ಕತೆ : ದೇವದಾಸನ ಮಿಸ್ಟೇಕು

ಅಂಗಳದಲ್ಲಿ ಬಿದ್ದಿದ್ದ ಮೂರ್ನಾಲ್ಕು ತರಹದ ಕನ್ನಡ ಹಾಗೂ ಒಂದು ಇಂಗ್ಲೀಷಿನ ದಿನಪತ್ರಿಕೆಗಳ ಮೇಲೆ ಬೀದಿನಾಯಿಯೊಂದು ಮಲಗಿತ್ತು. ಡೆಕ್ಕನ್ ಎಂಬ ಹೆಸರು ಮಾತ್ರ ಕಾಣುವಂತೆ ನಾಯಿ ತನ್ನ ಬಾಲವನ್ನು ಚಾಚಿಕೊಂಡಿತ್ತು. ಸೈಕಲ್ ಬೆಲ್ಲು ಬಾರಿಸಿಕೊಂಡು ಬಂದ ಸ್ವೆಟ್ಟರ್ ತೊಟ್ಟ ಹುಡುಗ ಇಂದಿನ ಪೇಪರುಗಳನ್ನು ಒಂದು ಎಳೆಯ ನೂಲಿನಲ್ಲಿ ಸುತ್ತಿ ರೊಯ್ಯನೆ ನಾಯಿಯ ಮೇಲೆ ಎಸೆದು ಹೋದ

ಉಷ್ಣ ಕಾಣೆಯಾಗಿ ಮೂರು ದಿನವಾಯಿತು.

ಜಾಮಿನಿ ಮೆಡಿಕಲ್ ಶಾಪಿನಿಂದ ಒಬ್ಬ ಗುಂಗುರು ಕೂದಲಿನ, ಎಡಗೈ ಇಲ್ಲದ ಎಪ್ಪತ್ತು ಎಪ್ಪತೈದು ವಜನ್ನಿನ ಒಂದು ದೇಹ ರಸ್ತೆಗೆ ತ್ರಿಕೋನಾಕಾರದ ಬೋರ್ಡನ್ನು ನಿಲ್ಲಿಸಿ ಹೋಯಿತು. ಆ ಬೋರ್ಡಿನಲ್ಲಿ ಕೇಸರಿ ಬಣ್ಣದ ಚಿಕ್ಕ ಗಣೇಶ ಧೂಳಿನಿಂದಾಗಿಯೂ, ಕಳಾಹೀನನಾಗಿಯೂ ಕಾಣುತ್ತಿದ್ದ.

ಹೊರ ವರ್ತುಲದ ರಸ್ತೆಗಳೇ ಹಾಗೆನೋ ಒಂಬತ್ತು ಗಂಟೆಯ ಮೇಲೆ ಚಿಗುರುತ್ತದೆ. ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ವಾಹನಗಳು ನಿಧಾನ ಚಲಿಸಲು ಶುರು ಮಾಡುತ್ತವೆ. ತರಕಾರಿ ಕೊಳ್ಳುವವರು, ಶೇವಿಂಗ್, ಕಟಿಂಗು ಹೇರ್ ಡೈ ಮಾಡಿಸಿಕೊಳ್ಳುವವರು ಕಣ್ಣಿನ ಪಿಸುರು ತೆಗೆಯದೆ ರಸ್ತೆಗೆ ಢಾಮರು ಹಾಕುವ ಕೈಗಳಂತೆ ನಡೆಯುವಾಗ ‘ಕಳಕಳಿ’ ಸುಮ್ಮನೆ ನಿಂತು ನಗುತ್ತಿರುತ್ತಾನೆ.

ಇಂತಹ ಸ್ವಪ್ನವಂಚಿತ ಮಲ್ಲರಲ್ಲಿ ಕೆಲವರು ಉಷ್ಣನ ಮುಚ್ಚಿದ ಅಂಗಡಿಯನ್ನು ದಾಟಿಕೊಂಡೆ ಹೊರಟರು. ಅಂಗಡಿಯ ಅಂಗಳದಲ್ಲಿ ಬಿದ್ದಿದ್ದ ಮೂರ್ನಾಲ್ಕು ತರಹದ ಕನ್ನಡ ಹಾಗೂ ಒಂದು ಇಂಗ್ಲೀಷಿನ ದಿನಪತ್ರಿಕೆಗಳ ಮೇಲೆ ಬೀದಿನಾಯಿಯೊಂದು ಮಲಗಿತ್ತು. ಡೆಕ್ಕನ್ ಎಂಬ ಹೆಸರು ಮಾತ್ರ ಕಾಣುವಂತೆ ನಾಯಿ ತನ್ನ ಬಾಲವನ್ನು ಚಾಚಿಕೊಂಡಿತ್ತು. ಸೈಕಲ್ ಬೆಲ್ಲು ಬಾರಿಸಿಕೊಂಡು ಬಂದ ಸ್ವೆಟ್ಟರ್ ತೊಟ್ಟ ಹುಡುಗ ಇಂದಿನ ಪೇಪರುಗಳನ್ನು ಒಂದು ಎಳೆಯ ನೂಲಿನಲ್ಲಿ ಸುತ್ತಿ ರೊಯ್ಯನೆ ನಾಯಿಯ ಮೇಲೆ ಎಸೆದು ಹೋದ; ನಾಯಿ ದಿಗ್ಗನೆ ಎದ್ದು ಬೊಗಳಿ ನಿತ್ಯದ ಪರೇಡ್ ಹೊರಟವರ ಜೊತೆ ಸೇರಿಕೊಂಡಿತು. ಹುಡುಗ ಎಸೆದ ದಿನಪತ್ರಿಕೆಗಳ ಗೊಂಚಲು ನೂಲಿನಿಂದ ಬಿಡಿಸಿಕೊಂಡು ಮುದ್ದೆಯಾಗಿದ್ದ ಅಕ್ಷರಗಳನ್ನು, ಎಲೆಕ್ಷನಿನ್ನಲಿ ಸೋತ ಅಭ್ಯರ್ಥಿಗಳನ್ನು, ಕಾಯಿಲೆ ಕಸಾಲೆ ಬಂದವರು, ಪೆಟಿಕೋಟ್ ಚೋರರನ್ನು ಮತ್ತು ಕಾಣೆಯಾದವರ ನಿಶ್ಯಬ್ದ ಫೋಟೋಗಳನ್ನು ಸೂರ್ಯನ ಬೆಳಕಿಗೆ ಬಿಟ್ಟುಕೊಟ್ಟಿತು. ಕಾಣೆಯಾದವರ ಪಟ್ಟಿಯಲ್ಲಿ ಉಷ್ಣನ ಹೆಸರಿತ್ತು. ಶುಕ್ರವಾರವಾದದ್ದಿಂದೇನೊ ಸಿನಿಮಾ ಕುರಿತ ಹೆಚ್ಚುವರಿ ಪುಟಗಳಿದ್ದವು. ಚಿತ್ರತಾರೆಗಳೆಲ್ಲಾ ಗಾಳಿಯಲ್ಲಿ ತೇಲುತ್ತಾ ನೆಲಕ್ಕಿಳಿದರು.

ಪ್ರತಿ ಶುಕ್ರವಾರ ಕಳಕಳಿ ಮೆಡಿಕಲ್ ಶಾಪಿಗೆ ಹೋಗುವ ದೇಡ್ ತಾಸಿನ ಮುಂಚೆ ಉಷ್ಣನ ಅಂಗಡಿಯ ಎದುರು ನಿಂತು ಆ ಸ್ವೆಟ್ಟರ್ ಹುಡುಗ ಪೇಪರ್ ತಂದುಕೊಡುವುದನ್ನೆ ಕಾಯುತ್ತಿದ್ದ. ಸೈಕಲ್ ಗಾಲಿಯ ಶಬ್ದ, ಪೆಡಲಿನ ಜೊತೆ ಸೇರಿಹೋಗುವ ಬೆಲ್ಲಿನ ಕಿಣಿಕಿಣಿ ಪಕ್ಕದ ರಸ್ತೆಯಲ್ಲಿ ಕೇಳಿದ ಕೂಡಲೆ ಇನ್ನೇನು ಕೆಲವೇ ಸೆಕೆಂಡಿನಲ್ಲಿ ಹುಡುಗ ಬರುವವನೆಂದು, ಅವನ ಕೈಯಿಂದ ಪೇಪರು ರವಾನೆಯಾದ ತಕ್ಷಣ ಸಿನಿಮಾ ಸುದ್ದಿಗಳನ್ನು ಓದಿಬಿಡಬೇಕು ಮತ್ತದು ಉಷ್ಣನಿಗೆ ಗೊತ್ತಾಗದ ಹಾಗೆ ಎಂದೆಲ್ಲಾ ಕಳಕಳಿ ಯೋಚಿಸುವಾಗಲೇ ಅವನ ಹೊಟ್ಟೆಯೊಳಗೆ ಒಂದಿಷ್ಟು ಅಸ್ಪಷ್ಟ ಗಾತ್ರದ ಲಡ್ಡುಗಳು ಸ್ಪೋಟಗೊಳ್ಳುತ್ತಿದ್ದವು. ಸ್ಪೋಟಗೊಂಡ ಮಾರ್ದನಿ ಬೇರೆಯವರಿಗೆ ಕೇಳಿತೇನೋ ಎಂದು ಕಳಕಳಿ ಗುಮಾನಿ ಪಡುತ್ತಿದ್ದ.

