ನರ್ಗೆಸ್ ಮೊಹಮ್ಮದಿ : ಬಿಳಿ ಕೋಣೆಯ ಏಕಾಂತ ಸೆರೆವಾಸದಲ್ಲಿ ..  

ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳಿಗಾಗಿನ ಪ್ರತಿಭಟನೆಯ ಧ್ವನಿ ನರ್ಗೆಸ್ ಮೊಹಮ್ಮದಿ ಅವರಿಗೆ ಈ ಸಲದ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ಇರಾನ್ ಸರ್ಕಾರ ದೀರ್ಘಕಾಲದಿಂದ ಅವರನ್ನು ಸೆರೆವಾಸದಲ್ಲಿಟ್ಟದ್ದರಿಂದ ಅವರು ಪ್ರಶಸ್ತಿ ಸ್ವೀಕರಿಸಲಾಗಲಿಲ್ಲ. “ನಾನು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಾಕ್ಷಾತ್ಕಾರಕ್ಕಾಗಿ ಶ್ರಮಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.ಇರಾನ್‌ನ ಧೈರ್ಯಶಾಲಿ ತಾಯಂದಿರ ಜೊತೆಯಲ್ಲಿ ನಿಂತು… ನಾನು ತಾರತಮ್ಯ, ದೌರ್ಜನ್ಯ ಮತ್ತು ಲಿಂಗ ಆಧಾರಿತ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ  ಮುಂದುವರಿಸುತ್ತೇನೆ.” ಎಂದು ನರ್ಗೆಸ್ ಮೊಹಮ್ಮದಿ ನೊಬೆಲ್  ಪ್ರಶಸ್ತಿ ಘೋಷಣೆಯ ನಂತರ ಜೈಲಿನಿಂದ ನೀಡಲಾದ ಸಂದರ್ಶನದಲ್ಲಿ ಹೇಳಿದ್ದಾರೆ. ಸರ್ವಾಧಿಕಾರ ಮತ್ತು ಗಂಡಾಳ್ವಿಕೆಯ ವಿರುದ್ದದ ಜಗತ್ತಿನೆಲ್ಲೆಡೆಯ ಸಮಕಾಲೀನ ಹೋರಾಟಗಳಿಗೆ ಸ್ಪೂರ್ತಿಯಾಗಬಲ್ಲ ನರ್ಗೆಸ್ ಮೊಹಮ್ಮದಿ ಅವರ  ಈ  ದೀರ್ಘ ಪರಿಚಯ ಮತ್ತು ಸಂದರ್ಶನ ನಿಮ್ಮ ಇಂದಿನ ಭಾನುವಾರದ ಓದಿಗೆ …

ನರ್ಗೆಸ್ ಮೊಹಮ್ಮದಿ, ಇರಾನಿನ ಮಾನವ ಮತ್ತು ನಾಗರಿಕ ಹಕ್ಕುಗಳ ದಿಟ್ಟ ಹೋರಾಟಗಾರರಲ್ಲಿ ಒಬ್ಬರು. ಮರಣದಂಡನಾ ತೀರ್ಪು ವಿರೋಧಿ ಪ್ರಚಾರಕಿಯಾಗಿ, ಮಹಿಳಾ ಹಕ್ಕುಗಳ ಪ್ರತಿಪಾದಕಿಯಾಗಿ, ರಾಷ್ಟ್ರೀಯ ಶಾಂತಿ ಮಂಡಳಿಯ ಉಪಾಧ್ಯಕ್ಷೆಯಾಗಿ, ಮಾನವ ಹಕ್ಕು ರಕ್ಷಕರ ಕೇಂದ್ರದ (DHRC) ಉಪಾಧ್ಯಕ್ಷೆ ಹಾಗೂ ವಕ್ತಾರೆಯಾಗಿ ತಮ್ಮನ್ನು ಗುರುತಿಸಿಕೊಂಡವರು.

ಇಸ್ಲಾಮಿಕ್ ರಿಪಬ್ಲಿಕ್ ಆಫ಼್ ಇರಾನ್ ನಲ್ಲಿ ನಿರ್ಭಿಡೆಯಿಂದ ಮಾತನಾಡುವ ಆತ್ಮಸಾಕ್ಷಿ ಕೈದಿಗಳಲ್ಲಿ ನರ್ಗೆಸ್ ಪ್ರಮುಖರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಪೂರ್ಣ ವ್ಯಕ್ತಿತ್ವ ಆಕೆಯದ್ದು. ಸತತ ಇಪ್ಪತೆಂಟು ವರ್ಷಗಳಿಂದ ನಿರಂತರವಾಗಿ ಜೈಲಿನ ಒಳಗೂ – ಹೊರಗೂ, ದಬ್ಬಾಳಿಕೆಯ ವಿರುದ್ಧ ಅಹಿಂಸಾತ್ಮಕ ದಿಟ್ಟ ದನಿಯಾಗಿ  ನರ್ಗೆಸ್ ರದ್ದು ಪಟ್ಟುಬಿಡದ ಛಲ. ಹಲವು ಬಾರಿ ಬಂಧನಕ್ಕೊಳಗಾಗಿ ಸೆರೆವಾಸದಲ್ಲಿದ್ದು, ಕೊನೆಗೆ ಹದಿನಾರು ವರ್ಷದ ಸಜೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಆಕೆ ಜೈಲುವಾಸದಲ್ಲಿರಬೇಕಾಯಿತು.

ನರ್ಗೆಸ್, ನರದೌರ್ಬಲ್ಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಕೋವಿಡ್-೧೯ರ ಸೋಂಕಿಗೆ ತುತ್ತಾಗಿರುತಿದ್ದರೆ ಆಕೆಯ ಆರೋಗ್ಯ ಇನ್ನೂ ಹದಗೆಡುವ ಅಪಾಯವಿತ್ತು. ಜುಲೈ ೨೦೨೦ರಲ್ಲಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ಗುಂಪೊಂದು, ನರ್ಗೆಸ್ ರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು,  ಆಕೆಗೆ ಕೋವಿಡ್-೧೯ ರೋಗಲಕ್ಷಣಗಳಿಂದ ಬಳ ಲುತ್ತಿದ್ದಾರೆ ಎಂಬ ವರದಿಗಳ ಆಧಾರದ ಮೇಲೆ ಅವರ ಬಿಡುಗಡೆಗೆ ಕರೆ ನೀಡಿತು. ನರ್ಗೆಸ್ ಮೊಹಮ್ಮದಿಯಂತ ಆರೋಗ್ಯ ಸಮಸ್ಯೆಯಿರುವಂತವರಿಗೆ ಕೋವಿಡ್ ಜೀವನ್ಮರಣದ ಪ್ರಶ್ನೆಯಾಗಬಹುದು ಹಾಗೂ ಇರಾನ್ ಅಧಿಕಾರಿಗಳು ತಡ ಮಾಡದೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನರ್ಗೆಸ್ ಅವರ ಆರೋಗ್ಯದ ಕಾಳಜಿಯಿಂದ ನಡೆಯುತ್ತಿರುವ ಆಗ್ರಹವನ್ನು ಮನ್ನಿಸಿ ಹಾಗೂ  ಇರಾನಿನ ಕಿಕ್ಕಿರಿದ ಜೈಲುಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ, ಕೊನೆಗೂ  ಎಂಟೂವರೆ ವರ್ಷಗಳ ಸೆರೆವಾಸದ ನಂತರ ೭ ಅಕ್ಟೋಬರ್ ೨೦೨೦ರಂದು ನರ್ಗೆಸ್ ಅವರನ್ನು ಬಿಡುಗಡೆ ಮಾಡಲಾಯಿತು.

ನರ್ಗೆಸ್ ಮೊಹಮ್ಮದಿಯವರ ಕಾನೂನುಬಾಹಿರ ಸೆರೆವಾಸದ ವಿರುದ್ಧ, UN ಮಾನವ ಹಕ್ಕುಗಳ ತಜ್ಞರಷ್ಟೇ ಅಲ್ಲದೆ, ಅಮ್ನೆಸ್ಟಿ ಇಂಟರ್ ನ್ಯಾಶನಲ್, (Amnesty International), ಹ್ಯೂಮನ್ ರೈಟ್ಸ್ ವಾಚ್ (Human Rights Watch), ಮಾನವ ಹಕ್ಕುಗಳ ರಕ್ಷಕರ ಸುರಕ್ಷಾ ವೀಕ್ಷಣ ಕೇಂದ್ರ (Observatory for the Protection of Human Rights Defenders), ನೊಬೆಲ್ ವಿಮೆನ್ ಇನಿಷಿಯೇಟಿವ್ (The Nobel Women Initiative), ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ (Reporters without Borders) ಪೆನ್ ಇಂಟರ್ ನ್ಯಾಶನಲ್, ಇರಾನಿನ ಮಾನವ ಹಕ್ಕುಗಳ ರಕ್ಷಕರ ಕೇಂದ್ರ (Iranian Center for Human Rights Defenders) ಸೇರಿದಂತೆ ಹಲವಾರು ದೇಶ ವಿದೇಶಗಳ ಮಾನವ ಹಕ್ಕುಗಳ ಸಂಘಟನೆಗಳೂ ಆಕೆಯ ಬಿಡುಗಡೆಯನ್ನು ಒತ್ತಾಯಿಸಿ ಕರೆ ನೀಡಿದ್ದರು.

ನರ್ಗೆಸ್ ಮೊಹಮ್ಮದಿಯವರ ಅಸಾಧಾರಣ ಬದುಕಿನ ಚಿತ್ರಣ ಹೀಗಿದೆ
ನರ್ಗೆಸ್, ೧೯೭೨ರ ಏಪ್ರಿಲ್ ೨೧ರಂದು ಇರಾನಿನ ಜಂಜಾನ್ ನಗರದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ಕಜ್ವಿನ್ ನಗರದ ಅಂತರರಾಷ್ಟ್ರೀಯ ಇಮಾಮ್ ಖೊಮೇನಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿರುವ ನರ್ಗೆಸ್, ಕಾಲೇಜು ದಿನಗಳಲ್ಲೇ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ‘ತಶಕ್ಕೋಲ್ ದಾನೇಶ್ಜುಯಿ ರೋಶಂಗರಾನ್’ (ಪ್ರಬುದ್ಧ ವಿದ್ಯಾರ್ಥಿ ಗುಂಪು) ಎನ್ನುವ ವಿದ್ಯಾರ್ಥಿ ಸಂಘಟನೆಯನ್ನು ಕಲೆಹಾಕಿ, ಸಂಘಟನೆಯ ಪತ್ರಿಕೆಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಮಹಿಳಾ ಸಮಸ್ಯೆಗಳ ಕುರಿತಾಗಿ ಲೇಖನಗಳನ್ನು ಬರೆಯುತಿದ್ದರು. ಆಕೆಯ ವಿದ್ಯಾರ್ಥಿ ಜೀವನದಲ್ಲಿ ಎರಡು ಬಾರಿ ಬಂಧನಕ್ಕೊಳಗಾಗಿದ್ದು, ಇದು ಅವರ ನಂತರದ ಹೋರಾಟಯುತ ಬದುಕಿಗೆ ಮುನ್ನುಡಿಯಾಯಿತು.

ಪದವಿ ಶಿಕ್ಷಣದ ಬಳಿಕ ನರ್ಗೆಸ್, ಇರಾನಿನ ಇಂಜಿನಿಯರ್ ತಪಾಸಣಾ ನಿಗಮ (Iran Engineering Inspection Corporation) ದಲ್ಲಿ ವೃತ್ತಿಪರ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದರು. ಇದರೊಂದಿಗೆ ಇರಾನಿನ ಕೆಲವು ಸುಧಾರಣಾವಾದಿ ಪತ್ರಿಕೆಗಳು ಮತ್ತು ಪ್ರಕಟನಾ ಸಂಸ್ಥೆಗಳಿಗಾಗಿ, ಲಿಂಗಸಮಾನತೆ ಮತ್ತು ಪ್ರಜಾಪ್ರಭುತ್ವದ ಬಗೆಗಿನ ತಮ್ಮ ಬರವಣಿಗೆಯನ್ನೂ ಅವರು ಮುಂದುವರಿಸಿದರು. ‘The reforms, the Strategy, and the Tactics’ ಎನ್ನುವ ರಾಜಕೀಯ ಪ್ರಬಂಧಗಳ ಪುಸ್ತಕವನ್ನೂ ಹೊರತಂದರು. ೧೯೯೦ರ ದಶಕದಿಂದೀಚೆಗೆ, ನರ್ಗೆಸ್ ಮೊಹಮ್ಮದಿ, ಇರಾನಿನ ಕಾನೂನು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು, ಸ್ತ್ರೀವಾದಿ ಆಂದೋಲನದ ಮುಖ್ಯ ಚಿಂತಕಿಯಷ್ಟೇ ಅಲ್ಲದೆ, ಲಿಂಗ, ಲೈಂಗಿಕತೆ, ಧರ್ಮ, ವರ್ಗ, ಜನಾಂಗ ಆಧರಿತ ತಾರತಮ್ಯ, ಹೀಗೆ ಎಲ್ಲ ರೀತಿಯ ದೌರ್ಜನ್ಯಗಳ ವಿರುದ್ಧದ ಗಟ್ಟಿ ದನಿಯಾಗಿದ್ದಾರೆ.

ಸೆರೆವಾಸದ ಸಮಯ , ಕುಟುಂಬದಿಂದ ಬೇರ್ಪಡುವಿಕೆ  ಮತ್ತು ಪ್ರತಿರೋಧ:

೧೯೯೮ರಲ್ಲಿ ಇರಾನ್ ಸರಕಾರ ವಿರುದ್ಧದ ಟೀಕೆಗಳಿಗಾಗಿ ಬಂಧನಕ್ಕೊಳಗಾದ ನರ್ಗೆಸ್ ಒಂದು ವರುಷ ಸೆರೆಮನೆವಾಸ ಅನುಭವಿಸಿದರು. ೧೯೯೯ರಲ್ಲಿ ಹೊಸ ಧಾರ್ಮಿಕ ಚಿಂತಕರ ಸಾಲಿಗೆ ಸೇರಿದ್ದ ಸುಧಾರಣಾ ಪರ ಪತ್ರಕರ್ತ ತಘಿ ರಹಮನಿ ಅವರನ್ನು ಮದುವೆಯಾದರು. ಆದರೆ ಅವರ ಮದುವೆಯಾದ ಕೆಲವೇ ಸಮಯದ ನಂತರ ತಘಿ ರಹಮನಿ ಅವರನ್ನು ಸುಮಾರು ಹದಿನಾಲ್ಕು ವರ್ಷಗಳ ಕಾಲ ಹಲವು ಬಾರಿ ಬಂಧಿಸಲಾಯಿತು. ೨೦೦೭ರಲ್ಲಿ ನರ್ಗೆಸ್ ಮತ್ತು ತಘಿ, ಅಲಿ ಮತ್ತು ಕಿಯಾನ ಎಂಬ ಅವಳಿ ಮಕ್ಕಳ ಪೋಷಕರಾದರು. ೨೦೧೨ರಲ್ಲಿ ಜೈಲಿನಿಂದ ಹೊರಗಿದ್ದ ಸಮಯದಲ್ಲಿ ತಘಿ ಅವರ ವಿರುದ್ಧ ನಾಲ್ಕು ಹೊಸ ಪ್ರಕರಣಗಳು ದಾಖಲಾದವು. ಈ ವಿಷಯವನ್ನರಿತ ತಘಿ, ತಮ್ಮ ಬಂಧನ ಮತ್ತು ದೀರ್ಘಾವಧಿಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಇರಾನ್ ನಿಂದ ಪಲಾಯನ ಮಾಡಿ ಫ಼್ರಾನ್ಸ್ ನಲ್ಲಿ ಆಶ್ರಯ ಪಡೆಯುವ ಕಠಿಣ ನಿರ್ಧಾರವನ್ನು ಕೈಗೊಂಡರು. ಆದರೆ, ನರ್ಗೆಸ್ ಅವರು ಇರಾನ್ ನಲ್ಲಿದ್ದುಕೊಂಡೇ, ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಮತ್ತು ಮಾನವ ಹಕ್ಕುಗಳ ಸಂಬಂಧಿತ ತಮ್ಮ ಕೆಲಸವನ್ನು ಮುಂದುವರಿಸುವ ಕಷ್ಟಕರ ನಿರ್ಧಾರವನ್ನು ಮಾಡಿದರು.

೨೦೦೯-೨೦೧೨ರ ಅವಧಿಯಲ್ಲಿ, ನಾನು ಇರಾನ್ ನಿಂದ ಹೊರಹೋಗುವಂತೆ ಭದ್ರತಾ ಏಜೆಂಟರುಗಳು ನನ್ನ ಮೇಲೆ ಒತ್ತಡವನ್ನು ಹೇರಿದ್ದರು. ಪಶ್ಚಿಮ ಇರಾನಿನ ಕುರ್ದಿಸ್ತಾನ್ ನಲ್ಲಿರುವ ಪರ್ವತಗಳಲ್ಲಿನ ದಾರಿಗಳ ಮೂಲಕ ಕಾಲ್ನಡಿಗೆಯಲ್ಲಿ ತಪ್ಪಿಸಿಕೊಂಡು ಹೋಗುವಲ್ಲಿ ನನಗೆ ಸಹಾಯ ಮಾಡುವುದಾಗಿ ಹೇಳಿ ನನ್ನ ಮೊಬೈಲ್ ಫೋನ್ ಗೆ ನೇರವಾಗಿ ಕರೆ ಮಾಡುತಿದ್ದರು. ಆದರೆ ಇದು ನನ್ನನ್ನು ಮಟ್ಟಹಾಕುವ ಷಡ್ಯಂತ್ರ ಎನ್ನುವುದನ್ನು ನಾನು ಗ್ರಹಿಸಿದ್ದೆ. ನನ್ನ ಚಿಕ್ಕ ಮಕ್ಕಳು ದುರ್ಗಮ ದಾರಿಯಲ್ಲಿ ನಡೆಯಲು ತ್ರಾಸವಾಗುವ ನೆಪ ಮುಂದಿಟ್ಟು ಸಹಜವಾಗಿ ಅವರ ನೆರವನ್ನು ನಿರಾಕರಿಸಿದೆ. ತಘಿ ಯುರೋಪಿಗೆ ಪಲಾಯನ ಮಾಡಬೇಕಾದ ನಂತರ, ‘ಇರಾನ್ ನಲ್ಲಿ ಉಳಿಯಲು ನಿಮಗೆ ಏನೂ ಕಾರಣವಿಲ್ಲ, ನೀವು ಕೂಡ ನಿಮ್ಮ ಗಂಡನಂತೆ ಯಾಕೆ ಓಡಿಹೋಗಬಾರದು,’ ಎಂದು ನನ್ನ ಮೇಲೆ ಇನ್ನೂ ಹೆಚ್ಚಿನ ಒತ್ತಡವನ್ನು ಹಾಕಲು ಪ್ರಯತ್ನಿಸಿದರು, ಆದರೆ ಇತ್ತೀಚಿನ ಕೆಲವು ವರುಷಗಳಿಂದ ಹಾಗೆ ಒತ್ತಡ ಹೇರುವ ಪ್ರಯತ್ನ ಸ್ವಲ್ಪ ಕಡಿಮೆಯಾದಂತಿದೆ.

ಭದ್ರತಾ ಏಜೆಂಟರುಗಳು ನರ್ಗೆಸ್ ರನ್ನು ಗಂಭೀರ ಸವಾಲಾಗಿ ಪರಿಗಣಿಸಿದ್ದು,  ಆಕೆಯನ್ನು ಗಡೀಪಾರು ಮಾಡುವ ಇಲ್ಲವೇ ಆಕೆ ಪಲಾಯನ ಮಾಡುವ ಸಂದರ್ಭದಲ್ಲಿ ಅವರನ್ನು  ಹತ್ಯೆಗೆಯ್ಯುವ ಕುತಂತ್ರ ಯೋಚನೆ ಹೊಂದಿದ್ದರು ಎನ್ನುವುದು ಸ್ಪಷ್ಟ. ಆದರೆ ಆ ಎಲ್ಲ ಬೆದರಿಕೆಯ ಹೊರತಾಗಿಯೂ, ನರ್ಗೆಸ್, ಇರಾನ್ ನಲ್ಲೇ ಉಳಿದುಕೊಳ್ಳುವ ದಿಟ್ಟನಿಲುವು ತಳೆದರು. ಕೆಲ ವರ್ಷಗಳ  ನಂತರ, ಪದೇ ಪದೇ ನರ್ಗೆಸ್ ಬಂಧನಗೊಳಗಾಗಿ ಜೈಲಿಗೆ ಹೋಗಬೇಕಾದ ಹಲವು ಸಂದರ್ಭಗಳು ಎದುರಾದಾಗ, ನರ್ಗೆಸ್ ಮತ್ತು ತಘಿ ತಮ್ಮ ಮಕ್ಕಳಿಬ್ಬರೂ ತಂದೆಯೊಂದಿಗೇ ಇರುವುದು ಸೂಕ್ತ ಎಂದು ನಿರ್ಧರಿಸಿದರು.

ಇಸ್ಲಾಮಿಕ್ ರಿಪಬ್ಲಿಕ್ ನ ದಮನಕಾರಿ ವ್ಯವಸ್ಥೆಯ ಅಡಿಯಲ್ಲಿ ಬರವಣಿಗೆ, ಹೋರಾಟದ ಬದುಕಿನ ಜತೆಗೆ ತಮ್ಮ ಇಂಜಿನಿಯರ್ ವೃತ್ತಿಯನ್ನೂ ಸಮರ್ಥವಾಗಿ ನಿರ್ವಹಿಸುವುದು ಅಸಾಧ್ಯವಾಗಿತ್ತು. ೨೦೦೯ರಲ್ಲಿ ಇಂಜಿನಿಯರಿಂಗ್ ತಪಾಸಣಾ ನಿಗಮದ ವೃತ್ತಿಯಿಂದ ಅವರನ್ನು ವಜಾಗೊಳಿಸಲಾಯಿತು. ೨೦೧೦ರ ಏಪ್ರಿಲ್ ನಲ್ಲಿ, ಇಸ್ಲಾಮಿಕ್ ರೆವೆಲ್ಯೂಷನರಿ ಕೋರ್ಟ್ ಮಾನವ ಹಕ್ಕುಗಳ ಕೇಂದ್ರದ (DHRC) ಸದಸ್ಯರಾಗಿರುವುದಕ್ಕಾಗಿ, ನರ್ಗೆಸ್ ರ ವಿರುದ್ಧ  ಸಮನ್ಸ್ ಜಾರಿ ಮಾಡಿತು. ಸುಮಾರು ೫೦,೦೦೦ ಡಾಲರ್ ಮೊತ್ತದ  ಸಮಾನ ಜಾಮೀನಿನ ಮೇಲೆ ಸ್ವಲ್ಪಕಾಲದ ವರೆಗೆ ಬಿಡುಗಡೆ ಮಾಡಲಾಯಿತಾದರೂ ನಂತರ ಮತ್ತೆ ಬಂಧನಕ್ಕೊಳಗಾಗಿ ಎವಿನ್ ಜೈಲಿನಲ್ಲಿಡಲಾಯಿತು. ಬಂಧನದಲ್ಲಿದ್ದಾಗ, ನರ್ಗೆಸ್ ಅವರ ಆರೋಗ್ಯವು ಕ್ಷೀಣಿಸಿ ಪದೇ ಪದೇ ಸ್ನಾಯು ನಿಯಂತ್ರಣ ಕಳೆದುಕೊಳ್ಳುವ ಅಪಸ್ಮಾರದಂತಹ ಕಾಯಿಲೆಗೊಳಗಾದರು. ಒಂದು ತಿಂಗಳ ನಂತರ ಅವರನ್ನು ಬಿಡುಗಡೆ ಮಾಡಿ  ಆಸ್ಪತ್ರೆಗೆ ಹೋಗಲು ಅನುಮತಿ ನೀಡಲಾಯಿತು.

ಜುಲೈ ೨೦೧೧ರಲ್ಲಿ ಮತ್ತೆ ನರ್ಗೆಸ್ ರನ್ನು ವಿಚಾರಣೆಗೆ ಒಳಪಡಿಸಿ, ರಾಷ್ಟ್ರೀಯ ಭದ್ರತೆ, DHRC ಯ ಸದಸ್ಯತ್ವ, ಮತ್ತು ಆಡಳಿತದ (ನೆಜಾಮ್) ವಿರುದ್ಧ ಪ್ರಚಾರ ಇವುಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೦೧೧ರಲ್ಲಿ ಹನ್ನೊಂದು ವರುಷಗಳ ಸೆರೆವಾಸದ ತೀರ್ಪನ್ನು ನೀಡಲಾಯಿತು. ನರ್ಗೆಸ್ ಹೇಳಿದಂತೆ, ತನ್ನ ವಿರುಧ್ಧ ತೀರ್ಪು ಆಕೆಗೆ ತಿಳಿದದ್ದು ತನ್ನ ವಕೀಲರ ಮೂಲಕ. ತನ್ನ ಮಾನವ ಹಕ್ಕುಗಳ ಕುರಿತ ಹೋರಾಟ ಹಾಗೂ ಚಟುವಟಿಕೆಗಳನ್ನು ಪ್ರಭುತ್ವದ ವಿರುದ್ಧ ನಡೆಯೆಂದೂ ಮತ್ತು ಆಡಳಿತವನ್ನು ಉರುಳಿಸುವ ಪ್ರಯತ್ನಗಳೆಂದೂ ಸಮೀಕರಿಸಿ ೨೩ ಪುಟಗಳ ಅನಿರೀಕ್ಷಿತ ತೀರ್ಪನ್ನು ನೀಡಲಾಯಿತು. ಮಾರ್ಚ್ ೨೦೧೨ರಲ್ಲಿ ನರ್ಗೆಸ್ ಅವರ ಶಿಕ್ಷೆಯನ್ನು ಮೇಲ್ಮನವಿ ನ್ಯಾಯಾಲಯವು ಎತ್ತಿ ಹಿಡಿಯಿತು. ಶಿಕ್ಷಾಸಮಯವನ್ನು ಆರು ವರ್ಷಗಳಿಗೆ ಇಳಿಸಿ, ಏಪ್ರಿಲ್ ೨೬, ೨೦೧೨ರಂದು , ನರ್ಗೆಸ್ ರನ್ನು ಬಂಧನದಲ್ಲಿರಿಸಲಾಯಿತು. 

ನರ್ಗೆಸ್ ವಿರುದ್ಧ ನೀಡಲಾದ  ತೀರ್ಪಿನ ಬಗ್ಗೆ ಹಲವು ಪ್ರಮುಖ ವ್ಯಕ್ತಿಗಳು ಹಾಗೂ ವಿವಿಧ ಸಂಘಟನೆಗಳಿಂದ ಖಂಡನೆ ವ್ಯಕ್ತವಾದವು. ದಿಟ್ಟ ಮಾನವ ಹಕ್ಕುಗಳ ಹೋರಾಟಗಾರರನ್ನು ಇರಾನಿನ ಅಧಿಕಾರಿಗಳು ಮೌನಗೊಳಿಸಲು ಮಾಡುತ್ತಿರುವ ವಿಷಾದಕರ ಪ್ರಯತ್ನವೆಂದು ಬ್ರಿಟಿಷ್ ವಿದೇಶಾಂಗ ಕಚೇರಿಯು ಹೇಳಿತು. ಅಮ್ನೆಸ್ಟಿ ಇಂಟರ್ ನ್ಯಾಶನಲ್, ನರ್ಗೆಸ್ ಅವರನ್ನು ಆತ್ಮಸಾಕ್ಷಿಯ ಕೈದಿಯೆಂದು ಬಣ್ಣಿಸಿ, ಆಕೆಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಕೋರಿತು. ಛಾಯಾಗ್ರಾಹಕ ಜಹ್ರಾ ಕಝೇಮಿಯವರ ಸಾವಿನ ಒಂಭತ್ತನೇ ಪುಣ್ಯತಿಥಿಯಂದು  ಕಝೇಮಿಯಂತೆ ನರ್ಗೆಸ್ ರ  ಜೀವಕ್ಕೂ ಅಪಾಯವಿದೆ ಎಂದು , ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ ಅವರ ಪರವಾಗಿ ಮನವಿ ಸಲ್ಲಿಸಿತು. ಜುಲೈ ೨೦೧೨ರಲ್ಲಿ, ಅಮೆರಿಕದ  ಸೆನೆಟರ್ ಮಾರ್ಕ್ ಕಿಕ್, ಕೆನಡಾದ ಮಾಜಿ ಅಟಾರ್ನಿ ಜನರಲ್ ಇರ್ವಿನ್ ಕಾಟ್ಲರ್, ಯು ಕೆ ಸಂಸದ ಡೆನಿಸ್ ಮ್ಯಾಕ್ ಶೇನ್, ಆಸ್ಟ್ರೇಲಿಯಾದ ಸಂಸದ ಮೈಕೆಲ್ ಡ್ಯಾನ್ಬಿ, ಇಟಾಲಿಯನ್ ಸಂಸದ ಫ್ಹಿಯಮ್ಮ ನಿರೆನ್ ಸ್ಟೈನ್ ಮತು ಲಿಥುವೇನಿಯನ್ ಸಂಸದ ಇಮ್ಯಾನುಯೆಲಿಸ್ ಜಿಂಗರಿಸ್ ಸೇರಿದಂತೆ ಅಂತರಾಷ್ಟ್ರೀಯ ಶಾಸಕರ ಗುಂಪೊಂದು ನರ್ಗೆಸ್ ಅವರ ಬಿಡುಗಡೆಗೆ ಕರೆ ನೀಡಿತು. ಹೀಗೆ ಹಲವು ಕಡೆಗಳಿಂದ ಬಂದ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ನರ್ಗೆಸ್ ಅವರನ್ನು ಜುಲೈ ೩೧, ೨೦೧೨ರಂದು ಬಿಡುಗಡೆಗೊಳಿಸಲಾಯಿತು.

ಪದೇ ಪದೇ ಬಂಧನ – ಸೆರೆವಾಸಗಳು ನರ್ಗೆಸ್ ಅವರನ್ನು ಎದೆಗುಂದಿಸದಾದವು. ಅಕ್ಟೋಬರ್ ೩೧, ೨೦೧೪ರಂದು, ಸತ್ತಾರ್ ಬೆಹೆಷ್ಟಿ ಎಂಬ ಸಾಮಾಜಿಕ ಮಾಧ್ಯಮ ಬರಹಗಾರ ಸೆರೆವಾಸದಲ್ಲಿಯೇ ತೀರಿ ಹೋದ  ಸಂದರ್ಭದಲ್ಲಿ ನರ್ಗೆಸ್ ಅವರು ಮನಕಲಕುವ ಭಾಷಣವನ್ನು ಮಾಡಿದರು. ಈ ಭಾಷಣದಲ್ಲಿ ನರ್ಗೆಸ್, ” ದುಷ್ಟ ಶಕ್ತಿಗಳನ್ನು ತಡೆಗಟ್ಟುವುದು ಮತ್ತು ಒಳ್ಳೆಯತನವನ್ನು ಹೆಚ್ಚು ಪ್ರಚಾರಗೊಳಿಸುವುದನ್ನು ಬೆಂಬಲಿಸಬೇಕೆಂದು  ಸಂಸತ್ತಿನ ಸದಸ್ಯರುಗಳು ಸೂಚನೆಯಿತ್ತಿದ್ದರು, ಆದರೆ, ಎರಡು ವರುಷಗಳ ಹಿಂದೆ ಸತ್ತಾರ್ ಬೆಹೆಷ್ಟಿ ಎನ್ನುವ ಅಮಾಯಕ ವಿಚಾರಣಾ ಹಂತದಲ್ಲಿ ಚಿತ್ರಹಿಂಸೆಯಿಂದ ಮೃತನಾದಾಗ ಯಾರೂ ಏನೂ  ಮಾತಾಡಲೇ  ಇಲ್ಲ” ಎಂದು ಗುಡುಗಿದರು.

ಬೆಹೆಷ್ಟಿ ಮೇಲೆ ನಡೆದ ತೀವ್ರ ಹಿಂಸಾಚಾರದ ಕೃತ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧದ ಕೂಗು ಕೇಳಿಸಿತಾದರೂ ಅವರ ಪ್ರಕರಣವು ಇನ್ನೂ ಬಗೆಹರಿಯದೇ ಉಳಿದಿದೆ. ಎವಿನ್ ಜೈಲಿನಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರ ನ್ಯಾಯಸಮ್ಮತವಲ್ಲದ ಬಂಧನಗಳು ಮತ್ತು ಚಿತ್ರಹಿಂಸೆಗಳು ಇಂದಿಗೂ ನಡೆಯುತ್ತಲೇ ಇವೆ.

ನರ್ಗೆಸ್ ಮೊಹಮ್ಮದಿ ಅವರ ಅಕ್ಟೋಬರ್ ೩೧ರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಮತ್ತೆ ಆಕೆಯನ್ನು ಎವಿನ್ ಜೈಲು ನ್ಯಾಯಾಲಯಕ್ಕೆ ಕರೆಸಲಾಯಿತು. “ನವೆಂಬರ್ ೪, ೨೦೧೪ರಂದು ನನಗೆ ದೊರೆತ ಸಮನ್ಸ್ ಪ್ರಕಾರ ನನ್ನ ಮೇಲಿರುವ “ಆರೋಪ”ಗಳಿಗಾಗಿ ನಾನು ನ್ಯಾಯಾಲಯಕ್ಕೆ ಹಾಜಾರಾಗಬೇಕು, ಆದರೆ ಆ “ಆರೋಪ”ಗಳು ಯಾವುವು ಎನ್ನುವ ಯಾವುದೇ ವಿವರಣೆಗಳಿಲ್ಲ.” ಎನ್ನುತ್ತಾರೆ ನರ್ಗೆಸ್. 

