ತಿರುಮಲೇಶ್ ಕಣ್ಣಲ್ಲಿ ವಾಲಸ್ ಸ್ಟೀವನ್ಸ್-ರ ಕಾವ್ಯ

ನಿರೂಪಣೆ ಮತ್ತು ವಾಲಸ್ ಸ್ಟೀವನ್ಸ್-ರ ಕವನಗಳ ಅನುವಾದ: ಎಸ್. ಜಯಶ್ರೀನಿವಾಸ ರಾವ್

ಪ್ರಖ್ಯಾತ ಅಮೇರಿಕನ್ ಕವಿ ವಾಲಸ್ ಸ್ಟೀವನ್ಸ್-ರು 1917-ರಲ್ಲಿ ಬರೆದ ಕವನ ‘ಥಟೀನ್ ವೇಸ್ ಆಫ಼್ ಲುಕಿಂಗ್ ಆ್ಯಟ್ ಅ ಬ್ಲ್ಯಾಕ್‌ಬರ್ಡ್’ (Thirteen Ways of Looking at a Blackbird) ನಂತರದ ವರುಷಗಳಲ್ಲಿ ಅಮೇರಿಕನ್ ಇಂಗ್ಲಿಷ್ ಸಾಹಿತ್ಯದ ಒಂದು ‘ಐಕಾನಿಕ್’ ಕವನವದ ಮಟ್ಟಕ್ಕೆ ಏರಿತು. ವಿಶ್ವಸಾಹಿತ್ಯದಲ್ಲಿ ಕೂಡ ಈ ಕವನದ ಸ್ಥಾನ ಭದ್ರವಾಗಿದೆ. ಕಾವ್ಯಪ್ರಿಯರಿಗೆ, ವಿಮರ್ಶಕರಿಗೆ ಈ ಕವನ ಒಂದು ‘ಚ್ಯಾಲೆಂಜ್’-ನ ಹಾಗೆ. ನಾನು ಕಾವ್ಯಾನುವಾದ ಶುರುಮಾಡಿದಾಗಿನಿಂದ ಈ ಕವನವನ್ನು ಅನುವಾದ ಮಾಡಬೇಕೆಂಬ ಆಸೆ ಬಹಳವಿತ್ತು. ಆಸೆ ಒಂದಿದ್ದರೆ ಸಾಲದಲ್ವಾ, ಧೈರ್ಯ ಕೂಡ ಬೇಕು. ಈ ಕವನವ ನೋಡುತ್ತಿದ್ದೆ, ಓದುತ್ತಿದ್ದೆ, ಮನಸ್ಸಲ್ಲೇ ಸಾಲುಗಳನ್ನು ಅನುವಾದ ಮಾಡುತ್ತಿದ್ದೆ, ಆದರೆ ಮನಸ್ಸಿನಲ್ಲಿದ್ದದ್ದನ್ನು ಕಾಗದಕ್ಕೆ ವರ್ಗಾಯಿಸಲು ಹಿಂಜರಿಯುತ್ತಿದ್ದೆ.

ವಾಲಸ್ ಸ್ಟೀವನ್ಸ್

ವಾಲಸ್ ಸ್ಟೀವನ್ಸ್

ಎಲ್ಲದಕ್ಕೂ ಒಂದು ಸಮಯ ಬರುತ್ತೆ ಅಂತಾರಲ್ಲ, ಹಾಗೆಯೆ ಈ ನನ್ನ ಅನುವಾದಕ್ಕೂ ಒಂದು ದಿನ ಬಂತು. ಕನ್ನಡದ ಪ್ರಖ್ಯಾತ ಕವಿ ಶ್ರೀ ಕೆ. ವಿ. ತಿರುಮಲೇಶರ ನಿಧನೋಪರಾಂತ ಪ್ರಕಟವಾದ ಅವರ ಕವನ ಸಂಕಲನ ಅಪ್ರಮೇಯ-ದಲ್ಲಿನ ಕವನಗಳನ್ನು ಓದುತ್ತಾ ಓದುತ್ತಾ ‘ಬ್ರಿಕ್-ಎ-ಬ್ರ್ಯಾಕ್’ ಎಂಬ ಕವನಕ್ಕೆ ಬಂದೆ. ಕವನ ಓದುತ್ತಿರುವಾಗಲೇ ಮೆಲ್ಲ ಮೆಲ್ಲನೆ ಆಕಾಶ ತಿಳಿಯಾದಂತೆ ಅನಿಸಿತು, ಬೆಳಕು ಹರಿಯತೊಡಗಿತು. ತಿರುಮಲೇಶರು ಮೆಚ್ಚಿದ ಕವಿಗಳಲ್ಲಿ ವಾಲಸ್ ಸ್ಟೀವನ್ಸ್ ಒಬ್ಬರು ಹಾಗೂ ಅವರ ಈ ಕವನ ‘ಬ್ರಿಕ್-ಎ-ಬ್ರ್ಯಾಕ್’ ಸ್ಟಿವನ್ಸ್-ರಿಗೆ, ಅವರ ಕಾವ್ಯಕ್ಕೆ ತಿರುಮಲೇಶರು ಸಲ್ಲಿಸಿದ ಪ್ರೀತಿಯ ಗೌರವಾರ್ಪಣೆಯ ಹಾಗೆ. ಸ್ಟೀವನ್ಸ್-ರ ಟೀ ಆ್ಯಟ್ ದ ಪಲಾಜ಼ ಆಫ಼್ ಹೂಣ್ (Tea at the Palaz of Hoon), ಅನೆಕ್ಡೋಟ್ ಆಫ಼್ ಅ ಜಾರ್ (Anecdote of a Jar), ಗಬಿನಲ್ (Gubbinal), ದ ಸ್ನೋಮ್ಯಾನ್ (The Snowman), ದಿ ಎಂಪರರ್ ಆಫ಼್ ಐಸ್‌ಕ್ರೀಮ್ (The Emperor of Ice-Cream), ಹಾಗೂ ಥಟೀನ್ ವೇಸ್ ಆಫ಼್ ಲುಕಿಂಗ್ ಆ್ಯಟ್ ಅ ಬ್ಲ್ಯಾಕ್‌ಬರ್ಡ್ ಕವನಗಳನ್ನು ಉಲ್ಲೇಖಿಸಿ ತಿರುಮಲೇಶರು ಈ ಕವನದಲ್ಲಿ ತಮ್ಮದೇ ರೀತಿಯಲ್ಲಿ ಸ್ಟೀವನ್ಸ್-ರನ್ನು ಮೆಚ್ಚಿದ್ದಾರೆ.

ಬ್ರಿಕ್-ಎ-ಬ್ರ್ಯಾಕ್’ ಕವನದ ಕೊನೆಯಲ್ಲಿ ತಿರುಮಲೇಶರು ‘ಥಟೀನ್ ವೇಸ್ ಆಫ಼್ ಲುಕಿಂಗ್ ಆ್ಯಟ್ ಅ ಬ್ಲ್ಯಾಕ್‌ಬರ್ಡ್’ ಬಗ್ಗೆ ಬರೆಯುತ್ತಾರೆ …

ಹಾಗೇನೆ ಒಂದು ಕಬ್ಬಕ್ಕಿಯನ್ನು ಕಾಣುವ
ಹದಿಮೂರು ಬಗೆಗಳು
ಯಾಕೆ ಹದಿಮೂರು ಯಾಕೆ ಹದಿಮೂರೆ
ಯಾಕೆಂದು ಗೊತ್ತಿಲ್ಲ
ಯಾಕೆ ಕಬ್ಬಕ್ಕಿ ಯಾಕಿಲ್ಲ ಬೆಳ್ಳಕ್ಕಿ
ಅದೂ ಗೊತ್ತಿಲ್ಲ
ಕೆಲವೊಂದು ಯಾದೃಚ್ಛಿಕ
ಉದ್ದಿಶ್ಯವಲ್ಲದೆ ಇರಬೇಕು ಇರಲಿ
ಹಾಗೆ ಬಂದು ಹೀಗೆ ಹೋಗುವ ತಥಾಗತ
ಯಾಕೆ ಬಂದೆ ಎಲ್ಲಿಗೆ ಹೋಗುವೆ ಎಂದರೆ
ಸ್ತಬ್ದ
ಕಬ್ಬಕ್ಕಿಯನ್ನಾಗಲಿ ಗುಬ್ಬಕ್ಕಿಯನ್ನಾಗಲಿ
ಹೆಚ್ಚು ಬೆನ್ನಟ್ಟಿ ಹೋಗಬಾರದು ಅವನ್ನು ಅಷ್ಟಕ್ಕೆ
ಬಿಡಬೇಕು

