ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ. ಲಿಪಿ ಸುಧಾರಣೆಯ ಅವಶ್ಯಕತೆಯ ತಾತ್ವಿಕ ತಳಹದಿಯನ್ನೂ ವಿವರವಾಗಿ ದಾಖಲಿಸಿದ್ದಾರೆ. ಋತುಮಾನದಲ್ಲಿ ಮೊದಲು ಒಮ್ಮೆ ಈ ಹೊಸ ಬರಹ ಕ್ರಮದಲ್ಲಿ ಒಂದು ಲೇಖನ ಪ್ರಕಟಗೊಂಡಿತ್ತು. ಅದೇ ಬರಹ ಕ್ರಮದಲ್ಲಿ ಮೂರನೇ ಲೇಖನ ಇಲ್ಲಿದೆ.
ಕನ್ನಡಕ್ಕೆ ಈ ಲಿಪಿಸುದಾರಣೆ ಎಂಬುದು ಹೊಸದೇನಲ್ಲ. ಕನ್ನಡ ಸಮಾಜ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಂಡ ದಿನದಿಂದಲೆ ಲಿಪಿ ಸುದಾರಣೆಗೆ, ಬದಲಾವಣೆಗೆ, ಅವಶ್ಯವಾದ ಲಿಪಿಗಳನ್ನು ಸೇರಿಸಿಕೊಳ್ಳುವುದಕ್ಕೆ ಮತ್ತು ಅನವಶ್ಯವೆನಿಸಿದ ಲಿಪಿಗಳನ್ನು ತೆಗೆದುಹಾಕುವುದಕ್ಕೆ ಮುಕ್ತವಾಗಿದೆ. ಈ ಬರವಣಿಗೆಯಲ್ಲಿ ಕನ್ನಡದಾಗ ಲಿಪಿ ಬದಲಾವಣೆಯ ಇತಿಹಾಸವನ್ನು ತೋರಿಸುವ ಪ್ರಯತ್ನ ಮಾಡಿದೆ.
ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಂಡದ್ದು ಸುಮಾರು ಎರಡು ಸಾವಿರ ವರುಶಗಳ ಹಿಂದೆ. ಇಲ್ಲಿ ಅಸೋಕನಿಂದಾಗಿ ಬಾರತಕ್ಕೆ ಬಂದ ಲಿಪಿಯ ಬಗೆಗೆ ಒಂದೆರಡು ಸಾಲುಗಳನ್ನು ಬರೆಯಬಹುದು. ಅದರಿಂದ ಕನ್ನಡ ಲಿಪಿಯನ್ನು ಅಳವಡಿಸಿಕೊಳ್ಳುವುದು ಎಶ್ಟು ಸಹಜವಾಯಿತು ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಅಸೋಕ ಬವುದ್ದ ದರ‍್ಮವನ್ನು ಸ್ವೀಕರಿಸಿದ ನಂತರ ಶಾಸನಗಳನ್ನು ಹಾಕಿಸುವ ವಿಚಾರ ಮಾಡಿ, ಚಪಡ ಎಂಬ ಲಿಪಿಕಾರನನ್ನು ಕರೆಸುತ್ತಾನೆ. ಅವನನ್ನು ತನ್ನ ದೇಶದೊಳಗೆ ಶಾಸನ ಬರೆಯುವುದಕ್ಕೆ ಕಳಿಸುತ್ತಾನೆ. ಇದರಿಂದ ಬಾರತ ದೇಶದಾಗ ಬರವಣಿಗೆ ಇತಿಹಾಸ ಮೊದಲಾಯಿತು, ಆ ಮೂಲಕ ಬಾರತದ ಇತಿಹಾಸ ಕಾಲವೂ ಮೊದಲಾಯಿತು. ಅಸೋಕ ಹೊರಡಿಸಿದ ಹಲವು ಶಾಸನಗಳನ್ನು ಕರ‍್ನಾಟಕ ಪ್ರದೇಶದಲ್ಲಿ ಕೆತ್ತಲಾಗಿದೆ. ಅಸೋಕನ ಹೆಚ್ಚಿನ ಸಂಕೆಯ ಶಾಸನಗಳು ಈ ಪ್ರದೇಶದಲ್ಲಿ ಸಿಕ್ಕಿರುವುದು ಬರವಣಿಗೆ ಇಲ್ಲಿ ಬೆಳೆಯುವುದಕ್ಕೆ ಒಂದು