ಸೂಕ್ಷ್ಮ ಸುಕೋಮಲ ನಿರೂಪಕ – ಓಲ್ಗಾ ಟೋಕಾರ್ಜುಕ್ ರ ನೊಬೆಲ್ ಉಪನ್ಯಾಸ

ಪೋಲಿಷ್ ಲೇಖಕಿ ಓಲ್ಗಾ ಟೋಕಾರ್ಜುಕ್ (ಜನನ ಜನವರಿ 29, 1962, ಸುಲೆಚೌ, ಪೋಲೆಂಡ್), ಶತಮಾನಗಳು-ಸ್ಥಳಗಳು-ದೃಷ್ಟಿಕೋನಗಳು ಮತ್ತು ಪುರಾಣಗಳ ನಡುವೆ ನೆಗೆಯುವ ತಮ್ಮ ಸಂಕೀರ್ಣವಾದ ಕಾದಂಬರಿಗಳಿಗೆ ಹೆಸರುವಾಸಿ. 2018ರ ನೊಬೆಲ್ ಪ್ರಶಸ್ತಿಯನ್ನು ಪಡೆದರು. “ಜೀವನದ ರೂಪವಾಗಿ ಗಡಿಗಳನ್ನು ದಾಟುವುದನ್ನು ಪ್ರತಿನಿಧಿಸುವ, ವಿಶ್ವ ಪ್ರಜ್ಞೆಯ ಉತ್ಸಾಹ ವನ್ನು ತನ್ನೊಳಗೆ ಇಟ್ಟುಕೊಂಡ ಕಥನದ ಕಲ್ಪನೆಗಾಗಿ” ಆಕೆಯನ್ನು ಶ್ಲಾಘಿಸಲಾಗುತ್ತದೆ(narrative imagination that with encyclopedic passion represents the crossing of boundaries as a form of life) ಎಂದು ನೊಬೆಲ್ ಪ್ರಶಸ್ತಿ ಸಮಿತಿ ಹೇಳಿತು. ೨೦೦೭ರಲ್ಲಿ ಪ್ರಕಟವಾದ ಬೂಕರ್ ಪ್ರಶಸ್ತಿ ವಿಜೇತ, ಅವರ ಆರನೇ ಕಾದಂಬರಿ ‘ಬಿಗೂನಿ’ (Bieguni) ಎಂಬ ಕಾದಂಬರಿ, ೨೦೧೭ರಲ್ಲಿ ಜೆನಿಫರ್ ಕ್ರಾಫ್ಟ್ (Jennifer Croft) ಅವರ ಇಂಗ್ಲಿಷ್‌ ಅನುವಾದದಲ್ಲಿ Flights ಎಂದು ಪ್ರಕಟವಾಗಿ ಜಗತ್ತಿನ ಗಮನ ಸೆಳೆಯಿತು. ಎಲ್ಲೆಡೆ ಪ್ರಶಂಶೆಗೊಳಗಾದ ಅವರ ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ ಈ ಭಾನುವಾರದ ನಿಮ್ಮ ಓದಿಗೆ..

1

ನನ್ನ ಪ್ರಜ್ಞೆಯಲ್ಲಿ ದಾಖಲಾದ ಮೊದಲ ಫೋಟೋ ನಾನು ಹುಟ್ಟುವುದಕ್ಕೂ ಮುಂಚಿನ ನನ್ನಮ್ಮನ ಫೋಟೋ. ದುರದೃಷ್ಟವಶಾತ್‌ ಅದೊಂದು ಹಳೆಯ ಮಸುಕಾದ ಕಪ್ಪು ಬಿಳುಪಿನ ಫೋಟೋ. ಕೋಣೆಯಲ್ಲಿ ಅಷ್ಟೇನು ಪ್ರಖರವಲ್ಲದ ಬೆಳಕು. ಮಳೆಗಾಲವಿರಬಹುದು, ಕಿಟಕಿಯ ಮೂಲಕ ಬೀಳುತ್ತಿದ್ದ ಬೆಳಕು ಕೋಣೆಯನ್ನು ಬೆಳಗಿತ್ತು. ಅಮ್ಮ ನಮ್ಮ ಹಳೆಯ ರೇಡಿಯೋ ಪಕ್ಕ ಕೂತಿದ್ದಳು. ಅದಕ್ಕೆ ಧ್ವನಿ ನಿಯಂತ್ರಿಸಲು, ಸ್ಟೇಷನ್‌ ಹುಡುಕಲು ಹೀಗೆ ಎರಡು ತಿರುಗಿಸುವ ಗುಬ್ಬಿಗಳಿದ್ದವು. ಆ ರೇಡಿಯೋ ನನ್ನ ಚಿಕ್ಕಂದಿನ ನೆಚ್ಚಿನ ಸಂಗಾತಿಯಾಗಿತ್ತು. ಅದರಿಂದಲೇ ಬ್ರಹ್ಮಾಂಡದ ಪರಿಚಯವಾಯಿತು. ಅದರ ಗುಬ್ಬಿ ತಿರುಗಿಸುತ್ತಿದ್ದಂತೆ ಅಂಟೇನಾ ಅತ್ತಿತ್ತ ಸರಿಯುತ್ತಾ ಸ್ಟೇಷನ್‌ಗಳು ಬದಲಾಗುತ್ತಿದ್ದವು – ವಾರ್ಸಾ, ಲಂಡನ್‌, ಲಕ್ಸಂಬರ್ಗ್‌, ಪ್ಯಾರಿಸ್.‌ ಕೆಲವೊಮ್ಮೆ ಪ್ರೇಗ್‌, ನ್ಯೂಯಾರ್ಕ್‌ ಇಲ್ಲವೇ ಮಾಸ್ಕೋ, ಮ್ಯಾಡ್ರಿಡ್‌ಗಳ ನಡುವೆ ಅಂಟೆನಾ ಅತ್ತಿತ್ತ ಸರಿದು ಕಪ್ಪು ಕುಳಿಯ ನಡುವೆ ಸಿಲುಕಿತೇನೋ ಎಂಬಂತೆ ಧ್ವನಿ ಕಂಪಿಸಿ ಅಸ್ಪಷ್ಟವಾಗುತ್ತಿತ್ತು. ಆಗೆಲ್ಲ ನನ್ನ ಬೆನ್ನುಹುರಿಯಲ್ಲಿ ಚಳುಕು ಹುಟ್ಟುತ್ತಿತ್ತು. ಈ ರೇಡಿಯೋ ಮೂಲಕ ಬ್ರಹ್ಮಾಂಡದ ಬೇರೆ ಬೇರೆ ಗ್ರಹಗಳು ಯಾವುದೋ ಗಹನವಾದ ಸಂದೇಶವನ್ನು ನನಗೆ ರವಾನಿಸುತ್ತಿದೆ ಅನ್ನಿಸುತ್ತಿತ್ತು. ಆದರೆ, ನನಗೆ ಅದನ್ನು ಅರ್ಥೈಸಲು ಸಾಧ್ಯವಾಗುತ್ತಿರಲಿಲ್ಲ.

ಚಿಕ್ಕವಳಿದ್ದಾಗ ಆ ಫೋಟೋ ನೋಡಿದಾಗಲೆಲ್ಲ, ಅಮ್ಮ ರೇಡಿಯೋದ ಗುಬ್ಬಿ ತಿರುಗಿಸುತ್ತಾ ನನಗಾಗಿ ಹುಡುಕುತ್ತಿರುವಳೇನೋ ಅನ್ನಿಸುತ್ತಿತ್ತು. ಸೂಕ್ಷ್ಮ ರೆಡಾರ್‌ನಂತೆ ಅವಳು ಬ್ರಹ್ಮಾಂಡದ ತರಂಗಗಳನ್ನು ಅರ್ಥೈಸುತ್ತಾ ನಾನು ಯಾವಾಗ, ಎಲ್ಲಿಂದ ಬರುವೆ ಎನ್ನುವುದನ್ನು ತಿಳಿಯಲು ಯತ್ನಿಸುತ್ತಿದ್ದಂತಿತ್ತು. ಅವಳ ಹೇರ್‌ಕಟ್‌, ಬಟ್ಟೆಯ ಶೈಲಿ ಆ ಫೋಟೋ ಅರವತ್ತರ ದಶಕದ ಆರಂಭದಲ್ಲಿ ತೆಗೆದದ್ದು ಎನ್ನುವುದನ್ನು ಸೂಚಿಸುತ್ತಿತ್ತು. ಅಮ್ಮ ದೂರದಲ್ಲಿ ಏನನ್ನೋ ನೋಡುತ್ತಿದ್ದಾಳೆ. ಆ ಫೋಟೊವನ್ನು ನೋಡುವವರಿಗೆ ಅವಳು ಏನು ನೋಡುತ್ತಿದ್ದಾಳೆ ತಿಳಿಯುವುದಿಲ್ಲ. ಚಿಕ್ಕವಳಿದ್ದಾಗ ಅಮ್ಮ ಕಾಲವನ್ನು ನೋಡುತ್ತಿದ್ದಾಳೆ ಎಂದು ಕಲ್ಪಿಸಿಕೊಂಡಿದ್ದೆ. ಅಲ್ಲಿ ಅಂತಹದ್ದೇನೂ ಇರಲಿಲ್ಲ. ಆ ಫೋಟೋ ಒಂದು ಸ್ಥಿತಿ/ಕ್ಷಣವನ್ನು ಹಿಡಿದಿತ್ತೇ ಹೊರತು ಪ್ರಕ್ರಿಯೆಯನ್ನಲ್ಲ. ಅವಳು ಬೇಸರದಲ್ಲಿದ್ದಳು. ತನ್ನದೇ ಯೋಚನೆಗಳಲ್ಲಿ ಕಳೆದುಹೋದಂತಿದ್ದಳು. 

ಮುಂದೊಂದು ದಿನ ಅವಳಿಗೆ ಯಾಕೆ ಬೇಜಾರಾಗಿತ್ತು ಅಂತ ಕೇಳಿದ್ದೆ. ಹೀಗೆ ಎಷ್ಟು ಸಲ ಕೇಳಿದರು ಅಮ್ಮ ಕೊಡುತ್ತಿದ್ದ ಉತ್ತರ ಒಂದೇ ಆಗಿತ್ತು. ನಾನಿನ್ನೂ ಹುಟ್ಟಿಲ್ಲ ಅಂತ ಅವಳಿಗೆ ಬೇಜಾರಾಗಿತ್ತಂತೆ. ನನ್ನನ್ನವಳು ಮಿಸ್‌ ಮಾಡುತ್ತಿದ್ದಳಂತೆ.

“ನಾನು ಹುಟ್ಟೇ ಇಲ್ಲ ಅಂದ್ರೆ ನೀನು ಮಿಸ್‌ ಮಾಡೋಕೆ ಹೇಗೆ ಸಾಧ್ಯ?” ಅಂತ ಕೇಳಿದೆ. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಮಾತ್ರ ಮಿಸ್‌ ಮಾಡಲು ಸಾಧ್ಯ ಅಂತ ನನಗೆ ಗೊತ್ತಿತ್ತು. “ಅದು ಹೀಗೂ ಆಗಬಹುದು ಯಾರನ್ನಾದರೂ ಮಿಸ್‌ ಮಾಡ್ತಿದಿವಿ ಅಂದರೆ ಅವರು ಇದ್ದಾರೆ ಅಂತ ಅರ್ಥ,” ಎಂದಿದ್ದಳು.

ಅರವತ್ತರ ದಶಕದಲ್ಲಿ ಪಶ್ಚಿಮ ಪೋಲೆಂಡ್‌ನ ಹಳ್ಳಿಯೊಂದರಲ್ಲಿ ನನ್ನ ಹಾಗೂ ಅಮ್ಮನ ನಡುವೆ ನಡೆದ ಈ ಮಾತುಕತೆ ನೆನಪಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ನನ್ನಿಡೀ  ಬದುಕಿಗೊಂದು ಶಕ್ತಿಯನ್ನು ಕೊಟ್ಟಿದೆ. ಅದು ನನ್ನ ಅಸ್ತಿತ್ವ, ಸಾಮಾನ್ಯ ಭೌತಿಕ ಪ್ರಾಪಂಚಿಕತೆ, ಅವಕಾಶ, ಕಾರಣ, ಪರಿಣಾಮ ಮತ್ತು ಸಂಭವನೀಯತೆಯ ನಿಯಮಗಳನ್ನು ಮೀರಿದ್ದು ಅನ್ನಿಸುವಂತೆ ಮಾಡಿತು. ಅವಳು ನನ್ನ ಅಸ್ತಿತ್ವವನ್ನು ಕಾಲವನ್ನು ಮೀರಿ ಚಿರಂತನವಾಗಿಸಿದ್ದಳು. ಮಗುವಾಗಿದ್ದ ನನ್ನ ಮನಸ್ಸಿನಲ್ಲಿ ನನ್ನ ಅಸ್ತಿತ್ವ ನಾನು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚಿನದು ಎಂದು ಅರಿವಾಯಿತು. “ನಾನು ಕಳೆದುಹೋದೆ” ಎಂದು ಹೇಳುವಾಗಲೂ “ನಾನು” ಎನ್ನುವ ಪದವನ್ನು ಬಳಸುತ್ತೇವೆ. ಇದು ಪ್ರಪಂಚದ ಶಕ್ತಿಶಾಲಿ ಪದಗಳಲ್ಲೊಂದು. ಧಾರ್ಮಿಕಳಲ್ಲದ ನನ್ನಮ್ಮ ನನಗೊಂದು ಆತ್ಮವನ್ನು ಕೊಟ್ಟಳು. ಆ ಮೂಲಕ ಜಗತ್ತಿನ ಶ್ರೇಷ್ಠ ಸೂಕ್ಷ್ಮ ಸುಕೋಮಲ ನಿರೂಪಕಿಯನ್ನು ಕೊಟ್ಟಳು.

2

ಜಗತ್ತು ಎನ್ನುವುದು ನಾವು ದಿನವೂ ಮಾಹಿತಿ, ಚರ್ಚೆಗಳು, ಸಿನಿಮಾಗಳು, ಪುಸ್ತಕಗಳು, ಗಾಸಿಪ್‌, ಕತೆಗಳು ಎನ್ನುವ ಮಗ್ಗದ ಮೇಲೆ ನೇಯುವ ಬಟ್ಟೆಯಾಗಿದೆ. ಇಂದು ಮಗ್ಗಗಳ ವ್ಯಾಪ್ತಿ ವಿಶಾಲವಾಗಿದೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ, ಪ್ರೀತಿಯಿಂದಲೋ ಇಲ್ಲವೇ ದ್ವೇಷದಿಂದಲೋ, ಹೊಣೆಗಾರಿಕೆ ಅಂದುಕೊಳ್ಳಬಹುದು ಇಲ್ಲವೇ ಬಿಡಬಹುದು, ಹೀಗೆ ಬಹುತೇಕ ಎಲ್ಲರೂ ಈ ನೇಯ್ಗೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಿದ್ದಕ್ಕೆ ಅಂತರ್ಜಾಲಕ್ಕೆ ಧನ್ಯವಾದ ಹೇಳಬೇಕು. ಈ ಕತೆ ಬದಲಾದಾಗ ಜಗತ್ತು ಬದಲಾಗುತ್ತದೆ. ಈ ಅರ್ಥದಲ್ಲಿ ಜಗತ್ತು ಎನ್ನುವುದು ಪದಗಳ ನೇಯ್ಗೆ.

ನಾವು ಪ್ರಪಂಚದ ಬಗ್ಗೆ ಹೇಗೆ ಯೋಚಿಸುತ್ತೇವೆ ಹಾಗೂ ಅದಕ್ಕಿಂತಲೂ ಮುಖ್ಯವಾಗಿ ಅದನ್ನು ಹೇಗೆ ಕಟ್ಟಿಕೊಳ್ಳುತ್ತೇವೆ ಎನ್ನುವುದು ಮಹತ್ವವಾದದ್ದು. ನಾವು ಕಟ್ಟಿಕೊಂಡರಷ್ಟೇ ಈ ಜಗತ್ತು ಇರುತ್ತದೆ. ನಾವು ಕಟ್ಟಿಕೊಳ್ಳುವುದನ್ನು ನಿಲ್ಲಿಸಿದಾಗ ಜಗತ್ತು ಇಲ್ಲವಾಗುತ್ತದೆ. ಇದು ಎಲ್ಲ ಇತಿಹಾಸಕಾರರಿಗೆ, ರಾಜಕಾರಣಿಗಳಿಗೆ, ಸರ್ವಾಧಿಕಾರಿಗಳಿಗೆ ಗೊತ್ತಿರುವ ಜನಪ್ರಿಯ ಸತ್ಯ. ಯಾರ ಬಳಿ ಕತೆಗಳಿವೆಯೋ, ಯಾರು ಕತೆಗಳನ್ನು ನೇಯಬಲ್ಲರೋ ಅವರಿಗೂ ಗೊತ್ತಿರುವ ಸತ್ಯ.

ಮಿಂಚಿನ ವೇಗದಲ್ಲಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಭವಿಷ್ಯತ್ತಿಗಿರಲಿ, ಇಂದಿಗೆ ಹೊಂದುವಂತಹ ಗಟ್ಟಿಯಾದ ಕಥನಗಳನ್ನು ಕೂಡ ಕಟ್ಟಿಕೊಳ್ಳಲು ಸಾಧ್ಯವಾಗದಿರುವುದು ನಮ್ಮ ಸಮಸ್ಯೆಯಾಗಿದೆ. ಭಾಷೆಯ ಕೊರತೆ, ದೃಷ್ಟಿಕೋನದ ಕೊರತೆ, ರೂಪಕಗಳು, ಪುರಾಣಗಳು, ನೀತಿಕತೆಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ಹಾಗಿದ್ದೂ ಕೂಡ ಭವಿಷ್ಯದ ಕಲ್ಪನೆಗಳಿಗೆ ಹೊಂದದ, ಭವಿಷ್ಯವನ್ನು ಕುರಿತಾದ ಹಳೆಯ ತುಕ್ಕುಹಿಡಿದಂತಹ, ಅರಾಜಕತೆಯಿಂದ ಕೂಡಿದ ಕಥನಗಳನ್ನು ಕಟ್ಟುವ ಯತ್ನಗಳನ್ನು, ಹೊಸದಕ್ಕಿಂತ ಹಳೆಯದೇ ಉತ್ತಮ ಎನ್ನುವ ಮನೋಭಾವವನ್ನೂ ಇಲ್ಲವೇ ಈ ರೀತಿಯಲ್ಲಿ ನಮ್ಮ ಪರಿಧಿಯ ಮಿತಿಗಳನ್ನು ಮೀರುವ ಯತ್ನವನ್ನೂ ಕಾಣುತ್ತಿರುತ್ತೇವೆ. ಒಟ್ಟಿನಲ್ಲಿ ಜಗತ್ತಿನ ಕತೆಯನ್ನು ಹೇಳುವ ಹೊಸ ವಿಧಾನಗಳ ಕೊರತೆಯನ್ನು ಎದುರಿಸುತ್ತಿದ್ದೇವೆ.