ಮೇ ೫, ೨೦೧೫ರಂದು, ಹೊಸ ಆಪಾದನೆಯ ಮೇಲೆ ಮತ್ತೊಮ್ಮೆ ಮೊಹಮ್ಮದಿಯವರನ್ನು ಬಂಧಿಸಲಾಯಿತು.  ಕ್ರಾಂತಿಕಾರಿ ನ್ಯಾಯಾಲಯವು (ಶಾಖೆ ನಂ.೧೫), ನರ್ಗೆಸ್ ರಿಗೆ  (ಹಂತ ಹಂತವಾಗಿ ಮರಣದಂಡನೆಯ ನಿರ್ಮೂಲನೆಗಾಗಿ ಅಭಿಯಾನ) ನಡೆಸಲು campaign LEGAM  ಎಂಬ ಸರ್ಕಾರೀ ಬಾಹಿರ ಗುಂಪನ್ನು   ಸ್ಥಾಪಿಸಿದ ಆರೋಪಕ್ಕಾಗಿ ೧೦ ವರ್ಶಗಳ ಶಿಕ್ಷೆ, ರಾಷ್ಟ್ರೀಯ ಭದ್ರತೆಯ ವಿರುದ್ಧ ಅಸೆಂಬ್ಲಿಗಾಗಿ ಐದು ವರುಶಗಳ ಸೆರೆವಾಸ, ವ್ಯವಸ್ಥೆಯ ವಿರುದ್ಧ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ತಾನು ನೀಡಿದ ಸಂದರ್ಶನಗಳು ಹಾಗೂ ಮಾರ್ಚ್ ೨೦೧೪ರಲ್ಲಿ ಟೆಹೆರಾನ್ ಗೆ ಆಗಮಿಸಿದ್ದ ಆಗಿನ EU ವಿದೇಶಾಂಗ ಭದ್ರತಾ ನೀತಿಯ ಪ್ರತಿನಿಧಿ ಕ್ಯಾಥರೀನ್ ಆಸ್ಟನ್ ಅವರನ್ನು ಭೇಟಿ ಮಾಡಿದುದಕ್ಕಾಗಿ  ಮತ್ತೊಂದು ವರುಷದ ಶಿಕ್ಷೆಯನ್ನೂ ವಿಧಿಸಿತು.

ಜೈಲಿನಲಿದ್ದಷ್ಟು ಕಾಲ ನರ್ಗೆಸ್ ಅವರಿಗೆ, ಪ್ಯಾರಿಸ್ ನಲ್ಲಿ ನೆಲೆಸಿದ್ದ ತಮ್ಮ ಮಕ್ಕಳಾದ ಕಿಯಾನಾ ಮತ್ತು ಅಲಿ ಜತೆ ನಿಯಮಿತ ಸಂಪರ್ಕದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ.

ಜನವರಿ ೨೦೧೯ರಲ್ಲಿ ತನಗೆ ವೈದ್ಯಕೀಯ ಆರೈಕೆಯನ್ನು ನಿರಾಕರಿಸಿದುದನ್ನು ಪ್ರತಿಭಟಿಸಿ ನರ್ಗೆಸ್ ಅವರು, ಬ್ರಿಟಿಶ್-ಇರಾನಿಯನ್ ಪ್ರಜೆಯಾದ ನಾಝ್ನೀನ್ ಜಘಾರಿ-ರಾಟ್ ಕ್ಲಿಫ಼್ ಅವರ ಜತೆಗೂಡಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

೨೦೧೯ ರ ಮಹಾ ಪ್ರತಿರೋಧ

ನವೆಂಬರ್ ೨೦೧೯ರ ಪ್ರದರ್ಶನದಂದು  ಹತರಾದ ಕಾರ್ಯಕರ್ತರ ಕುಟುಂಬಗಳಿಗೆ ಬೆಂಬಲ ತೋರಲು, ಡಿಸೆಂಬರ್ ೨೦೧೯ರಲ್ಲಿ ನರ್ಗೆಸ್ ಮತ್ತು ಇತರ ಏಳು ಸ್ತ್ರೀವಾದಿ ಕಾರ್ಯಕರ್ತರು ಧರಣಿ ಕೂತು ತಮ್ಮ ಸಹಮತ ವ್ಯಕ್ತಪಡಿಸಿದರು. ಅದಕ್ಕೂ ಮುನ್ನ, ನರ್ಗೆಸ್ ಅವರು ನವೆಂಬರ್ ಧರಣಿ ಪ್ರದರ್ಶನದ ವೇಳೆಯಲ್ಲಿ ನಡೆದ ಹತ್ಯೆಗಳು, ಬಂಧನಗಳು,  ಈ  ಹೊಸ ಕೈದಿಗಳ ಜತೆ ಅಮಾನವೀಯ ವರ್ತನೆ ಹಾಗೂ ಆ ಧರಣಿಯ ಸಮಯದಲ್ಲಾದ ಇಂಟರ್ ನೆಟ್ ಸಂಪರ್ಕ ಕಡಿತದ ಕುರಿತು ಸಾರ್ವಜನಿಕ ಹೇಳಿಕೆ ನೀಡಿದ್ದರು. ಅನಂತರದ ಅಧಿಕೃತ ವರದಿಯ, ಮೂರು ದಿನಗಳಲ್ಲಿ ೩೦೪ ಜನರನ್ನು ಹತ್ಯೆಗೆಯ್ಯಲಾಗಿದೆಯೆಂದೂ, ನೂರಾರು ಮಂದಿ ಗಾಯಗೊಂಡು, ಸುಮಾರು ೭,೦೦೦ ರಷ್ಟು ಮಂದಿ ಬಂಧನಕ್ಕೊಳಗಾದರು ಎಂದು ಹೇಳಿದೆ. ಆದಾಗ್ಯೂ, ರಾಯಿಟರ್ಸ್ ನಂತಹ ಸ್ವತಂತ್ರ ಸುದ್ದಿ ಮಾಧ್ಯಮಗಳು ಸುಮಾರು ೧೫೦೦ ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ಮಾಡಿದವು. ಈ ದಮನಕಾರಿ ಕೃತ್ಯದ ರೂವಾರಿಯಾಗಿ  ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (Revolutionary Guard Corps) ಪ್ರಮುಖ ಪಾತ್ರ ವಹಿಸಿದೆ. 

ಜೈಲಿನೊಳಗೆ ನರ್ಗೆಸ್ ತೋರಿದ ಪ್ರತಿಭಟನಾ ಧರಣಿಗೆ  ಶಿಕ್ಷೆಯಾಗಿ , ಅಧಿಕಾರಿಗಳು ೨೪ ಡಿಸೆಂಬರ್ ೨೦೧೯ರಂದು, ಜಂಜಾನ್ ನಗರದ ಜೈಲೊಂದಕ್ಕೆ ಆಕೆಯನ್ನು ವರ್ಗಾಯಿಸಿದರು. ಅಲ್ಲಿ ಆಕೆಯನ್ನು ಉದ್ದೇಶಪೂರ್ವಕವಾಗಿ ಮಾದಕವಸ್ತು ದಲ್ಲಾಳಿಗಳು, ಕಳ್ಳಸಾಗಣೆದಾರರು, ಹಾಗೂ ಇತರ ರಾಜಕೀಯೇತರ ಅಪರಾಧಿಗಳ ನಡುವೆ ಇರಿಸಲಾಯಿತು.

ಜನವರಿ ೨೦೨೦ರ ಆರಂಭದಲ್ಲಿ ನರ್ಗೆಸ್ ಮೊಹಮ್ಮದಿ ಯವರನ್ನು ಜೈಲಿನಲ್ಲಿ ಭೇಟಿಯಾದ  ಅವರ ತಾಯಿ ಓಝ್ರಾ ಬಝಾರ್ಗನ್, ಅಂತರಾಷ್ಟ್ರೀಯ ಮಾಧ್ಯಮ ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ  ನೆರವು ಕೋರಿದ ಆಕೆಯ ಮನವಿಯೊಂದನ್ನು ದಾಖಲಿಸಿಕೊಂಡು ಪ್ರಕಟಿಸಿದರು. ನರ್ಗೆಸ್ ಅವರು ರಹಸ್ಯವಾಗಿ ಜೈಲಿನೊಳಗೆ ತನಗಾದ ಕ್ರೌರ್ಯ ಮತ್ತು ತನ್ನ ದಿಟ್ಟ ನಿಲುವು ಮತ್ತು ಪ್ರತಿರೋಧವನ್ನು ವಿವರಿಸುವ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿದರು:

ನಾಲ್ಕುವರೆ ತಿಂಗಳುಗಳ ಕಾಲ ನನ್ನ ಮಕ್ಕಳೊಂದಿಗೆ ಫೋನ್ ನಲ್ಲಿ ಮಾತನಾಡಲು ವಂಚಿತಳಾಗಿದ್ದೆ. ನ್ಯಾಯಾಂಗ ಮತ್ತು ಭದ್ರತಾ ಏಜೆಂಟರ ಕ್ರೌರ್ಯದಿಂದ ಇನ್ನೂ ಆಘಾತದಲ್ಲಿದ್ದೇನೆ. ೨೦೧೯ರ ಡಿಸೆಂಬರ್  ಕೊನೆಯಲ್ಲಿ ಜೈಲಿನ ನಮ್ಮ ಮುಷ್ಕರವನ್ನು ಘೋಷಿಸುತ್ತಿದ್ದಂತೆಯೇ ಜೈಲಿನ ಆಸುಪಾಸಿನಲ್ಲಿ ಭದ್ರತಾ ಪಡೆ ಮತ್ತು ಗುಪ್ತಚರ ಏಜೆಂಟರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣತೊಡಗಿದರು. ನಮ್ಮ ಈ ನಡವಳಿಕೆಗೆ ತಕ್ಕ ಶಿಕ್ಷೆ ಮಾಡಲಾಗುತ್ತದೆ ಎಂದು ಬೆದರಿಸಿದರು. ಪರಿಣಾಮವಾಗಿ ನಮ್ಮ ಭೇಟಿ ಸಮಯ ಮತ್ತು ದೂರವಾಣಿ ಸಂಪರ್ಕವನ್ನು ರದ್ದುಗೊಳಿಸಲಾಯಿತು.

ಡಿಸೆಂಬರ್ ೨೪ ರಂದು, ನನ್ನ ವಕೀಲರು ನನ್ನನ್ನು ಭೇಟಿಯಾಗಲು ಇಚ್ಚಿಸಿದ್ದಾರೆ ಎಂದು ಪತ್ರವೊಂದನ್ನು ತೋರಿಸಿದರು. ಆದರೆ ಅದು ಸುಳ್ಳಾಗಿತ್ತು. ಅಲ್ಲಿ ಯಾವ ವಕೀಲರೂ ಇರಲಿಲ್ಲ. ನನ್ನನ್ನು ಜೈಲಿನ ಗವರ್ನರ್ ರೂಂ ಗೆ ಕರೆದೊಯ್ದರು. ಅಲ್ಲಿ ಆತ, ಗುಪ್ತಚರ ಸಚಿವಾಲಯದ ಏಜೆಂಟರ ಉಪಸ್ಥಿತಿಯಲ್ಲಿ ನನ್ನನ್ನು ಅಸಭ್ಯ ಮಾತುಗಳಿಂದ ಹೀಯಾಳಿಸಿದರು. ನಾನು ಕೋಣೆಯಿಂದ ಹೊರಬಂದೆ. ನನ್ನ ಹಿಂದೆಯೇ ಅವರೂ ಓಡಿ ಬರುತಿದ್ದರು. ನನ್ನನ್ನು ತಡೆಯುವ ಸಲುವಾಗಿ ನನ್ನ ತೋಳುಗಳನ್ನು ಬಲವಾಗಿ ಹಿಡಿದು ಕಾರಿಡಾರ್ ನಲ್ಲಿ ಎಳೆದುಕೊಂಡು ಹೋದರು. ನಾನು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ನನ್ನ ಕೈಯನ್ನು ಬಾಗಿಲಿಗೆ ಬಡಿದರು. ಬಾಗಿಲಿನ ಒಡೆದ ಗಾಜಿನ ಫಲಕವು ನನ್ನ ಕೈ ಕತ್ತರಿಸಿ ರಕ್ತಸ್ರಾವವಾಗತೊಡಗಿತು. ನನ್ನನ್ನು ಎಳೆದುಕೊಂಡು ಆಂಬ್ಯುಲೆನ್ಸ್ ಗೆ ಎಸೆದರು. ವಾರ್ಡ್ ೨೦೯ರ ಎದುರು ನಿಲ್ಲಿಸಿ, “ಇಲ್ಲಿರಲು ನಿನ್ನನ್ನು ಬಿಡುವುದಿಲ್ಲ, ನಿನ್ನನ್ನು ಝಂಝಾನ್ ಸೆರೆಮನೆಗೆ ರವಾನಿಸುತ್ತಿದ್ದೇವೆ” ಎಂದರು. ನಾನು ಇರಾನ್ ಕುರಿತ ಹಾಡೊಂದನ್ನು ಪಠಿಸತೊಡಗಿದೆ. ಅವರು ನನ್ನ ಮೇಲೆ ಧಾಳಿ ನಡೆಸಿ, ಹೊಡೆದು ಕಾರಿನೊಳಗೆ ತಳ್ಳಿದರು. ನನ್ನ ಕೈಗಳಿಂದ ರಕ್ತ ಸೋರುತಿತ್ತು. ನಾನು ತೆಗೆದುಕೊಳ್ಳುತ್ತಿದ್ದ ಔಷಧಿಯು ರಕ್ತಹೆಪ್ಪುಗಟ್ಟುವುದನ್ನು ತಡೆಯುವಂತಹುದಾಗಿತ್ತು. ಅವರು ನನ್ನ ಗಾಯಗಳ ಮೇಲೆಯೇ ಕೈಕೋಳವನ್ನು ಬಲವಾಗಿ ಒತ್ತಿದರು. ನಾವು ಝಂಝಾನ್ ತಲುಪುವವಷ್ಟರಲ್ಲಿ ರಕ್ತ ಸುರಿದು ನನ್ನ  ಬಟ್ಟೆಯು ತೊಯ್ದು ಹೋಗಿತ್ತು. ಡಿಸೆಂಬರ್ ೨೪ (೨೦೧೯) ನನ್ನ ಪಾಲಿಗೆ ಬಹು ಭಯಾನಕ ದಿನವಾಗಿತ್ತು. ಭದ್ರತಾ ಪಡೆ ಹಾಗೂ  ಜೈಲು ಅಧಿಕಾರಿಗಳು ನನ್ನ ಬದುಕನ್ನು ಎಲ್ಲಾ ರೀತಿಯಲ್ಲಿ ಮುಗಿಸಲು ಪ್ರಯತ್ನ ನಡೆಸಿದ್ದರು. ಆದರೆ ನನ್ನ ಘಾಸಿಗೊಂಡಿರುವ ದೇಹವಾಗಲೀ, ಗಾಯಗಳಾಗಲೀ, ಇದ್ಯಾವುದೂ ನನ್ನನ್ನು ಹಿಮೆಟ್ಟಿಸುವುದಿಲ್ಲ. ಈ ದೇಶದಲ್ಲಿ ಯಾತನಾಮಯ ಬದುಕನ್ನು ಬದುಕುತ್ತಿರುವ ಗೌರವಾನ್ವಿತ ಪ್ರಜೆಗಳ ಪ್ರೀತಿ ಹಾಗೂ ನನ್ನ ನ್ಯಾಯ ಮತ್ತು ಸ್ವಾತಂತ್ರ್ಯಪರ ಆದರ್ಶಗಳಿಗೆ ನಾನು ಬದ್ಧಳಾಗಿರುತ್ತೇನೆ. ಕ್ರೂರವಾಗಿ ಹರಿದ ಅಮಾಯಕರ ರಕ್ತವನ್ನು ಗೌರವಿಸುವುದಕ್ಕಾಗಿ, ದಬ್ಬಾಳಿಕೆಯನ್ನು ಧಿಕ್ಕರಿಸಲು ಹಾಗೂ ತುಳಿತಕ್ಕೊಳಗಾದವರ ಪರ ವಹಿಸಲು, ನನ್ನ ಕೊನೆಯುಸಿರವರೆಗೂ ನಾನು ಸತ್ಯವನ್ನೇ ಮಾತನಾಡಲು ಪ್ರತಿಜ್ಞೆ ಮಾಡುತ್ತೇನೆ.

ನರ್ಗೆಸ್ ಪತಿ ಮತ್ತು ಮಕ್ಕಳು ನಿರಾಶ್ರಿತರಾಗಿದ್ದರಿಂದ ಇರಾನ್ ಗೆ ಹಿಂತಿರುಗಿದೊಡನೆ ಅವರ ಬಂಧನವಾಗುವ  ಭೀತಿಯಿಂದ  ಹಾಗೂ ನರ್ಗೆಸ್ ಗೆ ಇರಾನ್ ಸರಕಾರ ವೀಸಾ ನಿರಾಕರಿಸಿದುದರಿಂದ, ನರ್ಗೆಸ್ ಅಕ್ಟೋಬರ್ ೨೦೨೦ರಲ್ಲಿ ಜೈಲಿನಿಂದ ಬಿಡುಗಡೆಯಾದ ಮೇಲೂ, ತಮ್ಮ ಕುಟುಂಬದಿಂದ ಬೇರೆಯಾಗಿಯೇ ಇರಬೇಕಾಯಿತು. ಅಲ್ಲದೆ, ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಕೋವಿಡ್-೧೯ರಿಂದಾಗಿ ನರ್ಗೆಸ್ ತನ್ನ ತಾಯಿಯನ್ನೂ ಕಳೆದುಕೊಂಡರು. ತಮ್ಮ ಅಸ್ವಸ್ಥ ತಂದೆಯ ಆರೈಕೆಯನ್ನೂ ನರ್ಗೆಸ್ ನೋಡಿಕೊಳ್ಳಬೇಕಾಯಿತು. ಹಾಗಿದ್ದೂ, ಆಕೆಯ ಮೇಲೆ ಭದ್ರತಾ ಏಜೆಂಟರ ಕಣ್ಗಾವಲು, ಬೆದರಿಕೆಗಳು, ಕಿರುಕುಳಗಳು ಕಡಿಮೆಯಾಗಲಿಲ್ಲ.

ಈ ಯಾವುದೇ ಕಷ್ಟಗಳು ನರ್ಗೆಸ್ ಅವರ ಕ್ರಿಯಾಶೀಲತೆಯ ಹುರುಪನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಫ಼ೆಬ್ರುವರಿ ೨೭,೨೦೨೧ ರಂದು ನರ್ಗೆಸ್ ಅವರು, ತಾನು ಡಿಸೆಂಬರ್ ೨೦೨೦ರಲ್ಲಿ ಇನ್ನೂ ಸೆರೆಮನೆಯಲ್ಲಿದ್ದಾಗ ತನಗೆ ನ್ಯಾಯಾಲಯದಿಂದ ಎರಡು ಬಾರಿ ಸಮನ್ಸ್ ನೀಡಲಾಗಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ತಿಳಿಸಿದರು. ತಾನು ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದೇನೆಯೆಂದೂ, ಹಾಗೂ ಜಾರಿಗೊಳಿಸಿರುವ ಯಾವುದೇ ಶಿಕ್ಷೆಯನ್ನು ಅನುಸರಿಸುವುದಿಲ್ಲವೆಂದೂ ವಿಡಿಯೋದಲ್ಲಿ ಪ್ರಕಟಿಸಿದರು. ಕಾರಾಗೃಹದಲ್ಲಿ ತನಗೆ ಹಾಗೂ ಇತರ ಮಹಿಳೆಯರ  ಮೇಲೆ ನಡೆಸಲಾದ ಲೈಂಗಿಕ ಕಿರುಕುಳ ಹಾಗೂ ಅಮಾನವೀಯ ವರ್ತನೆಯ  ಕುರಿತು ಬಹಿರಂಗಪಡಿಸಿದರು. ಈ ಬಗ್ಗೆ ಡಿಸೆಂಬರ್ ೨೪, ೨೦೨೦ರಂದು ಜೈಲಿನ ಅಧಿಕಾರಿಗಳಿಗೆ ತಾನು ನೀಡಿದ ದೂರನ್ನು ಇನ್ನೂ ಪರಿಗಣಿಸಿಲ್ಲವೆಂದೂ ವಿಡಿಯೋದಲ್ಲಿ ವಿವರಿಸಿದರು.

ಈ ಪ್ರತಿಭಟನಾ ಕ್ರಮದಿಂದ, ನರ್ಗೆಸ್ ಅವರು ತಾನು ಫ಼ಿರ್ಯಾದುದಾರಳೆ  ಹೊರತು, ಆರೋಪಿಯಲ್ಲ ಎಂಬ ತನ್ನ ನಿಲುವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಿದರು. ತನ್ನ ಮೇಲೆ ದಾಖಲಾದ ಹೊಸ ಪ್ರಕರಣವು ನವೆಂಬರ್ ೨೦೧೯ರಲ್ಲಿ ತಾನು ಹಾಗೂ ಇತರ ಮಹಿಳಾ ರಾಜಕೀಯ ಕೈದಿಗಳು ನಡೆಸಿದ ಧರಣಿಗೆ ಸಂಬಂಧಿಸಿದ್ದಾಗಿದೆ. ಹಾಗೂ ಎವಿನ್ ಸೆರೆಮನೆಯೊಳಗಿನ ತಮ್ಮ ಪ್ರತಿಭಟನೆ ಯಾವುದೇ ಹಿಂಸಾಚಾರ ಅಥವಾ ಕಾನೂನುಬಾಹಿರ ನಡವಳಿಕೆಗಳಿಂದ ಒಳಗೂಡಿರಲಿಲ್ಲವೆಂದೂ ಒತ್ತಿ ಹೇಳಿದರು .

ಮಾರ್ಚ್ ೨೦೨೧ ರಲ್ಲಿ ನರ್ಗೆಸ್ ಅವರು, ಇರಾನಿನ ಮಾನವ ಹಕ್ಕುಗಳ ವಾರ್ಷಿಕ ವರದಿಗೆ ‘ಇರಾನ್ ನಲ್ಲಿ ಮರಣ ದಂಡನೆ’ಯ ಕುರಿತು ಪ್ರಾಸ್ತಾವಿಕ ಮುನ್ನುಡಿಯೊಂದನ್ನು ಬರೆದರು:

ಕಳೆದ ವರ್ಷದಲ್ಲಿ ನವಿದ್ ಅಫ಼್ಕಾರಿ ಮತ್ತು ರುಹೊಲ್ಲಾ ಝಾಮ್ ಅವರಿಗೆ ವಿಧಿಸಿದ ಮರಣದಂಡನೆಗಳು ಇರಾನಿನ ಅತ್ಯಂತ ಅಸ್ಪಷ್ಟವಾದ ಪ್ರಕರಣಗಳು. ಅಹ್ಮದ್ರೇಝಾ ಜಲಾಲಿ ಅವರಿಗೆ ಮರಣದಂಡನೆ ವಿಧಿಸಿರುವುದು ದೋಷಪೂರಿತ ಮತ್ತು ಅದಕ್ಕೆ ನೀಡಲಾಗಿರುವ ಕಾರಣಗಳನ್ನು ಬಹು ಎಚ್ಚರಿಕೆಯಿಂದ ಪರೀಕ್ಷಿಸಬೇಕು. ಇವರೆಲ್ಲರನ್ನೂ ಒಬ್ಬಂಟಿಯಾಗಿ ಕೂಡಿಹಾಕಿದ ನಂತರ ಮಾನಸಿಕ ಚಿತ್ರಹಿಂಸೆಗೆ ಒಳಪಡಿಸಲಾಗಿದೆ. ಆ ಕಾರಣಕ್ಕಾಗಿಯೇ ನಾನು ನ್ಯಾಯಾಂಗ ಪ್ರಕ್ರಿಯೆಯನ್ನು ನ್ಯಾಯೋಚಿತವೆಂದು ಪರಿಗಣಿಸುವುದಿಲ್ಲ. ಇದು ಆರೋಪಿಗಳನ್ನು ಒಂಟಿಯಾಗಿ ಇರಿಸಿ ಅವರ ಮನಸ್ಥೈರ್ಯವನ್ನು ಕುಗ್ಗಿಸಿ ಅವರಿಂದ ತಪ್ಪು ಒಪ್ಪಿಗೆಗಳನ್ನು ಸ್ವೀಕರಿಸುವಂತೆ ಒತ್ತಾಯ ಹೇರುವ ಪ್ರಯತ್ನವಷ್ಟೇ. ಅದಕ್ಕಾಗಿಯೇ ಇತ್ತೀಚಿನ ಸಿಸ್ತಾನ್ ಬಲೂಚಿಸ್ತಾನ್ ಮತ್ತು ಖುರ್ದಿಸ್ತಾನ್ ಪ್ರಾಂತ್ಯದಲ್ಲಾದ ಬಂಧನಗಳ ಬಗ್ಗೆ ನನಗೆ ಬಹಳಷ್ಟು ಆತಂಕ ಗುಮಾನಿಗಳಿವೆ. ಮುಂದಿನ ವರುಷ ಮರಣದಂಡನೆಗಳ ಇನ್ನೊಂದು ಅಲೆಯನ್ನು ನಾವು ಎದುರಿಸಬೇಕಾದೀತು ಎನ್ನುವ ಭಯ ನನ್ನನ್ನು ಆವರಿಸಿಕೊಂಡಿದೆ. ಮರಣದಂಡನಾ ವಿರೋಧಿ ಸಂಘಟನೆಗಳು ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕೆಂದು ಆಶಿಸುತ್ತೇನೆ.

ಮಾರ್ಚ್ ೨೦೨೧ರಿಂದ ನರ್ಗೆಸ್ ಅವರು ರಾಜಕೀಯ ಕೈದಿಗಳಿಗೆ ಬೆಂಬಲ ನೀಡುತ್ತಾ, ಕೈದಿಗಳ  ‘ ವೈಟ್ ರೂಮ್ ಟಾರ್ಚರ್’ ಅಥವಾ  ‘ಏಕಾಂತ ಬಂಧನ’ ವು  ಅವರ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಬೀರುವ ಭಯಾನಕ ಪರಿಣಾಮಗಳ ಬಗ್ಗೆ ಗಮನ ಹರಿಸಲು ಹೊಸದೊಂದು ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ಎವಿನ್ ಹಾಗೂ ರಾಜೈ ಶಹರ್ ಜೈಲುಗಳಲ್ಲಿ ಸುಮಾರು ಹದಿನೇಳು ಆತ್ಮಸಾಕ್ಷಿಯ ಕೈದಿಗಳು ತಮ್ಮ ಕಾನೂನು ಬಾಹಿರ ಮತ್ತು ಏಕಾಂತ ಬಂಧನ ದ ಅಮಾನವೀಯತೆಯನ್ನು ಪ್ರತಿಭಟಿಸಿ ಮನವಿಯನ್ನು ಸಲ್ಲಿಸಿದ್ದಾರೆಂದು ೨೧ ಏಪ್ರಿಲ್ ೨೦೨೧ರಂದು DHRC ಯ ವೆಬ್ ಸೈಟ್ ನಲ್ಲಿ ವರದಿಯಾಗಿದೆ. ಅವರು ತಮ್ಮ ಸೆರೆವಾಸದ ಅವಧಿಯ ದಾಖಲೆಯನ್ನು ನೀಡಿ, ದೂರುಗಳನ್ನು ಸಲ್ಲಿಸಿ, ಇಂತಹ ಹೇಯಕೃತ್ಯಕ್ಕೆ ಹೊಣೆಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ.

ಏಕಾಂತ ಬಂಧನದ ಭೀಕರತೆಯನ್ನು ಅನುಭವಿಸಿರುವ ಸುಮಾರು ಇಪ್ಪತ್ತಮೂರು ಮಾಜಿ ರಾಜಕೀಯ ಕೈದಿಗಳೂ ಸಹ ಟೆಹೆರಾನ್ ನಲ್ಲಿನ ನ್ಯಾಯ ಸಚಿವಾಲಯದ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ. ಇದುವರೆಗೆ ನರ್ಗೆಸ್ ಮೊಹಮ್ಮದಿ ಅವರ ನೇತೃತ್ವದ ಈ ‘ ಏಕಾಂತ ಬಂಧನದ ವಿರುಧ್ಧ ಏಕತೆ’ ಅಭಿಯಾನದ ಪರಿಣಾಮವಾಗಿ ಸುಮಾರು ನಲವತ್ತು ದೂರುಗಳನ್ನು ಅಧಿಕೃತವಾಗಿ ದಾಖಲಿಸಲಾಗಿದೆ. 

ಇರಾನಿನ ನಾಗರಿಕ ಹಕ್ಕುಗಳು ಮತ್ತು ಸಾಮಾಜಿಕ ಸ್ತರದಲ್ಲಿ ನರ್ಗೆಸ್ ಮೊಹಮ್ಮದಿಯವರ ಗಣನೀಯ ಪಾತ್ರ:

ನರ್ಗೆಸ್ ಮೊಹಮ್ಮದಿಯವರದ್ದು ಒಬ್ಬ ಅನುಭವಿ, ಪಟ್ಟುಬಿಡದ, ಸಮನ್ವಯಕಾರಿ ಮಾದರಿ ವ್ಯಕ್ತಿತ್ವ. ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಕಳೆದ ಇಪ್ಪತ್ತೆಂಟು  ವರುಷಗಳಲ್ಲಿ, ಕಝ್ವಿನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ರೌಶಂಗರನ್ ವಿದ್ಯಾರ್ಥಿ ಸಂಘ ( ಪ್ರಬುದ್ಧ ವಿದ್ಯಾರ್ಥಿ ಸಂಘ), ಕಝ್ವಿನ್ ನಗರದ ಎನ್ ಲೈಟನಿಂಗ್ ಯೂತ್ ಅಸೋಸಿಯೇಷನ್, ಟೆಹೆರಾನಿನ ಮಹಿಳಾ ಸಂಘ, ಟೆಹೆರಾನಿನ ಪತ್ರಕರ್ತರ ಗಿಲ್ಡ್, ಕೈದಿಗಳ ಹಕ್ಕು ರಕ್ಷಣಾ ಸಂಘ, ಮಾನವ ಹಕ್ಕುಗಳ ರಕ್ಷಣಾ ಕೇಂದ್ರ, ರಾಷ್ಟ್ರೀಯ ಶಾಂತಿ ಮಂಡಳಿ, ಮುಕ್ತ ನ್ಯಾಯೋಚಿತ ಮತ್ತು ಸುರಕ್ಷಿತ ಚುನಾವಣೆಗಳ ರಕ್ಷಣಾ ಸಮಿತಿ, ದಿ ಸ್ಟಾಪ್ ಎಕ್ಸಿಕ್ಯೂಷನ್ ಆಫ಼್ ದಿ ಚೈಲ್ಡ್, LEGAM (ಮರಣದಂಡನಾ ಶಿಕ್ಷಾ ನಿರ್ಮೂಲನಾ ಅಭಿಯಾನ); ಮತ್ತು ಮಹಿಳಾ ಪೌರತ್ವ ಕೇಂದ್ರ ಹೀಗೆ ಸುಮಾರು ಹನ್ನೊಂದು ಸರ್ಕಾರೇತರ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಇಲ್ಲವೇ ಅದರ ಸಂಸ್ಥಾಪಕರಾಗಿ ನರ್ಗೆಸ್ ತನ್ನನ್ನು ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ .

ಇದಲ್ಲದೆ, ನರ್ಗೆಸ್ ಮೊಹಮ್ಮದಿ ಅವರು ಕಾನೂನು ತಾರತಮ್ಯ ನಿರ್ಮೂಲನೆಗೊಳಿಸಲು ಮಿಲಿಯನ್ ಹಸ್ತಾಕ್ಷರ ಅಭಿಯಾನದಲ್ಲಿ (ಸಮಾನತೆಯ ಅಭಿಯಾನ) ಮಹಿಳಾ ಹಕ್ಕುಗಳ ವಕೀಲರಾದ ಷಿರಿನ್ ಎಬಾಡಿ, ಸಿಮಿನ್ ಬೆಹ್ ಬೆಹಾನಿ, ಮತ್ತು ಶಹಲಾ ಲಾಹಿಡ್ಜಿ ಮೊದಲಾದ ಪ್ರಮುಖರ ಜತೆಗೆ ಗುರುತಿಸಿಕೊಂಡಿದ್ದಾರೆ. 

ಪ್ರಗತಿಪರ ಇರಾನಿಯನ್ನರಿಂದ ರಾಷ್ಟ್ರೀಯ ಬೆಂಬಲವಷ್ಟೇ ಅಲ್ಲದೆ, ದೇಶದ ಹೊರಗೂ ನರ್ಗೆಸ್ ಮೊಹಮ್ಮದಿ ಅವರು ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ೨೦೧೮ರಲ್ಲಿ ಅಮೇರಿಕನ್ ಫಿಸಿಕಲ್ ಸೊಸೈಟಿಯಿಂದ ಆಂಡ್ರೇ ಸಖರೋವ್ ಪ್ರಶಸ್ತಿ, ೨೦೧೬ರಲ್ಲಿ ಜರ್ಮನ್ ನ ವೀಮರ್ ನಗರದ ಮಾನವ ಹಕ್ಕುಗಳ ಪ್ರಶಸ್ತಿ, ೨೦೧೧ರಲ್ಲಿ ಪೆರ್ ಆಂಗರ್ ಪ್ರಶಸ್ತಿ ಹಾಗೂ ಸ್ವೀಡಿಷ್ ಸರಕಾರದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು. ೨೦೧೦ ರಲ್ಲಿ ನೊಬೆಲ್ ವಿಜೇತ ಶಿರಿನ್ ಎಬಾಡಿ, ” ಈ ಪ್ರಶಸ್ತಿಗೆ, ಈ ಧೈರ್ಯಶಾಲಿ ಮಹಿಳೆ ನನಗಿಂತ ಹೆಚ್ಚು ಅರ್ಹಳಾಗಿದ್ದಾಳೆ” ಎಂದು ತಾವು ಗೆದ್ದ ಫ಼ೆಲಿಕ್ಸ್ ಎರ್ಮಾಕೋರಾ ಮಾನವ ಹಕ್ಕುಗಳ ಪ್ರಶಸ್ತಿಯನ್ನು ನರ್ಗೆಸ್ ಮೊಹಮ್ಮದಿಯವರಿಗೆ ಅರ್ಪಿಸಿದರು.

