ಬಸವಣ್ಣನವರ ವಚನಗಳು ಮತ್ತು ಅಪರಾಧ ಹಾಗೂ ಶಿಕ್ಷೆಯ ಸ್ವರೂಪ

ಜಾತಿ ವ್ಯವಸ್ಥೆಯ ಹುತ್ತ ಯಾವುದು ಎಂಬ ಕುರಿತು ಬಸವಣ್ಣನವರು ಪದೆ ಪದೆ ವೈದಿಕ ಶಾಸ್ತ್ರ- ಪ್ರಮಾಣ ಗ್ರಂಥಗಳತ್ತ ಕೈ ತೋರುತ್ತಾರೆ. ಹಾಗಾಗಿ ಅವುಗಳನ್ನು ನಿರಾಕರಿಸದೆ ಅಥವಾ ಅಪಘನತೀಕರಿಸದೆ ಬಿಡುಗಡೆ ಸಾಧ್ಯವಿಲ್ಲ ಎಂಬ ತಿಳುವಳಿಕೆ ಬಸವಣ್ಣ ಮತ್ತು ಬಾಬಾ ಸಾಹೇಬರಿಬ್ಬರದ್ದೂ ಆಗಿದೆ. ಇಬ್ಬರೂ ಕೂಡ ಜಾತಿ ಎನ್ನುವುದು ಸಹಜವಾದುದಲ್ಲ, ಕೃತಕವಾದುದು ಮತ್ತು ಕೆಲವರ ಅನುಕೂಲಕ್ಕೆ ಕಟ್ಟಿಕೊಂಡದ್ದು ಎಂದು ಭಾವಿಸಿದ್ದರು.ಆದ್ದರಿಂದಲೇ ಇನ್ನಿಲ್ಲದಂತೆ ಜಾತಿ ಸಮರ್ಥನೆಯ ಎಲ್ಲ ಪ್ರಮೇಯಗಳನ್ನು, ಪ್ರಮೇಯಕಾರರನ್ನು ಅತ್ಯಂತ ಕಟುಶಬ್ಧಗಳಲ್ಲಿ ಟೀಕಿಸಿದರು.

  ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿರುವ ಶರಣ -ಶರಣೆಯರು

ಹನ್ನೆರಡನೆ ಶತಮಾನದ ಶರಣರ ಚಳುವಳಿಯು ಇಂದಿಗೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿರುವುದಕ್ಕೆ  ಹಲವು ಮುಖ್ಯ ಕಾರಣಗಳಲ್ಲಿ ಅದು ಪರ್ಯಾಯ ಸಮಾಜದ ಪ್ರಮೇಯಗಳನ್ನು ಮಂಡಿಸಿದ್ದೂ ಕೂಡ ಒಂದು. ಕನ್ನಡದಲ್ಲಿ   ವಿದ್ವಾಂಸರುಗಳು  ಇದನ್ನು ಪ್ರತಿ ಸಂಸ್ಕೃತಿಯ ನಿರ್ಮಾಣ ಎಂದು ಕರೆದರು.  ಪ್ರತಿ ಸಂಸ್ಕೃತಿ ಎಂಬುದು ಧ್ವನಿಸುವ ಅರ್ಥಕ್ಕಿಂತ ಪರ್ಯಾಯ ಸಮಾಜದ ನಿರ್ಮಾಣ ಎಂಬುದು ತುಸು ಹೆಚ್ಚು ವಿಶಾಲಾರ್ಥವನ್ನು ಬಿಂಬಿಸುತ್ತದೆನ್ನಿಸುತ್ತದೆ. ಸಾಂಸ್ಕೃತಿಕ ಪ್ರಮೇಯಗಳು ಶರಣರ ಚಳುವಳಿಯು ಪ್ರತಿ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂಬುದು ನಿಜವಾದರೂ ಅಲ್ಲಿ ಒಂದು ಪ್ರತಿ ಸಂಸ್ಕೃತಿ ಇಲ್ಲ. ಕೂಡಲಸಂಗಮನೆ ಆತ್ಯಂತಿಕ ಸತ್ಯ ಎಂದು ಭಾವಿಸಿದ್ದ ಬಸವಣ್ಣನವರು ವೈದಿಕ ದೈವ ಮೀಮಾಂಸೆಗೆ ಪ್ರತಿಯಾದ ಪರಿಕಲ್ಪನೆಯನ್ನು ಮಂಡಿಸಿದ್ದರು. ಅಲ್ಲಮ ಪ್ರಭುಗಳು ಹಲವು ವಚನಗಳಲ್ಲಿ ಗುಹೇಶ್ವರ ಸತ್ತ, ದೇವರು ಸತ್ತ ಎಂದು ಸಕಲವನ್ನು ಒಡೆದು ಹೊಸ ದಿಕ್ಕು, ಹೊಸದಾರಿ, ಹೊಸ ನುಡಿಗಟ್ಟು ಮತ್ತು ಹೊಸ ಪ್ರಮೇಯಗಳ ಕಡೆಗೆ ನಡೆಯಬೇಕಾದ ದರ್ದನ್ನು ಪ್ರತಿಪಾದಿಸಿದರು. 

 ಅಲ್ಲಮಪ್ರಭುಗಳ ಪ್ರಮೇಯ ಬಸವಣ್ಣನವರ ಭಕ್ತಿ ಪ್ರಮೇಯಕ್ಕೆ ವಿರುದ್ಧವಾದುದು. ಹಾದರವನ್ನು, ವೇಶ್ಯೆಯರ ಬಾಳನ್ನು ಅತ್ಯಂತ ಹೀನಾರ್ಥದಲ್ಲಿ, ಕಟು ಶಬ್ಧಗಳಲ್ಲಿ ವಿವರಿಸಿದ ಬಸವಣ್ಣನವರ ನಿಲುವಿಗೆ ವಿರುದ್ಧವಾಗಿ ಸೂಳೆ ಸಂಕವ್ವೆಯಂಥವರು ತಮ್ಮ ಕಾಯಕವನ್ನು ಘನತೀಕರಿಸಿಕೊಂಡು ಮಾತನಾಡಿದರು.

“ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.”

ಎನ್ನುತ್ತಾಳೆ ಸೂಳೆ ಸಂಕವ್ವೆ. ಇದು ಬಸವಣ್ಣನವರ ನಿಲುವಿಗೆ ವಿರುದ್ಧವಾದ ವಚನ. ವೇಶ್ಯೆಗೂ ನೀತಿ ನಿಯತ್ತುಗಳಿವೆ, ವ್ರತಹೀನರ ಜೊತೆ ಕೂಡುವುದಿಲ್ಲ ಎನ್ನುವ ಮಾತುಗಳು ತಮ್ಮ ವೃತ್ತಿ ಘನತೆಯನ್ನು ಕೀಳು ಎಂದು ಭಾವಿಸದ ಕಾರಣದಿಂದ ಹುಟ್ಟುತ್ತವೆ. ಇಲ್ಲಿ ಅಪರಾಧ ಎಂಬುದು ವೇಶ್ಯಾವೃತ್ತಿ ನಡೆಸುವುದಲ್ಲ ಬದಲಿಗೆ ಒಬ್ಬನಿಗೆ ಒತ್ತೆಯಾಗಿ ಬೇರೊಬ್ಬನೊಂದಿಗೆ ಹೋಗುವುದು.  ಹಣ ಒಬ್ಬನಿಂದ ಪಡೆದು ಅವನ ಅಭೀಪ್ಸೆಗೆ ತಕ್ಕಂತೆ ನಡೆಯದೆ ಬೇರೊಬ್ಬನೊಂದಿಗೆ ವ್ಯವಹಾರ ಕುದುರಿಸುವುದು ಅಪರಾಧವಾಗುತ್ತದೆ. ಹಾಗೆ ಮಾಡಿದರೆ ಅತ್ಯಂತ ಕ್ರೂರವಾದ ಶಿಕ್ಷೆ ನೀಡಲಾಗುತ್ತದೆ ಎನ್ನುತ್ತಾಳೆ. ಬತ್ತಲೆ ನಿಲ್ಲಿಸಿ ಕೊಲ್ಲುವುದು, ಕಿವಿ, ಮೂಗು, ಕೈಗಳನ್ನು ಕಾದ ಕತ್ತಿಯಲ್ಲಿ ಕೊಯ್ಯುತ್ತಾರೆಂಬ ಮಾತುಗಳು ಮಧ್ಯಕಾಲೀನ ಸಮಾಜದ  ಶಿಕ್ಷೆಯ ಸ್ವರೂಪವನ್ನು ವಿವರಿಸುತ್ತಿವೆ.  ಭಿನ್ನ ಸ್ವರೂಪದ ಜನರೊಂದಿಗೆ ಏಗುವ ಸಂಕವ್ವೆ  ಹೇಳುವ ಶಿಕ್ಷೆಯ ಸ್ವರೂಪಕ್ಕೂ  ಬಸವಣ್ಣನವರು ವಿವರಿಸುವ ಶಿಕ್ಷೆಯ ಸ್ವರೂಪಗಳಿಗೆ ವ್ಯತ್ಯಾಸಗಳಿವೆ. 

  ಪ್ರತಿಯೊಬ್ಬ ಶರಣರೂ ಅನನ್ಯತೆಯನ್ನು ಹೊಂದಿದವರಾಗಿದ್ದರು, ತಮಗೆ ಸರಿ ಕಂಡ ರೀತಿಯಲ್ಲಿ ಸಮಾಜವನ್ನು ವ್ಯಾಖ್ಯಾನಿಸಿದರು. ಭಿನ್ನಾಭಿಪ್ರಾಯ, ಸಂವಾದ ಗುಣಗಳೆ ಚಳುವಳಿಯೊಂದರ ಪ್ರಾಣರೂಪಗಳು.  ಹಾಗೆಂದು ಶರಣ ಚಳುವಳಿಯು ಅರಾಜಕವಾಗಿರಲಿಲ್ಲ. ಅದಕ್ಕೊಂದು ಗುರಿ ಇತ್ತು,  ಪ್ರಬಲ ಉದ್ದೇಶವಿತ್ತು. ಸಹಿಸುವ, ಒಳಗೊಂಡು ಬದುಕುವ, ದ್ವೇಷ, ಅಸೂಯೆ, ಗುಮಾನಿ ರಹಿತವಾದ ಗುಣಗಳನ್ನು  ಈ ಚಳುವಳಿಯಲ್ಲಿ ನಾವು ಗುರ್ತಿಸಬಹುದಾಗಿದೆ.

ಹಾಗಿದ್ದರೆ ಈ ಶರಣರೆಲ್ಲ ಸೇರಿಕೊಂಡು ಸ್ಥಾಪಿಸಬಯಸಿದ ಸಮಾಜ ಯಾವುದು? ಈ ಪರ್ಯಾಯ ಸಮಾಜದ ಅವಶ್ಯಕತೆ ಏನಿತ್ತು? ಅವರು  ಕಟ್ಟಬಯಸಿದ್ದ ಪರ್ಯಾಯ ಸಮಾಜದ ಸ್ವರೂಪವೇನಾಗಿತ್ತು?  ಎಂಬುದರ ಕುರಿತು ಅಪಾರವಾದ ಅಧ್ಯಯನಗಳು ನಡೆದಿವೆ. ವ್ಯಾಖ್ಯಾನಗಳೂ ಆಗಿವೆ. ಆದರೆ ವಚನಕಾರರು ಹೇಳುತ್ತಿದ್ದ ಪರ್ಯಾಯ ಸಮಾಜವು ಸಾಮಾಜಿಕ ನೆಲೆಯದ್ದೊ ಅಥವಾ ರಾಜಕೀಯ ನೆಲೆಯದ್ದೊ? ಅಥವಾ ಅನುಭಾವಿಕ, ಆಧ್ಯಾತ್ಮಿಕ ಸ್ವರೂಪ ಮಾತ್ರ ಅದಕ್ಕೆ ಇತ್ತೊ? ಪರ್ಯಾಯ ಸಮಾಜ ಎಂದರೆ ಈ ಎಲ್ಲವೂಗಳನ್ನೂ ಒಳಗೊಂಡಿರಬೇಕಲ್ಲವೆ? 

ಪರ್ಯಾಯ ಸಮಾಜವೆಂದ ಮೇಲೆ ಅತ್ಯಂತ ಮುಖ್ಯವಾದ ಎರಡು ಸಂಗತಿಗಳನ್ನು ಗಮನಿಸಬೇಕಾಗುತ್ತದೆ.

1.ಆ ಸಮಾಜದ ಕಾನೂನು ಸುವ್ಯವಸ್ಥೆಯ ಕುರಿತು ಅವರಿಗೆ ಇದ್ದ ನಿಲುವು ಏನು?   

 2. ಆಯಾ ಸಮಾಜದಲ್ಲಿದ್ದ ವ್ಯಕ್ತಿಗಳ ಕುರಿತಾದ ಅಪರಾಧ ಮತ್ತು ಶಿಕ್ಷೆಯ ಕುರಿತಾದ ನಿಲುವು ಏನು? .

ಈ ಎರಡೂ ಕೂಡ  ರಾಜಕೀಯವಾದ  ಸಂರಚನೆಗಳನ್ನು ನಿರ್ಧರಿಸುವ ಸಂಗತಿಗಳಾಗಿವೆ.  ಚಾಲ್ತಿಯಲ್ಲಿರುವ ಅಪರಾಧ ಮತ್ತು ಶಿಕ್ಷೆಯ ಸ್ವರೂಪಗಳು ಆಯಾ ಸಮಾಜಗಳ  ಮೊಗಕ್ಕೆ ಹಿಡಿದ ಕನ್ನಡಿಯಂತೆ ಕೆಲಸ ಮಾಡುತ್ತವೆ. ಡಿ ಡಿ ಕೊಸಾಂಬಿಯವರು ನಾಣ್ಯಗಳ ತೂಕದ ಮೇಲೆ  ಮಧ್ಯಕಾಲೀನ ಸಮಾಜಗಳ ಆಡಳಿತಗಳ ಸ್ವರೂಪವನ್ನು ನಿರ್ಧರಿಸಲು ಪ್ರಯತ್ನಿಸುತ್ತಾರೆ. ಆದರೆ ಉಪಖಂಡದ ಬಹುಪಾಲು ಇತಿಹಾಸಕಾರರು ಕಾನೂನು ಸುವ್ಯವಸ್ಥೆ  ಹಾಗೂ ಅಪರಾಧ ಮತ್ತು ಶಿಕ್ಷೆಗಳನ್ನು ಆಧರಿಸಿ ಪ್ರಮೇಯಗಳನ್ನು ಕಟ್ಟಲು ಸೋಲುತ್ತಾರೆ, ಅಥವಾ ನಿರ್ಲಕ್ಷಿಸಿಬಿಡುತ್ತಾರೆ. ಹೀಗಾದ ಕಾರಣದಿಂದಲೆ ಕರಾಳ ಆಡಳಿತ ನಡೆಸಿದ ಸಾಮ್ಯಾಜ್ಯಗಳು ಸುವರ್ಣ ಯುಗವೆನ್ನಿಸಿಕೊಳ್ಳುತ್ತವೆ, ತುಸುವಾದರೂ ನೈಜ ಜನಪರ ಆಡಳಿತ ನಡೆಸಿದ ರಾಜರುಗಳನ್ನು ನಿರ್ಲಕ್ಷಿಸಲಾಗುತ್ತದೆ ಅಥವಾ ದುರುಳೀಕರಿಸಿದ ಪ್ರಮೇಯಗಳನ್ನು ಮುಂದು ಮಾಡಲಾಗುತ್ತದೆ. ಹಾಗಾಗಿ ನ್ಯಾಯ ನಿರ್ಣಯದ ಆಧಾರದ ಆಯಾಮಗಳಿಂದಲೂ  ಆಡಳಿತಗಳನ್ನು ವ್ಯಾಖ್ಯಾನಿಸಬೇಕಾದ ತುರ್ತು ಈಗ ನಿರ್ಮಾಣವಾಗಿದೆ.

ಅಪರಾಧಕ್ಕೆ ನೀಡುವ ಶಿಕ್ಷೆಯಲ್ಲಿ ತಾರತಮ್ಯ ನೀತಿಗಳಿದ್ದರೆ ಅಂಥ ಸಮಾಜಗಳು ಪಕ್ಷಪಾತದಿಂದ ಕೂಡಿರುತ್ತವೆ, ನಾಗರಿಕ ಎಂಬ ಪ್ರಮೇಯಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತವೆ. ಮನುಷ್ಯರ ಹುಟ್ಟು-ಜಾತಿ ನೋಡಿಕೊಂಡು ನೀಡುವ ತಾರತಮ್ಯದ ಶಿಕ್ಷೆಯು ಯಾವ ಮಟ್ಟಿಗೆ ನಾಗರಿಕತೆಯಾದೀತು?  

