ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಹೇಗೆ ಜಾತಿ ಮತ್ತು ಪ್ರತಿಭೆಯ ಹೊರೆಯಿಂದ ನಡೆಯಲ್ಪಡುತ್ತವೆ ಮತ್ತು ಇದರ ಪರಿಣಾಮಗಳೇನು ಎಂದು ಸಯಾಂತನ್ ದತ್ತಾ ಅವರು ವಿವರಿಸಿದ್ದಾರೆ. ಐಐಟಿ ಖರಗ್ ಪುರದ ಸಹ ಪ್ರಾಧ್ಯಾಪಕರಾದ ಸೀಮಾ ಸಿಂಗ್ ಅವರು ದಮನಿತ ಜಾತಿಗಳ ಹಾಗೂ ಅಂಗವೈಕಲ್ಯವುಳ್ಳ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ನಿಂದಿಸಿದ ವೀಡೀಯೋಗಳು ಇತ್ತೀಚಿಗೆ ಹೊರ ಬಂದವು. ಇದನ್ನು ವಿರೋಧಿಸಿ ಹಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ಮುಂದೆ ಬಂದರು ಹಾಗೂ ದ ಲೈಫ್ ಆಫ್ ಸೈನ್ಸ್ ಸಮೂಹವು ಲೈವ್ ಚರ್ಚೆಯೊಂದನ್ನು ಸಂಘಟಿಸಿತು. ಈ ಚರ್ಚೆಯ ಹಿನ್ನಲೆ ಮತ್ತು ಸಾರಾಂಶ ಕೂಡ ಇಲ್ಲಿದೆ.
ಪ್ರಚೋದನಾ ಎಚ್ಚರಿಕೆ: ಜಾತಿ ನಿಂದನೆಯ ಉಲ್ಲೇಖ ಮತ್ತು ಆತ್ಮಹತ್ಯೆ.
ಎಪ್ರಿಲ್ ೨೦೨೧ರಲ್ಲಿ ಇಂಟರ್ನೆಟ್ನಲ್ಲಿ ಕೆಲವು ವೀಡೀಯೋಗಳು ಪ್ರಕಟವಾದವು. ಈ ವೀಡೀಯೋಗಳು ಐಐಟಿ ಖರಗ್ಪುರ್‍ನಲ್ಲಿ ಸಹಾಯಕ ಪ್ರಧ್ಯಾಪಕರಾಗಿರುವ ಸೀಮಾ ಸಿಂಗ್ ಅವರು ಆನ್‍ಲೈನ್ ಕ್ಲಾಸೊಂದರಲ್ಲಿ, ದಮನಿತ ಜಾತಿಗಳ ಮತ್ತು/ಅಥವಾ ದೈಹಿಕ ಅಂಗವೈಕಲ್ಯವುಳ್ಳ, ವಿದ್ಯಾರ್ಥಿಗಳನ್ನು ಕ್ರೂರವಾಗಿ ನಿಂದಿಸುತ್ತಿರುವುದನ್ನು ತೋರಿಸಿದವು. ಅವರ ಈ ಉದ್ರೇಕ ಒಬ್ಬ ವಿದ್ಯಾರ್ಥಿಯು ರಾಷ್ಟ್ರಗೀತೆಗೆ ಎದ್ದು ನಿಲ್ಲದ್ದಕ್ಕೆ ಹಾಗೂ “ಭಾರತ್‍ಮಾತಾ ಕಿ ಜೈ” ಅನ್ನದ್ದಕ್ಕೆ ಪ್ರತಿಯಾಗಿತ್ತು.
ಇನ್ನೊಂದು ವಿಡೀಯೋದಲ್ಲಿ , ತನ್ನ ಅಜ್ಜ ತೀರಿಕೊಂಡರು ಎಂಬ ಕಾರಣಕ್ಕೆ ಕೆಲವು ದಿನಗಳ ರಜೆ ಕೇಳಿದ ಒಬ್ಬ ವಿದ್ಯಾರ್ಥಿಯ ಈ-ಮೇಲ್‍ಗೆ ಅವರು ಎಲ್ಲರೆದುರು ಉತ್ತರ ನೀಡುತ್ತಿರುವುದನ್ನು ಕಾಣಲಾಯಿತು. ಈ ಉತ್ತರದಲ್ಲಿ ಸೀಮಾ ಸಿಂಗ್ ಅವರು ಇನ್ನಿತರ ಮಾತುಗಳ ಜೊತೆಗೆ, ಈ ವಿನಂತಿಯು “non-application of the human mind”ಗೆ (ಮನುಷ್ಯರ ಮೆದುಳನ್ನು ಬಳಸದಿರುವುದಕ್ಕೆ) ಉದಾಹರಣೆ ಕೂಡಾ ಆಗಿದೆಯೆಂದು ಹೇಳಿದರು. ಈ ಎಲ್ಲ ವಿಡೀಯೋಗಳಲ್ಲಿ, ಸಿಂಗ್ ಅವರು ಐಐಟಿ ಖರಗ್ಪುರ್‍ನ ಅಧ್ಯಾಪಕ ವರ್ಗ ಹೇಗೆ ಎಲ್ಲರ ಹಿಡಿತದಿಂದ ದೂರವಿದೆಯೆಂದೂ ಹೇಳಿದರು. ಈ ಘಟನೆಗಳು ನಡೆದದ್ದು ಐಐಟಿ ಖರಗ್‍ಪುರ್‍ನ ಪ್ರಿಪರೇಟರಿ ಕೋರ್ಸ್‍ನಲ್ಲಿ. ಎಲ್ಲ ಐಐಟಿಗಳು ಕೂಡ, ಕಟ್-ಆಫ್‍ಗಿಂತ ಮೇಲಿದ್ದೂ ಸೀಟ್ ಸಿಗದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದೈಹಿಕ ಅಂಗವಿಕಲತೆಯ ಹಿನ್ನಲೆಯುಳ್ಳ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಅನ್ನು ಆಯ್ಕೆಯಾಗಿ ನೀಡುತ್ತವೆ. ಇದನ್ನು ಆಯ್ದು ತೇರ್ಗಡೆಗೊಳ್ಳುವ ವಿದ್ಯಾರ್ಥಿಗಳು ಒಂದು ವರ್ಷದ ಬಳಿಕ ಐಐಟಿಗೆ ಪ್ರವೇಶ ಪಡೆಯುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಯಶಸ್ಸು ಅಧ್ಯಾಪಕರ ಕೈಯಲ್ಲಿರುತ್ತದೆ.
ಈ ವಿಡೀಯೋಗಳು ಕೋಲಾಹಲವನ್ನೇ ಎಬ್ಬಿಸಿದವು. ಐಐಟಿ ಬಾಂಬೆಯ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‍ಸಿ) ಸಿಂಗ್ ಅವರ ಕಿರುಕುಳವನ್ನು ಖಂಡಿಸಿತು ಮತ್ತು ಅವರನ್ನು ವಜಾಗೊಳಿಸುವಂತೆ ಬೇಡಿಕೆಯನ್ನಿಟ್ಟಿತು. ಈ ಸಂಘಟನೆಯು ಸಿಂಗ್ ಅವರ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ 1989ರನ್ನು ಅನ್ವಯಿಸಬೇಕೆಂದೂ ಮತ್ತು ಈ ರೀತಿಯ ಜಾತೀಯತೆಯ ಘಟನೆಗಳನ್ನು ತಡೆಯಲು ಐಐಟಿಗಳು ತಾರತಮ್ಯ ವಿರೋಧಿ ಘಟಕಗಳನ್ನು ರಚಿಸಬೇಕೆಂದೂ ಕೇಳಿತು. ಹಲವು ಜಾತಿ ವಿರೋಧಿ ಹೋರಾಟಗಾರರು ಈ ಬೇಡಿಕೆಗಳನ್ನು ವರ್ಧಿಸಿದರು. ಸಾವಿರಕ್ಕೂ ಹೆಚ್ಚು ಐಐಟಿಯ ಹಳೆಯ ವಿದ್ಯಾರ್ಥಿಗಳು ಹಾಗೂ ಮತ್ತೊಂದು 25 ಮಹಿಳಾ ಹಳೆಯ ವಿದ್ಯಾರ್ಥಿಗಳು ಐಐಟಿ ಖರಗ್‍ಪುರ್‍ನ ಡೈರೆಕ್ಟರ್ ವೀರೇಂದ್ರ ತಿವಾರಿ ಅವರಿಗೆ ಸೀಮಾ ಸಿಂಗ್ ಅವರ ಮಾತುಗಳ ಬಗ್ಗೆ ತಮ್ಮ ಅಸಹ್ಯವನ್ನು ವ್ಯಕ್ತಪಡಿಸಿ, ಸಿಂಗ್ ಅವರು ರಾಜೀನಾಮೆ ನೀಡುವಂತೆ ಪತ್ರ ಬರೆದರು. #End_Casteism_In_IITs ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆಗತೊಡಗಿತು.
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಈ ವಿಚಾರದ ಕುರಿತು suo moto (ಸ್ವಯಂ) ಅರಿವನ್ನು ಪಡೆದು ಐಐಟಿ ಖರಗ್‍ಪುರ್, ಕೇಂದ್ರ ಶಿಕ್ಷಣ ಮಂತ್ರಾಲಯ ಹಾಗೂ ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಳಿತು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಾಷ್ಟ್ರೀಯ ಇಂಜಿನಿಯರ್‍ಗಳ ಸಂಘದ ರಾಷ್ಟ್ರಾಧ್ಯಕ್ಷರಾದ ನಾಗ್ಸೇನ್ ಸೊನಾರೆ ಅವರ ದೂರಿಗೆ ಪ್ರತಿಯಾಗಿ ತಿವಾರಿ ಅವರು ಒಂದು ಸತ್ಯ-ಶೋಧನಾ ಸಮಿತಿಯನ್ನು ರಚಿಸಿರುವುದಾಗಿಯೂ ಮತ್ತು ಒಮ್ಮೆ ಈ ಸಮಿತಿಯು ವರದಿ ನೀಡಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು. ತಿವಾರಿ ಅವರ ಪ್ರತಿಕ್ರಿಯೆಯ ಒಂದು ಪ್ರತಿ, ದ ಲೈಫ್ ಆಫ್ ಸೈನ್ಸ್ (ಲೇಖಕರ ಕಾರ್ಯಸ್ಥಳ) ಬಳಿ ಇದೆ.
ಕೆಲದಿನಗಳ ನಂತರ ಸೀಮಾ ಸಿಂಗ್ ಅವರು ಕ್ಷಮೆ ಕೇಳಿ, ತಮ್ಮ ವರ್ತನೆಯು ಕೋವಿಡ್-19ರಿಂದಾದ ಒತ್ತಡ ಹಾಗೂ ಐಸೋಲೇಶನ್‍ನಲ್ಲಿ ಅವರಿದ್ದರ ಪರಿಣಾಮವೆಂದು ಹೇಳಿದರು.
ಈ ಲೇಖನವನ್ನು ಬರೆಯುವ ಹೊತ್ತಿಗೆ, ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ವಜಾ ಮಾಡಲಾಗಿಲ್ಲ ಅಥವಾ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ದೋಷಿಸಲಾಗಿಲ್ಲ (ಅನುವಾದಕರ ಸೂಚನೆ: ಅನುವಾದ ಕೈಗೊಳ್ಳುವ ಹೊತ್ತಿಗೆ ಅವರನ್ನು ಈ ಕಾಯಿದೆ ಅಡಿಯಲ್ಲಿ ದೂಷಿಸಲಾಗಿರುತ್ತದೆ). ಎಪಿಪಿಎಸ್‍ಸಿಯ ಇತರ ಬೇಡಿಕೆಗಳಿಗೆ ಐಐಟಿ ಖರಗ್‍ಪುರ್ ಪ್ರತಿಕ್ರಿಯೆ ನೀಡಿಲ್ಲ.
‘ತರಗತಿಯಿಂದ ಹೊರಹೋಗಿ’ ಎನ್ನುವುದು ಹೊಸತೇನಲ್ಲ
ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯು ಮರೆಯಲ್ಲಿ ಹಾಗೂ ಬಹಿರಂಗವಾಗಿ ಎರಡೂ ರೂಪದಲ್ಲಿ ಭಾಗವಾಗಿದ್ದು, ದಮನಿತ ಜಾತಿಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜೀವನದ ಮೇಲೆ ಹಲವು ರೀತಿಯ ಪರಿಣಾಮಗಳನ್ನುಂಟುಮಾಡುತ್ತದೆ. (ಹೇಗೆ ಜಾತಿ ಮತ್ತು ಜಾತೀಯತೆಯಿಂದೊಡಮೂಡಿದ ಹೊರಗಿಡುವಿಕೆಯ ವಿಧಾನಗಳು ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ದ ಲೈಫ್ ಆಫ್ ಸೈನ್ಸ್ ಮೇ 8, 2021ರಂದು ಒಂದು ಲೈವ್ ಚರ್ಚೆಯನ್ನು ಸಂಘಟಿಸಿತು.)
ಸೀಮಾ ಸಿಂಗ್ ಘಟನೆಯು ಬಹಳಷ್ಟು ಸಾರ್ವಜನಿಕ ಗಮನದಲ್ಲಿ ಬಂದಿತಾದರೂ ಇದು ಈ ರೀತಿಯ ಅಥವಾ ಇಷ್ಟು ಗಮನವನ್ನು ಪಡೆದುಕೊಂಡ ಮೊದಲ ಘಟನೆ ಏನೂ ಆಗಿರುವುದಿಲ್ಲ. 2014ರಲ್ಲಿ ಅನಿಕೇತ್ ಅಂಭೋರೆ ಎಂಬ ಐಐಟಿ ಬಾಂಬೆಯ ದಲಿತ ವಿದ್ಯಾರ್ಥಿಯೊಬ್ಬರು ಎತ್ತರದಿಂದ ಬಿದ್ದು ಸಾವಿಗೀಡಾದರು. ಇದು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಎಂದು ಸ್ಪಷ್ಟವಾಗಿರಲಿಲ್ಲ, ಆದರೆ ಅವರ ಪಾಲಕರು ಜಾತಿ-ಆಧಾರದ ಕಿರುಕುಳವು ಅನಿಕೇತ್ ಅವರನ್ನು ಆತ್ಮಹತ್ಯೆಗೊಳ್ಳುವತ್ತ ದೂಡಿತು ಎಂದು ಆರೋಪಿಸಿದರು.
ಈ ಘಟನೆಯ ನಂತರ, ಅಂಭೋರೆ ಅವರ ಮರಣವನ್ನು ಪರಿಶೀಲಿಸಲು ಐಐಟಿ ಬಾಂಬೆ ಒಂದು ಮೂರು ಸದಸ್ಯ್ರ ಸಮಿತಿಯನ್ನು ರಚಿಸಿತು. ಈ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿಯೇ ಇಲ್ಲ, ಆದರೆ ಇಂಡಿಯನ್ ಎಕ್ಸ್ಪ್ರೆಸ್‍ನ ವರದಿಯ ಪ್ರಕಾರ ಅವರ ಸಾವು ಜಾತಿ-ಆಧಾರಿತ ಕಿರುಕುಳದಿಂದಲ್ಲ ಬದಲಾಗಿ “internal contradictions”(ಆಂತರಿಕ ವೈರುಧ್ಯ)ಗಳಿಂದ ಎಂದು ಸಮಿತಿ ತೀರ್ಮಾನಿಸಿತು.
ಕುತೂಹಲಕಾರಿಯೆಂದರೆ, ಈ ಸಮಿತಿಯು ಒಂದು ವಿಚಾರವನ್ನು ಒಪ್ಪಿಕೊಂಡಿತು: “ಎಸ್ಸಿ/ಎಸ್ಟಿ ಕೋಟಾದ ಮೂಲಕ ಪ್ರವೇಶಿಸುವ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಹಾಗೂ ಡಿಪಾರ್ಟ್ಮೆಂಟ್‍ಗಳಲ್ಲಿ ಮೀಸಲಾತಿ ಕುರಿತ ಗಡುಸಾದ ನಿಲುವಿನ ಕಾರಣದಿಂದ ಸಮಸ್ಯೆಗಳನ್ನು ಎದುರಿಸುವ ಸಾದ್ಯತೆಯಿದೆ”.
ತದನಂತರ 2016ರಲ್ಲಿ, ಸೆಂಟ್ರಲ್ ಯುನಿವರ್ಸಿಟಿ ಆಫ್ ಹೈದರಾಬಾದ್‍ನ ದಲಿತ ಪಿಎಚ್‍ಡಿ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಸಾವು ಘಟಿಸಿತು. ವೆಮುಲಾ ಹಾಗೂ ಅವರ ಗೆಳೆಯರು ವಿಶ್ವವಿದ್ಯಾಲಯದ ಆಡಳಿತ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಡೆಸಿದ ಜಾತಿ ಆಧಾರಿತ ದೌರ್ಜನ್ಯಕ್ಕೆ ಒಳಗಾಗಿದ್ದರು. ವೆಮುಲಾ ಅವರು ಹೃದಯ ತಟ್ಟುವಂತಹ ಪತ್ರವೊಂದನ್ನು ಬಿಟ್ಟು ಹೋದರು. ಅದರಲ್ಲಿ ಹೀಗೆ ಹೇಳಿದ್ದಾರೆ, “ನನ್ನ ಹುಟ್ಟು ಒಂದು ಆಕಸ್ಮಿಕ. ನನ್ನ ಬಾಲ್ಯದ ಒಂಟಿತನದಿಂದ ನಾನು ಚೇತರಿಸಿಕೊಳ್ಳಲೇ ಇಲ್ಲ.” (“My birth is my fatal accident. I can never recover from my childhood loneliness.”)
