ಸರಕಾರದ ಆಲೋಚನೆಯೇನೋ ಸರಿಯಾಗಿಯೇ ಇದೆ. ಆದರೆ ಅದು ಪ್ರಾರಂಭದಿಂದಲೂ “ವ್ಯಾಪಾರಿಗಳ ಆಯ್ಕೆ“ ಎಂಬ ಟೊಳ್ಳಾದ, ತಪ್ಪು ಸುಧಾರಣೆಗಳಿಗೆ ಆದ್ಯತೆ ನೀಡುತ್ತಿದೆ. ಇದು ಹಾಲಿ ಅಂತರ್ಗತವಾಗಿರುವ ಸಮಸ್ಯೆಗಳನ್ನು ಪರಿಹರಿಸುವುದರ ಬದಲಿಗೆ ಮತ್ತಷ್ಟು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ.

ಸರಕಾರವು ರೈತರ ನೈಜ ಕಳವಳಗಳಿಗೆ ಸ್ಪಂದಿಸುವ ಬದಲು, ಅವರ ನಂಬಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರತಿಭಟನಾ ನಿರತ  ರೈತರನ್ನು ದೇಶವಿರೋಧಿಗಳೆಂದು ಸಾಧಿಸಲು ಸರ್ಕಾರವು ಅದೆಷ್ಟೇ ತಿರುಗಾ ಮುರುಗಾ ಪ್ರಯತ್ನಿಸಿದರೂ, ಅವರು ತಮ್ಮ ಹಕ್ಕುಗಳ ವ್ಯಾಪ್ತಿಯ ಒಳಗೆ ಘನತೆಯಿಂದಲೇ ಪ್ರತಿಭಟಿಸುತ್ತಿದ್ದಾರೆ. ಒಂದು ಬಿಕ್ಕಟ್ಟು ಎದುರಾಗಿದೆ. ಸಾಮಾನ್ಯವಾಗಿ ಬಿಕ್ಕಟ್ಟನ್ನು ಬಗೆಹರಿಸುವ ಮಧ್ಯಸ್ಥಿಕೆಗೆ ಸ್ವಾಗತವಿದೆ. ಆದರೆ ಆ ಮಧ್ಯಸ್ಥಿಕೆಯು ಜನರ ಮತ್ತು ಸರ್ಕಾರದ ನಡುವಿನ ರಾಜಕೀಯ ಪ್ರಕ್ರಿಯೆಯಾಗಬೇಕು. ಅದರಲ್ಲೇನಾದರೂ ಅಸಂವಿಧಾನಿಕತೆ ಒಳಗೊಂಡಿದ್ದರೆ, ಸಂಸತ್ತು ಅದನ್ನು ಸರಿಪಡಿಸಬೇಕು.

