ಸಂವಿಧಾನಕ್ಕಿಂತ ಧರ್ಮದಲ್ಲಿ ಕಾನೂನಿನ ಮೂಲವನ್ನು ಕಂಡುಕೊಳ್ಳುವ ನ್ಯಾಯಾಧೀಶರು ತೀವ್ರವಾಗಿ ಹೆಚ್ಚಿದ್ದಾರೆ

ಖ್ಯಾತ ಕಾನೂನು ಶಿಕ್ಷಣ ತಜ್ಞ , ನ್ಯಾಷನಲ್ ಲಾ ಸ್ಕೂಲ್, ಬೆಂಗಳೂರಿನ ಮಾಜಿ ಉಪಕುಲಪತಿಗಳಾದ ಡಾ ಮೋಹನ್ ಗೋಪಾಲ್ ಅವರು ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣೆಗಳ ಅಭಿಯಾನ (ಸಿಜೆಎಆರ್) ಆಯೋಜಿಸಿದ್ದ ಸೆಮಿನಾರ್‌ನಲ್ಲಿ “ನ್ಯಾಯಾಂಗ ನೇಮಕಾತಿಗಳಲ್ಲಿ ಕಾರ್ಯಾಂಗದ ಹಸ್ತಕ್ಷೇಪ” ಕುರಿತು ಮಾಡಿದ ಭಾಷಣದ ಬರಹರೂಪ ಇದು. ಅವರು ತಮ್ಮ ಭಾಷಣದಲ್ಲಿ ರಾಜಕೀಯ ಪಕ್ಷಪಾತ ಹೊಂದಿರುವ ನ್ಯಾಯಾಧೀಶರ ನೇಮಕದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೊಲಿಜಿಯಂ ಪ್ರಜ್ಞಾಪೂರ್ವಕವಾಗಿ ಸಂವಿಧಾನಕ್ಕೆ ಬದ್ಧರಾಗಿರುವ ನ್ಯಾಯಾಧೀಶರನ್ನು ನೇಮಿಸುವ ಮೂಲಕ ಸಂಸ್ಥೆಯನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದರು. ಸಂವಿಧಾನಕ್ಕಿಂತ ಧರ್ಮದಲ್ಲಿ ಕಾನೂನಿನ ಮೂಲವನ್ನು ಕಂಡುಕೊಳ್ಳುವ ದೇವಪ್ರಭುತ್ವ ನೆಚ್ಚುವ ನ್ಯಾಯಾಧೀಶರು ತೀವ್ರವಾಗಿ ಹೆಚ್ಚಿದ್ದಾರೆ, ಇದು 2047ರ ವೇಳೆಗೆ ಹಿಂದೂ ರಾಷ್ಟ್ರವನ್ನು ಸಾಧಿಸುವ ಗುರಿಯ ಮೊದಲ ಹಂತ ಎಂದು ನಾನು ನಂಬುತ್ತೇನೆ ಎಂದು ವಿಶ್ಲೇಷಿಸಿದ್ದಾರೆ.

ಅಪ್ಪಟ ಬಲ ಪಂಥೀಯನಾದ ಬೆಂಜಮಿನ್ ನಾತನ್ಯಾವು ಇಸ್ರೇಲಿನ ಪ್ರಧಾನಿಯಾದ ಮೇಲೆ ಅಲ್ಲಿನ ನ್ಯಾಯಾಂಗವನ್ನ ಸಾಕಷ್ಟು ಮಾರ್ಪಾಡು ಮಾಡಲು ಹೊರಟಿದ್ದಾನೆ. ಅವಗಳನ್ನ ಸುಧಾರಣೆಗಳೆಂದು ಹೇಳುತ್ತಾನಷ್ಟೆ ಆದರೆ ಈ ಸುಧಾರಣೆಗಳಿಂದಿರುವ ಸಂಚು ಅಲ್ಲಿನ ಜನರಿಗೆ ತಿಳಿದಿದೆ. 120 ಮಂದಿ ಸಂಸದರಿರುವ ಸಂಸತ್ತು ದೇಶದ ಸುಪ್ರೀಂ ಕೋರ್ಟ್ ನೀಡುವ ತೀರ್ಪುಗಳನ್ನ ಬಹುಮತವಿದ್ದರೆ ತಿರಸ್ಕರಿಸಬಹುದು ಎಂಬ ಬದಲಾವಣೆ ತರಲು ಹೊರಟಿದ್ದಾನೆ ಬೆಂಜಮಿನ್. ಬಹುಮುಖ್ಯವಾಗಿ ಪ್ಯಾಲೇಸ್ತೀನಿ ಖಾಸಗಿ ಭೂಮಿಯನ್ನ ಅಕ್ರಮವಾಗಿ ಒತ್ತುವರಿ ಮಾಡುಕೊಳ್ಳುವವರ ವಿರುದ್ಧ ಕೋರ್ಟ್ ಇತ್ತೀಚಿಗೆ ನೀಡುತ್ತಿರುವ ತೀರ್ಪುಗಳನ್ನ ನಿಷ್ಕ್ರಿಯೆ ಮಾಡಲು ಮತ್ತು LGBTQ ಸಮುದಾಯ ಒಳಗೊಂಡಂತೆ ಹಲವು ಸಾಮಾಜಿಕ ಸುಧಾರಣೆಗಳಿಗೆ ಪ್ರಭಾವ ಬೀರುವ ತೀರ್ಪುಗಳನ್ನ ಹೊಡೆದುರುಳಿಸಲು ನ್ಯಾಯಾಂಗದ ಮೇಲೆ ಬೆಂಜಮಿನ್ ಮಾಡಿರುವ ಹಲ್ಲೆಯಿದು. ಇದರ ಜೊತೆಗೆ ಬೆಂಜಮಿನ್ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳಿಂದ ಹೊರಬರಲು ಈ ಸುಧಾರಣೆಗಳು ಸಾಕಷ್ಟು ಸಹಾಯಕವಾಗಲಿದೆ ಎಂಬುದು ಅಲ್ಲಿನ ಜನರಿಗೆ, ವಿರೋಧ ಪಕ್ಷಗಳಿಗೆ ತಿಳಿದ ವಿಚಾರ. ಮೂಲಭೂತ ಕಾನೂನು, ಹಕ್ಕುಗಳ ಸಮೀಕ್ಷೆ ನೆಡೆಸಲು ನ್ಯಾಯಾಂಗಕ್ಕಿರುವ ಕನಿಷ್ಠ ಸ್ವಾತಂತ್ರವನ್ನು ಕಸಿದು ಚುನಾಯಿತ ಬಹುಸಂಖ್ಯಾತ ಆಡಳಿತ ಪಕ್ಷಕ್ಕೆ ಕೊಟ್ಟುಬಿಡುವ ಇರಾದೆ ಬೆಂಜಮಿನದ್ದು.
ಬೆಂಜಮಿನ್ನಿನ ಈ ಸುಧಾರಣಾ ಸಲಹೆಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ? ಲಕ್ಷಾಂತರ ಜನರು ಇತ್ತೀಚಿಗೆ ಬೀದಿಗಿಳಿದು ಪ್ರತಿಭಟಿಸಿದರು, ದೇಶದ ದೈತ್ಯ ಟೆಕ್ ಕಂಪನಿಗಳು ಈ ಸುಧಾರಣೆಗಳು ಸ್ವೀಕೃತವಾದರೆ ದೇಶದಿಂದಲೇ ನಾವು ಹೊರನಡೆಯುತ್ತೇವೆಂದು ಎಚ್ಚರಿಕೆ ನೀಡಿವೆ. ನ್ಯಾಯಾಂಗದ ಮೇಲೆ ಕಡಿವಾಣಗಳಿಲ್ಲದೆ ನೆಡೆಸುತ್ತಿರುವ ದಾಳಿಯಿದು ಎಂದು ಸುಪ್ರೀಂ ಕೋರ್ಟ್ ಅಧ್ಯಕ್ಷ ಹೇಳಿದ್ದಾರೆ.

