ಸ್ಯಾಮ್ಯುಯಲ್ ಬೆಕೆಟ್ ನ “ಗಾಡೋ”

                                                                                                                                                                       

ನೋಬೆಲ್ ಪುರಸ್ಕೃತ ನಾಟಕಕಾರ ಸ್ಯಾಮ್ಯುಯಲ್ ಬೆಕೆಟ್ ನ “ವೇಟಿಂಗ್ ಫಾರ್ ದ ಗಾಡೋ” ಎಂಬ ಅಸಂಗತ ನಾಟಕ ಜಗತ್ತಿನ ಅನೇಕ ರಂಗಮಂಚಗಳ ಮೇಲೆ, ಅನೇಕಾನೇಕ ರೂಪಾಂತರಗಳೊಂದಿಗೆ ಪ್ರಸ್ತುತಗೊಂಡಿದೆ. ಕನ್ನಡದಲ್ಲಿಯೇ ನಿರ್ದೇಶಕ ರಘುನಂದನ “ಸಂಬಂಧ” ತಂಡಕ್ಕೆ ಮಾಡಿಕೊಟ್ಟ ಪ್ರಯೋಗದ ಜೊತೆಗೆ ಇನ್ನೂ ಹಲವು ನಟರು ನಿರ್ದೇಶಕರು “ಗಾಡೋ”ನೊಂದಿಗೆ ಸೆಣೆಸಿದ್ದಾರೆ. ಲಕ್ಷ್ಮಣ್ ಕೆ.ಪಿ ನಿರ್ದೇಶಿಸಿರುವ ಈ ನಾಟಕದ ಇನ್ನೊಂದು ಪ್ರಸ್ತುತಿ ದಿನಾಂಕ ೦೮-೦೯-೧೦ ರ ಅಕ್ಟೋಬರ್ ನಂದು ಅಭಿನಯತರಂಗ ರಂಗಮಂದಿರದಲ್ಲಿ ನಡೆಯಲಿದೆ. ಈ ನಾಟಕವನ್ನು ಅನುವಾದಿಸಿರುವ ಎ.ಎನ್ ಪ್ರಸನ್ನ, ನಾಟಕದ ಕುರಿತಾಗಿ ಬರೆದಿರುವ ಒಂದು ಲೇಖನ ಋತುಮಾನದ ಓದುಗರಿಗಾಗಿ ಇಲ್ಲಿದೆ.

ಗಾಡೊ ಅಥವಾ ಅದರ ಮೂಲವಾದ ಸ್ಯಾಮ್ಯುಯಲ್‌ ಬೆಕೆಟ್‌ ಬರೆದ  ʻವೇಟಿಂಗ್‌ ಫಾರ್ ಗಾಡೊʼ ನಾಟಕ ಅಸಂಗತ  ಅಥವ ಅಬ್ಸರ್ಡ್‌ ನಾಟಕ ಎಂದು ಕರೆಯುವುದನ್ನು ಕೇಳಿದ್ದೇವೆ. ಇಂತಹ ನಾಟಕವೊಂದನ್ನು ಪ್ರದರ್ಶನ ಮಾಡುವುದಕ್ಕೆ ಮುಂಚೆ ಅದಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಎಲ್ಲಕ್ಕಿಂತ ಮುಖ್ಯವಾಗಿ ಈ ಅಸಂಗತ ಎನ್ನುವುದರ ಅರ್ಥವೇನು ಎಂದುಕೊಳ್ಳಬೇಕು. ಇದು ಎರಡನೆ ಮಹಾ ಯುದ್ಧದ ನಂತರ ಯೂರೋಪಿನ ನಾಟಕಕ್ಷೇತ್ರದಲ್ಲಿ ಉಂಟಾದ ಬದಲಾವಣೆಗೆ  ಸಂಬಂಧಿಸಿದ್ದು. ಸಾಮಾನ್ಯವಾಗಿ ಇದಕ್ಕೆ ಅತಾರ್ಕಿಕ, ಅಸಂಬದ್ಧ, ಒಂದಕ್ಕೊಂದು ಮಿಳಿತವಿಲ್ಲದ್ದು ಎನ್ನುವುದು ವಾಡಿಕೆ.  ಆದರೆ ಇದನ್ನು ತಮ್ಮ ಮೂಲ ಆಶಯವಾದ ನಾಟಕ ರಚನೆಯಲ್ಲಿ ತೊಡಗಿಸಿಕೊಂಡ ಕಮು, ಕಾಫ್ಕ, ಸ್ಯಾಮ್ಯುಯಲ್‌ ಬಕೆಟ್ ಇಂತಹವರು ಕಲ್ಪಿಸಿದ್ದ ಅರ್ಥ ಬೇರೆ. ಅವರು ಇದನ್ನು ಯಾವುದೇ ರೀತಿಯ ಉದ್ದೇಶವಿಲ್ಲದ, ಧಾರ್ಮಿಕ, ತಾತ್ವಿಕ  ಇತ್ಯಾದಿ ಬೇರುಗಳಿಂದ ಕಳಚಿಕೊಂಡ ಮಾನವನ ಸ್ಥಿತಿ ಎಂದು ಭಾವಿಸುತ್ತಾರೆ. ತನ್ನ ಅಸ್ತಿತ್ವವೇ ನಿರರ್ಥಕ, ಅಪ್ರಯೋಜಕ ಎನ್ನಿಸುವ ಮನುಷ್ಯನಿಗೆ ಸಂಬಂಧಿಸಿದ ಕ್ರಿಯಾಶೀಲತೆ ಅವರದ್ದು. ಎಲ್ಲ ಬಗೆ ಆದರ್ಶಗಳಿಂದ ವಿಮುಖವಾದ  ಬದುಕು ಹೇಗಿರಬಲ್ಲದು ಎನ್ನುವುದನ್ನು ಅವರ ನಾಟಕಗಳು ನಿರೂಪಿಸುತ್ತವೆ. ಕಮು,  ಕಾಫ್ಕಾ ಮುಂತಾದ ನಾಟಕಕಾರರು ನಾಟಕ ರಚನೆಯಲ್ಲಿ ಒಂದು ಗೊತ್ತಾದ ಕಥನ ಸ್ವರೂಪವನ್ನು ಬಳಸಿಕೊಂಡು ತನ್ಮೂಲಕ ತಾವು ಪ್ರಸ್ತುತ ಪಡಿಸಬೇಕಾದ ವಿಷಯವನ್ನು ತಿಳಿಸುತ್ತಾರೆ. ಅವರ ವಿಚಾರಗಳು ಬಹುಮಟ್ಟಿಗೆ ಸ್ಪಷ್ಟವಾಗಿರುತ್ತದೆ. ಸ್ಯಾಮ್ಯುಯಲ್ ಬೆಕೆಟ್‌, ಆರ್ಥರ್ ಅಡಮೋವ್ ಮುಂತಾದವರ ನಾಟಕಗಳ ಪರಿಕಲ್ಪನೆಯ ವಿಧಾನ ಬೇರೆ ಬಗೆಯದು. ಅವರ ನಾಟಕಗಳಲ್ಲಿ ಯಾವುದೇ ಕಥನ ರೂಪ ಇರುವುದಿಲ್ಲ ಮತ್ತು ಅವರು ಹೇಳಲು ಉದ್ದೇಶಿಸಿರುವ ವಿಷಯ ತಾತ್ವಿಕ ಎನಿಸುವ ರೀತಿಯಲ್ಲಿ ಇರುವುದಿಲ್ಲ. ಇವರು ಕೃತಿಗಳಲ್ಲಿ ಅಸಂಗತ ಎನ್ನುವುದನ್ನು ವಿವರಿಸುವುದಿಲ್ಲ. ಆದರೆ ಇಂತಹ ಸ್ಥಿತಿಯನ್ನು ಮುಂದಿಡುತ್ತಾರೆ. ಈ ಸ್ಥಿತಿ ದೃಶ್ಯಗಳ ಪರಿಕಲ್ಪನೆಯಲ್ಲಿ, ಪಾತ್ರಗಳ ಮಾತಿನಲ್ಲಿ, ವರ್ತಿಸುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಅಸಂಗತ ನಾಟಕದ ಪರಿಕಲ್ಪನೆಗಳು ಬೇರೆ ಸೃಷ್ಟ್ಯಾತ್ಮಕ ಕ್ಷೇತ್ರಕ್ಕೂ ವಿಸ್ತರಿಸಿತು. ಇವು ಪಿಕಾಸೋನ ಆಬ್ಸ್ಟ್ರಾಕ್ಟ್‌  ಪೇಂಟಿಂಗ್, ಆಂಟಿ-ಲಿಟರರಿ ಮೂಮೆಂಟ್ ಇತ್ಯಾದಿಗಳ ವಿಧಾನದಲ್ಲಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದರೆ ಅಸಂಗತ ನಾಟಕಗಳ ಮೂಲ ಕಲ್ಪನೆಯ ಪ್ರಭಾವ ಎಷ್ಟಿದೆ ಎಂದು ಅರ್ಥವಾಗುತ್ತದೆ. ಈ ಬಗೆಯ ಬೆಳವಣಿಗೆಗೆ ಮುಖ್ಯವಾಗಿ ಕಾರಣವಾದದ್ದು ಪ್ಯಾರಿಸ್ ನಗರ. ಹಾಗೆಂದ ಕೂಡಲೇ ಥಿಯೇಟರ್ ಅಸಂಗತ ನಾಟಕ ಚಟುವಟಿಕೆ ಕೇವಲ ಫ್ರೆಂಚ್‌ ನದು   ಎಂದಲ್ಲ. ಆ ಬಗೆಯ ರಚನೆಗಳನ್ನು ಮಾಡಿದ ನಾಟಕಕಾರರು ಬ್ರಿಟನ್, ಸ್ಪೇನ್, ಇಟಲಿ, ಜರ್ಮನಿ ಇತ್ಯಾದಿಗಳಲ್ಲೂ ಗುರುತಿಸಲು ಸಾಧ್ಯ. ಕುತೂಹಲದ ಸಂಗತಿಯೆಂದರೆ ಪ್ಯಾರಿಸ್ಸಿನಲ್ಲಿ ನೆಲೆಸಿ ಅಸಂಗತ ನಾಟಕಗಳನ್ನು ಹೆಚ್ಚು ಪ್ರಯೋಗಿಸುವುದನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದ ಹಲವಾರು ನಾಟಕಕಾರರು  ಮೂಲತ: ಫ್ರೆಂಚ್ ನವರಾಗಿರದೆ  ಬೇರೆ ದೇಶದವರಾಗಿದ್ದರು! ಪ್ಯಾರಿಸ್‌ನಲ್ಲಿ ಅಭಿವೃದ್ಧಿ ದೇಶಗಳ ನಾಟಕಕಾರರಲ್ಲದೆ ಇತರ ಸಾಹಿತ್ಯ, ವರ್ಣಕಲೆಗೆ ಸಂಬಂಧಿಸಿದ ವ್ಯಕ್ತಿಗಳು ಸೇರುತ್ತಾರೆ ಉದಾಹರಣೆಗಾಗಿ ಸ್ಪೇನಿನ ಪಿಕಾಸೋ, ಅಮೆರಿಕದ ಹೆಮಿಂಗ್ವೆ, ಇ. ಇ. ಕಮಿಂಗ್ಸ್, ಐರ್ಲೆಂಡಿನ ಜೇಮ್ಸ್ ಜಾಯ್ಸ್, ರೊಮೇನಿಯಾದ ಐಯನೆಸ್ಕೋ, ಮುಂತಾದವರನ್ನು ಉದಾಹರಿಸಬಹುದು.

