ಆನಿ ಎರ‍್ನೋ – ೨೦೨೨ ನೋಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ

ಈ ಪುರಸ್ಕಾರವನ್ನು ಸ್ವಾತಂತ್ರ್ಯ, ಸಮಾನತೆ, ಮನುಷ್ಯ ಘನತೆಯನ್ನು ಲಿಂಗ, ವರ್ಣ, ಸಂಸ್ಕೃತಿಯ ಭೇದವಿಲ್ಲದೆ ಹಾರೈಸುವವರೊಂದಿಗೆ, ಭವಿಷ್ಯದ ಪೀಳಿಗೆಗಾಗಿ ಭೂಮಿಯನ್ನು ದುರಾಸೆಯಿಂದ ಹಾಳುಮಾಡುವವರಿಂದ ರಕ್ಷಿಸಲು ಬಯಸುವವರೊಂದಿಗೆ ಹಂಚಿಕೊಳ್ಳುತ್ತೇನೆ..

ಖಾಲಿ ಹಾಳೆಯನ್ನೇ ದಿಟ್ಟಿಸುತ್ತ, ʼಎಲ್ಲಿಂದ ಶುರುಮಾಡಲಿ?ʼ ಅಂತ ಸಾವಿರಾರು ಸಲ ಕೇಳಿಕೊಂಡಿದ್ದೇನೆ. ಪುಸ್ತಕದ ಬರವಣಿಗೆ ಆರಂಭಿಸಲು ಸಾಧ್ಯವಾಗಿಸುವ, ನನ್ನೆಲ್ಲ ಸಂದೇಹಗಳನ್ನು ಕಿತ್ತೊಗೆಯುವ ಕೀಲಿಕೈನಂತಹ ಒಂದೇ ಒಂದು ವಾಕ್ಯಕ್ಕಾಗಿ ಕಾತರಿಸಿದ್ದೇನೆ. ಇಂದು ಆ ದಿಗ್ಭ್ರಮೆಯನ್ನು ದಾಟಿದ ಹಂತದಲ್ಲಿದ್ದರೂ ಈ ಕ್ಷಣದಲ್ಲಿ, ʼಇದು ನಿಜವಾಗಿ ನನಗೆ ಆಗುತ್ತಿದೆಯೇ?ʼ- ಎಂದು ನನ್ನೊಳಗೊಂದು ಭಯ ಬೆಳೆಯುತ್ತಿದೆ. ಈ ಸಂಜೆ ನಿಮ್ಮ ಮುಂದೆ ಮಾತಾಡಲು ಸಾಧ್ಯವಾಗುವಂತಹ ವಾಕ್ಯಕ್ಕಾಗಿ ಹುಡುಕಾಡುತ್ತಿದ್ದೇನೆ.

ಆ ವಾಕ್ಯವನ್ನು ದೂರದಲ್ಲೆಲ್ಲೋ ಹುಡುಕಬೇಕಿಲ್ಲ. ಅದು ತನ್ನೆಲ್ಲ ಸ್ಪಷ್ಟತೆಯೊಂದಿಗೆ ಶಾಸನದಂತೆ, ನಿರಾಕರಿಸಲಾಗದಂತೆ ತಕ್ಷಣವೇ ಕಾಣಿಸಿಕೊಂಡಿತು. ಅರವತ್ತು ವರ್ಷಗಳ ಹಿಂದೆ ಡೈರಿಯಲ್ಲಿ, ʼನನ್ನ ಜನಾಂಗದವರ ಮುಯ್ಯಿ ತೀರಿಸಿಕೊಳ್ಳುವವಳಂತೆ ಬರೆಯುತ್ತೇನೆ,ʼ ಎಂದು ಬರೆದಿದ್ದೆ. ಅದು, ʼಎಂದೆಂದಿಗೂ ನಾನು ಕೀಳುಜನಾಂಗದವನುʼ ಎಂದ ರಿಂಬೌಡ್‌*ಫ್ರೆಂಚ್ಲೇಖಕ ನ ಕೂಗಿನಂತೆ ಪ್ರತಿಧ್ವನಿಸಿತು.

ನನಗಾಗ ಇಪ್ಪತ್ತೆರೆಡು ವರ್ಷ. ಬಹುತೇಕ ಮಧ್ಯಮ ವರ್ಗಕ್ಕೆ ಸೇರಿದ ಹೆಣ್ಣು, ಗಂಡುಮಕ್ಕಳೊಂದಿಗೆ ಊರಿನಲ್ಲಿದ್ದ ಚರ್ಚಿನ ಪ್ರಾಧ್ಯಾಪಕರ ಬಳಿಯಲ್ಲಿ ಸಾಹಿತ್ಯವನ್ನು ಅಭ್ಯಸಿಸುತ್ತಿದ್ದೆ. ತಮ್ಮ ಉಚ್ಚಾರಣೆ, ಶಿಕ್ಷಣದ ಕೊರತೆ, ನಡವಳಿಕೆಗಳಿಂದಾಗಿ ಕೀಳು ಅನ್ನಿಸಿಕೊಳ್ಳುತ್ತಿದ್ದ ಭೂರಹಿತರು, ಕಾರ್ಮಿಕರು, ಅಂಗಡಿಯವರ ಪರವಾಗಿ ಪುಸ್ತಕಗಳನ್ನು ಬರೆಯುವುದು, ಲೇಖಕಿಯಾಗುವುದೇ ಸಾಮಾಜಿಕ ಅನ್ಯಾಯವನ್ನು ವಿರೋಧಿಸಲು ಸಾಕು ಎಂದು ಬಹಳ ಬಲವಾಗಿ ನಂಬಿದ್ದೆ.