ವೆಮುಲಾ ಅವರ ಸಾವಿನ ನಂತರ ಭಾರತದ ಉನ್ನತ ಕ್ಯಾಂಪಸ್‍ಗಳಲ್ಲಿ ಜಾತಿ-ಆಧಾರಿತ ತಾರತಮ್ಯದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಎಸ್.ಅನೀತಾ, ಬಿ.ವೈ.ಎಲ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿದ್ದ ಪಾಯಲ್ ತಡ್ವಿ, ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ಮುತ್ತುಕೃಷ್ಣನ್, ಐಐಟಿ ಮಡ್ರಾಸ್‍ನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಫಾತಿಮಾ ಲತೀಫ್ ಅವರ ಸಾವು, ಮತ್ತು ಜೆಎನ್‍ಯು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ನಾಪತ್ತೆ ಕೆಲವು ಉದಾಹರಣೆಗಳು.
ಭಾರತದ ಮುಂಚೂಣಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಾಗದದಲ್ಲಿ ಮಾತ್ರವಿದ್ದು, ಈ ಸಂಸ್ಥೆಗಳು ಬಹಳಷ್ಟು ಬಾರಿ ಮೀಸಲಾತಿಯನ್ನು ಉಲ್ಲಂಘಿಸಿವೆ. ಉದಾಹರಣೆಗೆ, ಐಐಟಿ ದೆಹಲಿಯ 31 ವಿಭಾಗಗಳಲ್ಲಿ ಹಾಗೂ ಐಐಟಿ ಬಾಂಬೆಯ 26 ವಿಭಾಗಗಳಲ್ಲಿ, ಕ್ರಮವಾಗಿ 15 ಹಾಗೂ 16 ವಿಭಾಗಗಳು ತಮ್ಮ 2020ರ ಪಿಎಚ್‍ಡಿ ಪದವಿ ಪ್ರವೇಶಾತಿಯಲ್ಲಿ ಒಬ್ಬರು ಎಸ್ಸಿ ವಿದ್ಯಾರ್ಥಿಗೆ ಕೂಡ ಪ್ರವೇಶ ನೀಡಿರುವುದಿಲ್ಲ.
ಈ ಉಲ್ಲಂಘನೆಗಳು ಈ ಪ್ರಮುಖವೆನಿಸಿದ ಸಂಸ್ಥೆಗಳ ಸ್ವತ್ತೇನಲ್ಲ: ಹೈದರಾಬಾದ್ ವಿಶ್ವವಿದ್ಯಾಲಯ ಹಾಗೂ ಜೆಎನ್‍ಯು ಅಲ್ಲಿ ಕೂಡ ಇವು ವರದಿಯಾಗಿವೆ. ಮೀಸಲಾತಿಯಿಂದ ಕಡ್ಡಾಯವಾದ ದಮನಿತ ಜಾತಿಗಳ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಪ್ರವೇಶ ಪಡೆದಿರುವ ನೈಜ ಸಂಖ್ಯೆಗಳಲ್ಲಿ ದೊಡ್ಡ ಕಂದಕವಿರುವುದು ಸ್ಪಷ್ಟವಾಗಿದೆ.
2020ರಲ್ಲಿ ಸಂಸದೀಯ ಸಮಿತಿಯೊಂದು ಕಂಡುಕೊಂಡಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಕೇವಲ 4% ಅಧ್ಯಾಪಕರು ಒಬಿಸಿ ಆಗಿದ್ದಾರೆ, ಆದರೆ ಮೀಸಲಾತಿ ನಿಯಮಾವಳಿ 27% ಕಡ್ಡಾಯವೆನ್ನುತ್ತದೆ. ಈ 4%ದಲ್ಲಿ ಒಬ್ಬರು ಕೂಡ ಸಹ ಪ್ರಾಧ್ಯಾಪಕರು ಅಥವಾ ಪ್ರಾಧ್ಯಾಪಕರ ಹಂತದವರಿಲ್ಲ.
ಮಿಸಲಾತಿ ವಿರೋಧಿ ಧೋರಣೆಗಳು
ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಮತ್ತು ಅವುಗಳ ಸವರ್ಣೀಯ ಹಕ್ಕುದಾರರ ಮೀಸಲಾತಿ ವಿರೋಧಿ ಧೋರಣೆ ಹೊಸದೇನಲ್ಲ. 1990ರಲ್ಲಿ ಮಂಡಲ್ ಸಮಿತಿಯ ವರದಿಯ ಪ್ರಕಾರ ಮೀಸಲಾತಿಯನ್ನು ಜಾರಿಗೊಳಿಸಿದ್ದಕ್ಕೆ ಪ್ರತಿಯಾಗಿ ಭಾರತದೆಲ್ಲಡೆ ಸಾಲುಸಾಲಾಗಿ ಪ್ರತಿಭಟನೆಗಳು ನಡೆದವು, ದೆಹಲಿ ವಿಶ್ವವಿದ್ಯಾಲಯದಂತಹ ವಿದ್ಯಾರ್ಥಿಗಳನ್ನೊಳಗೊಂಡು. ಇವರಲ್ಲೊಬ್ಬರು, ರಾಜೀವ್ ಗೋಸ್ವಾಮಿ, ತಮ್ಮನ್ನು ತಾವೇ ಹಾನಿಗೆ ಒಳಪಡಿಸಿದರು.
2006ರಲ್ಲಿ ಭಾರತ ಸರ್ಕಾರವು ಒಬಿಸಿ ಹಿನ್ನಲೆಯುಳ್ಳವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಹೊರಟಾಗ ಇತಿಹಾಸವು ಮರುಕಳಿಸಿತು. ಹಲವು ಐಐಟಿಗಳು ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ಸ್ ಆಫ್ ಮೆಡಿಕಲ್ ಸೈನ್ಸಸ್(AIIMS)ನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರತಿಭಟನೆಗಳನ್ನು ಆಯೋಜಿಸಿದರು. ಸುಪ್ರೀಂ ಕೋರ್ಟ್ ಮೀಸಲಾತಿಯನ್ನು 2008ರಲ್ಲಿ ಎತ್ತಿಹಿಡಿದಿತು, ಆದರೆ ಒಬಿಸಿ ಕ್ರೀಮೀ ಲೇಯರ್ (ವಾರ್ಷಿಕ ಆದಾಯ 4.5 ಲಕ್ಷಕ್ಕಿಂತ ಅಧಿಕವಾಗಿರುವವರು) ಅನ್ನು ಮೀಸಲಾತಿಯಿಂದ ಹೊರಗಿಟ್ಟಿತು.
2007ರಲ್ಲಿ ಅಂದಿನ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಅಧ್ಯಕ್ಷರಾದ ಪ್ರೊ.ಸುಖೇಂದು ಥೋರಾಟ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯೊಂದು AIIMSನಲ್ಲಿನ ಜಾತಿ ತಾರತಾಮ್ಯವನ್ನು ಪರಿಶೀಲಿಸಿ, ಕಂಡುಕೊಂಡಿತು. AIIMSನಲ್ಲಿ ಜಾತೀಯತೆಯನ್ನು ನಿವಾರಿಸಲು ಥೋರಾಟ್ ವರದಿಯು ಹಲವು ಶಿಫಾರಸುಗಳನ್ನು ಮಾಡಿತು – ಸಮಾನ ಅವಕಾಶ ಸೆಲ್‍ನ ರಚನೆ ಹಾಗೂ ಮೀಸಲಾತಿ ಜಾರಿಗೊಳ್ಳುವಿಕೆಗೆ ಆರೋಗ್ಯ ಮಂತ್ರಾಲಯದ ಮೇಲುಸ್ತುವಾರಿಕೆ ಇರಬೇಕು ಎಂಬುದನ್ನು ಒಳಗೊಂಡು. ಇಂದಿಗೂ ಮೀಸಲಾತಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ತಾರತಮ್ಯ ಮತ್ತು ಅವಮಾನವನ್ನು ಎದುರಿಸುತ್ತಿರುವುದರ ಮಧ್ಯೆ, ಇವುಗಳನ್ನು ಜಾರಿಗೊಳಿಸುವುದು ಇನ್ನೂ ಬಾಕಿಯಿದೆ.