 ʻವೇಟಿಂಗ್ ಫಾರ್ ಗಾಡೊʼ ಕೃತಿಯ ಸ್ಯಾಮ್ಯುಯಲ್‌ ಬೆಕೆಟ್‌ನ  ಜೀವನವನ್ನು ಗಮನಿಸಿದರೆ ಅವನು ಬಗೆಯ ನಾಟಕ ಬರೆಯಲು ಉಂಟಾದ ಹಿನ್ನೆಲೆ ಅರ್ಥವಾಗುತ್ತದೆ. ಬೆಕೆಟ್ ಸಾವಿರದ ಒಂಬೈನೂರ ಆರರಲ್ಲಿ ಡಬ್ಲಿನ್ ನಲ್ಲಿ ಮಧ್ಯಮ ಕುಟುಂಬವೊಂದರಲ್ಲಿ ಜನಿಸಿದ. ಅವನು ಬಾಲ್ಯದಲ್ಲಿ ಇರುವಾಗಲೇ ಸಾಕಷ್ಟು ರೀತಿಯ ಮಾನಸಿಕ ಹಿಂಸೆ, ತಲ್ಲಣ ಮುಂತಾದ್ದಕ್ಕೆ ಒಳಗಾದವನು. ಸುಮಾರು ಹದಿನಾಲ್ಕು ವರ್ಷದವನಾಗಿದ್ದಾಗ ಆಸ್ಕರ್ ವೈಲ್ಡ್ ಶಾಲೆಯಲ್ಲಿಯೇ ವಿದ್ಯಾರ್ಥಿಯಾಗಿದ್ದ. ಸೂಕ್ಷ್ಮ ಭಾವದ ಹುಡುಗನಾದ ಅವನು ಬಹಳ ಬೇಗನೆ ಎಲ್ಲರೂ ಗಮನಿಸುವ ವಿದ್ಯಾರ್ಥಿಯಾದ. ಅಲ್ಲಿಯೂ ಅವನ ವಿದ್ಯಾಭ್ಯಾಸಕ್ಕೆ ನೇರವಾಗಿ ಸಂಬಂಧಿಸದ ವಿಷಯ ಕುತೂಹಲಕರವಾಗಿದೆ. ಅವನು ಕ್ರಿಕೆಟ್ ಆಡುತ್ತಿರುತ್ತಾನೆ. ಸೋಜಿಗವೆಂದರೆ ಅವನು ಬಲಗೈಯಲ್ಲಿ ಬೌಲಿಂಗ್ ಮಾಡುತ್ತಿದ್ದರೆ, ಎಡಗೈನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ!