ರಸ್ತೆಗೆ ಬೋರ್ಡು ಇಟ್ಟು ಬಂದು ಕಳಕಳಿ ಬಿಳಿಯ ಮೇಜಿನ ಪಕ್ಕವಿದ್ದ ವ್ಹೀಲ್ ಚೇರ್ ಸರ್ರನೆ ಎಳೆದು ಕೂತ. ಉಷ್ಣ ಕಾಣೆಯಾಗಿದ್ದು ಅವನ ಎದೆ ನಡುಗಿಸಿತ್ತು. ಅದಲ್ಲದೆ ತನ್ನ ಅಂಗಡಿಯ ಅಂಗಳದಲ್ಲಿ ಬಿದ್ದಂತ ಕಟಿಂಗ್ ಮಾಡಿದಂತ ಕೂದಲುಗಳ ರಾಶಿ, ಉಷ್ಣನಿಗೆ ಸಂಬಂಧಪಟ್ಟ ವಸ್ತುಗಳು ಕಂಡಿದ್ದರಿಂದ ಕಳವಳಗೊಂಡಿದ್ದ. ಪೋಲಿಸಿಗೆ ಏನಾದರೂ ನನ್ನ ಮೇಲೆ ಅನುಮಾನ ಬಂದರೆ ನನ್ನ ಇಲ್ಲಸಲ್ಲದ ವಿಚಾರಣೆಗೆ ಒಳಪಡಿಸುತ್ತಾರೆಂದು ಯಾರಿಗೂ ಗೊತ್ತಾಗದ ಹಾಗೆ ಎಲ್ಲ ಸಾಕ್ಷ್ಯಗಳನ್ನು ನೀಟಾಗಿ ಗೂಡಿಸಿ ಕೂತಿದ್ದ. ದಿಕ್ಕುಗಳೆಲ್ಲಾ ಅವನ ತಲೆಗೆ ಬಡಿದವು.

ರಾತ್ರಿ ಯಾವುದೋ ಊರಿನಿಂದ ಬರುತ್ತಿದ್ದ ಉಷ್ಣ ಮೆಡಿಕಲ್ ಶಾಪಿನ ಮುಂದೆ ಹುಚ್ಚ ಚೂಡಿದಾರದ ಪ್ಯಾಂಟನ್ನು ಉಲ್ಟಾ ಹಾಕಿಕೊಳ್ಳಲು ಸೋತು ಕಿರಿಚುತ್ತಿದ್ದಾಗ ಅವನ ಬಳಿ ಹೋದ. “ಏನ್ ನಡಿಸ್ತಿಯಪ್ಪಾ” ಎಂದು ಕೇಳಿ “ಪ್ಯಾಂಟ್ಯಾಕೊ ಉಲ್ಟಾ ಹಾಕೊತ್ತಿದ್ಯಾ” ಎಂದ. ಸುತ್ತಲೂ ಯಾವ ವಾಹನದ ಸದ್ದು ಕೇಳದೆ ಬೀದಿ ದೀಪದ ಕೆಳಗೆ ಹಾಯಾಗಿ ಗಸ್ತು ಹೊಡೆಯುತ್ತಿದ್ದ ಹುಳುಗಳ ಹಾರಾಟ ಕೇಳಿತು. ಪ್ರತಿ ರಾತ್ರಿ ಹನ್ನೆರೆಡುವರೆಗೆ ಆ ರಸ್ತೆಯಿಂದ ಹೊರಡುವ ಪೋಸ್ಟ್ ಆಫೀಸಿನ ಮೆಟಡೋರೊಂದು ಸರ್ರನೆ ಹಾದು ಹೋಯಿತು. ಅಚ್ಚ ಕೆಂಪು ಬಣ್ಣವಿದ್ದ ಮೆಟಡೋರು ಇಡೀ ಟಾರಿನ ರಸ್ತೆಗೆ ಅಧಿಕ ರಕ್ತದೊತ್ತಡ ಒಮ್ಮೆಲೆ ತಂದಂತೆ ಭಾಸವಾಯಿತು.

ಹುಚ್ಚ ಏನು ಉಷ್ಣನಿಗೆ ಅಪರಿಚಿತನಲ್ಲ. ದಿನಕ್ಕೆ ಮೂರು ಬಾರಿಯಾದರೂ ಕಣ್ಣಿಗೆ ತಾಕುವ ಸರ್ಕಾರ ನೇಮಿಸಿದ ಕಸ ಹೊಯ್ಯುವ ಗಾಡಿಯಂತವನು. ಯಾರದೋ ಮನೆಯ ಹಿತ್ತಿಲಿನಲ್ಲಿ ಬಿದ್ದ ಪೈಜಾಮದಲ್ಲಿ ತನ್ನ ಕಾಲು ತೂರಿಸಿಕೊಳ್ಳಲು ಹೆಣಗಾಡುತ್ತಿದ್ದ. ಮೊದಲ ನೋಟಕ್ಕೆ ಅದು ಹೆಂಗಸಿನದು ಅನ್ನಿಸಿದರೆ ಆಮೇಲೆ ತೊಡೆ, ಹಿಂಭಾಗದ ಕಡೆಗಳಲ್ಲಿ ರಕ್ತಸ್ರಾವದ ಕೃತಿಗಳಿದ್ದವು. ಉಷ್ಣ ಹುಚ್ಚನನ್ನು ಒಮ್ಮೆ ಸಂದೇಹದಿಂದ ನೋಡಿದ. ಕೋಲು ಮುಖದಲ್ಲಿ ಹಸಿರು ಮಿಶ್ರ ಕಪ್ಪು ಪದರ ಕಣ್ಣಿನಿಂದ ಕಂಠದವರೆಗೂ ಹಬ್ಬಿತ್ತು.

“ಲೇ ದೇವದಾಸ ಇರೋ ಇರೋ” ಎಂದು ಉಷ್ಣ ಒಂದೇ ಸಮನೆ ಹೌಹಾರುತ್ತಿದ್ದವನನ್ನು ಸುಮ್ಮನಾಗಿಸಿ ಬಲಗಾಲಿನ ಹಿಮ್ಮಡಿಗೆ ಸಿಕ್ಕಿಬಿದ್ದ ಪೈಜಾಮದ ಒಂದು ಕಾಲನ್ನು ಬಿಡಿಸಿ ಮೊದಲು ಆತನ ಎಡಗಾಲನ್ನು ತೂರಿಸಿಲು ಗದರಿಸಿದ. ದೇವದಾಸ “ವಾರ್ ಅಂಡ್ ಪೀಸ್, ಪೀಸ್ ಪುಲ್ ವಾರ್” ಎಂದು ಬಡಬಡಿಸುತ್ತಿದ್ದ. ಉಷ್ಣನಿಗೆ ತಾನು ತೊಡಿಸುತ್ತಿದ್ದ ಪೈಜಾಮ ತೀರಾ ಹತ್ತಿರವೆನಿಸಿತು. ಹಿಂದೊಮ್ಮೆ ಅಥವಾ ಇತ್ತಿಚೆಗೆ ಹತ್ತಿರದಿಂದ ಅದನ್ನು ಮುಟ್ಟಿದ ನೋಡಿದ ಅನುಭವವಿದೆ ಎಂದು ಅನ್ನಿಸತೊಡಗಿತು ಆದರೆ ರಕ್ತದ ಕಲೆ..! ಉಷ್ಣನ ತಲೆ ಗಾಳಿ ಚರಕದಂತೆ ತಿರುಗಿತು.

ದೇವದಾಸನ ಎರಡು ಕಾಲ ಹಿಮ್ಮಡಿಗಳು ಬಹುತೇಕ ಅರಳಿದ್ದವು; ಬಿರುಕುಗಳಲ್ಲಿ ಕಪ್ಪು ನೆಲ ಕಾಣುತಿತ್ತು. ಮೆಡಿಕಲ್ ಶಾಪಿನ ಒಂದು ಬದಿಗೆ ಅವನ ಎರಡು ಪರಸ್ಪರ ವಿರುದ್ಧ ದಿಕ್ಕಿನ ಜೊತೆಯಲ್ಲದ ಚಪ್ಪಲಿಗಳಿದ್ದವು. ಮೂರ್ನಾಲ್ಕು ಬಗೆಯ ಅಂಗಿತೊಟ್ಟಿದ್ದ ಅವನ ಎದೆ ತೋಳುಗಳು ಭೀಕರ ಚಳಿಯನ್ನು ಬೇರೆ ಯಾರಿಗೋ ಮಾರಿಕೊಂಡಿದ್ದವು. ಹೆಚ್ಚಿನ ಜನ ಉಡದಾರ, ಬನಿಯನ್ನು ಚಡ್ಡಿ ಇನ್ನಿತರೆ ವಗೈರೆಗಳನ್ನು ಸಂಪ್ರದಾಯ ಅಥವಾ ಲಡ್ಡಾಯಿತೆಂದು ನದಿಗೋ ಚರಂಡಿಗೋ ಎಸೆದ ಕೆಂಪು ಉಡದಾರದ ತಾಯತ ಕೊರಳಿನಲ್ಲಿತ್ತು. ತನ್ನ ಸೊಂಟಕ್ಕಿಂತ ಹೆಚ್ಚು ಅಗಲವಿದ್ದ ಎಲಾಸ್ಟಿಕು ಬಗ್ಗಡವಾದ ಚಡ್ಡಿ ಸುಸೂತ್ರವಾಗಿ ಕೆಳಗೆ ಜಾರುತ್ತಿದ್ದನ್ನು ಉಷ್ಣ ತಡೆಟ್ಟಿದ. ದೇವದಾಸ ತನಗಿದಕ್ಕೆ ಸಂಬಂಧವಿಲ್ಲವೆಂದು ಉಷ್ಣ ತನ್ನ ಹೆಗಲಿಗಿನಿಂದ ಕಿತ್ತು ಪಕ್ಕಕ್ಕಿರಿಸಿದ ಕಪ್ಪು ಬ್ಯಾಗಿನತ್ತ ಆಸೆಯಿಂದ ನೋಡ ಹತ್ತಿದ.

