ಜೋಳಿಗೆಯ ತುಂಬ ಬೆಳಕೆಂಬ ಬೀಜ – ಧಮ್ಮರಖ್ಖಿತ ಭಂತೇಜಿ

ದೇವನೂರು ಮಹಾದೇವ ಅವರು ಪ್ರಜಾವಾಣಿಯ ವಿಶೇಷ ಸಂಪಾದಕರಾಗಿ ಬರೆದ ಸಂಪಾದಕೀಯ “ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ” ಬರಹದ ಮೊದಲ ಚರಣದಲ್ಲಿ ಉಲ್ಲೇಖಿಸುವ ಎಸ್. ತುಕಾರಾಂ ಮಾಡಿರುವ, ಪ್ರೊ. ಎಂ. ಮರಿಸ್ವಾಮಿಯವರ ಸಂದರ್ಶನ ಹುಡುಕುತ್ತಾ ಹೋದಾಗ ಅದು ಪ್ರಕಟವಾಗಿದ್ದು, ೨೦೦೬ ರಲ್ಲಿ ನಡೆದ “ಬುದ್ಧನೆಡೆಗೆ ಮರಳಿ ಮನೆಗೆ” ಸಮಾವೇಶದ ನೆನಪಿನ ಸಂಚಿಕೆ “ಮರಳಿ ಮನೆಗೆ (ಪ್ರಧಾನ ಸಂಪಾದಕರು : ಮೂಡ್ನಾಕೂಡು ಚಿನ್ನಸ್ವಾಮಿ)” ಯಲ್ಲಿ ಎಂದು ಗೊತ್ತಾಯಿತು. ಈ ಸಂದರ್ಶನವನ್ನು ಕಳಿಸಿಕೊಟ್ಟ ತುಕಾರಾಂ ಅವರಿಗೆ ಋತುಮಾನ ಧನ್ಯ.

ಹಿಂದೂ ಅಸ್ಪೃಶ್ಯರಾಗಿ ಹುಟ್ಟಿದ ಪ್ರೊಫೆಸರ್ ಮರಿಸ್ವಾಮಿಯವರು ಬೌದ್ಧ ಬಿಕ್ಕು ಆಗಿ ನಿಧನರಾದರು.   ಸಂದರ್ಶಕರು: ಬಂತೇಜಿ ನಮಸ್ಕಾರ. ತಮಗೆ ಗೊತ್ತಿರೋ ಹಾಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧಧಮ್ಮ ಸ್ವೀಕಾರ ಮಾಡಿ ಇಲ್ಲಿಗೆ 50 ವರ್ಷಗಳು ಕಳೀತಾ ಇದೆ.  50 ವರ್ಷದ ಕಾಲ ದೊಡ್ಡ ಚರಿತ್ರೆ ನಿರ್ಮಾಣ ಮಾಡಿದೆ. ಇದರ ನೆನಪಿನಲ್ಲಿ ಮೈಸೂರಿನಲ್ಲಿ ಅವರ ಸಂದೇಶ ಮತ್ತು ತತ್ವಗಳು ಮತ್ತು ಬೌದ್ಧಧರ್ಮ ಸ್ವೀಕಾರದ ನೆನಪಿನ ಕಾರ್ಯಕ್ರಮ ಹಮ್ಮಿಕೊಂಡಿದೆ.  ಚಾರಿತ್ರಿಕ ಇತಿಹಾಸದ ದಾರಿಯಲ್ಲಿ ಅಂದರೆ ಅಂಬೇಡ್ಕರ್ ಹೋದ ದಾರಿಯಲ್ಲಿ ಹೋಗಬೇಕು ಅಂತ ಸಂಕಲ್ಪ ಮಾಡಿ ಹೊರಟಿರುವವರು ನೀವು. ಇಷ್ಟು ವರ್ಷಗಳಲ್ಲಿ ನಿಮಗೆ ಏನ್ ಅನಿಸಿದೆ.

ಭಂತೇಜಿ: ಬಹಳ ಸಂತೋಷ ತಮ್ಮಂತ ಬುದ್ಧಿಜೀವಿಗಳು ಈ ಬಗೆಗೆ ಒಲವಿಟ್ಟು ಇಲ್ಲಿಯವರೆಗೂ ಬಂದಿರೋದು ತುಂಬ ಸಂತೋಷವನ್ನು ಉಂಟುಮಾಡಿದೆ. ತಾವು ಏನು ಪ್ರಶ್ನೆಗಳನ್ನು ಕೇಳಿದರೂ ಸಾಧ್ಯವಾದಷ್ಟು ಉತ್ತರ ಕೊಡೋದಕ್ಕೆ ಪ್ರಯತ್ನಿಸುವೆ.

ಸಂದರ್ಶಕರು: ತಮ್ಮ ಪೂರ್ವಾಶ್ರಮದ ಹೆಸರು, ತಮ್ಮ ಊರು, ಹಿನ್ನೆಲೆ, ತಾವು ಬೆಳೆದು ಬಂದದ್ದು  ಬಗ್ಗೆ ಒಂದಷ್ಟು ಮಾಹಿತಿ ಕೊಡಿ.

ಭಂತೇಜಿ: ನಮ್ಮ ಪೂರ್ವಾಶ್ರಮದ ಹೆಸರು ಎಮ್.ಮರಿಸ್ವಾಮಿ ಅಂತ. ನನ್ನ ಹುಟ್ಟಿ ಊರು ಕೊಳತೂರು. ಟಿ.ನರಸೀಪುರ ತಾಲ್ಲೂಕ್ ನಲ್ಲಿ ಒಂದು ಕುಗ್ರಾಮ. ನನ್ನ ತಂದೆ ಮತ್ತು ನನ್ನ ತಾಯಿ ಇಬ್ಬರೂ ಅವಿದ್ಯಾವಂತರು ಕೂಲಿ ಜೀವನದಿಂದ ಅವರು ತಮ್ಮ ಬದುಕನ್ನ ನಡಿಸ್ತಾ ಇದ್ದರು. ನನ್ನ ತಂದೆ ತಾಯಿಗಳು ನನ್ನ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನ ಪಟ್ಟದ್ದು ಅವರಿಗೂ ಗೊತ್ತಿಲ್ಲಾ, ನನಗೂ ಗೊತ್ತಿಲ್ಲಾ. ಆಕಸ್ಮಿಕವಾಗಿ ಮಕ್ಕಳೆಲ್ಲಾ ಶಾಲೆಗೆ ಹೋಗ್ತಾ ಇದ್ದಾಗ ಅವರ ಜೊತೆಯಲ್ಲಿನಾನು ಹೋಗಬೇಕು ಅನ್ನೋ ಸ್ವಯಂ ಆಸಕ್ತಿಯಿಂದ ಆ ಸ್ಲೇಟನ್ನ ಹಿಡ್ಕಂಡು ನಾನೇ ಶಾಲೆಗೆ ಹೋದೆ. ತದನಂತರ ಬಹುಶಃ ಯಾವ ಕಾರಣದಿಂದಲೋ ಏನೋ ಉಪಾಧ್ಯಾಯರಿಗೆ ನಾನು ಆಪ್ತನಾದೆ. ಗುರುಗಳಿಗೆ ನನ್ನ ಮೇಲೆ ಪ್ರೀತಿ ಹುಟ್ಟಿ ಪಾಠ ಹೇಳೋದರ ಮುಖಾಂತರ ನನ್ನಲ್ಲಿ ಇದ್ದಂತಹ ಏನೋ ಒಂದು ಬುದ್ಧಿ ಶಕ್ತಿಯನ್ನು ಗಮನಿಸಿ ಮೈಸೂರಿನಲ್ಲಿ ಇರತ್ತಕ್ಕಂತಹ Boarding Home ಗೆ ಕಳುಹಿಸಿದ್ದು ನೆನಪಿದೆ.

ಸಂದರ್ಶಕರು: ನಿಮ್ಮ ತಂದೆ ಮತ್ತು ತಾಯಿಯ ಹೆಸರೇನು? ಬಾಲ್ಯ ಹೇಗಿತ್ತು?

ಭಂತೇಜಿ: ನಮ್ಮ ತಂದೆ ಮಾದಯ್ಯ, ನಮ್ಮ ತಾಯಿ ಹೆಸರು ಲಿಂಗಮ್ಮ. ಬಹುಶಃ ನಾನು ಅನುಭವಿಸಿರುವಂತಹ ಬಡತನವನ್ನು ತಾವ್ಯಾರೂ ಅನುಭವಿಸಿರೋದಕ್ಕೆ ಸಾಧ್ಯವಿಲ್ಲ.  ಆ Boarding Home ಗೆ ಸೇರಬೇಕಾದರೆ ಹರಕಲು ಶರ್ಟು, ಹರಕಲು ಚಡ್ಡಿ ಮಾತ್ರ ಇತ್ತು. ನನಗೆ ಹೊಸದಾಗಿ ಚಡ್ಡಿ ಮತ್ತು ಶರ್ಟನ್ನು ಹೊಲೆಸಬೇಕಾದರೆ ಯಾರ ಹತ್ತಿರಾನೋ 8 ದಿನಕ್ಕೆ ಬಡ್ಡಿ ಸಾಲ ಮಾಡಿ ನನ್ನಣ್ಣ ಬಟ್ಟೆ ಹೊಲೆಸಿ ಮೈಸೂರಿಗೆ ಕರಕೊಂಡು ಹೋಗಿ Boarding Home ಗೆ ಸೇರಿಸಿದ್ದು, ನನಗೆ ಇನ್ನೂ ಜ್ಞಾಪಕವಿದೆ.

ಸಂದರ್ಶಕರು: ನಿಮ್ಮಣ್ಣನ ಹೆಸರು? ಭಂತೇಜಿ: ನಮ್ಮಣ್ಣನ ಹೆಸರು ಚಿಕ್ಕಮಾದಯ್ಯ. ಸಂದರ್ಶಕರು: ಅವರು ಏನು ಮಾಡ್ತಾ ಇದ್ರು?