ಈ ಕೊನೆಯ ಭಾಗವನ್ನು ಓದಿದ ಕೂಡಲೆ ಒಂದು ‘ಎಪಿಫ಼ನಿ’ಯ ಅನುಭವವಾದಂತಾಯಿತು. ಎಲ್ಲಾ ತಿಳಿಯಾದಂತೆ ಅನಿಸಿತು. ಒಂದು ಬಾಗಿಲು ತೆರೆದಂತಾಯಿತು. ಸ್ವಲ್ಪ ಅಂಜುತ್ತಲೆ ಅನುವಾದ ಶುರು ಮಾಡಿದೆ, ಒಂದೇ ಸಿಟಿಂಗ್-ನಲ್ಲಿ ಮುಗಿಸಿದೆ. ತಿರುಮಲೇಶರ ಕವನದಿಂದಲೇ ‘ಕಬ್ಬಕ್ಕಿ’ ಪದವನ್ನು ಎರವಲು ಪಡೆದೆ, ಶೀರ್ಷಿಕೆಯನ್ನು ಕೂಡ ಅಲ್ಲಿಂದಲೇ ‘ಕದ್ದು’ ಕೊಂಡೆ. ಆಮೇಲೆ ಸ್ವಲ್ಪ ತಟ್ಟಿ ಕುಟ್ಟಿ ಆಚೆ ಈಚೆ ಸರಿಮಾಡಿದೆ. ನನಗೆ ತೃಪ್ತಿಯಾಯಿತು ಅಂದಿನಿಸಿದ ಮೇಲೆ ಮಿತ್ರ ಕಮಲಾಕರ್-ರಿಗೆ ಕಳಿಸಿದೆ. “ತುಂಬಾ ಚೆನ್ನಾಗಿ ಮೂಡಿಬಂದಿದೆ; ಅಷ್ಟು ಬೇಗ ಬಗ್ಗದ ಕವನವಿದು, ಅನುವಾದ ಶುರುಮಾಡುವುದೇ ಸುಲಭದ ಕಾರ್ಯವಲ್ಲ,” ಅಂತ ಕಮಲಾಕರ್-ರು ಪ್ರತಿಕ್ರಿಯಿಸದ ಮೇಲೆ ಧೈರ್ಯ ಬಂತು, ಖುಷಿಯಾಯಿತು.

ಇದೆ‌ಲ್ಲಾ ಸುಮಾರು ಮೂರು ತಿಂಗಳುಗಳ ಹಿಂದೆ ನಡೆದ ಕತೆ. ‘ಥಟೀನ್ ವೇಸ್ ಆಫ಼್ ಲುಕಿಂಗ್ ಆ್ಯಟ್ ಅ ಬ್ಲ್ಯಾಕ್‌ಬರ್ಡ್’ ಕವನದ ನನ್ನ ಕನ್ನಡ ಅನುವಾದ ಇಲ್ಲಿದೆ:

ಒಂದು ಕಬ್ಬಕ್ಕಿಯನ್ನು ಕಾಣುವ ಹದಿಮೂರು ಬಗೆಗಳು


ಇಪ್ಪತ್ತು ಹಿಮಶಿಖರಗಳ ಮಧ್ಯೆ,
ಏಕಮಾತ್ರ ಸಂಚಲನ,
ಕಬ್ಬಕ್ಕಿಯ ಕಣ್ಣು.

ನಾನು ಮುಬ್ಬಗೆಯಾಗಿದ್ದೆ,
ಮೂರು ಕಬ್ಬಕ್ಕಿಗಳು ಕೂತಿರುವ
ಮರದ ಹಾಗೆ.

ಇಳಿಗಾಲದ ಗಾಳಿಯಲ್ಲಿ
ಕಬ್ಬಕ್ಕಿ ಗಿರಗಿರ ಸುತ್ತುತ್ತಿತ್ತು.
ಮೂಕನಾಟಕದಲ್ಲಿ ಒಂದು
ಸಣ್ಣ ಪಾತ್ರ ಅದರದಾಗಿತ್ತು.

ಒಂದು ಗಂಡು ಒಂದು ಹೆಣ್ಣು
ಒಂದು.
ಒಂದು ಗಂಡು ಒಂದು ಹೆಣ್ಣು ಒಂದು ಕಬ್ಬಕ್ಕಿ
ಒಂದು.

ಯಾವುದನ್ನು ಆಯಬೇಕೆಂದು ಗೊತ್ತಾಗುತ್ತಿಲ್ಲ ನನಗೆ,
ಸ್ವರಸಂಚಾರದ ಸೌಂದರ್ಯವೋ,
ಅಥವಾ ವ್ಯಂಗ್ಯೋಕ್ತಿಯ ಸೌಂದರ್ಯವೋ,
ಕಬ್ಬಕ್ಕಿಯ ಶಿಳ್ಳೆಯಾ
ಅಥವಾ ಶಿಳ್ಳೆಯ ಬಳಿಕವಾ.

ನೀಳ ಜನ್ನಲನು ಆವರಿಸಿವೆ
ಹಿಮಕೋಲುಗಳು ಬರ್ಬರ ಗಾಜಿನಂತೆ.
ಕಬ್ಬಕ್ಕಿಯ ನೆರಳು ಹಾಯಿತು ಅದರ ಮೇಲೆ,
ಅತ್ತಿಂದಿತ್ತ.
ನೆರಳಿನಲಿ ಭಾವ ರೇಖಿಸಿತು
ಅಗ್ರಾಹ್ಯ ಕಾರಣವೊಂದನ್ನು.

ಓ ಹ್ಯಾಡಮಿನ ಬಡಕಲು ಪುರುಷರೆ,
ಹೊನ್ನಹಕ್ಕಿಗಳ ಕನಸನೇತಕೆ ಕಾಣುವಿರಿ?
ನೋಡಿ, ಹೇಗೆ ನಿಮ್ಮ
ಹೆಂಗಸರ ಪಾದಗಳ
ಪ್ರದಕ್ಷಿಣೆ ಸುತ್ತುತ್ತಿದೆ ಕಬ್ಬಕ್ಕಿ,
ಕಾಣುತ್ತಿಲ್ಲವೇ ನಿಮಗೆ?

ಗೊತ್ತಿದೆ ನನಗೆ ಉದಾತ್ತ ಉಚ್ಛಾರಗಳು,
ನಿರ್ಮಲ, ತಪ್ಪಿಸಲಾಗದ ಲಯಗಳು;
ಆದರೆ, ಗೊತ್ತಿದೆ ನನಗೆ, ಇದೂ ಕೂಡ,
ನನಗೆ ಗೊತ್ತಿರುವುದರಲ್ಲಿ
ಆ ಕಬ್ಬಕ್ಕಿಯೂ ಭಾಗಿಯಾಗಿದೆ.

ಆ ಕಬ್ಬಕ್ಕಿ ದೃಷ್ಟಿಮರೆಯಾಗಿ ಹಾರಿ ಹೋದಾಗ,
ಹಲವು ವೃತ್ತಗಳಲ್ಲಿ ಒಂದರ
ಅಂಚನ್ನು ಅಂಕಿಸಿ ಹೋಯಿತು.
೧೦
ಹಸಿರು ಬೆಳಕಿನಲ್ಲಿ ಹಾರುತ್ತಿರುವ
ಕಬ್ಬಕ್ಕಿಗಳನ್ನು ಕಂಡಾಗ,
ಸುಸ್ವರದ ಸೂಳೆಯರು ಕೂಡ
ಕಿರುಚುವರು ಜೋರಾಗಿ.
೧೧
ಗಾಜಿನ ಸಾರೋಟಿನಲ್ಲಿ ಕನೇಟಿಕಟ್
ರಸ್ತೆಗಳ ಮೇಲೆ ಸವಾರಿ ಮಾಡುವಂವ ಅಂವ.
ಒಮ್ಮೆ, ತನ್ನ ಸಾರೋಟಿನ ಸಜ್ಜುಗಳ
ನೆರಳನ್ನು ಕಬ್ಬಕ್ಕಿಗಳೆಂದು ಭ್ರಮಿಸಿದಾಗ,
ಭಯವೊಂದು ಚುಚ್ಚಿತು ಅಂವನನ್ನು.
೧೨
ನದಿ ಚಲಿಸುತಿದೆ.
ಕಬ್ಬಕ್ಕಿ ಬಹುಶಃ ಹಾರುತಿದೆ.
೧೩
ಮಧ್ಯಾಹ್ನವೆಲ್ಲಾ ಸಂಜೆಯಾಗಿತ್ತು.
ಹಿಮ ಬೀಳುತ್ತಿತ್ತು,
ಹಿಮ ಮತ್ತೂ ಬೀಳುವುದು.
ಸೆಡಾರ್ ಮರದ ರೆಂಬೆಗಳಲ್ಲಿ.
ಕಬ್ಬಕ್ಕಿ ಕೂತಿತ್ತು.
*****

