ಇಕ್ರಲಾ ವದೀರ್ಲಾ : ಸಿದ್ದಲಿಂಗಯ್ಯ | ಪ್ರಸ್ತುತಿ : ಜಂಗಮ ಪದ

ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದ ಸಿದ್ದಲಿಂಗಯ್ಯ ಅವರ ಪ್ರಸಿದ್ಧ “ಹೊಲೆಮಾದಿಗರ ಹಾಡು” ಸಂಕಲನದ ಕವಿತೆ “ಇಕ್ರಲಾ ವದೀರ್ಲಾ ..”. ಜಾಗೃತ ಕರ್ನಾಟಕ ಚಿಂತನಾ ಸಮಾವೇಶದಲ್ಲಿ ಜಂಗಮ ಪದ ತಂಡದ ಪ್ರಸ್ತುತಿ ಇಲ್ಲಿದೆ.

ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ
ದೇವ್ರು ಒಬ್ಬೇ ಅಂತಾರೆ
ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ
ಎಲ್ಲಾರು ದೇವ್ರ ಮಕ್ಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ
ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್ಸಲ್ವರ್ಲೊ
ನಮ್ ಹೇಲ್ ತಿನ್ನೋ ನಾಯ್ನ ಕ್ವಾಣೆವಳೀಕ್ ಬುಟ್‌ಕತ್ತಾರೆ
ನಾವ್ ಬೆಳಿದಿತ್ ತಿಂತಾರೆ ನಾವ್ ದುಡಿದಿತ್ ತಗತ್ತಾರೆ
ನಾವ್ ಮಾತ್ರ ಬ್ಯಾಡಾ
ಹೊಲೇರು, ಮಾದುಗ್ರು ಅನ್ನೋ ಬದ್ಲು, ಹರಿಜನಾ
ಅಂತ ಕರ್ದು ನಗ್ತಾರಲ್ಲಪ್ಪೋ
ನಮ್ಯಾಲೆ ಮೀಟಿಂಗ್ ಮಾಡ್ತಾರೆ, ಕಾನೂನ್ ಮಾಡ್ತಾರೆ
ನಮ್ಮ ಯಸ್ರೇಳಿ ಹಾರ ಹಾಕ್ತಾರೆ, ಹಾಕುಸ್ಕತ್ತಾರೆ
ನಮ್ಮುನ್ನ ಉದ್ಧಾರ ಮಾಡ್ತೀವಿ ಅಂತ ಪೇಪ್ರೇಲಿ
ಮೈಕೇಲಿ ಜೋರಾಗಿ ಕೂಗ್ತಾ ಅವಲ್ಲಪ್ಪೋ
ನಾವ್ ಮಾತ್ರ ಇಸ್ಕೊಲ್‌ಗೋಗಾಂಗಿಲ್ಲ ಜೀತಕ್ಕೋಗೋಕು
ತಲೆ ಎತ್ತಾಂಗಿಲ್ಲ – ಬಗ್ಗುಸ್ಬೇಕು
ಈ ನನ್ ಮಕ್ಕು ಕಳ್ಳಾಟ ಆಡ್ತಾ ಅದ್ರೆ ಅದಕ್ಕೇನೆ
ಇಕ್ರಲಾ ವದೀರ್ಲಾ ಈ ಸೂಳೆ ಮಕ್ಳ ಮೂಳೆ ಮುರೀಲ್ಲಾ ..

 

– ಸಿದ್ದಲಿಂಗಯ್ಯ

 


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

 

ಪ್ರತಿಕ್ರಿಯಿಸಿ