ತುಳು ಚಳುವಳಿಯ ಹಿನ್ನಲೆ – ೧ : ಪಣಿಯಾಡಿಯವರ ತುಳು ಚಳುವಳಿ

ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಆಗ್ರಹ ತುಳುನಾಡಿನಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ತುಳು ಭಾಷಿಕರ ನಡುವೆ ದ್ವೇಷ ಪೂರಿತ ಸಂಬಂಧ ಹುಟ್ಟುತ್ತಿರುವ ಆತಂಕಕಾರಿ ಬೆಳವಣಿಗೆಗೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ, ಸಾಮಾಜಿಕ ಜಾಲತಾಣಗಳಲ್ಲಿ ಭಾಷೆ ಮತ್ತು ಸಂಸ್ಕೃತಿಗಳೆಂಬ ಗಂಭೀರ ವಿಚಾರಗಳು ಪರಸ್ಪರ ಕಿತ್ತಾಡಿಕೊಳ್ಳಲು ಬಳಕೆಯಾಗುತ್ತಿವೆ, ಭಾಷೆಯ ರಾಜಕಾರಣ ಹೇಗೆ ಭಾರತೀಯ ರಾಜಕಾರಣವನ್ನು ಪ್ರಭಾವಿಸುತ್ತವೆ ಎಂಬುದು ನಮಗೆಲ್ಲಾ ತಿಳಿದಿದೆ. ಹೊಸ ಮಾಧ್ಯಮ ತಂತ್ರಜ್ಞಾನಗಳ ಕಾಲದಲ್ಲಿ ಸಂದರ್ಭದಲ್ಲಿ ಭಿನ್ನ ಸ್ವರೂಪವನ್ನು ಪಡೆದುಕೊಂಡು ಇನ್ನಷ್ಟೂ ವಿಷಪೂರಿತವಾಗುತ್ತದೆ. ಭಾಷಿಕ ರಾಜಕಾರಣವು ದ್ವೇಷದ ರಾಜಕಾರಣವಾಗುತ್ತದೆಯೇ ಹೊರತು ಭಾಷೆ ಬೌದ್ದಿಕ, ಸಾಹಿತ್ಯಿಕ ಮತ್ತು ಚಾರಿತ್ರಿಕ ಹಿರಿಮೆಯನ್ನು ಪರಸ್ಪರ ಅರ್ಥಮಾಡಿಕೊಳ್ಳುವ ಚರ್ಚೆಯಾಗುತ್ತಿಲ್ಲ. ಈ ಸಂದರ್ಭದಲ್ಲಿ ತುಳು ಚಳುವಳಿ ಮತ್ತು ಕನ್ನಡ-ತುಳುವಿನ ಸಂಬಂಧವನ್ನು ಅವಲೋಕಿಸುವ ಪ್ರಯತ್ನವನ್ನು ಚರಣ್ ಐವರ್ನಾಡ್ ಬರೆಯುವ ಈ ಸರಣಿ ಮಾಡುತ್ತದೆ.