ಯಾರೋ ಒಬ್ಬರ ವಿಜಯವು ಶತಮಾನಗಳ ದಬ್ಬಾಳಿಕೆ, ಬಡತನವನ್ನು ನಿವಾರಿಸುತ್ತದೆ ಎನ್ನುವ ಭ್ರಮೆಯನ್ನು ಶಾಲೆಯು ನನ್ನಲ್ಲಿ ಬಿತ್ತಿತ್ತು. ನನ್ನ ವೈಯುಕ್ತಿಕ ಸಾಧನೆಯು ಮತ್ತೊಬ್ಬರ ಅವಮಾನಗಳನ್ನು, ನೋವುಗಳನ್ನು ಹೇಗೆ ಮರೆಸಲು ಸಾಧ್ಯ? ಈ ಪ್ರಶ್ನೆಯನ್ನೆಂದೂ ಕೇಳಿಕೊಳ್ಳಲೇ ಇಲ್ಲ. ನನ್ನಷ್ಟಕ್ಕೆ ಕೆಲವು ವಿಷಯಗಳಿಗೆ ಮಾಫಿ ಮಾಡಿಕೊಂಡಿದ್ದೆ.

ಆ ಸಮಯದಲ್ಲಿ ಪುಸ್ತಕಗಳೇ ನನ್ನ ಸಂಗಾತಿಗಳಾಗಿದ್ದವು. ಶಾಲೆಯ ನಂತರ ಓದುವುದು ನನ್ನ ಸಹಜ ಉದ್ಯೋಗವಾಗಿತ್ತು. ಈ ಹಸಿವನ್ನು ನನ್ನಲ್ಲಿ ಪೋಷಿಸಿದ್ದು ನನ್ನಮ್ಮ. ಆಕೆ ತನ್ನಂಗಡಿಯಲ್ಲಿ ಗ್ರಾಹಕರ ನಡುವೆ ಕೂತು ದೊಡ್ಡ ಕಾದಂಬರಿಗಳನ್ನು ಓದುತ್ತಿದ್ದಳು. ಹೊಲೆಯುವುದು, ಕಸೂತಿ ಮಾಡುವುದಕ್ಕಿಂತ ನಾನು ಓದುವುದೇ ಒಳ್ಳೆಯದೆಂದು ತಿಳಿದಿದ್ದಳು. ನನ್ನ ಧಾರ್ಮಿಕ ಶಾಲೆಯಲ್ಲಿ ಆ ಪುಸ್ತಕಗಳನ್ನು ಒಪ್ಪುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಅವು ಇಷ್ಟವಾಗುತ್ತಿತ್ತು. ಡಾನ್ ಕ್ವಿಕ್ಸೋಟ್, ಗಲಿವರ್ಸ್ ಟ್ರಾವೆಲ್ಸ್, ಜೇನ್ ಐರ್, ಗ್ರಿಮ್‌ ಮತ್ತು ಆಂಡರ್ಸನ್‌ ಅವರ ಕತೆಗಳು, ಡೇವಿಡ್ ಕಾಪರ್ಫೀಲ್ಡ್, ಗಾನ್ ವಿಥ್ ದಿ ವಿಂಡ್, ಲೆಸ್ ಮಿಸರೇಬಲ್ಸ್, ದಿ ಗ್ರೇಪ್ಸ್ ಆಫ್ ಕ್ರೋತ್, ನಾಸಿಯಾ, ದಿ ಸ್ಟ್ರೇಂಜರ್ ಹೀಗೆ ನನ್ನ ಶಾಲೆಯಲ್ಲಿ ಇಟ್ಟಿದ್ದ ಪಠ್ಯಕ್ಕಿಂತ ಹೆಚ್ಚಿನದನ್ನು ಓದಿದೆ.

ಹೆಚ್ಚು ಮೌಲ್ಯಯುತವಾದ ಜೀವನವಿಧಾನವಾದ ಸಾಹಿತ್ಯಿಕ ಅಧ್ಯಯನವನ್ನು ಆಯ್ದುಕೊಳ್ಳುವ ಮೂಲಕ ಅದರಲ್ಲೇ ಉಳಿಯುವ ಆಯ್ಕೆ ಮಾಡಿಕೊಂಡಿದ್ದೆ. ಇದರಿಂದಲೇ ಫ್ಲೌಬರ್ಟ್‌, ವರ್ಜೀನಿಯಾ ವೂಲ್ಫ್‌ರ ಕಾದಂಬರಿಗಳ ಪರಿಚಯವಾಯಿತು. ಸಾಹಿತ್ಯವನ್ನೇ ಜೀವಿಸುವಂತಾಯಿತು. ನಾನಿದ್ದ ಸಾಮಾಜಿಕ ಪರಿಸರಕ್ಕೆ ವಿರುದ್ಧವಾದ ಜಗತ್ತೊಂದನ್ನು ಸಾಹಿತ್ಯದ ಮೂಲಕ ಅಪ್ರಜ್ಞಾಪೂರ್ವಕವಾಗಿ ಪ್ರವೇಶಿಸಿದ್ದೆ. ಬರವಣಿಗೆಯು ವಾಸ್ತವವನ್ನು ರೂಪಾಂತರಿಸುವ ಸಾಧ್ಯತೆ ಎಂದೇ ಭಾವಿಸಿದೆ.

ಹೊಸ ಬಗೆಯ ಸ್ವರೂಪದ ಹುಡುಕಾಟ ನನ್ನ ಮೊದಲ ಕಾದಂಬರಿಯ ಹೆಗ್ಗಳಿಕೆ. ಕೆಲವು ಪ್ರಕಾಶಕರು ಕಾದಂಬರಿಯನ್ನು ತಿರಸ್ಕರಿಸಿದ್ದು ನನ್ನನ್ನು ಕುಗ್ಗಿಸಲಿಲ್ಲ.  ಸಮಾಜದಲ್ಲಿ ಹೆಣ್ಣು, ಗಂಡಿನ ಅಸ್ತಿತ್ವವನ್ನು, ಅವರ ಪಾತ್ರಗಳನ್ನು ಲಿಂಗಾಧಾರಿತವಾಗಿ ನಿರ್ಣಯಿಸಲಾಗುತ್ತಿತ್ತು. ಗರ್ಭನಿರೋಧಕಗಳನ್ನು ನಿಷೇಧಿಸಲಾಗಿತ್ತು, ಗರ್ಭಪಾತವನ್ನು ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಇವು ನನ್ನನ್ನು ಕುಗ್ಗಿಸಿತು.

