ಕನ್ನಡದಾಗ ಮಹಾಪ್ರಾಣ ದ್ವನಿಗಳು ಇಲ್ಲ

ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ. ಲಿಪಿ ಸುಧಾರಣೆಯ ಅವಶ್ಯಕತೆಯ ತಾತ್ವಿಕ ತಳಹದಿಯನ್ನೂ ವಿವರವಾಗಿ ದಾಖಲಿಸಿದ್ದಾರೆ. ಅದೇ ಹೊಸ ಬರಹ ಕ್ರಮದಲ್ಲಿ ನಾಲ್ಕನೇ ಲೇಖನ ಇಲ್ಲಿದೆ.

ಮನುಶ್ಯ ಬಾಶೆಯಲ್ಲಿ ಸಾಮಾನ್ಯವಾಗಿ ಉಸಿರಾಡುವಾಗ ತೆಗೆದುಕೊಂಡ ಗಾಳಿಯನ್ನು ಹೊರಬಿಡುವಾಗ ದ್ವನಿಗಳನ್ನು ಉಚ್ಚರಿಸುವುದು ಹೆಚ್ಚು. ಆಪ್ರಿಕಾದ ಕೆಲವು ಬಾಶೆಗಳಲ್ಲಿ ಉಸಿರನ್ನು ಒಳತೆಗೆದುಕೊಳ್ಳುವಾಗ ಉಚ್ಚರಿಸುವ ಕೆಲವು ದ್ವನಿಗಳು ಇವೆ. ಕನ್ನಡದಲ್ಲಿ ಮತ್ತು ಬಾರತದ ಎಲ್ಲ ಬಾಶೆಗಳಲ್ಲಿ ಉಸಿರನ್ನು ಹೊರಬಿಡುವಾಗ ಉಚ್ಚರಿಸುವ ದ್ವನಿಗಳು ಇವೆ. ಹೀಗೆ ಗಾಳಿಯನ್ನು ಹೊರಬಿಡುವಾಗ ಹೊರಹೋಗುವ ಗಾಳಿಗೆ ಮುಕದ ಯಾವುದಾದರೂ ಅಂಗಗಳ ಚಲನೆಯಿಂದ ತಡೆಯುಂಟು ಮಾಡಿ ಉಚ್ಚರಿಸುವ ದ್ವನಿಗಳಿಗೆ ವ್ಯಂಜನಗಳೆಂದೂ ಹಾಗೆ ಹೊರಹೋಗುವ ಗಾಳಿಗೆ ಯಾವುದೆ ಅಡೆತಡೆಯುಂಟು ಮಾಡದೆ ಅಂಗಚಲನೆಯನ್ನು ಮಾಡುವ ಮೂಲಕ ಉಚ್ಚರಿಸುವ ದ್ವನಿಗಳಿಗೆ ಸ್ವರಗಳೆಂದೂ ಕರೆಯಲಾಗುವುದು. ಬಾರತೀಯ ವ್ಯಾಕರಣ ಪರಂಪರೆಯಲ್ಲಿ ಪಾಣಿನಿಗಿಂತಲೂ ಮುಂಚೆ, ಅಂದರೆ ಸುಮಾರು ಮೂರು ಸಾವಿರದಶ್ಟು ವರುಶಗಳ ಹಿಂದೆ ಸ್ವರ, ವ್ಯಂಜನ ಮತ್ತು ಅವು ಹುಟ್ಟುವ ಜಾಗ ಇವುಗಳ ಬಗೆಗೆ ಹೆಚ್ಚು ನಿಕರವಾದ ತಿಳುವಳಿಕೆಯನ್ನು ಕೊಟ್ಟಿದೆ. ಇದೆ ತಿಳುವಳಿಕೆಯನ್ನು ಇನ್ನಶ್ಟು ಪಾರಿಬಾಶಿಕತೆಯೊಂದಿಗೆ ಆದುನಿಕ ಬಾಶಾವಿಗ್ನಾನ ಕೊಟ್ಟಿದೆ.