ತುಳು ಚಳುವಳಿ ೧೯೨೮ರಲ್ಲಿ ಉಡುಪಿಯಲ್ಲಿ ಎಸ್‌ ಯು ಪಣಿಯಾಡಿಯವರ ನೇತೃತ್ವದಲ್ಲಿ ಆರಂಭವಾಗಿ ೧೯೪೮ರ ಸಮಯದಲ್ಲಿ ನಿಂತುಹೋಗುತ್ತದೆ. ೧೯೨೮ರಲ್ಲಿ ಪಣಿಯಾಡಿಯವರು ಉಡುಪಿಯಲ್ಲಿ ತುಳುವ ಮಹಾಸಭೆಯನ್ನು ಸ್ಥಾಪಿಸಿದರು. ಇವರ ಜೊತೆಗೆ ನಿಂತವರು ತುಳು ವಿದ್ವಾಂಸ ಅಮ್ಮುಂಜೆ ಶೀನಪ್ಪ ಹೆಗ್ಗಡೆಯವರು (ಪೊಳಲಿ ಶೀನಪ್ಪ ಹೆಗ್ಗಡೆ) ೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮರುವರ್ಷವೇ ತುಳುವ ಮಹಾಸಭೆ ಸ್ತಾಪನೆಗೊಂಡಿತು. ಇದರ ಜೊತೆಗೆ ತುಳು ಪುಸ್ತಕಗಳ ಪ್ರಕಟಣೆಗಾಗಿ ʼತುಳುವ ಸಾಹಿತ್ಯಮಾಲೆʼ ಆರಂಭವಾಯಿತು.
ತುಳುವ ಸಾಹಿತ್ಯಮಾಲೆಯ ಮೊದಲ ಪುಸ್ತಕ ಬಡಕಬೈಲು ಪರಮೇಶ್ವರಯ್ಯನವರ ʼಕಿಟ್ನರಾಜಿ ಪರ್ಸಂಗʼ. ಇವರು ಸಂಸ್ಕೃತ ಕೃತಿ ಬಜಗೋವಿಂದಂ ಅನ್ನು ಕನ್ನಡ ಮತ್ತು ತುಳುವಿಗೆ ಅನುವಾದಿಸಿದರು. ಇದರ ಜೊತೆ ಸ್ವಾತಂತ್ರ್ಯ ಹೋರಾಟಗಾರ ಎನ್‌ ಎಸ್‌ ಕಿಲ್ಲೆಯವರ ʼಕಾನಿಗೆʼ, ಪೊಳಲಿ ಶೀನಪ್ಪ ಹೆಗ್ಗಡೆಯವರ ಮಿತ್ಯನಾರಾಯಣ ಕತೆ, ತುಳುವಾಲ ಬಲಿಯೇಂದ್ರ, ಬಂಗಾರ್ದಂಗಿದ ಕತೆ ಪುಸ್ತಕಗಳು ಪ್ರಕಟವಾದವು. ಪಣಿಯಾಡಿಯವರು ತುಳುವಿನ ಮೊದಲ ಕಾದಂಬರಿ ʼಸತೀ ಕಮಲೆʼ ಬರೆದರು. ಕಲ್ಲೆಯವರು ತಮ್ಮ ರಾಷ್ಟ್ರೀಯ ಚಳುವಳಿ ಹೋರಾಟಗಳನ್ನು ತುಳುವಿನಲ್ಲಿಯೇ ಮಾಡುತ್ತಿದದ್ದರು.

ಎಸ್‌ ಯು ಪಣಿಯಾಡಿಯವರು ೧೯೩೦ರಲ್ಲಿ ಬರೆದ In Defence of a Tulunad Province ಲೇಖನದಲ್ಲಿ ತುಳುವಿಗೆ ಪ್ರತ್ಯೇಕ ರಾಜ್ಯ ಏಕೆ ಬೇಕು ಎಂಬುದನ್ನು ವಿವರಿಸುತ್ತಾರೆ. ಅವಿಭಜಿತ ಕೆನರಾ ಜಿಲ್ಲೆಯ ಬಹುಸಂಖ್ಯಾತರ ತಾಯಿನುಡಿ ತುಳು ಎಂಬ ಕಾರಣಕ್ಕೆ ತುಳುನಾಡು ಪ್ರಾಂತ್ಯದ ರಚನೆಯನ್ನು ನಾನು ಬೆಂಬಲಿಸುತ್ತೇನೆ ಎನ್ನುತ್ತಾರೆ. ಪಣಿಯಾಡಿಯವರು ತುಳುನಾಡು ಎಂಬ ಪದವೇ ಕೆಲವು ಚಳುವಳಿಕಾರರ ಕೃತಕ ಸೃಷ್ಟಿ ಎಂಬ ವಾದವನ್ನು ಅಲ್ಲಗೆಳೆಯುತ್ತಾರೆ. ೧೯೨೧ರ ಜನಗಣತಿಯ ಪ್ರಕಾರ ತುಳುವರ ಸಂಖ್ಯೆ ೫ ಲಕ್ಷದ ೩೦ ಸಾವಿರ ಮತ್ತು ಕನ್ನಡ, ಕೊಂಕಣಿ, ಮಲಯಾಳ ಭಾಷೆಯಾಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯೇ ಹೊರತು ತುಳುವರ ಸಂಖ್ಯೆ ಏರುತ್ತಿಲ್ಲ ಎನ್ನುತ್ತಾರೆ. ಇದಕ್ಕೆ ಅವರು ಕೊಡುವ ಕಾರಣಗಳೆಂದರೆ ೧.ಹೊರನಾಡಿನಲ್ಲಿ ತುಳುವರು ಕನ್ನಡಿಗರೆಂದು ಕರೆಸಿಕೊಳ್ಳುವುದು, ೨. ಮನೆಯಲ್ಲಿ ತುಳುವಿನಲ್ಲಿ ವ್ಯವಹರಿಸದೇ ಇರುವುದು, ೩.ಬಾಸೆಲ್‌ ಮಿಷನ್‌ ಹೆಸರು ʼಕರ್ನಾಟಕ ಮಿಷನ್‌ʼ ಎಂದು ಮರುನಾಮಕರಣಗೊಂಡ ಮೇಲೆ ತಾಯಿನುಡಿಯನ್ನು ತುಳುವಿನಿಂದ ಕನ್ನಡಕ್ಕೆ ಬದಲಾಯಿಸಿಕೊಂಡದ್ದು, ೪.ತುಳುವರು‌ ರೋಮನ್ ಕ್ಯಾಥೋಲಿಕ್‌ ಆಗಿ ಪರಿವರ್ತನೆ ಹೊಂದಿ ಕೊಂಕಣಿಯನ್ನೂ, ಇಸ್ಲಾಂಗೆ ಮತಾಂತರಗೊಂಡು ಉರ್ದು ಮತ್ತು ಮಲಯಾಳಂಗೆ ಬದಲಾಗಿರುವುದು.
ಕೇವಲ ಸಾಂಸ್ಕೃತಿಕ ಹಿನ್ನಲೆಯಿಂದ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಇಡದೆ ಬ್ಯಾಂಕಿಂಗ್‌, ಆಮದು-ರಪ್ತು ವ್ಯವಹಾರ, ವಿಮೆ ಮೊದಲಾದ ಕ್ಷೇತ್ರಗಳಲ್ಲಿ ಮುಂದುವರೆದಿದ್ದ ತುಳುನಾಡು ಆರ್ಥಿಕವಾಗಿ ತುಳುನಾಡು ಸ್ವತಂತ್ರವಾಗುವಷ್ಟು ಸಬಲವಾಗಿದೆ ಎಂದು ಪಣಿಯಾಡಿಯವರು ವಾದಿಸುತ್ತಾರೆ.