ತಮ್ಮ ಪುಸ್ತಕಗಳ ಇಂಗ್ಲಿಷ್ ಅನುವಾದಕಿ ಜೆನ್ನಿಫರ್ ಕ್ರೋಫ್ಟ್ ರೊಂದಿಗೆ ಲೇಖಕಿ

ಬಹುದನಿಗಳಲ್ಲಿರುವ ಉತ್ತಮ ಪುರುಷ ನಿರೂಪಣೆಯ ಕಥನಗಳ ನಡುವೆ ಬದುಕುತ್ತಿದ್ದೇವೆ. ಇಂತಹ ಬಹುದನಿಗಳ ಸದ್ದು ಎಲ್ಲ ಕಡೆಯಿಂದಲೂ ಕೇಳುತ್ತಿರುತ್ತದೆ. ಉತ್ತಮ ಪುರುಷ ಎಂದರೆ ಕತೆಯು ಕತೆ ಹೇಳುವವರ ಸುತ್ತಲೇ ಗಿರಕಿ ಹೊಡೆಯುವಂತಹದ್ದು. ಅವರು ಹೆಚ್ಚುಕಡಿಮೆ ತಮ್ಮ ಕುರಿತು, ತಾವೇ ಬರೆಯುತ್ತಿರುತ್ತಾರೆ. ಇದರಿಂದ ವಿಶಾಲ ದೃಷ್ಟಿಕೋನವು ಸಾಧ್ಯವಾಗದಿದ್ದರೂ ಈ ವೈಯಕ್ತಿಕ ದೃಷ್ಟಿಕೋನ, ಆತ್ಮಧ್ವನಿ/ಸ್ವ ಧ್ವನಿ ಹೆಚ್ಚು ಸಹಜ, ಮಾನವೀಯ, ಪ್ರಾಮಾಣಿಕ ಎಂದುಕೊಂಡಿದ್ದೇವೆ. ಉತ್ತಮ ಪುರುಷದಲ್ಲಿ ಕಥನವನ್ನು ನಿರೂಪಿಸುವುದೆಂದರೆ ನಿಮ್ಮ ಬಗ್ಗೆ, ನಿಮ್ಮ ಹಣೆಬರಹದ ಬಗ್ಗೆ ಹೇಳುವ ವಿಶಿಷ್ಟ ನೇಯ್ಗೆಯ ವಿಧಾನವೆಂದು ಭಾವಿಸಲಾಗಿದೆ. ಆದರೂ, ಇದು ಸ್ವ ಹಾಗೂ ಜಗತ್ತಿನ ನಡುವೆ ವಿರೋಧವನ್ನು ಹುಟ್ಟಿಸುವಂತಹದ್ದು. ಈ ವಿರೋಧವು ಕೆಲವೊಮ್ಮೆ ನಮ್ಮನ್ನು ಜಗತ್ತಿನಿಂದ ಪ್ರತ್ಯೇಕಗೊಳಿಸಬಹುದು.

‘ಉತ್ತಮಪುರುಷ’ ನಿರೂಪಣೆಯು ಸಮಕಾಲೀನ ದೃಷ್ಟಿಕೋನದ ಲಕ್ಷಣವಾಗಿದೆ. ಇದರಲ್ಲಿ ವ್ಯಕ್ತಿ ಜಗತ್ತಿನ ಕೇಂದ್ರವಾಗಿದ್ದಾನೆ. ಪಾಶ್ಚಿಮಾತ್ಯ ನಾಗರಿಕತೆಯು ʼಸ್ವʼದ ಅವಿಷ್ಕಾರಕ್ಕೆ ಹೆಚ್ಚು ಒತ್ತುಕೊಡುತ್ತದೆ. ಇದೇ ವಾಸ್ತವವನ್ನು ಅಳೆಯುವ ಪ್ರಮುಖ ಅಳತೆಗೋಲಾಗಿದೆ. ಇಲ್ಲಿ ವ್ಯಕ್ತಿಯೇ ಪ್ರಮುಖ ಪಾತ್ರಧಾರಿ. ಅವನ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಮನುಷ್ಯ ನಾಗರಿಕತೆಯಲ್ಲಿ, ಉತ್ತಮ ಪುರುಷದಲ್ಲಿ ನೇಯ್ದ ಕತೆಗಳ ಅವಿಷ್ಕಾರ ಮಹತ್ವದ್ದೆಂದು ಪರಿಗಣಿಸಲಾಗಿದೆ. ಈ ಕತೆಗಳನ್ನು ಬಹಳ ವಿಶ್ವಾಸದೊಂದಿಗೆ ಓದಲಾಗುತ್ತದೆ. ಇತರರಿಗಿಂತ ಭಿನ್ನವಾಗಿರುವವರ ಕಣ್ಣುಗಳ ಮೂಲಕ ಲೋಕವನ್ನು ನೋಡುವ ಈ ರೀತಿಯ ಕತೆಗಳು ನಿರೂಪಕರೊಂದಿಗೆ ವಿಶೇಷ ಬಂಧವನ್ನು ನಿರ್ಮಿಸುತ್ತವೆ. ಆ ನಿರೂಪಕ ಕೇಳುಗನನ್ನು ತನ್ನ ಸ್ಥಾನದಲ್ಲಿ ನಿಂತು ನೋಡುವಂತೆ ಮಾಡುತ್ತಾನೆ.

ಉತ್ತಮ ಪುರುಷ ನಿರೂಪಣೆಯ ಕಥನಗಳು ಸಾಹಿತ್ಯ ಹಾಗೂ ಮನುಷ್ಯ ನಾಗರಿಕತೆಯನ್ನು ಬದಲಿಸಿರುವುದನ್ನು ಗಮನಿಸದಿರಲು ಸಾಧ್ಯವಿಲ್ಲ. ಅವು ಜಗತ್ತಿನ ಕತೆಯನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿವೆ. ಮನುಷ್ಯನ ಪ್ರಭಾವಕ್ಕೆ ಸಿಲುಕದ ನಾಯಕರು, ದೇವತೆಗಳಿಗೆ ಇನ್ನಿಲ್ಲಿ ಜಾಗವಿಲ್ಲ. ಅವರ ಬದಲಿಗೆ ಇಲ್ಲಿರುವುದು ನಮ್ಮಂತಹ ಸಾಮಾನ್ಯರ ಇತಿಹಾಸ. ನಮ್ಮಂತೆ ಇರುವವರೊಂದಿಗೆ ಗುರುತಿಸಿಕೊಳ್ಳುವುದು ಸುಲಭ. ಇದು ಕತೆಯ ನಿರೂಪಕನೊಟ್ಟಿಗೆ ಓದುಗ ಇಲ್ಲವೇ ಕೇಳುಗ ಸಹಾನುಭೂತಿಯಿಂದ ಭಾವನಾತ್ಮಕವಾಗಿ ಸಂಬಂಧ ಬೆಸೆದುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಅವರಿಬ್ಬರ ನಡುವಿನ ಗಡಿ ಅಳಿಸಿಹೋಗುತ್ತದೆ. ಕಾದಂಬರಿಯಲ್ಲಿ ನಿರೂಪಕನ ವ್ಯಕ್ತಿತ್ವ ಹಾಗೂ ಓದುಗನ ವ್ಯಕ್ತಿತ್ವದ ನಡುವಿನ ಗಡಿಗಳು ಮಸುಕಾಗುತ್ತವೆ. “ಆವರಿಸಿಕೊಳ್ಳುವಂತಹ ಕಾದಂಬರಿ” ಎನ್ನಲಾಗುವ ಕಾದಂಬರಿಯಲ್ಲಿ ಸಹಾನುಭೂತಿಯ ಮೂಲಕ ಸ್ವಲ್ಪ ಹೊತ್ತಿನ ಮಟ್ಟಿಗೆ ಓದುಗನೇ ನಿರೂಪಕನಾಗಿ ಬಿಡುತ್ತಾನೆ. ಹೀಗಾಗಿ ಸಾಹಿತ್ಯವು ಅನುಭವಗಳ ವಿನಿಯಮಯದ ಕ್ಷೇತ್ರವಾಗಿದೆ. ಪ್ರತಿಯೊಬ್ಬರೂ ತಮ್ಮ ವಿಧಿಯ ಕುರಿತು ಹೇಳಬಹುದು ಇಲ್ಲವೇ ತಮ್ಮ ಅಹಂಗೆ ದನಿ ನೀಡಬಹುದು. ಇದೊಂದು ಪ್ರಜಾಸತ್ತಾತ್ಮಕ ಅವಕಾಶವಾಗಿದ್ದು ಯಾರು ಬೇಕಾದರೂ ಮಾತಾಡಬಹುದು, ಪ್ರತಿಯೊಬ್ಬರೂ ತಮ್ಮ ದನಿಗೊಂದು ಅಭಿವ್ಯಕ್ತಿ ಕಂಡುಕೊಳ್ಳಬಹುದು. ಮಾನವ ಇತಿಹಾಸದಲ್ಲಿಯೇ ಹಿಂದೆಂದೂ ಇಷ್ಟುಮಂದಿ ಬರಹಗಾರರು, ಕತೆ ಹೇಳುವವರು ಇರಲಿಲ್ಲ ಎನ್ನುವುದು ಅಂಕಿ-ಅಂಶಗಳನ್ನು ಗಮನಿಸಿದರೆ ತಿಳಿಯುತ್ತದೆ.

ಪುಸ್ತಕ ಮೇಳಗಳಿಗೆ ಹೋದಾಗೆಲ್ಲ ಎಷ್ಟು ಪುಸ್ತಕಗಳು ಹೀಗೆ ಲೇಖಕರ ಸ್ವಂತ ಕತೆಗಳ ಕುರಿತಾಗಿವೆ  ಎಂದು ನೋಡುತ್ತೇನೆ. ಅಭಿವ್ಯಕ್ತಿಸಬೇಕೆಂಬ ಸಹಜ ಪ್ರವೃತ್ತಿಯು ನಮ್ಮ ಬದುಕನ್ನು ಕಾಯುತ್ತಿರುವಂತಹ ಉಳಿದ ಪ್ರವೃತ್ತಿಗಳಂತೆಯೇ ಬಲವಾಗಿರುತ್ತದೆ. ಇದು ಕಲೆಯಲ್ಲಿ ಸಂಪೂರ್ಣವಾಗಿ ವ್ಯಕ್ತವಾಗುತ್ತದೆ. ನಮ್ಮನ್ನು ಯಾರಾದರೂ ಗುರುತಿಸಲಿ ಎಂದು ಬಯಸುತ್ತೇವೆ, ನಾವು ಭಿನ್ನವಾಗಬೇಕೆಂದು ಬಯಸುತ್ತೇವೆ. “ನನ್ನ ಕತೆಯನ್ನು ಹೇಳುತ್ತೇನೆ,” ಇಲ್ಲವೇ “ನನ್ನ ಕುಟುಂಬದ ಕತೆಯನ್ನು ಹೇಳುತ್ತೇನೆ,” ಇಲ್ಲವೇ “ನಾನೆಲ್ಲಿಗೆ ಹೋಗಿದ್ದೆ ಎನ್ನುವುದನ್ನು ನಿಮಗೆ ಹೇಳುತ್ತೇನೆ,” ಎನ್ನುವಂತಹ ಕಥನಗಳೇ ಇಂದಿನ ಸಾಹಿತ್ಯ ಪ್ರಕಾರದಲ್ಲಿ ಜನಪ್ರಿಯವಾಗಿದೆ. ಇದೊಂದು ದೊಡ್ಡಪ್ರಮಾಣದ ವಿದ್ಯಮಾನವಾಗಿದೆ. ಒಂದು ಕಾಲದಲ್ಲಿ ಕೆಲವರಿಗೆ ಮಾತ್ರ ತಮ್ಮ ಕತೆಗಳನ್ನು ಹೇಳುವ ಅವಕಾಶವಿತ್ತು. ಆದರೆ, ಇಂದು ಯಾರು ಬೇಕಾದರೂ ಬರವಣಿಗೆಯಲ್ಲಿ ತೊಡಗಿಕೊಳ್ಳಬಹುದು. ವಿರೋಧಾಭಾಸವೆಂದರೆ, ಇದೊಂದು ರೀತಿಯಲ್ಲಿ ಏಕವ್ಯಕ್ತಿ ತಂಡದ ಪ್ರದರ್ಶನದಂತಿರುತ್ತದೆ. ಎಲ್ಲ ಧ್ವನಿಗಳು ತಮ್ಮನ್ನು ಕೇಳಿಸಿಕೊಳ್ಳಲಿ ಎಂದು ಪರಸ್ಪರರೊಂದಿಗೆ ಸ್ಪರ್ಧೆಗೆ ಬಿದ್ದಿವೆ. ಎಲ್ಲರೂ ಒಂದೇ ದಿಕ್ಕಿನಲ್ಲಿ ತೇಲುತ್ತಾ ಒಬ್ಬರನ್ನೊಬ್ಬರು ಮುಳುಗಿಸುತ್ತಿದ್ದಾರೆ. ಅವರ ಬಗ್ಗೆ ನಮಗೆಲ್ಲ ತಿಳಿದಿರುತ್ತದೆ. ಅವರ ಬದುಕಿನ ಅನುಭವಗಳೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುತ್ತಿರುತ್ತೇವೆ. ಇಷ್ಟಾದರೂ ಓದುಗರ ಅನುಭವ ಅಪೂರ್ಣ, ನಿರಾಶದಾಯಕವಾಗಿರುತ್ತದೆ. ಏಕೆಂದರೆ ಲೇಖಕಿ/ಕರ “ಸ್ವ”ದ ಅಭಿವ್ಯಕ್ತಿ ವಿಶ್ವಾತ್ಮಕವಾಗಿರುತ್ತದೆ ಎನ್ನುವ ಖಾತ್ರಿಯಿಲ್ಲ. 

ನೀತಿ ಕತೆಗಿರುವ ಆಯಾಮವೊಂದು ಅದರಲ್ಲಿ ಕಾಣೆಯಾಗಿರುತ್ತದೆ. ಆ ಕತೆಯ ನಾಯಕಿ/ಕ ನಿರ್ದಿಷ್ಟ ಐತಿಹಾಸಿಕ, ಭೌಗೋಳಿಕ ಸನ್ನಿವೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಯಾಗಿದ್ದರೂ ಇವೆಲ್ಲವನ್ನೂ ಮೀರಿ ಎಲ್ಲೆಡೆಯಿರುವ ಸಾಮಾನ್ಯ ವ್ಯಕ್ತಿಯಾಗಿ ಬಿಡುತ್ತಾನೆ. ಓದುಗ ಕಾದಂಬರಿಯಲ್ಲಿ ಬರೆದ ಮತ್ತೊಬ್ಬರ ಕತೆಯನ್ನು ಅನುಸರಿಸುತ್ತಾ ವರ್ಣಿಸಲಾಗಿರುವ ಪಾತ್ರದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ನೀತಿ ಕತೆಗಳಲ್ಲಿನ ಪಾತ್ರವು ಸಂಪೂರ್ಣವಾಗಿ ತನ್ನತನವನ್ನು ಕಳೆದುಕೊಂಡು ಸಾಮಾನ್ಯ ವ್ಯಕ್ತಿಯಂತಿರುತ್ತಾನೆ. ಈ ರೀತಿ ಮಾಡುವ ಮೂಲಕ ನೀತಿಕತೆಗಳು ನಮ್ಮ ಅನುಭವವನ್ನು ವಿಶ್ವಾತ್ಮಕವಾಗಿಸುತ್ತದೆ. ಹಲವು ಬಗೆಯ ಬದುಕುಗಳನ್ನು ಒಂದಾಗಿಸುತ್ತದೆ. ನಾವಿಂದು ಈ ನೋಟಕ್ರಮವನ್ನು ಕಳೆದುಕೊಂಡು ಅಸಹಾಯಕರಾಗಿದ್ದೇವೆ.

ಶೀರ್ಷಿಕೆಗಳ ಹೊರೆಯಡಿ ಮುಳುಗಬಾರದೆಂದು ಸಾಹಿತ್ಯವನ್ನು ಪ್ರಕಾರಗಳಾಗಿ ವಿಭಜಿಸಿ ನೋಡಲು ಆರಂಭಿಸಿದ್ದೇವೆ. ಸಾಹಿತ್ಯವನ್ನು ಕ್ರೀಡೆಯಂತೆಯೂ ಲೇಖಕಿ/ಕರನ್ನು ಆಯಾ ಕ್ರೀಡೆಯಲ್ಲಿ ತರಬೇತಿ ಪಡೆದ ಆಟಗಾರರಂತೆಯೂ ಕಾಣಲಾರಂಭಿಸಿದ್ದೇವೆ.

ಸಾಹಿತ್ಯದ ಮಾರುಕಟ್ಟೆಯು, ವ್ಯಾಪಾರೀಕರಣಕ್ಕೆ ಒಳಗಾಗಿರುವುದರಿಂದ ಈ ರೀತಿಯ ವಿಭಾಗಗಳು ಸೃಷ್ಟಿಯಾಗಿವೆ. ಇಂದು ಈ ರೀತಿಯ ಸಾಹಿತ್ಯದ ಮೇಳಗಳು, ಹಬ್ಬಗಳು ನಡೆಯುತ್ತಿದ್ದು ಅಪರಾಧ, ಫ್ಯಾಂಟಸಿ ಇಲ್ಲವೇ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿಗಳನ್ನು ಓದಲು ಉತ್ಸುಕರಾಗಿರುವ ಓದುಗರನ್ನು ಸೃಷ್ಟಿಸುತ್ತಿದೆ. ಈ ಸನ್ನಿವೇಶದ ಗಮನಾರ್ಹ ಲಕ್ಷಣವೆಂದರೆ ಪುಸ್ತಕ ಮಾರಾಟಗಾರರು ಹಾಗೂ ಲೈಬ್ರರಿಯವರು ಬೃಹತ್‌ ಪ್ರಮಾಣದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಸುಲಭವಾಗಿ ಕಪಾಟಿನಲ್ಲಿ ಜೋಡಿಸಬಹುದಾಗಿದೆ. ಓದುಗರು ಈ ವರ್ಗಗಳ ಅಡಿಯಲ್ಲಿರುವಂತದ್ದನ್ನು ಮಾತ್ರ ಓದಲು ತರಬೇತಿ ಪಡೆದಿದ್ದಾರೆ. ಲೇಖಕಿ/ಕರು ಕೂಡ ಅದಕ್ಕೆ ತಕ್ಕಂತೆ ಬರೆಯಲಾರಂಭಿಸಿದ್ದಾರೆ. ಈ ರೀತಿಯ ಹಣೆಪಟ್ಟಿಗಳ ಅಡಿಯಲ್ಲಿನ ಬರವಣಿಗೆ ಕೇಕ್‌ ಅಚ್ಚಿನಂತಿದೆ. ಅವೆಲ್ಲವೂ ಒಂದೇ ರೀತಿಯ ಫಲಿತಾಂಶಗಳನ್ನು ನೀಡುತ್ತವೆ. ಅವುಗಳ ಸಾಮಾನ್ಯತೆ, ಊಹಿಸಬಹುದಾದ ಸಾಧ್ಯತೆಯನ್ನು ಹೆಗ್ಗಳಿಕೆ ಎಂಬಂತೆ ಪರಿಗಣಿಸಲಾಗುತ್ತದೆ.

