ಭಾರತೀಯ ವೈಜ್ಞಾನಿಕ ಸಂಸ್ಥೆಗಳಲ್ಲಿನ ವೈವಿಧ್ಯತೆ ಮತ್ತು ಜಾತಿ ಸಂಕೋಲೆ

ಭಾರತದ ಅತ್ಯುನ್ನತ ವೈಜ್ಞಾನಿಕ ಸಂಸ್ಥೆಗಳಲ್ಲಿ ಈಗಲೂ ಮೇಲ್ಜಾತಿಗಳು ಹೇಗೆ ತಮ್ಮ ಪ್ರಾಬಲ್ಯ ಸಾಧಿಸಿವೆ ಎಂಬುದನ್ನು ದತ್ತಾಂಶಗಳು ಸಾಬೀತುಪಡಿಸುತ್ತಿವೆ ಎಂಬುದನ್ನು ಈ ಸಂಶೋಧನಾ ಲೇಖನ ತೋರಿಸಿಕೊಡುತ್ತದೆ. ಈ ಲೇಖನವು ವಿವಿಧ ದೇಶಗಳಲ್ಲಿ ವಿಜ್ಞಾನದಲ್ಲಿ ಜನಾಂಗೀಯ ವೈವಿಧ್ಯತೆಯ ಡೇಟಾವನ್ನು ಪರಿಶೀಲಿಸುವ ನೇಚರ್ ವೈಜ್ಞಾನಿಕ ಜರ್ನಲ್ ನ ಸರಣಿಯ ಭಾಗವಾಗಿದೆ.

ಸಮಾಧಾನ್, ಪಶ್ಚಿಮ ಭಾರತದ ತನ್ನ ಹಳ್ಳಿಯೊಂದರ ಬಹಿಷ್ಕೃತ ಯುವಕ. ಕಳೆದ ವರ್ಷ ವಿಜ್ಞಾನದಲ್ಲಿ ಪಿ.ಹೆಚ್.ಡಿ. ಮಾಡಲು ಆ ಪ್ರದೇಶದಿಂದ ಆಯ್ಕೆಯಾದ ಮೊದಲನೆಯ ವ್ಯಕ್ತಿ. ಸದ್ಯ ಮಹಾರಾಷ್ಟ್ರದಲ್ಲಿ ಪಿ.ಹೆಚ್.ಡಿ. ಅಭ್ಯಾಸ ಮಾಡುತ್ತಿರುವ ಈತ ಭಾರತದ ನೆಲಮೂಲದ ಆದಿವಾಸಿ ಸಮುದಾಯಕ್ಕೆ ಸೇರಿದವ. ಅವರದು ಶೋಷಿತ ಮತ್ತು ತೀವ್ರ ಬಡತನ ಹೊಂದಿರುವ ಸಮುದಾಯ. ಇದೇ ಕಾರಣಕ್ಕೆ ಆತ ತನ್ನ ಕೊನೆಯ ಹೆಸರನ್ನು ಪ್ರಕಟಿಸಲು ಇಷ್ಟ ಪಡುವುದಿಲ್ಲ. ಜೊತೆಗೆ, ವಿಶಾಲವಾದ ಭಾರತೀಯ ವಿಜ್ಞಾನಿಗಳ ಗುಂಪಿನಲ್ಲಿ ತನ್ನ ಹೆಸರು ಎಲ್ಲಿ ತನ್ನ ಜಾತಿಯ  ಸಾಮಾಜಿಕ ಸ್ಥಾನಮಾನವನ್ನು ಎತ್ತಿ ತೋರಿಸಿಬಿಡುತ್ತದೆಯೋ ಎಂಬ ಆತಂಕವನ್ನು ಅವನು ವ್ಯಕ್ತಪಡಿಸುತ್ತಾನೆ. “ಅವರುಗಳಿಗೆ ನಾನು ಕೀಳು ಜಾತಿಯ ಹುಡುಗ ಎಂದು ತಿಳಿಯುವುದರ ಜೊತೆಗೆ ಈ ಮಟ್ಟಕ್ಕೆ ʼಕೋಟಾʼ ಮೂಲಕ ಏರಿ ಬಂದವನೆಂದು ಹೀಯಾಳಿಸಲು ಶುರು ಮಾಡುತ್ತಾರೆ” ಎನ್ನುತ್ತಾರೆ.

ಸೋನಾಜಾರಿಯಾ ಮಿಂಜ್ (ಮುಂಭಾಗ ಬಲದಲ್ಲಿ ), ಒಬ್ಬ ಆದಿವಾಸಿ, ಕಂಪ್ಯೂಟರ್ ವಿಜ್ಞಾನಿ ಮತ್ತು ದುಮ್ಕಾದಲ್ಲಿರುವ ಸಿಡೋ ಕನ್ಹು ಮುರ್ಮು ವಿಶ್ವವಿದ್ಯಾಲಯದ ಉಪಕುಲಪತಿ, ತಮ್ಮ ವಿದ್ಯಾರ್ಥಿ,ಸಹೋದ್ಯೋಗಿಗಳೊಂದಿಗೆ

ಸಮಾಧಾನ್ ಇಲ್ಲಿ ಹೇಳುತ್ತಿರುವುದು  ʼಕೋಟಾʼ ಎಂಬ ಮೀಸಲಾತಿ ನೀತಿಯ ಕುರಿತು. ಇದು 1950ರಲ್ಲಿ ಭಾರತ ಸಂವಿಧಾನದಲ್ಲಿ ರಚನೆಯಾದ ಒಂದು ಸಕಾರಾತ್ಮಕ ಕ್ರಮ. ಸರ್ಕಾರಿ ಹುದ್ದೆಗಳಲ್ಲಿ ಮತ್ತು ವಿಧ್ಯಾಭ್ಯಾಸದಲ್ಲಿ ಕೋಟಾ ನಿಗದಿ ಮಾಡುವ ಮೂಲಕ ಶೋಷಣೆಗೆ ಒಳಗಾದ ಜಾತಿಗಳ ಜನರಿಗೆ ಮೀಸಲಾತಿ ನೀಡಿ, ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದು ಮೀಸಲಾತಿ ನೀತಿಯ ಉದ್ದೇಶ. ಭಾರತದ ಜಾತಿ ಪದ್ಧತಿಯ ಸಾಮಾಜಿಕ ಶ್ರೇಣಿ ವ್ಯವಸ್ಥೆಯನ್ನು ಅವಲೋಕಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಸೇರಿದಂತೆ ಎಲ್ಲಾ ಉತ್ತಮ ಎನ್ನಬಹುದಾದ (white color jobs) ವೃತ್ತಿಗಳನ್ನು ಮೇಲ್ಜಾತಿಗಳೇ ಆಕ್ರಮಿಸಿಕೊಂಡಿವೆ. ಬಹಳಷ್ಟು ವರ್ಷಗಳ ನಂತರ ಭಾರತ ಸರ್ಕಾರ ಆದಿವಾಸಿಗಳಿಗೆ (ಸರಕಾರಿ ಕಡತಗಳ ಪ್ರಕಾರ ಪರಿಶಿಷ್ಟ ಪಂಗಡಗಳು) 7.5% ಕೋಟಾವನ್ನು ಮತ್ತು ಇನ್ನೊಂದು  ತುಳಿತಕ್ಕೊಳಗಾದ ಗುಂಪಾದ ದಲಿತರಿಗೆ(ಪರಿಶಿಷ್ಟ ಜಾತಿಗಳು- ಇದಕ್ಕೂ ಮುನ್ನ ಅಸ್ಪೃಶ್ಯರು ಎಂಬ ಅಮಾನವೀಯ ಪದದಿಂದ ಕರೆಯಲ್ಪಡುತ್ತಿದ್ದವರು) 15% ಮೀಸಲಾತಿಯನ್ನು ಘೋಷಣೆ ಮಾಡಿತು. ಈ ಮೀಸಲಾತಿಯು ಭಾರತದ ಎಲ್ಲಾ ಸಂಶೋಧನಾ ಸಂಸ್ಥೆಗಳಿಗೂ ಅನ್ವಯವಾದರೂ ಇತ್ತೀಚಿನ 2011ರ ಜನಗಣತಿಯ ಸರಾಸರಿಯಲ್ಲಿ  ಅಲ್ಲಿ  ಈ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ.

ಆದರೆ ಐತಿಹಾಸಿಕವಾಗಿ ವಿಶೇಷ ಸವಲತ್ತುಗಳನ್ನು ಅನುಭವಿಸಿಕೊಂಡು ಬಂದಂತಹ ಜಾತಿಗಳು – ಸರಕಾರಿ ಕಡತಗಳ ಪ್ರಕಾರ ʼಸಾಮಾನ್ಯ ವರ್ಗʼಗಳು- ಈಗಲೂ ಎಲ್ಲಾ ಅತ್ಯುನ್ನತ ಸಂಸ್ಥೆಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿವೆ. ಪಿ.ಹೆಚ್.ಡಿ ನಂತರದ ಮಟ್ಟದಲ್ಲಿ ಆದಿವಾಸಿ ಮತ್ತು ದಲಿತರ ಪ್ರಾತಿನಿಧ್ಯವಂತೂ ಪ್ರಪಾತಕ್ಕೆ ಇಳಿಯುತ್ತದೆ. ನೇಚರ್ ಪತ್ರಿಕೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ದೊರೆತ ದತ್ತಾಂಶಗಳ ಪ್ರಕಾರ ಭಾರತದ ಶ್ರೇಷ್ಠ ವಿಶ್ವವಿದ್ಯಾಲಯಗಳಾದ  23 ಐಐಟಿಗಳಲ್ಲಿ ಈ ಸಮುದಾಯಗಳ ಪ್ರೊಫೆಸರ್ ಗಳ ಪ್ರಾತಿನಿಧ್ಯ ಶೇ.1 ಕ್ಕಿಂತಲೂ ಕಡಿಮೆ! (ಉನ್ನತ ಸಂಸ್ಥೆಗಳಲ್ಲಿ ವೈವಿಧ್ಯತೆ  ಎಂಬ ಚಿತ್ರ ನೋಡಿ. ಇಲ್ಲಿನ ಅಂಕೆ ಸಂಖ್ಯೆಗಳು 2020 ರಲ್ಲಿ ಪಡೆದುಕೊಂಡಂತಹವು)

 

“ಇದು ಉದ್ದೇಶಪೂರ್ವಕ. ನಮ್ಮನ್ನು ಯಶಸ್ಸು ಗಳಿಸದಂತೆ ಈ ಸಂಸ್ಥೆಗಳು ತಡೆಯುತ್ತಿವೆ” , ಎಂದು ಇತ್ತೀಚೆಗಷ್ಟೇ ದೆಹಲಿ ವಿಶ್ವವಿದ್ಯಾಲಯದಿಂದ ನಿವೃತ್ತರಾದ,ಸ್ವತಃ ದಲಿತರಾದ ಹಿರಿಯ ಪ್ರೊಫೆಸರ್‌ ರಮೇಶ್‌ ಚಂದ್ರ ರವರು ತಮ್ಮ ಆಕ್ರೋಶ ಹೊರಹಾಕುತ್ತಾರೆ. ಹಲವು ಸಂಶೋಧಕರು, ಸರಕಾರದ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸದ ಈ ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳನ್ನು ಹಾಗೂ ಇವರುಗಳನ್ನು ತಮ್ಮ ಜಾತ್ಯಸ್ಥ ಮನಸ್ಸಿನ ಕೊಂಡಿಯಿಂದ ಹೊರತರದ  ಸರಕಾರಗಳ ಧೋರಣೆಯನ್ನು ದೂಷಿಸುತ್ತಾರೆ.

ವಿಜ್ಞಾನ ಕ್ಷೇತ್ರದಲ್ಲಿ ವೈವಿಧ್ಯತೆಯ ಅಂತರವು ಎಲ್ಲ ದೇಶಗಳಲ್ಲಿ ಸಾಮಾನ್ಯವೇ ಆದರೂ ಭಾರತದಲ್ಲಿ ಅದು ಬೇರೆಯದೇ ರೂಪ ಪಡೆಯುತ್ತದೆ. ಸಂಶೋಧನೆಯಲ್ಲಿ ಜಾಗತಿಕ ನಾಯಕನಾಗುವತ್ತ ಹೆಜ್ಜೆ ಇಡುತ್ತಿರುವ ಭಾರತದಲ್ಲಿ ಕೇವಲ ಜಾತಿಯ ಕಾರಣಕ್ಕಾಗಿ ಹೇಗೆ ಹಲವು ಗುಂಪಿನ ಜನರನ್ನು ವೈಜ್ಞಾನಿಕ ಅವಕಾಶಗಳಿಂದ ದೂರವಿಡಲಾಗುತ್ತಿದೆ ಎಂಬುದನ್ನು ಪರಿಸ್ಥಿತಿಯು ಎತ್ತಿ ತೋರಿಸುತ್ತಿದೆ. 