ಅನಂತರ ಡಬ್ಲಿನ್ನ ಟ್ರಿನಿಟಿ ಕಾಲೇಜು ಸೇರಿ ಮೂಲತ: ಐರಿಷ್‌ನವನಾದ ಅವನು ಫ್ರೆಂಚ್ ಮತ್ತು ಇಟಾಲಿಯನ್ ಭಾಷೆ ಕಲಿತ. ಅನಂತರ ಪ್ಯಾರಿಸ್ಸಿಗೆ ಹೋದ ಮೇಲೆ ಜೇಮ್ಸ್ ಜಾಯ್ಸ್ ಪರಿಚಯವಾಯಿತು. ಅವರಿಬ್ಬರೂ ಸೇರಿ ಹಲವು ಲೇಖನಗಳಿರುವ ಪುಸ್ತಕವೊಂದನ್ನು ಹೊರತಂದರು. ಬೆಕೆಟ್ ಬರದ ಲೇಖನದಲ್ಲಿ ಕಲಾವಿದನೊಬ್ಬ ತನಗನಿಸಿದ್ದನ್ನು ಸಂಕೀರ್ಣವಾಗಿದ್ದರೂ ಸರಿಯೆ ಸಮಗ್ರವಾಗಿ ವ್ಯಕ್ತಪಡಿಸಬೇಕು. ಬಹುಜನರಿಗೆ ಬೇಗ ಅರ್ಥವಾಗಲಿ ಎಂಬ ದೃಷ್ಟಿಯಿಂದ ಸರಳ ಮಾಡಕೂಡದು, ಅಪ್ರಮಾಣಿಕವಾಗಬಾರದು.  ಅನಂತರ ಕಥೆ, ಕವನಗಳನ್ನು ಬರೆದ. ಇವೆಲ್ಲವನ್ನು ಮುಂದುವರಿಸಿಕೊಂಡು ವಿದ್ಯಾಭ್ಯಾಸದ ಅಂಗವಾಗಿ ಅಲ್ಲದಿದ್ದರೂ ಪ್ರೋಸ್ಟ್ ಬರಹಗಳನ್ನು ಗಂಭೀರವಾಗಿ ಅಭ್ಯಾಸಮಾಡಿದ. ಆ ಸಂದರ್ಭದಲ್ಲಿಯೇ ಅವನಿಗೆ ಕಾಲ, ಟೈಮ್ ಎನ್ನುವುದರ ಮೇಲೆ ಮನಸ್ಸು ಕೇಂದ್ರೀಕರಿಸಿ, ಆ ಬಗ್ಗೆ ಯೋಚಿಸುವ ಪರಿಪಾಠವನ್ನು ಮಾಡಿಕೊಂಡ. ಇದರಿಂದಾಗಿಯೇ ಕಾಲವನ್ನು ಕುರಿತು ಅವನ ಆಲೋಚನೆಗಳು ಅವನ ಕೃತಿಗಳಲ್ಲಿ ಎದ್ದುಕಾಣುತ್ತದೆ. ಅದಲ್ಲದೆ ಒಂದು ಬಗೆಯಲ್ಲಿ ಅಸಂಗತ ಎಂದು ಆ ನಂತರ ಕರೆಯಲಾದ ಆಲೋಚನೆಗಳು ಅವನಿಗೆ ಬಂದದ್ದುಂಟು. ಉದಾಹರಣೆ ಪ್ರೇಮದ ಬಗ್ಗೆ ತಿಳಿಸುತ್ತ, ಅದೊಂದು ದುಃಖ ತರುವ ವಿಷಯ, ಗೆಳೆತನ ಒಂದು ಪುಕ್ಕಲುತನ ನಿರ್ವವಹಿಸುವ ರೂಪ, ನಿಗದಿತ ದಿನಚರಿ ಕ್ಯಾನ್ಸರ್ ಎನ್ನುತ್ತಿದ್ದ.  ಇಷ್ಟೆಲ್ಲಾ ಮಾನಸಿಕ ತುಂಬಲ ತಲ್ಲಣಗಳ ಕಾರಣವಾಗಿ ಬೆಕೆಟ್ ವಿದ್ಯಾಭ್ಯಾಸ ಪೂರ್ಣಗೊಳಿಸಲಿಲ್ಲ. ಅನಂತರವೇ ಅವನು ಬರವಣಿಗೆಯಲ್ಲಿ ತೊಡಗಿಕೊಂಡದ್ದು. ಮೊಲಿಗೆ ಬರೆದದ್ದು ʻಮೂರ್ ಪ್ರಿಕ್ಸ್ ದ್ಯಾನ್‌ ಕಿಕ್ಸ್‌ʼ ಎನ್ನುವ ಕಥಾಸಂಕಲನ. ಅನಂತರ ಕವನ ಕಥೆಗಳನ್ನು ಬರೆಯುತ್ತ ಮನಸ್ಸು ಬಂದ ಕಡೆ ಕೆಲಸ ಮಾಡುತ್ತ, ಡಬ್ಲಿನ್ ನಿಂದ ಗಂಡನಿಗೆ ಪ್ಯಾರಿಸ್ಸಿಗೆ ಅಲೆದಾಡುತ್ತಿದ್ದ. ಹೀಗಾಗಿಯೇ ಅವನ ಪಾತ್ರಗಳು ಅಲೆಮಾರಿಗಳಂತೆ ಇರುವುದು ಆಕಸ್ಮಿಕವಲ್ಲ. ಅವನ ನಿಜ ಜೀವನದಿಂದ ರೂಪುಗೊಂಡ ಬಗೆ ಎನ್ನಬಹುದು. ಸಣ್ಣ ಪ್ರಮಾಣದ ಬರವಣಿಗೆಯಿಂದ ಮುಂದುವರಿದು ʻಮರ್ಫಿʼ ಕಾದಂಬರಿಯನ್ನು ಬರೆದ. ಅದರಲ್ಲಿ ಕೂಡ ಯಾವಾಗಲೂ ಸ್ವತಂತ್ರವಾಗಿರುವ ಹಂಬಲವನ್ನು ಸೂಚಿಸುತ್ತಾನೆ ಅದರಲ್ಲಿನ ನಾಯಕ ತಾನು ಪ್ರೇಮಿಸುವ ಹುಡುಗಿ ಯಾವುದಾದರೊಂದು ಕೆಲಸ ಮಾಡುತ್ತಲೇ ಇರಲಿ ಎಂದು ಅಪೇಕ್ಷೆ ಪಡುವುದರ ಜೊತೆಗೆ ನಿಯಮಿತವಾಗಿ ಅವಳನ್ನು ಭೇಟಿಯಾಗಲು ಹಿಂಜರಿಯುತ್ತಾನೆ. ಪ್ಯಾರಿಸ್ಸಿಗೆ ಹೋದಾಗಲೆಲ್ಲ ಜೇಮ್ಸ್ ಜಾಯ್ಸ್ ನನ್ನು ಭೇಟಿಯಾಗುತ್ತಿದ್ದ. ಆದರೆ ಅವನು ಹೇಳಿದ್ದನ್ನೆಲ್ಲ ಸಂಗತಿಗಳನ್ನು ಒಪ್ಪುತ್ತಿರಲಿಲ್ಲ .

ಸ್ಯಾಮ್ಯುಯೆಲ್ ಬೆಕೆಟ್ ʻವೇಟಿಂಗ್ ಫಾರ್ ಗಾಡೊʼ ಅಲ್ಲದೆ‌ ʻಎಲೆತೂರಿಯಾʼ, ʻಎಂಡ್ ಗೇಮ್ʼ ಮತ್ತು ʻಕ್ಯಾಪ್ಸ್‌ ಲಾಸ್ಟ್‌ ಟೇಪ್‌ʼ ಅಲ್ಲದೆ ಇನ್ನೂ ಕೆಲವು ಕಿರು ನಾಟಕಗಳನ್ನು ಬರೆದಿದ್ದಾನೆ. ಇವುಗಳ ಜೊತೆಗೆ ʻಮರ್ಫಿʼಯಲ್ಲದೆ, ಮೆಲ್ಲಾಯ್‌ʼ ಮತ್ತು ʻಮೆಲೋನೆ ಡೈಸ್ʼ, ʻದ ಅನ್‌ ನೇಮಬಲ್‌ʼ ಎನ್ನುವ ಕಾದಂಬರಿಗಳನ್ನು ಫ್ರೆಂಚ್ ನಲ್ಲಿ ಬರೆದಿದ್ದಾನೆ. ಮಾತೃಭಾಷೆಯಲ್ಲದೆ ಬೇರೊಂದು ಭಾಷೆಯಲ್ಲಿ ಬರೆಯುವುದನ್ನು ಸಮರ್ಥಿಸಿಕೊಳ್ಳುತ್ತ, ಮಾತೃಭಾಷೆಯಲ್ಲಿ ಬರೆಯುವ ಸಂತೋಷದಲ್ಲಿ,  ಅನಗತ್ಯವಾದದ್ದನ್ನು ಮತ್ತು ಯಾವುದೇ ಬಗೆಯ ಶಿಸ್ತಿಗೆ ಒಳಗಾಗದೆ ಪದಗಳ ಲಹರಿಯನ್ನು ನಮೂದಿಸುವ ಸಾಧ್ಯತೆ ಇರುತ್ತದೆ. ಆದರೆ ಬೇರೊಂದು ಭಾಷೆಯಲ್ಲಿ ಬರೆಯುವಾಗ ಅಪ್ರಜ್ಞಾಪೂರ್ವಕವಾಗಿ ನಾವು ಮಾನಸಿಕ ಶಿಸ್ತಿಗೆ ಒಳಪಡುತ್ತವೆ. ಆದ್ದರಿಂದ ಅನಗತ್ಯ ಅನೇಕ ಅನಗತ್ಯ ಗಳು ತಮ್ಮಷ್ಟಕ್ಕೆ ತಾವೇ ದೂರವಾಗುತ್ತವೆ ಎಂದು ಅವನ ಅನ್ನಿಸಿಕೆ.

ಸ್ಯಾಮ್ಯುಯೆಲ್ ಬೆಕೆಟ್ ತಾನು ತನ್ನ ಕೃತಿಗಳಲ್ಲಿ ರೂಪಿಸಿದ ಪಾತ್ರಗಳಂತೆ ಇರಲಿಲ್ಲ ಅಂದರೆ ಸಾಮಾನ್ಯವಾಗಿ ಅವರ ಪಾತ್ರಗಳಲ್ಲಿ ಕಂಡುಬರುವ ವಿಶಿಷ್ಟ ವಿಕ್ಷಿಪ್ತ ತಲ್ಲಣ ತುಮುಲ ಮತ್ತು 1ರೀತಿಯ ಹುಡುಕಾಟ ಗೊಂದಲದಲ್ಲಿರುವ ಪಾತ್ರಗಳಿಗಿಂತ ಭಿನ್ನವಾಗಿ ಸದಾ ಕಾಲ ಯಾವುದೇ ಬಹಿರಂಗವಾಗಿ ಪೋರ್ ಪಡೆದ ಸೌಮ್ಯ ಮುಖದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ

‌ʻವೇಟಿಂಗ್ ಫಾರ್ ಗಾಡೊʼ ನಾಟಕದ ವಿಷಯಕ್ಕೆ ಬಂದರೆ ಅನೇಕ ಸಂಗತಿಗಳು ಸೋಜಿಗವೆನಿಸುವ ರೀತಿಯಲ್ಲಿವೆ. ಈ ನಾಟಕ ಬರೆಯುವುದಕ್ಕೆ ಮುಂಚೆ ಒಂದು ಘಟನೆ ಆಗಿರುತ್ತದೆ. ಅವನು ಒಮ್ಮೆ ದಾರಿಯಲ್ಲಿ ಹೋಗುವಾಗ ಚೂರಿಯ ಇರಿತಕ್ಕೆ ಒಳಗಾಗುತ್ತಾನೆ. ಅನಂತರ ತನಗೆ ಹಿಂಸೆ ಕೊಟ್ಟಿದ್ದರೆ ಕಾರಣವೇನೆಂದು ಚೂರಿ ಹಾಕಿದವನನ್ನು ಕೇಳಿದಾಗ ಅವನು ಕೊಟ್ಟ ಉತ್ತರ ಬೆಕೆಟ್‌ ನನ್ನು ದಿಗ್ಭ್ರಮೆಗೊಳಿಸುತ್ತದೆ. ಈ ಅನುಭವದಿಂದ ಉಂಟಾದ ಅಂಶವನ್ನು ಒಂದಿಲ್ಲೊಂದು ರೀತಿಯಲ್ಲಿ ತನ್ನ ಕೃತಿಗಳಲ್ಲಿ ಬಿಂಬಿಸಿದ್ದಾನೆ ಸ್ಯಾಮ್ಯುಯಲ್ ಬೆಕೆಟ್.