ಕರ್ತೃತ್ವ ಶಕ್ತಿಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಇಂತಹ ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿ ವಿರೋಧಿಸುತ್ತೇನೆ. ಇದು ಸೃಜಿಸುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಪ್ರಯೋಗಾತ್ಮಕತೆ ಹಾಗೂ ಉಲ್ಲಂಘನೆ ಸೃಷ್ಟಿ ಕ್ರಿಯೆಯ ಮೂಲ ಗುಣ. ವಿಲಕ್ಷಣತೆಯನ್ನು ಸೃಜನಶೀಲ ಕ್ರಿಯೆಯಿಂದ ದೂರವಿಟ್ಟರೆ ಕಲೆ ಕಳೆದುಹೋಗುತ್ತದೆ. ಒಳ್ಳೆಯ ಪುಸ್ತಕ ಆ ಪ್ರಕಾರದ ಅತ್ಯುತ್ತಮ ಪುಸ್ತಕವೇ ಆಗಬೇಕಿಲ್ಲ. ಸಾಹಿತ್ಯವನ್ನು ಪ್ರಕಾರಗಳಾಗಿ ವಿಭಜಿಸಿರುವುದು ಸಾಹಿತ್ಯವನ್ನು ವಾಣಿಜ್ಯೀಕರಣಗೊಳಿಸಿದುದರ ಫಲ. ಸಮಕಾಲೀನ ಬಂಡವಾಳಶಾಹಿಯಂತೆ ಅದು ಕೂಡ ಸಾಹಿತ್ಯವನ್ನು ಮಾರಾಟದ ಉತ್ಪನ್ನವಾಗಿಸಿ ಅದಕ್ಕೊಂದು ಬ್ರ್ಯಾಂಡ್‌ ಹಣೆಪಟ್ಟಿ ಹಚ್ಚುವುದಾಗಿದೆ. 

ಇಂದು ಜಗತ್ತಿನ ಕತೆಯನ್ನು ಹೇಳುವಂತಹ ಹೊಸತೊಂದು ಮಾರ್ಗ ಹೊರಹೊಮ್ಮುತ್ತಿರುವುದನ್ನು ನೋಡಿ ಖುಷಿ ಪಡಬಹುದು. ಅದು ಆನ್‌ ಸ್ಕ್ರೀನ್‌ ಸರಣಿ (ದೃಶ್ಯ ಮಾಧ್ಯಮ). ಭ್ರಮಾಧೀನ ಸ್ಥಿತಿಯಲ್ಲಿ ಇರಿಸುವುದು ಇದರ ಹಿಂದಿನ ಹುನ್ನಾರವಾಗಿದೆ. ಈ ಕಥಾವಿಧಾನವು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಹೋಮರ್ ಮತ್ತು ಹೆರಾಕಲ್ಸ್, ಅಕಿಲ್ಸ್ ಅಥವ ಒಡಿಸ್ಸಿಯಸ್ ನಿಸ್ಸಂದೇಹವಾಗಿ ಈ ಬಗೆಯ ಸರಣಿಯ ಮೊದಲ ನಾಯಕರು. ಆದರೆ, ಹಿಂದೆಂದೂ ಈ ಮಾಧ್ಯಮವು ಇಷ್ಟು ಪ್ರಭಾವಶಾಲಿಯಾಗಿ ಆವರಿಸಿಕೊಂಡಿರಲಿಲ್ಲ ಅಥವ ಸಾಮೂಹಿಕ ಕಲ್ಪನೆಯ ಮೇಲೆ ಈ ಮಟ್ಟಿಗಿನ ಪ್ರಭಾವ ಬೀರಿರಲಿಲ್ಲ. ೨೧ನೆಯ ಶತಮಾನದ ಮೊದಲೆರೆಡು ದಶಕಗಳು ಪ್ರಶ್ನಾತೀತವಾಗಿ ಇದರ ಪ್ರಭಾವಕ್ಕೆ ಒಳಗಾಗಿತ್ತು. ಕತೆ ಹೇಳುವ ವಿಧಾನದ ಮೇಲೆ (ಜೊತೆಗೆ ಕತೆಯನ್ನು ಅರ್ಥಮಾಡಿಕೊಳ್ಳುವುದರ ಮೇಲೂ) ಕ್ರಾಂತಿಕಾರಕ ಪ್ರಭಾವ ಬೀರಿತು. 

ಇಂದು ಈ ಸರಣಿಗಳು ನಿರೂಪಣೆಗೊಂದು ಹೊಸ ಗತಿಯನ್ನು ನೀಡುವ ಮೂಲಕ, ಶಾಖೆಗಳನ್ನು, ಅಂಶಗಳನ್ನು ಸೇರಿಸುವ ಮೂಲಕ ನಮ್ಮ ಭಾಗವಹಿಸುವಿಕೆಯನ್ನು ವಿಸ್ತರಿಸಿವೆ. ಇದರೊಂದಿಗೆ ತನ್ನದೇ ಆದ ಹೊಸ ಆದೇಶಗಳನ್ನೂ ಪರಿಚಯಿಸಿವೆ. ಅನೇಕ ಸಂದರ್ಭಗಳಲ್ಲಿ ವೀಕ್ಷಕರ ಗಮನವನ್ನು ಸಾಧ್ಯವಾದಷ್ಟು ಕಾಲ ಹಿಡಿದಿಟ್ಟುಕೊಳ್ಳುವುದೇ ಇದರ ಕೆಲಸವಾಗಿರುವುದರಿಂದ ಸರಣಿಗಳು ಹಲವು ನಿರೂಪಣಾ ಎಳೆಗಳನ್ನು ಒಂದರೊಳಗೊಂದು ಹೆಣೆದಿರುತ್ತದೆ. ಹಳೆಯ ಡ್ಯೂಸ್ ಎಕ್ಸ್ ಮೆಷಿನಾ*ಗ್ರೀಕ್‌ ರಂಗಭೂಮಿಯ ತಂತ್ರ. ದೇವತೆಗಳು ಸಂಘರ್ಷ ನಿವಾರಣೆಗೆ ಪ್ರಕಟಗೊಳ್ಳುವಂತೆ ಮಾಡುವುದು. ಕ್ಲಾಸಿಕಲ್ ಒಪೆರಾ ನಿರೂಪಣಾ ತಂತ್ರವನ್ನು ಅನುಸರಿಸುತ್ತದೆ. ಹೊಸ ಸಂಚಿಕೆಗಳಲ್ಲಿನ ಪಾತ್ರಗಳು ಮನೋವ್ಯಾಪಾರಗಳು/ಮನೋವಿಜ್ಞಾನದ ಆಧಾರದ ಮೇಲೆ ರಚಿತವಾಗಿರುತ್ತದೆ. ಇದರಿಂದ ಕಥಾವಸ್ತುವಿಗೆ ಸಂಬಂಧಿಸಿದ ಘಟನೆಗಳನ್ನು ಬೆಳೆಸಲು ಅನುಕೂಲವಾಗುತ್ತದೆ. ಸೌಮ್ಯವಾಗಿದ್ದ ಪಾತ್ರವು ಪ್ರತಿಕಾರಾತ್ಮಕವಾಗಿ, ಹಿಂಸಾತ್ಮಕವಾಗಿ ಬದಲಾಗಬಹುದು. ಪೋಷಕ ಪಾತ್ರವು ಮುನ್ನೆಲೆಗೆ ಬಂದು ಮುಖ್ಯ ಪಾತ್ರವು ಹಿನ್ನೆಲೆಗೆ ಸರಿದುಬಿಡಬಹುದು. ಇದರಿಂದ ನಾವು ನಿರಾಶರಾಗಬಹುದು.

ಮತ್ತೊಂದು ಸೀಸನ್‌ನ ಸಂಭಾವ್ಯ ವಸ್ತುವು ಮುಕ್ತ ಅಂತ್ಯದ ಅಗತ್ಯವನ್ನು ಸೃಷ್ಟಿಸುತ್ತದೆ. ಇದರಲ್ಲಿ ಕೆಥಾರ್ಸಿಸ್ ಎಂಬ ನಿಗೂಢ ವಿಷಯಗಳು ಸಂಭವಿಸುವ ಅಥವ ಸಂಪೂರ್ಣವಾಗಿ ಪ್ರತಿಧ್ವನಿಸುವ ಯಾವುದೇ ಮಾರ್ಗವಿಲ್ಲ – ಕೆಥಾರ್ಸಿಸ್, ಹಿಂದೆ ಆಂತರಿಕ ರೂಪಾಂತರದ ಅನುಭವ, ಕ್ರಿಯೆಯಲ್ಲಿ ಭಾಗವಹಿಸಿದ ತೃಪ್ತಿಯ ಕತೆ. ಕೊನೆಯೊಂದನ್ನು ನೀಡುವುದಕ್ಕೆ ಬದಲಾಗಿ ತೊಡಕನ್ನು ಮುಂದುವರಿಸುವುದರಿಂದ ನೋಡುಗರನ್ನು ಅವಲಂಬಿತರನ್ನಾಗಿ ಮಾಡಲಾಗುತ್ತದೆ. ಇದು ಅವರನ್ನು ಸಮ್ಮೋಹನಗೊಳಿಸಿ ಹಿಡಿದಿಡುತ್ತದೆ. 

ಹೀಗೆ ಕತೆಯನ್ನು ಮುರಿಯುವ ವಿಧಾನ ಬಹಳ ಹಿಂದೆಯೇ ಶಹಜಾದೆಯ ಕತೆಗಳಲ್ಲಿ ಪ್ರಸಿದ್ಧಿಗೆ ಬಂದಿದೆ. ಈಗಿನ ಸರಣಿಗಳಲ್ಲಿ ಮರುಕಳಿಸಿದೆ. ನಮ್ಮ ವಸ್ತುನಿಷ್ಠತೆಯನ್ನು ಬದಲಿಸಿ, ವಿಲಕ್ಷಣ ಮಾನಸಿಕ ಪರಿಣಾಮಗಳನ್ನು ಬೀರಿ ನಮ್ಮ ಬದುಕಿನಿಂದ ನಮ್ಮನ್ನು ಬೇರ್ಪಡಿಸುತ್ತದೆ. ನಮ್ಮನ್ನು ಸಮ್ಮೋಹನಗೊಳಿಸುವ ಉತ್ತೇಜಕದಂತೆ ವರ್ತಿಸುತ್ತದೆ. ಅದೇ ಸಮಯಕ್ಕೆ ಸರಣಿಯು ಜಗತ್ತಿನ ಹೊಸದಾದ, ಕಳೆದುಹೋದ, ಅಸ್ತವ್ಯಸ್ತವಾದ ಲಯ, ಅವ್ಯವಸ್ಥಿತವಾಗಿರುವ ಸಂವಹನ, ಅಸ್ಥಿರತೆ ಮತ್ತು ಹರಿಯುವಿಕೆಗೆ ತಕ್ಕಂತೆ ತನ್ನನ್ನು ರೂಪಿಸಿಕೊಳ್ಳುತ್ತದೆ. ಈ ಕತೆ ಹೇಳುವ ವಿಧಾನವು ಇಂದು ಹೊಸದೊಂದು ಫಾರ್ಮುಲಾಗಾಗಿ ಸೃಜನಾತ್ಮಕವಾಗಿ ಹುಡುಕಾಡುತ್ತಿದೆ. ಈ ಅರ್ಥದಲ್ಲಿ ಭವಿಷ್ಯದ ನರೇಟೀವ್‌ಗಳ/ನಿರೂಪಣೆಗಳ ಸರಣಿಯಲ್ಲಿ ಹೊಸ ವಾಸ್ತವಕ್ಕೆ ಸರಿಹೊಂದುವಂತೆ ಕತೆಯನ್ನು ಮರುರೂಪುಗೊಳಿಸಬೇಕಿದೆ. 

ಎಲ್ಲಕ್ಕಿಂತ ಹೆಚ್ಚಾಗಿ ನಾವು ಹಲವು ವಿರೋಧಾಭಾಸಗಳಿಂದ ಕೂಡಿದ, ಪರಸ್ಪರ ಪ್ರತ್ಯೇಕ ಎನ್ನುವಂತಹ ಸತ್ಯಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇವು ಒಂದರೊಡನೊಂದು ಕೈಕೈಮಿಲಾಯಿಸುವುದರಲ್ಲಿ ತೊಡಗಿಕೊಂಡಿದೆ.

ಜ್ಞಾನವು ಎಲ್ಲರಿಗೂ ಸಿಕ್ಕಲ್ಲಿ ಜನರಿಗೆ ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ತರುತ್ತದೆ. ಸಮಾನ ಮತ್ತು ನ್ಯಾಯಯುತ ಸಮಾಜವನ್ನು ಸೃಷ್ಟಿಸುತ್ತದೆ ಎಂದು ನಮ್ಮ ಪೂರ್ವಜರು ನಂಬಿದ್ದರು. ಅವರ ಪ್ರಕಾರ ಪ್ರಪಂಚದಲ್ಲಿ ಇಲ್ಲದಿರುವುದು; ಮಾಹಿತಿಯಿಂದ ಸಹಜವಾಗಿ ಹುಟ್ಟುವ ತಿಳಿವಳಿಕೆ.

ಹದಿನೇಳನೆ ಶತಮಾನದ ಶ್ರೇಷ್ಠ ಶಿಕ್ಷಣತಜ್ಞ ಜಾನ್ ಅಮೋಸ್ ಕೊಮೆನಿಯಸ್ “ಪಾನ್ಸೊಫಿಸಂ” ಎಂಬ ಪದವನ್ನು ಹುಟ್ಟುಹಾಕಿದರು. ಇದರರ್ಥ ಸಾರ್ವತ್ರಿಕ ಜ್ಞಾನವು ತನ್ನೊಳಗೆ ಎಲ್ಲಾ ಸಂಭಾವ್ಯ ತಿಳಿವಳಿಕೆಯನ್ನು ಒಳಗೊಂಡಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಮಾಹಿತಿ ಸಿಗುವಂತಾಗಬೇಕು ಎನ್ನುವ ಕನಸಿದು. ಸತ್ಯಗಳನ್ನು ಅರಿಯಲು ಅವಕಾಶ ಸಿಕ್ಕರೆ ಅನಕ್ಷರಸ್ಥ ರೈತ ತನ್ನೊಳಗನ್ನು ಹಾಗೂ ಜಗತ್ತನ್ನು ಪರಾಮರ್ಶಗೆ ಒಳಪಡಿಸುವುದಿಲ್ಲವೇ? ಜನರಿಗೆ ಜ್ಞಾನವು ಸುಲಭವಾಗಿ ಕೈಗೆಟುಕುವಂತಿದ್ದರೆ ಅವರು ಹೆಚ್ಚು ಸಂವೇದನಾಶೀಲರಾಗುತ್ತಾರಲ್ಲವೇ? ತಮ್ಮ ಜೀವನದ ಪ್ರಗತಿಯನ್ನು ಹೆಚ್ಚಿನ ಸಮಚಿತ್ತತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ಸಾಧಿಸುತ್ತಾರೆ ಎಂದರ್ಥವಲ್ಲವೇ? ಅಂತರ್ಜಾಲವು ಮೊದಲು ಬಂದಾಗ ಅಂತೂ ಈ ಕಲ್ಪನೆಯು ಸಾಕಾರಗೊಳ್ಳುತ್ತಿದೆ ಅನ್ನಿಸಿತು. ನಾನು ಮೆಚ್ಚುವ, ಬೆಂಬಲಿಸುವ ವಿಕಿಪೀಡಿಯ ಮಾನವೀಯತೆಯ ಕನಸನ್ನು ನನಸಾಗಿಸಲು ಬಯಸುವ ಎಲ್ಲ ಸಮಾನ ಮನಸ್ಕ ತತ್ವಜ್ಞಾನಿಗಳಿಗೂ ಕೊಮೆನಿಯಸ್‌ನಂತೆ ತೋರುತ್ತದೆ. ಈಗ ನಾವು ಪ್ರಜಾಸತ್ತಾತ್ಮಕವಾಗಿ ಜಗತ್ತಿನೆಲ್ಲೆಡೆಯ ಸತ್ಯಗಳನ್ನು ಜಗತ್ತಿನ ಯಾವುದೇ ಭಾಗದಿಂದ ಪಡೆಯಬಹುದು, ಸಂಗ್ರಹಿಸಿಟ್ಟುಕೊಳ್ಳಬಹುದು. ಇದಕ್ಕೆ ನಿರಂತರವಾಗಿ ಪೂರಕವಾದ ಹಾಗೂ ನವೀಕರಿಸಿದ ಸತ್ಯಗಳನ್ನು ಸೇರಿಸುತ್ತಿರಬಹುದು. 

ನನಸಾದ ಕನಸು ನಿರಾಶಾದಾಯಕವಾಗಿದೆ. ಅಗಾಧ ಮಾಹಿತಿಯು ಒಗ್ಗೂಡಿಸಿ, ಸಾಮಾನ್ಯೀಕರಿಸಿ, ಮುಕ್ತಗೊಳಿಸುವುದಕ್ಕೆ ಬದಲಾಗಿ ಪರಸ್ಪರರನ್ನು ಪ್ರತ್ಯೇಕಿಸಿ, ಪ್ರತಿಯೊಬ್ಬರನ್ನೂ ದ್ವೀಪವಾಗಿಸುವ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿ, ಒಂದಕ್ಕೊಂದು ಹೊಂದಿಕೆಯಾಗದ ಕತೆಗಳು ರಚಿತವಾಗುತ್ತಿವೆ. ಇದನ್ನು ನೋಡಿದಾಗ ಮಾಹಿತಿಯ ಭಾರ ಹೊರಲು ನಾವು ಸಮರ್ಥರಾಗಿಲ್ಲ ಅನ್ನಿಸುತ್ತದೆ

ಅಂತರ್ಜಾಲವು ಸಂಪೂರ್ಣವಾಗಿ ಮಾರುಕಟ್ಟೆಯ ಏಕಸ್ವಾಮ್ಯತೆಯ ಪ್ರಕ್ರಿಯೆಗಳಿಗೆ ಒಳಪಟ್ಟಿದ್ದು ಅದನ್ನೇ ಪ್ರತಿಫಲಿಸುತ್ತದೆ. ಬಳಕೆದಾರರಿಗೆ ಸಂಬಂಧಿಸಿದ ಅಪಾರ ಪ್ರಮಾಣದ ಮಾಹಿತಿಯು ಅದರ ಬಳಿ ಇದ್ದು ಅದು ಬಳಕೆದಾರರ ಇಷ್ಟಾನಿಷ್ಟಗಳನ್ನು ನಿಯಂತ್ರಿಸುತ್ತದೆ. ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಕರಣದಲ್ಲಿ ಫೇಸ್‌ಬುಕ್‌ನ ಮಾಹಿತಿ ದುರ್ಬಳಕೆಯಾದದ್ದನ್ನು ನಾವೆಲ್ಲ ನೋಡಿದ್ದೇವೆ. ಸಾಮರಸ್ಯದ ದನಿಗಳಿಗೆ ಬದಲಾಗಿ ಎಲ್ಲೆಡೆ ಅಪಸ್ವರಗಳೇ ಕೇಳಿಬರುತ್ತಿವೆ. ಅಸಹನೀಯವಾದ ಈ ಸ್ಥಿತಿಯ ನಡುವೆಯೇ ಹತಾಶೆಯಿಂದಲೇ ಎಲ್ಲೋ ಸಣ್ಣದಾಗಿಯಾದರೂ ಸುಸ್ವರವೊಂದು ಕಿವಿಗೆ ಬೀಳಬಹುದೇನೋ ಎಂದು ಕೇಳಲು ಯತ್ನಿಸುತ್ತಿದ್ದೇವೆ. ಅಪಸ್ವರ/ಕ್ಯಾಕಫೋನಿಗಳ ಕುರಿತಾದ ಶೇಕ್ಸ್‌ಪಿಯರ್‌ನ ಮಾತು ಈ ಹೊಸ ವಾಸ್ತವಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ: ಸಿಟ್ಟಿನ ಏರುದನಿಯಲ್ಲಿ ಮೂರ್ಖನೊಬ್ಬ ಹೇಳಿದ ಕತೆಯೇ ಅಂತರ್ಜಾಲ.