ಮದುವೆಯಾಗಿ ಇಬ್ಬರು ಮಕ್ಕಳು, ಶಿಕ್ಷಕ ವೃತ್ತಿ, ಮನೆವಾರ್ತೆಗಳ ಜವಾಬ್ದಾರಿ ಇವೆಲ್ಲದರಿಂದಾಗಿ ದಿನವೂ ಸ್ವಲ್ಪಸ್ವಲ್ಪವೇ ಬರವಣಿಗೆಯಿಂದ, ನನ್ನ ಜನಗಳ ಮುಯ್ಯಿ ತೀರಿಸಿಕೊಳ್ಳುವ ಆಣೆಯಿಂದ ದೂರಸರಿದೆ. ಕಾಫ್ಕಾನ ʼದಿ ಟ್ರಯಲ್‌ʼಬಿಫೋರ್ ಲಾ ಎಂಬ ನೀತಿಕಥೆಯಲ್ಲಿ ನನ್ನದೇ ವಿಧಿಯ ಪ್ರತಿಬಿಂಬವನ್ನು ಕಾಣದೆ ಓದಲು ಸಾಧ್ಯವಿಲ್ಲ: ನನಗಾಗಿ ಮಾಡಿದ ಬಾಗಿಲನ್ನು ಪ್ರವೇಶಿಸದೆ ಸಾಯುವುದು, ನಾನು ಮಾತ್ರ ಬರೆಯಬಲ್ಲ ಪುಸ್ತಕ.

ರಜೆಯಲ್ಲಿ ನಾನು ಮನೆಗೆ ಬಂದ ಮೂರು ದಿನಗಳ ನಂತರ ಅಪ್ಪ ಸತ್ತುಹೋದದ್ದು, ನನ್ನಂತೆಯೇ ಕಾರ್ಮಿಕ ವರ್ಗದ ಹಿನ್ನಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಾದದ್ದು, ಜಗತ್ತಿನೆಲ್ಲೆಡೆ ನಡೆಯುತ್ತಿದ್ದ ಪ್ರತಿಭಟನಾ ಚಳುವಳಿಗಳು ಈ ಎಲ್ಲ ಅಂಶಗಳು ನನ್ನ ಬೇರುಗಳಿಗೆ, ನನ್ನ ಜನರಿಗೆ ಹತ್ತಿರವಾಗಿಸಿತು. ನಿಗೂಢತೆ ಇರುವಂತಹ ಅತ್ಯುತ್ತಮ ಬರವಣಿಗೆಯನ್ನು ತುರ್ತಾಗಿ ಮಾಡಬೇಕೆಂಬ ಬಯಕೆಯನ್ನು ಹುಟ್ಟಿಸಿತು.

ಬರವಣಿಗೆಯ ಬಗ್ಗೆ ಇಪ್ಪತ್ತರ ಹರೆಯದಲ್ಲಿ ಇದ್ದಂತಹ ಭ್ರಮೆಯಿಲ್ಲ. ಈಗ ಬರವಣಿಗೆ ಎಂದರೆ ನೆನಪಿನಾಳದಲ್ಲಿ ಹುದುಗಿದ ಹೇಳಲಾಗದಂತಹದ್ದಕ್ಕೆ ಮಾತು ಕೊಡುವುದು, ನನ್ನ ಜನ ಹೇಗೆ ಬದುಕಿದ್ದರು ಎನ್ನುವುದರ ಮೇಲೆ ಬೆಳಕು ಚೆಲ್ಲುವುದು. ಬೇರುಗಳಿಂದ ನನ್ನನ್ನು ದೂರಾಗಿಸಿದ ಒಳಹೊರಗಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು.

ಬರವಣಿಗೆಯಲ್ಲಿ ಇದೇ ಸರಿ ಎನ್ನುವಂತಹ ಆಯ್ಕೆಯಿಲ್ಲ. ವಲಸಿಗರು ತಮ್ಮ ಮಾತೃಭಾಷೆಯಲ್ಲಿ ಮಾತಾಡುತ್ತಿರುವುದಿಲ್ಲ. ಅವರು ಯೋಚಿಸುವುದು ತಮ್ಮನ್ನು ಅಭಿವ್ಯಕ್ತಿಸಿಕೊಳ್ಳುವುದು ಬೇರೆಬೇರೆ ಭಾಷೆಯಲ್ಲಿ. ಬೇರೆ ಭಾಷೆಯಲ್ಲಿ ಅಭಿವ್ಯಕ್ತಿಸುವ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದೊಂದು ದ್ವಂದ್ವ. ತಾವು ಕಲಿತ, ತಮ್ಮ ಮೇಲೆ ಪ್ರಾಬಲ್ಯ ಸಾಧಿಸಿರುವ ಭಾಷೆಯಲ್ಲಿ ಬರೆಯುವುದು ಅಸಾಧ್ಯವೆನಿಸುತ್ತದೆ. ಭಾಷೆಯನ್ನು ಕರಗತಮಾಡಿಕೊಂಡಿದ್ದರೂ, ಭಾಷೆಯ ಸಾಹಿತ್ಯವನ್ನು ಮೆಚಿದ್ದರೂ ಕಷ್ಟವೆನಿಸುತ್ತದೆ. ತಮ್ಮ ಮೂಲಕ್ಕೆ ಸಂಬಂಧಿಸಿದ ಸಂವೇದನೆಗಳಿಂದ ರೂಪುಗೊಂಡ ತಮ್ಮ ಮೊದಲ ಜಗತ್ತಿನ ದೈನಿಕವನ್ನು, ಕೆಲಸವನ್ನು, ಸಮಾಜದಲ್ಲಿ ಒಬ್ಬರ ಸ್ಥಾನವನ್ನು ವಿವರಿಸಲು ಪದಗಳಿಗಾಗಿ ತಡಕಾಡುವಂತಾಗುತ್ತದೆ.