ಇಸ್ಲಾಮಿಕ್ ಗಣರಾಜ್ಯದ ಆಡಳಿತದ ವಿಮರ್ಶಾತ್ಮಕ ಸಾಮಾಜಿಕ ಮತ್ತು ನಾಗರಿಕ ಚಳುವಳಿಯಲ್ಲಿ ನರ್ಗೆಸ್ ಮೊಹಮ್ಮದಿಯವರದ್ದು ಗೌರವಾನ್ವಿತ ಮತ್ತು ವಿಶ್ವಾಸಾರ್ಹ ಹೆಸರು. ಪಂಥಗಳ ಧ್ರುವೀಕರಣ, ಗುಂಪುಗಾರಿಕೆ, ವಿಭಜನೆ ಮೊದಲಾದ ನಕಾರಾತ್ಮಕ ಅಂಶಗಳನ್ನು ಬದಿಗಿಟ್ಟು ವೈವಿಧ್ಯತೆ ಮತ್ತು ಬಹುತ್ವಕ್ಕೆ ಸಹಕಾರಿಯಾಗುವ ರಾಜಕೀಯದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳುವ ಒಕ್ಕೂಟಗಳನ್ನು ನಿರ್ಮಿಸಿ, ಪ್ರಗತಿಪರ ಗುಂಪುಗಳನ್ನು ಒಗ್ಗೂಡಿಸುವಲ್ಲಿ ನರ್ಗೆಸ್ ಮೊಹಮ್ಮದಿಯವರ ಶ್ರಮ ಬಹು ದೊಡ್ಡದು. ಇರಾನಿನ ರಾಜಕೀಯ ಸಂಸ್ಕೃತಿಯ ವಿಸ್ತಾರದಲ್ಲಿ ಮುಖ್ಯವಾಹಿನಿಯಲ್ಲಿ ಇಂತಹ ಗುಣಲಕ್ಷಣಗಳು ಬಹು ಅಪರೂಪ.

ನರ್ಗೆಸ್ ಅವರು ತನ್ನದೇ ವಿಶಿಷ್ಟ ರೀತಿಯಲ್ಲಿ, ಮತಾಂಧ ಇಸ್ಲಾಮಿಸ್ಟ್ ಬೋಧನೆಯ ಪ್ರತಿಗಾಮಿ ಹಿಂಸಾತ್ಮಕ ಸಂಸ್ಕೃತಿಗೆ ಎದುರಾಗಿ ಬೆಳೆಯುತ್ತಿರುವ ಸ್ವಾತಂತ್ರ್ಯ, ಸಮಾನತೆ ಜೀವನ ಪ್ರೀತಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಸಂಸ್ಕೃತಿಯ ಭಾಗವಾಗಿದ್ದಾರೆ. ಸಾರ್ವಜನಿಕವಾಗಿ ಕಟ್ಟುನಿಟ್ಟಿನ ಧರ್ಮಪಾಲಕರಂತೆ ನಟಿಸುವ, ಆದರೆ ಖಾಸಗಿಯಾಗಿ ಅನೈತಿಕ ಕೆಲಸಗಳನ್ನು ಮಾಡಲು ಹಿಂಜರಿಯದ ಧರ್ಮಾಂಧ “ದೇವರ ಪ್ರತಿನಿಧಿ”ಗಳು ಪ್ರಸ್ತುತ ನಮ್ಮ ನಡುವಿದ್ದಾರೆ. ಅವರಿಗಿಂತ ಭಿನ್ನವಾಗಿ, ನರ್ಗೆಸ್ ಮೊಹಮ್ಮದಿಯವರು, ಜೀವನ ಸೌಂದರ್ಯ, ಅಹಿಂಸೆ ಮತ್ತು ಸಂತಸವನ್ನು ಪ್ರಾಮಾಣಿಕತೆಯಿಂದ
ಎಲ್ಲರಿಗೂ ಹಂಚುವ ನಂಬಿಕೆಯುಳ್ಳವರಾಗಿದ್ದಾರೆ.

ನಾಯೆರಹ್ ತೋಹಿದಿ 

ಎಪ್ರಿಲ್ ೨೦೨೧

ನಾಯೆರೆಹ್ ತೋಹಿದಿ ಯವರು ನಾರ್ತ್‌ರಿಡ್ಜ್‌ನ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಧ್ಯಪ್ರಾಚ್ಯ ಮತ್ತು ಇಸ್ಲಾಮಿಕ್ ಅಧ್ಯಯನಗಳ ಸ್ಥಾಪಕ ನಿರ್ದೇಶಕಿಯಾಗಿ, ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UCLA ) ಇರಾನ್ ಕುರಿತ ಅಧ್ಯಯನಗಳು ಮತ್ತು ಸೆಂಟರ್ ಫಾರ್ ನಿಯರ್ ಈಸ್ಟರ್ನ್ ಸ್ಟಡೀಸ್‌ನಲ್ಲಿ ಸಂಶೋಧನಾ ಸಹಾಯಕರಾಗಿದ್ದಾರೆ. ಲಿಂಗ ಮತ್ತು ಅಭಿವೃದ್ಧಿ, ಮಹಿಳಾ ಚಳುವಳಿಗಳು, ಸ್ತ್ರೀವಾದ ಮತ್ತು ಇಸ್ಲಾಂ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ (MENA) ಜನಾಂಗೀಯ ಸಮಸ್ಯೆಗಳು ಮತ್ತು ಮಾನವ ಹಕ್ಕುಗಳ ಕುರಿತು ಬೋಧನೆ ಹಾಗೂ ಸಂಶೋಧನಾ ಪರಿಣತಿಯನ್ನು ಹೊಂದಿದ್ದಾರೆ . ನಾಯೇರಹ್ ವಿಶ್ವಸಂಸ್ಥೆಯ ಸಂಸ್ಥೆಗಳಾದ UNICEF ಮತ್ತು UNDP ಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.


ನರ್ಗೆಸ್ ಮೊಹಮ್ಮದಿಯವರ ಸಂದರ್ಶನದಿಂದ ಆಯ್ದ ಭಾಗ

ನನ್ನ ಪತಿ, ತಘಿ ರಹಮಾನಿ ಅವರನ್ನು ರಾಷ್ಟ್ರೀಯತಾವಾದಿ-ಧಾರ್ಮಿಕ ಕಾರ್ಯಕರ್ತರು ಮತ್ತು ಸ್ವಾತಂತ್ರ್ಯ ಹೋರಾಟ ತಂಡದ ಸದಸ್ಯರ ಜತೆಗೆ ಬಂಧಿಸಲಾಯಿತು.ಈ ಬಂಧನಗಳ ನಂತರ, ನಾವು, ಬಂಧನಕ್ಕೊಳಗಾದವರ ಕುಟುಂಬದವರು, ೧೯ ಮಾರ್ಚ್, ೨೦೦೧ ರಂದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಾನೂನು ಬಾಹಿರ ಕ್ರಮಗಳ ಮತ್ತು ನ್ಯಾಯಾಂಗದ ವಿರುದ್ಧ ಪ್ರತಿಭಟನೆ ನಡೆಸಿದೆವು. ನ್ಯಾಯಾಂಗ, ಸಂಸತ್ತು ಮತ್ತು UN ಕಚೇರಿಯ ಮುಂದೆ ರ್ಯಾಲಿ ನಡೆಸುವುದು ನಮ್ಮ ಹೋರಾಟದ ಭಾಗವಾಗಿತ್ತು. ನಾವು ಈ ಸಂಸ್ಥೆಗಳನ್ನು ಉದ್ದೇಶಿಸಿ ಆಂತರಿಕ ಹಾಗೂ ಬಾಹ್ಯವಾಗಿಯೂ ಸಂದರ್ಶನಗಳನ್ನು ನಡೆಸಿದೆವು. ಆ ಕಾರಣಕ್ಕಾಗಿಯೇ ಕ್ರಾಂತಿಕಾರಿ ನ್ಯಾಯಾಲಯದ ೨೬ ನೇ ಶಾಖೆಯ ನೇತೃತ್ವ ವಹಿಸಿದ್ದ ಹಸನ್ ಝಾರೆ – ಹದ್ದಾದ್ ^೧ ಅವರು ನನಗೆ ಸಮನ್ಸ್ ಕರೆ ನೀಡಿದ್ದರು.

IRGC ಯದೇ ಒಬ್ಬ ವಿಚಾರಣಾಕಾರ,ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಸಂದರ್ಶನದ ಬಗ್ಗೆ  IRGCಯ  ನ್ಯಾಯಾಲಯದ ಕೊಠಡಿಯೊಂದರಲ್ಲಿ ನನ್ನನ್ನು ವಿಚಾರಣೆ ನಡೆಸಿದರು.ನಂತರ ನನ್ನನ್ನು ೨೬ ನೇ ಶಾಖೆಗೆ ಕರೆದೊಯ್ದರು. ಅಲ್ಲಿ ನನ್ನನ್ನು ಬಂಧಿಸಲಾಯಿತು. ನ್ಯಾಯಾಧೀಶರು ಇನ್ನೂ ಕಚೇರಿಗೆ ಬಂದಿಲ್ಲವಾಗಿದ್ದರೂ ಉಸ್ತುವಾರಿ ವಿಚಾರಣಾಕಾರರ ಆದೇಶದ ಮೇರೆಗೆ ನನ್ನನ್ನು ಬಂಧಿಸಲಾಯಿತು. ನನ್ನ ಬಂಧನದ ವಾರಂಟ್ ಗೆ ಸಹಿ ಹಾಕಲು ನ್ಯಾಯಾಧೀಶರನ್ನು ಕರೆಸಿದರು. ನ್ಯಾಯಾಧೀಶರಿಗಾಗಿ ನಾನು ಸುಮಾರು ಒಂದು ಗಂಟೆಯಷ್ಟು ಸಮಯ ಕಾದು ಕುಳಿತೆಯಾದರೂ, ಅವರು ಬಂದು ಒಂದು ಮಾತನ್ನೂ ಆಡದೆ, ನನ್ನನ್ನು ಪ್ರಶ್ನೆಯೂ ಮಾಡದೆ ವಾರಂಟ್ ಗೆ ಸಹಿ ಹಾಕಿದರು. ವಿಚಾರಣಕಾರರು ನನ್ನನ್ನು ಹೊರ ಕರೆದೊಯ್ದರು.

 

ನಾವು IRGC ನ್ಯಾಯಾಲಯದ ಹಿಂಬಾಗಿಲ ಕಡೆಯಿಂದ ಹೊರಬಂದು ಪೂಝೋ ಕಾರನ್ನು ಹತ್ತಿದೆವು. ನನ್ನ ಕಣ್ಣಿಗೆ ಬಟ್ಟೆಯನ್ನು ಕಟ್ಟಿ, ನನಗೆ ತಲೆ ತಗ್ಗಿಸಿ ಕುಳಿತುಕೊಳ್ಳುವಂತೆ ಹೇಳಿದರು. ಹಲವಾರು ಬೀದಿಗಳಲ್ಲಿ ಕಾರು ಚಲಿಸಿತು, ಕೊನೆಗೆ ಕಟ್ಟಡವೊಂದರ ದೊಡ್ಡ ಬಾಗಿಲೊಂದನ್ನು ಪ್ರವೇಶಿಸಿದೆವು. ನಂತರ ಅಲ್ಲಿಂದ ಹೊರಟು, ಬಹಳ ದೂರದವರೆಗೆ ಕಾರು ಸಾಗಿತು. ಹೊರಗಿನ ಬೀದಿಗಳು ಶಾಂತವಾಗಿದ್ದವು. ನಾನು ಕಾರಿನಿಂದ ಹೊರಬಂದರೂ, ಇನ್ನೂ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ಇದ್ದೆನು. ದೂರದಲ್ಲಿರುವ ಜನರಹಿತ ಕೋಟೆಯೊಂದನ್ನು ಒಳಹೊಕ್ಕಿದಂತೆ ಭಾಸವಾಯಿತು. ನನ್ನನು ಜೈಲಿನ ವಾರ್ಡ್ ಗೆ, ನಂತರ ಏಕಾಂತ ಕೋಣೆಗೆ ಕರೆದೊಯ್ದರು.

ಅದೊಂದು ಏಕಾಂತ ಕೋಣೆ. ಮೊದಲ ಬಾರಿಗೆ ಈ ರೀತಿಯ ಜೈಲು ಕೋಣೆಯಲ್ಲಿ ಬಂಧಿಯಾಗುವ ಅನುಭವ. ವಿಚಿತ್ರವಾದ ಪರಿಸರ; ಕಿಟಕಿಯಿಲ್ಲದ ಸಣ್ಣ ಪೆಟ್ಟಿಗೆಯ ರೀತಿ, ಹೊರಹೋಗಲು ಒಂದು ಕಿರಿದಾದ ಸಂಧಿ. ಸಣ್ಣದಾಗಿ ಒಂದು ಸ್ಕೈ ಲೈಟ್ ಇದ್ದರೂ ಸೂರ್ಯನ ಬೆಳಕು ಏನೇನೂ ಬಾರದ ಹಾಗೆ ಇತ್ತು. ಇನ್ನೂ ಮೇಲಕ್ಕೆ ಗೋಡೆಯ ರಂಧ್ರವೊಂದರಲ್ಲಿ ಸಣ್ಣ ೧೦೦ ವ್ಯಾಟ್ ಲೈಟ್ ಬಲ್ಬ್ ಸದಾಕಾಲ ಉರಿಯುತ್ತಲೇ ಇತ್ತು.

ಹೋದಾ ಸಾಬೆರ್ ^೨ ಅವರು ಇದ್ದ ಜೈಲುಕೋಣೆಯಲ್ಲಿ ತೀಕ್ಷ್ಣಬೆಳಕನ್ನು ಹೊಂದಿರುವ ಪ್ರೊಜೆಕ್ಟರ್ ಹಗಲು ರಾತ್ರಿ ಉರಿಯುತ್ತಲೇ ಇತ್ತು ಎಂದು ಕೇಳಲ್ಪಟ್ಟಿದ್ದೆ. ಜೈಲುಕೋಣೆಯ ವಿಸ್ತಾರವು ಒಬ್ಬ ಮನುಷ್ಯ ಕೈಚಾಚುವ ಅಳತೆಯಷ್ಟೇ ಆಗಿರುವುದು ಎಂದೂ, ಸದಾ ಕಾಲ ಮೌನ ಆವರಿಸಿಕೊಂಡಿರುವುದೆಂದೂ, ಕೇವಲ ಶೌಚಕ್ಕೆ ಮತ್ತು ಪ್ರಾರ್ಥನೆಗಾಗಿ ಮಾತ್ರ ಹೊರಹೋಗಲು ಬಾಗಿಲುಗಳನ್ನು ತೆರೆಯಲಾಗುವುದೆಂದೂ ತಿಳಿದುಕೊಂಡಿದ್ದೆ. ಏಕಾಂತ ಬಂಧನದ ಕಾರ್ಯಾಚರಣೆಯ ಬಗ್ಗೆ,  ಚಿತ್ರಹಿಂಸೆ ಮತ್ತು ಬ್ರೈನ್ ವಾಶ್ ಮಾಡುವ ರೀತಿಗಳ ಬಗ್ಗೆ ನನಗೆ ಅರಿವಿತ್ತು. ಆದರೆ ಈಗ ಈ ಹಿಂದೆ ನಾನು ಓದಿದ ಕೇಳಿದ ವಿಷಯಗಳನ್ನೆಲ್ಲಾ ಖುದ್ದಾಗಿ ಅನುಭವಿಸುವ ಹಾಗೂ ಅವು ಉಂಟುಮಾಡುವ ಭಯಾನಕ ಪರಿಣಾಮಗಳನ್ನು ಯೋಚಿಸಿ ಇದ್ದಕ್ಕಿದ್ದಂತೆ ಭಯ ಆವರಿಸಿತು .

ನಾನು ಎಲ್ಲಿದ್ದೇನೆ ಅವರು ನನಗೆ ಏನು ಮಾಡಬಹುದು ಎಂದು ನನಗೆ ತಿಳಿದಿಲ್ಲ. ಅಪರಿಚಿತ ಜೈಲಿನ ಶಿಕ್ಷೆಗಳು ಮತ್ತು ಭವಿಷ್ಯದ ಅನಿಶ್ಚಿತತೆಯು ಮಾರಣಾಂತಿಕ ವಿಷದಂತೆ ಭಾಸವಾಗುತಿತ್ತು. ಒಬ್ಬ ಮನುಷ್ಯನನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೆ. ನನ್ನ ಮೇಲಿನ ವಿಚಾರಣೆ -ಶಿಕ್ಷೆಗಳಿಗಿಂತಲೂ ಹೆಚ್ಚಾಗಿ, ಸ್ವತಂತ್ರವಾಗಿ ಉಸಿರಾಡುವ, ನಡೆದಾಡುವ, ಶೌಚಕ್ಕೆ ಹೋಗುವ, ಇತರ ಜನರ ಧ್ವನಿಯನ್ನು ಕೇಳುವ ಮತ್ತು ಅವರೊಂದಿಗೆ ಮಾತನಾಡುವ ಮೂಲಭೂತ ಹಕ್ಕುಗಳನ್ನು ಜನಸಾಮಾನ್ಯರಿಂದ ಕಸಿದುಕೊಂಡರೆ ಅವರಿಗಾಗುವ ವಂಚನೆಯ ಕುರಿತು ಯೋಚಿಸಿಯೇ ನಾನು ದಿಗಿಲುಪಟ್ಟುಕೊಂಡೆ.

ಒಬ್ಬಾತ ಬಂದು ಬಾಗಿಲು ತೆರೆದು ನನ್ನನ್ನು”ಬನ್ನಿ” ಎನ್ನುವವರೆಗೂ ನಾನು ಗಂಟೆಗಟ್ಟಲೆ ಕೋಣೆಯೊಳಗೇ ಕುಳಿತಿದ್ದೆ. ನಾನು ನನ್ನ ಕೋಟು, ಸ್ಕಾರ್ಫ಼್ ಧರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೊರಬಂದೆ. ಹಜಾರಕ್ಕೆ ಬಂದಾಗ ನಾನು ಪುರುಷರ ವಾರ್ಡ್ ನಲ್ಲಿದ್ದೇನೆಂದು ನನ್ನ ಗಮನಕ್ಕೆ ಬಂದಿತು. ಜೈಲರ್ ನ ಆಜ್ಞೆಯ ಮೇರೆಗೆ ನಾನು ಆತುರದಲ್ಲಿ ಕಣ್ಣಿನ ಪಟ್ಟಿಯನ್ನು ಬಿಗಿಯಾಗಿ ಕಟ್ಟಿಕೊಂಡದ್ದರಿಂದ ನನಗೆ ನಡೆಯಲು ಕಷ್ಟವಾಗುತಿತ್ತು. ಒಬ್ಬ ವ್ಯಕ್ತಿ ಮುಂದೆ ನಡೆಯುತ್ತಾ ನನಗೆ ದಾರಿ ತೋರಿಸಿದರು.

ಸ್ವಲ್ಪ ಮುಂದಕ್ಕೆ ಹೋಗಿ ನಾನು ಬಾಗಿಲನ್ನು ದಾಟಿಹೋದೆ ಅಂದುಕೊಂಡಾಗ, ನನ್ನನ್ನು ಆತ ಹಿಂದೆ ಬಲಗಡೆಗೆ ಬರಲು ಹೇಳಿದ. ನಾನು ಹಿಂದೆ ತಿರುಗಿ ಗೋಡೆಗೆ ಹೊಡೆದುಕೊಂಡೆ. ನನ್ನ ಹಿಂದಿನಿಂದ ಇಬ್ಬರು ನಗುವುದು ಕೇಳಿಸಿತು. ನಾನು ಇದರಿಂದ ತುಂಬಾ ಅಸಮಾಧಾನಗೊಂಡೆ. ನನ್ನನ್ನು ಅವರು ಒಂದು ಸಣ್ಣ ಕೋಣೆಗೆ ಕರೆದೊಯ್ದು, ನನ್ನ ಫೋಟೋಗಳನ್ನು ತೆಗೆದುಕೊಂಡರು, ಮತ್ತೆ ನನ್ನ ಕಣ್ಣಪಟ್ಟಿ ಹಚ್ಚಲಾಯಿತು. ಮತ್ತೆ ನನ್ನನ್ನು ಕೋಣೆಗೆ ಹಿಂದೆ ಕಳುಹಿಸಿದರು. ಬಾಗಿಲುಗಳ ಕೀಲಿ ತೆರೆಯುವ ಮುಚ್ಚುವ ಶಬ್ದವು ಒಂದು ರೀತಿಯ ಅಸಾಧಾರಣ ದೈಹಿಕ ನೋವಿನಂತೆ ಭಾಸವಾಗುತಿತ್ತು. ನಾನು ಬಾತ್ ರೂಂಗೆ ಹೋಗಬೇಕಾದಲ್ಲಿ, ಬಾಗಿಲ ಕೆಳಗಿನಿಂದ ಹಾಕಲು ಬಣ್ಣದ ಕಾಗದಗಳನ್ನು ನೀಡಿದ್ದರು. ಜೈಲರ್ ಬಂದು ನನಗೆ ಕಣ್ಣಿನ ಪಟ್ಟಿ ಕಟ್ಟಿಕೊಳ್ಳುವಂತೆ ಹೇಳಿದಾಗ ನಾನು ಇಲ್ಲವೆಂದೆ. ”ಹಜಾರದಲ್ಲಿ ನಡೆದ ಘಟನೆ ಅಮಾನವೀಯ ಮತ್ತು ನೀವು ನನ್ನನ್ನು ನೋಡಿ ಅಪಹಾಸ್ಯ ಮಾಡಿ ನಗುವುದು  ಸಭ್ಯವಲ್ಲ . ” ಎಂದೆ. ಆತ ಬಾಗಿಲು ಮುಚ್ಚಿ ಹೊರಟು ಹೋದ. ನಾನು ಹಲವು ಬಾರಿ ಕಾಗದವನ್ನು ಬಾಗಿಲ ಹೊರಗೆ ಹಾಕಿದೆ. ನಾನು ಕಣ್ಣಪಟ್ಟಿ ಕಟ್ಟಿಲ್ಲವಾದ್ದರಿಂದ ಮತ್ತೆ ಬಾಗಿಲನ್ನು ಮುಚ್ಚಿ ಹೊರಟು ಹೋದ. ನಾನು ಗಟ್ಟಿಯಾಗಿ ಕಿರುಚಾಡಲು ಪ್ರಾರಂಭಿಸಿದೆ. ಸ್ವಲ್ಪ ಉಗ್ರನಾಗಿದ್ದ ವಾರ್ಡ್ ವಿಚಾರಣಾಧಿಕಾರಿಯೊಬ್ಬ ಬಂದು ನನ್ನನ್ನು ಬಾಗಿಲ ಹಿಂಬದಿಯಲ್ಲಿ ತಮಗೆ ಕಾಣಿಸದ ಹಾಗೆ ನಿಲ್ಲಲು ಹೇಳಿದ. ನಾನು ಮಾತನಾಡಲು ಶುರು ಮಾಡಿದೆ. ಹಜಾರದಲ್ಲಿ ಏನಾಯಿತೆಂದೂ, ನಾನು ಏಕೆ ಕಣ್ಣಪಟ್ಟಿ ಕಟ್ಟುವುದಿಲ್ಲವೆಂದೂ ಆತನಿಗೆ ವಿವರಿಸತೊಡಗಿದೆ.

ನಮ್ಮ ಧ್ವನಿಯು ಇತರ ಕೋಣೆಗಳಲ್ಲಿರುವ ಮಂದಿಗೆ ಕೇಳಿಸದಂತೆ ರೇಡಿಯೋವನ್ನು ತಂದು ಅದನ್ನು ತಿರುಗಿಸಿದರು.ನಮ್ಮ ಮಾತು ಹತ್ತಿರದ ಯಾವ ಜೈಲುಕೋಣೆಯವರಿಗೂ ಕೇಳಿಸದ ಹಾಗೆ ಜಾಗರೂಕತೆ ವಹಿಸಿದರು. ಕೊನೆಯದಾಗಿ, ಜೈಲರ್ ನನ್ನ ಸ್ಕಾರ್ಫ಼್ ಅನ್ನು ಗಲ್ಲದವರೆಗೂ ಎಳೆದುಕೊಳ್ಳಲು ಹೇಳಿ ತಲೆ ತಗ್ಗಿಸಿ ಬಾತ್ ರೂಂಗೆ ಹೋಗಲು ಆದೇಶ ನೀಡಿದರು. ಒಬ್ಬ ಜೈಲರ್ ಬಾತ್ ರೂಂ ವರೆಗೂ ನನ್ನನ್ನು ಹಿಂಬಾಲಿಸಿದ. ಬಾತ್ ರೂಂನ ಹತ್ತಿರದ ಕೋಣೆಯಲ್ಲಿ ಇದ್ದ ಖೈದಿಗಳನ್ನು ಗಮನಿಸಿದೆ. ಎಲ್ಲರೂ ಪುರುಷರಾಗಿದ್ದರು – ಅದು ಪುರುಷರ ವಾರ್ಡ್ ಆಗಿತ್ತು.

ಡಾ ಬನಿಯಾಸಾದಿ, ಡಾ ಘರಾವಿ, ತವಸ್ಸೋಲಿ, ಸಬ್ಬಘಿಯಾನ್ ಮತ್ತು ಇರಾನಿನ ಸ್ವಾತಂತ್ರ್ಯ ಚಳವಳಿಯ ಇತರ ಸದಸ್ಯರನ್ನು ಹತ್ತಿರದ ಜೈಲುಕೋಣೆಗಳಲ್ಲಿ ಇರಿಸಲಾಗಿದೆಯೆಂದು ಆನಂತರ ನನಗೆ ತಿಳಿಯಿತು. ನಾನು ಬಾತ್ ರೂಂಗೆ ಹೋದೆ. ಅದು ತೀರ ಕೊಳಕಾಗಿತ್ತು. ನಾನು ಹೊರಬಂದೆ. ಜೈಲರ್ ಬಾತ್ ರೂಂನಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ನಿಂತಿದ್ದು ನನಗೆ ಅರಿವಾಗಿ, ಆತ ಸ್ವಲ್ಪ ದೂರದಲ್ಲಿ ನಿಲ್ಲಬೇಕೆಂದು ನಾನು ಪ್ರತಿಭಟಿಸಿದೆ. ಜೈಲರ್, ತಾನು ಎಲ್ಲಿ ನಿಲ್ಲಬೇಕು ಎನ್ನುವುದು ನನಗೆ ಸಂಬಂಧಪಟ್ಟದಲ್ಲವೆಂದೂ, ಯಾವ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬಾತ್ ರೂಂ ಗೆ ಹೋಗಬೇಕೆಂದೂ, ನನಗೆ ಗದರಿದನು. ಬೇಸಿನ್ ನಲ್ಲಿ ಕೈ ತೊಳೆದುಕೊಳ್ಳಲು ಹೇಳಿದಾಗ, ಅಲ್ಲಿದ್ದ ಗೋಲ್ನಾರ್^೩ ಸೋಪನ್ನು ಕೈಗೆತ್ತಿಕೊಂಡೆ. ಅದು ತೀರಾ ಒದ್ದೆಯಾಗಿ ಬಿಡಿಬಿಡಿಯಾಗಿತ್ತು. ನಾನು ನನ್ನ ಕೋಣೆಗೆ ಹಿಂತಿರುಗಿದೆ. ಹಜಾರದಲ್ಲಿ ಮಾತನಾಡಲು ನನಗೆ ಅವಕಾಶವಿರಲಿಲ್ಲ.

ಸ್ನಾನ ಮಾಡುವ ಸರದಿ ಬಂದಾಗ ಜೈಲಿನ ಪುರುಷ ಸಿಬ್ಬಂದಿಯೊಬ್ಬ ಬಂದು ಸ್ವಲ್ಪ ಶಾಂಪೂ ಕೊಟ್ಟು ಸ್ನಾನ ಮಾಡುವಂತೆ ಹೇಳಿದನು. ನಾನು ಬಾತ್ ರೂಂ ಒಳಗಡೆ ಹೋಗುತ್ತಿದ್ದಂತೆಯೇ ಆತನು ನನ್ನ ಹಿಂದೆಯೇ ಬಂದು ಕೆಲವೇ ಹೆಜ್ಜೆಗಳು ಹಿಂದೆ ನಿಂತನು. ನಾನು ಆತಂಕಗೊಂಡೆನಾದರೂ ಬೇರೆ ಮಾರ್ಗವಿರಲಿಲ್ಲ. ಬಾತ್ ರೂಂ ಮಧ್ಯದಲ್ಲಿ ನಿಂತು ಏನನ್ನೂ ಕೈಗೆ ತಾಕಿಸಿಕೊಳ್ಳದಂತೆ ಜಾಗರೂಕತೆ ವಹಿಸಿದೆ. ತಲೆಕೂದಲನ್ನು ತೊಳೆದುಕೊಳ್ಳಲು ಕಣ್ಣು ಮುಚ್ಚಬೇಕಾದಾಗ ತಲ್ಲಣಗೊಂಡೆ. ಬಾತ್ ರೂಂ ಬಾಗಿಲಿಗೆ ಚಿಲಕವಿರಲಿಲ್ಲ. ಯಾರೂ ಒಳಗೆ ಬಾರದಂತೆ ಬಾಗಿಲನ್ನು ತಌದೆ. ಆ ಜಾಗ ಸುರಕ್ಷಿತ ಅನ್ನಿಸಲಿಲ್ಲ. ಜೈಲಿನ ಪುರುಷ ಕಾವಲುಗಾರ ಸಿಬ್ಬಂದಿಯನ್ನು  ಶೌಚಾಲಯ ಮತ್ತು ಬಾತ್ ರೂಂನಿಂದ ದೂರವಿರಲು ನಾನು ಕೋರಿಕೊಂಡ ಎಲ್ಲಾ ಪ್ರಯತ್ನಗಳು ನಿಷ್ಪ್ರಯೋಜಕವಾಗಿದ್ದವು. ಅದು ಸೆಪ್ಟೆಂಬರ್ ೨೦೦೧. ಒಂದು ದಿನ, ನಾನು ನನ್ನ ಕೋಣೆಯ ಕಿರಿದಾದ ಸಂಧಿಯೊಂದರಿಂದ ಹೊರನೋಡುತ್ತಿದ್ದಾಗ ಒಬ್ಬ ಇಳಿಪ್ರಾಯದ ವ್ಯಕ್ತಿಯೊಬ್ಬರಿಗೆ ಆರೈಕೆ ಮಾಡಲಾಗುತ್ತಿರುವುದನ್ನು ಕಂಡೆ. ಶಾಖವು ತೀವ್ರವಾದ್ದರಿಂದ ಅವರ ತಲೆಗೆ ಬಟ್ಟೆಯೊಂದನ್ನು ಹಾಕಲಾಗಿತ್ತು. ಅವರ ಆರೋಗ್ಯ ಚೆನ್ನಾಗಿಲ್ಲವೆಂದು ತಿಳಿಯುತಿತ್ತು. ನಾನು ಜೈಲಿನಿಂದ ಬಿಡುಗಡೆಯಾದ ಬಳಿಕ ಆ ವ್ಯಕ್ತಿ ತಾಹೆರ್ ಅಹ್ಮದ್ ಜಾದೆ  ಎಂದೂ, ಜತೆಗಿದ್ದ ವ್ಯಕ್ತಿ ನೈಂಪೂರ್  ಅವರೆಂದೂ ನನಗೆ ತಿಳಿಯಿತು.

ಇಶ್ರತಾಬಾದ್ ಮಿಲಿಟರಿ ಬಂಧನ ಕೇಂದ್ರದಲ್ಲಿನ ಕಾವಲುಗಾರರು, ಕೈದಿಗಳು, ಸಿಬ್ಬಂದಿವರ್ಗ ಮತ್ತು ವೈದ್ಯರು ಎಲ್ಲಾ ಪುರುಷರಾಗಿದ್ದು ನಾನು ಮಾತ್ರ ಒಂಟಿ ಮಹಿಳೆಯಾಗಿದ್ದೆ. ಈ ಹಿಂದೆ ಫ಼ಿರೋಝಿ ಸಾಬೆರ್ ಇಂತಹುದೇ ಪರಿಸ್ಥಿತಿಯನ್ನು ವಿವರಿಸಿದ್ದುದನ್ನು ನೆನಪಿಸಿಕೊಂಡೆ. ಆಕೆಯೂ ಅಲ್ಲೇ ಬಂಧನಗೊಳಗಾಗಿದ್ದಳು. ಅಲ್ಲಿಯೇ ರಾಜೈ ಅವರನ್ನೂ ನೋಡಿರುವುದಾಗಿಯೂ ಹೇಳಿದ್ದಳು. ಬಹುಷಃ ಆಕೆಯನ್ನೂ ಅದೇ ವಾರ್ಡ್ನಲ್ಲಿ ಬಂಧಿಸಿಟ್ಟಿರಬೇಕು. ದಿನಗಳು ರಾತ್ರಿಗಳು ಉರುಳುತಿದ್ದುವು. ಸಮಯ ಮಾತ್ರ ನಿಂತಲ್ಲೇ ನಿಂತಿದೆಯೇನೋ ಎಂಬಂತೆ ಅನ್ನಿಸುತಿತ್ತು. ನನ್ನ ಬಳಿ ವಾಚ್ ಇರಲಿಲ್ಲವಾದ್ದರಿಂದ ನಿರ್ಧರಿತ ಪ್ರಾರ್ಥನಾ ಕರೆಗಳನ್ನು ಗಮನಿಸಿ ಸಮಯವನ್ನು ಊಹಿಸುತಿದ್ದೆ. ದಿನಕ್ಕೆ ಮೂರು ಬಾರಿ ಪ್ರಾರ್ಥನಾ ಕರೆಯನ್ನು ನೀಡಲಾಗುತಿತ್ತು. ವಿಚಾರಣೆ ನಡೆಯುವ ಪ್ರದೇಶದಲ್ಲಿ ಸಣ್ಣ ಸಣ್ಣ ಜೈಲುಕೋಣೆಗಳಿದ್ದವು ಮತ್ತು ಅಲ್ಲಿ ಹೆಚ್ಚಾಗಿ ಪುರುಷರ ದನಿಯೇ ಕೇಳುತಿತ್ತು. ಒಮ್ಮೆ ವಿಚಾರಣಾ ಕೋಣೆಯಲ್ಲಿರುವಾಗ ತಘಿಯನ್ನು ಒಳಗೆ ಕಳುಹಿಸಿದ್ದರು. ನನ್ನನ್ನು ಅಲ್ಲಿಕಂಡು ತಘಿ ಆಶ್ಚರ್ಯ ಹಾಗೂ ಗಾಬರಿಯಾದರು. ನಮಗೆ ಮಾತನಾಡಲು ಹೆಚ್ಚು ಕಾಲಾವಕಾಶ ಇರಲಿಲ್ಲ. ಕೆಲವೇ ವಾಕ್ಯಗಳಲ್ಲಿ ಮಾತನಾಡಿ, ನನಗೆ ವ್ಯಾಯಾಮ ನಡೆಸುವಂತೆ ಸಲಹೆ ನೀಡಿದರು. ಅವರನ್ನು ಮತ್ತೆ ಹೊರಗೆ ಕರೆದೊಯ್ಯಲಾಯಿತು. ನನ್ನನ್ನು ರಾತ್ರಿಯೂ ವಿಚಾರಣೆ ಮಾಡಲಾಯಿತು.

