‘ಫೋಟೋ’ : ಮಹತ್ವದ ತಿರುವಿನಲ್ಲಿ ಕನ್ನಡ ರಾಜಕೀಯ ಚಲನಚಿತ್ರ ನಿರ್ಮಾಣ 

ರಾಜಕೀಯ ವಿಷಯಾಧಾರಿತ  ಸಿನಿಮಾ ಮಾಡುವುದು, ರಾಜಕೀಯ ನಿಲುವಿನ  ಸಿನಿಮಾ ಮಾಡುವುದು ಮತ್ತು ರಾಜಕೀಯವಾಗಿ ಸಿನಿಮಾ ಮಾಡುವುದು  ಮೂರು ವಿಭಿನ್ನ ರೀತಿಯ ಸಿನಿಮಾ ನಿರ್ಮಾಣ ಪ್ರಕ್ರಿಯೆಯಾಗಿವೆ .

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡ ಉತ್ಸವ್ ಗೋನವಾರ ಅವರ ಚೊಚ್ಚಲ ಚಿತ್ರ ‘ಫೋಟೋ’, ಈ ಎರಡೂ ನೆಲೆಯಲ್ಲಿ ಗೆಲ್ಲುತ್ತದೆ. ಅಷ್ಟು ಮಾತ್ರವಲ್ಲ ತನ್ನ ವಸ್ತು, ವಿನ್ಯಾಸ, ನಿರ್ವಾಹಣೆ, ಕಲಾತ್ಮಕತೆ, ಆಶಯ – ಈ ಎಲ್ಲ ಕಾರಣಕ್ಕೆ ಗೋನವಾರ ಅವರ ಸಿನೆಮಾವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು.

2020 ರಲ್ಲಿ COVID -19 ಸಾಂಕ್ರಾಮಿಕದ ನಡುವೆ ಕೇಂದ್ರ ಸರಕಾರವು ಅಯಾಚಿತವಾಗಿ ಹೇರಿದ ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನರು ತೀವ್ರ ಸಂಕಷ್ಟಗಳಿಗೀಡಾಗಿ ತೊಂದರೆಗಳನ್ನು ಅನುಭವಿಸುವಂತಾಯಿತು. ನಗರಗಳಲ್ಲಿ ಕೆಲಸ ಮಾಡುತ್ತಿದ್ದ ವರ್ಗಗಳು ಇದ್ದಕ್ಕಿಂದಂತೆ ತಮ್ಮ ತಮ್ಮ ಊರುಗಳಿಗೆ  ಹಿಂತಿರುಗಿ ಹೋಗಬೇಕಾಯಿತು. ಈ ಸಾಮೂಹಿಕ ವಲಸೆಯನ್ನು, ಮಾನವ ಹತಾಶೆಯ ಬಲು ದೊಡ್ಡ ಕಥೆಯನ್ನು ‘ಫೋಟೋ’ ಚಿತ್ರ ಸಮರ್ಪಕವಾಗಿ ಸೆರೆ ಹಿಡಿಯುತ್ತದೆ. ಇದಕ್ಕಾಗಿ ಚಿತ್ರ ನಿರ್ದೇಶಕರು, ಬೆಂಗಳೂರಿನಲ್ಲಿರುವ ವಿಧಾನಸೌಧದ ಎದುರು ತನ್ನ ಫೋಟೋ ತೆಗೆಸಿಕೊಳ್ಳಬೇಕೆನ್ನುವ ಚಿಕ್ಕ ಹುಡುಗನೊಬ್ಬನ ಸಣ್ಣ ಆಸೆಯ ಒಂದು ಸರಳ ಕಥೆಯ ಎಳೆಯನ್ನು ಬಳಸಿಕೊಂಡಿದ್ದಾರೆ.

ಫೋಟೋ ಚಿತ್ರದ ಒಂದು ದೃಶ್ಯ

ಉತ್ಸವ್ ಗೋನವಾರ ಅವರ ಚಿತ್ರದ ಹೆಗ್ಗಳಿಕೆ ಅವರು ಆರಿಸಿಕೊಂಡ ವಿಷಯ, ಕಥಾವಸ್ತುವಿನ ಸುತ್ತ ಹೆಣೆದ ನಿರೂಪಣೆ ಮತ್ತು ನಿರೂಪಣೆಗಾಗಿ ಅವರು ಬಳಸಿಕೊಂಡ ಕಲಾತ್ಮಕತೆಯಲ್ಲಿ ಅಡಗಿದೆ. ಇದು ಅವರ ಮೊದಲ ಚಿತ್ರ. ಬಹಳಷ್ಟು ಬಾರಿ ಹೊಸ (ಮತ್ತು ಯುವ) ನಿರ್ದೇಶಕರನ್ನು ಸಿನೇಮಾ  ತಂತ್ರಜ್ಞಾನವು  ಅತಿರಂಜಕವೂ  ಮತ್ತು ಅದೆಷ್ಟೋ ಬಾರಿ ಅನಗತ್ಯವೂ  ಎನ್ನಿಸುವ  ಕೌಶಲ್ಯ ಪ್ರದರ್ಶನಕ್ಕೆ ಆಮಿಶವೊಡ್ಡುತ್ತದೆ. ಮತ್ತು ರಾಜಕೀಯ ಸರಿತನ(political correctness)ದ ಅಬ್ಬರ ಮತ್ತು ಒತ್ತಡ ಹೆಚ್ಚಾಗಿರುವ ಈ  ಕಾಲದಲ್ಲಿ ‘ಫೋಟೋ’ ದಂತಹ ಕಥಾವಸ್ತು ಹೊಂದಿದ ಸಿನಿಮಾ ರಾಜಕೀಯ ಸರಿತನದ ಆಚೆಗಿನ ವಾಸ್ತವ ಮತ್ತು ಸತ್ಯವನ್ನು ಹಿಡಿಯಲು ಒಂದೋ ಹಿಂಜರಿಯುತ್ತದೆ, ಇಲ್ಲ ಸೋಲುತ್ತದೆ. ಆದರೆ ಈ ಚಿತ್ರದ ನಿರ್ದೇಶಕರು, ಈ ಎರಡೂ ಸಂಗತಿಗಳು ಕಲೆಗೆ / ಸಿನೆಮಾಗೆ ತರಬಹುದಾದ ಸೀಮಿತತೆಯನ್ನು ಸಲೀಸಾಗಿ ದಾಟಿರುವುದು ವಿಶೇಷ.