ಪಣಿಯಾಡಿಯವರಿಗೆ ತುಳು ಚಳುವಳಿಯನ್ನು ಹಾದಿ ತಪ್ಪಿಸುತ್ತಿರುವವರ ಬಗ್ಗೆ ಅರಿವಿತ್ತು. ತಮ್ಮ In Defence of a Tulunad Province ಲೇಖನವನ್ನು ತುಳು ಭಾಷೆ- ಸಂಸ್ಕೃತಿಯ ಪುನರುಜ್ಜೀವನ ಅರ್ಥಹೀನ ಮತ್ತು ಶಕ್ತಿಯ ದುರುಪಯೋಗ, ಈ ಶಕ್ತಿಯನ್ನು ಜನೋಪಕಾರಿ ಕನ್ನಡದ ಅಭಿವೃದ್ದಿಗೆ ಬಳಸಿಕೊಳ್ಳಬೇಕು ಎಂಬ ವಾದದ ಪೊಳ್ಳುತನವನ್ನು ಬಯಲಿಗೆ ತರಲು ಬರೆದಿದ್ದೇನೆ ಎನ್ನುತ್ತಾರೆ.

ಪಣಿಯಾಡಿಯವರು ಕೆನರಾ ಜಿಲ್ಲೆಗೆ ʼಅವಿಭಜಿತ ದ.ಕ ತುಳುನಾಡುʼ ಎಂಬ ಹೆಸರಿಡುವ ಪ್ರಸ್ತಾಪವನ್ನು ಕಾಂಗ್ರೇಸ್‌ ಸಭೆಯಲ್ಲಿ ಮಂಡಿಸುವಾಗ ಅದಕ್ಕೆ ಬೆಂಬಲ ಸಿಗಲಿಲ್ಲ. ಇವರು ಮದರಾಸಿಗೆ ಹೋದ ನಂತರ ತುಳುವ ಮಹಾಸಭೆಯನ್ನು ಶೀನಪ್ಪ ಹೆಗ್ಗಡೆಯವರು ಸಂಸ್ಥೆಯನ್ನು ಪೊಳಲಿಗೆ ಸ್ಥಳಾಂತರಿಸಿ ೧೯೪೮ರ ತನಕ ಅದರ ಕಾರ್ಯಾಧ್ಯಕ್ಷರಾಗಿ ಮುನ್ನಡೆಸಿದರು.