ಆಧುನಿಕ ಸಮಾಜಗಳಾದರೆ ಕ್ರಿಮಿನಲ್ ಪ್ರೊಸಿಜರ್ ಕೋಡ್ ಮತ್ತು ಸಿವಿಲ್ ಪ್ರೊಸಿಜರ್ ಕೋಡುಗಳ ಮೂಲಕ ಅಪರಾಧ ಮತ್ತು ಶಿಕ್ಷೆಯನ್ನು ನಿರ್ಣಯಿಸಲಾಗುತ್ತದೆ. ಆದರೆ ಹಿಂದೆ ಈ ಕೆಲಸವನ್ನು ಮಾಡುತ್ತಿದ್ದುದು ಧರ್ಮಗ್ರಂಥಗಳು, ಸ್ಮೃತಿಗಳು ಮುಂತಾದವು. ಭಾರತದ ಸಂದರ್ಭದಲ್ಲಿ ನೋಡಿದರೆ ವೇದಗಳಿಗಿಂತ ಮೊದಲಿನ ಲಿಖಿತ ಉಲ್ಲೇಖಗಳು ಕಾಣುವುದಿಲ್ಲ. ಸಿಂಧೂ ಬಯಲಿನ ನಾಗರಿಕತೆಯ ಉಲ್ಲೇಖಗಳಿವೆಯಾದರೂ ಆ ಲಿಪಿಯನ್ನು ಇನ್ನೂ ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಋಗ್ವೇದದಲ್ಲಿನ ಹೆಚ್ಚಿನ ಸೂಕ್ತಗಳು ಸಂಪತ್ತನ್ನು ಕರುಣಿಸು, ಶತ್ರುಗಳ ಬಳಿಯಿರುವ ಪಶು ಸಂಪತ್ತನ್ನು, ಗೋಮಾಳಗಳನ್ನು ತಮಗೆ ದಕ್ಕುವಂತೆ ಮಾಡು ಎಂದು ಮಾಡುವ ಪ್ರಾರ್ಥನೆಗಳಾಗಿವೆ. ಇವು ವ್ಯಕ್ತಿಗತ ಪ್ರಾರ್ಥನೆಗಳಾಗದೆ ಬುಡಕಟ್ಟು ಮತ್ತು ಗುಂಪುಗಳ ಪ್ರಾರ್ಥನೆಗಳಾಗಿವೆ. ಇಲ್ಲಿ ಜಾತಿಗಳ ಪ್ರಸ್ತಾಪವಿಲ್ಲ. ಆದರೆ ಋಗ್ವೇದದ 10 ನೆ ಮಂಡಲದ ರಚನೆಯ ಹೊತ್ತಿಗೆ  ವರ್ಣಗಳನ್ನು ಪ್ರಸ್ತಾಪಿಸಲಾಗಿದೆ. 

ಸ್ಮೃತಿಗಳ ಕಾಲಕ್ಕೆ ಬಂದರೆ ಅಲ್ಲಿ ಜಾತಿ ವ್ಯವಸ್ಥೆಯ ಉಲ್ಲೇಖಗಳು ಶುರುವಾಗುತ್ತವೆ. ವಿವಾಹ, ಲೈಂಗಿಕ ಸಂಬಂಧ, ಆಸ್ತಿ, ಆಹಾರ, ಗಂಡು-ಹೆಣ್ಣಿನ ಸಂಬಂಧ ಇತ್ಯಾದಿಗಳ ಕುರಿತು ಇಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಲಾಗುತ್ತದೆ. ವ್ಯಕ್ತಿಯನ್ನು ಘಟಕವೆಂದು ಭಾವಿಸಲಾಗುತ್ತದೆ. ವ್ಯಕ್ತಿಗಳ ಹುಟ್ಟನ್ನು ಮತ್ತು ಅಂತಸ್ಥನ್ನು ಹುಟ್ಟಿನ ಮೂಲಕ ನಿರ್ಣಯಿಸಲಾಯಿತು. ಇಲ್ಲಿ ಅಪರಾಧಗಳಿಗೆ ಕೊಡುವ ಶಿಕ್ಷೆಯು ವರ್ಣ-ಜಾತಿಯನ್ನಾಧರಿಸಿ ಇರುವ ಹಾಗೆ ಕಾಣುತ್ತದೆ. ಹುಟ್ಟನ್ನು ಆಧರಿಸಿ ನೀಡುವ ಶಿಕ್ಷೆಯ ಕುರಿತು ಪ್ರಶ್ನೆಗಳೆದ್ದಾಗ ಅವುಗಳನ್ನು ನಿಭಾಯಿಸಲು ಕರ್ಮ, ಪುನರ್ಜನ್ಮ, ಹಣೆಬರಹ, ಸ್ವರ್ಗ, ನರಕಗಳೆಂಬ ಕಡು ವಿನಾಶಕಾರಿಯಾದ ಪ್ರಮೇಯಗಳನ್ನು ಈ ಅವಧಿಯಲ್ಲಿ ಹುಟ್ಟು ಹಾಕಲಾಯಿತು. ಪ್ರಮೇಯಗಳು ಸಮಾಜಗಳನ್ನು ಆಳುತ್ತವೆ ಎಂಬುದನ್ನು ಇವುಗಳು ಸೂಚಿಸುತ್ತವೆ. ಇಲ್ಲಿ ತ್ರಿಮೂರ್ತಿಗಳಾದಿಯಾಗಿ ಯಮ ಮುಂತಾದವರು ಸೃಷ್ಟಿಸುವ ಮತ್ತು ನಿಯಂತ್ರಿಸುವ ದೇವರುಗಳಾಗಿ  ಕೆಲಸ ಮಾಡುತ್ತಾರೆ ಎಂದು ಪುರಾಣಗಳನ್ನು ಕಟ್ಟಲಾಯಿತು. ಕಥನಗಳು ಕಾನೂನುಗಳಾಗಿ ಸಮಾಜಗಳನ್ನು ಆಳುವ  ಈ ವಿದ್ಯಮಾನ ಜಾಗತಿಕವಾದುದು. ಹಾಗೆ ನೊಡಿದರೆ ಮನುಷ್ಯನ ಇತಿಹಾಸದಲ್ಲಿ ಮೂರು ನಾಲ್ಕು ಜಾಗತೀಕರಣಗಳು ನಡೆದಂತೆ ಕಾಣುತ್ತವೆ.

 ಜಾಗತೀಕರಣಗಳು ಆರ್ಥಿಕ ಲೂಟಿಯನ್ನಷ್ಟೆ ಮುಂದು ಮಾಡಿಕೊಂಡು ನಡೆದವು ಎಂದು ಇಲ್ಲಿ ಹೇಳಲಾಗದು. ನಂಬಿಕೆ, ಆಚರಣೆ, ಸಲಕರಣೆ, ಆಯುಧಗಳ ವಿಕಾಸ ಅದಕ್ಕೂ ಮೊದಲು ಬೆಂಕಿ, ಬಟ್ಟೆಗಳ ಅನ್ವೇಷಣೆ, ಕೃಷಿ ಮತ್ತು ಕೈಗಾರಿಕೆ  ಇವೆಲ್ಲ  ಪ್ರಾಚೀನ ಸಮಾಜಗಳ ಜಾಗತೀಕರಣಗಳ ಆದಿಮ ಮಾದರಿಗಳು. ಅಪರಾಧ ಮತ್ತು ಶಿಕ್ಷೆಗಳಲ್ಲಿ ತುಸು ಸಮಾನಾಂತರ ಸಂಗತಿಗಳು ಕಂಡುಬರುತ್ತವೆ. ಆದರೆ ಉಪಖಂಡದಂತಹ ಅಸಂಖ್ಯಾತ ಬುಡಕಟ್ಟು ಗುಂಪುಗಳ ನೆಲದಲ್ಲಿ ರೂಪುಗೊಂಡ ಸಾಮ್ರಾಜ್ಯಗಳು ರಚಿಸಿದ ಕಾನೂನುಗಳು ಮಾತ್ರ ತಾರತಮ್ಯವನ್ನು ಆಧರಿಸಿಯೆ ನಿರ್ಣೀತವಾದವು. ತಾರತಮ್ಯವು ಪ್ರಾಚೀನ ಜಾಗತಿಕ ಸಮಾಜಗಳಲ್ಲಿ ಇದ್ದಿತಾದರೂ ಉಪಖಂಡದಲ್ಲಿದ್ದ ಪ್ರಮಾಣದಲ್ಲಿ ಇರಲಿಲ್ಲವೆನ್ನಿಸುತ್ತದೆ.

ಬೌದ್ಧರ ನಂತರ ಕ್ಷಾತ್ರವೆಂಬುದು ದುರ್ಬಲವಾಯಿತೆಂದು ಹೇಳಿ  ಶುಂಗಮನೆತನದ  ಬ್ರಾಹ್ಮಣರು  ಖಡ್ಗವನ್ನು ಕೈಗೆತ್ತಿಕೊಂಡರು. ಗುಪ್ತರು ಮುಂತಾದವರು ಮನುಸ್ಮೃತಿ ಮುಂತಾದ ನಿಯಮಗಳನ್ನು ಚಾಚೂ ತಪ್ಪದೆ ಅನುಷ್ಠಾನಮಾಡಲು ಪ್ರಯತ್ನಿಸಿದರು. ಬೌದ್ಧ ಧರ್ಮವು ಆದಷ್ಟು ದಕ್ಷಿಣಕ್ಕೆ ಬರಲು ಹಾಗೂ ಗುಪ್ತ ಸಾಮ್ರಾಜ್ಯದ ಹೊರಗೆ ಹೋಗಲು ಪ್ರಯತ್ನಿಸಿದ ಹಾಗೆ ಕಾಣುತ್ತದೆ. ಆದರೆ ಗುಪ್ತರ ಕಾಲದಲ್ಲಿ ಮತ್ತೆ ಕ್ಷಾತ್ರಕ್ಕೆ ವಿಪರೀತ ಮಹತ್ವ ನೀಡಲಾಯಿತು. “ರಾಜಾ ಪ್ರತ್ಯಕ್ಷ ದೇವತಾಃ”, ‘ನಃ ವಿಷ್ಣು ಪೃಥಿವೀಪತಿಃ’ ಮುಂತಾದ ಕಥನಗಳನ್ನು ಕಟ್ಟಿ ಆಡಳಿತವನ್ನು ನಡೆಸಲು ಪ್ರಯತ್ನಿಸಲಾಯಿತು. ಸಂಸ್ಕೃತದ ಮುಕ್ತಕಗಳಲ್ಲಿ ಘೋಷಣೆ ರೀತಿಯ ಈ ಮಾತುಗಳನ್ನು ಉಲ್ಲೇಖಿಸಲಾಗಿದೆ. ವಿಷ್ಣುವಲ್ಲದವನು ರಾಜನಾಗಲಾರ, ರಾಜನೆ ಪ್ರತ್ಯಕ್ಷ ದೈವ ರೀತಿಯ ಮಾತುಗಳ ಉಗಮದ ಹಿಂದಿನ ತರ್ಕ ಏನು? ಬೌದ್ಧರ ಕಾರಣಕ್ಕೆ ಕುಸಿದು ಹೋಗಿದ್ದ ಕ್ಷಾತ್ರವನ್ನು ಮೇಲೆತ್ತಲು ನಡೆಸಿದ ಪ್ರಯತ್ನವಿರುವಂತೆ ಕಾಣುತ್ತದೆ. ವಿದ್ವಾಂಸರ ಪ್ರಕಾರ ಈ ರೀತಿಯ ಮಾತುಗಳನ್ನು ಗುಪ್ತರ ಕಾಲದಲ್ಲಿ ಚಾಲ್ತಿಗೆ ತಂದಿರಬಹುದು. ಋಗ್ವೇದದ ಆರ್ಯ ಬುಡಕಟ್ಟುಗಳ ನಾಯಕರ ಮೇಲಿನ ಸ್ತುತಿಗೀತೆಗಳನ್ನು ಕವಿ ಋಷಿಗಳು ಹಾಡಿದ್ದಾರೆ. ಆದರೆ ಅವರುಗಳು ಬೇರೆ ಬುಡಕಟ್ಟುಗಳ ಮೇಲೆ ಬಿದ್ದು ಎಷ್ಟು ಪಶುಸಂಪತ್ತನ್ನು, ಗೋಮಾಳಗಳನ್ನು ವಶಪಡಿಸಿಕೊಂಡರು, ಅವರಿಗೆ ಇಂದ್ರ ಮುಂತಾದವರ ಬೆಂಬಲ ಎಷ್ಟಿತ್ತು ಎಂದು ಹಾಡಲಾಗಿದೆ. ಇಲ್ಲಿ ಬುಡಕಟ್ಟು ಕೇಂದ್ರಿತ ಹಿತಾಸಕ್ತಿ ರಕ್ಷಣೆ, ವರ್ಧನೆಯ ಕುರಿತ ಆಸಕ್ತಿಗಳ ಅಭಿವ್ಯಕ್ತಿಗಳು ಕಾಣುತ್ತವೆ.  ಬೌದ್ಧರ ಕಾಲದ ಸಾಮ್ರಾಜ್ಯಗಳ ಅರಸುಗಳು ತಮ್ಮನ್ನು ಹೊಗಳಿ ಅಮರರಾಗಿಸುವ ಕವಿಗಳನ್ನು ಆಸ್ಥಾನಗಳಲ್ಲಿ ನೇಮಕ ಮಾಡಿಕೊಂಡರು. ಈ ಕವಿಗಳ ಕಾವ್ಯದಲ್ಲಿ ಕೂಡ ಅಪರಾಧ ಮತ್ತು ಶಿಕ್ಷೆಯ ಕುರಿತಾದಂತೆ ಸ್ಪಷ್ಟವಾದ ನಿದರ್ಶನಗಳಿಲ್ಲ.

 ಶಕುಂತಲೆಯನ್ನು ತೊರೆದ ದುಶ್ಯಂತನಿಗೆ ಮರೆವು ಅಳಿದು ಮತ್ತೆ ಹುಡುಕಿಕೊಂಡು ಬರುತ್ತಾನೆ. ಕಾವ್ಯವು ದುಶ್ಯಂತನ ಸುತ್ತ ಸುತ್ತದೆ ಶಾಕುಂತಲೆಯ ಸೌಂದರ್ಯ ಮತ್ತು ಅವಳ ಕಣ್ಣೀರಿನ ಚುಂಗು ಹಿಡಿದು ಓಡಾಡುತ್ತದೆ.  ಶೂದ್ರಕನ ಮೃಚ್ಛ ಕಟಿಕದಲ್ಲಿ ಬೌದ್ಧರ ನಿಂದನೆ ತಾರಕಕ್ಕೇರುತ್ತದೆ.  ಬುದ್ಧ ಹೇಳಿದ್ದ ಉದಾತ್ತ ಮಾನವ ಪ್ರೇಮದ ತತ್ವಗಳಿಲ್ಲಿ ಕಾಣೆಯಾಗುತ್ತವೆ. ಪಾಂಥಿಕ ಸಂಘರ್ಷಗಳು ಗುಪ್ತರ ಕಾಲದಲ್ಲಿ ಮೊದಲಿಗೆ ತುರೀಯಾವಸ್ಥೆಗೆ ತಲುಪಿದಂತೆ ಕಾಣುತ್ತದೆ. ಆದರೆ ಬೌದ್ಧರನ್ನು ಹೇಗೆ ನಾಶ ಮಾಡಲಾಯಿತು ಎಂದು ಕೊಸಾಂಬಿಯವರು ವಿವರಿಸುತ್ತಾರೆ. 