ಪ್ರದಾನ ಕಾರಣವಾಗಿದೆ. ಅದರ ಜೊತೆಗೆ ಇಂದಿನ ಹಯ್ದರಾಬಾದ ಕರ‍್ನಾಟಕ ಪ್ರದೇಶದಲ್ಲಿ ಅಸೋಕನ ಶಾಸನಗಳು ಇಡಿಕಿರಿದಿರುವುದು (ಮಸ್ಕಿ, ಕೊಪ್ಪಳ, ಪಾಲ್ಕಿಗುಂಡು, ಸನ್ನತಿ, ಕನಗನಹಳ್ಳಿ ಮೊ.) ಈ ಪ್ರದೇಶದಾಗ ಬರವಣಿಗೆ ಬೆಳೆಯುವುದಕ್ಕೆ ಮತ್ತೊಂದು ಕಾರಣವಾಗಿರುವ ಸಾದ್ಯತೆ ಇದೆ. ಇವುಗಳೊಂದಿಗೆ ಇನ್ನೊಂದು ಮಹತ್ವದ ಕಾರಣ ಅಂದಿನ ಕಾಲದ ಬಹುದೊಡ್ಡ ಬವುದ್ದ ಕೇಂದ್ರ ಸನ್ನತಿ-ಕನಗನಹಳ್ಳಿ. ಕ್ರಿಸ್ತಪೂರ‍್ವ ಕಾಲದಲ್ಲಿಯೆ ಈ ಕೇಂದ್ರದಲ್ಲಿ ವ್ಯಾಪಕವಾದ, ವಿಶ್ವಮಟ್ಟದ ಬವುದ್ದಿಕ ಚಟುವಟಿಕೆಗಳು ನಡೆದಿವೆ. ಈ ಪ್ರದೇಶವೊಂದರಲ್ಲಿಯೆ ಸುಮಾರು ೨೦೦ಕ್ಕೂ ಹೆಚ್ಚಿನ ಬಿಡಿ ಬಿಡಿ ಬರಹಗಳು ದೊರಕಿರುವುದು, ವಿವಿದ ಶಾಸ್ತ್ರಗಳ ಹಲವು ಪಾರಿಬಾಶಿಕಗಳು ಬಳಕೆಯಾಗಿರುವುದು, ಮಹಾರಾಜ ಅಸೋಕನ ಚಿತ್ರವನ್ನು ಕೆತ್ತಿರುವುದು, ಬವುದ್ದ ದರ‍್ಮದ ಉನ್ನತ ಚಟುವಟಿಕೆಗಳು, ಈ ಎಲ್ಲವುಗಳಿಗೆ ಪೂರಕವಾಗಿ ಅಂದು ಇಲ್ಲಿ ಇದ್ದಿರಬಹುದಾದ ಹಲವು ವಿದ್ವಾಂಸರು ಈ ಎಲ್ಲವೂ ಒಟ್ಟೊಟ್ಟಿಗೆ ಈ ಪ್ರದೇಶದ ಮೇಲೆ ಸಹಜವಾಗಿಯೆ ಪ್ರಬಾವ ಬೀರಿರುತ್ತವೆ. ಹೀಗಾಗಿ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವ ಕೆಲಸ ಅಸೋಕನ ಶಾಸನಗಳ ನಂತರದ ಒಂದೆರಡು ಶತಮಾನಗಳಲ್ಲಿಯೆ ನಡೆದುಹೋಗಿದೆ.
ನಮಗೀಗ ತಿಳಿದಿರುವಂತೆ ದಕ್ಕನದಲ್ಲಿ ದೊರೆಯುವ ಅತಿ ಹಳೆಯ ಶಾಸನಗಳು ಅಸೋಕನ ಪಾಲಿ ಶಾಸನಗಳು, ಶಾತವಾಹನರ ಪ್ರಾಕ್ರುತ ಶಾಸನಗಳು ಮತ್ತು ತಮಿಳು ಶಾಸನಗಳು. ಕದಂಬರ ಸಂಸ್ಕ್ರುತ ಶಾಸನಗಳನ್ನೂ ಇವುಗಳೊಂದಿಗೆ ಸೇರಿಸಬಹುದು. ಇವುಗಳನ್ನು ಹೊರತುಪಡಿಸಿದರೆ ಕನ್ನಡದ ಶಾಸನಗಳು ತುಂಬಾ ಹಳೆಯವು. ಇಂದು ಎಲ್ಲರೂ ಒಪ್ಪಿಕೊಂಡಿರುವಂತೆ ಅಯ್ದನೆಯ ಶತಮಾನಕ್ಕೆ ಸೇರುವ ಹಲ್ಮಿಡಿ ಶಾಸನ ಬಹು ಹಳೆಯ ಕನ್ನಡದ ಬರವಣಿಗೆ. ಅದಕ್ಕೂ ಹಿಂದೆ ಕೆಲವು ಶಾಸನಗಳು ಇವೆ ಎಂದು ಬಹು ಹಿಂದೆ ಕೆಲವರು ಮಾತನಾಡಿದ್ದಾರೆ.
