ಋತುಮಾನದ ಓದುಗರಿಗೆ ಗಣರಾಜ್ಯೋತ್ಸವದ ಶುಭಾಶಯಗಳು.
ಜಗತ್ತಿನ ಕೆಲ ಭಾಗಗಳಲ್ಲಿರುವ ಜನರ ಜೀವನಮಟ್ಟವು ಇತರ ಭಾಗಗಳಲ್ಲಿನ ಜನರ ಜೀವನಮಟ್ಟಕ್ಕಿಂತ ಹೆಚ್ಚು ಉತ್ತಮವಾಗಿರುವುದು ಏಕೆ? ಜಗತ್ತಿನ ಕೆಲವು ಪ್ರದೇಶಗಳು ಇತರ ಪ್ರದೇಶಗಳಿಗಿಂತ ಹೆಚ್ಚು ಏಳಿಗೆ ಹೊಂದಲು ಏನು ಕಾರಣ? ನಮ್ಮ ದೇಶದ ಉದಾಹರಣೆಯನ್ನು ತೆಗೆದುಕೊಡರೂ ದಕ್ಷಿಣದ ರಾಜ್ಯಗಳ ಪರಿಸ್ಥಿತಿ ಉತ್ತರ ರಾಜ್ಯಗಳಿಗಿಂತ ಸಾಕಷ್ಟು ಮುನ್ನಡೆಯಲ್ಲಿರಲು ಕಾರಣಗಳೇನು? ಮುಂದುವರಿದ ಪ್ರದೇಶಗಳೆಂದು ಗುರುತಿಸಿಕೊಳ್ಳುವ ಪ್ರದೇಶಗಳು ಮುಂದುವರೆಯಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಕಂಡುಕೊಂಡರೆ, ಜಗತ್ತಿನಲ್ಲಿ, ಮುಖ್ಯವಾಗಿ ಇನ್ನೂ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ, ಆರೋಗ್ಯ ಮತ್ತು ಕಲಿಕೆಗಳಂತಹ ಮೂಲ ಸೌಕರ್ಯಗಳೇ ಇಲ್ಲದೆ ಬಳಲುವ ಕೋಟ್ಯಂತರ ಸಂಖ್ಯೆಯ ಜನರ ಜೀವನವನ್ನು ಸುಧಾರಿಸಲು ಏನು ಮಾಡಬಹುದು ಎಂದು ತಿಳಿಯಲು ಈ ಉತ್ತರ ನೆರವಾಗುತ್ತದೆ. ಈ ಪುಸ್ತಕವು ಭಾರತವನ್ನು ಕುರಿತ ಅಂತಹದೇ ಒಂದು ಅಧ್ಯಯನವಾಗಿದೆ. ಎಲ್ಲ ಅಧ್ಯಯನಗಳಂತೆ ಕೇವಲ ರಾಷ್ಟ್ರೀಯ ಮಟ್ಟದ ವಿಶ್ಲೇಷಣೆಗೆ ಸೀಮಿತವಾಗದೆ, ಇನ್ನಷ್ಟು ಆಳಕ್ಕಿಳಿದು ಉಪರಾಷ್ಟ್ರೀಯ ಅಂದರೆ ಭಾರತದ ರಾಜ್ಯಗಳ ಮಟ್ಟದ ಅಧ್ಯಯನವಾಗಿರುವುದು ಇದರ ಹೆಗ್ಗಳಿಕೆ. ಭಾರತದಲ್ಲಿ ವಿವಿಧ ರಾಜ್ಯಗಳ ನಡುವೆ ಕಲಿಕೆ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಒಂದು ಶತಮಾನದುದ್ದಕ್ಕೂ ಆಗಿರುವ ಪ್ರಗತಿಯಲ್ಲಿ ಎದ್ದುಕಾಣಿಸುವಂತಹ ವ್ಯತ್ಯಾಸ ಯಾಕಿದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಸಿದ ಅಧ್ಯಯನ ಇದು. ಹಲಬಗೆಯ ಸಂಶೋಧನಾ ವಿಧಾನಗಳ ನೆರವಿನಿಂದ ರಾಜ್ಯಗಳ ಚರಿತ್ರೆ ಮತ್ತು ಅಂಕಿ-ಅಂಶಗಳ ಹೋಲಿಕೆಯ ವಿಶ್ಲೇಷಣೆ ಈ ಅಧ್ಯಯನದಲ್ಲಿದೆ. ಇದರ ಫಲಿತಾಂಶವನ್ನು ಆಧರಿಸಿ ಒಂದು ನಾಡಿನಲ್ಲಿ ಅಭಿವೃದ್ಧಿಗೆ ಕಾರಣವಾಗುವ ಅಂಶಗಳಿಗೆ ಸಂಬಂಧಿಸಿದಂತೆ ಹೊಸ ವಾದವೊಂದನ್ನು ಈ ಪುಸ್ತಕ ಮುಂದಿಡುತ್ತದೆ. ರಾಜ್ಯವೊಂದರ ಏಳಿಗೆಯಲ್ಲಿ ಪ್ರಾದೇಶಿಕ ಪ್ರಜ್ಞೆಯನ್ನು ಆಧರಿಸಿ ಆಯಾ ರಾಜ್ಯದ ಜನ ಹೊಂದಿರುವ ಒಗ್ಗಟ್ಟು ದೊಡ್ಡಮಟ್ಟದಲ್ಲಿ ನೆರವಾಗುತ್ತದೆ ಎಂಬುದು ಆ ವಾದ. ಈ ತನಕ ಏಳಿಗೆಯ ವಿಷಯದಲ್ಲಿ ಪ್ರದೇಶಗಳ ನಡುವಿನ ವ್ಯತ್ಯಾಸಕ್ಕೆ ಅಲ್ಲಿ ಆರ್ಥಿಕ ಏಳಿಗೆಗೆ ಕೊಡಲಾಗಿರುವ ಮಹತ್ವ, ಅಲ್ಲಿನ ರಾಜಕೀಯ ಪಕ್ಷಗಳು, ಅವುಗಳ ನಡುವಿನ ಚುನಾವಣಾ ಪೈಪೋಟಿಯ ತೀವ್ರತೆ ಮತ್ತು ಅಲ್ಲಿರುವ ಜನಾಂಗೀಯ ವೈವಿಧ್ಯತೆ ಮುಂತಾದವು ನಿರ್ಣಾಯಕವಾದ ಪಾತ್ರವಹಿಸುತ್ತವೆ ಎಂದು ನಂಬಲಾಗಿತ್ತು. ಅದೇ ರೀತಿಯಲ್ಲಿ, ಗುರುತಿನ ಮೇಲೆ ಕಟ್ಟಲಾದ ವಾದಗಳು ಎಂದಿಗೂ ಏಳಿಗೆಯ ಮೇಲೆ ಕೆಟ್ಟ ಪರಿಣಾಮವನ್ನೇ ಹೊಂದಿರುತ್ತವೆ ಎಂದು ನಂಬಲಾಗಿತ್ತು. ಈ ಎರಡು ಅಭಿಪ್ರಾಯಗಳಿಗಿಂತ ಭಿನ್ನವಾದ ಒಂದು ವಾದವನ್ನು ಈ ಅಧ್ಯಯನ ಮುಂದಿಡುತ್ತದೆ.
