ಮೈಕೆಲ್‌ ಹೋಲ್ಡಿಂಗ್ : ಜನಾಂಗೀಯ ದ್ವೇಷ ಮಾನವೀಯತೆಯನ್ನು ಕಿತ್ತೆಸೆಯುತ್ತದೆ, ಆತ್ಮಗೌರವವನ್ನು ನಾಶಮಾಡುತ್ತದೆ

ಕ್ರಿಕೆಟ್ ಲೋಕದ ದಂತಕಥೆ ಮೈಕಲ್ ಹೋಲ್ಡಿಂಗ್ ಇತ್ತೀಚೆಗೆ ವೀಕ್ಷಕ ವಿವರಣೆ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಹೋಲ್ಡಿಂಗ್ ಕ್ರೀಡೆಯಲ್ಲಿನ ಜನಾಂಗೀಯ ದ್ವೇಷದ ಕುರಿತಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡುತಿದ್ದವರು. ‘ಬ್ಲಾಕ್ ಲಿವ್ಸ್ ಮ್ಯಾಟರ್’ ಚಳುವಳಿ ಶುರುವಾದಾಗ ಕಾಮೆಂಟರಿ ಬಾಕ್ಸ್ ನಲ್ಲಿ ಕೂತು ಕ್ರಿಕೆಟ್ ಜಗತ್ತಿಗೆ ಅಸ್ಪ್ರಶ್ಯತೆಯ ಮಜಲುಗಳನ್ನು ತೆರೆದಿಟ್ಟವರು. ಕ್ರೀಡೆಯ ದುರ್ಬೀನಿನ ಮೂಲಕ ಉಸೈನ್ ಬೋಲ್ಟ್‌‌, ಮಕಾಯಾ ಎನ್ಟಿನಿ, ಆಡಮ್‌ ಗುಡ್ಡೆಸ್‌, ಇಬ್ತಿಹಾಜ಼್ ಮೊಹಮ್ಮದ್‌, ನಓಮಿ ಒಸಾಕಾ ಮತ್ತು ಹೋಪ್‌ ಪೋವೆಲ್‌ ಮುಂತಾ ವಿಶ್ವದ ಖ್ಯಾತ ಕ್ರೀಡಾಪಟುಗಳ ಸಂದರ್ಶನಗಳ ಜೊತೆಗೆ ಮೈಕೆಲ್‌ ಹೋಲ್ಡಿಂಗ್ ಬರೆದ “WHY WE KNEEL, HOW WE RISE” ಎಂಬ ಪುಸ್ತಕದ ಆಯ್ದ ಭಾಗದ ಅನುವಾದ ನಿಮ್ಮ ಓದಿಗೆ.

ಉಸೇನ್‌ ಬೋಲ್ಟ್‌ ಗೆ ಈಗ ಮೂವತ್ನಾಲ್ಕರ ಪ್ರಾಯ. ಮತ್ತು ನಾನು ಮಾತನಾಡುತ್ತಿರುವುದೂ ನನಗೆ ಅಷ್ಟೇ ವಯಸ್ಸಾಗಿದ್ದಾಗಿನ ಬಗ್ಗೆಯೇ. ನಾನು ಪರ್ಯಟನೆ ಮಾಡಿದ್ದೇನೆ. ಅವಮಾನಗಳನ್ನು ನೋಡಿದ್ದೇನೆ. ಅವುಗಳ ಬಗ್ಗೆ ಕೇಳಿದ್ದೇನೆ.  ಮತ್ತೆ ಮರಳಿ ಮನೆಗೆ ಬಂದಿದ್ದೇನೆ.  ಅದರ ಬಗ್ಗೆ ಎಂದಾದರೂ ನನ್ನ ಪೋಷಕರೊಂದಿಗೆ ಮಾತನಾಡಿದ್ದೇನಾ? ನಿಜವಾಗಿಯೂ ಇಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಜರುಗುವ ಘಟನೆಗಳ ಬಗ್ಗೆ ನಾವು ಎಂದೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.  