ಒಮ್ಮೆ ತಡವಾಗಿ ನನ್ನನ್ನು ನನ್ನ ಕೋಣೆಯಲ್ಲಿ ವಿಚಾರಣೆ ನಡೆಸಲಾಯಿತು. ನನ್ನ ವಿಚಾರಣಾಧಿಕಾರಿ ಕೋಣೆಯಿಂದ ಹೊರಹೋಗಿ ಇನ್ನೊಬ್ಬ ವ್ಯಕ್ತಿ ಒಳಬಂದು ನನ್ನ ಕುರ್ಚಿಯನ್ನು ತಿರುಗಿಸಲು ಹೇಳಿದರು. ನಾನು ತಿರುಗಿದಾಗ ನ್ಯಾಯಾದೀಶರಾದ ಹದ್ದಾದ್ ಅವರು ಎದುರಿದ್ದರು. ಅವರು ನನ್ನ ಎದುರು ಕುಳಿತು ಕೈದಿಗಳ ಜೀವ ಉಳಿಸುವ ತಮ್ಮ ಪ್ರಯತ್ನಗಳ ಕುರಿತು ಹೇಳಿದರು. ನಾನು ಆ ಬೆಳಿಗ್ಗೆ ಅನಾರೋಗ್ಯದಿಂದ ಬಳಲುತಿದ್ದೆ. ನನ್ನನ್ನು ಬಖಿಯತಲ್ಲಾಹ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ”ರಾತ್ರಿ ನಿದ್ದೆ ಬರುತ್ತದೆಯೇ” ಎಂದು ನನ್ನನ್ನು ಅವರು ಕೇಳಿದರು. ”ಮಲಗುತ್ತೇನೆ, ಆದರೆ ಚೆನ್ನಾಗಿಯೇನೂ ಅಲ್ಲ. ಕೋಣೆಯೊಳಗಡೆಯೇ ಇರುವುದು ನನ್ನನ್ನು ಅಸಮಾಧಾನಗೊಳಿಸುತ್ತದೆ. ನನ್ನ ತಲೆಯ ಕೆಳಗೆ ಕಂಬಳಿ ಹಾಸಿ, ಅದರ ಕೆಳಗೆ ಹೊದಿಕೆಯನ್ನು ಹರಡಿ ಮಲಗುತ್ತೇನೆ, ಆದರೆ ಹೊದಿಕೆಯು ನನ್ನ ಮುಖ ಮತ್ತು ದೇಹವನ್ನು ಅಸಾಧ್ಯವಾಗಿ ನೋಯಿಸುತ್ತದೆ”, ಎಂದು ನಾನು ಉತ್ತರಿಸಿದೆ.

ಜಡ್ಜ್ ಅವರು ಸ್ವಲ್ಪ ಹೊತ್ತು ನನ್ನ ಬಳಿ ಮಾತನಾಡಿ ಹೊರಟುಹೋದರು. ಮತ್ತೆ ವಿಚಾರಣಾ ಅಧಿಕಾರಿ ಬಂದು ನನ್ನನ್ನು ಪುನಹ ವಿಚಾರಣೆ ನಡೆಸಲು ಆರಂಭಿಸಿದ. ಕೋಣೆಯಲ್ಲಿ ಅಸಾಧಾರಣ ಶೆಖೆಯಿತ್ತು. ನನಗೆ ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವ್ಯಾಯಾಮ ಮಾಡಲು ಕಷ್ಟವಾಯಿತು. ಹಸಿವೂ ಇರಲಿಲ್ಲ. ನಾನು ಆಹಾರವನ್ನು ತೆಗೆದುಕೊಳ್ಳುತ್ತಿದ್ದೆಯಾದರೂ ಏನನ್ನೂ ತಿನ್ನದೆ ಹಾಗೆಯೇ ಹಿಂದೆಕಳಿಸುತಿದ್ದೆ. ಕೋಣೆಯ ಬಾಗಿಲು ಯಾವಾಗಲೂ ಮುಚ್ಚಿಯೇ ಇರುತ್ತಿದ್ದರಿಂದ ನಾನು ರೋಸಿಹೋಗಿದ್ದೆ. ಪದೇ ಪದೇ ನಾನು ಜೈಲರ್ ಬಳಿ ಕೋಣೆಯ ಬಾಗಿಲು ತೆರೆದೇ ಇಡುವಂತೆ ಬೇಡಿಕೆ ಇಡುತಿದ್ದೆ. ಅನಂತರ, ಮನೋವೈದ್ಯರ ಜತೆ ಮಾತನಾಡಿದಾಗ ನನಗೆ ಕ್ಲಾಸ್ಟ್ರೋಫೋಬಿಯಾ ಇದೆ ಎಂದು ಅರಿವಾಯಿತು.

ಜೈಲುಕೋಣೆಯಲಿರುವುದು ಬಹಳ ಕಷ್ಟ ಹಾಗೂ ಅಸಹನೀಯಕರವಾಗಿತ್ತು. ನನಗೆ ಹೃದಯಾಘಾತವಾದರೂ ಆಗಬಾರದೇ ಎಂದು ಬೇಡಿಕೊಳ್ಳುತಿದ್ದೆ, ಹಾಗಾದರೂ ಅಲ್ಲಿಂದ ಹೊರಬರಲು ಚಡಪಡಿಸುತ್ತಿದ್ದೆ. ನನ್ನನ್ನು ಯಾವ ಕಾರಣಕ್ಕಾಗಿ ಅಲ್ಲಿ ಕೂಡಿಹಾಕಿದ್ದರು ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಏಕೆಂದರೆ ನನ್ನ ಚಟುವಟಿಕೆಗಳ ಬಗ್ಗೆ ಏನನ್ನೂ ಕೇಳುತ್ತಿರಲಿಲ್ಲ ಮತ್ತು ನನ್ನ ಮೇಲೆ ಯಾವುದೇ ತನಿಖಾ ಕ್ರಮವೂ ಜರುಗುತ್ತಿರಲಿಲ್ಲ. ಆದರೆ ನನಗೆ ಎಲ್ಲಾ ಸಮಯದಲ್ಲೂ ಬೆದರಿಕೆ ಹಾಕುತ್ತಿದ್ದರು. ತಘಿ ಮರಣದಂಡನೆಗೆ ಗುರಿಯಾಗುತ್ತಾರೆಯೆಂದೂ, ಅಥವಾ ದೀರ್ಘಸಮಯದ ವರೆಗೆ ಸೆರೆಮನೆಯಲ್ಲಿರುತ್ತಾರೆಯೆಂದೂ, ತಘಿ ಮರಳಿ ಬರುವುದಿಲ್ಲವೆಂದೂ, ನನ್ನ ರಕ್ಷಣೆಯನ್ನೂ ನಾನೇ ಮಾಡಿಕೊಳ್ಳಬೇಕೆಂದೂ ಎಚ್ಚರಿಕೆ ನೀಡುತ್ತಿದ್ದರು. ಅವನ್ನೆಲ್ಲಾ ಕೇಳಲು ಅತೀವ ಸಂಕಟವಾಗುತಿತ್ತು. ಕಣ್ಣೀರು ಒತ್ತರಿಸಿ ಬರುತ್ತಿದ್ದರೂ ಅಳದೆ ಇರಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದೆ. ನನ್ನ ವಿಚಾರಣಾಧಿಕಾರಿಯು ನನ್ನ ಹಿಂದೆಯೇ ನಿಂತುಕೊಂಡು ನನ್ನ ಭುಜದ ಮೇಲೆ ಹಲವಾರು ಬಾರಿ ಪೆನ್ನನ್ನು ಒತ್ತಿ ಹಿಡಿಯುತ್ತಿದ್ದ.

ನನ್ನ ಪಾದಗಳಿಗಿಂತ ದುಪ್ಪಟ್ಟು ಗಾತ್ರದಲ್ಲಿದ್ದ ನನ್ನ ಚಪ್ಪಲಿಯಲ್ಲಿ ನನ್ನ ಬರಿಕಾಲುಗಳನ್ನು ಮುಟ್ಟಿ ನೋಡಿದೆ. ಅವು ಹೆಪ್ಪುಗಟ್ಟಿದ್ದವು. ಆ ರಾತ್ರಿ ವಿಚಾರಣಾಧಿಕಾರಿಯು, ನನಗೆ ಹುಷಾರಿಲ್ಲ ಹಾಗೂ ನಾನು ಏನನ್ನೂ ತಿಂದಿರಲಿಲ್ಲವೆಂದು ಗಮನಿಸಿ, ನನಗೆ ಒಂದು ಲೋಟ ಮಿಂಟ್ ಸಿರಪ್ ಅನ್ನು ನೀಡಿದರು. ನಾನು ತೀರಾ ಅಸ್ವಸ್ಥಳಾಗಿದ್ದರಿಂದ ಅದನ್ನು ಕುಡಿದುಬಿಟ್ಟೆ.

ನಾನು ಸ್ವಲ್ಪ ಸುಧಾರಿಸಿಕೊಂಡ ಬಳಿಕ ನನ್ನನ್ನು ತಾಜಾ ಗಾಳಿಗಾಗಿ ಹೊರಗೆ ಕರೆದೊಯ್ದರು. ಆದರೆ, ಅಲ್ಲಿ ಯಾವುದೇ ದಿನನಿತ್ಯದ ಕ್ರಮ ಎನ್ನುವುದಾಗಲಿ ಇರಲಿಲ್ಲ. ಆಹಾರವನ್ನು ಸ್ಟೀಲ್ ಅಥವಾ ಅಲ್ಯುಮಿನಿಯಮ್ ಬಟ್ಟಲಿನಲ್ಲಿ ಬಡಿಸಲಾಗುತಿತ್ತು. ನೀರಿಗಾಗಿ ಹಳೆಯ ಪ್ಲಾಸ್ಟಿಕ್ ಕಪ್ ನೀಡುತಿದ್ದರು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಹೊರತು ಬೇರೇನನ್ನೂ ನೀಡುತ್ತಿರಲಿಲ್ಲ. ಅವರು ನೀಡುತಿದ್ದ ಆಹಾರವು ತೀರಾ ಕಳಪೆಯಾಗಿದ್ದರಿಂದ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಜೈಲು ಕೋಣೆಯೊಳಗೆ ಕುಳಿತುಕೊಳ್ಳುತ್ತಿದ್ದ ನನಗೆ ಜಗತ್ತೇ ನಿಂತು ಹೋಗಿದೆ ಎನ್ನುವ ಭಾವನೆಯಾಗುತ್ತಿತ್ತು. ನನ್ನಲ್ಲಿ ಭಯ ಹಾಗೂ ಆತಂಕವಿದ್ದರೂ ನಾನು ದುಃಖಿತಳಾಗಿರಲಿಲ್ಲ ಮತ್ತು ಖಿನ್ನತೆಗೆ ಒಳಪಡಲಿಲ್ಲ, ಆದರೆ ಸಾಮಾನ್ಯ ಮನುಷ್ಯರಂತೆ ಅನಿಸುತ್ತಿರಲಿಲ್ಲ.

ಎರಡನೇ ಜೈಲುವಾಸದ  ಅನುಭವ, ಜೂನ್ ೨೦೧೦

ಅಲಿ ಮತ್ತು ಕಿಯಾನಾಗೆ ಮೂರುವರೆ ವರ್ಷ. ಕಿಯಾನಾಗೆ ಆಗಷ್ಟೇ ಶಸ್ತ್ರಚಿಕಿತ್ಸೆಯಾಗಿತ್ತು. ನಾವು ಆಕೆಯ ಕಿಬ್ಬೊಟ್ಟೆಯ ಗಾಯಗಳನ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದವರು ಮನೆಗೆ ಹಿಂತಿರುಗುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ನಾನು ಮಕ್ಕಳನ್ನು ಮಲಗಿಸಲು ಸಿದ್ಧಗೊಳಿಸುವಷ್ಟರಲ್ಲಿ ಬಾಗಿಲ ಕರೆಗಂಟೆ ಮೊಳಗಿತು. ಅಧಿಕಾರಿಗಳು ಮನೆಯ ಅಂಗಳದಲ್ಲಿ ನಿಂತಿದ್ದರು. ಅವರಲ್ಲಿ ಕೆಲವರು ಮನೆಯೊಳಗೆ ಬಂದು ಹುಡುಕಾಡತೊಡಗಿದರು. ಮಕ್ಕಳ ಮಲಗುವ ಸಮಯವಾದ್ದರಿಂದ ಅವರು ಅಳುತ್ತಿದ್ದರು. ಅಲಿ ಯಾವಾಗಲೂ ನನ್ನ ಕಾಲಿನ ಮೇಲೆ ಮಲಗುತ್ತಿದ್ದ, ಹಾಗೆಯೇ ಅವನನ್ನು ನನ್ನ ಕಾಲುಗಳ ಮೇಲಿಟ್ಟುಕೊಂಡೆ. ಅವನು ನಿದ್ರಿಸಿದ. ಕಿಯಾನಾಗೆ ಜ್ವರವಿತ್ತು. ಅವಳನ್ನು ತಬ್ಬಿಕೊಂಡೆ. ಏನು ಮಾಡಿದರೂ ಅವಳು ನಿದ್ದೆ ಮಾಡಲು ಒಪ್ಪಲಿಲ್ಲ. ನನ್ನ ಕುತ್ತಿಗೆಯನ್ನು ತನ್ನ ತೋಳುಗಳಿಂದ ಬಳಸಿಕೊಂಡು ಮನೆಯನ್ನು ತಡಕಾಡುತ್ತಿದ್ದ ಜನರೆಡೆಗೆ ನೋಡುತ್ತಿದ್ದಳು.

ನಾನು ಹೊರಡಬೇಕಾದ ಸಮಯವಾಯಿತು. ಕಿಯಾನಳಿಂದ ಬೇರ್ಪಡುವುದು ನನ್ನ ಬದುಕಿನ ಅತ್ಯಂತ ಕಷ್ಟಕರ, ಹೃದಯಬಿರಿಯುವ ಘಟನೆಯಾಗಿತ್ತು. ತಘಿಯ ತೋಳುಗಳಲ್ಲಿದ್ದ ಕಿಯಾನಾ ”ಅಮ್ಮ, ಹೋಗಬೇಡ” ಎಂದು ಗೋಗರೆಯುತ್ತಿದ್ದಳು. ಅಧಿಕಾರಿಗಳು ಮೆಟ್ಟಿಲುಗಳ ಮೇಲೆ ನಿಂತು ನನ್ನನ್ನು ಬೇಗನೇ ಹೊರಡುವಂತೆ ಆದೇಶ ನೀಡುತ್ತಿದ್ದರು. ನಾನು ಹೊರಟು ಬಾಗಿಲ ಬಳಿ ಹೋಗುತ್ತಿದ್ದಂತೆಯೇ ಕಿಯಾನ ಮೆಲುದನಿಯಲ್ಲಿ ” ಅಮ್ಮ ನಂಗೊಂದು ಮುತ್ತು ಕೊಟ್ಟು ಹೋಗು” ಎಂದು ಅಳುತ್ತಾ ಹೇಳಿದಳು. ಅಧಿಕಾರಿಯು ನನ್ನನ್ನು ಹೋಗಲು ಹೇಳಿದರು. ನಾನು ಆಕೆಯನ್ನು ತಬ್ಬಿ ಬಲವಾಗಿ ಚುಂಬಿಸಿದೆ. ಆಕೆಗೆ ಮೈ ಸುಡುವ ಜ್ವರವಿತ್ತು. ನಾನು ಆಕೆಯಿಂದ ಬೇರ್ಪಟ್ಟ ನೋವಿನಿಂದ ಉರಿಯುತ್ತಿದ್ದೆ. ನಾನು ಮೆಟ್ಟಿಲುಗಳಿಂದ ಕೆಳಗಿಳಿದು ಬಂದೆ. ನನ್ನ ಕಾಲುಗಳು ಶಕ್ತಿಹೀನವಾಗಿ ಜಡವಾಗಿದ್ದವು. ನಾನು ನಡುಗಬಾರದೆಂದು ಪ್ರಾರ್ಥಿಸತೊಡಗಿದೆ. ಬಾಗಿಲನ್ನು ಮುಚ್ಚಲಾಯಿತು. ನಾನು ನನ್ನ ಹೃದಯವನ್ನು ಮನೆಯೊಳಗೇ ಬಿಟ್ಟುಬಂದಂತೆ ಭಾಸವಾಗುತಿತ್ತು.

ಮಧ್ಯರಾತ್ರಿಯ ಸಮಯ, ನಗರ ಶಾಂತವಾಗಿತ್ತು. ನಾನಿದ್ದ ಕಾರು ಮತ್ತು ಮುಂದಿದ್ದ ಕಾರು ವೇಗವಾಗಿ ಎವಿನ್ ಸೆರೆಮನೆಯ ಕಡೆಗೆ ಧಾವಿಸಿತು. ಕಬ್ಬಿಣದ ಭಾರವಾದ  ಜೈಲು ಗೇಟ್ ತೆರೆಯುತ್ತಿದ್ದಂತೆಯೇ ನನ್ನನ್ನು ಗುಪ್ತಚರ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು. ನನ್ನ ಕಣ್ಣಿಗೆ ಪಟ್ಟಿ ಕಟ್ಟಿದರು. ಕೊಳಕಾದ ಪರದೆಯೊಂದು ಬಾಗಿಲ ಎದುರು ನೇತಾಡುತಿತ್ತು. ಅದನ್ನೆಳೆದು ಒಳಗೆ ಹೋಗಲು ಹೇಳಿದರು. ಜೈಲಿನ ಮಹಿಳಾ ಸಿಬ್ಬಂದಿ ನನ್ನನ್ನು ಜೈಲು ಕೋಣೆಯೊಳಗೆ ಕರೆದೊಯ್ದರು. ನನ್ನನ್ನು ಪೂರ್ತಿ ಬೆತ್ತಲೆಯಾಗಲು ಆದೇಶಿದರು. ”ನಿನ್ನ ಮಾತಿನ ಅರ್ಥವೇನು? ಒಳಉಡುಪನ್ನೂ  ತೆಗೆಯಬೇಕೇ ?” ಎಂದು ಪ್ರಶ್ನಿಸಿದೆ. ”ಹೌದು” ಎಂದರು. ನಾನು ಆಕೆಯೊಂದಿಗೆ ಜಗಳಕ್ಕಿಳಿದೆ. ಆದರೆ ಜೈಲಿನ ಈ ಪ್ರಕ್ರಿಯೆಯೊಂದಿಗೆ ಸಹಜವಾಗಿ ಪರಿಚಿತರಾಗಿದ್ದ ಆಕೆ ನನ್ನ ಮಾತಿಗೆ ಜಗ್ಗದೆ, ನನ್ನ ಅನಾನುಕೂಲಕ್ಕೆ ಯಾವುದೇ ಲಕ್ಷ್ಯ ನೀಡದೆ ತಮ್ಮ ಕಾರ್ಯವನ್ನು ಮುಂದುವರಿಸಿದರು.

ನಾನು ಜೈಲು ಸೇರಿದ ಕ್ಷಣದಿಂದ ಮಹಿಳಾಸಿಬ್ಬಂದಿಯ ಅಮಾನವೀಯ ನಾಚಿಕೆಗೇಡಿನ ನಡವಳಿಕೆಯಿಂದ ಆಘಾತಗೊಳಗಾಗಿದ್ದೆ. ಅವರ ದಿಟ್ಟತನ ದುರಹಂಕಾರದಿಂದ ಕೂಡಿತ್ತು. ಇಂತಹ ಕೆಲಸಗಳನ್ನು ಮಾಡಲು ನಾಚಿಕೆಪಟ್ಟುಕೊಳ್ಳದೇ ಇರುವುದಲ್ಲದೇ, ತಾವು ಏನೋ ಮಹತ್ಕಾರ್ಯ ಮಾಡಿರುವಂತೆಯೂ ಎಣಿಸುತ್ತಿರುವುದನ್ನು ನನಗೆ ನಂಬಲಾಗಲಿಲ್ಲ. ನನಗೆ ಕಡುಗೆಂಪು ಬಣ್ಣದ ಪ್ಲಾಸ್ಟಿಕ್ ಬಟ್ಟೆಯ ಸಮವಸ್ತ್ರವನ್ನು ನೀಡಿದರು. ಅದು ಕೋಟ್ ಮತ್ತು ಪ್ಯಾಂಟ್ ನಂತೆ ಕಾಣುತಿತ್ತು. ನಾನು ”ನನಗೆ ಧರಿಸಲು ಯೋಗ್ಯವಾದ ಆರಾಮದಾಯಕ ಬಟ್ಟೆಗಳು ಬೇಕು” ಎಂದು ಹೇಳಿದೆ. ಅವರು ”ಇದೇ ನಿನ್ನ ಉಡುಗೆ” ಎಂದು ಹೇಳಿ ಬಿಳಿಹೂವುಗಳ ಚಿತ್ತಾರವಿದ್ದ ಕಪ್ಪು ತಲೆ ಸ್ಕಾರ್ಫ಼್ ಅನ್ನು ನೀಡಿ ತಲೆ ಮುಚ್ಚಿಕೊಳ್ಳಲು ಹೇಳಿದರು. ಕಣ್ಣಿನ ಪಟ್ಟಿಯನ್ನೂ ನೀಡಿ ಕಣ್ಣಿಗೆ ಕಟ್ಟಿಕೊಳ್ಳಲು ಹೇಳಿ, ನೇರವಾಗಿ ನನ್ನನ್ನು ವಿಚಾರಣಾ ಕೋಣೆಗೆ ಕರೆದೊಯ್ದರು. ಅಲ್ಲಿ ಇಬ್ಬರು ಪುರುಷರಿದ್ದರು. ಒಬ್ಬ ನನ್ನ ಮುಂದಿನ ಟೇಬಲ್ ಮುಂದೆ ಕುಳಿತುಕೊಂಡಿದ್ದ ಹಾಗೂ ಇನ್ನೊಬ್ಬ ನನ್ನ ಬೆನ್ನ ಹಿಂದೆ ನಿಂತುಕೊಂಡಿದ್ದ. ಅವರು ನನ್ನಲ್ಲಿ ಅಸಂಬಂದ್ಧ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ನಾನು ಇನ್ನೂ ಆಪಾದಿತಳಾಗಿಲ್ಲವಾದ್ದರಿಂದ ಅವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದೆ.

ನನ್ನ ಹಿಂದೆ ನಿಂತಿದ್ದ ವಿಚಾರಣಾಧಿಕಾರಿ ನನ್ನ ಮೇಲೆ ಅನೈತಿಕ ನಡತೆಯ ಆರೋಪ ಮಾಡತೊಡಗಿದ. ಅವನು ಸಮಾಜದ ಅಭದ್ರತೆ, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳು, ವೇಶ್ಯೆಯರು ಹೀಗೆ ಒಂದಕ್ಕೊಂದು ಅಸಂಬದ್ಧ ವಿಷಯಗಳ ಬಗ್ಗೆ ಶುರು ಹಚ್ಚಿಕೊಂಡು ಕೊನೆಗೆ ಮಾನವ ಹಕ್ಕುಗಳ ಕೇಂದ್ರದ ಸದಸ್ಯರ ಬಗ್ಗೆ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದ. ನನ್ನ ಬಗ್ಗೆ ಯಾವಾಗ ಮಾತನಾಡಲು ಪ್ರಾರಂಭಿಸಿದನೋ ನನಗೆ ಕೋಪ ಬಂದು, ಎದ್ದು ಆತನ ಕಡೆ ತಿರುಗಿ ನೋಡಿದೆ. ” ಅಪರಾತ್ರಿಯಲ್ಲಿ ಒಬ್ಬ ಮಹಿಳೆಯನ್ನು ಆಕೆಯ ಗಂಡನ ಸಮ್ಮುಖದಲ್ಲಿ ಬಂಧಿಸಿ, ಆಕೆಯನ್ನು ಇಬ್ಬರು ಚಿಕ್ಕ ಮಕ್ಕಳಿಂದ ಬೇರ್ಪಡಿಸಿ ಜೈಲಿನಲ್ಲಿ ಕೂಡಿಹಾಕಿ, ನಿಂದಿಸಿ, ವಿಚಾರಣೆಗೈಯಲು ಅವರಿಗೆ ನಾಚಿಕೆಯಾಗಲಿಲ್ಲವೇ” ಎಂದು ನಾನು ಧ್ವನಿಯೆತ್ತಿ ಕಿರುಚಾಡಿ ಪ್ರತಿಭಟಿಸಿದೆ.

ಆತನೂ ಕೂಗಾಡುತ್ತಾ, ನಾನು ಮಾಡಿರುವ ಕೃತ್ಯಕ್ಕೆ ಕನಿಷ್ಠ ಒಂದು ವರುಷ ಜೈಲು ಶಿಕ್ಷೆಯಾಗುತ್ತದೆಯೆಂದು ಬೆದರಿಕೆ ಹಾಕಿದರು. ನಾನು ಮೇಜಿನಿಂದ ಎ ೪ ಹಾಳೆಯನ್ನು ಕೈಗೆತ್ತಿಕೊಂಡು ದೂರು ಬರೆಯಲು ಮುಂದಾದೆ. ಅಧಿಕಾರಿಯು ಹೊರಹೋಗಿ ಕೆಲವು ನಿಮಿಷಗಳ ನಂತರ ದೂರಿನೊಂದಿಗೆ ಹಿಂತಿರುಗಿದ. ನಾನು ವಿಚಾರಣೆಯ ವೇಳೆ ಎದ್ದು ಹಿಂತಿರುಗಿ ನೋಡಿ ಕಿರುಚಾಡಿದ್ದನ್ನು ದಾಖಲಿಸಿ ನನ್ನ ವಿರುದ್ಧ ದೂರು ಕೊಟ್ಟಿದ್ದ. ಇನ್ನೊಬ್ಬ ವಿಚಾರಣಾಧಿಕಾರಿಯು ನಾನು ಯುಎಸ್ ಮತ್ತು ಬ್ರಿಟಿಶ್ ಗುಪ್ತಚರ ಇಲಾಖೆಯ ಜತೆ ಸಂಪರ್ಕದಲ್ಲಿದ್ದೇನೆಂದು ನನ್ನ ವಿರುದ್ಧ ಬೇಹುಗಾರಿಕೆಯ ಆರೋಪ ಹೊರಿಸಿದರು. ನಾನು ಅದನ್ನು ಅಲ್ಲಗಳೆದೆ. ”ನಾನು ವಿಚಾರಣೆಗೆ ಒಳಪಡುವ ಮೊದಲೇ, ನನ್ನ ಮೇಲೆ ಎಲ್ಲಾ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆಯೆಂದೂ, ನನ್ನ ವಿರುದ್ಧ ಆಪಾದನೆಗಳೇನು ಎಂದು ನನಗೆ ತಿಳಿದಿರಬೇಕಲ್ಲವೇ? ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೇ ಬೇಡವೇ ? ” ಎಂದೂ ವಿರೋಧ ವ್ಯಕ್ತ ಪಡಿಸಿದೆ. ಈ ವಾದ ವಿವಾದವು ಗಂಟೆಗಟ್ಟಲೆ ನಡೆಯಿತು ಹಾಗೂ ಕೊನೆಗೂ ನನ್ನನ್ನು ನನ್ನ ಕೋಣೆಗೆ ಕಳುಹಿಸಲಾಯಿತು.

ಇಶ್ರತಾಬಾದ್ ನಲ್ಲಿದ್ದ ಜೈಲುಕೋಣೆಗಿಂತ ಈ ಕೋಣೆ ದೊಡ್ಡದಾಗಿತ್ತು. ಅದೊಂದು ಕೆನೆ ಬಣ್ಣದ ಸೀಲಿಂಗ್ ಮತ್ತು ಗೋಡೆಯ  ನಿರ್ಜೀವ ಜಾಗದಂತಿತ್ತು. ನೆಲದ ಮೇಲೆ ಮೂರು ಮಿಲಿಟರಿ ಕಂಬಳಿಗಳು ಹಾಗೂ ಒಂದು ಹಳೆಯ ಜಮಖಾನೆಯನ್ನು ಹಾಸಲಾಗಿತ್ತು. ನಾನು ಒಂದು ಕಂಬಳಿಯನ್ನು ಹಾಸಿಗೆಯಂತೆ ಹಾಸಿ, ಒಂದು ಕಂಬಳಿಯನ್ನು ತಲೆದಿಂಬಾಗಿ ಮಾಡಿ, ಇನ್ನೊಂದು ಕಂಬಳಿಯನ್ನು ಹೊದೆಯಲು ಹಾಕಿಕೊಂಡು ಮಲಗಿದೆನು. ಬೆಳಗ್ಗೆ ಒಂದು ಪ್ಲಾಸ್ಟಿಕ್ ಕಪ್ ನಲ್ಲಿ ಚಹಾ ಹಾಗೂ ಒಂದು ತುಂಡು ಚೀಸ್ ಮತ್ತು ಬ್ರೆಡ್ ಅನ್ನು ನೀಡಿದರು. ನಂತರ ನನ್ನನ್ನು ವಿಚಾರಣೆಗೆ ಕರೆದೊಯ್ದರು. ನನಗೆ ಇನ್ನೂ ನನ್ನ ಮೇಲಿರುವ ಆಪಾದನೆಗಳೇನು ಎಂದು ತಿಳಿಸಲಿಲ್ಲವಾದ್ದರಿಂದ ಅವರು ಮಾಡುತ್ತಿರುವುದು ಕಾನೂನುಬಾಹಿರ ಎಂದು ನಾನು ನಿರಂತರವಾಗಿ ಪ್ರತಿಭಟಿಸತೊಡಗಿದೆ.

ಅಂತಿಮವಾಗಿ ನನ್ನನ್ನು ಅರ್ದಬಿಲಿ ನ್ಯಾಯಾಲಯದಲ್ಲಿ ಕಿಯಾನ್ಮನೇಶ್  ಅವರ ಬಳಿ ಕರೆದೊಯ್ಯಲಾಯಿತು. ಸರಕಾರದ ವಿರುದ್ಧ ಅಪಪ್ರಚಾರದ ಆರೋಪದ ಮೇಲೆ ಸುಮಾರು ಒಂದು ತಿಂಗಳ ಹಿಂದೆಯಷ್ಟೇ IRGC ನ್ಯಾಯಾಲಯದ ಬ್ರಾಂಚ್ ೪ ರಲ್ಲಿ ಜಮಾಲಿಯವರ ಆದೇಶದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದೆ ಎಂದು ವಿವರಿಸಿದೆ. ಕಿಯಾನ್ಮನೇಶ್ ಅವರು ಪ್ರಾಸಿಕ್ಯೂಟರ್ ಅವರಿಗೆ ಇದನ್ನೇ ಬರೆಯಲು ಹೇಳಿದರು.ಈಗಾಗಲೇ ನನ್ನ ಮೇಲಿದ್ದ ಆರೋಪ ವಿಚಾರಣೆಗೆ ಒಳಪಟ್ಟು ಮತ್ತೊಮ್ಮೆ ಅದೇ ಆರೋಪದ ಮೇಲೆ ನನ್ನನ್ನು ಬಂಧಿಸಲಾಗಿದೆ ಹಾಗೂ ಈ ಅಕ್ರಮ ಬಂಧನದ ಬಗ್ಗೆ ತನಿಖೆ ನಡೆಸುವಂತೆಯೂ ಅವರಲ್ಲಿ ಕೇಳಿಕೊಂಡೆ. ಅವರು ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ನನ್ನನ್ನು ಮತ್ತೆ ಜೈಲುಕೋಣೆಗೆ ಕಳುಹಿಸಲಾಯಿತು. ತನಿಖಾಧಿಕಾರಿಗೆ ಘಟನೆಯ ಬಗ್ಗೆ ತಿಳಿದೂ ನನ್ನನ್ನು ಬಂಧಿಸಲಾಗಿತ್ತು ಹಾಗೂ ವಿಚಾರಣೆಗಳು ಮುಂದುವರಿದವು.

