ಕಳೆದ ಮೂರು ತಿಂಗಳಿಂದ ಋತುಮಾನದ ಚಟುವಟಿಕೆಗಳು ಸ್ತಬ್ದವಾಗಿತ್ತು . ಅಲ್ಲಲ್ಲಿ ಹೊಸ ಪುಸ್ತಕಗಳ ಪ್ರಕಟಣೆ ಬಿಟ್ಟರೆ ಹೆಚ್ಚಿದನ್ನೇನೂ ನಮ್ಮಿಂದ ಮಾಡಲಾಗಿರಲಿಲ್ಲ. ಕಾರಣಗಳು ಹಲವು. ಆದರೆ ಹೊಸವರ್ಷದಲ್ಲಿ ಮತ್ತೆ ಚಟುವಣಿಕೆಗಳಿಗೆ ಮರಳಬೇಕೆಂಬ ಸಂಕಲ್ಪದಿಂದ ಮತ್ತೆ ನಮ್ಮ ಕೆಲಸ ಶುರುವಿಟ್ಟುಕೊಂಡಿದ್ದೇವೆ. ಆದರೆ ಹಿಂದಿನಂತೆ ಎಡೆಬಿಡದೆ ನಿರಂತವಾಗಿ ವಿಷಯಗಳನ್ನು ಪ್ರಕಟಿಸಿಸುವುದು ನಮ್ಮಿಂದ ಇನ್ನು ಕಷ್ಟ ಸಾಧ್ಯವೆನಿಸುತ್ತಿದೆ. ಐದು ವರ್ಷ ನಿರಂತವಾಗಿ ಋತುಮಾನಕ್ಕಾಗಿ ದುಡಿದ ನಾವುಗಳು ನಮ್ಮ ವೈಯಕ್ತಿಕ ಬದುಕಿನಲ್ಲಿ ಹೊಸ ಜವಾಬ್ದಾರಿಗಳಿಗೂ ಅಣಿಯಾಗಬೇಕಾಗಿದೆ. ಆದರೂ ತಿಂಗಳಿಗೆ ಒಂದರಿಂದ ಎರಡು ಆಯ್ದ ವಿಷಯಗಳನ್ನು ಬರಹ, ಆಡಿಯೋ ಅಥವಾ ವಿಡಿಯೋ ಯಾವುದಾದರೊಂದು ರೂಪದಲ್ಲಿ ಪ್ರಕಟಿಸಲು ಪ್ರಯತ್ನಿಸುತ್ತೇವೆ. ಈ ಬದಲಾವಣೆ ಕೇವಲ ruthumana.com ನ ಕಾರ್ಯಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಮಾತ್ರ .
ಮಿಂಬಲೆಯಲ್ಲಿನ ಋತುಮಾನದ ಪುಸ್ತಕದಂಗಡಿ (store.ruthumana.com), ಋತುಮಾನ ಆ್ಯಪ್ ಹಾಗೂ ಋತುಮಾನದ ಪ್ರಕಾಶನದ ಚಟುವಟಿಕೆಗಳು ಎಂದಿನಂತೆ ಸಕ್ರಿಯವಾಗಿರುತ್ತದೆ. ಈ ವರ್ಷ ನಮ್ಮಿಂದ ಮೂರು ಹೊಸ ಪ್ರಿಂಟ್ ಪುಸ್ತಕಗಳೂ ಪ್ರಕಟಗೊಳ್ಳಲಿವೆ. ಕನ್ನಡದ ಮೇರು ಕೃತಿ “ಮಲೆಗಳಲ್ಲಿ ಮದುಮಗಳು” ಸದ್ಯದಲ್ಲೇ ಕೇಳು ಪುಸ್ತಕವಾಗಿ ನಿಮ್ಮ ಮುಂದೆ ಬರಲಿದೆ. ಎಂದಿನಂತೆ ನಿಮ್ಮ ಹಾರೈಕೆಗಳಿರಲಿ.
ಎಂದು,
ಋತುಮಾನ ತಂಡ
ಕನ್ನಡದಲ್ಲಿ ಮಕ್ಕಳ ಚಿತ್ರ ಪುಸ್ತಕ ಗಳು ಬೆರಳೆಣಿಕೆಯಷ್ಟು ಮಾತ್ರ . ಇತರ ಭಾಷೆಗಳಂತೆ ನಮ್ಮಲ್ಲೂ ಮಕ್ಕಳ ಚಿತ್ರಗಳು ಹೆಚ್ಚೆಚ್ಚು ಬರಬೇಕೆಂಬ ಉದ್ದೇಶದಿಂದ ಋತುಮಾನ ಸಂದರ್ಶನ ಸರಣಿಯೊಂದನ್ನು ಆರಂಭಿಸಿತು. ಇತ್ತೀಚೆಗೆ ಮಕ್ಕಳ ಚಿತ್ರ ಪುಸ್ತಕಗಳಿಗೆ ಚಿತ್ರ ಬರೆಯುವುದನ್ನು ವೃತ್ತಿಯಾಗಿ ಸ್ವೀಕರಿಸಿರುವ ಮತ್ತು ಭಾರತದ ಅನೇಕ ಪ್ರಸಿದ್ಧ ಮಕ್ಕಳ ಚಿತ್ರ ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಚಿತ್ರಗಳನ್ನು ಬಿಡಿಸಿಕೊಟ್ಟಿರುವ ಬೆಂಗಳೂರಿನ ನಿಹಾರಿಕಾ ಶೆಣೈ ಈ ಸರಣಿಯಲ್ಲಿ ಅನೇಕ ಮಕ್ಕಳ ಚಿತ್ರಕಲಾವಿದರನ್ನು ಮಾತಾಡಿಸಿದ್ದಾರೆ. ಬಹುತೇಕ ಹಿಂದಿ, ಇಂಗ್ಲೀಷಿನಲ್ಲಿರುವ ಈ ಸಂದರ್ಶನಗಳನ್ನು ಕನ್ನಡಕ್ಕೆ ಅನುವಾದಿಸಲಾಗುತ್ತದೆ. ನಮ್ಮಲ್ಲೂ ಜನರಿಗೆ ಮಕ್ಕಳಿಗಾಗಿ ಚಿತ್ರ ಪುಸ್ತಕಗಳನ್ನು ಬರೆಯುವ ಆಸಕ್ತಿ ಹುಟ್ಟಿ, ಆ ಪರಂಪರೆ ಮತ್ತು ಅದಕ್ಕೆ ಬೇಕಾದ ಮೂಲ ಸೌಕರ್ಯಗಳೂ ಬೆಳೆಯಲಿ ಎಂಬುದು ನಮ್ಮ ಸದಾಶಯ.
ಒಂದು ನಮ್ಮ ಅಕ್ಕಪಕ್ಕದ ಸಾಮಾನ್ಯ ಜಾಗಗಳು ಅಜ್ಜಿಯ ಕಣ್ಣಿಂದ ನೋಡಿದಾಗ ಏನಾಗುತ್ತವೆ? ಪ್ರತಿನಿತ್ಯದ ಘಟನೆಗಳೇ ಅದ್ಭುತವಾಗಿ ಹೋಗುತ್ತದೆ!
‘Nani’s Walk to the Park’ – ಈ ಪುಸ್ತಕವನ್ನು ನೀವು ತೆರೆದ ಕೂಡಲೇ ನೀವು ಅದರಲ್ಲಿ ಕರಗಿಹೋಗುತ್ತೀರಿ. ಅದು ನಿಮ್ಮ ಸುತ್ತಮುತ್ತಲಿನ ಜಾಗಗಳನ್ನು ತೆರೆದು ತೋರಿಸುವ ಒಂದು ಪರಿಚಿತವಾದ ಮತ್ತು ಮಾಂತ್ರಿಕವೆನಿಸುವ ಕಿಂಡಿಯಂತೆ ನಿಮಗೆ ಅನಿಸುತ್ತದೆ. ಬದುಕಿರುವುದೆಷ್ಟು ಸುಂದರ ಎಂದು ನಿಮ್ಮನ್ನು ಅದು ನೆನಪಿಸುತ್ತದೆ.
ಚಿತ್ರಕಾರರೂ ಲೇಖಕರೂ ಆದ ದೀಪಾ ಬಲ್ಸಾರ್ ಅವರು ಈ ಪುಸ್ತಕದಲ್ಲಿ ಮೊದಲಿಗೆ ನಿಮ್ಮನ್ನು ಕೈಹಿಡಿದು ನಡೆಸಿ, ಮತ್ತೆ ನಿಮ್ಮನ್ನು ನಿಮ್ಮ ವೇಗದಲ್ಲಿಯೇ ನಡೆಯಲು ಬಿಟ್ಟುಬಿಡುತ್ತಾರೆ. ನಿಮ್ಮ ಮನಸ್ಸು ಮತ್ತು ಕಣ್ಣುಗಳು ತಮ್ಮಷ್ಟಕ್ಕೆ ತಾವೇ ಅಡ್ಡಾಡಿ ತಮ್ಮದೇ ಆದ ಕತೆಗಳನ್ನು ಹೆಣೆಯುತ್ತವೆ. ಅಜ್ಜಿಯ ಕತೆಯೂ ಸಹ ಅವೆಲ್ಲವುಗಳ ಜೊತೆಗೇ ಹೆಣೆದುಕೊಳ್ಳುತ್ತಾ ಹೋಗುತ್ತದೆ.