ಹಲ್ಮಿಡಿಯನ್ನು ಲೆಕ್ಕಕ್ಕೆ ಹಿಡಿಯುವುದಾದರೆ ಕನ್ನಡ ಲಿಪಿಯ ಬೆಳವಣಿಗೆ ಸುಮಾರು ಅಯ್ದನೆಯ ಶತಮಾನಕ್ಕಿಂತ ಹಿಂದೆ ಆಗಿತ್ತು ಎಂಬುದು ಸ್ಪಶ್ಟ. ಈಗ ಅತಿ ಹಳೆಯ ಕನ್ನಡ ಶಾಸನ ಎಂದು ವಾದಿಸುತ್ತಿರುವ ತಾಗರ‍್ತಿ ಶಾಸನವನ್ನು ಗಣಿಸಿದರೆ ಕನ್ನಡ ಲಿಪಿಯ ಇತಿಹಾಸ ಕ್ರಿಸ್ತಶಕ ನಾಲ್ಕನೆಯ ಶತಮಾನಕ್ಕಿಂತ ಹಿಂದಕ್ಕೆ ಎಂದೆನ್ನಬೇಕಾಗುತ್ತದೆ. ಉಳಿದ ಈ ಮೇಲೆ ಪ್ರಸ್ತಾಪಿಸಿದ ಅಂಶಗಳನ್ನು ಪರಿಗಣಿಸಿದರೆ ಬಹುಶಾ ಕ್ರಿಸ್ತಶಕದ ಎಡಬಲಕ್ಕೆ ಕನ್ನಡ ಲಿಪಿಯ ಇತಿಹಾಸ ಹೋಗುತ್ತದೆ. ಈ ತಿಳುವಳಿಕೆಯನ್ನು ನಾನು ಇಟ್ಟುಕೊಳ್ಳುತ್ತೇನೆ. ಹೀಗೆ ಕ್ರಿಸ್ತಶಕದ ಎಡಬಲದಲ್ಲಿ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಂಡಿರಬಹುದು ಎಂಬುದಕ್ಕೆ ಪೂರಕವಾಗಿ ಲಿಪಿಯನ್ನು ಅಳವಡಿಸಿಕೊಳ್ಳುವಲ್ಲಿನ ಮತ್ತು ಅಳವಡಿಸಿಕೊಂಡ ನಂತರದ ಕೆಲವು ಬೆಳವಣಿಗೆಗಳು ಇವೆ.
ನನ್ನ ಈಗಿನ ಬರವಣಿಗೆಯ ಪ್ರದಾನ ಆಶಯ ಕನ್ನಡ ಲಿಪಿಯ ಸುದಾರಣೆ ಪ್ರಕ್ರಿಯೆಯನ್ನು ಕುರಿತು ಬರೆಯುವುದು. ಲಿಪಿಯ ಕುರಿತ ಚಿಂತನೆಗಳು ಲಿಪಿ ಅಳವಡಿಸಿಕೊಳ್ಳುವ ಮೊದಲಿನ ದಿನಗಳಿಂದಲೆ ನಡೆದಿವೆ ಎಂಬುದು ಸ್ಪಶ್ಟ. ಕನ್ನಡದಾಗ ಲಿಪಿ ಬಗೆಗೆ ವ್ಯಾಪಕ ಚಟುವಟಿಕೆ ನಡೆದಿತ್ತು ಎಂಬುದಕ್ಕೆ ಈ ಮುಂದಿನ ಕೆಲವು ಅಂಶಗಳು ಪೂರಕವಾಗುತ್ತವೆ.