ಭಾರತ ಸರ್ಕಾರವು ವಿದ್ಯಾರ್ಥಿಗಳ ನೋಂದಣಿಯ ಸಾರಾಂಶವನ್ನು ಪ್ರಕಟಿಸಿದರೂ ಅದರಿಂದ ದೊರಕುವ ಅಂಕೆಗಳಿಂದ, ಶೈಕ್ಷಣಿಕ ಮಟ್ಟದಿಂದಾಚೆಗೆ ವಿಜ್ಷಾನಿಗಳ ಜಾತಿ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ವಿಶ್ಲೇಷಣೆ ಮಾಡಲು ಸಾಧ್ಯವಾಗುವುದಿಲ್ಲ. ಹಲವು ವಿಶ್ವವಿದ್ಯಾಲಯಗಳು ಈ ಮಾಹಿತಿಯನ್ನು ಪ್ರಕಟಿಸುವ ಗೋಜಿಗೂ ಹೋಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರು, ವಿದ್ಯಾರ್ಥಿಗಳ ಗುಂಪುಗಳು ಮತ್ತು ಸಂಶೋಧಕರು ಸಾರ್ವಜನಿಕ ಮಾಹಿತಿ ಕಾನೂನಿನ ಸಹಾಯದಿಂದ ವೈವಿಧ್ಯತೆಯ ಮಾಹಿತಿಯನ್ನು ಕ್ರೋಢೀಕರಿಸುತ್ತಿದ್ದು ಬದಲಾವಣೆಗೆ ಒತ್ತಾಯಿಸುತ್ತಿವೆ. ನೇಚರ್‌ ಪತ್ರಿಕೆಯು ಕೂಡಾ ಈ ದತ್ತಾಂಶಗಳನ್ನು ಮತ್ತು ಸ್ವಪ್ರಯತ್ನದಿಂದ ಪಡೆದುಕೊಂಡ ಮಾಹಿತಿಯನ್ನು ಉಪಯೋಗಿಸಿಕೊಂಡು ವೈವಿಧ್ಯತೆಯ ಚಿತ್ರಣವನ್ನು ನಿಕಶಕ್ಕೊಡ್ಡಿದೆ. ಒಟ್ಟಿನಲ್ಲಿ ಸದರಿ ದತ್ತಾಂಶಗಳ ಪ್ರಕಾರ ಭಾರತೀಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ವೈವಿದ್ಯತೆಯ ದೊಡ್ಡ ಅಂತರವಿರುವುದು ಸ್ಪಷ್ಟ.

ಪ್ರಾರಂಭಿಕ ಅಡೆತಡೆಗಳು:

ಸವಾಲು ಶಾಲೆಗಳಿಂದ ಶುರುವಾಗಿ ವಿಶ್ವವಿದ್ಯಾಲಯಗಳ ಪ್ರವೇಶಾತಿಯವರೆಗೆ ಜೊತೆಗೇ ಸಾಗುತ್ತದೆ. ಉನ್ನತ ಶಿಕ್ಷಣದ ಸರ್ವೆ ಪ್ರಕಾರ ಪದವಿ  ಕಾಲೇಜುಗಳಲ್ಲಿ ಆದಿವಾಸಿ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳ ಪ್ರಾತಿನಿಧ್ಯ ಕಲಾ ವಿಭಾಗಗಳಿಗೆ ಹೋಲಿಸಿದರೆ ವಿಜ್ಞಾನದ ಕೋರ್ಸುಗಳಲ್ಲಿ ಕಡಿಮೆ ಇದೆ. (ಭಾರತದ ಪದವಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಚಿತ್ರವನ್ನು ಗಮನಿಸಿ) 

ಇದರ ಅರ್ಥ ಕಲಾ ವಿಭಾಗಗಳು ಪ್ರಸಿದ್ಧಿ ಪಡೆದಿವೆ ಎಂದಲ್ಲ. ಈ ಮಕ್ಕಳು ಹೋಗುವ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿಜ್ಞಾನದ ಪರಿಣಿತಿ ಪಡೆದ ಮಾರ್ಗದರ್ಶಿಯಾಗಲಿ, ಆ ಸಮುದಾಯದ ಶಿಕ್ಷಕರಾಗಲಿ ಅವರಿಗೆ ದೊರೆಯುವುದಿಲ್ಲ. ಅದರಲ್ಲೂ ಆದಿವಾಸಿಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು ಎಂದು ಕಂಪ್ಯುಟರ್‌ ವಿಜ್ಞಾನಿ, ಈಶಾನ್ಯ ಭಾರತದ ಡುಮ್ಕದಲ್ಲಿ ಇರುವ ಸಿದೊ ಕನ್ಹು ಮುರ್ಮು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶ್ರೀಮತಿ ಸೊನಾಝಾರಿಯಾ ಮಿನ್ಜ಼ ಬೇಸರ ವ್ಯಕ್ತಪಡಿಸುತ್ತಾರೆ. ( ಅಂದಹಾಗೆ ಇವರು ಉಪ ಕುಲಪತಿ ಹುದ್ದೆ ಅಲಂಕರಿಸಿದ ಎರಡನೆಯ ಆದಿವಾಸಿ ಮಹಿಳೆ)

ಸಮಾಧಾನ್‌ ಹೇಳುವ ಪ್ರಕಾರ ಆತ 2009 ರಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನದ ಬದುಕನ್ನು ಶುರು ಮಾಡಿದಾಗ, ಮೇಲ್ಜಾತಿಯ ಸಹಪಾಠಿಗಳು ಈತನನ್ನೂ ಮತ್ತು ಇತರೆ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳನ್ನು “ಬಿಟ್ಟಿ ಜನ” ಎಂದು ಮೂದಲಿಸುತ್ತಿದ್ದರು.  ಇದು ಸರ್ಕಾರದ ಸವಲತ್ತುಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬಳಸುವ ಬೈಗುಳ. 

ಮತ್ತೊಂದು ಅಂಚಿನಲ್ಲಿರುವ ಸಮುದಾಯವಾದ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳು ಪದವಿ ಮಟ್ಟದ ವಿಜ್ಞಾನ ವಿಷಯಗಳಲ್ಲಿ 44% ಮತ್ತು ವೈದ್ಯಕೀಯ ವಿಜ್ಞಾನದಲ್ಲಿ 30% ಪ್ರಾತಿನಿಧ್ಯ ದಾಖಲಿಸಿದ್ದಾರೆ.  ದೇಶದ ಜನಗಣತಿಯು ಇವರನ್ನು ದಾಖಲು ಮಾಡಿಕೊಳ್ಳದ ಕಾರಣ ಭಾರತದ ಒಬಿಸಿ ಸಮುದಾಯದ ಸಂಖ್ಯೆಯ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ 2006ರ ಮನೆಗಣತಿಯ ಪ್ರಕಾರ ದೇಶದ ಜನಸಂಖ್ಯೆಯ 41% ಅನ್ನು ಒಬಿಸಿ ಗಳು ಪ್ರತಿನಿಧಿಸುತ್ತಾರೆ.  ( ಮೀಸಲಾತಿ ನೀತಿಯ ಪ್ರಕಾರ ವಿದ್ಯಾ ಸಂಸ್ಥೆಗಳು ಪ್ರವೇಶಾತಿ ಮತ್ತು ನೇಮಕಾತಿಯಲ್ಲಿ ಈ ಸಮುದಾಯಗಳಿಗೆ 27 % ಮೀಸಲಾತಿ ಒದಗಿಸಬೇಕು.)