ಎಸ್‌ ಯು ಪಣಿಯಾಡಿ

ಪಣಿಯಾಡಿಯವರಿಗೆ ತುಳುವಿನಲ್ಲಿ ಸಾಹಿತ್ಯವಿಲ್ಲ ಎಂಬ ಅಪಪ್ರಚಾರದ ಬಗ್ಗೆ ಅಸಮಧಾನವಿತ್ತು. ತುಳುವಿಗೆ ಸಮೃದ್ದವಾದ ಸಾಹಿತ್ಯವಿದೆ ಎನ್ನುತ್ತಾ ಬೆಳೆಯುತ್ತಿರುವ ತುಳುವಿಗೆ ಪ್ರತಿರೋಧ ಒಡ್ಡುವುದು ಅನ್ಯಾಯ ಎಂದು ಟೀಕಿಸುತ್ತಾರೆ. ಮಲಯಾಳಂನ ಉದಾಹರಣೆ ನೀಡುತ್ತಾ ಆ ಭಾಷೆಗೆ ಹೇಗೆ ಕಳೆದ ಒಂದು ಶತಮಾನದಿಂದ ಸಾಹಿತ್ಯಿಕವಾಗಿ ಬೆಳೆಯಿತು ಎಂದು ತುಳುವನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಅವರು ತುಳುವ ಸಾಹಿತ್ಯ ಮಾಲೆ ಪ್ರಕಾಶನವನ್ನು ಆರಂಭಿಸಿದರು. ಇದರ ಅಡಿಯಲ್ಲಿ ತುಳುವಿನ ಸಾಲು ಸಾಲು ಕೃತಿಗಳು ಪ್ರಕಟವಾದವು. ಹೀಗೆ ಆರಂಭವಾದ ತುಳು ಚಳುವಳಿ, ಪ್ರತ್ಯೇಕ ರಾಜ್ಯದ ಬೇಡಿಕೆಗಳು ಕಾಲಾಂತರದಲ್ಲಿ ತಣ್ಣಗಾದರೂ ತುಳುವಿನಲ್ಲಿ ಬರಹಗಳು, ಸಂಶೋಧನೆಗಳು, ಪುಸ್ತಕಗಳು ಬಂದವು. ತುಳು ಭಾಷೆ, ಸಂಸ್ಕೃತಿ ಮತ್ತು ಚರಿತ್ರೆಯ ಬಗ್ಗೆ ವ್ಯಾಪಕ ಚರ್ಚೆಗಳಾದವು.

೧೯೩೬ರಲ್ಲಿ ಎ ಬಿ ಶೇಟ್ಟಿಯವರು ತಮ್ಮ ನವಯುಗ ಪತ್ರಿಕೆಯಲ್ಲಿ ತಿಂಗಳಿಗೊಂದು ಪುರವಣಿಯನ್ನು ಮೂರು ವರ್ಷಗಳ ಕಾಲ ಪ್ರಕಟಿಸಿದರು. ಬಾಸೆಲ್‌ ಮಿಷನ್‌ ವಿದ್ವಾಂಸರು ಮತ್ತು ಬ್ರಿಟೀಷ್‌ ಸಂಶೋಧಕರು ತುಳುವಿನ ಸಂಸ್ಕೃತಿ ಮತ್ತು ಚರಿತ್ರೆಯ ಅಧ್ಯಯನದಲ್ಲಿ ತಳೆದ ಆಸಕ್ತಿ ಮತ್ತು ಬರಹಗಳಿಂದ ಪ್ರಭಾವಿತರಾಗಿ ತುಳುನಾಡಿನ ಚರಿತ್ರೆಯನ್ನು ಬರೆಯುವ ದೇಸೀ ಚರಿತ್ರೆಕಾರರು ಹುಟ್ಟಿಕೊಂಡರು. ಶೀನಪ್ಪ ಹೆಗ್ಗಡೆ, ಗಣಪತಿ ರಾವ್‌ ಐಗಳ್‌, ಗೋವಿಂದ ಪೈ ಮೊದಲಾದವರು ತುಳುನಾಡಿನ ಚರಿತೆಯನ್ನು ಬರೆದರು. ಇವೆಲ್ಲವೂ ಚರಿತ್ರೆಯನ್ನು ಬರೆಯವ ಇಂದಿನ ಶಿಸ್ತಬದ್ದ ಅಕಾಡೆಮಿಕ್ ಮಾನದಂಡಗಳ ಮೂಲಕ ನೋಡುವ ಕ್ರಮದ ಹೊರತಾಗಿ ಒಳ್ಳೆಯ ದಾಖಲೀಕರಣವಾಗಿ ಮತ್ತು ಮುಂದಿನ ಚರಿತ್ರೆಕಾರರಿಗೆ ಅಧ್ಯಯನ ನಡೆಸಲು ಮಾರ್ಗ ಹಾಕಿಕೊಟ್ಟವು. ಈ ಪರಂಪರೆಯನ್ನು ಮುಂದುವರಿಸಿದವರು ಅಕಾಡಮಿಕ್‌ ಹಿನ್ನಲೆಯಿಂದ ಬಂದ ಪಾದೂರು ಗುರುರಾಜ ಭಟ್‌, ಬಿ ಎ ಸಾಲೆತ್ತೂರು ಮೊದಲಾದ ವಿದ್ವಾಂಸರು.