೨೦೧೦ ರಲ್ಲಿ ನನ್ನ ಏಕಾಂತ ಸೆರೆವಾಸದ ಅನುಭವವು ೨೦೦೧ರ ಏಕಾಂತ ಸೆರೆವಾಸದ ಅನುಭವಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿತ್ತು. ಏಕೆಂದರೆ ನಾನು ಈ ಬಾರಿ ತಾಯಿಯಾಗಿದ್ದೆ. ನನ್ನ ಮಕ್ಕಳು ತುಂಬಾ ಚಿಕ್ಕವರಾಗಿದ್ದರು. ನಾನು ಅವರಿಗೆ ಆಹಾರ ತಿನ್ನಿಸುತ್ತಿದ್ದೆ, ಮಲಗಿಸುತ್ತಿದ್ದೆ, ಅವರನ್ನು ಸಂತೈಸಿ ಸ್ನಾನ ಮಾಡಿಸಿ, ಕಥೆಗಳನ್ನು ಹೇಳಿ, ಅವರ ಜತೆ ಆಟವಾಡುತ್ತಿದ್ದೆ. ಆದರೆ ಈಗ ಇದ್ದಕ್ಕಿಂದ್ದಂತೆ ಇವೆಲ್ಲವನ್ನೂ ನನ್ನಿಂದ ಕಸಿದುಕೊಳ್ಳಲಾಗಿದೆ. ನಾನು ನಾನೇ ಎಂದು ಅನ್ನಿಸದ ರೀತಿಯಲ್ಲಿ. ಈ ಮೊದಲು ಅಲಿ ಮತ್ತು ಕಿಯಾನಾರನ್ನು ನನ್ನಿಂದ ಬೇರೆಮಾಡುವ ಪ್ರಸಂಗ ಬರಬಹುದೆಂದು ಯೋಚಿಸಿಯೂ ಇರಲಿಲ್ಲ. ನನ್ನ ಕೈ ಕಾಲುಗಳನ್ನು, ನನ್ನ ಎಲ್ಲವನ್ನೂ ಕಳೆದುಕೊಂಡಂತೆ ಅನ್ನಿಸುತಿತ್ತು.

ವಿಚಾರಣೆಯ ಪರಿಸ್ಥಿತಿಯು ಕಷ್ಟಕರವೆನಿಸಿತ್ತು. ಏಕೆಂದರೆ ತಪ್ಪೊಪ್ಪಿಗೆ, ಪಶ್ಚಾತ್ತಾಪ ಮತ್ತು ಸಹಕಾರ ಮಾತ್ರವೇ ಹೊರಬರಲು ಏಕೈಕ ಮಾರ್ಗವಾಗಿತ್ತು. ನನ್ನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆದರೆ ಈ ಬಾರಿ ನನ್ನ ಮೇಲೆ ವಾರಂಟ್ ಹೊರಡಿಸದೇ ಇದ್ದ ಕಿಯಾನ್ಮನೇಶ್ ಅವರ ಬಳಿ ಕರೆದೊಯ್ಯಲಿಲ್ಲ. ಬದಲಾಗಿ ರಾಷ್ಟ್ರೀಯ ಭದ್ರತೆಯನ್ನು ಅಡ್ಡಿಪಡಿಸುವ ಪಿತೂರಿಯ ಹೊಸ ಆರೋಪವನ್ನು ನನ್ನ ಮೇಲೆ ಹೊರಿಸಿ ನನ್ನನ್ನು ಜೈಲಿನಲ್ಲಿಟ್ಟುಕೊಳ್ಳುವಂತೆ ಕಾನೂನನ್ನು ಉಪಾಯವಾಗಿ ನನ್ನ ಮೇಲೆ ಪ್ರಯೋಗಿಸಿದ ಮೊಹೆಬ್ಬಿ ಅವರ ಬಳಿ ಕರೆದೊಯ್ದರು. ನನ್ನ ಮೇಲಿನ ಈ ಆರೋಪವನ್ನು ನನ್ನ ಬಂಧನದ ಕೆಲವೇ ದಿನಗಳಲ್ಲಿ ಹೊರಹಾಕಲಾಯಿತು. ”ಯಾವ ಆಧಾರದ ಮೇಲೆ ನನ್ನ ಮೇಲೆ ಈ ಆರೋಪ ಮಾಡಲಾಗಿದೆ” ಎಂದು ಅವರಲ್ಲಿ ಕೇಳಿದೆ.

”ಮೊದಲ ದಿನವೇ ಯಾಕೆ ಈ ಆರೋಪಗಳನ್ನು ಮಾಡಲಿಲ್ಲ. ಯಾತಕ್ಕೆ ಕಿಯಾನ್ಮನೇಶ್ ಈ ಆರೋಪಗಳನ್ನು ಮಾಡಲಿಲ್ಲ?” ಎಂದು ಕೇಳಿದ್ದಕ್ಕೆ ತನಗೆ ಕಿಯಾನ್ಮನೇಶ್ ಯಾರಂಬುದೇ ತಿಳಿದಿಲ್ಲವೆಂಬಂತೆ ನಡೆದುಕೊಂಡರು. ನನ್ನನ್ನು ಜೈಲುಕೋಣೆಗೆ ವಾಪಸ್ ಕಳುಹಿಸಲಾಯಿತು. ಕೋಣೆಯಲ್ಲಿ ಸಾಕಷ್ಟು ಬೆಳಕು ಇರಲಿಲ್ಲ. ಒಂದು ಸಣ್ಣ ದುರ್ಬಲ ಬೆಳಕೊಂದು ಇತ್ತಾದರೂ ಕಿಟಕಿಯು ತುಂಬಾ ಎತ್ತರದಲ್ಲಿ ಹಾಗೂ ಛಾವಣಿಯ ತುಸು ಕೆಳಗೆ ಇತ್ತು. ಅದರ ಹಿಂದೆ ಕಬ್ಬಿಣದ ದಪ್ಪನಾದ ಗ್ರಿಲ್ ಇದ್ದದ್ದರಿಂದ ಆಕಾಶ ಏನೇನೂ ಕಾಣಿಸುತ್ತಿರಲಿಲ್ಲ. ಕಿಟಕಿಯು ಮುಚ್ಚಿದ್ದರಿಂದ ತಾಜಾ ಗಾಳಿಯೂ ಬರುವಂತಿರಲಿಲ್ಲ. ನನ್ನ ಕೋಣೆ ಎರಡನೇ ಹಜಾರದಲ್ಲಿತ್ತು. ಸಂಖ್ಯೆ ೨೪. ಸ್ಮಶಾನ ಮೌನ. ಗಾಳಿ, ಬೆಳಕು, ಸದ್ದು, ವಾಸನೆ ಇಂತಹ ಸ್ವಾಭಾವಿಕ ಜೀವನ ಪರಿಸ್ಥಿತಿಗಳಿಂದ ಕೈದಿಗಳು ವಂಚಿತರಾಗುತ್ತಾರೆ. ಒಂದು ಡಬ್ಬದಲ್ಲಿ ಕೂಡಿಹಾಕಿರುವ ಮನುಷ್ಯನಂತೆಯೇ ಜೈಲುಕೋಣೆಯಲ್ಲಿರುವ ಕೈದಿಗಳ ಪರಿಸ್ಥಿತಿ ಎಂದು ಯಾವತ್ತೂ ನನಗನಿಸಿದ್ದು.

ಕೋಣೆಯ ಬಾಗಿಲು ಇನ್ನೊಂದು ಕಡೆಯಿಂದ ಹಾಗೂ ಕಬ್ಬಿಣದ ಕಂಡಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕಿಟಕಿಗೂ  ಹೊರಗಿನಿಂದ ಬೀಗ ಹಾಕಲಾಗಿತ್ತು. ಯಾವತ್ತೂ ಅದನ್ನು ತೆರೆಯಲೇ ಇಲ್ಲ. ಎಲ್ಲವನ್ನೂ ಮುಚ್ಚಲಾಗಿತ್ತು. ಗಾಳಿ, ಬೆಳಕು, ಧ್ವನಿ ಎಲ್ಲವೂ ಬೀಗದ ಹಿಂದೆ ಇದ್ದುವು. ಖೈದಿಗಳಿಗೆ ಆ ಬೀಗವನ್ನು ಒಡೆಯುವ ಶಕ್ತಿ ಇರಲಿಲ್ಲ. ನಾನು ನನ್ನನ್ನು ಸುತ್ತುವರಿದ ಪರಿಸರವನ್ನು ಎಷ್ಟೇ  ತರ್ಕಬದ್ಧವಾಗಿಸಿ ಭಯಗೊಳ್ಳದೇ ಇರುವ ಪ್ರಯತ್ನಗಳನ್ನು ಮಾಡಿದರೂ ಅವು ಯಾವುವೂ ಪ್ರಯೋಜನಕಾರಿಯಾಗಲಿಲ್ಲ. ನಾನು ಆತಂಕದಿಂದ ಕುಗ್ಗುತ್ತಿದ್ದೆ.

ಭೇಟಿಯಾಗಲು ಬಂದಿರುವ ವಿಚಾರಣೆಗಾರರ ಬಳಿ ಆರೋಪಿಗಳನ್ನು ಕರೆದೊಯ್ಯಲು,ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಗಂಟೆ ಬಾರಿಸುತ್ತಿದ್ದರು. ಮನೆಯೊಂದರ ಹಳೆಯ ಗಂಟೆಯಂತೆ ಆ ಗಂಟೆಯ ಸದ್ದು. ಆ ಶಬ್ದವು ನನ್ನ ಹೃದಯವನ್ನು ಹೇಗೆ ಕೊರೆದು ಹಾಕುತ್ತಿತ್ತು ಎಂದು ನೀವು ಊಹಿಸಲೂ ಸಾಧ್ಯವಿಲ್ಲ. ಮಹಿಳಾ ಜೈಲರ್ ನ ಹೆಜ್ಜೆಯ ಸಪ್ಪಳ ಪ್ರಾರಂಭ: ಟಿಕ್ ಟಾಕ್ ಟಿಕ್. ಅವಳು ನನ್ನ ಸೆಲ್ ಬಾಗಿಲ ಎದುರು ನಿಂತರೆ, ನನ್ನ ವಿಚಾರಣೆ ಎಂದು ಗಾಬರಿಯಾಗುತ್ತಿದ್ದೆ. ಅವಳು ನನ್ನ ಸೆಲ್ ಅನ್ನು ದಾಟಿ ಮುಂದೆ ಹೋದಲ್ಲಿ ನಾನು ಇನ್ನೂ ಎಷ್ಟು ದಿನವೆಂದು ಇಲ್ಲಿಯೇ ಇರುತ್ತೇನೆ ಎಂದು ಚಿಂತೆಗೀಡಾಗುತ್ತಿದ್ದೆ. ನಾನು ಜೈಲಿನಿಂದ ಬಿಡುಗಡೆಯಾದ ಮೇಲೂ ಗಂಟೆಯ ಈ ಶಬ್ಧವು ನನ್ನ ನಿದ್ದೆಯಲ್ಲೂ ಎಚ್ಚರದಲ್ಲೂ ಬಹಳವಾಗಿ ಕಾಡುತ್ತಿತ್ತು. ಆತಂಕವು ನನ್ನ ನರನಾಡಿಗಳಲ್ಲಿ ಪ್ರವಹಿಸಿ ನನ್ನ ಧೈರ್ಯವನ್ನು ಹಿಮ್ಮೆಟ್ಟಿಸುತಿತ್ತು.

ಪ್ರತಿ ದಿನವೂ ತಾಜಾ ಗಾಳಿಯ ಸೇವನೆಗಾಗಿ ಸಮಯಾವಕಾಶವಿರುತಿತ್ತು. ನನಗೆ ಕೋಟ್, ಸ್ಕಾರ್ಫ಼್, ಚಪ್ಪಲಿ ಧರಿಸಿ ಅಂಗಳದಲ್ಲಿ ನಡೆದಾಡಲು ಎರಡು ನಿಮಿಷಗಳಷ್ಟು ಕಾಲ ನೀಡುತಿದ್ದರು. ಎತ್ತರದ ಗೋಡೆಗಳು, ಕಬ್ಬಿಣದ ಸರಳುಗಳನ್ನು ಹೊಂದಿದ್ದ ಮೇಲ್ಛಾವಣಿ ಹಾಗೂ ಮರಗಿಡ ಏನೂ ಇಲ್ಲದೆಯೇ ಇದ್ದ ಅಂಗಳವು ನಿರ್ಜೀವವಾಗಿತ್ತು. ಸ್ನಾನವನ್ನು ದಿನ ಬಿಟ್ಟು ದಿನ ಮಾಡಿಕೊಳ್ಳಬೇಕಾಗಿತ್ತು. ಪ್ರತಿದಿನ ಶೌಚಕ್ಕೆ ಹೋಗಲು ಕೆಲವೇ ನಿಗದಿತ ಸಮಯ ನೀಡಲಾಗಿತ್ತು. ಅದಕ್ಕಿಂತ ಹೆಚ್ಚಿನ ಬಾರಿ ಸಿಗ್ನಲ್ ಗಳನ್ನು ಮೊಳಗಿದರೆ ಜೈಲು ಸಿಬ್ಬಂದಿ ಒರಟಾಗಿ ವರ್ತಿಸುತಿದ್ದರು. ಜೈಲಿನ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕೈದಿಗಳೊಂದಿಗೆ ಮಾತನಾಡುತ್ತಿರಲಿಲ್ಲ. ಖೈದಿಗಳು ಮಾನವ ಸಹಜವಾದ ಎಲ್ಲಾ ಅನುಭಗಳಿಂದ ವಂಚಿತರಾಗಬೇಕೆಂದು ಅವರು ಭಾವಿಸಿದಂತಿತ್ತು.
ಒಂದು ರಾತ್ರಿ ನನಗೆ ನೆನಪಿದೆ, ನನ್ನ ನಿದ್ದೆಯಲ್ಲಿ ನನ್ನ ಕೆನ್ನೆಯ ಮೇಲೆ ಕಿಯಾನಾಳ ತುಟಿಗಳು ಮುತ್ತಿಟ್ಟಂತೆ ಭಾಸವಾಯಿತು. ಯಾವಾಗಲೂ ನಾನು ಅನುಭವಿಸಿದ ಆ ಭಾವನೆ ಕನಸಲ್ಲ ನಿಜವೇ ಎನ್ನುವಷ್ಟು. ಕಿಯಾನಾ ನನ್ನ ಕೋಣೆಯಲ್ಲಿ ಇದ್ದಳು. ನನ್ನ ಕಡೆ ವಾಲುತಿದ್ದಳು. ನಾನು ಆಕೆಯನ್ನು ತಬ್ಬಿಕೊಳ್ಳಲು ಮುಂದಾದೆ. ನನ್ನ ಕಣ್ಣುಗಳು ತೆರೆದುಕೊಂಡವು. ಕಿಯಾನಾ ಅಲ್ಲಿರಲಿಲ್ಲ. ನಾನು ಆ ರಾತ್ರಿ ಬಹಳ ಅತ್ತುಬಿಟ್ಟೆ. ಆ ಕಣ್ಣೀರನ್ನು ಎಂದಿಗೂ ಮರೆಯಲಾರೆ.

ಒಂದು ದಿನ ಅವರು ನನಗೆ ಕಿತ್ತಳೆ ಹಣ್ಣನ್ನು ನೀಡಿದರು . ನಾನು ಕಿತ್ತಳೆಯ ಕೆಲವೇ ಹೋಳುಗಳನ್ನು ತಿಂದು ಉಳಿದುದನ್ನು ನಿಧಾನವಾಗಿ ತಿನ್ನಲೆಂದು ಹಾಗೆಯೇ ಇಟ್ಟುಕೊಂಡೆ. ಕಿತ್ತಳೆಯ ಸಿಪ್ಪೆಯನ್ನು ಬಿಸಾಡದೆ ಅದನ್ನು ಭೂಮಿಯಾಕಾರದಲ್ಲಿ ಕೆತ್ತಿಟ್ಟುಕೊಂಡೆ. ಕಿಯಾನಾ ಎಂದರೆ ಪ್ರಕೃತಿಯ ಸಾರ ಮತ್ತು ಆತ್ಮ ಎಂದರ್ಥ. ನನ್ನ ಪಾಲಿಗೆ ಈ ಕಿತ್ತಳೆಯು ಜೀವನದ ಸಾರವಾಗಿತ್ತು. ನಾನು ಅದರ ಆಚೀಚೆಯೇ ನಡೆದುಕೊಂಡು ಶಸ್ತ್ರಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದ ಕಿಯಾನಾಳಿಗೋಸ್ಕರ ಪ್ರಾರ್ಥಿಸುತ್ತಿದ್ದೆ. ನಾನು ನನ್ನ ವಿಚಾರಣೆಯ ಸಮಯದಲ್ಲಿ ಆಗಾಗ್ಗೆ  ಕಿಯಾನಾ ಮತ್ತು ಅಲಿಯನ್ನು ತೀವ್ರವಾಗಿ ಹಂಬಲಿಸುವದನ್ನು  ಹೇಳುತ್ತಿದ್ದೆ. ಆದರೆ ಇವ್ಯಾವುದೂ ವಿಚಾರಣಾಧಿಕಾರಿಗಳ ಮೇಲೆ ಪರಿಣಾಮ ಬೀರುತ್ತಿರಲಿಲ್ಲ.

ಒಂದು ದಿನ ನನ್ನನ್ನು ವಾರ್ಡ್ ನಿಂದ ಸುಮಾರು ಎರಡು ಮಹಡಿ ಕೆಳಗೆ ಲಿಫ಼್ಟ್ ನಲ್ಲಿ ಕರೆದೊಯ್ಯಲಾಯಿತು. ತನಿಖಾಧಿಕಾರಿಯು ” ಮಾಸ್ತರರು ಬಂದಿದ್ದಾರೆ” ಎಂದನು. ನಾನು ಕೋಣೆ ಪ್ರವೇಶಿಸಿದಾಗ ಅಲ್ಲೊಂದು ವಿಡಿಯೋ ಕ್ಯಾಮೆರಾ, ಸ್ಟಾಂಡ್ ಮತ್ತು ಪ್ರೊಜೆಕ್ಟರ್ ಗಳಿದ್ದವು. ನನಗೆ ಆಶ್ಚರ್ಯವೆನಿಸಿತು. ಅಲ್ಲಿ ಸೂಟ್ ಧರಿಸಿದ ಒಬ್ಬ ಮಧ್ಯವಯಸ್ಕನಿದ್ದ. ಜೈಲಿನ ಹೊರಗೆ ಆತನನ್ನು ನೋಡಿದ್ದರೆ ಆತ ವಿಚಾರಣಾಧಿಕಾರಿ ಅಲ್ಲವೇನೋ ಎಂದು ಭಾವಿಸುತ್ತಿದ್ದೆ. ಮುಖದಲ್ಲಿ ಅಚಲವಾದ ಭಾವನಾರಹಿತ ಕಳೆ ಹೊಂದಿದ್ದ ಆತ ನಿಜವಾಗಿಯೂ ವಿಚಾರಣೆಯಲ್ಲಿ ಮಾಸ್ಟರ್ ಆಗಿದ್ದ. ”ನಾನೊಬ್ಬ ತಾಯಿ ಹಾಗೂ ನನ್ನ ಮಕ್ಕಳು ಇನ್ನೂ ಚಿಕ್ಕವರು” ಎಂದು ಹೇಳಿದೊಡನೆಯೇ ಆತ ” ಅರೆ, ಗಾಝಾದಲ್ಲಿರುವ ತಾಯಂದಿರು ತಾಯಂದಿರಲ್ಲವೇ?” ಎಂದುಬಿಟ್ಟ. ಆತನ ಈ ಹೇಳಿಕೆಯು ಆತನ ವ್ಯಕ್ತಿತ್ವವನ್ನು ನನಗೆ ಪರಿಚಯಿಸಿತಷ್ಟೇ ಅಲ್ಲದೆ ಆತನ ಬಳಿ ಯಾವುದೇ ಸಮಸ್ಯೆಗಳನ್ನು ಚರ್ಚಿಸಲಾಗದು ಎಂದು ಅರಿವಾಯಿತು. ಬಝಾರ್ಗನ್  ಮತ್ತು ಸಹಾಬಿ ಹಾಗೂ ಇತರ ಬೌದ್ಧಿಕ ಚಳುವಳಿಗಳು ವಿಚಿತ್ರ ಮತ್ತು ಇಸ್ಲಾಂಯೇತರವಾದದ್ದು ಎಂದು ಆತ ಎಡೆಬಿಡದೆ ಮಾತನಾಡುತ್ತಿದ್ದ. ನಾನು ಕೋಣೆಯಿಂದ ಹೊರಬಂದಾಗ ನಡೆಯಲು ಅಸಾಧ್ಯವೆನಿಸಿ ನನ್ನ ಶಕ್ತಿಯೆಲ್ಲಾ ಬರಿದಾಗಿಬಿಟ್ಟಿದೆಯೆಂದೆನಿಸಿತು. ಕೈದಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲು ಕೆಲವೊಮ್ಮೆ ಕೆಲವು ವಿಚಾರಣಾಧಿಕಾರಿಗಳು ಮಾನಸಿಕ ಒತ್ತಡವನ್ನು ಹಾಕುತ್ತಾರೆ ಎಂದು ಈ ಹಿಂದೆ ಕೇಳಿದ್ದು ನೆನಪಾಯಿತು.

ಮಾನವ ಹಕ್ಕುಗಳ ರಕ್ಷಕರ ಕೇಂದ್ರ, ರಾಷ್ಟ್ರೀಯ ಶಾಂತಿ ಮಂಡಳಿ ಹಾಗೂ ಮತಗಳ ರಕ್ಷಣಾ ಸಮಿತಿಯಲ್ಲಿನ ನನ್ನ ಚಟುವಟಿಕೆಗಳಾಗಲೀ ಅಥವಾ ಅಪ್ರಾಪ್ತ ವಯಸ್ಸಿನ ಮಕ್ಕಳ ಮರಣದಂಡನೆಯ ವಿರೋಧದ ಪ್ರಚಾರವಾಗಲೀ, ಈ ಎಲ್ಲಾ ಚಟುವಟಿಕೆಗಳೂ ದೇಶದ ಭದ್ರತೆಯ ವಿರುದ್ಧ ವರ್ತಿಸಿದ ಆರೋಪಕ್ಕೆ ಕಾರಣವಾಗುವ ಸಾಧ್ಯತೆಯಿದ್ದರೂ ಇವು ಯಾವುದನ್ನೂ ವಿಚಾರಣೆಗೈಯಲಿಲ್ಲ.

”ಆಡಳಿತದ ವಿರುದ್ಧ ಅಪಪ್ರಚಾರ”ಎಂದು ನನ್ನ ಮೇಲೆ ಆರೋಪವಿದ್ದರೂ ನನ್ನ ಸಂದರ್ಶನಗಳ ಬಗ್ಗೆ ಸಣ್ಣ ಪ್ರಶ್ನೆಯೂ ಸಹ ಎತ್ತಲಿಲ್ಲ. ನನ್ನನ್ನು ಬಂಧಿಸಿದ ಮೊದಲ ದಿನದಿಂದಲೂ ನಾನು ಬಿಡುಗಡೆಯಾಗುವ ದಿನದವರೆಗೂ ಆಧಾರರಹಿತವಾದ ಊಹೆಯನ್ನು ಮುಂದಿಟ್ಟುಕೊಂಡಿದ್ದರು. ಎಬಾದಿಯವರ ಮೂಲಕ ಪಾಶ್ಚಿಮಾತ್ಯ ಗುಪ್ತಚರ ಸೇವೆಗಳು, ಮಾನವ ಹಕ್ಕುಗಳ ರಕ್ಷಕರ ಕೇಂದ್ರವನ್ನು ಸ್ಥಾಪಿಸಿವೆ ಹಾಗೂ ನಾವೆಲ್ಲರೂ ಆ ಗುಪ್ತಚರ ಸೇವೆಯ ಏಜೆಂಟರುಗಳೆಂದು ಯಾವುದೇ ಸಾಕ್ಷ್ಯಾತ್ಮಕ ಆಧಾರವಿಲ್ಲದೆ ಪ್ರತಿಪಾದಿಸುತಿದ್ದರು. ಅವರ ಮನವಿಗಳು ವಿಚಿತ್ರವಾಗಿದ್ದವು. ಯಾವುದೇ ಪ್ರಾಥಮಿಕ ಸಂಶೋಧನೆಯಿರಲಿಲ್ಲ. ಒಮ್ಮೆ  ವಿಚಾರಣಾ ಸಮಯದಲ್ಲಿ, ನಾನು ಮಾನವ ಹಕ್ಕುಗಳ ರಕ್ಷಕರ ಕೇಂದ್ರವನ್ನು (DHRC) ವಿಸರ್ಜಿಸುವುದಾಗಿ ಘೋಷಿಸಬೇಕೆಂದು  ಒತ್ತಾಯಿಸಿದರು. ನಾನು ನಿರಾಕರಿಸಿದ ಮೇಲೆ ಬೇರೆ ಪ್ರಸ್ತಾವವಿಟ್ಟರು. ಈ ಬಾರಿ DHRC ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದರು. . ”ನಾವು ಸೋಲ್ತಾನಿ, ಸೈಫ಼್ಝಾದೆ ಮತ್ತು ದಾದ್ ಕಾಹ್ ಅವರನ್ನು ಕರೆತರುತ್ತೇವೆ. ನೀವು ಅವರ ಉಪಸ್ಥಿತಿಯಲ್ಲಿ ಇನ್ನು ಮುಂದೆ ನಾನು ಕೇಂದ್ರದ ಉಪಾಧ್ಯಕ್ಷಳಾಗಿ ಮುಂದುವರೆಯುವುದಿಲ್ಲ ಎಂದರೆ ಸಾಕು” ಎಂದು ಯೋಜನೆಯನ್ನೂ ಸಿದ್ಧಮಾಡಿದ್ದರು. ನಾನು ಮತ್ತೆ ನಿರಾಕರಿಸಿದೆ.

(ಶಿರೀನ್ ಎಬಾಡಿ ಯವರೊಂದಿಗೆ ನರ್ಗೆಸ್ ಮೊಹಮ್ಮದಿ ೨೦೦೭)

ಒಮ್ಮೆ, ಎಬಾದಿ ಅವರ ಜತೆ ಸಹಕಾರವನ್ನು ನಿಲ್ಲಿಸುತ್ತೇನೆಂದು ಸಾರ್ವಜನಿಕ ಘೋಷಣೆ ಮಾಡಲು ನನಗೆ ಹೇಳಿದರು. ಈ ಹಿಂದೆಯೂ ಸುಹ್ರಾವರ್ದಿ ವಿಚಾರಣೆಯ ಸಂದರ್ಭದಲ್ಲಿ ಎಬಾದಿ ಅವರ ಜತೆ ಕೆಲಸ ಮಾಡುವುದನ್ನು ನಿಲ್ಲಿಸಬೇಕೆಂದು ವಿಚಾರಣೆಗಾರರು ನನ್ನನ್ನು ಒತ್ತಾಯಿಸುತಿದ್ದರು. ನನ್ನ ಈ ಸಹಕಾರದ ಬದಲಿಗೆ ನನಗೆ ಪ್ರತ್ಯೇಕ ಕಚೇರಿ, ವಿದೇಶ ಪ್ರವಾಸಕ್ಕೆ ಅನುಮತಿ, ವಿದೇಶಗಳ ಅತಿಥಿಗಳೊಂದಿಗೆ ಮಾನವ ಹಕ್ಕುಗಳ ಕುರಿತು ಸಭೆ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ಮತ್ತು ಇಂತಹ ಇತರ ಸೌಲಭ್ಯಗಳನ್ನು ಗುಪ್ತಚರ ಸಚಿವಾಲಯವು ಕಲ್ಪಿಸಿಕೊಡುತ್ತದೆ ಎಂದೂ ಭರವಸೆ ನೀಡಿದರು. ನಾನು ನಿರಾಕರಿಸಿದೆ.

ಅವರ ಕೊನೆಯ ಪ್ರಯತ್ನಗಳಲ್ಲಿ ಒಂದಾಗಿ, ನನ್ನಿಂದ ತೀವ್ರ ಪಶ್ಚಾತ್ತಾಪದ ತಪ್ಪೊಪ್ಪಿಗೆ ಪತ್ರವೊಂದನ್ನು ಬರೆಯಲು ಪ್ರಯತ್ನಿಸಿದರು. ಒಂದು ರಾತ್ರಿ ವಿಚಾರಣಾಧಿಕಾರಿಯು ನನ್ನನ್ನು ಕರೆಸಿ ”ನಾಳೆ ಸಿದ್ಧರಾಗಿರಿ, ನಿಮ್ಮ ಈವರೆಗಿನ ಚಟುವಟಿಕೆಗಳಿಗೆ ನಿಮ್ಮ ಪಶ್ಚಾತಾಪವನ್ನು ಮತ್ತು ಕೇಂದ್ರಕ್ಕೆ ರಾಜೀನಾಮೆ ನೀಡುವುದಾಗಿ ಸದಸ್ಯರಿಗೆ ತಿಳಿಸುವಂತೆ ಕ್ಯಾಮರಾ ಮುಂದೆ ಘೋಷಿಸಬೇಕು” ಎಂದರು. ನಾನು ಒತ್ತಡಕ್ಕೆ ಮಣಿಯದೇ ನನ್ನ ಕೋಣೆಗೆ ಹಿಂತಿರುಗಿದೆ. ಆದರೆ ನಾನು ಬೆವೆತುಹೋಗಿದ್ದೆ. ಈ ಮಾನಸಿಕ ಘರ್ಷಣೆಗಳ ಮುಖಾಮುಖಿಗಳ ಸಂದರ್ಭಗಳಲ್ಲಿ ಆದಷ್ಟು ಶಾಂತವಾಗಿರಲು ಪ್ರಯತ್ನಪಡುತ್ತಿದ್ದೆಯಾದರೂ ಅವರು ನನ್ನ ಮೇಲೆ ಹೇರುತ್ತಿರುವ ಒತ್ತಡವನ್ನು ಸಹಿಸಲು ಕಷ್ಟವಾಗುತ್ತಿತ್ತು. ಮಾನವೀಯತೆ ನೈತಿಕತೆಯೆಲ್ಲಾ ಜೈಲಿನಲ್ಲಿ ಕುಸಿದುಹೋಗಿತ್ತು. ತನಿಖಾಧಿಕಾರಿಗಳು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಯಸುವುದಿಲ್ಲ. ಬದಲಾಗಿ ಅವರಿಗೆ ಬೇಕಾಗಿರುವ ಹೊಸ ವ್ಯಕ್ತಿಯನ್ನು ನಿಮ್ಮಿಂದ ರೂಪಿಸಿಕೊಳ್ಳುತ್ತಾರೆ. ನಾನು ಒಬ್ಬ ದೇಶದ್ರೋಹಿ ಅಥವಾ ಗೂಢಾಚಾರಿಣಿಯೆಂದು ಅವರು ನಂಬಿದ್ದಾರೆಂದು ನನಗನಿಸುತ್ತಿರಲಿಲ್ಲ. ಆದರೆ, ನನ್ನಿಂದ ತಪ್ಪೊಪ್ಪಿಗೆಯ ಪತ್ರವನ್ನು ಬರೆಯಿಸಿಕೊಳ್ಳುವ ಅವರ ತಂತ್ರವು ನನ್ನನ್ನು ಯಾತನೆಗೆ ದೂಡಿದವು.

ಒಮ್ಮೆ ನನ್ನನ್ನು ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯೊಬ್ಬರು ನನ್ನ ಮನೆಯ ಬಗ್ಗೆ ಛೀಮಾರಿ ಹಾಕಲು ಪ್ರಯತ್ನಪಟ್ಟರು. ”ನೀವೊಬ್ಬರು ಇಂಜಿನಿಯರ್ ಇನ್ಸ್ಪೆಕ್ಟರ್, ನಿಮ್ಮ ಪತಿ ಒಬ್ಬ ಬರಹಗಾರ. ನಿಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಮ್ಮ ಮನೆಯ ಸ್ಥಿತಿಗತಿಯನ್ನು ನೋಡಿದೆವು. ನೀವು ಅಂತಹ ಮನೆ ಮತ್ತು ಪೀಠೋಪಕರಣಗಳಿಗೆ ಅರ್ಹರೇ? ನೀವು ಅಂತಹ ಪರಿಸ್ಥಿತಿಯಲ್ಲಿ ಏಕೆ ವಾಸಿಸುತ್ತಿದ್ದೀರಿ? ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ನನ್ನನ್ನು ಗದರಿಸಿದರು. ಅಲಿ ಮತ್ತು ಕಿಯಾನಾರ ಬಗ್ಗೆ ಮಾತನಾಡುವಾಗಲೂ ಈ ರೀತಿ ತುಚ್ಚವಾಗಿ ಖಂಡಿಸಿ ಮಾತನಾಡುತಿದ್ದರು.

ಮನುಷ್ಯ ತನ್ನ ಮಾನವ ಸಹಜ ಮೂಲಭೂತ ಅಗತ್ಯಗಳಿಂದ ವಂಚಿತ ಪರಿಸ್ಥಿತಿಗೆ ತಳ್ಳಲ್ಪಟ್ಟರೆ, ಅಸಹನೆ, ಚಡಪಡಿಕೆ, ಆತಂಕದಿಂದ ಕೂಡಿದ, ಅಡ್ಡಿಪಡಿಸಿದ ಅಸ್ತವ್ಯಸ್ತ ಜೀವನಕ್ರಮವು ರೂಢಿಯಾಗಿಬಿಡುತ್ತದೆ. ಮಕ್ಕಳನ್ನು ಬಿಟ್ಟು ಇರುವ ಬದುಕಿನ ಬಗ್ಗೆ ಗದರಿಸುತ್ತಾ ಛೀಮಾರಿ ಹಾಕುವ  ಮತ್ತು ಕೀಳರಿಮೆ ಉಂಟುಮಾಡುವ ವರ್ತನೆಯು ಮನಸ್ಸಿನ ಮೇಲೆ ಬೀರುವ ಪರಿಣಾಮ, ನಾವು ನಮ್ಮ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರವಾಗಿ ತೆರುವ  ಬೆಲೆ. 

ನಾನು ತಾಯಿಯಾದ್ದರಿಂದ ನನ್ನ ಮಕ್ಕಳು ಅಲಿ ಮತ್ತು ಕಿಯಾನಾರನ್ನು ಬಹಳವಾಗಿ ನೆನಪಿಸಿಕೊಳ್ಳುತ್ತಿದ್ದೆ. ಇದರಿಂದಾಗಿ ಅವರು ವಿಚಾರಣೆಯ ಭಾಗವಾಗಿ ಮಕ್ಕಳು ಬಗೆಗಿನ ಮಾಹಿತಿಯನ್ನು ಆಗಾಗ್ಗೆ  ನನಗೆ ರವಾನಿಸುತ್ತಿದ್ದರು. ಉದಾಹರಣೆಗೆ: ಒಂದು ದಿನ ತನಿಖಾಧಿಕಾರಿಯು ಬಂದು “ಅವರು ನಿಮ್ಮ ಮನೆಯಿಂದ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ’ ಎಂದರು. ನಾನು ಎಲ್ಲಿಗೆಂದು ಕೇಳಿದಾಗ, ಟಹರಾನ್ ನಿಂದ ನಿಮ್ಮ ಅತ್ತೆ ಮನೆಯಾದ ಕ಼ಝ್ವಿನ್ ಗೆ ಕರೆದುಕೊಂಡುಹೋಗಲಾಗಿದೆ ಎಂದರು.