ಭಂತೇಜಿ: ಅವರು ಕೂಲಿ ಮಾಡ್ಕೊಂಡು ಜೀವನ ಮಾಡ್ತಾ ಇದ್ರು. ಈಗ ಅವರು ಇಲ್ಲ. ಬಹುಶಃ Boarding ಶಾಲೆಯಲ್ಲಿ ನನಗೆ Seat ಸಿಗದೇ ಇದ್ದಿದ್ರೆ ನನ್ನ ವಿದ್ಯಾಭ್ಯಾಸ ಮುಂದುವರಿತಾ ಇರಲಿಲ್ಲ.                    ನಂತರ ಬೆಂಗಳೂರಿನಲ್ಲಿ ನರಸಿಂಹರಾಜ hostel ನಲ್ಲಿ ಇದ್ದುಕೊಂಡು ಮಲ್ಲೇಶ್ವರಂ High School ನಲ್ಲಿ ನಾನು Study ಮಾಡಿದೆ. S.S.L.C. ಪಾಸಾದೆ. ನನ್ನ ವಿದ್ಯಾಭ್ಯಾಸ ಮಾಡಬೇಕಾದರೆ ಆಗಿನ ಕಾಲದಲ್ಲಿ free hostel ಗಳು ಮತ್ತು Scholarship ಗಳು ಇರಲಿಲ್ಲ. ಆವಾಗ ತಂದೆ ತಾಯಿಗಳು ಮತ್ತು ಅಣ್ಣತಮ್ಮಂದಿರು ಬಹಳ ಕಡುಬಡತನದಲ್ಲಿ ಇದ್ದಿದ್ದರಿಂದ ನನಗೆ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. 1949ರಲ್ಲಿ ನಾನು ಮಿಡ್ಲಿ ಸ್ಕೂಲ್ ನಲ್ಲಿ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಕೊಂಡೆ.

ಸಂದರ್ಶಕರು: ನೀವು Mysore  Boarding School ಗೆ ಹೋಗೋದಕ್ಕಿಂತ ಮುಂಚೆ  ದಿನಗಳು ನಿಮ್ಮ ಊರಿನಲ್ಲಿ ಹೇಗಿತ್ತು?

ಭಂತೇಜಿ: ನಮ್ಮ ಊರಿನಲ್ಲಿ ಹೆಸರೇ ಕೊಳತೂರು. ಅದು ಕೊಳೆತೂರು. ನೂರಾರು ಮನೆಗಳು ಆ ಊರಿನಲ್ಲಿ ಇದ್ದವು. ನನ್ನ ಬಾಲ್ಯದ ನೆನಪಿನಂತೆ ಎರಡೇ ಎರಡು ಹೆಂಚಿನ ಮನೆಗಳು ಇದ್ದವು. ಇನ್ನೆಲ್ಲಾ ಹುಲ್ಲು ಶೆಡ್. ನಾವಿದ್ದಂತಹ ಮನೆ ಒಂದು ಹುಲ್ಲು ಮನೆ. ಮೂರು ಸಂಸಾರಗಳು ವಾಸವಾಗಿದ್ದವು. ನಮ್ಮ ದೊಡ್ಡಪ್ಪಂದಿರು, ನಾವು. ಬಹುಶಃ ಆ ಮೂರು ಮನೆಗಳ ಪಾತ್ರೆಗಳನ್ನು ತೊಳೀತಿದ್ದದ್ದು, ಸ್ನಾನ ಮಾಡ್ತಾ ಇದ್ದದ್ದು ಒಂದು ಬಚ್ಚಲಿನಲ್ಲಿ. ಆ ಬಚ್ಚಲನ್ನ ಇವತ್ತೂ ನೆನಸಿಕೊಂಡರೆ ಕೆಂಗೇರಿಯ ಹತ್ತಿರ ಹರಿತಾ ಇರತಕ್ಕಂತಹ ಆ ಕೊಳಚೆ ನೀರು ನನಗೆ ಜ್ಞಾಪಕ ಬರುತ್ತೆ. ಅಂತಾ ಬಡತನದಲ್ಲಿ ನಾವು ಬೆಳೆದದ್ದು. 4ನೇ ಕ್ಲಾಸ್ ನವರೆಗೆ ಒಬ್ಬರೇ ಉಪಾಧ್ಯಾಯರು. ಆದ್ದರಿಂದ ನಮ್ಮನ್ನ ಪೂರಿಗಾಲಿ School ಗೆ ಸೇರಿಸುದ್ರು. ನಮ್ಮ ಉಪಾಧ್ಯಾಯರು ಮುದ್ದಲ ಮಾದಪ್ಪ ಅಂತ ಹೇಳಿ. ಇನ್ನೂ ಅವರನ್ನು ನಾನು ನೆನಪಿಸಿಕೊಳ್ತಿನಿ. ಅವರು ಈಗ ಇಲ್ಲ. ನಾನು ಶಾಲೆಗೆ ನಮ್ಮೂರಿನಿಂದ ಈಗಿನ ಲೆಕ್ಕದಂತೆ 5 ಕಿ.ಮೀ. ನಡಕೊಂಡೇ ಹೋಗ್ತಾ ಇದ್ವಿ. ದಿನಕ್ಕೆ 5 ಕಿ.ಮೀ. ಆ ಕಡೆಯಿಂದ ಮತ್ತು 5 ಕಿ.ಮೀ. ವಾಪಸ್ ಬರ್ತಾ ಇದ್ವಿ. ನಾನು S.S.L.C ಪಾಸಾಗಬೇಕಾದರೆ 19ನೇ ವರ್ಷ. ಆಗ Schoolಗೆ ಹೋಗಿ ಬರ್ತಾ ಇದ್ವಿ. ಮನೆಯಲ್ಲಿ ಬೆಳಿಗ್ಗೆ ಎದ್ದಾಗ ಊಟ ಇಲ್ಲ. ತಂಗಳು ಇಟ್ಟು ಇದ್ರೆ ಏನೋ ಒಂದು ಅರ್ಧ ಹಿಟ್ಟನ್ನ ಕೊಡೋರು. ಮಜ್ಜಿಗೆ ಇದ್ರೆ ಮಜ್ಜಿಗೆ ಹಾಕಿಸ್ಕೋಬೇಕು. ಬೇರೆ ವರ್ಣದವರು ನಮಗೆ ಹಾಲು ಕೊಡ್ತಾ ಇರಲಿಲ್ಲ. ಯಾಕೆಂದರೆ ನಮಗೆ ಹಾಲು ಕೊಟ್ರೆ ಹಸುಗಳು ರಕ್ತ ಕರೀತವೆ ಅನ್ನೋ ಒಂದು ಪದ್ಧತಿ ಮಾಡ್ಕೊಂಡು ನಮಗೆ ಹಾಲು ಸಿಕ್ತಿರಲಿಲ್ಲ. ಮುದ್ದೆಗೆ ನೀರನ್ನ ಹಾಕೊಂಡು ಉಪ್ಪು ಸೇರಿಸಿಕೊಂಡು ಅದನ್ನು ಕಲಸಿಕೊಂಡು, ಈರುಳ್ಳಿ ನಂಚಿಕೊಂಡು, ಅದನ್ನು ತಿಂದುಕೊಂಡು Schoolಗೆ ಹೋಗ್ತಿದ್ವಿ.

ಸಂದರ್ಶಕರು: ಇಡೀ ಊರಿನಲ್ಲಿ ಯಾವ್ಯಾವ ಜಾತಿ ಜನ ಇದ್ರು? ಭಂತೇಜಿ: ನಮ್ಮ ಊರಿನಲ್ಲಿ ಸುಮಾರು 100 ಮನೆಗಳು ನಮ್ಮ ದಲಿತರದಾದ್ರೆ ಸುಮಾರು 200 ಮನೆಗಳು ಉಪ್ಪಾರ ಶೆಟ್ಟಿಗಳದ್ದು. ಒಂದು 50 ಮನೆ  ಒಕ್ಕಲಿಗರದ್ದು. ಒಂದು 50 ಮನೆ ಕುರುಬರು. ಸಂದರ್ಶಕರು:ನಮ್ಮ ದಲಿತ ಜನಾಂಗದ ಜನರನ್ನ ಬೇರೆ ಇತರ ಜನಾಂಗದವರು ಯಾರು ಎಷ್ಟು ಪ್ರೀತಿಸ್ತಾ ಇದ್ರು. ನೀವು ಮಾತ್ರ ಇದ್ರಾ,  ನೆನಪುಗಳು ಬಗ್ಗೆ….

ಭಂತೇಜಿ: ನನಗೆ ಜ್ಞಾಪಕ ಇದೆ. ಯಾರ ಮನೆಯಲ್ಲಿ ಜೀತಗಾರರು ಇರ್ತಾರೋ, ಆ ಜೀತಗಾರರ ಮನೆ ಬಗ್ಗೆ ಒಲವನ್ನು ತೋರುತ್ತಾ ಇದ್ರು. ಯಾಕೆಂದರೆ ನಮ್ಮ ಅಣ್ಣಂದಿರು ಕೂಡ ಜೀತದಲ್ಲಿದ್ರು. ಆದ್ದರಿಂದ ಪಟೇಲರ ಮನೆಯವರು ನಮ್ಮ ಮನೆಯವರನ್ನ ಕಂಡ್ರೆ ಒಲವನ್ನ ತೋರ್ತಾ ಇದ್ರು. ನನ್ನನ್ನ ಕಂಡ್ರು ಸ್ವಲ್ಪ ಒಲವಿತ್ತು. ಯಾಕೆಂದರೆ ನಾನು ಓದುತ್ತಾ ಇದ್ದೆ, ಸ್ವಲ್ಪ ತೆಳ್ಳಗೆ ಬೆಳ್ಳಗೆ ಇದ್ದೆನಂತೆ. ನಾನು ಹಾಗಿದ್ದಕ್ಕೆ ಪ್ರೀತಿಯಿಂದ ಕರೆದು ನನಗೂ ಊಟ ಹಾಕಿದ್ದಾರೆ. ಕೊಟ್ಟಿಗೆನಲ್ಲಿ ಕೂತ್ಕೊಂಡು ಊಟ ಮಾಡಿದ್ದು ನನಗೆ ಇನ್ನೂ ನನ್ನ ಮನಸ್ಸಿನಲ್ಲಿ ಹಾಗೆ ಉಳಿದಿದೆ. ಯಾರು ಕೂಡ ನಮ್ಮ ಜನಾನ ಪ್ರೀತಿಯಿಂದ ಕಾಣ್ತಾ ಇದ್ದದ್ದು ನನಗೆ ನೆನಪೇ ಇಲ್ಲ. ನಮ್ಮ ಮನೇನಲ್ಲಿ ಒಂದು ಹಸುನಾ ಸಾಕೊಂಡಿದ್ದು, ಅದು ಹಾಲು ಕೊಡುತಾ ಇದ್ದುದ್ದನ್ನ ಬ್ರಾಹ್ಮಣಗೇರಿನಲ್ಲಿ, ಅದು ರಸ್ತೇನಲ್ಲೇ ಬ್ರಾಹ್ಮಣರೇನೆ ಹಾಲು ಕರಕೊಳ್ಳುತ್ತಿದ್ದರು.