ಒಬ್ಬ ಬಾಲಕ, ಒಂದು ಫೋಟೋ ಮತ್ತು ಅಧಿಕಾರದ ಗದ್ದುಗೆ

ದುರ್ಗ್ಯಾ ಶಾಲೆಗೆ ರಜೆ ಸಿಗುವುದನ್ನೇ ಎದುರು ನೋಡುತ್ತಿದ್ದಾನೆ. ದೂರದ ಬೆಂಗಳೂರಿನಲ್ಲಿ ದಿನಗೂಲಿ ಕೆಲಸ ಮಾಡುವ ತನ್ನ ತಂದೆಯನ್ನು ಭೇಟಿ ಮಾಡುವ ಮತ್ತು ಅತೀ ಮುಖ್ಯವಾಗಿ ಬೆಂಗಳೂರಿನ ವಿಧಾನಸೌಧದ ಎದುರು ನಿಂತು ತನ್ನದೊಂದು ಫೋಟೋ ತೆಗೆಸಿಕೊಳ್ಳುವ ಆಸೆ ಅವನದ್ದು.  COVID -19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ಎರಡು ವಾರಗಳ ರಜೆಯನ್ನು ಘೋಷಿಸಲಾಗುತ್ತದೆ. ಶೀಘ್ರದಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ ಎನ್ನುವ ನಂಬಿಕೆ ಎಲ್ಲರದ್ದು. ಈ ಅಲ್ಪಾವಧಿಯ ರಜೆಯಲ್ಲಿ ಬೆಂಗಳೂರಿಗೆ ಹೋಗಬೇಕೆಂದು ದುರ್ಗ್ಯ ಹಠ ಹಿಡಿಯುತ್ತಾನೆ. ಲಾಕ್ ಡೌನ್ ಘೋಷಣೆಯ ಕೆಲವು ದಿನ ಮುನ್ನ  ದುರ್ಗ್ಯಾನನ್ನು ಕುಟುಂಬ ಸ್ನೇಹಿತರ ಜತೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ವಿಧಾನಸೌಧದ ಎದುರು ಫೋಟೋ ತೆಗೆಸಿಕೊಳ್ಳುವ ದುರ್ಗ್ಯಾನ ಆಸೆ ಮೊದಲಿಗೆ ಅವನ ತಂದೆಯ ಕೆಲಸದ ಒತ್ತಡದಿಂದಾಗಿ ಕೈಗೂಡದೆ, ನಂತರ ಲಾಕ್ ಡೌನ್ ಘೋಷಣೆಯಾಗುವುದರೊಂದಿಗೆ ಕಮರಿ ಹೋಗುತ್ತದೆ. ಕಾರಣ: ಲಾಕ್ ಡೌನ್ ಘೋಷಣೆಯಾದ ಕೂಡಲೇ ವಲಸೆ ಬಂದ ಕೆಲಸಗಾರರೆಲ್ಲ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗಿ ಹೋಗಬೇಕಾಗುತ್ತದೆ.

ಚಿತ್ರದ ಕೇಂದ್ರ ಕಥಾವಸ್ತು ಫೋಟೋ. ಚಿತ್ರದ ಆರಂಭದಲ್ಲಿ ದುರ್ಗ್ಯಾ ಗೋಡೆಗಳ ಮೇಲೆ ಫ್ರೇಮ್ ಹಾಕಿಸಿ ತೂಗು ಹಾಕಿರುವ ಚಿತ್ರಗಳನ್ನು ದಿಟ್ಟಿಸಿ ನೋಡುವುದನ್ನು ಪ್ರೇಕ್ಷಕರಾದ ನಾವು ನೋಡುತ್ತೇವೆ. ದುರ್ಗ್ಯಾ ಯಾಕೆ ಫೋಟೋಗಳನ್ನು ಕಂಡು ತನ್ನದೂ ಹಾಗೆಯೇ ಒಂದು ಫೋಟೋ ಹಿಡಿಸಿಕೊಳ್ಳಬೇಕೆನ್ನುವ ಅತೀವ ಆಸೆ ಎದೆಯೊಳಗೆ ಇಟ್ಟುಕೊಂಡಿದ್ದಾನೆ? ತನ್ನ ಗೆಳೆಯರ ನಡುವೆ ಅವನು  ಹೆಮ್ಮೆಪಟ್ಟುಕೊಳ್ಳಬಹುದಾದ ವಿಷಯ ಇದಾಗಿರುವುದು ಮತ್ತು ತಾನು ಫೋಟೋವೊಂದರ ಒಳಗೆ ಬಂಧಿಯಾದರೂ ಅದು ತನ್ನ ಸ್ನೇಹಿತರ ಬಳಗದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸುತ್ತದೆ ಎನ್ನುವ ಭಾವನೆ ಅವನ ಪುಟ್ಟ ತಲೆಯಲ್ಲಿ!

ಈಗಿನ ಸೆಲ್ಫೀ ಕಾಲದಲ್ಲಿ ಫೋಟೋ ತೆಗೆಸಿಕೊಳ್ಳುವುದು ಸುಲಭ ಸಾಧ್ಯ ಅನ್ನಿಸುವ ಸಾಮಾನ್ಯ ಸಂಗತಿಯಾಗಿದ್ದರೂ, ಈ ಅಸಮಾನ ಜಗತ್ತ್ತು ಎಲ್ಲರಿಗೂ ಸಮಾನವಾಗಿ ತಮ್ಮ ವೈಯಕ್ತಿಕ ಹಂಬಲ, ಗುರಿಗಳನ್ನು ಈಡೇರಿಸಲು ಅನುವು ಮಾಡಿಕೊಡುವುದಿಲ್ಲ ಎನ್ನುವುದನ್ನು ದುರ್ಗ್ಯಾನ ಕನಸು ಧ್ವಂಸಗೊಳ್ಳುವುದು ಜಾಹೀರುಪಡಿಸುತ್ತದೆ. ಅಧಿಕಾರದ ಗದ್ದುಗೆಗೆ ಹತ್ತಿರ ನಿಂತು ಫೋಟೋ ತೆಗೆಸಿಕೊಳ್ಳುವ ಅವಕಾಶವು ದುರ್ಗ್ಯಾನಿಗೆ ಕೇವಲ ಗೆಳೆಯರ ಮನ್ನಣೆ ತನಗೆ ಸಿಗಬೇಕೆನ್ನುವ ಬಯಕೆ ಮಾತ್ರವಲ್ಲ, ಅದು ತನ್ನ ಘನತೆಯನ್ನು ಪಡಕೊಳ್ಳುವ ಪ್ರಯತ್ನವೂ ಹೌದು.

