‘
ಸೈಮನ್ ಮತ್ತು ಶುಸ್ಟರ್ ಇಂಡಿಯಾ ಪ್ರಕಟಿಸಿರುವ ಚಂದನ್ ಗೌಡ ಅವರ ಹೊಸ ಪುಸ್ತಕ ʼAnother India: Events, Memories, Peopleʼ ಪುಸ್ತಕದ ಆಯ್ದ ಭಾಗದ ಅನುವಾದ.
ಶ್ರಾವಸ್ತಿಯಲ್ಲೊಮ್ಮೆ ತಂಗಿದ್ದಾಗ, ಬುದ್ಧನು ಭಿಕ್ಕುಗಳನ್ನುದ್ದೇಶಿಸಿ, “ಮನುಷ್ಯನೊಬ್ಬ ಭೂಮಿಯನ್ನು ಅಗೆಯಲು ಅಣಿಯಾಗುತ್ತಿದ್ದರೆ, ಭೂಮಿಯು ಆತನ ಮೇಲೆ ಮುನಿಸಿಕೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದನು.
ಭಿಕ್ಕುಗಳೆಲ್ಲರೂ “ಇಲ್ಲ” ವೆಂದು ಉತ್ತರಿಸಿದರು.
“ಮೇಣ ಮತ್ತು ಬಣ್ಣಗಳನ್ನು ಬಳಸಿ ಮನುಷ್ಯನೊಬ್ಬ ಗಾಳಿಯಲ್ಲಿ ಚಿತ್ರಗಳನ್ನು ಬಿಡಿಸಲು ಹೊರಟರೆ, ಅದು ಸಾಧ್ಯವೇ?”
“ಇಲ್ಲ, ಅವನಿಗೆ ಸಾಧ್ಯವಾಗುವುದಿಲ್ಲ.”
“ಯಾಕೆ ಸಾಧ್ಯವಿಲ್ಲ?”
“ಏಕೆಂದರೆ ಗಾಳಿಯಲ್ಲಿ ಕಪ್ಪು ಛಾಯೆಗಳಿಲ್ಲ.”
“ಹಾಗೆಯೇ, ನಿಮ್ಮ ಮನಸ್ಸಿನಲ್ಲಿಯೂ ಕಪ್ಪು ಛಾಯೆಗಳಿರಬಾರದು. ಅವು ಕೆಟ್ಟ ಭಾವೋದ್ರೇಕಗಳನ್ನು ಪ್ರತಿಬಿಂಬಿಸುತ್ತವೆ. ಸುಡುವ ಜರೀಗಿಡದೊಂದಿಗೆ ಗಂಗೆಗೆ ಬೆಂಕಿಯಿಕ್ಕಲು ವ್ಯಕ್ತಿಯೊಬ್ಬ ಪ್ರಯತ್ನಿಸಿದರೆ ಆತ ಯಶಸ್ವಿಯಾಗುತ್ತಾನೆಯೇ? ”
“ಇಲ್ಲ.”
“ಯಾಕೆ?”
“ಏಕೆಂದರೆ ಗಂಗಾನದಿಯ ನೀರು ಹೊತ್ತಿ ಉರಿಯುವುದಿಲ್ಲ.”