ದ ಲೈಫ್ ಆಫ್ ಸೈನ್ಸ್ ಚರ್ಚೆಯಲ್ಲಿ ಜಾಧವ್ಪುರ್ ವಿಶ್ವವಿದ್ಯಾಲಯದ ಅಧ್ಯಾಪಕರಾದ ಸುಭಜಿತ್ ನಸ್ಕರ್ ಅವರು ಕೊರೋನ ಪಿಡುಗಿನ ಸಂದರ್ಭದಲ್ಲಿ ಆನ್‍ಲೈನ್ ತರಗತಿಗಳನ್ನು ಹಾಜರಾಗಲು, ದಮನಿತ-ಜಾತಿ ಹಿನ್ನಲೆಯುಳ್ಳವರು, ಸೌಕರ್ಯಗಳ ಲಭ್ಯತೆ ಹಾಗೂ ಅವುಗಳ ಬೆಲೆಯನ್ನು ಪಾವತಿಸುವಿಕೆಯಲ್ಲಿ ವಿಪರೀತ ತೊಂದರೆಗಳನ್ನು ಅನುಭವಿಸಿದ ಬಗ್ಗೆ ತಿಳಿಸಿದರು. ನಸ್ಕರ್ ಅವರ ಪ್ರಕಾರ, ದಮನಿತ-ಜಾತಿಗಳ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸಿದ್ದರೂ ಪವೇಶಾತಿ ಸಂದರ್ಶನಗಳಲ್ಲಿ ಕಡಿಮೆ ಅಂಕ ಗಳಿಸಿದ್ದರು.
ಪಿಎಚ್‍ಡಿ ವಿದ್ಯಾರ್ಥಿ ಹಾದೂ ದಲಿತ್ ವಿಮೆನ್ ಫೈಟ್‍ನ ಸ್ಥಾಪಕರಾದ ರಿಯಾ ಸಿಂಗ್ ಅವರು ತಮ್ಮದೇ ಜಾತಿ-ಅನುಭವವನ್ನು ಬರೆದ ಅಸೈನ್‍ಮೆಂಟ್‍ನಲ್ಲಿ ಕಡಿಮೆ ಅಂಕ ಗಳಿಸಿದ ವಿಪರ್ಯಾಸದ ಕುರಿತು ತಿಳಿಸಿದರು. ದಮನಿತ ಜಾತಿಗಳ ವಿದ್ಯಾರ್ಥಿಗಳು ಹೇಗೆ ಉದಾರ ಹಾಗೂ ಪ್ರಗತಿಪರವೆಂದು ತೋರುವ ಶೈಕ್ಷಣಿಕ ವಾತಾವರಣಗಳಲ್ಲಿ ನಿರಂತರವಾಗಿ ನಿರುತ್ಸಾಹಗೊಳಿಸಲ್ಪಡುತ್ತಾರೆ ಎಂದು ಕೆಲವು ಘಟನೆಗಳೊಂದಿಗೆ ವಿವರಿಸಿದರು.
ಸವರ್ಣೀಯ ಹಿಂದೂಗಳಿಗೆ ಕ್ಯಾಂಪಸ್‍ನಲ್ಲಿ ತಮ್ಮ ಹಬ್ಬಗಳನ್ನು ಜೋರಾಗಿ ನಡೆಸಲು ಅನುಮತಿ ನೀಡಿ, ದಮನಿತ ಜಾತಿಗಳ ವಿದ್ಯಾರ್ಥಿಗಳು ತಮಗೆ ಮುಖ್ಯವೆನಿಸಿದ ಸಂಗತಿಗಳ ನೆನಪಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನಗತ್ಯ ಅಡೆತಡೆಗಳನ್ನು ಹುಟ್ಟಿಹಾಕುವ ಐಐಟಿ ಬಾಂಬೆಯ ಬೂಟಾಟಿಕೆಯ ಬಗ್ಗೆ ಪಿಎಚ್‍ಡಿ ವಿದ್ಯಾರ್ಥಿ ಹಾಗೂ ಎಪಿಪಿಎಸ್‍ಸಿಯ ಸದಸ್ಯರಾದ ತೇಜೇಂದ್ರ ಪ್ರತಾಪ್ ಗೌತಮ್ ಅವರು ಹೇಳಿದರು.
ಐಐಟಿ ಹೈದರಾಬಾದ್‍ನಲ್ಲಿ ಮಾನವಶಾಸ್ತ್ರಜ್ಞರಾಗಿರುವ ವೈಶಾಲಿ ಖಾಂಡೇಕರ್ ಅವರು ಗಮನಿಸಿದರು:
“ಈ ರೀತಿಯ ಹೊರಗಿಡುವಿಕೆಯ ಮಾಧ್ಯಮಗಳು ವಿಶ್ವವಿದ್ಯಾಲಯಗಳಲ್ಲಿ ಯಾವತ್ತೂ ಇತ್ತಾದರೂ, ಸೀಮಾ ಸಿಂಗ್ ಅವರ ಘಟನೆಯಲ್ಲಿ ಹೊಸತೇನೆಂದರೆ ಇದು ಆನ್‍ಲೈನ್ ಆಗಿ ಘಟಿಸಿತು. ಅವರು ಹೇಳಿದ ಮಾತುಗಳಾಗಲಿ ಅವರು ತಮ್ಮ ಧೋರಣೆಗಳನ್ನು ತೋರಿಸಲು ಬಳಸಿದ ಭಾವವಾಗಲೀ ಹೊಸದಲ್ಲವೇ ಅಲ್ಲ.”
ಸೀಮಾ ಸಿಂಗ್ ಅವರ ವಿಡೀಯೋಗಳು ಕಂಡುಬಂದ ಕೆಲವೇ ದಿನಗಳಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಡೀನ್ ಹಾಗೂ ರಾಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಕೌಶಲ್ ಕುಮಾರ್ ಮಿಶ್ರಾ ಅವರು ದಮನಿತ ಜಾತಿಗಳ ವೈದ್ಯರನ್ನು ಮತ್ತು ಬಿ.ಆರ್.ಅಂಬೇಡ್ಕರ್ ಅವರನ್ನು ಅಣಕು ಮಾಡಿ ಫೇಸ್‍ಬುಕ್ ಪೋಸ್ಟ್ ಒಂದನ್ನು ಬರೆದರು. ವಿಶ್ವವಿದ್ಯಾಲಯವು ಅವರ ಮಾತುಗಳಿಂದ ದೂರ ಇರಿಸಿಕೊಂಡಿದೆ ಹಾಗೂ ಸ್ಥಳೀಯ ಪೋಲಿಸ್ FIR ದಾಖಲಿಸಿದ್ದಾರೆ: ವಿಶ್ವವಿದ್ಯಾಲಯ ಹಾಗೂ ಪೋಲಿಸ್, ಇಬ್ಬರೂ ತನಿಖೆಯನ್ನು ನಡೆಸುವ ಆಶ್ವಾಸನೆ ನೀಡಿದ್ದಾರೆ.
ಜಾತಿಯನ್ನು ಜೀವಂತವಾಗಿ ಇಡುವುದು ಏನು?
ಗೌತಮ್ ಮತ್ತು ನಸ್ಕರ್ ಇಬ್ಬರೂ ಅಂಬೇಡ್ಕರ್ ಅವರ ಸೂತ್ರವಾದ “ಶಿಕ್ಷಣ, ಹೋರಾಟ, ಸಂಘಟನೆ” (“educate, agitate, organise”) ಅನ್ನು ನೆನೆದರು. ಆದರೆ ಸವರ್ಣೀಯ ವ್ಯಕ್ತಿಗಳು ಶೈಕ್ಷಣಿಕ ವಲಯವನ್ನು ಮತ್ತು ಜ್ಞಾನವನ್ನು ಕಾವಲಿಟ್ಟು ದಮನಿತ ಜಾತಿಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುವ ಮೊದಲ ಮೆಟ್ಟಿಲನ್ನೂ ಮುಟ್ಟದಂತೆ ಮಾಡುತ್ತಾರೆ.
ಪ್ಯಾನಲಿಸ್ಟ್ ಗಳು ಹಲವು ಕಾವಲಿಡುವ ಕಾರ್ಯವಿಧಾನಗಳನ್ನು ಚರ್ಚಿಸಿದರು. ಇವು ಉನ್ನತ ಶಿಕ್ಷಣ ವಲಯದಲ್ಲಿ ಜಾತೀಯತೆಯನ್ನು ಬೇರೆ ಬೇರೆ ರೂಪದಲ್ಲಿ ಸ್ಥಿರವಾಗಿಸುತ್ತವೆಯಾದರೂ, ಇವನ್ನು ಮೂರು ವಿಶಾಲವಾದ ವರ್ಗಗಳಿಗೆ ಸೇರಿಸಬಹುದು.
ಮೊದಲನೇಯ ವಿಧಾನವೆಂದರೆ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯದಿಂದ ಇನ್ನಷ್ಟು ದೂರವಾಗಿಸುವುದು. ಎರಡನೇಯ ಮತ್ತು ಮೂರನೇಯ ವಿಚಾರಗಳೇನೆಂದರೆ ಈ ಸಂಸ್ಥೆಗಳಲ್ಲಿ ದಮನಿತ ಜಾತಿಗಳ ವ್ಯಕ್ತಿಗಳ ಪ್ರಾತಿನಿಧ್ಯ, ಮತ್ತು ಜ್ಞಾನವನ್ನು ಸೃಷ್ಟಿಸುವ ಹಾಗೂ ಪಸರಿಸುವ ಮಾರ್ಗಗಳ ಮೇಲಿರುವ ಸವರ್ಣೀಯ ಅಕಾಡೆಮಿಕ್‍ಗಳ ಹಿಡಿತ.
ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಅಧ್ಯಾಪಕರಾದ ರೆಹ್ನಮೋಳ್ ರವೀಂದ್ರನ್ ಅವರು ಕ್ಯಾಂಪಸ್‍ಗಳನ್ನು ರಾಜಕೀಯದಿಂದ ದೂರವಿಡುವುದು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಯಾವುದೇ ರೂಪದ ರಾಜಕೀಯ ಸಂಘಟನೆಗಳಲ್ಲಿ ಭಾಗವಹಿಸದಂತೆ ಬೇಲಿ ಹಾಕುವ ಐಐಟಿ ಅಂತಹ ಸಂಸ್ಥೆಗಳಲ್ಲಿ, ಜಾತೀಯತೆಯನ್ನು ಭದ್ರವಾಗಿಸುತ್ತದೆ ಎಂದು ಹೇಳಿದರು.
ಕ್ಯಾಂಪಸ್‍ನಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗುವ ವಿದ್ಯಾರ್ಥಿಗಳನ್ನು ಭೀಕರ ಪರಿಣಾಮಗಳನ್ನೆದುರಿಸುವ ಬೆದರಿಕೆಗೆ ಒಳಪಡಿಸಲಾಗುತ್ತದೆ, ಇದೇ ಸಮಯದಲ್ಲಿ ಹೀಗೆ ತೊಡಗಿಕೊಳ್ಳದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರತಿಫಲಗಳ ಆಶ್ವಾಸನೆ ನೀಡಲಾಗುತ್ತದೆ.
ಈ ಸಂಸ್ಥೆಗಳ ಆಡಳಿತದ ದಂಡನಾತ್ಮಕ ಕ್ರಮಗಳಿಗೆ ದಮನಿತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚು ಗುರಿಯಾಗಬಲ್ಲವರೂ ಆಗಿದ್ದಾರೆ. ಹಾಗೂ ರಾಜಕೀಯದಿಂದ ದೂರವಿಡುವಿಕೆಯು, ಈ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವಲಯಗಳ ಕಾರ್ಯವಿಧಾನದೊಂದಿಗೆ ಟೀಕಾತ್ಮಕವಾಗಿ ತೊಡಗಿಸಿಕೊಳ್ಳದಂತೆ, ಅನ್ಯಾಯದ ವಿರುದ್ಧ ಧ್ವನಿಯೇರಿಸದಂತೆ ಮತ್ತು ಒಗ್ಗೂಡದಂತೆ ಮಾಡುತ್ತದೆ. ಇದು ದಮನಿತ ಸಮುದಾಯಗಳ ವಿದ್ಯಾರ್ಥಿಗಳು ಒಂಟಿಯಾಗುವಂತೆ ಮಾಡುತ್ತದೆ.
ಅಧಿಕಾರವುಳ್ಳವರು “ರಾಜಕೀಯವಾಗಿದ್ದ ವಿದ್ಯಾರ್ಥಿಗಳು” ಏನು ಅನುಭವಿಸಿದರೆಂಬ ಉದಾಹರಣೆಗಳೊಂದಿಗೆ, ವಿದ್ಯಾರ್ಥಿಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ತಡೆಯುತ್ತಾರೆ. ದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯದ ವ್ಯಕ್ತಿಗಳ ರಾಜಕೀಯ ಪ್ರಾತಿನಿಧ್ಯ ಈಗಾಗಲೇ ಅತ್ಯಂತ ಕಡಿಮೆಯಿದೆ. ಭಾರತದ ರಾಜಕೀಯದಲ್ಲಿ ಸವರ್ಣೀಯ ವ್ಯಕ್ತಿಗಳ ಪ್ರಾಬಲ್ಯ ಇಂದಿಗೂ ಮುಂದುವರೆದಿದೆ. ಇವರಿಗೆ ದಮನಿತ ಜಾತಿಗಳ ವ್ಯಕ್ತಿಗಳು ಅನುಭವಿಸುವ ಶೋಷಣೆಯ ಕುರಿತು ಬಹುತೇಕ ಬಾರಿ ಸಂವೇದನಾಶೀಲತೆಯನ್ನು ಕಲಿಸಲ್ಪಟ್ಟಿರುವುದಿಲ್ಲ ಹಾಗೂ ಇವರು ಈ ಕುರಿತು ಕಾಳಜಿ ಹೊಂದಿರುವುದಿಲ್ಲ. ಈ ಶಕ್ತಿಗಳು ಒಟ್ಟಿಗೆ ಕೆಲಸ ಮಾಡುತ್ತ ಈ ಸಮುದಾಯದ ವಿದ್ಯಾರ್ಥಿಗಳಲ್ಲಿ ಒಂಟಿಯಾಗಿರುವ ಹಾಗೂ ಅಸಹಾಯಕವಾಗಿರುವ ಭಾವನೆಗಳನ್ನು ಮುಂದುವರೆಯುವಂತೆ ಮಾಡಿ, ಇನ್ನಷ್ಟು ನಿರ್ಬಲವಾಗಿಸುತ್ತವೆ.
ವೈಜ್ಞಾನಿಕ ಮತ್ತು ವಿಜ್ಞಾನವು ಪ್ರಧಾನವಾಗಿರುವ ಸಂಸ್ಥೆಗಳಲ್ಲಿ, ಈ ಶಕ್ತಿಗಳು ಇನ್ನಷ್ಟು ಸ್ಪಷ್ಟವಾಗಿವೆ. ಸ್ವತಂತ್ರ ಸಂಶೋಧಕರಾದ ರಾಶೆಲ್ ಭಾರತಿ ಚಂದ್ರನ್ ಅವರು, ಜಾತೀಯತೆಯುಳ್ಳ ಪ್ರೊಫೆಸರ್‍ಗಳನ್ನು ಪ್ರಶ್ನಿಸುವ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಕೊನೆಯನ್ನು ಕಾಣುತ್ತಿರಬಹುದೆಂದು ಹೇಳಿದರು. ಏಕೆಂದರೆ ವಿಜ್ಞಾನದ ಸಮುದಾಯವು ನಿಕಟವಾಗಿ ಹೆಣೆಯಲ್ಪಟ್ಟಿದೆ ಹಾಗೂ ಒಂದು ವಿಭಾಗವಾಗಿ ವಿಜ್ಞಾನವು ಸುಲಭಕ್ಕೆ ಕ್ಷಮಿಸದ್ದಾಗಿದೆ.
ವಿಜ್ಞಾನವು ಒಂದು ಕಲಿಕೆಯ ವಿಭಾಗವಾಗಿ ತನ್ನನ್ನು ತಾನು ವಸ್ತುನಿಷ್ಠ ಎಂದು ಯೋಚಿಸಿ ಯಾವುದೋ ಮೆರಿಟ್ ಹಾಗೂ ಶ್ರೇಷ್ಠತೆಯ ಕಲ್ಪನೆಗಳಿಗೆ ಮಣೆ ಹಾಕುವುದರಿಂದ ಈ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ನಮ್ಮ ಸಾರ್ವಜನಿಕ ಕಲ್ಪನೆಯಲ್ಲಿ ರಾಜಕೀಯವು ವಿಜ್ಞಾನಕ್ಕೆ ಚ್ಯುತಿಯನ್ನಷ್ಟೇ ನೀಡಬಲ್ಲದು. 2006ರಲ್ಲಿ ಐಐಟಿ ರೂರ್ಕಿಯ 2500 ವಿದ್ಯಾರ್ಥಿಗಳು ಒಂದು ರೆಸಲ್ಯೂಶನ್ ಪತ್ರವನ್ನು ಸಹಿ ಮಾಡಿದ್ದನ್ನೂ ಸೇರಿಸಿ, ಮೀಸಲಾತಿ ವಿರೋಧಿ ಪ್ರತಿಭಟನೆಗಳಿಗೆ ಅತಿ ಹೆಚ್ಚು ಬೆಂಬಲ ವೈಜ್ಞಾನಿಕ ಸಂಸ್ಥೆಗಳಲ್ಲಿನ ವ್ಯಕ್ತಿಗಳಿಂದ ಏಕೆ ಬಂದಿದ್ದೆಂದು ಇದು ವಿವರಿಸುತ್ತದೆ.
ವಾಸ್ತವದಲ್ಲಿ, ವಿಜ್ಞಾನವು ಸಾಮಾಜಿಕ ಹಾಗೂ ರಾಜಕೀಯ ಪೂರ್ವಗ್ರಹಿಕೆಗಳಿಂದ ಹೊರತಾಗಿರುವುದಿಲ್ಲ. ಬ್ರಾಹ್ಮಣರಿಂದ ತುಂಬಿಕೊಂಡದ್ದಕ್ಕೆ ಕುಖ್ಯಾತವಾಗಿರುವ ಐಐಟಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ಹೇಗೆ ಜಾತೀಯತೆಯಿಂದ ತುಳುಕುತ್ತಿವೆಯೆಂದು ಅಧ್ಯಯನಗಳು ಹಾಗೂ ವಿಶ್ಲೇಷಣೆಗಳು ತೋರಿಸಿವೆ.
