ಸಿರಿತೆನೆಯ ಮಾಡು

ನಾವೆಲ್ಲರೂ ಬಯಸುವ ಉತ್ತಮ ಬದುಕು ಎಂದರೇ ಏನು? ಉತ್ತಮ ಬದುಕನ್ನ ಅರಸಿ ಹಳ್ಳಿಯಿಂದ ಪಟ್ಟಣ ಸೇರುವ ರೈತಾಪಿ ಜನ ಸಹಜ ಸಮೃದ್ಧವಾಗಿರುವ ಗ್ರಾಮೀಣ ಪರಿಸರದಲ್ಲೇ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಯ ಬೆನ್ನು ಹತ್ತಿದ ಲೇಖಕನ ಚಿಂತನೆ ಈ ಬರಹದಲ್ಲಿದೆ. ಗ್ರಾಮೀಣ ಭಾಗದಲ್ಲಿ ಉದ್ಯಮ ಕಟ್ಟಿಕೊಳ್ಳಲು ರೈತರ ಉತ್ಪಾದಕ ಕೂಟವೂ ಸೇರಿದಂತೆ ಇನ್ನಿತರ ಹಲವು ಸಾಧ್ಯತೆಗಳ ಕುರಿತು , ಗ್ರಾಮೀಣ ಉದ್ಯಮಗಳ ಸವಾಲುಗಳ ಕುರಿತು ಲೇಖಕರಿಲ್ಲಿ ಮುಕ್ತವಾಗಿ ಚರ್ಚಿಸಿದ್ದಾರೆ.

 

ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿ ಒಂದು ವಿಶಿಷ್ಟ ವರ್ಗದ ಯುವಜನರು ಕಂಡುಬರುತ್ತಾರೆ. ಈ ವರ್ಗದವರು, ಹಳ್ಳಿಯ ರೈತರ ಮಕ್ಕಳಾಗಿದ್ದು ತಮ್ಮ ಬದುಕು ಸಾಗಿಸಲೋ, ಕನಸನ್ನು ಬೆನ್ನೇರಿಯೋ ನಗರಗಳಲ್ಲಿ ಡ್ರೈವರ್‍ಗಳಾಗಿ, ಟೆಕ್ಕಿಗಳಾಗಿ, ಅಕೌಂಟೆಂಟ್‍ಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇನ್ನು ಉದ್ಯೋಗದ ವಿಚಾರಕ್ಕೆ ಬರುವುದಾದರೆ- ಮಾಡುವ ಕೆಲಸದ ಹಿಂದೆ ಪ್ರೀತಿ, ಉತ್ಸಾಹವೇ ಇರಲಿ ಅಥವಾ ಒಂದು ನಿರ್ದಿಷ್ಟ ಅಗತ್ಯತೆಯೇ ಇರಲಿ- ಜೀವನೋಪಾಯವೇ ಅದರ ಮೂಲ ಉದ್ದೇಶವಾಗಿರುತ್ತದೆ. ಇದು ಹಳ್ಳಿಯಿಂದ ಬಂದವರು, ಪಟ್ಟಣದಿಂದ ಬಂದವರು ಎನ್ನುವ ಭೇದವಿಲ್ಲದೆ ಎಲ್ಲ ವಯಸ್ಕರಿಗೂ ಅನ್ವಯ. ಕಾಡೊಳಗೆ ತಮ್ಮ ಸಾಂಪ್ರದಾಯಿಕ ಬದುಕನ್ನು ನಡೆಸುತ್ತಿರುವ ಬುಡಕಟ್ಟಿನವರಿಗೆ ಇದು ಅನ್ವಯಿಸದೇ ಇರಬಹುದು. ಅವರು, ಕಾಡು ರೂಪಿಸಿದ ಕಟ್ಟುಕಟ್ಟಲೆಗಳಿಗೆ ಅನುಗುಣವಾಗಿ, ಸದೃಢ ಸಾಮುದಾಯಿಕ ಸಂರಚನೆಗಳಲ್ಲಿ ಬದುಕುವವರು. ಕರ್ನಾಟಕದ ಕಾಳಿ ಹುಲಿ ಸಂರಕ್ಷಿತ ಅರಣ್ಯದೊಳಗೆ ವಾಸಿಸುವವರಲ್ಲಿ ಕೆಲವರು ನನ್ನ ಆತ್ಮೀಯ ಗೆಳೆಯರೂ ಆಗಿದ್ದಾರೆ. ಅಂದ ಮಾತ್ರಕ್ಕೆ ಅವರ ವಿಚಾರವನ್ನು ಕುರಿತು ಅಧಿಕೃತವಾಗಿ ನಾನೇನೂ ಹೇಳಲಾರೆ. ಅಷ್ಟು ಅನುಭವ ನನಗಿಲ್ಲ. ಹಾಗಾಗಿ, ಪ್ರಸ್ತುತ ಬರಹದಲ್ಲಿ ನಾನು ‘ಉತ್ತಮ ಬದುಕು’ ಎನ್ನುವುದರ ಬೆನ್ನುಹತ್ತಿ ಹಳ್ಳಿಯಿಂದ ಹೊರಬಂದ ಯುವಕ, ಯುವತಿಯರ ಬದುಕನ್ನಷ್ಟೇ ಒಂದಿಷ್ಟು ಅನ್ವೇಷಿಸಲಿದ್ದೇನೆ. ಈ ಹುಡುಕಾಟವು ‘ಉತ್ತಮ ಬದುಕು’ ಎನ್ನುವುದನ್ನು ಕುರಿತು ನನ್ನಲ್ಲಿದ್ದ ಪೂರ್ವಗ್ರಹಿಕೆಗಳನ್ನೇ ಪ್ರಶ್ನಿಸಿದೆ, ಅವುಗಳಿಗೆ ಸವಾಲು ಒಡ್ಡಿದೆ.

‘ಉತ್ತಮ ಬದುಕು’ ಯಾರಿಗೆ ತಾನೆ ಬೇಡ?

ಕೃಷಿಕ, ಕೃಷಿ ಪರಿಸರ ಮತ್ತು ಈ ಎರಡಕ್ಕೂ ಹೊಂದಿಕೊಂಡಿರುವ, ಆಸರೆಯಾಗಿರುವ ಹಲವು ಸಾಂಸ್ಥಿಕ ರಚನೆಗಳೊಂದಿಗಿನ ನನ್ನ ನಿರಂತರ ಒಡನಾಟದಿಂದ ದಕ್ಕಿದ ಮಾಹಿತಿಯನ್ನು ಮತ್ತು ಅನುಭವವನ್ನು ನನ್ನ ಕೆಲವು ವೈಯಕ್ತಿಕ ಅಭಿಪ್ರಾಯಗಳೊಂದಿಗೆ ಬೆರೆಸಿ ಇಲ್ಲಿ ಚರ್ಚೆಯನ್ನು ಬೆಳೆಸಿದ್ದೇನೆ. ಇದು ಅಲ್ಲಲ್ಲಿ ಅತ್ಯಾದರ್ಶದ ಧ್ವನಿಯನ್ನೂ ಹೊಮ್ಮಿಸಿದೆ, ಇನ್ಕೆಲವು ಎಡೆಗಳಲ್ಲಿ ವ್ಯಾವಹಾರಿಕ ನೋಟವನ್ನೂ ಬೀರಿದೆ. ಖಂಡಿತವಾಗಿಯೂ ಈ ಲೇಖನವು ಅಲ್ಲಲ್ಲಿ ಓದುಗರನ್ನು ಗೊಂದಲಗೊಳಿಸಬಹುದು. ಈ ಮುನ್ನೆಚ್ಚರಿಕೆಯನ್ನು ಈಗಲೇ ನೀಡುತ್ತಿದ್ದೇನೆ. ಇದು, ತಂಪಾದ ಒಂದು ಸಂಜೆಯಲ್ಲಿ ಕಡಲ ತೀರದಲ್ಲಿ ಕುಳಿತು ಬೆಚ್ಚಗಿನ ಬೀರ್ ಕುಡಿದ ಹಾಗೆ. ಆ ಮನೋಹರ ವಾತಾವರಣವನ್ನು ಮನಃಪೂರ್ವಕ ಸವಿಯುವ ಆಸೆ. ಆದರೆ ಯಾವುದೋ ಒಂದು ಕಾರಣಕ್ಕೆ ಅದು ಸಾಧ್ಯವಾಗುತ್ತಿರುವುದಿಲ್ಲ. ಅಲ್ಲೊಂದು ಗ್ಯಾಪ್, ತೆರಹು ಇರುತ್ತದೆ.

ಹಳ್ಳಿಗಳಲ್ಲಿ ಉತ್ತಮ ಬದುಕಿಗಾಗಿ ಹುಡುಕಾಟ ಏಕೆ ನಡೆಯುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡುತ್ತದೆ. ಹಳ್ಳಿಯಲ್ಲಿ ಉತ್ತಮ ಬದುಕನ್ನು ನಿರೀಕ್ಷಿಸಲಾರದಷ್ಟು ನಮ್ಮ ಸಂಪನ್ಮೂಲಗಳು ಬರಿದಾಗಿವೆಯೇ? ಹಸಿರು ತುಂಬಿದ ನೆಲವನ್ನೂ, ಆ ಮೂಲಕ ಸಮೃದ್ಧ ಬದುಕನ್ನೂ ಹಳ್ಳಿಗರು ಬೇರೆಲ್ಲೋ ಅರಸುತ್ತಿರುವುದನ್ನು ನೋಡಿದಾಗೆಲ್ಲ ನನಗೆ ಅಚ್ಚರಿ, ದಿಗ್ಭ್ರಮೆಯಾಗುತ್ತದೆ. ಸದ್ಯಕ್ಕೆ ಅಷ್ಟಿಷ್ಟು ಕಾಣಸಿಗುವ ಹಸಿರು ಹಾಸು, ಅಂದರೆ ಬದುಕಿನ ಸಾಧ್ಯತೆಗಳು ಮತ್ತು ಅವಕಾಶಗಳು ಏನಿದೆ, ಅದರ ಬಹುಪಾಲು ಹಳ್ಳಿಗಳದ್ದೇ ಆಗಿದೆ. ಇತ್ತೀಚೆಗೆ ಈ ಪ್ರಮಾಣವೂ ಕಡಿಮೆಯಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನೊಮ್ಮೆ ಮಾತನಾಡಿಸಿ ನೋಡಿ, ನಾನು ಹೇಳುತ್ತಿರುವುದು ನಿಮಗೆ ಮತ್ತಷ್ಟು ಸ್ಪಷ್ಟವಾಗುತ್ತದೆ. ಹಸಿರು ಹಾಸಿನ ಬಹುಪಾಲು ಹಳ್ಳಿಗಳಲ್ಲೇ ಇದೆ ಎಂದಮಾತ್ರಕ್ಕೆ, ಯುವಜನರು ತಮ್ಮ ತಮ್ಮ ಹಳ್ಳಿಗಳಲ್ಲೇ ಒಂದು ತೃಪ್ತಿದಾಯಕ ಬದುಕನ್ನು ಕಟ್ಟಿಕೊಳ್ಳುವಷ್ಟು ಪರಿಸ್ಥಿತಿ ಸುಧಾರಿಸಿದೆ ಎಂದೇನೂ ನಾನು ಹೇಳುತ್ತಿಲ್ಲ. ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ. ಆದರೆ, ಇಲ್ಲಿ ಎಲ್ಲ ದಾರಿಗಳೂ ಮುಚ್ಚಿವೆಯೆಂದು ಕೂರುವ ಬದಲು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವವರಿಗೆ, ಅಂಜಿಕೆಯಿಲ್ಲದ ನಿರೀಕ್ಷೆಗಳನ್ನು ಹೊಂದಿರುವವರಿಗೆ ಹಳ್ಳಿಯ ಜೀವನ ಖಂಡಿತವಾಗಿಯೂ ಉತ್ತಮಗೊಳ್ಳಬಹುದು ಎಂಬ ಅರಿವುಂಟಾಗುತ್ತದೆ. ಇಷ್ಟು ಹೇಳಿಯೂ ಒಂದು ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ನಮ್ಮಲ್ಲಿ ಮೂಲಸೌಕರ್ಯ, ಸಂಪನ್ಮೂಲ, ಪ್ರತಿಭೆ, ಮೌಲ್ಯಯುತ ಸರಕಾಗುವ ಪ್ರಕ್ರಿಯೆಗೆ ಸೂಕ್ತ ವಾತಾವರಣ (ಇಕೋಸಿಸ್ಟಮ್ ವಾಲ್ಯೂ ಚೇಯ್ನ್) ಅಥವಾ ಇರಾದೆಯ ಕೊರತೆ ಇದೆಯೇ? ಈ ಪ್ರಶ್ನೆಯನ್ನು ಬೆನ್‍ಹತ್ತುವ ಕೆಲಸಕ್ಕೆ ಬಹುಶಃ ಮುಗಿತಾಯವೇ ಇಲ್ಲ. ಹಾಗಾಗಿ, ಪ್ರಸ್ತುತ ಬರಹವನ್ನು ನಾನು, ಹಳ್ಳಿಯಲ್ಲಿ ಉತ್ತಮ ಬದುಕಿನ ಕೆಲವು ಸಾಧ್ಯತೆಗಳ ಚರ್ಚೆಗಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಇದರ ಪರಿಣಾಮವಾಗಿ, ಗ್ಯಾಪ್‍ಅನ್ನು ತುಂಬುವ ಅವಕಾಶಗಳ ಸಾದ್ಯಂತ ಪರಿಶೀಲನೆಯನ್ನೂ ನಡೆಸುತ್ತೇನೆ.

ಹಳ್ಳಿಗಳಲ್ಲಿ ಉತ್ತಮ ಬದುಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಇರಾದೆ, ಉದ್ದೇಶ ಎಂಬುದೊಂದು ಇದೆಯೇ? ಎಂದು ಯಾರಾದರೂ ಪ್ರಶ್ನಿಸಬಹುದು. ಖಂಡಿತವಾಗಿಯೂ ಉದ್ದೇಶದ ಕೊರತೆಯಿದೆ ಎಂದೂ ತತ್‍ಕ್ಷಣಕ್ಕೆ ಊಹಿಸಿಬಿಡಬಹುದು. ಇನ್ನು, ಹಳ್ಳಿಜೀವನದ ಏಳಿಗೆಯ ನಿಟ್ಟಿನಲ್ಲಿ ಸಾಕಷ್ಟು ಮಂದಿ ಕೆಲಸ ಮಾಡುತ್ತಿಲ್ಲ ಎಂಬ ಬೀಸುಹೇಳಿಕೆಯನ್ನೂ ನೀಡಬಹುದು. ಆದರೆ ವಸ್ತುಸ್ಥಿತಿ ಹೀಗೆ ಖಂಡಿತಾ ಇಲ್ಲ. ಈ ಸಮಸ್ಯೆಯನ್ನು ಉದ್ದೇಶಿಸಿ ಹಲವು ಆಯಾಮಗಳ ಪ್ರಯತ್ನ ನಡೆದಿದೆ, ನಡೆಸಲೂಬಹುದಾಗಿದೆ. ಇದರ ಚರ್ಚೆಗೆ ಇಳಿಯುವ ಮುನ್ನ ಹಳ್ಳಿಯ ಯಾವ ಜನರನ್ನು ಅನುಲಕ್ಷಿಸಿ ನಾವು ಉತ್ತಮ ಬದುಕಿನ ವಾತಾವರಣವನ್ನು ನಿರ್ಮಿಸಲು ಹೊರಟಿದ್ದೇವೆ ಎನ್ನುವುದರತ್ತ ಗಮನ ಹರಿಸಬೇಕಿದೆ. ಆ ಜನರು ಇನ್ಯಾರೂ ಅಲ್ಲ, ನಮ್ಮ ಕೃಷಿಕರು! ಭೂ-ಒಡೆತನವಿರುವ ಕೃಷಿಕರು, ಹೈನುಗಾರಿಕೆಯಲ್ಲಿ ತೊಡಗಿರುವವರು, ಭೂರಹಿತ ಕೃಷಿಕಾರ್ಮಿಕರು, ಮೀನುಗಾರರು, ಸಣ್ಣ ಉದ್ದಿಮೆದಾರರು, ತುರುಗಾಹಿಗಳು ಮತ್ತು ಬಹುಮುಖ್ಯವಾಗಿ ಈ ಎಲ್ಲ ವರ್ಗಗಳಲ್ಲಿರುವ ಮಹಿಳೆಯರು. ಉತ್ತಮ ಬದುಕು ಎನ್ನುವ ವಿಚಾರದಲ್ಲಿ ಲಿಂಗೀಯ ಅಂಶಕ್ಕೆ ನಾನು ಉದ್ದೇಶಪೂರ್ವಕವಾಗಿ ಒತ್ತುನೀಡುತ್ತಿದ್ದೇನೆ. ಎಲ್ಲ ಪರಿಸರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹಳ್ಳಿಯ ವಾತಾವರಣದಲ್ಲಿ ಹೆಂಗಸರು ಸಮಾನ ಅವಕಾಶಗಳಿಂದ ವಂಚಿತರಾಗುವುದು ಹಲವು ಬಗೆಯ ದುಷ್ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. ಉತ್ತಮ ಬದುಕಿನ ಸಾಕಾರದಲ್ಲಿ ಹೆಂಗಸರನ್ನು ಒಳಗೊಳ್ಳುವುದು ಕೇವಲ ನೈತಿಕವಾಗಿ ಸರಿಯಾದ ನಡೆ ಅಷ್ಟೇ ಅಲ್ಲ. ಅವರ ಪಾಲ್ಗೊಳ್ಳುವಿಕೆಯಿಂದ ಎಲ್ಲ ರೀತಿಯ ಚಟುವಟಿಕೆಗಳಲ್ಲೂ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಉತ್ತಮ ಬದುಕು ಎನ್ನುವ ಪರಿಕಲ್ಪನೆ ಹೆಚ್ಚು ಪರಿಪೂರ್ಣವಾಗಿ ಸಾಕಾರಗೊಳ್ಳುತ್ತದೆ.

ಇನ್ನು, ಆ ಎಲ್ಲ ವರ್ಗದ ಜನರು ಒಂದಲ್ಲಾ ಒಂದು ಸಂಘ-ಸಂಸ್ಥೆಯೊಂದಿಗೆ ನಂಟು ಹೊಂದಿರುತ್ತಾರೆ. ಸ್ವ-ಸಹಾಯ ಸಂಘಗಳು, ಸಹಕಾರಿ ಸಂಘಗಳು, ಜಂಟಿ ಹೊಣೆಗಾರಿಕೆಯ ಗುಂಪುಗಳು, ಉತ್ಪಾದಕರ ಸಂಘಟನೆಗಳು, ಹಲವು ನಮೂನೆಯ ಒಕ್ಕೂಟಗಳು; ಹೀಗೆ ಹತ್ತು ಹಲವು. ಗ್ರಾಮೀಣ ವ್ಯವಸ್ಥೆಯೊಳಗೆ ಸಕ್ರಿಯವಾಗಿ ತೊಡಗಿರುವವರು ಅಂತಹ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಅಡಿಗಡಿಗೂ ಕಾಣಬಹುದು. ಆ ಸಂಸ್ಥೆಗಳಲ್ಲಿ ಕೆಲವನ್ನು ಪರಿಚಯಿಸುವ ಕೊಂಡಿಗಳನ್ನು ಲೇಖನದ ಕೊನೆಯಲ್ಲಿ ನೀಡಿದ್ದೇನೆ. ಇವುಗಳ ವಿಕಿಪೀಡಿಯ ಪುಟವನ್ನು ಓದಿದರೂ ಒಂದು ಸ್ಥೂಲವಾದ ಅರಿವು ದಕ್ಕುತ್ತದೆ. ಆದಾಗ್ಯೂ, ನಾ ಮುಂದೆ ಚರ್ಚಿಸಲಿರುವ ಸಮಸ್ಯೆಗಳು ಮತ್ತು ಸವಾಲುಗಳ ಸಂಕೀರ್ಣತೆಯನ್ನು ಗ್ರಹಿಸಲು ಇನ್ನೂ ಆಳವಾಗಿ ಆ ಸಂಘ-ಸಂಸ್ಥೆಗಳ ಕೆಲಸಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈ ಮಟ್ಟದ ಅರಿವು, ಹಳ್ಳಿಯ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಆಗುತ್ತಿರುವ ಕೆಲಸಗಳನ್ನು ಸರಿಯಾಗಿ ಗ್ರಹಿಸಲು ಮತ್ತು ಅವಲೋಕಿಸಲು ಬಹಳ ಮುಖ್ಯವಾಗಿದೆ. ಇನ್ನು, ಈ ಕೆಲಸಗಳಿಗೆ ಆರ್ಥಿಕವಾಗಿಯೂ, ಸಾಂಸ್ಥಿಕವಾಗಿಯೂ ಬೆಂಬಲವಾಗಿ ನಿಲ್ಲುವ ಹತ್ತು-ಹಲವು ವ್ಯವಸ್ಥೆಗಳಿವೆ: ಗ್ರಾಮೀಣ ಬ್ಯಾಂಕ್‍, ಅಪೆಕ್ಸ್ ಬ್ಯಾಂಕ್, ಕ್ರೆಡಿಟ್ ಕೊ-ಆಪರೇಟೀವ್ ಸೊಸೈಟಿ, NBFC, MFI ಮುಂತಾದ ಆರ್ಥಿಕ ಸಂಸ್ಥೆಗಳು; ಅನುದಾನದ ಹಲವು ಯೋಜನೆಗಳ ಮೂಲಕ ಚಲನಶೀಲತೆಯನ್ನೂ, ಸಾಮರ್ಥ್ಯವನ್ನೂ ಹೆಚ್ಚಿಸುವ ಲಾಭರಹಿತ ಸಂಸ್ಥೆಗಳು; ಸಬ್ಸಿಡಿಯನ್ನು ನೀಡುವ ಮುಖಾಂತರ ವ್ಯಕ್ತಿ ಮತ್ತು ಸಂಸ್ಥೆಗಳ ನೆರವಿಗೆ ಬರುವ ಒಕ್ಕೂಟ ಮತ್ತು ರಾಜ್ಯ ಸರಕಾರದ ಯೋಜನೆಗಳು; ಹಳ್ಳಿಯ ಸಮಸ್ಯೆಗಳನ್ನು ಗುರುತಿಸಿ, ಬಗೆಹರಿಸುವತ್ತ ಮುಖಮಾಡಿರುವ ಸ್ಟಾರ್ಟ್‍-ಅಪ್‍ಗಳು; ಪಂಚಾಯತ್‍ಗಳಂತಹ ಸ್ಥಳೀಯ ಸರಕಾರಿ ಸಂಸ್ಥೆಗಳು; ಹಲವು ಸಚಿವಾಲಯಗಳ ಅಡಿಯಲ್ಲಿ ಕೆಲಸ ಮಾಡುವ NABARD, SFAC ಮುಂತಾದ ಸ್ವತಂತ್ರ ಸಂಸ್ಥೆಗಳು; ಇತ್ಯಾದಿ. ಬಹಳ ವಿಶಿಷ್ಟವಾದ, ಸೃಜನಾತ್ಮಕವಾದ ಮಾದರಿಗಳೊಂದಿಗೆ ಹೊಸ ಹೊಸ ವಲಯಗಳಲ್ಲಿ ಕೆಲಸ ಮಾಡುವ ಇಂತಹ ಸಂ‍ಘ-ಸಂಸ್ಥೆಗಳು ದೇಶಾದ್ಯಂತ ಹೇರಳವಾಗಿವೆ.

ಇಷ್ಟೆಲ್ಲ ಇದ್ದೂ ರೈತರ ಹಿತದೃಷ್ಟಿಯಿಂದ ಈ ಮುಂದಿನ ಪ್ರಶ್ನೆಯನ್ನು ಕೇಳಲೇಬೇಕು- “ಇಂದಾದರೂ ಪರಿಸ್ಥಿತಿ ಕೊಂಚ ಸುಧಾರಿಸುತ್ತದೆ ಎನ್ನುವ ಆಶಯದಿಂದ ಬೆಳಗ್ಗೆ ಏಳುವ ರೈತನ ಪಾಲಿಗೆ ಆ ಸುಧಾರಣೆ ಎಂದರೇನು? ಅದು ದಕ್ಕುವುದಾದರೂ ಹೇಗೆ?” ರೈತರ ಬದುಕಿನ ಸುಧಾರಣೆಯೆಂದರೆ ಅವನ/ಅವಳ ಆರ್ಥಿಕ ಬದುಕಿನ ಸುಧಾರಣೆಯೇ ಆಗಿದೆ. ಹೀಗೆ ಹೇಳುವಾಗ ನಾನು ಅಭಿವೃದ್ಧಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಕಡೆಗಣಿಸುತ್ತಿಲ್ಲ. ಆದರೆ, ಅವೆಲ್ಲವನ್ನೂ ಕಾಲಕ್ರಮೇಣ ಸಾರಭೂತವಾಗಿ ಪ್ರಭಾವಿಸುವುದು, ಬದಲಾಯಿಸುವುದು ಆರ್ಥಿಕತೆಯೇ ಎನ್ನುವ ಸತ್ಯವನ್ನು ನಾನು ಇಷ್ಟು ದಿನಗಳ ಅನುಭವದಿಂದ ಅರಿತಿದ್ದೇನೆ. ಇಲ್ಲಿ ನಾವು ಅಭಿವೃದ್ಧಿಯ ಪಿರಮಿಡ್‍ನ ತಳಹಂತದಲ್ಲಿರುವ ಜನರನ್ನು ಕುರಿತು ಮಾತನಾಡುತ್ತಿದ್ದೇವೆ. ಹಾಗಾಗಿ ಅಂಥವರ ಆರ್ಥಿಕತೆಯು ಸುಧಾರಿಸುವಷ್ಟು ಮುಖ್ಯವಾದ ಕಳಕಳಿ ಇನ್ನೊಂದಿರಲಾರದು. ಇದು ನನ್ನ ವೈಯಕ್ತಿಕ ನಿಲುವು. ಅಭಿವೃದ್ಧಿಯನ್ನು ಕುರಿತು ಒಂದು ಯಾವುದೇ ರಾಜಕೀಯ ಸಿದ್ಧಾಂತ ಮತ್ತು ಸಾಮಾಜಿಕ ಮಾದರಿಯ ದುರ್ಬೀನಿನಿಂದ ನೋಡುವವರು ನನ್ನ ಈ ನಿಲುವನ್ನು ಒಪ್ಪದೇ ಇರಬಹುದು. ಆದರೆ, ಹಳ್ಳಿ ವ್ಯವಸ್ಥೆಯ ಎಲ್ಲ ಹಂತಗಳೊಂದಿಗಿನ ಒಡನಾಟವೇ ಸ್ಥೂಲವಾಗಿ ನನ್ನ ಆ ನಿಲುವನ್ನು ರೂಪಿಸಿತು ಎಂದು ಹೇಳಲು ಬಯಸುತ್ತೇನೆ. ಇದು ಒಣ ಸಿದ್ಧಾಂತದ ಮಾತು ಖಂಡಿತಾ ಅಲ್ಲ. ಇನ್ನು, ಕೃಷಿಗೆ ಸಂಬಂಧಿಸಿದಂತೆ ಈಗಿರುವ ಕಾಯಿದೆಗಳಲ್ಲಿ ಬದಲಾವಣೆ ಆಗಬೇಕೆಂದು ಬಯಸುತ್ತೇನಾದರೂ, ಪ್ರಸ್ತುತ ಬರಹದಲ್ಲಿ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳದೆ, ಇರುವ ಕಟ್ಟುಕಟ್ಟಲೆಗಳ ವ್ಯವಸ್ಥೆಯೊಳಗೇ ಅತ್ಯುತ್ತಮ ಕೆಲಸವನ್ನು ಹೇಗೆ ಮಾಡಬಹುದು ಎಂಬುದರತ್ತ ಗಮನ ಹರಿಸುತ್ತೇನೆ. ಪ್ರಚಲಿತದಲ್ಲಿರುವ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಳ್ಳಿಯ ಅಭಿವೃದ್ಧಿಯೆಂದರೆ ಕೃಷಿಯೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ನಂಟು ಹೊಂದಿರುವ ಉದ್ಯೋಗಗಳನ್ನು ಆ ಹಳ್ಳಿಯಲ್ಲಿ ಸೃಷ್ಟಿಸುವುದು. ಅಲ್ಲದೆ, ಪೂರೈಕೆ ಮತ್ತು ಬೇಡಿಕೆಯ ಸಮತೋಲನವನ್ನು ಕಾಯ್ದುಕೊಳ್ಳುವುದರತ್ತಲೂ ಗಮನ ಹರಿಸಬೇಕಿದೆ. ನಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೋ ಅಂಥವರಲ್ಲಿ ಬಹುತೇಕ ಮಂದಿ ಕೃಷಿಯಾಧಾರಿತ ಜೀವನಪದ್ಧತಿಯ ತೆಕ್ಕೆಯೊಳಗೇ ಬದುಕುತ್ತಿರುವವವರು. ಹಾಗಾಗಿ, ಆ ತೆಕ್ಕೆಯೊಳಗೆ ನಾವೂ ಸೇರಿಕೊಂಡು ಅಭಿವೃದ್ಧಿ ಮಾದರಿಗಳನ್ನು ಕಟ್ಟಿ, ಬೆಳೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.

ಗ್ರಾಮೀಣ ಪರಿಸರದಲ್ಲಿ ಹೇರಳವಾಗಿ ಉದ್ಯೋಗ ಸೃಷ್ಟಿಯಾಗುವಂತೆ ಮಾಡುವುದು ಸದ್ಯಕ್ಕೆ ನಮ್ಮ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ. ಈ ದಿಕ್ಕಿನಲ್ಲಿ, ಹಳ್ಳಿಯ ಪರಿಸರ ವ್ಯವಸ್ಥೆಯನ್ನು, ಇಕೋಸಿಸ್ಟಮ್‍ಅನ್ನು ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿಸಿರುವ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಎಂದಾದರೂ ನಿಭಾಯಿಸಲೇಬೇಕೆಂದು ನಾನು ಬಲವಾಗಿ ನಂಬಿದ್ದೇನೆ. ಕೊಳ್ಳುಗರಾಗಿ, ನವಾನ್ವೇಷಕರಾಗಿ, ತಂತ್ರಜ್ಞರಾಗಿ, ಹೂಡಿಕೆದಾರರಾಗಿ, ಕಥೆಗಾರರಾಗಿ ಅಥವಾ ಇನ್ನಾವುದೇ ಬಗೆಯಲ್ಲಿ ಆ ಹೊಣೆಯನ್ನು ನಿರ್ವಹಿಸಬಹುದು. ಈ ವಿಚಾರವನ್ನು ಮುಂದೆ ನೋಡೋಣ. ಸದ್ಯಕ್ಕೆ, ಹಳ್ಳಿಯ ಪರಿಸರದಲ್ಲೊಂದು ಸುಸ್ಥಿರ ಆರ್ಥಿಕ ಮಾದರಿಯನ್ನು ಕಟ್ಟುವುದು ಹೇಗೆ ಎನ್ನುವುದನ್ನು ಗಮನಿಸೋಣ. ಇದಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಅವಕಾಶಗಳನ್ನು ನಾವು ಎದುರುನೋಡಬಹುದು? ಆ ಎಲ್ಲ ಅವಕಾಶಗಳು ಈಗಾಗಲೇ ಅಸ್ತಿತ್ವದಲ್ಲಿವೆಯೇ? ಈ ಪ್ರಶ್ನೆಯನ್ನು ಕೇಳುತ್ತಿರುವ ಹೊತ್ತಿನಲ್ಲೇ ನೂರಾರು ಉದ್ಯಮಗಳು ಈಗಾಗಲೇ ಹಳ್ಳಿಗಳಲ್ಲಿರುವುದನ್ನು ನಾವು ಗುರುತಿಸಬಹುದು. ಸೇವನಾರ್ಹ ಮತ್ತು ಸೇವನಾರ್ಹವಲ್ಲದ ಎಣ್ಣೆಯ ತಯಾರಿಕೆ; ಬೆಲ್ಲದ ಉತ್ಪಾದನೆ; ಸಕ್ಕರೆ, ಅಕ್ಕಿ ಮತ್ತು ಹಲಬಗೆಯ ಧಾನ್ಯಗಳ ಮಿಲ್‍ಗಳು; ಊದುಕಡ್ಡಿ (ಅಗರ್‍ಬತ್ತಿ) ತಯಾರಿಕೆ; ಜವಳಿ ಕೈಗಾರಿಕೆ; ಉಪ್ಪು, ಕಾಗದ ಮತ್ತು ಮರುಬಳಕೆ ಕಾಗದದ ಉತ್ಪಾದನೆ; ತೋಟಗಾರಿಕೆ ಮತ್ತು ಪುಷ್ಪೋದ್ಯಮ; ಕೃಷಿಸೇವೆಯನ್ನು ಒದಗಿಸುವುದು (ಸಸ್ಯತೋಟಗಳು, ಉಗ್ರಾಣಗಳು, ಶೀತಾಗಾರಗಳು, ಯಂತ್ರ ಮತ್ತು ಸಲಕರಣೆಗಳು, ಡಿಹೈಡ್ರೇಶನ್ ಘಟಕಗಳು; ಹೀಗೆ ಹಲವು ಸವಲತ್ತುಗಳನ್ನು ಒದಗಿಸುವುದು); ಗೊಂಬೆ ತಯಾರಿಕೆ; ಬೇಕರಿ ಉದ್ದಿಮೆ; ಕಿರು ಉದ್ದಿಮೆ; ರೇಷ್ಮೆ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಉದ್ದಿಮೆಗಳು; ಹೀಗೆ, ಹಲವಾರು ಉದ್ಯಮಗಳು ಹಳ್ಳಿಯ ಪರಿಸರದಲ್ಲಿ ಚಾಲ್ತಿಯಲ್ಲಿವೆ. ಹಳ್ಳಿ ಎಂದ ಕೂಡಲೆ ಮನದಲ್ಲಿ ಕೃಷಿಕಾರ್ಮಿಕರ ಚಿತ್ರ ಮೂಡುವುದು ಎಷ್ಟು ನಿಜವೋ, ಸಣ್ಣ ಉದ್ದಿಮೆಗಳು ಮತ್ತು ಅವುಗಳಲ್ಲಿ ತೊಡಗಿಕೊಂಡಿರುವ ಸಣ್ಣ ಸಣ್ಣ ತಂಡಗಳ ಚಿತ್ರ ಮೂಡುವುದೂ ಅಷ್ಟೇ ನಿಜ. ಹಳ್ಳಿಯ ಅಭಿವೃದ್ಧಿಯ ದೆಸೆಯಲ್ಲಿ ಬಹುಬೇಗ ಒಂದು ಹಂತವನ್ನು ತಲುಪಬೇಕೆಂದರೆ ಈಗಾಗಲೇ ಸಕ್ರಿಯವಾಗಿರುವ ಉದ್ಯಮಗಳೊಂದಿಗೆ ಕೆಲಸಮಾಡುತ್ತ, ಒಂದೇ ಬ್ರ್ಯಾಂಡ್‍ನ ಅಡಿಯಲ್ಲಿ ಹಲವು ಉತ್ಪನ್ನಗಳನ್ನು ತಯಾರಿಸಿ, ಸ್ಥಳೀಯ ಮಾರುಕಟ್ಟೆಯಲ್ಲಿ ಹರಿಬಿಡಬೇಕಾಗುತ್ತದೆ. ಆದರೆ ಇಂತಹ ಉದ್ಯಮಗಳು ಮತ್ತು ವ್ಯಾಪಾರದ ಸಾಧ್ಯತೆಗಳು ನಮ್ಮ ಕಣ್ಣಿಗೆ ಬೀಳುತ್ತಿಲ್ಲವೇಕೆ? ನಾನು ಮಾರುಕಟ್ಟೆಯನ್ನು ದೂಷಿಸುತ್ತಿಲ್ಲ, ಉದ್ಯಮಗಳನ್ನೂ ದೂಷಿಸುತ್ತಿಲ್ಲ. ಇದೊಂದು ಬಹಳ ಬಿಕ್ಕಟ್ಟಿನ ಪರಿಸ್ಥಿತಿ. ಅಷ್ಟು ಸಮರ್ಥವೂ, ಸಕ್ಷಮವೂ ಅಲ್ಲದ ಹಲವು ನಡೆಗಳನ್ನು ಅವಲಂಬಿಸಿ ಈ ಉದ್ಯಮ ಪರಿಸರ ರೂಪುಗೊಂಡಿರುವುದರಿಂದ ಸರಿಮಾಡುವ ಕೆಲಸವನ್ನು ಎಲ್ಲಿಂದ ಶುರುಮಾಡಬೇಕೆಂಬುದೇ ದೊಡ್ಡ ಚಿಂತೆ ಮತ್ತು ಚಿಂತನೆಯಾಗಿದೆ.

ಯಾವುದೇ ಉದ್ಯಮ ಗೆಲ್ಲಬೇಕೆಂದರೆ ಸ್ಥಿರವಾಗಿ ಮತ್ತು ನಿರಂತರವಾಗಿ ನಗದು ವಹಿವಾಟು ಆಗುತ್ತಿರಬೇಕಾದದ್ದು ಅವಶ್ಯ. ಅಂದರೆ, ನಿರಂತರವಾಗಿ ಮಾರುಕಟ್ಟೆಯನ್ನು ಲಗ್ಗೆಯಿಡುತ್ತಿರುವುದು ಅತ್ಯವಶ್ಯ. (ವೇದಿಕೆ ಕೇಂದ್ರಿತ ಉದ್ಯಮಿಗಳು, ಎನ್‍ಎಫ್‍ಟಿ ಮತ್ತು ಕ್ರಿಪ್ಟೊ ಕರೆನ್ಸಿಯಲ್ಲಿ ನಂಬಿಕೆಯಿರುವವರು ನನ್ನ ಈ ಮಾತನ್ನು ಅಲ್ಲಗಳೆಯಬಹುದು). ಆದರೆ, ಕೃಷಿಗೆ ಸಂಬಂಧಿಸಿದ ಸದ್ಯದ ಔದ್ಯಮಿಕ ವ್ಯವಸ್ಥೆಯನ್ನು ಗಮನಿಸಿದರೆ, ನಾವು ಮೊದಲು ಸಾಂಪ್ರದಾಯಿಕ, ಫಾರ್ಮಲ್ ಉದ್ಯಮ ಮಾದರಿಗಳಿಗೇ ಮೊರೆಹೋಗಬೇಕಾದ ಅನಿವಾರ್ಯವಿದೆ. ಹೀಗಿದ್ದೂ ಈ ವ್ಯವಸ್ಥೆಯೊಳಗೆ ವ್ಯವಹಾರವನ್ನು ನಡೆಸುವ ರೀತಿಗಳಲ್ಲಿ ಹೊಸತನವನ್ನು ತೋರುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಇದನ್ನು ಕುರಿತು ಮುಂದೆ ಚರ್ಚಿಸುವೆ. ಇನ್ನು, ತನ್ನನ್ನು ತಾನು ದೊಡ್ಡ ಮಾರುಕಟ್ಟೆಗಳೆಡೆಗೆ ಹೇಗೆ ವಿಸ್ತರಿಸಿಕೊಳ್ಳುತ್ತದೆ, ತನ್ನ ಸ್ವ-ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ, ಮಹಿಳೆಯರನ್ನೂ ಹೇಗೆ ಒಳಗೊಳ್ಳುತ್ತದೆ, ಗುಣಮಟ್ಟವನ್ನು ಕುರಿತು ತನ್ನ ದೃಷ್ಟಿಕೋನವನ್ನು ಹೇಗೆ ಪರಿಷ್ಕರಿಸಿಕೊಳ್ಳುತ್ತದೆ, ದೊಡ್ಡ ಮಾರುಕಟ್ಟೆಗಳಲ್ಲಿ ಪೈಪೋಟಿ ನಡೆಸಲು ಬೇಕಾದ ಕಾನೂನಾತ್ಮಕ ಚೌಕಟ್ಟನ್ನು ಹೇಗೆ ಕಟ್ಟಿಕೊಳ್ಳುತ್ತದೆ; ಈ ಎಲ್ಲವೂ ಆ ಉದ್ದಿಮೆಗಳ ಪ್ರಗತಿಯನ್ನು ನಿರ್ಣಯಿಸುವ ಅಂಶಗಳಾಗಿವೆ. ಒಂದು ಸಮುದಾಯದ ಜೀವನೋಪಾಯದ ಮಟ್ಟ ಏರಬೇಕೆಂದರೆ ಹೆಚ್ಚೆಚ್ಚು ಉದ್ಯೋಗಗಳ ಸೃಷ್ಟಿ ಆಗಬೇಕು. ಈ ಮೂಲಕ ಸಾಕಷ್ಟು ಭೌತಿಕ ಆಸ್ತಿ ಅಥವಾ ಇಕ್ವಿಟಿಗಳನ್ನೂ ಸೃಷ್ಟಿಸಬೇಕು. ಹೀಗೆ ನೋಡುವುದೆಂದರೆ, ಜೀವನೋಪಾಯವನ್ನು ಮತ್ತು ಉದ್ಯೋಗಗಳ ಸೃಷ್ಟಿಯನ್ನು ಹೊಸ ವಾಣಿಜ್ಯೋದ್ಯಮದ ಸ್ಥಾಪನೆಯ ದೃಷ್ಟಿಯಿಂದ ನೋಡುವುದು ಎಂದೇ ಅರ್ಥ. ಈ ಮಾತನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಕೃಷಿ ಪರಿಸರ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಚರ್ಚಿಸೋಣ. ಗ್ರಾಮೀಣ ಉದ್ಯಮಗಳು ತಾವು ಈಗಿರುವ ಪರಿಸ್ಥಿತಿಯಲ್ಲಿ ಬೃಹತ್ ಮಾರುಕಟ್ಟೆಗಳನ್ನು ತಲುಪುವಷ್ಟು, ಅಲ್ಲಿ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಹೊಂದಿಲ್ಲ. ಅಲ್ಲದೆ, ಹೊತ್ತು ಹೊತ್ತಿಗೆ ಹಣಕಾಸು ನೆರವನ್ನು ನೀಡಿ, ಪೊರೆಯುವ ಸಂಸ್ಥೆಗಳ ಗಮನವನ್ನು ಸೆಳೆಯುವ ಸಾಮರ್ಥ್ಯವನ್ನೂ ಇವು ಪಡೆದಿಲ್ಲ. ಹಾಗಂತ ಸಮಸ್ಯೆ ಹಳ್ಳಿಗರದ್ದೆಂದೂ, ಅವರಿಗೆ ತಮ್ಮ ಉದ್ಯಮಗಳು ಬೆಳೆಯಬೇಕೆಂಬ ಹಂಬಲವೇ ಇಲ್ಲವೆಂದೂ ಯಾರಾದರು ಹೇಳಿದರೆ, ಆ ಮಾತನ್ನು ಕಟುವಾಗಿ ವಿರೋಧಿಸಲು ನನ್ನ ಭಾವನಾತ್ಮಕ ಮನಸ್ಸು ಅಣಿಯಾಗುತ್ತದೆ. ಆದರೆ ಅದನ್ನು ನಾನಿಲ್ಲಿ ಮಾಡಲಾರೆ. ಈ ವಿಚಾರದಲ್ಲಿ ‘ಕೀಲಿಮಣೆ ಹೋರಾಟಗಾರ’ನಾಗಬೇಕೆಂಬ ನನ್ನ ವಾಂಛೆಯನ್ನು ತಡೆ ಹಿಡಿಯುತ್ತೇನೆ. ಅವಕಾಶ ದೊರೆತರೆ ಓದುಗರೂ ನಾನೂ ಎದುರುಬದುರು ಕುಳಿತು ಈ ವಿಚಾರವಾಗಿ ಶಾಂತಿಯಿಂದ ಮಾತನಾಡಬಹುದು.

ಹಳ್ಳಿಯ ಉದ್ಯಮಗಳು ತಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಹಲವು ದಾರಿಗಳಿವೆ- ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಸಲಕರಣೆಗಳನ್ನೋ, ಯಂತ್ರಗಳನ್ನೋ ಅಳವಡಿಸಿಕೊಳ್ಳುವುದು; ಮಾನವ ಸಂಪನ್ಮೂಲವನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು; ಬಂಡವಾಳವನ್ನು ಸೆಳೆಯುವುದು; ಉತ್ತಮ ಮಾರುಕಟ್ಟೆಯನ್ನು ತಲುಪುವುದು; ಇತ್ಯಾದಿ. ಆದರೆ, ಎಲ್ಲಿಂದ ತೊಡಗಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಸದ್ಯಕ್ಕೆ ಗ್ರಾಮೀಣ ಉದ್ಯಮಗಳಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಬಂಡವಾಳವನ್ನು ತರುವ ವಿಚಾರವನ್ನೇ ಎತ್ತಿಕೊಳ್ಳೋಣ. ಅನುದಾನ ಹೇಗೆ? ಈಗಾಗಲೇ ಹಲವು ವಲಯಗಳಲ್ಲಿ ಅನುದಾನದ ಕಾರುಬಾರು ನಡೆಯುತ್ತಿರುವುದನ್ನು ನಾವು ನೋಡಬಹುದು. ಆದರೆ ಇದು ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಲ್ಲ. ನಾನಿಲ್ಲಿ ಅನುದಾನ ಸಂಪೂರ್ಣವಾಗಿ ನಿಷ್ಪ್ರಯೋಜಕ ಎಂದು ಖಂಡಿತವಾಗಿಯೂ ಹೇಳುತ್ತಿಲ್ಲ. ಅದು ಎಷ್ಟು ಸುಸ್ಥಿರವಾದ ಮಾದರಿ ಎಂಬ ಪ್ರಶ್ನೆಯನ್ನಷ್ಟೇ ಮುಂದಿಡುತ್ತಿದ್ದೇನೆ. ಇನ್ನು, ರಿಸ್ಕ್ ತೆಗೆದುಕೊಂಡು ಪ್ರಯೋಗ ಮಾಡುವಷ್ಟು ತಾಳ್ಮೆಯಿರುವ ಬೇರೆ ಬಗೆಯ ಹೂಡಿಕೆಯ ಮಾದರಿಗಳು ಇವೆಯೇ? ಖಂಡಿತಾ ಇದರ ಕೊರತೆ ಇದೆ. ಈ ನಿಟ್ಟಿನಲ್ಲಿ ಉದ್ಯಮದ ಹೊಸ ಸಾಧ್ಯತೆಗಳನ್ನು ಪೊರೆಯಲು ಮುಂದಾಗುವಷ್ಟು ರಿಸ್ಕ್‍ಅನ್ನು ಅನುದಾನ ಮಾದರಿಯು ತೆಗೆದುಕೊಳ್ಳುತ್ತದೆಂದು ನಿಸ್ಸಂಶಯವಾಗಿ ಹೇಳಬಹುದು. ಒಂದುವೇಳೆ ಈ ಹೊಸ ಸಾಧ್ಯತೆಗಳು ಗೆದ್ದರಷ್ಟೇ ಮಿಕ್ಕ ಹೂಡಿಕೆಗಳು ಕೈಜೋಡಿಸಲು ಮುಂದಾಗುತ್ತವೆ. ಹಳ್ಳಿಗಳಲ್ಲಿ ಎಲ್ಲ ಯಶಸ್ವೀ ಉದ್ಯಮಗಳು ಅನುದಾನವನ್ನು ಪಡೆದೇ ಕುಡಿಯೊಡೆದಿವೆಯೆಂಬ ಬೀಸು ಹೇಳಿಕೆಯನ್ನೇನು ನಾನು ನೀಡುತ್ತಿಲ್ಲ. ಆದರೆ ಖಂಡಿತವಾಗಿಯೂ ಈ ಮಾದರಿಯನ್ನು ತಕ್ಕಮಟ್ಟಿಗೆ ನೆಚ್ಚಿಕೊಳ್ಳಬಹುದು. NABARD, SFACನಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ತಮ ಕೊಡುಗೆಯನ್ನೇ ನೀಡಿವೆ. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ CSR ಫೌಂಡೇಶನ್‍ಗಳು ಅಲ್ಲಿ ಹಳ್ಳಿಗಳಲ್ಲಿ, ತಳಮಟ್ಟದಲ್ಲಿ ಲಾಭಾಪೇಕ್ಷೆಯಿಲ್ಲದ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಇವುಗಳಲ್ಲಿ ಕೆಲವು, ಹಳ್ಳಿಗರ ಜೀವನಮಟ್ಟವನ್ನು ಉತ್ತಮಪಡಿಸುವ ತೊಡಗಿಕೆಗಳನ್ನು, ಇನಿಶಿಯೇಟೀವ್‍ಗಳನ್ನು ಮತ್ತು ಅವುಗಳನ್ನು ನಿಭಾಯಿಸುವ ಕ್ರಮಗಳ ಹೊಸ ಸಾಧ್ಯತೆಗಳನ್ನು ತೋರಿವೆ. ಆದರೆ, ಜೀವನೋಪಾಯಕ್ಕೆ ಸಂಬಂಧಿಸಿದ ಇಂತಹ ಯೋಜನೆಗಳು ಸುಸ್ಥಿರವಾಗಿರಬೇಕು, ಹೆಚ್ಚು ಕಾಲ ಬಾಳಿಕೆ ಬರಬೇಕು ಎಂಬ ಅಂಶವನ್ನೇ ಇವು ಮರೆಯುತ್ತವೆ. ಈ ಇನಿಶಿಯೇಟೀವ್‍ಗಳು ತಮ್ಮ ಅನುದಾನವನ್ನು ಖಾತರಿಯೂ, ನಿಶ್ಚಿತವೂ ಆದ ಕ್ರಿಯಾಯೋಜನೆಗಳ ಮೂಲಕವೋ, ವೇಗವರ್ಧಕ ಉಪಕ್ರಮಗಳ ಮೂಲಕವೋ ಸಾಂಪ್ರದಾಯಿಕ ಬಂಡವಾಳ ಹೂಡಿಕೆಯನ್ನು ಸೆಳೆಯುವುದಕ್ಕೆ ಬಳಸಿಕೊಳ್ಳುವುದಿಲ್ಲ. ಇನ್ನು ಇಕ್ವಿಟಿಯ ಕತೆ ಹೇಗೆ? ಹಳ್ಳಿಯ ಉದ್ಯಮಗಳ ಮೌಲೀಕರಣ ಸಾಧ್ಯವೇ? ಇಕ್ವಿಟಿಯ ಬೆಳವಣಿಗೆಯನ್ನು, ಅದರ ಮೌಲ್ಯದ ಏರಿಕೆಯ ರೂಪದಲ್ಲಿ ಕಾಣಲು ಸಾಧ್ಯವೇ? ಸದ್ಯದ ಪರಿಸ್ಥಿತಿಯಲ್ಲಿ ಅದೊಂದು ಅತ್ಯಂತ ಕ್ಷೀಣ ಸಾಧ್ಯತೆಯೆಂದೇ ತೋರುತ್ತದೆ. ಇದನ್ನೂ ಕಳೆದರೆ ಇನ್ನು ಮಿಕ್ಕುವುದು ಬ್ಯಾಂಕ್‍ನ ಮೂಲಕ ಸಾಲವನ್ನು ಪಡೆಯುವ ದಾರಿ ಮಾತ್ರ. ಬ್ಯಾಂಕ್ ಮ್ಯಾನೇಜರ್‍ಗಳು ಸಾಲವನ್ನು ಯಾವಾಗ, ಯಾವ ಆಧಾರದಲ್ಲಿ ನೀಡುತ್ತಾರೆಂಬುದು ನಮಗೆಲ್ಲರಿಗೂ ತಿಳಿದಿದೆ. NPA ಆದ ಕೃಷಿಸಾಲಗಳ ಹಿನ್ನೆಲೆಯಲ್ಲಿ ಗ್ರಾಮೋದ್ಯಮಗಳಿಗೆ ಸಾಲ ನೀಡುವುದನ್ನು ಕುರಿತು ಯಾವ ನಿಲುವು ತಾಳಬೇಕೆಂಬುದೇ ಆ ಮ್ಯಾನೇಜರ್‍ಗಳಿಗೆ ದೊಡ್ಡ ಗೋಜಲಿನ ಸಂಗತಿಯಾಗಿದೆ. ಇದು ಹೊಸ ರಿಸ್ಕ್‍ಗಳನ್ನು ತೆಗೆದುಕೊಳ್ಳದಂತೆ ಗ್ರಾಮೋದ್ಯಮಗಳ ಕೈಕಟ್ಟಿಹಾಕುತ್ತದೆ. ಪ್ರಮುಖ ಸವಾಲು ಇರುವುದೇ ಇಲ್ಲಿ, ಬಂಡವಾಳ ಹರಿದುಬರುವಂತೆ ಮಾಡುವಲ್ಲಿ.

ಈಗ, ನಾನು ಅತಿಹೆಚ್ಚು ತೊಡಗಿಸಿಕೊಂಡಿರುವ ಹಾಗೂ ಅತಿಹೆಚ್ಚು ಆಸಕ್ತಿಯನ್ನೂ ಹೊಂದಿರುವ ವಿಷಯದತ್ತ ಹೊರಳುತ್ತೇನೆ. ಹಳ್ಳಿಯ ವ್ಯವಸ್ಥೆಯನ್ನು ಕುರಿತು ಚಿಂತಿಸುತ್ತಿರುವ ಈ ಸಂದರ್ಭದಲ್ಲಿ ರೈತ ಉತ್ಪಾದಕರ ಕೂಟ (Farmer Producer Organisation- FPO); ಇದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಬಯಸುವೆ. ಉತ್ಪಾದಕರ ಕೂಟ ಎನ್ನುವ ಮಾದರಿಯನ್ನು ಇಡೀ ದೇಶವೇ ಬಹಳ ನಿರೀಕ್ಷೆಯಿಂದ ನೋಡುತ್ತಿದೆ ಹಾಗೂ ಇದು ರೈತರಿಗೆ ಗೆಲುವನ್ನು ತಂದೇತರುತ್ತದೆಂಬ ದೃಢ ವಿಶ್ವಾಸವನ್ನೂ ಹೊಂದಿದೆ. ಜೊತೆಗೆ, ಸಾಮೂಹಿಕತೆ ಮತ್ತು ಸಹಕಾರತ್ವದ ನೆಲೆಗಟ್ಟಿನ ಮೇಲೆ ರೂಪುಗೊಂಡ ಈ ಮಾದರಿಯು ರೈತರನ್ನು ಸಾಂಪ್ರದಾಯಿಕ ಮತ್ತು ನಿಯಂತ್ರಿತ ‘ಮಾರುಕಟ್ಟೆ ಆರ್ಥಿಕತೆ’ಯ ಪಾಲುದಾರರನ್ನಾಗಿಸುತ್ತದೆ ಎಂದೂ ಈ ದೇಶದ ಜನರು ಭರವಸೆಯನ್ನು ಹೊಂದಿದ್ದಾರೆ. ನಾನು ನಿಯಂತ್ರಿತ ಎಂದು ಹೇಳಿದ್ದು ಆರ್ಥಿಕತೆಯ ಚಾಲಕ ಶಕ್ತಿಗಳ ನಿಯಂತ್ರಣ ಎಂಬರ್ಥದಲ್ಲಿ. ಬೇಡಿಕೆ – ಪೂರೈಕೆಯ ಸಮತೋಲಿತ ನಿಯಂತ್ರಣ ಎಂಬರ್ಥದಲ್ಲಿ. ಕೊನೆಯಲ್ಲಿ ಉತ್ಪನ್ನದ ಯಾವ ಮೌಲ್ಯವು ಬಳಕೆದಾರರನ್ನು ಸೇರುತ್ತದೆಯೋ ಅದಕ್ಕೆ ತಕ್ಕಂತೆಯೇ ಆ ಉತ್ಪನ್ನದ ಬೆಲೆ ನಿಗದಿಯಾಗುತ್ತದೆ. FPOಗಳ ಮೂಲಕ ನಡೆಯುವ ಈ ವ್ಯವಹಾರದಲ್ಲಿ ಮಧ್ಯವರ್ತಿಗಳ ಕಮಿಷನ್‍ಗೆ ಹೆಚ್ಚು ಆಸ್ಪದವಿಲ್ಲ. (ಹಾಗೆಂದು, ಮಧ್ಯವರ್ತಿಗಳೇ ಇಲ್ಲದ ‘ಹೊಲದಿಂದ ನೇರ ಬಟ್ಟಲಿಗೆ’ ಮಾದರಿಯು ಎಲ್ಲ ಸಮಸ್ಯೆಗಳಿಗೂ ಸಂಜೀವಿನಿ ಎಂದೇನೂ ನಾನು ಹೇಳುತ್ತಿಲ್ಲ. ಹೆಚ್ಚು ಉತ್ತಮವೂ, ಸಮರ್ಥವೂ ಆದೊಂದು ಪರ್ಯಾಯ ವ್ಯವಸ್ಥೆಯು ರೂಪುಗೊಳ್ಳುವವರೆಗೂ ಮಧ್ಯವರ್ತಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಧ್ಯವರ್ತಿಗಳ ಕಮಿಷನ್‍ಅನ್ನು ಕುರಿತು ಭಾವನಾತ್ಮಕವಾಗಿಯೋ, ನೈತಿಕತೆಯ ನೆಲೆಯಿಂದಲೋ ನಾನು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ನನ್ನ ಅನುಭವ ಮತ್ತು ಅದರಿಂದ ಗಳಿಸಿದ ಒಂದಿಷ್ಟು ಪ್ರೌಢಿಮೆಯಿಂದಲೇ ನಾನು ಆ ನಿಲುವಿಗೆ ಬಂದಿದ್ದೇನೆ).

ಈ ಚರ್ಚೆ ಏನೇ ಇರಲಿ, ರೈತರು ಹಾಗೂ ಮಾರುಕಟ್ಟೆಯ ನಡುವೆ ಔಪಚಾರಿಕವಾದ ಮತ್ತು ವೃತ್ತಿಪರವಾದ ವ್ಯವಹಾರ ನಡೆಯುವಂತೆ FPOಗಳು ನೋಡಿಕೊಳ್ಳುತ್ತವೆ ಎಂಬುದಂತೂ ಸತ್ಯ. FPO ಎನ್ನುವುದು ಒಂದು ಸಮರ್ಥ ಪರ್ಯಾಯವಾಗಬಲ್ಲ ಮಾದರಿಯಾಗಿದೆಯೆಂದು ನಿಶ್ಚಿತವಾಗಿ ಹೇಳಬಹುದು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇದೊಂದು ಅತ್ಯುತ್ತಮ ಪರ್ಯಾಯ ಮಾದರಿಯೇ ಹೌದು. ಆದರೆ ಸವಾಲು ಇರುವುದು, FPOಗಳು ಯಶಸ್ವೀ ಉದ್ಯಮಗಳಾಗುವಂತಹ ವಾತಾವರಣವನ್ನು ನಿರ್ಮಿಸುವುದರಲ್ಲಿ. FPOಗಳಲ್ಲಿ ರೈತರು ಆ ಉತ್ಪಾದಕರ ಸಂಸ್ಥೆಯ ಷೇರುದಾರರಾಗಿರುತ್ತಾರೆ. ಅಲ್ಲದೆ, ಆ ಸಂಸ್ಥೆಯ ಒಟ್ಟು ಇಕ್ವಿಟಿಯ ಶೇಕಡ 10ಕ್ಕಿಂತ ಹೆಚ್ಚು ಷೇರುಮೌಲ್ಯಗಳನ್ನು ಯಾವೊಬ್ಬ ರೈತನೂ, ರೈತಳೂ ಹೊಂದಿರಬಾರದು ಎನ್ನುವ ನಿಯಮವೂ ಇದೆ. ಜೊತೆಗೆ, ರೈತರಲ್ಲದ ಹೊರಗಿನ ಯಾವ ಖಾಸಗಿ ವ್ಯಕ್ತಿಯೂ ಷೇರುದಾರರಾಗಲಾರರು. ಇನ್ನು, FPOಗಳಿಗೆ ತಮ್ಮ ಹೊಸ ಉದ್ಯಮಗಳನ್ನು ಶುರುಮಾಡಲು ಬೇಕಾದ ಬಂಡವಾಳಕ್ಕೆಂದು ಇಕ್ವಿಟಿಗೆ ಅನುಸಾರವಾಗಿ ಸೂಕ್ತ ಅನುದಾನ ಸಿಗಬೇಕೆಂದಿದ್ದರೆ ಆ ಕೂಟದಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯ ರೈತರಂತೂ ಇರಲೇಬೇಕು. ಈ ಎಲ್ಲವೂ ಆ ವ್ಯವಸ್ಥೆಯೊಳಗೆ ರೈತರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸುವ ಅಂಶಗಳಾಗಿವೆ. ಬೆಲೆಪಟ್ಟಿ (ಇನ್‍ವಾಯ್ಸ್) ಹಾಗೂ ಖರೀದಿ ರಸೀದಿಯನ್ನು ತಯಾರಿಸುವುದು; ಯಂತ್ರಗಳು ಮತ್ತು ಉಗ್ರಾಣವನ್ನು ನಿರ್ವಹಿಸುವುದು; ಹೀಗೆ ಹತ್ತುಹಲವು ರೀತಿಗಳಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು FPOಗಳು ಮಾಡುತ್ತವೆ. ಇದು, ಹಳ್ಳಿಯ ಆರ್ಥಿಕ ಉತ್ಪನ್ನದ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಹಳ ದೊಡ್ಡ ಹೆಜ್ಜೆಯೇ ಆಗಿದೆ. ಈ ಹಂತದಲ್ಲಿ ಮಾಹಿತಿ ಮತ್ತು ಪ್ರಕ್ರಿಯೆಗಳ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡುವುದು ಅನಿವಾರ್ಯವಾಗುತ್ತದೆ. ಶಿಸ್ತಿನ ಅಗತ್ಯವನ್ನು ಪ್ರತಿಯೊಬ್ಬ ರೈತನಿಗೂ ಪ್ರತ್ಯೇಕವಾಗಿ ತಿಳಿಹೇಳುವ ಪರಿಸ್ಥಿತಿ ಉದ್ಭವಿಸುವುದಿಲ್ಲ. FPO ಸಂರಚನೆಯೇ ಅದನ್ನು ನೋಡಿಕೊಳ್ಳುತ್ತದೆ. ಲೆಕ್ಕಪರಿಶೋಧನೆ, ಕಾನೂನು ಮತ್ತು ಇತರೆ ಕಟ್ಟುಪಾಡುಗಳನ್ನು ಅರಿತುಕೊಂಡು ತಕ್ಕಂತೆ ನಡೆಯುವುದು, ಸಕ್ರಿಯ ಬಂಡವಾಳವನ್ನು ನಿರ್ವಹಿಸುವುದು, ಹೊಸ ಬಂಡವಾಳವನ್ನು ಹೊಂದಿಸುವುದು; ಹೀಗೆ ಯಾವೆಲ್ಲ ವಿಚಾರಗಳ ಬಗ್ಗೆ ರೈತರು ಆಗೊಮ್ಮೆ ಈಗೊಮ್ಮೆ ಸಮಂಜಸವಾಗಿಯೇ ತಕರಾರುಗಳನ್ನು ಎತ್ತುತ್ತಿರುತ್ತಾರೋ ಅಂತಹ ಎಲ್ಲವನ್ನೂ FPOಗಳ ಮೂಲಕ ಅದೇ ರೈತರು ಸಮರ್ಥವಾಗಿ ನಿರ್ವಹಿಸುವುದೇನಿದೆ ಅದು ಗ್ರಾಮೀಣ ಉದ್ಯಮಗಳು ಫಾರ್ಮಲೈಸ್ ಆಗುತ್ತಿರುವ ಸೂಚನೆಯೇ ಆಗಿದೆ. ಅಯ್ಯೋ, ಆಡಳಿತಗಾರರೂ, ನಿರ್ವಾಹಕರೂ ಆಗಿ ಮಾರ್ಪಟ್ಟ ರೈತರೀಗ ದಂಡಿಯಾಗಿ ನಿಯಮಾವಳಿಗಳನ್ನು ಪಾಲಿಸಬೇಕಲ್ಲ, ಅವುಗಳ ಸುಳಿಯಲ್ಲಿ ಸಿಲುಕಬೇಕಲ್ಲ ಎಂದು ಬಹಳ ಭಾವನಾತ್ಮಕವಾಗಿ ರೈತರ ಸಮಸ್ಯೆಗಳನ್ನು ನೋಡುವವರು ನನ್ನ ಮೇಲೆ ಎರಗಬಹುದು! ಆದರೆ, ಪ್ರಸ್ತುತ ಕಂಪನೀಸ್ ಆಕ್ಟ್‍ನ ಅಡಿಯಲ್ಲಿ ಕೆಲಸ ಮಾಡುವ ಇಂತಹ ಉತ್ಪಾದಕರ ಕೂಟಗಳ ಸುಧಾರಿತ ಮಾದರಿಗಳು ನಮ್ಮ ಅರಿವಿಗೆ ಬರುವವರೆಗೂ ನಾನು FPOಗಳನ್ನೊಳಗೊಂಡ ಈ ವ್ಯವಹಾರ ಮಾದರಿಯನ್ನು ಒಪ್ಪಲೇಬೇಕಾಗಿದೆ, ಒಪ್ಪುತ್ತೇನೆ ಕೂಡ.

ಇವಿಷ್ಟನ್ನೂ ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಹಳ್ಳಿಗಳಿಂದ ನಾವು ಎಷ್ಟೇ ಸೃಜನಶೀಲವಾದ ಔದ್ಯಮಿಕ ಮಾದರಿಗಳನ್ನು ಎದುರುನೋಡಿದರೂ, ವಾಸ್ತವದಲ್ಲಿ ಆ ಗ್ರಾಮೀಣ ಉದ್ಯಮಗಳು ಹೆಚ್ಚು ಪ್ರಯೋಗಗಳನ್ನು ನಡೆಸಲಾರವು. ಆಟದ ನಿಯಮಗಳು ಸ್ಪಷ್ಟವಿದೆ. ಆಟದ ಆ ಅತ್ಯಾವಶ್ಯಕ ನಿಯಮಗಳೊಂದಿಗೆ ಗ್ರಾಮೀಣ ಉದ್ಯಮಗಳನ್ನು ಸರಿಹೊಂದಿಸುವವರು ಬೇಕಾಗಿದ್ದಾರೆ. ಮೊದಲನೆಯದಾಗಿ, ಗ್ರಾಮೀಣ ಪರಿಸರದಲ್ಲಿ ನಡೆದು, ತಿರುಗಿ ಕೆಲಸ ಮಾಡಬೇಕು. ದೂರದಲ್ಲಿ ಕೂತು ಯೋಜನೆಗಳನ್ನು ರೂಪಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇನ್ನು, ಆ ಉದ್ಯಮಗಳು ಸರಿಯಾದ ಮಾರುಕಟ್ಟೆಗಳನ್ನು ತಲುಪಬೇಕು. ಈ ನಿಟ್ಟಿನಲ್ಲಿ, ಯಾವೆಲ್ಲ ಮಾರುಕಟ್ಟೆಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವೋ ಅಲ್ಲೆಲ್ಲ ಉದ್ಯಮಗಳ ಉತ್ಪನ್ನಗಳು ತಲುಪುವಂತೆ ಮಾಡಬೇಕು. ಜೊತೆಗೆ, ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆ ಹಳ್ಳಿಯ ಉದ್ಯಮಗಳತ್ತಲೂ ನೋಡುವಂತೆ ಪ್ರಭಾವ ಬೀರುತ್ತಲಿರಬೇಕು. ಸರಕುಗಳು ಸೇರಬೇಕಾದ ಜಾಗವನ್ನು ಸರಿಯಾಗಿ, ತ್ವರಿತವಾಗಿ ತಲುಪಲು ಬೇಕಾದ ಮೂಲಭೂತ ಸೌಕರ್ಯಗಳು ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಟ್ಟಿಕೊಡಬೇಕಾದ ಜರೂರೂ ಇದೆ. ಅಲ್ಲದೆ, ಮಾಹಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತ, ಸೂಕ್ತ ತೀರ್ಮಾನಗಳನ್ನು ತಳೆಯುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನೂ ಜಾರಿಗೆ ತರಬೇಕು. ಹೀಗೆ, ಇತ್ಯಾದಿ ಇತ್ಯಾದಿ ಕೆಲಸಗಳು.

ಇದೆಲ್ಲ ಆಗಬೇಕೆಂದರೆ ಸದಾ ಕೌತುಕದ ಕಣ್ಗಳೂ, ಅಂಜಿಕೆಯಿಲ್ಲದ ನಿರೀಕ್ಷೆಯೂ ಇರಬೇಕೆಂದು ಹೇಳಿದ್ದೆ. ಕಾರಣ ಏನೆಂಬುದು ಈಗ ನಿಮಗೆಲ್ಲರಿಗೆ ಸ್ಪಷ್ಟವಾಗಿರಬೇಕು. ಇದೇನು ಕ್ಷಿಪಣಿ ವಿಜ್ಞಾನವಲ್ಲ. ಸದ್ಯದ ವ್ಯವಸ್ಥೆಯಲ್ಲಿರುವ ನಿಯಮಗಳಿಗನುಸಾರವಾಗಿ, ಅವಕಾಶಗಳನ್ನು ಬಳಸಿಕೊಳ್ಳುತ್ತಲೇ ತಾಳ್ಮೆಯಿಂದ ಕೊನೆಯವರೆಗೂ ಆಡಬೇಕಷ್ಟೆ. ನಾನು ಮತ್ತು ನೀವು ಇದನ್ನು ಮಾಡಬಲ್ಲೆವೇ? ನಿಸ್ಸಂಶಯವಾಗಿ. ಇನ್ನು, ನಾವು ಮಾಡಬಲ್ಲೆವು ಅಂತಾದರೆ ಹಳ್ಳಿಗರೂ ಮಾಡಬಹುದು ತಾನೆ? ಖಂಡಿತವಾಗಿ ಮಾಡಬಹುದು. ಆದರೆ, ಅವಕಾಶಗಳನ್ನು ಒದಗಿಸುವ ಸಮಾನ ವೇದಿಕೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹಳ್ಳಿಗರೊಂದಿಗೆ ನಾವು ಕೈಜೋಡಿಸಿ, ಹೆಗಲುಕೊಟ್ಟು ನಿಲ್ಲಬೇಕಾಗುತ್ತದೆ. ಅವರೊಂದಿಗೆ ಹೊಳಹುಗಳನ್ನು ಹಂಚಿಕೊಳ್ಳುತ್ತ, ಸೂಕ್ತ ತರಬೇತಿಯನ್ನು ನೀಡಲು ವ್ಯವಸ್ಥೆ ಮಾಡುತ್ತ, ಅವರನ್ನು ಘನೋದ್ದೇಶಗಳತ್ತ ಹುರಿದುಂಬಿಸುತ್ತಲಿರಬೇಕು. ಒಂದುವೇಳೆ ಅವರ ಒಂದು ತಲೆಮಾರಿನವರೊಂದಿಗೆ ಕೆಲಸ ಮಾಡಿ ಆದಷ್ಟು ಕುಂದುಕೊರತೆಗಳನ್ನು ತುಂಬಿಸಿದರೆ, ಮುಂದಿನ ತಲೆಮಾರಿನವರು ಹಳ್ಳಿಗಳಲ್ಲೇ ಉಳಿದುಕೊಳ್ಳಲು ಒಂದಿಷ್ಟು ಕೇವಲ ಭಾವನಾತ್ಮಕವಲ್ಲದ ಕಾರಣಗಳನ್ನೂ ಕಂಡಾರು. ಹಲವು ಪ್ರಶ್ನೆಗಳನ್ನೂ, ಸಾಧ್ಯತೆಗಳನ್ನೂ ನಾನಿಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಹಳ್ಳಿಯ ಸಮಸ್ಯೆಯನ್ನು ಭಿನ್ನವಾಗಿ ಹೇಗೆ ನೋಡಬಹುದೆಂದು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ತೀರ್ಮಾನಗಳನ್ನೇ ನಿಮ್ಮ ಮಡಿಲಲ್ಲಿರಿಸಿದ್ದೇನೆ. ಇಲ್ಲಿ ಯಾವುದೇ ‘ಒಂದು’ ಪರಿಹಾರವನ್ನು ಇರಿಸಿಲ್ಲ. ಹಾಗೆ ‘ಒಂದು’ ಪರಿಹಾರ ಎಂಬುದೂ ಇಲ್ಲ. ಹಳ್ಳಿಯ ಆರ್ಥಿಕ ಪರಿಸ್ಥಿತಿ ಮತ್ತು ಸಾಧ್ಯತೆಯನ್ನು ಉತ್ತಮಪಡಿಸುವ ಯಾವುದೇ ಪರಿಹಾರಕ್ಕೂ ನಾವು ತೆರೆದ ಮನಸ್ಸುಗರಾಗಿರಬೇಕು. ಯಾವುದೋ ಒಂದು ಬಗೆಯ ಬೃಹತ್ ಹಸ್ತಕ್ಷೇಪದಿಂದ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗಲಾರವು. ನಾವು ಒಂದು ವ್ಯವಸ್ಥೆಯ ನಡಾವಳಿಗಳನ್ನು ಸಮಗ್ರವಾಗಿ ಗ್ರಹಿಸುತ್ತಲೇ ಅದರಲ್ಲಿರುವ ಕುಂದುಕೊರತೆಗಳನ್ನು ತುಂಬಲು ಶ್ರಮ ಹಾಕಬೇಕು.

ಈ ವಲಯದಲ್ಲಿ ಕೆಲಸ ಸಾಗಿದಂತೆ ನನ್ನ ಅಭಿಪ್ರಾಯಗಳು ಘನಗೊಳ್ಳುತ್ತವೆ, ಮುಕ್ತವಾಗಿ ಹರಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ವಾಸ್ತವದಲ್ಲಿ ಆಗಬೇಕಾದ್ದು ಹೀಗೆಯೇ. ಇದರ ಬಗ್ಗೆ ನನಗಾವ ಕಳವಳವೂ ಇಲ್ಲ. ಮುಕ್ತವಾಗೇ ಇದನ್ನು ಸ್ವಾಗತಿಸುತ್ತೇನೆ. ಆದರೆ, ಹಳ್ಳಿಗರಿಗೆ, ಹಳ್ಳಿಯೊಳಗೆ ‘ಉತ್ತಮ ಬದುಕು’ ಎಂಬುದನ್ನು ಕಟ್ಟಲು ಯಾವೆಲ್ಲ ಪ್ರಯತ್ನಗಳ ಅಗತ್ಯವಿದೆಯೋ ಅವೆಲ್ಲವನ್ನೂ ಕಲಿಯಲು ನಾನು ನನ್ನ ದೇಹ ಮತ್ತು ಹೃದಯದ ಕಣ್ಣನ್ನೂ, ಕಿವಿಯನ್ನೂ ಸದಾ ತೆರೆದಿಟ್ಟುಕೊಂಡಿರುತ್ತೇನೆ.

ಅನುವಾದ- ಅಮರ್ ಹೊಳೆಗದ್ದೆ

English Version : https://ruthumana.com/blog-post/10015/

ಹೆಚ್ಚಿನ ಓದಿಗೆ:

https://www.nabard.org/

http://sfacindia.com/

http://sfacindia.com/UploadFile/Statistics/Farmer%20Producer%20Organizations%20Scheme.pdf

http://sfacindia.com/UploadFile/Statistics/Strategy-Paper-on-Promotion-of-10,000-FPOs.pdf

https://vikaspedia.in/social-welfare/rural-poverty-alleviation-1/self-help-groups/overview-of-shgs

https://en.wikipedia.org/wiki/Regional_Rural_Bank

https://en.wikipedia.org/wiki/NBFC_and_MFI_in_India

One comment to “ಸಿರಿತೆನೆಯ ಮಾಡು”
  1. ಜೈಕರ‌್ನಾಟಕ

    ಬಂಗಾರದ ಮನುಷ್ಯ ನೋಡಿ ಜನಮನ ಬದಲಾದ ಹಾಗೆ , ಈ ನಡೆ ಮತ್ತು ಕಾಯಕ ನಿಜಕ್ಕೂ ಅನುಕರಣೀಯ

ಪ್ರತಿಕ್ರಿಯಿಸಿ