“ಭೂಮಿಯು ಹೇಗೆ ಮುನಿಸಿಕೊಳ್ಳುವುದಿಲ್ಲವೋ, ಗಾಳಿಯು ಹೇಗೆ ತನ್ನ ಗುಣಗಳಿಗೆ ವಿರುದ್ಧವಾದ ಯಾವುದೇ ಕ್ರಿಯೆಗೆ ಒಗ್ಗಿಕೊಳ್ಳುವುದಿಲ್ಲವೋ, ಬೆಂಕಿಯನ್ನು ಲೆಕ್ಕಿಸದೇ ಗಂಗಾನದಿಯ ಹೇಗೆ ಹರಿಯುತ್ತಾ ಸಾಗುತ್ತಲಿರುತ್ತದೆಯೋ, ಭಿಕ್ಕುಗಳಾದ ನೀವು ಎದುರಿಸುವ ಅವಮಾನ-ಅನ್ಯಾಯಗಳು ದೋಷಿಗಳೆಡೆಗಿನ ನಿಮ್ಮ ಮೈತ್ರಿಯನ್ನು ಪ್ರಭಾವಿಸದಂತೆ ನೋಡಿಕೊಳ್ಳಬೇಕು. ನಿಮ್ಮ ಮನಸ್ಸನ್ನು ಭೂಮಿಯಂತೆ ದೃಢವಾಗಿ, ಗಾಳಿಯಂತೆ ಶುದ್ಧವಾಗಿ ಮತ್ತು ಗಂಗಾನದಿಯಂತೆ ಆಳವಾಗಿ ಕಾಪಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ಹೀಗಾದಾಗ, ಯಾವುದೇ ವಿಚಾರಗಳು ನಿಮ್ಮ ಮೈತ್ರಿಗೆ ಭಂಗ ತರಲು ಸಾಧ್ಯವಿಲ್ಲ. ನಿಮ್ಮನ್ನು ನೋಯಿಸುವವರು ಶೀಘ್ರವೇ ದಣಿಯುತ್ತಾರೆ. ನಿಮ್ಮ ಮೈತ್ರಿಯು ಅಪರಿಮಿತವಾಗಿರಲಿ. ನಿಮ್ಮ ಆಲೋಚನೆಗಳು ವಿಶಾಲವಾಗಿರಲಿ ಮತ್ತು ಎಂತದ್ದೇ ದ್ವೇಷವನ್ನು ಮೀರುವಂತಿರಲಿ. ಧಮ್ಮದ ಪ್ರಕಾರ ಕರುಣೆಯನ್ನು ಆಚರಿಸಿದರೆ ಸಾಲದು. ಅದರೊಟ್ಟಿಗೆ ಮೈತ್ರಿಯನ್ನೂ ಆಚರಿಸುವುದು ಅತ್ಯಗತ್ಯ.
***
ಸನ್ಯಾಸಿಗಳಿಗೆ ಬುದ್ಧನು ನೀಡಿದ ಸಲಹೆಯ ಪ್ರಕಾರ ಮೈತ್ರಿಯು ಮಾನವನ ಅಂತರ್ಗತ ಗುಣವಾಗಿರಬೇಕು. ಅವರಲ್ಲಿ ಮೈತ್ರಿಯ ಉಪಸ್ಥಿತಿಯು ಗಾಳಿ, ಭೂಮಿ ಮತ್ತು ನೀರಿನ ಸಾರದಂತೆ ಅಚಲವಾಗಿರಬೇಕು. ವಿರೋಧಿಗಳು ಏನನ್ನೇ ಮಾಡಿದರೂ, ಅವರೊಳಗೆ ನೆಲೆಸಿರುವ ಮೈತ್ರಿಯು ದೃಢ ಮತ್ತು ಅಬಾಧಿತವಾಗಿರಬೇಕು. ತಮ್ಮೊಳಗೆ ಮೈತ್ರಿಯು ಗಟ್ಟಿಯಾಗಿ ಬೇರೂರಿ ಬೆಳೆಯುವಂತೆ ನೋಡಿಕೊಳ್ಳುವುದು ಪವಿತ್ರ ಬಾಧ್ಯತೆಯೇ ಆಗಿತ್ತು – ಅವರ ಧಮ್ಮವು ಅವರಿಂದ ಅದನ್ನು ನಿರೀಕ್ಷಿಸಿತ್ತು ಕೂಡ. ಮೈತ್ರಿ ಭಾವನೆಯು ಕೂಡಿಕೊಳ್ಳದಿದ್ದರೆ, ದಯೆ ಮತ್ತು ಸಹಾನುಭೂತಿಗಳು ಮಾತ್ರವೇ ನೈತಿಕವಾಗಿ ನಮ್ಮನ್ನು ಮುನ್ನಡೆಸಲು ಸಾಧ್ಯವಿಲ್ಲ. ಈ ತಿಳುವಳಿಕೆಯ ಅಡಿಯಲ್ಲಿ, ಮೈತ್ರಿಯು ವ್ಯಕ್ತಿಗಳನ್ನೂ ಸಮುದಾಯಗಳನ್ನೂ ಪೊರೆಯುವ ಮತ್ತು ಪೋಷಿಸುವ ಶಕ್ತಿಯಾಗುತ್ತದೆ. ಇದು ದ್ವೇಷ, ಸೇಡು ಮತ್ತು ಇನ್ನಿತರ ವಿನಾಶಕಾರಿ ಭಾವನೆಗಳಿಗೆ ಒಳಗಾಗದಂತೆ ಅವರನ್ನು ರಕ್ಷಿಸುತ್ತದೆ ಮತ್ತು ಅವರಲ್ಲಿನ ಜೀವಪೋಷಕ ಪ್ರವೃತ್ತಿಯನ್ನು ಬೆಳೆಸುತ್ತದೆ. ಶೋಷಿತರಿಗೆ ಹಾಗೂ ಶಕ್ತಿಹೀನರಿಗೆ ತಮ್ಮ ಸ್ವಯಂ-ಪರಿವರ್ತನೆಯನ್ನು ಮೈತ್ರಿಯ ದಿಕ್ಕಿನಲ್ಲಿ ಕೊಂಡೊಯ್ಯಲು ಅಗಾಧವಾದ ಏಜೆನ್ಸಿಯನ್ನು ಬುದ್ಧನ ಚರ್ಚೆಯು ಒದಗಿಸುತ್ತದೆ.
ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಕೊನೆಯ ಪುಸ್ತಕವಾದ ಬುದ್ಧ ಮತ್ತು ಆತನ ಧಮ್ಮ (1957) ದಲ್ಲಿ ನೀಡಲಾಗಿರುವ ಬುದ್ಧನ ಬಗೆಗಿನ ಘಟನೆಯನ್ನು ನಾನು ಆರಂಭದಲ್ಲಿ ಮರು-ನಿರೂಪಣೆ ಮಾಡಿದ್ದೇನೆ. ಈ ಘಟನೆಯು ಮೈತ್ರಿಗೆ ಸಂಸ್ಕೃತದಲ್ಲಿ ನೀಡಲಾಗಿರುವ ಸ್ನೇಹ ಮತ್ತು ಸೌಹಾರ್ದತೆ ಎಂಬ ಅರ್ಥವನ್ನು ಬದಿಗೊತ್ತಿ ಬೌದ್ಧ ಚಿಂತನೆಯ ಆಧಾರದಲ್ಲಿ ಪ್ರೀತಿ-ದಯೆ ಎಂಬ ಅರ್ಥವನ್ನು ನೀಡುತ್ತಾ ಅದನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ. ಈ ಪುಸ್ತಕದ ಮೊದಲಿನಲ್ಲಿ, ಅಂಬೇಡ್ಕರರು ಮೈತ್ರಿಯನ್ನು “ ಎಲ್ಲಾ ಜೀವಿಗಳತ್ತ ಹೊಂದುವ ಸಹ ಭಾವನೆ. ಇದನ್ನು ಸ್ನೇಹಿತನೆಡೆಗೆ ಮಾತ್ರವಲ್ಲ; ಶತ್ರುಗಳೆಡೆಗೂ ಹೊಂದಬೇಕು; ಮನುಷ್ಯನೆಡೆಗೆ ಮಾತ್ರವಲ್ಲ, ಎಲ್ಲ ಜೀವಿಗಳೆಡೆಗೂ ಹೊಂದಬೇಕು.” ಎಂದು ವಿವರಿಸುತ್ತಾರೆ. ಮೈತ್ರಿಯ ಹೊರತಾಗಿ “ಮನಸ್ಸನ್ನು ನಿಷ್ಪಕ್ಷಪಾತವಾಗಿಟ್ಟುಕೊಂಡು, ಎಲ್ಲರಿಗೂ ಮುಕ್ತವಾಗಿದ್ದು, ಎಲ್ಲರಿಗೂ ಪ್ರೀತಿಯಿಂದ ಮತ್ತು ಯಾರನ್ನೂ ದ್ವೇಷಿಸದಿರಲು [ಪ್ರೇರೇಪಿಸುವ], ನಾವು ನಮಗಾಗಿ ಬಯಸುವ ಸಂತೋಷವೇ ಎಲ್ಲಾ ಜೀವಿಗಳಿಗೂ ದಕ್ಕಬೇಕು ಎಂಬ ಭಾವನೆಯನ್ನು ಮೂಡಿಸಲು ಬೇರಾವುದರಿಂದ ಸಾಧ್ಯ?” ಎಂದು ಪ್ರಶ್ನಿಸುತ್ತಾರೆ. ಎಲ್ಲಾ ಮಾನವ ಮತ್ತು ಮಾನವೇತರ ಜೀವಿಗಳತ್ತ ಸಹ-ಭಾವನೆಯನ್ನು ಹೊಂದುತ್ತಾ, ಸಂತೋಷ ಮತ್ತು ವಾತ್ಸಲ್ಯವನ್ನು ಎಲ್ಲರಿಗೂ ನಿಷ್ಪಕ್ಷಪಾತವಾಗಿ ನೀಡಬೇಕೆಂದು ಹೇಳುವ ಮೂಲಕ; ಮತ್ತೊಬ್ಬರನ್ನು ಶತ್ರು ಎಂದು ಪರಿಗಣಿಸಲು ಅಥವಾ ದ್ವೇಷಿಸಲು ಅವಕಾಶವೇ ನೀಡದೆ ಅಂಬೇಡ್ಕರರ ಮೈತ್ರಿಯೆಂಬ ಆದರ್ಶವು ಸಮುದಾಯದ ಕಲ್ಪನೆಯನ್ನು ಮಾತ್ರವಲ್ಲ, ಸಾಮಾಜಿಕ ಹೋರಾಟದ ಕಲ್ಪನೆಯನ್ನೂ ನವೀಕರಿಸಿತು.