 ಬುದ್ಧ  ಮನುಷ್ಯರು ಹಿಂಸೆಯಿಲ್ಲದೆ ಬದುಕಬೇಕಾದರೆ ಇರಬೇಕಾದ  ನೀತೆಸಂಹಿತೆಯನ್ನು ಪಂಚಶೀಲ ತತ್ವಗಳನ್ನು ಸೂತ್ರ ರೂಪದಲ್ಲಿ ಹೇಳಿದ. ಕೊಲ್ಲುವುದಾಗಲಿ, ಹಿಂಸಿಸುವುದಾಗಲಿ ಮಾಡಬಾರದು, ಕದಿಯಬಾರದು, ಅತಿಯಾಸೆ ಇರಬಾರದು, ಹುಸಿಯನ್ನು ನುಡಿಯಬಾರದು, ಮಾದಕ ವಸ್ತುಗಳನ್ನು ಸೇವಿಸಬಾರದು ಎಂದ. ಆದರೆ ಇವುಗಳನ್ನು ಉಲ್ಲಂಘಿಸಿ ಅಪರಾಧ ಮಾಡಿದವರಿಗೆ ಏನು ಶಿಕ್ಷೆ? ಶಿಕ್ಷೆ ಯಾರು ಕೊಡಬೇಕು? ಹೇಗೆ ಕೊಡಬೇಕು? ಎಂಬ ಕುರಿತು ಮೌನವಾದ.  ಈ ಮೌನದ ಜಾಗವನ್ನು ವೈದಿಕ ಮನು ಮುಂತಾದವರು ಬಳಸಿಕೊಂಡರು.  ಬುದ್ಧನ ಲಕ್ಷ್ಯ ಇರುವುದು ಮನುಷ್ಯನಲ್ಲಿ ಭರವಸೆ ಇಡುವುದರಲ್ಲಿ, ಮನು, ಯಾಜ್ಞವಲ್ಕ್ಯ ಮುಂತಾದವರ ಲಕ್ಷ್ಯ ಇರುವುದು ಮನುಷ್ಯ ಹುಟ್ಟಿರುವುದೆ ತಪ್ಪು ಮಾಡುವುದಕ್ಕೆ ಎಂಬ ನಕಾರಾತ್ಮಕ ಧೋರಣೆಯಲ್ಲಿ. ಚಾಣಕ್ಯನ ಬೋಧನೆಯಲ್ಲೂ ಜನರನ್ನು ಯಾವ ಕಾರಣಕ್ಕೂ ನಂಬಬಾರದು ಎಂಬ ಮಾತು ಪದೇ ಪದೇ ಬರುತ್ತದೆ.  ಜನರ ಸಿಟ್ಟು- ಆಕ್ರೋಶಗಳನ್ನು ತಣಿಸಲು ಭಿನ್ನ ಭಿನ್ನ ಭಯ ಹುಟ್ಟಿಸುವ ಪ್ರಯೋಗಗಳನ್ನು ಮಾಡಬೇಕೆಂದು ಹೇಳುತ್ತಾನೆ.

 ಬುದ್ಧ ಹೇಳಿದ ಪಂಚಶೀಲಗಳು ಬಹುತೇಕ ಸಮಾಜಗಳ ವಿಶ್ವಾತ್ಮಕವಾದ ತತ್ವಗಳಾಗಿರುವಂತೆ ಕಾಣಿಸುತ್ತವೆ. ಇದಕ್ಕೆ ವಿರುದ್ಧವಾದ ಬುಡಕಟ್ಟುಗಳು ಇರಲಿಲ್ಲವೆಂದಲ್ಲ.  ಆಹಾರಕ್ಕಾಗಿ, ಭೂಮಿಗಾಗಿ ಮಕ್ಕಳು, ಮರಿಗಳೆನ್ನದೆ ಚಚ್ಚಿ ಕೊಂದ ಬುಡಕಟ್ಟುಗಳ ಕತೆಗಳು ಹಿಂದೆಯೂ ಇದ್ದವು,  ಈಗಲೂ ಇವೆ. ಆದರೆ ನಾಗರಿಕ ಆಡಳಿತ ವ್ಯವಸ್ಥೆಯಲ್ಲಿ ಜನರು ಶಾಂತಿ ಮತ್ತು ನೆಮ್ಮದಿಗಳಿಂದ ಬದುಕಬೇಕಾದರೆ ದ್ವೇಷ, ಹಿಂಸೆ, ಅಭದ್ರತೆ, ಅಪನಂಬಿಕೆಗಳು ಇರಬಾರದು ಎಂಬ ಕಾರಣಕ್ಕೆ ಹಲವು ನೀತಿ ಸಂಹಿತೆಗಳನ್ನು ಭೂ ಮಂಡಲದ ಮೇಲಿನ ಹಲವು ಸಮಾಜಗಳಲ್ಲಿ ಹುಟ್ಟಿದ ಧರ್ಮ ಪ್ರವರ್ತಕರು ಬೋಧಿಸಿದ್ದಾರೆ.

ಊಳಿಗಮಾನ್ಯ ಮೌಲ್ಯಗಳು ಕೂಡ ಸಮಾಜದಿಂದ ಸಮಾಜಕ್ಕೆ ಭಿನ್ನವಾಗುತ್ತವೆ. ಭಾರತದ ಸಂದರ್ಭಕ್ಕೆ ಸಂಬಂಧಿಸಿದಂತೆ ಮನುಸ್ಮೃತಿಯ ನಿಯಮಗಳೆ ಬಹಳ ಸ್ಪಷ್ಟವಾಗಿ ಊಳಿಗಮಾನ್ಯ ಮೌಲ್ಯಗಳು ಯಾವುವು ಎಂಬುದನ್ನು ನಿರ್ಧರಿಸುವ ಸಾರಾಂಶ ರೂಪಿಯಾದ ಗ್ರಂಥವಾಗಿದೆ. ಅದರ ಪ್ರಕಾರ ವರ್ಣ-ಜಾತಿಗಳ ಉಲ್ಲಂಘನೆಯ ನಿರೋಧ, ಹೊರಬಾಂಧವ್ಯ ವಿವಾಹ ವ್ಯವಸ್ಥೆಯ ನಿಷೇಧ, ಪುರುಷ ಮೇಲಾಳ್ವಿಕೆ, ಶೂದ್ರ-ಚಾಂಡಾಲರ ದಮನದ ಸಮರ್ಥನೆ, ಜಾತಿ- ವರ್ಣಗಳನ್ನಾಧರಿಸಿ ವೃತ್ತಿಯ ಆಯ್ಕೆ ಮತ್ತು ವೃತ್ತಿಯ ಘನತೆ, ಸ್ವರ್ಗ, ನರಕ, ಹಣೆಬರಹ, ಪುನರ್ಜನ್ಮ ಮುಂತಾದವುಗಳ ಮೂಲಕ ತಾರತಮ್ಯ ನಿಯಮಗಳ ಪ್ರತಿಪಾದನೆ ಮಾಡಲಾಗುತ್ತದೆ. ಆಹಾರ ಪದ್ಧತಿಯ ಕಠಿಣ ವ್ಯಾಖ್ಯಾನ, ಸತಿ, ಬಾಲ್ಯ ವಿವಾಹ ಮುಂತಾದವುಗಳು ಒಂದು ಬಗೆಯ ಊಳಿಗಮಾನ್ಯ ಮೌಲ್ಯಗಳಾದವು. ಬಾಬಾ ಸಾಹೇಬರ ಪ್ರಕಾರ ಮೌರ್ಯ ಅರಸರನ್ನು ಕೊಂದು ಅಧಿಕಾರಕ್ಕೆ ಬಂದ ಬ್ರಾಹ್ಮಣ ಪುಶ್ಯಮಿತ್ರನ ಕಾಲದಲ್ಲಿಯೆ ಮನುಸ್ಮೃತಿಯ ಜಾರಿಯ ಕೆಲಸವೂ ನಡೆದಿದೆ. ಬಹುಶಃ ಮಹಾಭಾರತ, ರಾಮಾಯಣಗಳ ಕಾಲದಲ್ಲಿ  ಪ್ರಾರಂಭವಾದ ಊಳಿಗಮಾನ್ಯ ವ್ಯವಸ್ಥೆಯನ್ನು ನಿಯಮಬದ್ಧಗೊಳಿಸಿದ್ದು ಮನು ಮುಂತಾದ ಧರ್ಮಶಾಸ್ತ್ರಕಾರರು. 

  ಬಾಬಾ ಸಾಹೇಬರು ಮನು ಹುಟ್ಟನ್ನು ಆಧರಿಸಿ ಶಿಕ್ಷೆಯನ್ನು ನಿರ್ಧಾರ ಮಾಡಬೇಕೆಂದು ಪ್ರತಿಪಾದಿಸುತ್ತಾನೆ ಎನ್ನುತ್ತಾರೆ. ಹುಟ್ಟನ್ನು ಆಧರಿಸಿ ದ್ವಿಜತ್ವದ ವ್ಯಾಖ್ಯಾನ ಮಾಡಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಉಪನಯನದ ಅಧಿಕಾರ ನೀಡಲಾಗಿದೆ. ಯಾರಿಗೆ ಉಪನಯನವಾಗುತ್ತದೊ ಅವರು ಮಾತ್ರ ಶಿಕ್ಷಣ ಪಡೆಯಬಹುದಾಗಿದೆ. ಶಿಕ್ಷಣ ಪಡೆದವರಿಗೆ ಮಾತ್ರ ಉದ್ಯೋಗ ಎಂಬುದು ನಿಯಮವಾಗಿತ್ತು. ಉದ್ಯೋಗವು ನ್ಯಾಯ ನಿರ್ಣಯ ಮಾಡುವ ಅಧಿಕಾರವನ್ನೂ ಒಳಗೊಂಡಿತ್ತು. ನ್ಯಾಯಾನ್ಯಾಯಗಳು ಯಾವುವು ಎಂಬುದನ್ನು ಧರ್ಮಶಾಸ್ತ್ರಗ್ರಂಥಗಳು ಸ್ಪಷ್ಟವಾಗಿ ಹೇಳಿವೆ ಎಂದಾಗಿತ್ತು. ಈ ನಿಯಮಗಳನ್ನು ಕ್ಷತ್ರಿಯ ರಾಜರುಗಳು ಪಾಲಿಸಬೇಕು ಎಂದು ಹೇಳಲಾಯಿತು. 

ಈ ರೀತಿಯ ನಿಯಮಗಳನ್ನು ಮಾಡಿ ವರ್ಣ ವ್ಯವಸ್ಥೆಯಲ್ಲಿ ಮೇಲು ಸ್ತರದಲ್ಲಿದ್ದ ಶೂದ್ರರಲ್ಲದವರು ಮಾಡಿದ ತಪ್ಪಿಗೆ ತೃಣ ಮಾತ್ರದ ಶಿಕ್ಷೆಯನ್ನು, ಅಂಥದ್ದೆ ತಪ್ಪು ಮಾಡಿದ್ದ ಶೂದ್ರ ಹಾಗೂ ಚಾಂಡಾಲರಿಗೆ ಮೂತ್ರ ಬಳಿದು ತಲೆ ಬೋಳಿಸುವುದು, ಆಸ್ತಿ ಇದ್ದರೆ ಅದನ್ನು ಕಿತ್ತುಕೊಳ್ಳುವುದರಿಂದ ಹಿಡಿದು ಮರಣ ದಂಡನೆಯವರೆಗೆ ಶಿಕ್ಷೆ ಕೊಡಬಹುದಾಗಿತ್ತು. 

ಮನುಸ್ಮೃತಿಯಂತಹ ಸ್ಪಷ್ಟ ನಿಯಮಗಳ ಅಗತ್ಯ ಯಾಕೆ ಬಿತ್ತು? ಮೌರ್ಯರು ಬೌದ್ಧ ಧರ್ಮಕ್ಕೆ ಪರಿವರ್ತನೆಯಾದ ನಂತರ ಕ್ಷಾತ್ರವನ್ನು ಕಡೆಗಣಿಸಲಾಯಿತು ಎಂಬುದು ಬೌದ್ಧ ವಿರೋಧಿಗಳ ಆರೋಪವಷ್ಟೆ ಅಲ್ಲ, ಶಂಕರ್ ಮೊಕಾಶಿ ಪುಣೇಕರ್ ಅಂಥವರೂ ಕೂಡ ತಮ್ಮ ‘ ಹರಿಜನ್ ಕಾಂಟ್ರಿಬ್ಯೂಷನ್ ಟು ಮಿಡೀವಲ್ ಇಂಡಿಯನ್ ಥಾಟ್;  [ಮಧ್ಯ ಯುಗೀನ ಭಾರತ ಅಂತ್ಯಜರ ತತ್ವ ಚಿಂತನೆಗಳು, ಅನು; ಬಂಜಗೆರೆ ಜಯಪ್ರಕಾಶ್] ಎಂಬ ಕೃತಿಯಲ್ಲಿ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ. ಕ್ಷಾತ್ರ ಆಚರಣೆಗಳು ಕಡಿಮೆಯಾದ ಕಾರಣ ಯಜ್ಞ, ಯಾಗಾದಿಗಳು ಕಡಿಮೆಯಾಗಿ ಅವುಗಳನ್ನು ಆಧರಿಸಿ ಜೀವನಯಾಪನೆ ಮಾಡುತ್ತಿದ್ದ ಜನರು ಕಕ್ಕಾಬಿಕ್ಕಿಯಾಗಿರಬೇಕು. ಹಾಗಾಗಿ ವರ್ಣಾಶ್ರಮ ಧರ್ಮದ ನಿಯಮದ ಪ್ರಕಾರ  ಯಾರು ಖಡ್ಗ ಹಿಡಿಯಬಾರದಿತ್ತೊ ಅವರು ಖಡ್ಗ ಹಿಡಿದು ಸಾಮ್ರಾಜ್ಯ ಸ್ಥಾಪಿಸಿದರು. ಆದರೆ ಸಾಮ್ರಾಜ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗದೆಂಬ ಅರಿವಿದ್ದ ಕಾರಣದಿಂದಲೆ ಧರ್ಮಶಾಸ್ತç ಗ್ರಂಥಗಳ ರಚನೆಯಾಗಿರಬೇಕು. ಗುಪ್ತರ ಕಾಲದವರೆಗೆ ಕ್ಷತ್ರಿಯತನವೆಂಬುದು ಎರಡನೆಯ ದರ್ಜೆಯ ವೃತ್ತಿಯಾಗಿ ಉಳಿದ ಹಾಗೆ ಕಾಣುತ್ತದೆ. ಗುಪ್ತರ ನಂತರ ‘ರಾಜಾ ಪ್ರತ್ಯಕ್ಷ ದೈವ’ ಎಂಬುದು ಚಾಲ್ತಿಗೆ ಬಂದಿರಬಹುದೆಂಬುದು ಕೆಲವರ ಅಭಿಪ್ರಾಯವಾದರೂ ಮಹಾಭಾರತ ಕೃತಿಯಲ್ಲಿಯೆ ಬ್ರಾಹ್ಮಣರನ್ನು ಅಮುಖ್ಯವೆಂದು ವ್ಯಾಖ್ಯಾನಿಸುವ ಅನೇಕ ಸಂದರ್ಭಗಳು ಇವೆ. ಹಾಗಾಗಿಯೆ ಆರ್ಥಿಕತೆ ಎಂಬುದು ರಾಜಕೀಯವನ್ನು ಹಾಗೂ ಧಾರ್ಮಿಕತೆಯನ್ನೂ ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ ಎಂಬ ಪ್ರಮೇಯಗಳಿಗೆ ಜೀವ ಬರುತ್ತದೆ.

ಬುದ್ಧನು  ಜಾತಿ, ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುವ ವ್ಯಾಖ್ಯಾನಗಳನ್ನು ಮುರಿದು  ಸರ್ವರಿಗೂ ಸಮಾನವಾದ ಆಚರಣೆಗಳನ್ನು ವಿವರಿಸಿದ್ದ. ಬುದ್ಧ ಹೇಳಿದ ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ.  ಪಂಚಶೀಲ ತತ್ವಗಳ ಜೊತೆಗೆ ನಂಬಿಕೆ, ಆಲೋಚನೆ, ನಡತೆ, ವಿಚಾರ, ಮಾತು, ಧ್ಯಾನ, ಪ್ರಯತ್ನ, ಜೀವನೋಪಾಯಗಳು ಸಮ್ಯಕ್‌ತನದಿಂದ ಕೂಡಿರಬೇಕು. ಸರಳವಾಗಿ ಹೇಳಬೇಕೆಂದರೆ ಒಳ್ಳೆಯತನದಿಂದ ಕೂಡಿರಬೇಕು ಎಂಬುದಾಗಿತ್ತು. ಈ ನೀತಿ ಸಂಹಿತೆಯನ್ನು ಪಾಲಿಸಿದ್ದಾರೊ ಇಲ್ಲವೊ ಎಂದು ಪರಿಶೀಲಿಸಲು ಯಾರಿಗೂ ಅಧಿಕಾರವನ್ನು ಬುದ್ಧ ಧರ್ಮವು ಕೊಟ್ಟಿಲ್ಲ.  ಈ ಸಂಹಿತೆಗಳು ಸ್ವಯಂ ನಿಯಂತ್ರಣಕ್ಕೆ ಸಂಬಂಧಪಟ್ಟುವಾಗಿವೆ. ಸ್ವಯಂ ನಿಯಂತ್ರಣವೆ ಆತ್ಯಂತಿಕ ಎಂಬುದು ಅನೇಕ ದಾರ್ಶನಿಕರ ಚಿಂತನೆಗಳಾಗಿವೆ. ಬುದ್ಧನು ದೇವರು, ಸ್ವರ್ಗ, ನರಕಗಳೆಂಬ ಎಲ್ಲ ಅಮೂರ್ತವಾದ ಸಂಗತಿಗಳ ಕುರಿತು ಮೌನವಾಗಿರುತ್ತಿದ್ದ. ನಿರ್ಭೀತಿ ಮತ್ತು ಋಜು ಮಾರ್ಗಗಳನ್ನು ಪಾಲಿಸಬೇಕಾದ ಅನಿವಾರ್ಯತೆಯನ್ನು ಪ್ರಸ್ತಾಪಿಸಿದ. 