ಇಂಡೊ-ಯುರೋಪಿಯನ್ ಬಾಶೆಗಳಾದ ಇಂಗ್ಲೀಶು, ಜರ‍್ಮನಿ ಮೊದಲಾದ ಬಾಶೆಗಳಲ್ಲಿ ಇಲ್ಲದ ಮಹಾಪ್ರಾಣ ದ್ವನಿಗಳು ಇಂಡೊ-ಆರ‍್ಯನ್ ಬಾಶೆಯಾದ ಸಂಸ್ಕ್ರುತದಲ್ಲಿ ಸಹಜವಾಗಿ ಇವೆ. ಇಂದಿಗೂ ಸಂಸ್ಕ್ರುತದಿಂದ ಬೆಳೆದ ಹೆಚ್ಚಿನ ಬಾರತೀಯ ಬಾಶೆಗಳಲ್ಲಿ (ಎಲ್ಲ ಬಾಶೆಗಳಲ್ಲಿ ಅಲ್ಲ) ಮಹಾಪ್ರಾಣಗಳು ಇವೆ. ದ್ರಾವಿಡ ಬಾಶೆಗಳಲ್ಲಿ ಇವು ಸಹಜವಾಗಿ ಇಲ್ಲ (ಆ್ಯಂಡ್ರೊನೊವ್.೨೦೦೩., ಕ್ರಿಶ್ಣಮೂರ‍್ತಿ.೨೦೦೩.೫೨, ಸುಬ್ರಹ್ಮಣ್ಯಂ.೨೦೦೮.೫೦).

ಸಹಜವಾಗಿಯೆ ಮಹಾಪ್ರಾಣ ದ್ವನಿಗಳು ದ್ರಾವಿಡ ಬಾಶೆಯಾದ ಕನ್ನಡದಲ್ಲೂ ಇಲ್ಲ. ಕನ್ನಡಕ್ಕೆ ಲಿಪಿ ಸಂಯೋಜನೆಯ ಸಂದರ‍್ಬದಲ್ಲಿ ಪ್ರಾಕ್ರುತ ಬಾಶೆಯ ಮತ್ತು ಸಂಸ್ಕ್ರುತದ ಬಾಶಾವಿಗ್ನಾನದ (ದ್ವನಿವಿಗ್ನಾನದ) ಹೆಚ್ಚು ಪ್ರಬಾವ ಕಾರಣವಾಗಿ ಮಹಾಪ್ರಾಣ ದ್ವನಿಗಳನ್ನು ಬರಹದಲ್ಲಿ ಉಳಿಸಿಕೊಂಡಿದೆ. ಏ, ಓ, ಳ್, ೞ್‌, ಱ್‌ ದ್ವನಿಗಳು ಸಂಸ್ಕ್ರುತದ ಯಾವುದೆ ದ್ವನಿಗಳಿಗೆ ಸರಿ ಹೋಗದ್ದರಿಂದ ಅವುಗಳಿಗೆ ಅಕ್ಶರದ ಬೆಲೆಯನ್ನು ಕೊಟ್ಟು ಅವುಗಳಿಗೆ ಲಿಪಿಯನ್ನೂ ಮಾಡಿಕೊಡಿದ್ದಾರೆ. ಹಾಗೆಯೆ ಸಂಸ್ಕ್ರುತದಲ್ಲಿ ಇದ್ದು ಕನ್ನಡದಲ್ಲಿ ಇಲ್ಲದ ಋ, ಲೃ, ಶ್, ಷ್ ಇವುಗಳನ್ನು ಕನ್ನಡಕ್ಕೆ ಬೇಡ ಎಂದು ಹೇಳಿದ್ದಾರೆ. ಹಾಗೆಯೆ ಲೃ ಇದನ್ನು ಬಹುತೇಕ ಬಳಸಿಲ್ಲ. ಆದರೆ ಮಹಾಪ್ರಾಣ ದ್ವನಿಗಳ ಲಿಪಿಗಳನ್ನು ಬರಹದಲ್ಲಿ ಉಳಿಸಿಕೊಂಡಿದೆ. ಜೊತೆಜೊತೆಯಲ್ಲಿ ವಯ್ಯಾಕರಣಿಗಳು ಕನ್ನಡದಾಗ ಮಹಾಪ್ರಾಣ ದ್ವನಿಗಳು ಇಲ್ಲ ಎಂಬುದನ್ನು ಹೇಳುತ್ತಲೆ ಇದ್ದಾರೆ.

ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎಂದು ಹೇಳಿದ ಮೊದಲಿಗ ೧೧ನೆ ಶತಮಾನದ ಆರಂಬದಲ್ಲಿ ವ್ಯಾಕರಣ ಬರೆದ ನಾಗವರ‍್ಮ (ನಾಗವರ‍್ಮ (ಅ).೧೧ನೆ ಶ. ಸೂ.೧೧, ನಾಗವರ‍್ಮ (ಆ). ಪು. ೪೫, ಕುಳ್ಳಿ. ೧೯೯೧.೫೯, ಗಾಯಿ. ೧೯೪೭.೧, ಶಾಸ್ತ್ರಿ ೨೦೦೭.xx, ಶ್ರೀಕ್ರಿಶ್ಣಬಟ್. ೧೯೮೯.೧೨೭, ಸೇಡಿಯಾಪು. ೧೯೭೪.೮). ನಾಗವರ‍್ಮನದು ವಾಸ್ತವದಲ್ಲಿ ಸ್ಪಶ್ಟ ನಿಲುವು. ಅವನ ಸಾಲನ್ನು ಇಲ್ಲಿ ಗಮನಿಸಬಹುದು.