ತಮ್ಮ ನಂತರದ ಬರಹಗಳಲ್ಲಿ, ಅಂಬೇಡ್ಕರರು ‘ಭ್ರಾತೃತ್ವ’ ಎಂಬ ಪದವನ್ನು ಮೈತ್ರಿ ಎಂಬ ಅರ್ಥದಲ್ಲಿ ಬಳಸಿದ್ದರು ಎಂಬುದನ್ನು ಸ್ಪಷ್ಟಪಡಿಸಿದರು. ಅವರ ಮರಣಾನಂತರ ಪ್ರಕಟವಾದ ರಿಡಲ್ಸ್ ಆಫ್ ಹಿಂದೂಯಿಸಂನಲ್ಲಿ, ಸಮಾನತೆ ಮತ್ತು ಸ್ವಾತಂತ್ರ್ಯವು ಉಳಿಯುವುದು ‘ಸಹ-ಭಾವನೆ’ಯಿಂದ ಹೊರತು ಕಾನೂನಿನಿಂದಲ್ಲ ಎಂಬುದನ್ನು ಗಮನಿಸಿದರು ಮತ್ತು ನಂತರದ ಈ ನುಡಿಗಟ್ಟಿಗೆ ಸರಿಯಾದ ಪದವು ಬುದ್ಧನು ಯಾವುದನ್ನು ಮೈತ್ರಿ ಎಂದು ಕರೆದಿದ್ದನೋ ಅದಾಗಿತ್ತೇ ಹೊರತು ಫ್ರೆಂಚ್ ಕ್ರಾಂತಿಕಾರಿಗಳು ‘ಭ್ರಾತೃತ್ವ’ವೆಂದು ಕರೆದುದ್ದಲ್ಲ ಎಂದು ಕೂಡ ಸೇರಿಸಿದರು. ಮೈತ್ರಿಯು ಅಡಿಪಾಯವಾಗಿರದಿದ್ದರೆ, ಸ್ವಾತಂತ್ರ್ಯವನ್ನು ಸಾಧಿಸಲೆತ್ನಿಸುವ ಪ್ರಯತ್ನಗಳು ಸಮಾನತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸಮಾನತೆಯನ್ನು ಸಾಧಿಸಲೆತ್ನಿಸುವ ಪ್ರಯತ್ನಗಳು ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದೂ ತಿಳಿಸಿದರು. .
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಮೌಲ್ಯಗಳು ಅಳಿಸಲಾಗದಂತಹ ರೀತಿಯಲ್ಲಿ ಫ್ರೆಂಚ್ ಕ್ರಾಂತಿಯೊಂದಿಗೆ ಬೆಸೆದುಕೊಂಡಿದೆ. ಅಲ್ಲಿನ ಕ್ರಾಂತಿಕಾರಿಗಳು ಭ್ರಾತೃತ್ವವನ್ನು ಕಟ್ಟಿಹಾಕುವಂತಹ ಸಾಮಾಜಿಕ ವ್ಯವಸ್ಥೆಗಳ ಅಂತ್ಯವನ್ನು ಸಂಕೇತಿಸುವ, ಹೊಸ ಗಣರಾಜ್ಯದ ಸಂಸ್ಥಾಪಕ ಜಾತ್ಯತೀತ ಆದರ್ಶವಾಗಿ ಅರ್ಥೈಸಿದ್ದರೂ ಸಹ, ‘ಭ್ರಾತೃತ್ವ’ ಎಂಬ ಪದದ ಅರ್ಥವು ಸ್ಪಷ್ಟವಾಗಿರದಿದ್ದ ಕಾರಣ, ನಂತರದ ದಿನಗಳಲ್ಲಿ ಅದನ್ನು ಹಲವು ರೀತಿಗಳಲ್ಲಿ ವ್ಯಾಖ್ಯಾನಿಸಲಾಯಿತು. ವೈಯಕ್ತಿಕತೆಯನ್ನು ನಿರ್ಬಂಧಿಸುವ ನಾಗರಿಕ ಆದರ್ಶವೆಂದೂ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಚಲಾಯಿಸಲು ಅನುವುಮಾಡಿಕೊಡುವ ಧಾರ್ಮಿಕ ಆದರ್ಶವದು ಎಂಬಂತಹ ವ್ಯಾಖ್ಯಾನಗಳು ಕೂಡ ಅದರಲ್ಲಿದ್ದವು.