ಕನ್ನಡಕ್ಕೆ ಸಹಜವಾದ ಏ, ಓ, ಳ್, ೞ್, ಱ್ ದ್ವನಿಗಳು ಪಾಲಿ, ಪ್ರಾಕ್ರುತ ಮತ್ತು ಸಂಸ್ಕ್ರುತ ಬಾಶೆಗಳಲ್ಲಿ ಇಲ್ಲ. ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವಾಗ ಈ ದ್ವನಿಗಳಿಗೆ ಲಿಪಿಯ ಅವಶ್ಯಕತೆಯನ್ನು ಕನ್ನಡದ ಅಂದಿನ ವಿದ್ವಾಂಸರು ಮನಗಂಡು ಅವುಗಳನ್ನು ಬೆಳೆಸಿಕೊಂಡರು. ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವಾಗ ಪಾಲಿ-ಪ್ರಾಕ್ರುತಗಳಿಗೆ ಬಳಕೆಯಾದ ಇಲ್ಲವೆ ಇದುವರೆಗೆ ಹೇಳಿಕೊಂಡು ಬಂದಿರುವಂತೆ ಸಂಸ್ಕ್ರುತದ್ದಾದ ಲಿಪಿಯನ್ನು ಯತಾವತ್ತಾಗಿ ಅಳವಡಿಸಿಕೊಂಡಿಲ್ಲ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ. ಅಂದರೆ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವ ಮೊದಲ ದಿನದಿಂದಲೆ ಕನ್ನಡ ಲಿಪಿಯ ಸುದಾರಣೆ ಯೋಚನೆ ಇದೆ. ಅಂದರೆ, ಕನ್ನಡ ಬಾಶೆಯ ಜಾಯಮಾನಕ್ಕೆ ತಕ್ಕಂತೆ ಯಾವ ದ್ವನಿಗಳು ಅವಶ್ಯ ಮತ್ತು ಅನವಶ್ಯ ಎಂಬುದನ್ನು ಕನ್ನಡದ ವಿದ್ವಾಂಸರು ಆಗಿನಿಂದಲೆ ಚಿಂತಿಸುತ್ತಿದ್ದಾರೆ.
ಇದರ ಮುಂದುವರಿಕೆಯಾಗಿ ಕನ್ನಡ ಲಿಪಿಯ ಬಳಕೆಯ ಆರಂಬದ ದಿನಗಳಲ್ಲಿಯೆ ಇನ್ನೊಂದು ಮಹತ್ವದ ಬದಲಾವಣೆ ನಡೆಯುತ್ತದೆ. ಕನ್ನಡಕ್ಕೆ ಮೊದಮೊದಲು ಲಿಪಿಯನ್ನು ಅಳವಡಿಸಿಕೊಂಡಾಗ ಬಿಂದುವನ್ನು ತೆಗೆದುಕೊಂಡಿರಲಿಲ್ಲ. ಕನ್ನಡದಾಗ ಬಿಂದು ಇರಲಿಲ್ಲ ಎಂಬುದನ್ನು ಹಲವು ವಿದ್ವಾಂಸರು ತೋರಿಸಿದ್ದಾರೆ. ಕನ್ನಡ ಲಿಪಿಗೆ ಬಿಂದುವಿನ ಸರ‍್ಪಡೆ ಆನಂತರದ ಕಾಲದಲ್ಲಿ ನಡೆಯುತ್ತದೆ. ದೊರೆತ ಹಳೆಯ ಕನ್ನಡದ ಬರವಣಿಗೆಯಲ್ಲಿಯೆ ಸೊನ್ನೆ ಬಳಕೆ ಆಗಿದೆ. ಆದರೆ ಅದರ ಬಳಕೆ ತುಂಬಾ ಮಿತವಾಗಿದೆ ಎಂಬುದು ಮುಕ್ಯ. ಆರಂಬದ ಶಾಸನಗಳಲ್ಲಿ ಸೊನ್ನೆ ಪದಕೊನೆಯಲ್ಲಿ ಮಾತ್ರ ಹೆಚ್ಚಾಗಿ ಬರುತ್ತದೆ, ನಂತರ ಅದು ಸಂದಿ/ಸಮಾಸವಾದೆಡೆಯಲ್ಲಿ ಬಂದು ಸೇರಿಕೊಳ್ಳುತ್ತದೆ, ಆನಂತರದ ಅದರ ಹೆಜ್ಜೆ ಪದನಡುವೆ ಸಹಜವಾಗಿ ಬರುವುದು. ಈ ಪ್ರಕ್ರಿಯೆಯನ್ನು ಮೊದಲ ಕೆಲವು ಶತಮಾನಗಳ ಕನ್ನಡ ಶಾಸನಗಳನ್ನು ಅವಲೋಕಿಸಿದಾಗ ಸ್ಪಶ್ಟವಾಗಿ ತಿಳಿಯುತ್ತದೆ. ಅಲ್ಲದೆ, ಆನಂತರ ಸುಮಾರು ನಡುಗಾಲದವರೆಗೆ ಬಿಂದುವಿನ ಬಳಕೆ ಕಡಿಮೆ ಇತ್ತು ಎಂಬುದು ಕೂಡ ಇದಕ್ಕೆ ಪೂರಕವಾಗುತ್ತದೆ. ಅನುನಾಸಿಕದ ಬದಲಿಗೆ ಬಳಕೆ ಆಗುವ ಈ ಬಿಂದು ನಡುಗಾಲದ ನಂತರ ತನ್ನ ಸ್ತಾನವನ್ನು ಎಲ್ಲೆಡೆ ಬದ್ರಪಡಿಸಿಕೊಂಡು ಇಂದು ಸಹಜವಾಗಿ ಬಳಕೆ ಆಗುತ್ತಿದೆ. ಹೀಗೆ ಕನ್ನಡಕ್ಕೆ ಮೊದಲಿಗೆ ಇಲ್ಲದ ಬಿಂದುವನ್ನು ನಂತರ ಸೇರಿಸಿಕೊಂಡಿದೆ. ಇದು ಮೊದಲ ಕನ್ನಡ ಲಿಪಿ ಬದಲಾವಣೆ ಪ್ರಕ್ರಿಯೆ ಮತ್ತು ಲಿಪಿ ಸುದಾರಣೆ ಆಲೋಚನೆಯ ಎರಡನೆ ಮಹತ್ವದ ಬೆಳವಣಿಗೆ.
ಇನ್ನು ಮುಂದೆ ನಡುಗಾಲದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ನಡೆಯುತ್ತದೆ. ಅದು ಱ್ ಮತ್ತು ೞ್ ಲಿಪಿಗಳನ್ನು ಕನ್ನಡದಿಂದ ತೆಗೆದದ್ದು. ಈ ಎರಡೂ ದ್ವನಿಗಳು ಹಳೆ ಕಾಲದಲ್ಲಿ ಉಚ್ಚರಣೆಯಲ್ಲಿ ಸಹಜವಾಗಿದ್ದು ನಡುಗಾಲದ ವೇಳೆಗೆ ದ್ವನಿಮಾ ಗುಣವನ್ನು ಕಳೆದುಕೊಂಡು ಕ್ರಮೇಣ ದ್ವನಿ ಗುಣವನ್ನೂ ಕಳೆದುಕೊಂಡು ಕೇವಲ ಲಿಪಿಯಾಗಿ ಉಳಿದುಕೊಂಡವು. ಹಾಗಾಗಿ ಇವುಗಳನ್ನು ಕನ್ನಡ ಲಿಪಿಯಿಂದ ತೆಗೆಯುವುದು ಸಹಜವೆನಿಸಿ ಅವನ್ನು ಬಿಡಲಾಗಿದೆ. ಹರಿಹರ ಇದನ್ನು ಗೋಶಿಸಿಕೊಳ್ಳುತ್ತಾನೆ ಕೂಡ. ಯಾವುದೆ ಲಿಪಿಯನ್ನು ಸುಮ್ಮನೆ ಬಿಡುವುದು ಮತ್ತು ಗೋಶಿಸಿ ಬಿಡುವುದರ ನಡುವೆ ಬಹು ವ್ಯತ್ಯಾಸ ಇರುತ್ತದೆ.