ಚಿತ್ರದ ಕಥೆಯು, ಮೊದಲಿಗೆ ದುರ್ಗ್ಯಾನ ಆಸೆಯ ಜಾಡನ್ನು ಹಿಂಬಾಲಿಸಿಕೊಂಡು ಹೋಗುತ್ತದೆ. ಆದರೆ ಧಿಡೀರ್ ಎಂದು ತನ್ನ ಹರಿವಿನ ದಿಕ್ಕನ್ನೇ ಬದಲಾಯಿಸಿ ದುರ್ಗ್ಯಾನ ತಂದೆಯ  ತನ್ನ ಹಳ್ಳಿಗೆ ಮರಳುವ ಬಯಕೆಯ ಬೆನ್ನು ಹತ್ತುತ್ತದೆ . ಕಥಾನಿರೂಪಣೆಗೆ ಎಲ್ಲೂ ಧಕ್ಕೆ ಬಾರದಂತೆ ಈ ಪಲ್ಲಟ ನಿರೂಪಿತವಾಗಿದೆ ಎಂಬುದು ಪ್ರಶಂಸನೀಯ. ಚಿತ್ರದ ಮುಖ್ಯ ಪಾತ್ರಗಳ ಬದುಕಿನ ದಿಕ್ಕುಗಳೂ ಹೀಗೆಯೇ ಹಠಾತ್ ಆಗಿ ಬದಲಾಗಿರುವುದಕ್ಕೆ ಕತೆಯ ಈ ಅನಿರೀಕ್ಷಿತ ತಿರುವು ಸಾಕ್ಷಿಯಾಗಿದೆ. ಅಚಾನಕ್ ಆಗಿ ಹೇರಲ್ಪಟ್ಟ ಲಾಕ್ ಡೌನ್ ಸಮಯದಲ್ಲಿ ತುರ್ತಾಗಿ ಮನೆಗೆ ಮರಳಬೇಕಾದದ್ದು, ಹಾಗೆ ಮರಳಲು ಸವೆಸಿದ ಹಾದಿ ಚಿತ್ರದ ಮುಖ್ಯ ಕತೆ. ಇಲ್ಲಿ ಚಲನಚಿತ್ರದ ಪಾತ್ರಗಳ ಜೀವನದಲ್ಲಿ ಘಟಿಸುವ ಸಂಗತಿಗಳನ್ನ ಹೇಳುತ್ತಲೇ ಗೋನವಾರ ಅವರ ಸಿನಿಮಾ  2020ರ  ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು  ದಯನೀಯ ಪರಿಸ್ಥಿತಿಯಲ್ಲಿ ನಡೆಸಿದ ಬಹು ದೊಡ್ಡ ಪಯಣದ ಕತೆಯನ್ನೂ ಬಿಂದು ರೂಪದಲ್ಲಿ ಹೇಳುತ್ತದೆ.

ಪ್ರಯಾಣವು ಪ್ರಯಾಸಕರ ಅಷ್ಟೇ ಅಲ್ಲ ದುರಂತ ಅಂತ್ಯವನ್ನೂ ಕಾಣುತ್ತದೆ. ಈ ದೇಶದ ಜನರು ತಮ್ಮ ‘ಆಕಸ್ಮಿಕ ಜನನ’ದ ದುರಂತವನ್ನು (ತಮ್ಮ ಇಚ್ಚೆಯಿಲ್ಲದೇ ಒಂದು ಜಾತಿಯಲ್ಲಿ, ಒಂದು ಧರ್ಮದಲ್ಲಿ ಹುಟ್ಟಿರುವ ತಪ್ಪಿಗಾಗಿ) ಮೀರಲು ಸಾಧ್ಯವಾಗದೆ ಇರುವಾಗ, ಅಂಚಿಗೆ ತಳ್ಳಲ್ಪಟ್ಟಿರುವ ದುರ್ಗ್ಯಾ ಮತ್ತವನ ತಂದೆಯ ಬದುಕಿನ ಹಾದಿ ದುರಂತವಲ್ಲದೆ ಬೇರೆ ಯಾವ ಬಗೆಯಲ್ಲಿ ಕೊನೆಯಾಗಲು ಸಾಧ್ಯ? ಜನನ ಮತ್ತು ಮರಣಗಳೆಂಬ ಆಕಸ್ಮಿಕಗಳ ನಡುವಿನ ಜೀವನ ಯಾತನಾಮಯವೂ , ಮಾರಣಾಂತಿಕವೂ ಆಗಲು ಕಾರಣ ಈ ಸಮಾಜದ ರಚನೆ, ಇಲ್ಲಿನ ವ್ಯವಸ್ಥೆ. ‘ಫೋಟೋ’ ಚಿತ್ರವು ಈ ರಚನೆಯ ಕಟ್ಟುವಿಕೆಯನ್ನು ಬಿಡಿಸಿ ತೋರಿಸುತ್ತದೆ ಮತ್ತು ವ್ಯವಸ್ಥೆಯ ವ್ಯವಸ್ಥಿತ ಹಿಂಸೆಯ ಮುಖವನ್ನು ತಂದೆ- ಮಗನ ದುರಂತ ಕಥೆಯ ಮೂಲಕ ಹೇಳುತ್ತದೆ.