ಭಾರತೀಯ ಸಮಾಜಕ್ಕೆ ಸಂಬಂಧಿಸಿದಂತೆ, ಅಂಬೇಡ್ಕರರು ಕೂಡ ತಮ್ಮದೇ ಆದ ರೀತಿಯಲ್ಲಿ ಭ್ರಾತೃತ್ವವನ್ನು ವ್ಯಾಖ್ಯಾನಿಸಿ – ಕಲ್ಪಿಸಿಕೊಂಡಿದ್ದರು. ತಮ್ಮ ಪ್ರಖ್ಯಾತ ಪ್ರಕಟಿತ ಭಾಷಣವಾದ ಜಾತಿ ವಿನಾಶ (1937) ದಲ್ಲಿ, ಅಂಬೇಡ್ಕರರು ಭ್ರಾತೃತ್ವವನ್ನು ‘ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೆಸರು’ ಎಂದೇ ಬಣ್ಣಿಸಿದರು. ಪ್ರಜಾಪ್ರಭುತ್ವವಂಬುದು ಒಂದು ರೀತಿಯ ಸರ್ಕಾರ ಹೌದಾದರೂ, ಅದು ವ್ಯಕ್ತಿಗಳು ಮತ್ತು ಸಂಘಗಳು ತಮ್ಮ ಹಿತಾಸಕ್ತಿಗಳನ್ನು ಪೋಷಿಸುವ ಮತ್ತು ಅವರು ಬಯಸಿದ ಯಾರೊಂದಿಗೂ ಮುಕ್ತವಾಗಿ ಒಡನಾಟ ಬೆಳೆಸಿಕೊಳ್ಳುವ ಸಮುದಾಯಿಕ ಜೀವನವೂ ಆಗಿದೆ ಎಂದರು: “ತನ್ನ ಮೂಲದಲ್ಲಿ ಮೈತ್ರಿಯು ಸಹವರ್ತಿಗಳಡೆಗೆ ತೋರುವ ಮರ್ಯಾದೆ ಮತ್ತು ಗೌರವಾದರದ ವರ್ತನೆಯಾಗಿದೆ.”
