ಜನಪ್ರಿಯತೆ ಹಾಗು ಸರಳೀಕೃತ ತೀರ್ಮಾನಗಳ ಮೋಹಕ್ಕೆ ಒಳಹಾಗದೆ, ಪ್ರಾಮಾಣಿಕವಾಗಿ ತಮ್ಮ ಅನುಭವವನ್ನು ಶೋಧಿಸುತ್ತ, ಅಂತಹ ಶೋಧನೆಗೆ ಶಬ್ದರೂಪ ಕೊಡುವ ವಿಶಿಷ್ಟ ಕವಿ ವಿಕ್ರಮ್ ಹತ್ವಾರ್ ಅವರ ಹೊಸ ಕವನ ಸಂಕಲನ ಮೆಟ್ರೊ ಝೆನ್ ಅಂಕಿತ ಪ್ರಕಾಶನದಿಂದ ನಾಳೆ ೨೧.೦೩.೨೧ ರಂದು ಬಿಡುಗಡೆಯಾಗಲಿದೆ. ಈ ಸಂಕಲನದಿಂದ ಆಯ್ದ ಎರಡು ಕವಿತೆಗಳು ಜೊತೆಗೆ ಸಂಕಲನದ ಕವಿತೆಗಳಿಗೆ ಲಕ್ಷ್ಮೀಶ ತೋಳ್ಪಾಡಿ ಅವರ ಪ್ರತಿಸ್ಪಂದನೆಯನ್ನು ಋತುಮಾನದ ಓದುಗರಿಗಾಗಿ ಇಲ್ಲಿದೆ.
ಕಳೆದುಹೋಯಿತೆಂದು ತಿಳಿಯುವ ಮೊದಲೇ
*************************
ಹೆಸರಿಲ್ಲದ ನಂಬರಿನಿಂದ ಬಂದ ಕರೆ
ಪರಿಚಿತವಲ್ಲದ ದನಿ
ಆಪ್ತತೆಯಿರದ ಮಾತು
ನನ್ನ ಹೆಸರ ಸರಿಯಾಗಿ ಹಿಡಿದು ಕೇಳಿದ:
ನೀವು ಈಗಷ್ಟೆ ಈ ತಿರುವಿನಿಂದ ಸಾಗಿದಿರೇನು?
ಅದೇ ಗೊಂಬೆ ಅಂಗಡಿಯ ಎದುರಿನಿಂದ?
ಹೌದು ತಾವು ಯಾರೆಂದು ತಿಳಿಸಬಾರದೆ ಮೊದಲು?
ಹೇಳದೆಯೆ ತನ್ನ ಹೆಸರ, ಕೇಳಿದ ಕೊಂಕಿನಿಂದ:
ಹೇಳೋಣವಂತೆ ಹೇಳೋಣವಂತೆ
ಏನು ಮರೆತಿಲ್ಲ ತಾನೆ ಇಲ್ಲಿಂದ ತೆರಳುವಾಗ ಮತ್ತೆ?
ಏನ ಮರೆತಿರಬಹುದು ಕೈ ತಪ್ಪಿ
ಕಳಚಿಕೊಂಡಿರಬಹುದೆ ಮನ ಮೈ ತಪ್ಪಿ
ಮರೆಯಬೇಕೆಂದರೂ ಮರೆಯಲಾರದೆ
ರೂಢಿಗತ ರೋಡುಗಳು ಮನೆಯ ಸೇರಿಸಿದೆ
ಸರಿ, ನಿಮಗೇನಾಬೇಕೆಂದು ನಾನೂ ತುಸು
ಬಿಗಿಯಾಗಿ ತೋರಿದೆ ಇರಿಸುಮುರಿಸು
ಮೊದಲು ಬನ್ನಿ ಇಲ್ಲಿಗೆ
ತಿಳಿಯುವುದು ನಿಮಗೆ
ಏನು ಕಳೆದಿದೆಯೆಂದು,
ಬಿಟ್ಟು ಕೊಡದೆ ಗುಟ್ಟ
ಕರೆ ಕಡಿದುಬಿಟ್ಟ
ಹಾ! ಖಾಲಿ ಜೇಬು, ಈಗ ತಿಳಿಯಿತು
ಅರೆ! ಅದು ಹೇಗೆ ಅಲ್ಲೆ ಉಳಿಯಿತು?