ದೃಶ್ಯ ಜೋಡಣೆ, ಲಯ ಬದ್ಧತೆ ಮತ್ತು ಸ್ಥಿತಪ್ರಜ್ಞತೆ

ಆಸೆ, ಹತಾಶೆ ಮತ್ತು ವಿನಾಶ – ಈ ಮೂರು ಭಾವಗಳು ಸಿನೆಮಾದ ಕೇಂದ್ರವಾಗಿದ್ದು, ಇವನ್ನು ಬಹು ಘನತೆಯಿಂದ ಮಾತ್ರವಲ್ಲ ಸಿನಿಮೀಯವಾಗಿಯೂ (ಸಿನಿಮಾದ ವ್ಯಾಕರಣವನ್ನು ಸಶಕ್ತವಾಗಿ ಬಳಸಿಕೊಂಡು) ಚಿತ್ರಿಸಲಾಗಿದೆ. ದೃಶ್ಯಕಟ್ಟುವಿಕೆಯ ಮಿಸ್-ಆನ್-ಸೆನ್ ( mise en scene ) ಮತ್ತು ದೃಶ್ಯ ಸಂಯೋಜನೆ – ಯನ್ನು ಬಳಸಿಕೊಂಡಿರುವ ರೀತಿ ಕತೆಯ ನಿರೂಪಣೆಗೆ ಪೂರಕವಾಗಿದೆ ಮತ್ತು ಅರ್ಥಪೂರ್ಣವೂ, ಪರಿಣಾಮಕಾರಿಯೂ ಆಗಿದೆ.

ಚಿತ್ರದ ಆರಂಭದಲ್ಲಿ ನಾವು ಪಾತ್ರಗಳನ್ನು ಸಮೀಪ ಚಿತ್ರದಲ್ಲಿ (ಕ್ಲೋಸ್ ಅಪ್) ಬಹು ಹತ್ತಿರದಿಂದ ಕಾಣುತ್ತೇವೆ. ಚಿತ್ರದ ಕತೆಯು ಬೆಂಗಳೂರನ್ನು ತಲುಪುತ್ತಿದ್ದಂತೆ, ದೃಶ್ಯದ ಚೌಕಟ್ಟು (ಫ್ರೇಮ್) ವಿಸ್ತಾರವಾಗಿ ಪಾತ್ರಗಳು ಅದರೊಳಗೆ ಕಿರಿದಾಗುತ್ತವೆ. ಪಾತ್ರಗಳು ಬೆಂಗಳೂರನ್ನು ದಾಟಿ ಹೋದಂತೆಲ್ಲಾ ವಿಸ್ತಾರವಾದ ಚೌಕಟ್ಟಿನೊಳಗೆ ಖಾಲಿ ಪ್ರದೇಶ ಹೆಚ್ಚುತ್ತಾ ಹೋಗಿ ಪಾತ್ರಗಳು ಕಿರಿದಾಗುತ್ತಾ, ಏಕಾಂಗಿಯಾಗುತ್ತಾ, ಅಸಹಾಯಕರಾಗಿ ಕಾಣುತ್ತವೆ. ಕತೆಯು ಕೈಮೀರಿ ದುರಂತದೆಡೆಗೆ ಹೋಗುತ್ತಿದ್ದಂತೆ, ದೃಶ್ಯಗಳು ಹೆಚ್ಚು ಹೆಚ್ಚಾಗಿ ಏರಿಯಲ್ ಶಾಟ್-ಗಳನ್ನು ಬಳಸಿ ವಿಸ್ತಾರಗೊಂಡು, ಪಾತ್ರಗಳು ಧೂಳಿನ ಕಣಗಳಂತೆ ಭಾಸವಾಗಿ, ಪಾತ್ರಗಳು ಅದೃಶ್ಯವಾದವೋ ಎಂದನಿಸಿಬಿಡುತ್ತದೆ. ಕೊನೆಯಲ್ಲಿ ದುರಂತ ಸಂಭವಿಸಿದಾಗ, ಚಿತ್ರವು ಪ್ರಾರಂಭದ ದೃಶ್ಯಚೌಕಟ್ಟಿನ  ಸಂಯೋಜನೆಗೆ ಮರಳುತ್ತದೆ. ಚಿತ್ರದ ದೃಶ್ಯಕಟ್ಟುವಿಕೆಯ ಈ ವಿನ್ಯಾಸ ಸಿನಿಮಾದ ಆಳವನ್ನು, ವಿಸ್ತಾರವನ್ನು ಹೆಚ್ಚಿಸುತ್ತದೆ. ಈ ವಿನ್ಯಾಸ ರಚಿಸಿರುವ ದಿನೇಶ್ ದಿವಾಕರನ್ ಛಾಯಾಗ್ರಹಣ ನಿರ್ದೇಶಕರಾಗಿ ಅರ್ಹ ಪ್ರಶಂಸೆ ಗಳಿಸುತ್ತಾರೆ.