ಒಂದೆಡೆ ಕ್ರೌರ್ಯವನ್ನು , ಮೌನವನ್ನು ಪರಿಚಯಿಸಿದ ವಸ್ತುಗಳನ್ನು ಹೆಸರಿಸಲು ಕಲಿತ ಭಾಷೆ. ಉದಾಹರಣೆಗೆ ತಾಯಿ ಮಗನ ನಡುವಿನ ಆಪ್ತಸಂಭಾಷಣೆಯನ್ನು ಹೇಳುವ ಆಲ್ಬರ್ಟ್‌ ಕಮೂವಿನ ʼಬಿಟ್ವೀನ್ ಎಸ್ ಅಂಡ್ ನೋʼ. ಮತ್ತೊಂದೆಡೆ ಅವರು ಮೆಚ್ಚಿದ, ಜಗತ್ತನ್ನು ಪರಿಚಯಿಸಿದ, ಅವರ ಉನ್ನತೀಕರಣಕ್ಕೆ ಕಾರಣವಾದ ಭಾಷೆ. ಅದನ್ನೇ ಕೆಲವೊಮ್ಮೆ ಅವರು ತಮ್ಮದು  ಎಂದು ತಿಳಿದು ಕೊಂಡಿರುತ್ತಾರೆ .

ಫ್ಲೌಬರ್ಟ್, ಪ್ರೌಸ್ಟ್, ವರ್ಜೀನಿಯಾ ವೂಲ್ಫ್ ನನ್ನ ಮೆಚ್ಚಿನ ಲೇಖಕರು. ಬರವಣಿಗೆಗೆ ಹಿಂತಿರುಗಿದಾಗ ಇವರ್ಯಾರು ನನಗೆ ಸಹಾಯ ಮಾಡಲಿಲ್ಲ. ʼಚೆನ್ನಾಗಿ ಬರೆಯಬೇಕು,ʼ ʼಸುಂದರ ವಾಕ್ಯಗಳನ್ನು ಬರೆಯಬೇಕು,ʼ ಎನ್ನುವುದನ್ನು ಬಿಟ್ಟೆ. ನನ್ನ ವಿದ್ಯಾರ್ಥಿಗಳಿಗೆ ಬರೆಯಲು ಹೇಳಿಕೊಟ್ಟ ರೀತಿಯಲ್ಲಿಯೇ ನನ್ನೊಳಗಿನ ಬಿರುಕನ್ನು ಅರ್ಥಮಾಡಿಕೊಳ್ಳಲು, ಅದನ್ನು ತೆರೆದಿಡಲು ಬರೆಯಬೇಕಾಯಿತು. ಆಗ ನನಗೆ ಒದಗಿಬಂದದ್ದು ಸಿಟ್ಟು, ವ್ಯಂಗದಿಂದ ಕೂಡಿದ ಒರಟು ಭಾಷೆ. ಅದು ಅವಮಾನಕ್ಕೆ ಒಳಗಾದವರ ಭಾಷೆ. ಅವಮಾನದ ನೆನಪಲ್ಲಿ ಕುದಿಯುತ್ತಾ ಪ್ರತಿಕ್ರಿಯಿಸುವವರ ಭಾಷೆ.

 ಹೀಗಲ್ಲದೆ ಬೇರೆ ಯಾವ ರೀತಿಯಲ್ಲೂ ಬರೆಯುವುದು ಸಾಧ್ಯವಿಲ್ಲ ಎಂದು ಅರಿವಾಯಿತು. ನನ್ನ ವಿದ್ಯಾರ್ಥಿಗಳಂತೆಯೇ ನನ್ನ ಸಾಮಾಜಿಕ ಅಸ್ತಿತ್ವ ಬಿರುಕು ಬಿಟ್ಟಿತ್ತು. ಆ ಕಥೆಗೆ ರೂಪ ಕೊಡಬೇಕಿತ್ತು. ಫ್ರೆಂಚ್‌ ದೇಶವು ಗರ್ಭಪಾತ ಮಾಡಿಸಿಕೊಳ್ಳುವ ಹೆಂಗಸರನ್ನು ಖಂಡಿಸುತ್ತಿತ್ತು. ಇದರಿಂದಾಗಿ ಅವರು ಕಳ್ಳದಾರಿಗಳನ್ನು ಹುಡುಕುವಂತಾಯಿತು. ಹೆಣ್ಣು ದೇಹದ ಅನುಭವಗಳ ಕುರಿತು ಹೇಳಲು ನಿರ್ಧರಿಸಿದೆ. ಆನಂದದ ಹುಡುಕಾಟ , ಮುಟ್ಟು ಎಲ್ಲವನ್ನೂ ವರ್ಣಿಸಲು ನಿರ್ಧರಿಸಿದೆ. ಹಾಗಾಗಿ ೧೯೭೪ರಲ್ಲಿ ಪ್ರಕಟವಾದ ಮೊದಲ ಪುಸ್ತಕವು ಸ್ತ್ರೀವಾದಿ ಕತೆಯಾಗಿತ್ತು . ಅಂದಿನಿಂದ ನನ್ನ ಜನರಿಗೆ, ಹೆಣ್ಣು ಎನ್ನುವ ಲಿಂಗಕ್ಕೆ ದನಿಯಾಗುವುದು, ಅವರ ಮುಯ್ಯಿ ತೀರಿಸಿಕೊಳ್ಳುವುದೇ ನನ್ನ ಬರವಣಿಗೆಯಾಯಿತು.