ಸಂದರ್ಶಕರು: ನೀವು ಕರಿಯೋ ಹಾಗೆ ಇರಲಿಲ್ವಾ. ಭಂತೇಜಿ: ಹಸುನ ಹಿಡ್ಕೊಂಡು ಹೋಗೋದಷ್ಟೆ. ಕರೆಯುವಂತಿರಲಿಲ್ಲ. ಹಸುನಾ ನಾವು ಮುಟ್ತಾ ಇದ್ವಿ, ಹುಲ್ಲು ಹಾಕ್ತಾ ಇದ್ವಿ, ನೀರು ಕುಡಿಸ್ತಾ ಇದ್ವಿ. ಅಷ್ಟೆ. ಆದ್ರೆ ಹಾಲು ಕರೆದುಕೊಳ್ಳುವಾಗ ಬ್ರಾಹ್ಮಣರೇ ಕರೆದುಕೊಳ್ಳುತ್ತಾ ಇದ್ರು. ಸಂದರ್ಶಕರು; ಅದಕ್ಕೆ ದುಡ್ಡೇನಾದ್ರು ಕೊಡ್ತಾ ಇದ್ರಾ.

ಭಂತೇಜಿ: ಹೌದು ದುಡ್ಡು ಕೊಡ್ತಾ ಇದ್ರು. ಮತ್ತು ಒಂದು ದಿನ ಆಕಸ್ಮಿಕವಾಗಿ ನಮ್ಮ ಕರು ನನ್ನನ್ನೇ ತಿವಿಯೋಕೆ ಅಟ್ಟಿಸಿಕೊಂಡು ಬಂತು. ನಾನು ತಕ್ಷಣ ಹಾಲು ಕರ್ಕೊಳ್ತಾ ಇದ್ದಂತಹ ಶ್ಯಾಮಪ್ಪ ಅನ್ನೋ ಬ್ರಾಹ್ಮಣನನ್ನ ತಬ್ಬಿಕೊಂಡುಬಿಟ್ಟೆ. ಆಗ ಅವನು ಸಿಟ್ಟಿನಿಂದ ನನಗೆ ಹೊಡೆದು ಮತ್ತೆ ಹಿಂದಕ್ಕೆ ಹೋಗಿ ಅವನು ಸ್ನಾನ ಮಡಿ ಮಾಡಿಕೊಂಡ. ಆ ಜ್ಞಾಪಕ ಹಾಗೇ ಉಳಿದಿದೆ.

ಸಂದರ್ಶಕರು: ಅಲ್ಲಿ ಪೂರಿಗಾಲಿ School ನಲ್ಲಿ  ಮೇಷ್ಟ್ರು ಬಗ್ಗೆ ಸ್ವಲ್ಪ ಹೇಳ್ತಾ ಇದ್ರಿ, ಹೇಳಿ……

ಭಂತೇಜಿ: ಮುದ್ದು ಮಾದಪ್ಪ ಅಂತ ಉಪಾಧ್ಯಾಯರು ಅವರು, ಪೂರಿಗಾಲದವರೇನೆ. ನಮ್ಮ ಊರಿಗೆ Teacher ಆಗಿ ಬರ್ತಾ ಇದ್ರು. ಬಹುಶಃ ಅವರು ನಮ್ಮವರೇ ಆಗ್ದೆ ಇದ್ದಿದ್ದರೆ ನನ್ನ ಮೇಲೆ ಅಷ್ಟು ಪ್ರೀತಿ ಬರೋದಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಒಬ್ಬರೇ ಉಪಾಧ್ಯಾಯರಿದ್ದಿದ್ದರಿಂದ 4 Class ಗಳನ್ನು ನೋಡಿಕೊಳ್ಳಲು ಕಷ್ಟ ಆಗುತ್ತೆ ಅಂತ ಹೇಳಿ 4ನೇ ತರಗತಿಗೆ ಪೂರಿಗಾಲಕ್ಕೆ ಕಳಿಸಿದ್ರು. ಪೂರಿಗಾಲದಲ್ಲಿ ಹೋಗಿ ಓದಬೇಕಾದರೆ ಅಲ್ಲಿ ಎಂ. ಲಿಂಗಪ್ಪ ಅಂತ ಹೇಳಿ ಮಳವಳ್ಳಿಯವರು ಹೆಡ್ ಮಾಸ್ಟ್ರು. ಕ್ಲಾಸನ್ನ ತಗೋತಾ ಇದ್ರು. ಬಹುಶಃ ಈಗ ನೆನಸಿಕೊಂಡ್ರೆ ನಾನು ಬುದ್ದಿವಂತ ಆಗಿದ್ದನೇನೋ. ಯಾಕೆಂದರೆ ಅವರು ಮಕ್ಕಳಿಗೆ ಹೊಡಿಬೇಕಾದರೆ ಭೂತಾಳೆಯನ್ನ ಸಿಗಿದು ಒಣಹಾಕೊಂಡು ಇಟ್ಕೊತಾ ಇದ್ರು. ಓದದೆ ಇದ್ದವರಿಗೆ ಅದರಲ್ಲಿ ಹೊಡಿತಾ ಇದ್ರು. ಎಂದೂ ನಾನು ಅವರಿಂದ ಏಟನ್ನು ತಿಂತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ಹುಡುಗರೆಲ್ಲರನ್ನು Classನಿಂದ ಆಚೆ ಹೊರಗಡೆ ನಿಲ್ಲಿಸಿದ್ರು. ಊರಿನವರು ಬಂದು ಯಾಗೆ ಈ ಹುಡುಗರ್ ಎಲ್ಲರನ್ನು ಕ್ಲಾಸ್ ನಿಂದ ಆಚೆ ನಿಲ್ಲಿಸಿದ್ದೀರಿ? ಅಂದಿದ್ದಕ್ಕೆ ಇವರೆಲ್ಲರೂ ಓದಿಲ್ಲ. ನೋಡಿ ಈ ಒಬ್ಬ ಹುಡುಗ 5 ಕಿ.ಮೀ. ದೂರದಿಂದ ಬರ್ತಾನೆ. ಇಲ್ಲಿಗೆ ಇವನೊಬ್ಬ ಮಾತ್ರ ಓದಿಕೊಂಡು ಬರ್ತಾನೆ ಅಂತ ಹೇಳಿದ್ದು ನನಗೆ ಇನ್ನೂ ನೆನಪಿದೆ. ಅವರೇ Mysore Boarding School ಗೆ application ಹಾಕಿ ನನ್ನನ್ನ ಸೇರಿಸಿದ್ರು ಅನ್ನಿಸುತ್ತೆ. ಅದಾದ ನಂತರ ನರಸಿಂಹರಾಜ ಹಾಸ್ಟೆಲ್ ಸೇರಿದೆ. S.S.L.C ಆದ ಮೇಲೆ ಅಲ್ಲಿಗೆ ಬಿಟ್ಟು ಉಪಾಧ್ಯಾಯನಾಗಿ ಸೇರಿಕೊಂಡೆ.

ಸಂದರ್ಶಕರು: ಯಾವ ಶಾಲೆಯಲ್ಲಿ ತಾವು ಉಪಾಧ್ಯಾಯರಾಗಿದ್ರಿ? ಎಲ್ಲೆಲ್ಲಿ ಕೆಲಸ ಮಾಡಿದ್ದಿರಿ?

ಭಂತೇಜಿ: ನಾನು ನಾನಾ ಕಡೆ ವರ್ಕ್ ಮಾಡಿದ್ದೇನೆ. ಬನ್ನೂರಿನಲ್ಲಿದ್ದೆ, ನರಸೀಪುರದಲ್ಲಿದ್ದೆ, ಹೀಗೆ ಕೆಲವು ಕಡೆಯಲ್ಲಿ ಮಾಡಿದ್ದೀನಿ. ಸುಮಾರು 15 ವರ್ಷ ಉಪಾಧ್ಯಾಯನಾಗಿ ಕೆಲಸ ಮಾಡಿದ್ದೀನಿ. ಆದರೆ ಎಲ್ಲಿ ಹೋದರೂ ವಾಸಕ್ಕೆ ಮನೆ ಸಿಗುತ್ತಿರಲಿಲ್ಲ. ನನಗಷ್ಟಕ್ಕೆ ಮದುವೆಯಾಗಿತ್ತು. ನಮ್ಮದೇ ಬೀದಿಗಳಲ್ಲಿ ಅವರಿಗೇ ಮನೆ ಇಲ್ಲ, ನನಗೆಲ್ಲಿ ವ್ಯವಸ್ಥೆ ಮಾಡಿಕೊಡಲು ಸಾಧ್ಯ. ಯಾವುದಾದರೂ ಜಗಲಿ ಮೇಲೆ ನೆರಕೆ ಕಟ್ಟಿಕೊಳ್ಳಿ ಅಂತಾ ಹೇಳ್ತಾ ಇದ್ರು. ಆಗ ಒಂದು ಆಲೋಚನೆ ಹೊಳೆಯಿತು. ಆಗಿನ ಕಾಲದಲ್ಲಿ ನಾನು ಏನಾದ್ರೂ ಹಿಂದಿ ಕಲಿತು ಹೈಸ್ಕೂಲ್ ಮೇಷ್ಟ್ರಾದ್ರೆ town ನಲ್ಲಿ ವಾಸ ಮಾಡಬಹುದು ಅಂತ ಹೊಳಿತು. ಬಾಡಿಗೆ ಮನೆ ಸಿಗಬಹುದು ಅಂತ ಆಸೆಯಾಯ್ತು. ಆಗ ನನ್ನ ಆಸೆಗೆ ಜೀವ ನೀಡಿದವರು ಹಿಂದಿ ಮೇಷ್ಟ್ರು ಕೇಶವಮೂರ್ತಿ ಅನ್ನೋರು. ಅವರಿಗೆ ನನ್ನ ಬಗ್ಗೆ ಬಹಳ ಒಲವು. ನನಗೆ ಅವರು ಹಿಂದಿಯನ್ನು ಕಲಿಸುದ್ರು.