ಐತಿಹಾಸಿಕ ನಾಟಕೀಯ ಸನ್ನಿವೇಶವನ್ನು (ಪಾಂಡೆಮಿಕ್- ಲಾಕ್ ಡೌನ್) ಆಯ್ದುಕೊಂಡ  ‘ಫೋಟೋ’ ಆ ಸನ್ನಿವೇಶದ ಗಂಭೀರತೆಯನ್ನು ಮೆಲುಗೊಳಿಸದೆ, ಅದರ  ನಾಟಕೀಯತೆಯನ್ನು ರೋಚಕಗೊಳಿಸದಂತೆ ತೆರೆದುಕೊಳ್ಳುತ್ತದೆ . ಈ ನಾಟಕೀಯ ಸಂದರ್ಭ ಇತ್ತೀಚಿನ ಇತಿಹಾಸವಾದರೂ ಸಿನಿಮಾ ಮಾಹಿತಿಗಳ ಭಾರ ತೊರೆದು, ಅರಳಿದೆ. ಕಳಕಳಿ ತೋರುವ ಭರದಲ್ಲಿ ಪಾತ್ರಗಳ ಬದುಕಿನೊಳಕ್ಕೆ ಅಕ್ರಮ ಪ್ರವೇಶ ಮಾಡದೆ ಇರುವುದು ನಿರ್ದೇಶಕನ ಸೂಕ್ಷಮತೆಯನ್ನು ಮತ್ತು ಮಾಧ್ಯಮದ ಮೇಲೆ ಅವರಿಗಿರುವ ಹಿಡಿತವನ್ನು ತೋರುತ್ತದೆ. ಇದಕ್ಕೊಂದು ಉದಾಹರಣೆ ನೋಡಿ:  ಪೊಲೀಸ್ ಅಪ್ಪಣೆಯ ಕಾರಣ ದುರ್ಗ್ಯಾ ಮತ್ತು ಅವನ ತಂದೆಯನ್ನು ತುಸು ದೂರ ಡ್ರಾಪ್ ಮಾಡುವ ಕಾರ್ ಮಾಲೀಕ, ಅವರಿಬ್ಬರನ್ನು ಕಾರಿನಿಂದ ಕೆಳಗಿಳಿಸುವ ಮುನ್ನ ತಾನು ಹೇಗೆ ಬಡಪಾಯಿಗಳಿಗೆ ಡ್ರಾಪ್ ಕೊಟ್ಟೆ, ಅದೂ ಲಾಕ್ ಡೌನ್ ಸಂದರ್ಭದಲ್ಲಿ, ಎಂದು ಒಂದು ‘ರೀಲ್’ ಮಾಡುತ್ತಾನೆ. ಆ ವಿಡಿಯೋ ಮಾಡುವ ಮುನ್ನ ದುರ್ಗ್ಯಾ ಮತ್ತು ಅವನ ತಂದೆಯ ಬಳಿ ತಲೆಕೂದಲು  ಕೆದರಿಕೊಳ್ಳಲು, ಶರ್ಟಿನ ಮೇಲಿನ ಗುಬ್ಬಿ ಬಿಚ್ಚಲು ಹೇಳುತ್ತಾನೆ. ಅದಕ್ಕೆ ಕಾರಣ- ಅವರು ದಯನೀಯವಾಗಿ ಕಂಡಷ್ಟು ಈತ ವಿಡಿಯೋದಲ್ಲಿ ಹೆಚ್ಚು ವಿಶಾಲಹೃದಯಿ, ದೀನಬಂಧುವಾಗಿ ಕಾಣಿಸುತ್ತಾನೆ. ಈ ದೃಶ್ಯ ಚಿತ್ರೀಕರಿಸಿರುವ ಬಗೆ ಎಷ್ಟು ಸೂಕ್ಷ್ಮವಾಗಿದೆ ಎಂದರೆ, ತಂದೆ ಹಾಗೂ  ಮಗ ತಮ್ಮ  ಶರ್ಟಿನ ಗುಬ್ಬಿ ಬಿಚ್ಚಿ ತಲೆಗೂದಲು ಕೆದರಿಕೊಂಡು ಅಸಹಾಯಕರಾಗುವುದು ಆ ಕಾರಿನ ಚಾಲಕ-ಮಾಲೀಕನ ಕ್ಯಾಮೆರಾ ನೋಡುತ್ತದೆಯೇ ಹೊರತು ಸಿನಿಮಾದ ಕ್ಯಾಮೆರಾವಲ್ಲ!

ಚಿತ್ರದ ಕಲಾತ್ಮಕ ಯಶಸ್ಸಿಗೆ ದೃಶ್ಯಗಳ ಹರಿವಿನ ಲಯ ಸಹ ಕಾರಣವಾಗಿದೆ. ತುರ್ತಿನ ವಿಷಯವನ್ನು ಅವಸರವಿಲ್ಲದೆ ಕತೆ ಹೇಳುತ್ತದೆ. ಪ್ರತಿ ದೃಶ್ಯದ ಒಳಗಿನ ಲಯ, ದೃಶ್ಯಗಳ ಹರಿವಿನ ಲಯ ಸಾಧಿಸಿರುವ ಸ್ಥಿತಪ್ರಜ್ಞತೆ (ಠಹರಾವ್) ಪಾತ್ರಗಳ ಒಳಜಗತ್ತನ್ನು ಮಾತ್ರ ಕಾಣಿಸುವುದಲ್ಲ, ಪಾತ್ರಗಳನ್ನು  ಆ ದುರಾಷ್ಟಕರ ಪ್ರಯಾಣವನ್ನು ಕೈಗೊಳ್ಳುವಂತೆ ಮಾಡಿದ ವ್ಯವಸ್ಥೆಯ ಮುಖವೂ ಕಾಣಿಸುತ್ತವೆ. ನಿರ್ದೇಶಕ ಮತ್ತು ಸಂಕಲನಕಾರ ಶಿವರಾಜ್ ಮೇಹು ಜೊತೆಗೂಡಿ ಹಿಡಿದಿರುವ ಈ ಲಯ ಪ್ರಶಂಸಾರ್ಹ. ಈ ಬಗೆಯಲ್ಲಿ ಚಲನಚಿತ್ರದ ರಾಜಕೀಯ ಅಂಶವು ಕೇವಲ ಕಥೆಯ ವಸ್ತು ಮಾತ್ರವೇ ಆಗದೆ ಕಥೆಯನ್ನು ಹೇಳುವ ತಂತ್ರಗಾರಿಕೆ ಮತ್ತು ಕಲಾತ್ಮಕತೆಯ ಭಾಗವೂ ಆಗಿದೆ. ‘ಫೋಟೋ’ ಈ ದೃಷ್ಟಿಯಲ್ಲಿ ರಾಜಕೀಯಪ್ರಜ್ಞೆಯ ಸೃಜನಶೀಲತೆ ಮತ್ತು ಸೃಜನಶೀಲ ರಾಜಕೀಯವಾಗಿ ಮೂಡುತ್ತದೆ.