ಎರಡನೆಯ ಕಾರ್ಯವಿಧಾನ ಉನ್ನತ ಶಿಕ್ಷಣ ವಲಯಗಳಲ್ಲಿ ದಮನಿತ ಜಾತಿಗಳ ವ್ಯಕ್ತಿಗಳ ಪ್ರಾತಿನಿಧ್ಯದ ಕುರಿತಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸವರ್ಣೀಯರು ಅತಿಯಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ತರಗತಿಗಳಲ್ಲಿ ಇವತ್ತು ಒಂದು ಸಣ್ಣ ಭಾಗವಾಗಿಯಾದರೂ ದಮನಿತ ಜಾತಿಗಳ ವಿದ್ಯಾರ್ಥಿಗಳಿದ್ದರೂ, ಅಧ್ಯಾಪಕರ ಕೊಠಡಿಗಳು ಇನ್ನೂ ಸವರ್ಣೀಯ ವ್ಯಕ್ತಿಗಳಿಂದ ತುಂಬಿಕೊಂಡಿವೆ ಎಂಬುದನ್ನು ಪತ್ರಕರ್ತರಾದ ದಿಲೀಪ್ ಮಂಡಲ್ ಅವರು ಒತ್ತಿ ಹೇಳಿದರು. ದ ವೈರ್‍ನ ಒಂದು ವರದಿಯ ಪ್ರಕಾರ ಐಐಟಿಗಳಲ್ಲಿ 3%ಕ್ಕಿಂತಲೂ ಕಡಿಮೆ ಅಧ್ಯಾಪಕರು ಮೀಸಲಾತಿ ವರ್ಗಗಳಿಂದ ಬಂದವರಾಗಿರುತ್ತಾರೆ.
ಈ ರೀತಿಯ ಪ್ರಾಬಲ್ಯ ಬಹಳ ದೂರದೂರದ ಪರಿಣಾಮಗಳನ್ನು ಹೊಂದಿದೆ. ಇದು ಸವರ್ಣೀಯರಲ್ಲಿ ನಿರ್ಭೀತಿಯನ್ನು ಉಂಟುಮಾಡುತ್ತದೆ: ಸವರ್ಣೀಯರಿಗೆ ತಮ್ಮ ಜಾತೀಯತೆಯ ವರ್ತನೆಗಳಿಗೆ ತಮ್ಮನ್ನು ಯಾರೂ ಜವಾಬ್ದಾರಿಗೆ ಒಳಪಡಿಸುವುದಿಲ್ಲ ಎಂಬ ಅರಿವಿದೆ. ತರಗತಿಯಲ್ಲಿ ಏನು ಬೇಕಿದ್ದರೂ ಹೇಳುವ ಮತ್ತು ಮಾಡುವ ಸೀಮಾ ಸಿಂಗ್ ಅವರ ಧೈರ್ಯ ಇದಕ್ಕೆ ಒಂದು ಉದಾಹರಣೆಯಾಗಿದೆ. ಸೀಮಾ ಸಿಂಗ್ ಅವರು ತಮ್ಮ ವಿಡಿಯೋಗಳಲ್ಲಿ , ಅವರು ಹೇಳುವ “ಅಲ್ಪಸಂಖಾತ ಸಮಿತಿ” ಎನ್ನುವುದನ್ನೂ ಒಳಗೊಂಡು, ಯಾರು ಕೂಡಾ ಅವರಿಗೆ ಏನನ್ನೂ ಮಾಡಲಾರರು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಈ ಎರಡನೆಯ ಕಾರ್ಯವಿಧಾನವು ಸಮಾನ ಅವಕಾಶ ಘಟಕಗಳಲ್ಲಿ ಹಾಗೂ ಜಾತಿ-ಆಧಾರಿತ ತಾರತಮ್ಯದ ಆರೋಪಗಳನ್ನು ಪರಿಶೀಲಿಸಲು ಕ್ಯಾಂಪಸ್‍ನಲ್ಲಿ ರಚಿಸುವ ಸಮಿತಿಗಳ ಸಂಯೋಜನೆಯ ಮೇಲೂ ಪರಿಣಾಮ ಹೊಂದಿದೆ. ದಲಿತ್ ವಿಮೆನ್ ಫೈಟ್‍ನ ರಿಯಾ ಸಿಂಗ್ ಅವರು, ಈ ಸಮಿತಿಗಳು ದಮನಿತ ಜಾತಿಗಳಿಂದ ಕೆಲವೇ ವ್ಯಕ್ತಿಗಳನ್ನು ಹೊಂದಿದ್ದು, ಅವರು ಕೂಡ ಮೇಲಾಡಳಿತದಿಂದ “ಸತ್ಯ-ಶೋಧಕ” ಪಾತ್ರದ ಬದಲಾಗಿ “ತಟಸ್ಥ ಸಮಾಧಾನಕಾರ” ಪಾತ್ರವನ್ನು ನಿರ್ವಹಿಸಲು ಅಗಾಧ ಒತ್ತಡ ಮತ್ತು ಪರೀಕ್ಷೆಯಲ್ಲಿರುತ್ತಾರೆ ಎಂದು ವಿವರಿಸಿದರು.
ಇದಕ್ಕೆ ಮೇಲಾಗಿ, ಪತ್ರಕರ್ತರಾದ ಮೇಕ್‍ಪೀಸ್ ಸಿತ್ಲು ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ವಿದ್ಯಾರ್ಥಿಯಾದ ಶಾಲಿನಿ ಮಹಾದೇವ್ ಅವರು ಹೇಳುವಂತೆ, ಒಂದು ತಾರತಮ್ಯವು ಜಾತೀಯತೆಯದ್ದು ಎಂದು “ಸಾಬೀತು” ಮಾಡಲು ದಮನಿತ ಜಾತಿಗಳ ಹಿನ್ನಲೆಯಿರುವ ವ್ಯಕ್ತಿಗಳು ಮೈಲಿಗಟ್ಟಲೆ ಪ್ರಯಾಸ ಕೈಗೊಳ್ಳಬೇಕು. ಇದು ಇಡೀ ಪ್ರಕ್ರಿಯೆಯನ್ನು ಬಹಳ ನಿಧಾನವಾಗಿಸುತ್ತದೆ ಮತ್ತು ಮಾನಸಿಕ ಹಾನಿ ಉಂಟುಮಾಡುತ್ತದೆ. ಈ ರೀತಿಯ ಸಮಿತಿಗಳ ಸಂಯೋಜನೆಯನ್ನು ಬಹುತೇಕ ಬಾರಿ ಸಾರ್ವಜನಿಕರಿಗೆ ಲಭ್ಯವಾಗಿಸದೇ ಇರುವುದು, ಇದನ್ನು ಸುಲಭವಾಗಿಸುವುದಿಲ್ಲ. ಸೀಮಾ ಸಿಂಗ್ ಅವರ ಘಟನೆಯಲ್ಲಿಯೂ, ಐಐಟಿ ಖರಗ್‍ಪುರ್ ಸಿಂಗ್ ಅವರ ಮಾತುಗಳನ್ನು ಪರಿಶೀಲಿಸುವ ಸಮಿತಿಯಲ್ಲಿ ಯಾರು ಕುಳಿತಿದ್ದಾರೆ ಎಂಬುದರ ಬಗ್ಗೆ ಕಿಂಚಿತ್ತೂ ಮಾತನಾಡಿಲ್ಲ.
ಉನ್ನತ ಶಿಕ್ಷಣ ಸಂಸ್ಥೆಗಳು ಜಾತೀಯತೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳುವ ಮೂರನೇಯ ವಿಧಾನ ಮೆರಿಟ್ ಎಂದು ಕರೆಯಲ್ಪಡುವ ಕಾಲ್ಪನಿಕ ಗ್ರಹಿಕೆ. ಇದು ಯಾವ ರೀತಿಯ ಜ್ಞಾನವನ್ನು ಯಾರು ಸೃಷ್ಟಿಸಬಲ್ಲರು ಮತ್ತು ಪಸರಿಸಬಲ್ಲರು ಎನ್ನುವ ನಂಬಿಕೆಗಳನ್ನು ಹುಟ್ಟಿಸುತ್ತದೆ. ಮೀಸಲಾತಿಯನ್ನು , ದಮನಿತ ಜಾತಿಗಳ ಹಿನ್ನಲೆಯುಳ್ಳವರಿಗೆ ಶಿಕ್ಷಣ ಮತ್ತು ಉದ್ಯೋಗದ ಲಭ್ಯತೆಯನ್ನು ಸುಧಾರಿಸುವ ಸರಿಪಡಿಸುವಿಕೆಯ ಕ್ರಮವಾಗಿ ನೋಡದೇ, ಇದು ಮೆರಿಟಾಕ್ರಸಿಯನ್ನು ದುರ್ಬಲಗೊಳಿಸುತ್ತದೆ ಎನ್ನುವ ನಂಬಿಕೆ ವ್ಯಾಪಕವಾಗಿದೆ.