ಪಕ್ಕದ ಪಾಕಿಸ್ತಾನದಲ್ಲಿ ದಶಕಗಳ ಕೆಳಗೆ ನೆಡೆದ ಘಟನೆ ನನಗೆ ನೆನಪಾಗುತ್ತದೆ. 2007ರಲ್ಲಿ ಪಾಕಿಸ್ತಾನದ ಚೀಫ್ ಜಸ್ಟಿಸ್ ಆಗಿದ್ದ ಇಫ್ತಿಕರ್ ಚೌಧರಿಯವರನ್ನ ದೇಶದ ಸರ್ವಾಧಿಕಾರಿ ಜನರಲ್ ಮುಶ್ರಫ್ ಏಕಾಏಕಿ ಅಮಾನತ್ತುಗೊಳಿಸಿ ನಂತರ ವಜಾಗೊಳಿಸಿದ. ಇಡೀ ದೇಶವೇ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಭುಗಿಲೆದ್ದಿತು. ಜನರಲ್ ತುರ್ತು ಪರಿಸ್ಥಿತಿ ಘೋಷಣೆಯಾದರು ವಕೀಲರು, ನ್ಯಾಯಾಧೀಶರು, ಪರ್ತ್ರಕರ್ತರು, ಜನಸಾಮಾನ್ಯರು ಬೀದಿಗಿಳಿದರು. ಜನರಲ್ ಮುಶ್ರಫ್ನ ಪತನಕ್ಕೆ, ಮಿಲಿಟರಿ ಆಡಳಿತದ ಅಂತ್ಯಕ್ಕೆ ನಾಂದಿ ಹಾಡಿದ್ದು ಈ ನಿರ್ಧಾರವೇ. 2008 ರಲ್ಲಿ ಮುಶ್ರಫ್ ಅಧಿಕಾರದಿಂದ ಕೆಳಗಿಳಿದ. ಇಫ್ತಿಕರ್ ಚೌಧರಿಯ ದಿನಗಳು ವಿವಾದರಹಿತವೆಂದೇನೂ ಹೇಳಲಾರೆ ಆದರೆ ಪಾಕಿಸ್ತಾನದಂತಹ ದೇಶದಲ್ಲಿ ಮಿಲಿಟರಿ, ಕಾರ್ಯಾಂಗ ಮತ್ತು ಗುಪ್ತಚರ ಇಲಾಖೆಗಳ ನಿರಂತರ ಉಪಟಳಗಳ ನಡುವೆ ಶರಣಾಗದೆ ನಿಂತ ನ್ಯಾಯಾಂಗ ಹೇಗೆ ಪ್ರಜಾತಂತ್ರವನ್ನ ಪುನರ್ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ತೋರಿತು.