2012ರಲ್ಲಿ ಸಮಾಧಾನ್‌ ದೇಶದ ಪಶ್ಚಿಮ ಭಾಗದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದಕ್ಕೆ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದ. ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳ ವೈವಿಧ್ಯತೆಯ ಮಟ್ಟವು ಪದವಿ ಸಂಸ್ಥೆಗಳಿಗಿಂತಲೂ ಕಡಿಮೆಯಿದೆ ಎಂದು ದತ್ತಾಂಶಗಳು ಹೇಳುತ್ತವೆ. (ಭಾರತದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪಟ್ಟಿಯನ್ನು ನೋಡಿ)

ಸ್ನಾತಕೋತ್ತರ ಪದವಿಯ ಸಮಯದಲ್ಲಿ ಸಮಾಧಾನ್‌ ಬೇಗ ಹೊರಹೋಗುತ್ತಾನೆ ಎಂದೇ ಅವನ ಮೇಲ್ಜಾತಿ ಸಹಪಾಠಿಗಳು ಎಣಿಸಿದ್ದರು.  ಇಂಗ್ಲೀಷ್‌ ಮಾತನಾಡುವ ಸಂಸ್ಕೃತಿಯಿಂದ ಆತ ಭಯಭೀತನಾಗಿದ್ದ. ಅಲ್ಲಿ ನೀಡುವ ತೀವ್ರತರವಾದ ಕೋರ್ಸ್‌ ವರ್ಕ್‌ ಮುಗಿಸುವುದು ಅವನಿಗೆ ಕಠಿಣವಾಗಿತ್ತು. ದುರ್ಬಲ ಜಾತಿಯ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ ಎನ್ನುತ್ತಾರೆ ಹೈದರಾಬಾದ್‌ ವಿಶ್ವವಿದ್ಯಾಲಯದ ನ್ಯೂರೋ ಸೈನ್ಸ್‌ ವಿಭಾಗದ ಉಪನ್ಯಾಸಕರಾದ ಆಕಾಶ್‌ ಗೌತಮ್.‌ “ಹಲವು ಕುಟುಂಬಗಳಲ್ಲಿ ಇವರುಗಳೇ ಮೊದಲ ಶಿಕ್ಷಣಾರ್ಥಿಗಳಾಗಿರುತ್ತಾರೆ. ಅವರಿಗೆ ವಿಶ್ವ ವಿದ್ಯಾಲಯಗಳ ಕಡೆಯಿಂದ ಹೆಚ್ಚಿನ ಸಮಯ ಮತ್ತು ಗಮನದ ಅವಶ್ಯಕತೆ  ಇರುತ್ತದೆ. ಆದರೆ ಅದು ಲಭಿಸುವುದೇ ಇಲ್ಲ” ಎಂದು ದಲಿತನಾಗಿ ತನ್ನ ವೇದನೆಯನ್ನು ಆಕಾಶ್‌ ಹಂಚಿಕೊಳ್ಳುತ್ತಾರೆ. 

ಪಿಹೆಚ್ ಡಿ ಯಲ್ಲಿ ಕುಸಿತ

ಪಿಹೆಚ್ಡಿ ಮಟ್ಟದಲ್ಲಿ, ಅದರಲ್ಲೂ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ, ಅಂಚಿಗೆ ದೂಡಲ್ಪಟ್ಟ ಸಮುದಾಯಗಳ  ಅನುಪಾತವು ಮತ್ತಷ್ಟು ಕುಸಿಯುತ್ತದೆ. 2020ರಲ್ಲಿ ಪಿಹೆಚ್ಡಿ ಗೆ ದಾಖಲಾದ ವಿದ್ಯಾರ್ಥಿಗಳ ಮಾಹಿತಿಯ ಪ್ರಕಾರ ಭಾರತದ ಮೊದಲ ಐದು ಐಐಟಿ ಗಳಲ್ಲಿ ನೇಚರ್‌ ಗೆ ದೊರೆತ ಮಾಹಿತಿಯಂತೆ ದಲಿತರ ಪ್ರಾತಿನಿಧ್ಯ 10% ಆದರೆ, ಆದಿವಾಸಿ ಅಥವಾ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 2%. ಇದು ಮಧ್ಯಮ ಕ್ರಮಾಂಕದ ಐಐಟಿಗಳಿಗಿಂತಲೂ ಕಡಿಮೆ. ಈ ವಿಷಯದಲ್ಲಿ ಭಾರತದ ಅತ್ಯುನ್ನತ ಸಂಶೋಧನಾ ಸಂಸ್ಥೆ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್ಸಿ) ಕೂಡಾ  ಕಳಪೆ ಸಾಧನೆ ಮಾಡಿದೆ.  (ಭಾರತದಲ್ಲಿ ಪಿಹೆಚ್ಡಿ ವಿದ್ಯಾರ್ಥಿಗಳು ನೋಡಿ)

“ಪಿಹೆಚ್ ಡಿ ಅಧ್ಯಯನವು , ಕುಟುಂಬಗಳ ಆರ್ಥಿಕ ಸಹಕಾರವನ್ನು ಬೇಡುವ, ಬಹುತೇಕ  ಸವಲತ್ತುಳ್ಳ ವರ್ಗಗಳ  ವಿದ್ಯಾರ್ಥಿಗಳು ಬೆನ್ನಟ್ಟಬಹುದಾದದ್ದು  ಎಂಬುದೇ ಕಟು ವಾಸ್ತವ, ಅದನ್ನು  ಎದುರಿಸೋಣ ” ಎಂಬುದು ಹೆಸರು ಹೇಳಲಿಚ್ಚಿಸದ ಮೇಲ್ಜಾತಿಯ ಐಐಟಿ ಪ್ರೊಫೆಸರೊಬ್ಬರ ಮಾತು. ಹಿಂದುಳಿದ ಜಾತಿಯ ವಿದ್ಯಾರ್ಥಿಗಳು, ಪಿಹೆಚ್ಡಿ ಮಾಡಲು ಬೇಕಾದ ಶಿಫಾರಸ್ಸಿನ ಪರಿಚಿತ ಜಾಲ ಹಾಗೂ ಸಂದರ್ಶನವನ್ನು ಎದುರಿಸಲು ಅವಶ್ಯಕವಾದ ತರಬೇತಿ ಯಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳುತ್ತಾರೆ . 