ರಾಜಕೀಯ ಸರಿತನದ ಬದಲು ರಾಜಕೀಯ ಪ್ರಜ್ಞೆ

ಚಿತ್ರ ನಿರ್ದೇಶಕನ ರಾಜಕೀಯ ಪ್ರಜ್ಞೆಯ ಮೊನಚು ನಮಗೆ ಸಣ್ಣ ಸಣ್ಣ ವಿವರಗಳಲ್ಲಿ ತಿಳಿದುಬಿಡುತ್ತದೆ. ಉದಾಹರಣೆಗೆ ಈ ದೃಶ್ಯದಲ್ಲಿ: ಲಾಕ್ ಡೌನ್ ಘೋಷಣೆಯಿಂದಾಗಿ ಇತರ ಸ್ಥಳಗಳಿಂದ ಹಿಂತಿರುಗಿ ಬರುತ್ತಿರುವವರನ್ನು ತಡೆಯಲು ತಮ್ಮ ಗ್ರಾಮಕ್ಕೆ ಬೇಲಿ ಹಾಕಲಾಗಿರುವ ವಿಷಯವನ್ನು ಟಿವಿ ನ್ಯೂಸ್ ನಿಂದ ತಿಳಿದುಕೊಂಡ ಪಾತ್ರವೊಂದು ಸಿಟ್ಟಾಗುತ್ತದೆ. ಊರಿನ ಜಮೀನ್ದಾರರು ಏಕಾಏಕಿಯಾಗಿ ಈ ನಿರ್ಧಾರವನ್ನು ತೆಗೆದುಗೊಂಡಿದ್ದಾರೆಂದು ಆತನ ಬಳಿ ಕುಳಿತ ಪರಿಚಯಸ್ಥ ತಿಳಿಸುತ್ತಾರೆ. ಈ ದೃಶ್ಯವು ಊಳಿಗಮಾನ್ಯ ವ್ಯವಸ್ಥೆಯ ಒಂದು ಸಣ್ಣ ತುಣುಕನ್ನು ತೋರಿಸುತ್ತದೆ. ಅದೇ ಪಾತ್ರ ಟಿವಿ ನೋಡುತ್ತಿರುವಾಗ ಕುರ್ಚಿಯ ಮೇಲೆ ಕೂತು ಊಟ ಮಾಡುತ್ತಿದ್ದಾರೆ, ಆತನ ಹೆಂಡತಿ ಅಲ್ಲೇ ಅಡುಗೆಮನೆಯಲ್ಲಿ ರೊಟ್ಟಿ ತಟ್ಟುತ್ತಿರುತ್ತಾಳೆ. ಮುಂದೆ ಊರಿಗೆ ಹಾಕಿದ ಬೇಲಿಯನ್ನು ತೆಗೆಯಲು ಹೋದ ಅದೇ ಪಾತ್ರ ಜಮೀನ್ದಾರರ ಜನರನ್ನು ಉದ್ದೇಶಿಸಿ “ಹಿಂದೆಲ್ಲ ನಿಮ್ಮ ಮುಕ್ಲಿ ತೊಳಿತ್ತಿದ್ದೆವು ಅಂತ ಈಗಲೂ ನಿಮ್ಮ ಮಾತು ಕೇಳುತ್ತೇವೆಯೇ?” ಎಂಬರ್ಥದ ಮಾತನ್ನಾಡಿದರೆ, ಇನ್ನೊಂದೆಡೆ ದುರ್ಗ್ಯಾ ದಾರಿ ಪಕ್ಕದಲ್ಲಿ ಸಂಡಾಸ್ ಮಾಡುವಾಗ ಪೊಲೀಸರ ದಾಳಿಗೆ ಹೆದರಿದ ತಂದೆ ದುರ್ಗ್ಯಾ ಮುಕ್ಲಿ ತೊಳೆದುಕೊಳ್ಳುವ ಮೊದಲೇ ಅವನನ್ನು ಎತ್ತಿಕೊಂಡು ಓಡತೊಡಗುತ್ತಾನೆ. ಒಂದು ಕಡೆ ಯಾರದ್ದೋ ಮುಕ್ಲಿ ತೊಳೆಯುವುದರಿಂದ ಬಿಡುಗಡೆ ಪಡೆದಿದ್ದರೂ, ಇಲ್ಲಿ ತಮ್ಮ ಮುಕ್ಲಿಯನ್ನೂ ತೊಳೆದುಕೊಳ್ಳಲಾಗುತ್ತಿಲ್ಲ. ಜಾತಿ ಪದ್ಧತಿ, ಊಳಿಗಮಾನ್ಯ ಪದ್ಧತಿ ತನ್ನ ಹಿಡಿತ ಕಳೆದುಕೊಳ್ಳುತ್ತಿರುವುದನ್ನು ಒಂದು ಕಡೆ ಕಂಡರೆ, ಪ್ರಭುತ್ವ ಜನರ ಮೇಲೆ ಭಯಭೀತ ಹಿಡಿತ ಕಾಯ್ದುಕೊಂಡಿರುವುದನ್ನು ಇನ್ನೊಂದೆಡೆ ಕಾಣುತ್ತೇವೆ. ಇವು ಇಡೀ ವ್ಯವಸ್ಥೆಯ ವಿಪರ್ಯಾಸವನ್ನೂ ದ್ವಂದ್ವವನ್ನೂ ಬೆತ್ತಲು ಮಾಡಿಡುತ್ತದೆ.

ಚಿತ್ರದ ಕೇಂದ್ರ ವಿಷಯ ಲಾಕ್ ಡೌನ್ ಸಮಯದಲ್ಲಿ ವಲಸಿಗರ ವಲಸೆ ಮತ್ತು ಅದು ಬೊಟ್ಟು ಮಾಡಿ ತೋರಿಸಿದ ರಾಜ್ಯ ಮತ್ತು ಜನತೆಯ ನಡುವಿನ ಅಸಮತೋಲನ ಆಗಿದ್ದರೂ ಚಿತ್ರ ನಿರ್ದೇಶಕ ಅದರ ಜತೆಜತೆಗೆ ಹಳ್ಳಿಗಳಲ್ಲಿನ  ಜಾತಿ ರಾಜಕೀಯ, ಮನೆಯೊಳಗಿನ ಲಿಂಗಾಧಾರಿತ ರಾಜಕೀಯ, ವರ್ಗ ರಾಜಕೀಯ ಮುಂತಾದ ಇತರ ಮುಖ್ಯ ಸಂಗತಿಗಳ ಕಡೆಗೂ ಗಮನ ಹರಿಸುತ್ತಾರೆ. ಹಾಗೆಂದು ಫ಼್ರೇಮ್ ನಲ್ಲಿರುವ ಎಲ್ಲದರ ಬಗ್ಗೆ ತಮ್ಮ ಟಿಪ್ಪಣಿಯನ್ನು ಕೊಡುವುದಿಲ್ಲ ಬದಲಾಗಿ ನಾಜೂಕಿನಿಂದ ಈ ಎಲ್ಲವನ್ನು ಅಚ್ಚುಕಟ್ಟಾಗಿ ದೃಶ್ಯಗಳಲ್ಲಿ ಹೆಣೆದಿಡುತ್ತಾರೆ.