ದುರದೃಷ್ಟವಶಾತ್‌ ರಾಜಕೀಯ ವಿಜ್ಞಾನಿಗಳ ಸಂಶೋಧನೆಯು ಜಾನ್‌ ಅಮೋಸ್‌ ಕೊಮೊನಿಯಸ್‌ ಅವರು ಹೇಳಿರುವುದನ್ನು ವಿರೋಧಿಸುತ್ತದೆ. ಪ್ರಪಂಚದ ಕುರಿತಾಗಿ ಸಾರ್ವತ್ರಿಕವಾಗಿ ಹೆಚ್ಚು ಮಾಹಿತಿ ಲಭ್ಯವಿದ್ದಾಗ ರಾಜಕಾರಣಿಗಳು ಅದನ್ನೇ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವರು ಎನ್ನುವ ನಂಬಿಕೆಯನ್ನು ಅದು ಆಧರಿಸಿದೆ. ಆದರೆ, ವಿಷಯ ಅಷ್ಟು ಸರಳವಾಗಿಲ್ಲ. ಅಗಾಧ ಮಾಹಿತಿ ಲಭ್ಯವಿರಬಹುದು. ಅದರ ಸಂಕೀರ್ಣತೆ, ಸಂದಿಗ್ಧತೆಯು ಹಲವು ಬಗೆಯ ರಕ್ಷಣಾತ್ಮಕ ನೆಪಗಳಿಗೆ ಕಾರಣವಾಗಬಹುದು. ನಿರಾಕರಿಸುವುದರಿಂದ ಹಿಡಿದು ಅದನ್ನು ಹತ್ತಿಕ್ಕುವವರೆಗೆ, ಸರಳೀಕರಣಗೊಳಿಸಿ ಬಿಡುವವರೆಗೆ, ಸೈದ್ಧಾಂತಿಕತೆಗೆ ತಕ್ಕಂತೆ ಯೋಚಿಸುವವರೆಗೆ ಹಲವು ನೆಪಗಳು ಸಿಗಬಹುದು. ನಕಲಿ ಸುದ್ದಿಗಳ ಹಾವಳಿಯು, ಕತೆ/ಕಾಲ್ಪನಿಕತೆ ಎಂದರೇನು ಎನ್ನುವ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪದೇ ಪದೇ ವಂಚನೆಗೊಳಗಾಗುತ್ತಿರುವ ಓದುಗರು, ತಪ್ಪುಮಾಹಿತಿ ಅಥವ ದಾರಿತಪ್ಪಿಸುವಿಕೆಯ ಪರಿಣಾಮವಾಗಿ ನಿಧಾನವಾಗಿ ನಿರ್ದಿಷ್ಟ ಬಗೆಯ ವ್ಯಕ್ತಿ ವಿಲಕ್ಷಣತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಕಾಲ್ಪನಿಕತೆಯು ಹೀಗೆ ಸೋತು ಸುಣ್ಣವಾದದ್ದು ಕಾಲ್ಪನಿಕೇತರ ವಿಷಯಗಳ ಯಶಸ್ಸು ಅನ್ನಿಸಬಹುದು. ಈ ಮಾಹಿತಿ ಕಣಜದ ಕೂಗುಮಾರಿಗಳು: “ನಾವು ನಿಮಗೆ ಸತ್ಯವನ್ನೇ ಹೇಳುತ್ತೇವೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ. ನಮ್ಮ ಕತೆ ಸತ್ಯಗಳನ್ನಾಧರಿಸಿದೆ!” ಎಂದೆಲ್ಲ ಅರಚುತ್ತಾ ನಮ್ಮ ತಲೆಬಿಸಿಯನ್ನು ಹೆಚ್ಚಿಸುತ್ತಿದ್ದಾರೆ.

ಸುಳ್ಳು ಎನ್ನುವುದು ಸಮೂಹಗಳನ್ನು ನಾಶಮಾಡುವ ಬಹುದೊಡ್ಡ ಹಳೆಯ ಸಾಧನವಾಗಿದ್ದು ಅದರಿಂದಾಗಿ ಕತೆ/ಕಾದಂಬರಿಯು ಓದುಗರನ್ನು ಕಳೆದುಕೊಂಡುಬಿಟ್ಟಿದೆ. ನನ್ನನ್ನು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ: “ನೀವು ಬರೆದಿರುವುದು ನಿಜವೇ?” ಪ್ರತಿ ಸಲ ಈ ಪ್ರಶ್ನೆ ಕೇಳಿದಾಗಲೂ ಇದೇ ಸಾಹಿತ್ಯದ ಕೊನೆ ಅನ್ನಿಸುತ್ತದೆ.

ಓದುಗರ ದೃಷ್ಟಿಕೋನದಿಂದ ಈ ಪ್ರಶ್ನೆ ಮುಗ್ಧವಾದದ್ದೇ ಇರಬಹುದು, ಲೇಖಕರಿಗೆ ಕಿವಿಗೆ ಅದು ಪ್ರಳಯದಂತೆ ಭಾಸವಾಗುತ್ತದೆ. ಹೇಗೆ ಹೇಳಲಿ? ಹ್ಯಾನ್ಸ್ ಕ್ಯಾಸ್ಟಾರ್ಪ್*ಥಾಮಸ್‌ಮನ್‌ ಕಾದಂಬರಿಯ ಪಾತ್ರ, ಅನ್ನಾ ಕರೆನಿನಾ*ಟಾಲ್‌ಸ್ಟಾಯ್‌ ಕಾದಂಬರಿಯ ಪಾತ್ರ ಅಥವ ವಿನ್ನಿ ದಿ ಪೂಹ್*ಕಾರ್ಟೂನ್‌ ಪಾತ್ರ ಈ ಪಾತ್ರಗಳ ಮೂಲತತ್ವವನ್ನು ಹೇಗೆ ವಿವರಿಸಲಿ?

ಈ ರೀತಿಯ ಓದುಗರ ಕುತೂಹಲ ನಾಗರಿಕತೆಯ ಹಿಂಚಲನೆ/ಹಿಂಜರಿತ ಎಂದು ಅನ್ನಿಸುತ್ತದೆ. ಘಟನೆಗಳ ಸರಪಳಿ ಎನ್ನಲಾಗುವ ಈ ಜೀವನದಲ್ಲಿ ಭಾಗಿಯಾಗುವ ನಮಗೆ ಬಹುಆಯಾಮಗಳನ್ನು (ಸಾಂದ್ರವಾದದ್ದು, ಐತಿಹಾಸಿಕವಾದದ್ದು, ಸಾಂಕೇತಿಕವಾದದ್ದು ಎನ್ನಬಹುದಾದ ಪುರಾಣ) ಒಳಗೊಳ್ಳಬಲ್ಲ ಸಾಮರ್ಥ್ಯವೇ ದೌರ್ಬಲ್ಯವಾಗಿ ಕಾಡುತ್ತದೆ. ಜೀವನದಲ್ಲಿನ ಈ ಘಟನೆಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾದಾಗ ಅದು ನಮ್ಮ ಅನುಭವದ ಭಾಗವಾಗುತ್ತದೆ. ಘಟನೆಗಳು ಸತ್ಯ ಆದರೆ, ಅನುಭವ ಎನ್ನುವುದು ವಿವರಿಸಲಾಗದಷ್ಟು ಅನನ್ಯ. ಅನುಭವ ನಮ್ಮ ಜೀವನವನ್ನು ರೂಪಿಸುತ್ತದೆಯೇ ಹೊರತು ಘಟನೆಗಳಲ್ಲ. ಅನುಭವ ಎನ್ನುವುದು ಸತ್ಯ. ಅರ್ಥೈಸಿಕೊಂಡ ಅನುಭವಗಳು ನೆನಪಿನಲ್ಲಿ ದಾಖಲಾಗುತ್ತವೆ. ಇದು ನಮ್ಮ ಮನಸ್ಸಿನ ಅಡಿಪಾಯವನ್ನು ಸೂಚಿಸುತ್ತದೆ. ಅದನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ಪರಿಶೀಲಿಸುವ ಮೂಲಕ ನಮ್ಮ ಜೀವನವನ್ನು ಅರಿಯಬಹುದು. ಪುರಾಣಗಳು ಈ ಬಗೆಯ ಸಂರಚನೆಗಳೆಂದು ನನ್ನ ನಂಬಿಕೆ. ಪುರಾಣಗಳು ನಡೆದಹೋದದ್ದಲ್ಲ ಅವು ನಡೆಯುತ್ತಿರುವಂತಹದ್ದು ಎನ್ನುವುದು ಎಲ್ಲರಿಗೂ ಗೊತ್ತು. ಇಂದು ಪೌರಾಣಿಕ ನಾಯಕರ ಸಾಹಸಗಳನ್ನು ಸಮಕಾಲೀನ ಸಿನಿಮಾ ಕತೆಗಳು, ಆಟಗಳು ಮತ್ತು ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಮೌಂಟ್‌ ಒಲಂಪಸ್‌*ಗ್ರೀಕ್‌ ಪುರಾಣದಲ್ಲಿ ಬರುವ ಸ್ಥಳನಲ್ಲಿದ್ದವರನ್ನು ರಾಜವಂಶದ ಕತೆಗಳಲ್ಲೂ, ನಾಯಕರ ವೀರಾವೇಶದ ವರ್ತನೆಗಳನ್ನು ಲಾರಾ ಕ್ರಾಫ್ಟ್‌ಗೂ*ವಿಡಿಯೋ ಗೇಮ್‌ ಪಾತ್ರ ಆರೋಪಿಸಲಾಗಿದೆ. ಸತ್ಯ ಮತ್ತು ಸುಳ್ಳಿನ ವಿಭಜನೆಯಲ್ಲಿ, ಸಾಹಿತ್ಯವು ಸೃಜಿಸುವ ನಮ್ಮ ಅನುಭವದ ಕಥನಗಳಿಗೆ ಅದರದೇ ಆದ ಆಯಾಮವಿರುತ್ತದೆ. 

ಸಾಹಿತ್ಯ ಮತ್ತು ಸಾಹಿತ್ಯೇತರ ಎನ್ನುವುದರ ನಡುವೆ ವ್ಯತ್ಯಾಸವಿದೆ ಎನ್ನುವುದನ್ನು ವಿವೇಚನಾತ್ಮಕವಾಗಿ ಅರಿಯುವವರೆಗೂ ಆ ರೀತಿಯ ವಿಭಜನೆ ಮಾಡುವ ಅಗತ್ಯವಿಲ್ಲ. ನನಗೆ ಆ ರೀತಿ ವಿಭಜನೆ ಮಾಡುವುದರಲ್ಲಿ ಎಂದೂ ಆಸಕ್ತಿ ಇರಲಿಲ್ಲ. ಸಾಹಿತ್ಯದ ಬಗ್ಗೆ ಇರುವ ಹಲವಾರು ವ್ಯಾಖ್ಯಾನಗಳಲ್ಲಿ ಇಂದಿಗೂ ನನಗೆ ಬಹಳ ಇಷ್ಟವಾದದ್ದು ಸಾಹಿತ್ಯ ಎನ್ನುವುದು ಯಾವಾಗಲೂ ಒಂದು ರೀತಿಯ ಸತ್ಯ ಎನ್ನುವ ಅರಿಸ್ಟಾಟಲ್‌ ಮಾತು. 

ಲೇಖಕ ಇ ಎಂ ಫಾಸ್ಟರ್‌ ನೈಜತೆ ಮತ್ತು ಕಥಾವಸ್ತುವಿನ ಕುರಿತ ಹೇಳಿದ ಮಾತು ಕೂಡ ನನಗಿಷ್ಟ. “ರಾಜ ಸತ್ತ. ಆಮೇಲೆ ರಾಣಿ ಸತ್ತಳು,” ಎನ್ನುವುದು ಕತೆ. ಅದನ್ನೇ, “ರಾಜ ಸತ್ತ. ರಾಣಿ ದುಃಖವನ್ನು ಸಹಿಸಲಾಗದೆ ಸತ್ತಳು,” ಎನ್ನುವುದು ಕಥಾವಸ್ತು ಎಂದು ಫಾಸ್ಟರ್‌ ಹೇಳುತ್ತಾನೆ. ಪ್ರತಿ ಕತೆಗೂ ಬದಲಾವಣೆ ತರುವುದು “ಮುಂದೇನಾಯಿತು?” ಎನ್ನುವ ಪ್ರಶ್ನೆ. ಅದನ್ನು ಅರ್ಥಮಾಡಿಕೊಳ್ಳಲು, “ಅದು ಹಾಗೇಕೆ ಆಯಿತು?” ಎಂದು ಕೇಳಿಕೊಳ್ಳುತ್ತೇವೆ. “ಯಾಕೆ?” ಎನ್ನುವ ಪ್ರಶ್ನೆಯೊಂದಿಗೆ ಸಾಹಿತ್ಯ ಹುಟ್ಟುತ್ತದೆ. ಆ ಪ್ರಶ್ನೆಗೆ, ನಮ್ಮ ಉತ್ತರ ಯಾವಾಗಲೂ, “ನನಗೆ ಗೊತ್ತಿಲ್ಲ,” ಎನ್ನುವುದೇ ಆಗಿರುತ್ತದೆ. ಹಾಗಾಗಿಯೇ ಸಾಹಿತ್ಯವು ವಿಶ್ವಕೋಶದ ನೆರವಿನಿಂದ ಉತ್ತರಿಸಲಾಗದ ಪ್ರಶ್ನೆಗಳನ್ನು ನಮ್ಮೆದುರಿಗೆ ಇಡುತ್ತದೆ. ಏಕೆಂದರೆ ಅದು ಮಾಹಿತಿ, ಘಟನೆಗಳನ್ನು ಮೀರಿ ನೇರವಾಗಿ ನಮ್ಮ ಅನುಭವವನ್ನೇ ಆಧರಿಸಿರುತ್ತದೆ.

ಬೇರೆ ಬಗೆಯ ಕಥನ ನಿರೂಪಣೆಗಳಿಗೆ ಹೋಲಿಸಿದಲ್ಲಿ ಇಂದು ಸಾಹಿತ್ಯವು ಸ್ವಲ್ಪಮಟ್ಟಿಗೆ ಪಕ್ಕಕ್ಕೆ ಸರಿಸಲ್ಪಟ್ಟಿದೆ. ಚಿತ್ರಗಳ ಮೂಲಕ ಹಾಗೂ ಮತ್ತಿತರ ರೂಪಗಳ ಮೂಲಕ ಅನುಭವವನ್ನು ನೇರವಾಗಿ ದಾಟಿಸುವಂತಹ ಸಿನೆಮಾ, ಫೋಟೊಗ್ರಫಿ, ವರ್ಚುಯಲ್‌ ರಿಯಾಲಿಟಿ ಮೊದಲಾದವು ಸಾಂಪ್ರದಾಯಿಕ ಓದುವಿಕೆಗೆ ಪರ್ಯಾಯಗಳನ್ನು ರೂಪಿಸಿವೆ. ಓದುವಿಕೆ ಎನ್ನುವುದು ಮಾನಸಿಕ ಹಾಗೂ ಗ್ರಹಿಕಾ ವಿಧಾನವನ್ನು ಒಳಗೊಂಡ ಸಂಕೀರ್ಣ ಪ್ರಕ್ರಿಯೆಯಾಗಿದೆ. ಸರಳವಾಗಿ ಹೇಳುವುದಾದರೆ: ಮೊದಲಿಗೆ ವಿಷಯವನ್ನು ಪರಿಕಲ್ಪನೆಯಾಗಿಸಿ ಸಂಕೇತಗಳು ಮತ್ತು ಚಿಹ್ನೆಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಬಳಿಕ ಅದನ್ನು ಮತ್ತೆ ಭಾಷೆಯಿಂದ ಅನುಭವವಾಗಿ “ಡಿಕೋಡ್‌” ಮಾಡಲಾಗುತ್ತದೆ. ಇದು ನಿರ್ದಿಷ್ಟ ಬಗೆಯ ಬೌದ್ಧಿಕ ಸಾಮರ್ಥ್ಯವನ್ನು ಬೇಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದಕ್ಕೆ ಗಮನವನ್ನು ಕೇಂದ್ರೀಕರಿಸುವುದು ಅಗತ್ಯ. ಮನಸ್ಸನ್ನು ಹತ್ತಾರು ಕಡೆ ಸೆಳೆಯುವ ಇಂದಿನ ಜಗತ್ತಿನಲ್ಲಿ ಇದು ಕಷ್ಟ.

ಮನುಷ್ಯರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ಹಾದಿಯಲ್ಲಿ ಮೌಖಿಕದಿಂದ ಬರವಣಿಗೆಯವರೆಗೆ ಬಹುದೂರ ಕ್ರಮಿಸಿದ್ದಾರೆ. ನೆನಪು ಹಾಗೂ ಪದಗಳ ಮೂಲಕ ಕತೆಗಳನ್ನು ದಾಖಲಿಸಲು ಆರಂಭಿಸಿದ ಮೇಲೆ ಅವುಗಳನ್ನು ಯಾವುದೇ ಬದಲಾವಣೆಯಿಲ್ಲದೆ ಮತ್ತೆ ಮತ್ತೆ ಹೇಳಲು ಸಾಧ್ಯವಾಗಿದೆ. ಇದರಿಂದಾದ ಪ್ರಮುಖ ಬದಲಾವಣೆಯೆಂದರೆ ಚಿಂತನೆಯನ್ನು ಭಾಷೆ ಹಾಗೂ ಬರವಣಿಗೆಯೊಂದಿಗೆ ಗುರುತಿಸಲು ಆರಂಭಿಸಿದೆವು. ಅನುಭವವನ್ನು ಮುದ್ರಿತ ಪದಗಳ ಹಂಗಿಲ್ಲದೆ ನೇರವಾಗಿ ದಾಟಿಸಬಹುದಾದ ಇಂದಿನ ಸಂದರ್ಭದಲ್ಲಿ ಮತ್ತೆ ಇದೇ ಬಗೆಯ ಕ್ರಾಂತಿಯೊಂದು ಎದುರಾಗಿದೆ. 