ಹೇಗೋ  ಪಿಹೆಚ್ಡಿ ಶುರು ಮಾಡಿದರೂ, ತಮ್ಮನ್ನು ಮುನ್ನಡೆಸಬಲ್ಲ ಒಳ್ಳೆಯ ಮಾರ್ಗದರ್ಶಕರನ್ನು ಕಂಡುಕೊಳ್ಳುವಲ್ಲಿ ಅವರು ವಿಫಲರಾಗುತ್ತಾರೆ. ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡದೆ, ಅಂತರ ಕಾಪಾಡಿಕೊಳ್ಳುವುದು ಮೇಲ್ಜಾತಿ ಪ್ರೊಫೆಸರುಗಳಿಗೆ ಸಾಮಾನ್ಯ ವಿಷಯ ಎನ್ನುತ್ತಾರೆ ಒಬಿಸಿ ಜಾತಿಗೆ ಸೇರುವ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಪರಿಸರ ವಿಭಾಗದ ಪ್ರೊಫೆಸರ್‌ ಕೃಪಾ ರಾಮ್.‌

2018ರಲ್ಲಿ ನೇಚರ್‌ ಪತ್ರಿಕೆಗೆ ನೀಡಿದ ಸಂದರ್ಶನದ ಪ್ರಕಾರ ದೆಹಲಿ ವಿಶ್ವ ವಿದ್ಯಾಲಯದ ಆದಿವಾಸಿ ಪಿಹೆಚ್ಡಿ ವಿದ್ಯಾರ್ಥಿಯು ತನ್ನ ಮಾರ್ಗದರ್ಶಕರಾಗುವಂತೆ ಮೇಲ್ಜಾತಿ ಪ್ರೊಫೆಸರೊಬ್ಬರನ್ನು ಕೇಳಿಕೊಂಡಾಗ ನೀನು “ಕೋಟಾ ಕ್ಯಾಂಡಿಡೇಟ್”,ನಿನಗೆ ಮಾರ್ಗದರ್ಶಕರು ಎಲ್ಲಿಯಾದರೂ ಸಿಗಬಹುದು ಎಂದು ಮೂದಲಿಸಿದರಂತೆ. ನಂತರ ಆಕೆಗೆ ಯಾರೂ ಮಾರ್ಗದರ್ಶಕರೇ ಸಿಗಲಿಲ್ಲ. 

ಗೌತಮ್‌ ಮತ್ತು ಇತರೆ ವಿಜ್ಞಾನಿಗಳು ಹೇಳುವಂತೆ ಮೇಲ್ಜಾತಿಗೆ ಸೇರಿದ ಪ್ರೊಫೆಸರುಗಳು ಹಿಂದುಳಿದ  ಹಿನ್ನೆಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಹೆಚ್ಚಿನ ಸಮಯಾವಕಾಶವನ್ನು ಮತ್ತು ಮಾರ್ಗದರ್ಶನವನ್ನು ನೀಡಲು ಬಯಸುವುದಿಲ್ಲ. ಇದರಿಂದ ಎಷ್ಟೋ ಜನ ಪಿಹೆಚ್ಡಿ ಮುಗಿಸುವ ಮುನ್ನವೇ ಕೈಚೆಲ್ಲಿಬಿಡುತ್ತಾರೆ. ”ಇದೊಂದು ತಂತ್ರಗಾರಿಕೆ” ಎನ್ನುತ್ತಾರೆ ಗೌತಮ್.‌ 

ಸಿಬ್ಬಂದಿಯ ಕೊರತೆ

ಹಿಂದುಳಿದ  ಜಾತಿಯ ಕೆಲವೇ ಡಾಕ್ಟರೇಟ್‌ ವಿದ್ಯಾರ್ಥಿಗಳು ಮಾತ್ರ ಉತ್ಕೃಷ್ಟ ವಿದ್ಯಾಸಂಸ್ಥೆಗಳ ಬೋಧನಾ ಸಿಬ್ಬಂದಿಗಳಾಗಿ ಸೇರಿಕೊಳ್ಳುತ್ತಾರೆ. ನೇಚರ್ ಪತ್ರಿಕೆಯು ಕಂಡುಕೊಂಡ ಪ್ರಕಾರ ಐಐಟಿ ಮತ್ತು ಐ.ಐ.ಐಸ್‌.ಸಿ ವಿದ್ಯಾಸಂಸ್ಥೆಗಳ ಉನ್ನತ ಶ್ರೇಣಿಯ ಪ್ರೊಫೆಸರುಗಳಲ್ಲಿ ಕ್ರಮವಾಗಿ ಶೇ98 ರಷ್ಟು, ಅಸೋಸಿಯೇಟ್‌ ಅಥವಾ ಸಹಾಯಕ ಪ್ರಾಧ್ಯಾಪಕರುಗಳಲ್ಲಿ ಶೇ 93 ರಷ್ಟು ಜನ  ಮೇಲ್ಜಾತಿಯವರು ತುಂಬಿಕೊಂಡಿದ್ದಾರೆ. ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಕೇಂದ್ರದ (Tata Institute of Fundamental Research TIFR) ಎಲ್ಲಾ ಪ್ರೊಫೆಸರುಗಳೂ ಮೇಲ್ಜಾತಿಯವರೇ. TIFR  ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುವ ಸಂಸ್ಥೆಯಾದರೂ ಮೀಸಲಾತಿಯ ನಿಯಮಗಳನ್ನು ಅನುಸರಿಸುವುದರಿಂದ ವಿನಾಯಿತಿ ಪಡೆದಿದೆ . 

ಕೆಲವು  ಪ್ರಧಾನ ಸಂಸ್ಥೆಗಳು ಕೊಂಚ ಪರವಾಗಿಲ್ಲ ಎಂಬಂತಿವೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೌನ್ಸಿಲ್‌ (Council of Scientific and Industrial Research) ನ 38 ಪ್ರಯೋಗಾಲಯಗಳ ಪೈಕಿ 31 ಪ್ರಯೋಗಾಲಯಗಳಿಂದ ದೊರೆತ ಮಾಹಿತಿಯ ಪ್ರಕಾರ ಹಿರಿಯ ಶ್ರೇಣಿಯ ಸಿಬ್ಬಂದಿಗಳನ್ನೂ ಸೇರಿಸಿಕೊಂಡು ಒಟ್ಟು ಶೇ18 ರ ಷ್ಟು ದಲಿತರು ಮತ್ತು ಶೇ4 ರಷ್ಟು ಆದಿವಾಸಿಗಳು ಇದ್ದಾರೆ. 