ಮೆರಿಟ್ ಎನ್ನುವುದು ಒಂದು ಯಾದೃಚ್ಛಿಕ ಮತ್ತು ತಾರತಮ್ಯದ ಮಾನದಂಡವಾಗಿದೆ ಎನ್ನಲು ಹಲವು ಪ್ರಬಲ ವಾದಗಳು ಮತ್ತು ಸಾಕ್ಷ್ಯಗಳಿವೆ. ಖಾಂಡೇಕರ್ ಅವರ ಪ್ರಕಾರ ಮರೆಯಲ್ಲಿನ ಹಾಗೂ ಬಹಿರಂಗವಾದ ಜಾತೀಯತೆ ಎರಡೂ “ದಲಿತ ವಿದ್ವಾಂಸರ ಪ್ರಶ್ನಾರ್ಹ ಮೆರಿಟ್” ಎನ್ನುವುದರ ಮುಖಾಂತರ ಕಾಣಿಸಿಕೊಳ್ಳುತ್ತದೆ ಹಾಗೂ ಇದು ಭಾರತದ ಶಿಕ್ಷಣದಲ್ಲಿ ಜಾತಿ ವಿರೋಧಿ ವಿದ್ವತ್ತಿನ ವ್ಯವಸ್ಥಿತ ಜ್ಞಾನಶಾಸ್ತ್ರೀಯ ಅಳಿಸುವಿಕೆಯನ್ನು ಉಂಟು ಮಾಡುತ್ತದೆ.
ಉದಾಹರಣೆಗೆ, ಇಂದಿಗೂ ಪ್ರಸ್ತುತವಾದ ಅವರ ಹಲವು ಪ್ರಗತಿಪರ ಮತ್ತು ಸುಧಾರಕ ವಿಚಾರ ಹಾಗೂ ಸಿದ್ಧಾಂತಗಳ ಹೊರತಾಗಿಯೂ, ಶಾಲಾ ಪಠ್ಯ ಪುಸ್ತಕಗಳಲ್ಲಿ ಆಧುನಿಕ ಭಾರತಕ್ಕೆ ಅಂಬೇಡ್ಕರ್ ಅವರ ಕೊಡುಗೆ “ಭಾರತದ ಸಂವಿಧಾನದ ಪಿತಾಮಹ” ಎನ್ನುವುದಕ್ಕೆ ಸೀಮಿತಗೊಳಿಸಲಾಗಿದೆ. ಖಾಂಡೇಕರ್ ಅವರು ಕೂಡಾ ಹೇಳಿದಂತೆ, ದಮನಿತ ಜಾತಿಗಳ ವಿದ್ಯಾರ್ಥಿಗಳಿಗೆ ಜಾತಿ ವಿರೋಧಿ ಸಾಹಿತ್ಯವನ್ನು ಚರ್ಚಿಸುವುದು ಮುಖ್ಯವಾದ ಮತ್ತು ಅವರಿಗೆ ನೆರವಾಗುವ ಸಂಗತಿಯಾಗಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ಹಾಗೂ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್‍ನ (ಎಎಸ್‍ಎ) ಪ್ರಧಾನ ಕಾರ್ಯದರ್ಶಿಯಾದ ಪ್ರಜ್ವಲ್ ಗಾಯಕ್‍ವಾಡ್ ಅವರು ದಮನಿತ ಜಾತಿಗಳ ವಿದ್ಯಾರ್ಥಿಗಳನ್ನು ಜಾತಿಯಾಧಾರಿತವಲ್ಲದ ವಿಷಯ ಹಾಗೂ ಕಲಿಕೆಗಳ ಜೊತೆಗೆ ಶೈಕ್ಷಣಿಕವಾಗಿ ತೊಡಗಿಕೊಳ್ಳದಿರುವಂತೆ ಧೈರ್ಯಗೆಡಿಸಲಾಗುತ್ತದೆ ಎಂದು ಹೇಳಿದರು. ಈ ರೀತಿಯ ಜ್ಞಾನದ ಕಾವಲುಗಾರಿಕೆಯು ಈ ವಿದ್ಯಾರ್ಥಿಗಳು ಇತರ ವಿಷಯಗಳಿಗೆ ಕೊಡುಗೆ ನೀಡಲು ಅವಕಾಶಗಳನ್ನು ಮಿತಿಗೊಳಿಸುತ್ತದೆ ಮತ್ತು ದಮನಿತ ಜಾತಿಗಳ ವಿದ್ಯಾರ್ಥಿಗಲು ಕೇವಲ ಜಾತಿಯ ಕುರಿತು ಮಾತನಾಡುವ ಹಾಗೂ ಬರೆಯುವ ಸಾಮರ್ಥ್ಯ ಹೊಂದಿರುತ್ತಾರೆ ಎನ್ನುವ ಪೂರ್ವಕಲ್ಪನೆಯನ್ನು ಮತ್ತಷ್ಟು ವರ್ಧಿಸುತ್ತದೆ.
ಈ ರೀತಿಯ ಕ್ಯಾಂಪಸ್‍ಗಳಲ್ಲಿ ನಡೆಯುವ ಜಾತಿ ಆಧಾರಿತ ತಾರತಮ್ಯಗಳಿಂದ ರಕ್ಷಣೆ ನೀಡುವ ಹಾಗೂ ಇವುಗಳಿಗೆ ತಕ್ಕ ಶಿಕ್ಷೆಯನ್ನು ಮಾರ್ಗದರ್ಶಿಸುವ ಅಭಾವ ಶಾಸನಾಂಗ ಮತ್ತು ನ್ಯಾಯಾಂಗದಲ್ಲಿ ಇದೆ ಎಂದು ಪ್ಯಾನೆಲಿಸ್ಟ್ಗಳು ಒಮ್ಮತ ಹೊಂದಿದರು. ಇದೇ ಕಾರಣಕ್ಕಾಗಿ ವೆಮುಲಾ ಅವರ ಸಾವಿನ ನಂತರ ಭಾರತ ಸರ್ಕಾರವು ‘ರೋಹಿತ್ ಕಾಯಿದೆ’ಯನ್ನು ರಚಿಸಬೇಕೆಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದಾರೆ. ದಮನಿತ ಜಾತಿಗಳ ವಿದ್ಯಾರ್ಥಿಗಳಿಗೆ ವಿಮೋಚನೆ ನೀಡಲು ಉದಾಸೀನವಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಒಂದು ಮುಖ್ಯ ಉದಾಹರಣೆಯೆಂದರೆ ಸೀಮಾ ಸಿಂಗ್ ಅವರು ಕಲಿಸಿದಂತಹ ಐಐಟಿಗಳು ಒಂದು ವರ್ಷದ ಪ್ರಿಪರೇಟರಿ ಕೋರ್ಸ್. ಸಿತ್ಲು ಅವರ ಪ್ರಕಾರ, ಈ ಪ್ರಿಪರೇಟರಿ ತರಗತಿಗಳು ದಮನಿತ ಸಮುದಾಯದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿಲ್ಲ, ಬದಲಾಗಿ ಸವರ್ಣೀಯರ ಸ್ವ-ಕಲ್ಪಿತ ಔದಾರ್ಯದ ಪರಿಣಾಮವಾಗಿದೆ ಹಾಗೂ ಅವರ ಸ್ವ-ಪೋಷಣೆಯ ಕಾರ್ಯವಾಗಿದೆ. ಎಷ್ಟರ ಮಟ್ಟಿಗೆ ಪ್ರಿಪರೇಟರಿ ಕೋರ್ಸ್ ತನ್ನ ಉದ್ದೇಶವನ್ನು ಪೂರೈಸುತ್ತದೆ ಎಂದು ತಿಳಿಯಲು ಬೇಸ್‍ಲೈನ್ ಮತ್ತು ಎಂಡ್‍ಲೈನ್ ಸಮೀಕ್ಷೆಯನ್ನು ನಡೆಸುವಂತೆ ಸಿತ್ಲು ಅವರು ಶಿಫಾರಸು ಮಾಡಿದರು.