ಸೂತ್ರ೧೧: ನಾತ್ರ ಪ್ರಾಯೇಣ ವರ‍್ಗಾಣಾಂ ದ್ವಿತೀಯಚತರ‍್ತಾಹ್
ವ್ರುತ್ತಿ: ಅಸ್ಮಿನ್ ಕರ‍್ಣಾಟಕವಿಶಯೇ ವರ‍್ಗಾಣಾಂ ದ್ವಿತೀಯಚತುರ‍್ತಾಕ್ಶರಾಹ್ ಖ ಛ ಠ ಥ ಫಾ ಘ ಝ ಢ
ಧ ಭಾ ಶ್ಚ ಪ್ರಾಯೇಣ ನ ವಿದ್ಯಂತೇ
ಅರ‍್ತ: ಈ ಕರ‍್ಣಾಟಕ ಬಾಶೆಯಲ್ಲಿ ವರ‍್ಗಗಳ ಎರಡನೆಯ ಖ ಛ ಠ ಥ ಫ ಮತ್ತು ನಾಲ್ಕನೆಯ ಘ ಝ ಢ ಧ ಭ ಎಂಬ ಈ ಅಕ್ಕರಗಳು ಇಲ್ಲ
ಹೀಗೆ ಹೇಳಿ ಮುಂದೆ ಅವನು ಸಂಕ್ಯಾವಾಚಕಗಳಲ್ಲಿ ಮತ್ತು ಅನುಕರಣಗಳಲ್ಲಿ ಮಹಾಪ್ರಾಣಗಳನ್ನು ಕಾಣಬಹುದು ಎಂದು ಹೇಳುತ್ತಾನೆ. ಸಂಕ್ಯಾವಾಚಕ ಎಂದಾಗ ಇರ‍್ಚಾಸಿರ ಇಂತಾ ಒಂದೆರಡು ಶಬ್ದಗಳು ಮಾತ್ರ. ಅನುಕರಣೆಯಲ್ಲಿ ಬರುವಂತ ದ್ವನಿಗಳನ್ನು ಬಾಶೆಯಲ್ಲಿ ದ್ವನಿಗಳು ಎಂದು ಪರಿಗಣಿಸಲು ಆಗದು. ಯಾಕೆಂದರೆ ಅವು ಪದರಚನೆಯಲ್ಲಿ ಬಳಕೆಯಾಗಬೇಕು. ಇಲ್ಲದಿದ್ದರೆ ಅವುಗಳನ್ನು ದ್ವನಿಗಳನ್ನೆಲಾಗದು.
ನಾಗವರ‍್ಮನ ನಂತರ ಕೇಶಿರಾಜ ಬರುತ್ತಾನೆ. ಸಾಮಾನ್ಯವಾಗಿ ಕನ್ನಡ ವ್ಯಾಕರಣ ಪರಂಪರೆ ಎಂದರೆ ಹೆಚ್ಚಿನವರು ಓದಿರುವುದು (ಬಹಳಶ್ಟು ಮಂದಿ ತುಸುವೆ ಓದಿರುತ್ತಾರೆ) ಕೇಶಿರಾಜನನ್ನು ಮಾತ್ರ. ಕೇಶಿರಾಜ ಮಹಾಪ್ರಾಣ ಇವೆ ಎಂದು ಹೇಳಿದ್ದಾನೆ ಎಂಬ ಸುಳ್ಳನ್ನು ಹೆಚ್ಚು ಒತ್ತುಕೊಟ್ಟು ಹೇಳಿದೆ. ವಾಸ್ತವದಲ್ಲಿ ನಾಗವರ‍್ಮ ಹೇಳಿದ್ದನ್ನೆ ಕೇಶಿರಾಜ ಹೇಳಿದ್ದಾನೆ. ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎಂದೆ ಅವನು ಹೇಳಿದ್ದಾನೆ (ಕೇಶಿರಾಜ. ೧೩ನೆ ಶ. ಸೂ. ೨೪, ಕುಳ್ಳಿ. ೧೯೭೬, ೧೯೯೧.೫೯, ಕೋಡಗುಂಟಿ. ೨೦೧೭., ಗಾಯಿ. ೧೯೪೭.೧, ಬಿಳಿಗಿರಿ. ೧೯೯೬.೧೪೩-೫, ಶಾಸ್ತ್ರಿ ೨೦೦೭.xx, ಶ್ರೀಕ್ರಿಶ್ಣಬಟ್. ೧೯೮೯.೧೨೭, ೨೦೧೨). ಕೇಶಿರಾಜನ ಕಂದವನ್ನು ಇಲ್ಲಿ ಗಮನಿಸಿ.