ಕೊಲೆ, ಹಿಂಸೆ, ಕಳ್ಳತನ, ದುರಾಸೆ, ಸುಳ್ಳು, ಮಾದಕ ಪದಾರ್ಥ ಸೇವನೆ ಮುಂತಾದವು ನಿಷಿದ್ಧ ಎಂಬುದು ವಿಶ್ವಾತ್ಮಕವಾದ ಸೂತ್ರಗಳಾಗಿರುವಂತೆ ಕಾಣುತ್ತವೆ. ಸೆಮೆಟಿಕ್ ಧರ್ಮಗಳಲ್ಲೂ ಇದೆ ರೀತಿಯ ವ್ಯಾಖ್ಯಾನಗಳಿವೆ. ಇವುಗಳ ಜೊತೆಗೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ವ್ಯಾಪಾರಿ ಮಾರ್ಗಗಳಲ್ಲಿ ಬರುತ್ತಿದ್ದ ಕಾರಣ ಸುಳ್ಳು ಆರೋಪ ಮತ್ತು ಕಲಬೆರಕೆಗಳನ್ನು ಗಂಭೀರ ಅಪರಾಧಗಳನ್ನಾಗಿ ಭಾವಿಸಲಾಗುತ್ತಿತ್ತು.  

ಬೈಬಲಿಕಲ್ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಬಹುಪಾಲು ಇದೇ ರೀತಿಯ ಅಂಶಗಳು ಪ್ರಸ್ತಾಪವಾಗುತ್ತವೆ. ಆದರೆ ಅಲ್ಲಿ ಶಿಕ್ಷೆ ಏನು ಕೊಡಬೇಕೆಂದು ಪ್ರಸ್ತಾಪಿಸಲಾಗಿದೆ.  ಮೂರ್ತಿ ಪೂಜೆ, ಶಿಶು ಹತ್ಯೆ, ನರಹತ್ಯೆ, ಮಾಟ ಮಂತ್ರ, ಸುಳ್ಳು ಭವಿಷ್ಯ ಹೇಳುವುದು, ದೂಷಣೆ ಮಾಡುವುದು, ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದು, ಕಳ್ಳತನ, ಹಿರಿಯರಿಗೆ ಅಗೌರವ ತೋರುವುದು, ಲೈಂಗಿಕ ಅಪರಾಧಗಳಿಗೆ ನಿಷೇಧ ಮುಂತಾದವು ಸೇರಿದ್ದವು. ಇಸ್ಲಾಂನಲ್ಲಿ ತುಸು ಸರಳವಾದ ವ್ಯವಸ್ಥೆ ತರಲಾಯಿತು. ಇಲ್ಲಿ ಧರ್ಮಗುರುವು ರಾಜನಾಗಿಯೂ ಕೆಲಸ ಮಾಡಬಹುದಾಗಿತ್ತು. ಖಲೀಫರುಗಳೆಂದರೆ ರಾಜರೂ ಹೌದು ಧರ್ಮ ಗುರುಗಳೂ ಹೌದು. 

ಹಲವು ವಿದ್ವಾಂಸರುಗಳ ಪ್ರಕಾರ ಏಕ ದೇವೋಪಾಸನೆ, ಮೂರ್ತಿ ಪೂಜೆಯ ನಿರಾಕರಣೆ, ಗಳಿಸಿದ್ದರಲ್ಲಿ ತುಸು ಭಾಗವನ್ನು ಹಂಚುವುದು, ಸೇವೆ ಸಲ್ಲಿಸುವುದು ಮುಂತಾದ  ಅಂಶಗಳು ಇಸ್ಲಾಂ ಮತ್ತು ವೀರಶೈವದಲ್ಲೂ ಸಮಾನವಾಗಿವೆ. ಸಿಖ್ ಧರ್ಮದಲ್ಲೂ ಇಂಥದೆ ವಿಚಾರಗಳಿವೆ.

ಕ್ರೈಮ್ ಎಂಬುದು ಲ್ಯಾಟಿನ್ ಭಾಷೆಯ ‘ಕ್ರಿಮಿನ್’ ಪದದಿಂದ ಉತ್ಪನ್ನವಾಗಿದೆ. ಕ್ರೀ ಎಂಬುದು ಇದೇ ಅರ್ಥದಲ್ಲಿ ಸಂಸ್ಕೃತದಲ್ಲಿ ಬಳಕೆಯಾಗುತ್ತದೆ. ಎರಡೂ ಕೂಡ ‘ಮಾಡು’ ಎಂಬ ಧ್ವನಿಯನ್ನು ಅಭಿವ್ಯಕ್ತಿಸುತ್ತವೆ. ಇಂಡೋ ಯುರೋಪಿಯನ್ ಭಾಷೆಗಳ ಸಾಮಾನ್ಯಾಂಶ ಇದು. ಕ್ರೈಮ್ ಎಂಬುದು ಸ್ಪಷ್ಟವಾಗಿ ರಾಜಕೀಯವಾದ ಪರಿಭಾಷೆಯಾಗಿದೆ. ಏಕೆಂದರೆ, ಕೆಲವು ಸಮಾಜಗಳಲ್ಲಿ ನಿಯಮಬದ್ಧವಾದದ್ದು ಮತ್ತೊಂದು ಸಮಾಜದಲ್ಲಿ ಅಪರಾಧವಾಗಬಹುದು. ಹಾಗಾಗಿ ರಾಜಕೀಯ ಅವಸ್ಥೆಯ ಮೇಲೆ ಇದರ ವ್ಯಾಖ್ಯಾನ ಮಾಡಲಾಗುತ್ತದೆ. ಪಾಪ, ಸಮಾಜ ವಿರೋಧಿತನ, ಅಸಹಜ ವರ್ತನೆಗಳನ್ನು ಅಪರಾಧ ಎಂದು ಭಾವಿಸಲಾಗುತ್ತಿತ್ತು. ಆದರೆ ಇವುಗಳನ್ನು ನಿರ್ಧರಿಸುವ ವಿಧಾನದಲ್ಲಿ ಮಾತ್ರ ಭಿನ್ನತೆಗಳಿದ್ದವು. ಹಾಗಾಗಿಯೆ “ಪಾಪ ಪುಣ್ಯಗಳೆಂಬವು ತಮ್ಮ ಇಷ್ಟ ಕಂಡಿರೆ, ಅಯ್ಯಾ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ” ಎಂಬ ಬಸವಣ್ಣನವರ ವಚನವು ಮಹತ್ವ ಪಡೆದುಕೊಳ್ಳುತ್ತದೆ. ಪಾಪ ಪುಣ್ಯಗಳನ್ನು ನಿರ್ಧರಿಸಲು ಸಿದ್ಧಸೂತ್ರಗಳನ್ನು ರಚಿಸಬೇಕೆಂಬುದು ಸ್ಮೃತಿಕಾರರ- ಶಾಸ್ತ್ರಕಾರರ ಹಠ. ಆದರೆ ಬಸವಣ್ಣನವರು “ ಶಾಸ್ತ್ರಘನವೆಂಬೆನೆ? ಕರ್ಮವ ಭಜಿಸುತ್ತಿದೆ, ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ. ಸ್ಮೃತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ. ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ” ಎಂದು ಹೇಳಿ ಮೊದಲಿನ ನ್ಯಾಯನಿರ್ಣಯದ ಪ್ರಮಾಣ – ಪ್ರಮೇಯ ಗ್ರಂಥಗಳನ್ನು ಬಸವಣ್ಣನವರು ಮುರಿದು ಹಾಕುತ್ತಾರೆ.

ಬುದ್ಧನಾಗಲಿ, ಬಸವಣ್ಣನವರಾಗಲಿ ಮನುಷ್ಯನಿಗೆ ನೈತಿಕತೆ ಎಂಬುದು ಬಹಳ ಮುಖ್ಯವಾದ ಸಂಗತಿ ಎಂದು ಭಾವಿಸಿದ್ದರು. ನೈತಿಕತೆ ಎಂಬುದು ಹುಸಿಯಾಗಿರಬಾರದು, ನಟನೆಯೂ ಆಗಿರಬಾರದು. ನೈತಿಕತೆ ಎಂಬುದು ಇನ್ನೊಬ್ಬರ ಮುಂದೆ ಪ್ರದರ್ಶಿಸಬೇಕಾದ ವಿಚಾರ ಎಂದಾದ ಕೂಡಲೆ ಅಲ್ಲಿ ನಟನೆ ಪ್ರಾರಂಭವಾಗುತ್ತದೆ. ಅಜ್ಞಾನ ಹೆಚ್ಚಿರುವ ಕಡೆ, ಉದಾರವಾದ ಕಡಿಮೆ ಇರುವ ಕಡೆ ಸಂಹಿತೆಗಳು, ಕಾನೂನುಗಳು ಸಭ್ಯರಾಗಿರುವುದನ್ನು ಒತ್ತಾಯಿಸಿ ಈಡೇರಿಸಿಕೊಳ್ಳುತ್ತವೆ. ಆದರೆ ಮನುಷ್ಯರ ಒಳಗಿನಿಂದಲೆ ಮಾನವೀಯತೆ ಮತ್ತು ಉದಾರತೆಗಳು ಹುಟ್ಟಬೇಕಾದರೆ ಆಳವಾದ ಜ್ಞಾನದ ಅಗತ್ಯ ಇರುತ್ತದೆ. ಸಮಾಜ ಎಂದರೆ ಬಿಡಿ ಬಿಡಿಯಾದ ಮನುಷ್ಯರ ಒಟ್ಟು ರೂಪ ತಾನೆ. ಸಮ್ಯಕ್ ಜ್ಞಾನ ಎಂದು ಬುದ್ಧ ಹೇಳುತ್ತಾನಲ್ಲ ಅಂಥ ಜ್ಞಾನವಿದ್ದರೆ ಮನುಷ್ಯ ಹಾದಿ ತಪ್ಪುವುದಿಲ್ಲ. ಅಲ್ಲಿ ಮಿಲಿಟರಿ, ಪೊಲೀಸು, ಕೋರ್ಟು, ಸೆರೆಮನೆ, ನೇಣು ಇತ್ಯಾದಿಗಳ ಅಗತ್ಯ ಇರುವುದಿಲ್ಲ. ಬಹುಶಃ ಅಂಥ ಸಮಾಜಗಳಲ್ಲಿ ವಿಷದ ಉತ್ಪಾದನೆಯೂ ಕಡಿಮೆ ಇರಬಹುದು. ಇದನ್ನು ಬಸವಣ್ಣನವರು ‘ಕೂಡಲ ಸಂಗಮದೇವಾ, ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ’ ಎನ್ನುತ್ತಾರೆ. ಕೋಲು ನೊಂದರೆ ಹಾವು ಸಾಯುತ್ತದೆ ಎಂಬುದು ನಿಸರ್ಗದ ನಿಯಮ. ಹಾವು ಸಾಯದಂತೆ, ಕೋಲು ನೋಯದಂತೆ ನೋಡಿಕೊಳ್ಳಬೇಕಾದುದು ನಾಗರಿಕ ಧರ್ಮ, ಅದೇ ಜ್ಞಾನ. ಅದೇ ವಿವೇಕ. ಅದೇ ಧರ್ಮ. ಬುದ್ಧ ಮತ್ತು ಬಸವಣ್ಣನವರು ಹೇಳುವ ಜ್ಞಾನ ಮೀಮಾಂಸೆ ಇದೇ ಎಂದು ಭಾವಿಸಬಹುದಾಗಿದೆ.

ಇಂಥ ಮನಸ್ಥಿತಿಗೆ ತಲುಪಿದ ಸಮಾಜದಲ್ಲಿ ಅಪರಾಧ ಮತ್ತು ಶಿಕ್ಷೆಗೆ ಕಡಿಮೆ ಅವಕಾಶವಿರುತ್ತದೆ. ಇದನ್ನೆ ಟಾಲ್ ಸ್ಟಾಯ್ ‘ಕಿಂಗಡಮ್ ಆಫ್ ಗಾಡ್ ಇಸ್ ವಿಥಿನ್ ಯೂ’ ಎನ್ನುತ್ತಾನೆ. ಇದನ್ನು ಆಧ್ಯಾತ್ಮಿಕವೆಂದು ಭಾವಿಸಬೇಕಾಗಿಲ್ಲ.‘ದೇಹವೆ ದೇವಾಲಯ’ ಎಂಬುದು ತಾರ್ಕಿಕತೆಯು ಅಂತ್ಯ ಮುಟ್ಟಿದ ರಾಜಕೀಯ ಪರಿಭಾಷೆ.‘ದೇವ ಸಾಮ್ರಾಜ್ಯವು ನಿನ್ನೊಳಗೆ ಇದೆ’ ಎಂಬ ಟಾಲ್‌ಸ್ಟಾಯ್‌ನ ಮಾತಿಗೂ ‘ದೇಹವೆ ದೇವಾಲಯ’ ಎಂದ ಬಸವಣ್ಣನವರ ಪ್ರಮೇಯಕ್ಕೂ ಬಹಳ ಹತ್ತಿರದ ಸಂಬಂಧವಿದೆಯೆನ್ನಿಸುತ್ತದೆ. ಇಬ್ಬರೂ ಕೂಡ ಮನುಷ್ಯ ಬೇರೊಂದು ಶಕ್ತಿಯ ಮೇಲೆ ಜವಾಬ್ಧಾರಿ ಹೊರಿಸಿ ಬಚಾವಾಗುವುದನ್ನು ಒಪ್ಪುವುದಿಲ್ಲ. ದೇವರ ಹುಂಡಿಯನ್ನೂ ಸೇರಿಸಿ ಮನೆಗಳ್ಳತನ ಮಾಡಿದ ಕಳ್ಳ ಅದನ್ನು ಸಂಬಂಧಿಸಿದ ದೇವರಿಗೆ ಅರ್ಪಿಸಿ ಮುಡಿಕೊಟ್ಟು ಓಡಾಡುವುದನ್ನು ಬಸವಣ್ಣನವರು ವಿರೋಧಿಸುತ್ತಾರೆ. ತನ್ನ ಶಿಲುಬೆಯನ್ನು ತಾನೆ ಹೊರಬೇಕಾದ ಅನಿವಾರ್ಯತೆಯನ್ನು ಬಸವಣ್ಣನವರಂಥ ದಾರ್ಶನಿಕರು ಪ್ರತಿಪಾದಿಸುತ್ತಾರೆ. ಆದರೆ ಪಾಪಪ್ರಜ್ಞೆಯ ಕುರಿತಾದ ಪ್ರಮೇಯ ಮಾತ್ರ ನಮ್ಮದಲ್ಲ.