ಸುಪ್ರೀಂಕೋರ್ಟಿನ ಅಪಾಯಕಾರಿ ನಡಿಗೆ ಹೀಗಿದೆ. ಸಂಸತ್ತು ಅನುಮೋದಿಸಿದಂತಹ ಕಾನೂನುಗಳ ಒಳ ಅಂಶಗಳನ್ನು ವಿಚಾರಣೆಗೆ ಒಳಪಡಿಸಿ ರುಜುವಾತು ಮಾಡದೆಯೇ ತಡೆಹಿಡಿದಿದ್ದು ಹೊಸ ನಿದರ್ಶನವೊಂದಕ್ಕೆ ಅಡಿಪಾಯ ಹಾಕಿದೆ. ವಿವಿಧ ವಕೀಲರುಗಳ ನಿಲುವುಗಳೇನು? ಯಾವ ನಿರ್ದಿಷ್ಟ ಬೇಡಿಕೆಗಳನ್ನು ಆಲಿಸಬೇಕು? ಅವಕ್ಕೆ ನ್ಯಾಯಾಲಯವು ಯಾವ ಪರಿಹಾರಗಳನ್ನು ಸೂಚಿಸಬೇಕು ಎಂಬ  ಸ್ಪಷ್ಟತೆಯೇ ಇಲ್ಲದೆ, ನ್ಯಾಯಾಂಗದ ವಿಧಾನಗಳ ಎಲ್ಲಾ ಸಾಧ್ಯತೆಗಳನ್ನು ಮಣ್ಣುಪಾಲಾಗಾಸಿದೆ. ಅದು ರೈತರನ್ನು ಆಲಿಸಿಯೇ ಇಲ್ಲ. ಕೃಷಿ ಕಾನೂನುಗಳನ್ನು ತಡೆಹಿಡಿಯುವ ಮೊದಲು ರೈತಪರ ನ್ಯಾಯವಾದಿಗಳನ್ನೂ ಸಂಪೂರ್ಣವಾಗಿ ಆಲಿಸಿಲ್ಲ. ನ್ಯಾಯಾಲಯವೊಂದು ಹೊಣೆಗಾರಿಕೆಯುಳ್ಳ ಸರಕಾರದ ಪರವಾಗಿ ತಾನೇ ತೀರ್ಪುಗಾರನಾಗಿ ನಿಂತು, ತನ್ನದೇ ಪ್ರಕ್ರಿಯೆಗಳನ್ನು ಅಪಾರದರ್ಶಕವಾಗುವಂತೆ ಮಾಡಿಕೊಂಡದ್ದು ಚಿರಸ್ಥಾಯಿಯಾದ ವ್ಯಂಗ್ಯವಾಗಿ ಉಳಿಯಲಿದೆ. ಇದು ಸಾರ್ವಜನಿಕ ಹಿತಾಸಕ್ತಿಯಲ್ಲ, ಅಮಲಿನಲ್ಲಿ ನಡೆಸುತ್ತಿರುವ ಹುಚ್ಚಾಟ.

               ಸಾಮಾಜಿಕ ಚಳುವಳಿಯೊಂದನ್ನು ನ್ಯಾಯಾಲಯವು ಉದ್ದೇಶಪೂರ್ವಕವಾಗಿಯಲ್ಲದಿದ್ದರೂ, ಅಪಾಯಕಾರಿಯಾಗಿ ಹತ್ತಿಕ್ಕುತ್ತಿದೆ. ರೈತರು ಸರಿಯೋ ಅಥವಾ ಸರಕಾರ ಸರಿಯೋ ಎನ್ನುವ ಅಭಿಪ್ರಾಯವನ್ನು ನೀವು ಹೊಂದಬಹುದು. ಆದರೆ ಎಲ್ಲಿಯವರೆಗು ಅಸಂವಿಧಾನಿಕತೆ ಇರುವುದಿಲ್ಲವೋ, ಅಲ್ಲಿಯವರೆಗೂ ಯಾರು ಸರಿ ಎಂಬುದನ್ನು ಜನರು ಮತ್ತು ರಾಜಕೀಯ ಪ್ರಕ್ರಿಯೆಗಳು ನಿರ್ಧರಿಸುತ್ತವೆ.  ರಾಜಕೀಯ ಚಳುವಳಿಯನ್ನು ಸಂಘಟಿವುದು ಸುಲಭವಲ್ಲ. ಅದಕ್ಕೆ ಸಮಗ್ರವಾದ ಕಾರ್ಯಗಳು ಮತ್ತು ಪರಿಪಕ್ವ ಸಮಯವು ಅತ್ಯಾವಶ್ಯಕ.  ಈ ಆದೇಶವನ್ನು ನೀಡಿದ ಸಮಯವು , ತೀವ್ರಗೊಳ್ಳುತ್ತಿರುವ ಪ್ರತಿಭಟನೆಯಿಂದ ಸರಕಾರವು ಅನುಭವಿಸಬೇಕಾದ ಮುಜುಗರದಿಂದ ಅದನ್ನು ಬಚಾವು ಮಾಡುವ ಉದ್ದೇಶವಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.  ನ್ಯಾಯಾಲಯವು ಸಮಿತಿಯೊಂದನ್ನು ನೇಮಿಸುವ ಮೂಲಕ ಭಾರವನ್ನು ರೈತರ ಮೇಲೆ ಹೊರಿಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಅಥವಾ ತಮ್ಮನ್ನು ತಾವು ಅವಿವೇಕಿಗಳೆಂದು ಬಿಂಬಿಸಿಕೊಳ್ಳುವಂತೆ ಮಾಡಿದೆ. ಇದಕ್ಕೆ ಪೂರಕವಾಗಿ ದೆಹಲಿಯ ರೈತ ಹೋರಾಟದ ಯಾವ ಸ್ವರೂಪಕ್ಕೆ ಅನುಮತಿ ನೀಡಬೇಕೆಂದು ಚರ್ಚಿಸುತ್ತಾ , ʼ ರೈತರ ಪ್ರತಿಭಟನೆಯು ಖಲಿಸ್ತಾನಿ ಚಳುವಳಿಗೆ ದಾರಿ ಮಾಡಿಕೊಡುತ್ತಿದೆ ʼ ಎಂಬ ಅಟಾರ್ನಿ ಜನರಲ್‌ ರವರ ಆಕ್ಷೇಪಣೆಯನ್ನು ಅತೀಗಂಭೀರವಾಗಿ ಪರಿಗಣಿಸಿ, ರಾಷ್ಟ್ರೀಯ ಭದ್ರತೆಯ ಸಂರಕ್ಷಕನಾಗಿ ಸ್ಥಾನ ಬದಲಾಯಿಸಿದೆ. ಇದು ಪ್ರತಿಭಟನೆಯೊಂದನ್ನು ದಿಕ್ಕುತಪ್ಪಿಸಿ ಅನಧಿಕೃತಗೊಳಿಸುವ ಪ್ರಯತ್ನ. ಈ ಪ್ರತಿಭಟನೆಯು ಕಾನೂನು ಬಾಹಿರ ಎಂದು ನಿರೂಪಿಸಲು ಬೇಕಾದ ಭೂಮಿಕೆಯನ್ನು ದೊಡ್ಡಪ್ರಮಾಣದಲ್ಲಿಯೇ ಸಿಧ್ಧಪಡಿಸುತ್ತಿದೆ.