“ನಾವಿಲ್ಲಿರುವುದು ಸಾಯಲಿಕ್ಕಾಗಿ ಅಲ್ಲ”
ಮಹದೇವ್ ಅವರು ಚರ್ಚೆಯ ವೇಳೆಗೆ ಹೇಳಿದ ಮಾತೊಂದು ಎಲ್ಲರನ್ನೂ ಮುಟ್ಟಿತು, “We are not here to die” (“”ನಾವಿಲ್ಲಿರುವುದು ಸಾಯಲಿಕ್ಕಾಗಿ ಅಲ್ಲ””). ಅವರು ಮತ್ತು ಇತರ ಪ್ಯಾನೆಲಿಸ್ಟ್ಗಳು ಪರಿಸ್ಥಿತಿಯನ್ನು ಸುಧಾರಿಸಲು ವಿಧಾನಗಳನ್ನು ಸೂಚಿಸಿದರು. ಅವರ ಸಲಹೆಗಳ ಸಾರಂಶವೊಂದನ್ನು ಈ ಕೆಳಗೆ ನೀಡಲಾಗಿದೆ:
- ಕ್ಯಾಂಪಸ್‍ಗಳಲ್ಲಿ ಐಕಮತ್ಯ ಮತ್ತು ಸಬಲೀಕರಣದ ಸಲುವಾಗಿ ನಾವು ಬಹುಜನ ನೆಟ್‍ವರ್ಕ್‍ಗಳನ್ನು ಹೆಚ್ಚಾಗಿಸಬೇಕು. ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆ (ಬಿಎಪಿಎಸ್‍ಎ), ಎಎಸ್‍ಎ ಮತ್ತು ಎಪಿಪಿಎಸ್‍ಸಿಯಂತಹ ವಿದ್ಯಾರ್ಥಿ ಸಂಘಟನೆಗಳು ದಮನಿತ ಜಾತಿಗಳ ವಿದ್ಯಾರ್ಥಿಗಳ ಹಕ್ಕಿಗೆ ಹೋರಾಡುವುದಷ್ಟಕ್ಕೇ ಸೀಮಿತವಾಗಿಲ್ಲ. ಅವು ದಮನಿತ ಜಾತಿಗಳ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಐಕಮತ್ಯ ಒದಗಿಸುವ ಬಹುಮುಖ್ಯ ಸ್ಥಳಗಳಾಗಿವೆ.
- ಮೀಸಲಾತಿ ನೀತಿಗಳನ್ನು ಜಾರಿಗೆ ತರಲು ಇನ್ನೂ ದೊಡ್ಡ ರೀತಿಯಲ್ಲಿ ಹಾಗೂ ಬಲವಾದ ರೀತಿಯಲ್ಲಿ ಗಮನ ನೀಡಬೇಕು.
- ಕ್ಯಾಂಪಸ್‍ಗಳಲ್ಲಿ ನಡೆಯುವ ಜಾತಿ-ಆಧಾರಿತ ತಾರತಮ್ಯ ಹಾಗೂ ಕಿರುಕುಳವನ್ನು ನಿರ್ವಹಿಸಲು ನ್ಯಾಯಾತ್ಮಕ ಹಾಗೂ ಆಡಳಿತಾತ್ಮಕ ಕಾರ್ಯವಿಧಾನಗಳಿರಬೇಕು. ಈ ವಿಚಾರವಾಗಿ, ಸರ್ಕಾರವು ‘ರೋಹಿತ್ ಕಾಯಿದೆ’ಯನ್ನು ರಚಿಸುವುದು ಮತ್ತು ಜಾರಿಗೊಳಿಸುವುದು ನಿರ್ಣಾಯಕವಾಗಿದೆ. ದಮನಿತ ಜಾತಿಗಳ ವಿದ್ಯಾರ್ಥಿಗಳಿಗಾಗಿ ಸಮಾನ ಅವಕಾಶ ಘಟಕಗಳಿರಬೇಕು ಹಾಗೂ ಇವುಗಳ ಕಾರ್ಯಸ್ವರೂಪವನ್ನು ಮೇಲ್ವಿಚಾರಿಸಲು ದಮನಿತ ಜಾತಿಗಳ ಹಿನ್ನಲೆಯುಳ್ಳ ಆಡಳಿತಾಧಿಕಾರಿಗಳು ನೇಮಕಗೊಳ್ಳಬೇಕು.
- ದಮನಿತ ಜಾತಿಗಳ ವ್ಯಕ್ತಿಗಳಿಗೆ ನಾವು ಹೆಚ್ಚಿನ ರಾಜಕೀಯ ಬಲವನ್ನು ಒಗ್ಗೂಡಿಸಬೇಕು ಹಾಗೂ ಅಂಬೇಡ್ಕರ್ ತತ್ವದ, ಫುಲೆ ತತ್ವದ ಹಾಗೂ ಪೆರಿಯಾರ್ ತತ್ವದ ರಾಜಕೀಯ ಪಕ್ಷಗಳನ್ನು ಹೆಚ್ಚು ಪ್ರಚಾರಗೊಳಿಸಬೇಕು.
- ಉನ್ನತ ಶಿಕ್ಷಣದ ಜಾಗಗಳಲ್ಲಿ ಜಾತಿ ಮತ್ತು ಜಾತೀಯತೆಯ ಕುರಿತ ಸಂಭಾಷಣೆಗಳನ್ನು ಪ್ರೋತ್ಸಾಹಿಸಬೇಕು.
- ದಮನಿತ ಜಾತಿಗಳ ವಿದ್ಯಾರ್ಥಿಗಳ ಸಾವು ಆದಾಗ ಅಷ್ಟೇ ಅಲ್ಲದೇ ಪ್ರಚಲಿತ ಮಾಧ್ಯಮಗಳು ಮತ್ತು ಪತ್ರಕರ್ತರು ಜಾತಿ ಮತ್ತು ಜಾತೀಯತೆಯ ಕುರಿತು ವರದಿ ಮಾಡಬೇಕು.
- ಸಂಪೂರ್ಣವಾಗಿ ದಮನಿತ-ಜಾತಿಗಳ ವ್ಯಕ್ತಿಗಳಿಂದ ಸಂಯೋಜಿಸಿದ ಎಸ್ಸಿ/ಎಸ್ಟಿ/ಒಬಿಸಿ ಘಟಕಗಳ ರಚನೆಯಾಗಬೇಕು.
- ವಿವಿಧ ದಮನಿತ ಸಮುದಾಯಗಳ ನಡುವೆ ಐಕಮತ್ಯವನ್ನು ನಾವು ಪ್ರೋತ್ಸಾಹಿಸಬೇಕು.
- ಜಾಗತಿಕ ಸ್ಥರದಲ್ಲಿ ಐಕಮತ್ಯವನ್ನು ನಾವು ಪ್ರೋತ್ಸಾಹಿಸಬೇಕು, ಜಾತಿ ಮತ್ತು ಜಾತೀಯತೆಯ ಸಮಸ್ಯೆಗಳನ್ನು ಅಂತರಾಷ್ಟ್ರೀಯಗೊಳಿಸಿ ಜಾಗತಿಕ ಬೆಂಬಲವನ್ನು ಗಳಿಸಬೇಕು.
- ಸವರ್ಣೀಯರು ತಮ್ಮ ಪ್ರಿವಿಲೆಜ್‍ಗಳನ್ನು ಟೀಕಾತ್ಮಕವಾಗಿ ಪರಿಶೀಲಿಸಬೇಕು ಹಾಗು ಪ್ರಶ್ನಿಸಿಕೊಳ್ಳಬೇಕು. ಜಾತಿ ಹಾಗೂ ಜಾತೀಯತೆಯ ಕುರಿತು ಸವರ್ಣೀಯರ ದೊಡ್ಡ ಪ್ರಮಾಣದ ಬರಹವಿದ್ದರೂ, ಅವರು ತಮ್ಮದೇ ಸವರ್ಣೀಯತೆಯನ್ನು ಪರೀಕ್ಷಿಸಲು ಈ ಸಮಯ ತುರ್ತಿನದ್ದಾಗಿದೆ.
ಬರಹಗಾರರು ಈ ವರದಿಯನ್ನು ರಚಿಸಲು ಬಿಶಾಲ್ ಕುಮಾರ್ ಡೇ, ವೈಶಾಲಿ ಖಾಂಡೇಕರ್, ಪ್ರಜ್ವಲ್ ಗಾಯಕ್‍ವಾಡ್ ಮತ್ತು ಶಾಲಿನಿ ಮಹದೇವ್ ಅವರೊಡನೆ ಚರ್ಚೆ ಸಹಾಯವಾಗಿದ್ದು, ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಲೇಖನದ ಮೂಲ ಇಂಗ್ಲಿಷ್‍ನಲ್ಲಿ ದ ವೈರ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಅನುವಾದ: ಸುಬ್ರಮಣ್ಯ
ಕ್ವೀರ್-ಟ್ರಾನ್ಸ್ ವಿಜ್ಞಾನ ಬರಹಗಾರರು, ಸಂವಹನಕಾರರು ಮತ್ತು ಪತ್ರಕರ್ತರು. ಅವರು ಪ್ರಸ್ತುತ ಮಹಿಳಾವಾದಿ ಬಹುಮಾಧ್ಯಮ ವಿಜ್ಞಾನ ಸಮೂಹವಾದ TheLifeofScience.com ಅವರೊಡನೆ ಕೆಲಸ ಮಾಡುತ್ತಿದ್ದಾರೆ.
ತುಳು ಭಾಷೆ,ಯ ಕುರಿತಾದ ವಸ್ತುನಿಷ್ಟ ಪರಿಶೀಲನೆ.