ಕಳೆದುಹೋದುದು ಕಳೆದುಹೋಯಿತೆಂದು
ತಿಳಿಯುವ ಮೊದಲೇ ಮರಳಿ ದೊರೆಕಿತ್ತು
ಜಾರಿಕೊಂಡಿತ್ತೆಲ್ಲಿ ಜಾಗರೂಕ ಕಣ್ಗಾವಲನು
ಜಾತ್ರೆಯಲಿ ಕೊಂಡ ಕಂದು ಬಣ್ಣದ ಪರ್ಸು
ಏನೆಲ್ಲ ಇತ್ತು ಏನಿರಲಿಲ್ಲ ಅದರಲಿ
ಎ.ಟಿ.ಎಮ್, ಪ್ಯಾನ್, ಆಧಾರ್ ಕಾರ್ಡು,
ಡ್ರೈವಿಂಗ್ ಲೈಸೆನ್ಸು, ಕಂಪನಿ ಐಡಿ,
ಹಳೆಯ ಗೆಳತಿಯೊಂದಿಗೆ ನೋಡಿದ ಸಿನಿಮಾದ ಟಿಕೆಟ್ಟು, ಹಳೆಯ ರೂಪಾಯಿ ನೋಟು,
ಯಾವ್ಯಾವ ಚೀಟಿ, ಯಾರ ಫೋಟೋ,
ಹೋದರೆ ಹೋಗಲಿ ಚಿಲ್ಲರೆ ನಾಣ್ಯಗಳು
ಪರವಾಯಿಲ್ಲ ಒಂದೆರೆಡು ನೂರು ಕಡಿಮೆಯಾದರು
ಆದರೂ ಒಟ್ಟಾರೆ ಎಷ್ಟಿದ್ದಿರಬಹುದು ರಖಮ್ಮು?
ಎಣಿಕೆ ಹಾಕುತ್ತಲೇ ಇತ್ತು ಮನಸು
ತುಂಬಿದಂತೆ ಲೋಟವನು ನೊರೆ ಬುರುಗು
ಮನೆಯಿಂದ ಹೊರಟು ಗೊಂಬೆ ಅಂಗಡಿ ತಲುಪಿ
ನೋಡಿ ಅವನ ನಕ್ಕು ಕೈ ಕುಲುಕುವವರೆಗು
ಅಲ್ಲಿ ಅವನಲ್ಲಿ ಅಲ್ಲದೆ ಮತ್ತೆಲ್ಲೊ ಬಿಟ್ಟಿದ್ದರೆ
ಏನೆಲ್ಲ ಆಗಿ ಹೋಗುತ್ತಿತ್ತೆಂದು
ಉಪದೇಶ ಕೊಟ್ಟು ಕಾಳಜಿ ತೋರಿದ
ಎಲ್ಲವೂ ಸರಿ ಇದೆಯೆ ಒಮ್ಮೆ ನೋಡಿಕೊಳ್ಳಿ ಎಂದ…
ಇದೇ ಈ ಕ್ಷಣವ ಎದುರಿಸಲು
ನೆನಪಿಸಿಕೊಳ್ಳುತ್ತಿದ್ದೆ ಎಲ್ಲ ವಿವರಗಳ ಆಗಿನಿಂದಲೂ
ಹೇಗೆ ಹೇಳುವುದು ಈಗವನಿಗೆ
ಅಥವ ನನಗೆ ನಾನೇ
ಎಲ್ಲವೂ ಸರಿಯಿದೆ ಎಂದು
ಪರಿಷೆ
—-
ಕಾರ್ತಿಕದ ಕೊನೆಯ ರಾತ್ರಿ ಬೆಳಗಲು
ಅಮರಿಕೊಂಡಿದೆ ಪರಿಷೆ ಮನೆ ಬಾಗಿಲಿಗೆ
ಗುಡಿ ಬಸವನಿಗೊಂದು, ಕಡಲೆ ಗೋಪುರ ನೂರಾರು
ಒಂದರ ಮೇಲೊಂದೇರಿ ಆಟಿಕೆಗಳ ಮಿನಾರು.
ಅಲ್ಲಲ್ಲೆ ಚೆಲ್ಲಿದೆ ಒಡವೆಗಳ ಗುಡ್ಡೆ
ಹೆಜ್ಜೆಗೊಂದು ತಿನಿಸು ಪಾನೀಯಗಳ ಅಡ್ಡೆ.
ತಿರುಗುತಿದೆ ತೂಗು ಕುದುರೆ, ತೊಟ್ಟಿಲ ರಾಟೆ, ರೈಲು
ಹೀರುತಿದೆ ಮಧುನೋಟ ದುಂಬಿಸಾಲು.
ಅಪ್ಪನ ಹೆಗಲೇರಲು ಪುಟಾಣಿಗಳ ಹವಣು
ತನ್ನನಾಡಿಸುವ ಮಕ್ಕಳ ಹುಡುಕುತಿದೆ ಗೊಂಬೆಕಣ್ಣು.