ಬೆಕೆಟ್ ಗೆ ಚಿಕ್ಕಂದಿನಿಂದಲೂ ಕಾಡುತ್ತಿದ್ದ ಪ್ರಶ್ನೆ ʻನಾನು ಯಾರುʼ ಎನ್ನುವುದು. ಅನಂತರ ಪ್ರೋಸ್ಟ್ ನ ಪ್ರಭಾವದ  ʻಕಾಲʼ ಎನ್ನುವ ಅಂಶ. ಇವೆರಡು ಮನುಷ್ಯನ ಜೀವನದಲ್ಲಿ ಉಂಟುಮಾಡುವ ಪರಿಣಾಮದ ಪರಿಶೋಧನೆ ಅವನ ಕೃತಿಗಳಲ್ಲಿ ಕಾಣುತ್ತೇವೆ.

 ʻವೇಟಿಂಗ್ ಫಾರ್ ಗಾಡೊʼಗೆ ಸಂಬಂಧಿಸಿದ ವಿಷಯ ನಿಜಕ್ಕೂ ವಿಶೇಷವೇ. ನಾಟಕ ಎನ್ನುವುದರ ಸಾಮಾನ್ಯ ತಿಳಿವಳಿಕೆಯಾದ ಪ್ರಾರಂಭ, ಒಂದು ಪ್ರಮುಖ ಘಟ್ಟ ಮತ್ತು ನಿಶ್ಚಿತವೆನಿಸುವ ಮುಕ್ತಾಯ ಇದರಲ್ಲಿಲ್ಲ. ಪಾತ್ರಪೋಷಣೆ ಮತ್ತು ಅವುಗಳಿಗೆ ಬೇಕಾದ ಘಟನೆಗಳ ಜೋಡಣೆ, ಇದಾವುದೂ ಬೆಕೆಟ್ನ ನಾಟಕದಲ್ಲಿ ಇಲ್ಲ. ಅಷ್ಟೇಕೆ ಅದರಲ್ಲಿ ಪ್ಲಾಟ್‌ ಎನ್ನುವುದೇ ಇಲ್ಲ. ಹಾಗೆಂದೇ ಅವನ ನಾಟಕವನ್ನು ಪ್ರದರ್ಶಿಸಲು ಅನೇಕ‌ ಸಂಸ್ಥೆಗಳು ಹಿಂಜರಿದರು. ಇದರಿಂದ ಸಾಕಷ್ಟು ತಲ್ಲಣ ಹಾಗೂ ಹಿಂಜರಿಕೆಯಿಂದ ಬೆಕೆಟ್ ತನ್ನ ನಾಟಕವನ್ನು ಪ್ರಯೋಗಿಸಲು ಉದ್ದೇಶಿಸಿದ ರೀತಿಯೇ ಅತ್ಯಂತ ಸೋಜಿಗವಾದದ್ದು ಆ ನಾಟಕವನ್ನು ಮೊದಲು ನಿರ್ದೇಶಿಸಿದ್ದು ಹರ್ಬರ್ಟ್ ಬ್ಲಾಗ್ ಮತ್ತು ಪ್ರದರ್ಶನಗೊಂಡದ್ದು ನಂಬಲು ಅಸಾಧ್ಯವಾದ ಅಂಗಳದಲ್ಲಿ.

ಅವರು ೧೯೫೭ರಲ್ಲಿ ನಾಟಕವನ್ನು ಪ್ರಯೋಗಿಸಿದ್ದು. ಸ್ಯಾನ್ ಕ್ವೆಂಟಿನ್ ಎಂಬಲ್ಲಿದ್ದ ಬಂದಿಖಾನೆಯ ಕೈದಿಗಳೆದುರು. ಬೆಕೆಟ್‌ನಂತೆ ಉಳಿದವರು ಕೂಡ ನಾಟಕ ಯಾವ ರೀತಿ ಸ್ವೀಕರಿಸಲ್ಪಡುತ್ತದೆ ಎನ್ನುವುದರ ಬಗ್ಗೆ ಆತಂಕದಲ್ಲಿದ್ದರು. ತುಂಬಾ ನಿಗೂಢವೆನಿಸುವ, ಬೌದ್ಧಿಕ ಸ್ವರೂಪದ್ದು ಎಂದು ಪರಿಗಣಿಸಿದ್ದ ನಾಟಕ ಯಾವ ರೀತಿ ಸ್ವೀಕರಿಸಲ್ಪಡುತ್ತದೆ ಎನ್ನುವುದು ಅವರನ್ನು ಕಾಡುತ್ತಿತ್ತು. ನಾಟಕ ಶುರುವಾಗುವುದಕ್ಕೆ ಮುಂಚೆ ಅದರಲ್ಲಿ ರೋಚಕವೆನಿಸುವ ಅಂಶಗಳಿರಬಹುದು ಎಂದು ತಮ್ಮದೇ ಕಲ್ಪನೆಗಳಿಂದ ಕೈದಿಗಳು ಎದುರು ನೋಡುತ್ತಿದ್ದರು. ತೆರೆ ಎದ್ದಮೇಲೆ ಅವರು ಅಪೇಕ್ಷಿಸಿದಂತೆ ಅಲ್ಲಿ ಹುಡುಗಿಯರು ಕುಣಿಯುವುದು ಇತ್ಯಾದಿ ಯಾವುದೂ ಇರಲಿಲ್ಲ. ಅದಕ್ಕಾಗಿ ಕಾಯುವವರಂತೆ ಕೆಲವು ಕ್ಷಣ ಸುಮ್ಮನಿದ್ದರು. ಆನಂತರ ನಾಟಕದ ಅವರನ್ನು ಕ್ರಮೇಣ ಆಕ್ರಮಿಸಿತ್ತು. ತಮ್ಮ ಅಪೇಕ್ಷೆ, ನಿರೀಕ್ಷೆಗಳನ್ನು ಮರೆತರು. ನಾಟಕ ಮುಗಿಯುವವರೆಗೂ ಯಾರೊಬ್ಬರಿಂದ ಕೊಂಚವೂ ಗದ್ದಲವಿರಲಿಲ್ಲ. ನಾಟಕ ಮುಗಿದ ತರುವಾಯ ಅಲ್ಲಿದ್ದ ಕೆಲವರಿಗೆ ತಾವೇ ರಂಗದ ಮೇಲಿದ್ದ ಹಾಗೆ ತೋರಿತ್ತು. ಇದರಿಂದ ನಾಟಕಕ್ಕೆ ಸಂಬಂಧಿಸಿದ ಎಲ್ಲರಿಗೂ ಆಶ್ಚರ್ಯ ಮತ್ತು ಸಂತೋಷ ಉಂಟಾಯಿತು.

ಕೈದಿಯೊಬ್ಬ ಗಾಡೋನನ್ನು ʻಸಮಾಜʼ ಎಂದು ಹೇಳಿದ. ಮತ್ತೊಬ್ಬ,ʻ ಅವನೆಲ್ಲೋ ಹೊರಗಿದ್ದಾನೆ ಬರಬೇಕು. ಕಾಯುತ್ತಿದ್ದೇವೆ. ಅವರು ಕಾಣಿಸಿಕೊಂಡರೆ ಅದರಿಂದ ನಿರಾಸೆಯಾಗುತ್ತದೆʼ ಎಂದ. ಹೀಗೆಯೇ ಇನ್ನೂ ಹಲಕೆಲವು ರೀತಿಯಲ್ಲಿ ಅನ್ನಿಸಿಕೆಗಳನ್ನುಹೇಳಿದರು. ಈ ಪ್ರಸಂಗದ ನಂತರ ಜಗತ್ತಿನಲ್ಲಿ ಬೆಕೆಟ್‌ ಹಾಗೂ ಅವನ ನಾಟಕ ಆಸಕ್ತರ ಗಮನ ಸೆಳೆದು ಪ್ರಖ್ಯಾತನಾದ. ನಾಟಕ ಬಹುಸ್ವರವುಳ್ಳದ್ದು ಎಂಬ ಮನ್ನಣೆ ಗಳಿಸಿತು. ಇಷ್ಟಲ್ಲದೆ ನೊಬೆಲ್‌ ಪ್ರಶಸ್ತಿಯನ್ನು ಗಳಿಸಿತು.