ಈ ಕವನವನ್ನು ಅನುವಾದ ಮಾಡಿದ ಹುಮ್ಮಸ್ಸಿನಲ್ಲಿ ತಿರುಮಲೇಶರು ‘ಬ್ರಿಕ್-ಎ-ಬ್ರ್ಯಾಕ್’ ಕವನದಲ್ಲಿ ಸ್ಟೀವನ್ಸ್-ರ ಉಳಿದ ಕವನಗಳ ಉಲ್ಲೇಖಗಳನ್ನು ಕುತೂಹಲದಿಂದ, ಆಸಕ್ತಿಯಿಂದ ಸುಮಾರು ಸಲ ಓದಿದೆ. ತಿರುಮಲೇಶರು ಸ್ಟಿವನ್ಸ್-ರ ಕವನಗಳನ್ನು ಯಾವ ರೀತಿಯಲ್ಲಿ ಓದಿದರು, ಬರಮಾಡಿಕೊಂಡರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಸ್ಟೀವನ್ಸ್-ರ ಕೆಲ ಕವನಗಳನ್ನು ಓದಿದ ಮೇಲೆ ಈ ಕವನ ಏನು ಹೇಳುತ್ತದೆ, ಈ ರೂಪಕದ ಅರ್ಥ ಏನು ಅಂತೆಲ್ಲಾ ಹುಡುಕುತ್ತಾ ಹೋದರೆ ನಿರಾಶೆಯಾಗುವುದು ಖಂಡಿತ. ಕಬ್ಬಕ್ಕಿಯ ಕವನದ ಬಗ್ಗೆ ತಿರುಮಲೇಶರು ಹೇಳಿದ ಹಾಗೆ, “ಕೆಲವೊಂದು ಯಾದೃಚ್ಛಿಕ / ಉದ್ದಿಶ್ಯವಲ್ಲದೆ ಇರಬೇಕು ಇರಲಿ; ಕಬ್ಬಕ್ಕಿಯನ್ನಾಗಲಿ / ಗುಬ್ಬಕ್ಕಿಯನ್ನಾಗಲಿ / ಹೆಚ್ಚು ಬೆನ್ನಟ್ಟಿ ಹೋಗಬಾರದು ಅವನ್ನು ಅಷ್ಟಕ್ಕೆ / ಬಿಡಬೇಕು.” ಈ ಮಾತನ್ನೇ ಮನಸ್ಸಿನಲ್ಲಿಟ್ಟುಕೊಂಡು ಉಳಿದ ಕವನಗಳನ್ನು ಓದಿದೆ.

ಈ ಕವನಗಳಲ್ಲಿ ಅನೆಕ್ಡೋಟ್ ಆಫ಼್ ಅ ಜಾರ್ (Anecdote of a Jar) ನನಗೆ ಪರಿಚಿತ ಕವನ. ಈ ಕವನವನ್ನು ಮೊದಲ ಸಲ ಮುವ್ವತ್ತು ವರ್ಷಗಳ ಹಿಂದೆ ಓದಿದ್ದೆ. ನೋಡಲಿಕ್ಕೆ ಚಿಕ್ಕ ಕವನದಂತಿದ್ದರೂ, ಅಷ್ಟು ಸುಲಭವಲ್ಲ. ಇಲ್ಲಿ ಬರುವ ‘ಜಾರ್’ ಸಾಮಾನ್ಯದ ‘ಜಾರ್’ ಅಲ್ಲ ಅಂತ ಅನಿಸಿತು. ‘ಜಾರ್’ ಪದಕ್ಕೆ ಯಾವ ಯಾವ ತರಹದ ಅರ್ಥಗಳು ಇರಬಹುದು ಅಂತ ನೋಡತೊಡಗಿದೆ. ‘Jar’ is a symbol of ‘fertility,’ ಅಂತ ಸುಮಾರು ದೇಶ ವಿದೇಶಗಳ ಪುರಾತನ ಸಂಸ್ಕೃತಿಗಳಲ್ಲಿ ನಂಬಿಕೆಯಿದೆ. ತಿರುಮಲೇಶರು ಈ ಕವನವನ್ನು ಹೀಗೆ ನೋಡಿರುವರು:

ಟೆನ್ನೆಸೀ ಮೇಲೊಂದು ಜಾಡಿ ಇರಿಸುವುದು
ಅದರ ಸುತ್ತ ಕಾನನವೆ ಎದ್ದು ಬರುವುದು
ಅದೂ ಇಷ್ಟ

ಸ್ಟೀವನ್ಸ್-ರ Anecdote of a Jar ಕವನವನ್ನು ನಾನು ಹೀಗೆ ಕನ್ನಡಕ್ಕೆ ಅನುವಾದಿಸಿದೆ:

ಒಂದು ಜಾಡಿಯ ಕಥಾನಕ

ಟೆನಸಿಯ ಗುಡ್ಡದ ಮೇಲೆ
ಜಾಡಿಯೊಂದನ್ನಿಟ್ಟೆ, ಉರುಟಾದ ಜಾಡಿಯದು.
ಆ ಗುಡ್ಡದ ಸುತ್ತ ಅಡ್ಡಾದಿಡ್ಡಿಯಾಗಿ ಒಂದು
ಕಾನನವೆ ಎದ್ದು ಬರುವಂತೆ ಮಾಡಿತದು.

ಕಾನನ ಅದರೆತ್ತರಕ್ಕೆ ಏರಿತು,
ಹರಡಿತು ಸುತ್ತಲೂ, ಕಾಡಾಗಿರಲಿಲ್ಲ ಆ ಕಾನನ ಮತ್ತೆ.
ಜಾಡಿ ನೆಲದ ಮೇಲೆ ಉರುಟಾಗಿತ್ತು
ಎತ್ತರಕ್ಕೆ ನಿಂತಿದೆ ಗಾಳಿಯಲ್ಲೊಂದು ನೆಲೆಯಂತೆ.

ಎಲ್ಲೆಡೆ ಒಡೆತನ ಸ್ಥಾಪಿಸಿತದು.
ಬೂದಾಗಿತ್ತು ಬರಿದಾಗಿತ್ತದು.
ಪಕ್ಷಿಯದಾಗಿರಲಿಲ್ಲ ಪೊದೆಯದಾಗಿರಲಿಲ್ಲ ಅದು,
ಟೆನಸಿಯಲಿ ಬೇರಾವುದಂತಾಗಿರಲಿಲ್ಲ ಅದು.
*****

ಕೆ. ವಿ. ತಿರುಮಲೇಶ್

ಕೆ. ವಿ. ತಿರುಮಲೇಶ್

ತಿರುಮಲೇಶರು ‘ಬ್ರಿಕ್-ಎ-ಬ್ರಾಕ್’ನಲ್ಲಿ ಉಲ್ಲೇಖಿಸಿರುವ ಸ್ಟೀವನ್ಸ್-ರ ಎಲ್ಲಾ ಕವನಗಳನ್ನು ಅನುವಾದ ಮಾಡುವ ಉದ್ದೇಶ ಮೊದಲು ಇರಲಿಲ್ಲ. ಈ ಎರಡು ಕವನಗಳನ್ನು ಅನುವಾದ ಮಾಡಿದ ನಂತರ ಪ್ರಯತ್ನ ಮಾಡಿ ನೋಡುವ ಅಂತನಿಸಿತು.