ಆ ಕ್ಷಣದಲ್ಲಿ ಅಲಿ ಮತ್ತು ಕಿಯಾನ ಅವರ ಮನೆಯಲ್ಲಿಲ್ಲ, ತಮ್ಮ ಹಾಸಿಗೆಗಳ ಮೇಲೆ ಮಲಗಿಲ್ಲ, ತಮ್ಮ ಆಟಿಕೆಗಳ ಜತೆ ಅವರು ಆಡುತ್ತಿಲ್ಲ ಎಂದು ಯೋಚಿಸುತ್ತಾ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತನಿಖಾಧಿಕಾರಿಯು ನನ್ನನ್ನು ಅಲ್ಲೇ ಬಿಟ್ಟು ಹೋದರು. ನಾನು ಅಸ್ವಸ್ಥಳಾಗಿದ್ದೆ. ಅಸಹನೀಯ ತಲೆನೋವು. ಒಬ್ಬಂಟಿಯಾಗಿದ್ದೆ. ಪ್ರಾರ್ಥನಾ ಚಾಪೆಯಿಲ್ಲದೇ ಪ್ರಾರ್ಥನೆ ಮಾಡಲು ಎದ್ದುನಿಂತೆ. ನನ್ನ ಈ ಕಷ್ಟದ ಕ್ಷಣಗಳಿಗೆ ದೇವರು ಸಾಕ್ಷಿಯಾದರು.

ಅದು ನನ್ನ ಬಂಧನದ ಎಂಟನೇ ದಿನ. ಸುದೀರ್ಘ ವಿಚಾರಣೆಯ ನಂತರ ನನ್ನನ್ನು ನನ್ನ ಕೋಣೆಗೆ ಹಿಂದಕ್ಕೆ ಕಳುಹಿಸಿದರು. ನನ್ನ ಕೈ ಕಾಲುಗಳು ಜಡವಾಗಿ ನಿಶ್ಚೇಷ್ಟಿತವಾಗಿದ್ದವು. ನನ್ನ ಆರೋಗ್ಯ ಇನ್ನೂ ಹದಗೆಡುವ ಮೊದಲು ಜೈಲು ಸಿಬ್ಬಂದಿಗೆ ತಿಳಿಸುವುದು ಉತ್ತಮ ಎಂದು ಭಾವಿಸಿದೆ. ಜೈಲರ್ ಬಂದು ನನ್ನ ಅನಾರೋಗ್ಯದ ವಿವರ ತಿಳಿದುಕೊಂಡು ಆಸ್ಪತ್ರೆಗೆ ಹೋಗಹೇಳಿದರು.

೪ ನೇ ವಾರ್ಡ್ ನಲ್ಲಿ ಎರಡು ಬೆಡ್ ಗಳು, ಇಸಿಜಿ ಯಂತ್ರ ಮತ್ತು  ಇತರ ವೈದ್ಯಕೀಯ ಔಷಧಿ ವಸ್ತುಗಳು ಇರುವ ಕೊಠಡಿಯಿತ್ತು. ಒಬ್ಬ ಖೈದಿ ಅಸ್ವಸ್ಥನಾಗಿದ್ದರೆ ವೈದ್ಯರನ್ನು ನೋಡಲು ಅಲ್ಲಿಗೆ ಕರೆದುಕೊಂಡೊಯ್ಯಲಾಗುತ್ತಿತ್ತು. ನಾನು ಚಾದರ್ ಹಾಕಿಕೊಂಡು ಹೊರಟೆ. ಕೆಲವೇ ಹೆಜ್ಜೆಗಳು ನಡೆದೆನಷ್ಟೇ, ಹೇಗೆಂದು ಗೊತ್ತಿಲ್ಲ ಆದರೆ ಧೊಪ್ಪೆಂದು ನೆಲಕ್ಕೆ ಬಿದ್ದೆ. ನನಗೆ ತಲೆಭಾರವಾಗಿ ತಲೆಸುತ್ತು ಬಂದಿತು ಆದರೆ ಮೂರ್ಛೆ ಹೋಗಲಿಲ್ಲ. ನನ್ನ ಕಾಲುಗಳು ಸಂಪೂರ್ಣವಾಗಿ ದುರ್ಬಲವಾಗಿ ನಿಶ್ಚೇಷ್ಟಿತವಾದವು. ಪಾರ್ಶ್ವವಾಯು ಹೊಡೆದಂತೆ ಆಗಿತ್ತು. ನಾಲಗೆ ಹೊರಳಲಿಲ್ಲ. ಮಾತು ಬರಲಿಲ್ಲ. ನನ್ನ ಧ್ವನಿ ನನಗೇ ಅರ್ಥವಾಗುವಂತಿರಲಿಲ್ಲ. ನಾನು ಎಲ್ಲಿ ಬಿದ್ದಿದ್ದೆನೋ ಅಲ್ಲಿ ಕಿರುಚಾಟ ಕೇಳಿಸಿತು. ಖೈದಿಗಳು ಗಂಟೆಗಳ ಕಾಲ ಬಾಗಿಲ ಸಂಧಿಯಿಂದ ಕಾರಿಡಾರ್ ಅನ್ನು ಸುಮ್ಮನೆ ದಿಟ್ಟಿಸಿನೋಡುತ್ತಿರುತ್ತಾರಲ್ಲವೇ? ಬಹುಶಃ ನಾನು ಬೀಳುತ್ತಿರುವುದನ್ನು ಯಾರೋ ಬಾಗಿಲಿನ ಅಂಚಿನಿಂದ ನೋಡಿದ್ದಿರಬಹುದು. ಮೂವರು ಪುರುಷರು ಬಂದು ನೆಲದ ಮೇಲೆ ಕಂಬಳಿಯನ್ನು ಎಸೆದು, ನನ್ನ ಕೈಕಾಲುಗಳನ್ನು ಹಿಡಿದುಕೊಂಡು, ನನ್ನನ್ನು ಕಂಬಳಿಯ ಮೇಲೆ ಎತ್ತಿಹಾಕಿ, ಮೇಲಕ್ಕೆತ್ತಿ ನನ್ನನ್ನು ಮೆಡಿಕಲ್ ಕೇಂದ್ರದ ವಾರ್ಡ್ ೨೦೯ ಕೆ ಕರೆದೊಯ್ದರು. ಇಸಿಜಿ ತೆಗೆದುಕೊಂಡ ನಂತರ ನನಗೆ ಕೆಲವು ಚುಚ್ಚುಮದ್ದುಗಳನ್ನು ನೀಡಿದರು.

ಆ ರಾತ್ರಿಯಿಂದ, ಈ ರೀತಿಯ ಘಟನೆಗಳು ಸಂಭವಿಸಿದಾಗೆಲ್ಲಾ ನನಗೆ ಚುಚ್ಚುಮದ್ದುಗಳನ್ನು ನೀಡಲಾಗುತಿತ್ತು. ನನ್ನ ಸ್ಥಿತಿಯು ದಿನೇ ದಿನೇ ಹದಗೆಡುತಿತ್ತು. ನನಗೆ ಪ್ರತಿರಾತ್ರಿ ನೀಡಲು ವೈದ್ಯರು ಮಾತ್ರೆಗಳನ್ನು ನೀಡಿದ್ದರು. ಕಾವಲುಗಾರರು ನನಗೆ ಗ್ಲಾಸ್ ನೀರಿನ ಜತೆ ಮಾತ್ರೆಗಳನ್ನು ಕೊಡುತಿದ್ದರು. ಒಮ್ಮೆ ವಿಚಾರಣೆಗೆಂದು ಮೆಟ್ಟಲು ಇಳಿಯುತ್ತಿದ್ದಾಗ ಕೊನೆಯ ಮೆಟ್ಟಲ ಬಳಿ ಬಿದ್ದು ಮೂರ್ಛೆ ಹೋದೆ. ತನಿಖಾಧಿಕಾರಿಯು ನನ್ನ ಹಿಂದೆ ಇದ್ದುದ್ದರಿಂದ, ನಿಯಮದಂತೆ, ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ನಾನು ಮೇಲೇಳಲು, ನನ್ನ ಕಾಲುಗಳನ್ನು ಮೇಲಕ್ಕೆತ್ತಲು ಪ್ರಯತ್ನಪಡುತಿದ್ದೆ. ನನ್ನ ದೇಹವಾಗಲೀ, ಕಾಲುಗಳಲ್ಲಾಗಲೀ ಮೂಳೆಗಳೇ ಇಲ್ಲದಂತೆ ಭಾಸವಾಗುತಿತ್ತು. ನಾನು ಸಾವಿಗೆ ಹೆದರುತ್ತಿರಲಿಲ್ಲವಾದರೂ ನನಗೆ ಸಂಭವಿಸುತ್ತಿರುವ ವಿವರಿಸಲಾಗದ ವಿಷಯಗಳ ಬಗ್ಗೆ ಭಯಗೊಳ್ಳುತ್ತಿದ್ದೆ. ಹಲವು ಪುರುಷರು ಬಂದು ಮತ್ತೆ ಕಂಬಳಿ ಹರಡಿ, ನನ್ನನ್ನು ಅದರ ಮೇಲೆ ಇರಿಸಿ, ವೈದ್ಯಕೀಯ ಕೇಂದ್ರದ ಮೆಟ್ಟಲುಗಳ ಮೇಲೆ ನನ್ನನ್ನು ಹತ್ತಿಸಿದರು.

ವೈದ್ಯರು ನನಗೆ ಚುಚ್ಚುಮದ್ದುಗಳನ್ನು ನೀಡಬೇಕೆಂದು ಹೇಳಿದ್ದರು, ಆದರೆ ನಾನು ಪ್ರತಿಭಟಿಸಿದೆ. ನಾನು ಎದ್ದೇಳಲು ಬಯಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ನಾನು ಏಳಲು ಪ್ರಯತ್ನಿಸುತ್ತಿರುವಾಗ ಹಾಸಿಗೆಯಿಂದ ಬಿದ್ದು ಬಿಟ್ಟೆ, ಮಂಚದ ಕಾಲುಗಳನ್ನು ಹಿಡಿದು ಮೇಲೇಳಲು ನೋಡಿದೆ. ಇದ್ದಕ್ಕಿದ್ದಂತೆ ವೈದ್ಯರು ನನ್ನ ಮಣಿಕಟ್ಟನ್ನು ಬಲವಾಗಿ ಹಿಡಿದುಕೊಂಡು ನನ್ನನ್ನು ಬಲವಂತವಾಗಿ ಕೂರಿಸಲು ನೋಡಿದರು. ಆ ಭರದಲ್ಲಿ ನನ್ನ ಮಣಿಕಟ್ಟು ನೆಲಕ್ಕೆ ಬಡಿಯಿತು. ನಾನು ಜೋರಾಗಿ ಕಿರುಚಿದೆ. ” ಸರಪಳಿ ತನ್ನಿ, ಮಂಚದ ಕಾಲುಗಳಿಗೆ ಆಕೆಯನ್ನು ಕಟ್ಟಿಹಾಕಿ” ಎಂದು ವೈದ್ಯರು ಹೇಳಿದರು. ನನಗೆ ಸೆರಂ ಅನ್ನು ಚುಚ್ಚಲು ನರ್ಸ್ ಗೆ ಹೇಳಿದರು. ನಾನು ಚಲನೆಯಿಲ್ಲದೆ ನೆಲದ ಮೇಲೆ ಬಿದ್ದುಕೊಂಡಿದ್ದೆ. ಅವರ ಶಕ್ತಿಯ ವಿರುದ್ಧ ಹೋರಾಡಲು ನನ್ನಿಂದ ಸಾಧ್ಯವಿರಲಿಲ್ಲ. ನಾನು ಕಿರುಚಾಡುತ್ತಿರುವಾಗ ಬಾಗಿಲನ್ನು ಮುಚ್ಚಿದ್ದರು. ಏಕೆಂದರೆ, ಪುರುಷರ ವಾರ್ಡ್ ವೈದ್ಯಕೀಯ ಕೊಠಡಿಯ ಹೊರಗಿತ್ತು.

ಒಂದು ದಿನ ನಾನು ಶೌಚಾಲಯದಿಂದ ಹೊರಬಂದು ಜೈಲುಕೋಣೆಯ ಕಡೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಬಿದ್ದುಬಿಟ್ಟೆ. ಅದೇ ದಯಾಹೀನ ವೈದ್ಯರು ಜೈಲು ಸಿಬ್ಬಂದಿಗೆ ಸಿರಿಂಜ್ ನೀಡಿ ನನಗೆ ಚುಚ್ಚಲು ಹೇಳಿದರು. ಆದರೆ ಸಿಬ್ಬಂದಿಯು ಆ ಜವಾಬ್ದಾರಿಯನ್ನು ತನ್ನಿಂದ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನರ್ಸ್ ಗೆ ಹೇಳು ಎಂದಾಗ, ನರ್ಸ್ ಬಂದು ಚುಚ್ಚುಮದ್ದು ನೀಡಿದಳು. ವೈದ್ಯರು, ನರ್ಸ್, ಜೈಲು ಸಿಬ್ಬಂದಿಗಳು ಒಬ್ಬರಿಗೊಬ್ಬರು ವಿಶ್ವಾಸಾರ್ಹರಲ್ಲದ ಜಾಗದಲ್ಲಿ ಅವರು ನೀಡುವ ಔಷಧಗಳ ಮೇಲೆ ನನಗೆ ಹೇಗೆ ನಂಬಿಕೆ ಬರಬಹುದು? ಅವರಿಬ್ಬರೂ ನನ್ನ ಹಿಂದೆಯೇ ನಿಂತುಕೊಂಡಿದ್ದರು. ರೋಗಿಗಳ ಜೀವರಕ್ಷಣೆಯ ಪ್ರತಿಜ್ಞೆ ಮಾಡಿದ್ದ ವೈದ್ಯರು, ”ಮೊಹಮ್ಮದಿಯವರೇ, ಸಾಯಿರಿ! ಆದರೆ ಜೈಲಿನಿಂದ ಹೊರಗೆ ಹೋಗಿ ಸಾಯಿರಿ. ನರಕಕ್ಕಾದರೂ ಹೋಗಿ, ಆದರೆ ಆ ಮಹಿಳೆ ಜಹ್ರಾ ಕಝೇಮಿಯಂತೆ, ಆಡಳಿತವು ನಿಮ್ಮ ಸಾವಿಗೆ ಬೆಲೆ ತೆರುವಂತೆ ಮಾಡಬೇಡಿ” ಎಂದು ನನ್ನ ಕುರಿತು ಜೋರಾಗಿ ಮಾತನಾಡಲು ಪ್ರಾರಂಭಿಸಿದರು. 

ನೆಲದ ಮೇಲೆ ಮಲಗಿರುವಾಗ ನಾನು ಮೂಕವಿಸ್ಮಿತಳಾಗಿ ಆ ವೈದ್ಯನನ್ನೇ ದಿಟ್ಟಿಸಿನೋಡುತ್ತಿದ್ದೆ. ಆತ ನಿಜವಾಗಿಯೂ ವೈದ್ಯನೇ ಎಂದು ನನಗೆ ಅನುಮಾನವಾಗುತಿತ್ತು. ಅಲ್ಲಿ ನನ್ನ ಮೇಲೆ ಜರುಗಿದ, ನನ್ನ ಅನುಭವಕ್ಕೆ ಬಂದ ಎಲ್ಲ ಸಂಗತಿಗಳನ್ನು ಇನ್ನೂ ಪ್ರಶ್ನಿಸುತ್ತಲೇ ಇದ್ದೇನೆ. ನನಗೆ ಪಲ್ಮನರಿ ಎಂಬಾಲಿಸಮ್ ಇದೆಯೆಂದು ಮತ್ತು ನನ್ನ ರಕ್ತಪರೀಕ್ಷೆಗಳ ಬಗ್ಗೆ ನನ್ನ ವೈದ್ಯ ಹಸನ್ ಗೊಗೊಲ್ (ನನ್ನ ಗೈನಕೋಲೊಜಿಸ್ಟ್) ಅವರ ಪತ್ರಗಳ ಮೂಲಕವೂ, ಎವಿನ್ ಜೈಲಿನ ವೈದ್ಯಕೀಯ ಕೆಂದ್ರ ಮತ್ತು ನನ್ನ ವಿಚಾರಣಾಗಾರರಿಗೆ ಮೊದಲೇ ತಿಳಿದಿತ್ತು. ಹೆರಿಗೆಯ ಸಂದರ್ಭದಲ್ಲಿ ನಾನು ಅದೃಷ್ಟವಶಾತ್ ಬದುಕುಳಿದಿದ್ದೆ. ನನ್ನ ಸ್ಥಿತಿಯ ಕಾರಣದಿಂದ ಅಲಿ ಮತ್ತು ಕಿಯಾನ ಎಂಟು ತಿಂಗಳು ತುಂಬುವ ಮೊದಲೇ ಅವಧಿಪೂರ್ವವಾಗಿ ಜನಿಸಿದ್ದರು. ಹೆರಿಗೆಯ ಬಳಿಕ ನನ್ನ ಶ್ವಾಸಕೋಶವೂ ಹಾನಿಗೊಳಗಾಗಿದೆಯೆಂದು  ನ್ಯೂಕ್ಲಿಯರ್ ರೇಡಿಯೋಗ್ರಫ಼ಿಯಿಂದ ಗೊತ್ತಾಗಿತ್ತು. ನಾನು ಎರಡು ವರ್ಷಗಳ ಕಾಲ ಹೆಫಾರಿನ್ ಮತ್ತು ವಾರ್ಫಾರಿನ್ ಮಾತ್ರೆಗಳ ಚಿಕಿತ್ಸೆಯನ್ನು ತೆಗೆದುಕೊಂಡಿದ್ದೆ. ನಾನು, ಮುಚ್ಚಿದ, ಕಡಿಮೆ ಗಾಳಿಯಾಡುವ ಪರಿಸರದಲ್ಲಿ, ಕುಳಿತೇ ಇರುವ ಜಾಗಗಳಿಗೆ ಸೀಮಿತವಾಗಿರಬಾರದು ಎಂದು ನನ್ನ ವೈದ್ಯರು ಸಲಹೆ ನೀಡಿದ್ದರು. ಆದರೆ ಅದನ್ನು ಅವರು ಪರಿಗಣಿಸಲಿಲ್ಲ. ಜೈಲುಕೋಣೆಯಲ್ಲಿ ಬಂಧಿತಳಾದ ನಂತರ ನಾನು ತೀವ್ರವಾದ ಉಸಿರಾಟದ ತೊಂದರೆ ಮತ್ತು ಎದೆನೋವನ್ನು ಅನುಭವಿಸಿದೆ.

ಉಸಿರಾಟದ ತೊಂದರೆಯಿಂದಾಗಿ ಸ್ವಲ್ಪ ಗಾಳಿಯನ್ನು ಒಳತೆಗೆದುಕೊಳ್ಳಲು ಮೂಗು ಮತ್ತು ಬಾಯಿಯನ್ನು ಬಾಗಿಲ ಸಂಧಿಯಲ್ಲಿಟ್ಟುಕೊಳ್ಳುತ್ತಿದ್ದೆ. ಜೈಲುಕೋಣೆಯೊಳಗೆ ಸರಾಗವಾಗಿ ಉಸಿರಾಡುವುದು ಅಸಾಧ್ಯವಾಗಿತ್ತು. ಒಂದು ದಿನ ಉಸಿರಾಡಲು ಆಗದೆ ನೆಲದ ಮೇಲೆ ಮಲಗಿದ್ದೆ. ಗಾರ್ಡ್ ಬಂದು ಶೌಚಾಲಯದ ಹಿಂದೆ ಗಾಜಿನ ಚಾವಣಿಯಿದ್ದ ಸಣ್ಣ ಅಂಗಳಕ್ಕೆ ಹೋಗಲು ನನಗೆ ಸಹಾಯ ಮಾಡಿದರು. ವೈದ್ಯರನ್ನು ಭೇಟಿ ಮಾಡಬೇಕೆಂದು ನಾನು ಪದೇ ಪದೇ ಕೇಳುತ್ತಿದ್ದೆ. ಆದರೆ ನನ್ನ ಮನವಿಯನ್ನು ತಳ್ಳಿ ಹಾಕಲಾಗುತಿತ್ತು. ವೈದ್ಯರಿಲ್ಲ ಎಂದಲ್ಲ. ವೈದ್ಯರಿದ್ದರು. ಆದರೆ ಅವರ ನಡವಳಿಕೆಯು ಇತರ ಹಿಂಸಾತ್ಮಕ  ವಿಚಾರಣೆಗಾರರಿಗಿಂತ  ಭಿನ್ನವೇನೂ ಆಗಿರಲಿಲ್ಲ. ನನ್ನ ತೀವ್ರ ಅನಾರೋಗ್ಯದ ಕಾರಣ ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮೊದಲ ಪರೀಕ್ಷೆಯನ್ನು ಅನುಸರಿಸಿ ವೈದ್ಯರು ನನಗೆ ಹೆಫಾರಿನ್ ಮತ್ತು ವಾರ್ಫರಿನ್ ಚುಚ್ಚುಮದ್ದುಗಳನ್ನು ನೀಡಲು ನಿರ್ಧರಿಸಿದರು. (ಹೆರಿಗೆಯ ಸಂದರ್ಭದಂತೆ) . ಸ್ವಲ್ಪ ಸಮಯದವರೆಗೆ ವಾರ್ಫರಿನ್ ಮಾತ್ರೆಗಳನ್ನು ತೆಗೆದುಕೊಂಡೆ. ಇದರಿಂದಾಗಿ ಬಿಡುಗಡೆಯ ನಂತರ ನನಗೆ ಮಾತನಾಡಲು ಕಷ್ಟವಾಗುತಿತ್ತು. ನನ ಇಚ್ಛೆಗೆ ವಿರುದ್ಧವಾಗಿ ನನ್ನ ಧ್ವನಿಯು ಕಡಿದುಕೊಳ್ಳುತಿತ್ತು. ಕೆಲ ಹೊತ್ತು ಬಿಟ್ಟು ಮತ್ತೆ ದನಿ ಹೊರಡುತಿತ್ತು. ಅಥವಾ ಮಾತನಾಡುವಾಗ ಬಹಳ ಕೆಮ್ಮು ಬರುವಂತಾಗಿ ಮಾತು ನಿಲ್ಲಿಸಬೇಕಾಗುತಿತ್ತು. ನನ್ನ ಕುಟುಂಬದವರು ತೀವ್ರವಾಗಿ ಚಿಂತಿತರಾಗಿದ್ದರು.

ನಾನು ವಾರ್ಡ್ ೨ ರಲ್ಲಿದ್ದಾಗ, ಸಾರಾ ಶೋರ್ಡ್ ಮತ್ತು ಇನ್ನಿಬ್ಬರು ಅಮೇರಿಕನ್ ಯುವಕರನ್ನು ಅದೇ ವಾರ್ಡ್ ನಲ್ಲಿ ಇಡಲಾಗಿತ್ತು. ನಾನು ಕೆಲವೊಮ್ಮೆ ಅವಳ ಧ್ವನಿಯನ್ನು ಕೇಳುತಿದ್ದೆ. ಒಮ್ಮೆ ಆಕೆ ಅಳುವುದೂ ಕೇಳಿಬಂತು. ಒಮ್ಮೆ ಆ ಇಬ್ಬರು ಯುವಕರನ್ನು ತಾಜಾ ಗಾಳಿಗಾಗಿ ಹಝಾರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಅವರು ಸಾರಾಳನ್ನು ಕೂಗಿ ಕರೆದರು. ಸಾರಾ ಉತ್ತರಿಸಿದಳು. ಆಕೆಯ ಭಾವೀ ಪತಿ ಬಾಗಿಲ ಬಳಿಯೇ ನಿಂತುಬಿಟ್ಟದ್ದಕ್ಕಾಗಿ ಆತನನ್ನು ಜೈಲು ಸಿಬ್ಬಂದಿಯು ಗದರಿಸಿ ಕಳುಹಿಸಿದನು. ಅವನು ಜೋರಾಗಿ ತಾನು ಸಾರಾಳನ್ನು ಪ್ರೀತಿಸುತ್ತೇನೆಂದು  ಅವಳಿಗೆ ಕೂಗಿ ಹೇಳಿದನು. ಸಾರಾಳ ಧ್ವನಿಯನ್ನು ಕೇಳಿದಾಗ ನನಗೆ ವಿಷಾದವೆನಿಸಿತು.

ನಾನು ಕಾರ್ಪೆಟ್ ನ ಕೆಳಗೆ, ಕಾರ್ಪೆಟ್ ನ ಮೇಲೆ, ಕೋಣೆಯ ಮೂಲೆಮೂಲೆಗಳಲ್ಲಿ, ಗೋಡೆಗಳ ಮೇಲೆ ಹುಡುಕುತ್ತಾ ಇರುತಿದ್ದೆ. ಬೇರೆ ಏನನ್ನು ಮಾಡಬೇಕಿತ್ತು ನಾನು? ಹಾಗೆ ನೋಡುತ್ತಿರುವಾಗ ಕೆಲವು ಬರಹಗಳು ಕಾಣಿಸಿದವು; ಷಿವಾ ನಝರ್ ಅಹಾರಿಯು  ತನ್ನ ಹುಟ್ಟುಹಬ್ಬದ ದಿನ ಸ್ವತಃ ತನಗೇ ಸಲ್ಲಿಸಿಕೊಂಡ  ಅಭಿನಂದನೆಗಳು, ಬದ್ರಲ್ಸಾದತ್ ಮೊಫಿದಿ ಲೇಖನವೊಂದನ್ನು ಬರೆದು ಕೆಳಗೆ ತನ್ನ ಸಹಿ ಹಾಕಿದ್ದಳು. ಬದ್ರಲ್ಸಾದತ್ ನೇಲ್ ಕ್ಲಿಪ್ಪರ್ ಬಳಸಿ ಗೋಡೆಯಲ್ಲಿ ಬರೆದಿರುವುದಾಗಿ ನಂತರ ತಿಳಿಸಿದಳು.

ದಿನಗಳು ಕಳೆದವು. ಅಲಿ ಮತ್ತು ಕಿಯಾನರನ್ನು ನೋಡಲಿಲ್ಲ, ಅವರ ದನಿಯನ್ನು ಕೇಳಲಿಲ್ಲ. ಸಾಯುವ ಮನಸ್ಸಾಗುತಿತ್ತು. ಕೆಲವೊಮ್ಮೆ ಅನ್ನಿಸುತಿತ್ತು. ಆರೋಗ್ಯಕರ ಸುರಕ್ಷಿತ ವಾತಾವರಣದಲ್ಲಿ ಇರುವುದು, ಉಸಿರಾಡುವುದು ಎಷ್ಟು ಅಗತ್ಯ ಎಂದು. ಸೂರ್ಯನನ್ನು ನೋಡುವುದು, ಆಕಾಶವನ್ನು ದಿಟ್ಟಿಸುವುದು, ಬೆಕ್ಕನ್ನು ನೋಡುವುದು, ಮರದಿಂದ ಬೀಳುವ ಎಲೆಯನ್ನು ನೋಡುವುದು, ಒಳ್ಳೆಯ ಸುವಾಸನೆಯನ್ನು ಆಘ್ರಾಣಿಸುವುದು, ಅಹಿತಕರವೇ ಇರಲಿ ಶಬ್ದವನ್ನು ಗ್ರಹಿಸುವುದು, ಗೆಳೆಯರೊಂದಿಗೆ ಮಾತನಾಡುವುದು ಹೀಗೆ ಪ್ರಾಪಂಚಿಕ ವಿಷಯಗಳನ್ನು ಸಹಜವಾಗಿ ಅನುಭವಿಸುವುದು, ಇವೆಲ್ಲಾ ಜೀವಂತಿಕೆಯ ಲಕ್ಷಣಗಳು. ಸೂರ್ಯನ ಬೆಳಕನ್ನು ನೋಡದೆಯೇ, ಚರ್ಮದ ಮೇಲೆ ಗಾಳಿ ಸೋಕದೆಯೇ, ಕಿವಿಯ ಮೇಲೆ ಸದಾ ಮೌನವೇ ಆವರಿಸಿಕೊಂಡಿದ್ದರೆ, ಬದುಕುವ ಹೋರಾಡುವ ಸಣ್ಣ ಆಸೆಯೂ ಛಿದ್ರಗೊಳ್ಳಬಲ್ಲುದು. ಇಂತಹ ಮಾನವ ಸಹಜ ಅನುಭವಗಳಿಂದ ವಂಚಿತರಾದರೆ, ಆದರ್ಶವಾದಿ ಹೋರಾಟಗಾರರಲ್ಲೂ ಸಹ ಒಂದು ಹಂತದಲ್ಲಿ ಉದಾಸೀನತೆ, ಅನುಮಾನ ಹುಟ್ಟಿಕೊಳ್ಳಬಹುದು. ಜೈಲುಕೋಣೆಯ ಬಂಧನ ಮತ್ತು ವಿಚಾರಣಾ ಕಾರ್ಯವೈಖರಿಯು ಮಾನಸಿಕ ಒತ್ತಡವನ್ನು ಹೇರಿ, ಮನಸ್ಸಿನ ಒಂದು ಭಾಗವನ್ನು ಒಡೆದುಹಾಕಿ, ನಿಮ್ಮ ವ್ಯಕ್ತಿತ್ವದ ಎಲ್ಲಾ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳು.

ಈ ಸಮಯದಲ್ಲಿ ಕೆಲ ದಿನಗಳು ನಾನು ಜೈನಾಬ್ ಜಲಾಲಿಯನ್ ಎಂಬ ೧೬ ವರುಷದ ಖುರ್ದಿಷ್ ಹುಡುಗಿಯೊಂದಿಗೆ ಜೈಲುಕೋಣೆಯಲ್ಲಿದ್ದೆ. ^೧೬ ಒಂದು ದಿನ ಆಕೆಯ ತಲೆಯ ಮೇಲಿನ ಗಾಯವನ್ನು ಗಮನಿಸಿ ಏನಾದರೂ ಪೆಟ್ಟಾಗಿದೆಯೇ ಎಂದು ಕೇಳಿದೆ. ಆಕೆ ತಾನು ಖುರ್ದಿಸ್ತಾನದ ಸೆರೆಮನೆಯಲ್ಲಿ, ಆರು ತಿಂಗಳುಗಳ ಕಾಲ ಬಂಧಿಯಾಗಿದ್ದೆನೆಂದಳು. ಅಲ್ಲಿನ ಜೈಲಿನ ವಿಚಾರಣಾಧಿಕಾರಿಯು ಆಕೆಯ ತಲೆಗೆ ಕಬ್ಬಿಣದ ಪೈಪ್ ನಿಂದ ಹೊಡೆದದ್ದರಿಂದ ಆಕೆಯ ತಲೆಬುರುಡೆಗೆ ಆಳವಾದ ಗಾಯವಾಗಿದೆಯೆಂದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮತ್ತೆ ಜೈಲಿಗೆ ತಂದುಬಿಟ್ಟಿದ್ದರು. ಆಕೆಯ ಕೋಣೆಯಲ್ಲಿ ಕಿಟಕಿಯಿರದೆ, ಬೆಳಕು ಆಡದೆ ಸಂಪೂರ್ಣ ಕತ್ತಲಿಂದ ಕೂಡಿತ್ತು. ಒಮ್ಮೆ ಹಲ್ಲುಜ್ಜುತ್ತಾ ಮಲಗಲು ತಯಾರಿ ನಡೆಸುವ ವೇಳೆ ಜೈಲು ಸಿಬ್ಬಂದಿಯು ಆಕೆಯನ್ನು ಅಂಗಳಕ್ಕೆ ಕರೆದೊಯ್ದರು. ಆಕೆ ಹೊರಗೆ ಸೂರ್ಯನ ಬೆಳಕಿದ್ದರೂ ಮಧ್ಯರಾತ್ರಿಯೆಂದು ಭಾವಿಸಿದ್ದಳು.
ಅವಳ ಜತೆಗಿನ ಎರಡು ಮೂರು ದಿನಗಳ ಒಡನಾಟ ನನಗೆ ವರದಾನವಾಗಿತ್ತು. ಆಕೆಯನ್ನು ಖುರ್ದಿಸ್ಥಾನದಿಂದ ವಾರ್ಡ್ ೨೦೯ ಕ್ಕೆ ಕರೆದೊಯ್ಯಲಾಗಿತ್ತು. ಸಂದರ್ಶನ ನೀಡಿ, ತಾನು ಸಶಕ್ತ ಕಾರ್ಯಾಚರಣೆಯಲ್ಲಿ ಸಕ್ರಿಯಳು ಎನ್ನುವುದನ್ನು ಒಪ್ಪಿಕೊಳ್ಳಬೇಕೆಂದು ಆಕೆಯನ್ನು ಪದೇ ಪದೇ ಪೀಡಿಸುತಿದ್ದರು. ಆಕೆ ಸಂದರ್ಶನ ನೀಡಲು ನಿರಾಕರಿಸುತಿದ್ದಳು. ಝೈನಾಬ್ ೨೦೯ನೇ ವಾರ್ಡ್ ನಲ್ಲಿದ್ದಾಗ ಖೈದಿಗಳ ಬಗ್ಗೆ ಹಲವು ಆಸಕ್ತಿಕರ ಕಥೆಗಳನ್ನು ಹೇಳುತಿದ್ದಳು. ನನಗೆ ಇರಾನ್ ನ ಇತರ ಸೆರೆಮನೆಗಳ ಬಗ್ಗೆ ಉತ್ತಮ ಕಲ್ಪನೆಯನ್ನು ಆ ಕಥೆಗಳು ನೀಡಿದವು. ಜೈಲಿನಲ್ಲಿ ತೀವ್ರ ಒತ್ತಡದ ಹೊರತಾಗಿಯೂ ಹಸಿರು ಚಳವಳಿಯ ನಾಯಕರ ವಿರುದ್ಧ ಪತ್ರ ಬರೆಯಲು ನಿರಾಕರಿಸಿದ ಒಬ್ಬ ಮಹಿಳೆಯು ಬಗ್ಗೆ ಅವಳು ತಿಳಿಸಿದ್ದಳು.