ನನ್ನ ಗಮನವೇನಿದ್ದರೂ ನನ್ನ ಕ್ರೀಡೆಯ ಬಗ್ಗೆ ಮತ್ತು ವೃತ್ತಿಯ ಬಗ್ಗೆ. ಜೀವನವನ್ನು ರೂಪಿಸಿಕೊಂಡು ಮುನ್ನಡೆಯುವ ಬಗ್ಗೆ. ಉಸೇನ್‌ ಬೋಲ್ಟ್‌ ಗೂ ಸಹ ಇದೇ ಅನ್ವಯಿಸುತ್ತದೆ. ವಿಶ್ವ ಕಂಡರಿಯದ ವೇಗದ ಓಟಗಾರನಾಗಿದ್ದಾಗ, ಅವರ ಜೀವನವೂ ಕೂಡ ತುಸು ಅವಿಶ್ರಾಂತವಾಗಿ ತಲೆಯಲ್ಲಿ ನೂರಾರು ಆಲೋಚನೆಗಳು ತುಂಬಿಕೊಂಡಿರುತ್ತವೆ. ನಾನು ಕ್ರಿಕೆಟ್‌ ಪ್ರವಾಸವನ್ನೋ ಅಥವಾ ಇಂಗ್ಲೆಂಡಿನ ನಿಗದಿತ ಕೌಂಟಿ ಕ್ರಿಕೆಟ್‌ ಪಂದ್ಯಾವಳಿಗಳನ್ನೋ ಮುಗಿಸಿಕೊಂಡು ಜಮೈಕಾಗೆ ವಾಪಸಾದ ನಂತರ, ಕೊನೆಯದಾಗಿ ಮಾಡುತ್ತಿದ್ದ ಕೆಲಸವೆಂದರೆ ನನ್ನ ಪೋಷಕರ ಬಳಿ ನಾವು ಅನುಭವಿಸಿದ ಎಲ್ಲಾ ವರ್ಣಬೇಧದ ಘಟನೆಗಳ ಬಗ್ಗೆ ಹಲುಬುವುದು.  ನಮ್ಮ ಬಳಿ ಅವುಗಳ ಅಗಾಧ ಭಂಢಾರವೇ ಇತ್ತು.

ಅದು 1975.  ವೆಸ್ಟ್‌ ಇಂಡೀಸ್‌ ತಂಡದ ಆಟಗಾರನಾಗಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸ. ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ ನಲ್ಲಿ ಸೇರಿದ್ದ ಪ್ರೇಕ್ಷಕರ ಗುಂಪು ಆಟದ ವೇಳೆ ನನ್ನನ್ನು ಉದ್ದೇಶಿಸಿ “”Go back to the trees!”” ಎಂದು ಕೇಕೆ ಹಾಕಿ ಅವಮಾನಿಸಿತ್ತು.  ಈಗಿನ ದಿನಗಳಲ್ಲಿ ಆಗಿದ್ದರೆ ಇದು ಸುದ್ದಿ ಮನೆಯ ಹೆಡ್‌ ಲೈನ್‌ ಆಗಿರುತ್ತಿತ್ತು.  ನಾನು ಇದನ್ನು ಟೈಪಿಸುವ ಹೊತ್ತಿಗೆ ಭಾರತೀಯ ಆಟಗಾರರು ಸಿಡ್ನಿಯಲ್ಲಿ ಪ್ರೇಕ್ಷಕರಿಂದ ಕೇಳಿದ ಹೀಯಾಳಿಕೆಯ ಬಗ್ಗೆ ಓದಿದೆ.  ಹಿಂದಿನ ಕಾಲದಲ್ಲಾಗಿದ್ದರೆ ನಾವು ಪ್ರತಿಕ್ರಿಯೆ ನೀಡದೆ, ”ದೇವರೇ ಈ ದೇಶದಲ್ಲಿ ನಾವು ಹುಟ್ಟದೇ ಇರುವುದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ“ ಎಂದುಬಿಡುತ್ತಿದ್ದೆವು. ಆದರೆ 2020 ರಲ್ಲಿ, ಈಗಲೂ ಇಂತಹ ಘಟನೆಗಳು ನಡೆಯುತ್ತವೆ ಎಂದರೆ? ನಿಜಕ್ಕೂ ಅಸಹ್ಯ.