ಧರ್ಮವು ಭ್ರಾತೃತ್ವಕ್ಕೆ ನೈತಿಕ ಅಡಿಪಾಯವನ್ನು ಒದಗಿಸುತ್ತದೆ ಎಂದು ಅಂಬೇಡ್ಕರ್ ತಿಳಿದಿದ್ದರು. ಆದರೆ ಭಕ್ತರು ಧರ್ಮದೊಂದಿಗೆ ಕೇವಲ ಯಾಂತ್ರಿಕವಾದ ಸಂಬಂಧವನ್ನು ಹೊಂದಿರುವ ಹಿಂದೂ ಧರ್ಮದಲ್ಲಿ (ಅಂಬೇಡ್ಕರರು ಹಿಂದೂ ಧರ್ಮವನ್ನು ‘ಕಟ್ಟುಪಾಡುಗಳ ಧರ್ಮ’ ಎಂದು ಪರಿಗಣಿಸಿದ್ದರು) ಅದು ಸಾಧ್ಯವಿರಲಿಲ್ಲ. ಬದಲಿಗೆ, ʼತತ್ವಗಳ ಧರ್ಮʼ, ಅಂದರೆ ‘ನಿಜವಾಗಿಯೂ ಸಾರ್ವತ್ರಿಕವಾಗಿರುವ, ಎಲ್ಲಾ ಜನಾಂಗಗಳಿಗೆ, ಎಲ್ಲಾ ದೇಶಗಳಿಗೆ’ ಅನ್ವಯಿಸುವ ಆಧ್ಯಾತ್ಮಿಕ ನೀತಿಗಳʼ ನ್ನು ಆಧರಿಸಿರುವ ಧರ್ಮದ ಅಗತ್ಯತೆಯಿತ್ತು
ಅಂಬೇಡ್ಕರರು ಹಿಂದೂ ಧರ್ಮವನ್ನು ಮತ್ತು ಜಾತಿ ವ್ಯವಸ್ಥೆಯನ್ನು ಸುಧಾರಿಸುವ ಸಾಧ್ಯತೆಯಿದೆ ಎಂದು ನಂಬಿದ್ದ ಕಾಲಘಟ್ಟದ ತಮ್ಮ ಜಾತಿ ವಿನಾಶ ಪುಸ್ತಿಕೆಯಲ್ಲಿ, ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಅನುಗುಣವಾಗಿ’ ಹಿಂದೂ ಧರ್ಮಕ್ಕೆ ‘ಹೊಸ ಸೈದ್ಧಾಂತಿಕ ಆಧಾರ’ವನ್ನು ಉಪನಿಷತ್ತುಗಳು ಒದಗಿಸಬಹುದು ಎಂದು ಬರೆದರು. ಹಲವು ವರ್ಷಗಳ ನಂತರ, ತಮ್ಮ ರಿಡಲ್ಸ್ ಆಫ್ ಹಿಂದೂಸಂನಲ್ಲಿ ಕೆಲವು ಉಪನಿಷತ್ತುಗಳಲ್ಲಿ ಕಂಡುಬರುವ ವಾಸ್ತವದ ಏಕತೆಯ ತತ್ವವು ‘ಭ್ರಾತೃತ್ವದ ಕಲ್ಪನೆಗಿಂತಲೂ ಹೆಚ್ಚು ಸಮರ್ಥವಾದ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಶಕ್ತವಾಗಿದೆ’ ಯಾದರೂ ಅವರು ‘ಬ್ರಾಹ್ಮವಾದ’ ಎಂದು ಕರೆದ ಈ ತತ್ವಶಾಸ್ತ್ರವು ಯಾವುದೇ ‘ಸಾಮಾಜಿಕ ಪರಿಣಾಮಗಳನ್ನು’ ಹೊಂದಿರಲಿಲ್ಲವೆಂದೂ, ಜಾತಿ-ಲಿಂಗ ಅಸಮಾನತೆಗಳು ಹಾಗೂ ಅಸ್ಪೃಶ್ಯತೆ ಉಳಿಯಗೊಡುತ್ತದೆ ಎಂದೂ ವಿವರಿಸಿದರು.