ಸ್ಟೀವನ್ಸ್-ರ Gubbinal (ಗಬಿನಲ್) ಎಂಬ ಹೆಸರಿನ ಸಣ್ಣ ಕವನ ಬಲು ಸೋಜಿಗದ ಕವನ. ಕವನದ ಹೆಸರೇ ವಿಲಕ್ಷಣವಾದುದು. ಹಳೆಯ ಆಡುಭಾಷೆಯಲ್ಲಿ (slang) ‘ಗಬಿನ್’ Gubbin ಅಂದರೆ ‘ಮಂದ ಬುದ್ಧೀಯ ವ್ಯಕ್ತಿ’ ಎಂಬ ಅರ್ಥ ಬರುತ್ತೆ. ‘ಗಬಿನಲ್’ ಪದವನ್ನು ಸ್ಟೀವನ್ಸ್-ರವರೇ ಸೃಷ್ಟಿಸಿದಂತಿದೆ. ಈ ಪದವನ್ನು ವಿಶೇಷಣದ ರೀತಿಯಲ್ಲಿ (‘ಗಬಿನ್ ತರಹ’) ಅಥವಾ ನಾಮಪದದ ರೀತಿಯಲ್ಲಿ (‘ಗಬಿನ್ ರಚಿಸಿದ’) ನೋಡಬಹುದು ಎಂದು ಈ ಕವಿತೆಯನ್ನು ವಿಶ್ಲೇಷಿಸಿದವರು ಹೇಳುತ್ತಾರೆ.

ಇದು ‘ಕಲ್ಪನೆ’ಯ ಕುರಿತ ಕವನ – ಕಲ್ಪನಾಶಕ್ತಿ ಉಳ್ಳವರು, ಕಲ್ಪನಾಶಕ್ತಿ ಇಲ್ಲದವರು ಯಾ ಹಲವಾರು ಕಾರಣಗಳಿಂದ ಕಲ್ಪನಾಶಕ್ತಿ ಕಳಕೊಂಡವರು. ನಾನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಂತೆ, ಇಲ್ಲಿ ‘ನೀನು’ ಮತ್ತು ‘ನಾವು’ – ಎರಡು ದನಿಗಳಿವೆ. ಯಾರ ದನಿ ಯಾವುದು ಎಂದು ಗೊಂದಲ ಉಂಟಾಯಿತು. ‘ನಾವು’ ಓದುಗರು, ಕಲ್ಪನಾಶಕ್ತಿ ಇಲ್ಲದವರು, ‘ನೀನು’ ಕವಿತೆಯಲ್ಲಿ ಇರುವ ವ್ಯಕ್ತಿ, ‘ಗಬ್ಬಿನಲ್,’ ಕಲ್ಪನಾಶಕ್ತಿ ಉಳ್ಳವನು, ಅಂತ ಅಂದುಕೊಳ್ಳೋಣ. ಅಂದರೆ, ‘ನಾವು’ ‘ನೀನು’-ವನ್ನು ಉದ್ದೇಶಿಸಿದಂತೆ. ಸೂರ್ಯನನ್ನು ‘ವಿಲಕ್ಷಣ ಪುಷ್ಪ’ವೆಂದು ಕರೆಯುತ್ತಿಯಾ? ಹಾಗೇ ಅಗಲಿ … ‘ನಮಗೆ’ ಈ ಜಗತ್ತು ಕುರೂಪವಾಗಿದೆ, ಜನರು ಇಲ್ಲಿ ದುಃಖಿತರು … ನಂತರ, ಒಂದರ ನಂತರ ಒಂದು ಪಟಪಟನೆ ಸೂರ್ಯನ ಬಗ್ಗೆ ರೂಪಕಗಳು … ಸೂರ್ಯ ಹೇಗೆಲ್ಲಾ ‘ಗಬ್ಬಿನಲ್’-ಗೆ ಕಾಣಿಸುತ್ತಾನೆ … ಕಲ್ಪನಾಶಕ್ತಿ ಉಳ್ಳವನು ಅವನು … ಕೊನೆಗೆ ಮತ್ತದೇ ಜಗತ್ತು ಕುರೂಪವಾಗಿದೆ, ಜನರು ಇಲ್ಲಿ ದುಃಖಿತರು …

ಈ ಕವನದ ಬಗ್ಗೆ ಸ್ವಲ್ಪ ಮಟ್ಟಿಗೆ ಓದಿದ್ದೆ, ಆದರೆ ಇವನ್ನೆಲ್ಲಾ ನನಗಾಗಿ ನಾನು ಬಿಡಿಸಿಕೊಳ್ಳುವಷ್ಟರಲ್ಲಿ ಮೂರು ವಾರ ಕಳೆದು ಹೋಯಿತು … ಈಗಲೂ, ಕ್ಲಾರಿಟಿ-ಯಿದೆ ಎಂದು ಹೇಳಲು ಅಳುಕೇನೆ … ನಾನು ಅರ್ಥ ಮಾಡಿಕೊಂಡಂತೆ ಅನುವಾದ ಮಾಡಿದೆ:
ಗಬ್ಬಿನಲ್

ಆ ಸೂರ್ಯ, ವಿಲಕ್ಷಣ ಪುಷ್ಪ ಅದು,
ಎಂದು ನೀ ಹೇಳುವೆ.
ನೀನೇನು ಹೇಳುವಿಯೋ ಅದೇ ಇರಲಿ.

ಈ ಸುರೂಪವಿಲ್ಲದ ಜಗತ್ತು,
ಇಲ್ಲಿನ ದುಃಖಿತ ಜನರು.

ಆ ಕಾಡುಗರಿಗಳ ಕುಚ್ಚು,
ಆ ಮೃಗ ನೇತ್ರ,
ಎಂದು ನೀ ಹೇಳುವೆ.

ಆ ಕಿಚ್ಚಿನ ಕಿರಾತ,
ಆ ಬೀಜ,
ನೀನೇನು ಹೇಳುವಿಯೋ ಅದೇ ಇರಲಿ.

ಈ ಸುರೂಪವಿಲ್ಲದ ಜಗತ್ತು,
ಇಲ್ಲಿನ ದುಃಖಿತ ಜನರು.
*****

ಬ್ರಿಕ್-ಎ-ಬ್ರಾಕ್’ನಲ್ಲಿ ‘ಗಬಿನಲ್’ ಕವನವನ್ನು ತಿರುಮಲೇಶರು ಕಂಡದ್ದು ಹೀಗೆ …

ಇನ್ನೆಲ್ಲೂ ಇಲ್ಲದ ಪದ ಗಬ್ಬಿನಾಲ್
ಏನೇನು ಭಾವನೆಗಳನ್ನು ತರುತ್ತದೆ
ಆ ವಿಲಕ್ಷಣ ಪುಷ್ಪ ಸೂರ್ಯ
ನೀವೇನು ಹೇಳುವಿರೋ ಅದೇ
ಆಗಲಿ
ಜಗತ್ತಿಗೆ ಸುರೂಪವಿಲ್ಲ
ಜನ ವಿನಾ ದುಃಖಿತರಾಗಿದ್ದಾರೆ

ವಾಲಸ್ ಸ್ಟೀವನ್ಸ್-ರ ‘ದ ಸ್ನೋ ಮ್ಯಾನ್’ (The Snow Man) ಕವನವನ್ನು ಮೆಚ್ಚಿಕೊಳ್ಳುತ್ತಾ ತಿರುಮಲೇಶರು ‘ಬ್ರಿಕ್-ಎ-ಬ್ರ್ಯಾಕ್’ನಲ್ಲಿ ಎಷ್ಟು ಸುಂದರವಾಗಿ ಬರೆದಿದ್ದಾರೆ …

ಹೇಮಂತವನ್ನು ಅರಿಯಬೇಕಾದರೆ
ಹೇಮಂತದ ಮನಸ್ಸಿರಬೇಕು

… ಎಂತಹ ಅಪೂರ್ವ ಸಾಲುಗಳು ಇವು … ಸ್ಟೀವನ್ಸ್-ರ ಕವನವನ್ನು ಸಂಪೂರ್ಣವಾಗಿ internalise ಮಾಡಿಕೊಂಡು ಕನ್ನಡದ ಮೆರುಗಿನಲ್ಲಿ ತೋರಿಸಿದ್ದಾರೆ. ‘ಹೇಮಂತ’ ಮತ್ತು ‘ಹಿಮ’ ಪದಗಳು ಎಷ್ಟು ಚೆನ್ನಾಗಿ ಹೊಂದಿಕೊಂಡಿವೆ ತಿರುಮಲೇಶರ ಸಾಲುಗಳಲ್ಲಿ …