ಈ ಪುಸ್ತಕದ ರಚನೆ ಹೇಗಾಯಿತು ಎಂಬುದರ ಬಗ್ಗೆ ದೀಪ ಬಲ್ಸಾರ್ ಅವರೊಂದಿಗೆ ಮಾತುಕತೆ ಇಲ್ಲಿದೆ.
ಈ ಪುಸ್ತಕದ ಕಲ್ಪನೆ ಹೇಗೆ ಮೂಡಿ ಬಂತು?
ಒಮ್ಮೊಮ್ಮೆ ಒಂದು ಪುಸ್ತಕದ ಕಲ್ಪನೆ ಥಟ್ಟನೆ ಹೊಳೆಯುತ್ತದೆ. ಅಲ್ಲದೆ ಅದರ ಅದು ಅಲ್ಲೇ, ನಿಮ್ಮೆದುರಲ್ಲೇ ಸಂಪೂರ್ಣವಾಗಿ ತೆರೆದುಕೊಂಡಿರುತ್ತದೆ.
‘Nani’s Walk to the Park’ ಹಾಗೇ ತೆರೆದುಕೊಂಡಿತ್ತು. ಟಾಟಾ ಟ್ರಸ್ಟ್ಗಾಗಿ ಪರಾಗ್ ಇನಿಶಿಯೇಟಿವ್‌ರವರು ನನ್ನ ಬಳಿ ಬಂದಿದ್ದರು. ಅವರು ಮಕ್ಕಳಿಗಾಗಿ ದೊಡ್ಡ ವಿನ್ಯಾಸದ ಪುಸ್ತಕಗಳನ್ನು ಹೊರತರಲು ಧನಸಹಾಯ ಮಾಡುವವರಿದ್ದರು. ಕೆಲವು ಕತೆಗಳನ್ನು ಅದಕ್ಕಾಗಿ ಕಳುಹಿಸಲು ನನಗೆ ಆಸಕ್ತಿಯಿದೆಯಾ ಎಂದು ಅವರು ನನ್ನನ್ನು ಕೇಳಿದ್ದರು.
ನಾನು ಕೆಲವು ದಿನಗಳವರೆಗೆ ಆ ವಿಷಯವಾಗಿ ವಿಚಾರ ಮಾಡುತ್ತಿದ್ದೆ. ಆ ಯೋಚನೆ ನನ್ನ ಒಳಗೇ ಮಂಥನ ಮಾಡುತ್ತಾ ಕೆಲವು ಪ್ರಶ್ನೆಗಳನ್ನು ಹೊರಡಿಸುತಿತ್ತು : ಒಂದು ದೊಡ್ಡ ವಿನ್ಯಾಸದ ಪುಸ್ತಕಕ್ಕೆ ಯಾವ ರೀತಿಯ ಕತೆ ಒಪ್ಪುತ್ತದೆ? ದೊಡ್ಡ ವಿನ್ಯಾಸದ ಪುಸ್ತಕದ ಪರಿಣಾಮವೇನಾಗಿರಬೇಕು? ಹೀಗೇ, ಕೆಲವು ಆಲೋಚನೆಗಳು..
ಒಂದು ರಾತ್ರಿ – ಅತ್ಯುತ್ತಮವಾದ ವಿಚಾರಗಳು ಇನ್ನೇನು ನಿದ್ರೆಗೆ ಜಾರುವಾಗ ಬರುತ್ತವೆ ಅಥವಾ ನಾಯಿಯನ್ನು ಓಡಾಡಿಸಲು ಆಚೆ ಕೊಂಡೊಯ್ದಾಗ ಬರುತ್ತವೆ – ನನ್ನ ನೆರೆಹೊರೆಯ ಜಾಗಗಳೆಲ್ಲಾ ನನ್ನ ಸುತ್ತಮುತ್ತಾ ಹರಡಿದ್ದಂತೆ ಕಂಡವು. ಸ್ನೇಹ, ಸೌಂದರ್ಯ, ಜಾದೂ ಎಲ್ಲಾ ತುಂಬಿದ ಪುಸ್ತಕಗಳ ಕಲ್ಪನೆಗಳು ನನ್ನಲ್ಲಿ ಮೂಡಿದವು. ಬೆಳಗಾಗುವ ಹೊತ್ತಿಗೆ ನನ್ನ ಕತೆ ಬರೆದು ಮುಗಿಸಲ್ಪಟ್ಟಿತ್ತು. ಆ ಕರಡನ್ನು ಉತ್ತಮ ಪ್ರತಿ ಮಾಡಲು ಹಲವಾರು ಬಾರಿ ಮತ್ತೆ ಮತ್ತೆ ಬರೆಯಬೇಕಾಯಿತೇನೋ ನಿಜ ಆದರೆ ಅದು ಕತೆಯಲ್ಲಿ ಸೂಕ್ಶ್ಮವಾದ ಕೆಲವು ಬದಲಾವಣೆಗಳನ್ನು ಮಾಡಿ ಸರಿಪಡಿಲಷ್ಟೇ ಆದದ್ದು. ಅದಲ್ಲದೆ ಮತ್ತೆರಡು ಕತೆಗಳನ್ನೂ ನಾನು ಕಳುಹಿಸಿದೆ. ಅದರಲ್ಲಿ ಒಂದು – ಆಚೂ! . ಇದೊಂದು ಭಾರತದ ಅರಣ್ಯದಲ್ಲಿನ ಪ್ರಾಣಿಗಳ ಕತೆ. ಇದರಲ್ಲಿ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಹೇಗೆ ಕೆಲವು ಸಂಗತಿಗಳು ಘಟಿಸುತ್ತವೆ ಎಂದು ಅರ್ಥವಾಗುತ್ತದೆ.
ಬಹಳ ವರ್ಷಗಳಿಂದ ನಾನು ಆಚೂ! ವನ್ನು ಅದ್ಭುತವಾದ ಸಭೆಗಳ ಮುಖಾಮುಖಿ ಕಥಾನಿರೂಪಣೆಗಳಲ್ಲಿ ಹೇಳುತ್ತಿದ್ದೆ. ಅದು ಒಂದು ಬೆರಗುಗೊಳಿಸುವ ದೊಡ್ಡ ಪುಸ್ತಕವಾಗುತ್ತದೆ ಎಂದು ನನಗೆ ಗೊತ್ತಿತ್ತು. ಮೂರನೆಯ ಕತೆ ವಲಸೆ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣದ ಕೂಲಿಗಳ ಬಗೆಗಿನದು. ಕೊನೆಗೆ ನಾನಿ ಮತ್ತು ಆಚೂ! ಎರಡೂ ಕತೆಗಳೂ ಮುದ್ರಣಕ್ಕಾಗಿ ಆಯ್ಕೆಯಾದವು.
ಈ ಪುಸ್ತಕ ಹೇಗೆ ರೂಪುಗೊಂಡಿತು?
ನಾನು ಒಂಭತ್ತು A3 ಹಾಳೆಗಳನ್ನು ಒಟ್ಟಾಗಿಸಿ,ಪುಸ್ತಕದಿಂದ ಎಳೆದರೆ ಹೊರಬಂದು ಹರಡಿ ತೆರೆದುಕೊಳ್ಳಬಹುದಾದ ಒಂದು ಭಿತ್ತಿಪಟದೊಂದಿಗೆ ಕೆಲಸ ಪ್ರಾರಂಭಿಸಿದೆ. ಅದೊಂದು ಎಲ್ಲಾ ಚೌಕಟ್ಟುಗಳನ್ನೂ ಒಳಗೊಂಡ ದೈತ್ಯ ಸಂಯೋಜನೆಯಾಗಿತ್ತು. ಅದರಿಂದ ಯಾವುದು ಎಲ್ಲಿರುತ್ತದೆ, ಯಾವುದು ಯಾವುದರ ಮೇಲೆ ವ್ಯಾಪಿಸುತ್ತದೆ ಹಾಗೂ ಯಾವ ಯಾವ ಕತೆಗಳು ಇತರ ಚೌಕಟ್ಟುಗಳೊಡನೆ ಸಂಬಂಧ ಹೊಂದಿರುತ್ತದೆ ಇವೆಲ್ಲವುಗಳ ಬಗ್ಗೆಯೂ ತಿಳಿಯಬಹುದಾಗಿತ್ತು. ನೆಲದ ಮೇಲೆಲ್ಲಾ ಕಾಗದಗಳು ಹರಡಿ ಹೋಗಿದ್ದವು. ಅದನ್ನು ನೋಡಿ ನನ್ನ ನಾಯಿ ಲುಲು ಸಂಭ್ರಮಿಸುತ್ತಿತ್ತು.
ಅದು ಶುರುವಾತಾಗಿತ್ತು. ಒಟ್ಟಾರೆ ಸಮತೋಲನವನ್ನು ಗಣನೆಯಲ್ಲಿ ಇಟ್ಟುಕೊಂಡು ನಾನು ಅಲ್ಲಿನ ಅಂಶಗಳನ್ನೂ ಭಾಗಗಳನ್ನೂ ಅಲ್ಲಿಂದಿಲ್ಲಿಗೆ ಅತ್ತಿಂದಿತ್ತ ಸರಿಸಿ ಇಡುತ್ತಿದ್ದೆ. ನನಗೆ ಯಾವಾಗ ಆ ದೈತ್ಯ ಭಿತ್ತಿಪಟದಿಂದ ತೃಪ್ತಿಯಾಯಿತೋ ಆಗಲಷ್ಟೇ ನಾನು ಪ್ರತ್ಯೇಕ ಚೌಕಟ್ಟುಗಳನ್ನು ಪ್ರಾರಂಭಿಸಿದೆ.