ಒಂದು ಹೆಗಲಿಗೆ ಜೋತು ಬೀಳುವ ಕಪ್ಪು ಬ್ಯಾಗು ಉಷ್ಣನ ಜೊತೆ ಹಲವಾರು ಊರುಕೇರಿ, ತರಹೇವಾರಿ ಮಂದಿಗಳ ಮನೆಗೆ ಹೋಗಿತ್ತು. ಎರಡು ಸಮನಾಂತರ ದೊಡ್ಡ ಬಾಯಿಯ ಜಿಪ್ಪು, ಇನ್ನೊಂದು ಚಿಕ್ಕ ಯಾವುದೇ ಅಡೆತಡೆಗಳಿಲ್ಲದ ಒಂದು ಸಂದಿಯಿತ್ತು. ಅದರೊಳಗೆ ಉಷ್ಣನ ವಿಸಿಟಿಂಗ್ ಕಾರ್ಡು, ತಮಿಳು ನಟ ವಿಜಯಕಾಂತನ ಫೋಟೋವಿತ್ತು. ಇನ್ನುಳಿದಂತೆ ಅಂಗೈಯಷ್ಟು ಅಗಲದ ಚೌಕಾಕರ ಸರಳ ಕನ್ನಡಿ, ವಿವಿಧ ಗಾತ್ರದ ಸಣ್ಣ ಹಲ್ಲಿನ ಬಾಚಣಿಕೆಗಳ ಗುಂಪು, ಗೋರಂಟಿ ಬಣ್ಣದ ದೊಡ್ಡ ಹಲ್ಲಿನ ಫಸ್ಟ್ ಕ್ಲಾಸ್ ಎರಡು ಬಾಚಣಿಕೆ; ಅದು ಬಿಳಿಯ ಮುಚ್ಚಳವಿದ್ದ ಉದ್ದದ ಬಾಕ್ಸಿನಲ್ಲಿತು. ಟಫ್ ಮೌತಿನ ಕತ್ತರಿ, ಇಲಿ ಬಾಯಿಯಂತಹ ಕತ್ತರಿ, ಅದನ್ನು ನಾಚಿಸುವಂತೆ ಮೂಗು ಚೂಪಾದ ಇನ್ನೊಂದು ಕತ್ತರಿ. ಪ್ರಸಿದ್ಧರಿಗಷ್ಟೆ ಮುಖ ತೋರಿಸುವೆ ಎಂದು ನೌಟಂಕಿ ಮಾಡುವ ಹೂಬಳ್ಳಿ ಕೆತ್ತನೆಯ ಬೆಳ್ಳಿ ಅಂಚಿನ ಕೈಗನ್ನಡಿ ಬಿಗಿ ಬಂದುಬಸ್ತಿನಲ್ಲಿ ಭದ್ರವಾಗಿತ್ತು.

ಅಮಿತಾಬ್ ಬಚ್ಚನ್ ನಗುತ್ತಾ ಕೈ ಮುಂದೆ ಚಾಚುತ್ತಿರುವ ಆರ್ಯುವೇದ ಎಣ್ಣೆ ಬಾಟಲಿ, ಕತ್ತು ರಟ್ಟೆಗಳ ಮಾಲೀಶಿಗಷ್ಟೇ ಬಳಸುವ ತೈಲಗಳು; ತೈಲದೊಂದಿಗೆ ಗೋಚರವಿದ್ದ ಜಾಯಿಕಾಯಿ ಬೇರುಗಳು, ಅಂಟುವಾಳದ ಬೀಜ, ಯಾವುದೋ ಮರದ ತೊಗಲುಗಳಿದ್ದವು. ಶೇವಿಂಗ್ ಸೋಪು, ಕ್ರೀಮು, ಪ್ಯಾಕೆಟ್ಟು ಒಡೆಯದ ಟಿಶ್ಶು ಪೇಪರು, ಇಂರ್ಪೋಟೆಡ್ ಕ್ವಾಲಿಟಿ ಖಚಿತ ಬ್ಲೇಡುಗಳು ಸುವಾಸನೆಯಿಂದ ಕೂಡಿದ್ದವು. ಬೆಂಕಿಪೊಟ್ಟಣದಂತಹ ಕಿರಿದಾದ ಶೀಶೆಗಳಲ್ಲಿ ಆಫ್ಟರ್ ಶೇವ್ ಲೋಶನ್, ಚರ್ಮಕ್ಕೆ ತಂಪೆನಿಸುವ ದ್ರವ್ಯಗಳು ಇನ್ನೂ ಅನೇಕ ಲೋಕಗಳು ಒಟ್ಟಾಗಿ ಕಪ್ಪು ಬ್ಯಾಗಿನಲ್ಲಿ ಏಕತೆಯಿಂದ ಮೇಳೈಸಿದ್ದವು.

ಉಷ್ಣನ ಕಿಸೆಯೊಳಗಿದ್ದ ಮೊಬೈಲು ಆಗಿನಿಂದ ಭಜನೆ ಮಾಡುತ್ತಿತ್ತು. ದೇವದಾಸನ ಕಣ್ಣಿಗೆ ಕಪ್ಪು ಬ್ಯಾಗು ದಾಹ ತೀರಿಸುವ ಬೆಳದಿಂಗಳಂತೆ ಕಾಣುವಾಗ ಸರಕ್ಕನೆ ಚಲಿಸಿ ಬ್ಯಾಗನ್ನು ಅತ್ತಿಂದತ್ತ ಎಳೆದಾಡಿದ. ಕೇವಲ ಹುಚ್ಚನಿಗೆ ಆ ಬ್ಯಾಗಿನಲ್ಲಿ ಅಂಥದ್ದೇನು ಸಿಗುವುದು ಎಂದು ಉಷ್ಣ ಕಿಸೆಯೊಳಗಿದ್ದ ಮೊಬೈಲು ತೆಗೆದು ಸಮಯ ನೋಡಿದ. ಬುಧವಾರದ ಮಧ್ಯರಾತ್ರಿ ಒಂದು ಗಂಟೆಯ ಹನ್ನೆರೆಡು ನಿಮಿಷ ಕಂಡಿತು. ತನ್ನ ಕೈಲಿದ್ದಾಗಲೆ ಮತ್ತೆ ಮೊಬೈಲು ಭಜನೆ ಮಾಡಿದ್ದು ನೋಡಿ, ಇಟ್ಟ ಅಲಾರಮ್ಮನ್ನು ತೆಗೆದ. ದೇವದಾಸ ಬ್ಯಾಗನ್ನು ಕರಾವಳಿ ಜನರು ಮೀನು ಪರೀಕ್ಷಿಸುವಂತೆ ಮುಟ್ಟಿ ನೋಡುತ್ತಾ ಅದನ್ನು ಮಗುವಂತೆ ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಇನ್ನೇನು ಒಳಗಿದ್ದ ಮೂಕ ಲೋಕ ಎಲ್ಲಿ ಹೊರಗೆಳೆಯುತ್ತಾನೋ ಎಂದು “ಏಯ್ ಇರೋ ಇರು, ಏನ್ ಬೇಕೋ ನಿಂಗೆ” ಕೇಳಿದ. ದೇವದಾಸನ ಕುತೂಹಲ ಎದುಸಿರಾಗಿ ಮಾರ್ಪಟ್ಟಿತ್ತು. ಏನೇನೋ ಗುನುಗಿದ. ಕೈ ಸನ್ನೆ ಮಾಡಿದ. ಧಾವಂತದಲ್ಲಿ ಉಷ್ಣನ ಕೈ ಎಳೆದಾಡಿದ. ಪೈಜಾಮದಲ್ಲಿ ಮೂಡಿದ್ದ ರಕ್ತದ ಕಲೆ ಕಂಡು ಹೀಗೆನಾದರೂ ಮಾಡುತ್ತಿದ್ದಾನ ಎಂದು ಉಷ್ಣನಿಗೆ ಎನ್ನಿಸಿತು. “ಚೇ ಚೇ ಇಲ್ಲ, ಅನುಮಾನ ಮೂಡಿದ್ದು ನನಗೆ ಅವನಿಗಾದರೂ ಪ್ರಜ್ಞೆ ಎಲ್ಲಿದೆ” ನೆನಪಿಸಿಕೊಂಡು ನಕ್ಕು ಬ್ಯಾಗನೆತ್ತಿಕೊಂಡು ಹೊರಡಲು ಅಣಿಯಾದ. ದೇವದಾಸ ಗಾಬರಿಯಿಂದ ಜೋರಾಗಿ “ಏಯ್…” ಎಂದು ಕಿರುಚಿದ.