ಏಸುಕ್ರಿಸ್ತ ಸಣ್ಣ ವಯಸ್ಸಿನಲ್ಲಿಯೆ ಉಪಖಂಡಕ್ಕೆ ಬಂದು ಬೌದ್ಧರು, ನಾಥರು ಮುಂತಾದವರೊಂದಿಗೆ ಜಿಜ್ಞಾಸೆ ನಡೆಸಿ ಮರಳಿ ಹೋದನೆಂದು ನಿಕೊಲಸ್ ನೊಟೊವಿಚ್ ಎಂಬ ವಿದ್ವಾಂಸ ‘ದ ಅನ್ನೋನ್ ಲೈಫ್ ಆಫ್ ಜೀಸಸ್ ಕ್ರೈಸ್ಟ್’ ಎಂಬ ಕೃತಿಯಲ್ಲಿ ವಿವರಿಸಿದ್ದಾನೆ. ‘ಪಾಪಪ್ರಜ್ಞೆ’, ‘ಪಾಪ ನಿವೇದನೆ’ ಎಂಬ ಪ್ರಮೇಯಗಳನ್ನು ಜಗತ್ತಿನ ಧರ್ಮಗಳಿಗೆ ನೀಡಿದ್ದು ಜೀಸಸ್ ಎಂಬ ವ್ಯಾಖ್ಯಾನವಿದೆ. ಈ ಪ್ರಮೇಯಗಳನ್ನು ಆಧರಿಸಿ ರಷ್ಯನ್ ಬರಹಗಾರರು ದಾರ್ಶನಿಕ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ದಾಸ್ತೊವಸ್ಕಿ ಮತ್ತು ಟಾಲ್‌ಸ್ಟಾಯ್ ಪ್ರಮುಖರು. ೧೮ ಮತ್ತು ೧೯ ನೆ ಶತಮಾನಗಳಲ್ಲಿ ಪಶ್ಚಿಮದಲ್ಲಿ ತುಸು ದೊಡ್ಡ ಮಟ್ಟದಲ್ಲಿಯೆ ಮನುಷ್ಯ ದೇವರ ವಿರುದ್ಧ ದಂಗೆ ಎದ್ದಂತೆ ವರ್ತಿಸಿದ. ಇಂಥ ಸಂಕ್ರಮಣ ಕಾಲದಲ್ಲಿ ಸೃಜನಶೀಲ ಬರಹಗಾರರು ತಾಳಿದ ನಿಲುವು ಸಮನ್ವಯ ಮಾದರಿಯದ್ದಾಗಿತ್ತು. ರೈಲು, ವಕೀಲ, ವೈದ್ಯ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ತೀವ್ರವಾಗಿ ವಿರೋಧಿಸಿದ ಟಾಲ್‌ಸ್ಟಾಯ್ ಅನ್ನಾ ಕರೆನಿನಾಳ ಪ್ರೇಮ ಸಾಹಸದ ಅಲೆ ಎಳೆದ ಕಡೆ ತುಯ್ಯತೊಡಗುತ್ತಾನೆ. 

ರಷ್ಯನ್ ಬರಹಗಾರರು ಬರೆಯುತ್ತಿದ್ದ ಕಾಲಘಟ್ಟದಲ್ಲಿಯೆ ಬರೆದ ಅಮೆರಿಕಾದ ನಥಾನಿಯಲ್ ಹಾಥರ‍್ನ್ ಎಂಬ ಕಾದಂಬರಿಕಾರ ‘ಸ್ಕಾರ‍್ಲೆಟ್ ಲೆಟರ್’ ಎಂಬ ಕಾದಂಬರಿ ಬರೆದ. ಮದುವೆಯಾಗದೆ ಮಗು ಪಡೆದಾಕೆ ಸಮಾಜದಲ್ಲಿ ಅತ್ಯಂತ ಕ್ರೂರ ನಿಂದನೆಗೆ ಒಳಗಾಗಿ ಸಂತಳಾಗುವ ಹಂತಕ್ಕೆ ಏರುವ ಕತೆ ಅದು. ತನ್ನೊಳಗೆ ಮಗು ಬಿತ್ತಿದ ಗಂಡಿನ ಹೆಸರನ್ನು ಬಹಿರಂಗಪಡಿಸದೆ ಗುಟ್ಟು ಕಾಯ್ದುಕೊಳ್ಳುವ ಆಕೆ ಪುರುಷಾಧಿಪತ್ಯದ ಕಟ್ಟಳೆ ಮೀರಲಾರಳು. ಆಕೆಯಲ್ಲಿ ಮಗು ಹುಟ್ಟಲು ಕಾರಣನಾದವನೆ ಶಿಕ್ಷೆ ನೀಡುವ ಧಾರ್ಮಿಕ ನ್ಯಾಯಾಧೀಶ. ಕಡೆಗೆ ಆತ ಸಾರ್ವಜನಿಕವಾಗಿ ಶಿಲುಬೆಯ ಮುಂದೆ ತಪ್ಪೊಪ್ಪಿಕೊಂಡು ಕುಸಿದು ಮರಣ ಹೊಂದುತ್ತಾನೆ. ಪಾಪ ನಿವೇದನೆ ಮತ್ತು ಪಾಪಪ್ರಜ್ಞೆಗಳು ಮತ್ತೊಬ್ಬರಿಗೆ ತಿಳಿದಿರಲಿ ಎಂಬ ನಿಲುವು ಇಲ್ಲಿ ವ್ಯಕ್ತವಾಗುತ್ತದೆ.

 ಇಂಗ್ಲೆಂಡಿನ ದೊಡ್ಡ ಕವಿ ಕೋಲ್‌ರಿಜ್ ಬರೆದ ‘ ದ ರೈಮ್ ಆಫ್ ದ ಏನ್ಷಿಯಂಟ್ ಮರೈನರ್’ ಎಂದ ದೀರ್ಘ ಪದ್ಯದಲ್ಲಿ ಸಮುದ್ರಯಾನಿಗಳಿಗೆ ದಿಕ್ಕು ತೋರಿಸುವ ಪವಿತ್ರ ಕಾರ್ಯ ಮಾಡುತ್ತಿದ್ದ ಕಡಲ ಹಕ್ಕಿಯನ್ನು ಕೊಲ್ಲಬಾರದೆಂಬುದು ನಿಯಮ. ಆ ನಿಯಮ ಮೀರಿ ನಾವಿಕನೊಬ್ಬ ಕೊಂದು ಬಿಡುತ್ತಾನೆ. ಇದನ್ನು ನೋಡಿ ಕ್ರೋಧಗೊಂಡ ಸಹ ನಾವಿಕರು ಸತ್ತ ಹಕ್ಕಿಯನ್ನು ಕೊಂದ ವ್ಯಕ್ತಿಯ ಕೊರಳಿಗೆ ಕಟ್ಟಿ ಅದು ಕೊಳೆತು, ಅಸ್ತಿಪಂಜರವಾಗಿ ಒಂದೊಂದೆ ಮೂಳೆ ಉದುರುವ ವರೆಗೂ ಬಿಡುತ್ತಾರೆ. ನಾವಿಕ ನೊಂದು ಪಶ್ಚಾತ್ತಾಪದಲ್ಲಿ ಬೆಂದು ಸಂತನಾಗುವ ದಿಕ್ಕಿನೆಡೆಗೆ ನಡೆಯುತ್ತಾನೆ. ಕಡೆಗೆ ಭೀಕರ ಬಿರುಗಾಳಿ ಎದ್ದು ಈತನೊಬ್ಬನನ್ನು ಬಿಟ್ಟು ಉಳಿದವರೆಲ್ಲ ನೀರುಪಾಲಾಗುತ್ತಾರೆ. ಹಕ್ಕಿಯನ್ನು ಕುತ್ತಿಗೆಗೆ ಕಟ್ಟಿಕೊಂಡು ನಿಂತ ನಾವಿಕನ ವಿಗ್ರಹ ಇಂಗ್ಲೆಂಡಿನ ಸೊಮರ್‌ಸೆಟ್‌ನಲ್ಲಿ ನಿಲ್ಲಿಸಲಾಗಿದೆ.

‘ಎನ್ನ ಚಿತ್ತವು ಹತ್ತಿಯ ಹಣ್ಣು ನೋಡಯ್ಯಾ’ ಎಂದ ಬಸವಣ್ಣನವರಲ್ಲಿ ಸ್ವವಿಮರ್ಶೆ ಕಾಣಿಸಿಕೊಳ್ಳುತ್ತದೆ. ಆದರೆ ಪಶ್ಚಿಮದಲ್ಲಿ ಪಾಪ ಪ್ರಜ್ಞೆಯು ಒಂದು ಪ್ರಮೇಯದಂತೆ ಮಂಡಿತವಾಗುತ್ತದೆ. ನಮ್ಮ ದಾರ್ಶನಿಕರು, ಬರಹಗಾರರಲ್ಲಿ ಆ ರೀತಿಯ ನಿಲುವು ಕಾಣಿಸುವುದಿಲ್ಲ. ಸ್ವ ವಿಮರ್ಶೆ ಎಂಬುದು ಚಳುವಳಿಯ ನಾಯಕರಿಗೆ, ಕಾರ್ಯಕರ್ತರಿಗೆ ಬಹಳ ಮುಖ್ಯ. ಮೂಲತಃ ಮನುಷ್ಯ ಪ್ರವೃತ್ತಿಗಳ ಹಿಡಿತದಲ್ಲಿ ನರಳುವವನು, ಅವುಗಳಿಂದ ಬಿಡಿಸಿಕೊಳ್ಳಬೇಕಾಗಿದೆ. ಹಾಗೆ ಬಿಡಿಸಿಕೊಳ್ಳಲು ತಾನು ಪ್ರಯತ್ನಿಸುತ್ತಿದ್ದೇನೆ ಎಂಬ ನಿಲುವು ಬಸವಣ್ಣನವರಲ್ಲಿ ಕಾಣುತ್ತದೆ. ಉಪಖಂಡದ ಮಟ್ಟಿಗೆ ಶರಣ ಚಳುವಳಿಯು ಕಟ್ಟಿದ ತಾತ್ವಿಕ ಪ್ರಮೇಯವು ಬಹುಮುಖ್ಯವಾದುದು. ಸ್ವರ್ಗ ನರಕಗಳು ಇಲ್ಲಿಯೆ ಎಂಬ ಅವರ ನಿಲುವೂ ಕೂಡ ಬಹಳ ಮುಖ್ಯ.

ಬಸವಣ್ಣನವರು ಬುದ್ಧ, ಜೀಸಸ್, ಪೈಗಂಬರ್ ಅವರ ಹಾಗೆಯೆ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗನೊಲಿಸುವ ಪರಿ’ ಎನ್ನುತ್ತಾರೆ. ಈ ಸಪ್ತ ಸೂತ್ರಗಳು ಭಿನ್ನ ಭಿನ್ನ ಬಗೆಯಲ್ಲಿ ಮೂವರ ಮಾತುಗಳಲ್ಲೂ ವ್ಯಕ್ತವಾಗುತ್ತವೆ. ಆದರೆ ಬುದ್ಧನನ್ನು ಹೊರತು ಪಡಿಸಿದರೆ ಉಳಿದಿಬ್ಬರು ಈ ಸೂತ್ರಗಳನ್ನು ಉಲ್ಲಂಘಿಸಿದರೆ ಯಾವ ಶಿಕ್ಷೆ ಎಂಬುದರ ಕುರಿತು ಪ್ರಸ್ತಾಪಿಸಿದರೆಂದು ಉಲ್ಲೇಖಗಳಿವೆ. ಆದರೆ ಬಸವಣ್ಣನವರು ನೇರವಾಗಿ ‘ಕೊಲುವೆನೆಂಬುದು ದೇವನ ಭಾಷೆ’ ಎಂದು ಬಿಡುತ್ತಾರೆ. ಹಾಗಾಗಿಯೆ ಈ ಏಳು ಸೂತ್ರಗಳು ರಾಜನೆ ಆಗಿರಲಿ, ಪೂಜಾರಿಯೆ ಆಗಿರಲಿ, ಅನಾಥನೆ ಆಗಿರಲಿ ಎಲ್ಲರಿಗೂ ಸಾಮಾನ್ಯವಾಗಿ ಅನ್ವಯವಾಗುವಂತೆ ವಿವರಿಸಲಾಗಿದೆ. ತಾರತಮ್ಯ ಎಂಬುದಕ್ಕಿಲ್ಲಿ ಜಾಗವಿಲ್ಲ. ಈ ಹಿನ್ನೆಲೆಯಲ್ಲಿಯೆ ಬಸವಣ್ಣನವರ ಈ ವಚನವನ್ನು ಗಮನಿಸಬೇಕೆನ್ನಿಸುತ್ತದೆ.

“ ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ?

ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ

ಆನೀ ಬಿಜ್ಜಳಂಗಂಜುವೆನೆ ಅಯ್ಯಾ? ಕೂಡಲಸಮಗಮದೇವಾ”

ಅನೇಕ ಕಡೆ ಬಿಜ್ಜಳನನ್ನು ಭವಿ ಎಂದು ಹೀಗಳೆಯಲಾಗುತ್ತದೆ. ಬೌದ್ಧರಂತೆಯೆ ಶರಣರೂ ಕೂಡ ಕ್ಷಾತ್ರವನ್ನು ಇನ್ನಿಲ್ಲದಂತೆ ಹೀಗಳೆಯುತ್ತಾರೆ. ಸ್ವತಃ ಬಸವಣ್ಣನವರೆ, ‘ರಾಜ ಸತ್ತರೆ ಬೇಟೆಗಾರ ಬೇಟೆಯಾಡಿ ಕೊಂದ ಮೊಲಕ್ಕಿರುವಷ್ಟು ಬೆಲೆ ಇಲ್ಲ, ಮೊಲಕ್ಕಾದರೂ ಅದಕ್ಕೆ ಸಲ್ಲಬೇಕಾದಷ್ಟು ಬೆಲೆಯನ್ನು ಕೊಟ್ಟು ಕೊಳ್ಳಲಾಗುತ್ತದೆ, ರಾಜನಾಗಲಿ, ಸಾಮಾನ್ಯ ಮನುಷ್ಯರಾಗಲಿ ಸತ್ತರೆ ಅವರ ಹೆಣಕ್ಕೆ ಒಂದಡಕೆಗಿರುವ ಬೆಲೆಯೂ ಇಲ್ಲ’ ಎಂದು ರಾಜತ್ವಕ್ಕಿದ್ದ ದೈವತ್ವದ ಗುಣಗಳನ್ನು ಛಿದ್ರ ಮಾಡುತ್ತಾರೆ. ಆದರೆ ಬುದ್ಧನಾದರೊ ದೈವ ಇತ್ಯಾದಿಗಳ ಕಲ್ಪನೆಗಳ ಬದಲಿಗೆ ಮೋಕ್ಷದ ಪರಿಕಲ್ಪನೆಯನ್ನು ಮಂಡಿಸುತ್ತಾನೆ. ಬಸವಣ್ಣನವರು ಬದುಕಿದ್ದ ಕಾಲ ಮುಖ್ಯವಾಗಿ ಭಾಗವತ ಪ್ರಮೇಯಗಳು ತುರೀಯಾವಸ್ಥೆಗೆ ತಲುಪುತ್ತಿದ್ದ ಕಾಲವಾಗಿತ್ತು. ಈ ಕಾಲದಲ್ಲಿ ಭಕ್ತಿ ಎಂಬುದು ಸುಧಾರಣೆಯ ಹಾಗೂ ದಂಗೆಯ ಸಾಧನವಾಗಿತ್ತು. ಆಳುವ ಶಕ್ತಿಗಳಿಗೆ ದಮನಿಸುವ ಸಾಧನವೂ ಆಗಿತ್ತು. ಭಕ್ತಿ ಎಂಬುದು ಇಲ್ಲಿ ಹಲವು ಮಗ್ಗುಲ ಖಡ್ಗದಂತೆ ಕೆಲಸ ಮಾಡಿತ್ತು.

ಕೂಡಲಸಂಗಮನನ್ನು ಸಾಕ್ಷಿಯಾಗಿಸಿ, ಮುಖಾಮುಖಿಯಾಗಿಸಿ, ಸಂವಾದರೂಪಿಯಾಗಿಸಿ ವ್ಯಾಖ್ಯಾನಿಸುವ ಕೆಲಸವನ್ನು ಬಸವಣ್ಣನವರು ಮಾಡುತ್ತಾರೆ. ಭಕ್ತಿಯು ಸಂಕೋಲೆಯಾಗುತ್ತಿದೆ, ವಿಪರೀತಕ್ಕೆ ತಲುಪುತ್ತಿದೆ ಎಂದು ಅರಿವಾದ ಕೂಡಲೆ ದೇವರು ಸತ್ತ, ಗುಹೇಶ್ವರ ಸತ್ತ ಎಂದು ನೀಷೆಗಿಂತ ೮ ಶತಮಾನಗಳ ಹಿಂದೆಯೆ ಅಲ್ಲಮಪ್ರಭುಗಳು ಘೋಷಿಸಿದ್ದರು.“ ಗಂಗಾ ದೇವಿ ಮುಂಡೆಯಾದಳು, ಗೌರಿ ದೇವಿ ಓಲೆಯ ಕಳೆದಳು, ಚಂದ್ರ ಸೂರ್ಯರಿಬ್ಬರೂ ನೀರಿಳಿದರು. ವಾಯುದೇವ ವಿಮಾನವ ಹೊತ್ತ, ವಾಸುದೇವ ತಲೆಗೊಳ್ಳಿಯನಿರಿದ ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ಧಿ’ ಎಂದು ಹಾಡಿ ಬಸವಣ್ಣನವರಂತಹವರನ್ನು ಕಂಗೆಡಿಸಿಬಿಟ್ಟಿರಬೇಕು. ದೇವರೆ ಇಲ್ಲವೆಂದ ಮೇಲೆ ಅಪರಾಧವನ್ನು ಮತ್ತು ಶಿಕ್ಷೆಯನ್ನು ನಿರ್ಣಯ ಮಾಡುವವರು ಯಾರು? ಸ್ವ ನಿಯಂತ್ರಣ, ಜ್ಞಾನಾಧಾರಿತವಾದ ನೈತಿಕತೆಗಳು ಮಾತ್ರ ಮನುಷ್ಯ ಸಮಾಜವನ್ನು ಮುನ್ನಡೆಸುತ್ತವೆ ಎಂದು ಈ ವಚನಕಾರರು ಭಾವಿಸಿದ್ದಿರಬೇಕು.