ಇಂದು ಹೋದೆಡೆಯಲ್ಲೆಲ್ಲ ಡೈರಿ ಹೊತ್ತೊಯ್ಯುವ ಅಗತ್ಯವಿಲ್ಲ. ಹೋದಲ್ಲಿ ಫೋಟೊಗಳನ್ನು ತೆಗೆದು ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿಗೆ, ಯಾರಿಗೆ ಬೇಕೋ ಅವರಿಗೆ ರವಾನಿಸಬಹುದಾಗಿದೆ. ಪತ್ರಗಳನ್ನು ಬರೆಯುವ ಅಗತ್ಯವಿಲ್ಲ. ಅದಕ್ಕಿಂತ ದೂರವಾಣಿ ಕರೆ ಮಾಡುವುದು ಸುಲಭ. ಟಿವಿ ಸರಣಿಯೊಳಗೆ ತನ್ಮಯವಾಗುವ ಸಾಧ್ಯತೆ ಇರುವಾಗ ದೊಡ್ಡ ಕಾದಂಬರಿಗಳನ್ನು ಬರೆಯುವ ಅಗತ್ಯವೇನಿದೆ? ಗೆಳೆಯರೊಡನೆ ಸುತ್ತಾಡುವ ಬದಲು ಗೇಮ್‌ ಆಡುತ್ತಾ ಕೂರುವುದು ಉತ್ತಮ ಎನ್ನುವಂತಾಗಿದೆ. ಆತ್ಮಕತೆಗಳು ಅಂದಿರಾ? ಅದರಿಂದಲೂ ಉಪಯೋಗವಿಲ್ಲ. ಏಕೆಂದರೆ ನಾವಿಂದು ಸೆಲೆಬ್ರಿಟಿಗಳ ಬದುಕಿನ ಎಲ್ಲ ವಿಷಯಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅವರನ್ನು ಫಾಲೋ ಮಾಡುವುದರ ಮೂಲಕ ತಿಳಿಯಬಹುದಾಗಿದೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ನಾವು ಯೋಚಿಸಿದಂತೆ ಟಿವಿ, ಸಿನೆಮಾಗಳ ಪ್ರಭಾವವು ಬರವಣಿಗೆಯ ದೊಡ್ಡ ಶತ್ರುಗಳಲ್ಲ. ಬದಲಿಗೆ ಇದು ಪ್ರಪಂಚದ ಮತ್ತೊಂದು ಆಯಾಮವಾಗಿದ್ದು, ಅದು ನೇರವಾಗಿ ನಮ್ಮ ಇಂದ್ರಿಯಗಳ ಮೇಲೆ ಪ್ರಭಾವ ಬೀರುತ್ತಿದೆ.

3

೨೦೧೪ ರ ದೆಹಲಿ ಪುಸ್ತಕ ಮೇಳದಲ್ಲಿ ತಮ್ಮ ಕಥೆಗಳ ಹಿಂದಿ ಅನುವಾದಕಿ ಮರಿಯಾ ಪುರಿ (ಎಡತುದಿ )ಯೊಂದಿಗೆ ಲೇಖಕಿ

ಜಗತ್ತನ್ನು ಕುರಿತಾದ ಕತೆಗಳನ್ನು ಹೇಳುವಲ್ಲಿ ಇರುವ ಬಿಕ್ಕಟ್ಟಗಳ ಕುರಿತು ಹೇಳುತ್ತಾ ಅದರ ಒಟ್ಟಾರೆ ಚಿತ್ರ ನೀಡುವುದು ನನಗಿಷ್ಟವಿಲ್ಲ. ಗಾಜಿನ ಪರದೆಗಳ ಮೂಲಕ, ತಂತ್ರಾಂಶಗಳ ಮೂಲಕ ಅನುಭವವನ್ನು ಪಡೆಯುವುದು ಸುಲಭವಾಗಿದ್ದರೂ ಅದು ಅವಾಸ್ತವದದ್ದು, ನನ್ನಿಂದ ದೂರವಾದದ್ದು, ವಿವರಿಸಲಾಗದಷ್ಟು ವಿಚಿತ್ರವಾದದ್ದು ಅನ್ನಿಸಿ ಈ ಪ್ರಪಂಚದಲ್ಲಿ ಏನೋ ಇಲ್ಲ ಅನ್ನಿಸುತ್ತದೆ. ಇಂದು “ಯಾರೋ” “ಏನೋ” “ಎಲ್ಲೋ” “ಯಾವಾಗಲೋ” ಇಂತಹ ಪದಗಳು “ಭೂಮಿ ಸಮತಟ್ಟಾಗಿದೆ” “ಲಸಿಕೆಗಳು ಕೊಲ್ಲುತ್ತವೆ” “ಹವಾಮಾನ ಬದಲಾವಣೆ ಎನ್ನುವುದು ದಡ್ಡತನ” “ಪ್ರಪಂಚದಲ್ಲಿ ಎಲ್ಲೂ ಪ್ರಜಾಪ್ರಭುತ್ವಕ್ಕೆ ಆತಂಕವಿಲ್ಲ” ಎನ್ನುವಂತಹ ಖಚಿತ ವಿಚಾರಗಳಿಗಿಂತ ಹೆಚ್ಚು ಅಪಾಯಕಾರಿ ಅನ್ನಿಸುತ್ತವೆ. “ಎಲ್ಲೋ” ಯಾರೋ ಕೆಲವರು ಸಮುದ್ರವನ್ನು ದಾಟಲು ಹೋಗಿ ಸತ್ತರು. “ಎಲ್ಲೋ” “ಸ್ವಲ್ಪ ಸಮಯ”ದವರೆಗೆ “ಏನೋ ಒಂದು ರೀತಿಯ” ಯುದ್ಧ ನಡೆಯಲಿದೆ. ಮಾಹಿತಿಯ ಮಹಾಪೂರದಲ್ಲಿ ವೈಯಕ್ತಿಕ ಸಂದೇಶಗಳು ತಮ್ಮ ಗಡಿರೇಖೆಗಳನ್ನು ಕಳೆದುಕೊಳ್ಳುತ್ತವೆ, ನಮ್ಮ ನೆನಪುಗಳಲ್ಲಿ ಕರಗುತ್ತವೆ, ಅವಾಸ್ತವ ಅನ್ನಿಸಿಕೊಳ್ಳುತ್ತವೆ ಮತ್ತು ಮರೆಯಾಗುತ್ತವೆ.

ಮೂರ್ಖತನ, ಕ್ರೌರ್ಯ, ದ್ವೇಷ ಭಾಷಣ ಮತ್ತು ಹಿಂಸೆಯ ಚಿತ್ರಗಳ ಪ್ರವಾಹವು ಎಲ್ಲ ರೀತಿಯ “ಒಳ್ಳೆಯ ಸುದ್ದಿ”ಗಳನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸರಿದೂಗಿಸುತ್ತಿದೆ. ಇದನ್ನು ಹೇಳುವುದಕ್ಕೆ ಕಷ್ಟವಾಗುತ್ತಿದೆ, ಆದರೂ, ಜಗತ್ತಿನಲ್ಲಿ ಏನೋ ತಪ್ಪಾಗಿದೆ ಎನ್ನುವ ನೋವಿನ ಅನಿಸಿಕೆಯನ್ನು ತಡೆಯುವ ಶಕ್ತಿಯಿಲ್ಲ. ಇದು ಒಂದು ಕಾಲದಲ್ಲಿ ಖಿನ್ನತೆಗೊಳಗಾದ ಕವಿಗಳ ಭಾವನೆಯಾಗಿತ್ತು. ಇಂದು ಇದೊಂದು ಸಾಂಕ್ರಾಮಿಕದಂತಾಗಿದ್ದು, ಎಲ್ಲೆಡೆಯೂ ಆತಂಕವನ್ನು ಹಬ್ಬಿಸುತ್ತಿದೆ.

ಸಾಹಿತ್ಯವು ನಮ್ಮನ್ನು ಪ್ರಪಂಚದ ಕಟುವಾಸ್ತವಕ್ಕೆ ಹತ್ತಿರವಾಗಿಸುವ ಕೆಲವೇ ಕ್ಷೇತ್ರಗಳಲ್ಲಿ ಒಂದಾಗಿದೆ. ಅದು ಸ್ವಭಾವತಃ ಮನಸ್ಸಿಗೆ ಸಂಬಂಧಿಸಿದ್ದು. ಅದು ಪಾತ್ರಗಳ ಆಂತರಿಕ ತರ್ಕ ಮತ್ತು ಉದ್ದೇಶಗಳ ಮೇಲೆ ಕೇಂದ್ರಿತವಾಗಿದ್ದು, ಅಪರಿಚಿತವಾದ, ಪಡೆಯಲು ಸಾಧ್ಯವಿಲ್ಲದ ಮತ್ತೊಬ್ಬ ವ್ಯಕ್ತಿಯ ಅನುಭವವನ್ನು ಓದುಗನಿಗೆ ನೀಡುತ್ತದೆ ಅಥವ ಓದುಗನನ್ನು ಆ ಪಾತ್ರದ ವರ್ತನೆಯ ಕುರಿತು ಮನೋವಿಶ್ಲೇಷಣೆ ನಡೆಸಲು ಪ್ರಚೋದಿಸುತ್ತದೆ. ಸಾಹಿತ್ಯಕ್ಕೆ ಮಾತ್ರ ನಮ್ಮನ್ನು ಮತ್ತೊಬ್ಬರ ಬದುಕಿನಾಳಕ್ಕೆ ಕರೆದುಕೊಂಡು ಹೋಗಲು, ಅವರ ನಡೆಯನ್ನು ಅರ್ಥಮಾಡಿಕೊಳ್ಳುವಂತೆ ಮಾಡಲು, ಭಾವನೆಗಳನ್ನು ಹಂಚಿಕೊಳ್ಳುವಂತೆ ಮಾಡಲು ಮತ್ತು ಅವರ ಬದುಕಿನ ವಿಧಿಯನ್ನು ಅನುಭವಿಸುವಂತೆ ಮಾಡಲು ಸಾಧ್ಯ.

ಕತೆ ಯಾವಾಗಲೂ ಅರ್ಥದ ಸುತ್ತಲೂ ಸುತ್ತುತ್ತದೆ. ಇದನ್ನು ಅದು ನೇರವಾಗಿ ಹೇಳದಿದ್ದರೂ, ಉದ್ದೇಶಪೂರ್ವಕವಾಗಿ ಅರ್ಥದ ಹುಡುಕಾಟವನ್ನು ನಿರಾಕರಿಸುತ್ತದೆ ಮತ್ತು ರೂಪ/ಪ್ರಕಾರದ ಮೇಲೆ ಕೇಂದ್ರಿತವಾಗಿ, ಪ್ರಯೋಗಶೀಲವಾಗಿ, ಔಪಚಾರಿಕವಾಗಿ ತನ್ನ ಬಂಡಾಯವನ್ನು ಸೂಚಿಸುತ್ತಾ, ಹೊಸ ಅಭಿವ್ಯಕ್ತಿಯ ವಿಧಾನಗಳನ್ನು ಹುಡುಕುತ್ತಿರುತ್ತದೆ. ಕತೆಯೊಂದನ್ನು ಓದುವಾಗ ಅಯಾಚಿತವಾಗಿ ನಮ್ಮ ಮನಸ್ಸು “ಹೀಗೇಕೆ ಆಗುತ್ತಿದೆ?” “ಇದರರ್ಥವೇನು?” “ಇದರಿಂದ ಏನಾಗುತ್ತದೆ?” “ಮುಂದೇನು?” ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುತ್ತದೆ. ನಮ್ಮ ಸುತ್ತಲಿನ ಲಕ್ಷಾಂತರ ಪ್ರಚೋದನೆಗಳ ಅರ್ಥವನ್ನು ಹುಡುಕುತ್ತಾ ನಮ್ಮ ಮನಸ್ಸು ಕತೆಯನ್ನು ಹುಟ್ಟಿಸಿರಬಹುದು. ನಾವು ನಿದ್ರಿಸುತ್ತಿರುವಾಗಲೂ ಮನಸ್ಸು ತನ್ನ ನಿರೂಪಣೆಗಳನ್ನು ಕಟ್ಟಿಕೊಳ್ಳುತ್ತಲೇ ಇರುತ್ತದೆ. ಹಾಗಾಗಿ ಕತೆ ಎನ್ನುವುದು ಅನಂತವಾದ ಮಾಹಿತಿಯನ್ನು ಕಾಲದೊಳಗೆ ಹಿಡಿದಿಡುವ ಮಾರ್ಗವಾಗಿದೆ. ಕತೆಯು ಭೂತ, ವರ್ತಮಾನ, ಭವಿಷ್ಯದೊಂದಿಗೆ ಸಂಬಂಧ ಬೆಸೆದುಕೊಂಡು ಪುನರಾವರ್ತನೆಯಾಗುತ್ತದೆ ಎನ್ನುವುದನ್ನು ತೋರುತ್ತದೆ. ಅವುಗಳನ್ನು ಕಾರಣ ಮತ್ತು ಪರಿಣಾಮಗಳಡಿಯಲ್ಲಿ ಜೋಡಿಸುತ್ತದೆ. ಮನಸ್ಸು ಮತ್ತು ಭಾವನೆಗಳೆರಡೂ ಈ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತದೆ. 

ಕತೆಗಳ ಆರಂಭಿಕ ಅವಿಷ್ಕಾರಗಳಲ್ಲೊಂದು ವಿಧಿ ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ವಿಧಿ ಯಾವಾಗಲೂ ಜನರ ಪಾಲಿಗೆ ಭಯಾನಕ, ಅಮಾನವೀಯವಾಗಿ ಕಂಡರೂ ದೈನಿಕ ಬದುಕಿಗೊಂದು ಕ್ರಮ ಹಾಗೂ ನಿರ್ವಿಕಲ್ಪತೆ/ನಿರ್ವಿಕಾರತೆಯನ್ನು ಒದಗಿಸುತ್ತದೆ.

4

ಕೆಲವು ವರ್ಷಗಳ ನಂತರ, ಆ ಫೋಟೋದಲ್ಲಿರುವ ನನ್ನಮ್ಮ, ನಾನು ಹುಟ್ಟುವುದಕ್ಕೂ ಮೊದಲೇ ನಿನ್ನನ್ನು ಮಿಸ್‌ ಮಾಡುತ್ತಿದ್ದೆ ಎಂದವಳು, ನನಗೆ ರಮ್ಯ ಕತೆಗಳನ್ನು ಓದಿ ಹೇಳುತ್ತಿದ್ದಳು. 

ಅದರಲ್ಲೊಂದು ಟೀ ಪಾಟ್‌ ಕತೆ. ಅದು ಹ್ಯಾನ್ಸ್‌ ಕ್ರಿಶ್ಚಿಯನ್‌ ಆಂಡ್ರಸನ್‌ ಕತೆ. ಹಿಡಿಕೆ ಮುರಿದ ತಕ್ಷಣ ತನ್ನನ್ನು ಕಸದ ಗುಂಡಿಗೆ ಎಸೆದ ಜನರ ಕ್ರೌರ್ಯದ ಬಗ್ಗೆ ಆ ಟೀ ಪಾಟ್‌ ಹೇಳುತ್ತದೆ. ಜನ ಪರಿಪೂರ್ಣತೆಯನ್ನು ಆರಾಧಿಸುವವರಲ್ಲದೆ ಹೋಗಿದ್ದರೆ ಅದನ್ನು ಇನ್ನೂ ಬಳಸುತ್ತಿದ್ದರು. ಅಲ್ಲಿದ್ದ ಇನ್ನಿತರ ಮುರಿದ ವಸ್ತುಗಳು ಆ ಟೀ ಪಾಟ್‌ನೊಂದಿಗೆ ದನಿಗೂಡಿಸಿ ವಸ್ತುಗಳಾದ ತಮ್ಮ ಸಣ್ಣ ಜೀವಿತಾವಧಿಯ ಮಹಾನ್‌ ಕತೆಗಳನ್ನು ಹೇಳಿದವು.

ಮಗುವಾಗಿ ನಾನು ಈ ಕತೆಗಳನ್ನು ಕಣ್ತುಂಬಿಕೊಂಡು ಕೇಳುತ್ತಿದ್ದೆ. ಏಕೆಂದರೆ ವಸ್ತುಗಳಿಗೂ ಅವುಗಳದೇ ಆದ ಸಮಸ್ಯೆಗಳು, ಭಾವನೆಗಳು ಇರುತ್ತವೆ. ಮನುಷ್ಯರಿಗಿರುವಂತೆ ಒಂದು ಬಗೆಯ ಸಾಮಾಜಿಕ ಬದುಕು ಇರುತ್ತದೆ ಎಂದು ಗಾಢವಾಗಿ ನಂಬಿದ್ದೆ. ತಟ್ಟೆಗಳು, ಚಮಚಗಳು, ಚಾಕುಗಳು, ಫೋರ್ಕುಗಳು ಒಂದು ಕುಟುಂಬವಿದ್ದಂತೆ. ಅವುಗಳು ಪರಸ್ಪರ ಮಾತಾಡುತ್ತವೆ. ಅದೇ ರೀತಿ ಪ್ರಾಣಿಗಳು ನಿಗೂಢ, ಬುದ್ಧಿವಂತ, ಸ್ವ-ಅರಿವು ಇರುವ ಜೀವಿಗಳು. ಅವುಗಳೊಂದಿಗೆ ಒಂದು ಬಗೆಯ ಆಧ್ಯಾತ್ಮಿಕ ಬಂಧ ಮತ್ತು ಗಾಢ ಸಾಮ್ಯತೆಯನ್ನು ನಾವು ಹೊಂದಿದ್ದೇವೆ. ನದಿಗಳು, ಕಾಡುಗಳು, ರಸ್ತೆಗಳು ಕೂಡ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿವೆ. ಅವು ನಮ್ಮ ಜಾಗವನ್ನು ರೂಪಿಸಿದ, ಈ ಜಗತ್ತಿಗೆ ಸೇರಿದವರು ಎನ್ನುವ ಭಾವವನ್ನು ರೂಪಿಸಿದ ಜೀವಿಗಳು. ನಮ್ಮ ಸುತ್ತಲ ಭೂಮಿ, ಸೂರ್ಯ, ಚಂದ್ರ, ಆಕಾಶಕಾಯಗಳು – ಇಡೀ ಗೋಚರ, ಅಗೋಚರ ಜಗತ್ತು ಕೂಡ ಜೀವಂತವಾದದ್ದು ಅನ್ನಿಸುತ್ತಿತ್ತು.