ಯಾವುದೇ ದೇಶದ ಜನರಿಗೆ ನ್ಯಾಯಾಂಗ ಮತ್ತು ಸೇನೆ ಮೇಲಿರುವ ಅಪಾರ ನಂಬಿಕೆ, ಭರವಸೆ ಬೇರಾವ ಸಂಸ್ಥೆಗಳ ಮೇಲಿರಲು ಸಾಧ್ಯವಿಲ್ಲ. ಭ್ರಷ್ಟ ವ್ಯವಸ್ಥೆಯಲ್ಲಿ ಹತಾಶರಾಗಿ ಜನ ಕೊನೆಯದಾಗಿ ನ್ಯಾಯ ಅರಸಿ ಹೋಗುವುದು ನ್ಯಾಯಾಂಗದ ಕಡೆಗೆ. ಅದಕ್ಕಾಗಿಯೇ ನ್ಯಾಯಾಂಗ ಸ್ವತಂತ್ರವಾಗಿಯೂ, ಸತ್ಯಪರವಾಗಿಯೂ ಮತ್ತು ಸಂವಿಧಾನ ಬದ್ಧವಾಗಿಯೂ ಇರಬೇಕೆಂಬುದು ಎಲ್ಲರ ಆಶಿಸುತ್ತಾರೆ.

ಭಾರತದ ನ್ಯಾಯಾಂಗ ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳುವ ಸಹಜ ಕುತೂಹಲ ನಮ್ಮಲ್ಲಿ ಹುಟ್ಟುತ್ತೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಉಪಕುಲಪತಿಯಾಗಿದ್ದ, ಸುಪ್ರೀಂ ಕೋರ್ಟಿನ ರಾಷ್ಟೀಯ ನ್ಯಾಯಾಂಗ ಅಕಾಡೆಮಿಯಾ ನಿರ್ದೇಶಕರೂ ಆಗಿದ್ದ ಪ್ರೊ ಜಿ ಮೋಹನ್ ಗೋಪಾಲ್ ಅವರು Judicial Appointments and Reforms- Executive interference in Judicial Appointments ಎಂಬ ಶೀರ್ಷಿಕೆ ಅಡಿಯಲ್ಲಿ ನೆಡೆದ ಸಮ್ಮೇಳನದಲ್ಲಿ ಆಡಿದ ಮಾತುಗಳನ್ನ ಇಲ್ಲಿ ಹಾಕಿದ್ದೇನೆ.

1. ನ್ಯಾಯಾಂಗದಲ್ಲಿ ಹಸ್ತಕ್ಷೇಪವಿದೆ. ಹಸ್ತಕ್ಷೇಪವೆಂದರೇನು?ಸರಳವಾಗಿ ಹೇಳುವುದಾದರೆ ಇರದ ಪಾತ್ರವನ್ನ ವಹಿಸುವುದು. ಅವಶ್ಯಕತೆ ಇಲ್ಲದಿದ್ದರೂ/ಬೇಡದಿದ್ದರೂ ಪಾತ್ರವಹಿಸಲು ಮುಂದಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪವೆಂದರೆ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವಿಲ್ಲದಿದ್ದರು ಅಲ್ಲಿ ಅದು ಪ್ರಮುಖ ಪಾತ್ರವಹಿಸುವುದು. ಈ ಸರ್ಕಾರಿ ಹಸ್ತಕ್ಷೇಪ ಹಲವು ಸೂಕ್ಷ್ಮ, ಸೂಚ್ಯ ಹಾಗು ಸ್ಪಷ್ಟ ವಿಧಾನಗಳಲ್ಲಿ ನೆಡೆಯುತ್ತಿದೆ. ಈ ಕಾನೂನು ಬದ್ಧವಲ್ಲದ ಆದರೂ ನಿರ್ಭೀತಿಯಿಂದ ನೆಡೆಯುತ್ತಿರುವ ಹಸ್ತಕ್ಷೇಪವನ್ನ, ಬಾರ್ ಕೌನ್ಸಿಲ್ಲಿನ ರಾಜಕೀಯೀಕರಣವನ್ನ ವಿಸ್ತೃತವಾಗಿ ನೋಡಬೇಕಾಗಿರುವ ಕಾಲ ಇದಾಗಿದೆ.

2. ಹಾಗಾದರೆ ನ್ಯಾಯಾಂಗದಲ್ಲಿ, ನ್ಯಾಯಾಧೀಶರ ಆಯ್ಕೆಯಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪ ತಡೆಯಲು ಯಾವ ಸುಧಾರಣೆಗಳಾಗಬೇಕು? ಈ ಹಸ್ತಕ್ಷೇಪಕ್ಕೆ ಸ್ಪಂದಿಸುವುದು ಹೇಗೆ? ಹಸ್ತಕ್ಷೇಪ ತಡೆಯಲು ಕೊಲೆಜಿಯಂ (ಮಂಡಳಿ) ಯಾವ ಪಾತ್ರವಹಿಸಬೇಕಿದೆ? ಅಥವಾ ಕೊಲೆಜಿಯಂಗೆ ಪರ್ಯಾಯ ವ್ಯವಸ್ಥೆಯೇನಾದರೂ ಇದೆಯೇ ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ಈ ಹಸ್ತಕ್ಷೇಪದ ಕಾರಣ ಮತ್ತು ಪರಿಣಾಮಗಳೇನು? (causes and consequences of Interference) ಹಸ್ತಕ್ಷೇಪವೇಕಿದೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.