ʻಗಾಡೊʼ ಯಾವ ಕಥೆಯನ್ನು ಹೇಳುವುದಿಲ್ಲ. ಅದೊಂದು ಪರಿಸ್ಥಿತಿಯೊಂದನ್ನು ಪ್ರಸ್ತುತಪಡಿಸುತ್ತದೆ. ಇಡೀ ನಾಟಕದಲ್ಲಿ ಏನೂ ಆಗುವುದಿಲ್ಲ. ಯಾರು ಬರುವುದಿಲ್ಲ ಹೋಗುವುದಿಲ್ಲ. ಅಲ್ಲಿ ಕಾಣುವುದು ಒಂದು ಹಳೆಯ ರಸ್ತೆ . ಅಲ್ಲೊಂದು ಮರ. ‌ಅದರ ಪಕ್ಕದಲ್ಲಿ ನಿಂತ ಇಬ್ಬರು. ಅಲೆಮಾರಿಗಳಾದ ಲಾಡಿಮೀರ್‌ ಮತ್ತು ಎಸ್ಟ್ರಗನ್ ಕಾಯುತ್ತಿರುತ್ತಾರೆ. ಇದು ನಾಟಕ ಪ್ರಾರಂಭದಲ್ಲಿ ಕಾಣುತ್ತದೆ. ಮೊದಲನೇ ಅಂಕದ ಕೊನೆಯಲ್ಲಿ ಗಾಡೊ ಬರುತ್ತಾನೆ ಎಂದು ಅವರಿಗೆ ಹುಡುಗನೊಬ್ಬ ತಿಳಿಸುತ್ತಾನೆ.. ಗಾಡೋಗೆ ಬೇರೆ ಅಪಾಯಿಂಟ್ಮೆಂಟ್ ಇದೆ. ಬರುವುದಕ್ಕೆ ಆಗುವುದಿಲ್ಲ. ಮಾರನೆಯ ದಿನ ಖಂಡಿತ ಬರುತ್ತಾನೆ ಎಂದು ತಿಳಿಸುತ್ತಾನೆ. ಎರಡನೆಯ ಅಂಕದ ಕೊನೆಯಲ್ಲಿ ಕೂಡ ಇದೇ ಬಗೆಯಲ್ಲಿ ಆಗುತ್ತದೆ. ಆಗಲೂ ಈ ಮೊದಲು ಬಂದ ಹುಡುಗನೇ ಮತ್ತೆ ಬಂದು ಹೇಳುತ್ತಾನೆ. ಮೊದಲ ಅಂಕದ ಕೊನೆಯಲ್ಲಿ ಎಸ್ಟ್ರಗನ್, ʻʻಸರಿ ಹಾಗಾದರೆ ಹೋಗೋಣವೆʼʼ ಎಂದಾಗ ಲಾಡಿಮೀರ್‌, ʻʻಸರಿ ಹೋಗೋಣʼʼ ಎನ್ನುತ್ತಾನೆ. ಆದರೆ ಇಬ್ಬರೂ ಅಲ್ಲಿಂದ ಕದಲುವುದಿಲ್ಲ. ಎರಡನೆಯ ಅಂಕ ಕೂಡ ಇದೇ ರೀತಿಯಲ್ಲಿ ಕೊನೆಯಾಗುತ್ತದೆ. ಈ ಬಾರಿ ಲಾಡಿಮೀರ್ ಎಸ್ಟ್ರಗನ್‌ ಗೆ  ಆ ಪ್ರಶ್ನೆಯನ್ನು ಮಾಡುತ್ತಾನೆ.

ಪ್ರತಿ ಅಂಕದಲ್ಲಿ ಅಲೆಮಾರಿಗಳು ಇನ್ನೊಂದು ಫೋಜೋ ಮತ್ತು ಲಕ್ಕಿ ಜೋಡಿಯನ್ನು ಕಾಣುತ್ತಾರೆ. ಫೋಜೋ ಧಣಿ ಮತ್ತು ಲಕ್ಕಿ ಅವನ ಸೇವಕ. ಮೊದಲನೆಯ ಅಂಕದಲ್ಲಿ ಕಾಣುವುದಕ್ಕಿಂತ ಭಿನ್ನವಾಗಿ ಎರಡನೆ ಅಂಕದಲ್ಲಿ ಕಾಣಿಸುತ್ತಾರೆ. ಇಷ್ಟಲ್ಲದೆ ಎರಡು ಅಂಕಗಳಲ್ಲಿಯೂ ಅಲೆಮಾರಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಸೋಲುತ್ತಾರೆ. ಪ್ರತಿಬಾರಿಯೂ ಒಟ್ಟಾರೆಯ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಅನೇಕ ಬಾರಿ ಲಾಡಿಮೇರ್ ಮತ್ತು ಎಸ್ಟ್ರಗನ್ ‌ಆಡುವ ಮಾತುಗಳು ಹಾಸ್ಯದ ರೀತಿಯಲ್ಲಿರುತ್ತವೆ. ಅವರ ಮಾತುಗಳನ್ನು ಬೆಂಬಲಿಸುವ ರೀತಿಯಲ್ಲಿ ಕೆಲವೊಮ್ಮೆ ಅವರ ವರ್ತನೆಗಳಿರುತ್ತವೆ. ಅಷ್ಟಲ್ಲದೆ ಆಂಗಿಕ ಅಭಿನಯದಲ್ಲಿ ಒರಟುತನ ಎದ್ದು ಕಾಣುತ್ತದೆ. ಲಾಡಿಮೀರ್‌ ಮತ್ತು ಎಸ್ಟ್ರ್ಗನ್ ಒಬ್ಬರಿಗೊಬ್ಬರು ಪೂರಕ ವ್ಯಕ್ತಿತ್ವವುಳ್ಳವರು. ಲಾಡಿಮೀರ್‌ ನ ಸ್ವಭಾವ, ಅವನ ನಾಲಿಗೆಯ ರುಚಿ ಎಸ್ಟ್ರಗನ್ ಗಿಂತ ಬೇರೆಯಾಗಿರುತ್ತವೆ. ಎಸ್ಟ್ರಗನ್ ಆತುರದ ವ್ಯಕ್ತಿ. ಅವನಿಗೆ ಕನಸುಗಳೆಂದರೆ ಇಷ್ಟ. ಕನಸು ಕಾಣುತ್ತಾನೆ. ಲಾಡಿಮೀರ್‌ ಗೆ ಕನಸುಗಳೆಂದರೆ ಆಗದು. ಲಾಡಿಮೀರ್‌ನ ಉಸಿರು ದುರ್ನಾತ ಹೊಡೆದರೆ,  ಎಸ್ಟ್ರಗನ್‌ ನ ಕಾಲು ಗಬ್ಬುನಾರುತ್ತದೆ.  ಲಾಡಿಮೀರ್‌ಗೆ  ಕಳೆದ ಘಟನೆಗಳು ನೆನಪಾದರೆ, ಎಸ್ಟ್ರಗನ್ ಗೆ ಅವುಗಳನ್ನು ಮರೆಯಲು ಇಷ್ಟ. ಎಸ್ಟ್ರಗನ್ ತಾವು ಕಾಯುತ್ತಿರುವ ವ್ಯಕ್ತಿ ಗಾಡೋ ಹೆಸರನ್ನೇ ಮರೆತು ಬಿಡುತ್ತಾನೆ. ಗಾಡೋ ವಿಷಯವಾಗಿ ಸುದ್ದಿ ತರುವ ಹುಡುಗನ ಜೊತೆ ಲಾಡಿಮೀರ್ ಮಾತನಾಡುತ್ತಾನೆ.‌

ಅಲೆಮಾರಿಗಳ ಪೈಕಿ ಎಸ್ಟ್ರಗನ್ ಕುಗ್ಗಿದವನಂತೆ ಕಾಣುತ್ತಾನೆ. ರಾತ್ರಿಯಲ್ಲಿ ಯಾರೋ ಅಪರಿಚಿತರು ಅವನಿಗೆ ಹೊಡೆಯುತ್ತಾರೆ. ಲಾಡಿಮೀರ್ ಅವನನ್ನು ರಕ್ಷಿಸುವಂತೆ ಕಾಣುತ್ತಾನೆ. ಅಷ್ಟಲ್ಲದೆ ಅವನಿಗೆ ನಿದ್ದೆ ಬರುವ ಹಾಗೆ ಹಾಡು ಹೇಳಿ, ಹೊದಿಕೆ ಹೊದಿಸಿಸುತ್ತಾನೆ. ಅವರಿಬ್ಬರ ನಡುವೆ ಇರುವ ಎಲ್ಲ ಬಗೆಯ ವ್ಯತ್ಯಾಸಗಳು ಅವರು ಒಬ್ಬರನ್ನೊಬ್ಬರು ಕುರಿತು ಆಡುವ ಮಾತುಗಳಿಂದ ಸ್ಪಷ್ಟವಾಗುತ್ತದೆ. ಅವರು ಒಬ್ಬರನ್ನೊಬ್ಬರು ದ್ವೇಷಿಸುವವರೂ ಹೌದು, ಒಬ್ಬರನ್ನೊಬ್ಬರು ಪ್ರೀತಿಸುವವರೂ ಹೌದು.