ಝೈನಾಬ್ ಹಾಗೂ ಆಕೆಯ ಪ್ರತಿರೋಧದ ಚೈತನ್ಯವನ್ನು ಕಂಡು ಆಕೆಯ ಶಕ್ತಿ, ಮಾನವತಾವಾದಿ ನಂಬಿಕೆಗಳ ಮೇಲೆ ಭರವಸೆ ಕಂಡುಬಂತು. ನನ್ನ ಏಕಾಂತಬಂಧನದ ಮೂರು ಅವಧಿಗಳಲ್ಲಿಯೂ, ಬಾಹ್ಯ ಒತ್ತಡಗಳ ಹೊರತಾಗಿಯೂ, ದೃಢನಿಶ್ಚಯದಿಂದ ಕೂಡಿದ, ತಮ್ಮ ಮಾನಸಿಕ ದೈಹಿಕಶಕ್ತಿಯ ಮೇಲೆ ಅಪಾರ ನಂಬಿಕೆಯುಳ್ಳ ಮಹಾನ್ ಪುರುಷರು ಹಾಗೂ ಮಹಿಳೆಯರನ್ನು ಕಂಡಿದ್ದೇನೆ.

ನಾನು ಜಾಮಿನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ, ತಕ್ಷಣವೇ ನನ್ನನ್ನು ಆಸ್ಪತೆಗೆ ಸೇರಿಸಲಾಯಿತು. ನನ್ನನ್ನು ಡಿಸ್ಟಾರ್ಜ್ ಗೊಳಿಸಿದ ನಂತರ ಭದ್ರತಾಏಜೆಂಟರುಗಳು ನನ್ನ ವೈದ್ಯಕೀಯ ದಾಖಲೆಗಳನ್ನು ವಶಪಡಿಸಿಕೊಂಡರು. ನಾನು ಕಾರಣ ಕೇಳಿದಾಗ, ಗುಪ್ತಚರ ಸಚಿವಾಲಯದ ಬಳಿ ನಿಮ್ಮ ವೈದ್ಯರುಗಳಿಗಿಂತ ಹೆಚ್ಚು ಅನುಭವ ಹೊಂದಿರುವ ವೈದ್ಯರುಗಳಿದ್ದಾರೆಂದು ಉತ್ತರಿಸಿದರು. ಆ ಉತ್ತರ ನನಗೆ ವಿಶೇಷ ಅರ್ಥವನ್ನು ನೀಡಿತ್ತು. ನನ್ನ ಮುಖ್ಯ ತನಿಖಾಧಿಕಾರಿಗೆ ನನ್ನ ಮನಸ್ಥಿತಿಯ ಬಗ್ಗೆ, ಆಸಕ್ತಿಗಳ ಬಗ್ಗೆ, ನನ್ನನ್ನು ಕಾಡುವ ವಿಷಯಗಳ ಬಗ್ಗೆ, ಎಲ್ಲವೂ ತಿಳಿದಿತ್ತು. ಏನಾದರೂ ಬಾಯಿಯಲ್ಲಿ ಅಗಿಯುವ ನನ್ನ ಅಭ್ಯಾಸ, ನನ್ನ ಬರೆಯುವ ವಿಧಾನ, ಇರಾನಿನ ಇಂಜಿನಿಯರಿಂಗ್ ವಿಭಾಗದ ನನ್ನ ಸ್ನೇಹಿತರೊಂದಿಗಿನ ನನ್ನ ಸಂಬಂಧ, ಅಷ್ಟೇಕೆ, ನನ್ನ ಗಂಡನ ಜತೆಗಿನ ನನ್ನ ದಾಂಪತ್ಯದ ಕುರಿತೂ ಎಲ್ಲ ಮಾಹಿತಿಗಳು ಆವರಿಗಿತ್ತು. ನನ್ನ ಬುದ್ಧಿ ಮತ್ತು ಮನಸ್ಸಿನ ಪರಿಚಯ ಅವರಿಗಿದ್ದದ್ದು ಹೇಗೆ? ನನ್ನ ದೇಹ ಮನಸ್ಸಿನ ದೌರ್ಬಲ್ಯಗಳನ್ನು ಹಿಡಿತದಲ್ಲಿರಿಸಿ ನನ್ನ ರೋಗ, ಔಷಧಿ, ಚಿಕಿತ್ಸೆಯ ಮೇಲೆ ಪರಿಣಾಮ ಬೀರುವುದು ಅವರ ಉದ್ದೇಶವಾಗಿದ್ದಿತು. ಅವರೇ ಅಂದಂತೆ, ನನ್ನೊಂದಿಗೆ ಅವರ ಕೆಲಸ ಇನ್ನೂ ಮುಗಿದಿಲ್ಲವೆಂದಾಯಿತು!

ಮೂರನೇ ಸೆರೆವಾಸದ  ಅನುಭವ, ಮೇ ೨೦೧೨

ತಘಿ ಇರಾನ್ ತೊರೆದು ಎರಡು ತಿಂಗಳಾಗಿತ್ತು. ಟೆಹರಾನ್ ನಲ್ಲಿರುವ ನನ್ನ ಮನೆಯನ್ನು ಬಿಟ್ಟು ಜಂಜಾನ್ ನಲ್ಲಿರುವ ನನ್ನ ತಾಯಿ ಮನೆಗೆ ಹೋಗುವಂತೆ ಗುಪ್ತಚರ ಸಚಿವಾಲಯವು ನನ್ನ ಮೇಲೆ ಬಹಳವಾದ ಒತ್ತಾಯ ಹೇರುತಿತ್ತು. ಅಲಿ ಮತ್ತು ಕಿಯಾನಾ ಐದೂವರೆ  ವರ್ಷದವರಾಗಿದ್ದರು. ಒಂದು ಮುಂಜಾನೆ ಸಾಮಾನ್ಯ ಉಡುಗೆಯಲ್ಲಿದ್ದ ಕೆಲವರು ನನ್ನ ಹೆತ್ತವರ ಮನೆಗೆ ಬಂದು ನನ್ನನ್ನು ಬಂಧನದ ವಾರಂಟ್ ಇಲ್ಲದೇ ಕರೆದುಕೊಂಡು ಹೋದರು. ಅದಕ್ಕೂ ಸರಿಯಾಗಿ ಅರ್ಧ ಗಂಟೆ ಮೊದಲು ನನ್ನ ವಿಚಾರಣಾಧಿಕಾರಿ ಟೆಹರಾನ್ ನಿಂದ ನನಗೆ ದೂರವಾಣಿ ಕರೆ ಮಾಡಿ ಗುಪ್ತಚರ ಸಚಿವಾಲಯದ ಜಂಜಾನ್ ಕಚೇರಿಯ ವಿಳಾಸ ನೀಡಿ ನನ್ನನ್ನು ಅಲ್ಲಿಗೆ ಹೋಗಲು ಹೇಳಿದ್ದರು. ನಾನು ಹೋಗಲು ನಿರಾಕರಿಸಿದ್ದೆ. ಆಮೇಲೆ ಅವರು ನನ್ನನ್ನು ಬಂಧಿಸಲು ಬಂದರು.

ಮೊದಲಿಗೆ ಪ್ರವೇಶದ್ವಾರದಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದ ಕಟ್ಟಡಕ್ಕೆ ನನ್ನನ್ನು ಕರೆದೊಯ್ಯಲಾಯಿತು. ಅಲ್ಲಿ ನನ್ನನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಇರಿಸಿಕೊಂಡು ನಂತರ ಕಾರಿನಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಜತೆ ಕಾರಿನಲ್ಲಿ ಟೆಹೆರಾನ್ ಗೆ ಹೊರಟೆವು. ನನ್ನನ್ನು ಮನೆಯಿಂದ ಕರೆದೊಯ್ಯುವಾಗ ಅವರು ನನ್ನನ್ನು ಬಂಧಿಸುತ್ತಿರುವರೇ ಎನ್ನುವ ಸತ್ಯವನ್ನು ಹೇಳಲು ಕೇಳಿದ್ದೆ. ”ಇಲ್ಲ. ಇಲ್ಲವೇ ಇಲ್ಲ. ಖಂಡಿತವಾಗಿಯೂ ನಿಮ್ಮನ್ನು ಕೆಲವು ಪ್ರಶ್ನೆ ಕೇಳಬೇಕಿದೆಯಷ್ಟೇ ” ಎಂದು ಅವರೊಂದಿಗಿದ್ದ ಮಹಿಳೆಯು ಹೇಳಿದ್ದಳು. ಭಯದ ವಾತಾವರಣವನ್ನು ಅರ್ಥಮಾಡಿಕೊಂಡು ಅಲಿ ಮತ್ತು ಕಿಯಾನಾ ವಿಚಿತ್ರವಾಗಿ ವರ್ತಿಸಿದರು. ಅಲಿ ಒಳಗೆ ಹೋಗಿ ತನ್ನ ಹಳದಿ ರೈಫಲ್ ಆಟಿಕೆಯನ್ನು ತಂದು ನನ್ನ ಕೋಟ್ ಗೆ ಆತುಬಿದ್ದ. ಚಂದದ ಸ್ಕರ್ಟ್ ಹಾಕಿಕೊಂಡಿದ್ದ ಕಿಯಾನಾ ನನಗಂಟಿಕೊಂಡು, ” ಅಮ್ಮಾ, ನಮ್ಮನ್ನು ಬಿಟ್ಟು ಹೋಗಬೇಡಿ. ನಾವೂ ನಿಮ್ಮ ಜತೆ ಬರುತ್ತೇವೆ.” ಎಂದು ಹೇಳತೊಡಗಿದರು. ಈ ಸಲ ಮಕ್ಕಳಿಂದ ಬೇರ್ಪಟ್ಟು ದೂರಹೋಗುವುದು ಕಳೆದ ಬಾರಿಗಿಂತ ಹೆಚ್ಚು ಕಷ್ಟಕರ ಎನಿಸುತಿತ್ತು. ನನ್ನ ಹೃದಯ ಚೂರುಚೂರಾದಂತೆ.

ನಮ್ಮ ಕಾರ್ ಎವಿನ್ ಜೈಲಿನ ಹತ್ತಿರ ಬರುತಿದ್ದಂತೆಯೇ ನನ್ನನ್ನು ವಾರ್ಡ್ ೨೦೯ಕ್ಕೆ ಹಸ್ತಾಂತರಿಸಲಾಯಿತು. ಕೆಲವೇ ಪ್ರಶ್ನೆಗಳು ಇರುತ್ತವೆ ಎಂದು ಭರವಸೆ ನೀಡಿದ್ದ ಮಹಿಳಾ ಏಜೆಂಟ್, ನನ್ನ ಜತೆಗೇ ಇದ್ದರು. ”ನಿನಗೆ ಮಕ್ಕಳಿದ್ದಾರೆ ಅಲ್ಲವೇ?” ಎಂದು ಆಕೆಯನ್ನು ಕೇಳಿದೆ. ದಾರಿಯಲ್ಲಿ ಕಾರಿನಲ್ಲಿ ಬರುತ್ತಿರುವಾಗ ಅವಳು ಸಂಜೆ ಮನೆಗೆ ಬರುವೆ ಎಂದು ತನ್ನ ಮಗುವಿಗೆ ಭರವಸೆಯಿತ್ತು ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದೆ. ”ನನ್ನ ಮಕ್ಕಳನ್ನು ನೋಡಿದ್ದೀಯಲ್ಲವೇ? ಯಾಕೆ ಸುಳ್ಳು ಹೇಳಿದೆ. ನೀನು ಸತ್ಯವನ್ನೇ ಹೇಳಬಹುದಾಗಿತ್ತು. ಅದರ ಬಗ್ಗೆ ನಾನೇನು ಮಾಡಲು ಸಾಧ್ಯವಿಲ್ಲವಾಗಿದ್ದರೂ ಕನಿಷ್ಠ ನನ್ನ ಮಕ್ಕಳನ್ನು ನಾನು ತಬ್ಬಿಕೊಂಡು ಮುತ್ತಿಡಬಹುದಾಗಿತ್ತು. ಮತ್ತು ನಾನು ಬೇಗ ಹಿಂದೆ ಬರುವೆನೆಂಬ ಸುಳ್ಳು ಭರವಸೆಯನ್ನು ನೀಡುತ್ತಿರಲಿಲ್ಲ  ಅಲ್ಲವೇ ?” ಎಂದು ಆಕೆಗೆ ಹೇಳಿದೆ.

ನನ್ನ ಮೂರನೆಯ ಅನುಭವವು ಜೈಲುಕೋಣೆಯಲ್ಲಿ ಆರಂಭವಾಯಿತು.ವಿಚಾರಣೆಯಿಲ್ಲದೆ ನಾನು ಒಬ್ಬಂಟಿಯಾಗಿ ಕೋಣೆಯೊಳಗೇ ಇದ್ದೆ. ಮರುದಿನ ನನ್ನನ್ನು ಮಹಿಳಾ ವಾರ್ಡ್ ಗೆ ಕರೆದೊಯ್ದರು. ಅಲ್ಲಿ ನಾನು ಒಂದು ರಾತ್ರಿ ಮಾತ್ರ ಇದ್ದೆ ನಂತರ ವಾರ್ಡ್ ೨೦೯ ರ ಜೈಲು ಕೋಣೆಗೆ ಹಿಂತಿರುಗಿದೆ. ನನ್ನ ಬಂಧನಕ್ಕೆ ಕೆಲವು ತಿಂಗಳ ಮೊದಲು, ಆಗಿನ್ನೂ ತಘಿ ದೇಶವನ್ನು ತೊರೆದಿರಲಿಲ್ಲ, ಸುಹ್ರಾವರ್ದಿ ಸ್ಟ್ರೀಟ್ ನಲ್ಲಿನ ಗುಪ್ತಚರ ಸಚಿವಾಲಯವು ನನ್ನನ್ನು ಅಕ್ರಮವಾಗಿ ಇರಾನ್ ತೊರೆಯುವಂತೆ ಕೇಳಿಕೊಂಡಿತ್ತು. ನಾನು ನಿರಾಕರಿಸಿದ್ದೆ. ತಘಿ ದೇಶ ಬಿಟ್ಟು ಹೋದ ನಂತರ ಇರಾನ್ ತೊರೆಯುವಂತೆ ನನ್ನ ಮೇಲೆ ಒತ್ತಡ ಹೆಚ್ಚಾಯಿತು. ನಾನು ದೇಶ ಬಿಟ್ಟು ಹೋಗಲು ಇಷ್ಟಪಡಲಿಲ್ಲ. ”ನನಗೆ ಚಿಕ್ಕ ಮಕ್ಕಳಿದ್ದಾರೆ. ಖುರ್ದಿಸ್ತಾನದ ಪರ್ವತದಾರಿಯನ್ನು ಗಮಿಸುವುದು ಕಷ್ಟಕರವಾಗುತ್ತದೆ” ಎಂದೊಮ್ಮೆ ಹೇಳಿದ್ದೆ. ” ಹಾಗೆಂದವರು ಯಾರು. ನೀವು ಕಾರಿನಲ್ಲಿ ಹೋಗಬಹುದು. ಆ ದಾರಿ ತುಂಬಾ ರಮಣೀಯವಾಗಿದೆ” ಎಂದು ನನ್ನ ವಿಚಾರಣಾಧಿಕಾರಿ ಹೇಳಿದರು. ನನ್ನ ಶಿಕ್ಷೆ ಏನು ಎಂಬುದು ಈಗ ಅರ್ಥವಾಗಿತ್ತು.

ಒಂದು ಸಂದರ್ಭದಲ್ಲಿ ನಾನು ಮಧ್ಯವಯಸ್ಕ ವಿಚಾರಣಾಕಾರರನ್ನು ಹೊಂದಿದ್ದೆ. ಅವರು ೨೦೦೦೯ ರ ಮೊದಲು ವಿದೇಶದಲ್ಲಿ ಸೇವೆಸಲ್ಲಿಸಿದ್ದರು ಎಂದು ನನಗೆ ತಿಳಿಸಿದರು. ಕೆಲವು ಕಾರಣಗಳಿಂದಾಗಿ ಆ ವರ್ಷ ಇರಾನ್ ಗೆ ಹಿಂತಿರುಗಿದ್ದರು. ”ನಿಮ್ಮನ್ನು ಎವಿನ್ ಕಾರಾಗೃಹದ ಸಾಮಾನ್ಯವಾರ್ಡ್ ನಲ್ಲಿರಲು ಬಿಡುವುದಿಲ್ಲ. ನಿಮ್ಮನ್ನು ಒಂದು ಸಣ್ಣಪಟ್ಟಣದಲ್ಲಿರುವ ಸಾಮಾನ್ಯ ಜೈಲಿಗೆ ವರ್ಗಾಯಿಸಲಾಗುವುದು. ಮಾನವ ಹಕ್ಕುಗಳು, ಮಹಿಳೆಯರನ್ನು ರಕ್ಷಿಸುವುದು ಎಂದರೆ ಏನೆಂದು ಅರ್ಥಮಾಡಿಕೊಳ್ಳಿ ” ಎಂದು ಬೆದರಿಕೆ ಹಾಕಿದರು. ನನಗೆ ಆರು ವರುಷಗಳ ಕಾಲ ಜೈಲುಶಿಕ್ಷೆಯಾಗಿತ್ತು ಮತ್ತು ಇನ್ನೊಂದು ನಗರಕ್ಕೆ ನನ್ನನ್ನು ಗಡೀಪಾರು ಮಾಡುವದನ್ನು ಶಿಕ್ಷೆಯಲ್ಲಿ ಉಲ್ಲೇಖಿಸಲಾಗಿರಲಿಲ್ಲ. ಹಾಗಾಗಿ ಈ ಬೆದರಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಲಿಲ್ಲ. ಹಿಂದಿನ ಎರಡು ಬಾರಿಯಂತೆಯೇ ನನ್ನ ಜೈಲುಕೋಣೆಯ ಜಾಗವು ಸೀಮಿತವಾಗಿತ್ತು. ಮುಚ್ಚಿದ ಕಬ್ಬಿಣದ ಬಾಗಿಲು ನನ್ನ ಎದುರಿನ ಜಗತ್ತನ್ನು ಕತ್ತಲಲ್ಲಿ ಇಟ್ಟಿತ್ತು. ಇದು ನನ್ನ ಮೂರನೇ ಬಾರಿಯ ಜೈಲು ಅನುಭವವಾದ್ದರಿಂದ ವಾರ್ಡ್ ೨೦೯ ರ ಸ್ಥಳಪರಿಚಯವು ನನಗಿತ್ತು.

ಮೊದಲ ಬಾರಿಗೆ ನಾನು ಅಲಿ ಮತ್ತು ಕಿಯಾನಾರ ಬಗ್ಗೆ ಯೋಚಿಸುವುದನ್ನು ತಪ್ಪಿಸುತಿದ್ದೆ. ಅವರು ನನ್ನ ಜತೆಯಿಲ್ಲದೇ ಇರುವುದು ಅಸಹನೀಯವಾಗಿತ್ತು. ಅವರ ನೆನಪು ಕಾಡಿದಾಗೆಲ್ಲಾ ನಾನು ಎದ್ದು ಸ್ಥಳದಲ್ಲೇ ಓಡುತಿದ್ದೆ. ನಾನು ನಿಂತಲ್ಲೇ ನಿಂತು ಅವರನ್ನು ನೆನಪಿಸಿಕೊಂಡರೆ ದುಖದಲ್ಲಿ ಮರುಗುತ್ತೇನೆಂದು ನನಗೆ ತಿಳಿದಿತ್ತು. ಮಕ್ಕಳು ಕಠಿಣವಾದ ಸಮಯದಲ್ಲಿದ್ದಾರೆಂದು ನನಗೆ ಗೊತ್ತಿತ್ತು. ನನ್ನನ್ನು ಮರೆತುಬಿಡಲಿ ಎಂದು ಪ್ರಾರ್ಥಿಸುತಿದ್ದೆ. ನನ್ನನ್ನು ತಾಯಿ ಎಂದು ಕರೆಯದೇ ಇರಲಿ ಎಂದೂ ಆಶಿಸುತಿದ್ದೆ. ಪ್ರತಿ ದಿನ ರಾತ್ರಿ ಅಲಿ ಮತ್ತು ಕಿಯಾನಾರ ಜತೆಗೇ ಇದ್ದವಳು ಈಗ ಅವರ ನೆನಪು ಬಂದಾಗೆಲ್ಲ ಅವರ ಹೆಸರನ್ನು ಉಛ್ಛರಿಸುವಾಗೆಲ್ಲಾ ಭಯ ಆವರಿಸಿಕೊಳ್ಳುತ್ತಿತ್ತು, ಮತ್ತು ನಾನು ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನಪಡುತಿದ್ದೆ.

ಇಶ್ರತಾಬಾದ್ ನ ಜೈಲಿನಲ್ಲಿರುವಾಗ ಮೊದಲಬಾರಿಗೆ ನನ್ನನ್ನು ನಾನು ದೂಷಿಸಿಕೊಂಡೆ. ನನ್ನ ನಂಬಿಕೆಗಳು ನನ್ನ ದೃಢ ನಿರ್ಧಾರಗಳು ಸಾಕಷ್ಟು ಬಲವಾಗಿರಲಿಲ್ಲ. ಇದ್ದಿದ್ದರೆ ಈಗ ನಡೆಯುತ್ತಿರುವ ಘಟನೆಗಳು ನಡೆಯುತ್ತಿರಲಿಲ್ಲ. ನಾನು ಮುಕ್ತವಾಗಿ ಸಂತಸದಿಂದ ಎಲ್ಲರೊಡನೆ ಬೆರೆಯುವ ವ್ಯಕ್ತಿಯಾಗಿದ್ದುದೇ ಇದಕ್ಕೆಲ್ಲಾ ಕಾರಣವೆಂದು ಅನ್ನಿಸುತಿತ್ತು. ನಾನು ಮನೆಯಲ್ಲಿ ಏಕಾಂಗಿಯಾಗಿ ನನ್ನೊಂದಿಗೇ ಹೆಚ್ಚು ಕಾಲ ಕಳೆಯುವ ಅಭ್ಯಾಸ ಮಾಡಿಕೊಳ್ಳುತ್ತಿದ್ದರೆ ಈಗ ಜೈಲಿನಲ್ಲಿ ಸುಲಭವಾಗಿ ಸಮಯ ಕಳೆಯಬಹುದಿತ್ತು. ವ್ಯಾಯಾಮದಲ್ಲಿ ಸಂತೋಷಪಟ್ಟುಕೊಳ್ಳುವ, ನನ್ನ ಆಸಕ್ತಿಗಳನ್ನು ಹಿಂಬಾಲಿಸಿಹೋಗುವ ನನ್ನ ಸ್ವಭಾವದಿಂದಾಗಿ ಜೈಲುಪರಿಸ್ಥಿಗಳನು ನಿಭಾಯಿಸುವುದು  ನನಗೆ ಕಷ್ಟವಾಗುತಿತ್ತು. ಆದರೂ ನಾನು ನಂಬಿದ ರಾಜಕೀಯ ಮತ್ತು ಸೈದ್ಧಾಂತಿಕ ದೃಷ್ಟಿಕೋನಗಳು ನನ್ನ ಕೈಬಿಡುವುದಿಲ್ಲ ಎಂಬ ಅಚಲ ವಿಶ್ವಾಸ ನನಗಿತ್ತು.

ನನ್ನ ಎರಡನೇ ಜೈಲುವಾಸದ ಬಿಡುಗಡೆಯ ನಂತರ ನಾನು ಮನಶಾಸ್ತ್ರಜ್ಞರ ಬಳಿ ಹೋಗಿದ್ದೆ. ಅವರು ‘ಆಫ್ತಾಬ್’ ಪತ್ರಿಕೆಯಲ್ಲಿ ಏಕಾಂತ ಬಂಧನ ಮತ್ತು ಬಿಳಿ ಬಣ್ಣವನ್ನ ಚಿತ್ರಹಿಂಸೆಯ ಅಸ್ತ್ರವಾಗಿ ಬಳಸುವ  ಕುರಿತ ಲೇಖನವನ್ನು ಪ್ರಕಟಿಸಿದ್ದರು. ದೇಹದ ಶಕ್ತಿ ಮತ್ತು ಆರೋಗ್ಯವನ್ನು ನಂಬಿಕೆ ಮತ್ತು ವಿಶ್ವಾಸದಿಂದ ಪ್ರತ್ಯೇಕವಾಗಿ ನೋಡಬೇಕು ಎಂದು ಅವರು ನನಗೆ ವಿವರಿಸಿದರು. ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಈ ಬಿಳಿಬಣ್ಣದ ಚಿತ್ರಹಿಂಸೆಗೆ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವರ್ತಿಸುತ್ತಾರೆಂದೂ ಮತ್ತು ಈ ವಿವರಣೆಗಳು ನನ್ನನ್ನು ನಾನು ದೂಷಿಸಿಕೊಳ್ಳುವುದನ್ನು ನಿಲ್ಲಿಸಲು ಸಹಾಯ ಮಾಡಬಹುದೆಂದೂ ತಿಳಿಹೇಳಿದರು. ಆದರೆ ನನ್ನ ನಕಾರಾತ್ಮಕ ಅನುಭವವು ನನ್ನ ಸ್ವಭಾವಕ್ಕೆ ಹೊಂದಿಕೊಂಡಿದ್ದರಿಂದ ವೈಜ್ಞಾನಿಕ ವಿವರಣೆಯಿಂದ ವಾಸ್ತವವಾಗಿ ನನಗೆ ಹೆಚ್ಚೇನೂ ಸಹಾಯವಾಗಲಿಲ್ಲ.

ನನ್ನ ದೇಹವು ಮಾನಸಿಕ ಒತ್ತಡವನ್ನು ಸಹಿಸಿಕೊಳ್ಳುತ್ತಿರಲಿಲ್ಲ. ದಿನದ ಕೆಲವು ಗಂಟೆಗಳ ಕಾಲ, ಭಾರವಾದ ಕಪ್ಪು ವಸ್ತುವೊಂದು ನನ್ನ ಹೃದಯವನ್ನು ಪುಡಿಮಾಡುವ ಹಾಗೆ ಭಾಸವಾಗುತಿತ್ತು. ನನ್ನ ಹೃದಯಬಡಿತವು ವೇಗವಾಗುತಿತ್ತು. ಇದರಿಂದಾಗಿ ಕೆಲವೊಮ್ಮೆ ನನಗೆ ನಿಲ್ಲಲು, ಕುಳಿತುಕೊಳ್ಳಲು, ನಡೆದಾಡಲು ಅಸಾಧ್ಯವಾಗುತಿತ್ತು. ನಾನು ದಿನದಲ್ಲಿ ಬಹಳ ಬಾರಿ ಇನ್ ಹೇಲರ್ ಉಪಯೋಗಿಸುತಿದ್ದೆಯಾದರೂ ಅದೇನೂ ಸಹಕಾರಿಯಾಗಲಿಲ್ಲ. ವಾತಾವರಣ ಬೆಚ್ಚಗೆಯಾಗಿತ್ತು ಆದರೆ ಹವಾನಿಯಂತ್ರಣದ ವ್ಯವಸ್ಥೆಯಿರಲಿಲ್ಲ. ಒಂದು ದಿನ ನಾನು ಮಲಗಲು ತಯಾರಿ ನಡೆಸುತ್ತಿದ್ದ ಸಮಯ ಅವರು ನನಗೆ ಔಷಧಿ ನೀಡುವ ಮೊದಲು ನನ್ನ ಇಡೀ ದೇಹವು ಜಡವಾಗಿತ್ತು. ನನ್ನ ಕಾಲುಗಳ ಮೇಲೆ ನಿಲ್ಲಲು ಕಷ್ಟವಾಯಿತು. ನೋವು ಇರಲಿಲ್ಲವಾದರೂ ನನ್ನ ಭಯವು ನೋವನ್ನು ಸಹಿಸುವುದಕ್ಕಿಂತಲೂ ಕೆಟ್ಟದಾಗಿತ್ತು. ಔಷಧಿ ನೀಡಬಂದ ಮಹಿಳಾ ಸಿಬ್ಬಂದಿಯು ನನ್ನನ್ನು ಆ ಸ್ಥಿತಿಯಲ್ಲಿ ನೋಡಿ, ಮೂವರು ಪುರುಷರನ್ನು ಕರೆದಳು. ಅವರು ಕಂಬಳಿಯೊಂದಿಗೆ ನನ್ನನು ವೈದ್ಯಕೀಯ ಕೇಂದ್ರಕ್ಕೆ ನನ್ನನ್ನು ಕರೆದುಕೊಂಡು ಹೋದರು.

ವೈದ್ಯರು ಬಂದು ನನ್ನನ್ನು ಪರೀಕ್ಷಿಸಿ ಎಷ್ಟು ಚುಚ್ಚುಮದ್ದು ನೀಡಿದರೆಂದು ನನಗೆ ನೆನಪಿಲ್ಲ. ಎದ್ದು ಕೋಣೆಯಲ್ಲಿ ಓಡಾಡಬೇಕೆಂದು ನರ್ಸ್ ತಾಕೀತು ಮಾಡಿದ್ದರು. ಅವರ ಮಾತುಗಳು ನನ್ನನ್ನು ಕೆರಳಿಸುವಂತಿತ್ತು. ರೋಗಿಗೆ ನೀಡಬೇಕಾದ ಆರೈಕೆಯ ಬಗ್ಗೆ ಅವರಿಗೆ ಸಂಪೂರ್ಣ ನಿರ್ಲಕ್ಷ್ಯವಿದ್ದಂತೆ ಇತ್ತು. ನನ್ನನ್ನು ಏಳಲು ಒತ್ತಾಯಿಸುತ್ತಿದ್ದರು. ನಾನು ಹಾಸಿಗೆಯ ತುದಿಯಲ್ಲಿ ಕುಳಿತು ಏಳಲು ಪ್ರಯತ್ನಿಸುತಿದ್ದೆ. ಆದರೆ ಸಾಧ್ಯವಾಗುತ್ತಿರಲಿಲ್ಲ. ಆದರೆ ನಾನು ಬೇಕಂತಲೇ ಓಡಾಡುತ್ತಿಲ್ಲ ಎಂಬುದು ನರ್ಸ್ ನಂಬಿಕೆಯಾಗಿತ್ತು . ಅವರ ವರ್ತನೆಯು ಅಮಾನವೀಯವಾಗಿತ್ತು.ಸಾಮಾನ್ಯ ಆಸ್ಪತ್ರೆಯಲ್ಲಿರುವ ವೈದ್ಯರು- ದಾದಿಯರ ವರ್ತನೆಗೂ, ಜೈಲುಕೋಣೆಗಳಲ್ಲಿ ಕೆಲಸ ಮಾಡುವ ವೈದ್ಯರು- ನರ್ಸ್ ಗಳಿಗೆ ಬಹಳ ವ್ಯತ್ಯಾಸವಿರುತ್ತದೆ. ಅವರ ರೀತಿನೀತಿಗಳು ಜೈಲಿನ ವಿನಾಶಕಾರಿ ವ್ಯಕ್ತಿತ್ವದ ಭಾಗದಂತೆಯೇ ಇರುತ್ತದೆ.

ಒಂದು ದಿನ ಜೈಲಿನ ಮಹಿಳಾ ಸಿಬ್ಬಂದಿ ನನ್ನ ವಿಚಾರಣೆಯ ಸಂದರ್ಭದಲ್ಲಿ ಅಲಿ ಮತ್ತು ಕಿಯಾನಾರ ಬಗ್ಗೆ ಪ್ರಶ್ನಿಸಿದರು. ನಾನು ಅವರ ಬಗ್ಗೆಯೇ ಯೋಚಿಸಿ ಚಿಂತಿತಳಾದೆ. ಕೋಣೆಯಿಂದ ಹೊರಬರಲು ಹೇಳಿದಾಗ ಮಹಿಳಾ ಸಿಬ್ಬಂದಿಯ ದನಿ ಕೇಳಿ ಪರಿಚಯಸ್ಥರೊಂದಿಗೆ ಮಾತನಾಡುವಂತೆ ಅವರಿಗೆ ಮಕ್ಕಳಿದ್ದಾರೆಯೇ ಎಂದು ಸಹಜವಾಗಿ ಕೇಳಿದೆ. ”ನಿನಗೆ ಸಂಬಂಧಪಟ್ಟ ವಿಷಯವಲ್ಲವದು” ಎಂದು ಆಕೆ ನೀಡಿದ ತಣ್ಣಗಿನ ಉತ್ತರ ನನ್ನನ್ನು ಕಲಕಿತು. ಜೈಲುಕೋಣೆಗಳು ಕೇವಲ ಭೌತಿಕ-ಭೌಗೋಳಿಕ ಸ್ಥಳಗಳು ಮಾತ್ರವಲ್ಲ. ಜೈಲು ಸಿಬ್ಬಂದಿಯ ಅಸಭ್ಯ ಮತ್ತು ಒರಟು ಧ್ವನಿಗಳು, ಕೊಳಕಾದ ನೆಲದ ಮೇಲೆ ಬಿದ್ದಿರುವ ಸತ್ತ ಜಿರಳೆಗಳು, ನೇತುಬಿದ್ದಿರುವ ಕೊಳಕು ಪರದೆಗಳು, ಆರೋಪಿಗಳ ಕಣ್ಣುಪಟ್ಟಿಗಳು, ದೊಡ್ಡ ಚಪ್ಪಲಿಯಲ್ಲಿ ಬರಿಯ ಪಾದಗಳು, ಕಳಪೆ ಗುಣಮಟ್ಟದ ಉಡುಗೆಗಳು, ಕಿಟಕಿಗಳು ಎನ್ನುವ ಲೋಹದ ಗ್ರಿಲ್ ಗಳು, ವಿಚಾರಣಾ ಕೋಣೆಗಳಲ್ಲಿ ಗೋಡೆಗೊರಗಿ ಕುಳಿತುಕೊಳ್ಳುವ ದೀರ್ಘಕಾಲ, ಜನರೊಂದಿಗಿನ ಎದುರುಮಾತುಗಳು, ಕಿರುಚಾಟ ಕೋಪದ ದನಿಗಳು, ತಮ್ಮ ರೋಗಿಗಳ ಸ್ಥಿತಿಗಳಿಗೆ ವೈದ್ಯರ ಉದಾಸೀನತೆ, ಜೈಲುಬಾಗಿಲುಗಳು ಮುಚ್ಚಿಕೊಳ್ಳುವ ಭಾರೀ ಆದರೆ ಶುಷ್ಕ ಸದ್ದುಗಳು, ಜೈಲೊಳಗೂ ಕಣ್ಣುಪಟ್ಟಿ ಕಟ್ಟಿಕೊಂಡಿರುವ ಸ್ಥಿತಿ, ಜೈಲಿನ ಕೋಣೆಯಿಂದ ಶೌಚಾಲಯಕ್ಕೆ ಹೋಗುವ ಆವರಣಗಳು – ಹೀಗೆ ಕೆಲವು ವಾಸ್ತವವಾಗಿರುವ ಗುಣಲಕ್ಷಣಗಳು, ಜೈಲು ಎನ್ನುವ ಜಾಗಕ್ಕೆ ಅದರದ್ದೇ ಆದ ವ್ಯಾಖ್ಯಾನವನ್ನು ನೀಡುತ್ತವೆ.