ಈ ಪುಸ್ತಕದ ಗಾತ್ರ ಚಿತ್ರಗಳ ಶೈಲಿಯ ಮೇಲೆ ಪರಿಣಾಮ ಬೀರಿತೇ?
ಖಂಡಿತವಾಗಿಯೂ ಹೌದು. ನಾನು ಅತ್ಯಂತ ಕಿರಿದಾದ ವಿವರಗಳನ್ನೂ ಮತ್ತು ಹರಡಿದ ಹಾಳೆಯ ಮೇಲ್ಮೈಯ ಸಾಧ್ಯತೆಗಳನ್ನೂ ಅದರಲ್ಲಿ ಅಳವಡಿಸಲು ಸಾಧ್ಯವಾಗಿತ್ತು. ಏಕೆಂದರೆ ಅಲ್ಲಿ ನನಗೆ ಬೇಕಾದ ಹಾಗೆ ಚಿತ್ರಗಳನ್ನು ಅಳವಡಿಸಿ ಹೊಂದಿಸಲು ಬೇಕಾದಷ್ಟು ಯಥೇಚ್ಚವಾದ ಸ್ಥಳವಿತ್ತು. ಹೀಗೆ ಮಾಡುವುದನ್ನು ಎ-೪ ಹಾಳೆಯಲ್ಲಿ ಕಲ್ಪಿಸಿಕೊಳ್ಳುವುದು ಸಾಧ್ಯವೇ?
ಅಲ್ಲದೆ ಇದು ಚಿಕ್ಕ ಗಾತ್ರದ್ದಾಗಿದ್ದರೆ, ನೋಡುವವರ ಬಾಯಲ್ಲಿ ಈಗ ಇದು ಹೊರಡಿಸುವ ಉದ್ರಿಕ್ತ ಆಹಾ, ಓಹೋ ಎಂಬ ಉದ್ಗಾರಗಳನ್ನು ಹೊರಡಿಸುವುದಕ್ಕೆ ಅವಕಾಶವಾಗುತ್ತಿರಲಿಲ್ಲ.
ಸಕತ್ ಖುಶಿ ಮತ್ತೆ ಆಶ್ಚರ್ಯ ಅಂದ್ರೆ ಇದರ ಭಿತ್ತಿಪಟ (ಪುಲ್ ಔಟ್ ಪೋಸ್ಟರ್). ನಿಮ್ಮ ಕತೆಯ ಸೆಶನ್ ನಲ್ಲಿ ಇದರ ಬಗ್ಗೆ ಮಕ್ಕಳ ಪ್ರತಿಕ್ರಿಯೆ ಏನಿತ್ತು?
ಈ ಪೋಸ್ಟರ್ ಖಂಡಿತವಾಗಿ ದೊಡ್ಡ ಸಂಭ್ರಮದ ಕ್ಷಣವಾಗಿತ್ತು. ಬರೀ ಅದರ ಗಾತ್ರಕ್ಕಾಗಿ ಮಾತ್ರ ಅಲ್ಲ. (ನಾನು ಭಾರೀ ದೊಡ್ಡ ಗಾತ್ರದ ಪೋಸ್ಟರ್ ಅನ್ನೆ ನನ್ನ ಸೆಶನ್ ನಲ್ಲಿ ಬಳಸ್ತೀನಿ.) ಜೊತೆಗೆ ಮಕ್ಕಳು ಮತ್ತು ದೊಡ್ಡವರಿಗೆ ಇದ್ದಕ್ಕಿದ್ದಂತೆ ಅರಿವಾಗೋದು ಏನು ಅಂದ್ರೆ ಎಲ್ಲಾ ಬೇರೆ ಬೇರೆ ಫ್ರೇಮ್ ಗಳನ್ನ ಒಂದು ಕಡೆ ಸೇರಿಸಿದ ತಕ್ಷಣ ಅಲ್ಲಿ ಅಜ್ಜಿಯ ನೆರೆ ಹೊರೆಯ ಜಗತ್ತಿನ ಚಿತ್ರ ಸೃಷ್ಟಿಯಾಗಿಬಿಡುತ್ತದಲ್ಲ ಅದು.
ನಾನು ರಸ್ತೆಗಳನ್ನು ನಮ್ಮ ಬದುಕಿನಲ್ಲಿ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಲು ಬಳಸಿಕೊಳ್ಳುತ್ತೇನೆ —ಸ್ಥಳೀಯ ಮಾರುಕಟ್ಟೆ, ಪಾರಂಪರಿಕ ಕರಕುಶಲತೆ, ಪ್ರಾಣಿಗಳ ಬಗ್ಗೆ ಕಾಳಜಿ, ನಗು ಮತ್ತು ತುಂಟತನ, ಪುಸ್ತಕಗಳು ಮತ್ತು ಪ್ರಕೃತಿಯ ಇಂದ್ರಜಾಲ ಹೀಗೆ.
ಒಂದು ಶಾಲೆಯಲ್ಲಿ ಇಬ್ಬರು ಮಕ್ಕಳು, ತಮ್ಮ ಮನೆಯಿಂದ ಶಾಲೆಗೆ ತಲುಪಲು ಇರುವ ಎಲ್ಲಾ ರಸ್ತೆಗಳಿಗೂ ತಾವು, ಮರುನಾಮಕರಣ ಮಾಡುವುದಾಗಿ ನನಗೆ ಹೇಳಿದರು.
ಒಬ್ಬ ತಾಯಿ ತನ್ನ ಮಗಳು ರಚಿಸಿದ್ದ ಅವಳ ಕೋಣೆಯ ಸುಂದರವಾದ ನಕ್ಷೆಗಳನ್ನು ನನಗೆ ಕಳಿಸಿದಳು. ಮತ್ತೆ ಕೆಲವು ತಂದೆತಾಯಿಯರು ಅವರ ಮಕ್ಕಳು ನಕ್ಷೆಗಳನ್ನು ಉಪಯೋಗಿಸಿ “ಹುಡುಕಿ ಕಂಡುಹಿಡಿಯುವ” ಆಟಗಳನ್ನು ಆಡುತ್ತಾರೆ ಎಂದು ತಿಳಿಸಿದರು.
ನಾನು ಒಂದು ಶಾಲೆಯಲ್ಲಿ ಅಜ್ಜಿ ಉದ್ಯಾನಕ್ಕೆ ಹೋದಾಗ ಯಾವ ತಿಂಗಳಾಗಿತ್ತು ಎಂದು ಕೇಳಿದೆ. ಗುಲ್ಮೊಹರ್ ಮರಗಳೂ ಲಾಬರ್ನಮ್ ಮರಗಳೂ ಯಾವ ಕಾಲದಲ್ಲಿ ಹೂವರಳಿ ಮೈತುಂಬಿರುತ್ತವೆ? ಯಾವ ಕಾಲದಲ್ಲಿ ಗಾಡಿಗಳು ಲೀಚೀ ಹಣ್ಣುಗಳಿಂದ ಮತ್ತು ಮಾವಿನ ಹಣ್ಣುಗಳಿಂದ ತುಂಬಿರುತ್ತವೆ, ಎಂದು ನಾನು ಕೇಳಿದೆ. ತಮ್ಮತಮ್ಮ ಪರಿಸರದೊಡನೆ ಆ ಮಕ್ಕಳಿಗೆ ಎಷ್ಟು ಕನಿಷ್ಟ ಮಟ್ಟದ ತಾಳಮೇಳವಿದೆ ಎಂಬುದು ನನಗೆ ಸೋಜಿಗವೆನಿಸಿತ್ತು ಹಾಗೂ ಇದರಿಂದಾಗಿ ನನಗೆ ಅವರೊಡನೆ ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಮತ್ತು ಕಿಟಕಿಯಾಚೆ ಕಾಣುವ ಅರಳಿದ ಹೂಗಳ ಬಗ್ಗೆ ಮಾತನಾಡಲು ಒಂದು ಅವಕಾಶ ಸಿಕ್ಕಿತು.
ಪ್ರತಿಯೊಂದು ಕತೆಹೇಳುವ ಸಭೆಯಲ್ಲಿಯೂ ನಾನು ಏನನ್ನಾದರೂ ಹೊಸತನ್ನು ಕಲಿಯುತ್ತಲೇ ಇರುತ್ತೇನೆ.
ಇದು ಅತ್ಯದ್ಭುತವಾದದ್ದು. ನಾನು ಬೆಳೆಯುವಾಗ ನಮ್ಮ ಶಾಲೆಗಳಲ್ಲಿ ಈ ರೀತಿಯ ಕತೆಹೇಳುವ ಸಭೆಗಳಿರಬಾರದಿತ್ತೇ ಎಂದು ನನಗೆ ಅನ್ನಿಸುತ್ತದೆ. ನೀವು ಮಕ್ಕಳೊಂದಿಗೆ ಸೇರಿ ನೆರೆಹೊರೆಯ ಚಿತ್ರಪಟಗಳನ್ನು ತಯಾರಿಸುತ್ತೀರಿ. ಅದೇನು?