ಆಸ್ಟ್ರೇಲಿಯಾದಲ್ಲಿ ನಾವು ತಿರುಗಾಡುವಾಗ ನಡೆದ ಘಟನೆಯೊಂದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ.  ಹೋಟೆಲಿನಲ್ಲಿ ನಾವು ತಂಗಿದ್ದ ಮಹಡಿಯಿಂದ ಲಾಬಿಗೆ ನನ್ನ ಸಹ ಆಟಗಾರರೊಂದಿಗೆ ಲಿಫ್ಟ್‌ ನಲ್ಲಿ ಬರುವಾಗ, ಕೆಳಗಿನ ಒಂದು ಹಂತದಲ್ಲಿ ಲಿಫ್ಟ್‌ ನಿಂತು ಬಾಗಿಲು ತೆರೆಯಿತು. ಕೆಳಗೆ ಹೋಗಲು ಕಾಯುತ್ತಿದ್ದ ಮಧ್ಯವಯಸ್ಕ ಬಿಳಿಯ ವ್ಯಕ್ತಿಯು ತೆರೆದ ಲಿಫ್ಟಿನ ಬಾಗಿಲ ಹಿಂದೆ ನಿಂತಿದ್ದ ನಮ್ಮ ಐದು ಜನರನ್ನು ನೋಡಿ ಹಿಂದೆ ಸರಿದ. ಇರಲಿ.  ಅವನಿಗಿಂತಲೂ ಎತ್ತರಕ್ಕಿದ್ದ ನಮ್ಮ ಐದು ಜನರ ಗುಂಪನ್ನು ನೋಡಿ ಆತ ಕಸಿವಿಸಿಗೊಂಡಿರಬೇಕು. ಆದರೆ ಲಿಫ್ಟಿನ ಬಾಗಿಲು ಹಾಕಿಕೊಂಡ ತಕ್ಷಣ ನಮ್ಮನ್ನು ಉದ್ದೇಶಿಸಿ ಜನಾಂಗೀಯ ಬೈಗುಳ ಬೈದ. ನಾವು ಅಷ್ಟೂ ಜನ ಏನು ಮಾಡಿದೆವು ಗೊತ್ತಾ? ಜೋರಾಗಿ ನಕ್ಕೆವು. ಆಸ್ಟ್ರೇಲಿಯಾದಂತಹ ದೇಶದಲ್ಲೂ ಇಂತಹ ಮೂರ್ಖರಿರುತ್ತಾರಲ್ಲ ಎಂಬುದು ನಮಗೆ ತಮಾಷೆಯ ಸಂಗತಿಯಾಗಿತ್ತು. ನಾವು ಬೆಳೆದು ಬಂದಂತಹ ಕೆರಿಬಿಯನ್‌ ರಾಷ್ಟ್ರದಲ್ಲಿ ಇಂತಹ ನಡವಳಿಕೆಯನ್ನು ಎಂದಿಗೂ ಕಂಡಿರಲಿಲ್ಲ.