ಕೇಶವಮೂರ್ತಿಯವರು ನನ್ನ ಬಗ್ಗೆ ಅಷ್ಟು ಒಲವನ್ನು ಯಾಕೆ ತೋರಿದ್ರು ಅನ್ನೋದು ನನಗೆ ಆ ಕಾಲದಲ್ಲಿ ಅರ್ಥ ಆಗಲಿಲ್ಲ. ಅವರು ಸಹಜವಾಗಿ ಸಜ್ಜನರು ಆದರೆ ಅವರು RSSನವರಾಗಿದ್ದು, ನನ್ನನ್ನ RSSಗೆ ಎಳೀಬೇಕು ಅಂತ. ಇದು ಅರ್ಥವಾಗಬೇಕಾದರೆ ಅನೇಕ ವರ್ಷಗಳು ಹಿಡಿಯಿತು.  ಆದರೂ ಅವರು ಹೇಳ್ತಾ ಇದ್ರು. ನಿಮ್ಮ ಶ್ರಮ ಒಳ್ಳೇದಿದೆ, ನೀವು ಬಹಳ ಚೆನ್ನಾಗಿ ಕಲೀತೀರಿ. ನೀವು ಶ್ರಮಪಟ್ಟು ಓದಿ ಅಂತ ಹೇಳಿ ನನಗೆ ಕಲಿಸ್ತಾ ಬಂದ್ರು. ಮೈಸೂರ್ ನಲ್ಲಿ ಹಿಂದಿ ವಿದ್ವಾನ್ ಅಂತ ದು ಕೋರ್ಸ್ ಆಗ ಇತ್ತು. ನಾವು ನಾವು ಹಿಂದಿ ಕಲಿತು, ಪ್ರಥಮ, ಮಾಧ್ಯಮ, ರಾಷ್ಟ್ರಭಾಷೆ ಅಂತಕ್ಕಂತಹ exam ಪಾಸ್ ಮಾಡಿದ್ದರಿಂದ ನಮಗೆ ಆ ಪರೀಕ್ಷೆ ತಗೊಳಕ್ಕೆ ಪರ್ ಮಿಷನೇ ಇತ್ತು. ನನಗೆ ಹಿಂದಿ ಕಲಿಸಿದಂತಹ ಗುರು ಮತ್ತು ನಾನು ಇಬ್ಬರೂ ಕೂಡ ಆ examination ಅಪ್ಲಿಕೇಶನ್ ಹಾಕಿದ್ವಿ. Result ಬಂದು ನನಗೆ orders ಬಂದಾಗ ಆ ಆರ್ಡರ್ ನಲ್ಲಿ ನೋಡ್ತೀನಿ ನನಗೆ 1st Place ಕೊಟ್ಟಿದ್ರು. ನನಗೆ ಹಿಂದಿ ಕಲಿಸಿದಂತಹ ಗುರು ಬ್ರಾಹ್ಮಣರಿಗೆ ಸೀಟ್ ಸಿಕ್ಕಿರಲಿಲ್ಲಾ. ಏನು ಸುಯೋಗವೋ ಏನೋ ಗೊತ್ತಿಲ್ಲಾ ಹಿಂದಿ ವಿದ್ವಾನ್ ಕೋರ್ಸ್ ನಲ್ಲಿ ತೇರ್ಗಡೆಯಾಗಿದ್ದೆ.

ಅಷ್ಟರಲ್ಲಿ ನನಗೆ ಮದುವೆಯಾಗಿ ಒಂದು ಹೆಣ್ಣು ಮಗೂನೂ ಕೂಡ ಇತ್ತು. ಆವಾಗ ರಾಜೇಂದ್ರ ನಗರದಲ್ಲಿ ಕೆಸರೆ ಅಂತ ಅಲ್ಲಿ ಒಂದು ಮನೆನಾ ಕೇವಲ 12 ರೂ. ಬಾಡಿಗೆ ಮಾಡಿಕೊಂಡು ಇದ್ದೆ. ಆ ಬಡತನದಲ್ಲಿ ನನಗೆ ಬರುತ್ತಿದ್ದಂತಹ ಸಂಬಳ 75 ರೂಪಾಯಿ. ಆ 75 ರೂ. ನಲ್ಲಿ ನನ್ನ ಹೆಂಡ್ತಿ ಒಂದು ಮಗು ಜೊತೆಗೆ ನನ್ನ ಭಾಮೈದ. ಅವನು MBBSಗೆ ಸೇರಿಕೊಂಡ. ಅವನನ್ನು ಮನೆಯಲ್ಲಿ ಇಟ್ಟುಕೊಂಡು ವಿದ್ಯಾಭ್ಯಾಸನ ಪ್ರಾರಂಭ ಮಾಡಿಸಿದೆ. ನನ್ನ ಸುಯೋಗ ಹ್ಯಾಗ್ ಬಂತು ಅಂದ್ರೆ ಅದೇ ವರ್ಷ ಇವನಿಂಗ್ ಕಾಲೇಜ್ Open ಆಯಿತು. ಮಹಾರಾಜ ಕಾಲೇಜ್ ಈ ಕಡೆ ಬೆಳಿಗ್ಗೆ 10 ಗಂಟೆಯಿಂದ 5ಗಂಟೆ ತನಕ ಹಿಂದಿ ವಿದ್ವಾನ್ ನಲ್ಲಿ study ಮಾಡಿ ನಂತರ 5.30 ಯಿಂದ 9.30 ತನಕ ಅಲ್ಲಿ ಮಹಾರಾಜ evening college ಸೇರ್ಕೊಂಡು ಈ ರೀತಿ ವಿದ್ಯಾಭ್ಯಾಸಾನ ಮಾಡ್ತಾ ಬಂದೆ. ಆದರೆ ಆಗ control ಸೀಸನ್ ಸರಿಯಾಗಿ ಅಕ್ಕಿ, ರಾಗಿ ದೊರೆಯುತ್ತಿರಲಿಲ್ಲ. ಮುದ್ದುಮುಲ್ಲಾಚಾರರು ಮತ್ತು ಎಂ.ಜಿ ರಾಮನರಸಯ್ಯ ಅಂತಕ್ಕಂತ ಸ್ನೇಹಿತರು ನಾನ್ ಅವತ್ತು ಅವರ ಹತ್ತಿರ ಸ್ವಾಭಿಮಾನದಿಂದ ಸಾಲ ಕೇಳದೆ ಇದ್ರೂ ಕೂಡ ಪರಿಸ್ಥಿತಿನಾ ಅರ್ಥ ಮಾಡಿಕೊಂಡು ತಮ್ಮ ಕಾರ್ಡ್ ಗಳಲ್ಲಿ ಕೆಂಪಿನ ಜೋಳವನ್ನ ಖರೀದಿ ಮಾಡಿ ನಮ್ಮ ಮನೇಗೆ ತಗೊಂಡು ಹೋಗಿ ಕೊಟ್ಟು ನನ್ನ ಹೆಂಡ್ತಿಗೆ ಇಲ್ಲಮ್ಮ ಅವರು ಹೇಳಿದ್ರು ನಮಗೆ ತಂದು ಕೊಟ್ಟಿದ್ದೀವಿ ಇದನ್ನ ಇಟ್ಟುಕೊಳ್ಳಿ ಅಂತ ಹೇಳ್ಬಿಟ್ಟು ಬರ್ತಿದ್ರು. ಆದರೆ ನಿಜಕ್ಕೂ ನಾನು ಅವರಿಗೆ ಹೇಳೇ ಇರ್ತಿರ್ಲಿಲ್ಲ. ಆ ರೀತಿಯಾಗಿ ನಮ್ಮ ವಿದ್ಯಾಭ್ಯಾಸ ನನ್ನ ಗೆಳೆಯರ ಒತ್ತಾಸೆಯಲ್ಲಿ ಮುಂದುವರಿಯಿತು. ನಮ್ಮ ಅದೃಷ್ಟ ಚೆನ್ನಾಗಿತ್ತು. ನಾಲ್ಕು ವರ್ಷ ನಂತರ ನಾನು ಹಿಂದಿ ವಿದ್ವಾನ್‌ನಲ್ಲಿ ಕೂಡ ಪಾಸಾದೆ. ಈ ಕಡೆ ಡಿಗ್ರಿನಲ್ಲೂ ಪಾಸಾದೆ.