3. ಕೆಲವು ಅಂಕಿ ಅಂಶಗಳನಿಲ್ಲಿ ಗಮನಿಸುವುದು ಸೂಕ್ತ. ಸುಪ್ರೀಂ ಕೋರ್ಟ್ ವೆಬ್ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ ಮೇ 2004 ರಿಂದೀಚೆಗೆ ಯುಪಿಎ ಮತ್ತು ಏನ್ ಡಿಎ ಆಡಳಿತಾವಧಿಯಲ್ಲಿ ಒಟ್ಟು 111ಮಂದಿಯನ್ನ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. 56 ಮಂದಿ ಹತ್ತು ವರ್ಷದ ಯುಪಿಎ ಅವಧಿಗೆ ಸೇರಿದರೆ, 55 ಮಂದಿ 8.9 ವರ್ಷ ಆಳ್ವಿಕೆಯ ಏನ್ ಡಿಎ ಅವಧಿಗೆ ಸೇರಿದವರು. ಆಯ್ಕೆಯಾದವರ ಸಂಖ್ಯೆ ಬಹುತೇಕ ಒಂದೇ ಇದೆ. (ಇದರಲ್ಲಿ ಹಸ್ತಕ್ಷೇಪ ಪ್ರಭಾವವೆಲ್ಲಿದೆ ಹುಡುಕ ತೊಡಗಿದರೆ ನಿಮಗೆ ಕೆಲ ವಿಷಯಗಳು ಸ್ಪಷ್ಟವಾಗುವವು. ಇಲ್ಲಿ ಮೊದಲು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ – ರಾಜಕೀಯ ಪಕ್ಷಪಾತಿಗಳಾದವರನ್ನ ನೇಮಕ ಮಾಡಲಾಗುತ್ತಿದೆಯೇ ಎಂದು? ಉತ್ತರಕ್ಕಾಗಿ ವಯಕ್ತಿಕ ಅಭಿಪ್ರಾಯಗಳಿಗೆ ಮಾರುಹೋಗುವುದು ಬೇಡ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪುಗಳನ್ನೇ ನೋಡೋಣ.)

4. ಯುಪಿಎ ಅಧಿಕಾರಾವಧಿಯಲ್ಲಿ ಸುಮಾರು 6 ಮಂದಿ ಸಾಂವಿಧಾನಿಕ ನ್ಯಾಯಾಧೀಶರಿದ್ದರು. (ಅವರಿಗೆ ಲಿಬರಲ್ ಎಂಬ ಹಣೆ ಪಟ್ಟಿಕಟ್ಟದೆ ಸಂವಿಧಾನದವನ್ನ ಮಾತ್ರ ಆಧಾರವಾಗಿಟ್ಟುಕೊಂಡು ತೀರ್ಪುಗಳನ್ನ ನೀಡಿದವರಿಗೆ ಸಾಂವಿಧಾನಿಕ ನ್ಯಾಯಾಧೀಶರು ಎಂದು ಕರೆಯಲಾಗಿದೆ- these are the judges who believed that all decisions should be made exclusively on the touch stone of constitution.)

5. ಈ ಸಾಂವಿಧಾನಿಕ ನ್ಯಾಯಾಧೀಶರ ಸಂಖ್ಯೆ ಏನ್ ಡಿಎ ಅಧಿಕಾರಾವಧಿಯಲ್ಲಿ 9ಕ್ಕೆ ಏರುತ್ತದೆ. ಸಂಖ್ಯೆ ಏರಿದ ಮಾತ್ರಕ್ಕೆ ಏನ್ ಡಿಎ ಸರ್ಕಾರ ಸಾಂವಿಧಾನಿಕ ನ್ಯಾಯಾಧೀಶರಿಗೆ ವಿಶೇಷ ಆದ್ಯತೆ ನೀಡಿ ಬರಮಾಡಿಕೊಂಡಿದೆ ಎಂದಲ್ಲ. ಸಂವಿಧಾನಕ್ಕೆ ಬದ್ದರಾದ ನ್ಯಾಯಾಧೀಶರನ್ನ ಹೆಚ್ಚು ನೇಮಕ ಮಾಡಿದೆಯೆಂದಲ್ಲ. ಅದಕ್ಕೆ ವಿರುದ್ಧವಾಗಿ ಈಗ ಸಂವಿಧಾನವನ್ನ ಸಂಪೂರ್ಣ ಬುಡಮೇಲು ಮಾಡುವುದಕ್ಕೆ ನ್ಯಾಯಾಂಗವನ್ನ ಭರ್ತಿ ಮಾಡಲಾಗುತ್ತಿದೆ. (Packing the judiciary to over throw the constitution.) ತಮಗೆ ಬೇಕಾದವರನ್ನ ನ್ಯಾಯಾಂಗಕ್ಕೆ ಭರ್ತಿ ಮಾಡುವ ಸರ್ಕಾರದ ಪ್ರಕ್ರಿಯೆಗೆ ಪ್ರತಿರೋಧವೊಡ್ಡಲು ಕೊಲಿಜಿಯಮ್ಮಿನ ಕೆಲ ಸದಸ್ಯರು ಹೆಚ್ಚು ಸಾಂವಿಧಾನಿಕ ನ್ಯಾಯಾಧೀಶರನ್ನ ನೇಮಕ ಮಾಡಿದರು.