ಹಿಮ ಗಡ್ಡೆ ಕಟ್ಟಿ ಕೊಂಬೆ ರೆಂಬೆಗಳು
ತೊನೆಯುವುದನ್ನು ಕಾಣಲು
ಮನಸ್ಸು ಹಿಮಗಟ್ಟಿರಬೇಕು ಅಲ್ಲವೇ
ಮತ್ತು ಬಹುಕಾಲ ಹೆಪ್ಪುಗಟ್ಟಿರಬೇಕು
ಕಲ್ಲು ಬೆಂಚುಗಳ ಮೇಲೆ ಕೂತು ಅಲ್ಲೇ
ಮರಗಟ್ಟಿದ ಮುದುಕರ ಹಾಗೆ

ಯೂರಿಪಿಯನ್, ಅಮೇರಿಕನ್ ರಾಷ್ಟ್ರಗಳಲ್ಲಿ ಹೇಮಂತ ಋತು ಕಡು ಛಳಿಯ ಕಾಲ, ಯಾರಿಗೂ ಬೇಡ; ಎಲ್ಲಾ ಜೀವ ಸಂಕುಲ ನಿದ್ದೆ ಹೋದಂತೆ, ನಿಸರ್ಗ ಬರಡಾದಂತೆ ಅಂತೆಲ್ಲಾ ಕವಿತೆ, ಕತೆ, ಕಾದಂಬರಿಗಳಲ್ಲಿ ಓದಿದ್ದೇವೆ. ಈ ಕವನವು ವ್ಯಕ್ತಿನಿಷ್ಠ ಹಾಗೂ ವಸ್ತುನಿಷ್ಠ ನೋಟಗಳ ಬಗ್ಗೆ ಇರುವ ಕವನ. ವ್ಯಕ್ತಿನಿಷ್ಠವಾಗಿ ನೋಡಿದರೆ, ಹೊರಗಿನಿಂದ ವೀಕ್ಷಕನಾಗಿ ನೋಡಿದರೆ ಕಡು ಛಳಿಯ ಯಾತನೆ, ಮರಗಳು ಬರಡಾಗುವುದು, ಬೋಳಾದ ವಿವರ್ಣ ನಿಸ್ತೇಜ ನಿಸರ್ಗ … ಇದೇ ಋತುವನ್ನು ವಸ್ತುನಿಷ್ಠವಾಗಿ ನೋಡಲಿಕ್ಕಾಗುತ್ತಾ? ವೀಕ್ಷಕನಾಗಿ ಅಲ್ಲ, ನಿಸರ್ಗದೃಶ್ಯದಲ್ಲಿ ಒಂದು ಭಾಗವಾಗಿ, ಅದರಲ್ಲೇ ಒಂದಾಗಿ, ಹಿಮಮಾನವನಾಗಿ ನೋಡಿದರೆ ಸಾಧ್ಯ ಅಂತ ಕವನ ಹೇಳುವಂತಿದೆ … ಎಂದೇ, ಹೇಮಂತವನ್ನು ಅರಿಯಬೇಕಾದರೆ … ಹೇಮಂತದ ಮನಸ್ಸಿರಬೇಕು …

ವಾಲಸ್ ಸ್ಟೀವನ್ಸ್-ರ The Snow Man ಕವನದ ಕನ್ನಡ ಅನುವಾದ ಇಲ್ಲಿದೆ. ತಿರಮಲೇಶರ ಸಾಲು ಹಾಗೂ ಅವರು ಬಳಸಿದ ಕೆಲ ಪದಗಳನ್ನೇ ‘ಕದ್ದಿರುವೆ’ … (ತಿರುಮಲೇಶರು ಬರೆದ ‘ಹಿಮ ಮಾನವ’ ಅಂತ ಒಂದು ಕವನ ಅವರ ‘ಅವಧ’ ಸಂಕಲನದಲ್ಲಿದೆ … ಆ ಕವನ ಬೇರೆ …)

ಹಿಮಮಾನವ

ಹೇಮಂತದ ಮನಸ್ಸಿರಬೇಕು
ಮಂಜುಗಡ್ಡೆಗಳನ್ನು, ಹಿಮಗಡ್ಡೆ ಕಟ್ಟಿದ ದೇವದಾರು ಮರಗಳ
ರೆಂಬೆ ಕೊಂಬೆಗಳು ತೊನೆಯುವುದನ್ನು ಕಾಣಲು;

ಬಹಳ ಕಾಲದಿಂದ ಹಿಮಗಟ್ಟಿರಬೇಕು ಮನ
ಜೂನಿಪರ್ ಮರಗಳಲ್ಲಿ ಜಡೆಗಟ್ಟಿದ ಹಿಮವನ್ನು ಕಾಣಲು,
ಜನವರಿಯ ಬಿಸಿಲಿನಲ್ಲಿ ಒರಟು ಸ್ಪ್ರೂಸ್ ಮರಗಳು
ದೂರದಲ್ಲಿ ಮಿನುಗುವುದ ಕಾಣಲು;

ಗಾಳಿ ಬೀಸುವಿಕೆಯ ದನಿಯಲ್ಲಿ,
ಕೆಲ ಎಲೆಗಳ ಉದುರಾಟದ ದನಿಯಲ್ಲಿ,
ಬೇಗುದಿಯ ಹುಡುಕುವುದ ಬಿಡುವುದು,

ನೆಲದ ದನಿಗಳಿವು,
ಅದೇ ಬರಡು ಬಯಲಿನಲಿ
ಬೀಸುವ ಅದೇ ಗಾಳಿಯಿಂದ ತುಂಬಿದ ದನಿಗಳಿವು,

ಹಿಮದಲ್ಲಿ ನಿಂತು ಆಲಿಸಿವ ಕೇಳುಗ,
ಅವನು ಮತ್ತಾವುದನ್ನೂ,
ಅಲ್ಲಿಲ್ಲದ ಯಾವುದನ್ನೂ
ಅಲ್ಲಿರುವ ಯಾವುದನ್ನೂ
ಕಾಣುವುದಿಲ್ಲ.
*****