ಬೀದಿಬೀದಿಯಲಿ ಮೊಳಗಿದೆ ಸಂತೆ ದುಂದುಭಿ
ಮಂದೆಯಲಿ ಕರಗಿದೆ ಒಂದಿನಿತು ದುಃಖ
ಇಂಥ ರಾಶಿಯಲಿ ಕಾಣಲಿಲ್ಲ ಒಂದೂ
ಎಂದಾದರು ಕಂಡಿರುವ ಹಳೆಯ ಮುಖ
ತುಂಬಿರುವ ದಾರಿಯಲಿ ಸರಿದಾಡಿ ಹಿಂದಿರುಗಿ
ಎಷ್ಟು ಕಾದರೂ ಬರಲಿಲ್ಲ ಒಬ್ಬರೂ ಮನೆಗೆ
ಪೀಪಿ ವಾದ್ಯಗಳಿಗೆ ತಲೆದೂಗಿ ದಣಿದು
ಮಲಗಿದ್ದಾನೆ ಬಸವ ಗರ್ಭಗುಡಿಯೊಳಗೆ
ಹಾಸಿಕೊಳ್ಳುವರು ರಸ್ತೆಯಲೆ ಅಂದಂದಿನ ಮಾಲೀಕರು,
ಯಾರೋ ಊದುವನು ಸೀಟಿ ಅಪರಾತ್ರಿ ವೇಳೆ
ಬಿಡುವಿನಲ್ಲೊಮ್ಮೆ ಫೇಸ್‌ಬುಕ್ಕು ತೆರೆದರೆ
ಪರಿಷೆಗೆ ಬಂದುಹೋದವರ ಸೆಲ್ಫಿ ಸುರಿಮಳೆ.
‘ಮೆಟ್ರೊ ಝೆನ್’ ಕವಿತೆಗಳಿಗೆ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಪ್ರತಿಕ್ರಿಯೆ:
ಗೆಳೆಯ ವಿಕ್ರಂಗೆ ಕವಿತೆಗಳ ಕಷ್ಟ-ಸುಖ ಚೆನ್ನಾಗಿ ಗೊತ್ತು. ಪ್ರತಿಯೊಂದು ವಸ್ತು;ಸಂದರ್ಭ;ಭಾವ ಸೂಕ್ಷ್ಮ ಗಳಲ್ಲಿ ಅದರದರಲ್ಲೇ ಅಡಗಿರುವ ‘ತದ್ಗತ’ ವಾದ ಅರಿವನ್ನು
ಹೊರಗಿನಿಂದ ನೋಡುವುದು ಹೇಗೆ ಎಂಬ ಕಷ್ಟ. ನೋಡುವುದು ಸಾಧ್ಯವಾದರೆ ಹೊರಗು- ಒಳಗು ಎನ್ನುವ ಅಂತರವೇ ಅಳಿಸಿಹೋಗುವ ಸುಖ! ಕಿಟಿಕಿಯಿಂದ ಒಳನುಗ್ಗಿದ ಬಿಸಿಲ ಕೋಲನ್ನು ಕಂಡು ಬೇಂದ್ರೆ; ” ಆಹಾ ಬಿಸಿಲುಕೋಲು, ಇದಕೆತ್ತಿಲ್ಲ ” ಎಂದು ಬರೆದರು. ಇದನ್ನು ಬೇಕಾದಂತೆ ಕೆತ್ತ ಲಾಗುವುದಿಲ್ಲ ಎಂಬ
ಕಾಣ್ಕೆಯೇ ಬೆಳಕಿನ ಕಂಬಕ್ಕೆ ಸರಿಯಾದ ಬಣ್ಣನೆ. ಇದು ಮಾತಿನ ಅಸಹಾಯಕತೆಯ ಕಷ್ಟವಲ್ಲ. ಅಸಹಾಯಕತೆಯ ಸುಖ! ನಿಜವಾಗಿ ನೋಡಿದರೆ ಮಾತು ತಾನು ಅಸಹಾಯಕವಾಗುವಲ್ಲಿನ ಸುಖವನ್ನೇ ಹುಡುಕುತ್ತಿರುವುದೇನೋ! ಗರ್ವದ ಭಾರ ಹೊರುವ ಆಯಾಸ ಯಾರಿಗೆ ಬೇಕಾಗಿದೆ?