ಸಂದರ್ಶಕರು: B.A.ನಲ್ಲಿ ಯಾವುದು ಓದುತ್ತಾ ಇದ್ರಿ? ನಂತರದ ಅನುಭವ

ಭಂತೇಜಿ: B.A. ನಲ್ಲಿ ನಾನು Subjects ತಗೊಂಡಿದ್ದದ್ದು ಎರಡೇ ಮೇಜರ್ ಇದ್ದದ್ದು. ಒಂದು ಹಿಂದಿ ಇನ್ನೊಂದು ಮೇಜರು. ಹಿಂದಿ ನಾನು ಮೊದಲೇ ಓದುತಾ ಇದ್ದಿದ್ದರಿಂದ ಅದು ನನಗೆ ಸಹಾಯಕ್ಕಾಯಿತು. ಈ ಮಧ್ಯೆ ಒಂದು ವಿಚಾರನ ನಾನು ತಮಗೆ ತಿಳಿಸೋಕೆ ಇಚ್ಛೆ ಪಡ್ತಿನಿ. ನನ್ನ 28ನೇ ವಯಸ್ಸಿನಲ್ಲೇ ಮದುವೆ ಆಗಿದ್ರು. ನನಗೆ ಅಧ್ಯಾತ್ಮಿಕ ಒಲವು ಇತ್ತು. ನಾನು ಬೆಂಗಳೂರಿನಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾ ಇದ್ದೆ. ಆಗ  ರಮಾನಂದ ಸ್ವಾಮಿಗಳು ಅಂತ ಯೋಗಿಗಳು ಇದ್ರು. ಅವರು ನನಗೆ ಪರಿಚಯ ಇರಲಿಲ್ಲ. ಅವರ ಬಗ್ಗೆ ಬಹಳ ಜನ ಹೇಳ್ತಾ ಇದ್ರು. ನಾವು ಮೂರು ಜನ ಸ್ನೇಹಿತರು ಹೋದ್ವಿ. ಟಿ.ರಂಗಯ್ಯ ಅಂತ ಒಬ್ಬರು, ದಾಸಯ್ಯ, ನಾವು ಮೂರು ಜನಾನೂ ಅವರನ್ನ ಹೋಗಿ ನೋಡಬೇಕಲ್ಲಾ ಅಂತ ನಿರ್ಧರಿಸುತ್ತ ಆಮೇಲೆ ಮೂರು ಜನಾನೂ ಯೋಗಿಗಳನ್ನಾ ನೋಡೋದಕ್ಕೆ ಹೋದ್ವಿ. ಆ ಯೋಗಿಗಳು ಹ್ಯಾಗಿದ್ರು ಅಂದ್ರೆ ಬರೀ ಮೈ. ಒಂದು ತುಂಡು ಪಂಚೆನಾ ಸುತ್ತಿಕೊಂಡು ಒಬ್ಬರ ಜೊತೆ ಮಾತಾಡ್ತಾ ಇದ್ರು. ನನ್ನ ಕಲ್ಪನೆ ಏನಾಗಿತ್ತು ಅಂದ್ರೆ, ಅದ್ಭುತವಾದಂತ ಒಂದು ಶರೀರಾ ಒಂದು ಕೆಂಪಿನ ಪೇಟ, ರುದ್ರಾಕ್ಷಿ ಸರ ಇದನ್ನೆಲ್ಲಾ ಹಾಕಂಡು ಇರುತ್ತಾರೆ ಅಂತ ನಾನು ತಿಳಿದುಕೊಂಡಿದ್ದೆ. ಅವರನ್ನು ನೋಡಿದ ಕೂಡಲೇ ನನಗೆ ಹೆಂಗೆ ಕಂಡ್ರು ಅಂದ್ರೆ ಅಕ್ಕಸಾಲಿಗ ಇರುತಾನಲ್ಲ; ಆಚಾರಿ ಆ ರೀತಿ ಕಂಡ್ರು. ಆಗ ಅವರು ನಮ್ಮನ್ನ ನೋಡಿದ ಕೂಡಲೇ ನೀವು ಶಾಸ್ತ್ರ ಕೇಳೋದಕ್ಕೆ ಬಂದಿರೋರಲ್ವ. ಅಂದು ಸ್ವಲ್ಪ ಟೀ ಕುಡಿದುಕೊಂಡು ಬರ್ತೀನಿ ಕೂತ್ಕೊಳ್ಳಿ ಅಂದು ಒಳಕ್ಕೆ ಹೋಗಿ ಬಂದ್ರು. ಆಗ ನನಗೆ ಇವರು ಸ್ವಾಮಿಗಳು ಅಂತ ಗೊತ್ತಾಯ್ತು. ಅಷ್ಟರಲ್ಲಿ ನನ್ನ ಮನಸ್ಸಿನಲ್ಲಿ ಏನೋ ಉತ್ಪತ್ತಿ ಆಗ್ತಾ ಇತ್ತು. ಅದನ್ನು ರೀಡಿಂಗ್ ಮಾಡೋ ಕೆಪ್ಯಾಸಿಟಿ ಅವರಲ್ಲಿ ಇತ್ತು. ಇಂತ ಒಬ್ಬ ಯೋಗಿಗಳ ಬಳಿ ಬಂದದ್ದು ಕೂಡ ನಮ್ಮ ಪುಣ್ಯ ಅನ್ನಿಸಿತು. ಮಾತನಾಡುತ ಕುಳಿತಿರುವಾಗ ಅವರು ಮುಂದೆ ಯಾರೋ ಒಂದು ಸ್ವಲ್ಪ ಕಾಸು, ಕೆಲವು ಹಣ್ಣು, ಅದನ್ನ ಇಟ್ರು. ಈ ಮೂರನ್ನು ಬಿಟ್ಟವರು ಯೋಗಿಗಳು ಅಂತಾರೆ ಇವರಿಗೆ ಕಾಸ್ಮಾಕೆ ಅಂತ ನನ್ನ ಮನಸ್ಸಿನಲ್ಲಿ ಪ್ರಶ್ನೆ ಬಂತು. ಅವರು ______________ ನನ್ನನ್ನು ನೋಡದೆ ಇಲ್ಲೊಬ್ಬ ಪ್ರಶ್ನೆ ಕೇಳ್ತಾ ಇದ್ದಾನೆ. ಈ ಕ್ಲಾಸ್ ಯಾಕೆ, ಅಲ್ಲಪ್ಪ ನೀನು ನೌಕರಿನಲ್ಲಿ ಇದ್ದೀಯ ನಿನಗೂ ಕೂಡ ಹೊಟ್ಟೆ ಹಸಿವಿದೆ ನಿನ್ನ ಹೊಟ್ಟೆ ಹಸಿವನ್ನ ನೀಗಿಸೋದಕ್ಕೆ ನಿನಗೆ ಬರೋ ಸಂಬಳದಲ್ಲಿ ಜೀವನ ಮಾಡ್ತೀಯಾ. ಆದರೆ ನಿನ್ನಂತೆ ನನಗೂ ಹೊಟ್ಟೆ ಹಸಿವಿದೆ. ನಿನ್ನಂಗೆ ನನ್ನನ್ನ ನಂಬಿರೋ ಭಕ್ತರು ನನಗೆ ಅದನ್ನ ಕೊಡ್ತಾರೆ. ಅದರಿಂದ ನಾನು ಜೀವನ ಮಾಡ್ತೀನಿ ಅಂತ ಹೇಳಿದ್ರು. ಇದು ಅವರು ನನಗೆ ಕೊಟ್ಟಂತಹ ಮೊದಲನೆ ಉತ್ತರ. ನಾನು ತಕ್ಷಣ ಆಕರ್ಷಣೆ ಆಗಿಬಿಟ್ಟೆ. ಯೋಗಿಯಾದವರು ಭಂಗಿ ಯಾಕೆ ಸೇದುತಾರೆ ಅಂತ ನನ್ನ ಮನಸ್ಸಿನಲ್ಲಿ ಅನ್ಕೊಂಡೆ. ಆಗ ಅವರು ಪುನಃ ಅವರು ನಕ್ಕುಬಿಟ್ಟು ಅಲ್ಲಯ್ಯ ಪ್ರಕೃತಿ ಸೌಂದರ್ಯ ಇರಬಹುದು. ನಿನ್ನನ್ನ ಎಷ್ಟು ಚೆನ್ನಾಗಿ attract ಮಾಡುತ್ತೋ ನನ್ನನ್ನೂ attract ಮಾಡುತ್ತೆ. ನಾನಿನ್ನೂ ಸಿದ್ದಿ ಪುರುಷ ಅಲ್ಲಾ, ಇದರಿಂದ ತಪ್ಪಿಸ್ಕೋಬೇಕಾದರೆ ನನಗೆ ಈ ಭಂಗಿಯ ಅವಶ್ಯಕತೆ ಇದೆ. ನಾನು ಸಿದ್ದಿಪುರುಷನಾದ್ರೆ ಇದನ್ನ ಬಿಡ್ತೀನಿ ಅಂದ್ರ, ಇದು ನನಗೆ ಬಿದ್ದಂತಹ ಎರಡನೇ ಏಟು. ಹೀಗೆ ನಾವು ಮಾತನಾಡುತಾನೆ ಕುಳಿತಿದ್ವಿ. ಯಾರೋ ಒಬ್ಬರು ಆಗಲೇನೆ 50-60 ವಯಸ್ಸಾದಂತ ಮನುಷ್ಯ ಬಂದು ಕೂತ್ಕೊಂಡ… ಕೂತ್ಕೊಂಡಾಗ ಅವನು ತಮಾಷೆ ಮಾಡಿಕೊಂಡು ಸ್ವಾಮಿಗಳ ಜೊತೇಲಿ – ಇಂಥವರು ಆಗೋ ಹೊತ್ತಿಗೇ ನಮ್ಮ ತಾಯಿನ 12 ಗಂಟೆಗೆ ಸಾಯಿಸಿದ್ರಿ ಅಂತ ಅವನು ಹೇಳಿದ.  ಅದರ ಅರ್ಥ ಏನಂದ್ರೆ ಅವರ ತಾಯಿಗೆ ಕಾಯಿಲೆ ಆಗಿತ್ತಂತೆ. ನಿಮ್ಮ ತಾಯಿ 12 ಗಂಟೆಗೆ ಸತ್ತೋಗುತ್ತಾರೆ ಹೇಳಿದ್ರಂತೆ ಸ್ವಾಮೀಜಿ. ಅದೇ ಪ್ರಕಾರ ಅವಳು ಸತ್ತಿದ್ದು. ನನಗೆ ತಕ್ಷಣ ನಮ್ಮ ತಾಯಿ ನೆನಪಾಯ್ತು. ಏಕೆಂದರೆ ನಮ್ಮ ತಾಯಿ ಆಗಲೇ ಸತ್ತೋಗಿದ್ರು. ಬಹುಶಃ ನಮ್ಮ ತಂದೆ ಮತ್ತು ತಾಯಿ ಇಬ್ಬರಲ್ಲಿ ನಾನು ಎಂದೆಂದು ಮರೀದೇ ಇರತಕ್ಕದ್ದು ನನ್ನ ತಾಯಿನ ಮಾತ್ರ. ಅವರು ಆಗ ನಮ್ಮ ತಾಯಿನ ನೆನಸಿಕೊಂಡೆ. ಈ ಸ್ವಾಮೀಜಿ ಹೇಳಿದ್ರು. ಅಯ್ಯೋ ಹುಚ್ಚ ಇಲ್ಲಿ ಒಬ್ಬ ನಮ್ಮ ತಾಯಿ ಸತ್ತ ಅಂತ ಅಳುತ್ತಾನೆ. ಇನ್ನೊಬ್ಬ ನನಗೆ ಗಂಡು ಮಗು ಹುಟ್ಟಿತು ಅಂತ ಮುದ್ದಾಡುತ್ತಾನೆ. ಯಾರಿಗೆ ಮಗ, ಯಾರಿಗೆ ತಾಯಿ ಆಗ ನನಗೆ ಉತ್ತರ ಸಿಕ್ಕಿಬಿಡ್ತು. ನಾನು ಸುಮ್ಮನೆ ಆಗಿಬಿಟ್ಟೆ. ಹೀಗೆ ಮಾತನಾಡುತ ಕೂತಿರಬೇಕಾದರೆ ಸಾಯಂಕಾಲ ಆಗಿಬಿಟ್ಟಿದೆ. ಇನ್ನೂ ಅನೇಕ ವಿಚಾರಗಳು ನಡೆದಿದೆ. ಅದನ್ನೆಲ್ಲಾ ನೋಡುತ ಇಲ್ಲಿ ಒಬ್ಬ ಕುಳಿತಿದ್ದಾನೆ. ಆದರೆ ಅವನ ಮನಸ್ಸು wait for wait for ಅಂತ ಮನೆ ನೆನಸ್ತಾ ಇದೆ. ಇದೇ ಶಬ್ದ ಅವರು ಹೇಳಿದ್ದು wait for wait for ಅಂತ, ಎದ್ದು ಹೋಗಿ ಅಂದ್ರು. ಯಾರಿಗೆ ಹೇಳಿದ್ರು ಅಂತ ನಮಗೆ ಗೊತ್ತಾಗಲಿಲ್ಲಾ. ಒಬ್ಬರ ಮುಖವನ್ನ ಒಬ್ಬರು ನೋಡಿಕೊಂಡ್ವಿ. ಈ ಮಾತು ರಂಗಯ್ಯನವರಿಗೆ ಹೇಳಿದ್ದು. ಯಾಕಂದ್ರೆ ಅವರಿಗೆ ಅವರ ಹೆಂಡ್ತಿ ಕಾಯ್ತಾ ಇದ್ರು.