ಫೋಜೋ ಮತ್ತು ಲಕ್ಕಿ ಕೂಡ ಒಬ್ಬರನ್ನೊಬ್ಬರು ಅವಲಂಬಿಸಿದವರು. ಆದರೆ ಅವರದು ಇನ್ನೂ ಪುರಾತನ ರೀತಿಯದು. ಫೋಜೋಗರ್ವಿಷ್ಟ ಧಣಿಯಾದರೆ, ಲಕ್ಕಿ ವಿನಯವಂತನಾದ ಸ್ನೇಹಿತ. ಮೊದಲ ಅಂಕದಲ್ಲಿ ಫೋಜೋ ನಿಶ್ಚಿತ ನೆಲೆಯುಳ ಲೌಕಿಕ ವ್ಯಕ್ತಿ ಎನ್ನಿಸಿದರೆ, ಲಕ್ಕಿ ಅವನಿಗಂಟಿಕೊಂಡ ವ್ಯಕ್ತಿಯ ಹಾಗೆ ಕಾಣುತ್ತಾನೆ. ತನ್ನ ಬಗ್ಗೆ ಅವನಿಗೆ ವಿಪರೀತ ಕಲ್ಪನೆಗಳಿರುತ್ತವೆ. ತನ್ನ ಶಕ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅವನಿಗೆ ಅಗಾಧವಾದ ಭರವಸೆ. ಲಕ್ಕಿ ಫೋಜೋನ ಲಗೇಜನ್ನು ಹೊರುವುದದಷ್ಟೇ ಅಲ್ಲದೆ ಅವನಿಂದ ಹೊಡೆತಕ್ಕೆ ಗುರಿಯಾಗುತ್ತಾನೆ. ಫೋಜೋ ಹೇಳಿದ ಹಾಗೆ ಡ್ಯಾನ್ಸ್ ಮಾಡುತ್ತಾನೆ. ಅಷ್ಟೇಕೆ ಅವನಿಗಾಗಿ ಯೋಚಿಸುತ್ತಾನೆ ಕೂಡ. ಇಷ್ಟಾದರೂ ಫೋಜೋ ಗೆ ಜೀವನ ಮೌಲ್ಯಗಳ ಬಗ್ಗೆ, ಸೌಂದರ್ಯ, ಸತ್ಯ ಇತ್ಯಾದಿಗಳ ಬಗ್ಗೆ ಉಪದೇಶ ಮಾಡುತ್ತಾನೆ. ಅಲ್ಲೊಂದು ಕಡೆ ತಾನು ಮತ್ತು ಲಕ್ಕಿ ಅದಲು ಬದಲಾಗುವ ಸಂದರ್ಭವೂ ಉಂಟಾಗಬಹುದು ಎಂದು ವ್ಯಯಕ್ತಿಕ ನೆಲೆಯಲ್ಲಿ ಯಾವುದೂ ನಿಶ್ಚಿತವಲ್ಲ  ಎನ್ನುತ್ತಾನೆ ಫೋಜೋ.

ಫೋಜೋ ಮತ್ತು ಲಕ್ಕಿ ಅವರ ಸಂಬಂಧ ದೇಹ ಮತ್ತು ಮನಸ್ಸಿನ ರೀತಿ; ಲೌಕಿಕ ಮತ್ತು ಆಧ್ಯಾತ್ಮಿಕ ಇದ್ದ ಹಾಗೆ. ಲಕ್ಕಿಯ ಶಕ್ತಿಗಳು ಕುಂದುತ್ತಿರುವುದರಿಂದ ಫೋಜೋಬಳಲುತ್ತಾನೆ. ಅವನಿಗೆ ಅದನ್ನು ಸಹಿಸಲು ಆಗುವುದಿಲ್ಲ. ಅವನಿಂದ ಬೇರೆಯಾಗಲು ಬಯಸುತ್ತಾನೆ. ಇದಕ್ಕಾಗಿ ಅವನನ್ನು ಸಂತೆಯಲ್ಲಿ ಮಾರುವುದಕ್ಕೆ ಪ್ರಯತ್ನಿಸುತ್ತಾನೆ. ಎರಡನೆ ಅಂಕದಲ್ಲಿ ಅವರು  ಕಾಣಿಸಿಕೊಂಡಾಗ ಒಟ್ಟಿಗೆ ಇರುತ್ತಾರೆ. ಆದರೆ ಅವರ ಪರಿಸ್ಥಿತಿ ಬೇರೆ. ಫೋಜೋಕುರುಡನಾಗಿದ್ದರೆ,  ಲಕ್ಕಿ ಕಿವುಡನಾಗಿರುತ್ತಾನೆ. ಹೇಗಿದ್ದರೂ ಪೋಜೋ಼ ಲಕ್ಕಿಯೊಂದಿಗೆ ನಿರ್ದಿಷ್ಟ ಗುರಿಯಿಲ್ಲದೆ ಹೊರಡುತ್ತಾನೆ. ಆದರೆ ಲಾಡಿಮೀರ್‌ ಎಸ್ಟ್ರಗನ್‌ಗೆ  ತನ್ನ ಅಭಿಪ್ರಾಯವನ್ನು ಹೇಳಿ ಗಾಡೋಗೆ ಕಾಯೋಣ ಎನ್ನುತ್ತಾನೆ.

ಸ್ಯಾಮ್ಯುಯಲ್‌ ಬೆಕೆಟ್‌ ಗೆ ಗಾಡೋ ಎನ್ನುವ ಎನ್ನುವುದರ ಬಗ್ಗೆ ಹೊಳೆದದ್ದು ಹೇಗೆ ಎನ್ನುವುದರ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು.  ಇದರ ಇದರ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳಾಗಿವೆ. ಗಾಡೊ, ಗಾಡ್ ಅಂದರೆ ದೇವರು ಇರಬಹುದೇ ಎನ್ನುವುದೂ ಉಂಟು. ವಿಮರ್ಶಕ ಎರಿಕ್ ಬೆಂಟ್ಲೇ ಈ ಪಾತ್ರವೊಂದು ಬಾಲ್‌ ಜಾ಼ಕ್‌  ಬರೆದ ಕೃತಿಯೊಂದರಲ್ಲಿದೆ ಎನ್ನುತ್ತಾನೆ. ಅದರಲ್ಲಿ ವ್ಯಕ್ತಿಯೊಬ್ಬ ಗಾಡೋನ್ ಬರವಿಗಾಗಿ ಆಸಕ್ತಿಯಿಂದ ಕಾಯುತ್ತಿರುತ್ತಾನೆ.  ಬಾಲ್‌ ಫೋಜೋಕನ ಕೃತಿಯಲ್ಲಿ ಗಾಡೋಗೆ ಕಾದು ಅದರಿಂದ ಪರಿಸ್ಥಿತಿ ಸುಧಾರಿಸುವುದರ ಸೂಚನೆಯಿದೆ. ಆದರೆ ಸ್ಯಾಮ್ಯುಯಲ್‌ ಬೆಕೆಟ್‌ನ ಕೃತಿಯಲ್ಲಿ ಹಾಗಿಲ್ಲ. ಇಲ್ಲಿ  ಗಾಡೊ ಬರುವುದೇ ಇಲ್ಲ. ಅದಕ್ಕಿಂತ ಇದರಲ್ಲಿ ಕಾಯುವುದೇ ಮುಖ್ಯವಾದದ್ದು. ಗಾಡೊ ಬೇರೆ ಯಾವುದನ್ನಾದರೂ  ಪ್ರತಿನಿಧಿಸಬಹುದು. ಒಂದು ಘಟನೆಯನ್ನು, ವಸ್ತುವನ್ನು, ಅಥವಾ ಸಾವನ್ನು. ಈ ಕಾಯುವ ಕ್ರಿಯೆಯಲ್ಲಿಯೇ ಸಮಯ ಉರುಳುವ ಸಂಗತಿ ಜರುಗುತ್ತದೆ. ಇದು ಪ್ರಮುಖವಾದದ್ದು. ಚಟುವಟಿಕೆಯಿಂದಿದ್ದರೆ ಕಾಲ ಉರುಳುವುದನ್ನು ಮರೆಯಲು ಸಾಧ್ಯ. ಅದರಿಂದಾಗಿ ʻಕಾಲ ಕಳೆಯುತ್ತದೆʼ. ಆದರೆ ಏನೂ ಮಾಡದೆ ಕಾಯುತ್ತಾ ಸುಮ್ಮನೆ ಕುಳಿತಲ್ಲಿ ಕಾಲವೇ ಪ್ರಮುಖವಾಗುತ್ತದೆ. ಅದನ್ನು ಎದುರಿಸುವುದು ಮಹಾ ಹೋರಾಟ ಮಾಡಬೇಕಾಗುತ್ತದೆ. ನಮಗೆ ಕಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂದು-ನಿನ್ನೆ-ನಾಳೆ ಯಾವುದಾದರೂ ಸರಿಯೇ ನಾವು ಕಾಲದ ಹಿಡಿತದಲ್ಲಿ ಇರುತ್ತೇವೆ. ನಿನ್ನೆ ನಮ್ಮನ್ನು ಕಾಲ ವಿರೂಪಗೊಳಿಸುತ್ತದೆ ಅಥವಾ ನಾವು ಕಾಲವನ್ನು ವಿರೂಪಗೊಳಿಸಿರುತ್ತೇವೆ. ಮನುಷ್ಯನಿಗೆ ಕಾಲದ ಪ್ರವಾಹವನ್ನು ಎದುರಿಸುವುದೇ ಪ್ರಮುಖವಾದ ಕರ್ತವ್ಯ, ಕೆಲಸ ಎನ್ನುತ್ತಾನೆ ಬೆಕೆಟ್. ಪ್ರಕೃತಿಯ ರೀತಿಯೇ ಕಾಲಾನುಕ್ರಮದಂತೆ ಬದಲಾಗುವುದು. ಹೀಗಿರುವುದರಿಂದ ಅದು ನಿಯಂತ್ರಣಕ್ಕೆ ಸಿಗುವುದು ಸಾಧ್ಯವಿಲ್ಲ. ಪ್ರತಿಯೊಬ್ಬನ ವ್ಯಕ್ತಿತ್ವವು ಸತತವಾಗಿ ಇದರಿಂದ ಬದಲಾವಣೆ ಹೊಂದುತ್ತಿರುತ್ತದೆ. ಮೊದಲಿದ್ದ ರೀತಿಗಿಂತ ಕುಂಠಿತವಾಗುತ್ತ,  ಕುಗ್ಗುತ್ತ ಹೋಗುತ್ತದೆ.