ಬರವಣಿಗೆಯ ಕುರಿತು ಆಲೋಚಿಸದೆ ಬದುಕಿನ ಕುರಿತು ಆಲೋಚಿಸಲು ಸಾಧ್ಯವೇ? ಈಗಾಗಲೇ ನಾವು ಒಪ್ಪಿಕೊಂಡಿರುವ ಜೀವಿಗಳ ಬಗ್ಗೆ, ಸಂಗತಿಗಳ/ವಸ್ತುಗಳ ಕುರಿತಾದ ನಂಬಿಕೆಯನ್ನು ಬರವಣಿಗೆಯು ಬಲಗೊಳಿಸುತ್ತದೆಯೋ ಇಲ್ಲ ಅಲ್ಲಾಡಿಸುತ್ತದೆಯೋ ಎನ್ನುವುದರ ಕುರಿತು ಅಚ್ಚರಿಗೊಳ್ಳದೆ ಇರಲು ಸಾಧ್ಯವೇ? ? ಹಿಂಸೆ, ವ್ಯಂಗದೊಂದಿಗೆ ಬರವಣಿಗೆಯು ದಬ್ಬಾಳಿಕೆಗೆ ಒಳಗಾದವರ ಮನೋಭಾವವನ್ನು ಪ್ರತಿಫಲಿಸುವುದಿಲ್ಲವೇ?

ಓದುಗರು ಸಾಂಸ್ಕೃತಿಕವಾಗಿ ಸವಲತ್ತು ಪಡೆದ ಗುಂಪಿನವರಾಗಿದ್ದರೆ ತಮ್ಮ ನಿಜಜೀವನದಲ್ಲಿನ ದೃಷ್ಟಿಕೋನವನ್ನೇ ಪಾತ್ರದ ಬಗೆಗೂ ಹೊಂದಿರುತ್ತಾರೆ. ಆದ್ದರಿಂದ ನನ್ನಪ್ಪನ ಕತೆಯನ್ನು ಹೇಳಲು ಹೊರಟಾಗ ಈ ರೀತಿಯ ದೃಷ್ಟಿಕೋನ ಅಸಹನೀಯ ಅನ್ನಿಸಿತು. ಹಾಗಾಗಿ ತಟಸ್ಥವಾದ, ವಸ್ತುನಿಷ್ಠ ಬರವಣಿಗೆಯನ್ನು ನನ್ನ ನಾಲ್ಕನೆಯ ಪುಸ್ತಕದಿಂದ ಅಳವಡಿಸಿಕೊಂಡಿದ್ದೇನೆ. ಭಾವನೆಗಳನ್ನು ಪ್ರತಿನಿಧಿಸುವ ರೂಪಕಗಳಾಗಲಿ, ಸಂಕೇತಗಳಾಗಲಿ ಇರದಂತಹ ಬರವಣಿಗೆ. ಬರವಣಿಗೆಯಲ್ಲಿ ವಾಸ್ತವದ ಹಿಂಸೆ ಚಿತ್ರಣಗೊಂಡಿದೆ. ವಸ್ತು ಯಾವುದೇ ಆಗಿರಲಿ ನಿಜ ಅನ್ನಿಸುವಂತೆ ಅದರ ಸಂವೇದನೆಯನ್ನು ಹಿಡಿದಿಡುವ ಪದಗಳನ್ನು ಹುಡುಕುವುದು ನನ್ನ ಬರವಣಿಗೆಯ ಎಂದಿನ ಕಾಳಜಿಯಾಗಿದೆ.

ʼನಾನುʼ ಎಂದು ಹೇಳುವುದು ನನಗೆ ಅನಿವಾರ್ಯವಾಗಿತ್ತು. ಸಾಹಿತ್ಯಕವಾಗಿ ಉತ್ತಮ ಪುರುಷ ಎಂದರೆ ಬಹುತೇಕ ಭಾಷೆಗಳಲ್ಲಿ ನಮ್ಮ ಅಸ್ತಿತ್ವ. ನಾವು ಮಾತು ಕಲಿತ ಕ್ಷಣದಿಂದ ಸಾಯುವವರೆಗಿನ ನಮ್ಮ ಅಸ್ತಿತ್ವ. ಲೇಖಕಿ/ಕರ ಬಗ್ಗೆ ಹೇಳುವಾಗ ʼನಾನುʼ ಎನ್ನುವುದು ಕಾಲ್ಪನಿಕವಾಗಿದ್ದು ಅದನ್ನು ನಾರ್ಸಿಸಿಸ್ಟಿಕ್‌ ಎಂದೇ ಪರಿಗಣಿಸಲಾಗುತ್ತದೆ.

ಇಲ್ಲಿಯವರೆಗೂ ಆತ್ಮಚರಿತ್ರೆಗಳಲ್ಲಿ ತಮ್ಮ ಶೌರ್ಯ,ಸಾಹಸಗಳನ್ನು ಹೇಳಿಕೊಳ್ಳುವುದು ಗಣ್ಯರ ಹವ್ಯಾಸವಾಗಿತ್ತು. ಹದಿನೆಂಟನೆಯ ಶತಮಾನದಲ್ಲಿ ಫ್ರಾನ್ಸಿನಲ್ಲಿ ಪ್ರಜಾಪ್ರಭುತ್ವವು ಆರಂಭವಾಯಿತು. ಜೀನ್‌ ಜಾಕ್ವೆಸ್‌ ರುಸೋ ಕನ್ಫೆಶನ್ಸ್ ಪೀಠಿಕೆಯಲ್ಲಿ ಹೇಳಿರುವಂತೆ ಎಲ್ಲರ ನಡುವೆ ಸಮಾನತೆ ಹಾಗೂ ಎಲ್ಲರಿಗೂ ತಮ್ಮ ಕತೆಯನ್ನು ಹೇಳುವ ಹಕ್ಕು ದೊರಕಿತು. ʼಸಾಮಾನ್ಯ ಮನುಷ್ಯನಾಗಿರುವ ನನ್ನ ಕತೆ ಓದುಗರ ಗಮನಸೆಳೆಯುವುದಿಲ್ಲ ಎಂದು ಆಕ್ಷೇಪಿಸಬೇಡಿ. ನನ್ನ ಬದುಕನ್ನು ಮಬ್ಬಿನಲ್ಲೇ ಕಳೆದಿದ್ದರೂ ರಾಜನಿಗಿಂತ ಉತ್ತಮವಾಗಿ ಯೋಚಿಸಬಲ್ಲೆನಾದರೆ ನನ್ನ ಕತೆ ಅವರ ಕತೆಗಿಂತ ಹೆಚ್ಚು ಆಸಕ್ತಿಕರವಾಗಿರುತ್ತದೆ.ʼ