ಸಂದರ್ಶಕರು : ರಮಾನಂದ ಸ್ವಾಮಿಗಳ ಹಿನ್ನೆಲೆ ಏನಾದ್ರು ಗೊತ್ತ ತಮಗೆ.

ಭಂತೇಜಿ: ಇಲ್ಲಾ ಅವರ ಹಿನ್ನೆಲೆ ಏನು ನಮಗೆ ಗೊತ್ತಿಲ್ಲಾ. ಆಕಸ್ಮಿಕವಾಗಿ ಭೇಟಿಯಾದದ್ದು. ಆದರೆ ಅವರಿಗೆ ಜಾತೀಯತೆ ಇರಲಿಲ್ಲ.

ಸಂದರ್ಶಕರು:ಅಂದರೆ ನಿಮಗೆ ರಮಾನಂದ ಸ್ವಾಮಿಯವರ ಪ್ರಭಾವದಿಂದ ಆಧ್ಯಾತ್ಮಿಕ ಒಲವು ಇನ್ನೂ ಇಮ್ಮಡಿಸಿತು ಅಂತೀರಾ?

ಭಂತೇಜಿ: ಹೌದು ನನ್ನಲ್ಲಿದ್ದ ಆಧ್ಯಾತ್ಮ ಇನ್ನೂ ಇಮ್ಮಡಿಸಿತು. ಸಂದರ್ಶಕರು: ನೀವು ಬೌದ್ಧ ಧರ್ಮ ಸ್ವೀಕಾರ ಕುರಿತು ಹೇಳಿ

ಭಂತೇಜಿ:  ಬಾಬಾ ಸಾಹೇಬರ ಕಾರಣದಿಂದ ನಾನು ಅಧ್ಯಾತ್ಮದತ್ತ ಹೋದೋನಲ್ಲಾ. ಏಕೆಂದರೆ ಬಾಬಾಸಾಹೇಬರು ನನಗೆ ಪರಿಚಯವೇ ಇರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಪುಸ್ತಕಗಳು ಇರಲಿಲ್ಲಾ. ಹಾಗಾಗಿ ನನಗೆ ಅಧ್ಯಾತ್ಮದ ಒಲವು ಬೇರೆ ಬಗೆಯಲ್ಲಿ ಬಹಳ ಚೆನ್ನಾಗಿ ಇತ್ತು. ರಾಮನಂದರ ಜೊತೆನಲ್ಲಿ ನಾನು ಸಂಪರ್ಕ ಇಟ್ಟುಕೊಂಡಿದ್ದೆ. ಒಮ್ಮೆ ನಾನು B.A. ಪರೀಕ್ಷೆ ಕಟ್ಟಬೇಕಾಗಿತ್ತು. ಅವರನ್ನ ನೋಡೋಕೆ ಅಂತ ಹೋದೆ. ಏನ್ ಮೇಷ್ಟ್ರೇ, ಏನು ಸಮಾಚಾರ ಅಂದ್ರು. ಪರೀಕ್ಷೆ ಇದೆ ನಿಮ್ಮ ಆಶೀರ್ವಾದ ಪಡೆದು ಹೋಗೋಣ ಅಂತ ಬಂದೆ. ಮೇಷ್ಟ್ರೇ ನೀವು ಇನ್ನು ಈ ಕೆಲಸದಲ್ಲಿ ಇರಬೇಡಿ. ನಿಮಗೆ ಗೌರವ ಅಲ್ಲಾ. ಬೇರೆ ಕೆಲಸ ಹುಡುಕಿಕೊಳ್ಳಿ ಅಂದ್ರು. ನಾನೇನು ಅಂದುಕೊಂಡೆ ಅಂದ್ರೆ Common Manಗೆ ಹೇಳೋ ರೀತಿನಲ್ಲಿ ಏನ್ B.A.ನಲ್ಲೂ ಪಾಸಾಗಿತ್ತು. ಎರಡು ತಿಂಗಳು ಕಳೆದು ಒಂದು ಜಾಹೀರಾತು Call for ಆಯಿತು. ಹಿಂದಿ ಲೆಕ್ಚರರ್ ಪೋಸ್ಟ್. ಯೋಗ್ಯತೆ ಇರೋರು apply ಮಾಡುಕೋಬಹುದು ಅಂತ ಬಂದಿತ್ತು. ಈ ಸ್ವಾಮೀಜಿಗಳು ಹೇಳಿದಂತ ಮಾತು ಆಗ ನನಗೆ ಜ್ಞಾಪಕ ಆಯಿತು. Application ಹಾಕಿದೆ. ಆಗ ಭರಣಯ್ಯನವರೇನೆ ಆಯ್ಕೆ ಸಮಿತಿ member ಆಗಿದ್ರು. ಆದರೆ ಭರಣಯ್ಯನವರು ನನಗೂ ಪರಿಚಯ ಇರಲಿಲ್ಲ. ನಾನು ಯಾವ ಮನೇನಲ್ಲಿ ಬಾಡಿಗೆಗೆ ಇದ್ದೆನೋ ಅವರು ಕೊಡಗಿನ ಬಸಪ್ಪ ಅಂತ ಅವರಿಗೂ ಭರಣಯ್ಯನವರಿಗೂ ಚೆನ್ನಾಗಿತ್ತು.

15 Dr Ambedkar and his Followers become Buddhists in 1955, at the Nava Jetavana, Shravasti

ಭರಣಯ್ಯನವರ ಹತ್ತಿರ ಕರ್ಕೊಂಡು ಹೋದ್ರು. ಆಗ ಭರಣಯ್ಯನವರು ನೀನು ನಾಳೆ ಮನೆ ಹತ್ತಿರ ಬಾಪ್ಪಾ ಅಂದ್ರು. ನಾಳೆ ಅವರ ಮನೆ ಹತ್ತಿರ ಹೋದೆ. ಅವರು ನಾಳೆ ಸಂದರ್ಶನದಲ್ಲಿ ನೀನು ಇಂಗ್ಲೀಷ್ ನಲ್ಲಾದರೂ ಉತ್ತರ ಕೊಡು. ಇಲ್ಲಾ ಕನ್ನಡದಲ್ಲಾದ್ರು ಉತ್ತರ ಕೊಡು, ಇಲ್ಲಾ ಹಿಂದಿನಲ್ಲಾದ್ರು ಕೊಡು ಭಯಪಡಬೇಡ. ಏನಾದ್ರು ಕೇಳ್ತಾರೆ ನೀನು ಉತ್ತರ ಹೇಳು. ಅಷ್ಟೇ ನಮಗೆ ಬೇಕಾದ್ದು. ಹೋಗು ಅಂದ್ರು. ಸರಿ Interviewಗೆ ಹೋದೆ. ಹೋದಾಗ ಭರಣಯ್ಯನವರು ಇದ್ರು. But Chairman ಬೇರೆ ಇದ್ರು. ಅವರೆಲ್ಲಾ English ನಲ್ಲೇ ಕೇಳುದ್ರು. ಒಬ್ರು ಕ್ರಿಶ್ಚಿಯನ್ ಲೇಡಿ ಅವರ್ಯಾರೋ ಮದರೋ ಏನೋ ಇರಬೇಕು ಅಂತ ಕಾಣುತ್ತೆ. ಅವರು ಪ್ರಶ್ನೆ ಕೇಳುವಾಗ ತಪ್ಪು ಪ್ರಶ್ನೆ ಕೇಳಿದ್ರು ಅಂದ್ರೆ. ಭಕ್ತ ಕಬೀರ್ ಕೆ ಬಾರೆಮೆ ತುಮ್ ಕ್ಯಾ  ಜಾನ್ ತೆಹೋ ಅಂದು ಬಿಟ್ರು. ನಾನು ಉತ್ತರವಾಗಿ ಕಬೀರ್ ಭಕ್ತ್ ನಹೀಹೈ ವೋ ಜ್ಞಾನಿಹೆ, ಉಸ್ ಕೆ ಬಾರೆ ಮೈ ತೋಡಕುಚ್ ಜಾನತೆ ಹೂ ಅಂತ ನಾನು ಹಿಂದಿನಲ್ಲೇ ಉತ್ತರ ಹೇಳಿದೆ. ಭರಣಯ್ಯನವರು ನಕ್ಕುಬಿಟ್ರು. ನಕ್ಕುಬಿಟ್ಟು ಅವರಿಗೆ ಹೇಳಿದ್ರು. ಆಗ Chairman ಕೇಳಿದರು. You are working in a middle school, can you teach even college ಅಂತ ಅವರು ಪ್ರಶ್ನೆ ಕೇಳಿದ್ರು. ಅದಕ್ಕೆ ನಾನು ಉತ್ತರ ಹೇಳಿದೆ. If there is your mercy I can teach to the collage also ಅಂತ ಹೇಳಿದೆ. Ok ಅಂದ್ರು. ಕೆಲಸ ಸಿಕ್ಕಿತು. ಹೀಗಾಗಿ ನಾನು college ಗೆ ಹೋದೆ.

ಸಂದರ್ಶಕರು:      College ದಿನಗಳಿಗೆ ಬರೋದಿಕ್ಕಿಂತ ಮುಂಚೆ ನೀವು ಆರಂಭಕ್ಕೆ ಒಂದು ಮಾತ್ ಹೇಳಿದ್ರಿ. ವೃತ್ತಿ ಜೀವನದಲ್ಲಿ ನಾನು ಬೇಕಾದಷ್ಟು ಅವಮಾನಗಳನ್ನು ಅನುಭವಿಸಿದ್ದೀನಿ, ಅಂತ.  ಬಗ್ಗೆ ಸ್ವಲ್ಪ ವಿವರಿಸಿ.