1976 ರಲ್ಲಿ ಇಂಗ್ಲೆಂಡಿಗೆ ನನ್ನ ಮತ್ತೊಂದು ವಿದೇಶ ಪ್ರವಾಸ. ಅಲ್ಲಿ 1980ರ ವರೆಗೂ ತಂಗಿದ್ದೆ.  ಮುಖ್ಯವಾಗಿ  ಇಂಗ್ಲೆಂಡಿನಲ್ಲಿ ಜನಾಂಗೀಯ ನಿಂದನೆಗಳು ಪತ್ರಗಳಾಗಿ ನಮ್ಮ ಡ್ರೆಸಿಂಗ್‌ ರೂಮಿಗೆ ಬರುತ್ತಿದ್ದವು. ನಮ್ಮ ಆಟೋಗ್ರಾಫ್ ಕೇಳಿಕೊಂಡು ಬರುತ್ತಿದ್ದ ಬಹಳಷ್ಟು ಪತ್ರಗಳ ನಡುವೆ, ಹೀಗೆ ಇರುಸುಮುರುಸು ಉಂಟುಮಾಡುವ ಪತ್ರಗಳೂ ಇರುತ್ತಿದ್ದೆವು. ಅವುಗಳಿಗೆ ನಾವು ಕಸದ ಬುಟ್ಟಿಯ ನೇರದಾರಿಯನ್ನು ತೋರಿಸುತ್ತಿದ್ದೆವು. ಆ ಪತ್ರಗಳಲ್ಲಿ ಏನು ಬರೆದಿತ್ತೆಂಬುದು ನನಗೆ ಸ್ಫಷ್ಟವಾಗಿ ನೆನಪಿಲ್ಲ, ಅದೇ ಚರ್ವಿತ ಚರ್ವಣ ಪದಗಳು ಇರುತ್ತಿದ್ದವು. “ನೀನು ಕರಿಯ, ನೀನು ಅದು, ನೀನು ಇದು, ನಿನ್ನ ದೇಶಕ್ಕೆ ವಾಪಸ್ಸು ಹೋಗು” ಇತ್ಯಾದಿ.

ಮೈದಾನದಲ್ಲಿ ಆಟವಾಡುವಾಗ ಯಾವುದೇ ಎದುರಾಳಿ ಆಟಗಾರರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರಲಿಲ್ಲ. ಆದರೆ ಒಂದು ಬಾರಿ ಕೌಂಟಿ ಕ್ರಿಕೆಟ್ ಶುರುವಾಗುವ ಮುನ್ನ ನಾನು ಒಂದು ವೃತ್ತಿಪರ ತಂಡದಲ್ಲಿ ಅತಿಥಿ ಆಟಗಾರನಾಗಿದ್ದಾಗ ಮಾತ್ರ ನನ್ನ ಚರ್ಮದ ಬಣ್ಣವನ್ನು ಜ್ಞಾಪಿಸಿಕೊಳ್ಳುವಂತೆ ಮಾಡಿದ್ದರು. ಒಂದು ವಿಕೆಟ್‌ ಬಿದ್ದ ಮೇಲೆ ತಂಡದ ಆಟಗಾರರೆಲ್ಲ ಗುಂಪುಗೂಡಿ ಮುಂದಿನ ನಡೆಯ ಬಗ್ಗೆ ಚರ್ಚಿಸುತ್ತಿರುವಾಗ ಸಹ ಆಟಗಾರರೊಬ್ಬರು “ಆ ಕರಿಯ ಆಟಗಾರನಿಗೆ ಬೌಲ್‌ ಮಾಡಲು ಹೇಳಿ” ಎಂದರು.  