ಸೂತ್ರ೨೪: ವರ‍್ಗದ್ವಿತೀಯವರ‍್ಣಂ
ವರ‍್ಗಚತರ‍್ತಾಕ್ಶರಂ ಮಹಾಪ್ರಾಣಮವಂ
ಮಾರ‍್ಗವಿದರ್ ಸಂಕ್ಯೆಯೊಳ್
ಬೋರ‍್ಗರೆವನುಕ್ರುತಿಯೊಳಂ ಪ್ರತಿಯೋಗಿಸುತಿರ‍್ಪರ್ || ೨೪ ||
ವ್ರುತ್ತಿ: ವರ‍್ಗದೆರಡನೆಯಕ್ಕರಂಗಳುಂ ನಾಲ್ಕನೆಯಕ್ಕರಂಗಳುಂ ಮಹಾಪ್ರಾಣಂಗಳೆನಿಸುಗುಂ – ಖ್, ಛ್, ಠ್, ಥ್, ಫ್, ; ಘ್, ಝ್, ಢ್, ಧ್, ಭ್ ಇವಂ ಸಂಕೆಯೊಳಂ ಅನುಕರಣದೊಳಂ ಮಾರ‍್ಗವಿದರ್ ಪ್ರಯೋಗಿಸುವರ್
ಸಾರಾಂಶ : ವರ‍್ಗೀಯ ವ್ಯಂಜನಗಳಲ್ಲಿ ಎರಡನೆಯ ಮತ್ತು ನಾಲ್ಕನೆಯ ಅಕ್ಶರಗಳು ಮಹಾಪ್ರಾಣಗಳೆನಿಸುತ್ತವೆ. ವಿದ್ವಾಂಸರು ಅವುಗಳನ್ನು ಸಂಕೆಯಲ್ಲಿಯೂ ಅನುಕರಣೆಯಲ್ಲಿಯೂ ಪ್ರಯೋಗಿಸುವರು. (ಕೇಶಿರಾಜ (ಆ). ಪು. ೫೨)
ಈ ಸೂತ್ರವು ಸ್ಪಶ್ಟವಾಗಿ ಮಹಾಪ್ರಾಣಗಳು ಇಲ್ಲ, ಅವು ಕೇವಲ ಸಂಕೆಯಲ್ಲಿ (ಈ ಮೇಲೆ ಹೇಳಿದಂತೆ ಒಂದೆರಡು ಪದಗಳಲ್ಲಿ ಮಾತ್ರ) ಮತ್ತು ಅನುಕರಣಗಳಲ್ಲಿ (ಮೇಲೆ ಹೇಳಿದಂತೆ ಇವುಗಳನ್ನು ಪರಿಗಣಿಸಲಾಗದು) ಮಾತ್ರ ಮಹಾಪ್ರಾಣಗಳನ್ನು ವಿದ್ವಾಂಸರು ಬಳಸುವರು. ಅಂದರೆ ಅವು ಸಹಜವಾಗಿ ಇವೆ ಎಂದು ಕೇಶಿರಾಜ ಹೇಳುತ್ತಿಲ್ಲ. ಬದಲಿಗೆ, ಅವುಗಳನ್ನು ವಿದ್ವಾಂಸರು ಬಳಸುವರು ಎಂದು ಮಾತ್ರ ಹೇಳುತ್ತಿದ್ದಾನೆ. ಮುಂದಿನ ಸೂತ್ರದಲ್ಲಿ ಕೆಲವು ಪದಗಳ ಪಟ್ಟಿಯನ್ನು ಕೊಟ್ಟು ಇವುಗಳಲ್ಲಿ ಮಹಾಪ್ರಾಣ ದ್ವನಿಗಳು ಸಹಜವಾಗಿ ಇವೆ ಎಂದು ಹೇಳುತ್ತಾನೆ. ಆ ಪದಗಳು ಹೆಚ್ಚಾಗಿ ಪ್ರಾಕ್ರುತದವುಗಳಾಗಿದ್ದು ಹಾಗೆಯೆ ಕನ್ನಡದಲ್ಲಿ ಬಳಕೆಯಲ್ಲಿದ್ದವೆ ಎಂಬುದು ಅನುಮಾನ. ಕೇಶಿರಾಜನು ತಾನೆ ಕೊಟ್ಟ ಪದಗಳ ಪಟ್ಟಿಯಲ್ಲಿ ಕೆಲವಕ್ಕೆ ವಿಕಲ್ಪ ಹೇಳುತ್ತಾನೆ. ಅಂದರೆ ಮಹಾಪ್ರಾಣ ಉಚ್ಚರಣೆ ಇಲ್ಲ ಎಂದು ಹೇಳುತ್ತಾನೆ.