Samuel Beckett Courtesy: Kwiklit.com

Samuel Beckett Courtesy: Kwiklit.com

ಕಾಲದ ಪ್ರವಾಹದಲ್ಲಿ ಪ್ರತಿ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ಇದರಿಂದ ಯಾವುದನ್ನು ಪಡೆಯಬೇಕು ಅಥವಾ ಗಳಿಸಬೇಕು ಎಂದು ಇರುತ್ತೇವೆಯೋ ಅದು ಬಹುದೂರದಲ್ಲಿ ಇರುತ್ತದೆ. ಅಪೇಕ್ಷಿತ ವಸ್ತು ಯಾವುದೇ ಆಗಿರಬಹುದು. ಅದರೆ ಎಟಕುವುದಿಲ್ಲ ಎನ್ನುತ್ತಾನೆ. ಈ ಹಿನ್ನೆಲೆಯಲ್ಲಿ  ಲಾಡಮೀರ್ ಮತ್ತು ಎಸ್ಟ್ರಗನ್‌ ಗೆ  ಅವರಿಗೆ ಗಾಡೋ ಸಿಗುವುದು ಅಥವಾ ಎಟುಕುವುದು ಸಾಧ್ಯವೇ ಇಲ್ಲ. ಅಲ್ಲದೆ ಗಾಡೋ  ಬಗ್ಗೆ ಮಾಹಿತಿ ಹೇಳುವ ಅದೇ ಹುಡುಗ ಎರಡನೆಯ ಅಂಕದಲ್ಲಿ ಅವರಿಬ್ಬರನ್ನು ಗುರುತಿಸುವುದಿಲ್ಲ. ಅಷ್ಟೇಕೆ ಈ ಮೊದಲು ನೋಡಲೇ ಇಲ್ಲ ಎನ್ನುತ್ತಾನೆ. ಅಲ್ಲದೆ ತಾನೂ ಕೂಡ ಈ ಮೊದಲು ಇದೇ ಮೊದಲನೆಯ ಬಾರಿಗೆ ಬರುತ್ತಿದ್ದೇನೆ ಎನ್ನುತ್ತಾನೆ. ಹೀಗಾಗಿ ಅಲ್ಲಿಂದ ಹೊರಡುವ ಹುಡುಗನಿಗೆ, ʻಸರಿ ಹಾಗಾದರೆ ಈಗ ನೋಡಿರುವೆಯಷ್ಟೆ. ನಾಳೆ ದಿನ ಬಂದಾಗ ನೋಡಿಲ್ಲ ಎಂದು ಹೇಳಬೇಡʼ ಎನ್ನುತ್ತಾನೆ. ಅದಕ್ಕೆ ಹುಡುಗ ಉತ್ತರಿಸುವುದಿಲ್ಲ. ನಮಗೆ ಗೊತ್ತು ಮಾರನೇ ದಿನವೂ ಹೀಗೆಯೇ ಆಗುತ್ತದೆ ಎಂದು. ಈ ಎಲ್ಲವುಗಳ ನಡುವೆ ಒಮ್ಮೆ ಎಸ್ಟ್ರಗನ್‌ ಫೋಜೋವನ್ನೇ ಗಾಡೋ ಎಂದು ತಿಳಿಯುತ್ತಾನೆ

ಕಾಲದ ಪ್ರಭಾವಕ್ಕೆ ಸಿಕ್ಕು ಲಕ್ಕಿ ಮತ್ತು ಫೋಜೋ ಎರಡನೆ ಅಂಕದಲ್ಲಿ ಕಾಣಿಸಿಕೊಂಡಾಗ ಅಲೆಮಾರಿಗಳಿಗೆ ಈ ಮೊದಲು ನಾವು ಅವರನ್ನು ಕಂಡಿದ್ದೇವೆಯೇ ಹೇಗೆ ಎಂದು  ಅನುಮಾನವಾಗುತ್ತದೆ.  ಆದರೆ ಎಸ್ಟ್ರಗನ್ ಅವರನ್ನು ಮರೆತು ಬಿಟ್ಟಿರುತ್ತಾನೆ. ಅವರು ತನಗೆ ಗೊತ್ತಿಲ್ಲ ಎನ್ನುತ್ತಾನೆ. ಅಷ್ಟಲ್ಲದೆ ಇಂದು ಅವರನ್ನು ನೋಡುತ್ತಿರುವುದಷ್ಟೆ. ನಾಳೆ ಅದನ್ನು ಮರೆತು ಬಿಟ್ಟಿರುತ್ತೇನೆ ಎನ್ನುತ್ತಾನೆ.

ಕಾಯುವುದು ಎನ್ನುವುದು ಕಾಲದ ಅನುಭವ. ಅದು ನಿರಂತರ ಬದಲಾವಣೆಯಾಗುವ ಗುಣವುಳ್ಳದ್ದು. ಆದರೆ ನಿಜವಾದದ್ದು ಸಂಭವಿಸುವುದೇ ಇಲ್ಲವಾದ್ದರಿಂದ ಬದಲಾವಣೆ ಎನ್ನುವುದು ಭ್ರಮೆಯಷ್ಟೇ. ಕಾಯುವವರಿಗೆ ಈ ಗತಿಯಾದರೆ ಕಾಲಕ್ಕೆ ಏನಾದರೂ ಪರಿಣಾಮ ಅಥವಾ ಲಾಭವಿದೆಯೇ ಎಂದರೆ ಅದೂ ಇಲ್ಲ. ಅದು ನಿರುದ್ದೇಶ ಉಳ್ಳದ್ದು. ತನ್ನನ್ನೇ ನಾನು ನಾಶ ಮಾಡುವಂಥದ್ದು. ಈ ಪ್ರಪಂಚದಲ್ಲಿ ಯಾವಾಗಲೂ ಕಣ್ಣೀರಿನ ಪ್ರಮಾಣ ಒಂದೇ ಪ್ರಮಾಣದಲ್ಲಿರುತ್ತದೆ. ಒಬ್ಬ ಅಳಲು ಪ್ರಾರಂಭಿಸಿದರೆ ಮತ್ತೆಲ್ಲೋ ಯಾರೋ ನಿಲ್ಲಿಸಿರುತ್ತಾನೆ. ಪ್ರತಿದಿನವೂ ಇನ್ನೊಂದು ದಿನ ಹಾಗಲ್ಲ.  ನಾವು ಸತ್ತಾಗ ಬದುಕಿರಲಿಲ್ಲ ಎನ್ನುವ ಅಭಿಪ್ರಾಯ ಮೂಡುತ್ತದೆ. ಇವುಗಳ ನಡುವೆಯೂ ಲಾಡಮೀರ್‌, ಎಸ್ಟ್ರಗನ್‌ ಗಾಡೋನ ನಿರೀಕ್ಷೆಯಲ್ಲಿ ಭರವಸೆ ಇಡುತ್ತಾರೆ. ಬದುಕಲು ಬಯಸುತ್ತಾರೆ. ಆದರೆ ಅದು ಪೂರ್ಣಗೊಳ್ಳದ ನಿರೀಕ್ಷೆ