ನನ್ನೊಳಗೆ ಅನುಮಾನಗಳು ಯಾವಾಗ ಶುರುವಾದವು? ನನ್ನ ಬದುಕಿನ ಯಾವ ಕ್ಷಣದಲ್ಲಿ, ಎಲ್ಲವೂ ಬೇರೆಯಾಗಿ, ಸೂಕ್ಷ್ಮತೆ ಕಳೆದುಕೊಂಡು, ಸರಳವಾಗಿಬಿಟ್ಟಿತು ಎಂದು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈಗ ಜಗತ್ತಿನ ಪಿಸುದನಿಗಳೆಲ್ಲ ಅಡಗಿಹೋಗಿ, ಅದಕ್ಕೆ ಬದಲಾಗಿ ನಗರದ ಗದ್ದಲ, ಕಂಪ್ಯೂಟರ್‌ಗಳ ಮರ್ಮರ, ತಲೆಮೇಲೆ ಹಾದುಹೋಗುವ ವಿಮಾನಗಳ ಗುಡುಗಿನಂತ ಸದ್ದು ಮತ್ತು ಮಾಹಿತಿ ಸಾಗರದ ಅಬ್ಬರ ಕೇಳುತ್ತಿದೆ. 

ನಮ್ಮ ಬದುಕಿನ ಯಾವುದೋ ಒಂದು ಹಂತದಲ್ಲಿ ಜಗತ್ತನ್ನು ತುಣುಕುಗಳಾಗಿ, ಎಲ್ಲವನ್ನೂ ಬಿಡಿಬಿಡಿಯಾಗಿ, ಒಂದರಿಂದ ಒಂದು ದೂರವಿರುವ ತಾರಾಸಮೂಹದಂತೆ ನೋಡಲು ಶುರುಮಾಡುತ್ತೇವೆ. ನಾವು ಬದುಕುತ್ತಿರುವ ವಾಸ್ತವವು ಅದನ್ನು ದೃಢೀಕರಿಸುತ್ತದೆ. ವೈದ್ಯರು ನಮ್ಮನ್ನು ಇಡಿಯಾಗಿ ನೋಡುವುದಿಲ್ಲ. ದೇಹದ ಯಾವ ಭಾಗದ ಬಗ್ಗೆ ಅವರ ಪರಿಣತಿ ಇದೆಯೋ ಅದಕ್ಕೆ ಚಿಕಿತ್ಸೆ ನೀಡುತ್ತಾರೆ. ಕೆಲಸಕ್ಕೆ ಹೋಗುವಾಗ ಹಾದುಹೋಗುವ ಕೆಟ್ಟ ರಸ್ತೆಗೂ ನಾವು ಕಟ್ಟುವ ತೆರಿಗೆಗೂ ಸಂಬಂಧವಿಲ್ಲ. ನಮ್ಮ ಊಟಕ್ಕೂ ತೋಟಕ್ಕೂ ಸಂಬಂಧವಿಲ್ಲ. ನನ್ನ ಉಡುಗೆಗೂ ಏಷ್ಯಾದ ಮೂಲೆಯಲ್ಲಿರುವ ಕಾರ್ಖಾನೆಗೂ ಸಂಬಂಧವಿಲ್ಲ. ಪ್ರತಿಯೊಂದು ಇಲ್ಲಿ ಪ್ರತ್ಯೇಕ. ಪ್ರತಿಯೊಂದು ಇನ್ನೊಂದರೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿಯೇ ಬದುಕುತ್ತದೆ

ಇದನ್ನು ಇನ್ನಷ್ಟು ಸುಲಭವಾಗಿಸಲು ನಮ್ಮ ಗುರುತಿಗಾಗಿ ಸಂಖ್ಯೆಗಳನ್ನು, ಹೆಸರಿನ ಟ್ಯಾಗ್‌ಗಳನ್ನು, ಕಾರ್ಡುಗಳನ್ನು ನೀಡಲಾಗಿದೆ. ಇವೆಲ್ಲವೂ ನಮ್ಮನ್ನು ಈಗಾಗಲೇ ನಾವು ಅರಿಯಲು ಕಡಿಮೆ ಮಾಡಿರುವ ಜಗತ್ತಿನಿಂದ ಇನ್ನಷ್ಟು ದೂರವಾಗಿಸುತ್ತಿದೆ. 

ಜಗತ್ತು ಸಾಯುತ್ತಿದೆ, ನಾವು ಅದನ್ನು ಗುರುತಿಸುವಲ್ಲಿ ಸೋಲುತ್ತಿದ್ದೇವೆ. ಪ್ರಪಂಚವು ವಸ್ತುಗಳ, ಘಟನೆಗಳ ಸಂಗ್ರಹವಾಗುತ್ತಿದೆ ಎಂದು ಗ್ರಹಿಸುವಲ್ಲಿ ಸೋತಿದ್ದೇವೆ. ಈ ನಿರ್ಜೀವ ಪ್ರಪಂಚದಲ್ಲಿ ಅಲ್ಲಿಂದಿಲ್ಲಿಗೆ ಒಂಟಿಯಾಗಿ ಅಲೆಯುತ್ತಾ ಕಳೆದು ಹೋಗಿದ್ದೇವೆ. ಯಾರದೋ ನಿರ್ಧಾರಗಳಿಂದ ಅಲ್ಲಿಂದಿಲ್ಲಿಗೆ ಎಸೆಯಲ್ಪಡುತ್ತಿದ್ದೇವೆ. ಗ್ರಹಿಸಲು ಸಾಧ್ಯವಿಲ್ಲದ ವಿಧಿಯಿಂದ ನಿರ್ಬಂಧಿತರಾಗಿ, ಇತಿಹಾಸದ ಯಾವುದೋ ಪ್ರಮುಖ ಶಕ್ತಿಗಳ ಅಥವ ಅವಕಾಶದ ಆಟದ ಕಾಯಿಗಳಾಗಿದ್ದೇವೆ. ನಮ್ಮ ಆಧ್ಯಾತ್ಮಿಕತೆಯು ಕಣ್ಮರೆಯಾಗುತ್ತಿದೆ ಅಥವ ತೋರಿಕೆಯ ಧಾರ್ಮಿಕ ಕ್ರಿಯೆಯಾಗಿದೆ. ನಾವು ಭೌತಿಕ, ಸಾಮಾಜಿಕ, ಆರ್ಥಿಕತೆಗಳಂತಹ ಸರಳ ಶಕ್ತಿಗಳ ಅನುಯಾಯಿಗಳಾಗಿದ್ದೇವೆ. ಈ ಶಕ್ತಿಗಳು ನಮ್ಮನ್ನು ಓಡಾಡುವ ಹೆಣಗಳಾಗಿಸಿವೆ. ಈ ರೀತಿಯ ಪ್ರಪಂಚದಲ್ಲಿ ನಾವು ನಿಜಕ್ಕೂ ಓಡಾಡುವ ಹೆಣಗಳಾಗಿದ್ದೇವೆ. ಆದ್ದರಿಂದಲೇ ನಾನು ಆ ಇನ್ನೊಂದು ಪ್ರಪಂಚ, ಟೀಪಾಟ್‌ ಪ್ರಪಂಚಕ್ಕಾಗಿ ಹಂಬಲಿಸುತ್ತೇನೆ.

5

ಪರಸ್ಪರ ಸಂಪರ್ಕ ಹೊಂದಿರುವ ವ್ಯವಸ್ಥೆಗಳು, ಅವುಗಳ ಪ್ರಭಾವದ ಬಗ್ಗೆ ನಮಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ. ಆದರೆ, ಅದನ್ನು ಆಕಸ್ಮಿಕವಾಗಿ ಅಚ್ಚರಿಯೆಂಬಂತೆಯೋ ಅಥವ ವಿಧಿಯ ಹಂಚಿಕೆಯೆಂಬಂತೆಯೋ ಕಂಡುಕೊಳ್ಳುತ್ತೇವೆ. ಜೀವನದುದ್ದಕ್ಕೂ ನನಗಿದರ ಬಗ್ಗೆ ಆಕರ್ಷಣೆ ಇದ್ದೇ ಇದೆ. ಸಂಗತಿಗಳನ್ನು ಸಂಯೋಜಿಸುವುದು, ಅವುಗಳಲ್ಲೊಂದು ಕ್ರಮವನ್ನು ಹುಡುಕುವುದರ ಬಗ್ಗೆ ಆಕರ್ಷಣೆ. ಮೂಲಭೂತವಾಗಿ ಬರಹಗಾರರ ಮನಸ್ಸು ಅನುಭವ ಪ್ರಮಾಣವನ್ನು ಬೇಡುವಂತಹದ್ದು. ಅದು ಎಲ್ಲ ಸಣ್ಣ ತುಣುಕಗಳನ್ನು ಒಗ್ಗೂಡಿಸಿ ಜೋಡಿಸಿ ಜಗತ್ತನ್ನು ಒಂದಾಗಿಸುತ್ತದೆ ಎಂದು ನನಗೆ ಮನವರಿಕೆಯಾಗಿದೆ.

ಈ ಮಹಾನ್‌ ಪ್ರಪಂಚದ ಸಮೂಹವನ್ನು ಹಿಡಿದಿಡುವಂತಹ ಕತೆಯನ್ನು ಹೇಗೆ ಬರೆಯುವುದು? 

ಪುರಾಣಗಳು, ನೀತಿಕತೆಗಳು, ದಂತಕತೆಗಳು ಕಟ್ಟಿಕೊಟ್ಟಿದ್ದ ಜಗತ್ತಿಗೆ ಹಿಂತಿರುಗುವುದು ಅಸಾಧ್ಯವೆಂದು ನನಗರ್ಥವಾಗಿದೆ. ಇಂದಿನ ದಿನಗಳಲ್ಲಿ ಕತೆಯು ಹಲವು ಆಯಾಮಗಳನ್ನೊಳಗೊಂಡಿದ್ದು ಹೆಚ್ಚು ಸಂಕೀರ್ಣವಾಗಿರಬೇಕು. ಬಹುದೂರದಲ್ಲಿರುವ ವಸ್ತುಗಳ ನಡುವೆಯೂ ಅಚ್ಚರಿಗೊಳಿಸುವಂತಹ ಸಂಬಂಧವಿರುವುದು ನಮಗೆ ತಿಳಿದಿದೆ.

ಇತಿಹಾಸದ ನಿರ್ದಿಷ್ಟ ಕ್ಷಣವೊಂದನ್ನು ಹತ್ತಿರದಿಂದ ಗಮನಿಸೋಣ. ಅಂದು ಆಗಸ್ಟ್‌ 3, 1492, ಸಂತ ಮರಿಯಾ ಎನ್ನುವ ಸಣ್ಣ ಹಡಗು ಸ್ಪೇನ್‌ನ ಪಾಲೋಸ್‌ ಬಂದರಿನಿಂದ ಹೊರಟಿತು. ಕ್ರಿಸ್ಟೋಫರ್‌ ಕೊಲಂಬಸ್‌ ಆ ಹಡಗಿನ ನೇತೃತ್ವ ವಹಿಸಿದ್ದ. ಸೂರ್ಯ ಉರಿಯುತ್ತಿದ್ದಾನೆ. ನಾವಿಕರು ಬಂದರಿನಲ್ಲಿ ಓಡಾಡುತ್ತಿದ್ದಾರೆ. ಕೂಲಿಗಳು ಸಾಮಾನುಗಳನ್ನು ಹಡಗಿಗೆ ತುಂಬುತ್ತಿದ್ದಾರೆ. ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ತಮ್ಮವರನ್ನು ಬೀಳ್ಕೊಡಲು ಬಂದಿದ್ದವರು ಬಿಸಿಲಿನಲ್ಲಿ ಸುಸ್ತಾಗಿ ಬೀಳದಂತೆ ಆ ಗಾಳಿ ತಡೆಯುತ್ತಿದೆ. ಕಡಲ ಕಾಗೆಗಳು ಅಲ್ಲಲ್ಲೇ ಗಿರಕಿ ಹೊಡೆಯುತ್ತಾ ಸೂಕ್ಷ್ಮವಾಗಿ ಮನುಷ್ಯರ ಚಟುವಟಿಕೆಗಳನ್ನು ಗಮನಿಸುತ್ತಿವೆ.

ಇಷ್ಟು ವರ್ಷಗಳ ನಂತರ ನಾವು ನೋಡುತ್ತಿರುವ ಆ ಕ್ಷಣದಲ್ಲಿ ಅಮೆರಿಕೆಯ ಸುಮಾರು 60 ಮಿಲಿಯನ್‌ ಸ್ಥಳೀಯರಲ್ಲಿ 56 ಮಿಲಿಯನ್‌ ಮಂದಿ ಸಾವನ್ನಪ್ಪಿದರು. ಆಗಿನ ಕಾಲಕ್ಕೆ ಆ ಜನಸಂಖ್ಯೆ ಜಗತ್ತಿನ ಶೇ. 10ರಷ್ಟಿತ್ತು. ಯುರೋಪಿಯನ್ನರು ಅವರಿಗೆ ಗೊತ್ತಿಲ್ಲದೆ ಕೆಲವು ಉಡುಗೊರೆಗಳನ್ನು ಹೊತ್ತುತಂದರು. ಅಮೆರಿಕಾದ ಮೂಲನಿವಾಸಿಗಳಿಗೆ ಈ ರೋಗಗಳು ಮತ್ತು ಬ್ಯಾಕ್ಟಿರಿಯಾಗಳನ್ನು ಎದುರಿಸುವ ನಿರೋಧಕ ಶಕ್ತಿಯಿರಲಿಲ್ಲ. ಅದರೊಂದಿಗೆ ನಿರ್ದಯವಾದ ದಬ್ಬಾಳಿಕೆಗಳು, ಹತ್ಯೆಗಳನ್ನು ಎದುರಿಸಬೇಕಾಯಿತು. ಈ ಮೂಲೋತ್ಪಾಟನೆಯು ವರ್ಷಗಳವರೆಗೆ ಮುಂದುವರಿದು ಭೂಮಿಯ ಸ್ವರೂಪವನ್ನೇ ಬದಲಿಸಿತು. ಒಂದು ಕಾಲದಲ್ಲಿ ಹುರುಳಿ, ಜೋಳ, ಆಲೂಗಡ್ಡೆ, ಟೊಮೊಟೊ ಬೆಳೆಯುತ್ತಿದ್ದ ನೀರಾವರಿ ಹೊಂದಿದ್ದ ಭೂಮಿಯಲ್ಲಿ ಕಾಡಿನ ಬೆಳೆಗಳು ಬೆಳೆದವು. ಕೆಲವೇ ವರ್ಷಗಳಲ್ಲಿ, ಸುಮಾರು 150 ಮಿಲಿಯನ್ ಎಕರೆ ಕೃಷಿಯೋಗ್ಯ ಭೂಮಿ ಕಾಡಾಗಿ ಬದಲಾಯಿತು. ಕಾಡು ಬೆಳೆದಂತೆ ಇಂಗಾಲದ ಪ್ರಮಾಣವು ತಗ್ಗಿತು. ಪರಿಣಾಮವಾಗಿ ಜಾಗತಿಕ ತಾಪಮಾನವು ತಗ್ಗಿತು.

ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಹವಾಮಾನವು ತಂಪಾಗಿ ಕಿರು ಹಿಮಯುಗ ಸೃಷ್ಟಿಯಾದದ್ದನ್ನು ವಿವರಿಸಲು ಬಳಸಲಾದ ಹಲವು ವೈಜ್ಞಾನಿಕ ಕಾರಣಗಳಲ್ಲಿ ಇದೂ ಒಂದು. ಕಿರು ಹಿಮಯುಗವು ಯುರೋಪಿನ ಆರ್ಥಿಕತೆಯನ್ನೇ ಬದಲಿಸಿತು. ನಂತರದ ದಶಕಗಳಲ್ಲಿ, ದೀರ್ಘವಾದ, ಹೆಪ್ಪುಗಟ್ಟಿದ ಚಳಿಗಾಲಗಳು, ತಂಪಾದ ಬೇಸಿಗೆಗಳು, ತೀವ್ರಗೊಂಡ ಮಳೆ ಹಾಗೂ ಹಿಮಪಾತಗಳು ಸಾಂಪ್ರದಾಯಿಕ ಕೃಷಿಯ ಇಳುವರಿಯನ್ನು ಕಡಿಮೆಗೊಳಿಸಿದವು. ಪಶ್ಚಿಮ ಯುರೋಪಿನಲ್ಲಿನ ಸಣ್ಣ ಕುಟುಂಬಗಳು ತಮ್ಮ ಜಮೀನಿನಲ್ಲಿ ಮನೆ ಅಗತ್ಯಕ್ಕಾಗಿ ಆಹಾರ ಬೆಳೆದುಕೊಳ್ಳುತ್ತಿದ್ದವರು ಅಸಮರ್ಥರಾಗಿಬಿಟ್ಟರು. ಬರಗಾಲಗಳು ಅಪ್ಪಳಿಸಿದ್ದರಿಂದ, ಉತ್ಪಾದನೆಯಲ್ಲಿ ವಿಶೇಷ ಪರಿಣಿತಿ ಗಳಿಸುವುದು ಅಗತ್ಯವಾಯಿತು. ತಂಪಾದ ಹವಾಮಾನವು ಇಂಗ್ಲೆಂಡ್‌ ಮತ್ತು ಹಾಲೆಂಡುಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಅವರು ಇನ್ನುಮುಂದೆ ತಮ್ಮ ಆರ್ಥಿಕತೆಗೆ ಕೇವಲ ಕೃಷಿಯನ್ನು ಅವಲಂಬಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ಚಂಡಮಾರುತಗಳ ಭಯದಿಂದ ಡಚ್ಚರು ತಗ್ಗು ಪ್ರದೇಶಗಳು, ಜವುಗು ಪ್ರದೇಶಗಳನ್ನು ಒಣಭೂಮಿಯಾಗಿಸಿದರು. ಸ್ಕ್ಯಾಂಡಿನೇವಿಯಾದಲ್ಲಿ ಘಟಿಸಿದ ದುರಂತದಿಂದ ಇಂಗ್ಲೆಂಡ್‌ ಮತ್ತು ಹಾಲೆಂಡುಗಳಿಗೆ ಅನುಕೂಲವಾಯಿತು. ಇದರಿಂದಾಗಿ ಆ ದೇಶಗಳು ನೌಕಾವಲಯ ಮತ್ತು ವಾಣಿಜ್ಯವಲಯದಲ್ಲಿ ಅಭಿವೃದ್ಧಿ ಹೊಂದಿದವು. 

ಗ್ರೀನ್‌ಲ್ಯಾಂಡ್‌ ಮತ್ತು ಐಸ್‌ಲ್ಯಾಂಡ್‌ಗಳ ನಡುವೆ ಸಂಪರ್ಕ ಕಡಿದುಹೋಯಿತು. ತೀವ್ರ ಚಳಿಗಾಲಗಳಿಂದ ಬೆಳೆಹಾನಿಯಾಗಿ ಕ್ಷಾಮ ತಲೆದೋರಿತು. ಆಗ ಸ್ವೀಡನ್‌ ದುರಾಸೆಯಿಂದ ದಕ್ಷಿಣದತ್ತ ತಿರುಗಿ ಪೋಲೆಂಡ್‌ ವಿರುದ್ಧ ಯುದ್ಧ ಸಾರಿತು (ಬಾಲ್ಟಿಕ್‌ ಸಮುದ್ರವು ಹೆಪ್ಪುಗಟ್ಟಿದ್ದರಿಂದ ಸೈನ್ಯವನ್ನು ಅದರ ಮೇಲೆ ಕೊಂಡೊಯ್ಯಲು ಸುಲಭವಾಯಿತು). ಇದರಿಂದಾಗಿ ಯುರೋಪ್‌ ಮೂವತ್ತು ವರ್ಷ ಯುದ್ಧದಲ್ಲಿ ಮುಳುಗಬೇಕಾಯಿತು. 