ನಮ್ಮ ಕಾಲದ ಯಾರಾದರೂ ವೆಸ್ಟ ಇಂಡೀಸ್‌ ತಂಡದ ಆಟವನ್ನು ನೋಡಿದ್ದರೆ ತಿಳಿದಿರುತ್ತದೆ. ಯಾವಾಗ ವಿಕೆಟ್‌ ಪತನವಾದರೂ ನಮ್ಮ ಇಡೀ ತಂಡ ಒಟ್ಟಿಗೆ ಗುಂಪುಗೂಡಿ, ಹರ್ಷಾಚರಣೆ ಮಾಡುತ್ತಾ ಮುಂದಿನ ದಾಂಡಿಗ ಬರುವವರೆಗೂ ಮಾತನಾಡುತ್ತಾ ನಿಂತಿರುತ್ತಿದ್ದೆವು. ಕ್ರೀಡಾಂಗಣದ ಕೊನೆಯಲ್ಲಿರುವ ಆಟಗಾರನೂ ಸಹ ಈ ಮಾತುಕತೆಗೆಂದು ಬಂದು ಸೇರುತ್ತಿದ್ದ. ಈ ವೈಶಿಷ್ಟ್ಯತೆ ನಮ್ಮ ತಂಡದಲ್ಲಿ ಮಾತ್ರ ಇತ್ತು. ಬೇರಾವ ತಂಡಗಳೂ ಹೀಗೆ ಮಾಡುತ್ತಿರಲಿಲ್ಲ. ಅದರಲ್ಲೂ ಕೌಂಟಿ ತಂಡಗಳಲ್ಲಿಯಂತೂ ಈ ಅಭ್ಯಾಸ ಇರಲೇ ಇಲ್ಲ ಎನ್ನಬಹುದು. ನನಗೆ ಬೌಲಿಂಗ್‌ ನೀಡಲು ಹೇಳಿದ್ದ ಆ ವ್ಯಕ್ತಿಗೆ ನಾನು ಮೈದಾನದ ಅಂಚಿನಿಂದ  ಇವರಿಗಾಗಿ ಬಂದಿದ್ದೆ ಎಂಬ ಅರಿವಿದ್ದಂತೆ ಇರಲಿಲ್ಲ. ಆದು ನನ್ನನ್ನು ಚುಚ್ಚಿತ್ತು.

ನಾನು ಪ್ರಯಾಣಿಸಿದ ಅಷ್ಟೂ ವರ್ಷಗಳಲ್ಲಿಯೂ ವಿಶ್ವದ ಎಲ್ಲಾ ಮೂಲೆಗಳಿಂದಲೂ ಜನಾಂಗೀಯ ನಿಂದನೆಯ ನೋವನ್ನು ಅನುಭವಿಸಿದ್ದೇನೆ. ಆಟ ಆಡುವಾಗಲೂ, ಇತರೆ ಸಮಯದಲ್ಲೂ ಅದು ನನ್ನನ್ನು ಬಿಟ್ಟಿಲ್ಲ.  ಈಗ ಅದು ಬೇರೆಯದೇ ರೂಪ ಪಡೆದುಕೊಂಡಿದೆ. ನನ್ನ ಪತ್ನಿ ಲೌರಿ ಆನ್‌ ಬಿಳಿಯ ಹೆಣ್ಣುಮಗಳು. ಆಂಟಿಗುವಾ ಅವಳ ಊರಾದರೂ ಪೋರ್ಚುಗೀಸರ ಪರಂಪರೆಯುಳ್ಳವಳು.  ನಾವಿಬ್ಬರೂ ದಕ್ಷಿಣ ಆಫ್ರಿಕಾದಲ್ಲಿ ಒಮ್ಮೆ ಹೋಟೆಲಿಗೆ ಹೋಗಿದ್ದಾಗ ವಿಚಾರಣೆಯ ಕೌಂಟರ್‌ ಬಳಿಗೆ ಬಂದೆವು. ಆದರೆ ಅಲ್ಲಿನ ಸಿಬ್ಬಂದಿ ನನ್ನನ್ನು ಗಮನಿಸದವರ ಹಾಗೆ ಅವಳಿಗೆ ಮಾತ್ರ ರೂಮಿನ ಲಭ್ಯತೆಯ ಬಗ್ಗೆ ವಿವರಿಸಿದರು. ಲೌರಿ ನನ್ನ ಪಕ್ಕದಲ್ಲಿಯೇ ನಿಂತಿದ್ದರೂ, ಬಿಳಿಯಳಾದ ಆಕೆ ಈ ಕರಿಯನ ಹೆಂಡತಿಯಾಗಿರಲಾರಳು ಎಂಬುದು ಅವರ ಸ್ಪಷ್ಟ ನಿಲುವು.