ಈ ಸಾಮಾನ್ಯತೆಯ ಹೆಮ್ಮೆಯು ಬರವಣಿಗೆಗೆ ಪ್ರೇರಣೆಯಾಯಿತು. ಅದಕ್ಕಿಂತ ಹೆಚ್ಚಾಗಿ ಹೆಣ್ಣುತನ, ಗಂಡುತನದ ಸಂವೇದನೆಗಳನ್ನು ಶೋಧಿಸುವ ಸಾಧನವಾಗಿ ʼನಾನುʼ ಎನ್ನುವುದನ್ನು ಬಳಸುವ ಬಯಕೆ; ಯಾರ ನೆನಪುಗಳನ್ನು ಸಮಾಧಿ ಮಾಡಲಾಗಿದೆಯೋ ಅಂತಹದ್ದನ್ನು ಜಗತ್ತು ಎಲ್ಲ ಕಾಲದಲ್ಲೂ ತೆರೆದಿಡುತ್ತಲೇ ಇದೆ.

ಇದಕ್ಕೆ ಅಗತ್ಯವಿರುವ ಸಂವೇದನೆಯೇ ನನ್ನ ಮಾರ್ಗದರ್ಶಿ ಹಾಗೂ ಸಂಶೋಧನೆಯ ಪ್ರಮಾಣೀಕರಣವಾಗಿದೆ. ಎಷ್ಟರಮಟ್ಟಿಗೆ ಎಂದರೆ ಬರವಣಿಗೆ ಕೇವಲ ನನ್ನ ಜೀವನದ ಕತೆಯನ್ನು ಹೇಳಲೊ ಅಥವಾ ರಹಸ್ಯಗಳಿಂದ ನನ್ನನ್ನು ಮುಕ್ತಗೊಳಿಸಿಕೊಳ್ಳಲು ಮಾತ್ರವಲ್ಲ. ಬದಲಿಗೆ ಬದುಕಿದ ಸನ್ನಿವೇಶ, ಘಟನೆ, ರೊಮ್ಯಾಂಟಿಕ್ ಸಂಬಂಧವನ್ನು ಅರ್ಥೈಸಿಕೊಳ್ಳುವ ಮೂಲಕ ಬರವಣಿಗೆಗೆ ಮಾತ್ರ ಸಾಧ್ಯವಿರುವ ರೀತಿಯಲ್ಲಿ ಅದಕ್ಕೊಂದು ರೂಪ ಕೊಟ್ಟು, ಬೇರೆಯವರಿಗೆ ಅರಿವು ಹಾಗೂ ನೆನಹುಗಳನ್ನು ದಾಟಿಸುವುದು. ಪ್ರೀತಿ, ನೋವು, ಶೋಕ, ಅವಮಾನ ಸಾರ್ವತ್ರಿಕ ಅಲ್ಲ ಅಂತ ಯಾರು ಹೇಳಿದರು?

ʼನಮ್ಮಲ್ಲಿ ಯಾರೊಬ್ಬರೂ ನಮ್ಮದು ಮಾತ್ರ ಎನ್ನುವಂತಹ ಬದುಕನ್ನು ಬದುಕುವುದಿಲ್ಲ,ʼ ಎಂದು ವಿಕ್ಟರ್‌ ಹ್ಯೂಗೋ ಹೇಳುತ್ತಾನೆ. ʼಹಾಗಿದ್ದೂ ಎಲ್ಲ ವಿಷಯಗಳು ನನಗೆ ಮಾತ್ರವೇ ಆಗುತ್ತಿದೆ ಎನ್ನುವಂತೆ ಬದುಕುತ್ತೇವೆ.ʼ ಪುಸ್ತಕದಲ್ಲಿನ ʼನಾನುʼ ಪಾರದರ್ಶಕವಾಗಿದ್ದಲ್ಲಿ ಅದನ್ನು ಓದುಗ ʼನಾನುʼ ಎಂದೇ ಓದಿಕೊಂಡು ಆ ಪಾತ್ರವೇ ಆಗುತ್ತಾನೆ. ಈ ʼನಾನುʼ ಏಕಕಾಲಕ್ಕೆ ವೈಯುಕ್ತಿಕ, ಸಾರ್ವತ್ರಿಕ ಆಗುತ್ತದೆ.

ನನಗೆ ಬರವಣಿಗೆ ಎಂದರೆ ಹೀಗೆ- ಅದು ಯಾವುದೋ ಒಂದು ವರ್ಗದ ಓದುಗರಿಗಾಗಿ ಮಾತ್ರ ಸೀಮಿತವಲ್ಲ. ಹೆಣ್ಣಾಗಿ, ವಲಸಿಗಳಾಗಿ, ದೀರ್ಘ ಬದುಕಿನ ನೆನಪುಗಳ ಕುರಿತಾಗಿ, ವರ್ತಮಾನದ ಕುರಿತಾಗಿ ನನ್ನ ಅನುಭವಗಳನ್ನು ಪ್ರತಿಮೆಗಳಲ್ಲಿ, ಪದಗಳಲ್ಲಿ ಮತ್ತೊಬ್ಬರಿಗೆ ದಾಟಿಸುವುದು. ಪುಸ್ತಕವೊಂದು ಖಾಸಗಿ ಬದುಕನ್ನು ಬದಲಿಸಬಲ್ಲದು, ದಮನಿತರ ಒಂಟಿತನಕ್ಕೆ ದನಿಯಾಗಬಲ್ಲುದು, ವ್ಯಕ್ತಿಗಳು ತಮ್ಮನ್ನು ತಾವು ಮರುರೂಪಿಸಿಕೊಳ್ಳಲು ಕಾರಣವಾಗಬಲ್ಲುದು ಎನ್ನುವ ಅಚಲ ನಂಬಿಕೆ. ಬರವಣಿಗೆಯ ಕಡೆಗಿನ ನನ್ನ ಬದ್ಧತೆಗೆ ನಂಬಿಕೆಯೇ ಆಧಾರ. ಹೇಳಲಾಗದ್ದು ಬೆಳಕಿಗೆ ಬಂದಾಗ ಅದು ಪೊಲಿಟಿಕಲ್‌ ಆಗುತ್ತದೆ.