ನಾನು ಚಾರ್ಟ್ ಹಾಳೆಗಳನ್ನು ಒಂದಕ್ಕೊಂದು ಜೋಡಿಸಿ ಅವುಗಳ ಮೂಲಕ ಹಾದುಹೋಗುವಂತೆ ರಸ್ತೆಗಳನ್ನು ಬಿಡಿಸುತ್ತೇನೆ . ಮಕ್ಕಳು ಅದರ ಮೇಲೆ ತಮ್ಮ ತಮಗೆ ಯಾವುದು ಮುಖ್ಯ ಎಂದು ಅವರಿಗೆ ತೋರುವುದೋ ಅಂತಹ ಚಿತ್ರಗಳನ್ನು ಬಿಡಿಸಿ ಅಂಟಿಸಿ ಬಿಡುತ್ತಾರೆ. ಅಂದರೆ ಆ ಚಿತ್ರದಲ್ಲಿ ಸಿಂಹಗಳೂ ಹುಲಿಗಳೂ ರಸ್ತೆಗಳಲ್ಲಿ ನಡೆದಾಡುತ್ತಿರಬಹುದು ಅಥವಾ ಬೇರೆ ಗ್ರಹದ ನಿವಾಸಿಗಳು ಮನೆಗಳ ಮೇಲೆ ಇಳಿದು ಬಂದಿರಬಹುದು. ಅವೆಲ್ಲವೂ ಅದ್ಭುತ ವಿಸ್ಮಯಗಳೇ.
ಈ ನೆರೆಹೊರೆಯ ಚಿತ್ರಪಟಗಳನ್ನು ನಾವು ತಯಾರಿಸುವಾಗ ಪ್ರತಿಯೊಂದು ಮಗುವೂ ಏನನ್ನಾದರೂ ಚಿತ್ರಿಸುತ್ತದೆ. ಹಾಗಾಗಿ ಕಡೆಯಲ್ಲಿ ದೊರೆಯುವ ಚಿತ್ರಪಟದಲ್ಲಿ ಎಲ್ಲಾ ಮಕ್ಕಳ ಕಲೆಯ ಸಂಗ್ರಹವಿದ್ದು ಅದೊಂದು ಸಾಮೂಹಿಕ ಪ್ರಯತ್ನವಾಗಿರುತ್ತದೆ.
ಈ ಪುಸ್ತಕದಲ್ಲಿ ತುಂಬಿರುವ ಸಣ್ಣಸಣ್ಣ ವಿವರಗಳಿಂದಾಗಿ ಈ ಪುಸ್ತಕವನ್ನು ಮತ್ತೆಮತ್ತೆ ಓದಬೇಕೆನಿಸುತ್ತದೆ. ಮಕ್ಕಳ ಪುಸ್ತಕಗಳಲ್ಲಿ ವಿವರಗಳು ಮುಖ್ಯ ಎಂದು ನಿಮಗನ್ನಿಸುತ್ತದೆಯೇ?
ಇನ್ಯಾರೂ ಗಮನಿಸದಿರುವ ಅಂಶಗಳನ್ನು ಮಕ್ಕಳು ಗಮನಿಸುತ್ತಾರೆ. ಒಬ್ಬ ಪಾಲಕರು ಇತ್ತೀಚೆಗೆ ನನಗೆ ಪತ್ರ ಬರೆದು ಹೀಗೆ ಹೇಳಿದರು; ಪುಸ್ತಕದ ಲೇನ್ ಆಫ್ ಫ್ರೆಂಡ್ಶಿಪ್ ನಲ್ಲಿ ( ಸ್ನೇಹದ ರಸ್ತೆಯಲ್ಲಿ) ಒಬ್ಬ ತಂದೆ ಎತ್ತಿಕೊಂಡು ಕರೆದುಕೊಂಡು ಹೋಗುತ್ತಿರುವ ಒಬ್ಬ ಹುಡುಗಿ ಮುಖಕ್ಕೆ ಮಾಸ್ಕ್ ಹಾಕಿರುವುದನ್ನು ಕಂಡು ( ಆಗ ಕೋವಿಡ್ ಇರಲಿಲ್ಲ) ಆಕೆಯ ಚಿಕ್ಕ ವಯಸ್ಸಿನ ಮಗಳು ಅದರ ಬಗ್ಗೆ ಬಹಳವಾಗಿ ಯೋಚಿಸಿದಳಂತೆ. ಚಿತ್ರದಲ್ಲಿನ ಹುಡುಗಿಗೆ ಖಾಯಿಲೆಯಾಗಿದೆಯಾ , ಅವಳಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಬಯಸಿದಳಂತೆ. ಪುಸ್ತಕದ ಪುಟಗಳಲ್ಲಿ ಆ ರೀತಿಯ ಬಹಳಷ್ಟು ಉಪಕತೆಗಳಿವೆ. ಅಂತಹ ಕತೆಗಳ ವಿವರಗಳನ್ನು ಗಮನಿಸಲು ದೊಡ್ಡವರಿಗೆ ಸಮಯವಿರುವುದಿಲ್ಲ; ಮಕ್ಕಳು ಅವುಗಳನ್ನು ಗುರುತಿಸುತ್ತಾರೆ.
ಮಕ್ಕಳ ಮನಸ್ಸಿನ ಸೋಲರಿಯದ ತರ್ಕ ಮತ್ತು ಅವರ ಎಡೆಬಿಡದೆ ಪ್ರಶ್ನಿಸುವಿಕೆ,ಇವೆರಡೂ ಈ ಪುಸ್ತಕದಲ್ಲಿ ಚಿಕ್ಕಚಿಕ್ಕ ವಿವರಗಳನ್ನು ಸೇರಿಸುವ ಕೆಲಸವನ್ನು ಅತ್ಯಂತ ಆಹ್ಲಾದಕಾರಿಯನ್ನಾಗಿ ಮಾಡುತ್ತದೆ.
ಓಹ್, ಅದೊಂದು ಅತ್ಯಂತ ಕುತೂಹಲಕಾರಿಯಾದ ವಿವರ – ( ಮಾಸ್ಕ್ ಧರಿಸಿದ ಪುಟ್ಟ ಹುಡುಗಿ)— ನಾನೂ ಅದರ ಬಗ್ಗೆ ಯೋಚಿಸಿದ್ದು ನನಗೆ ನೆನಪಿದೆ. ನಿಜ ಹೇಳಬೇಕೆಂದರೆ ಬರಿಯ ಸಂಜ್ಞೆಗಳಿಂದ ಮತ್ತು ಮೈಕೈಯಾಡಿಸುವ ಸಹಜ ದೈಹಿಕ ಚೇಷ್ಟೆಗಳಿಂದ ಅಂತಹ ಉಪಕತೆಗಳಿಗೆ ಅವಕಾಶ ಮಾಡಿಕೊಡುವ ನಿಮ್ಮ ಸಾಮರ್ಥ್ಯದ ಬಗ್ಗೆ ನಾನೂ ಚಕಿತಳಾಗಿದ್ದೆ. ಅವುಗಳನ್ನು ಸರಳೀಕರಿಸಿ ಬಿಡುವುದರಿಂದ ಅವು ಹೆಚ್ಚುಹೆಚ್ಚಾಗಿ ನೆನಪಿನಲ್ಲುಳಿದು ಬಿಡುವಂತಾಗುತ್ತವೆ ಎಂದು ನಿಮಗನ್ನಿಸುತ್ತದೆಯೇ?
ನನ್ನಲ್ಲಿರುವ ಕೌಶಲ್ಯದ ಕೊರತೆಯಿಂದಾಗಿ ಹಾಗಾಗಿರಬಹುದೆಂಬ ಭಯ ನನಗಿದೆ ! ನಾನು ನನ್ನ ಸುತ್ತಮುತ್ತಲಿನವರ ಅದ್ಭುತ ಪ್ರತಿಭೆಯನ್ನು ನೋಡುತ್ತಿರುತ್ತೇನೆ. ನಾನು ಇನ್ನೂ ಚೆನ್ನಾಗಿ ಚಿತ್ರ ಬಿಡಿಸಬೇಕಿತ್ತು ಎಂದು ನನಗೆ ಆಸೆಯಾಗುತ್ತದೆ.
ನನಗೆ ನಿಮ್ಮ ಹಾಗೆ ಜೀವ ತುಂಬಿದ ಚಿತ್ರಗಳನ್ನು ಬರೆಯಲು ಸಾಧ್ಯವಿದ್ದರೆ ಒಳ್ಳೆಯದಿತ್ತೇನೋ ! ಪ್ರತಿಯೊಬ್ಬರೂ ಬಾಂಧವ್ಯ ಕಲ್ಪಿಸಿಕೊಳ್ಳಬಲ್ಲಂಥ ವ್ಯಕ್ತಿತ್ವಗಳನ್ನು ನೀವು ಹೇಗೆ ಚಿತ್ರಿಸುತ್ತೀರಿ?