ಭಂತೇಜಿ:   ನನ್ನ ಊರು ಕೊಳತ್ತೂರಿಗೆ ಆಗ ಬಸ್ ಇರಲಿಲ್ಲ. ಚಿಕ್ಕಬಾಗಲಿನಲ್ಲಿ ಬಸ್ ಇಳೀಬೇಕು. ಅಲ್ಲಿ ಬಸ್ ಸ್ಟಾಂಡ್ ಮಾರ್ಗ ಇರೋದೆ ಲಿಂಗಾಯಿತರ ಬೀದಿನಲ್ಲಿ. ಅಲ್ಲಿ ಒಬ್ಬರು ಕಯ್ಯಂಬಳ್ಳಿ ಮಾದಪ್ಪಾ ಅಂತ ಹೇಳಿ ಲಿಂಗಾಯಿತರು, ಬಹಳ ವಯಸ್ಸಾದವರು ಮಹಾ ಜಾತಿವಂತರು. ನಾನು ಹೇಳುತ್ತಾ ಇರತಕ್ಕದ್ದು 49-50ನೇ ಇಸವಿ ಮಾತು. ಒಮ್ಮೆ ಬಸ್ಸಿಗಾಗಿ ಅಲ್ಲಿ ಕಾದಿದ್ದೆ. ಆಗ ಮಾದಪ್ಪ ಬಂದ್ರು. ಮಾದಪ್ಪ ಮೀಸೆ ಆಳು, ಘಟಾನುಘಟಿ ಬಸ್ ಸ್ಟ್ಯಾಂಡ್ ಎದುರೆ ಅವರ ಮನೆ. ಅವರು ಮನೆ ಒಳಗಡೆಯಿಂದ ಬಂದು ಯಾರ್ಲಾ ಅವನು ಅಲ್ಲಿ ಕೂತಿರೋನು ಅಂದ್ರು ಅವರ ಮಕ್ಕಳಿದ್ದೋರು, ಮಾದಯ್ಯನ ಮಗ ಮಷ್ಟ್ರು ಕೂತಿದ್ದಾರೆ ಅಂದ್ರು. ಅವರ ಮಾತಿನಲ್ಲಿ ತಕ್ಷಣವೇ ಹೊಲಸು ಮಾತು ಬಂತು. ಎದ್ದೇಳು ಮೇಲಕ್ಕೆ ಅಂತ ಗದರಿದರು.

ಸಂದರ್ಶಕರು: ಏನ್ ಅನ್ನಿಸ್ತು ಆವಾಗ?

ಭಂತೇಜಿ:  ಕೇಳಿದಾಗ ಆ ಕ್ಷಣದಲ್ಲಿ ನನಗೆ ಪೌರುಷ ಇದ್ದಿದ್ರೆ ಅನಿಸಿತು. ಆದರೆ ಅಳೋದೊಂದೆ ನನಗೆ ಉಳಿದಿದ್ದು. ನಾವು ಅನುಭವಿಸಿದಂತಹ ಕಷ್ಟವನ್ನು ಸ್ವತಂತ್ರದ ನಂತರ ಹುಟ್ಟಿದವರಿಗೆ ಖಂಡಿತಾ ಇಲ್ಲಾ. ಬಸ್ ಬಂತು. ಹೊರಟೋದೆ. ಆದರೆ ಆ ಘಟನೆಯ ಅವಮಾನ ಹಾಗೆ ಉಳಿದುಬಿಡ್ತು. ನಾನು ಬನ್ನೂರಿನಲ್ಲಿ ಕೆಲಸ ಮಾಡ್ತಾ ಇದ್ದೆ. ಆಗ ಅಲ್ಲಿಗೆ ಹೆಡ್ ಮಾಸ್ಟರ್ ಆಗಿದ್ದವರು ಒಕ್ಕಲಿಗರು. ಪಾಪ ಅವರಿಗೆ ನನ್ನ ಬಗ್ಗೆ ಸಹಾನುಭೂತಿ ನನಗೆ ಹೋಟೆಲ್ ಗೆ ಹೋಗೋದಕ್ಕೆ ಅವಕಾಶ ಇಲ್ಲ ಅಂತ ಟೀ ತರಿಸ್ತಾ ಇದ್ರು. ಆ ಟೀ ನಾನು ಕುಡೀತಾ ಇದ್ದೆ. ಆದರೆ ಆ ಹೋಟೆಲ್ ನವನಿಗೆ ಗೊತ್ತಾಯ್ತೋ ಏನೋ, ಹೊಲೆಯರು ಮಾದಿಗರಿಗೆಲ್ಲಾ ನೀವು ಟೀ ಕುಡಿಸ್ತೀರಿ ನಾವು ಕೊಡೋಲ್ಲ ಅಂತ ಟೀ ನಿಲ್ಲಿಸಿದ್ರು. ನಮ್ಮ HM ಶಾಲೆನಲ್ಲೇ ಟೀ ಮಾಡೋದಕ್ಕೆ ಪ್ರಾರಂಭ ಮಾಡುದ್ರು. ಅದಕ್ಕೆ contribution ಸಂಬಳದಲ್ಲಿ ಕಟ್ಟಿಕೊಳ್ಳೋದು ಅಂತ ಹೇಳಿ ವ್ಯವಸ್ಥೆ ಮಾಡಿದ್ರು. ಅಂತಹ H. M. ಪಕ್ಕದ ಊರಿನವರು ಬಸವನಳ್ಳಿ ಅಂತ ಊರು. ಅವರು ದಸರಾ ಕಾಲದಲ್ಲಿ ಪಿತೃಪಕ್ಷ ಅಂತ ಮಾಡುತ್ತಾರೆ. ಒಮ್ಮೆ ನೀವು ಬರಬೇಕು ಮರಿಸ್ವಾಮಿ ನಮ್ಮ ಮನೆಗೆ ಊಟಕ್ಕೆ ಅಂದ್ರು. ಅಂಥ ಪ್ರೀತಿಯಿಂದ ಕರೀಬೇಕಾದ್ರೆ ಇಲ್ಲ ಅಂತ ಹೇಳೋದಕ್ಕೆ ಆಗದೆ ಒಪ್ಪಿಬಿಟ್ಟೆ. ಹೋದೆ. ಊಟಕ್ಕೆ ಕೂತ್ಕೊಂಡ್ವಿ. ಅವರು ಕೂರಿಸುವಾಗ ತೊಟ್ಟಿ ಹಟ್ಟಿ. ತೊಟ್ಟಿ ತುಂಬ ಮನೆನಲ್ಲಿ ಒಂದು ಅಂಗಳ ಇರುತ್ತಲ್ಲ, ಅಲ್ಲಿ ಮೂರು ಜನಕ್ಕೂ ಎಲೆ ಹಾಕಿಸಿ ಒಂದೇ ಕಡೆ ಕೂರಿಸಿದ್ರು. ಊಟ ಆಯಿತು. ಊಟ ಆದಮೇಲೆ ಎಲೆ ಎತ್ತಬೇಕೋ ಬೇಡವೋ ಅಂತ ನಮಗೆ ಗೊತ್ತಿಲ್ಲಾ. ಎದ್ದು ಬಿಟ್ಟೆ. ಅವರ ಕಡೆಯವರು ಏನ್ರಿ ಊಟಕ್ಕೆ ಹಾಕೋದಲ್ಲದೆ ನಿಮ್ಮ ಎಲೆನೂ ಎತ್ತಬೇಕಾ. ಎತ್ತೋ ಮೇಲಕ್ಕೆ ಎಲೆನಾ ಅಂದ್ರು. ಪಾಪ ನಮ್ಮ ಹೆಡ್ ಮೇಷ್ಟ್ರು ಬಸವಯ್ಯನವರಿಗೆ ಪೀಕಲಾಟ! ಅಂಥ ಪರಿಸ್ಥಿತಿ.

ಸಂದರ್ಶಕರು: ಹಾಗೆ ಹೇಳಿದವರು ಯಾರು?

ಭಂತೇಜಿ: ಅವರು ನಮ್ಮ H. M. ಅಣ್ಣ. ಅವರು Primary School ಮೇಷ್ಟ್ರು. ಆದರೆ ಅಣ್ಣನಷ್ಟು ಲಿಬರಲ್ ಅಲ್ಲ ಅವರು. ಹಾಗಾಗಿ ಆ ಘಟನೇನೂ ಇವತ್ತಿಗೂ ನಾನು ಮರೆಯೋಕೆ ಆಗ್ತಾ ಇಲ್ಲಾ. ನಮಗೆ ಹೋಗೋಕೆ ಇಷ್ಟವಿಲ್ಲ. ಸ್ವಾಭಿಮಾನ. ಆದರೆ H. M. ಪ್ರೀತಿಗೆ ನಾನು ಅಲ್ಲಿಗೆ ಹೋದದ್ದು. ಅಲ್ಲಿಗೆ ಹೋದ್ರೂ ಕೂಡ ಇಂಥ ಅಪಮಾನಾನ ಅನುಭವಿಸಬೇಕಾಯ್ತು. ಸಂದರ್ಶಕರುಹಾಸ್ಟೆಲ್ ಗಳಲ್ಲಿ ಓದುವ ಹಾಗೂ ನೀವು ಊರಿನಲ್ಲಿ ಇರುವಂಥ ಸಂದರ್ಭಗಳಲ್ಲಿ ನಿಮಗೆ ಇನ್ನು ಯಾವ ರೀತಿ ಅಸ್ಪೃಶ್ಯತೆಯ ಅನುಭವಗಳು ಆಗಿದ್ದವು. ಭಂತೇಜಿ:  ನಮಗೆ ಆಗ ಅಸ್ಪೃಶ್ಯತೆಯನ್ನೋದೇ ಅರ್ಥ ಆಗ್ತಾ ಇರಲಿಲ್ಲ. ನಾವು ಬದುಕೋ ರೀತಿನೇ ಹಾಗೆ ಅಂದುಕೊಂಡಿದ್ವು. ಶಾಲೆಗೆ ಹೋದಮೇಲೂ ಕೂಡ ಜಗತ್ತು ಹಾಗೇ ಇತ್ತು. ಅಧ್ಯಾಪಕರು ಕೂಡ ನಮ್ಮನ್ನ ಅಸ್ಪೃಶ್ಯರ ಹಾಗೆ ಕಾಣ್ತಾ ಇದ್ರು. ಏನೋ ನಮ್ಮ ಹಾಗೆ ಕಷ್ಟದಲ್ಲಿದ್ದ ಅಧ್ಯಾಪಕರು ಪ್ರೀತಿ ಇಂದ ಕಾಣ್ತಾ ಇದ್ರು. ಇದು ಸಹಜ ಅನ್ನೋ ರೀತಿನಲ್ಲಿ ಇತ್ತೇ ವಿನಃ ನಮ್ಮನ್ನ hurt ಮಾಡೋ ರೀತಿನಲ್ಲಿ ಇರಲಿಲ್ಲ. ಬಹುಶಃ ನಾವು ಬಾಬಾ ಸಾಹೇಬರ ಬರಹಗಳನ್ನ ಓದಿದ ಮೇಲೆ ಇದು ನಮಗೆ ಆಳವಾಗಿ ಗೊತ್ತಾಯ್ತೇ ವಿನಃ ಅಲ್ಲೀತನಕ ಅದು ಗಾಯ ಅಂತಲೇ ನಮಗೆ ಇರಲಿಲ್ಲ.