ಇಂದು ಮಹಿಳೆಯರು ಇರಾನಿನಲ್ಲಿ ಸಂಪ್ರದಾಯವನ್ನು ವಿರೋಧಿಸಿದಂತೆ ಪುರುಷಾಧಿಪತ್ಯವನ್ನು ವಿರೋಧಿಸಲು ದನಿ ಕಂಡುಕೊಂಡಿದ್ದಾರೆ. ಪ್ರಜಾಪ್ರಭುತ್ವವಿರುವ ದೇಶದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸ್ಥಾನದ ಬಗ್ಗೆ ಯೋಚಿಸಿದಾಗ ಅಚ್ಚರಿಯಾಗುತ್ತದೆ. ಇಂದಿಗೂ ಮಹಿಳೆಯರು ಪುಸ್ತಕ ಬರೆಯಬಲ್ಲರು ಎಂದು ಒಪ್ಪಿಕೊಳ್ಳುವುದಿಲ್ಲ. ಪಾಶ್ಚಾತ್ಯ ಬುದ್ಧಿಜೀವಿಗಳ ವಲಯವನ್ನೂ ಸೇರಿದಂತೆ ಹಲವು ಗಂಡಸರಿಗೆ ಹೆಂಗಸರು ಬರೆದ ಪುಸ್ತಕಗಳು ಕಣ್ಣಿಗೆ ಕಾಣುವುದೇ ಇಲ್ಲ. ಸ್ವೀಡಿಶ್ ಅಕಾಡೆಮಿಯವರು ಇಂದು ನನ್ನ ಕೆಲಸವನ್ನು ಗುರುತಿಸಿರುವುದು ಲೇಖಕಿಯರಿಗೊಂದು ಆಶಾಕಿರಣ.

ಲಿಂಗ, ವರ್ಗ/ವರ್ಣಗಳ ಪರಸ್ಪರ ಅಧಿಕಾರ ಸಂಬಂಧಗಳ ಪರಿಣಾಮ ಅದರ ನೇರ ಅನುಭವ ಪಡೆದವರಿಗೆ ತಿಳಿದಿರುತ್ತದೆ. ಅದನ್ನು ಅವರು ಮಾತ್ರ ಬೆಳಕಿಗೆ ತರಬಲ್ಲರು. ಇದರಿಂದ ವ್ಯಕ್ತಿ ಮಾತ್ರವಲ್ಲ ಸಮುದಾಯದ ವಿಮೋಚನೆಯ ಸಾಧ್ಯತೆಯು ಕಾಣಬಲ್ಲದು. ದೃಷ್ಟಿಕೋನಗಳು, ಮೌಲ್ಯಗಳನ್ನು ಸುಲಿದು ನೋಡಿದಾಗಲೇ ನೈಜಪ್ರಪಂಚದ ದರ್ಶನವಾಗುವುದು. ಎಲ್ಲ ಭಾಷೆಗಳು ತಮ್ಮೊಡಲಲ್ಲಿ ಸ್ಥಾಪಿತ ಶ್ರೇಣಿಕರಣಗಳನ್ನು ಹೊತ್ತಿರುತ್ತವೆ.

ಬರವಣಿಗೆ ಎನ್ನುವ ರಾಜಕೀಯ ಕ್ರಿಯೆಯಲ್ಲಿ ಘಟನೆಗಳು, ಘರ್ಷಣೆಗಳು, ಐಡಿಯಾಗಳ ಕುರಿತಾಗಿ ನನ್ನ ನಿಲುವುಗಳನ್ನು ಹೇಳುವಾಗ ಓದುಗರು ಅದನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ಯೋಚಿಸುವುದಿಲ್ಲ. ನಾನು ಯುದ್ದೊತ್ತರ ಪೀಳಿಗೆಗೆ ಸೇರಿದವಳು. ಎರಡನೇ ಮಹಾಯುದ್ಧದ ಸಮಯದಲ್ಲಿ ಲೇಖಕರು, ಬುದ್ಧಿಜೀವಿಗಳು ಫ್ರೆಂಚ್‌ ರಾಜಕೀಯದೊಂದಿಗೆ ತಮ್ಮನ್ನು ಗುರುತಿಸಿಕೊಂಡು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡರು. ಅವರು ದನಿಯೆತ್ತದೆ, ಬದ್ಧತೆಯಿಂದ ಕಾರ್ಯತತ್ಪರರಾಗದಿದ್ದರೆ ಸಂಗತಿಗಳು ಬೇರೆಯಾಗಿರುತ್ತಿತ್ತೇ ಎಂದು ಇಂದು ಹೇಳುವುದು ಕಷ್ಟ.