ಅನುದಾನ ಹಂಚಿಕೆಯಲ್ಲಿನ ಅಸಮಾನತೆ 

ದೇಶದ ಬಹಳಷ್ಟು ಸಂಶೋಧನಾ ಬಂಡವಾಳ ಹೋಡಿಕೆದಾರರು ಯಾವ ಜಾತಿಗಳಿಗೆ ಎಷ್ಟು ಬಂಡವಾಳ ನೀಡಿದ್ದಾರೆ ಎಂಬುದನ್ನು ಹೇಳುವುದಿಲ್ಲ. ಮೊದಲಿಗೆ ಅವರು ಈ ಅಂಶವನ್ನೇ ಗಮನಿಸುವುದಿಲ್ಲ.  ಆದರೆ ದೇಶದ ಪ್ರಮುಖ ವೈಜ್ಞಾನಿಕ ಬಂಡವಾಳ ಹೂಡಿಕೆದಾರರಲ್ಲಿ ಒಂದಾದ  ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು (Department of Science and Technology DST) ಕೆಲ ಮಾಹಿತಿಯನ್ನು ಹಂಚಿಕೊಂಡಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾಕ್ಟರೇಟ್‌ ವಿದ್ಯಾರ್ಥಿಗಳಿಗೆ  INSPIRE ಫೆಲೋಷಿಪ್‌ ನೀಡಲಾಗುತ್ತದೆ.  ಇದು DST ಯ ಪ್ರಮುಖ ನಿಧಿಯಾದರೂ ಅದು ಒದಗಿಸುವ ಒಟ್ಟು ಬಂಡವಾಳದ ಒಂದು ಸಣ್ಣ ಅಂಶ ಮಾತ್ರ. 

2016 ರಿಂದ 2020 ರ ನಡುವೆ INSPIRE ಫೆಲೋಷಿಪ್‌ ಪಡೆದವರಲ್ಲಿ ಶೇ80 ರಷ್ಟು ಜನರು ಮೇಲ್ಜಾತಿಯವರಾದರೆ, ಶೇ 6 ರಷ್ಟು ಜನ ದಲಿತರು ಮತ್ತು ಶೇ1 ಕ್ಕೂ ಕಡಿಮೆ ಸಂಖ್ಯೆಯ ಜನರು ಬುಡಕಟ್ಟು ಸಮುದಾಯದವರಾಗಿದ್ದಾರೆ. DST ಹೇಳುವ ಪ್ರಕಾರ ಇದರ ಆಯ್ಕೆಯು ಸಂಪೂರ್ಣವಾಗಿ ಮೆರಿಟ್‌ ಆಧಾರದಲ್ಲಿ ನಡೆಯುತ್ತದೆ. DST ಯ ಮತ್ತೊಂದು ವಿಭಾಗವಾದ ತಂತ್ರಜ್ಞಾನ ಅಭಿವೃದ್ಧಿ ಮತ್ತು ವರ್ಗಾವಣಾ ವಿಭಾಗವು (Technology Development and Transfer Division )ಕೂಡಾ ಇದೇ ತೆರನಾದ ಅಂಶಗಳನ್ನು ತೋರಿಸುತ್ತದೆ. ಈ ಎರಡೂ ಪ್ರಕರಣಗಳಲ್ಲಿ ಫೆಲೋಶಿಪ್  ಪಡೆದವರ ಯಶಸ್ಸಿನ  ಪ್ರಮಾಣವನ್ನು ಅದು ಹಂಚಿಕೊಳ್ಳುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೆಲ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಸಂಸ್ಥೆಗಳು ಮೀಸಲಾತಿ ನಿಯಮಗಳನ್ನು ಪಾಲಿಸುವಂತೆ ಒತ್ತಡ ಹೇರುವುದರ ಜೊತೆಗೆ ಹಿಂದುಳಿದ ವರ್ಗಗಳ  ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಯೋಗವನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ವೈವಿಧ್ಯತೆಯ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುವ ಎಗಾಲಿಟೇರಿಯನ್ಸ್‌(Egalitarians) ಎಂಬ ಸಂಘದ ವಕ್ತಾರರು  “ನಾವುಗಳು ವೈವಿಧ್ಯತೆಯ ಮಾಹಿತಿಯನ್ನು ಸಂಗ್ರಹಿಸಿ ಈ ಸಂಸ್ಥೆಗಳ ಮುಖಕ್ಕೆ ಕನ್ನಡಿ ಹಿಡಿದು ಅವುಗಳಿಗೆ ತಮ್ಮ ಕರಾಳ ಮುಖವನ್ನು ದರ್ಶನ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎನ್ನುತ್ತಾರೆ. 

ಕೆಲವು ಹೆಸರು ಹೇಳಲಿಚ್ಛಿಸದ ಶೈಕ್ಷಣಿಕ ತಜ್ಞರು ಪ್ರಕಾರ – ಭಾರತದ ‘ಹಿಂದೂಪರ’ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಜಕೀಯ ನಿಲುವುಗಳಿಂದ  ಉತ್ತೇಜಿತರಾದ ಮೇಲ್ಜಾತಿ ಜನರ ಗುಂಪುಗಳು, ದಲಿತ ಮತ್ತು ಇತರೆ ಹಿಂದುಳಿದ ಜಾತಿ ಹಾಗೂ ಬುಡಕಟ್ಟುಗಳ ಮೇಲೆ ಎಸಗುತ್ತಿರುವ ವ್ಯವಸ್ಥಿತ ತಾರತಮ್ಯವನ್ನು  ಈ ದತ್ತಾಂಶಗಳು ಸೂಚಿಸುತ್ತಿವೆ . 

ವಿವಿಧ ಸಾಮಾಜಿಕ ಮತ್ತು ಜಾತೀಯ ವಿಭಾಗಗಳನ್ನು ಒಳಗೊಂಡ ಭಾರತದ ಪ್ರಮುಖ ಧಾರ್ಮಿಕ ಗುಂಪುಗಳು – ಉದಾ: ಮುಸ್ಲಿಮರು – ಸಹ ರಚನಾತ್ಮಕ ಅಸಮಾನತೆಯನ್ನು ಎದುರಿಸುತ್ತಿದ್ದಾರೆ.  2001 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ14 ರಷ್ಟು ಜನರಿದ್ದರೂ, 2019-20ರ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕೆ ನೊಂದಣಿಯಾದವರು ಕೇವಲ 5.5% ಜನ ಮಾತ್ರ. 