ಇನ್ನು ಆದುನಿಕ ಕಾಲಕ್ಕೆ ಬಂದರೆ ಸಾಕಶ್ಟು ಮಂದಿ ವಿದ್ವಾಂಸರು ಕನ್ನಡದಾಗ ಮಹಾಪ್ರಾಣಗಳು ಇಲ್ಲ ಎಂದು ತೋರಿಸಿದ್ದಾರೆ. ಇಲ್ಲಿ ಕೇವಲ ಕೆಲವೆ ಕೆಲವು ಅದ್ಯಯನಗಳನ್ನು ಉಲ್ಲೇಕಿಸಿದೆ. ನೂರಕ್ಕೂ ಹೆಚ್ಚು ವ್ಯಾಕರಣ ಇಲ್ಲವೆ ಕನ್ನಡ ಬಾಶೆಯ ಬಗೆಗಿನ ಪುಸ್ತಕಗಳು ಮಹಾಪ್ರಾಣ ಇಲ್ಲ ಎಂದು ಹೇಳುತ್ತವೆ.

ಎಚ್.ಎಸ್.ಬಿಳಿಗಿರಿ (೧೯೯೬.೧೪೩-೫), ಎಸ್.ಎನ್.ಶ್ರೀದರ್ (೧೯೯೦.೨೯೧) ಡಿ.ಎನ್.ಶಂಕರಬಟ್ಟ (೧೯೯೯, ೨೦೦೫), ಕೋಡಗುಂಟಿ (೨೦೧೭), ಜಿ.ಎಸ್.ಕುಳ್ಳಿ. ೧೯೭೬.೬೩, ವಿ.ಶಿವಾನಂದ (೧೯೭೨.೪೬-೯), ರೆವರೆಂಡ್ ಎಪ್. ಕಿಟೆಲ್ (೧೮೯೪.xiii) ಮೊದಲಾದವರು ಕನ್ನಡದಾಗ ಮಹಾಪ್ರಾಣಗಳು ಇಲ್ಲ ಎಂದು ಹೇಳಿದ್ದಾರೆ.

ಕನ್ನಡದ ಹಲವಾರು ಪ್ರಾದೇಶಿಕ ಒಳನುಡಿಗಳಲ್ಲಿ (ಆಚಾರ‍್ಯ. ೧೯೬೭.೩, ೧೯೭೧ಅ.೧, ೧೯೭೧ಆ.೧ ಮತ್ತು ೧೯೮೩.೧, ಉಪಾದ್ಯಾಯ. ೧೯೬೮.೧, ಮತ್ತು ೧೯೭೧.೧, ಕೋಡಗುಂಟಿ.೨೦೧೧.೨೪, ವಿಲಿಯಂ. ೧೯೯೨, ಹಿರೇಮಟ. ೧೯೬೧.೫), ಸಾಮಾಜಿಕ ಒಳನುಡಿಗಳಲ್ಲಿ (ಕೊಹೆಲ್.೨೦೦೩.೨೩೪, ಗವ್ಡ. ೧೯೭೦.೧, ಚಂದ್ರಯ್ಯ. ೧೯೮೭.೧, ನಡನಸಬಾಪತಿ. ೧೯೮೬.೧೯, ಬಟ್ಟ. ೧೯೭೧.೬, ಬಾಲಕ್ರಿಶ್ಣನ್. ೧೯೯೯.೫೬, ವರ‍್ಮ. ೧೯೭೮.೨) ಶಾಸನ ಬಾಶೆಯಲ್ಲಿ (ಗಾಯಿ. ೧೯೪೭.೧, ನೇಗಿನಹಾಳ. ೧೯೮೨.೧೬) ಮತ್ತು ಸಾಹಿತ್ಯ ಬಾಶೆಯಲ್ಲಿ (ಸವದತ್ತಿಮಟ. ೧೯೮೮.೧೧, ರಾವ್. ೧೯೭೨.) ಮಹಾಪ್ರಾಣ ಇಲ್ಲ ಎಂದು ಆಯಾ ಕನ್ನಡಗಳ ಮೇಲಿನ ಸೊಲ್ಗಟ್ಟುಗಳು (ವ್ಯಾಕರಣಗಳು) ಹೇಳುತ್ತವೆ.