ಪ್ರಸ್ತುತ ದಿನಮಾನದಲ್ಲಿ ಅಸಂಖ್ಯವಾದ ಮಾಹಿತಿಮೂಲಗಳಿವೆ. ಹಿಂದಿನ ಪರಿಸ್ಥಿತಿಯನ್ನು ಭಿನ್ನವಾಗಿಸಿ ಯಾರೋ ಒಬ್ಬರ ಕಲೆಯನ್ನು ಎತ್ತಿ ತೋರುವಂತೆ ಮಾಡುವುದು ಪ್ರಲೋಭನೆಯನ್ನು ಹುಟ್ಟಿಸುವಂತಿದೆ. ಏತನ್ಮಧ್ಯೆ ರಷ್ಯಾದ ಸರ್ವಾಧಿಕಾರಿಯು ನಡೆಸುತ್ತಿರುವ ಯುದ್ಧದ ಹಿಂಸಾಚಾರದ ಕುರಿತು ಯುರೋಪಿನಲ್ಲಿ ಹಿಂಜರಿತ, ಅದನ್ನು ಮುಚ್ಚಿಹಾಕುವ ಧೋರಣೆಗಳು ಮುನ್ನೆಲೆಗೆ ಬರುತ್ತಿವೆ. ಮತ್ತೊಂದೆಡೆ ಪ್ರಜಾಪ್ರಭುತ್ವವಿರುವ ದೇಶಗಳಲ್ಲೂ ಈ ಯುದ್ಧಕ್ಕೆ ನಿಧಾನವಾಗಿ ಬೆಂಬಲವು ದೊರಕುತ್ತಿದೆ. ವಿದೇಶಿಯರನ್ನು, ವಲಸಿಗರನ್ನು ದೂರಮಾಡುವುದು, ಆರ್ಥಿಕವಾಗಿ ದುರ್ಬಲರಾದವರನ್ನು ನಿರ್ಲಕ್ಷಿಸುವುದು, ಹೆಣ್ಣಿನ ಸುತ್ತ ಸರ್ಪಗಾವಲನ್ನು ಹಾಕುವುದು ಇಂತಹ ಐಡಿಯಾಲಜಿಗಳ ಕುರಿತು ಸದಾ ಎಚ್ಚರವಿರಬೇಕು. ಎಲ್ಲ ಕಾಲಕ್ಕೂ ಎಲ್ಲೆಡೆಯೂ ಮನುಷ್ಯನನ್ನು ಗೌರವಿಸುವ ನಮ್ಮಂತಹವರಿಗೆ ಇದು ತಿಳಿದಿದೆ.

ಏಕಾಂತದಲ್ಲಿ ಅನುಮಾನದೊಂದಿಗೆ ತಮ್ಮಷ್ಟಕ್ಕೆ ತಾವು ಸಂಶೋಧನೆಯಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿರುವವರಿಗೆ ನನಗೆ ನೀಡಲಾದ ಈ ಉನ್ನತ ಪುರಸ್ಕಾರವು ಭರವಸೆಯ ಕಿರಣವಾಗಿದೆ. ಈ ಪ್ರಶಸ್ತಿ ನನ್ನನ್ನು ಕುರುಡಾಗಿಸಿಲ್ಲ. ನನಗೆ ಸಿಕ್ಕ ಈ ನೊಬೆಲ್‌ ಪ್ರಶಸ್ತಿಯನ್ನು ವೈಯುಕ್ತಿಕ ವಿಜಯವೆಂದು ಭಾವಿಸುವುದಿಲ್ಲ. ಇದನ್ನು ಹೆಮ್ಮೆಯಿಂದಲೋ ನಮ್ರತೆಯಿಂದಲೋ ನೋಡುವುದಿಲ್ಲ. ಬದಲಿಗೆ ಇದೊಂದು ಸಾಮೂಹಿಕವಾದ ಗೆಲುವು ಎಂದು ಭಾವಿಸುತ್ತೇನೆ. ಈ ಪುರಸ್ಕಾರವನ್ನು ಸ್ವಾತಂತ್ರ್ಯ, ಸಮಾನತೆ, ಮನುಷ್ಯ ಘನತೆಯನ್ನು ಲಿಂಗ, ವರ್ಣ, ಸಂಸ್ಕೃತಿಯ ಭೇದವಿಲ್ಲದೆ ಹಾರೈಸುವವರೊಂದಿಗೆ, ಭವಿಷ್ಯದ ಪೀಳಿಗೆಗಾಗಿ ಭೂಮಿಯನ್ನು ದುರಾಸೆಯಿಂದ ಹಾಳುಮಾಡುವವರಿಂದ ರಕ್ಷಿಸಲು ಬಯಸುವವರೊಂದಿಗೆ ಹಂಚಿಕೊಳ್ಳುತ್ತೇನೆ.

ಹಿಂತಿರುಗಿ ನೋಡುವಾಗ ಇಪ್ಪತ್ತನೆಯ ವಯಸ್ಸಿನಲ್ಲಿ ನನ್ನ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡೆನೋ ಇಲ್ಲವೋ ಗೊತ್ತಿಲ್ಲ. ಅಂದು ಕೊಟ್ಟ ಆ ಮಾತು, ನನ್ನ ಪೂರ್ವಜರಿಂದ, ಶ್ರಮಜೀವಿಗಳಾಗಿದ್ದ ಗಂಡು, ಹೆಣ್ಣುಗಳಿಂದ ಸಾಕಷ್ಟು ಶಕ್ತಿಯನ್ನು, ಸಿಟ್ಟನ್ನು ಪಡೆದಿದ್ದೇನೆ. ಆ ಕಾರಣದಿಂದಲೇ ಸಾಹಿತ್ಯದಲ್ಲಿ ಅವರಿಗೊಂದು ಸ್ಥಾನವನ್ನು ಕಲ್ಪಿಸಬೇಕೆಂಬ ಮಹಾತ್ವಾಕಾಂಕ್ಷೆ ಹುಟ್ಟಿತು. ಮೊದಲಿನಿಂದಲೂ ನನ್ನೊಡನಿದ್ದ ದನಿಗಳೇ ಬಂಡಾಯದ, ಬದಲಾವಣೆಗಾಗಿ ತುಡಿಯುವಂತಹ ಹಲವು ಬಗೆಗಳನ್ನು ಪರಿಚಯಿಸಿತು. ಮಹಿಳೆಯಾಗಿ, ಸಮಾಜದ ಬದಲಾವಣೆಗಾಗಿ ದನಿಯೆತ್ತುವಂತೆ ಸಾಹಿತ್ಯದಲ್ಲೊಂದು ಅವಕಾಶ ಪಡೆಯುವಂತೆ ಮಾಡಿತು.


ಅನುವಾದ : ಹೇಮಾ .ಎಸ್
ಕನ್ನಡ ಉಪನ್ಯಾಸಕಿ. ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’, ಅಕಿರಾ ಕುರುಸೋವಾ ಆತ್ಮಕತೆಯ ಅನುವಾದ “ನೆನಪಿನೋಣಿಯಲ್ಲಿ” ಪ್ರಕಟಿತ ಪುಸ್ತಕಗಳು.


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