ತುಳು ಚಳುವಳಿ ತುಳು ನಾಟಕಗಳಿಗೆ ಪ್ರೋತ್ಸಾಹ ನೀಡಿತು. ತುಳುವಿನ ಮೊದಲ ನಾಟಕ ಯಾವುದೆಂಬುದು ನಮಗೆ ತಿಳಿದಿಲ್ಲದೇ ಇದ್ದರೂ ʼಉಪದೇಶದ ದಾಟಿ” ಎಂಬ ಸಾಮಾಜಿಕ ನಾಟಕ ಅವುಗಳಲ್ಲಿ ಒಂದು. ಆದರೆ ಇದರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚರ್ಚೆಯಲ್ಲಿದ್ದ ವರದಕ್ಷಿಣೆ, ಮದ್ಯಪಾನ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದ ವಿರುದ್ದ ಹೋರಾಡುವ ನಾಯಕ ʼರಮಾನಂದʼ ನಲ್ಲಿ ಗಾಂಧೀ ಪ್ರಭಾವ ಮತ್ತು ರಾಷ್ಟ್ರೀಯತೆಯ ಗ್ರಹಿಕೆಯನ್ನು ಗುರುತಿನಲಾಗಿದೆ. ೧೯೩೩ರಲ್ಲಿ ಪಣಿಯಾಡಿಯವರ ಪ್ರಕಾಶನದಲ್ಲಿ ಪ್ರಕಟವಾದ ಮಾಧವ ತಿಂಗಳಾಯರ ನಾಟಕ ʼಜನಮರ್ಲ್‌ʼ ನಾಟಕ ತುಳುವಿನಲ್ಲಿ ಪುಸ್ತಕವಾಗಿ ಪ್ರಕಟವಾದ ಮೊದಲ ನಾಟಕ. ಇದರ ನಂತರ ಇನ್ನೂರ ಆರಕ್ಕೂ ಅಧಿಕ ನಾಟಕಗಳು ಪುಸ್ತಕಗಳಾಗಿ ಪ್ರಕಟವಾದವು. ಪಣಿಯಾಡಿಯವರು ನೂರಾರು ನಾಟಕಗಳನ್ನು ತಮ್ಮ ಪ್ರಕಾಶನದಿಂದ ಪ್ರಕಟಿಸಿದರು. ಅಸಂಖ್ಯಾತ ನಾಟಕಗಳು ಪ್ರದರ್ಶನಗೊಂಡವು. ʼಬಂಗುಡೆ ಮದಿಮಾಯೆ ಬೂತಾಯಿ ಮದಿಮಾಳ್‌ ತೋಡುಡೆ ಪೋನಗ….ʼ ಎಂಬ ಹಾಡಿನ ಖ್ಯಾತಿಯ ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರು ನಾಟಕಗಳನ್ನು ತುಳು ಪ್ರದೇಶದ ವ್ಯಾಪ್ತಿಯನ್ನು ಮೀರಿ ಪ್ರದರ್ಶಿಸಿದರು. ವಿಶುಕುಮಾರ್‌, ಕೆ ಎನ್‌ ಟೈಲರ್‌, ಮಚ್ಚೇಂದ್ರನಾಥ್‌, ಎಂ ಎಸ್‌ ಇಬ್ರಾಹಿಂ, ಸೀತಾರಮ್‌ ಕುಲಾಲ್‌ ಮೊದಲಾದವರು ನಾಟಕಕಾರರ ನಾಟಕಗಳು ತುಳುನಾಡಿನಾದ್ಯಂತ ಪ್ರಚಾರದಲ್ಲಿದ್ದವು, ತುಳುವನ ಮನೆಯಲ್ಲಿ ಇವುಗಳ ಕ್ಯಾಸೆಟ್‌ ಗಳು, ನಾಟಕದ ಪುಸ್ತಕಗಳು ಬಂದವು. ಶಾಲಾ ವಾರ್ಷಿಕೋತ್ಸವ, ಜಾತ್ರೆ, ಯುಕ ಸಂಘಗಳು ಮೊದಲಾದೆಡೆ ತುಳು ನಾಟಕಗಳು ಅಬ್ಬರ ಮಾಡಿದವು.