೨೦೧೬ರಲ್ಲಿ ಪ್ರಕಟಗೊಂಡ ಈ ಕೃತಿ ಅಮೆರಿಕಾದ ರಾಜಕೀಯ ಮತ್ತು ಸಾಮಾಜಿಕ ವಿದ್ವತ್ ವಲಯದ ೫ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಪಡೆದಿದೆ. ಈ ತರಹದ ಸಮಾಜ ವೈಜ್ಞಾನಿಕ ನೆಲೆಯ ಸಂಶೋಧನಾ ಕೃತಿಗಳ ಬಗ್ಗೆ ಕನ್ನಡದಲ್ಲಿ ಚರ್ಚೆಗಳಾಗುವುದೇ ಕಡಿಮೆ. ಇಂದಿನ ರಾಜಕೀಯ ಕಾಲಘಟ್ಟದ ಒಂದು ಬಹುಮುಖ್ಯ ವಿಷಯವನ್ನು ಕೇವಲ ಭಾವನಾತ್ಮಕ ನೆಲೆಯಲ್ಲಿ ಚರ್ಚಿಸುವುದರಿಂದ ಸಂಪೂರ್ಣವಾಗಿ ಹೊರನಿಂತು ಪರಿಣಾಮಾತ್ಮಕ ಮತ್ತು ಗುಣಾತ್ಮಕ ಪುರಾವೆಗಳೊಂದಿಗೆ ಚರ್ಚಿಸುವ ಇಂತಹ ಶೈಕ್ಷಣಿಕ ಪ್ರಯತ್ನಗಳು ತಮ್ಮ ನುಡಿಗರಿಗೂ ದೊರಕಬೇಕು ಎನ್ನುವುದು ಋತುಮಾನದ ಆಶಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹದ್ದೇ ಸೋಷಿಯೋ – ಪಾಲಿಟಿಕಲ್ ಚರ್ಚೆಯನ್ನು ಹುಟ್ಟುಹಾಕಿರುವ ಅನೇಕ ಕೃತಿಗಳು ಕನ್ನಡಕ್ಕೆ ಬರಬೇಕು. ೨೦೧೬ ರಲ್ಲಿ ಹೊರಬಂದ ಈ ಕೃತಿ ನಮ್ಮಲ್ಲಿ ಬೆಳಕು ಕಾಣಲು ೬ ವರ್ಷಗಳಾಗಬೇಕಾಯಿತು. ಈ ಕೆಲಸಗಳು ಕೃತಿ ಹೊರಬಂದ ಒಂದೆರಡು ವರ್ಷಗಳಲ್ಲೇ ಆಗಬೇಕು. ಇಲ್ಲಿಯೂ ಆ ವಿಷಯಗಳು ಹೆಚ್ಚೆಚ್ಚು ಚರ್ಚೆಯಾಗಬೇಕು. ಇಂತಹ ಕೃತಿಗಳಿಗೆ ಸದ್ಯಕ್ಕೆ ನಮ್ಮಲ್ಲಿ ಓದುಗರು ಕಡಿಮೆಯೇ. ಹಾಗಾಗಿ ಇಂತಹ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಲಾಭದಾಯಕವಲ್ಲ ಎಂಬ ಅರಿವು ನಮಗಿದೆ. ಆದರೂ ನಮಗೆ ಕನ್ನಡದ ಜನರ ಸಾಮೂಹಿಕ ವಿವೇಕದಲ್ಲಿ ಬಲವಾದ ನಂಬಿಕೆಯೂ ಇದೆ. ಹಾಗಾಗಿ ಈ ತರದ ಸಂಶೋಧನಾ ಕೃತಿಗಳನ್ನು ಇನ್ನಷ್ಟು ತರುವ ಹುಮ್ಮಸ್ಸಿಗೆ ನಮ್ಮ ಜನ ಖಂಡಿತವಾಗಿಯೂ ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ನಮ್ಮದು.