ಪಾತ್ರಗಳು ನಮಗೆ ತಿಳಿದಿರುವ ವ್ಯಕ್ತಿಗಳಿಂದ ಬಂದಿರುತ್ತವೆ ಎಂದು ನಾನೆಣಿಸುತ್ತೇನೆ. ಅವುಗಳಿಗೆ ಪುಸ್ತಕದ ಹೊರಗಡೆಯೂ ಒಂದು ಬದುಕು ಮತ್ತು ಆ ಬದುಕಿನ ಕತೆಗಳೆಲ್ಲಾ ಇರುತ್ತವೆ. ಅವು ಚಿತ್ರಕಾರರಿಗೆ ನೈಜವಾದರೆ, ಓದುವವರಿಗೂ ನೋಡುವವರಿಗೂ ಅವುಗಳೆಲ್ಲಾ ಸಹಜವಾಗಿಯೇ ನೈಜವಾಗಿ ಬಿಡುತ್ತವೆ. ಏಕೆಂದರೆ ನೀವು ಆ ವ್ಯಕ್ತಿಗಳ ಸ್ವಭಾವಗಳ ಮತ್ತು ಆಲೋಚನೆಗಳ ಬಗ್ಗೆ ನಿರ್ದಿಷ್ಟವಾಗಿ ಬರೆಯಲು ತೊಡಗದಿದ್ದರೂ ಸಹ ಆ ಸ್ವಭಾವ ಮತ್ತು ಆಲೋಚನೆಗಳು ಅದೇ ತಾನಾಗೇ ವಿವಿಧ ಬಗೆಯಲ್ಲಿ ಸೇರಿಕೊಂಡು ಬಿಡುತ್ತವೆ. ಈ ಚಿತ್ರ ಪುಸ್ತಕವೂ ನನಗೆ ಪ್ರಮುಖರಾದ ಜನರ ಮತ್ತು ಮೌಲ್ಯಗಳ ಮಿಳಿತವೇ ಆಗಿದೆ
ಅಜ್ಜಿ(Nani)ಯ ಬಗೆಗೆ ಹೆಚ್ಚು ಹೇಳಿ. ಅವಳ ಸೀರೆ ಹೇಗೆ ಕಣ್ಣಿಗೆ ಎದ್ದು ಕಾಣಿವಂತಿದ್ದು ಅವಳ ವ್ಯಕ್ತಿತ್ವ ಹೇಗೆ ಪುಸ್ತಕದ ಬೇರೆಲ್ಲಾ ಪಾತ್ರಗಳಿಗಿಂತ ಭಿನ್ನವಾಗಿದೆ ಎಂಬುದು ನನಗೆ ಅತ್ಯಂತ ಪ್ರಿಯವಾಗಿತ್ತು.
ಅಜ್ಜಿಯ ಸೀರೆ ನನ್ನದೇ ಒಂದು ಉಡುಪನ್ನು ಆಧರಿಸಿದೆ. ಇತರ ಹಲವಾರು ಪಾತ್ರಗಳ ನಡುವೆ ಅಜ್ಜಿಯ ಪಾತ್ರ ಎಲ್ಲಾ ಚೌಕಟ್ಟುಗಳಲ್ಲೂ ಗುರುತಿಸಲು ಸಾಧ್ಯವಾಗುವಂತೆ ಎದ್ದು ಕಾಣಬೇಕೆಂಬುದು ನನ್ನ ಆಶಯವಾಗಿತ್ತು. ಪ್ರತಿಬಾರಿ ಈ ಕತೆಯನ್ನು ಹೇಳುವಾಗಲೂ ನಾನು ಅದೇ ಉಡುಪನ್ನು ಧರಿಸುತ್ತೇನೆ. ಪ್ರತಿಬಾರಿಯೂ ಮಧ್ಯದಲ್ಲೆಲ್ಲೋ ಒಂದು ಮಗು, ಇದ್ದಕ್ಕಿದ್ದಂತೆ ಹೋಲಿಕೆಯನ್ನು ಗುರುತಿಸಿ, ಎದ್ದು ನಿಂತು ‘ನೀವೇ ಅಜ್ಜಿ” ಎನ್ನುತ್ತದೆ. ಅದರಿಂದಾಗಿ ಎಲ್ಲರಲ್ಲೂ ಆಶ್ಚರ್ಯ, ಬೆರಗು ಮತ್ತು ವಿನೋದ ತುಂಬುತ್ತದೆ.
ಹಾಗಿದ್ದರೆ ನಿಮ್ಮ ಆ ಉಡುಪು ಈ ಕತೆಯಲ್ಲಿ ತಾನೊಂದು ಅತಿಥಿ ಪಾತ್ರ ನಿರ್ವಹಿಸಿದಂತೆ!! ಎಷ್ಟು ಸೋಜಿಗ ಇದು ! ಆ ಸೀರೆಯಲ್ಲಿ ಡಿಜಿಟಲ್ ಕೊಲ್ಲಾಜ್‌ನ ಅಂಶಗಳಿವೆ ಅಲ್ಲವೇ? ನನಗೆ ವೈಯಕ್ತಿಕವಾಗಿ ನೀವು ಡಿಜಿಟಲ್ ಕೊಲ್ಲಾಜ್ ಮತ್ತು ಜಲವರ್ಣಗಳನ್ನು ಮಿಶ್ರಣ ಮಾಡಿರುವುದು ಅತ್ಯಂತ ಪ್ರಿಯವಾಯಿತು.
ಚಿತ್ರಗಳು ಮತ್ತು ಡಿಜಿಟಲ್ ಚಿತ್ರಗಳ ಸಂಯೋಜನೆಯನ್ನು ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಸತ್ಯ ಹೇಳಬೇಕೆಂದರೆ ನಾನು ತಂತ್ರಜ್ಞಾನವನ್ನು ಉಪಯೋಗಿಸುವುದರಲ್ಲಿ ತೀರಾ ಹಿಂದೆ. ಫೋಟೋಷಾಪ್ ನ ಅತ್ಯಂತ ಅಲ್ಪಮಟ್ಟದ ಅರಿವು ಮಾತ್ರ ನನಗಿದೆ. ನನಗೆ ಇನ್ನೂ ಬಹಳ ಹೆಚ್ಚಿನದನ್ನು ಮಾಡಬೇಕೆಂಬ ಆಸೆಯಿದೆ ಆದರೆ ನನಗೆ ಸಾಕಷ್ಟು ಕೌಶಲ್ಯವಿಲ್ಲ. ಹಾಗಾಗಿ ಹೇಗೋ ತಡವರಿಸುತ್ತಾ ಸಾಗುತ್ತೇನೆ.
Charactersಚಿತ್ರಪುಸ್ತಕಗಳಲ್ಲಿ ಬಣ್ಣಗಳು ಮುಖ್ಯ ಪಾತ್ರವಹಿಸುತ್ತವೆ ಎಂದು ನಿಮಗನ್ನಿಸುತ್ತದೆಯೇ?
ಬಣ್ಣ ಮತ್ತು ಕಪ್ಪುಬಿಳುಪು, ಎರಡಕ್ಕೂ ಕತೆಯನ್ನು ಹೇಳುವಲ್ಲಿ ತಮ್ಮದೇ ಆದ ಸ್ಥಾನಗಳಿವೆ. ಈ ಕತೆಯ ಪ್ರತಿ ಪುಟದಲ್ಲೂ ಬಣ್ಣಗಳು ಪುಟಿದೇಳದಿದ್ದರೆ ಈ ಕತೆಯನ್ನು ಹೇಳುವುದು ಸಾಧ್ಯವಾಗುತ್ತಿರಲಿಲ್ಲ.
ಈ ಪುಸ್ತಕದಲ್ಲಿನ ಜೀವತುಂಬಿ ಸ್ಪಂದಿಸುವ ನೆರೆಹೊರೆ, ಮುಂಬೈ ನಗರದಿಂದ ಪ್ರೇರಣೆ ಪಡೆದಿದ್ದಾ?
ನಾನು ಬಹಳ ಸಣ್ಣವಳಿದ್ದಾಗ ಆ ಊರನ್ನು ಬಿಟ್ಟು ಇನ್ನೆಲ್ಲೂ ಜೀವಿಸುವುದು ನನಗೆ ಇಷ್ಟವಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ಈಗ ನಾನು ದೊಡ್ಡವಳಾದಂತೆ ಅಲ್ಲಿರುವ ಅಲ್ಲಿಗೆ ಬೇಕಾದ ಸೂಕ್ತ ಯೋಜನೆಗಳ ಕೊರತೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳೆಲ್ಲಾ ನನ್ನನ್ನು ಹತಾಶೆಗೊಳಿಸುತ್ತವೆ. ಸಮುದಾಯದ ಪ್ರಜ್ಞೆಯೇ ಕಳೆದು ಹೋಗಿರುವ ಗಗನಚುಂಬಿ ಕಟ್ಟಡಗಳು ಮತ್ತು ಹೆಚ್ಚುತ್ತಿರುವ ಕೋಮುವಾದದ ಮತ್ತು ಧಾರ್ಮಿಕ ದ್ವೇಷಗಳು ಇವೆಲ್ಲಾ ನನ್ನನ್ನು ಹತಾಶಳನ್ನಾಗಿ ಮಾಡುತ್ತವೆ.