6. ಇನ್ನೊಂದು ಅಚ್ಚರಿ ಮೂಡಿಸುವ ಅಂಕಿ ಅಂಶದ ಒಮ್ಮೆ ಕಣ್ಣಾಡಿಸುವ. ಎಷ್ಟು ಮಂದಿ ನ್ಯಾಯಾಧೀಶರು ಸಂವಿಧಾನದಿಂದಾಚೆ ಸಾಗಿ ಸನಾತನ ಧರ್ಮ, ವೇಧ, ಪುರಾಣಗಳನ ತಮ್ಮ ತೀರ್ಪುಗಳಿಗೆ ಆಧಾರವಾಗಿಸಿಕೊಂಡಿದ್ದಾರೆ? ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ ಓದಿ ತೀರ್ಮಾನಕ್ಕೆ ಬರುವುದಾದರೆ ಯುಪಿಎ ಅವಧಿಯಲ್ಲಿ ವೇದ, ಸನಾತನ ಧರ್ಮ, ಪುರಾಣಗಳ ಆಧಾರದ ಮೇಲೆ ತೀರ್ಪು ನೀಡಿದ ನ್ಯಾಯಾಧೀಶರ ಸಂಖ್ಯೆ ಸೊನ್ನೆಯಾದರೆ, ಈ ಸಂಖ್ಯೆ ಏನ್ ಡಿಎ ಅವಧಿಯಲ್ಲಿ 9ಕ್ಕೆ ಏರಿದೆ.
7. ಈ ಒಂಬತ್ತು ಮಂದಿಯಲ್ಲಿ ಐದು ಮಂದಿ ಇನ್ನು ಬೆಂಚ್ ನಲ್ಲಿದ್ದಾರೆ. ಈ ನ್ಯಾಯಾಧೀಶರು ಬಹಳ ಸ್ಪಷ್ಟವಾಗಿ ಸಂವಿಧಾನದಾಚೆ ತಾವು ಸಾಗಬೇಕೆಂದು ನಂಬಿದ್ದಾರೆ. ಅಯೋಧ್ಯಾ ತೀರ್ಪು ಇದಕ್ಕೆ ಉತ್ತಮ ನಿದರ್ಶನ. ಕೆಲ ನ್ಯಾಯಾಧೀಶರು ಸಂವಿಧಾನ/ ಕಾನೂನು ಮೀರಿ ತೀರ್ಪು ನೀಡಲು ಮುಂದಾದರು.
8. ಕಾನೂನಿನ ಮೂಲ ಸಂವಿಧಾನದ ಬದಲಾಗಿ ಧಾರ್ಮಿಕ ಗ್ರಂಥಗಳಲ್ಲಿ, ಧರ್ಮದಲ್ಲಿ ಕಾಣುವ ಸಾಂಪ್ರದಾಯಿಕ, ದೇವಪ್ರಭುತ್ವಾತ್ಮಕವಾದಿ ನ್ಯಾಯಾಧೀಶರ ಸಂಖ್ಯೆ ಏರಿದೆ ಎಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ದೊಡ್ಡ ಉಪಾಯದ ಮೊದಲ ತಂತ್ರವಿದು. ಸ್ವಾತಂತ್ರ್ಯದ, ಗಣರಾಜ್ಯದ ಶತಮಾನೋತ್ಸವನ್ನ 2047ರಲ್ಲಿ ಆಚರಿಸುವ ಹೊತ್ತಿಗೆ ದೇಶವನ್ನ ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯ ಮೊದಲ ಹೆಜ್ಜೆಯಿದು ಎಂಬುದು ಮೋಹನ್ ಅವರ ನಂಬಿಕೆ. ಸಂವಿಧಾನವನ್ನ ಬುಡಮೇಲು ಮಾಡಿ ಅಲ್ಲ ಆದರೆ ಸಂವಿಧಾನವೊಂದು “ಹಿಂದೂ ದಾಖಲೆಯೆಂದು” ಸುಪ್ರೀಂ ಕೋರ್ಟ್ ಅರ್ಥೈಸುವುದರ ಮುಖೇನ. (Not by overthrowing the constitution but by interpreting the constitution as a Hindu Document)

9. ಸಂವಿಧಾನವನ್ನ ಒಂದು ಹಿಂದೂ ದಾಖಲೆಯಂತೆ ನೋಡಲು ಮೊದಲ ಹಂತದ ಪ್ರಯತ್ನವೇ ಈ ಸಾಂಪ್ರದಾಯಿಕ/ ಥಿಯೋಕ್ರಟಿಕ್ ನ್ಯಾಯಾಧೀಶರ ನೇಮಕಾತಿ. ಈ ನ್ಯಾಯಾಧೀಶರು ದೇವತಾಶಾಸ್ತ್ರಗಳಲ್ಲಿ ಕಾನೂನಿನ ಮೂಲ ಹುಡುಕುತ್ತಾರೆ. ಹಿಜಾಬ್ ತೀರ್ಪಿನಲ್ಲಿ ನ್ಯಾಯಾಧೀಶರೊಬ್ಬರು ಸಂವಿಧಾನ ಪಂಥ ನಿರಪೇಕ್ಷತೆ ಎನ್ನುತ್ತದೆ ಹೊರತು ಧರ್ಮ ನಿರಪೇಕ್ಷ ಎಂದು ಹೇಳಿಲ್ಲವೆಂದರು, ಮುಂದುವರೆದು ಧರ್ಮ ಸಂವಿಧಾನಕ್ಕೆ ಅನ್ವಯಿಸುತ್ತದೆ ಹಾಗು ಸಂವಿಧಾನವೇ ಧರ್ಮವೆಂದರು. ಇಲ್ಲಿ ಧರ್ಮವೆಂದರೆ ಸನಾತನ ಧರ್ಮ. ಮೊದಲ ಬಾರಿಗೆ ಸಾಂವಿಧಾನಿಕ ಕಾನೂನುಗಳನ್ನೇ ಸನಾತನ ಧರ್ಮದೊಂದಿಗೆ ಸಮನ್ವಯಗೊಳಿಸಲಾಗಿದೆ. ಇಲ್ಲಿಯವರೆಗಿದ್ದ ಗಡಿಯನ್ನ ಮೀರಲಾಗಿದೆ. ಇದಾವುದೂ ಬರಿಯ ಮಾತುಗಾರಿಕೆಯಾಗುಳಿಯದೆ ಲಿಖಿತ ತೀರ್ಪುಗಳಾಗಿವೆ. (ಹೀಗೆ ಶಾಲೆಯಲ್ಲಿ ಹೋಮ ನೆಡೆದರೆ ಅದು ಧರ್ಮವಾದರೆ, ಹಿಜಾಬ್ ಬರಿಯ religion ಎಂದೆನಿಸಿಕೊಳ್ಳುತ್ತದೆ.)