ಕವಿ ಮಂಜುನಾಥ್ ಹೇಳುತ್ತಿದ್ದರು. ಮಾತನ್ನು ಹೆಚ್ಚು ನಂಬದೆ ವಸ್ತುವನ್ನು ನಂಬಬೇಕು. ವಸ್ತುವೇ ನಮ್ಮ ಮಾತನ್ನು ಬಳಸಿ ಮಾತಾಡುವಂತಾಗಲಿ- ಎಂದು. ‘ ಆ ಮಾತು ಬೇರೆ’ -ಎನ್ನುತ್ತೇವಲ್ಲ ಅಂಥ ಬೇರೆ ಮಾತುಗಳ ತಣ್ಣನೆಯ ಉಸಿರು ಇಲ್ಲಿನ ಕವಿತೆಗಳಲ್ಲಿ ತಾಕುತ್ತಿದೆ. ಮಾನವ ಸಂಬಂಧಗಳಲ್ಲಿ ಅನುಕ್ತ ಸಂವೇದನೆಗಳ ಪಾತ್ರವೆಷ್ಟು ಎಂದು- ಲೋಕಕ್ಕೆ ಹುಣ್ಣಿಮೆಯ ಬೆಳಕು ಚೆಲ್ಲುವ ಚಂದ್ರನನ್ನು ಅವನೊಳಗಿನ ಕಪ್ಪು ಕಲೆಗಳೇ ಜೀವಂತ ಇಟ್ಟಿವೆ ಎಂದು- ಉರಿವ ಕಟ್ಟಿಗೆಯ ಕೊನೆಯಲ್ಲಿ ನೀರು ಜಿನುಗುವುದೇಕಿರಬಹುದೆಂದು – ತಿಳಿದಿದೆಯೇ ಬೆಕ್ಕಿಗೆ ಇದು ಕಳ್ಳತನ,ಇದು ಅಲ್ಲ ಎಂಬ ಸಂದೇಹ ಬಂದರೆ ಈ ಸಂದೇಹದ
ನಸುಗತ್ತಲಲ್ಲಿ – ಕವಿ ಮತ್ತು ಬೆಕ್ಕು ಎಂಬ ಎರಡು ಜೀವಗಳು ಒಂದಾಗುವರೆಂದು- ಕಲ್ಲು ಮಂಟಪದ ಕತ್ತಲೊಳಗೆ ಸರೋವರದ ನಡುವೆ ಅಲೆ ಎದ್ದ ನೀರಲ್ಲಿ ಬೆಳಕಿನ ದೋಣಿ ಮಗುಚುವುದೇಕೆಂದು- ( ವಿ-ಪ್ಲವ ಎಂದರೆ ದೋಣಿ ಮಗುಚುವುದು ಎಂದರ್ಥ) ಉಳಿಯೇಟಿಗೆ ಅಂಗಾಂಗ ರೂಪುಗೊಳ್ಳದೆ, ಬಂಡೆ, ತುಟಿ ಬಿರಿದು ನಕ್ಕ ಮಿಂಚಿಗೆ; ಆಗಸದ ಮಂದಹಾಸಕ್ಕೆ ಸ್ಪಂದಿಸ ಲಾರದು ಎಂದು ವಿಕ್ರಂ ಇಲ್ಲಿ ಮಂದ್ರ ಸ್ಥಾಯಿಯಲ್ಲಿ ಹೇಳುವರು.
‘ಒಳಗಿನ ವಿಮರ್ಶಕ’ ಎನ್ನುವ ಮಾತು ಕನ್ನಡ ಸಾಹಿತ್ಯದಲ್ಲಿ ಪ್ರಚಲಿತವಿದೆ. ನಿಜವೇ.ಆದರೆ ಈ ನೆಲೆಯಲ್ಲಿ ಸುಳಿದಲ್ಲೇ ಮತ್ತೆ ಸುಳಿಯುವ, ಚರ್ವಿತ ಚರ್ವಣದ, ಪಿಷ್ಟ ಪೇಷಣದ ಅಪಾಯವಿದೆ. ಹೊರಗಿನ ಕಣ್ಣುಗಳಿಂದ ನೋಡುವಾಗ ಕಂಡ ನೋಟವೂ ಯಾಕೆ ನಿಜವಲ್ಲ? ನಿಜವಾಗಬಾರದು? ನಮ್ಮನ್ನೇ ನಾವು ಹೊರಗಿನಿಂದಲೂ ನೋಡಿಕೊಳ್ಳಬೇಕಾದ ಅಗತ್ಯವಿಲ್ಲವೇ? ನಮಗೇ ಅಪರಿಚಿತವಾದ ನಮ್ಮ ನಿಜ ಅಪರಿಚಿತ ಕಣ್ಣಿಗೇ ಕಾಣಬರುವ ಸಾಧ್ಯತೆಗಳಿವೆ
ಅಲ್ಲವೇ? ವಿಕ್ರಂ ಕವಿತೆಗಳು ಹೀಗೆ ಒಳ-ಹೊರಗೆ ತುಯ್ಯುತ್ತಿವೆ. ಈ ತುಯ್ದಾಟ ನಮ್ಮನ್ನೂ ಇದ್ದಲ್ಲಿ ಇರಗೊಡುವುದಿಲ್ಲ. ಅಭಿನಂದನೆಗಳು.
ಲಕ್ಷ್ಮೀಶ ತೋಳ್ಪಾಡಿ
ಕವಿ ವಿಕ್ರಮ್ ಹತ್ವಾರ್