ನನ್ನ ಹರೆಯದ ಕಾಲದಲ್ಲಿದ್ದ ಪುಸ್ತಕಗಳನ್ನು ಎರವಲು ಕೊಡುವ ಪುಸ್ತಕಭಂಡಾರಗಳೀಗೆಲ್ಲಿವೆ? ಶೆಕೆಯ ರಾತ್ರಿಗಳಲ್ಲಿ ಬರುತ್ತಿದ್ದ, ನಮ್ಮ ರಸ್ತೆಯ ಪ್ರತಿಯೊಂದು ಮಗುವಿನ ಹೆಸರನ್ನೂ ತಿಳಿದುಕೊಂಡಿದ್ದ ಖುಲ್ಫಿವಾಲಾ ಈಗೆಲ್ಲಿ? ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಯಾವಾಗ ಬರುವುದೆಂದು ಆಗಿನ ನಮ್ಮ ಅಂಚೆಯವನಿಗೆ ಗೊತ್ತಿರುತ್ತಿತ್ತು. ಪರಿಚಿತ ಸ್ವವಿಳಾಸ ಲಗತ್ತಿಸಿದ ಟಪಾಲು ಬಂದ ದಿನ ಅವನು ನಾವು ಅದನ್ನು ತೆಗೆದು ಓದುವವರೆಗೆ ಕಾದಿದ್ದು ನಮ್ಮೊಂದಿಗೆ ಹರ್ಷಿಸುತ್ತಲೋ ನಮ್ಮನ್ನು ಕನಿಕರಿಸಿ ಸಮಾಧಾನಿಸುತ್ತಲೋ ಇದ್ದ.
ರಜೆಯ ದಿನಗಳು ನಿಜಕ್ಕೂ ರಜೆಯ ದಿನಗಳಾಗಿರುತ್ತಿದ್ದುದನ್ನು ನಾವು ಕಳೆದುಕೊಂಡಿದ್ದೇವೆ. ಆಗೆಲ್ಲಾ ಯಾರೂ ರಜೆಯಲ್ಲಿ ಹೆಚ್ಚು ಕಲಿಸುವ ತರಗತಿಗಳಿಗೆ ಅಥವಾ ಸ್ಪರ್ದಾತ್ಮಕ ಹವ್ಯಾಸದ ತರಗತಿಗಳಿಗೆ ಹೋಗುತ್ತಿರಲಿಲ್ಲ.
ಮುಂದೆ ಕಾಲೇಜಿನಲ್ಲಿರುವಾಗ ಎಷ್ಟೊಂದು ಮಧ್ಯಾಹ್ನಗಳನ್ನು ಫ್ಲೋರಾ ಫೌಂಟೇನ್ನಿನ ರಸ್ತೆಬದಿಯ ಪಾದಚಾರಿ ಹಾದಿಗಳಲ್ಲಿ ಪುಸ್ತಕಗಳನ್ನು ತಿರುವಿ ಹಾಕುತ್ತಾ ಕಳೆದಿದ್ದೇವೆ. ಅಥವಾ ಸ್ಮೋಕರ್ಸ್ ಕಾರ್ನರಿನ ಧೂಳುತುಂಬಿದ ಒಳಭಾಗಗಳಲ್ಲಿ ಅಥವಾ ಯೂನುಸ್ ಭಾಯಿಯವರ ಫೋರ್ಟ್ ಬುಕ್ ಸ್ಟಾಲ್ ಎಂಬ ಹೆಸರಿನ ಅಲ್ಲಾದೀನನ ಗುಹೆಯ ಕಿರಿದಾದ ಮೊದಲನೆಯ ಮಹಡಿಯಲ್ಲಿ ಕಳೆದಿದ್ದೇವೆ!
ನಾನು ವಯಸ್ಸಾದವಳಂತೆ ವರ್ತಿಸುತ್ತಿದ್ದರೆ, ಕ್ಷಮಿಸಿ. ಆದರೆ ಈ ಪುಸ್ತಕವು ಹಳೆಯ ಮುಂಬೈಗೊಂದು ಕಾಣಿಕೆ. ಇದು ನನಗೇ ತಿಳಿಯದಂತೆ ನನ್ನೊಳಗಿಂದ ಹರಿದು ಮೂಡಿಬಂತು. ನಾನು ಈ ಚಿತ್ರಗಳನ್ನು ರಚಿಸಿದ ನಂತರ ಅವುಗಳನ್ನು ಅವಲೋಕಿಸುತ್ತಿದ್ದಾಗ ನಾನು ಒಂದೇ ಒಂದು ಸೆಲ್ ಫೋನನ್ನಾಗಲೀ , ಡಿಶ್ ಆಂಟೆನ್ನಾವನ್ನಾಗಲೀ ಚಿತ್ರಿಸಿಯೇ ಇಲ್ಲವೆಂಬುದು ನನಗೆ ಅರಿವಾಯಿತು. ಇದು ನನಗೆ ವಿಸ್ಮಯವನ್ನುಂಟು ಮಾಡಿತು. ಆದರೆ ಇದು ಉದ್ದೇಶಪೂರ್ವಕವಾಗಿರಲಿಲ್ಲ.
ಬಾಂಬೆಯ ಬಗ್ಗೆ ಆ ಪ್ರೀತಿ ಮತ್ತು ಗೌರವವನ್ನು ಪ್ರತಿ ಪುಟದಲ್ಲೂ ನಾವು ಕಾಣುತ್ತೇವೆ . ನೀವು ಪಾತ್ರಗಳ ಬಗ್ಗೆ ಹೇಳಿದಂತೆ ಜಾಗಗಳೂ ಸಹ ಲೇಖಕರಿಗೆ ಮತ್ತು ಚಿತ್ರಕಾರರಿಗೆ ನೈಜವಾಗಿರಬೇಕು. ಹಾಗಿದ್ದರೆ ಮಾತ್ರ ಅವು ಓದುಗರಿಗೂ ನೈಜವಾಗುತ್ತವೆ.
ಈ ಪುಸ್ತಕದ ಇನ್ನೊಂದು ನೈಜತೆಯೇನೆಂದರೆ ಇದನ್ನು ಬರೆದ ರೀತಿ. ಇದನ್ನು ಯಾರು ಬೇಕಾದರೂ ಕೈಗೆತ್ತಿಕೊಂಡು ಓದಿ ಆನಂದಿಸಬಹುದು ಎಂದು ನನಗನ್ನಿಸುತ್ತದೆ. ಎಲ್ಲಾ ವಯಸ್ಸಿನವರೂ ಓದಿ ಆನಂದಿಸಬಹುದಾದಷ್ಟು ಸರಳತೆಯ ಮಟ್ಟವನ್ನು ಸಾಧಿಸುವುದು ಹೇಗೆ?
ನಾನು ನಾಲ್ಕು ವರ್ಷದ ಮಕ್ಕಳಿಗೆ ಅಥವಾ ಏಳು ವರ್ಷದ ಮಕ್ಕಳಿಗಾಗಿ ಎಂದು ಕತೆ ಬರೆಯಲು ತೊಡಗುವುದಿಲ್ಲ. ಮೊದಲಿಗೆ ಒಬ್ಬ ಓದುಗಳಾಗಿ ನನಗೆ ಆ ಕತೆ ಮನಮುಟ್ಟಬೇಕು. ಅದು ತನ್ನ ಚೌಕಟ್ಟಿನಲ್ಲಿ ತರ್ಕಬದ್ದವಾಗಿರಬೇಕು . ಹಾಗೂ ತಾನು ಹೇಳಬೇಕೆಂದಿರುವುದನ್ನು ಅದು ಆದಷ್ಟು ಉತ್ತಮವಾಗಿ ಹೇಳಬೇಕು.
ಹೀಗಾದರೆ ಕಥೆಯ ಹರಿವು ಕೂಡ ಸುಲಲಿತವಾಗಿರುತ್ತದೆ. ಓದುಗರನ್ನು ಕಡಿಮೆ ಬುದ್ದಿವಂತರಂತೆ ನೋಡುತ್ತಾ ಕತೆಯನ್ನು ವಿವರಿಸಬಾರದು. ( ಏಕೆಂದರೆ ನಾನೂ ಒಬ್ಬ ಓದುಗಳೇ). ಅಷ್ಟಾದರೆ ಪುಸ್ತಕ ಒಂದು ಹೆಚ್ಚು ವ್ಯಾಪ್ತಿಯ ಓದುಗರುಗಳಿಗೆ ಆಸಕ್ತಿಕರವಾಗಬಹುದೆಂದು ನನ್ನ ಆಶಯ.
ಪುಸ್ತಕ ರೂಪುಗೊಳ್ಳುತ್ತಾ ಮುಂದುವರೆದಂತೆ ಅದರ ಪಠ್ಯದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಯಿತಾ?
ನಾನು ಚಿತ್ರಗಳನ್ನು ಚಿತ್ರಿಸುವುದನ್ನು ಪ್ರಾರಂಭಿಸುವ ಮುನ್ನವೇ ಪಠ್ಯವು ಸಂಪೂರ್ಣವಾಗಿ ತಯಾರಾಗಿತ್ತು. ನಾನು ಸಾಮಾನ್ಯವಾಗಿ ನನ್ನ ಕತೆಯ ಬಹಳ ಕರಡು ಪ್ರತಿಗಳನ್ನು ಬರೆದು ಓದಿ ನೋಡುತ್ತೇನೆ. ಪ್ರತಿ ಕರಡು ಪ್ರತಿಯ ನಡುವೆ ಎರಡು ಮೂರು ದಿನದ ಅಂತರವಿರುತ್ತದೆ.