ಇಲ್ಲಿ ನಾಗವರ‍್ಮ, ಕೇಶಿರಾಜರ ಲಿಪಿ ಸುದಾರಣೆ ಪ್ರಯತ್ನವನ್ನೂ ಉಲ್ಲೇಕಿಸಬೇಕು. ಅಕ್ಕರಗಳನ್ನು ಕಳೆಯುವ ಪ್ರಯತ್ನವನ್ನು ಬಹುಶಾ ಬಾರತ ಮಟ್ಟದಲ್ಲಿಯೆ ನಾಗವರ‍್ಮ ಮೊದಲು ಮಾಡಿರುವನು ಮತ್ತು ಕನ್ನಡ ಬಾಶೆಗೆ ಮಾಡಿರುವನು. ಆದರೂ ಕನ್ನಡದಲ್ಲಿ ಕೇಶಿರಾಜನ ಅಕ್ಕರಗಳ ಕೂಡುವ-ಕಳೆಯುವ ಕೆಲಸವನ್ನು ಹೆಚ್ಚಾಗಿ ಮಾತನಾಡಲಾಗಿದೆ. ಈ ಅಕ್ಕರಮಾಲೆಯ ಸುದಾರಣೆಯನ್ನು ಆದುನಿಕ ವಿದ್ವಾಂಸರು ಲಿಪಿ ಬದಲಾವಣೆ ಎಂದು ನೋಡುವ ಪ್ರಯತ್ನ ಮಾಡಿದಂತಿಲ್ಲ. ಕನ್ನಡಕ್ಕೆ ಬೇಡವಾದ ಹತ್ತು ಅಕ್ಕರಗಳನ್ನು ಕನ್ನಡದಿಂದ ಕಳೆಯಬೇಕು ಎಂದು ಅವರು ಕರೆ ಕೊಡುತ್ತಾರೆ. ಆ ಹತ್ತು ಅಕ್ಕರಗಳಿಗೆ ಬಳಕೆಯಾಗುವ ಹತ್ತು ಲಿಪಿಗಳನ್ನೂ ಬಿಡಬೇಕು ಎಂಬುದೆ ಇದರ ಅರ‍್ತ. ಕೇಶಿರಾಜ ಕಳೆಯಬೇಕು ಎಂದು ಹೇಳಿದ ಲಿಪಿಗಳು ಇಂತಿವೆ, ‘ಋ, ೠ, ಲೃ, ಲೂ, ಶ್, ಳ್, ಕ್ಶಳ, ವಿಸರ‍್ಗ, ಜಿಹ್ವಾಮೂಲಿಯ, ಉಪಾದ್ಮಾನಿಯ’. ಮಹಾಪ್ರಾಣಗಳ ಬಗೆಗೆ ಅವನು ತಾಳಿರುವ ನಿಲುವು ಕೂಡ ಅವನ ಹಿರಿಕನಾದ ನಾಗವರ‍್ಮನ ನಿಲುವನ್ನು ಅನುಸರಿಸುವುದೆ ಆಗಿದೆ. ನಾಗವರ‍್ಮ ಕನ್ನಡದಾಗ ಮಹಾಪ್ರಾಣ ದ್ವನಿಗಳು ಇಲ್ಲ ಎಂಬ ವಿಚಾರದ ಪರ ಇದ್ದವನು. ಕೇಶಿರಾಜ ಕೂಡ ಮಹಾಪ್ರಾಣ ನಿಯಮಿತವಾದ ಅನುಕರಣೆ ಮತ್ತು ಒಂದೆರಡು ಸಂಕ್ಯಾವಾಚಕಗಳಲ್ಲಿ ಮಾತ್ರ ಬರುತ್ತವೆ ಎಂದು ಹೇಳಿದ್ದಾನೆ. ಹಾಗಾದರೆ, ಮಹಾಪ್ರಾಣ ಅಕ್ಕರಗಳನ್ನು ಕೂಡ ಕನ್ನಡದಲ್ಲಿ ಇಲ್ಲದವು ಎಂದು ಅವನು ಹೇಳಿದ್ದಾನೆ. ಅಂದರೆ ನಾಗವರ‍್ಮ ಮತ್ತು ಕೇಶೀರಾಜರು ಮಹಾಪ್ರಾಣ ಅಕ್ಕರಗಳಿಗೆ ಬಳಸುವ ಲಿಪಿಗಳನ್ನೂ ಬಿಡಬೇಕು ಎಂಬ ನಿಲುವನ್ನು ಹೇಳಿದಂತೆ. ಇದನ್ನೂ ಲಿಪಿ ಬದಲಾವಣೆಯ ಚರಿತ್ರೆಯೊಳಗೆ ಸೇರಿಸಿಕೊಳ್ಳಬಹುದು.