ಹೆಚ್ಚಿನ ದತ್ತಾಂಶವು ಲಭ್ಯವಾಗದ ಕಾರಣ ಐಐಟಿ ಮತ್ತು ಇತರ ಸಂಸ್ಥೆಗಳಲ್ಲಿ ಇರುವ ಮುಸ್ಲಿಮರ ಪ್ರಾತಿನಿಧ್ಯದ ಬಗ್ಗೆ ನೇಚರ್‌ ಮಾಹಿತಿ ಕೇಳಿತು.  ಹಲವಾರು ಸಂಸ್ಥೆಗಳು ತಮ್ಮ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಎಂದರೆ ಬೆರಳೆಣಿಕೆಯಷ್ಟು ಮಾತ್ರ ಉತ್ತರ ನೀಡಿದವು. ಅದರ ಆಧಾರದಲ್ಲಿ ಹೇಳುವುದಾದರೆ ಈ ಅತ್ಯುನ್ನತ ಸಂಸ್ಥೆಗಳಲ್ಲಿ ಮುಸಲ್ಮಾನರ ಪ್ರಾತಿನಿಧ್ಯ ಕೂಡಾ ಕಡಿಮೆ ಇದೆ.  

2020 ರ ದಾಖಲಾತಿಯ ಪ್ರಕಾರ ಎರಡು ಪ್ರತಿಷ್ಠಿತ ಸಂಸ್ಥೆಗಳಾದ ಮದರಾಸ್‌ ಮತ್ತು ಖರಗ್‌ ಪುರ ಐಐಟಿಗಳಲ್ಲಿ ಪಿಹೆಚ್ಡಿ ವಿದ್ಯಾರ್ಥಿಗಳ ಪ್ರಮಾಣ ಶೇ5 ಕ್ಕಿಂತ ಕಡಿಮೆ ಇದ್ದರೆ ಕಲಿಕಾ ಸಿಬ್ಬಂದಿಯಲ್ಲಿನ ಮುಸ್ಲಿಮರ ಪ್ರಮಾಣ ಶೇ1ಕ್ಕಿಂತಲೂ ಕಡಿಮೆ.  ಆದರೂ ಮುಸ್ಲಿಮರ ಜನಸಂಖ್ಯೆ ಹೊಂದಿರದ ಮಧ್ಯಕ್ರಮಾಂಕದ ರ್ಯಾಂಕಿಂಗ್‌ ಹೊಂದಿರುವ ಧನ್‌ಬಾದ್ ಐಐಟಿ ಯಲ್ಲಿ ಶೇ55 ರಷ್ಟು ಮುಸ್ಲಿಂ ಪಿಹೆಚ್ಡಿ ವಿದ್ಯಾರ್ಥಿಗಳಿದ್ದಾರೆ. 

ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಈ ಅಸಮಾನತೆ ಮತ್ತು ಪ್ರಾತಿನಿಧ್ಯದ ಕೊರತೆಯ ಬಗ್ಗೆ, ಅದರಲ್ಲೂ ನಿರ್ದಿಷ್ಟವಾಗಿ ಜಾತೀಯ ತಾರತಮ್ಯದ ವಿರುದ್ದ ಟೀಕೆಗಳು ಹೆಚ್ಚಾಗುತ್ತಲೇ ಕೆಲವು ಸಂಸ್ಥೆಗಳು ಕಾರ್ಯಪ್ರವೃತ್ತವಾಗುತ್ತಿವೆ. ಭಾರತ ಸರಕಾರದ ಶಿಕ್ಷಣ ಸಚಿವಾಲಯವನ್ನು ಸದರಿ ವಿಷಯವಾಗಿ ಸಂದರ್ಶನಕ್ಕಾಗಿ 2019 ರಿಂದಲೂ ಹಲವು ಬಾರಿ ಕೋರಿಕೊಳ್ಳುತ್ತಿದ್ದರೂ  ಅದು ನಿರಾಕರಿಸುತ್ತಲೇ ಬಂದಿದೆ. ಆದರೆ ಐಐಟಿಗಳನ್ನೂ ಸೇರಿ ಕೇಂದ್ರ ಸರಕಾರಿ ಪ್ರಾಯೋಜಿತ ಸಂಸ್ಥೆಗಳು ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಬೇಕೆಂಬ ನಿರ್ದೇಶನವನ್ನು ನೀಡಿರುವುದಾಗಿ ಅದು ತಿಳಿಸಿದೆ. 

ಮೋದಿ ಸರ್ಕಾರವು 2019ರಲ್ಲಿ ಈ ಮೀಸಲಾತಿ ಕೋಟಾವನ್ನು ಸಾಮಾನ್ಯ ವರ್ಗದ ಮೇಲ್ಜಾತಿ ಜನರಿಗೂ 10% ವಿಸ್ತರಿಸಿ ಆದೇಶ ಹೊರಡಿಸಿತು.  ಮೀಸಲಾತಿಯ ಸಾಮಾನ್ಯ ಪ್ರವರ್ಗಕ್ಕೆ ಸೇರಬೇಕಾದ ಜನರನ್ನು “ಆರ್ಥಿಕವಾಗಿ ಹಿಂದುಳಿದವರು” ಎಂದು ಘೋಷಿಸುವ ಮೂಲಕ ಮೀಸಲಾತಿಯಡಿ ಸೇರಿಸಲಾಯಿತು. ಈ ನಡೆಯು ತೀವ್ರ ವಿವಾದಾತ್ಮಕವಾಗಿ, ಕಾನೂನಿನ ನಿಕಷಕ್ಕೊಡ್ಡಲಾಯಿತಾದರೂ ಭಾರತದ ಸುಪ್ರೀಂಕೋರ್ಟು 2022ರ ತನ್ನ ತೀರ್ಪಿನಲ್ಲಿ ಇದನ್ನು ಎತ್ತಿ ಹಿಡಿಯಿತು. 

ನಾಲ್ಕು ಐಐಟಿಗಳ ಮುಖ್ಯಸ್ಥರು ನೇಚರ್‌ ಗೆ ಈ ವಿಷಯವಾಗಿ ಮಾತನಾಡಿದ್ದಾರೆ.  ಮಿಕ್ಕವರು ಪ್ರತಿಕ್ರಿಯೆಯನ್ನು ನೀಡಿಲ್ಲ. 

ಐಐಟಿ ಬಾಂಬೆಯ ಬೋಧನಾ ವ್ಯವಹಾರಗಳನ್ನು ನೋಡಿಕೊಳ್ಳುವ ಡೀನ್‌ ಶ್ರೀಮತಿ ನೀಲಾ ನಟರಾಜನ್‌ ಮಾತುಗಳು ಹೀಗಿವೆ- “ ಪ್ರಾತಿನಿಧ್ಯದ ಕೊರತೆಯನ್ನು ತಾರತಮ್ಯಕ್ಕೆ ಸಮೀಕರಿಸುವುದು ಸರಿಯಲ್ಲ. ಕೆಲವು ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳ ಮತ್ತು ಬೋಧನಾ ಸಿಬ್ಬಂದಿಯ ಕೊರತೆ ನಮ್ಮ ಸಂಸ್ಥೆಯಲ್ಲಿ ಇರಬಹುದು. ಆದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ತಳ ಸಮುದಾಯಗಳ ವಿದ್ಯಾರ್ಥಿಗಳನ್ನು ಪಿಹೆಚ್ಡಿ ಶುರು ಮಾಡುವಂತೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.”