ತುಳು ನಾಟಕಗಳ ಜನಪ್ರಿಯತೆ ತುಳು ಸಿನೇಮಾಗಳ ಹುಟ್ಟಿಗೆ ಕಾರಣವಾಯಿತು. ೧೯೭೧ರಲ್ಲಿ ಕೊಡಗಿನ ಎಸ್‌ ಆರ್‌ ರಾಜನ್‌ ಅವರು ತುಳುನಾಡಿನ ಸ್ನೇಹಿತರನ್ನು ಸೇರಿಸಿಕೊಂಡು ತುಳು ನಾಟಕ ಕಲಾವಿದರನ್ನು ಬಳಸಿಕೊಂಡು ಆಗಾಗಲೇ ಜನಪ್ರಿಯವಾಗಿದ್ದ ʼಎನ್ನ ತಂಗಡಿʼ ನಾಟಕವನ್ನು ಸಿನೇಮಾ ಮಾಡಿದರು. ಈ ಚಿತ್ರ ಜ್ಯೋತಿ ಥಿಯೇಟರ್‌ ನಲ್ಲಿ ಎರಡು ವಾರಗಳ ಕಾಲ ಓಡಿತು. ಮುಂದೆ ಕೆ ಎನ್‌ ಟೇಲರ್‌ ಅವರ ʼದಾರೆದ ಬುಡೆದಿʼ (೧೯೭೧)ಶರವು ಪಿಕ್ಚರ್ಸ್‌ ಬ್ಯಾನರ್‌ ನ ಅಡಿ ನಿರ್ಮಿಸಲಾಯಿತು. ಲೀಲಾವತಿ ಅಭಿನಯದ ಈ ಚಿತ್ರ ರೂಪವಾಣಿ ಥಿಯೇಟರ್‌ ನಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಐದು ಶೋ ನೀಡಿ ದಾಖಲೆ ನಿರ್ಮಿಸಿತು. ಮುಂದೆ ಆರೂರು ಪಟ್ಟಾಭಿ, ಶಮೀನ್‌ ಮತ್ತು ಅನ್ಸರ್‌ ಬೇಗಂ, ವಿಶುಕುಮಾರ್‌ ಮೊದಲಾದ ನಿರ್ದೇಶಕರು ಚಲನಚಿತ್ರಗಳನ್ನು ನಿರ್ಮಿಸಿದರು. ೧೯೭೩ರ ಜೂನ್‌ ೧೫ರಂದು ಜ್ಯೋತಿ ಥಿಯೇಟರ್‌ ನಲ್ಲಿ ಬಿಡುಗಡೆಯಾದ ʼಕೋಟಿ ಚೆನ್ನಯʼ ಸಿನೇಮಾ ೧೨೪ ದಿನಗಳ ಕಾಲ ದಾಖಲೆಯ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು. ಮಿನುಗು ತಾರೆ ಕಲ್ಪನಾ ಅಭಿನಯದ ಈ ಚಿತ್ರದ ಕೋಟಿ ಮತ್ತು ಚೆನ್ನಯ ಜೋಡಿ ಸುಭಾಷ್‌ ಪಡಿವಾಳ ಮತ್ತು ವಾಮನ್‌ ರಾಜ್‌ ಜೋಡಿಯನ್ನು ತುಳುನಾಡು ಇನ್ನೂ ಮರೆತಿಲ್ಲ! ಈ ಚಿತ್ರವನ್ನು ಸರಿ ಸುಮಾರು ಒಂದು ಹದಿನೈದು ವರ್ಷಗಳ ತನಕ ಶಾಲೆಗಳಲ್ಲಿ ಸೆಲ್ಯಲಾಯಿಡ್‌ ರೀಲ್‌ ಬಳಸಿ ಮಕ್ಕಳಿಗೆ ತೋರಿಸಲಾಗುತ್ತಿತ್ತು. ಮುಂದೆ ಬಂದ ಸಾಲು ಸಾಲು ಸಿನೇಮಾಗಳು ಬಂದರೂ ಮಧ್ಯೆ ಕೊಂಚ ವಿರಾಮ ಸ್ಥಗಿತವಾದರೂ ಇಂದು ತುಳು ಚಲನಚಿತ್ರ ರಂಗ ಬೆಳೆಯುತ್ತಿದೆ.