ಆದರೆ ಕೆಲವು ಸೊಲ್ಗಟ್ಟುಗಳು ಹೀಗೆ ಮಹಾಪ್ರಾಣ ದ್ವನಿಗಳನ್ನು ಗುರುತಿಸಿವೆ. ಕಲಬುರಗಿ ಬ್ರಾಹ್ಮಣರ ಕನ್ನಡ ವ್ಯಾಕರಣ (ಮಹದೇವನ್. ೧೯೭೨) ಇಂತಾ ವ್ಯಾಕರಣಗಳಲ್ಲಿ ಒಂದು. ಆದರೆ, ನಾನು ಅವಲೋಕಿಸಿದಂತೆ ಕಲಬುರಗಿ ಬ್ರಾಹ್ಮಣರ ಕನ್ನಡದಲ್ಲಿ ಮಹಾಪ್ರಾಣ ದ್ವನಿಗಳು ಇಲ್ಲ.

ಕನ್ನಡ ನಿಗಂಟುಗಳು ಕೂಡ (ಕನ್ನಡ ಸಾಹಿತ್ಯ ಪರಿಶತ್ತು, ಕಿಟೆಲ್ (೧೮೯೪) ಮಹಾಪ್ರಾಣಗಳ ಬಗೆಗೆ ಸ್ಪಶ್ಟವಾದ ನಿಲುವನ್ನು ತೋರಿಸುವುದಿಲ್ಲ.
ಈ ಎಲ್ಲ ಅದ್ಯಯನಗಳು ಹೇಳುವ ಪ್ರಕಾರ ಕನ್ನಡದಲ್ಲಿ ಮಹಾಪ್ರಾಣ ದ್ವನಿಗಳು ಇಲ್ಲ.

ಸಂದರ‍್ಬ ಗ್ರಂತಗಳು:

ಸಂದರ್ಬ ಗ್ರಂತಗಳು: 
ಆಚಾರ‍್ಯ ಎ.ಎಸ್. 1967ಅ. Barkur Kannada. ಡೆಕ್ಕನ್ ಕಾಲೇಜುಪೂನಾ. 
——.  1967ಆ. Halakki Kannada. ಡೆಕ್ಕನ್ ಕಾಲೇಜುಪೂನಾ. 
——.  1971. Tipatur Kannada. ಡೆಕ್ಕನ್ ಕಾಲೇಜುಪೂನಾ. 
——.  1983. Rabakavi Kannada (Phonology and Morphology).. ಡೆಕ್ಕನ್ ಕಾಲೇಜು, 
ಪೂನಾ. 
ಆ್ಯಂಡ್ರೊನೊವ್ ಎಸ್. ಮಿಶೆಲ್. 2003. A Comparative Grammar of the Dravidian Languages.  
ಜರ‍್ಮನಿ. 
ಉಪಾದ್ಯಾಯ ಯು.ಪಿ. 1968. Nanjangud Kannada. ಡೆಕ್ಕನ್ ಕಾಲೇಜುಪೂನಾ. 
——. 1971. Coorg Kannada (Jenu Kuruba Dialect). ಡೆಕ್ಕನ್ ಕಾಲೇಜುಪೂನಾ. 
ಕನ್ನಡ ಸಾಹಿತ್ಯ ಪರಿಶತ್ತು, 1971-1994. ಕನ್ನಡ ನಿಗಂಟು-ಸಂ. 1-8. ಕನ್ನಡ ಸಾಹಿತ್ಯ ಪರಿಶತ್ತು, 
ಬೆಂಗಳೂರು. 
ಕಿಟೆಲ್ ಎಪ್. ರೆವರೆಂಡ್. 2004. (1894 ಮೊ. ಮುದ್ರಣ). A Kannada – English Dictionary. 
ಏಸಿಯಾನ್ ಎಜುಕೇಶನಲ್ ಸರ‍್ವಿಸಸ್ನವದೆಹಲಿ -ಚನ್ನಯ್. 
ಕುಳ್ಳಿ ಜಿ.ಎಸ್. 1976. Keshiraja’s Shabdamanidarpana. ಕರ‍್ನಾಟಕ ವಿಶ್ವವಿದ್ಯಾಲಯ, 
ದಾರವಾಡ.  
——. 1991. History of Grammatical Theories in Kannada. ಅಂತಾರಾಶ್ಟ್ರೀಯ 
ದ್ರಾವಿಡ ಬಾಶಾವಿಗ್ನಾನ ಸಂಸ್ತೆತಿರುವನಂತಪುರಂ. 
ಕೇಶಿರಾಜ (ಅ). 13ನೆ ಶ. ಸಂ. ಡಿ.ಎಲ್. ನರಸಿಂಹಾಚಾರ್, 1964. ಶಬ್ದಮಣಿರ‍್ಪಣಂ. ಶಾರದಾ ಮಂದಿರ, 
ಮಯ್ಸೂರು. 