ಆಗಸ್ಟ್‌ 2022 ರಲ್ಲಿ ಸೇವೆಗೆ ಸೇರಿದ ಸಾಹಿತ್ಯದ ಪ್ರೊಫೆಸರ್ ಅಂಜಲಿ ಮುಲ್ತಾನಿ ತಮ್ಮ ಐಐಟಿ ದೆಹಲಿಯ ಕ್ಯಾಂಪಸ್‌ ನಲ್ಲಿ  ವೈವಿಧ್ಯತೆಯನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಮೊದಲ ಡೀನ್.‌  ದಮನಿತ ವರ್ಗಗಳ ಪ್ರಾತಿನಿಧ್ಯದ ಕೊರತೆಯನ್ನು ಗುರುತಿಸಿರುವ ಅವರು ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ.  

ಐಐಟಿ ಕಾನ್‌ಪುರದ ಮುಖ್ಯಸ್ಥರಾದ ಅಲಮೆಂದು ಚಂದ್ರ ರವರು ಕಳೆದ ವರ್ಷ ಅಂಚಿನಲ್ಲಿರುವ ಸಮುದಾಯಗಳ 48 ಜನ ಶಿಕ್ಷಕರನ್ನು ಭರ್ತಿ ಮಾಡಿಕೊಂಡಿದ್ದಾರೆ. ಆ ಸಂಸ್ಥೆಯ ಜಾಲತಾಣದ ಪ್ರಕಾರ ಅಲ್ಲಿ ಒಟ್ಟು 413 ಜನ ಬೋಧಕರಿದ್ದಾರೆ. 

ಐಐಟಿ ಗೋವಾದ 2022ರ ಪಿಹೆಚ್ಡಿ ಪ್ರವೇಶಾತಿಯ ಮುಖ್ಯಸ್ಥರಾದ ಕಂಪ್ಯೂಟರ್‌ ವಿಜ್ಞಾನಿ ಅಮಲ್‌ ದೇವ್‌ ಮಾನ್ಯುಯೆಲ್‌ ಗುರುತಿಸುವಂತೆ ಅಲ್ಲಿನ ಪಿಹೆಚ್ಡಿ ಅರ್ಜಿಗಳಲ್ಲಿ ಅಂಗೀಕಾರವಾಗುವ ಅಂಚಿನ ಸಮುದಾಯಗಳ ವಿದ್ಯಾರ್ಥಿಗಳ ಪ್ರಮಾಣ ಶೇ1ನ್ನು ಮೀರಿದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪ್ರಮಾಣ ಶೇ1 ಕ್ಕಿಂತಲೂ ಕಡಿಮೆ. 

ರಮೇಶ್ಚಂದ್ರ ರಂತಹ ಕೆಲವು ಸಂಶೋಧಕರು ಅನುಮಾನಿಸುವಂತೆ ಮೀಸಲಾತಿಯನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ದ ಸರಕಾರಗಳು ಶಿಸ್ತುಕ್ರಮ ಜರುಗಿಸುವವರೆಗೂ ವೈವಿಧ್ಯತೆಯನ್ನು ಬೆಳೆಸುವ ಅವುಗಳ ಉಪಕ್ರಮಗಳಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿಲ್ಲ. “ಅಂತಹ ಸಂಸ್ಥೆಗಳ ನಿರ್ದೇಶಕರುಗಳ ವಿರುದ್ಧ ಪ್ರತೀಕಾರದ ಕ್ರಮ ತಗೆದುಕೊಂಡು ಅವರನ್ನು ವಜಾ ಮಾಡಬೇಕು” ಎಂದು ಆಗ್ರಹಿಸುತ್ತಾರೆ. 

ಕೊನೆಯ ಪಕ್ಷ ಎಲ್ಲಾ ವಿಶ್ವವಿದ್ಯಾಲಯಗಳೂ ತಮ್ಮ ವೈವಿಧ್ಯತೆಯ ದತ್ತಾಂಶವನ್ನು ಸಾರ್ವಜನಿಕಗೊಳಿಸಬೇಕು ಮತ್ತು ಮೀಸಲಾತಿಯನ್ನು ತಪ್ಪದೇ ಅನುಸರಿಸಬೇಕು ಎನ್ನುತ್ತಾರೆ ರಾಮ್.‌ ಮಿನ್ಜ಼ ರವರ ಆಲೋಚನೆಯಂತೆ ಶಾಲಾ ಮಟ್ಟದಿಂದ ಹಿಡಿದು ಉನ್ನತ ಮಟ್ಟದ ನೇಮಕಾತಿಯವರೆಗೆ ಬೆಂಬಲ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಅನುದಾನ- ಪ್ರಸ್ತಾವನೆ-ಬರೆವಣಿಗೆ ಹಾಗೂ ಸಂವಹನ ಕೌಶಲ್ಯಗಳ ಬಗ್ಗೆ ಆಯ್ಕೆಯಾಗುವ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ ದೊರೆಯಬೇಕು. “ಇಲ್ಲಿನ ಆಟದ ಮೈದಾನ ಯಾವ ಹಂತದಲ್ಲೂ ಸರಿ ಸಮಾನವಾಗಿಲ್ಲ” ಎನ್ನುತ್ತಾರೆ.

ಆದರೆ ಸಮಾಧಾನ್‌ ನಂತಹ ವಿದ್ಯಾರ್ಥಿಗೆ ಬದಲಾವಣೆಯ ಗುರುತೇ ಬೇರೆ. “ಯಾವ ದಿನ ನಾನು ನನ್ನ ಹೆಸರನ್ನು ಸಂಪೂರ್ಣವಾಗಿ ಯಾವುದೇ ಹಿಂಜರಿಕೆ ಇಲ್ಲದೆ ನನ್ನ ಸಂಸ್ಥೆಯಲ್ಲಿ ಹೇಳುತ್ತೇನೆಯೋ, ಅಂದು ಸಮಾನತೆ ಬಂದಿದೆ ಎಂದು ಭಾವಿಸುತ್ತೇನೆ”- ಎನ್ನುತ್ತಾನೆ. 


ಅನುವಾದ : ಹೇಮಂತ್ ಎಲ್ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದವರು. ಎಲೆಟ್ರಿಕಲ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಪದವೀಧರರು. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ.

ಪ್ರತಿಕ್ರಿಯಿಸಿ