ತಿರುಗಿ ನಗುತ್ತಾ “ತಕೋ ಕೈ ಇಕೋ ಕೈ ಮುಕ್ಕೋ ಕೈ” ಎಂದು ತಮಾಷೆಯಿಂದ ಅವನಿಂದ ತನಗೊಂದು ನಮಸ್ಕಾರ ಕೃತಕವಾಗಿ ಮಾಡಿಸಿಕೊಂಡು “ಬರ್ತಿನೋ” ಎಂದು ಹೇಳಿ ಹೊರಟ. ದೇವದಾಸನ ರಂಪಾಟ ಮಿತಿ ಮೀರಿತು. ಹಾದಿ ಬದಿಯಲ್ಲಿದ್ದ ಕಲ್ಲೆತ್ತಿಕೊಂಡು ಉಷ್ಣನ ಕಡೆ ಬೀಸಿದ. ಕಲ್ಲು ಗುರಿ ತಪ್ಪಿ ಚರಂಡಿಯಲ್ಲಿ ಬಿದ್ದಂತೆ ಬುಳಕ್ ಎಂಬ ಸದ್ದು ಮೊಳಗಿತು. ಉಷ್ಣ ಈಗ ಹೌಹಾರಿದ. “ಇದೆಲ್ಲಿಂದ ಬಂತು ಫಜೀತಿ ನಂಗೆ, ಗುರಿ ತಪ್ತು ಸರಿ, ಇಲ್ಲ ಅಂದಿದ್ರೆ ಬುರುಡೆ ಒಡೆದಿರೋನು ಬೋಳಿಮಗ” ಎಂದು ತುಸು ಹೆಚ್ಚೆ ಕಸಿವಿಸಿಗೊಂಡ.

“ದೊಡ್ಡೋರು ಅಷ್ಟಿಲ್ಲದೇ ಹೇಳ್ತಾರ, ಹುಚ್ಚರ ಸಹವಾಸ ಊರ ಗಣಪತಿ ಉಪವಾಸ ಅಂತ, ಲೌಡಿ ಮಗ್ನೆ ನಂಗೆ ಕಲ್ಲ್ ಬೀರ್ತಿಯ” ಎಂದು ಅಪರಾತ್ರಿ ಉಷ್ಣ ರೊಚ್ಚಿಗೆದ್ದ. ದೇವದಾಸ ಕಸದ ತೊಟ್ಟಿಯಿಂದ ತೆಗೆದ ಅವಶೇಷಗಳಲ್ಲಿ ಮಣ್ಣು ಕಲ್ಲು ನೋಡದೆ ಕೈಗೆ ಸಿಕ್ಕಿದ್ದನೆಲ್ಲಾ ತೂರುತ್ತಿದ್ದ. ಬೀದಿ ದೀಪದಲ್ಲಿ ಬೆಳಗುತ್ತಿದ್ದ ರಸ್ತೆ ಇವರಿಬ್ಬರ ಗಲಭೆ ಕಂಡು ನಾಳೆ ಬೆಳಿಗ್ಗೆ ತನ್ನಲ್ಲಿ ಉಳಿಯಬಹುದಾದ ಕುರುಹುಗಳನ್ನು ಎಣಿಸುತ್ತಿತ್ತು. ಅಂತಹ ಕುರುಹುಗಳಲ್ಲಿ ಬಾಳೆದಿಂಡು, ಚಪ್ಪಟ್ಟೆಯಾದ ಟೂತ್ ಪೇಸ್ಟು, ಹಳೆಯ ಚಪ್ಪಲಿ, ಅಡಿಕೆ ಹಾಳೆಯ ಊಟದ ತಟ್ಟೆಗಳು, ಹೆಂಡದ ಬಾಟಲಿಗಳು, ಹಳಸಿದ ತರಕಾರಿ ಪಲ್ಲೆಗಳು ಸೇರಿ ಇನ್ನು ಅನೇಕ ವ್ಯಾಜ್ಯಗಳು ಬೆಳಕಿಗೆ ಬಂದಿದ್ದವು.

ಉಷ್ಣ ದೇವದಾಸನನ್ನು ಈ ಹಿಂದೆ ಎಂದು ಹೀಗೆಲ್ಲಾ ವರ್ತಿಸಿದನ್ನು ಕಂಡಿಲ್ಲ. ಹುಡುಗಿಯರು ಕಾಲೇಜಿನಿಂದ ಬರುವ ವೇಳೆಗೆ ಪಡ್ಡೆ ಹುಡುಗರು ದೇವದಾಸನ ಬೆನ್ನಿಗೆ ಸಾವಿರ ಪಟಾಕಿಯ ಸರಮಾಲೆ ಹಚ್ಚಿ ಓಡಿಸುತ್ತಿದ್ದರು. ಪಟಾಕಿಯ ಸದ್ದಿಗೆ ಕಕ್ಕಾಬಿಕ್ಕಿಯಾಗಿ ಈತ ಎಲ್ಲೆಂದರಲ್ಲಿ ಅರಚುತ್ತಾ ಓಡುವಾಗ ಹುಡುಗಿಯರು ಸಹ ಬೆಚ್ಚಿ ಕೂಗುತ್ತಿದ್ದರು. ಕಿಡಿ ತಾಗಿಸಿದ ಕಿಡಿಗೇಡಿಗಳಲ್ಲಿ ನೀಚ ನಗೆ ತುಳುಕುತ್ತಿತ್ತು. ಬೆನ್ನಿಗೆ ಬೆಂಕಿ ಕಿಡಿಗಳು ಹತ್ತಿ ದೇವದಾಸನ ಬೆನ್ನು ಅಲ್ಲಲ್ಲಿ ಹರಿದು ಬೆಂದುಹೋಗಿತ್ತು. ಬೋರಲಾಗಿ ಮಲಗಿ ಅಳುತ್ತಿದ್ದವನನ್ನು ಕಂಡು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.

ರಕ್ತ ಒಸರುತ್ತಿದ್ದ ಬೆನ್ನಿಗೆ ಟಿಂಕ್ಚರ್, ಬರ್ನಾಲ್ ಕ್ರೀಮು ಹಚ್ಚಲು ನರ್ಸು, ಎಮರ್ಜೆನ್ಸಿಗೆಂದು ಬಂದಿದ್ದ ಡಾಕ್ಟರು ಅಲ್ಲದೇ ಆಸ್ಪತ್ರೆಯ ಸಿಬ್ಬಂಧಿಗಳೆಲ್ಲಾ ರುದ್ರ ಸಾಹಸ ಮಾಡಿದರು. ತಾಳ್ಮೆ ಕಳಕೊಂಡ ಡಾಕ್ಟರು “ಐ ಕಾಂಟ್ ಹ್ಯಾಂಡಲ್ ದಿಸ್ ಮದರ್ ಫಕ್ಕರ್” ಎಂದರು. ದೇವದಾಸನ ಜೊಲ್ಲು, ಕೊಳಕು ಕೈಕಾಲು ನೋಡಿ ನರ್ಸುಗಳು ಅಸಹ್ಯ ಎಂಬಂತೆ ಮುಖ ಸಿಂಡರಿಸಿದರು. ಸಾರ್ವಜನಿಕರಲ್ಲೊಬ್ಬ “ಇಂಥ ಜೀವಗಳನ್ನು ಹಿಂಸೆ ಮಾಡ್ತಾರಲ್ಲ ಅವ್ರು ನಿಜವಾಗ್ಲೂ ತಾಯ್ಗಂಡರು, ನನ್ನ ಕೈಲಿ ಇವ್ನ ರೋದ್ನೆ ನೋಡಕಾಗ್ತಿಲ್ಲ” ಎಂದು ಕಳ್ಳನಂತೆ ಸರಪಳಿಯಿಂದ ಕಳಚಿಕೊಂಡ.

ವಿಚಿತ್ರವಾಗಿ ಕೂಗುತ್ತಾ ಸಂಕಟ ಪಡುತ್ತಿದ್ದ ದೇವದಾಸನ ಮೇಲೆ ಐದಾರು ಮಂದಿ ಸವಾರಿ ಮಾಡಿದ್ದವರೆಲ್ಲಾ ಎದ್ದರು. ಬೈದುಕೊಳ್ಳುತ್ತಲೆ ಡಾಕ್ಟರು ಹೊರಟರು. ಒಂದೇ ಸೆಕೆಂಡಿನಲ್ಲಿ ತನ್ನ ಮೇಲೆ ಇದ್ದ ಭಾರ ರಪ್ಪನೆ ಮಾಯಾವಾದಂತೆ ಅನ್ನಿಸಿ ದಿಕ್ಕೆಟ್ಟು ನೆರೆದಿದ್ದವರಲ್ಲಿ ಒಬ್ಬನ ತೋಳನ್ನು ದೇವದಾಸ ಕಚ್ಚಿದ. ನರ್ಸುಗಳು ಚಿಲ್ಲನೆ ಚೀರಿದರು. ಅವರ ಕೈಯಲ್ಲಿದ್ದ ತಟ್ಟೆಯಲ್ಲಿ ಕತ್ತರಿ, ಟಿಂಕ್ಚರಿನ ಬಾಟಲಿ, ಅನಸ್ತೇಶಿಯದ ಶೀಶೆ, ಹತ್ತಿ, ಸಿರಿಂಜುಗಳು ಮೇಲಕ್ಕೆ ಹಾರಿದವು. ಹಲ್ಲಿನಿಂದ ಕಚ್ಚಿಸಿಕೊಂಡವನು ದಿಕ್ಕಾಪಾಲಾಗಿ ಕಾಲು ಕಿತ್ತಿದ್ದ. ಕೆಲವರು ದೇವದಾಸನನ್ನು ಹೊಡೆಯಲು ಮುಂದಾದರು. ಶರ್ಟಿಲ್ಲದೆ ಹಸಿಗಾಯಗಳಿಂದ ದೇವದಾಸ ಎಲ್ಲರನ್ನು ನೂಕಿಕೊಂಡು ಮೂಕರಂತೆ ಕೂಗುತ್ತಾ ಆಸ್ಪತ್ರೆಯಿಂದ ದೌಡಾಯಿಸಿದ. ಆತಂಕದಲ್ಲಿ ದೌಡುತ್ತಿದ್ದ ದೇವದಾಸನ ರಕ್ತ ಸ್ರವಿಸುತ್ತಿದ್ದ ಬೆನ್ನು ಡೆನ್ಮಾರ್ಕ್ ದೇಶದ ಬಾವುಟದಂತೆ ಕಾಣುತ್ತಿತ್ತು.