ಇವೆಲ್ಲ ಕಾರಣಗಳಿಂದ ಅವರಿಗೆ ಗಾಡೋ ಬರುವನೆಂಬ ಕಾರಣದಿಂದ ಉಂಟಾಗುವ ಒತ್ತಡದಲ್ಲಿರುವುದು ಒಂದು ಬಗೆಯಾದರೆ ಅವನು ಬರುವನೆಂಬ ಭರವಸೆಯನ್ನು ಇಟ್ಟುಕೊಳ್ಳುವುದೂ ಕಷ್ಟ. ಅವನಿಗೆ ಕಾಯುವುದರಿಂದ ಮತ್ತೆ ಮತ್ತೆ ನಿರಾಸೆಗೊಳ್ಳುವುದೇ ಪರಿಣಾಮ. ಹೀಗಾಗಿ ಅವನಿಗೆ ಕಾಯುವುದೇ ಕಾಯುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ಆ ದಾರಿಹೋಕರಿಗೆ ಅನ್ನಿಸುತ್ತದೆ. ಆದರೆ ಬಹಳ ಹಿಂದೆಯೇ ಇದರ ಬಗ್ಗೆ ಯೋಚಿಸಬೇಕಿತ್ತು ಈಗ ತಡವಾಗಿದೆ ಎಂದುಕೊಳ್ಳುತ್ತಾರೆ. ಇಡೀ ಸಮಸ್ಯೆಗೆ ಪರಿಹಾರ ಆತ್ಮಹತ್ಯೆ ಎಂದು ಅವರಿಗೆ ಭಾಸವಾಗುತ್ತದೆ. ಆದರೆ ಹೀಗೆ ಮಾಡುವುದು ಅವರಿಗೆ ಸಾಧ್ಯವಾಗುವುದಿಲ್ಲ. ಅದರಿಂದಲೂ ಅವರು ನಿರಾಸೆಗೊಳ್ಳುತ್ತಾರೆ. ಒಂದು ಪಕ್ಷ ಗಾಡೊ ಬರುವುದೇ ಆದರೆ ಅವನ್ನು ಏನು ಕೇಳುವುದು ಎಂದು ಚರ್ಚಿಸಿ, ಅವನು ಕೊಡುವುದನ್ನು ತೆಗೆದುಕೊಳ್ಳೋಣ ಎಂದು ನಿರ್ಧರಿಸುತ್ತಾರೆ. ಇದೇನಿದ್ದರೂ ಗಾಡೊ ಬರುವುದರ ಬಗ್ಗೆ, ಅವನು ತನ್ನ ಭರವಸೆ ಉಳಿಸಿಕೊಂಡಾಗಷ್ಟೇ. ಲಾಡಿಮೀರ್‌ಗಿಂತ ಎಸ್ಟ್ರಗನ್‌ ಗೆ ಸಂದೇಹವಿರುತ್ತದೆ. ವ್ಯಾಖ್ಯಾನಕಾರರು ಗಾಡೋ ದೈವವೇ, ಮುಕ್ತಿಯೇ, ವಿಧಿಯೇ ಎಂದು ಕೂಡ ಆಲೋಚಿಸಿರುವುದುಂಟು.

ಲಾಡಿಮೀರ್‌ ಮತ್ತು ಎಸ್ಟ್ರಗನ್‌ ಫೋಜೋ ಮತ್ತು ಲಕ್ಕಿ ಅವರಿಗಿಂತ ಗುಣ, ಸ್ವಭಾವದಲ್ಲಿ ಉತ್ತಮ ಮಟ್ಟದಲ್ಲಿ ಇರುತ್ತಾರೆ. ಕೇವಲ ಲೌಕಿಕ ಇತ್ಯಾದಿಗೆ ಅಂಟಿಕೊಂಡ ಪೋಜೋ, ಲಕ್ಕಿಗಿಂತ    ಸ್ವಲ್ಪ ಕಡಿಮೆ ಮುಗ್ಧರಾಗಿದ್ದು ಕೂಡ ಕಾರಣ. ಕಾಲದ ಎದುರು ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆ. ಅವರಿಗೆ ಸ್ವಾರ್ಥದ ಕಡೆ ಅಷ್ಟು ಗಮನವಿಲ್ಲ ಹಾಗೆಯೇ ಅವರಿಗಿರುವ ಭ್ರಮೆಗಳು ಕೂಡ ಕಡಿಮೆಯೇ. ನಾವು ಹೆಚ್ಚಾಗಿ ಯೋಚಿಸುವ ಅಪಾಯದಲ್ಲಿ ಇಲ್ಲ. ಯೋಚನೆಗಳು ಬರುವುದು ತಪ್ಪಲ್ಲ. ಆದರೆ ಆಲೋಚನೆಗಳು ಇರುವುದು ಭಯಂಕರ ಎಂದು ಅವರ ಭಾವನೆ. ಲಕ್ಕಿ ಭಾಷಣ ಜೇಮ್ಸ್ ಜಾಯ್ಸ್ ನನ್ನು ಅಣಕು  ಮಾಡಿದಂತಿದೆ. ತಾತ್ವಿಕ, ಅಥವ ವೈಜ್ಞಾನಿಕ ಸಂಗತಿಗಳೆರಡೂ ಲಾಡಮೀರ್ ಮತ್ತು ಎಸ್ತ್ರಗನ್‌ ರೀತಿಗೆ  ವಿರುದ್ಧವಾದದ್ದು.

ಸ್ಯಾನ್ ಕ್ವಿಂಟಿನ್‌ ಬಂದಿಖಾನೆ ಕೈದಿಗಳು ʻವೇಟಿಂಗ್ ಫಾರ್ ಗಾಡೊʼಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕೆ ಕಾರಣ ಬಹು ಮಟ್ಟಿಗೆ ಅದರಲ್ಲಿ ಕಂಡದ್ದು ಕಾರಣವಾಗಿತ್ತು. ಸಮಯ ಅಥವ ಕಾಲಕ್ಕೆ, ಅದರ ನಿರೀಕ್ಷಣೆಗೆ ಸಂಬಂಧಪಟ್ಟ ಮಾತುಗಳು ನಾಟಕದಲ್ಲಿ ಇದ್ದದ್ದು.  ಲಕ್ಕಿಯ ಮೇಲೆ ಫೋಜೋ ಗಿದ್ದ ಆಕ್ರಮಣಶೀಲತೆ ಮತ್ತು ಪರಸ್ಪರ ಬೇಕು-ಬೇಡದ ಸಂಬಂಧ, ಅವರುಗಳನ್ನು ತಮ್ಮ ಅಂತರಂಗವನ್ನು ಪರೀಕ್ಷಿಸುವಂತೆ ಮಾಡಿರಬಹುದು ಎಂದು ಭಾವಿಸುತ್ತಾರೆ ಬೆಕೆಟ್‌ ಮತ್ತು ನಿರ್ದೇಶಕ‌ ಹೆರ್ಬರ್ಟ್ ಬ್ಲಾವ್.

ಅತ್ಯಂತ ಗಂಭೀರ ಸ್ವರೂಪದ, ಮನುಷ್ಯನ ಮೇಲೆ ಸಮಯದ ಪ್ರಭಾವ ಮತ್ತು ಅದರಿಂದುಂಟಾಗುವ ಅವಸ್ಥೆ ಹಾಗೂ ಪರಿಣಾಮಗಳನ್ನು ಕುರಿತು ಪ್ರೇಕ್ಷಕರಿಗೆ ತಮ್ಮ ಬಗ್ಗೆ ಆಲೋಚಿಸುವ  ಅವಕಾಶ ಕಲ್ಪಿಸುತ್ತಾನೆ ಸ್ಯಾಮ್ಯುಯಲ್‌ ಬೆಕೆಟ್‌ ತನ್ನ ನಾಟಕ  ‌ʻಗಾಡೊʼದಲ್ಲಿ.

 

ಪ್ರತಿಕ್ರಿಯಿಸಿ