ಈ ನಡುವೆ ಬಿ.ಎಂ.ಶ್ರೀ ಅವರ ಲಿಪಿ ಸುದಾರಣೆ ಪ್ರಯತ್ನವನ್ನೂ ಇಲ್ಲಿ ಉಲ್ಲೇಕಿಸಬಹುದು. ಶ್ರೀಯವರ ಪ್ರಯತ್ನ ಬಾಶೆ ಆದರಿಸಿದ ಪ್ರಯತ್ನ ಅಲ್ಲ. ಮುದ್ರಣಕ್ಕೆ ಅನುವಾಗಲಿ ಎಂಬ ಕಾರಣದಿಂದ ಲಿಪಿಯ ಸುದಾರಣೆಯನ್ನು ಅವರು ಪ್ರಸ್ತಾಪಿಸಿದರು. ಮಹಾಪ್ರಾಣಗಳು ಸೇರಿ ಹಲವು ವ್ಯಂಜನಗಳು ಮತ್ತು ಸ್ವರಗಳಲ್ಲಿ ಉದ್ದಕ್ಕರಗಳನ್ನು ತೆಗೆದುಬಿಡಬಹುದು ಎಂಬ ವಾದ ಮುಂದಿಟ್ಟರು. ಆದರೆ, ಕನ್ನಡದ ಬಹುದೊಡ್ಡ ವಿದ್ವಾಂಸರು, ವಿದ್ವತ್‌ಜಗತ್ತಿನಲ್ಲಿ ಬಹು ಪ್ರಬಾವಿಯೂ ಆಗಿದ್ದ ಶ್ರೀಯವರ ಈ ವಾದವನ್ನು ಯಾರೂ ಅಶ್ಟು ಮಹತ್ವದ್ದಾಗಿ ಪರಿಗಣಿಸಲಿಲ್ಲ. ಹಾಗಾಗಿ ಅದು, ಒಂದು ಪ್ರಯತ್ನವಾಗಿ ಮಾತ್ರ ಉಳಿದುಕೊಂಡಿತು.
ಇದರ ನಂತರ ಮತ್ತೆ ಲಿಪಿಯನ್ನು ಬದಲಿಸಿದ ಒಂದು ಪ್ರಕ್ರಿಯೆ ಆದುನಿಕ ಕಾಲದಲ್ಲಿ ಅದುವರೆಗೆ ಲಿಪಿಯಲ್ಲಿ ಕೆಲಸವೇನೂ ಇಲ್ಲದಿದ್ದರೂ ಆಲಂಕಾರಿಕವಾಗಿ ಇದ್ದ ೠ ಲಿಪಿಯನ್ನು ತೆಗೆದದ್ದು. ಈ ಲಿಪಿಯನ್ನು ಕನ್ನಡದಿಂದ ತೆಗೆಯುತ್ತಿದ್ದೇವೆ ಎಂದು ಯಾರೂ ಗೋಶಣೆ ಮಾಡಿಲ್ಲ ಮತ್ತು ಆ ಲಿಪಿಯನ್ನು ತೆಗೆದ ನಂತರ ಯಾಕೆ ತೆಗೆಯಲಾಯಿತು ಎಂದು ಯಾರೂ ಕೇಳಿಲ್ಲ. ಅನವಶ್ಯವಾದ ಒಂದು ಲಿಪಿಯನ್ನು ತೆಗೆದಿರುವುದು ಯಾರಿಗೂ ಒಂದು ವಿಶಯ ಆಗಿರಲಿಲ್ಲ.
ಆನಂತರ ಒಂದು ಕುತೂಹಲದ ಬೆಳವಣಿಗೆ ಋ ಅಕ್ಕರಕ್ಕೆ ಸಂಬಂದಿಸಿದ್ದು. ಬಾಶಾವಿಗ್ನಾನಿ ಒಬ್ಬರು ಪಟ್ಯಪುಸ್ತಕ ತಯಾರಿ ಸಮಿತಿಯಲ್ಲಿದ್ದು ರ ಅಕ್ಕರವನ್ನು ಮಕ್ಕಳಿಗೆ ಕಲಿಸುವುದು ಬೇಡ ಎಂದು ಪಟ್ಯಪುಸ್ತಕದಿಂದ ತೆಗೆದುಬಿಟ್ಟರು. ಅದರಿಂದ ಸಮಾಜದಲ್ಲಿ ದೊಡ್ಡಪ್ರಮಾಣದ ಚರ‍್ಚೆ ಶುರುವಾಯಿತು. ಕನ್ನಡದಲ್ಲಿ ಲಿಪಿ ಬದಲಾವಣೆ ವಿರುದ್ದವಾದ ದೊಡ್ಡಪ್ರಮಾಣದ ಚರ‍್ಚೆ ಇದಾಗಿತ್ತು, ಹಾಗೆ ಲಿಪಿ ಬದಲಾವಣೆ ಬಗೆಗಿನ ಮೊದಲ ದೊಡ್ಡಪ್ರಮಾಣದ ಚರ‍್ಚೆಯೂ ಹವುದು.