ಅದ್ಯಾವ ಊರಿನಲ್ಲಿ ತನ್ನೆಲ್ಲಾ ಗಾಯ ಒಣಗಿಸಿಕೊಂಡನೋ ಗೊತ್ತಿಲ್ಲ; ಸ್ವಲ್ಪ ದಿನದ ನಂತರ ಮತ್ತದೇ ಬೀದಿ, ಪಾನ್ ಶಾಪು, ಹಣ್ಣಿನಂಗಡಿ, ಮದುವೆ ಛತ್ರ, ಕಾಮಗಾರಿಗೊಳ್ಳದ ಸರ್ಕಾರಿ ಕಚೇರಿಗಳ ಬಳಿ ದೇವದಾಸ ಕಿಂಪುರುಷನಂತೆ ಕಾಣಿಸಿಕೊಂಡ. ಐದಾರು ಬಗೆಬಗೆಯ ಅಂಗಿಗಳನ್ನು ಒಂದರ ಮೇಲೊಂದು ತೊಟ್ಟು, ಕೈಗೆ ಪ್ಲಾಸ್ಟಿಕ್ ಚೀಲದ ಹೊರೆ ಹೊತ್ತು ಈಡೀ ಊರನ್ನು ಅಲೆಯುತ್ತಿದ್ದವನ ಕುರಿತು ಈ ಮೊದಲು “ನಿನ್ನದು ಯಾವ ಊರು, ಮದುವೆ ಆಗಿದೆಯೇ, ರಾತ್ರಿಯ ಚಳಿಗೆ ಏನು ಉತ್ತರಿಸುತ್ತೀಯ, ನಿನ್ನ ಪ್ರಕಾರ ದೇವರೆಂದರೇ ಯಾರು, ನೀನು ಮಾಂಸಹಾರಿಯೋ ಅಥವಾ ಮನುಷ್ಯಹಾರಿಯೋ, ನಿನ್ನ ಕಾಯಿಲೆಗೆ ಆಯಸ್ಸು ಇನ್ನೆಷ್ಟು ದಿನ” ಎಂಬೆಲ್ಲ ಮುಲಾಜಿನ ಪ್ರಶ್ನೆಗಳು ಇವನನ್ನು ಕೇಳಲಾರದೆ ಅಂಚೆವಾಲ ಸಹ ನಿರ್ಲಕ್ಷಿಸಿದ ಕೆಂಪು ಡಬ್ಬಿಯ ಹಾಗೆ ಉಳಿದುಬಿಟ್ಟವವನ್ನು ದಿನ ಕಳೆದಂತೆ ಹೆಂಗಸರು ರಾತ್ರಿ ಮನೆಯಲ್ಲುಳಿದ ತಂಗಳು, ವೃದ್ಧರು ತಮ್ಮ ಪಿಂಚಣಿ ಬಂದ ದಿನ ಅವನಿಗೊಂದು ಎಳನೀರು, ಬೇಕರಿ ಮಾಲೀಕರು ಪುಡಿಪುಡಿಯಾದ ಕೇಕು ಪಪ್ಸು ಕೊಡಲು ಶುರುಮಾಡಿದರು. ‘ತಿರುಗುಬಾಣ’ ಎಂಬ ಸಮಾಜಸೇವೆಯ ಕಾರ್ಯಕರ್ತರು ದೇವದಾಸನಿಗೆ ಮಲಗಲು ಚಾಪೆ-ದಿಂಬು-ರಗ್ಗು ಕೊಟ್ಟು ಫೋಟೋಗಾಗಿ ಹಲ್ಕಿರಿದರು.

ಪಟಾಕಿಯ ಪ್ರಸಂಗ ಮುಗಿದ ಮೇಲೆ ಸಮಾಜಸಂಘ ನಡೆಸುತ್ತಿದ್ದವರು, ಮಾಜಿ ಪುಢಾರಿಗಳು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡವರು ಮತ್ತು ಕೆಲ ವಿಚಿತ್ರ ಸೂಕ್ಷ್ಮದ ಜನರು ಪೆಂಡಾಲು ಹಾಕಿ ಜನರನ್ನು ಕರೆಸಿ ಕಳಕಳಿಯ ಕೈಗೆ ಮೈಕು ಕೊಟ್ಟರು. “ಹುಚ್ಚನನ್ನು ಹುಚ್ಚ ಎನ್ನದಿರಿ, ಅವನಿಗೂ ನಮ್ಮ ನಡುವೆ ಬಾಳಲು ಬಿಡಿ, ನಾವೆಲ್ಲರೂ ನಾಳೆಯೇ ಅವನಿಗೆ ಇಲಾಜು ಮಾಡಿಸೋಣ, ಈಗಿನಿಂದಲೇ ಅವನನ್ನು ಸಮಾಜದೊಳಗೊಬ್ಬ ಎಂದು ಪರಿಗಣಿಸಬೇಕು ಇದು ನಿಮ್ಮೆಲ್ಲರ ಪರವಾಗಿ ಜಾಮಿನಿ ಮೆಡಿಕಲ್ ಶಾಪಿನ ಮಾಲೀಕನಾದ ನನ್ನ ಪರವಾಗಿ” ಎಂದು ಪೆಂಡಾಲು ನಿಲ್ಲಿಸಲು ನೆರವಾಗಿದ್ದ ಗೂಟಗಳು ಅಲ್ಲಾಡುವಂತೆ ಕಳಕಳಿ ಕೂಗಿದ. ವೇದಿಕೆಯ ಮೇಲೆ ಕೆಂಪು ಕುರ್ಚಿಯಲ್ಲಿ ಮುದಿ ಅಳಿಲಿನಂತೆ ಕೂತಿದ್ದ ದೇವದಾಸ ಚಪ್ಪಾಳೆಯ ಗುಡುಗಿಗೆ ಹೆದರಿದ. ತಕ್ಷಣ ಕಳಕಳಿ ಎಲ್ಲರ ಸಮ್ಮುಖದಲ್ಲಿ ಕೆಲ ಮಕ್ಕಳು, ವೃದ್ಧರಿಗೆ ವಿಟಮಿನ್ ಹಾಗೂ ಜಿಂಕ್ ಗುಳಿಗೆಗಳನ್ನು ವಿತರಿಸಿದ.
“ದುಡ್ಡು ಕೊಟ್ಟು ಪೇಪರ್ ಓದೋ ಯೋಗ್ಯತೆಯಿಲ್ಲ ಇವ್ನಿಗೆ, ಅದ್ಹೇಗೆ ತನ್ನ ಶಾಪಿನ ಮಾತ್ರೆಗಳನ್ನ ಕೊಡ್ತಿದ್ದಾನೆ ಜುಗ್ಗ, ಮಾತ್ರೆ ತಗೊಂಡರನ್ನ ದೇವ್ರೆ ಕಾಪಾಡ್ಬೇಕು” ಎಂದು ಉಷ್ಣ ಒಳಗೊಳಗೆ ನಕ್ಕ.
ಇದೇ ಸರಿಯಾದ ಸಮಯ ಎಂದೆನಿಸಿ ಕಳಕಳಿ ಕೈಯ್ಯಾರೆ ಒಂದು ಜಂತುಹುಳುವಿನ ಮಾತ್ರೆಯನ್ನು ದೇವದಾಸನಿಗೆ ನುಂಗಿಸಿದ. ಜನ ಮತ್ತೆ ಚಪ್ಪಾಳೆ ತಟ್ಟಿದರು. ಕ್ಯಾಮೆರದ ಲೆನ್ಸುಗಳು ಚಕ್ಕ್ ಚಕ್ಕೆಂದು ಬೆಳಕನ್ನು ಹಿಡಿದವು.

ಹೆಸರಿರಲಿ ಜಗತ್ತಿನ ಪರಿವೆಯಿಲ್ಲದ ಉಸಿರಾಡುತ್ತಿದ್ದ ಅಜಮಾಸು ನಲವತ್ತೈದು ವರ್ಷದ ಕಾಯಕ್ಕೆ `ದೇವದಾಸ’ ಎಂಬ ಹೆಸರನ್ನು ಕಳಕಳಿ ಸೂಚಿಸಿದ. ಜನ ರೋಷ ಬಂದಂತೆ “ದೇವದಾಸ ದೇವದಾಸ” ಎಂದು ಕರೆಯಲು ಶುರುಮಾಡಿದರು. ಕಳಕಳಿ ರೋಮಾಂಚಿತನಾಗಿ ಬಲ ಗೈ ಮೇಲೆತ್ತಿ “ಜೈ ದೇವದಾಸ” “ಬೋಲೋ ಜೈ ದೇವದಾಸ” ಎಂದು ಕೂತಿದ್ದವನನ್ನು ಎಬ್ಬಿಸಿ ಎದೆಗಪ್ಪಿಕೊಂಡ. ಬಿಟ್ಟರೇ ಓಡಿಹೋಗುವೇ ಎಂಬ ಮುಖದಲ್ಲಿ ದೇವದಾಸ ಮಂದಸ್ಮಿತನಾದ.