ಅವರ ಪ್ರಜಾಸತ್ತಾತ್ಮಕ ಸಮುದಾಯದ ಆಶಯಕ್ಕೆ ಮೈತ್ರಿಯನ್ನು ಅಡಿಪಾಯವನ್ನಾಗಿಸಿಕೊಳ್ಳುವ ಮೂಲಕ, ಅಂಬೇಡ್ಕರರು ನಮ್ಮ ದೃಷ್ಟಿಯನ್ನು ಭಾರತೀಯ ನಾಗರಿಕತೆಯ ಮತ್ತೊಂದು ಪರಂಪರೆಯಾದ ಬೌದ್ಧಧರ್ಮದೆಡೆಗೆ ತಿರುಗುಸಿದರು. ಮೈತ್ರಿಯು ಭಾರತೀಯ ಸಮಾಜವನ್ನು ಪರಿವರ್ತಿಸುವ ಕಾರ್ಯಕ್ಕೆ ನೈತಿಕ ದೃಷ್ಟಿಕೋನವನ್ನು ಒದಗಿಸುತ್ತದೆ ಎಂಬುದನ್ನು ಕಂಡುಕೊಂಡರು. ಮಾನವ-ಕೇಂದ್ರಿತ ಸಮುದಾಯದ ಕಲ್ಪನೆಯನ್ನು ಬದಿಗೊತ್ತಿ, ಮೈತ್ರಿಯು ಸಂವೇದನಾಶೀಲ ಜಗತ್ತಿನೆಡೆಗಿನ ಇಂಗಿತವನ್ನು ಸೂಚಿಸುತ್ತದೆ. ಇದು ರಾಷ್ಟ್ರ, ಧರ್ಮ, ಜನಾಂಗ, ಜಾತಿ, ಲಿಂಗ, ಭಾಷೆ ಸೇರಿದಂತೆ ಮತ್ತಾವುದೇ ಸಾಮಾಜಿಕ ಗುರುತುಗಳು ಮುಕ್ತವಾಗಿ ಹಾಗೂ ಅಗಾಧವಾಗಿ ನಮ್ಮ ಸಾಮಾಜಿಕ ಜೀವನವನ್ನು ಅನುಭವಿಸಲು ಅಡ್ಡಿಯಾಗದಂತಹ ವಿಸ್ತಾರವಾದ ರಾಜಕೀಯ ಪ್ರಜ್ಞೆಯನ್ನು ನಮ್ಮಲ್ಲಿ ಬೆಳೆಸುತ್ತದೆ. ಭ್ರಾತೃತ್ವದಿಂದ ಸೂಚಿಸಲಾದ ಪುರುಷ-ಕೇಂದ್ರಿತ ದೃಷ್ಟಿಕೋನವು ದೂರವಾಗಿ ಮಾನವ ಮತ್ತು ಮಾನವೇತರ ಜೀವಗಳನ್ನೂ ಒಳಗೊಳ್ಳುವ ಐಕಮತ್ಯದ ವಿಶಾಲವಾದ ದೃಷ್ಟಿಕೋನಕ್ಕೆ ಅನುವುಮಾಡಿಕೊಡುತ್ತದೆ.
ಅಕ್ಟೋಬರ್ 2, 1954 ರಂದು ಆಲ್ ಇಂಡಿಯಾ ರೇಡಿಯೊದಲ್ಲಿ ಅಂಬೇಡ್ಕರರು ಮಾಡಿದ ಸಂಕ್ಷಿಪ್ತ ಭಾಷಣವು ಹಲವು ಪ್ರಮುಖ ವಿವರಗಳನ್ನು ಸ್ಪಷ್ಟಪಡಿಸುತ್ತದೆ:
“ಸಕಾರತ್ಮಕವಾಗಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಪದಗಳಲ್ಲಿ ನನ್ನ ಸಾಮಾಜಿಕ ತತ್ತ್ವಶಾಸ್ತ್ರವು ಅಡಕವಾಗಿದೆ ಎಂದು ಹೇಳಬಹುದು. ಆದರೆ, ನನ್ನ ತತ್ತ್ವಶಾಸ್ತ್ರವನ್ನು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದುಕೊಂಡಿದ್ದೇನೆ ಎಂದು ಯಾರೂ ವಾದಿಸದಿರಲಿ. ನಾನು ಹಾಗೆ ಎರವಲು ಪಡೆದಿಲ್ಲ. ನನ್ನ ತತ್ವಶಾಸ್ತ್ರದ ಬೇರುಗಳಿರುವುದು ಧರ್ಮದಲ್ಲಿಯೇ ಹೊರತು ರಾಜ್ಯಶಾಸ್ತ್ರದಲ್ಲಲ್ಲ. ನಾನು ಅದನ್ನು ಪಡೆದಿರುವುದು ನನ್ನ ಗುರು, ಬುದ್ಧನ ಬೋಧನೆಗಳಿಂದ…. ಜಾತ್ಯತೀತವಾದ ಕಾನೂನನ್ನು ಯಾರು ಬೇಕಾದರೂ ಉಲ್ಲಂಘಿಸಬಹುದು. ಆದರೆ ಪವಿತ್ರವಾದ ಭ್ರಾತೃತ್ವದ ಕಲ್ಪನೆಯನ್ನು ಅಥವಾ ಧರ್ಮವನ್ನು ಎಲ್ಲರೂ ಗೌರವಿಸಬೇಕು.”