10. ಕೆಲ ಉದ್ದೇಶಗಳು ಸ್ಪಷ್ಟವಾಗಿದೆ ನ್ಯಾಯಾಂಗವನ್ನ ಅಪಹರಿಸಿ, ದೇವಪ್ರಭುತ್ವವನ್ನ ಸ್ಥಾಪಿಸುವುದು. ಇರುವ ಸಂವಿಧಾನವನ್ನ ನೆನೆಗುದಿಗೆ ತಳ್ಳಿ ಹಿಂದೂ ರಾಷ್ಟ್ರ ಸ್ಥಾಪಿಸುವುದು. ನ್ಯಾಯಾಧೀಶರ ಆಯ್ಕೆ ಮಾಡಲೆಂದೇ ಇರುವ ಕೊಲಿಜಿಯಂ ವ್ಯವಸ್ಥೆಯನ್ನ ರದ್ದುಗೊಳಿಸಿ ಅದರ ಜಾಗದಲ್ಲಿ ಕಾನೂನು ಸಚಿವರ ಮೂಲಕ ನ್ಯಾಯಾಧೀಶರ ಆಯ್ಕೆ ನೆಡೆಸುವುದು. (ಈ ಹಿನ್ನಲೆಯಲ್ಲಿ ಸರ್ಕಾರದ ಸತತ ಪ್ರಯತ್ನಗಳ ಅಪಾಯ ಅರಿತ ಕೊಲಿಜಿಯಂ ಏನ್ ಡಿಎ ಅಧಿಕಾರಾವಧಿಯಲ್ಲಿ ಒಂಬತ್ತು ಸಾಂವಿಧಾನಿಕ ನ್ಯಾಯಾಧೀಶರನ್ನ ಆಯ್ಕೆ ಮಾಡಿ ಪ್ರತಿರೋಧ ತೋರಿದೆ ಎಂಬುದನ್ನ ಮತ್ತೆ ಮತ್ತೆ ನೆನೆಯಬೇಕಾಗುತ್ತದೆ.)

11. ಮೂಲ ಸಮಸ್ಯೆ ಎಲ್ಲಿದೆಯಂದರೆ ಸಾಂವಿಧಾನಿಕ ಆಶಯ ಮತ್ತು ಯೋಜನೆಗಳು ದೇಶವನ್ನಾಳುತ್ತಿರುವ ಕೆಲವರ ಆಶಯ ಹಾಗು ಯೋಜನೆಗಳೊಂದಿಗೆ ನೇರ ಸಂಘರ್ಷದಲ್ಲಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ದೇಶವನ್ನಾಳುತ್ತಿರುವವರು ನಾಲ್ಕು ಸಮುದಾಯದವರು. ಸ್ವಾತಂತ್ರ್ಯಕ್ಕೆ ಮುನ್ನ ಈ ನಾಲ್ಕು ಸಮುದಾಯಗಳು ಬ್ರಿಟಿಷ್ ಮತ್ತು ಮುಸ್ಲಿಂ ಶಕ್ತಿಯನ್ನ ಎದುರಿಸಬೇಕಿತ್ತು ಆದರೀಗ ಪ್ರಭಾವದಲ್ಲಾಗಲಿ, ಬಲ, ಅಧಿಕಾರದಲ್ಲಾಗಲಿ ನಾಲ್ಕು ಸಮುದಾಯದವರನ್ನ ಎದುರಿಸುವ ಎದುರಾಳಿಗಳೇ ಇಲ್ಲ. ಈ ಒಲಿಗಾರ್ಕಿಗೆ ಎದುರಾಗಿ ನಿಲ್ಲುವ ಏಕೈಕ ಶಕ್ತಿ ಸಂವಿಧಾನ.

12. ಪಾಕಿಸ್ತಾನದಂತಹ ದೇಶಗಳಲ್ಲಿ ಸಂವಿಧಾನದ ಆಶಯಗಳಿಗೂ ಮತ್ತು ಪ್ರಬಲ ಕೆಲವರಾಳ್ವಿಕೆಯ ಆಶಯಗಳಿಗೆ ಯಾವುದೇ ಸಂಘರ್ಷವಿರಲಾರದು. ಆದರೆ ಭಾರತದಲ್ಲಿ ಸಂವಿಧಾನ ಉದ್ದೇಶ ಪೂರ್ವಕವಾಗಿ ಪ್ರಜಾತಂತ್ರ, ಸ್ವಾತಂತ್ರ್ಯ, ಸಮಾಜವಾದ, ಘನತೆ, ಜಾತ್ಯತೀತತೆಯಂತಹ ಪರಿಕಲ್ಪನೆಗಳನ್ನ ಪರಿಚಯಿಸಿ ಅಳುವ ಹಿಂದೂ ವರ್ಗದ ಆಶಯ ಮತ್ತು ಹೊರನೋಟವನ್ನ ನೇರವಾಗಿ ಪ್ರಶ್ನಿಸುತ್ತದೆ. ಸ್ವಾತಂತ್ರ್ಯ ದೇಶದ ಇತಿಹಾಸದ ಮೊದಲ ಹಂತದಲ್ಲಿ ಈ ಸಂಘರ್ಷವನ್ನ ನೋಡಬಹುದು. ಆ ಹಂತದಲ್ಲಿ ನ್ಯಾಯಾಂಗ ಎಲ್ಲ ಸಾಂವಿಧಾನಿಕ ಯೋಜನೆಗಳಿಗೆ ತಡೆಯೊಡ್ಡಿ, ಉರುಳಿಸಿತು.