ಉಷ್ಣ ತನ್ನ ಹುಡುಗರ ಸಹಾಯದಿಂದ ನರ್ಸರಿ ಮಗುವನ್ನು ಗದರಿಸಿ ಅಥವಾ ಮುದ್ದಿಸುವಂತೆ ದೇವದಾಸನ ಕಟಿಂಗು ಶೇವಿಂಗು ಮಾಡಿದ. ವ್ಯತ್ಯಾಸ ಏನೆಂದರೆ ಈ ಮಗು ಸುಮ್ಮನೆ ಕೂತಿತ್ತು; ನಗದೇ, ಅಳದೇ, ತನಗೆ ಹೀಗೆಯೇ ಕಟಿಂಗು ಮಾಡಿಸಿರೆಂದು ಯಾರಿಗೂ ದುಂಬಾಲು ಬೀಳದೆ ಬುಡಸತ್ತ ಮರ ಬಡಗಿಯೆದುರು ಕೂತಂತೆ ಸುಮ್ಮನಿತ್ತು. ಉಷ್ಣ ತನ್ನ ಪಳಗಿದ ಕೈಗಳಿಂದ ನಾಜೂಕತನ ತೋರಿಸಿದ. ನೆರೆದಿದ್ದ ಪತ್ರಕರ್ತರು ಫೋಟೋ ಕ್ಲಿಕ್ಕಿಸಿಕೊಂಡರು. ಮರುದಿನ ಪೇಪರಿನಲ್ಲಿ ಕಳಕಳಿಯ ಮತ್ತು ಉಷ್ಣನ ಫೋಟೋ “ಹುಚ್ಚನಿಗೂ ಮರುಜೀವನ ಕಲ್ಪಿಸಿದ ಮಾಂತ್ರಿಕರು” ಎಂದು ಶೀರ್ಷಿಕೆಯಡಿ ಅಚ್ಚಾದರೆ “ಸ್ನೇಹಕ್ಕೆ ಮಾದರಿ ಉಷ್ಣ ಮತ್ತು ಕಳಕಳಿ” ಎಂದು ಇನ್ನೊಂದು ಕ್ರೈಂ ಪತ್ರಿಕೆ ಬರೆದಿತ್ತು.

ಜನರಿಗೆ ಅಕ್ಕರೆಯ ತುಣುಕೊಂದು ಹುಚ್ಚನ ಮೇಲೆ ಬಂದತಾಯಿತು. ದೇವದಾಸ ಎಲ್ಲೆ ಬಿದ್ದಿರಲಿ ಕಾಲನಿಯ ಜನರಿಂದ, ಟ್ಯೂಷನ್ನಿಂದ ತಪ್ಪಿಸಿಕೊಂಡು ಕದ್ದುಮುಚ್ಚಿ ಸಿಗರೇಟು ಸೇದುತ್ತಿದ್ದ ಎಳೆ ಹುಡುಗರಿಂದ ಹಾಯ್, ಗುಡ್ ಮಾರ್ನಿಂಗ್ ಎಂಬ ಖಾಲಿಪೀಲಿ ಸನ್ನೆಗಳು ಬರತೊಡಗಿದವು. ಯಾವಾಗಲಾದರೊಮ್ಮೆ ಅವನ ಮೂಡ್ ಚನಾಗಿದ್ದರೆ ಒಂದಾದರೂ ಕಿರುನಗೆ ತಿರುಗಿ ಅವರಿಗೂ ಸಿಗುತ್ತಿತ್ತು. ದೈವ ಬಗೆದಿದ್ದರೆ ಫ್ಲೆಕ್ಸು ಬ್ಯಾನರಿನ ಮೇಲೂ ಸಹ ದೇವದಾಸ ಮೂಡುತ್ತಿದ್ದ. ವಿಧಿ ಅವಕಾಶ ಕೊಡಲಿಲ್ಲ. ಅವನ ಇಲಾಜಿಗೆ ಯಾರು ಮುಂದಾಗಲಿಲ್ಲ.

ಉಷ್ಣ ತನ್ನ ಸಲೂನಿನ ಅಂಗಡಿಗೆ ಆಧುನಿಕತೆಯ ಸ್ಪರ್ಶ ಮಾಡಿಸಿದ್ದ. ಸುಮಾರು ಹುಡುಗರು ವೇತನವಿಲ್ಲದೇ ಕೆಲಸಕ್ಕಿದ್ದರು. ಇನ್ನಿಬ್ಬರು ತಿಂಗಳಿಗೆ ಹದಿನೈದು ಸಾವಿರ, ಊಟ ವಸತಿ ಎಂಬ ಒಡಂಬಡಿಕೆಯಡಿ ಉಷ್ಣನ ಮನೆಯ ಮೇಲೆ ವಾಸಕ್ಕಿದ್ದರು. ತನ್ನ ಹೆಂಡತಿಯ ಹೆಸರಿನ ಮೆಲೆ ಸೈಟು, ಮನೆಗಳನ್ನು ಖರೀದಿಸಿದರೆ ಅಸೂಯೆ ತಾಕದೆಂದು ಯೋಚಿಸುತ್ತಿದ್ದ. ಸಾಕಷ್ಟು ಆಸ್ತಿ ಮಾಡಿಕೊಂಡಿದ್ದರು ಬೈಕು, ಕಾರು ತನ್ನ ಮನೆಯಲ್ಲಿಟ್ಟುಕೊಳ್ಳದೇ ಯಾವುದೇ ಓಡಾಟವಿದ್ದರೂ ರೈಲು ಬಸ್ಸಿನಲೇ ತಿರುಗಿ ಜನರ ಕಣ್ಣಿಗೆ ಸರಳ ಸಜ್ಜನನಂತೆ ಕಾಣುತ್ತಿದ್ದ. ಸ್ಥಳೀಯ ಕೆಲಸಗಾರರಾದರೇ ರೋಪು ಹೆಚ್ಚು, ಹೇಳದೆ ಕೇಳದೆ ರಜೆ ಕೇಳುತ್ತರೆ ಇನ್ನಿತರೆ ತಕರಾರು ಮಾಡುತ್ತಾರೆಂದು ಅಸ್ಸಾಂನಿಂದ ಹುಡುಗರನ್ನು ಕರೆಸಿಕೊಂಡಿದ್ದ. ಸಾವಿರ ಚದರಡಿಯಿದ್ದ ಅಂಗಡಿಯಲ್ಲಿ ನಾಲ್ಕು ಐಶಾರಾಮಿ ಕುರ್ಚಿಗಳಿದ್ದವು. ಯಾವಾಗಲೂ ತುಂಬಿ ತುಳುಕುವ ಜನ. ಪ್ರತಿ ಮಂಗಳವಾರ ಮಾತ್ರ ರಜೆ ಅಂಗಡಿಗೆ ಇರುತ್ತಿತ್ತೆ ಹೊರತು ಹುಡುಗರು ಉಷ್ಣನ ಒತ್ತಾಯದ ಮೇರೆಗೆ ಅವನ ಮನೆಯ ಹೆಚ್ಚುವರಿ ಕೆಲಸಗಳನ್ನು ನೋಡಬೇಕಿತ್ತು.

ಕಾಲನಿಯ ಜನಕ್ಕೆ ಮಾತ್ರವಲ್ಲದೇ ಉಷ್ಣ ಅನೇಕರೊಡನೆ ಸಂಪರ್ಕ ಸಾಧಿಸಿದ್ದ. ಬುಲಾವ್ ಬಂದೊಡನೆ ಮದ್ರಾಸಿಗೆ ರಾತ್ರೋರಾತ್ರಿ ಹೊರಟುಬಿಡುತ್ತಿದ್ದ; ನಟ ವಿಜಯಕಾಂತನಿಗೆ ಕಟಿಂಗ್, ಹೇರ್ ಡೈ ಮಾಡುವವನು ಈತನೇ ಎಂಬುದು ದೊಡ್ಡ ಸುದ್ದಿ. ಗುತ್ತಿಗೆಯ ಮೇರೆಗೆ ವೃದ್ಧಾಶ್ರಮಗಳಿಗೆ, ರಿಮ್ಯಾಂಡು ಹೋಮಿನ ಮಕ್ಕಳಿಗೆ, ಎಲ್ಲಾ ವಯೋಮಾನದ ಅಂಗವಿಕಲಕರಿಗೆ ತನ್ನೆಲ್ಲಾ ಸೇವೆಗಳನ್ನು ನಿಗದಿಪಡಿಸಿದ್ದ. ಕೆಲ ವರ್ಷಗಳ ಹಿಂದೆ ನಗರದ ಜೈಲಿನಲ್ಲಿರುವ ಕೈದಿಗಳಿಗೂ ಕಟಿಂಗು ಮಾಡುವ ಗುತ್ತಿಗೆ ಇದ್ದಿತ್ತಾದರೂ “ಸರ್ಕಾರದ ಟೆಂಡರುಗಳು ಮಳೆಯ ಹಾಗೆ, ಇತ್ಲಕಡೆ ಲಾಭನೂ ಇಲ್ಲ, ಅತ್ಲಕಡೆ ಲುಕ್ಸಾನು ಇಲ್ಲ, ಗಡುವು ಮುಗಿದಿದ್ರೂ ಪುಕ್ಸಟ್ಟೆ ಚಾಕರಿ ಮಾಡ್ಬೇಕು” ಅಂತೇಳಿ ಅವುಗಳ ಸಹವಾಸಕ್ಕೆ ಹೋಗದಾದ. ಜೈಲಿನಲ್ಲಿ ಕಸುಬು ಗೊತ್ತಿದ್ದವರೇ ಕೈದಿಗಳಾದಾಗ ಜೈಲರುಗಳಿಗೆ ಉಷ್ಣನನ್ನು ಪದೇಪದೇ ಸಂಪರ್ಕಿಸುವ ತಲೆನೋವು ತಪ್ಪಿತ್ತು. “ಕೈದಿಗಳು ಹೇಗಿದ್ದರೇನು” ಎಂಬ ಉಡಾಫೆಯಲ್ಲಿ ಪರಸ್ಪರ ಒಬ್ಬರನೊಬ್ಬರು ಕತ್ತರಿ, ಬ್ಲೇಡು ತಗೊಂಡು ಈ ಸೇವೆ ತೀರಿಸಿಕೊಳ್ಳಲಾರರೇನು ಎಂಬ ನಿರ್ಲಕ್ಷ್ಯವೂ ಇರಬಹುದು.