ದಿ ಎಂಪರರ್ ಆಫ಼್ ಐಸ್‌ಕ್ರೀಮ್ (The Emperor of Ice-Cream) ವಾಲಸ್ ಸ್ಟೀವನ್ಸ್-ರ ಪ್ರಸಿದ್ಧ ಕವನಗಳಲ್ಲಿ ಒಂದು, ಹಾಗೇಯೇ ಅಸ್ಪಷ್ಟತೆಗಾಗಿಯೂ ಹೆಸರು ಪಡೆದ ಕವನ. ಕವನದಲ್ಲಿ ಎಂಪರರ್ ಯಾರು, ಐಸ್‌-ಕ್ರೀಮ್ ಎಲ್ಲಿ ಅಂತ ಹುಡುಕಬೇಕಾಗುತ್ತದೆ. ಕವನ ಓದಿದ ನಂತರ, ಕವನದ ಬಗ್ಗೆ ಸ್ವಲ್ಪ ಓದಿದ ನಂತರ, ಇದು ಕವನವನ್ನು ಮೀರಿ ನಿಂತ ರೂಪಕ ಎಂದೇ ಅರಿಯಬೇಕು. ಅಡಕವಾಗಿ ಹೇಳಬೇಕೆಂದರೆ, ಹುಸಿ ತೋರಿಕೆ ಬಿಟ್ಟು ಇದ್ದದ್ದು ಇದ್ದ ಹಾಗೆ ಇರಲಿ ಅಂತ ಕವನ ಹೇಳುವಂತಿದೆ. ಈ ಮಾತನ್ನು ಯಾವ ಸನ್ನಿವೇಶದಲ್ಲಿ, ಯಾವ ಯಾವ ರೂಪಕಗಳನ್ನು ಬಳಸಿಕೊಂಡು ಕವಿ ಹೇಳುತ್ತಾರೆ ನೋಡಿ – ಒಬ್ಬಳು ಮುದುಕಿ ಮೃತಳಾಗಿದ್ದಾಳೆ. ಅವಳ ಅಂತ್ಯಕ್ರಿಯೆಯಾಗುವ ಮುಂಚೆ ‘ವೇಕ್’ ಎನ್ನುವ ಜಾಗರಣೆ ಕಾರ್ಯಕ್ರಮಕ್ಕೆ ತಯಾರಿ ನಡೆಸಬೇಕು. ಅಂತಿಮ ದರ್ಶನಕ್ಕಾಗಿ ಬಂಧು-ಬಾಂಧವರು ಬರುತ್ತಾರೆ; ಅವರಿಗೆ ಏನಾದರು ಸೇವಿಸಲು ಕೊಡಬೇಕು. ಇಷ್ಟು ಪ್ರಮಾಣದಲ್ಲಿ ಮೊಸರನ್ನು ಕಡೆಯುವುದು ಬಲದ ಕೆಲಸ, ಆದ್ದರಿಂದ ಆ ಗಟ್ಟಿಮುಟ್ಟಾದವನನ್ನು ಕರೆಯಬೇಕು; ಬೇರೆಯಾಗಿ ಶೋಕ ಸೂಚಕ ಉಡುಗೆಗಳನ್ನು ತೊಡುವುದು ಬೇಡ, ಹಳೇ ಪೇಪರಿನಲ್ಲಿ ಕಟ್ಟಿತಂದ ಹೂಗಳಾದರೂ ಅಡ್ಡಿಯಿಲ್ಲ; ಅವಳೇ ಕಸೂತಿ ಹಾಕಿದ ಬೆಡ್-ಶೀಟಿನಲ್ಲಿ ಅವಳ ದೇಹವನ್ನು ಹೊದಿಸಿರಿ; ಉದ್ದ ಕಡಿಮೆಯಾದ್ದರಿಂದ ಆ ಕಡೆಯಿಂದ ಅವಳ ಜಡ್ಡುಗಟ್ಟಿದ ಕಾಲ್ಬೆರಳುಗಳು ಹೊರಕಾಣುತ್ತದಾದರೂ ಅಡ್ಡಿಯಿಲ್ಲ; ಅವಳ ಮೇಲೆಯೇ ಪ್ರಕಾಶಮಾನವಾಗಿ ಬೆಳಕು ಬೀಳಲಿ; ಯಾವುದೂ ಮರೆ ಮಾಡುವುದು ಬೇಡ.

ಕವನದ ತಿರುಳು ತಿಳುದುಬರುತ್ತದೆಯಾದರೂ, ಈ ಐಸ್‌-ಕ್ರೀಮಿನ ರಾಜ ಯಾರೆಂಬುದು ಅಸ್ಪಷ್ಟ. ಮೊಸರನ್ನು ಯಾಕೆ ಕಡೆಯುತ್ತಾನೆ, ಅದರಿಂದ ಏನು ಮಾಡುತ್ತಾರೆ, ಐಸ್‌ಕ್ರೀಮ್ ಮಾಡುತ್ತಾರಾ? ಇಲ್ಲಿ ಆದೇಶಗಳನ್ನು ನೀಡುವ ದನಿ ಯಾರದು? ಇಂತಹ ಕೂದಲು-ಸೀಳುವಿಕೆ ಬೇಕಾ?

ಈ ಕವನವನ್ನು ಇಷ್ಟಪಡುತ್ತಾ ತಿರುಮಲೇಶರು ಇದರಲ್ಲಿ ‘ಎಲ್ಲವೂ ಇದೆ’ ಎಂದು ‘ಬ್ರಿಕ್-ಎ-ಬ್ರ್ಯಾಕ್’-ನಲ್ಲಿ ಹೇಳುತ್ತಾರೆ. ಈ ಸಾಲುಗಳು ಎಂದೂ ಹೊಸತಾಗಿಯೇ ಇರುತ್ತವೆ ಎಂದನ್ನುತ್ತಾರೆ. ಇರುವುದನ್ನು ನೋಡಿ, ಇಲ್ಲದ್ದನ್ನು ಬಿಟ್ಟುಬಿಡಿ ಅಂತ ಹೇಳುವ ಹಾಗೆ ಅನಿಸುತ್ತದೆ ನನಗೆ. ಆದರೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಲ್ವಾ?

ಆದರೆ ನನಗಿನ್ನೂ ಇಷ್ಟವಾದ್ದು ದಿ ಎಂಪರರ್
ಆಫ಼್ ಐಸ್‌ಕ್ರೀಮ್ ಯಾರಿಗೆ ತಾನೆ ಇಷ್ಟವಿಲ್ಲ

ಅದರಲ್ಲಿ ಎಂಪರರ್ ಇಲ್ಲ ಏನೂ ಇಲ್ಲ ಆದರೂ ಎಲ್ಲವೂ
ಇದೆ
ಕಾಡದೆ ಬೇಡದೆ ಬರುವ ಕವಿತೆ
ನನಗಿಷ್ಟ
ಯಾಕೆ ಬಂದೆ ಎಲ್ಲಿಗೆ ಬಂದೆ
ಎಂದು ತಿಳಿಯದೆಯೆ ತನಗೆ ತಾನೆ
ಮೂರ್ತವಾಗುವ ಪರಾತ್ಪರ
ಚಿಂತನೆ
ಎಷ್ಟು ಕಾಲವಾದರೂ ಸಾಲು ಹೊಸತಾಗಿಯೇ
ಇರುತ್ತೆ ಸಾಲು ಸಾಲಿನ ಸಾಲಭಂಜಿಕೆಗಳ ಹಾಗೆ

ನಾವೂ ಹೆಚ್ಚು ತಲೆಬಿಸಿ ಮಾಡಿಕೊಳ್ಳದೆ, ನಮ್ಮ ಊಹೆಗೆ ಬಂದಂತೆ ಈ ಐಸ್-ಕ್ರೀಮಿನ ರಾಜನನ್ನು ಕಲ್ಪಿಸಿಕೊಳ್ಳೋಣ. ಈ ಕವನವದ ನನ್ನ ಕನ್ನಡ ಅನುವಾದ ಹೀಗಿದೆ:

ಐಸ್-ಕ್ರೀಮಿನ ರಾಜ

ಕರೆಯಿರಿ ಆ ದಪ್ಪ ಚುರುಟುಗಳ ಸುರುಟುವವನನ್ನು,
ಅವನೇ, ಆ ಗಟ್ಟಿಮುಟ್ಟಾಗಿರುವವನನ್ನು,
ಹೇಳಿ ಅವನಿಗೆ ಉಬ್ಬಿದ ಮೊಸರನ್ನು ಡಬರಿಗಳಲ್ಲಿ ಕಡೆಯಲು.
ಹೆಣ್ಣಾಳುಗಳು ಎಂದಿನ ಉಡುಪುಗಳಲ್ಲೇ ಅಡ್ಡಾಡಲಿ,
ಗಂಡಾಳುಗಳು ಹಳೇ ದಿನಪತ್ರಿಕೆಗಳಲ್ಲಿ ಸುತ್ತಿದ ಹೂಗಳನ್ನೇ ತರಲಿ.
ಇರುವಿಕೆಗಳೇ ತೋರಿಕೆಗಳ ಅಂತ್ಯಹಾಡಲಿ.
ಇರುವುದೊಬ್ಬನೇ ರಾಜ ಅವನೇ ಐಸ್-ಕ್ರೀಮಿನ ರಾಜ.

ಬಿದ್ದುಹೋದ ಮೂರು ಗಾಜಿನ ಗುಬಟುಗಳಿದ್ದ
ಅಗ್ಗದ ಮರದ ಕಪಾಟಿನಿಂದ
ಅವಳು ಹಿಂದೊಮ್ಮೆ ಅಂದದ ಕಸೂತಿ ಹಾಕಿದ ಚಾದರವ ಹೊರ ತೆಗೆಯಿರಿ,
ಅವಳ ಮುಖ ಮುಚ್ಚುವ ಹಾಗೆ ಮೇಲೆ ಹೊದಿಸಿರಿ,
ಅವಳ ಕೊಂಬಿನಂತೆ ಜಡ್ಡುಗಟ್ಟಿದ ಪಾದಗಳು
ಹೊರಕಾಣುವುದಾದರೆ, ಅವಳು ಎಷ್ಟು ತಣ್ಣಗಾಗಿದ್ದಾಳೆ,
ಎಷ್ಟು ಮೂಕಳಾಗಿದ್ದಾಳೆ ಅಂತ ತಿಳಿಯುತ್ತೆ.
ದೀಪ ತನ್ನ ಬೆಳಕು ತೋರಲಿ ಅವಳ ಮೇಲೆ.
ಇರುವುದೊಬ್ಬನೇ ರಾಜ ಅವನೇ ಐಸ್-ಕ್ರೀಮಿನ ರಾಜ.