ಇನ್ನೊಂದು ಸಂದರ್ಭದಲ್ಲಿ ನಾನು ಬೆಳಗ್ಗೆ ಉಪಾಹಾರಕ್ಕಾಗಿ ಸ್ವಲ್ಪ ಬ್ರೆಡ್ ಮತ್ತು ಚಹಾವನ್ನು ಸೇವಿಸಿದೆ. ಎದ್ದು ಕೋಣೆಯ ಸುತ್ತ ಎರಡು ಮೂರು ಬಾರಿ ಸುತ್ತು ಹಾಕಿರಬಹುದಷ್ಟೇ. ಮುಂದೆ ಎಲ್ಲವೂ ಕತ್ತಲೆ. ನಾನು ಕಣ್ಣುಬಿಟ್ಟಾಗ ನನ್ನೆದುರು ವಾರ್ಡ್ ನ ಭದ್ರತಾ ಸಿಬ್ಬಂದಿ, ದಾದಿಯರು, ಜೈಲಿನ ಮಹಿಳಾಸಿಬ್ಬಂದಿ, ನರ್ಸ್ ಮತ್ತು ಡಾಕ್ಟರ್ ಗಳು ಸುತ್ತುವರೆದು ನನ್ನನ್ನು ದಿಟ್ಟಿಸಿನೋಡುತಿದ್ದರು. ಅಷ್ಟು ಮಂದಿ ಏಕೆ ನನ್ನ ಸುತ್ತು ಇದ್ದಾರೆ ಎಂದು ನನಗೆ ಸ್ವಲ್ಪವೂ ಆಶ್ಚರ್ಯವಾದಲಿಲ್ಲ. ನಾನು ಮೂರ್ಛೆ ಹೋಗಿದ್ದಿರಬೇಕು ಎಂದು ಗಾಬರಿಯೂ ಆಗಲಿಲ್ಲ. ನಾನು ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದೆ. ವೈದ್ಯರು ನನ್ನ ನಾಡಿ ಮಿಡಿತವನ್ನು ಪರೀಕ್ಷಿಸಿ ರಕ್ತದೊತ್ತಡವನ್ನು ದಾಖಲಿಸಿಕೊಂಡರು. ಒಬ್ಬರಿಗೊಬ್ಬರು ಮಾತನಾಡಿಕೊಂಡು ಅವರೆಲ್ಲಾ ಅಲ್ಲಿಂದ ಹೊರಹೋದರು. ಈ ಘಟನೆಯ ಹಿಂದಿನ ರಾತ್ರಿ ಮಹಿಳಾ ಸಿಬ್ಬಂದಿಯು ನನಗೆ ಔಷಧಿಯೊಂದನ್ನು ನೀಡಿದ್ದರು. ಆ ಮಾತ್ರೆಯು ಹೊಸದಾಗಿತ್ತು. ಅದು ಯಾವ ಔಷಧಿಯೆಂದು ನಾನು ಕೇಳಿದ್ದಕ್ಕೆ, ಕೆಲ ರಾತ್ರಿಗಳ ಹಿಂದೆ ನಿಲ್ಲಲು ಸಾಧ್ಯವಾಗದೇ ನಿಶ್ಚೇಷ್ಟಿತರಾದಾಗ, ಅಂತಹ ಘಟನೆ ಮರುಕಳಿಸದಂತೆ ತಡೆಯಲು ಜೈಲಿನ ವೈದ್ಯರು ಈ ಹೊಸ ಮಾತ್ರೆಯನ್ನು ನಿಮಗೆ ನೀಡಲು ಹೇಳಿರುವರು ಎಂದರು. ನಾನು ಮಾತ್ರೆಯನ್ನು ತೆಗೆದುಕೊಂಡೆ. ನಾನು ಏಕೆ ಪ್ರಜ್ಞಾಹೀನಳಾದೆ ಎಂದು ಖಚಿತವಾಗಿ ಹೇಳಲಾರೆ. ನನ್ನ ರಕ್ತಪರೀಕ್ಷೆಯನ್ನೂ  ಮಾಡಲಿಲ್ಲ ಹಾಗೂ ನನಗೆ ವಾರ್ಡ್ ನಿಂದ ಹೊರಬರಲೂ ಅವಕಾಶವಿರಲಿಲ್ಲ.

ವಾರ್ಡ್ ೨೦೯ರಲ್ಲಿ ಪ್ರತಿದಿನ ನಮಗೆ ತಾಜಾಗಾಳಿಯ ಸೇವನೆಗೆಂದು ಸುಮಾರು ಹದಿನೈದು ಇಪ್ಪತ್ತು ನಿಮಿಷಗಳ ಸಮಯ ನೀಡಿದ್ದರು. ಪ್ರತಿದಿನವೂ ಮೂರು ಹೊತ್ತು ಊಟ ಮತ್ತು ದಿನವೂ ಸ್ನಾನಕ್ಕೆ ಅವಕಾಶವಿತ್ತು. ನಾನು ಅಲಿ ಮತ್ತು ಕಿಯಾನಾರನ್ನು ಬಿಟ್ಟು ಜೈಲಿಗೆ ಹೋಗಿ ಸುಮಾರು ಒಂದು ತಿಂಗಳಾಗಿತ್ತು. ವಾರ್ಡ್ ನಲ್ಲಿ ಕರೆ ಮಾಡಲು ಅಥವಾ ಭೇಟಿಗೆ ಯಾವುದೇ ಆಸ್ಪದವಿರಲಿಲ್ಲ. ವಿಚಾರಣಾಧಿಗಳೇ ಅದನ್ನು ನಿರ್ಧರಿಸುತ್ತಿದ್ದರು. ನನ್ನನ್ನು ಸಾರ್ವಜನಿಕ ವಾರ್ಡ್ಗೆ ವರ್ಗಾವಣೆ ಮಾಡಬೇಕಾಗಿಯೂ, ಗುಪ್ತಚರ ಸಚಿವಾಲಯವು ನನ್ನನ್ನು ಏಕಾಂತವಾಸದಲ್ಲಿ ಕೂಡಿಟ್ಟಿರುವುದು ಕಾನೂನು ಬಾಹಿರ ಎಂದೂ, ನನಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆಯೆಂದರೆ ನನ್ನನ್ನು ಏಕಾಂತಬಂಧನದಲ್ಲಿ ಯಾತಕ್ಕೆ ಇರಿಸಿದ್ದಾರೆ ಎಂದು ಪದೇ ಪದೇ ದೂರುಗಳನ್ನು ಬರೆದು ಕಳುಹಿಸುತ್ತಿದ್ದೆ.

ಒಂದು ಸಂಜೆ ಪ್ರಾರ್ಥನಾ ಸಮಯದಲ್ಲಿ ಒಬ್ಬ ಏಜೆಂಟ್ ನನ್ನನ್ನು ಶಾಹಿದ್ ಮೊಗದ್ದಾಸ್ ಪ್ರೊಸಿಕ್ಯೂಟರ್ ಕಛೇರಿಗೆ ಕರೆದೊಯ್ದರು. ರೆಶ್ತೇಹ್ ಅಹ್ಮದಿ  ಯವರ ಏಜೆಂಟ್ ಮತ್ತು ಕಾರ್ಯದರ್ಶಿ ಕೋಣೆಯೊಳಕ್ಕೆ ಪ್ರವೇಶಿಸಲಿಲ್ಲ. ಅಹ್ಮದಿಯವರು ಮೇಜಿನ ಹಿಂಬದಿಯಲ್ಲಿ ಕುಳಿತಿದ್ದರು. ನ್ಯಾಯಾಲಯದ ಕೊಠಡಿಯು ಜನರಿಲ್ಲದೆ ಖಾಲಿಯಾಗಿತ್ತು. ನ್ಯಾಯಾಲಯದ ಮುಖ್ಯಸ್ಥರು ನನ್ನ ದೂರುಗಳನ್ನು ಆಲಿಸಿ ನನ್ನನ್ನು ಸಾರ್ವಜನಿಕ ವಾರ್ಡ್ ಗೆ ವರ್ಗಾಯಿಸುವುದಾಗಿ ಒಪ್ಪಿಗೆ ಸೂಚಿಸಿದರು. ಅವರ ಫೋನ್ ರಿಂಗಣಿಸಿತು. ಅವರು ಉತ್ತರಿಸುತ್ತಾ, ”ಆಕೆ ಇಲ್ಲಿಯೇ ಇದ್ದಾರೆ. ನೀವು ನಮಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತೀರಿ” ಎಂದರು. ನಂತರ ನನ್ನ ಕಡೆ ತಿರುಗಿ ಸಹಿ ಮಾಡಲು ಪತ್ರವನ್ನು ನೀಡಿದರು. ಪ್ರೊಸಿಕ್ಯೂಟರ್ ಮುಖ್ಯಸ್ಥರ ಬದಲಿಗೆ ಆರೋಪಿಯಾದ ನಾನು ಏಕೆ ಸಹಿ ಮಾಡಬೇಕೆಂದು ಯೋಚಿಸುತ್ತಿರುವಾಗ, ಅಹ್ಮದಿಯವರು, ಈ ಮನವಿಯು ನಿಮ್ಮ ಸ್ವಂತ ವಿನಂತಿಯದ್ದಾಗಿರುವುದರಿಂದ ನೀವು ಸಹಿ ಹಾಕಬೇಕೆಂದರು. ನಾನು ನ್ಯಾಯಾಲಯದಲ್ಲಿದ್ದೆ. ಅಹ್ಮದಿಯವರು ಒಬ್ಬ ಜವಾಬ್ದಾರಿಯುತ ನ್ಯಾಯಾಧಿಕಾರಿಯಾಗಿದ್ದರು. ಯಾವುದೇ ಅನಾಮಧೇಯ ಭದ್ರತಾ ಏಜೆಂಟ್ ಆಗಿರಲಿಲ್ಲ ಮತ್ತು ನನ್ನನ್ನು ಜೈಲುಕೋಣೆಯಲ್ಲಾಗಲೀ ಭದ್ರತಾ ವಿಭಾಗದಲ್ಲಾಗಲೀ ವಿಚಾರಣೆ ನಡೆಸುತ್ತಿಲ್ಲವಾದ್ದರಿಂಡ ಅವರ ಮೇಲಿನ ನಂಬಿಕೆಯಿಂದ ಪತ್ರಕ್ಕೆ ಸಹಿ ಹಾಕಿದೆ. ಪತ್ರದ ವಿಷಯವು, ನನ್ನ ಆರು ವರ್ಷಗಳ ಶಿಕ್ಷೆ ಮತ್ತು ವಾರ್ಡ್ ೨೦೯ರಿಂದ ಸಾರ್ವಜನಿಕ ಮಹಿಳಾ ವಾರ್ಡ್ ಗೆ ನನ್ನನ್ನು ವರ್ಗಾಯಿಸುವ ಬಗ್ಗೆಯಾಗಿತ್ತು. ”ಯಾವ ಮಹಿಳಾ ವಾರ್ಡ್?” ಎಂದು ನಾನು ಕೇಳಿದ ಪ್ರಶ್ನೆಗೆ ”ಎಲ್ಲಿ ಹೆಂಗಸರು ಇರುತ್ತಾರೆಯೋ ಅಲ್ಲಿ” ಎಂದು ಕೊಠಡಿಯ ಹೊರಗೆ ಕೈ ತೋರಿಸುತ್ತ ಹೇಳಿದರು.

ನಾನು ನನ್ನ ಕೋಣೆಗೆ ಮರಳಿದೆ. ಎರಡು ದಿನಗಳ ನಂತರ ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ಇಬ್ಬರು ಪುರುಷ ಏಜೆಂಟರು ಬಂದು ನನ್ನನ್ನು ಎಬ್ಬಿಸಿದರು. ನಾವು ಕಾರಿನಲ್ಲಿ ಹೊರಟೆವು, ನಾನು ನನ್ನ ತಲೆಯನ್ನು ಬಗ್ಗಿಸಿ ಕಾರ್ ನಲ್ಲಿ ಕುಳಿತೆ. ಹೆದ್ದಾರಿಯಲ್ಲಿ ಹಲವು ಗಂಟೆಗಳು ಕ್ರಮಿಸಿದ ನಂತರ ನಾವು ಜಂಜಾನ್ ನಗರದ ನ್ಯಾಯಾಲಯಕ್ಕೆ ಬಂದೆವು. ಅಲ್ಲಿ ನನ್ನನ್ನು ಸಾರ್ವಜನಿಕ ಮಹಿಳಾ ವಾರ್ಡ್ ನ ಮುಖ್ಯಸ್ಥರಿಗೆ ಒಪ್ಪಿಸಿದರು. ನನ್ನನ್ನು ಹೀಗೆ ಏಕೆ ಒತ್ತೆಯಾಳಿನಂತೆ ನಡೆಸಿಕೊಂಡರು ಎಂದು ನನಗೆ ಆಘಾತವಾಯಿತು. ಅಭದ್ರತೆ ಮತ್ತು ಭವಿಷ್ಯದ ಬಗ್ಗೆ ನನಗೆ ಏನೇನೂ ಭರವಸೆ ಇಲ್ಲದಾಗಿತ್ತು. ನಾನು ಕತ್ತಲಾಗಿದ್ದ  ಜಂಜಾನ್ ಜೈಲಿನ ಕ್ವಾರಂಟೈನ್ ವಾರ್ಡ್ ಪ್ರವೇಶಿಸಿದೆ. ನಾನು ಕೈ ತೊಳೆಯಲು ಹೋದರೆ ಅಲ್ಲಿ ಸೋಪು ಇರಲಿಲ್ಲ. ಶೌಚಾಲಯದಲ್ಲಿ ಟವೆಲ್ ಆಗಲೀ, ಶಾಂಪೂ ಸಾಬೂನಾಗಲೀ, ಒಳ ಉಡುಗೆಯಾಗಲೀ, ಶವರ್ ನಲ್ಲಿ ಬಟ್ಟೆಯಾಗಲೀ ಏನೂ ಇರಲಿಲ್ಲ. ಕೋಣೆಯಲ್ಲಿ ಮೂರು ಕಂಬಳಿಗಳಿದ್ದವು ಮತ್ತು ಅವುಗಳ ಮೇಲೆ ವಾಂತಿಯ ಕುರುಹುಗಳಿದ್ದವು.

ಊಟಕ್ಕೆ ರುಚಿಯಿಲ್ಲದ ಅಕ್ಕಿ ಮತ್ತು ತರಕಾರಿಗಳಿದ್ದವು. ನಾನು ತಿನ್ನಲು ನಿರಾಕರಿಸಿದೆ. ನಲ್ಲಿಯಿಂದ ನೇರವಾಗಿ ನೀರನ್ನು ಕುಡಿದೆ ಮತ್ತು ಅಲ್ಲಿ ತಿನ್ನಲು ಬೇರೇನೂ ಇರಲಿಲ್ಲ. ನನ್ನ ಪಕ್ಕದ ಕೋಣೆಯಲ್ಲಿ ಮಾದಕ ದ್ರವ್ಯದ ಸಾಗಣೆಗಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಒಬ್ಬ ಹೆಣ್ಣುಮಗಳಿದ್ದಳು. ಆಕೆ ಆಗಷ್ಟೇ ಜೈಲಿನ ರಜೆಯಿಂದ (ಫರ್ಲೋ) ಹಿಂತಿರುಗಿದ್ದಳಾದ್ದರಿಂದ ಕೆಲವು ದಿನಗಳ ಕಾಲ ಜೈಲಿನ ಕ್ವಾರಂಟೈನ್ ವಾರ್ಡ್ ನಲ್ಲಿರಬೇಕಿತ್ತು. ನಾನು ಆ ಹುಡುಗಿಯ ಧ್ವನಿಯನ್ನು ಕೇಳಿ, ಆಕೆಯ ವಯಸ್ಸು ಎಷ್ಟೆಂದು ಕೇಳಿದೆ. ಅವಳು, ”ಹನ್ನೆರಡು” ಎಂದಳು. ”ಯಾಕೆ ಇಲ್ಲಿದ್ದೀಯಾ” ಎಂದು ಕೇಳಿದಾಗ ಆಕೆ, ತಾನು ನೆರೆಮನೆಯ ಹುಡುಗನೊಂದಿಗೆ ಸಂಬಂಧವನ್ನು ಹೊಂದಿದ್ದೆ, ತನ್ನ ತಂದೆ ಈ ವಿಷಯವನ್ನು ಪೋಲೀಸರಿಗೆ ತಿಳಿಸಿದ್ದರಿಂದ ಪೋಲೀಸರು ತನ್ನನ್ನು ಇಲ್ಲಿರಿಸಿದ್ದಾರೆ ಎಂದಳು. ಆ ಪುಟ್ಟ ಸುಂದರ ಹುಡುಗಿ ಆ ದಿನದಿಂದ ನನ್ನನ್ನು ನರ್ಗೆಸ್ ಆಂಟಿ ಎಂದು ಕರೆಯತೊಡಗಿದಳು. ಪ್ರತಿ ಬಾರಿ ನಾನು ಅವಳನ್ನು ತಬ್ಬಿಕೊಂಡಾಗಲೆಲ್ಲ ನನ್ನ ಹೃದಯ ಘಾಸಿಗೊಳ್ಳುತಿತ್ತು. ಸಾರ್ವಜನಿಕ ವಾರ್ಡ್ ಗೆ ನನ್ನ ಸ್ಥಳಾಂತರವಾದ ಮೊದಲಲ್ಲಿ ನನಗೆ ಕೊಠಡಿಯಿರಲಿಲ್ಲ. ನಾನು ಪ್ರಾರ್ಥನಾ ಕೋಣೆಯ ನೆಲದ ಮೇಲೆ ಮಲಗುತಿದ್ದೆ. ಪುಟ್ಟ ಹುಡುಗಿಯಾಗಿದ್ದ ಅವಳು ಭಯಗೊಳ್ಳುತ್ತಿದ್ದಳು. ರಾತ್ರಿಯಲ್ಲಿ ಭಯದಿಂದ ನನ್ನ ಕೈಗಳನ್ನು ಬಲವಾಗಿ ಹಿಡಿದುಕೊಳ್ಳುತಿದ್ದಳು. ನಾನು ಅವಳ ತಲೆ ಮತ್ತು ಕೆನ್ನೆಗಳಿಗೆ ಮುತ್ತಿಡುತ್ತಿದ್ದೆ ಮತ್ತು ಎಲ್ಲಾ ಸಮಯದಲ್ಲೂ ಅವಳೊಂದಿಗೆ ಮಾತನಾಡುತಿದ್ದೆ.

ಜಂಜಾನ್ ಜೈಲಿನ ಸಾರ್ವಜನಿಕ ವಾರ್ಡ್ ಗೆ ನನ್ನ ವರ್ಗಾವಣೆಯಾಗಲು ಕಾರಣವೇನೆಂದು ನನಗೆ ಅನಂತರ ತಿಳಿಯಿತು. ರೆಶ್ತೆ ಅಹ್ಮದಿ ಅವರ ಕಛೇರಿಯಲ್ಲಿ ನಾನು ಪತ್ರಕ್ಕೆ ಸಹಿ ಮಾಡಿದ ಅನಂತರ ಅಹ್ಮದಿಯವರು ಪತ್ರದಲ್ಲಿ ಒಂದು ವಾಕ್ಯವನ್ನು ಸೇರಿಸಿದ್ದರು. ಅದು, ”’ಅಲಿ ಮತ್ತು ಕಿಯಾನಾ ಜಂಝಾನ್ ನಲ್ಲಿದ್ದಾರೆ” ಎಂಬುದಾಗಿತ್ತು. ಗುಪ್ತಚರ ಸಚಿವಾಲಯದ ಒಳಸಂಚಿನಂತೆ, ನನ್ನ ವರ್ಗಾವಣೆಯು ನನ್ನದೇ ವಿನಂತಿಯೆಂದು ಬಿಂಬಿಸಿದ್ದರು. ಜಂಜಾನ್ ಜೈಲಿನಲ್ಲಿ ನನ್ನ ಮೇಲಾದ ವಿವರಿಸಲಾಗದ ಸಂಕಟ ಮತ್ತು ನೋವಿನಿಂದ ನಾನು ಶಾಶ್ವತವಾಗಿ ಸ್ನಾಯು ಸೆಳೆತದ ನಡುಕವನ್ನು ಅನುಭವಿಸುವಂತಾಗಿದೆ. ಅನಂತರ, ಗುಪ್ತಚರ ಸಚಿವಾಲಯವು ವಲಿಯಾಸರ್ ಆಸ್ಪತ್ರೆಯಲ್ಲಿ ನಾನು ಇದ್ದ ಸಮಯದ ಎಲ್ಲಾ ವೈದ್ಯಕೀಯ ದಾಖಲೆಗಳಲ್ಲಿ ಈ ಮಾಹಿತಿಯನ್ನೂ ಸೇರಿಸಿದರು. ಕೆಲವೊಮ್ಮೆ ಏಕಾಂತ ಬಂಧನದ ಗಾಯಗಳ ಗುಳ್ಳೆಗಳು ಸಿಡಿಯುತ್ತವೆ. ಕೆಲವೊಮ್ಮೆ ಅವು ಉಲ್ಭಣಗೊಳ್ಳುತ್ತವೆ. ಕೆಲವೊಮ್ಮೆ ಗಾಯಗಳು ಉರಿಯುತ್ತವೆ. ಕೆಲವೊಮ್ಮೆ ನನ್ನ ರಕ್ತನಾಳಗಳಲ್ಲಿ ಭಯವು ಹರಿಯುತ್ತದೆ. ವಾಸಿಯಾಗಲಾರದ, ಅದೃಶ್ಯ ಗಾಯಗಳಿಗೆ ಅಂತ್ಯವೆಂಬುದು ಇನ್ನೂ ಇಲ್ಲವಾಗಿದೆ.

ಈ ಪರಿಚಯ ಮತ್ತು ಸಂದರ್ಶನವನ್ನು “White Torture: Interviews with Iranian Women Prisoners” ಕೃತಿಯಿಂದ ಆಯ್ದುಕೊಳ್ಳಲಾಗಿದೆ.


೧. ನ್ಯಾಯಾಧೀಶ ಹದ್ದಾದ್ ಎಂದು ಕರೆಯಲ್ಪಡುವ ಹಸನ್ ಝಾರೆ ದೆಹ್ನವಿ ಅವರು ಟೆಹರಾನ್ ನ ಸಾರ್ವಜನಿಕ ಮತ್ತು ಕ್ರಾಂತಿಕಾರಿ ಪ್ರೊಸಿಕ್ಯೂಟರ್ ಕಛೇರಿಯ ಉಪ ಭದ್ರತಾ ನಿರ್ದೇಶಕರಾಗಿದ್ದರು. ಹಲವಾರು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಅವರ ಮೇಲಿತ್ತು. ಖೈದಿಗಳ ಮೇಲೆ ಕ್ರೂರ ವರ್ತನೆಗಾಗಿ ಅವರು ಹೆಸರುವಾಸಿಯಾಗಿದ್ದರು. ಅವರು ಅಕ್ಟೋಬರ್ ೨೦೨೦ರಲ್ಲಿ ನಿಧನರಾದರು

೨. ಹೋದಾ ಸಾಬೆರ್ ಇರಾನಿನ ಬುದ್ಧಿಜೀವಿ ಮತ್ತು ಹೋರಾಟಗಾರ್ತಿ. ಅವರು ೨೦೧೧ರಲ್ಲಿ ಎವಿನ್ ಸೆರೆಮನೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಂತರ ಹೃದಯಾಘಾತದಿಂದ ನಿಧನರಾದರು

೩. ಇರಾನಿನ ಹಳೆಯ ಸಾಮಾನ್ಯ ಬ್ರಾಂಡಿನ ಸೋಪ್

೪. ತಾಹೆರ್ ಅಹ್ಮದ್ ಜಾದೆ ಹೆರಾವಿ (೧೯೨೧-೨೦೧೭) ೧೯೭೯ ಕ್ರಾಂತಿಯ ನಂತರದ ಖೊರಾಸಾನ್ ನ ಮೊದಲ ಗವರ್ನರ್ ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಮುಖ ವ್ಯಕ್ತಿ

೫. ನೈಂಪೂರ್, ಇರಾನ್ ಸ್ವಾತಂತ್ರ್ಯ ಚಳವಳಿಯ ಸದಸ್ಯ

೬. ಫ಼ಿರೋಝಿ ಸಾಬೆರ್, ಹೋದಾ ಸಾಬೆರ್ ಅವರ ಸಹೋದರಿ

೭. ಅಲಿರೆಝಾ ರಾಜೈ, ಇರಾನಿನ ಪತ್ರಕರ್ತ ಮತ್ತು ಪ್ರಸ್ತುತ ಆಡಳಿತ ಧಾರ್ಮಿಕ ವಿರೋಧದ ಭಾಗವಾಗಿದ್ದಾರೆ

೮. ಆ ಸಮಯದಲ್ಲಿ ಕಾರಾಗೃಹ ಸಂಸ್ಥೆಯ ಮುಖ್ಯಸ್ಥರ ಉಪ ಸಲಹೆಗಾರ

೯. ಮೆಹದಿ ಬಝಾರ್ಗನ್, ೧೯೭೯ರ ಕ್ರಾಂತಿಯ ನಂತರ ಇರಾನ್ ನ ಮೊದಲ ಪ್ರಧಾನ ಮಂತ್ರಿಯಾಗಿದ್ದವರು. ಟೆಹರಾನ್ ನಲ್ಲಿರುವ US ರಾಯಭಾರ ಕಛೇರಿಯ ಮೇಲಿನ ಮುತ್ತಿಗೆಯನ್ನು ಪ್ರತಿಭಟಿಸಿ ಅದೇ ವರ್ಷ ರಾಜೀನಾಮೆ ಸಲ್ಲಿಸಿದರು

೧೦. ಎಜ್ಜಾತೊಲ್ಲಾ ಸಹಾಬಿ, ಇರಾನಿನ ರಾಜಕಾರಣಿ ಮತ್ತು ಪತ್ರಕರ್ತ ಹಾಗೂ ಇರಾನ್ ನ ರಾಷ್ಟ್ರೀಯವಾದಿ-ಧಾರ್ಮಿಕ ಚಳವಳಿಯ ನಾಯಕ (ವಿರೋಧಿ ಗುಂಪು)

೧೧. ಅಬ್ದೋಲ್ಫತ್ತಾಹ್ ಸೋಲ್ತಾನಿ, ಮೊಹಮ್ಮದ್ ಸೀಫ್ಜಾದೆ, ಮೊಹಮ್ಮದ್ ಅಲಿ ದಡ್ಖಾಫ್ , ಮಾನವ ಹಕ್ಕುಗಳ ರಕ್ಷಕರ ಕೇಂದ್ರದ ಸಹ ಸಂಸ್ಥಾಪಕರು

೧೨. ಜಹ್ರಾ ”ಝೀಬಾ” ಕಝೆಮಿ – ಅಹ್ಮದಾಬಾದಿ, ಇರಾನ್ – ಕೆನಡಾದ ಛಾಯಾಗ್ರಾಹಕಿ. ಅವರು ೨೦೦೩ರಲ್ಲಿ ಬಂಧನಕ್ಕೊಳಗಾಗಿ ವಿಚಾರಣಾಕಾರರಿಂದ ಕ್ರೂರವಾಗಿ ಕೊಲ್ಲಲ್ಪಟ್ಟರು

೧೩. ಸಾರ ಶೌರ್ಡ್ ಮತ್ತು ಅವಳ ಸಂಗಾತಿ (ನಿಶ್ಚಿತ ವರ) ಶೇನ್ ಬಾಯರ್ ಮತ್ತು ಅವರ ಸ್ನೇಹಿತ ಜೊಷುವಾ ಫ಼ಟ್ಟಲ್. ಇರಾಕಿನ ಖುರ್ದಿಸ್ಥಾನದಲ್ಲಿ ರಜೆಕಳೆಯಲು ಬಂದಿದ್ದ ಇವರನ್ನು ಗಡಿಕಾವಲುಗಾರರು ಬಂಧಿಸಿಟ್ಟಿದ್ದಾರೆ. ಶೌರ್ಡ್ ಏಕಾಂತ ಬಂಧನಲ್ಲಿದ್ದು ಒಂದು ವರುಷದ ಮೇಲಾಯಿತು

೧೪. ಷಿವಾ ನಝರ್ ಅಹಾರಿ, ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಮಾನವಹಕ್ಕುಗಳ ವರದಿಗಾರ ಸಮಿತಿಯ ಸ್ಥಾಪಕ ಸದಸ್ಯೆ

೧೫. ಬದ್ರಲ್ಸಾದತ್ ಮೊಫಿದಿ, ಇರಾನ್ ಪತ್ರಕರ್ತ ಒಕ್ಕೂಟದ ಕಾರ್ಯದರ್ಶಿ

೧೬. ಜೈನಾಬ್ ಜಲಾಲಿಯನ್, ಒಬ್ಬ ಖುರ್ದಿಷ್ ಮೂಲದ ಇರಾನಿಯನ್. ೨೦೦೮ರಲ್ಲಿ ಖುರ್ದಿಶ್ ಉಗ್ರಗಾಮಿ PJAK ಸಂಘಟನೆಯ ಸದಸ್ಯೆಯಾಗಿದ್ದಕ್ಕೆ (ಆಕೆ ಅದನ್ನು ನಿರಾಕರಿಸಿದ್ದಾಳೆ) ಇಸ್ಲಾಮಿಕ್ ಕ್ರಾಂತಿಕಾರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದಳು. ನಂತರ ಆಕೆಗೆ ೨೦೧೧ರಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ

೧೭. ಸಯ್ಯದ್ ಬಹ್ರಾಮ್ ರೆಶ್ತೇಹ್ ಅಹ್ಮದಿ, ಭದ್ರತಾ ಉಪ ಪ್ರೊಸಿಕ್ಯೂಟರ್ ಮತ್ತು ಇವಿನ್ ಭದ್ರತಾ ನ್ಯಾಯಾಲಯದ ಮುಖ್ಯಸ್ಥರು

1 Maryam Berger, Oct. 8, 2020: Leading Iranian human rights advocate freed from prison amid fear of contracting coronavirus behind bars: https://www.washingtonpost.com/world/2020/10/08/nargesmohammadi-released-from-prison-iran-coronavirus-human-rights-death-penalty

2 From author’s online conversation with Narges Mohammadi, 26 April 2021.

3 Saeed Kamali Dehghan, ‘Iranian Human Rights Activist Narges Mohammadi arrested’. Guardian, 26 April 2012, www.theguardian.com/world/iran-blog/2012/apr/26/iran-activist-narges-mohammadijailed?newsfeed=true (accessed 27 April 2021).

4 ‘Iran: Judicial Harassment of Human Rights Activist Narges Mohammadi’, Gulf Centre for Human Rights, 14 November 2014, www.gc4hr.org/news/view/818 (accessed 27 April 2021).

5 Nayereh Tohidi, ‘Iranian Feminist Narges Mohammadi is in Danger’, Ms. magazine, 8 January

2020, msmagazine.com/2020/01/08/prominent-iranian-feminist-narges-mohammadi-is-in-danger

(accessed 27 April 2021).

6 In assembling the timeline of these events, I drew upon the Wikipedia entry on Narges

Mohammadi (en.wikipedia.org/wiki/Narges_Mohammadi#cite_note-ALF-5), corroborating the facts

and dates with other sources, including Narges Mohammadi herself.

7 ‘17 Political Prisoners Join “Campaign of Unity Against Solitary Confinement” ’, Iran Human

Rights, 22 April 2021, iranhr.net/en/articles/4709 (accessed 27 April 2021).

8 Nayereh Tohidi, ‘Iran’s Women’s Rights Movement and the One Million Signatures Campaign’,

Change for Equality, no. 208, November 2006/Azar 1385, www.we-change.org/spip.php?

page=print&id_article=208 (accessed 27 April 2021).


ಅನುವಾದ : ಹೇಮಶ್ರೀ ಸಯ್ಯದ್ 

ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ. ಈಟಿವಿ-ಕನ್ನಡ, ದೂರದರ್ಶನ, ಕಸ್ತೂರಿ ಟಿವಿಚಾನೆಲ್‌ ಗಳ ಸುದ್ದಿ ವಿಭಾಗದಲ್ಲಿ ಕೆಲಸದ ಅನುಭವ. ಫ್ರೀಲಾನ್ಸರ್‌ ಆಗಿಯೂ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆ ಹವ್ಯಾಸ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ.


ಋತುಮಾನ ಒಂದು ಲಾಭರಹಿತ ಪ್ರಯೋಗ. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ instamojo.com/@Ruthumana

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