ತುಳು ಭಾಷೆಗೆ ಪ್ರತ್ಯೇಕ ರಾಜ್ಯವನ್ನು ನೀಡಬೇಕು ಎಂಬ ಪಣಿಯಾಡಿಯವರ ಹೋರಾಟ ಪ್ರತ್ಯೇಕ ರಾಜ್ಯವನ್ನು ಕಟ್ಟುವ ಮಟ್ಟಿಗೆ ಬೆಳೆಯದೇ ಇದ್ದರೂ ತುಳುವಿನಲ್ಲಿ ಸೃಜನಶೀಲ ಮತ್ತು ಬೌದ್ಧಿಕ ಚಟುವಟಿಕೆಗೆ ನಾಂದಿಯಾಯಿತು. ಇಂದು ತುಳುವರು ಮತ್ತು ಕನ್ನಡಿಗರ ನಡುವೆ ಹುಟ್ಟುತ್ತಿರುವ ಘರ್ಷಣೆಯ ಸ್ವರೂಪ ಸಣ್ಣದೇ ಆಗಿದ್ದರೂ ಇದು ಮುಂದೆ ಬೆಳೆಯುವ ಲಕ್ಷಣಗಳನ್ನು ಹೊಂದಿದೆ. ಸದ್ಯದ ಹೋರಾಟಗಳು ತುಳುವಿನಲ್ಲಿ ವೈಚಾರಿಕವಾಗಿ ಮತ್ತು ಸಾಹಿತ್ಯಿಕವಾಗಿ ಪ್ರಕಟವಾಗುವ ಲಕ್ಷಣಗಳನ್ನು ಹೊಂದಿಲ್ಲ. ಇವು ವ್ಯಕ್ತವಾಗುವ ಸ್ವರೂಪಗಳು ಸಾಮಾಜಿಕ ಜಾಲತಾಣಗಳ ಮೂಲಕ ಆರಂಭವಾಗುವಾಗ ಅದಕ್ಕೆ ಪೂರಕವಾಗಿ ಹೋರಾಟಕ್ಕೆ ಸಾಹಿತ್ಯಗಳು ರಚನೆಗೊಳ್ಳುತ್ತಿವೆ. ಹೀಗೆ ಹುಟ್ಟಿಕೊಳ್ಳುವ ಹೋರಾಟಗಳು ಎಷ್ಟು ದಿನಗಳ ತನಕ ಬಾಳಿಕೆ ಬರಲಿವೆ ಎಂಬುದು ಪ್ರಶ್ನಾರ್ಹ!