*****

ಬ್ರಿಕ್-ಎ-ಬ್ರ್ಯಾಕ್’ನಲ್ಲಿ ಉಲ್ಲೇಖವಾಗಿರುವ ಸ್ಟೀವನ್ಸ್-ರ ಆರು ಕವನಗಳಲ್ಲಿ ಐದು ಕವನಗಳನ್ನು ಇಲ್ಲಿ ಅನುವಾದ ಮಾಡಿರುವೆ. ಮೊದಲಿಗೆ ಬರುವ ಟೀ ಆ್ಯಟ್ ದ ಪಲಾಜ಼ ಆಫ಼್ ಹೂಣ್ (Tea at the Palaz of Hoon) ಕವನವನ್ನು ಅನುವಾದ ಮಾಡಲು ಪ್ರಾರಂಭಿಸಿದೆ, ಆದರೆ ತೃಪ್ತಿಕರವಾಗಿ ಸಾಗಲಿಲ್ಲ ಅನುವಾದ ಪಯಣ. ಹಟ ಹಿಡಿದು ಯಾವುದೋ ಮುಲಾಜಿಗೆ ಮಾಡಿದ ಹಾಗೆ ಆಗಬಾರದೆಂದು ಸುಮ್ಮನಾದೆ. ಮತ್ತೆ, ಇಲ್ಲಿ ಕಾಣುವ ಸ್ಟೀವನ್ಸ್-ರ ಐದು ಕವನಗಳನ್ನು ನಾನು ಅನುವಾದ ಮಾಡಿದ ಕ್ರಮದಲ್ಲೇ ಜೋಡಿಸಿರುವೆ; ತಿರುಮಲೇಶರ ‘ಬ್ರಿಕ್-ಎ-ಬ್ರ್ಯಾಕ್’-ನಲ್ಲಿ ಇವು ಬರುವ ಕ್ರಮ ಬೇರೆ.

ಇದು ಒಂದು ಪ್ರಯೋಗವೆಂದೇ ಹೇಳಬೇಕು. ಯಾವುದೇ ಪೂರ್ವಕಲ್ಪಿತ ಯೋಜನೆ ಇಲ್ಲದೆ ಬಿಡಿಬಿಡಿಯಾಗಿ ಮಾಡಿದ ಅನುವಾದಗಳಿವು. ಮಧ್ಯೆ ಎಲ್ಲೋ ಈ ಅನುವಾದಗಳನ್ನು ಒಂದು ನಿರೂಪಣೆಯ ಹಾರದಲ್ಲಿ ಪೋಣಿಸಬಹುದು ಅಂತ ಅನಿಸಿತು. ನಾನು ಇಷ್ಟಪಟ್ಟ ಕವಿ ತಿರುಮಲೇಶರ ಕಣ್ಣಿಗೆ ವಾಲಸ್ ಸ್ಟೀವನ್ಸ್-ರ ಕವನಗಳು ಹೇಗೆ ಕಂಡವು, ಸ್ಟೀವನ್ಸ್-ರು ಯಾವ ದೃಷ್ಟಿಯಿಂದ ಈ ಕವನಗಳನ್ನು ಬರೆದರು – ಈ ಎರಡು ದೃಷ್ಟಿಕೋನಗಳನ್ನು ಅನುವಾದದ ಮೂಲಕ ಒಂದೇ ಜಾಗದಲ್ಲಿ ಒಂದೇ ಭಾಷೆಯಲ್ಲಿ ತರುವುದಾದರೆ ಅವು ಹೇಗೆ ಕಾಣಬಹುದು ಎಂಬ ಕುತೂಹಲದಿಂದ ಈ ರೀತಿಯಾಗಿ ಈ ಲೇಖನ ಕೂಡಿ ಬಂತು.

ಕೊನೆಯಲ್ಲಿ, ತಿರುಮಲೇಶರ ಕವನದ ಶೀರ್ಷಿಕೆಯ ಕುರಿತು ಒಂದು ಸ್ವಾರಸ್ಯಕರ ಸಂಗತಿ. ‘ಬ್ರಿಕ್-ಎ-ಬ್ರ್ಯಾಕ್’ ಕವನದ ಶೀರ್ಷಿಕೆಯ ಅರ್ಥ ಅವರು ಮೊದಲ ಸ್ಟಾನ್ಜಾದಲ್ಲೇ ಹೇಳುತ್ತಾರೆ – ‘ಬ್ರಿಕ್-ಎ-ಬ್ರ್ಯಾಕ್’ ಅಂದರೆ “ಚಿಲ್ಲರೆ ಗ್ರಹಾಲಂಕಾರ ವಸ್ತುಗಳು.” ಈ ರೀತಿಯಾಗಿ ಯಾಕೆ ಹೆಸರಿಟ್ಟರು; ಸ್ಟೀವನ್ಸ್-ರ ಕವನಗಳೇನು ‘ಚಿಲ್ಲರೆ’ ವಸ್ತುಗಳಾ? ಮೊದಲ ಸ್ಟಾನ್ಜಾದಲ್ಲೇ ಇನ್ನೊಂದು ಸುಳಿವು ಕೊಡುತ್ತಾರೆ.

ನಿನ್ನ ಕವಿತಗಳೇನು ಮಹಾ
ಹೂಣರ ಮನೆಯಲ್ಲಿ ಚಹಾ
ಕುಡಿದಷ್ಷು ಸರಳ ಬ್ರಿಕ್-ಎ-ಬ್ರ್ಯಾಕ್
(ಚಿಲ್ಲರೆ ಗ್ರಹಾಲಂಕಾರ ವಸ್ತುಗಳು)
ಎಂದ ಹಿರೀಕನಿಗೆ ವಾಲಸ್ ಸ್ಟೀವನ್ಸ್
ಏನು ತಾನೆ ಹೇಳಬಲ್ಲ?