ಬಹಾಮಾಸ್‌ನ ರಾಜಧಾನಿ ನಾಸ್ಸಾವ್‌ ನಲ್ಲಿ ರಜಾ ದಿನಗಳ ಪ್ರವಾಸದಲ್ಲಿದ್ದಾಗ, ಮುಂಚೆಯೇ ಕಾಯ್ದಿರಿಸಿದ್ದ ರೆಸ್ಟೋರೆಂಟಿಗೆ ಹೋದೆವು. ಅಲ್ಲಿದ್ದ ಹೋಟಿಲಿನ ವ್ಯವಸ್ಥಾಪಕ ನನ್ನನ್ನು ಕಡೆಗಣಿಸಿ ನನ್ನ ಪತ್ನಿಯೊಂದಿಗೆ ನಮ್ಮ ಕಾದಿರಿಸುವಿಕೆಯ ಬಗ್ಗೆ ವಿಚಾರಿಸಿದ.  ಊಟದ ಕೊನೆಗೆ ಮಾಣಿಯು ಬಿಲ್ಲನ್ನು ಅವಳ ಕೈಯಿಗೆ ತಂದು ಕೊಟ್ಟ. ನಿಸ್ಸಂಶಯವಾಗಿ ನಾಸ್ಸಾವ್‌ ಗೆ ಬಂದು ಬೀಚಿನಲ್ಲಿದ್ದ ಈ ಕರಿಯನನ್ನು ಹೋಟೆಲಿಗೆ ಕರೆದುಕೊಂಡು ಹೋಗಿದ್ದು ನನ್ನವಳೇ.  ಹೋಟೆಲಿನಲ್ಲಿ ನಮಗೆ ಸೇವೆ ನೀಡಿದವರೂ ಕರಿಯರೆ.  ತಲೆ ಕೆಡಿಸುವುದು ( brainwashing )  ಮತ್ತು ನಿರುದ್ದೇಶಿತ ಪಕ್ಷಪಾತ ಎರಡೂ ರೀತಿಯಲ್ಲಿ ಕೆಲಸ ಮಾಡುತ್ತದೆ. ನಾವು ಇಂತಹ ಸಂಗತಿಗಳನ್ನು ತಮಾಷೆ ಮಾಡಿಕೊಂಡು ನಗುತ್ತಿದ್ದೆವು. ನಗದೇ ಹೋದರೆ ಅಳುತ್ತಾ ಕೂರಬೇಕಿತ್ತು.  ಇಂತಹ ನೂರಾರು ಕಥೆಗಳಿವೆ. ಅನೇಕ ಅನುಭವಗಳಲ್ಲಿ ಅಕಾರಣವಾಗಿ ನನ್ನ ನೆನಪಿನಲ್ಲುಳಿದ ಕೆಲವನ್ನು ಹೇಳಿದ್ದೇನೆಯಷ್ಟೇ.  ಆದರೆ ಆ ಪ್ರತಿಯೊಂದು ಅನುಭವವೂ ಒಂದೇ ರೀತಿಯ ಆಘಾತವನ್ನು ನೀಡಿದೆ. ಅವು ನಿಮ್ಮ ಮಾನವೀಯತೆಯನ್ನು ಕಿತ್ತು ಬಿಸಾಡುತ್ತವೆ.  ಆತ್ಮಗೌರವವನ್ನು ನಾಶಮಾಡುತ್ತವೆ. ನೀವು ʼಗುಂಪಿಗೆ ಸೇರದವರುʼ ಎಂಬ ಭಾವನೆಯನ್ನು ಮೂಡಿಸುತ್ತದೆ. ತಳಮಟ್ಟದಿಂದ ಹೇಳುವುದಾದರೆ ನೀವು ಬೇಡವಾದ ಮತ್ತು ಇಷ್ಟಪಡಲಾಗದ ಜನರಾಗುತ್ತೀರಿ. ಎಲ್ಲ ಮನುಷ್ಯರೂ ತಮಗೆ ಇದನ್ನು ಸಂಬಂಧಿಸಿಕೊಳ್ಳಬಹುದು.  ನೀವು ನನ್ನನ್ನು ಮೆಚ್ಚಿ, ಮೆಚ್ಚದಿರಿ ಅಥವಾ ಉಪೇಕ್ಷೆ ಮಾಡಿ, ಪರವಾಗಿಲ್ಲ. ಆದರೆ ನನ್ನ ಚರ್ಮದ ಬಣ್ಣದ ಕಾರಣಕ್ಕಾಗಿ ನನ್ನ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸಿಕೊಳ್ಳುವುದು ಇದೆಯಲ್ಲ, ಅದು ಮಾತ್ರ ಅಕ್ಷಮ್ಯ.