13. ಸಂವಿಧಾನದ ಆರ್ಟಿಕಲ್ ೩೮ ಆಶಯವಾದ “The State shall strive to promote the welfare of the people by securing and protecting as effectively as it may a social order in which justice, social, economic and political, shall inform all the institutions of the national life. ರಾಷ್ಟೀಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವು ವ್ಯಾಪ್ತವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸಾಧ್ಯದಾದಷ್ಟರ ಮಟ್ಟಿಗೆ ಸುನಿಶ್ಚಿತಗೊಳಿಸುವ ಮತ್ತು ಸಂರಕ್ಷಣೆ ಮಾಡುವ ಮೂಲಕ ಜನತೆಯ ಕಲ್ಯಾಣ ಉನ್ನತಿಗೊಳಿಸಲು ಪ್ರಯತ್ನಿಸತಕ್ಕದ್ದು” ಕ್ಕೇ ನ್ಯಾಯಾಂಗ ತಡೆಯೊಡ್ಡುತ್ತಿದ್ದ ಕಾಲದಲ್ಲಿ ಜಸ್ಟಿಸ್ ಕೃಷ್ಣ ಐಯ್ಯರ್, ಕುಮಾರ ಮಂಗಳಂ, ಭಗವತಿ, ಚಿನ್ನಪ ರೆಡ್ಡಿ, ದೇಸಾಯಿ ಸಂವಿಧಾನ ಆಶಯಗಳ ಮತ್ತು ನ್ಯಾಯಾಂಗದ ಆಶಯಗಳ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸಿದರು.

14. 1990-91 ರಲ್ಲಿ ಮಂಡಲ್ ಆಯೋಗ ವರದಿಯನ್ನ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಯಿತು. 1992ರಲ್ಲಿ ನ್ಯಾಯಾಂಗದಲ್ಲಿ ಕೊಲಿಜಿಯಂ ಪದ್ಧತಿ ಜಾರಿಗೆ ಬಂದದ್ದು ಕಾಕತಾಳೀಯವೇನಲ್ಲ. ಕೊಲಿಜಿಯಂ ಅನ್ನೋದು ಮಂಡಲ್ಗೆ ನ್ಯಾಯಾಂಗ ನೀಡಿದ ಪ್ರತಿಕ್ರಿಯೆಯ ಒಂದು ಭಾಗವಾಗಿತ್ತು. ಮಂಡಲ್ ವರದಿಯಿಂದ ಕಾರ್ಯಾಂಗ, ಶಾಸಕಾಂಗಕ್ಕೆ ನವಚೈತನ್ಯದಿಂದ ಲಗ್ಗೆಯಿಡುತ್ತಿದ್ದ ಹಿಂದುಳಿದ ವರ್ಗದವರನ್ನ ನ್ಯಾಯಾಂಗದಿಂದ ಹೇಗಾದರೂ ಮಾಡಿ ಹೊರಗಿಡಬೇಕಿತ್ತು. ಆಗ ಸರ್ಕಾರ ಮತ್ತು ನ್ಯಾಯಾಂಗ ಒಟ್ಟಿಗೆ ಸೇರಿ ಹುಟ್ಟಿ ಹಾಕಿದ್ದೆ ಕೊಲಿಜಿಯಂ ಪದ್ಧತಿ. ಹೀಗೆ ನ್ಯಾಯಾಧೀಶರ ಆಯ್ಕೆ ಅಳುವ ಮೇಲ್ವರ್ಗದ ನಿಯಂತ್ರಣದಲ್ಲಿತ್ತು. ಇಂದಿನ ಸುಪ್ರೀಂ ಕೋರ್ಟಿನ ಸಾಮಾಜಿಕ ಸಂಯೋಜನೆಯನ್ನ ಗಮನಿಸಿದರೆ ಇದು ಎದ್ದು ಕಾಣುವ ವಿಚಾರವಾಗಿದೆ. ಅಲ್ಲಿ ಯಾವುದೇ ವಿವಿಧತೆ ಇಲ್ಲ. ವರ್ಗ, ಲಿಂಗವನ್ನ ಗಣನೆಗೆ ತೆಗೆದುಕೊಂಡರೆ ಸ್ವಲ್ಪ ಸುಧಾರಣೆಗಳಾಗಿರಬಹುದು. ಆದರೆ ಜಾತಿಯನ್ನ ಗಣನೆಗೆ ತೆಗೆದುಕೊಂಡಾಗ ವಿವಿಧತೆ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಈ ರೀತಿ ನ್ಯಾಯಾಂಗವನ್ನ ಸಾಮಾಜಿಕವಾಗಿ “ಸಂರಕ್ಷಿಸುವ” ಯೋಜನೆ ಯಶಸ್ವಿಯಾಗಿದೆ. ನ್ಯಾಯಾಂಗ ದುರ್ಬಲವಾಗಿರುವುದು ಕೂಡ ಇದರಿಂದಲೇ.