ಬಸವಣ್ಣನವರು ಕೂಡಲಸಂಗಮನೆ ಎಲ್ಲ ಎಂದು ಹೇಳುತ್ತಿದ್ದಾಗಲೂ ಜ್ಞಾನದ ಬಲದಿಂದ ಮಾತ್ರ ಅಜ್ಞಾನದ ಕೇಡು ಎಂದಿದ್ದರು. ಚಲನಶೀಲವಾದ ಜ್ಞಾನವನ್ನು ಇಂದು ಜಗತ್ತಿನ ಬಹುತೇಕ ಪ್ರಭುತ್ವಗಳು ಅವಮಾನಿಸಿ ಹೀನಾರ್ಥ ಕಲ್ಪಿಸಿ, ದಮನಿಸುವ ಕೆಲಸ ಮಾಡುತ್ತಿವೆ. ಹಿಂದೆಯೂ ಇದನ್ನು ಮಾಡಲಾಗಿತ್ತು.ಇದಕ್ಕೆ ಅಸಂಖ್ಯ ದಾಖಲೆಗಳಿವೆ. ಊಳಿಗಮಾನ್ಯತೆಯು ತೀವ್ರ ಸ್ಥಿತಿಗೆ ಮುಟ್ಟುತ್ತಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಅಜ್ಞಾನವನ್ನೆ ಅಪರಾಧ ಎಂಬ ಮಟ್ಟಕ್ಕೆ ತೆಗೆದುಕೊಂಡು ಹೋಗಿ ವ್ಯಾಖ್ಯಾನಿಸುತ್ತಿದ್ದಾರೆ. ಜಗದ ಚಲನೆಗೆ ಜ್ಞಾನವೆಂಬುದು ಎಷ್ಟು ಮುಖ್ಯವೊ, ಸಮಸ್ಯೆಗಳಿಗೆ ಅಜ್ಞಾನವೆ ಮೂಲ ಎಂಬ ನಿಲುವು ಬಸವಣ್ಣನವರಲ್ಲಿ ಅಭಿವ್ಯಕ್ತವಾಗುತ್ತದೆ. 

 “ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ, 

ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ 

ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ

ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ

ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ

ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ

ಅಜ್ಞಾನದಿಂದ ಹುಟ್ಟಿತ್ತು ಸಂಸಾರ

ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ

ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚ

ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ

ಅಜ್ಞಾನವೆಂಬುದು ಭ್ರಮೆ, ಅದನ್ನು ಕೆಡಿಸದೆ ಕೂಡಲಸಂಗಮನಲ್ಲಿ”[೯೭೫]

 ಈ ವಚನದ ನಿಲುವನ್ನು ಆಧರಿಸಿ ತಕರಾರುಗಳನ್ನು ಎತ್ತಲು ಸಾಧ್ಯವಿಲ್ಲವೆಂದಲ್ಲ, ದೇಹ, ಸಂಸಾರ ಮುಂತಾದವುಗಳನ್ನು ಲೋಕ ಪಂಥೀಯ ತಾತ್ವಿಕ ಧಾರೆಗಳು ಶಾಪವೆಂದು ನೋಡದೆ ಸಾಧನವೆನ್ನುತ್ತವೆ. ಇಲ್ಲಿ ಜ್ಞಾನವೆಂಬುದು ನಿರ್ಣಾಯಕವಾದ ಸಂಗತಿಯಾಗಿದೆ. ಜ್ಞಾನವು ಅಕ್ಷರರೂಪಿಯೇನೂ ಇರುವುದಿಲ್ಲ. ಅದು ಅಕ್ಷರರೂಪದಲ್ಲಿರುತ್ತದೆ ಎಂದು ಬಿಂಬಿಸಿ ಜ್ಞಾನ ಎಂಬುದರ ಅರ್ಥವನ್ನು ಕುಬ್ಜಗೊಳಿಸಲಾಗಿದೆ. 

ಬಸವಣ್ಣನವರೂ ಸಹ ದೇಹವನ್ನು, ದೇಹದಿಂದ ನಡೆಯುವ ಕಾಯಕವನ್ನು ಕುರಿತು ಹಾಡಿದ್ದಾರೆ.ಆದರೆ ಕೆಲವು ವಚನಗಳಲ್ಲಿ ತನ್ನ ನಿಲುವಿಗೆ ವಿರುದ್ಧವಾದ ವಚನಗಳನ್ನೂ ರಚಿಸಿದ್ದಾರೆ. ಚಾರಿತ್ರಿಕ ಪ್ರಜ್ಞೆಯಿಲ್ಲದ ನಮ್ಮ ನಾಡುಗಳ ದುರಂತದಿಂದಾಗಿ ವಚನ ರಚನೆಯ ಕ್ರೋನಾಲಜಿ ಸಿಗುತ್ತಿಲ್ಲ. 

ಮಧ್ಯಕಾಲೀನ ಸಮಾಜಗಳಲ್ಲಿ ಹಿಂಸೆಯ ಸ್ವರೂಪ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ವಡ್ಡಾರಾದನೆ ಕೃತಿಯನ್ನೊಮ್ಮೆ ಗಮನಿಸಬೇಕು.ಅದರ ಬಹುಪಾಲು ಕಥೆಗಳು ಭೀಕರ ಹಿಂಸೆಯನ್ನು ಅನುಭವಿಸಿ ಋಷಿಗಳಾಗುವ ವಿವೇಕವನ್ನು ವಿವರಿಸುತ್ತವೆ. ಹಿಂದಿನ ಜನ್ಮದಲ್ಲಿ ಅತ್ತಿಗೆಯಾದವಳು ನರಿಯಾಗಿ ಹುಟ್ಟಿ ಮೂರು ಹಗಲು-ಮೂರು ರಾತ್ರಿ ಕಿತ್ತು ಕಿತ್ತು ತಿನ್ನುವ ವಿವರಗಳು ಸುಕುಮಾರ ಸ್ವಾಮಿಯ ಕಥೆಯಲ್ಲಿ ಬರುತ್ತವೆ. ಬೆಟ್ಟದ ಮೇಲೆ ಹುಲಿಯೊಂದು ಕಿತ್ತು ತಿನ್ನುತ್ತದೆ. ಗಜಕುಮಾರನ ಕಥೆಯಲ್ಲಿ ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮ ಸುಲಿದು ಕಾದ ಕಬ್ಬಿಣದ ಮೊಳೆ ಹೊಡೆವ ಭೀಕರ ಸನ್ನಿವೇಶಗಳಿವೆ. ಸನತ್ಕುಮಾರ ಚಕ್ರವರ್ತಿಯು ಏಳುನೂರು ವ್ಯಾಧಿಗಳನ್ನು ಸಹಿಸಿಕೊಳ್ಳುವ ವಿವರಗಳಿವೆ. ಆಯುಧದಿಂದ ಇರಿಯುವ, ಗಾಣಕ್ಕೆ ಹಾಕಿ ಅರೆಯುವ, ಬೆರಣಿ ಗೊಬ್ಬರದ ರಾಶಿಯೊಳಗೆ ಹಾಕಿ ಸುಡುವ, ಗಾಯಗಳಿಗೆ ಇರುವೆಗಳು ಮುತ್ತಿಕೊಂಡರೂ ಸುಮ್ಮನಿರುವ, ಭಯಂಕರ ಸೊಳ್ಳೆಗಳು ಕಚ್ಚಿ ರಕ್ತ ಹೀರುವ ಕಥೆಗಳು ಈ ವಡ್ಡಾರಾದನೆಯಲ್ಲಿ ಚಿತ್ರಿತವಾಗುತ್ತವೆ. ಎಷ್ಟೆಲ್ಲ ಹಿಂಸೆಯಾದರೂ ಸಹಿಸಿ ಋಷಿಯಾಗುವ, ದೈವತ್ವಕ್ಕೇರುವ ಚಿಂತನೆಗಳು ಜೈನ ಮೀಮಾಂಸೆಗಳಲ್ಲಿವೆ. ಪ್ರತಿ ಹಿಂಸೆ ಮಾಡುವುದು, ಪ್ರತೀಕಾರಕ್ಕೆ ಮುಂದಾಗುವ ವೈದಿಕ ಋಷಿಗಳ ಮೀಮಾಂಸೆಗಿಂತ ಭಿನ್ನವಾದ ಚಿಂತನೆ ಜೈನರಲ್ಲಿ ಇವೆ.

 ಹಿಂಸೆಗೆ ತುತ್ತಾದವರ ದಾರುಣತೆಯ ಚಿತ್ರಣವೆ ಓದುಗರಲ್ಲಿ, ಕೇಳುಗರಲ್ಲಿ ತಲ್ಲಣಗಳನ್ನು ಹುಟ್ಟಿಸುತ್ತವೆ. ಅತಿ ಹಿಂಸೆಯ ತುಟ್ಟತುದಿ ಅತಿ ಶಾಂತತೆಯೆ ಇರಬೇಕು. ಹಾಗಾಗಿ ಜೈನ ಮೀಮಾಂಸೆಯಲ್ಲಿ ಸಾವನ್ನು ಆಹ್ವಾನಿಸಿ ದೇಹಕ್ಕೆ ಚಿತ್ರಹಿಂಸೆ ಕೊಟ್ಟುಕೊಳ್ಳುವ ಭೀಭತ್ಸಕ ಪದ್ಧತಿಗಳಂತೆಯೆ ಬಾಹುಬಲಿಯ ಪ್ರಶಾಂತ, ನಿರ್ಲಿಪ್ತ ಸ್ಥಿತಿಯು ಗಮನ ಸೆಳೆಯುತ್ತದೆ. ಜೈನ ಕಥನಗಳ ಪ್ರಕಾರ ಅನೇಕ ಸಾರಿ, ಮನುಷ್ಯನಾಗಿ ಹುಟ್ಟುವುದು, ಭೋಗದಲ್ಲಿ ಮುಳುಗುವುದು, ಅಧಿಕಾರ ಲಾಲಸೆಗೆ ಪಕ್ಕಾಗುವುದು ಮುಂತಾದವುಗಳು ಅಪರಾಧಗಳಾಗಿ ಚಿತ್ರಿತಗೊಳ್ಳುತ್ತವೆ. ಜೈನ ಮೀಮಾಂಸೆಯು ಜನ್ಮಾಂತರ, ಸ್ವರ್ಗ ನರಕಗಳನ್ನು ನಂಬುತ್ತದೆ. ಹಾಗಾಗಿ ಅನೇಕ ಸಾರಿ ವೈದಿಕ ಮೀಮಾಂಸೆಗೆ ಎದುರಾಗಿ ಜೈನ ಮೀಮಾಂಸೆಯು ನಿಲ್ಲುವುದಿಲ್ಲ.

ಅಪಶಕುನಕಾರಿಯೂ ಆಘಾತಕಾರಿಯೂ ಆದ ಮರಣವನ್ನು ಸ್ವಾಗತಿಸಿ ಸಂಭ್ರಮಿಸುವ ಚಿತ್ರಣಗಳು ಜೈನ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಏಸುಕ್ರಿಸ್ತನನ್ನು ಶಿಕ್ಷಿಸಲು ಬಳಸಿದ ಆಯುಧವೆ ಮುಂದೆ ಶಿಲುಬೆಯಾಗಿ ಪವಿತ್ರ ಸಂಕೇತವಾಗುವ ಮಹಾ ಕಥನದ ಚರಿತ್ರೆ ಮನುಷ್ಯ ಸಂಕುಲಕ್ಕಿದೆ. ಯಾವುದು ದುಸ್ವಪ್ನಕಾರಿಯೂ, ಹಿಂಸೆಯ ಸಂಕೇತವೂ ಆಗಬೇಕಾಗಿತ್ತೊ, ಅದೇ ಸಾಧನವೆ ಪರಮ ಪಾವಿತ್ರ್ಯದ ಸಂಕೇತವಾಗಿ ಕೊಂದವರ ಎದುರು ಪ್ರತಿಭಟನೆಯಾಗುತ್ತದೆ. ಆದರೆ ಏಸುಕ್ರಿಸ್ತನ ದೇಹಕ್ಕೆ ಮೊಳೆ ಹೊಡೆದು ನಿಲ್ಲಿಸಿದ ಚಿತ್ರಣವು ಕ್ರೈಸ್ತರಿಗೆ ಭಕ್ತಿಯ ಸಂಕೇತವಷ್ಟೆ ಆಗಿ ಉಳಿಯಲಿಲ್ಲ, ಅದು ಸೇಡಿನ ರೂಪವಾಗಿ ಹಿಟ್ಲರನಲ್ಲಿ ಮೊಳೆತು ಯಹೂದಿಗಳ ಮಾರಣ ಹೋಮಕ್ಕೆ ಕಾರಣವಾಯಿತು ಎಂಬ ಚರಿತ್ರೆಕಾರರ ಉಲ್ಲೇಖಗಳು ದಿಗಿಲು ಹುಟ್ಟಿಸುತ್ತವೆ. ಸ್ವತಃ ಯಹೂದಿಯಾಗಿದ್ದ ಏಸು ಹಿಂಸಾತ್ಮಕ ಸಮಾಜದಲ್ಲಿ ಶಾಂತಿಯನ್ನು,ಅಹಿಂಸೆಯನ್ನು ಬೋಧಿಸಿದ ಉಲ್ಲೇಖಗಳಿವೆ. ಚಾರಿತ್ರಿಕ ಉಲ್ಲೇಖಗಳ ಪ್ರಕಾರ ಚರ್ಚುಗಳು ರಾಜಕೀಯಾಧಿಕಾರವನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆದುಕೊಳ್ಳತೊಡಗಿದಂತೆಲ್ಲ ಕ್ರೈಸ್ತರಾಗದೆ ಉಳಿದ ಯಹೂದಿಗಳಿಗೆ ಯುರೋಪಿನಲ್ಲಿ ೧೦ ನೆ ಶತಮಾನದ ಹೊತ್ತಿಗೇನೆ ಹಿಂಸೆ ಕೊಡಲು ಪ್ರಾರಂಭಿಸಿದ್ದ ಉಲ್ಲೇಖಗಳಿವೆ. ಆಧುನಿಕ ರಾಷ್ಟ್ರ ಸಂರಚನೆಯಂತೂ ನೆನಪುಗಳ ಸಂಚಯನರೂಪಿಯಾಗಿ ಸೇಡು ತೀರಿಸಿಕೊಳ್ಳಲು ಹೊರಡುತ್ತದೆ ಎಂಬುದಕ್ಕೆ ಜರ್ಮನಿಯ ಉದಾಹರಣೆಯಿದೆ. ಶತಮಾನಗಳ ಸೇಡು ಜನಾಂಗೀಯ ಹತ್ಯೆಯಲ್ಲಿ ಪರ್ಯಾವಸಾನವಾಗುತ್ತದೆ.