ಪೊಳಲಿ ಶೀನಪ್ಪ ಹೆಗ್ಗಡೆ

ಕಳೆದ ಒಂದು ದಶಕಗಳಿಂದ ಈಚೆಗೆ ತುಳುವಿನಲ್ಲಿ ನಡೆಯುತ್ತಿದ್ದ ಸಂಶೋಧನಾ ಚಟುವಟಿಕೆಗಳು, ಅಕಾಡೆಮಿಕ್‌ ಚರ್ಚೆಗಳು ಸ್ಥಗಿತವಾದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕರಾವಳಿಯಲ್ಲಿ ಬೆಳೆಯುತಿರುವ ವಿಷಕಾರಿ ರಾಜಕೀಯ ವಾತಾವರಣ. ಕಳೆದ ಐದು ದಶಕಗಳನ್ನೇ ತೆಗೆದುಕೊಂಡರೂ ತುಳುವಿನಲ್ಲಿ ಅಪೂರ್ವ ವಿದ್ವಾಂಸರು ಬಂದಿದ್ದಾರೆ. ತುಳುವಿನ ಜಾನಪದ, ಚರಿತ್ರೆ, ಯಕ್ಷಗಾನ ಮೊದಲಾದ ವಿಚಾರಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಹಾನ್‌ ವಿದ್ವಾನ್‌ ಪರಂಪರೆ ತುಳುವಿನಲ್ಲಿದೆ. ಈ ಎಲ್ಲಾ ಚರ್ಚೆಗಳು ಮೂಲೆಗೆ ಸರಿದು ಹುಟ್ಟಿಕೊಳ್ಳುತಿರುವ ತುಳುವಿನ ಚಳುವಳಿಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಅನುಮಾನವಿದೆ. ಇಂದಿನ ʼಒಡೆದು ಆಳುವʼ ಮತ್ತು ಕೋಮು ರಾಜಕಾರಣದ ಪ್ರಭಾವ ಇಂದಿನ ತಲೆಮಾರನ್ನು ಆಳವಾಗಿ ಪ್ರಭಾವಿಸಿದ ಫಲವಾಗಿ ತುಳುವಿನ ಹೋರಾಟವೂ ಅದೇ ಹಾದಿಯನ್ನು ಅನುಸರಿಸುವ ಭಯವನ್ನು ಹುಟ್ಟುಹಾಕಿದೆ. ತುಳು ಭಾಷೆಯ ಬಗೆಗಿನ ಚರ್ಚೆ ಹಿಂದೆ ಸರಿಯಲು, ಸೃಜನಶೀಲ ಚಟುವಟಿಕೆಗಳು ಕುಂಠಿತವಾಗಲು ಇಲ್ಲಿ ಆಳವಾಗಿ ಬೇರೂರಿದ ಕೋಮುವಾದವೇ ಕಾರಣ.

ಪಣಿಯಾಡಿಯವರಿಗೆ ಇದರ ಅರಿವು ಇದ್ದಂತ್ತಿತ್ತು. “ತುಳು ಚಳುವಳಿಗೆ ಮತೀಯ ಬಣ್ಣ ಹಚ್ಚಲಾಗುತ್ತಿದೆ. ತುಳು ಭಾಷೆ ಯಾವುದೇ ಮತದಾರರ ಗುತ್ತಿಗೆ ಅಲ್ಲ. ಬ್ರಾಹ್ಮಣರು, ಹಿಂದುಗಳು, ಹಿಂದುವೇತರರು ತಮ್ಮ ದಿನನಿತ್ಯದ ವ್ಯವಹಾರವನ್ನು ಈ ಭಾ಼ಷೆಯಲ್ಲಿ ನಡೆಸುತ್ತಾರೆ. ಇದು ಮತೀಯ ಚಳುವಳಿ ಅಲ್ಲ; ಭಾಷಾ ಚಳುವಳಿ ಎಂಬುದನ್ನು ಎಲ್ಲರ ಗಮನಕ್ಕೆ ತರುತ್ತಿದ್ದೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕೋಮುವಾದದ ಪ್ರಭಾವ ದಟ್ಟವಾಗಿ ಹರಡಿರುವ ಕರಾವಳಿಯಲ್ಲಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ರಾಜಕೀಯ ನಾಯಕರಿಗೆ ತುಳುವನ್ನು ಪ್ರತಿನಿಧಿಸುವ ಸಾಮರ್ಥ್ಯ ಇಲ್ಲ!

ತುಳುವಿಗೆ ಸಮರ್ಥ ರಾಜಕೀಯ ಪ್ರಾತಿನಿಧ್ಯದ ಕೊರತೆಯಿದೆ. ತುಳುವನ್ನು ಪ್ರತಿನಿಧಿಸುವ ಸಂಸದ ಮೊದಲಾದ ನಾಯಕರ ಮಾತುಗಳಲ್ಲಿ ತುಳುವಿನ ವೈಶಿಷ್ಟ್ಯತೆಯನ್ನು ಪ್ರಭಾವ ಪೂರ್ಣವಾಗಿ ಹೇಳಬಲ್ಲ ಸಾಮರ್ಥ್ಯ ಇಲ್ಲ. ತುಳುವನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಬೇಕಾಗಿರುವುದು, ಕರ್ನಾಟಕದಲ್ಲಿ ಕನ್ನಡದಂತೆ ತುಳುವಿಗೆ ಸ್ಥಾನಮಾನವನ್ನು ಕಲ್ಪಸಲು ಇರಬೇಕಾದ್ದು ʼದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕಲುʼ ಬೇಕಿರುವ ಸಾಮರ್ಥ್ಯ ಅಲ್ಲ! ತುಳುವಿನ ಬಗ್ಗೆ ಅರಿವು.

ಪ್ರತಿಕ್ರಿಯಿಸಿ