ಭ್ರಾತೃತ್ವ ಅಥವಾ ಮೈತ್ರಿಯು ಬೇರೂರಿ ಎಲ್ಲಾ ಜೀವಿಗಳೊಂದಿಗಿನ ಒಗ್ಗೂಡುವಿಕೆಯು ಸಮುದಾಯಿಕ ಜೀವನದ ಆಧಾರವಾಗಿದ್ದರೆ ಮಾತ್ರವೇ ಸಾಮಾಜಿಕ ಸಂರಚನೆಗಳು ಮುಕ್ತವಾಗಿ ಮತ್ತು ಸಮಾನತೆಯನ್ನು ಎತ್ತಿಹಿಡಿಯುತ್ತಾ ಕಾರ್ಯ ನಿರ್ವಹಿಸಬಹುದು. ಜಾತ್ಯತೀತವಾದ ಕಾನೂನನ್ನು ಜನರು ನಿರಾಯಾಸವಾಗಿ ಉಲ್ಲಂಘಿಸಬಹುದು, ಆದರೆ ಮೈತ್ರಿಯಂತಹ ಪವಿತ್ರ ವಿದ್ಯಮಾನವನ್ನು ಉಲ್ಲಂಘಿಸಲು ಹಿಂಜರೆಯುತ್ತಾರೆ. ಜಾತ್ಯಾತೀತ ಚಿಂತನೆಯ ಅಡಿಪಾಯದ ಮೇಲೆ ಸ್ಥಾಪಿತವಾದ ಸಮುದಾಯವು ಪ್ರಜಾಪ್ರಭುತ್ವವನ್ನು ಸಾಧಿಸಲಾರದು. ಅದು ಸಾಧ್ಯವಾಗುವುದು ಧರ್ಮಶಾಸ್ತ್ರದ ದೃಷ್ಟಿಕೋನದ ಮೇಲೆ ಸ್ಥಾಪಿಸಲಾದ ಸಮುದಾಯಗಳಲ್ಲಿ ಮಾತ್ರವೇ. ಬೌದ್ಧಧರ್ಮವು ಪವಿತ್ರವಾದ ಅಂತಹ ಅಡಿಪಾಯವನ್ನು ಒದಗಿಸುತ್ತದೆ.
ಭಾರತೀಯ ಸಂವಿಧಾನದ ಮುನ್ನುಡಿಯಲ್ಲಿನ ‘ಭ್ರಾತೃತ್ವ’ ಎಂಬ ಪದವು ಅದಕ್ಕಿರುವ ಅತ್ಯಂತ ಶ್ರೀಮಂತವಾದ ನೈತಿಕತೆಯನ್ನು ದಕ್ಕಿಸಿಕೊಳ್ಳಲು ಸೆಣೆಸುತ್ತಿದೆ. ದ್ವೇಷ ಮತ್ತು ವೈರಿಯ ಕಲ್ಪನೆಯನ್ನು ತ್ಯಜಿಸುವ ಮೈತ್ರಿಯ ಆದರ್ಶವು ವರ್ತಮಾನದಲ್ಲಿ ಹೊಸ ರಾಜಕೀಯ ಸೃಜನಶೀಲತೆಯನ್ನು ಹೇಗೆ ಪ್ರೇರೇಪಿಸಬಹುದು? ಅಂಬೇಡ್ಕರರು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಕಾಳಜಿವಹಿಸಿದ್ದ ವಿಚಾರಗಳಲ್ಲಿ ಭಾರತದಲ್ಲಿನ ಜಾತಿ ವ್ಯವಸ್ಥೆಯನ್ನು ಪರಿವರ್ತಿಸಬೇಕು ಎಂಬುದು ಅತ್ಯಂತ ಪ್ರಮುಖವಾದುದಾಗಿತ್ತು. ಆದರೆ, ಸಮುದಾಯದ ಬಗ್ಗೆ ಅವರಿಗಿದ್ದ ಸಾರ್ವತ್ರಿಕವಾದಂತಹ ದೃಷ್ಟಿಕೋನವು ಎಲ್ಲೆಡೆಯ ರಾಜಕೀಯ ಕಲ್ಪನೆಯನ್ನೇ ಸಮೃದ್ಧಗೊಳಿಸುತ್ತದೆ.
ಅನುವಾದ : ಶಶಾಂಕ್ ಎಸ್ ಆರ್
ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ನಿಕಾಯದಲ್ಲಿ ಪಿ.ಹೆಚ್.ಡಿ ಸಂಶೋಧನಾರ್ಥಿ. ಜೀವಪರ ಚಳುವಳಿಗಳ ಬಗ್ಗೆ ಆಸಕ್ತಿ.
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225
ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ರಾಮಕೃಷ್ಣ ಹೆಗಡೆ ಪೀಠ ಪ್ರಾಧ್ಯಾಪಕರು.