ಬಸವಣ್ಣನವರೂ ಕೂಡ ಮರಣವನ್ನು ಮಹಾನವಮಿ ಎಂದು ವ್ಯಾಖ್ಯಾನಿಸುವ ವಚನಗಳನ್ನು ರಚಿಸಿದ್ದಾರೆ. ಮನುಷ್ಯನ ಜೀವಿತದಲ್ಲಿ ವಿಪರೀತ ಭಯ ಹುಟ್ಟಿಸುವ ಸಂಗತಿಯನ್ನು ಸಾಮಾನ್ಯಗೊಳಿಸುವ, ಸಂಭ್ರಮದ ವಿಚಾರವನ್ನಾಗಿಸುವ ಪ್ರಮೇಯಗಳು ಮಧ್ಯಕಾಲೀನ ಅವಧಿಯಲ್ಲಿ ತೀವ್ರರೂಪದಲ್ಲಿ ಕ್ರಿಯಾಶೀಲವಾಗಿರುವಂತೆ ಕಾಣುತ್ತದೆ. ಈ ಅವಧಿಯಲ್ಲಿ ದೈವವಾದ, ಸ್ವರ್ಗದ ಹಂಬಲಗಳು ಜಗತ್ತಿನ ಅನೇಕ ಕಡೆ ತೀವ್ರಗೊಂಡಿವೆ. ಒಡೆಯರಿಗಾಗಿ ಪ್ರಾಣಕೊಟ್ಟರೆ ಸ್ವರ್ಗದಲ್ಲಿ ಸುಖದ ಸುಪ್ಪತ್ತಿಗೆ, ಅಪ್ಸರೆಯರ ಸಾಂಗತ್ಯ, ಭೂರಿ ಭೋಜನ ದೊರಕುತ್ತವೆ ಎಂದು ನಂಬಿಸಿದ್ದ ಕಾರಣಕ್ಕೆ ಸಾಮಾನ್ಯ ಸೈನಿಕರು ಯುದ್ಧಭೂಮಿಯಲ್ಲಿ ಎದುರಾಳಿಗಳನ್ನು ಕೊಲ್ಲುವುದೊ ಇಲ್ಲ ಸಾಯುವುದೊ ಮಾಡುತ್ತಿದ್ದರು. ಧರ್ಮಭೂಮಿಯಲ್ಲಿ ಗರುಡರಾಗಿ, ಕ್ರಿಶ್ಚಿಯನ್ ಕ್ರುಸೇಡರುಗಳಾಗಿ ಪರಿವರ್ತನೆಯಾಗುತ್ತಿದ್ದರು. ಇದರಿಂದ ಲಾಭವಾಗುತ್ತಿದ್ದುದು ಆಳುವ ಅರಸರಿಗೆ ಮತ್ತು ಧಾರ್ಮಿಕ ಕೇಂದ್ರಗಳಿಗೆ.

ಇಂಥ ಅತಿರೇಕದ ಸಂದರ್ಭದಲ್ಲಿ ಅಲ್ಲಮಪ್ರಭು ಗುಹೇಶ್ವರ ಸತ್ತನೆಂಬ ಸುದ್ದಿ ಎಂದು ಹೇಳಿ ಬೆಚ್ಚಿ ಬೀಳಿಸುತ್ತಾರೆ. ಚಳುವಳಿ ಮಾಡಬೇಕಾದ ಕೆಲಸ ಕೂಡ ಇದೆ. ಸಿದ್ಧ ವ್ಯಾಖ್ಯಾನಗಳನ್ನು ಮುರಿದು ಕಟ್ಟುವ ಕೆಲಸ ಮಾಡದಿದ್ದರೆ ಅದಕ್ಕೆ ಸಾರ್ವತ್ರಿಕ ಮನ್ನಣೆಯೂ ಇರದು, ಬಾಳಿಕೆಯೂ ಬಾರದು.

ಬಸವಣ್ಣನವರ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಏಕರೀತಿಯ ನಿಲುವು ಅವರಲ್ಲಿ ಕಾಣಿಸುವುದಿಲ್ಲ. ಮನುಷ್ಯನ ವಿಕಾಸದಂತೆಯೆ ಅವರ ನಿಲುವುಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಜಂಗಮಕ್ಕೆ ಅಳಿವಿಲ್ಲ ಎಂಬ ತತ್ವವು ಅವರ ವಿಚಾರಗಳ ವಿಕಾಸಕ್ಕೂ ಅನ್ವಯಿಸುತ್ತದೆ. 

ಬಸವಣ್ಣನವರ ವಚನಗಳಲ್ಲಿ ಅಪರಾಧ ಮತ್ತು ಶಿಕ್ಷೆಯ ಸ್ವರೂಪವು ಮಧ್ಯಕಾಲೀನ ಸಮಾಜಗಳ ಚಿಂತನೆಗಳಲ್ಲಿದ್ದ ಭೀಕರ ಕ್ರೌರ್ಯದಷ್ಟು ತೀವ್ರವಾಗಿಲ್ಲ. ಮನುಧರ್ಮಶಾಸ್ತ್ರವು ಜಾತಿ-ವರ್ಣ, ಲಿಂಗವನ್ನು ನೋಡಿಕೊಂಡು ಶಿಕ್ಷೆಯ ಸ್ವರೂಪವನ್ನು ನಿರ್ಧರಿಸುತ್ತದೆ.ಆದರೆ ಬಸವಣ್ಣನವರ ವಚನಗಳಲ್ಲಿ ಶಿಕ್ಷೆ ಕೊಡುವ ಅಧಿಕಾರ ಇರುವುದು ಕೂಡಲ ಸಂಗಮದೇವನಿಗೆ ಮಾತ್ರ.

ಹಾಗಿದ್ದರೆ ಬಸವಣ್ಣನವರ ಪ್ರಕಾರ ಅಪರಾಧಗಳು ಯಾವುವು?

೧. ಪರಧನ, ಪರಸತಿ, ಪರದೈವಗಳ ಕಡೆಗೆ ಆಕರ್ಷಿತರಾಗುವುದು ಮುಖ್ಯವಾದ ಅಪರಾಧ. ಗಂಡಿನ ಪರಸತಿಯ ಆಕರ್ಷಣೆಗಿಂತಲೂ ಹೆಣ್ಣೊಬ್ಬಳ ಹಾದರವನ್ನು ಅತಿ ಕಠಿಣ ಮಾತುಗಳಲ್ಲಿ ವಿವರಿಸಲಾಗಿದೆ.

೨. ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿದವನು ಮೊಸಳೆಗಳಿಗೆ ಆಹಾರವಾಗುತ್ತಾನೆ ಇದಕ್ಕೆ ಕೂಡಲಸಂಗಮದೇವನೆ ಸಾಕ್ಷಿ ಎನ್ನಲಾಗುತ್ತದೆ. 

 ‘ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು

ಘಟಸರ್ಪನ ತುಡುಕಿ ನಾಗನಾಥನಾಗಿ,

ಇಪ್ಪತ್ತೇಳು ಬಸದಿಯನೊಡೆಯನೆ?

ಆಗಳಂತೆ ಎನ್ನ ಮಾಡಿದ ಕರ್ಮ

…………………………………………..

ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ?

ಕೂಡಲಸಂಗಮದೇವ ಸಾಕ್ಷಿಯಾಗಿ 

ಮಕರಭೋಜನವಾಗನೆ ವಿನಾಶಕ್ತಿರಾಯನು’ [ಬಸವಣ್ಣನವರ ಸಮಗ್ರ ವಚನ ಸಂಪುಟ, ಸಂಪಾದನೆ; ಡಾ. ಎಂ ಎಂ ಕಲಬುರ್ಗಿ, ವಚನ ಸಂಖ್ಯೆ ೬೨೪, ಕನ್ನಡ ಪುಸ್ತಕ ಪ್ರಾಧಿಕಾರ]

 ಈ ವಚನಗಳಲ್ಲಿ ತುಸು ತೀವ್ರಸ್ವರೂಪದ ಮನೋಭಾವದ ಎಳೆಯೊಂದು ಕಾಣುತ್ತದೆ.‘ ಇಪ್ಪತ್ತೇಳು ಬಸದಿಯನೊಡೆಯನೆ’ ಎಂಬುದರ ಅರ್ಥವೇನು? ಇದರ ಚಾರಿತ್ರಿಕ ಹಿನ್ನೆಲೆಯೇನು? ಇದು ಬಸವಣ್ಣನವರ ವಚನವೆ?ಅಥವಾ ಬಸವಣ್ಣನವರ ಹೆಸರಿನಲ್ಲಿ ಬೇರೆಯವರು ರಚಿಸಿದ್ದಾರೆಯೆ ಎಂಬುದನ್ನು ವಿದ್ವಾಂಸರು ಪರಿಶೀಲಿಸಬೇಕಾಗಿದೆ. ಆದರೆ ಮೇಲುನೋಟಕ್ಕೆ ಧ್ವನಿಸುವ ಧ್ವನಿಯು ಪ್ರಭುತ್ವವು ಶಿವಧರ್ಮಕ್ಕೆ ಪೂರಕವಾಗಿ ವರ್ತಿಸಬೇಕು. ವಿಪ್ರರು ನಂಬಿಕೆಗೆ ಅರ್ಹರಲ್ಲ, ಅವರಿಗೆ ಕೃತಜ್ಞತೆಯೆಂಬುದಿಲ್ಲ. ಅವರ ಮಾತನ್ನು ಕೇಳಿ ಶಿವಧರ್ಮವ ಕೆಡಿಸಿ ಅನ್ಯಧರ್ಮಕ್ಕೆ ನೀರೆರೆದರೆ ರಾಜನಾದರೂ ಮೊಸಳೆಯ ಬಾಯಿಗೆ ಆಹಾರವಾಗಬೇಕಾಗುತ್ತದೆ ಎಂಬ ಅರ್ಥವಿದೆ.. ಈ ರೀತಿಯ ವಚನಗಳು ಬಸವಣ್ಣನವರಲ್ಲಿ ಇಲ್ಲವೆ ಇಲ್ಲ ಎಂಬಂತಿವೆ. ಈ ವಚನವು ಹಿಂದೆ ನಡೆದಿದ್ದನ್ನು ಹೇಳುತ್ತಿದೆಯೊ ಅಥವಾ ಮುಂದೆ ನಡೆಯಬಹುದಾದ್ದನ್ನು ಸೂಚಿಸುತ್ತಿದೆಯೊ ಎಂಬುದನ್ನೂ ಸಜ ಪರಿಶೀಲಿಸಬೇಕಾಗಿದೆ, ಅಥವಾ ‘ಇಪ್ಪತ್ತೇಳು ಬಸದಿಯನೊಡೆಯನೆ ಆಗಳಂತೆ ಎನ್ನ ಮಾಡಿದ ಕರ್ಮ’ ಎಂದು ಓದಿಕೊಳ್ಳಬೇಕೊ ಎಂಬುದನ್ನೂ ಪರಿಶೀಲಿಸಬೇಕಾಗಿದೆ.

ಮೊಸಳೆಗಳಿಗೆ ಆಹಾರವಾಗುವ, ಅನ್ನಕ್ಕೆ ಹುಳು ಬೀಳುವ ಮಾತುಗಳು ಜನಪದರ ಸಾಮಾನ್ಯ ಬೈಗುಳದಂತೆಯೆ ಕೇಳಿಸುತ್ತವೆ. ಆದರೆ ಶಿಕ್ಷೆ ಕೊಡುವವನು ಮಾತ್ರ ಕೂಡಲಸಂಗಮನೆ. ಶಿಕ್ಷೆ ಯಾಕೆಂದು ಸಹ ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿಪ್ರರ ಮಾತು ಕೇಳುವುದು, ಶಿವಧರ್ಮವ ಕೆಡಿಸುವುದು ಶಿಕ್ಷೆಗೆ ಕಾರಣ. ಈ ವಚನವು ಪರೋಕ್ಷವಾಗಿ ಜೈನ ಮತ್ತು ಶೈವದ ನಡುವಿನ ಸಂಘರ್ಷವನ್ನು ವ್ಯಕ್ತಪಡಿಸುತ್ತಿದೆ. ವಿಪ್ರರು ಜೈನ ತತ್ವದ ಕಡೆ ನಿಂತು ಶೈವವನ್ನು ಹಣಿಯಲು ಪ್ರಯತ್ನಿಸುತ್ತಿರುವುದನ್ನೂ ಧ್ವನಿಸುತ್ತಿದೆ. ಈ ವಚನ ರಚನೆಯಾಗಲು ಚಾರಿತ್ರಿಕವಾದ ಉದಾಹರಣೆಗಳೇನಾದರೂ ಇದ್ದವೆ ಎಂಬುದರ ಕುರಿತು ಪರಿಶೀಲಿಸಬೇಕಾಗಿದೆ. ಚರಿತ್ರೆಕಾರರು ಇಂಥ ವಚನಗಳ ಜಾಡು ಹಿಡಿದು ಸಂಶೋಧನೆ ನಡೆಸದ ಕಾರಣ ಲೋಕಕ್ಕೆ ತಿಳಿಯಬೇಕಾದ ಅಸಂಖ್ಯಾತ ಸಂಗತಿಗಳು ಭೂತದಲ್ಲಿ‌ ಹುದುಗಿ ಕುಳಿತಿವೆ.

ಬಸವಣ್ಣನವರ ಅನೇಕ ವಚನಗಳಲ್ಲಿ ಪ್ರಸ್ತಾಪವಾಗುವ ಉಗ್ರ ಶಿಕ್ಷೆಯೆಂದರೆ ಮೂಗು ಕೊಯ್ಯುವುದು.

‘ಮೂಗ ಬಣ್ಣಿಸಿ, ಹಲುದೋರೆ ಕೊಯ್ವ [೬೧೮], 

‘ದೇವನೊಬ್ಬ ನಾಮ ಹಲವು

ಪರಮ ಪತಿವ್ರತೆಗೆ ಗಂಡನೊಬ್ಬ

ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ವ [ ೬೧೪]

‘ಭಕ್ತರ ನಿರ್ಲಕ್ಷ್ಯ ಮಾಡಿದವರ 

ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ?[ ೪೧೪]

‘ನಮ್ಮ ಕೂಡಲ ಸಂಗನನರಿಯದ ಕಾರಣ

ನಾಯಕ ನರಕದಲ್ಲಿಕ್ಕಿತ್ತಯ್ಯಾ’ [೫೮೪]

‘ಲಿಂಗವ ಮೆಚ್ಚಿ ಜಂಗಮ ಪ್ರಸಾದವ ಕೊಂಬವರ 

ನೋಡಿನಗುವವರ ಕುಂಭಿಪಾತ ನಾಯಕ ನರಕದಲ್ಲಿಕ್ಕುವ’ [ ೭೬೯]

‘ಆಗಮದ ಹಲ್ಲನೆ ಕಳೆಯಿತ್ತು’ [ ೮೪೯]

ಈ ರೀತಿಯ ಅನೇಕವು ಬಸವಣ್ಣನವರ ವಚನಗಳಲ್ಲಿ ಉಲ್ಲೇಖವಾಗಿವೆ. ಇಲ್ಲೆಲ್ಲ ಶರಣ ಧರ್ಮವು ಶಿವಧರ್ಮಕ್ಕೆ ವಿರುದ್ಧವಾಗಿ ನಿಲ್ಲುತ್ತದೆಯೆ ಎಂಬ ಗುಮಾನಿ ಹುಟ್ಟುತ್ತದೆ. ಶರಣ ಧರ್ಮವು ಬಯಲಾಗುವುದರ ಕಡೆಗೆ ಶೂನ್ಯವಾಗುವುದರ ಕಡೆಗೆ ಚಲಿಸುತ್ತದೆ. ಬಸವಣ್ಣನವರು ಹೇಳುವ ಶಿವ ಧರ್ಮಕ್ಕೆ ಹಲವು ಕಟ್ಟುಪಾಡುಗಳಿವೆ. ಈ ಕಟ್ಟುಪಾಡುಗಳನ್ನು ಮುರಿಯುವುದು ಅಪರಾಧವೆನ್ನಿಸಿಕೊಳ್ಳುತ್ತದೆ. ಅದಕ್ಕೆ ಕೂಡಲಸಂಗಮನೆ ಹಲ್ಲು ಮುರಿಯುವ, ಮೂಗಕೊಯ್ಯುವ, ಅನ್ನದಲ್ಲಿ ಹುಳು ಬೀಳುವಂತೆ ಮಾಡುವ ಶಿಕ್ಷೆಯನ್ನು ವಿವರಿಸುವ ವಚನಗಳು ಕಾಣುತ್ತವೆ. 

ಬಸವಣ್ಣನವರ ವಚನಗಳಲ್ಲಿ ನಾಯಿ, ವೇಶ್ಯೆ, ವೇಶ್ಯೆಯ ಒಡಲಲ್ಲಿ ಹುಟ್ಟಿದವರು, ಭವಿ, ತೊತ್ತು, ಬೇವು, ಬಂಟ, ವಿಪ್ರ-ಹಾರುವ ಮುಂತಾದವು ಅತಿ ಹೀನಾರ್ಥದಲ್ಲಿ ಬಳಕೆಯಾಗಿವೆ. ಇವುಗಳು ತಮ್ಮ ಮೂಲ ಸ್ವಭಾವವನ್ನು ಬಿಡುವುದಿಲ್ಲ ಎಂಬುದನ್ನು ಪದೆ ಪದೆ ಉಲ್ಲೇಖಿಸುತ್ತಾರೆ.