ಮತ್ತೊಂದು ಷಡ್ಯಂತ್ರದಲ್ಲಿ ನ್ಯಾಯಾಲಯವು ಮಧ್ಯಸ್ಥಿಕೆಯ ಪ್ರಕ್ರಿಯೆಯನ್ನು ಬದಲಾಯಿಸಿ ಮರುವ್ಯಾಖ್ಯಾನ ನೀಡುತ್ತಿರುವಂತಿದೆ. ಒಂದು ಸಮಿತಿಯ ಕೆಲಸ ಮಧ್ಯಸ್ಥಿಕೆಯೇ ಆಗಿದ್ದರೆ, ನ್ಯಾಯಾಲಯವು ಅದರ ಮೊದಲ ನಿಯಮವನ್ನೇ ಉಲ್ಲಂಘಿಸಿದೆ. ಎರಡೂ ಬಣಗಳ ಜೊತೆ ಸಮಾಲೋಚನೆ ನಡೆಸಿ, ಇಬ್ಬರಿಗೂ ಸ್ವೀಕಾರವಾಗುವಂತಹ ವ್ಯಕ್ತಿಯನ್ನು ಮಧ್ಯವರ್ತಿನ್ನಾಗಿ ನೇಮಿಸಬೇಕು. ಈ ಸಮಿತಿಯ ಉದ್ದೇಶ ವಸ್ತುಸ್ಥಿತಿಯನ್ನು ತಿಳಿಯುವುದೇ ಆಗಿದ್ದರೆ, ನ್ಯಾಯಾಲಯದಲ್ಲಿ ಎಲ್ಲ ಪಕ್ಷಗಳ ಸಾರ್ವಜನಿಕ ವಿಚಾರಣೆಯನ್ನೇಕೆ ಮಾಡಬಾರದು?