ತುಸು ಹೆಚ್ಚೇ ನಂಬಿಕೆಯಿಟ್ಟು ನಾನಾ ಭಾಗಗಳಿಂದ ಕೆಲವು ಮಂದಿ ಉಷ್ಣನನ್ನು ತಮ್ಮ ಮನೆಗೆ ಕರೆಸಿಕೊಂಡು ಅಷ್ಟೇನು ಬೆಳಕಿಲ್ಲದ ಕೋಣೆಯೊಳಗೆ ಕೂಡಿಹಾಕಿದ ವಿಧವೆಯರನ್ನು, ಮಾನಸಿಕ ಅಸ್ವಸ್ಥರನ್ನು ತೋರಿಸಿ ಬಾಗಿಲನ್ನು ಹಿಂದಿನಿಂದ ಹಾಕಿಕೊಳ್ಳುತ್ತಿದರು; ಮಾನಸಿಕ ಅಸ್ವಸ್ಥರೊಡನೆ ಮಾತಾಡುವಾಗ ಉಷ್ಣನ ನಡಾವಳಿ ಬೇರೆಯದೆ ಆಗುತ್ತಿತ್ತು. ಎಂದಿಗಿಂತ ಮುದ್ದುಗರೆದು ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ನಿಯಂತ್ರಣಕ್ಕೆ ಬಾರದ ಅವರ ಬಾಹ್ಯ ವರ್ತನೆಗೆ ಉಷ್ಣನಿಗೆ ಸಾಕಷ್ಟು ಹೊಡೆತಗಳು ಬೀಳುತ್ತಿದ್ದವು. ಮನೆಯ ಮಂದಿಯೆಲ್ಲಾ ಹಿಡಿದುಕೊಂಡರು ಕೆಲವರು ಇವನ ಮೂತಿಗೆ ಕೈಗೆ ಸಿಕ್ಕ ವಸ್ತುವಿನಿಂದ ಚಚ್ಚುತ್ತಿದರು. ಒಮ್ಮೊಮ್ಮೆ ಚೀತ್ಕಾರ, ಆರ್ತನಾದಗಳು ಅಂಧಕಾರದಲ್ಲಿ ಮೊಳಗುತ್ತಿದ್ದ ಕೋಣೆಯನ್ನು ಬೆಚ್ಚಗಿಡುತ್ತಿತ್ತು. ಇಷ್ಟೆಲ್ಲಾ ಆದರೂ ಕೊಂಚ ಹೆಚ್ಚಿಗೆ ಹಣ ಸಿಗುತ್ತೆ ಎಂಬ ಆಸೆಯಿಂದ ಉಷ್ಣ ಸಹಿಸಿಕೊಳ್ಳುತ್ತಿದ್ದ. ಇಂತದ್ದೊಂದು ಜೀವ ಇಲ್ಲಿತ್ತು ಎಂಬ ಕುರುಹುನ್ನು ಅಳಿಸಿ ಹಾಕುವವರ ಮಧ್ಯೆ ತಮ್ಮ ಪ್ರತಿಷ್ಟೆ, ಸೋಗಲಾಡಿತನಕ್ಕಾಗಿ ಒಲ್ಲದ ದೇಹಗಳನ್ನು ಲೋಕದ ಕಣ್ಣಿಗೆ ಮುಚ್ಚಿಡುವ ಇವರ ತಣ್ಣನೆಯ ಕೌರ್ಯಕ್ಕೆ ಉಷ್ಣ ಉಗ್ರರೂಪದ ಸಾಕ್ಷಿಯಾಗಿದ್ದ.

“ನಮ್ಮಿಂದ ನಿಮಗೆ ಸುಮ್ನೆ ತೊಂದ್ರೆ, ನಿಮ್ಮ ಕೈ ಕಚ್ಚಿ, ಹೇಗೆ ಪರಚಿದ್ದಾಳೆ ನೋಡಿ ನಿಮ್ಮ ಎದೆನಾ, ದಯವಿಟ್ಟು ಏನೂ ತಪ್ಪಾಗಿ ತಿಳ್ಕೋಬೇಡಿ, ನಿಮ್ಮ ಅಕ್ಕನೋ ತಂಗಿನೋ ಅನ್ಕೊಂಡು ಕ್ಷಮಿಸಿಬಿಡಿ” ಎಂದು ಮನೆಯ ಮಂದಿಯಲ್ಲೊಬ್ಬರು ಉಪಾಂತ್ಯದಲ್ಲಿ ಹೇಳುವಾಗ ಉಷ್ಣನಿಗೆ ಇದು ಮಾಮೂಲಿ ಡೈಲಾಗು ಅಂತ ಅನಿಸುತ್ತಿತ್ತು. “ಇರಲಿಬಿಡಿ ಪರವಾಗಿಲ್ಲ, ನನಗಿದು ಹೊಸದಲ್ಲ, ಸ್ವಲ್ಪ ನೆತ್ತಿಗೆ, ಕಿವಿಗಳ ಹತ್ರ ಗಾಯವಾಗಿದೆ ಅಡಿಗೆ ಅರಿಷ್ಣ ಹಚ್ಬಿಡಿ ಸರಿಹೋಗುತ್ತೆ” ಎಂದು ಉಷ್ಣ ಉತ್ತರಿಸುವಾಗ ಬಾಚಣಿಕೆಯಲ್ಲಿ ಸಿಕ್ಕ ತಲೆಯ ಹೊಟ್ಟು, ರೇಜರಿನಲ್ಲಿ ಸೋರಿದ ರಕ್ತ, ಆ ಜೀವಕ್ಕಾದ ನೋವು, ಬಂದಂತ ಪ್ರತಿಕ್ರಿಯೆ ನೆನೆಸಿ ಮರುಗುತ್ತಿದ್ದನಾದರೂ ಮುಂದಿನ ಟ್ರೈನಿಗೆ ತನ್ನ ಸೀಟು ಕಾಯುತ್ತಿದ್ದದನ್ನು ಹೇಳಿ ಹೊರಡುತ್ತಿದ್ದ. “ನಮ್ಮ ಕರ್ಮ, ಟ್ರಿಟ್ಮೆಂಟು ನಡೀತಿದೆ, ನೋಡಿದ್ರಲ್ಲ ಇವಳ ಅವತಾರನ, ಸಾಕಾಗಿಹೋಗಿದೆ ನಮ್ಗೆ, ಆಸ್ಪತ್ರೆಗೆ ಸೇರಿಸಿದ್ರೆ ಒಂದು ಮಾತು, ಜನಕ್ಕೆ ಗೊತ್ತಾಗಬಾರ್ದು ಅಂತ ಮನೆಲೀ ಇಟ್ಕೊಂಡ್ರೆ ರಂಪಾಟ, ನೆಂಟರಿಷ್ಟರು ಮನೆಗೆ ಬರೋಕೆ ಮುಖಮುಖ ನೋಡ್ತಾರೆ, ನಮ್ಮಂತ ಮನೆಗೆ ಹೆಣ್ಣು ಕೊಡಲ್ಲ, ಗಂಡು ಬರಲ್ಲ, ಒಂದು ಶುಭಕಾರ್ಯ ಇಲ್ಲ ವರ್ಷದಿಂದ” ಎಂದೆಲ್ಲಾ ಒಬ್ಬರೆ ಮಾತಾಡಿಕೊಂಡಂತೆ ಕಾಣುತ್ತಿದ್ದರು. ಉಷ್ಣ ಆ ಮನೆಯ ಕಪ್ಪು ಕೋಣೆಯನ್ನೊಮ್ಮೆ ತಿರುಗಿ ನೋಡಿ ಬೇರೊಂದು ಮನೆಯ ಬಾಗಿಲನ್ನು ತಟ್ಟಲು ಕಪ್ಪು ಬ್ಯಾಗು ಹೆಗಲಿಗೆ ಹಾಕಿಕೊಂಡು ಹೊರಡುತ್ತಿದ್ದ.