‘ಸೂಳೆಗೆ ಹುಟ್ಟಿದ ಕೂಸಿನಂತೆ

ಆರನಾದಡೆಯೂ ಅಯ್ಯಾ ಅಯ್ಯಾ ಎನಲಾರೆ’ [ ೩೪೭]

‘ಸೂಳೆಯ ಮಗ ಮಾಳವ ಮಾಡಿದಡೆ

ತಾಯ ಹೆಸರಿತ್ತು ತಂದೆಯ ಹೆಸರಿಲ್ಲ’[೨೨೬]

‘ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ?’ [೧೨೮]

‘ಹಾದರದ ಮಿಂಡನ ಹತ್ತಿರ ಮಡಗಿಕೊಂಡು

ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ?

ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು

ಮತ್ತೆ ಭಿನ್ನಶೈವಕ್ಕೆರಗುವುದೆ ಹಾದರ,

ಕೂಡಲ ಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ?’[೧೪೦೭]

ಪರಸತಿ, ಪರದೈವ, ಪರಧನಕ್ಕೆ ಎರಗುವ ಮನಸ್ಥಿತಿಯನ್ನೆ ಬಸವಣ್ಣನವರು ಅಪರಾಧಿ ಗುಣ ಎಂದು ಬಸವಣ್ಣನವರು ವ್ಯಾಖ್ಯಾನಿಸುತ್ತಾರೆ. ಗಂಡಿನ ಪರಸತಿಯ ವ್ಯಾಮೋಹಕ್ಕಿಂತ ಹೆಣ್ಣಿನ ಹಾದರವನ್ನು ವಿವಿಧ ಆಯಾಮಗಳಲ್ಲಿ ಪಾತಕ ಎಂಬ ವ್ಯಾಖ್ಯಾನ ಬಸವಣ್ಣನವರದು.

ಪಂಚ ಮಹಾಪಾತಕಗಳ ಕುರಿತು ಶರಣರೂ ತಲೆ ಕೆಡಿಸಿಕೊಂಡಿದ್ದರು. ಬಸವಣ್ಣನವರಲ್ಲಿ ಪಂಚ ಮಹಾಪಾತಕಗಳ ಕುರಿತು ನೇರ ವ್ಯಾಖ್ಯಾನವಿಲ್ಲ. ಆದರೆ ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ “ ಪಂಚಮಹಾಪಾತಕವಾವುದೆಂದರಿಯರು, ಭವಿಯ ತಂದು ಭಕ್ತನ ಮಾಡೂದು ಪ್ರಥಮ ಪಾತಕ, ಭಕ್ತರಿಗೆ ಶರಣೆಂಬುದು ದ್ವಿತೀಯ ಪಾತಕ, ಗುರುವೆಂಬುದು ತೃತೀಯ ಪಾತಕ, ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ, ಗುಹೇಶ್ವರ ಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಪಂಚಮ ಪಾತಕ” [೫೫೨] ಎಂದು ಹೇಳಿ ಸ್ವತಃ ಶರಣರನ್ನೆ ಬೆಚ್ಚಿ ಬೀಳಿಸುತ್ತಾರೆ.

 ಸಾಮಾನ್ಯವಾಗಿ ‘ಪಾತಕ’ ಎಂಬುದು ‘ಅಪರಾಧ’ ಎಂಬುದನ್ನೂ ಸಹ ಮೀರಿದ್ದಾಗಿ ಧ್ವನಿತವಾಗುತ್ತದೆ. ಶರಣರು ಅಪರಾಧವನ್ನೆ ಪಾತಕ ಎಂದು ಭಾವಿಸಿದ್ದ ಹಾಗೆ ಕಾಣುತ್ತದೆ. ಬಸವಣ್ಣನವರು ಗುರು, ಲಿಂಗ, ಜಂಗಮ ತತ್ವಗಳನ್ನು ಆತ್ಯಂತಿಕವೆಂದು ಭಾವಿಸುತ್ತಾರೆ. ಅಲ್ಲಮಪ್ರಭುಗಳು ಆ ಪರಿಕಲ್ಪನೆಗಳನ್ನೆ ಒಡೆದು ಹಾಕುತ್ತಾರೆ. ಸಿದ್ಧ ಸೂತ್ರಗಳನ್ನು ಮುರಿಯದೆ ನಡೆಯುವುದೆ ಪಾತಕ ಎಂಬ ನಿಲುವು ಅಲ್ಲಮಪ್ರಭುಗಳಿಗೆ ಇರುವಂತಿದೆ. ಗುಹೇಶ್ವರ ಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಐದನೆಯ ಪಾತಕ ಎಂಬ ಮಾತು, ಗುಹೇಶ್ವರ ಲಿಂಗಕ್ಕೇನು ಹೆಚ್ಚುಗಾರಿಕೆ ಇಲ್ಲ ಎಂಬಂತಿದೆ. ಪರದೈವದ ಆಚರಣೆಯು ಪಾತಕ ಎಂಬ ಬಸವಣ್ಣನವರ ವ್ಯಾಖ್ಯಾನಕ್ಕೆ ಇದು ತುಸು ವಿರುದ್ಧ. “ನಮ್ಮ ಕೂಡಲ ಸಂಗನನರಿಯದ ಕಾರಣ ನಾಯಕನರಕದಲ್ಲಿಕ್ಕಿತ್ತಯ್ಯಾ” [ ೫೮೪] “ಕೂಡಲ ಸಂಗಯ್ಯನ ನೆನೆದಡೆ ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ” [ ೧೭೮] ಎಂಬ ಬಸವಣ್ಣನವರ ಸರ್ವಾರ್ಪಿತ ಮನೋಭಾವವನ್ನು ದಿಕ್ಕೆಡಿಸುವಂತೆ ಅಲ್ಲಮಪ್ರಭುಗಳು ನುಡಿಯುತ್ತಾರೆ.

ಅಲ್ಲಮ ಪ್ರಭುಗಳ ಆನುಭಾವಿಕ ನೆಲೆಯ ವ್ಯಾಖ್ಯಾನವು ಸೈದ್ಧಾಂತಿಕ ಸಂರಚನೆ ದೃಷ್ಟಿಯಿಂದ ಸರಿ. ಆದರೆ ಅಪರಾಧ ಕುರಿತ ವ್ಯಾಖ್ಯಾನವು ಲೋಕದೃಷ್ಟಿಕೋನದಲ್ಲಿ ಬುದ್ಧ ಮತ್ತು ಬಸವಣ್ಣನವರಲ್ಲಿ ಹೆಚ್ಚು ಸ್ಪಷ್ಟವಾಗಿ ನಿರೂಪಿತವಾಗುತ್ತವೆ. ನೈತಿಕತೆ ಎಂಬುದರ ವ್ಯಾಖ್ಯಾನವು ಬದಲಾಗುತ್ತದಾದರೂ ಲೋಕ ಒಪ್ಪಿಕೊಂಡ ಕೊಲ್ಲದ, ಹಿಂಸಿಸದ, ಸುಳ್ಳು ಹೇಳದೆ ಬಾಳುವಂಥ ತತ್ವಗಳಲ್ಲಿ ಯಾವ ಭಿನ್ನಾಭಿಪ್ರಾಯ ತಾಳಲು ಸಾಧ್ಯ ಎಂಬುದು ಬಸವಣ್ಣನವರ ನಿಲುವು.

ಬಸವಣ್ಣನವರು ಅತ್ಯಂತ ನಿಖರವಾಗಿ ಮತ್ತು ಪುರೋಗಾಮಿಯಾಗಿ ಮಂಡಿಸುವ ಪ್ರಮೇಯ ಜಾತಿ ಕುರಿತಾದದ್ದು. ಬಹುಶಃ ಉಪಖಂಡದ ಚರಿತ್ರೆಯಲ್ಲಿ ಜಾತಿ ಎನ್ನುವುದು ಅಪರಾಧ ಎಂಬ ನಿಲುವು ಮೊದಲಿಗೆ ತೆಗೆದುಕೊಂಡದ್ದು ಬಸವಣ್ಣನವರೆ. ಬಸವಣ್ಣನವರ ನಂತರ ಬಾಬಾ ಸಾಹೇಬರು ತಮಗೆ ದಕ್ಕಿದ ಅನುಭವ ಮತ್ತು ತಿಳುವಳಿಕೆಯನ್ನು ಬಳಸಿ ಜಾತಿ ವಿನಾಶವಾಗಬೇಕೆಂಬ ಪ್ರಮೇಯವನ್ನು ಮಂಡಿಸಿದರು.

ಜಾತಿ ವ್ಯವಸ್ಥೆಯ ಹುತ್ತ ಯಾವುದು ಎಂಬ ಕುರಿತು ಬಸವಣ್ಣನವರು ಪದೆ ಪದೆ ವೈದಿಕ ಶಾಸ್ತ್ರ- ಪ್ರಮಾಣ ಗ್ರಂಥಗಳತ್ತ ಕೈ ತೋರುತ್ತಾರೆ. ಹಾಗಾಗಿ ಅವುಗಳನ್ನು ನಿರಾಕರಿಸದೆ ಅಥವಾ ಅಪಘನತೀಕರಿಸದೆ ಬಿಡುಗಡೆ ಸಾಧ್ಯವಿಲ್ಲ ಎಂಬ ತಿಳುವಳಿಕೆ ಬಸವಣ್ಣ ಮತ್ತು ಬಾಬಾ ಸಾಹೇಬರಿಬ್ಬರದ್ದೂ ಆಗಿದೆ. ಇಬ್ಬರೂ ಕೂಡ ಜಾತಿ ಎನ್ನುವುದು ಸಹಜವಾದುದಲ್ಲ, ಕೃತಕವಾದುದು ಮತ್ತು ಕೆಲವರ ಅನುಕೂಲಕ್ಕೆ ಕಟ್ಟಿಕೊಂಡದ್ದು ಎಂದು ಭಾವಿಸಿದ್ದರು.ಆದ್ದರಿಂದಲೇ ಇನ್ನಿಲ್ಲದಂತೆ ಜಾತಿ ಸಮರ್ಥನೆಯ ಎಲ್ಲ ಪ್ರಮೇಯಗಳನ್ನು, ಪ್ರಮೇಯಕಾರರನ್ನು ಅತ್ಯಂತ ಕಟುಶಬ್ಧಗಳಲ್ಲಿ ಟೀಕಿಸಿದರು. ಬಸವಣ್ಣನವರು ತಮ್ಮದೊಂದು ವಚನದಲ್ಲಿ “ ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ, ಗೌತಮ ಮುನಿಗೆ ಗೋವೇಧೆಯಾಗಿತ್ತು, ಬಲಿಗೆ ಬಂಧನವಾಯಿತ್ತು, ಕರ್ಣನ ಕವಚ ಹೋಯಿತ್ತು, ದಕ್ಷಂಗೆ ಕುರಿದಲೆಯಾಯಿತ್ತು, ಪರಶುರಾಮ ಸಮುದ್ರಕ್ಕೆ ಗುರಿಯಾದನು, ನಾಗಾರ್ಜುನನ ತಲೆ ಹೋಯಿತ್ತು. ದೇವಾ, ಕೂಡಲ ಸಂಗನ ಶರಣರು ಕೈಲಾಸವಾಸಿಗಳಾದರು” [೫೭೦] ಎಂದಿದ್ದಾರೆ.

 ಮತ್ತೊಂದು ಕಡೆ “ ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ, ಭಾರತಪುರಾಣ ಗೋತ್ರಕ್ಕೆ ಮಾರಿ, ಎಲ್ಲ ಪುರಾಣ ಕರ್ಮಕ್ಕೆ ಮೊದಲು, ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲ ಸಂಗಮದೇವಾ” [ ೫೭೧] ಎಂದಿದ್ದಾರೆ. 

“ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ? ಕುಲವುಂಟೆ ಜಂಗಮವಿದ್ದೆಡೆಯಲ್ಲಿ? ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ” ಎಂಬುದೊಂದು ವಚನವಿದೆ. ಈ ವಚನದಲ್ಲಿ ಬಸವಣ್ಣನವರು ಹೊಲೆ, ಕುಲ ಮತ್ತು ಎಂಜಲುಗಳ ಆಧಾರದಲ್ಲಿ ಪ್ರತ್ಯೇಕತೆಯನ್ನು ಪ್ರತಿಪಾದಿಸುವ ಜಾತಿ ಸೂಚಕ ಕ್ರಿಯೆಗಳಿಗೆ ಶರಣ ಧರ್ಮದಲ್ಲಿ ಅವಕಾಶವಿಲ್ಲ ಎಂದಿದ್ದಾರೆ. ಇವುಗಳು ಅಪವಿತ್ರ ಎಂಬ ಸೂತಕದ ಮಾತನ್ನಾಡುವುದೆ ಪಾತಕ ಎಂಬ ನಿಲುವು ಆಧ್ಯಾತ್ಮಿಕ ರಾಜಕಾರಣದ ಇತ್ಯಾತ್ಮಕ ಆಯಾಮ.

ಸ್ವತಃ ಶೈವ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ್ದ ಬಸವಣ್ಣನವರು ಯಾಕೆ ಇಡೀ ಒಂದು ಜಾತಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ?ಎಂಬುದರ ಕುರಿತು ವಿವೇಚಿಸಬೇಕಾಗಿದೆ. ಇದರ ಜೊತೆಗೆ ಪುರಾಣ ಗ್ರಂಥಗಳು ಸರ್ವರನ್ನೂ ಸಮನೆಂದು ಪರಿಗಣಿಸದ ಕಾರಣ ಅವುಗಳನ್ನು ನಂಬುವುದರಲ್ಲಿ ಬಿಡುಗಡೆಯಿಲ್ಲ ಎಂಬ ನಿಲುವು ತಾಳುತ್ತಾರೆ. ಜಾತಿ ಭಿನ್ನತೆಯ ವಿರುದ್ಧ ಯುದ್ಧ ಸಾರಿದಂತೆ ಮಾತನಾಡಿದ್ದ ಬಸವಣ್ಣನವರು, “ಸಮತೆ, ಸಜ್ಜನಿಕೆ, ಸಮಯಾಚಾರದ ನಿಜಪದವು ದುರಾಚಾರಿಗಳಿಗಳವಡುವುದೆ? ನಮ್ಮ ಕೂಡಲಸಂಗನ ಶರಣರಿಗಲ್ಲದೆ ಅನುಭಾವವೆಲ್ಲರಿಗೆಲ್ಲಿಯದೊ?”[೧೩೭೮] ಎನ್ನುತ್ತಾರೆ. ಕುಲಭಿನ್ನತೆಯಿಲ್ಲದ ಸಮತೆ, ಅಯ್ಯಾ ಎಂದರೆ ಸ್ವರ್ಗವೆನ್ನುವ ಸಜ್ಜನಿಕೆ, ಕಾಯಕ ತತ್ವಕ್ಕೆ ಅಗತ್ಯವಾದ ಸಮಯಾಚಾರ ಇವು ಶರಣ ಧರ್ಮದ ಪರಮ ಲಾಂಛನಗಳು ಎಂದು ಬಸವಣ್ಣನವರು ಗ್ರಹಿಸಿದಂತೆ ಕಾಣುತ್ತದೆ.

ಅಂತಿಮವಾಗಿ ಅಜ್ಞಾನವೆ ಮೊದಲ ಅಪರಾಧ ಎಂಬ ರೀತಿಯ ವ್ಯಾಖ್ಯಾನ ಬಸವಣ್ಣನವರಲ್ಲಿ ಕಾಣುತ್ತದೆ. ಕುವೆಂಪು ಅವರೂ ಕೂಡ ಜ್ಞಾನವನ್ನು ಬಿಡುಗಡೆಯ ಮಾರ್ಗ ಎಂದು ಭಾವಿಸಿದ್ದರು. ಆದ್ದರಿಂದಲೆ ಅವರು ಮೊದಲು ನಿಮ್ಮ ತಲೆಗೆ ಗುಂಡು ಹೊಡೆದುಕೊಳ್ಳಿ, ಅಜ್ಞಾನವನ್ನು ಸಂಭ್ರಮಿಸಿ ಆಚರಿಸುವ ನಿಮ್ಮ ಮೌಢ್ಯ ಮೊದಲು ತೊಲಗಲಿ ಎಂದರು. ಬಸವಣ್ಣನವರ ನಿಲುವೂ ಸಹ ಇದೇ ಆಗಿದೆ.

  • ಡಾ. ನೆಲ್ಲುಕುಂಟೆ ವೆಂಕಟೇಶ್ & ಎಸ್. ಕೆ ಪ್ರೇಮಾವತಿ

( ಮಹಾಮನೆ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಕಳೆದ ತಿಂಗಳು ಪ್ರಕಟವಾದ ಬರೆಹ )

 


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