ಚಿತ್ರದ ರಾಜಕೀಯವು ಅಸ್ಪಷ್ಟವಾಗಿಲ್ಲ. ಆದರೂ ಅದು ತನ್ನ ರಾಜಕೀಯವನ್ನು ಬೊಬ್ಬಿಡುವುದಿಲ್ಲ, ತನ್ನ ಸಂದೇಶವನ್ನು ತನ್ನ ನಿಲುವನ್ನು ಮೇಲೆ ಹೇರುವುದಿಲ್ಲ.

ದುರ್ಗ್ಯಾನ ತಂದೆ ಮತ್ತು ಇತರ ಕಾರ್ಮಿಕರಿಗೆ ಜನತಾ ಕರ್ಫ಼್ಯೂ ಜಾರಿಗೆ ಬಂದಿರುವ ವಿಷಯವು ತಮ್ಮ ಸುತ್ತಮುತ್ತಲಿನವರು ‘ಥಾಲೀ’ ಬಡಿಯುವ ಮೂಲಕವೇ ಗೊತ್ತಾಗುತ್ತದೆಯೇ ಹೊರತು ಅದರ ಮೊದಲು ಪ್ರಧಾನಿ ಮೋದಿ ಅದನ್ನು ಘೋಷಿಸಿದಾಗ ಅಲ್ಲ. ಈ ಘಟ್ಟದಲ್ಲಿ ರಾಜಕೀಯ ಸರಿತನದ ಅನುಯಾಯಿಯಾಗಿರುವ ಬೇರೆ ಯಾರೇ ನಿರ್ದೇಶಕರು , ” ಗೋ, ಕೊರೋನ, ಗೋ!” ಎಂಬ ಬುದ್ಧಿಗೆಟ್ಟ ಘೋಷಣೆ ಪಠಿಸಿದವರನ್ನು ಅಪಹಾಸ್ಯ ಮಾಡುತ್ತಿದ್ದರೋ ಏನೋ. ಆದರೆ ‘ಫೋಟೋ’ ಚಿತ್ರದ ನಿರ್ದೇಶಕ ಉತ್ಸವ್, ದೃಶ್ಯಗಳನ್ನು ಬಹಳ ಸಮರ್ಥವಾಗಿ ನಿಭಾಯಿಸುತ್ತಾರೆ. ಪರಿಸ್ಥಿತಿಯ ವಿಪರ್ಯಾಸವನ್ನು ಬಹಿರಂಗಪಡಿಸುವಾಗಲೂ ಕುಹಕವಾಡದೆಯೇ ವರ್ಗ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾರೆ. ನೈತಿಕ ಅಹಂ ಇಲ್ಲದ ಚಿತ್ರದ ಈ ನಡೆ, ರಾಜಕೀಯ ಸರಿತನದ ಬದಲು ರಾಜಕೀಯ ಪ್ರಜ್ಞೆಯಿಂದ ಕೂಡಿದ್ದು ಎನ್ನುವುದಕ್ಕೆ ಸಾಕ್ಷಿ.

ಈ ಪ್ರಜ್ಞೆಯೇ ಉತ್ಸವ್ ಅವರು ತಮ್ಮ ಪಾತ್ರಗಳನ್ನು ಮಾನವೀಯಗೊಳಿಸುವಂತೆ ಮಾಡಿರುವುದು. ಕೆಲವು ಪೋಲೀಸ್ ಸಿಬ್ಬಂದಿ ಕ್ರೂರಿಗಳಾಗಿದ್ದರೆ, ಇಬ್ಬರು ಪೋಲೀಸರು ಮುಖ್ಯ ಪಾತ್ರಗಳಿಗೆ ಸಹಾಯ ಮಾಡುವದನ್ನೂ ನೋಡುತ್ತೇವೆ. ಕೆಲವು ದಾರಿಹೋಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದೂರವೇ ಉಳಿಯುವುದನ್ನು ಹಾಗೂ ಮತ್ತೆ ಕೆಲವರು ತಂದೆ ಮಗನಿಗೆ ಸಹಾಯವನ್ನು ತಲುಪಿಸುವಲ್ಲಿ ನೆರವಾಗುತ್ತಾರೆ. ಹೀಗೆ ಜನರಲ್ಲಿನ ಸಹಜ ಸ್ವಾರ್ಥ ಹಾಗೂ ನಿಸ್ವಾರ್ಥತೆಯು ಒಂದನ್ನೊಂದು ಬೆಸೆದುಕೊಂಡಿರುವುದು, ಚಿತ್ರದ ಪಾತ್ರಗಳನ್ನು ನಿಜದ ಜಗತ್ತಿಗೆ ಹತ್ತಿರವಾಗಿಸುತ್ತವೆ. ಚಿತ್ರವನ್ನು ಮಾನವೀಯ ಮತ್ತು ನಂಬಲರ್ಹಗೊಳಿಸುತ್ತವೆ.

ಒಂದು ದೃಶ್ಯ ಹೀಗಿದೆ- ಬರಡು ಭೂಮಿಯ ಹಿನ್ನೆಲೆ, ಆ ಕ್ಷಣದ ಬಿಸಿಲಿನ ಝಳಕ್ಕೆ ಎಲ್ಲಾ ಮಬ್ಬು ಮಬ್ಬು. ತಂದೆಯು ಫ಼್ರೇಮಿನ ಎಡದಿಂದ ಬಲಕ್ಕೆ ಕುಂಟುತ್ತಾ ನಿರ್ಗಮಿಸುವುದನ್ನು ನೋಡುತ್ತೇವೆ. ತಂದೆ ಬಲ ತುದಿಯಿಂದ ಹೊರ ಹೋದ ಸ್ವಲ್ಪ ಹೊತ್ತಿನ ನಂತರ ಮಗ ದುರ್ಗ್ಯಾ ನಿಧಾನವಾಗಿ ಎಡತುದಿಯಿಂದ ಫ್ರೇಮ್ ಅನ್ನು ಪ್ರವೇಶಿಸಿ ನಡೆದು ಮತ್ತೆ ಬಲ ತುದಿಯಿಂದ ನಿರ್ಗಮಿಸುತ್ತಾನೆ. ತಂದೆಯ ನಿಧಾನಗತಿಯು ದೈಹಿಕ ಆಯಾಸದಿಂದ ಆದದ್ದಾದರೆ. ಮಗನದ್ದು ದೈಹಿಕ ಮತ್ತು ಮಾನಸಿಕ ಘಾಸಿ ಇವೆರಡೂ ಒಟ್ಟಾಗಿ ಉಂಟಾಗಿರುವಂತದ್ದು. ಚಿತ್ರದ ಕುಸುರಿಯಲ್ಲಿ, ಭೌತಿಕ ಮತ್ತು ಭಾವನಾತ್ಮಕ ಪ್ರಪಂಚಗಳನ್ನು (ಬಾಹ್ಯ ಮತ್ತು ಆಂತರಿಕ) ಸಲೀಸಾಗಿ ಒಂದಕ್ಕೊಂದು ಬೆಸೆದಿರುವುದನ್ನು ಈ ದೃಶ್ಯವು ಧೃಢಪಡಿಸುತ್ತದೆ. ಮಾನವ ಪ್ರಪಂಚದ ವಿಭಿನ್ನ ವಾಸ್ತವಗಳನ್ನು, ಮಾನವ ಅಸ್ತಿತ್ವದ ವಿಭಿನ್ನ ಒಳತೋಟಿಗಳನ್ನು ನಿರ್ದೇಶಕರು ಎಷ್ಟು ಅಚ್ಚುಕಟ್ಟಾಗಿ ಹೆಣೆದಿದ್ದಾರೆ ಎನ್ನುವುದಕ್ಕೆ ಈ ದೃಶ್ಯವೇ ನಿದರ್ಶನ.