15. ಅಂದು ನ್ಯಾಯಾಂಗ ಕೊಲಿಜಿಯಂ ಬಳಸಿಕೊಂಡು ಹಿಂದುಳಿದವರನ್ನ ನ್ಯಾಯಾಂಗದಿಂದ ಹೊರಗಿಟ್ಟಿತ್ತೋ ಹಾಗೆಯೆ ಇಂದು ಸರ್ಕಾರ ಒಂದು ಹೆಜ್ಜೆ ಮುಂದೆ ಸಾಗಿ ನ್ಯಾಯಾಂಗವನ್ನ ಉಪಯೋಗಿಸಿಕೊಂಡು ಸಂವಿಧಾನವನ್ನ ನಾಶಪಡಿಸಿ ಅದರ ಜಾಗದಲ್ಲಿ ಧಾರ್ಮಿಕ ನೆಲೆಯಲ್ಲಿ ದೇವಪ್ರಭುತ್ವ ಸ್ಥಾಪಿಸಲು ಮುಂದಾಗುತ್ತಿದೆ. ಇಂದಿಗೂ ಹೈ ಕೋರ್ಟ್, ಬಾರ್ ಕೌನ್ಸಿಲ್, ಬೆಂಚ್ ನಲ್ಲೂ ಎರಡು ಅಥವಾ ಮೂರೂ ಸಮುದಾಯಗಳ ಪ್ರಾಬಲ್ಯವಿದೆ.
16. ಕೊಲಿಜಿಯಂ ಇಲ್ಲಿವರೆಗಿನ ಕಾರ್ಯ ವೈಖರಿ, ಉದ್ದೇಶ ಏನೇ ಆಗಿದ್ದಿರಬಹುದು ಆದರೆ ಸದ್ಯಕ್ಕೆ ಕೊಲಿಜಿಯಂ ಪದ್ದತಿಯನ್ನ ಉಳಿಸಿಕೊಳ್ಳುವುದು ಸೂಕ್ತ. ಗಣರಾಜ್ಯವನ್ನ ಹಿಂದೂ ರಾಜ್ಯವನ್ನಾಗಿಸಲು ತುದಿಗಾಲಲ್ಲಿ ನಿಂತಿರುವ ಸರಕಾರಕ್ಕೆ, ನ್ಯಾಯಾಂಗದ ಅಂಗಳದೊಳಗೆ ಯಾವುದೇ ರೀತಿಯ ಪ್ರವೇಶ ನೀಡುವುದು ಅಪಾಯಕಾರಿ ನಡೆಯಾದೀತು.

17. ಸಂವಿಧಾನವನ್ನೇ ನಾಶ ಮಾಡಲು ಹೊರಟಿರುವ ಪ್ರಭುತ್ವಕ್ಕೆ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರ ಅಥವಾ ಪಾತ್ರ ನೀಡುವುದು ಅಪಾಯ. ಈ ಹಿಂದಿನ ಸರ್ಕಾರಗಳೇನು ವಿಭಿನ್ನವಾಗಿರಲಿಲ್ಲ ಆದರೆ ಈ ಸರ್ಕಾರಕ್ಕೆ ತುಂಬ ಸ್ಪಷ್ಟವಾದ ಸೈದ್ಧಾಂತಿಕ ಉದ್ದೇಶಗಳಿವೆ.

18. ಕೊಲಿಜಿಯಂ ಪ್ರಜ್ಞಾಪೂರ್ವಕವಾಗಿ ಸಂವಿಧಾನದ ಆಶಯಗಳ ಮೇಲೆ ನಿರಂತರವಾಗಿ ನೆಡೆಯುತ್ತಿರುವ ದಾಳಿಗಳನ್ನ ತಡೆಯಬೇಕು. ಸಂವಿಧಾನದ ಆಶಯಗಳನ್ನ ಸಂರಕ್ಷಿಸಲು ಪಣತೊಟ್ಟಿರುವವರನ್ನ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಬೇಕು. ಎಲ್ಲ ಜಾತಿ, ಧರ್ಮ, ಲಿಂಗ, ವರ್ಗಗಳನ್ನ ಒಳಗೊಂಡು ನ್ಯಾಯಾಂಗ ವೈವಿಧ್ಯಗೊಳ್ಳಬೇಕು. ನಮ್ಮದು rainbow judiciaryಯಾಗಬೇಕು. ಎಲ್ಲರಿಗು ಇದು ನಮ್ಮ ನ್ಯಾಯಾಂಗ ಇಲ್ಲಿ ನಮ್ಮ ಪ್ರತಿನಿಧಿಯೊಬ್ಬನಿದ್ದಾನೆ ಎಂದೆನಿಸಬೇಕು. ಎಲ್ಲ ಸಮುದಾಯಗಳಿಗೂ (ಬರಿಯ ಪರಿಶಿಷ್ಟ ಜಾತಿ/ಪಂಗಡದವರು ಮಾತ್ರವಲ್ಲದೆ) ಸಮಾನ ಪ್ರಾತಿನಿಧ್ಯ ಸಿಗಬೇಕೆಂಬ ಬಾಬಾ ಅಂಬೇಡ್ಕರ್ ಅವರ ಆಶಯಗಳು ನನಸಾಗಬೇಕು. ಸಂವಿಧಾನದ ರಕ್ಷಣೆಗೆ, ಸಂವಿಧಾನದ ಮೌಲ್ಯಗಳ ರಕ್ಷಣೆಗೆ ನ್ಯಾಯಾಂಗದಲ್ಲಿನ್ನ ವೈವಿಧ್ಯತೆ ಅತ್ಯಾವಶ್ಯಕ. Judiciary has to safeguard the content of the constitution not merely its formal structure.


ಅನುವಾದ : ಹರೀಶ್ ಗಂಗಾಧರ್
ಬೆಂಗಳೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಮೇಷ್ಟ್ರು. ಅಧ್ಯಯನ ಮತ್ತು ಸಂಶೋಧನೆಯ ಜಾಡಿನ ಬರಹಗಳ ಮೇಲೆ ಹೆಚ್ಚು ಪ್ರೀತಿ. ಜಾಗತಿಕ ರಾಜಕೀಯ, ಕ್ರೀಡೆ, ಸಾಹಿತ್ಯ, ಸಿನಿಮಾ ಹುಚ್ಚು. ಓದು-ಬರಹದ ಹವ್ಯಾಸ.


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