ರೈತರನ್ನು ತನ್ನ ಶಿಶುಗಳಂತೆ ಕಾಣುವ, ಅವರಿಂದ ಅವರನ್ನೇ ರಕ್ಷಿಸುವ ನ್ಯಾಯಾಲಯದ ಪಿತೃತ್ವ ಸಿದ್ದಾಂತದ ಅವಶ್ಯಕತೆ ರೈತರಿಗಿಲ್ಲ. ಅವರಿಗೆ ಬೇಕಿರುವುದು ಎಲ್ಲಿ ಪ್ರಸ್ತುತತೆ ಇದೆಯೋ ಅಲ್ಲಿ ಕಾನೂನುಗಳ ಸ್ಪಷ್ಟತೆ ಮತ್ತು ತಮ್ಮ ಬೇಡಿಕೆಗಳನ್ನು ರಾಜಕೀಯ ಪ್ರಕ್ರಿಯೆಗಳ ಮತ್ತು ನಾಗರೀಕ ಸಮಾಜದ ಮೂಲಕ ಆಲಿಸಬೇಕಾದ ಹಕ್ಕು. ನ್ಯಾಯಾಲಯವು ತನ್ನ ಅರೆತಿಳುವಳಿಕೆಯ ಅತೀಬುದ್ಧಿವಂತಿಕೆಯಿಂದ ಸ್ಫೋಟಕ ಪರಿಸ್ಥಿತಿನ್ನು ಸೃಷ್ಟಿಸಿದೆ. ಯಾವುದೇ ಕಾನೂನುಬದ್ಧ ಅಡಿಪಾಯವಿಲ್ಲದೆ ಕೃಷಿ ಮಸೂದೆಗಳನ್ನು ಅಮಾನತಿನಲ್ಲಿಟ್ಟು ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದೆ. ತನ್ನ ಉದ್ದೇಶದ ಬಗ್ಗೆ ರೈತರಲ್ಲಿ ಅಪನಂಬಿಕೆ ಮೂಡಿಸಿದೆ. ನ್ಯಾಯಾಲಯದ ಈ ನಡೆಯಿಂದ ಸರಕಾರಕ್ಕೆ ಕೊಂಚ ಹಿನ್ನಡೆಯಾಗಿದ್ದರೂ, ಅದು “ಜೈಲಿನಿಂದ ಹೊರಬರುವ ಚೀಟಿ”ಯಂತೆ: ಚಳುವಳಿಯಿಂದ ಉಂಟಾಗಬಹುದಾದ ರಾಜಕೀಯ ಹಿನ್ನಡೆಯಿಂದ ಸರಕಾರವನ್ನು ಕಾಪಾಡಿದೆ. ಈ ಆದೇಶದೊಂದಿಗೆ ನ್ಯಾಯಾಲಯವು “ನಂಬಿಕೆಯ ಭಂಡಾರ”ವಾಗಬೇಕಿದ್ದ ತನ್ನ ಮೂಲ ಆಶಯಕ್ಕೇ ಭಂಗತಂದುಕೊಂಡಿದೆ.

ಕೃಪೆ : ಇಂಡಿಯನ್ ಎಕ್ಸ್‍ಪ್ರೆಸ್


ಪ್ರತಾಪ್ ಭಾನು ಮೆಹ್ತಾ.

ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿದ್ದಾರೆ. ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು ಮತ್ತು ಪ್ರಭಾವೀ ಥಿಂಕ್ ಟ್ಯಾಂಕ್ ಸೆಂಟರ್ ಪಾಲಿಸಿ ರಿಸರ್ಚ್ ನ ಅಧ್ಯಕ್ಷರೂ ಆಗಿದ್ದರು. ಅದಕ್ಕೂ ಮೊದಲು ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಥಿಯರಿ ಯ ನ್ನು ಬೋಧಿಸುತ್ತಿದ್ದರು.

ಅನುವಾದ : ಹೇಮಂತ್ ಎಲ್.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು. ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ, ಬೆವಿಕಂ ನೆಲಮಂಗಲ ವಿಭಾಗದಲ್ಲಿ ಸಹಾಯಕ ಇಂಜಿನಿಯರ್(ವಿ.) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕಥೆ, ಕವಿತೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.

One comment to “ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಒಂದು ದುರದೃಷ್ಟಕರ ಸಾಂವಿಧಾನಿಕ ಮೇಲ್ಪಂಕ್ತಿ”

ಪ್ರತಿಕ್ರಿಯಿಸಿ