ಸಿನೆಮಾದ ಅಂತ್ಯ ಭಾಗದಲ್ಲಿ ಮೇಲ್ನೋಟಕ್ಕೆ ಅಸಹನೀಯವಾದ ಬಿಸಿಲಿನ ಶಾಖದಿಂದಾಗಿ ದುರಂತವೊಂದು ನಡೆಯಿತು ಎಂದೆನಿಸುತ್ತದೆ. ವಿನಾಶಕ್ಕೆ ಕಾರಣವಾದ ಕೆಟ್ಟ ನಿರ್ಧಾರವನ್ನು ಕೈಗೊಂಡೆಯೆಂದು ತಂದೆ ತನ್ನನ್ನು ತಾನೇ ದೂಷಿಸುತ್ತಾನೆ. ಆದರೆ, ಆ ಹೊತ್ತಿಗಾಗಲೇ ತಂದೆ ಮಗನ ಜತೆ ಹೆಜ್ಜೆ ಹಾಕಿರುವ ನಮಗೆ, ಈ ದುರಂತ ಬೇರೆ ಯಾವುದೋ ದೊಡ್ಡ ಅಗೋಚರ (?) ಕಾರಣದಿಂದಾಗಿ ನಡೆದಿರುವುದು ಎನ್ನುವ ಅರಿವಾಗಿರುತ್ತದೆ. ಆ ಅಗೋಚರವಾದದ್ದು (ಮಾರಣಾಂತಿಕವಾಗಿ ರಚಯಿಸಲ್ಪಟ್ಟದ್ದು) ಏನು ಎಂಬುದು, ಚಲನಚಿತ್ರದ ರಾಜಕೀಯ ದೃಷ್ಟಿಕೋನ, ನಿರೂಪಣೆ ಮತ್ತು ದೃಶ್ಯಕಟ್ಟುವಿಕೆ ಆಗಲೇ ಬಹಿರಂಗಪಡಿಸಿಯಾಗಿದೆ. ಸಾಮಾನ್ಯ ತಂದೆ ಮಗನ ಕಥೆಯೊಂದನ್ನು ಹೇಳುವ ಮೂಲಕ, ‘ಫೋಟೋ’ , ಸ್ವತಂತ್ರ ಭಾರತದ ಚರಿತ್ರೆಯಲ್ಲೇ ಅತ್ಯಂತ ನಾಚಿಕೆಗೇಡು ಘಟನಾವಳಿಯ ಕಥೆಯನ್ನೂ ಸಹ ನಮಗೆ ಹೇಳುತ್ತದೆ.


ಅನುವಾದ : ಹೇಮಶ್ರೀ ಸಯ್ಯದ್ 

ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ. ಈಟಿವಿ-ಕನ್ನಡ, ದೂರದರ್ಶನ, ಕಸ್ತೂರಿ ಟಿವಿಚಾನೆಲ್‌ ಗಳ ಸುದ್ದಿ ವಿಭಾಗದಲ್ಲಿ ಕೆಲಸದ ಅನುಭವ. ಫ್ರೀಲಾನ್ಸರ್‌ ಆಗಿಯೂ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆ ಹವ್ಯಾಸ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ.


“ಫೋಟೋ”ದ ವಿಶೇಷ ಪ್ರದರ್ಶನ ಏರ್ಪಾಡಾಗಿದೆ. ಆಸಕ್ತರು ಗಮನಿಸಿ.!

ಸಮಯ: ಭಾನುವಾರ, 23 ಏಪ್ರಿಲ್, ಬೆಳಿಗ್ಗೆ ೧೦:೩೦ಕ್ಕೆ
ಸ್ಥಳ: ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ
ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

ಲಿಂಕ್ ಮೂಲಕ ಟಿಕೆಟ್ ಬುಕ್ ಮಾಡಿ.

https://ipaaka.com/pages/photo

ಈ ಪ್ರದರ್ಶನದ ವಿಶೇಷತೆಯೆಂದರೆ, ಚಿತ್ರ ಪ್ರದರ್ಶನದ ನಂತರ ನಿರ್ದೇಶಕರು ಮತ್ತು ಚಿತ್ರತಂಡದೊಂದಿಗೆ ಸಂವಾದ ನಡೆಸಲು ನಿಮಗೆ ಅವಕಾಶ ಸಿಗಲಿದೆ. ನೀವು ಬರಹಗಾರರಾಗಿದ್ದರೆ, ಚಲನಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದರೆ, ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು “ಫೋಟೋ” ಚಿತ್ರತಂಡದಿಂದ ಹೊಸ ಒಳನೋಟಗಳನ್ನು ಪಡೆಯಲು ಇದೊಂದು ಉತ್ತಮ ಅವಕಾಶ.

ಋತುಮಾನ ಒಂದು ಲಾಭರಹಿತ ಪ್ರಯೋಗ. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