ವೃದ್ಧರು ಮನೆಯ ಮಂದಿ ತಮಗೆ ನೀಡುತ್ತಿದ್ದ ಹಿಂಸೆ, ಕಿರುಕುಳ ನೋವುಗಳನ್ನು ಉಷ್ಣನ ಬಳಿ ಹೇಳಿಕೊಂಡು ಅಳುತ್ತಿದ್ದರು. ಇನ್ನೂ ಕೆಲವರು “ಪೋಲಿಸಿಗೆ ಫೋನ್ ಮಾಡಿಕೊಡಪ್ಪ” ಎಂದು ಒತ್ತಾಯ ಮಾಡುತ್ತಿದ್ದರು. ಏನೂ ಮಾತಾಡದೇ ಅವರನ್ನು ಕೊಂಚ ನಗಿಸಿ ಕನ್ನಡಿ ಕೊಟ್ಟು “ನೋಡಿ ಹೇಗ್ ಕಾಣ್ತಿದೀರ, ಹೇರ್ ಡೈ ಮಾಡಿಬಿಟ್ರೆ ಜೂನಿಯರ್ ರಾಜ್ ಕಪೂರ್” ಎಂದು ಹೊಗಳಿ ಹೂ ಮಾಡಿಬಿಡುತ್ತಿದ್ದ.

“ವಾರಗಟ್ಟಲೆ ನನಗೆ ಅನ್ನ, ನೀರು ಹಾಕಲ್ಲ, ವಂದ ಸಹ ಹಾಸಿಗೇಲೆ ಆಗೋಗುತ್ತೆ” ಎಂದು ಒದ್ದೆಯಾದ ತನ್ನ ಚಾಪೆ, ರಗ್ಗು ಮುಟ್ಟಿ ತೋರಿಸುತ್ತಾ ಕೋಲಾರದ ಮುದುಕಿ ಪಿಸುಮಾತಿನಲ್ಲಿ “ಹೇಗಾದರೂ ಮಾಡಿ ನನ್ನ ಹೊರಗೆ ಕರೆದೊಯ್ದು, ರೈಲಿನ ಕೆಳಗೆ ಮಲಗಿಸಿಬಿಡಪ್ಪ, ಕೈ ಮುಗಿತೀನಿ, ನನ್ನ ತಲೆ ಬೋಳಿಸಬೇಡ” ಎಂದು ಅಂಗಲಾಚಿದ್ದಳು. ನೆಲ ಒರೆಸುವ ಮಸಿಯ ಬಟ್ಟೆಯಾಗಿದ್ದಳು ಮುದುಕಿ. ವರ್ಷದ ಹಿಂದೆ ಗಂಡ ತೀರಿಕೊಂಡಿದ್ದ. ಗಂಡ ಇದ್ದಾಗಲೇ ಹಾಸಿಗೆ ಹಿಡಿದಿದ್ದ ಮುದುಕಿಯ ತಲೆಯಲ್ಲಿ ಯಾವುದೋ ಬಿಳಿಯ ಹುಳಗಳು, ಕಮಟು ಕೊಬ್ಬರಿಯ ವಾಸನೆ, ಪೂರ್ತಿ ನೆರೆತ ಕೂದಲಿನ ಬುಡದಿಂದ ಕೀವು ಸ್ರಾವವಾಗಿ ರಾತ್ರಿಯೆಲ್ಲಾ ರೋಧಿಸುತ್ತಿದ್ದ
ಮುದುಕಿಗೆ ಮಲಗಿದಲ್ಲೆ ಹಣ್ಣಾದ ಕೂದಲಿಗೆ ಗುಲಾಭಿ ದ್ರವ್ಯ ಚಿಮುಕಿಸಿ ತಲೆ ಬೋಳಿಸಿದ ಉಷ್ಣ ಹಣ ತೆಗೆದುಕೊಳ್ಳದೆ ಬೇರೆಲ್ಲೂ ಹೋಗದೆ ವಾಪಾಸು ಬಂದಿದ್ದ.

ತನ್ನ ಕಣ್ಣಿನೊಳಗೆ ಮುದುಕಿ ಮಲಗಿದ್ದ ರೀತಿ ನೆನಪಿಸಿಕೊಂಡ ಉಷ್ಣನಿಗೆ ದೇವದಾಸನ ಸ್ವಭಾವ ಸ್ವಲ್ಪ ಹಗುರವೆನಿಸಿತು. ದೂರದಲ್ಲಿ ನಿಂತು ಏನೇನೋ ಬಡಬಡಿಸುತ್ತಿದ್ದ ದೇವದಾಸನನ್ನು ಹತ್ತಿರ ಕರೆದ. ಕೊಂಚ ಸಮಾಧಾನವಾದಂತೆಯೂ ತೋರಿದವನು ತನಗೆ ಕಟಿಂಗು ಮಾಡೆಂದು ಕೈ ಬಾಯಿ ಸನ್ನೆಯಲ್ಲಿ ವಿವರಿಸಿದ. ಉಷ್ಣನ ಮನಸ್ಸು ಮೊದಲೇ ಭಾರವಾದಂತೆ, ಅದೀಗ ಮೆಲ್ಲ ಇಳಿದಂತೆ ಅನ್ನಿಸಿ ಚಕ್ಕಳಬಕ್ಕಳ ಕೂರಿಸಿ ನಡುರಾತ್ರಿ ಕಟಿಂಗ್ ಮಾಡಿದ, ಹೊಸ ಬ್ಲೇಡು ಹಚ್ಚಿ ಅಗ್ಗದ ಕ್ರೀಮು ಬಳಿದು ನೀಟಾಗಿ ಶೇವಿಂಗ್ ಮಾಡಿ ಶಿಶೆಯಲ್ಲುಳಿದ ಸುಗಂಧ ದ್ರವ್ಯವನ್ನು ಮುಖಕ್ಕೆ ಕತ್ತಿಗೆ ಸವರಿದ. ಪ್ರಸಿದ್ಧರಿಗಷ್ಟೇ ಮುಖ ತೋರಿಸುತ್ತಿದ್ದ ಕೈಗನ್ನಡಿ ಕೊಟ್ಟು “ಹೇಗೆ ಕಾಣ್ತಿದ್ದಿ ನೋಡು” ಎಂದು ಕಣ್ಣು ಮಿಸುಕಿದ. ಕನ್ನಡಿ ನೋಡಿಯು ದಿವ್ಯಮೂರ್ತಿಯಂತೆ ಕೂತ ದೇವದಾಸನನ್ನು ನೋಡಿ ಕಣ್ಣಲಿ ಹನಿ ಜಿನುಗಿತು. ಆದರೆ ಆತ ತೊಟ್ಟ ಪೈಜಾಮ ಮುದುಕಿಯದೇ ಅನ್ನಿಸತೊಡಗಿತು. ರಕ್ತದ ಕಲೆಗಳು ಯಾರದು..? ಮುದುಕಿಯದೇ..!

ದೇವದಾಸನ ಅಂಟು ಕೂದಲುಗಳು ಮೆಡಿಕಲ್ ಶಾಪಿನ ಅಂಗಳದಲ್ಲೆ ಪಾರಿಜಾತ ಹೂವಿನಂತೆ ಬಿದ್ದಿದವು. ಬ್ಯಾಗು ಜೋಡಿಸಿಕೊಂಡು ಹೊರಡಲು ಅಣಿಯಾದ ಉಷ್ಣನನ್ನು ಯಾರೋ ಎಳೆದಾಡಿದಂತೆ ತೋರಿತು. ತಿರುಗಿದರೆ ದೇವದಾಸ ಮತ್ತೆ ಕಪ್ಪು ಬ್ಯಾಗನ್ನು ಕಿತ್ತುಕೊಂಡು ಅಮಲು ಹತ್ತಿದವನಂತೆ ಓಡಲು ಶುರುಮಾಡಿದ. ಉಷ್ಣ “ನಿಲ್ಲೋ ನಿಲ್ಲೋ ದೇವದಾಸ” ಅಂತ ಎಷ್ಟೇ ಕೂಗುತ್ತಾ ಹಿಂಬಾಲಿಸಿದರೂ ಸಿಗಲಿಲ್ಲ. ಓಡುತ್ತಾ ಇಬ್ಬರು ಹೈವೆ ರಸ್ತೆ ದಾಟಿದರು.

ಬೆಳಿಗ್ಗೆಯಾದರೂ ಮನೆಗೆ ಮರಳದ ಗಂಡನ ಕುರಿತಾಗಿ ಹೆಂಡತಿ ಪೋಲಿಸ್ ಕಂಪ್ಲೆಂಟ್ ಕೊಟ್ಟಳು. ಒಂದು ದಿನವೂ ರಜೆಯಿಲ್ಲದೆ ಕಂಗಲಾಗಿದ್ದ ಕೆಲಸದ ಹುಡುಗರು ಸಲೂನಿನ ತಂಟೆಗೆ ಹೋಗಲಿಲ್ಲ. ಮೂರು ದಿನವಾದರೂ ಕಾಣದ ಉಷ್ಣನ ಕುರಿತಾಗಿ ಕಳಕಳಿ ಅಸ್ಸಾಂ ಹುಡುಗರ ಕೈವಾಡ ಇರಬಹುದೇ ಎಂದು ಯೋಚಿಸತೊಡಗಿದ.

ಚಿತ್ರ : ಮೇಘಾ ಶೆಟ್ಟಿ

One comment to “ಕತೆ : ದೇವದಾಸನ ಮಿಸ್ಟೇಕು”

ಪ್ರತಿಕ್ರಿಯಿಸಿ