‘ನಿನ್ನ ಕವಿತೆಗಳೇನು ಮಹಾ; ಬ್ರಿಕ್-ಎ-ಬ್ರ್ಯಾಕ್’ ಅವು ಅಂತ ಹೇಳಿದ ಹಿರೀಕ ಯಾರು? ಸ್ವಲ್ಪ ಹುಡುಕಾಡಿದಾಗ ಈ ಹಿರೀಕ ಯಾರು, ಕವಿಯ ಜತೆ ಇವರದು ಏನು ಸಂಬಂಧ, ಯಾಕೆ ಹೀಗೆ ಹೇಳಿದರು ಅಂತೆಲ್ಲಾ ಗೊತ್ತಾಯಿತು. ಈ ಹಿರೀಕನೆ ಅಮೇರಿಕದ ಇನ್ನೊಬ್ಬ ಮಹಾಕವಿ, ಜನಮೆಚ್ಚಿದ ಕವಿ, ಹಾಗೂ ವಾಲಸ್ ಸ್ಟೀವನ್ಸ್-ರ ಸಮಕಾಲೀನರಾದ ರಾಬರ್ಟ್ ಫ಼್ರಾಸ್ಟ್. ವಾಲಸ್ ಸ್ಟೀವನ್ಸ್-ರಿಗಿಂತ ಐದು ವರ್ಷ ವಯಸ್ಸಿನಲ್ಲಿ ದೊಡ್ಡವರು. ಇದು 1935-ರಲ್ಲಿ ಜರುಗಿದ ಹಾಗೂ ನಂತರದ ವರುಷಗಳಲ್ಲಿ ಮುಂದುವರೆದ ವಿಷಯ. ಈಗ ನಾವು ಸ್ಟೀವನ್ಸ್ ಹಾಗೂ ಫ಼್ರಾಸ್ಟ್-ರನ್ನು ಸಮಕಾಲೀನರು, ಅಮೇರಿಕನ್ ಸಾಹಿತ್ಯದ ದಿಗ್ಗಜರು ಅಂತ ಪರಿಗಣಿಸುತ್ತೇವೆ. ಆದರೆ, 1935-ರಲ್ಲಿ ಇವರ ಖ್ಯಾತಿಗಳಲ್ಲಿ ಬಹಳ ಅಂತರವಿತ್ತು. ಫ಼್ರಾಸ್ಟ್-ರು ಆಗಲೇ ಎರಡು ಬಾರಿ ಅಮೆರಿಕದ ಪ್ರತಿಷ್ಠಿತ ‘ಪುಲಿಟ್ಜ಼ರ್’ ಪ್ರಶಸ್ತಿಯನ್ನು ಗೆದ್ದಿದ್ದರು. ಆಗ ಸ್ಟೀವನ್ಸ್-ರ ಒಂದೇ ಒಂದು ಕವನ ಸಂಕಲನ ಮಾತ್ರ ಪ್ರಕಟವಾಗಿತ್ತು; ಪ್ರಕಟವಾಗಿ ಹತ್ತುವರ್ಷಕ್ಕಿಂತಲೂ ಹೆಚ್ಚಾಗಿತ್ತು. ಸ್ಟೀವನ್ಸ್ ಪ್ರಭಾವಿ ಓದುಗರ ಅನುಮೋದನೆಯನ್ನು ಗಳಿಸಿದ್ದರೂ, ಫ಼್ರಾಸ್ಟ್ ಆ ಓದುಗರಲ್ಲಿ ಒಬ್ಬರಾಗಿರಲಿಲ್ಲ; ಸ್ಟೀವನ್ಸ್-ರ ಕಾವ್ಯವನ್ನು ತಾನು ಇಷ್ಟಪಡುವುದಿಲ್ಲ, “ಏಕೆಂದರೆ ಅದು ನನ್ನನ್ನು ಯೋಚಿಸುವಂತೆ ಮಾಡುತ್ತದೆ,” ಎಂದು ಫ಼್ರಾಸ್ಟ್ ಒಮ್ಮೆ ದೂರಿದರು. ಹಾಗೇಯೇ, ಫ್ರಾಸ್ಟ್-ರು ನಿಯಮಿತವಾಗಿ ಗಳಿಸುತ್ತಿದ್ದ ಸಾಹಿತ್ಯಿಕ ಮೆಚ್ಚುಗೆ ತನಗೂ ಸಿಗಬೇಕು ಅಂತ ಸ್ಟೀವನ್ಸ್-ರು ಹಂಬಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಕವಿಗಳು 1935-ರಲ್ಲಿ ಮಯಾಮಿ-ಯ (Miami) ಕೀ ವೆಸ್ಟ್ (Key West) ದ್ವೀಪ ನಗರದಲ್ಲಿ ಭೇಟಿಯಾದರು. ಆಗ ನಡೆದ ಡಿನರ್ ಪಾರ್ಟಿಯಲ್ಲಿ ಕವಿಗಳಿಬ್ಬರ ಮಧ್ಯೆ ತಮ್ಮ ತಮ್ಮ ಕಾವ್ಯಾತ್ಮಕತೆ, ಕಾವ್ಯಶೈಲಿಗಳ ಬಗ್ಗೆ ಚರ್ಚೆ, ವಾದ ವಿವಾದ ನಡೆಯಿತಂತೆ. ಅವರು ಇವರ, ಇವರು ಅವರ ಕಾವ್ಯಾತ್ಮಕತೆಯ ಬಗ್ಗೆ ಮಾತುಗಳನ್ನು ಆಡಿಕೊಂಡರು. ತಮ್ಮ ತಮ್ಮ ಕಾವ್ಯಶೈಲಿಗಳಲ್ಲಿ ದಿಗ್ಗಜರುಗಳಾಗಿದ್ದ ಈ ಇಬ್ಬರು ಕವಿಗಳ ಕಾವ್ಯಾತ್ಮಕತೆಗಳು, ಕಾವ್ಯಸಿದ್ಧಾಂತಗಳು ಎಷ್ಟು ವಿಭಿನ್ನವಾಗಿತ್ತು, ವಿರೋಧಾತ್ಮಕವಾಗಿತ್ತೆಂದರೆ, ಒಬ್ಬರ ಕಾವ್ಯ ಇನ್ನೊಬ್ಬರಿಗೆ ತೃಪ್ತಿ ಕೊಡುತ್ತಿರಲಿಲ್ಲ.

ಹಲವು ವಿಷಯಗಳು ನಡೆದವು ಇದರ ನಂತರ. ಐದು ವರ್ಷಗಳ ನಂತರ ಮತ್ತೆ ಕೀ ವೆಸ್ಟ್-ನಲ್ಲಿ ಭೇಟಿಯಾದರಂತೆ. ಆಗ ಫ್ರಾಸ್ಟ್ ತನ್ನ ಜೀವನಚರಿತ್ರೆಯನ್ನು ಬರೆದ ಲಾರೆನ್ಸ್ ಟಾಂಪ್ಸನ್-ನ (Lawrance Thompson) ಜತೆಗೆ ಬಂದಿದ್ದರು. ಕವಿಗಳ ಮಧ್ಯೆ ನಡೆದ ವಾಗ್ವಾದವನ್ನು ಲಾರೆನ್ಸ್ ಟಾಂಪ್ಸನ್ ಫ್ರಾಸ್ಟ್-ರ ಜೀವನಚರಿತ್ರೆಯಲ್ಲಿ ಬರೆದಿದ್ದಾರೆ. ಈ ವಾಗ್ವಾದವನ್ನು ಅಣಕದ ರೀತಿಯಲ್ಲಿ ಚುಟುಕಾಗಿ ಹೀಗೆ ಉಲ್ಲೇಖಿಸುತ್ತಾರೆ:

“ನಿನ್ನ ಸಮಸ್ಯೆ ಏನೆಂದರೆ, ರಾಬರ್ಟ್, ನೀನು ತುಂಬಾನೆ ಆ್ಯಕಡೆಮಿಕ್.”

“ನಿನ್ನ ಸಮಸ್ಯೆ ಏನೆಂದರೆ, ವಾಲಸ್, ನೀನು ತುಂಬಾನೆ ಮ್ಯಾನೆಜೀರಿಯಲ್.”

“ನಿನ್ನ ಸಮಸ್ಯೆ ಏನೆಂದರೆ, ರಾಬರ್ಟ್, ನೀನು ಸಬ್ಜೆಕ್ಟ್-ಗಳ ಬಗ್ಗೆ ಬರೆಯುತ್ತಿಯಾ.”

“ನಿನ್ನ ಸಮಸ್ಯೆ ಏನೆಂದರೆ, ವಾಲಸ್, ನೀನು ಬ್ರಿಕ್-ಎ-ಬ್ರ್ಯಾಕ್-ಗಳ ಬಗ್ಗೆ ಬರೆಯುತ್ತಿಯಾ.”

ಕವಿಗಳು ಒಬ್ಬರನ್ನೊಬ್ಬರು ವರ್ಣಿಸಲು ಬಳಸಿದ ಪದಗಳನ್ನು ಹಾಗೇ ಉಳಿಸಿಕೊಂಡಿರುವೆ. ಇದೇ ‘ಬ್ರಿಕ್-ಎ-ಬ್ರ್ಯಾಕ್’ ಉಲ್ಲೇಖವನ್ನು ತಿರುಮಲೇಶರು ತಮ್ಮ ಕವನಕ್ಕೆ ಶೀರ್ಷಿಕೆಯಾಗಿ ಬಳಸಿಕೊಂಡರು. ಈ ಶೀರ್ಷಿಕೆಯ ಆಯ್ಕೆಯಲ್ಲಿ ತಮ್ಮ ಕಾವ್ಯದ ಬಗ್ಗೆ ಕೂಡ ಜನರು ಹೀಗೇ ಹೇಳಬಹುದು ಎಂಬ ಅತ್ಮಾವಲೋಕನವೂ ಇರಬಹುದು.

ಆಕರ ಪುಸ್ತಕಗಳು:

N. a. “The trouble with Robert Frost & Wallace Stevens.” Littoral/Key West Life of Letters. N.d. https://www.kwls.org/key-wests-life-of-letters/post_11/. Accessed on 30 October 2023.

Stevens, Wallace. The Collected Poems of Wallace Stevens (1990 Edn.). New York: Vintage Books, 1990.

ತಿರುಮಲೇಶ್, ಕೆ. ವಿ. ಅಪ್ರಮೇಯ. ಬೆಂಗಳೂರು: ಅಭಿನವ, 2023.

*****

ಪ್ರತಿಕ್ರಿಯಿಸಿ