ವಾಸ್ತವ ಪರಿಸ್ಥಿತಿಯು ಹಲವು ಪ್ರಭಾವಗಳ ಫಲಶೃತಿ ಎನ್ನುವುದನ್ನು ನಮಗೆ ಉತ್ತಮ ರೀತಿಯಲ್ಲಿ ಅರ್ಥಮಾಡಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಾರೆ. ಇದು “ಚಿಟ್ಟೆ ಪರಿಣಾಮ” (ಬಟರ್‌ಫ್ಲೈ ಎಫೆಕ್ಟ್‌) ಎಂದು ಜನಪ್ರಿಯವಾಗಿರುವ ಸಿದ್ಧಾಂತದಷ್ಟು ಸರಳವಲ್ಲ. ಇದರನ್ವಯ ಸಣ್ಣಾತಿಸಣ್ಣ ಬದಲಾವಣೆಗಳು ಭವಿಷ್ಯದಲ್ಲಿ ಮಹತ್ತರವಾದ ಅನಿರೀಕ್ಷಿತ ಫಲಿತಾಂಶಗಳಿಗೆ ಕಾರಣವಾಗಬಹುದು. ಆದರೆ, ಇಂದು ಅಸಂಖ್ಯಾತ ಚಿಟ್ಟೆಗಳಿದ್ದು ನಿರಂತರವಾಗಿ ಬಡಿಯುತ್ತಿರುವ ಅವುಗಳ ರೆಕ್ಕೆಗಳ ಚಲನೆಯು ಕಾಲಾಂತರದ ಮೂಲಕ ಶಕ್ತಿಶಾಲಿ ಅಲೆಯನ್ನು ಎಬ್ಬಿಸುವಷ್ಟು ಸಮರ್ಥವಾಗಿದೆ.

ನನ್ನ ಪ್ರಕಾರ “ಚಿಟ್ಟೆ ಪರಿಣಾಮ”ದ ಆವಿಷ್ಕಾರವು ನಾವೇ ಶ್ರೇಷ್ಠ, ನಾವು ಎಲ್ಲವನ್ನೂ ನಿಯಂತ್ರಿಸಬಲ್ಲೆವು ಎನ್ನುವ ನಂಬಿಕೆಯ ಯುಗದ ಅಂತ್ಯ. ಇದು ಮಾನವ ಕುಲದ ನಿರ್ಮಾತೃ, ಆವಿಷ್ಕಾರಕ ಶಕ್ತಿಯನ್ನು ಕಸಿದುಕೊಳ್ಳುವುದಿಲ್ಲ ಆದರೂ, ನಾವು ಈ ಪ್ರಕ್ರಿಯೆಯ ಅತಿಸಣ್ಣ ಭಾಗ ಮಾತ್ರ ಎನ್ನುವ ಸಂಕೀರ್ಣ ವಾಸ್ತವದ ಅರಿವು ಮೂಡಿಸುತ್ತದೆ. ಜಗತ್ತಿನಾದ್ಯಂತ ಕೆಲವು ಅದ್ಭುತವಾದ, ಮತ್ತೆ ಕೆಲವೊಮ್ಮೆ ಅಚ್ಚರಿ ಎನಿಸುವಂತಹದ್ದು ಏನೇನೋ ಇವೆ ಎನ್ನುವುದಕ್ಕೆ ಪುರಾವೆಗಳಿವೆ. 

ನಾವೆಲ್ಲರೂ ಅಂದರೆ ಮನುಷ್ಯರು, ಗಿಡಗಳು, ಪ್ರಾಣಿಗಳು, ವಸ್ತುಗಳು ಎಲ್ಲರೂ ಭೌತಶಾಸ್ತ್ರದ ನಿಯಮಗಳಿಗೆ ಬದ್ಧವಾದ ಪ್ರದೇಶವೊಂದರಲ್ಲಿ ಇದ್ದೇವೆ. ಈ ಪ್ರದೇಶಕ್ಕೆ ಅದರದೇ ಆದ ರೂಪವಿದ್ದು, ಭೌತಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ ಹಲವಾರು ರೂಪಗಳನ್ನು ತನ್ನೊಳಗೆ ಸೃಜಿಸಿದೆ. ಇವೆಲ್ಲವೂ ಒಂದರೊಡನೊಂದು ಸಂಬಂಧ ಹೊಂದಿದೆ. ಹೃದಯನಾಳಗಳ ವ್ಯವಸ್ಥೆಯು ನದಿಯ ಜಲಾನಯನ ಪ್ರದೇಶದಂತಿದೆ, ಎಲೆಗಳ ರಚನೆ ನಮ್ಮ ಸಾರಿಗೆ ವ್ಯವಸ್ಥೆಯಂತಿದೆ, ನಕ್ಷತ್ರಕೂಟಗಳ ಚಲನೆಯು ನಮ್ಮ ವಾಶ್‌ಬೇಸಿನ್‌ಗಳಲ್ಲಿ ಹರಿಯುವ ನೀರಿನ ಸುಳಿಯಂತಿದೆ. ಸಮಾಜಗಳು ಬ್ಯಾಕ್ಟೀರಿಯಾಗಳಂತೆ ಅಭಿವೃದ್ಧಿ ಹೊಂದುತ್ತವೆ. ಈ ಬಗೆಯ ಸಣ್ಣ ಮತ್ತು ದೊಡ್ಡ ಅಂತ್ಯವಿಲ್ಲದ ವ್ಯವಸ್ಥೆಗಳಲ್ಲಿ ಸಾಮ್ಯತೆಗಳಿವೆ. ನಮ್ಮ ಮಾತು, ಚಿಂತನೆ ಮತ್ತು ಸೃಜನಶೀಲತೆಯು ಪ್ರಪಂಚದಿಂದ ದೂರವಾದ ಅಮೂರ್ತ ಸಂಗತಿಗಳಲ್ಲ. ಬದಲಿಗೆ ಅವು ರೂಪಾಂತರಗಳ ಅಂತ್ಯವಿಲ್ಲದ ಪ್ರಕ್ರಿಯೆಗಳ ಮತ್ತೊಂದು ಹಂತದ ಮುಂದುವರಿಕೆಯಾಗಿದೆ.

6

ಈ ದಿನಗಳಲ್ಲಿ ಸಾರ್ವತ್ರಿಕವಾದಂತಹ, ಸಮಗ್ರವಾಗಿ ಎಲ್ಲವನ್ನೂ ಹಿಡಿದಿಡಬಲ್ಲಂತಹ, ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವಂತಹ, ಸಂದರ್ಭಗಳಿಂದ ಇಡಿಕಿರಿದಿರುವ ಇಷ್ಟೆಲ್ಲ ಇದ್ದೂ ಅರ್ಥವಾಗುವಂತಹ ಕತೆಗಳಿರಲು ಸಾಧ್ಯವೇ ಎಂದು ಅಚ್ಚರಿಯಾಗುತ್ತಿದೆ. ಸ್ವದ ಸೆರೆಗಳನ್ನು ಮೀರಿದ, ವಿಸ್ತೃತ ವಾಸ್ತವತೆಯನ್ನು, ಪರಸ್ಪರದ ಸಂಪರ್ಕ ಕೊಂಡಿಗಳನ್ನು ತೆರೆದಿಡುವಂತಹ ಕತೆ ಇರಬಹುದೆ? ಎಲ್ಲರಿಗೂ ಒಪ್ಪಿತವಾದಂತಹ ಅಭಿಪ್ರಾಯಗಳಿಂದ ದೂರವಾಗಿ ವಿಷಯ ಅಥವ ವಸ್ತುಗಳನ್ನು ಭಿನ್ನವಾಗಿ ನೋಡಲು ಸಾಧ್ಯವೆ?

ಸಾಹಿತ್ಯವು ಎಲ್ಲ ಬಗೆಯ ವಿಲಕ್ಷಣತೆಗಳು, ಮಾಯಾಜಾಲ, ಪ್ರಚೋದನೆ, ವಿಡಂಬನೆ ಮತ್ತು ಹುಚ್ಚುತನದ ಹಕ್ಕನ್ನು ಅದ್ಭುತವಾಗಿ ತನ್ನಲ್ಲೇ ಉಳಿಸಿಕೊಂಡಿದೆ ಎನ್ನುವುದೇ ನನಗೆ ಖುಷಿ ಕೊಡುತ್ತದೆ. ನಮ್ಮ ನಿರೀಕ್ಷೆಯನ್ನು ಮೀರಿ ದೂರ ಸಾಗುವಂತಹ ಸಂದರ್ಭಗಳಿರುವ ವಿಶಾಲ ದೃಷ್ಟಿಕೋನಗಳ ಕನಸು ಕಾಣುತ್ತೇನೆ. ಅಸ್ಪಷ್ಟವಾದ ಅಂತಃಪ್ರಜ್ಞೆಯನ್ನು ಅಭಿವ್ಯಕ್ತಿಸಬಲ್ಲಂತಹ ಭಾಷೆಯ ಕನಸು ಕಾಣುತ್ತೇನೆ, ಸಾಂಸ್ಕೃತಿಕ ಭಿನ್ನತೆಗಳನ್ನು ಮೀರುವಂತಹ ರೂಪಕಗಳ ಕನಸು ಕಾಣುತ್ತೇನೆ. ಕೊನೆಯದಾಗಿ, ವಿಶಾಲ ಭಿತ್ತಿಯ ಆಕ್ರಮಣಕಾರಿಯಾಗಬಲ್ಲ ಪ್ರಕಾರವಾಗಿದ್ದೂ ಓದುಗರಿಗೆ ಇಷ್ಟವಾಗುವಂತಹದ್ದರ ಕನಸು ಕಾಣುತ್ತೇನೆ. 

ಹೊಸ ರೀತಿಯ ನಿರೂಪಕನ ಕನಸು ಕಾಣುತ್ತೇನೆ. ಈ ನಿರೂಪಕ “ಉತ್ತಮ, ಮಧ್ಯಮ, ಪ್ರಥಮ” ಪುರುಷದಲ್ಲಿ ಮಾತನಾಡುವುದಿಲ್ಲ. ಆ ನಿರೂಪಕ ವ್ಯಾಕರಣದ ನಿಯಮಗಳಿಗೆ ಹೊರತು. ಅವನು ಎಲ್ಲ ಪಾತ್ರಗಳ ದೃಷ್ಟಿಕೋನವನ್ನು ಒಳಗೊಂಡಿರುತ್ತಾನೆ, ಅದನ್ನು ಮೀರಿ ಮುಂದೆ ಹೋಗುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಅವನು ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು ಕಾಲವನ್ನು ಮೀರಬಲ್ಲವನಾಗಿರುತ್ತಾನೆ. ಹೌದು, ಇಂತಹ ನಿರೂಪಕರು ಇರಲು ಸಾಧ್ಯವಿದೆ. 

“ಆರಂಭದಲ್ಲೊಂದು ಪದವಿತ್ತು,” ಎಂದು ಏರುದನಿಯಲ್ಲಿ ಹೇಳಿದ ಬೈಬಲ್ಲಿನಲ್ಲಿ ಬರುವ ಆ ಕತೆ ಹೇಳುವವನ ಬಗ್ಗೆ ಎಂದಾದರೂ ಅಚ್ಚರಿಯಾಗಿದೆಯೇ? ವ್ಯವಸ್ಥೆಗಳು ಅಸ್ತವ್ಯಸ್ಥವಾದ ಆ ಮೊದಲ ದಿನವನ್ನು, ವಿಶ್ವ ಸೃಷ್ಟಿಯಾದದ್ದನ್ನು ವರ್ಣಿಸಿದ ಆ ನಿರೂಪಕ ಯಾರು? ವಿಶ್ವದ ಹುಟ್ಟನ್ನು ಆರಂಭದಿಂದಲೂ ಗಮನಿಸುತ್ತಿರುವವರು ಯಾರು? ದೇವರ ಆಲೋಚನೆಯನ್ನು ತಿಳಿದವನಿಗೆ ಅವನ ಅನುಮಾನಗಳು ತಿಳಿದಿತ್ತೇ? “ಅದು ಒಳ್ಳೆಯದು ಎಂದು ದೇವರಿಗೆ ಅನ್ನಿಸಿತು,” ಎಂದು ಕಾಗದದ ಮೇಲೆ ಆ ಅಚ್ಚರಿಯ ವಾಕ್ಯವನ್ನು ಬರೆದಿರಬಹುದೇ? ದೇವರ ಈ ಆಲೋಚನೆಯನ್ನು ತಿಳಿದವನು ಯಾರು? 

ಈ ಮತಧರ್ಮಗಳ ಅನುಮಾನಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಈ ನಿರೂಪಕನ ಪಾತ್ರವು ಮಹತ್ವದ್ದು. ಇದು ಎಲ್ಲವನ್ನೂ ನೋಡಬಹುದಾದ ದೃಷ್ಟಿಕೋನ. ಎಲ್ಲವನ್ನೂ ನೋಡುವುದು ಎಂದರೆ ಎಲ್ಲ ವಸ್ತುಗಳ ನಡುವೆ ಪರಸ್ಪರ ಸಂಬಂಧವಿದೆ ಎನ್ನುವ ಆತ್ಯಂತಿಕ ಸತ್ಯವನ್ನು ಅರಿಯುವುದು. ಹೀಗೆ ಎಲ್ಲವನ್ನೂ ನೋಡುವುದು ಜಗತ್ತಿನ ಕಡೆಗಿನ ಜವಾಬ್ದಾರಿಯನ್ನು ಭಿನ್ನವಾಗಿಸುತ್ತದೆ. ಏಕೆಂದರೆ “ಇಲ್ಲಿ” ಇರುವುದು “ಅಲ್ಲಿ” ಕೂಡ ಇದೆ ಎಂದಾಗ ಜಗತ್ತಿನ ಒಂದು ಭಾಗದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತೊಂದು ಭಾಗದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, “ನನ್ನದು” “ನಿನ್ನದು” ಎನ್ನುವ ಭೇದ/ವ್ಯತ್ಯಾಸಗಳೇ ಚರ್ಚಾಸ್ಪದವಾಗುತ್ತವೆ. 

ಆದ್ದರಿಂದ ಓದುಗರ ಮನಸ್ಸಿನಲ್ಲಿ ಸಮಗ್ರ ಎನ್ನುವಂತಹ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಕತೆಗಳನ್ನು ಪ್ರಾಮಾಣಿಕವಾಗಿ ಹೇಳುವುದು ಉತ್ತಮ. ಇದು ತುಣುಕಗಳನ್ನು ಒಟ್ಟುಗೂಡಿಸಿ ನೋಡುವ ಓದುಗರ ಸಾಮರ್ಥ್ಯವನ್ನು ಉದ್ದೀಪಿಸಿ ಎಲ್ಲ ಘಟನೆಗಳು ಒಂದೇ ಗುಂಪಿಗೆ ಸೇರಿದವು ಎನ್ನುವುದನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಪ್ರತಿಯೊಬ್ಬರು, ಪ್ರತಿಯೊಂದು ಒಂದೇ ಕಲ್ಪನೆಯ ಮೂಸೆಯಲ್ಲಿರಳಿದ್ದು, ನಮ್ಮ ಮನಸಿನ ಭಾವನೆಗಳು ಇದಕ್ಕೆ ಕೊಡುಗೆ ನೀಡುತ್ತವೆ ಎನ್ನುವುದನ್ನು ಸ್ಪಷ್ಟಗೊಳಿಸುವಂತಹ ಕತೆ ಹೇಳಬೇಕು. 

ಸಾಹಿತ್ಯಕ್ಕೆ ಇದನ್ನು ಸಾಧಿಸಲು ಸಾಧ್ಯ. ನಾವು ಸಾಹಿತ್ಯವನ್ನು ಘನವಾದ ಸಾಹಿತ್ಯ, ಲಘು ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಂದೆಲ್ಲ ವರ್ಗೀಕರಿಸುವುದನ್ನು ಬಿಡಬೇಕು. ಪ್ರಕಾರಗಳನ್ನು ಗಂಭೀರವಾಗಿ ಪರಿಗಣಿಸಬಾರದು. ನಾವೆಲ್ಲ ರಚಿಸುತ್ತಿರುವುದು ವಿಶ್ವ ಸಾಹಿತ್ಯ ಎನ್ನುವುದನ್ನು ಅರಿತು “ರಾಷ್ಟ್ರೀಯ ಸಾಹಿತ್ಯ” ಎನ್ನುವಂತಹ ವ್ಯಾಖ್ಯಾನಗಳನ್ನು ಕೈಬಿಡಬೇಕು. ಯುನಸ್‌ ಮುಂಡಸ್‌ * ಲ್ಯಾಟಿನ್‌ ಭಾಷೆಯಲ್ಲಿ ಒಂದು ಜಗತ್ತು ಎಂದರ್ಥ. ಎಲ್ಲವೂ ಒಂದೇ ಮೂಲದಿಂದ ಹುಟ್ಟಿದ್ದು ಎನ್ನುವ ಪರಿಕಲ್ಪನೆ ಎನ್ನುವುದೊಂದು ಮನೋವಾಸ್ತವವಾಗಿದ್ದು ಅದರಲ್ಲಿ ನಮ್ಮೆಲ್ಲ ಅನುಭವಗಳು ಬೆರೆತಿವೆ. ಲೇಖಕಿ/ಕರು ಮತ್ತು ಓದುಗರು ಸಮಾನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಲೇಖಕ ಸೃಷ್ಟಿಸಿದರೆ ಓದುಗ ಅದನ್ನು ವ್ಯಾಖ್ಯಾನಿಸುತ್ತಾನೆ. 

ತುಣುಕಗಳು ಒಟ್ಟಾಗಿ ಹೆಚ್ಚಿನದನ್ನು ಸಂಕೀರ್ಣವಾಗಿ, ಬಹು ಆಯಾಮಗಳೊಂದಿಗೆ ವಿವರಿಸಬಲ್ಲದು. ನಮ್ಮ ಕತೆಗಳು ಒಬ್ಬರನ್ನೊಬ್ಬರನ್ನು ಅಸಂಖ್ಯ ರೀತಿಯಲ್ಲಿ ಒಳಗೊಂಡಿರುತ್ತವೆ. ಕೇಂದ್ರಪಾತ್ರಗಳು ಒಂದರೊಡನೊಂದು ಸಂಬಂಧ ಹೊಂದಿರುತ್ತವೆ. 