“ನಾನು ಪ್ರೀತಿಯನ್ನು ಬೋಧಿಸುತ್ತಾ ಇರಲು ಇಚ್ಚಿಸುತ್ತೇನೆ. ಅದರಿಂದ ಏನಾದರೂ ಬದಲಾವಣೆ ಕಾಣಬಹುದೆಂಬ ಭರವಸೆ ಇದೆ” ಎಂದು ಉಸೈನ್‌ ಬೋಲ್ಟ್‌ ಹೇಳುತ್ತಾರೆ. ಬಹುಶಃ ಅವರು ಸರಿ ಇರಬಹುದು.

(ಜನಾಂಗೀಯ ದ್ವೇಷದ ಹೇಗೆ ಮನುಷ್ಯತ್ವವನ್ನು ನಾಶ ಮಾಡುತ್ತದೆ; ತನ್ನ ಉದ್ದೇಶವನ್ನು ಹೇಗೆ ಸಾಧಿಸುತ್ತದೆ; ಇತಿಹಾಸ ಮತ್ತು ಇತಿಹಾಸಕಾರರು ಇದನ್ನು ಹೇಗೆ ಕಡೆಗಣಿಸಿದ್ದಾರೆ; ಕೇವಲ ಚರ್ಮದ ಬಣ್ಣದ ಕಾರಣಕ್ಕಾಗಿ ಅನುಮಾನಿಸಿ-ಅವಮಾನಿಸಿದಾಗ ಆಗುವ ಅನುಭವವನ್ನು ವೆಸ್ಟ್‌ ಇಂಡೀಸಿನ ಮಾಜಿ ಕ್ರಿಕೆಟಿಗ ಮೈಕೆಲ್‌ ಹೋಲ್ಡಿಂಗ್, ಕ್ರೀಡೆಯ ದುರ್ಬೀನಿನ ಮೂಲಕ ಉಸೈನ್ ಬೋಲ್ಟ್‌‌, ಮಕಾಯಾ ಎನ್ಟಿನಿ, ಆಡಮ್‌ ಗುಡ್ಡೆಸ್‌, ಇಬ್ತಿಹಾಜ಼್ ಮೊಹಮ್ಮದ್‌, ನಓಮಿ ಒಸಾಕಾ ಮತ್ತು ಹೋಪ್‌ ಪೋವೆಲ್‌ ಮುಂತಾ ವಿಶ್ವದ ಖ್ಯಾತ ಕ್ರೀಡಾಪಟುಗಳ ಸಂದರ್ಶನಗಳ ಜೊತೆಗೆ “WHY WE KNEEL, HOW WE RISE” ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಅದರಲ್ಲಿನ ಒಂದು ಭಾಗವನ್ನು ಬಳಸಿಕೊಳ್ಳಲಾಗಿದೆ. )

ಅನುವಾದ : ಹೇಮಂತ್ ಎಲ್

ಪ್ರತಿಕ್ರಿಯಿಸಿ