—— (ಆ). ಸಂ. ತ.ಸು. ಶಾಮರಾಯ. 2021 (ಮಮು). ಶಬ್ದಮಣಿದರ್ಪಣಂ. ತಳುಕಿನ ವೆಂಕಣ್ಣಯ್ಯ ಸ್ಮಾರಕ 
ಗ್ರಂತಮಾಲೆಮಯ್ಸೂರು 
ಕೊಹೆಲ್ ಗೇಲ್ ಮರಿಯಾ. 2003. A Grammar of Betta Kurumba. ಅಪ್ರಕಟಿತ ಪಿಎಚ್.ಡಿ. 
ಪ್ರಬಂದ, ಯುನಿರ‍್ಸಿಟಿ ಆಪ್ ಟೆಕ್ಸಾಸ್ಆಸ್ಟಿನ್. 
ಕೋಡಗುಂಟಿ ಬಸವರಾಜ. 2011. ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು. ಕನ್ನಡ ವಿಶ್ವವಿದ್ಯಾಲಯಹಂಪಿ 
——. 2016. ಮಾತೆಂಬುದು. ದ್ರಾವಿಡ ವಿಶ್ವವಿದ್ಯಾಲಯಕುಪ್ಪಂ. 
 
ಗವ್ಡ ಕೆ. ಕುಶಾಲಪ್ಪ 1970 Gowda Kannada. ಅಣ್ಣಾಮಲಯ್ ವಿಶ್ವವಿದ್ಯಾಲಯಅಣ್ಣಾಮಲಯ್ 
ನಗರ. 
ಗಾಯಿ ಜಿ.ಎಸ್. 1947. Historical Grammar of Old Kannada. ಡೆಕ್ಕನ್ ಕಾಲೇಜುಪೂನಾ. 
ಚಂದ್ರಯ್ಯ ಬಿ.ನಮ್. 1987. A Descriptive Grammar of Harijan Dialect. ಶರತ್ 
ಪ್ರಕಾಶನಮಯ್ಸೂರು. 
ನಡನಸಬಾಪತಿ ಎಸ್. 1986. The Language of Kattunaickas: A Linguistic Study. 
ಅಣ್ಣಾಮಲಯ್ ವಿಶ್ವವಿದ್ಯಾಲಯಅಣ್ಣಾಮಲಯ ನಗರ. 
ನಾಗವರ‍್ಮ. (ಅ). 11ನೆ ಶ. ಕರ್ಣಾಟಕ ಬಾಶಾಬೂಶಣಂ. ಸಂ. ರಯಿಸ್ ಬಿ.ಎಲ್. 1884. 
Na:gavarma’s Karna:taka Bha:sa:bhu:sanam (Twefth Century 
Grammar of Kannada in Sanskrit). ಮ.ಮು. 1985. ಏಸಿಯಾನ್ ಎಜುಕೇಶನಲ್ 
ಸರ‍್ವಿಸಸ್, ನವ ದೆಹಲಿ. 
——. (ಆ) 11ನೆ ಶ. ಕರ‍್ಣಾಟಕ  ಬಾಶಾಬೂಶಣಂ. ಸಂ. ಆರ್. ನರಸಿಂಹಾಚಾರ್. 1903 (ಮೂರನೆ ಮು. 
2020). ತನುಮನ ಪ್ರಕಾಶನಮಯ್ಸೂರು 
ನೇಗಿನಹಾಳ ಎಂ.ಬಿ. 1982. ಪ್ರಾಚೀನ ಕನ್ನಡ ಶಾಸನಗಳ ಬಾಶಿಕ ಅದ್ಯಯನ. ಕರ‍್ಣಾಟಕ  
ವಿಶ್ವವಿದ್ಯಾಲಯದಾರವಾಡ. 
ಬಟ್ಟ ಡಿ.ಎನ್. ಶಂಕರ್. 1971. An Outline Grammar of Havyaka. ಡೆಕ್ಕನ್ ಕಾಲೇಜು, 
ಪೂನಾ. 
——. 1999. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಬಾಶಾ ಪ್ರಕಾಶನಮಯ್ಸೂರು 
——. 2005. ಕನ್ನಡ ಬರಹವನ್ನು ಸರಿಪಡಿಸೋಣ. ಬಾಶಾ ಪ್ರಕಾಶನಮಯ್ಸೂರು 
ಬದ್ರಿರಾಜು ಕ್ರಿಶ್ಣಮೂರ‍್ತಿ2003. The Dravidian Languagesಕೇಂಬ್ರಿಜ್ ವಿಶ್ವವಿದ್ಯಾಲಯ, 
ಕೇಂಬ್ರಿಜ್. 
ಬಾಲಕ್ರಿಶ್ಣನ್ ಆರ್. 1999. Badaga: A Dravidian Languageಅಣ್ಣಾಮಲಯ್ 
ವಿಶ್ವವಿದ್ಯಾಲಯಅಣ್ಣಾಮಲಯ್ ನಗರ. 
ಬಿಳಿಗಿರಿ ಎಚ್.ಎಸ್. 1969. ಆಲೋಕ. ಅಕ್ಶರ ಪ್ರಕಾಶನಸಾಗರ. 
ಬ್ರಯಿಟ್ ವಿಲಿಯಮ್. 1958. An Outline of Colloquial Kannada. ಡೆಕ್ಕನ್ ಕಾಲೇಜು, 
ಪೂನಾ. 
ಮಹದೇವನ್ ಆರ್. 1972. Gulbarga Kannada (Brahmin Dialect).. ಡೆಕ್ಕನ್ ಕಾಲೇಜು, 
ಪೂನಾ. 
ರಾವ್ ಬಿ. ರಾಮಚಂದ್ರ. 1972. A Comparative Grammar of Pampa Bharata. 
ಮಯ್ಸೂರು ವಿಶ್ವವಿದ್ಯಾಲಯಮಯ್ಸೂರು. 
ವರ‍್ಮಾ ಜಿ. ಶ್ರೀನಿವಾಸ. 1978. Kurumba Kannada (Pudukkotti Kurumba Dialect). 
ಅಣ್ಣಾಮಲಯ್ ವಿಶ್ವವಿದ್ಯಾಲಯಅಣ್ಣಾಮಲಯ್ ನಗರ.  
ಶಾಸ್ತ್ರಿ ಕೆ.ಜಿ. 1971. The Havyaka Dialect of North Kanara. ಕರ‍್ಣಾಟಕ  ವಿಶ್ವವಿದ್ಯಾಲಯ, 
ದಾರವಾಡ. 
ಶಾಸ್ತ್ರಿ ಟಿ.ವಿ. ವೆಂಕಟಾಚಲ. 2007. ದರ‍್ಪಣ ವಿವರಣ. ಸಪ್ನ ಬುಕ್ ಹವುಸ್ಬೆಂಗಳೂರು. 
ಶಿವಾನಂದ ವಿ. 1974. ಕೇಶಿರಾಜನ ಶಬ್ದಮಣಿದರ‍್ಪಣ ವಿಳಾಸ. ವಿಜಯ ಪುಸ್ತಕಗದಗ. 
ಶ್ರೀಕ್ರಿಶ್ಣಬಟ್ ಪಿ. 1989. ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕ್ರುತದ ಪ್ರಬಾವ. ವಿದ್ಯಾ ಪ್ರಕಾಶನ, 
ಕಾಸರಗೋಡು. 
——. 2012. ಕನ್ನಡ ಪಾರಂಪರಿಕ ವ್ಯಾಕರಣಗಳು. ಯಾಜಿ ಪ್ರಕಾಶನಕಾಸರಗೋಡು. 
ಶ್ರೀದರ ಎಸ್.ಎನ್. 1990. Kannada. ರೊಟಲೆಡ್ಜ್ಲಂಡನ್ ಮತ್ತು ನ್ಯೂಯರ‍್ಕು. 
ಸವದತ್ತಿಮಟ ಸಂಗಮೇಶ. 1988. Harihara’s Ragales: A Linguistics Analysis. 
ಕರ‍್ಣಾಟಕ ವಿಶ್ವವಿದ್ಯಾಲಯದಾರವಾಡ. 
ಸುಬ್ರಹ್ಮಣ್ಯಂ ಪಿ.ಎಸ್. 2008. Dravidian Comparative Grammar – Iಬಾರತೀಯ ಬಾಶಾ 
ಸಂಸ್ತಾನಮಯ್ಸೂರು 
ಸೇಡಿಯಾಪು ಕ್ರಿಶ್ಣಬಟ್. 1974. ಕನ್ನಡ ವರ‍್ಣಗಳು. ಕರ‍್ಣಾಟಕ ವಿಶ್ವವಿದ್ಯಾಲಯದಾರವಾಡ. 
ಹಿರೇಮಟ ಆರ್.ಸಿ. 1961. The Structure of Kannada. ಕರ‍್ಣಾಟಕ ವಿಶ್ವವಿದ್ಯಾಲಯ, 
ದಾರವಾಡ. 

ಪ್ರತಿಕ್ರಿಯಿಸಿ