ನಾನು ಬರೆದುದೆಲ್ಲವನ್ನೂ ನಾನು ಜೋರಾಗಿ ಓದುತ್ತೇನೆ. ಅದರಿಂದ ಅದು ಹೇಗೆ ಕೇಳುತ್ತದೆ ಎಂದು ನನಗೆ ತಿಳಿಯುತ್ತದೆ. ನಾನು ನನ್ನ ಕತೆಯನ್ನು ಒಮ್ಮೆ ಕೊಟ್ಟ ಮೇಲೆ ಅದನ್ನು ಬದಲಿಸ ಬೇಕಾದರೆ ನನ್ನನ್ನು ಒಪ್ಪಿಸ ಬಲ್ಲ ಒಂದು ಅತ್ಯಂತ ಬಲವಾದ ಅಂಶವೇ ಆ ವಾದದಲ್ಲಿ ಇರಬೇಕಾಗುತ್ತದೆ.
ಒಂದು ಪುಸ್ತಕಕ್ಕೆ ದೃಶ್ಯಗಳನ್ನು ನೀವು ಹೇಗೆ ನಿರ್ಧರಿಸುತ್ತೀರಿ? ಕತೆಯ ಲೇಖಕರು ಮತ್ತು ಚಿತ್ರಕಾರರು ಒಬ್ಬರೇ ಆದಾಗ ಈ ಪ್ರಕ್ರಿಯೆ ಹೆಚ್ಚು ಪ್ರಕ್ರಿಯೆಯಲ್ಲಿ ಹೆಚ್ಚು ವ್ಯತ್ಯಾಸಗಳಾಗುತ್ತವೆಯೇ?
ನಾನು ನನ್ನ ಪುಸ್ತಕಗಳಿಗೆ ನಾನೇ ಚಿತ್ರಗಳನ್ನು ರಚಿಸಿದಾಗ, ನಾನು ಬರೆಯುತ್ತಿರುವ ಹಾಗೆಯೇ ದೃಶ್ಯಗಳು ನನ್ನಲ್ಲಿ ಮೂಡಲು ಪ್ರಾರಂಭವಾಗುತ್ತವೆ. ಕೆಲವು ವಿಷಯಗಳನ್ನು ನಾನು ಮಾತುಗಳಲ್ಲಿ ಬರೆಯಲೇ ಬೇಕಾಗಿಲ್ಲ, ಏಕೆಂದರೆ ನನ್ನ ಚಿತ್ರಗಳು ಅವುಗಳನ್ನು ಹೇಳುತ್ತವೆ. ಚಿತ್ರಗಳು ಕತೆಯನ್ನು ಮುಂದುವರೆಸಬೇಕು. ಪದಗಳು ತೆರೆದಿಡಲಾಗದ್ದನ್ನು ಚಿತ್ರಗಳು ತೆರೆದು ಹೇಳಬೇಕು. ನಾನು ಚಿತ್ರಿಸುತ್ತಾ ಬರೆಯುವಾಗ ನನ್ನೊಂದಿಗೇ ನಾನು ವಿಚಿತ್ರವಾದ ಹುಚ್ಚು ಸಂಭಾಷಣೆಗಳಲ್ಲಿ ತೊಡಗಿಕೊಂಡಿರುತ್ತೇನೆ!
ಚಿಕ್ಕ ಮಕ್ಕಳಿಗೆ ಪುಸ್ತಕಗಳನ್ನು ರಚಿಸುವುದು ದೊಡ್ಡ ಮಕ್ಕಳಿಗೆ ಪುಸ್ತಕಗಳನ್ನು ರಚಿಸುವುದಕ್ಕಿಂತ ಭಿನ್ನವೇ?
ಪ್ರತಿಯೊಂದು ಪುಸ್ತಕಕ್ಕೂ ಅದರದೇ ಆದ ಸವಾಲುಗಳಿರುತ್ತವೆ. ನಾನು ಚಿಕ್ಕ ಮಕ್ಕಳ ಪುಸ್ತಕಗಳೆಡೆಗೆ ಹಾಗೇ ಸುಮ್ಮನೇ ವಾಲಿಬಿಟ್ಟೆ. ನನಗೆ ಅಧ್ಯಾಯಗಳಿರುವ ಒಂದು ಪುಸ್ತಕವನ್ನು ಬರೆಯಬೇಕೆಂಬ ಹಂಬಲವಿದೆ. ( ಆಶಾವಾದದ ನಿಟ್ಟುಸಿರು ಬಿಡುತ್ತಾ ..)
ನಿಮ್ಮ ಚಿತ್ರಿಸುವ ಹವ್ಯಾಸಕ್ಕೆ ಪ್ರೇರಣೆ ಏನು ?
ನಾವು ನೋಡುವ, ಅನುಭವಿಸುವ ಪ್ರತಿಯೊಂದೂ ನಮ್ಮ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂದು ನನ್ನ ಅನಿಸಿಕೆ. ನಮ್ಮ ಸುತ್ತಮುತ್ತ ನಡೆಯುವ ರಾಜಕೀಯ ಘಟನೆಗಳು, ಇತರ ಕಲಾವಿದರ ಇಂಸ್ಟಾಗ್ರಾಮ್ ಪೋಸ್ಟುಗಳು ಅಥವಾ ನಾನು ಕತೆ ಹೇಳುವಾಗ ಮಕ್ಕಳ ಮುಖಗಳ ಮೇಲೆ ಕಾಣುವ ಭಾವನೆಗಳು. ಯಾವುದಾದರೊಂದು ಮಗು ತನಗೆ ಯಾವುದಾದರೂ ಚಿತ್ರಕತೆಯ ಪುಸ್ತಕ ಇಷ್ಟ ಆಗಲಿಲ್ಲವೆಂದು ಹೇಳಿದಾಗ ನಾನು ಆ ಮಾತುಗಳನ್ನು ಧ್ಯಾನವಿಟ್ಟು ಕೇಳುತ್ತೇನೆ. ಹಾಗೇ ಯಾವುದಾದರೂ ಮಗು ಯಾವುದಾದರೂ ಚಿತ್ರವನ್ನು ಬಹಳ ಇಷ್ಟ ಪಟ್ಟಾಗ ಅದನ್ನು ನಾನು ಬಹಳ ಎಚ್ಚರಿಕೆಯಿಂದ ಗಮನಿಸುತ್ತೇನೆ.
ಮಕ್ಕಳ ಪುಸ್ತಕಗಳನ್ನು ಬರೆಯುವುದೇ ಅಲ್ಲದೆ ನೀವು ಪಠ್ಯಕ್ರಮಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ತಯಾರು ಮಾಡುವುದರಲ್ಲಿ ಕೂಡಾ ಕೆಲಸ ಮಾಡಿದ್ದೀರಿ. ಅದರ ಬಗ್ಗೆ ನನಗೆ ಇನ್ನೂ ಹೆಚ್ಚು ತಿಳಿಸಿ. ಆ ಪ್ರಕ್ರಿಯೆ ಹೇಗೆ ಭಿನ್ನವಾಗಿತ್ತು?
ಶೈಕ್ಷಣಿಕ ಸಾಮಗ್ರಿಗಳು ಮತ್ತು ಪಠ್ಯಕ್ರಮಗಳನ್ನು ತಯಾರಿಸುವ ಕೆಲಸ ಯಾವಾಗಲೂ ಒಂದು ತಂಡದ ಭಾಗವಾಗಿ ಕೈಗೊಳ್ಳುವ ಕೆಲಸ. ತಂಡದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಿಶಿಷ್ಠವಾದ ಕೌಶಲ್ಯವನ್ನೂ ಸಾಮರ್ಥ್ಯವನ್ನೂ ತಂಡಕ್ಕೆ ಒದಗಿಸುತ್ತಾರೆ. ಚರ್ಚೆ ಮತ್ತು ಸಮಾಲೋಚನೆಗಳು ಈ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾದದ್ದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಜವಾಬ್ದಾರಿ ಇದ್ದರೂ ಕೊನೆಯ ಫಲಿತಾಂಶ ಮಾತ್ರ ಇಡೀ ತಂಡದ ಸಾಂಘಿಕ ಫಲಿತಾಂಶದ ಫಲ. ಒಂಟಿಯಾಗಿ ಕೆಲಸ ಮಾಡುವಾಗ ಆ ಕೆಲಸದಲ್ಲಿ ಅಶಿಸ್ತು ಮತ್ತು ಅವ್ಯವಸ್ಥೆ ಒಳಹೊಕ್ಕುವ ಸಾಧ್ಯತೆಗಳಿರುತ್ತವೆ. ಕೆಲಸ ಸಾಗುತ್ತಾ ಇರುವಾಗ ನಮ್ಮ ಕೆಲಸಕ್ಕೆ ಇತರರಿಂದ ದೊರಕುವ ವಿಮರ್ಶೆ ಮತ್ತು ಅಭಿಪ್ರಾಯಗಳು ಬಹಳ ಮುಖ್ಯ.
ಮಕ್ಕಳಿಗಾಗಿ ಚಿತ್ರ ರಚಿಸುವ ನಿಮ್ಮ ಈ ಪಯಣವನ್ನು ನೀವು ಹೇಗೆ ಆರಂಭಿಸಿದಿರಿ?