ಕೊನೆಯದಾಗಿ ಇಂತಹ ಒಂದು ಸಂಪೂರ್ಣ ಅಕಾಡೆಮಿಕ್ ಕೃತಿಯನ್ನು ಅನುವಾದಿಸುವುದು ಸುಲಭದ ಮಾತಲ್ಲ ಮತ್ತದು ಕೆಲವೊಮ್ಮೆ ಸೃಜನಶೀಲ ಮನಸ್ಸೊಂದಕ್ಕೆ ನೀರಸವೆನ್ನಿಸುವುದೂ ಉಂಟು. ಹಾಗೆಯೇ ಇಂತಹ ಕೃತಿಯ ಅನುವಾದ ಕಾರ್ಯವನ್ನು ಅಕಾಡೆಮಿಕ್ ವಲಯದ ಹೊರಗಿನವರು ಮಾಡುವುದು ಇನ್ನೂ ಕಷ್ಟ. ಅಂತಹ ಕಷ್ಟದ ಕೆಲಸವನ್ನು ಕೈಗೆತ್ತಿಕೊಂಡು ನಿರ್ವಹಿಸಿದ ಶ್ರುತಿ ಅವರಿಗೆ, ಜ್ಞಾನದ ಮುಕ್ತ ಹಂಚಿಕೆಯಲ್ಲಿ ನಂಬಿಕೆಯಿರಿಸಿ ಯಾವುದೇ ರಾಯಧನವನ್ನು ಸ್ವೀಕರಿಸದೆ ಅನುವಾದದಕ್ಕೆ ಒಪ್ಪಿಗೆ ನೀಡಿದ ಪ್ರೇರಣಾ ಅವರಿಗೆ, ಈ ಕೃತಿಯನ್ನು ಓದಿ ತಿದ್ದಿ , ವಿದ್ವತ್ಪೂರ್ಣ ಮುನ್ನುಡಿ ಬರೆದಿರುವ ಎ. ನಾರಾಯಣ ಅವರಿಗೆ, ಕರಡು ತಿದ್ದಲು ನೆರವಾದ ಟಿ. ಎಸ್. ವೇಣುಗೋಪಾಲ್, ಅಮರ್ ಹೊಳೆಗದ್ದೆ ಮತ್ತು ಗಿರಿಧರ್ ಭಟ್ ಗುಂಜಗೋಡು ಅವರಿಗೆ, ಮುಖ ಪುಟ ವಿನ್ಯಾಸಕ್ಕಾಗಿ ಮದನ್ ಸಿ ಪಿ ಮತ್ತು ಗಿರಿಧರ್ ಕಾರ್ಕಳ ಅವರಿಗೆ, ಪುಸ್ತಕದ ವಿನ್ಯಾಸಕ್ಕಾಗಿ ಟೆಕ್ ಫಿಜ್ ಸಂಸ್ಥೆಗೆ, ಸಲಹೆಗಳಿಗಾಗಿ ನಾಗೇಗೌಡ ಕೀಲಾರ ಶಿವಲಿಂಗಯ್ಯ ಮತ್ತು ವಸಂತ್ ಶೆಟ್ಟಿಯವರಿಗೆ ಋತುಮಾನ ಆಭಾರಿ.
ಈ ಪುಸ್ತಕವು ಮುಂದಿನ ವಾರ ಮುದ್ರಿತ ಮತ್ತು ಇ ಪುಸ್ತಕವಾಗಿ ಎಲ್ಲಾ ಮಳಿಗೆಗಳಲ್ಲೂ ನಿಮ್ಮ ಕೈಗೆ ಸಿಗುತ್ತದೆ . ಸದ್ಯ ನೀವು ಋತುಮಾನ ಆನ್ಲೈನ್ ಮಳಿಗೆ ಮತ್ತು ಋತುಮಾನ ಆಪ್ ನಲ್ಲಿ ಪ್ರೀ ಆರ್ಡರ್ ಮಾಡಬಹುದು.
ಬೆಲೆ : 350/- . ಪ್ರೀ ಆರ್ಡರ್ ವಿಶೇಷ ರಿಯಾಯಿತಿ ದರ : 275/-
ಪ್ರೀ ಆರ್ಡರ್ ಕೊಂಡಿ : https://bit.ly/3fWqmQK
ವಾಟ್ಸಾಪ್ : 9480035877
ಎಂದು,
ಋತುಮಾನ ತಂಡ
Good one