ವಾಸ್ತವವಾದವನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಬೇಕಾಗಿದೆ. ನಮ್ಮ ಅಹಂಕಾರದ ಮಿತಿಗಳನ್ನು ಮೀರಿ ಜಗತ್ತನ್ನು ನೋಡುವಂತಹ ಹೊಸ ದೃಷ್ಟಿಕೋನವೊಂದನ್ನು ಹುಡುಕಬೇಕಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲವು ವಾಸ್ತವದ ಅಗತ್ಯಗಳನ್ನು ಪೂರೈಸುತ್ತಿವೆ. ಇದು ಒಂದು ರೀತಿಯಲ್ಲಿ ಹೊಸ ಬಗೆಯ ಅತಿವಾಸ್ತವತೆಯಾಗಿದ್ದು (ನಿಯೊ ಸರ್ರಿಯಲಿಸಂ) ಈ ಮರುರೂಪಿತ ದೃಷ್ಟಿಕೋನವು ವಿರೋಧಭಾಸವನ್ನು ಎದುರಿಸಬೇಕಾದರೂ ಹಿಮ್ಮೆಟ್ಟುವುದಿಲ್ಲ. ಕಾರಣ-ಪರಿಣಾಮಗಳಿಗೆ ವ್ಯತಿರಿಕ್ತವಾಗಿ ಬೇಕಾದರೂ ಇರಬಲ್ಲದು. ನಮ್ಮ ವಾಸ್ತವವು ಈಗಾಗಲೇ ಅತಿವಾಸ್ತವ (ಸರ್ರಿಯಲ್‌) ಎನ್ನುವಂತೆ ಆಗಿದೆ. ಹಲವಾರು ಕತೆಗಳನ್ನು ಹೊಸ ಬೌದ್ಧಿಕ ಸಂದರ್ಭಕ್ಕೆ ತಕ್ಕಂತೆ ಹೊಸ ವೈಜ್ಞಾನಿಕ ಸಿದ್ಧಾಂತಗಳಿಂದ ಸ್ಫೂರ್ತಿ ಪಡೆದು ಮತ್ತೆ ಬರೆಯಬೇಕಿದೆ. ಪುರಾಣ ಹಾಗೂ ಸಮಸ್ತ ಮನುಷ್ಯ ಕಲ್ಪನೆಯನ್ನು ಗಮನಿಸುವುದು ಅಗತ್ಯ. ಪುರಾಣಗಳ ರಚನೆಗಳಿಗೆ ಹಿಂತಿರುಗುವ ಮೂಲಕ ಇಂದಿನ ಕೊರತೆಗಳ ದಿನಗಳಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬಹುದು. ಪುರಾಣಗಳು ನಮ್ಮ ಮನಸ್ಸನ್ನು ರೂಪಿಸಬಲ್ಲದು, ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ (ಅದರ ಪ್ರಭಾವದ ಬಗ್ಗೆ ನಮ್ಮಲ್ಲಿ ಹಲವರಿಗೆ ತಿಳಿದಿಲ್ಲದಿರಬಹುದು) ಎನ್ನುವುದು ನನ್ನ ನಂಬಿಕೆ. 

ನಿಸ್ಸಂದೇಹವಾಗಿ ಸದ್ಯದಲ್ಲೇ ಅಸಾಧ್ಯ ಪ್ರತಿಭೆಯೊಂದು ಕಾಣಿಸಿಕೊಳ್ಳಬಹುದು. ಸಂಪೂರ್ಣವಾಗಿ ಭಿನ್ನವಾದದ್ದನ್ನು ನಿರ್ಮಿಸಬಲ್ಲಂತಹ, ಕಲ್ಪನೆಗೂ ನಿಲುಕದ ನಿರೂಪಣೆಯನ್ನು ಕಟ್ಟಬಲ್ಲಂತಹ ಸಾಮರ್ಥ್ಯ ಇರುವಂತಹದ್ದು ಹೀಗೆ ಅಗತ್ಯವಾದ ಎಲ್ಲವೂ ಇರುವಂತಹದ್ದು ಕಾಣಿಸಿಕೊಳ್ಳಬಹುದು. ಈ ರೀತಿಯ ಕತೆ ಹೇಳುವ ವಿಧಾನ ನಮ್ಮನ್ನು ಬದಲಿಸುತ್ತದೆ. ನಾವು ನಮ್ಮ ಹಳೆಯ, ಸಂಕುಚಿತ ದೃಷ್ಟಿಕೋನಗಳನ್ನು ಬಿಟ್ಟು ಹೊಸದಕ್ಕೆ ತೆರೆದುಕೊಳ್ಳುತ್ತೇವೆ. ಎಂದಿನಿಂದಲೂ ಅದು ಇಲ್ಲೇ ಇದ್ದರೂ ನಾವದಕ್ಕೆ ಕುರುಡಾಗಿದ್ದೆವು. 

ಡಾಕ್ಟರ್ ಫೌಸ್ಟಸ್ ನಲ್ಲಿ ಥಾಮಸ್ ಮನ್ ಮನುಷ್ಯ ಚಿಂತನೆಯನ್ನು ಬದಲಾಯಿಸುವ ಸಾಮರ್ಥ್ಯವಿರುವ ಪರಿಪೂರ್ಣ ಸಂಗೀತದ ಹೊಸ ರೂಪವನ್ನು ರೂಪಿಸಿದ ಸಂಯೋಜಕನ ಬಗ್ಗೆ ಬರೆದಿದ್ದಾನೆ. ಆದರೆ, ಮನ್‌ ಆ ಸಂಗೀತ ಯಾವುದನ್ನು ಆಧರಿಸಿದೆ ಎಂದು ವಿವರಿಸಿಲ್ಲ. ಅದು ಹೇಗಿರಬಹುದು ಎನ್ನುವುದರ ಕಲ್ಪನೆಯನ್ನಷ್ಟೇ ಹೇಳಿದ್ದಾನೆ. ಅಸ್ತಿತ್ವದಲ್ಲಿ ಇರುಬಹುದಾದ ಯಾವುದೋ ಒಂದರ ಮುನ್ಸೂಚನೆಯನ್ನು ಕೊಡುವುದು, ಅದನ್ನು ಕಲ್ಪಿಸಿಕೊಳ್ಳುವುದು – ಇದನ್ನೇ ಕಲಾವಿನ ಪಾತ್ರ ಆಧರಿಸಿದೆ. ಕಲ್ಪಿಸಿಕೊಳ್ಳುವುದೇ ಇರುವಿಕೆಯ ಮೊದಲ ಹಂತ.

7

ನಾನು ಕತೆಗಳನ್ನು ಬರೆಯುತ್ತೇನೆ. ಆದರೆ, ಅವು ಎಂದೂ ಕೇವಲ ಕಾಲ್ಪನಿಕವಲ್ಲ. ನಾನು ಬರೆಯುವಾಗ ಎಲ್ಲವನ್ನೂ ನನ್ನೊಳಗೆ ಅನುಭವಿಸುತ್ತೇನೆ. ಪುಸ್ತಕದೊಳಗೆ ಬರುವ ಎಲ್ಲ ಜೀವಿಗಳು, ವಸ್ತುಗಳನ್ನು ನನ್ನೊಳಗೆ ಹಾಯಲು ಬಿಡುತ್ತೇನೆ. ಮಾನುಷವಾದದ್ದು, ಮನುಷ್ಯನನ್ನು ಮೀರಿದ್ದು, ಜೀವಂತವಾಗಿರುವುದು, ನಿರ್ಜೀವವಾದದ್ದು ಎಲ್ಲವನ್ನೂ ನನ್ನೊಳಗೆ ಹಾಯಲು ಬಿಡುತ್ತೇನೆ. ನಾನು ಪ್ರತಿಯೊಂದು ವಸ್ತು, ವ್ಯಕ್ತಿಯನ್ನು ಹತ್ತಿರದಿಂದ ಗಮನಿಸಬೇಕು. ಅದೆಲ್ಲವನ್ನೂ ನನ್ನೊಳಗೆ ಮೂರ್ತೀಕರಿಸಿಕೊಳ್ಳಬೇಕು, ವೈಯಕ್ತೀಕರಿಸಿಕೊಳ್ಳಬೇಕು. 

ಇಲ್ಲಿಯೇ ಸುಕೋಮಲ ಭಾವವು ನನಗೆ ನೆರವು ನೀಡುತ್ತದೆ. ಏಕೆಂದರೆ ಸುಕೋಮಲ ಭಾವ ಎನ್ನುವುದು ಮೂರ್ತೀಕರಣಗೊಳಿಸಿಕೊಳ್ಳುವ, ಭಾವನೆಗಳನ್ನು ಹಂಚಿಕೊಳ್ಳುವ ಕಲೆ. ಹಾಗಾಗಿ ಅನಂತವಾದ ಸಾಮ್ಯತೆಗಳನ್ನು ಕಂಡುಹಿಡಿಯುವ ಕಲೆ. ಕತೆಗಳನ್ನು ಸೃಷ್ಟಿಸುವುದು ಎಂದರೆ ವಸ್ತುಗಳನ್ನು ಜೀವಂತಗೊಳಿಸುವುದು, ಜನರು ಎದುರಿಸಿದ ಸನ್ನಿವೇಶಗಳು, ನೆನಪುಗಳು, ಮನುಷ್ಯನ ಅನುಭವಗಳನ್ನು ಪ್ರತಿನಿಧಿಸುವಂತಹ ಜಗತ್ತಿನ ಸಣ್ಣ ಸಂಗತಿಗಳಿಗೂ ಅಸ್ತಿತ್ವ ಕಲ್ಪಿಸುವುದು. ಸುಕೋಮಲ ಭಾವವು ತನ್ನ ಸಂಪರ್ಕಕ್ಕೆ ಬಂದ ಎಲ್ಲವನ್ನೂ ವೈಯಕ್ತೀಕರಣಗೊಳಿಸುತ್ತದೆ. ಅದಕ್ಕೊಂದು ಧ್ವನಿ ನೀಡಲು, ಅದರ ಅಸ್ತಿತ್ವಕ್ಕೆ ಅಗತ್ಯವಾದ ಅವಕಾಶ, ಸಮಯವನ್ನು ನೀಡಿ ಅದಕ್ಕೊಂದು ಅಭಿವ್ಯಕ್ತಿ ಕಲ್ಪಿಸುತ್ತದೆ. ಟೀ ಪಾಟ್‌ ಮಾತಾಡುವಂತೆ ಮಾಡಿದ ಆ ಸುಕೋಮಲ ಭಾವಕ್ಕೆ ಧನ್ಯವಾದಗಳು. 

ಸುಕೋಮಲ ಭಾವವು ಪ್ರೀತಿಯ ವಿನೀತ ರೂಪವಾಗಿದೆ. ಇದು ಧರ್ಮಗ್ರಂಥಗಳಲ್ಲಿ ಕಂಡುಬರದಂತಹ ಪ್ರೀತಿಯಾಗಿದ್ದು, ಯಾರೂ ಇದರ ಮೇಲೆ ಪ್ರಮಾಣ ಮಾಡುವುದಿಲ್ಲ, ಯಾರೂ ಇದನ್ನು ಉಲ್ಲೇಖಿಸುವುದಿಲ್ಲ. ಇದು ಯಾವುದೇ ಬಗೆಯ ವಿಶೇಷ ಲಾಂಛನಗಳನ್ನಾಗಲಿ, ಚಿಹ್ನೆಗಳನ್ನಾಗಲಿ ಹೊಂದಿಲ್ಲ. ಇದು ಯಾವುದೇ ಬಗೆಯ ಅಪರಾಧ ಅಥವ ಅಸೂಯೆಗೆ ಕಾರಣವಾಗುವುದಿಲ್ಲ. ನಮ್ಮದಲ್ಲದ “ವ್ಯಕ್ತಿತ್ವ”ದ ಮತ್ತೊಂದು ಜೀವಿಯನ್ನು ಹತ್ತಿರದಿಂದ, ಎಚ್ಚರಿಕೆಯಿಂದ ನೋಡಿದಾಗ ಅದು ಹೇಗಿದೆಯೋ ಹಾಗೆ ಕಾಣುತ್ತದೆ. 

ಸುಕೋಮಲ ಭಾವವು ತಂತಾನೇ ಹುಟ್ಟುವಂತಹ ನಿರಾಸಕ್ತ ಭಾವ. ಇದು ಸಹಾನುಭೂತಿಯನ್ನು ಮೀರಿದ ಭಾವ. ಇದು ಪ್ರಜ್ಞಾಪೂರ್ವಕವಾಗಿದ್ದು ಸ್ವಲ್ಪ ವಿಷಣ್ಣತೆಯಿಂದ ಕೂಡಿದ್ದರೂ, ಒಂದೇ ಬಗೆಯ ವಿಧಿಯನ್ನು ಹಂಚಿಕೊಂಡಿದ್ದಾಗಿದೆ. 

ಸುಕೋಮಲ ಭಾವ ಎಂಬುದು ಮತ್ತೊಂದು ಜೀವಿಯ ಅನನ್ಯ ಸ್ವಭಾವ, ದುಃಖ ತಡೆಯುವ ಶಕ್ತಿ ಇಲ್ಲದಿರುವುದು, ಸಮಯದ ಪರಿಣಾಮಗಳ ಬಗೆಗಿನ ಆಳವಾದ ಭಾವನಾತ್ಮಕ ಕಾಳಜಿಯಾಗಿದೆ. ಸುಕೋಮಲ ಭಾವವು ನಮ್ಮ ನಡುವಿನ ಬಾಂಧವ್ಯಗಳನ್ನು, ಸಾಮ್ಯತೆಗಳನ್ನು, ಸಮಾನತೆಯನ್ನು ಗ್ರಹಿಸುತ್ತದೆ. ಇದು ಜಗತ್ತು ಜೀವಂತವಾಗಿದ್ದು, ಪರಸ್ಪರ ಸಂಪರ್ಕ, ಸಹಕಾರಗಳೊಂದಿಗೆ ಪರಸ್ಪರರ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ತೋರಿಸುತ್ತದೆ.

ಸಾಹಿತ್ಯವು ನಮ್ಮನ್ನು ಹೊರತುಪಡಿಸಿದ ಬೇರಾವುದೇ ಜೀವಿಯ ಬಗೆಗಿನ ಕೋವಲ ಭಾವನೆಯ ಮೇಲೆ ಕಟ್ಟಿರುವುದಾಗಿದೆ. ಇದು ಕಾದಂಬರಿಯ ಮೂಲಭೂತ ಮಾನಸಿಕ ವಿನ್ಯಾಸವಾಗಿದೆ. ಮಾನವ ಸಂವಹನದ ಈ ಮಾಂತ್ರಿಕ ಸಾಧನಕ್ಕೆ ಧನ್ಯವಾದ ಅರ್ಪಿಸಬೇಕು. ನಮ್ಮ ಅನುಭವವು ಕಾಲವನ್ನು ಮೀರಿ ಪಯಣಿಸಬಹುದು, ಇನ್ನೂ ಹುಟ್ಟದೇ ಇರುವವರನ್ನು ತಲುಪಬಹುದು. ಆದರೆ, ನಮ್ಮ ಜಗತ್ತಿಗೆ; ಮುಂದೊಂದು ದಿನ ನಾವು ಬರೆದದ್ದನ್ನು, ಹೇಳಿದ ಕತೆಗಳನ್ನು ಯಾರು ತಿರುಗಿ ನೋಡುತ್ತಾರೆ. ಅವರ ಬದುಕು ಹೇಗಿರಬಹುದು ಅಥವ ಅವರು ಹೇಗಿರಬಹುದು ಎನ್ನುವುದರ ಕಲ್ಪನೆ ನನಗಿಲ್ಲ. ನಾನವರ ಬಗ್ಗೆ ಯೋಚಿಸಿದಾಗೆಲ್ಲ ಅಪರಾಧಿ ಪ್ರಜ್ಞೆ ಕಾಡುತ್ತದೆ, ನಾಚಿಕೆಯಾಗುತ್ತದೆ.

ಹವಾಮಾನ ತುರ್ತುಪರಿಸ್ಥಿತಿ, ರಾಜಕೀಯ ಬಿಕ್ಕಟ್ಟುಗಳು ಇವುಗಳ ನಡುವೆ ನಮ್ಮ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇವುಗಳಿಂದ ಜಗತ್ತನ್ನು ಉಳಿಸುವ ಬಗ್ಗೆ ಆತಂಕಿತರಾಗಿದ್ದೇವೆ. ಅದು ಕೇವಲ ಯಾವುದೋ ಅನಿರೀಕ್ಷಿತ ಘಟನೆಗಳ ಅಥವ ವಿಧಿಯ ಫಲಿತಾಂಶವಲ್ಲ. ಬದಲಿಗೆ, ನಿರ್ದಿಷ್ಟ ನಡೆಗಳು, ನಿರ್ಣಯಗಳು – ಆರ್ಥಿಕ, ಸಾಮಾಜಿಕ, ಜಗತ್ತಿನ ಕುರಿತಾದ ದೃಷ್ಟಿಕೋನಗಳಿಗೆ (ಧಾರ್ಮಿಕ ವಿಷಯಗಳನ್ನು ಒಳಗೊಂಡಂತೆ) ಸಂಬಂಧಿಸಿದ್ದು ಎನ್ನುವುದನ್ನು ಮರೆಯುತ್ತೇವೆ. ದುರಾಸೆ, ಪ್ರಕೃತಿಯನ್ನು ಗೌರವಿಸುವುದರಲ್ಲಿ ವಿಫಲರಾಗಿರುವುದು, ಸ್ವಾರ್ಥ, ಕಲ್ಪನೆಯ ಕೊರತೆ, ಕೊನೆಯಿಲ್ಲದ ಪೈಪೋಟಿ, ಜವಾಬ್ದಾರಿಯ ಕೊರತೆ ಇವೆಲ್ಲವೂ ಜಗತ್ತನ್ನು ತುಂಡುಗಳಾಗಿ ಕತ್ತರಿಸಿ, ಬಳಸಿ ಬಿಸಾಡುವ ವಸ್ತುವಿನ ಸ್ಥಿತಿಗೆ ಇಳಿಸಿಬಿಟ್ಟಿದೆ.

ಆದ್ದರಿಂದಲೇ, ಪ್ರಪಂಚವು ಜೀವಂತವಾಗಿದ್ದು, ಅಖಂಡ ಅಸ್ತಿತ್ವವನ್ನು ಹೊಂದಿದ್ದು, ನಮ್ಮ ಕಣ್ಣುಗಳ ಮುಂದೆಯೇ ರೂಪುಗೊಳ್ಳುತ್ತಿದ್ದು ನಾವು ಅದರ ಸಣ್ಣದಾದರೂ ಶಕ್ತಿಶಾಲಿಯಾದ ಭಾಗ ಎನ್ನುವಂತೆ ಕತೆಗಳನ್ನು ಹೇಳಬೇಕು ಎಂದು ನಂಬುತ್ತೇನೆ.

Translated by Jennifer Croft and Antonia Lloyd-Jones


ಅನುವಾದ : ಹೇಮಾ .ಎಸ್
ಕನ್ನಡ ಉಪನ್ಯಾಸಕಿ. ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’, ಅಕಿರಾ ಕುರುಸೋವಾ ಆತ್ಮಕತೆಯ ಅನುವಾದ “ನೆನಪಿನೋಣಿಯಲ್ಲಿ” ಪ್ರಕಟಿತ ಪುಸ್ತಕಗಳು.


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

 

 

ಪ್ರತಿಕ್ರಿಯಿಸಿ