ನಾನು ೧೯೯೧ ರಲ್ಲಿ ಅವೇಹಿ-ಅಬಾಕಸ್ ಯೋಜನೆಯನ್ನು ಸೇರಿದಾಗ ಮಕ್ಕಳಿಗಾಗಿ ಚಿತ್ರ ರಚಿಸುವುದನ್ನು ಆರಂಭಿಸಿದೆ. ನಾನು ಆ ಯೋಜನೆಯಲ್ಲಿ ಸುಮಾರು ೨೦ ವರ್ಷಗಳ ಕಾಲ ಇದ್ದೆ. ಆ ಯೋಜನೆಯ ಮುಖ್ಯ ತಂಡವಾಗಿ ನಾವು ಒಂದು ೩ ವರ್ಷಗಳ ಕೋರ್ಸ್ ಗೆ ಅಡಿಪಾಯವಾಗುವಂತ ಪಠ್ಯಕ್ರಮ ತಯಾರಿಸಿದೆವು. ಅದನ್ನು ಈಗ ಗ್ರೇಟರ್ ಮುಂಬೈನ ಎಲ್ಲಾ ಹಿರಿಯ ಪ್ರಾಥಮಿಕ ಮುನಿಸಿಪಲ್ ಶಾಲೆಗಳಲ್ಲಿ ಮತ್ತು ಬೇರೆಡೆಯ ಶಾಲೆಗಳಲ್ಲಿ ಉಪಯೋಗಿಸುತ್ತಿದ್ದಾರೆ.
ಒಬ್ಬ ಕಲಾಕಾರಳಾಗಿ ಮತ್ತು ಒಬ್ಬ ವ್ಯಕ್ತಿಯಾಗಿ ಆ ಅವಧಿಯು ನನ್ನ ಅತಿ ದೊಡ್ಡ ಮಟ್ಟದ ಕಲಿಕೆಯ ಕಾಲವಾಗಿತ್ತು. ಆ ಸಮಯದಲ್ಲಿ ಈ ಯೋಜನೆಯು ನನ್ನ ಬಹಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಮುಂದೆ ೨೦೦೫ರಲ್ಲಿ ನಾನು ತುಲಿಕಾ ಗೋಸ್ಕರ “ದ ಸೀಡ್” ಎಂಬ ನನ್ನ ಮೊದಲ ಪುಸ್ತಕವನ್ನು ಬರೆದು ಅದಕ್ಕೆ ಚಿತ್ರಗಳನ್ನೂ ರಚಿಸಿದೆ. ಅದಾದ ನಂತರ ಬೇರೆಬೇರೆ ಪ್ರಕಾಶಕರಿಗಾಗಿ ಬಹಳಷ್ಟು ಪುಸ್ತಕಗಳನ್ನು ಬರೆದೆ.
ಹೌದು. The Lonely King and Queen, The sea in a bucket, One and many ಇವೆಲ್ಲಾ ನನ್ನ ಕೆಲವು ಇಷ್ಟದ ಪುಸ್ತಕಗಳು. ನೀವು ಮೆಚ್ಚುವ ಕೆಲವು ಚಿತ್ರಗಳ ಬಗ್ಗೆ ಹೇಳಿ.
ನಾನು ಮೆಚ್ಚುವ ಕಲಾಕಾರರ ಒಂದು ದೊಡ್ಡ ಸಮೂಹವೇ ಇದೆ. ಮಿಕ್ಕಿ ಪಟೆಲ್, ಶ್ರಿವಿದ್ಯ ನಟರಾಜನ್, ಪ್ರಿಯಾ ಕುರಿಯನ್, ಬಿಂದಿಯ ಥಾಪರ್, ದುರ್ಗಾಬಾಯ್ ವ್ಯಾಮ್, ಲಾವಣ್ಯ ನಾಯ್ಡು, ರುಚಿ ಮ್ಹಸಾನೆ, ರಾಜೀವ್ ಐಪ್, ಪ್ರೋಯಿತಿ ರಾಯ್, ಸಂಧ್ಯ ಪ್ರಭಾತ್, ಅತನು ರಾಯ್, ತಪೋಶಿ ಘೋಶಲ್, ಪುಲಕ್ ಬಿಸ್ವಾಸ್, ಶಚಿ ಕಾಳೆ…..ಹೀಗೆ ನಾನು ಹೇಳುತ್ತಲೇ ಹೋಗಬಹುದು. ಇವರೆಲ್ಲರ ಯಾವುದೇ ಪುಸ್ತಕವನ್ನೂ ನೀವು ಕೈಗೆತ್ತಿಕೊಂಡು ಖುಶಿ ಪಡಬಹುದು.
ಮಕ್ಕಳಿಗಾಗಿ ಚಿತ್ರ ರಚಿಸುವವರು ತಮ್ಮ ಮನಸ್ಸಿನಲ್ಲಿ ಇರಿಸಬೇಕಾದ್ದಂಥಾ ಅಂಶಗಳು ಯಾವುವು?
ಯಾವುದೇ ವಿಷಯವನ್ನೂ ತಾವಾಗೇ ಮನಸ್ಸಿನಲ್ಲಿ ‘ಇದು ಹೀಗೇ’ ಎಂದು ಅಂದುಕೊಂಡುಬಿಡಬಾರದು. ಬದಲಾಗಿ ತಮ್ಮ ಚಿತ್ರಗಳನ್ನು ಮಕ್ಕಳಿಗೆ ತೋರಿಸಿ ಅವನಿಗೆ /ಅವಳಿಗೆ ಅದನ್ನು ನೋಡಿದರೆ ಏನನ್ನಿಸುತ್ತದೆ ಎಂದು ತಿಳಿದುಕೊಳ್ಳಬೇಕು. ನಿಮಗೆ ಒಂದು ಪ್ರಾಮಾಣಿಕ ಉತ್ತರ ದೊರೆಯುತ್ತದೆ.
೨೦೧೯ರಲ್ಲಿ ‘Nani’s Walk to the Park” ೦-೮ ವರ್ಷಗಳವರೆಗಿನವರಿಗಾಗಿ ವಾರ್ಷಿಕ ಮುದ್ರಿತ ಪುಸ್ತಕಗಳ ವರ್ಗದಲ್ಲಿ ಪಬ್ಲಿಶಿಂಗ್ ನೆಕ್ಸ್ಟ್ ಬುಕ್ ಪುರಸ್ಕಾರವನ್ನು ಗೆದ್ದಿತು. ಅಲ್ಲದೆ ಅದು ” ಬೆಸ್ಟ್ ಆಫ್ ಇಂಡಿಯನ್ ಚಿಲ್ಡ್ರನ್ ರೈಟಿನ್ಗ್ (ಬಿ.ಐ.ಸಿ.ಡಬಲ್ಯು) ಸಮಕಾಲೀನ ಪುರಸ್ಕಾರವನ್ನೂ ಗಳಿಸಿದೆ.
ಈ ಕತೆಯು storyweaver ನಲ್ಲಿ ಕೂಡಾ ಲಭ್ಯವಿದೆ. ಸ್ಟೋರೀ ವೀವರ್ ಎನ್ನುವುದು ಪ್ರಥಮ್ ಬುಕ್ಸ್ ಅವರ ಅಂತರ್ಜಾಲದಲ್ಲಿನ ಒಂದು ಅದ್ಭುತ ಬಹುಭಾಷಾ ಮಕ್ಕಳ ಪುಸ್ತಕಗಳ ಕಣಜವಾಗಿದೆ.
ಪುಸ್ತಕ ಕೊಳ್ಳಲು : https://store.prathambooks.org/productDetails?nanis-walk-to-the-park-big-book-English
ಭಾರತದಲ್ಲಿನ ಮಕ್ಕಳ ಪುಸ್ತಕಗಳ ಚಿತ್ರಪುಸ್ತಕಗಳ ಪ್ರಕಟಣೆಯ ಪ್ರಪಂಚದ ಒಳನೋಟವೊಂದನ್ನು ಓದುಗರಿಗೆ ನೀಡುವುದು ಈ ಸಂದರ್ಶನಗಳ ಉದ್ದೇಶವಾಗಿದೆ. ಈ ಚಿತ್ರಗಳು ವಾಸ್ತವವಾಗಿ ಹೇಗೆ ಕೆಲಸ ಮಾಡುತ್ತವೆ ಮತ್ತವುಗಳ ಮಾಂತ್ರಿಕ ಶಕ್ತಿ ಏನೆಂದು ತಿಳಿಯೋಣ ! ಸಂಪರ್ಕದಲ್ಲಿರಿ !
ಈ ಸಂದರ್ಶನವನ್ನು ಇಂಗ್ಲೀಷಿನಲ್ಲಿ ಓದಲು : https://niharikashenoy.medium.com/nanis-walk-to-the-park-the-charm-of-a-place-celebrated-in-a-picture-book-b0d999d8d726
Nani’s Walk to the Park
Venki’s Nani has a special relationship with her neighbourhood. When Venki decides to go to the park
ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .
ಸ್ವತಂತ್ರ ಚಿತ್ರ ಕಲಾವಿದೆ ಮತ್ತು ಬರಹಗಾರ್ತಿ. ಮಕ್ಕಳ ಪುಸ್ತಕಗಳಿಗೆ ಚಿತ್ರ ಬರೆಯುವುದರಲ್ಲಿ ನಿಷ್ಣಾತರು. ನಮ್ಮ ದೇಶದ ಅನೇಕ ಪ್ರಸಿದ್ಧ ಪ್ರಕಾಶಕರ ಪುಸ್ತಕಗಳಿಗೆ ಚಿತ್ರ ಬಿಡಿಸಿದ್ದಾರೆ. ಬೆಂಗಳೂರಿನ ನಿವಾಸಿ.