ಆನಂತರ ಒಟ್ಟಾರೆ ಕನ್ನಡ ಲಿಪಿ ಸುದಾರಣೆಯಲ್ಲಿ ಬಹು ಮಹತ್ವದ್ದು ಎಂದು ಹೇಳಬಹುದಾದ ಒಂದು ಬೆಳವಣಿಗೆ ನಡೆಯುತ್ತದೆ. ಶಂಕರಬಟ್ಟರು ಕನ್ನಡದಾಗ ಇಲ್ಲದ ‘ಮಹಾಪ್ರಾಣ’ಗಳು, ‘ಷ್’ ವ್ಯಂಜನ, ‘ಋ’ ಸ್ವರ, ‘ಐ’ ಮತ್ತು ‘ಔ’ ಸಂದ್ಯಕ್ಕರಗಳು ಮತ್ತು ಅನವಶ್ಯಕವಾಗಿ ಇರುವ ರ್ ಕಾರದ ಇನ್ನೊಂದು ರೂಪವಾದ ‘೯’ ಈ ಲಿಪಿಗಳನ್ನು ಕನ್ನಡದ ಬರಹದಲ್ಲಿ ಬಿಟ್ಟುಬಿಡಬಹುದು ಎಂಬ ಸರಳವಾದೊಂದು ವಿಚಾರವನ್ನು ೨೦೦೭ರಲ್ಲಿ ಪ್ರಸ್ತುತಪಡಿಸಿದರು. ಅದರಂತೆ ಅವರು ತಮ್ಮ ಬರವಣಿಗೆಯಲ್ಲಿ ಅವುಗಳನ್ನು ಬಿಟ್ಟರು. ಶಂಕರಬಟ್ಟರಿಗಿಂತ ಮೊದಲು ಋ ಲಿಪಿಯನ್ನು ಬಿಟ್ಟು ಪುಸ್ತಕ ಪ್ರಕಟಿಸಿದ್ದ ನಾನು ಬಟ್ಟರ ಜೊತೆಜೊತೆಯಲ್ಲಿ ಬದಲಿತ ಲಿಪಿಯಲ್ಲಿ ಬರೆಯಲು ಶುರು ಮಾಡಿದೆ. ಆನಂತರ ಹಲವರು ಈ ರೀತಿ ಬರೆಯುತ್ತಿದ್ದಾರೆ.
ಇದು ಕನ್ನಡದಾಗ ಬಹುದೊಡ್ಡ ಚರ‍್ಚೆಗೆ ಗ್ರಾಸವಾಯಿತು. ಸಾವಿರಾರು ವರುಶಗಳ ಕಾಲ ಇಡಿಯ ಸಮಾಜ ಬಳಸಿಕೊಂಡು ಬಂದ ಒಂದು ವ್ಯವಸ್ತೆಯನ್ನು ಬದಲಿಸಬೇಕು ಎಂದಾಗ ಇಂತಾ ಚರ‍್ಚೆಯ ಅವಶ್ಯಕತೆ ಕಂಡಿತ ಇದೆ. ಆದರೆ, ಚರ‍್ಚೆ ನಡೆಯಬೇಕಾದ ರೀತಿಯಲ್ಲಿ ನಡೆಯದೆ ದಾರಿ ತಪ್ಪಿ ನಡೆಯುತ್ತಿದೆ.
ಸಹಾಯಕ ಪ್ರಾದ್ಯಾಪಕ, ಕನ್ನಡ ವಿಭಾಗ, ಸಂಚಾಲಕ, ಬಾಶಾವಿಗ್ನಾನ ವಿಭಾಗ, ಕರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ.