ಪುಸ್ತಕ ಪರೀಕ್ಷೆ: ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ

ಮುಸ್ಲಿಮರನ್ನು ಏಕಶಿಲಾಕೃತಿಯ ಜನಾಂಗವಾಗಿ, “ಪ್ಯಾನ್ ಇಂಡಿಯಾ” ಅಸ್ಮಿತೆ ಇರುವ ಧರ್ಮವಾಗಿ ಬಿಂಬಿಸಲು ಭಾರತದ ಈಗಿನ ರಾಜಕಾರಣ ಬಯಸುತ್ತದೆ. ಪೂರ್ಣಚಂದ್ರ ತೇಜಸ್ವಿಯವರು ಗುರುತಿಸಿದಂತೆ ಭಾರತದಾದ್ಯಂತ ಹರಡಿರುವ ಮೂರು ಜನಾಂಗಗಳೆಂದರೆ ಬ್ರಾಹ್ಮಣರು, ಮುಸ್ಲಿಮರು ಮತ್ತು ದಲಿತರು. ಈಗಿನ ಬ್ರಾಹ್ಮಣ್ಯದ ರಾಜಕಾರಣ ಏಕೆ ಇನ್ನುಳಿದ ಇಬ್ಬರ ವಿರುದ್ಧವಾಗಿದೆ ಎಂಬುದಕ್ಕಿರುವ ಸರಳ ಕಾರಣ ಇದು. ಅಬ್ಬಾಸ್ ಅವರ ಈ ಗಂಭೀರ ಬರಹ ಪ್ರೊ. ಮುಜಾಫರ್ ಅಸ್ಸಾದಿ ಅವರ ಪುಸ್ತಕವನ್ನು ಅವಲೋಕಿಸುವ ಜೊತೆಗೆ ಈ “ಪ್ಯಾನ್ ಇಂಡಿಯಾ” ಮುಸ್ಲಿಂ ಐಡೆಂಟಿಟಿಯ ಹೊರತಾದ, ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಪ್ರಭಾವಗಳನ್ನು ಸಹ ಮುನ್ನೆಲೆಗೆ ತಂದು ಚರ್ಚಿಸುತ್ತದೆ.

ಪ್ರೊ. ಮುಜಾಫರ್‌ ಅಸ್ಸಾದಿಯವರು ಬರೆದ “ಅಲ್ಪ ಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ” ಪುಸ್ತಕ ಸಮಕಾಲೀನ ಸಂದರ್ಭದಲ್ಲಿ ಹಲವಾರು ಕಾರಣಕ್ಕೋಸ್ಕರ ಬಹಳ ಮಹತ್ವಪೂರ್ಣವೆನಿಸಿದೆ. ವಸಾಹತುಪೂರ್ವ ಮತ್ತು ವಸಾಹತೋತ್ತರ ಭಾರತದ ಮುಸಲ್ಮಾನರ ಬದುಕಿನಲ್ಲಿ ಅಸ್ತಿತ್ವದಲ್ಲಿದ್ದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಗಳನ್ನು ಸಂಶೋಧಕನ ನಿಖರತೆ ಮತ್ತು ಜನಪ್ರಿಯ ಬರಹಗಳ ಸರಳತೆಯೊಂದಿಗೆ ಲೇಖಕರು ತೆರದಿಟ್ಟಿದ್ದಾರೆ. ಇತಿಹಾಸದ ಗ್ರಂಥಗಳು, ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಹಾಗೂ ಸ್ವಾತಂತ್ರ್ಯೋತ್ತರದಲ್ಲಿ ಭಾರತೀಯ ಸರಕಾರಗಳು ನಡೆಸಿದ ಜಾತಿ ಜನಗಣತಿಗಳು, ಗಝೆಟಿಯರ್‌ಗಳು ಮತ್ತು ಇತರ ಅಧ್ಯಯನ ವರದಿಗಳು ನೀಡುವ ದತ್ತಾಂಶಗಳ ಆಧಾರದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ವಿವಿಧ ಸಮಾಜವಿಜ್ಞಾನಿಗಳು, ಕುಲಶಾಸ್ತ್ರಜ್ಞರು, ಇತಿಹಾಸಜ್ಞರು ಹಾಗೂ ಇತರ ಸಂಶೋಧಕರು ಈ ವಿಚಾರದಲ್ಲಿ ಮುಂದಿಟ್ಟ ಅಭಿಪ್ರಾಯಗಳನ್ನು ಮತ್ತು ಗ್ರಹಿಕೆಗಳನ್ನು ಒಂದೆಡೆ ಕಲೆಹಾಕಿ ವಿಶ್ಲೇಷಿಸುವ ಬೃಹತ್‌ ಕಾರ್ಯ ಈ ಕೃತಿ ಮೂಲಕ ಸಾಧ್ಯವಾಗಿದೆ ಎನ್ನಬಹುದು. ಆದರೆ ಮುಸಲ್ಮಾನರ ಸಾಮಾಜಿಕ ರಚನೆಗಳ ಬಗೆಗಿನ ಹಳೆಯ ಸಂಶೋಧನೆಗಳನ್ನು ಮಾತ್ರ ಅವಲಂಬಿಸಿ ತೀರ್ಮಾನಕ್ಕೆ ಜಿಗಿಯಲು ಪ್ರಯತ್ನಿಸಿದಂತೆ ಕಂಡುಬರುತ್ತಿರುವುದು ಸುಳ್ಳಲ್ಲ. ಭಾರತೀಯ ಮುಸ್ಲಿಮರ ಬಗೆಗೆ ಸದ್ಯ ದೊರೆಯುತ್ತಿರುವ ethnographic ಸಂಶೋಧನೆಗಳನ್ನು ಬಳಸಿದ್ದಲ್ಲಿ ಇದು ಕೇವಲ ತೃತೀಯ ಪುರುಷ ವಿವರಣೆ ಆಗುವುದು ತಪ್ಪುತ್ತಿತ್ತು. ಅದಾಗ್ಯೂ, ಮುಸ್ಲಿಮ್‌ ಸಮುದಾಯದ ಏಳಿಗೆಗಾಗಿ ಕಾರ್ಯಾಚರಿಸಲು ಬಯಸುವ ಎಲ್ಲರೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪರಿಣಾಮಗಳಿರುವ ಮುಸಲ್ಮಾನರೊಳಗಿನ ಟಿಸಿಲುಗಳನ್ನು ತಕ್ಕ ಮಟ್ಟಿಗೆ ವಿವರಿಸುವ ಈ ಪುಸ್ತಕವನ್ನು ಓದುವುದು ಅಗತ್ಯ.

ಮಧ್ಯಕಾಲದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಮುದಾಯವೊಂದು ಬ್ರಿಟಿಷರ ಆಗಮನದೊಂದಿಗೆ ಹೇಗೆ ಸಬಾಲ್ಟರ್ನ್‌ ಯಾ ಹಿಂದುಳಿದ ವಿಭಾಗವಾಗಿ ಮಾರ್ಪಟ್ಟಿತು ಎನ್ನುವುದನ್ನು ಅವಲೋಕಿಸುತ್ತಾ ಮುಂದುವರಿಯುವ ಕೃತಿ ಆ ಹಿಂದುಳಿಯುವಿಕೆಯ ಬೂದಿಯಿಂದ ಎದ್ದು ಬರಲು ಹೇಗೆ ಸಾಧ್ಯ ಎನ್ನುವುದನ್ನು ಅನ್ವೇಷಿಸುತ್ತದೆ. ಇದಕ್ಕಾಗಿ ಜಾತಿ ಎಂಬ ಭಾರತೀಯ ಮುಸಲ್ಮಾನರ ಬದುಕಿನ ʼಮೂರ್ತʼ ವಾಸ್ತವವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೆಂಬ ಹುಡುಕಾಟ ಕೃತಿಯ ಜೀವಾಳ. ಈ ನಿಟ್ಟಿನಲ್ಲಿ ಉಪಭೂಖಂಡದ ಮುಸಲ್ಮಾನರ ಜೀವನದಲ್ಲಿ ಕಂಡು ಬರುತ್ತಿರುವ ಸಾಮಾಜಿಕ ಶ್ರೇಣೀಕರಣವನ್ನು ಮತ್ತು ಉಚ್ಛ-ನೀಚ ಪರಿಗಣನೆಗಳನ್ನು ಜಾತಿ ಎಂಬ ಪ್ರವರ್ಗದಡಿಯಲ್ಲಿಟ್ಟು ವಿಶ್ಲೇ಼ಷಿಸಿದ್ದಾರೆ ಲೇಖಕರು. ಮುಸಲ್ಮಾನರ ನಡುವೆ ಆಚಾರ-ವಿಚಾರಗಳಲ್ಲಿ, ರೀತಿ-ರಿವಾಜುಗಳಲ್ಲಿ, ವೈವಾಹಿಕ ಸಂಬಂಧಗಳ ಸ್ವೀಕೃತಿಯಲ್ಲಿ ಮತ್ತು ಪಂಥೀಯ ಅನುಸಂಧಾನಗಳಲ್ಲಿ ಕಂಡುಬರುವ ವಿಭಿನ್ನತೆಗಳು ಮತ್ತು ಸಮಾಧಿ ಕೇಂದ್ರಿತ ಆಚಾರಗಳಲ್ಲಿ ಹಾಗೂ ಸೂಫಿ ನಡವಳಿಕೆಗಳಲ್ಲಿ ಇದೆ ಎನ್ನಲಾಗುವ ಹಿಂದೂ ಧರ್ಮದ ಪ್ರಭಾವಗಳನ್ನು ಉಲ್ಲೇಖಿಸಿ ಮುಸಲ್ಮಾನರ ನಡುವೆ ಜಾತಿವ್ಯವಸ್ಥೆ ಇದೆ ಎಂದು ಅರ್ಥಮಾಡಿಸಿಕೊಡುವಲ್ಲಿ ಲೇಖಕರು ಒಂದು ಹಂತದ ವರೆಗೆ ಯಶಸ್ವಿಯಾಗಿದ್ದಾರೆ ಎನ್ನಬಹುದು. ಆದರೆ ಸಮಾಧಿ ಸಂದರ್ಶನ ಹಾಗೂ ಸೂಫಿ ನಡವಳಿಕೆಗಳಿಗೆ ಪ್ರಖರ ದೇವಶಾಸ್ತ್ರೀಯ ತಳಹದಿ ಬಹುಸಂಖ್ಯಾತ ಮುಸಲ್ಮಾನರ ನಡುವೆ ಇದೆ ಎನ್ನುವುದನ್ನು ಲೇಖಕರು ಇಲ್ಲಿ ಮರೆತಂತಿದೆ.

ಪ್ರೊ. ಮುಜಾಫರ್‌ ಅಸ್ಸಾದಿ : ಚಿತ್ರ ಕೃಪೆ : ದ ಹಿಂದೂ

ಪ್ರೊ. ಮುಜಾಫರ್‌ ಅಸ್ಸಾದಿ : ಚಿತ್ರ ಕೃಪೆ : ದ ಹಿಂದೂ

ಜಾತಿ ಎಂಬ ಕಟು ವಾಸ್ತವವನ್ನು ಬದಿಗೆ ಸರಿಸಿಕೊಂಡು ಜಾರಿ ಮಾಡಲಾದ ಅಭಿವೃದ್ಧಿ ಕಾರ್ಯಕ್ರಮಗಳು ಮುಸಲ್ಮಾನರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವಲ್ಲಿ ವಿಫಲವಾಗಿದ್ದು ಜಾತಿ ಆಧಾರಿತವಾಗಿ ಮುಂದುವರಿಯಬೇಕಾದ ಅಗತ್ಯತೆಯನ್ನು ಪುಸ್ತಕ ಒತ್ತಿ ಹೇಳುತ್ತದೆ. ಪ್ರಸಕ್ತ ಜಾತಿ ರಾಜಕಾರಣದ ಸಂದರ್ಭದಲ್ಲಿ ಧರ್ಮದ ಅಸ್ಮಿತೆಗಿಂತ ಜಾತಿಯ ಅಸ್ಮಿತೆಯೇ ಅಭಿವೃದ್ದಿಯ ದೃಷ್ಟಿಯಲ್ಲಿ ಹೆಚ್ಚು ಉಪಕಾರಿ ಎಂದು ಬಹಳ ಚೆನ್ನಾಗಿ ಪುಸ್ತಕ ನಿರೂಪಿಸಿದೆ. ಇಷ್ಟರವೆರಗಿನ ಶೈಲಿಗೆ ತದ್ವಿರುದ್ಧವಾಗಿ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ರಂಗಗಳಲ್ಲಿ ಯಾಕಾಗಿ ಜಾತಿ ಅಸ್ಮಿತೆಯನ್ನು ಬಳಸಬೇಕು ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಲು ಲೇಖಕರಿಗೆ ಒಂದು ಹಂತದ ವರೆಗೆ ಸಾಧ್ಯವಾಗಿದೆ. ಮುಸಲ್ಮಾನರು ಒಂದು ಏಕರೂಪದ ಸಮುದಾಯ ಎನ್ನುವ ಗ್ರಹಿಕೆಯನ್ನು ಮೊದಲು ತೊಡೆದು ಹಾಕಬೇಕಿದೆ ಎಂದು ಲೇಖಕರು ಪ್ರತಿಪಾದಿಸಿದ್ದಾರೆ.

ಕೃತಿ ಮುಂದಿಡುವ ಜಾತಿ ಆಧಾರಿತ ಅಭಿವೃದ್ಧಿಯ ಆಶಯವನ್ನು ಎರಡು ಆಯಾಮಗಳಲ್ಲಿ ವಿಶ್ಲೇಷಣೆ ಮಾಡಬೇಕು ಎಂದು ತೋರುತ್ತದೆ. ಒಂದನೆಯದಾಗಿ ಸಮುದಾಯದ ಅಭಿವೃದ್ಧಿ ಎಂಬ ಲಕ್ಷ್ಯವನ್ನು ಕೇಂದ್ರೀಕರಿಸಿಕೊಂಡು ಮತ್ತು ಎರಡನೆಯದಾಗಿ ಜಾತಿ ಎಂಬ ಪ್ರವರ್ಗವನ್ನು ಎಳೆದು ತರಲು ಲೇಖಕರು ಬಳಸಿರುವ ಚಾರಿತ್ರಿಕ ಪುರಾವೆಗಳ ನೆಲೆಗಟ್ಟಿನಲ್ಲಿ. ಒಂದನೆಯ ಆಯಾಮದಲ್ಲಿ ಅಲ್ಪಸಂಖ್ಯಾತರಲ್ಲಿನ ಜಾತಿವ್ಯವಸ್ಥೆಯ ರಾಜಕಾರಣ ಮತ್ತು ಅದರ ಪ್ರಾಯೋಗಿಕತೆಯನ್ನು ಮುಂದಿರಿಸಿ ಆನ್ವಯಿಕ ಹಂತದಲ್ಲಿ ಚರ್ಚಿಸಬೇಕಿದ್ದು ಎರಡನೆಯ ಆಯಾಮದಲ್ಲಿ ಜಾತಿಯ ಐತಿಹಾಸಿಕತೆಯನ್ನು(historicity) ಒರೆಗೆ ಹಚ್ಚುತ್ತಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚಿಂತಿಸಬೇಕಿದೆ. ಈ ಕ್ರಮದಲ್ಲಿ ಸಣ್ಣದೊಂದು ಆಲೋಚನೆಯನ್ನು ಮಾಡೋಣ.

ಭಾರತದ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಲು ಜಾತಿ ಎಂಬ ಕೆಟಗರಿಯನ್ನು ಬಳಸಬೇಕೇ ಬೇಡವೆ? ಅದರಿಂದ ಉಂಟಾಗುವ ಸಮಸ್ಯೆಗಳು ಏನೆಲ್ಲಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಸುತ್ತುವರಿದು ಸದ್ಯ ಚಾಲ್ತಿಯಲ್ಲಿರುವ ಐದು ವಾದಗಳ ವಿಶ್ಲೇ಼ಷಣೆಯನ್ನು ಲೇಖಕರು ಪುಸ್ತಕದ ಆರಂಭದಲ್ಲೇ ಕೈಗೆತ್ತಿಕೊಂಡಿದ್ದಾರೆ. ಸದ್ಯ ಭಾರತದ ರಾಜಕೀಯ ವ್ಯವಸ್ಥೆ ಸಮುದಾಯಗಳನ್ನು ಜಾತಿಗಳ ಹಿನ್ನೆಲೆಯಲ್ಲಿ ಗುರುತಿಸುತ್ತಾ ಇರುವುದರಿಂದ ಮುಸ್ಲಿಮರು ಅವರಿಗೆ ಸಿಗಬೇಕಾದ ಮೀಸಲಾತಿ ಸಹಿತವಿರುವ ಸರಕಾರದ ಯೋಜನೆಗಳ ಫಲಾನುಭವ ಪಡೆಯಲು ಜಾತಿ ಆಧಾರದಲ್ಲಿ ಗುರುತಿಸಿಕೊಳ್ಳಲೇಬೇಕು ಎನ್ನುವುದು ಒಂದನೆಯ ವಾದ. ಹಿಂದುಳಿದ ವರ್ಗದಡಿಯಲ್ಲಿ, ಬುಡಕಟ್ಟುಗಳೆಂಬ ನೆಲೆಗಟ್ಟಿನಲ್ಲಿ ಈಗಾಗಲೇ ಮೀಸಲಾತಿಗಳನ್ನು ಪಡೆಯುತ್ತಿರುವ ಧರ್ಮಕ್ಕೆ ಮತ್ತೊಮ್ಮೆ ಬೇರೊಂದು ಮಾನದಂಡದಲ್ಲಿ ಮೀಸಲಾತಿ ನೀಡುವುದು ಸೂಕ್ತವಲ್ಲ ಎನ್ನುತ್ತದೆ ಎರಡನೆಯ ವಾದ. ಮುಸ್ಲಿಮರಲ್ಲಿ ದಲಿತರಿರುವುದನ್ನು ಗುರುತಿಸಿಬೇಕೇ ಬೇಡವೇ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮೂರನೆಯ ವಾದ ಮೂಡಿ ಬಂದಿದ್ದು, ನಾಲ್ಕನೆಯ ವಾದ ಜಾತಿ ಎಂಬ ಪ್ರವರ್ಗದಡಿಯಲ್ಲಿ ತರುವ ಬದಲು ಜಾತಿ ಅಸ್ಮಿತೆಯನ್ನು ನಗಣ್ಯಗೊಳಿಸಿ ವರ್ಗದ ರೀತಿಯಲ್ಲಿ ಕಲ್ಪಿಸಬೇಕೆಂಬ ಕಮ್ಯುನಿಸ್ಟ್‌ ಶೈಲಿಯ ಆಶಯವನ್ನು ಹೊಂದಿದೆ. ಐದನೆಯ ವಾದದ ಪ್ರಕಾರ ಧರ್ಮದ ಹೊರತಾದ ಎಲ್ಲಾ ಅಸ್ಮಿತೆಗಳನ್ನು ಹಾಗೂ ಮೀಸಲಾತಿಯನ್ನು ಮುಸ್ಲಿಮರ ಧರ್ಮ ತಿರಸ್ಕರಿಸುತ್ತಿದ್ದು ಜಾತಿಗೆ ಸಮಾನವಾದ ಸಾಮಾಜಿಕ ವಾಸ್ತವಿಕತೆಗಳನ್ನು ಸಾರಸಗಟಾಗಿ ತಳ್ಳಿ ಹಾಕಬೇಕು.

ಈ ಐದು ವಾದಗಳೂ ಕೂಡಾ ಮುಸ್ಲಿಮರು ದಲಿತರ ಹಾಗೆ ಅಸ್ಪೃಶ್ಯರಾಗುತ್ತಾ ಬರುತ್ತಿರುವ ಸದ್ಯದ ರಾಜಕೀಯ, ಸಾಮಾಜಿಕ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂದೆನಿಸುತ್ತದೆ. ಮುಸ್ಲಿಮರ ನಡುವೆ ದಲಿತರ ಹಾಗೆ ಅಸ್ಪೃಶ್ಯತೆ ಅನುಭವಿಸುತ್ತಿರುವ ಹಲವಾರು ಜಾತಿಗಳು ಇವೆ ಎನ್ನುವ ವಾಸ್ತವವನ್ನು ರಂಗನಾಥ ಮಿಶ್ರ ಆಯೋಗ ಕಂಡುಕೊಂಡಿದ್ದು ಮುಸ್ಲಿಂ ದಲಿತರಿಗೂ ಒಳಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಹೀಗೆ ಒಳಮೀಸಲಾತಿ ಜಾರಿ ಮಾಡಿದಲ್ಲಿ ಈಗಾಗಲೇ ಬಹಳ ಹಿಂದುಳಿದಿರುವ ದಲಿತ ಜಾತಿಗಳಿಗೆ ಸಿಗುವ ಅವಕಾಶ ಕಡಿಮೆಯಾಗುವುದರಿಂದ ಈ ಶಿಫಾರಸ್ಸು ಕೂಡಾ ಅಷ್ಟು ಪ್ರಾಯೋಗಿಕವಲ್ಲ. ಅದೇ ವೇಳೆ, ಪರಿಶಿಷ್ಟ ಜಾತಿ ವಿಭಾಗದಲ್ಲಿ ಮುಸ್ಲಿಮರನ್ನು ಎಣಿಸುವುದಕ್ಕೂ ಸಾಂವಿಧಾನಿಕ ಅಡೆತಡೆಗಳಿರುವ ವಿಷಯವನ್ನು ಪುಸ್ತಕ ಬಹಳ ಚೆನ್ನಾಗಿ ವಿವರಿಸಿದೆ. ಮತಾಂತರ ತಡೆಗಟ್ಟಲಿಕ್ಕಾಗಿ ದಲಿತ ಜಾತಿಗಳಿಗೆ ಸಿಗುವ ಸವಲತ್ತುಗಳನ್ನು ಕೆಲವು ಧರ್ಮಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿದ್ದು ರಾಷ್ಟ್ರಪತಿಗಳ ಅಧ್ಯಾದೇಶದ ಮೂಲಕ ೧೯೫೦ ರಲ್ಲೆ ಜಾರಿಗೆ ತರಲಾಗಿದೆ.

ಈಯೆಲ್ಲಾ ವಿಚಾರಗಳನ್ನು ಮನನ ಮಾಡಿದಲ್ಲಿ ಮೇಲೆ ಹೇಳಲಾದ ಐದು ವಾದಗಳಿಗೂ ಮುಸ್ಲಿಮರ ಹಿಂದುಳಿಯುವಿಕೆಗೆ ಪ್ರಾಯೋಗಿಕವಾದ ಪರಿಹಾರವನ್ನು ಒದಗಿಸಲು ಸಾಧ್ಯವಿಲ್ಲ ಎನ್ನುವುದು ದಿಟವಾಗುತ್ತದೆ. ಕೇವಲ ಜಾತಿ ಅಸ್ಮಿತೆಯನ್ನು ಮುನ್ನೆಲೆಗೆ ತರುವುದರಿಂದ ರಾಜಕೀಯವಾಗಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗದು. ಮೊದಲೇ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ಅದಕ್ಕಿಂತಲೂ ಕಡಿಮೆ ಸಂಖ್ಯೆಗೆ ಇಳಿಯುವ ಅತಿ ಸಣ್ಣ ಪ್ರಮಾಣದ ಜಾತಿ ಜನಸಂಖ್ಯೆಯನ್ನು ತೋರಿಸಿಕೊಂಡು ಅದ್ಯಾವ ಆಶೋತ್ತರಗಳನ್ನು ಭಾರತದ ಚುನಾವಣಾ ರಾಜಕಾರಣದಲ್ಲಿ ಈಡೇರಿಸಲು ಸಾಧ್ಯವಿದೆ ಎಂದು ಅರ್ಥವಾಗುತ್ತಿಲ್ಲ. ಹಿಂದುಳಿದ ವರ್ಗಗಳಡಿಯಲ್ಲಿ ಸಿಗುವ ಪ್ರಯೋಜನಗಳು ಮುಸ್ಲಿಮರ ನಡುವೆ ಇರುವ ಬಹುಸಂಖ್ಯಾತ ಅತಿ ಹಿಂದುಳಿದವರ ಬಾಳಿನಲ್ಲಿ ಯಾವುದೇ ಬದಲಾವಣೆ ತರದು. ಸ್ವಾತಂತ್ರ್ಯ ಸಿಕ್ಕಿ ಏಳೆಂಟು ದಶಕಗಳೇ ಸವೆದಿದ್ದರೂ ಇನ್ನೂ ಸಾಕಷ್ಟು ಅಭಿವೃದ್ಧಿ ದಾಖಲಿಸದೇ ಇರುವ ದಲಿತರ ಬಟ್ಟಲಿಗೆ ಕನ್ನ ಹಾಕುವುದಂತೂ ಯಾವ ರೀತಿಯಲ್ಲೂ ಸರಿಕಾಣದು. ವರ್ಗಕೇಂದ್ರಿತ ಕಮ್ಯುನಿಸ್ಟ್‌ ಯುಟೋಪಿಯಾಗಳಿಗಂತೂ ವಾಸ್ತವ ಸ್ಥಿತಿ ಅರ್ಥವಾಗುತ್ತದೆ ಎಂದು ಭಾವಿಸುವ ಹಾಗಿಲ್ಲ.

ಮೊದಲು ಮುಸ್ಲಿಮರನ್ನು ಕೇವಲ ಧಾರ್ಮಿಕ ಅಲ್ಪಸಂಖ್ಯಾತರನ್ನಾಗಿ ಕಾಣುವುದನ್ನು ಕೊನೆಗೊಳಿಸಬೇಕು. ಸದ್ಯದ ರಾಷ್ಟ್ರದಲ್ಲಿ ನಡೆಯುತ್ತಿರುವ ಮುಸ್ಲಿಮ್‌ ವಿರೋಧಿ ಆಕ್ರಮಣಗಳನ್ನು ಅವಲೋಕಿಸಿದರೆ ಮುಸ್ಲಿಮರೆ ಒಂದು ಕೀಳು ಜಾತಿಯಾಗಿ ಮಾರ್ಪಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆದುದರಿಂದಲೇ, ಮುಸ್ಲಿಮರು ಅಂಬೇಡ್ಕರ್‌ ಮಾದರಿಯ ಹೊಸ ವಿಮೋಚನೆಯ ಹಾದಿಯನ್ನು ತೆರೆಯುವತ್ತ ಚಿಂತಿಸಬೇಕು. ಜಾತಿ ಹಿಂದೂಗಳಲ್ಲದ ಎಲ್ಲಾ ಅಸ್ಪೃಶ್ಯ ಜಾತಿಗಳನ್ನು ಒಟ್ಟುಗೂಡಿಸಿ ದಲಿತ ಎಂಬ ಅಸ್ಮಿತೆಯನ್ನು ಬಾಬಾ ಸಾಹೇಬರು ಮುನ್ನೆಲೆಗೆ ತಂದಿರುವ ಹಾಗೆ ಮುಸ್ಲಿಮರೊಳಗಿನ ಎಲ್ಲಾ ಹಿಂದುಳಿದ ಮತ್ತು ದಲಿತ ಜಾತಿಗಳನ್ನು ಒಗ್ಗೂಡಿಸಿ‌ ಧರ್ಮ ನಿರಪೇಕ್ಷವಾದ ಒಂದು ಪೊಲಿಟಿಕಲ್ ಅಸ್ಮಿತೆಯನ್ನು ರೂಪೀಕರಿಸಬೇಕಿದೆ. ದಲಿತ ಅಸ್ಮಿತೆ ಎನ್ನುವುದು ಶುದ್ಧ ರಾಜಕೀಯ ಕೆಟಗರಿಯಾಗಿದ್ದು ಅದು ಯಾವುದೇ ರೀತಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೂರಣವನ್ನು ಹೊಂದಿಲ್ಲ ಎನ್ನುವುದು ಗಮನಾರ್ಹ. ವಿಭಿನ್ನ ಸಂಸ್ಕೃತಿ ಮತ್ತು ಸಾಮಾಜಿಕ ಸಂರಚನೆ ಇರುವ ಹಲವಾರು ಕೆಳಜಾತಿಗಳು ದಲಿತರೊಳಗೆ ಬರುತ್ತಿದ್ದು ಅಂಬೇಡ್ಕರ್‌ ಅವುಗಳಿಗೆ ಒಂದು ಸಾಮಾನ್ಯ ಅಸ್ಮಿತೆಯನ್ನು ನೀಡಿದರು ಎನ್ನಬಹುದು. ಮುಸ್ಲಿಮರೊಳಗೂ ಹೀಗೊಂದು ಅಂಬೇಡ್ಕರ್‌ವಾದ ಹುಟ್ಟಿ ಬರಬೇಕಿದೆ.

ಐದನೆಯದಾಗಿ, ಎಣಿಸಲಾಗಿರುವ ವಾದದಂತೆ ಧರ್ಮಕ್ಕೆ ಹೊರತಾದ ಯಾವುದೇ ಅಸ್ಮಿತೆಗಳನ್ನು ಇಸ್ಲಾಮ್‌ ನಿರಾಕರಿಸುತ್ತದೆ ಎನ್ನಲಾಗಿದ್ದು ಇದು ಸತ್ಯಕ್ಕೆ ದೂರವಾದದ್ದು. ಇಸ್ಲಾಮ್‌ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಬುಡಕಟ್ಟು ಮುಂತಾದ ವಿಂಗಡನೆಗಳನ್ನು ನಿರಾಕರಿಸಿಲ್ಲ. ಬದಲಾಗಿ ಅವುಗಳು ಕೇವಲ ಗುರುತಿಸುವಿಕೆಗೆ ಮಾತ್ರ ಸೀಮಿತವಾಗಬೇಕು ಎಂದು ಆದೇಶಿಸಿದೆ. ಖುರ್‌ಆನಿನ ಸೂಕ್ತಗಳಲ್ಲೇ ಇದನ್ನು ಬಹಳ ಸ್ಪಷ್ಟವಾಗಿ ಕಾಣಬಹುದು. ಆದರೆ ಇದೇ ವಿಂಗಡನೆಗಳು ಅನ್ಯಾಯವೆಸಗಲು ಹಾಗೂ ಉಚ್ಛ-ನೀಚತೆಯನ್ನು ಪಾಲಿಸಲು ಕಾರಣವಾಗುವುದನ್ನು ಖಂಡಿಸಿದೆ. ಸಾಮಾಜಿಕ ತಾರತಮ್ಯವನ್ನು ಒಳಗೊಳ್ಳುವ ಜಾತಿಯನ್ನು ಇಸ್ಲಾಮ್‌ ಪುರಸ್ಕರಿಸುತ್ತಿಲ್ಲ. ಮುಸ್ಲಿಮರ ನಡುವೆ ಧಾರ್ಮಿಕತೆಯ ಮತ್ತು ಧಾರ್ಮಿಕ ಜ್ಞಾನದ ಹೆಚ್ಚಳಕ್ಕೆ ಅನುಗುಣವಾಗಿ ಜಾತಿ ತಾರತಮ್ಯ ಕಡಿಮೆಯಾಗುತ್ತದೆ ಎನ್ನುವುದನ್ನು ಕೂಡಾ ಗಮನಿಸಬಹದು. ಅದೇ ವೇಳೆ, ಅಭಿವೃದ್ಧಿಗಾಗಿ ಜಾತಿ ಅಸ್ಮಿತೆಗಳನ್ನು ಬಳಸುವುದು ಪರಿಣಾಮಾಕಾರಿಯಾದಲ್ಲಿ ಬಳಸುವುದಕ್ಕೆ ತೊಡಕಿಲ್ಲ.

ಭಾರತ ದಾರುಲ್‌ ಹರ್ಬ್‌ ಅಥವಾ ಯುದ್ಧದಲ್ಲಿರುವ ರಾಷ್ಟ್ರವಾದುದರಿಂದಲೇ ಇಲ್ಲಿ ಮೀಸಲಾತಿಗಾಗಿ ಆಗ್ರಹಿಸುವುದು ತಪ್ಪು ಎನ್ನುವುದು ಐದನೆಯ ವಾದದ ತಳಹದಿಯಾಗಿ ಬರುವ ಮತ್ತೊಂದು ಮೂರ್ಖತನ. ಖಂಡಿತಾ ಇದು ಇಸ್ಲಾಮಿನ ನಿಲುವಲ್ಲ. ಭಾರತದಲ್ಲಿ ಮುಸ್ಲಿಮರ ನಡುವೆ ಬಹುಸಂಖ್ಯಾತರಾಗಿರುವ ಹನಫಿ ಧಾರೆಯ ಬರೇಲ್ವಿಗಳು ಮತ್ತು ದಯೂಬಂದಿಗಳಿಬ್ಬರೂ ಭಾರತ ದಾರುಲ್‌ ಹರ್ಬ್‌ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಪಶ್ಚಿಮ ಕರಾವಳಿಯಲ್ಲಿ ವ್ಯಾಪಕವಾಗಿ ಕಂಡುಬರುವ ಶಾಫಿಗಳೂ ಕೂಡಾ ದಾರುಲ್‌ ಹರ್ಬ್‌ ವಾದವನ್ನು ಒಪ್ಪುವುದಿಲ್ಲ. ವಿಶೇಷವೆಂದರೆ ಶಾಫಿಗಳ ಹಾಗೂ ಹನಫಿಗಳ ಪೈಕಿ ಬರುವ ಬರೇಲ್ವಿಗಳ ಪ್ರಕಾರ ಭಾರತ ದಾರುಲ್‌ ಇಸ್ಲಾಮ್‌ ಕೂಡಾ ಹೌದು. ಒಂದು ರಾಷ್ಟ್ರವನ್ನು ದಾರುಲ್‌ ಇಸ್ಲಾಮ್‌ ಎನ್ನಲು ಅಲ್ಲಿ ಮುಸ್ಲಿಮರ ಆಳ್ವಿಕೆಯೇ ಇರಬೇಕಿಲ್ಲ ಎನ್ನುವುದು ಸಾಂಪ್ರದಾಯಿಕ ಕರ್ಮಶಾಸ್ತ್ರ ಗ್ರಂಥಗಳ ಅಭಿಮತ. ದಾರುಲ್‌ ಇಸ್ಲಾಮ್‌ ಎನ್ನಲು ಮುಸಲ್ಮಾನರು ಆ ರಾಷ್ಟ್ರದಲ್ಲಿ ಜೀವಿಸುತ್ತಿದ್ದರೆ ಸಾಕು, ಅಷ್ಟೆ. ಆದರೆ ಇಸ್ಲಾಮನ್ನು ಕೇವಲ ರಾಜಕೀಯ ಸಿದ್ಧಾಂತವಾಗಿ ಮಂಡಿಸಲು ಬಯಸುವ ಬುದ್ಧಿಜೀವಿಗಳಿಗೆ ಇದು ಅರಗಿಸಲಾಗದು. ಅಂತವರು ಇಸ್ಲಾಮಿನ ಹೊರಗೆ ಮಾತ್ರವಲ್ಲ ಒಳಗಡೆಯೂ ಇದ್ದಾರೆ. ಅವರ ಮಾತುಗಳಿಗೆ ಸಿಗುವ ದೃಶ್ಯತೆ ಇಸ್ಲಾಮಿನ ನಿಜವಾದ ಅಂತರ್ಧಾರೆಯಾದ ಜನಪದರಿಗೆ ದೊರಕುತ್ತಿಲ್ಲ ಎನ್ನುವುದು ವಿಚಿತ್ರ.

ಅಲ್ಪಸಂಖ್ಯಾತರಲ್ಲಿ ಕಂಡುಬರುವ ಜಾತಿಗಳ ಚಾರಿತ್ರಿಕತೆಯನ್ನು ಅವಲೋಕಿಸುವಾಗ ಮೊತ್ತಮೊದಲಾಗಿ ಜಾತಿ ಎಂಬ ಪೆಡಂಭೂತ ಎಲ್ಲಿಂದ ಆರಂಭವಾಯಿತು ಎನ್ನುವ ಚರ್ಚೆ ಮಾಡಬೇಕಾಗುತ್ತದೆ. ಬುಡಕಟ್ಟುಗಳ ನಡುವೆ ರೂಪುಗೊಂಡ ಇಸ್ಲಾಮ್‌ ಬುಡಕಟ್ಟು ಅಸ್ಮಿತೆಗಳನ್ನೆಲ್ಲಾ ಗೌಣಗೊಳಿಸಿ ಧರ್ಮದ ಅಸ್ಮಿತೆಯಲ್ಲಿ ಸಮಾನತೆ ಉಸಿರಾಡುತ್ತಿದ್ದ ಸಮುದಾಯವನ್ನು ಕಟ್ಟಿಬೆಳೆಸಿದೆ. ಆದುದರಿಂದಲೇ ಮುಸ್ಲಿಮರ ನಡುವೆ ಜಾತಿಯ ಉಗಮವಾದದ್ದು ಇಸ್ಲಾಮ್‌ ಭಾರತ ಉಪಭೂಖಂಡದೊಂದಿಗೆ ಸಂಪರ್ಕಕ್ಕೆ ಬಂದಾಗ ಎಂದು ಅಂದಾಜಿಸಬಹದು. ಆದರೆ ಈ ಗ್ರಹಿಕೆ ಸರಿಯಲ್ಲ ಎಂದು ಸಮರ್ಥಿಸಲು ಪ್ರಯತ್ನಿಸಿದ್ದಾರೆ ಲೇಖಕರು. ಭಾರತಕ್ಕೆ ಆಗಮಿಸಿದ ವಿದೇಶಿ ಮುಸ್ಲಿಮರ ಮೂಲದಲ್ಲೇ ಸಾಮಾಜಿಕ ಶ್ರೇಣಿಗಳನ್ನು ಮತ್ತು ತಾರತಮ್ಯಗಳನ್ನು ಕಾಣಲು ಸಾಧ್ಯ ಎಂದು ಹೇಳಲು ಹಲವಾರು ಪುರಾವೆಗಳನ್ನು ಒದಗಿಸುತ್ತಾರೆ ಪ್ರೊ ಮುಜಾಫರ್‌ ಅಸ್ಸಾದಿ.

ಆದರೆ ಲೇಖಕರು ಒದಗಿಸಿದ ಐತಿಹಾಸಿಕ ದಾಖಲೆಗಳನ್ನು ಜಾತಿಗೆ ಹೊರತಾದ ಇತರ ಸಾಮಾಜಿಕ ಪ್ರವರ್ಗಗಳಲ್ಲೂ ಲೊಕೇಟ್‌ ಮಾಡಲು ಸಾಧ್ಯ ಎನ್ನುವುದು ಗಮನಾರ್ಹ. ಪರ್ಶಿಯನ್‌ ಮೂಲದ ಪ್ರವರ್ಗಗಳು ಜಾತಿಗಿಂತ ಹೆಚ್ಚಾಗಿ ರೇಶಿಯಲ್‌ ಥಿಯರಿಗೆ ಹೆಚ್ಚಾಗಿ ಹೋಲುತ್ತದೆ. ಮುಸ್ಲಿಮ್‌ ಆಡಳಿತಾಧಿಕಾರಿಗಳು ಮೇಲ್ಜಾತಿಗಳಿಗೆ ನೀಡಿದ್ದ ಹೆಚ್ಚಿನ ಅನುಕೂಲತೆಗಳನ್ನು ರಾಜಕೀಯ ಚಾಣಾಕ್ಷತಣವೆಂಬಂತೆಯೂ ಓದಲು ಸಾಧ್ಯವಿದೆ. ಝಿಯಾವುದ್ದೀನ್‌ ಭರನಿ, ಅಲ್‌ ಬಿರೂನಿ ಯಂತಹ ಕ್ಷೀಣ ಧ್ವನಿಗಳಿಗೆ ಅವರ ಸಮಕಾಲೀನ ಮುಸ್ಲಿಮ್‌ ವ್ಯಕ್ತಿಗಳ ಬೆಂಬಲ ಇರಲಿಲ್ಲ ಎನ್ನುವುದನ್ನು ಸ್ವತಃ ಲೇಖಕರೇ ಬರೆದಿದ್ದಾರೆ. ಪ್ರಾಚೀನ ಕಾಲದಿಂದಲೇ ತಾನು ಹೇಳಿದ ರೀತಿಯ ಶ್ರೇಣಿಗಳು ಅಸ್ತಿತ್ವದಲ್ಲಿತ್ತು ಎನ್ನುವ ಭರನಿಯ ಮಾತುಗಳು ಪರ್ಶಿಯಾದ ಸಾಸನಿಡ್‌ ವ್ಯವಸ್ಥೆಯ ಕುರಿತಾಗಿದೆ ಎನ್ನುವುದು ಸುಲಭವಾಗಿ ಅರ್ಥವಾಗುವ ವಿಚಾರ. ವಸಾಹತುಪೂರ್ವದಲ್ಲಿಯೇ ಮುಸ್ಲಿಮರ ನಡುವೆ ಜಾತಿಯಿತ್ತೆಂದು ಸಾಬೀತುಮಾಡುವ ಐತಿಹಾಸಿಕ ದಾಖಲೆಗಳು ಇಲ್ಲವೆಂದೇ ಹೇಳಬಹುದು.

ಅದೇ ವೇಳೆ, ಹದಿನೈದು-ಹದಿನಾರನೆಯ ಶತಮಾನದ ಪೋರ್ಚುಗೀಸ್‌ ಆಕ್ರಮಣದ ಹಿನ್ನೆಲೆಯಲ್ಲಿ ಮಲಬಾರಿನ ಝಾಮೊರಿನ್‌ ರಾಜನಿಗೆ ಬೆಂಬಲ ಸಾರುತ್ತಾ ವಿರಚಿತವಾದ “ತುಹ್ಫತುಲ್‌ ಮುಜಾಹಿದೀನ್” ಜಾತಿಯ ಅಭಾವವನ್ನು ಬಹಳ ಸ್ಪಷ್ಟವಾಗಿ ತಿಳಿಸುವ ಚಾರಿತ್ರಿಕ ಪುರಾವೆ ನೀಡುತ್ತದೆ. ಎಂಗ್‌ ಸೆಂಗ್‌ ಹೋ ಈ ಕೃತಿಯನ್ನು ಅನುವಾದಿಸಿದ್ದು ಅಂತರ್ಜಾಲದಲ್ಲಿ ಲಭ್ಯವಿದೆ. ಭಾರತೀಯ ಮುಸಲ್ಮಾನರ ಬಗೆಗಿನ ಕುಲಶಾಸ್ತ್ರೀಯ ಅಧ್ಯಯನಗಳ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಹೆಚ್ಚಾಗಿ ಉದ್ಧರಿಸಲಾಗುತ್ತಿರುವ ಈ ಗ್ರಂಥದ ಪರಾಮರ್ಶೆ ಪ್ರೊಫೆಸರ್ ಅಸ್ಸಾದಿಯವರ ಕೃತಿಯಲ್ಲಿ ಎಲ್ಲೂ ಕಂಡು ಬಂದಿಲ್ಲ. ಆ ಕಾಲದಲ್ಲಿ ಹಿಂದೂ ಧರ್ಮೀಯರ ನಡುವೆ ಜಾತಿ ತಾರತಮ್ಯ ಇತ್ತೆಂದು ಇದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜಾತಿ ತಾರತಮ್ಯಕ್ಕೆ ಬಲಿಯಾಗುವ ಕೀಳು ಜಾತಿಯ ವ್ಯಕ್ತಿ ಇಸ್ಲಾಮ್‌ ಧರ್ಮಕ್ಕೆ ಪಾದಾರ್ಪಣೆಗೈಯುವುದರೊಂದಿಗೆ ಜಾತಿ ತಾರತಮ್ಯದಿಂದ ಮುಕ್ತಿ ಪಡೆಯುತ್ತಾನೆ ಎಂದು ಅಂದಿನ ಸ್ಥಿತಿಗತಿಗಳನ್ನು ವಿವರಿಸುತ್ತಾ ತುಹ್ಫಾದ ಕರ್ತೃ ಎರಡನೆಯ ಝೈನುದ್ದೀನ್‌ ಮಖ್ದೂಂ ಬರೆದಿದ್ದಾರೆ. ಆದುದರಿಂದಲೇ ಕನಿಷ್ಠ ಪಕ್ಷ ದಕ್ಷಿಣ ಭಾರತಕ್ಕೆ ಅನ್ವಯಿಸುವ ರೀತಿಯಲ್ಲಾದರೂ ಮುಸಲ್ಮಾನರ ನಡುವೆ ಜಾತಿ ಇರಲಿಲ್ಲ ಎಂದು ಈ ದಾಖಲೆಯಿಂದ ಅರ್ಥೈಸಬಹುದು. ಭಾರತದ ಶಾಫಿಗಳು ವಿಶೇಷವಾಗಿ ಮತ್ತು ವಿದೇಶದ ಶಾಫಿಗಳು ಸಾಮಾನ್ಯವಾಗಿ ಕರ್ಮಶಾಸ್ತೃದ ಅಧಿಕೃತ ಗ್ರಂಥವಾಗಿ ಅಂಗೀಕರಿಸಿರುವ ಫತ್ಹುಲ್‌ ಮುಈನ್‌ ಎಂಬ ಗ್ರಂಥದ ಕರ್ತೃಗಳೆ ಮೇಲೆ ಹೇಳಲಾದ ಕೃತಿಯ ಕರ್ತೃ ಆಗಿದ್ದಾರೆ ಎನ್ನುವುದನ್ನು ಗಮನಿಸಬೇಕಿದೆ. ವಿವಾಹ ಮುಂತಾದ ಮುಸ್ಲಿಮನ ಬದುಕಿನ ಪ್ರತಿಯೊಂದು ಆಚಾರವಿಚಾರಗಳನ್ನು ನಿರ್ಧರಿಸುವಲ್ಲಿ ಕರ್ಮ ಶಾಸ್ತ್ರದ ಗ್ರಂಥಗಳಿಗೆ ಮಹತ್ತರ ಪಾತ್ರವಿದೆ.

ಒಟ್ಟಾರೆಯಾಗಿ ಅಲ್ಪ ಸಂಖ್ಯಾತರೊಳಗಿನ ಜಾತಿಯ ಚಾರಿತ್ರಿಕತೆಯನ್ನು ಪರಾಂಬರಿಸಲು ವಿವಿಧ ಪ್ರಯತ್ನಗಳು ನಡೆದಿವೆ. ವಿಚಿತ್ರವೆಂದರೆ ಇಲ್ಲಿ ಸಮಾಜ ವಿಜ್ಞಾನಿಗಳು ಇತಿಹಾಸತಜ್ಞರ ಕೆಲಸವನ್ನು ಮಾಡಲು ಪ್ರಯತ್ನಿಸಿದರೆ, ಇತಿಹಾಸತಜ್ಞರು ಸಮಾಜ ವಿಜ್ಞಾನಿಗಳ ಕೆಲಸವನ್ನು ಮಾಡುತ್ತಿದ್ದಾರೆ. ಇತಿಹಾಸಜ್ಞರು ಸಮಾಜ ವಿಜ್ಞಾನಿಗಳ ಊಹೆಗಳಿಗೆ ಶರಣಾಗಿದ್ದಾರೆ. ಜಾತಿ ಎನ್ನುವುದು ಒಂದು ಸಾಮಾಜಿಕ ವಾಸ್ತವ ಎನ್ನುವ ಸಮಾಜ ವಿಜ್ಞಾನಿಗಳ ಪೂರ್ವಗ್ರಹಿಕೆಯನ್ನು ಸ್ವೀಕರಿಸಿಕೊಂಡು ಜಾತಿಯನ್ನು ಎಲ್ಲಾ ಕಾಲಕ್ಕೂ ahistorical ಆಗಿ ಅನ್ವಯಿಸಲು ಮುಂದಾಗಿದ್ದಾರೆ ಇತಿಹಾಸಜ್ಞರು. ಅದೇ ವೇಳೆ, ಸಮಾಜ ವಿಜ್ಞಾನಿಗಳು ವಿದೇಶದಿಂದ ಬಂದ ಧರ್ಮ ಇಲ್ಲಿನ ಸ್ಥಳೀಯ ಆಚಾರಗಳೊಂದಿಗೆ ಮಿಶ್ರಣಗೊಂಡು assimilate ಆಗಿ ಬದಲಾವಣೆಗೆ ಈಡಾಯಿತು ಎನ್ನುವ ಮೂಲಕ ಇತಿಹಾಸಜ್ಞರ ಕ್ಷೇತ್ರಕ್ಕೆ ಲಗ್ಗೆ ಇಡುವುದನ್ನೂ ಕಾಣಬಹುದು.

ಮುಸ್ಲಿಮರ ನಡುವೆ ಸಾಮಾಜಿಕ ತಾರತಮ್ಯಗಳು ಇದೆ ಎನ್ನುವುದನ್ನು ನಾನು ನಿರಾಕರಿಸಲಾರೆ. ರೇಸಿಸ್ಟ್‌ ಆಗಿ ವರ್ತಿಸುವ ಹಲವಾರು ಮುಸ್ಲಿಮರನ್ನು ಜಗತ್ತಿನಾದ್ಯಂತ ಕಾಣಬಹದು. ಮಧ್ಯಪೂರ್ವದಲ್ಲಿ ಕೆಲಸಕ್ಕೆ ಹೋಗುವ ಭಾರತೀಯ ಮುಸ್ಲಿಮರನ್ನು ಕೀಳಾಗಿ ಕಾಣುವ ಕೆಲವಾದರೂ ಅರಬ್‌ ಮುಸ್ಲಿಮ್‌ ಗಳು ಇದ್ದೇ ಇದ್ದಾರೆ. ಆದರೆ ಇದು ಒಂದು ಸಾಂಸ್ಥೀಕೃತ ರೂಪವನ್ನು ಪಡೆದಿಲ್ಲ. ಅದೇ ವೇಳೆ, ಭಾರತದಲ್ಲಿ ಬಂದು ಕಲಿತಿದ್ದ ಶಾರ್ಜಾದ ಆಡಳಿತಾಧಿಕಾರಿಗಳು ಭಾರತೀಯರನ್ನು ಬಹಳ ಹೆಚ್ಚಾಗಿ ಗೌರವಿಸುತ್ತಾರೆ ಎಂದು ಕೆಲವು ಅನಿವಾಸಿ ಮಿತ್ರರು ಹೇಳಿದ್ದನ್ನು ಕೇಳಿದ್ದೇನೆ. ಆದುದುರಿಂದಲೇ ಈ ತಾರತಮ್ಯದ ವ್ಯವಸ್ಥೆ ಸಾಂಸ್ಥೀಕೃತಗೊಂಡಿಲ್ಲ ಹಾಗೂ ದೇವಶಾಸ್ತ್ರೀಯ ಬೆಂಬಲ ಇದಕ್ಕಿಲ್ಲ ಎನ್ನುವುದು ದಿಟ.

ವಸಾಹತುಶಾಹಿ ಯೋಜನೆಯೊಂದಿಗೆ ಭಾರತಕ್ಕೆ ಬಂದ ಬ್ರಿಟಿಷರು ಮುಸ್ಲಿಮ್‌ ಜನತೆಯನ್ನು ಆಡಳಿತಾತ್ಮಕವಾಗಿ ಇದಿರುಗೊಂಡಾಗ ಸ್ವೀಕರಿಸಿದ ಭೀಕರವಾದ ಸಾಂಸ್ಕೃತಿಕ ವಿಸ್ಮೃತಿಯನ್ನು ಕಣ್ಣಿಗೆ ಕಟ್ಟುವಂತೆ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಪಾಶ್ಚಾತ್ಯವಲ್ಲದ ಎಲ್ಲಾ ಜ್ಞಾನ ಧಾರೆಗಳನ್ನು ಪೂರ್ವಗ್ರಹಪೀಡಿತವಾಗಿ ಅರ್ಥೈಸಲು ಮತ್ತು ಋಣಾತ್ಮಕ ಬೆಳಕಿನಲ್ಲಿ ತೋರಿಸಲು ಬ್ರಿಟಿಷರು ಅಗಾಧ ಪ್ರಯತ್ನವನ್ನೇ ನಡೆಸಿದ್ದರು. ಇಂಗ್ಲಿಷ್‌ ಕಲಿಸಿದರೆ ಅಮೇರಿಕಾದ ಜನರ ರೀತಿ ಇವರೂ ಕೂಡಾ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುವರೇನೋ ಎಂಬ ಭಯ ಬ್ರಿಟಿಷರಿಗೆ ಇತ್ತು. ಎಂತಲೇ, ಮೊದಮೊದಲು ಇಂಗ್ಲಿಷ್‌ ಭಾಷೆಯನ್ನು ಕಲಿಸುವ ವ್ಯವಸ್ಥೆಗೆ ನಾಂದಿ ಹಾಕಲು ಹಿಂದೇಟು ಹಾಕಿದ್ದರು ಎನ್ನುವುದು ಬ್ರಿಟಿಷರ ಸಾಂಸ್ಕೃತಿಕ ಶುದ್ಧೀಕರಣದ ಕಾಪಟ್ಯವನ್ನು ತೆರೆದಿಡುವಂತದ್ದು.. ಅದಾಗ್ಯೂ ಬ್ರಿಟಿಷರು ಕೊನೆಗೆ ತಮ್ಮ ವಸಾಹತುಶಾಹಿ ಅಗತ್ಯಗಳಿಗೋಸ್ಕರ ಇಂಗ್ಲಿಷ್‌ ಕಲಿಸಲು ಮುಂದಾಗುತ್ತಾರಾದರೂ ಅವರ ಉದ್ದೇಶ ಬಹಳ ಕೀಳು ಅಭಿರುಚಿಯದ್ದಾಗಿತ್ತು. ಭಾರತೀಯರು ದೇಹದಲ್ಲಿ ಮತ್ತು ಬಣ್ಣದಲ್ಲಿ ಮಾತ್ರ ಭಾರತೀಯರಾಗುಳಿದು ಸಾಂಸ್ಕೃತಿಕ, ನೈತಿಕ ಮತ್ತು ಬೌದ್ಧಿಕ ನೆಲೆಗಟ್ಟಿನಲ್ಲಿ ಬ್ರಿಟಿಷರಾಗಿರಬೇಕು ಎಂದು ಅವರು ಬಯಸಿದ್ದರು. ಲೇಖಕರು ಇದನ್ನು ‘ಬೌದ್ಧಿಕತೆಯ ವಸಾಹತುಶಾಹಿ’ ಎಂದು ಕರೆದದ್ದು ಸರಿಯಾಗಿಯೇ ಇದೆ.

ದುರದೃಷ್ಟಕರವೆಂದರೆ, ಬೌದ್ಧಿಕವಾಗಿ ಅಪವಸಾಹತೀಕರಣಗೊಳ್ಳಬೇಕಾದ ಅಗತ್ಯತೆಯ ಬಗ್ಗೆ ನಾವಿನ್ನೂ ಪ್ರಜ್ಞೆ ಬೆಳೆಸಿಕೊಂಡಿಲ್ಲ ಎನ್ನುವುದು. ಆಧುನಿಕೋತ್ತರ ಚಿಂತನೆಗಳು ಅಂತಹ ಅಧ್ಯಯನ ಪ್ರವೃತ್ತಿಗಳಿಗೆ ಜಾಗತಿಕ ಮಟ್ಟದಲ್ಲಿ ಇಂಬು ನೀಡುತ್ತಿದೆಯಾದರೂ ಭಾರತದಲ್ಲಿ ಇನ್ನೂ ಅಷ್ಟೇನೂ ಪ್ರಚುರತೆ ಪಡೆದಿಲ್ಲ. ಬ್ರಿಟಿಷರ ರಾಜಾಶ್ರಯ ಪಡೆದಿದ್ದ ಇಂಗ್ಲಿಷ್‌ ಭಾಷೆಯನ್ನು ಮುಸಲ್ಮಾನರು ಬಹಿಷ್ಕರಿಸಿದ್ದು ಮುಂದಿನ ಇತಿಹಾಸದಲ್ಲಿ ಅವರಿಗೆ ಬಹಳ ಹಿನ್ನಡೆಯನ್ನು ಉಂಟುಮಾಡಿತು ಎನ್ನುವುದು ಒಪ್ಪತಕ್ಕದ್ದೆ. ಆದರೆ, ಮುಸ್ಲಿಮರಿಗೆ ಇದು ಹಲವಾರು ಆರ್ಥಿಕ ಹಾಗೂ ರಾಜಕೀಯ ನಷ್ಟಗಳನ್ನು ತಂದೊಡ್ಡಿದ್ದರೂ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಸಾಹತೀಕರಣಕ್ಕೆ ಅಷ್ಟೇನೂ ಬಲಿಯಾಗದಂತೆ ಅವರನ್ನು ಕಾಪಾಡಿದೆ ಎನ್ನುವುದು ಕೂಡಾ ಅಷ್ಟೇ ನಿಜ.

Francis Robinson : Courtesy Royal Asiatic Society

Francis Robinson : Courtesy Royal Asiatic Society

ಅಲ್ಪಸಂಖ್ಯಾತರ ನಡುವಿನ ಜಾತಿಗಳ ಹಿನ್ನೆಲೆಯನ್ನು ಕೆದಕುತ್ತಾ ಜಾತಿಗಳು ಭಾರತೀಕರಣಗೊಂಡ ಇಸ್ಲಾಮಿನ ವಿಶೇಷತೆ ಎನ್ನುವ ವಾದಕ್ಕೆ ಲೇಖಕರು ಹೆಚ್ಚು ತೂಕ ಕೊಟ್ಟಿರುವಂತೆ ಕಾಣುತ್ತದೆ. ಮುಸ್ಲಿಮರ ನಡುವಿನ ಹಲವಾರು ಜಾತಿಗಳು ಅರೆ ಮುಸ್ಲಿಮ್‌ ಆಗಿದೆ ಎನ್ನುವ ವಾಸ್ತವದ ಕಡೆಗೆ ಅವರು ನಿರಂತರ ಗಮನ ಸೆಳೆದಿದ್ದಾರೆ. ಈ ವಿಷಯವನ್ನು ಎಂಭತ್ತರ ದಶಕದಿಂದಲೇ ಭಾರತೀಯ ಮುಸಲ್ಮಾನರ ಬಗ್ಗೆ ಕಲಿಯುತ್ತಿರುವ ಮಾನವಶಾಸ್ತ್ರಜ್ಞರು ಚರ್ಚೆ ಮಾಡುತ್ತಾ ಬಂದಿದ್ದಾರೆ. ಒಂದರ್ಥದಲ್ಲಿ ಭಾರತೀಯ ಉಪಭೂಖಂಡ ಮತ್ತು ಇಸ್ಲಾಮ್‌ ವಿಷಯವಾಗಿ ಬಂದ ಅತ್ಯಂತ ಮಹತ್ವಪೂರ್ಣ ವಾಗ್ವಾದವಾಗಿದೆ ಇದೆಂದು ಹೇಳಬಹುದು. ಈ ವಿಷಯದಲ್ಲಿ ಲೇಖಕರು ಪ್ರಸಿದ್ಧ ಸಂಶೋಧಕ ಇಮ್ತಿಯಾಝ್‌ ಅಹ್ಮದ್‌ರವರು ಎಂಭತ್ತರ ದಶಕದಲ್ಲೇ ತಳೆದಿದ್ದ ನಿಲುವನ್ನು ಪ್ರತಿಪಾದಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಇಸ್ಲಾಮಿಕ್ ಸುಧಾರಣೆಗಳು ಹೆಚ್ಚೆಚ್ಚು ನಡೆದಂತೆ ಇಸ್ಲಾಮಿನ ಶುದ್ಧತೆಗೆ ಅಥವಾ ಏಕರೂಪತೆಗೆ ಆ ಮಿಶ್ರ ಸಮುದಾಯಗಳು ಬರಲಿದೆ ಎಂದು ಸಿದ್ಧಾಂತಿಸುವ ಫ್ರಾನ್ಸಿಸ್‌ ರಾಬಿನ್ಸನ್‌ರಂತಹ ಸಂಶೋಧಕರು ಮತ್ತೊಂದು ಅಂಚಿನಲ್ಲಿದ್ದಾರೆ. ರಾಬಿನ್ಸನ್‌ ಇಸ್ಲಾಮೈಝೇಶನ್‌ ಥಿಸಿಸ್‌ ಮುಂದಿಟ್ಟರೆ ಅಹ್ಮದ್‌ ರವರು ಸಂಪೂರ್ಣವಾಗಿ ಭಾರತೀಕರಣಗೊಂಡ ಇಸ್ಲಾಮಿನ ಬಗ್ಗೆ ಮಾತಾಡಿದ್ದಾರೆ. ಆದರೆ, ಈ ಚರ್ಚೆಯಲ್ಲಿ ಜಾನ್‌ ಹಾಪ್ಕಿನ್ಸ್‌ ವಿವಿಯ ವೀಣಾದಾಸ್‌ ರವರು ಮಂಡಿಸಿದ ನಿಲುವು ನನಗ್ಯಾಕೋ ಬಹಳ ಉತ್ತಮ ಎನಿಸಿದೆ.

ಜನಪದ ದೇವಶಾಸ್ತ್ರದ ನೆಲೆಗಟ್ಟಿನಲ್ಲಿ ತಮ್ಮ ನಿಲುವನ್ನು ಮಂಡಿಸಿದ್ದಾರೆ ವೀಣಾದಾಸ್. ಮೇಲೆ ಹೇಳಿದ ಎರಡೂ ಸಂಶೋಧಕರು ಹೇಳಿರುವ ಆಶಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಅವರ ನಿಲುವುಗಳಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಇಸ್ಲಾಮಿನ ಬಗೆಗಿನ ಅವರವರ ಗ್ರಹಿಕೆಗಳನ್ನು ಇಲ್ಲಿ ಮುಂದಿಡಲು ಬಯಸಿದ್ದು ಒಬ್ಬರು ಭಾರತೀಕರಣಗೊಂಡ ಯಾ ಸಿಂಕ್ರೆಟಿಕ್‌ ವ್ಯವಸ್ಥೆಯಲ್ಲಿ ಇಸ್ಲಾಮನ್ನು ಕಾಣಲು ಪ್ರಯತ್ನಿಸಿದ್ದಾರೆ ಮತ್ತು ಇನ್ನೊಬ್ಬರು ಸೌದಿ ಬ್ರಾಂಡ್‌ ತರದ ಶುದ್ಧ ಇಸ್ಲಾಮಿನ ಕಡೆಗೆ ಕೊನೆಗೆ ತಲುಪಲಿದೆ ಎನ್ನುವ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ರೀತಿ ನಮ್ಮ ಗ್ರಹಿಕೆಗಳನ್ನು ಹೇರುವ ಬದಲು ಈ ಜಾತಿಗಳು ತಮ್ಮ ಧಾರ್ಮಿಕ ಅನುಭವಗಳನ್ನು ಹೇಗೆ ಗ್ರಹಿಸುತ್ತಿದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಆ ಅನುಭವಗಳು ವಿಸ್ತೃತ ದೇವಶಾಸ್ತ್ರದ ಪಾತಳಿಯಲ್ಲಿ ಯಾವ ರೀತಿ ಭಾಗವಹಿಸುತ್ತದೆ ಎಂದು ನೋಡಬೇಕು. ಮುಸ್ಲಿಮರ ಬಗೆಗಿನ ಮಾನವಶಾಸ್ತ್ರೀಯ ಅನ್ವೇಷಣೆಗಳು ಈ ರೀತಿಯಲ್ಲಿ ಸಾಗಬೇಕಿದೆ ಎಂದು ವಿವರಿಸುತ್ತಾರೆ ವೀಣಾದಾಸ್.

ಇಸ್ಲಾಮಿನ ಬಗೆಗಿನ ಮಾನವಶಾಸ್ತ್ರೀಯ ಅಧ್ಯಯನಗಳಲ್ಲಿ ಇಂದು ಜಾಗತಿಕವಾಗಿ ಹೆಚ್ಚು ಬಳಕೆಯಲ್ಲಿರುವ ತಲಾಲ್‌ ಅಸದ್‌ ಮುಂದಿಟ್ಟ ಡಿಸ್ಕರ್ಸಿವ್‌ ಟ್ರಡಿಷನ್‌ ಮಾದರಿಯಿಂದ ಇದು ಪ್ರಭಾವಿತಗೊಂಡಿದೆ. ವೀಣಾದಾಸ್‌ ಮತ್ತು ಅಸದ್‌ ಏಕಕಾಲದಲ್ಲಿ ಜಾನ್‌ ಹಾಪ್ಕಿನನ್ಸ್‌ ನಲ್ಲಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಕೆಲವು ವಿಷಯಗಳಲ್ಲಿ ಜಾಗತಿಕವಾದ ಏಕತೆಯನ್ನು ಮುಸಲ್ಮಾನರ ನಡುವೆ ಕಾಣಬಹುದಾದರೂ ಟೊರೊಂಟೋದಿಂದ ಟೋಕ್ಯೋ ವರೆಗಿನ ಮುಸ್ಲಿಮರ ನಡುವೆ ಇಳಿದಷ್ಟೂ ಹೆಚ್ಚುವ ಭಿನ್ನತೆಗಳಿವೆ. ಈ ಭಿನ್ನತೆಗಳಿಗೆ ಅವರದ್ದೇ ಆದ ದೇವಶಾಸ್ತ್ರೀಯ ನ್ಯಾಯಗಳು ಕೂಡಾ ಇವೆ. ಬಹು ಸತ್ಯಗಳನ್ನು ಮತ್ತು ವ್ಯಕ್ತಿನಿಷ್ಠತೆಯನ್ನು ಒಳಗೊಳ್ಳಲು ಹಲವಾರು ಕಡೆಯಲ್ಲಿ ಮುಸ್ಲಿಮರ ಧರ್ಮಗ್ರಂಥಗಳು ಅವಕಾಶ ನೀಡಿದ್ದನ್ನು ಕಾಣಬಹುದು. ಬಹುತ್ವ ಮತ್ತು ಏಕತೆ ಸಮ್ಮಿಳಿತಗೊಂಡ ಪರಂಪರೆಯೊಂದನ್ನು ಅರ್ಥೈಸಲು ವೀಣಾದಾಸ್‌ ಮುಂದಿಟ್ಟ ಮಧ್ಯಮ ನಿಲುವಿಗಷ್ಟೇ ಸಾಧ್ಯವಾಗಬಲ್ಲದು ಎನ್ನುವುದು ನನ್ನ ಅನಿಸಿಕೆ.


ಪುಸ್ತಕ ಕೊಳ್ಳಲು ಭೇಟಿಕೊಡಿ: https://store.ruthumana.com/product/alpasankhyataru-mattu-jati-veyvaste/

One comment to “ಪುಸ್ತಕ ಪರೀಕ್ಷೆ: ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ”

ಪ್ರತಿಕ್ರಿಯಿಸಿ