ಬೌದ್ಧ ಬಿಕ್ಕು ಆಗಿ ದೀಕ್ಷೆಯನ್ನು ಪಡೆಯೋದಕ್ಕಿಂತ ಮುಂಚೆ ನಾನು ಹಿಂದು ಧರ್ಮದಲ್ಲಿ ಇದ್ದಾಗ ಅನುಭವಿಸಿದಂತಹ ಕೆಲವು ಅಸ್ಪೃಶ್ಯತೆಯ ಘಟನೆಗಳನ್ನು ನಾನು ಹೇಳಿಕೊಳ್ಳೋದಕ್ಕೆ ಇಷ್ಟಪಡ್ತೀನಿ. 1976 ರಲ್ಲಿ ನಾನು ತುಮಕೂರು ಕಾಲೇಜಿನಲ್ಲಿ ವೃತ್ತಿಯನ್ನು ಮಾಡ್ತಾ ಇದ್ದಾಗ ತುಮಕೂರಿನ ಸಮೀಪದಲ್ಲೇ ಇದ್ದಂತಹ ಸಿದ್ಧಗಂಗಾ ಮಠದ ಇರತಕ್ಕಂತ ಜ್ಞಾನ ದಾಸೋಹ ಅಂದರೆ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನ ಮಾಡ್ತಾ ಇರತಕ್ಕಂತ ವಿಚಾರವನ್ನು ಕೇಳಿ, ಪ್ರತಿ ದಿನ 3000 ವಿದ್ಯಾರ್ಥಿಗಳಿಗೆ ಅನ್ನದಾನ, ವಿದ್ಯಾದಾನ ಮಾಡ್ತಾ ಇರೋವಂತ ಆ ಕ್ಷೇತ್ರವನ್ನ ನೋಡಬೇಕು ಅಂತ ಹೇಳಿ ನಾನು ನನ್ನ ಹೆಂಡ್ತಿ ಮತ್ತು ಮಕ್ಕಳನ್ನು ಜೊತೇಲಿ ಕರಕೊಂಡು ಸಿದ್ಧಗಂಗಾ ಮಠಕ್ಕೆ ಒಂಧು ದಿನ ಹೋದೆ. ಅಲ್ಲಿ ಸಿದ್ಧಗಂಗಾ ಮಠದ ಪ್ರಾರಂಭದಲ್ಲೇ ಒಂದು ಕೊಳ ಇದೆ. ಅಲ್ಲಿ ಮೀನುಗಳನ್ನು ಸಾಕಿದ್ದಾರೆ. ಅವನ್ನೆಲ್ಲಾ ನೋಡಿಕೊಂಡು ಮತ್ತು ವಿದ್ಯಾರ್ಥಿಗಳಿಗೆ ಕಟ್ಟಿಸಿರೋತಕ್ಕಂತಹ ಭವ್ಯವಾದ ಭವನಗಳನ್ನು ನೋಡಿಕೊಂಡು ಪ್ರತಿ ಕ್ಷಣದಲ್ಲೂ ನನ್ನ ಮನಸ್ಸಿನ ಮೇಲೆ ಶಿವಕುಮಾರ ಸ್ವಾಮಿಗಳ ಬಗ್ಗೆ ನನ್ನ ಶ್ರದ್ಧೇ ಇನ್ನೂ ಹೆಚ್ಚಾಗುತ್ತಾ ಹೋಯ್ತು. ನಾನು ಶಿವಕುಮಾರ ಸ್ವಾಮಿಗಳ ವಾಸವಿರುವಂತಹ ಸ್ಥಳದ ಹತ್ತಿರ ಬಂದೆ. ಆಗ ವಿಚಾರಿಸಿದೆ. ಆಗ ಶಿವಕುಮಾರ ಸ್ವಾಮಿಗಳು ಆ ಸ್ಥಳದಲ್ಲಿ ಇರಲಿಲ್ಲಾ. ಅವರು ಸ್ನಾನ ಮಾಡುವಂತ ಕೋಣೆ. ಅವರುಧ್ಯಾನ ಮಾಡುವಂತ ಸ್ಥಳ, ಮುಂತಾದವುಗಳನ್ನೆಲ್ಲಾ ಕೇಳಿಕೊಂಡು ಅವರ ವಾಸಸ್ಥಾನದ ಮುಂದೆ ಇವನನ್ನವ ಅನ್ನೋ ಅಂಕಿತ ಇತ್ತು. ಇದನ್ನು ನೋಡಿ ಬಹಳ ಸಂತೋಷ ಆಯಿತು. ನೋಡ್ಕೊಂಡು ಬಂದೆ. ತದನಂತರ ಭಂಡಾರಗೃಹ ಅಂತ ಇದೆ. ಅಲ್ಲಿ ಸಕಲ ವಸ್ತುಗಳನ್ನು ತುಂಬಿರುವಂತಹ ಭವ್ಯವಾದ ಪ್ರಾಂಗಣ. ಅದನ್ನ ನೋಡಬೇಕು ಅಂತ ನಾನು ಹೋಗಿದ್ದೆ . ಅಲ್ಲಿ ಬಾಗಿಲ ಹತ್ತಿರ ನಿಂತಿದ್ದೋನು ನೀವು ಯಾವ ಜಾತಿಯವರು ಅಂತ ನನ್ನನ್ನ ಪ್ರಶ್ನೆ ಮಾಡ್ದ. ನಾನು ಕೂಡ ಲಿಂಗಾಯತನೇ ಅಂತ ನಾನು ಹೇಳಿದೆ. ಸರಿ ಹೋಗಿ ಅಂತ ಬಿಟ್ಟ. ನಾನು ನನ್ನ ಹೆಂಡ್ತಿಮಕ್ಕಳ ಜೊತೆನಲ್ಲಿ ಹೋದ್ರೆ ಲಿಂಗಾಯತ ವಿದ್ಯಾರ್ಥಿಗಳು ಊಟ ಮಾಡುವಂತಹ ಸ್ಥಳ ಗಾರೆ ಅಚ್ಚಿನಿಂದ ನಯವಾಗಿದ್ದಂತಹ ಒಂದು ಸುಂದರ ಅಂಗಳ. ಆದರೆ ಲಿಂಗಾಯತೇತರ ವಿದ್ಯಾರ್ಥಿಗಳು ಊಟ ಮಾಡುವಂತಹ ಸ್ಥಳ ಸ್ವಲ್ಪ ಸ್ವಚ್ಛವಾದ ಕೊಟ್ಟಿಗೆಯಂತೆ ಇತ್ತು. ಆ ನೆಲಕ್ಕೆ ಗಾರೆಗಚ್ಚು ಕೂಡ ಇಲ್ಲ ಮತ್ತು ವ್ಯವಸ್ಥಿತ ರೀತಿಯಲ್ಲಿ ಇರಲಿಲ್ಲಾ. ಇದನ್ನ ನೋಡಿದ ಕ್ಷಣದಲ್ಲೇನೆ ಮತ್ತು ಆರಂಭಕ್ಕೆ ನೀವು ಆರಂಭಕ್ಕೆ ಯಾವಜಾತಿ ಅನ್ನೋ ಪ್ರಶ್ನೆ ಕೇಳಿದಾಗಲೇನೇ ಶಿವಕುಮಾರ ಸ್ವಾಮಿಗಳ ಬಗ್ಗೆ ನನಗಿದ್ದ ಗೌರವ ಶ್ರದ್ಧೆ ಇಳಿದುಹೋಯಿತು. ಇಂಥ ಬಸವಣ್ಣನವರ ಅನುಯಾಯಿಗಳಾಗಿ ಅಪಾರ ಪಾಂಡಿತ್ಯವನ್ನು ಗಳಿಸಿದ್ದು, ಡಾಕ್ಟರೇಟ್‌ ಪಡೆದಿರುವಂತಹ ಮಹಾ ಗಣ್ಯವ್ಯಕ್ತಿ ಆದಂತಹ ಶಿವಕುಮಾರ್‌ ಸ್ವಾಮಿಗಳ ಎದುರಲ್ಲೇನೆ ಜಾತಿಯತೆ ನಡೆಯುತ್ತೆ ಅಂದ್ರೆ, ನಾವು ಏನು ತಾನೇ ಮಾಡಲು ಸಾಧ್ಯ.ಆದರೆ ಶಿವಕುಮಾರ ಸ್ವಾಮಿಗಳು ಇದನ್ನ ಕಂಡಿಯೂ ಇದನ್ನ ಖಂಡಿಸಲಾರದಂತಹ ಸ್ಥಿತಿಯಲ್ಲಿ ಇದ್ದಾರೆ ಅಂತ ನನಗೆ ಅನ್ನಿಸ್ತು. ಬಹುಶಃ ಲಿಂಗಾಯತ ಕೋಮಿನ ಅವರ ಅನುಯಾಯಿಗಳ ಒತ್ತಡಕ್ಕೆ ಮಣಿದು ಶಿವಕುಮಾರ ಸ್ವಾಮಿಗಳು ವಿಧಿ ಇಲ್ಲದೆ ಲಿಂಗಾಯಿತರಿಗೆ ಬೇರೆ ಲಿಂಗಾಯತೇತರರಿಗೆ ಬೇರೆ ಊಟದ ವ್ಯವಸ್ಥೆ ಮಾಡಿರಬಹುದೇ ಅಂತ ನನಗೆ ಅನ್ನಿಸ್ತು. ಆವಾಗ ನಾನು ತಿರುಗಿ ಹೋಗುತ್ತಾ ಇರುವ ಸಂದರ್ಭದಲ್ಲಿ ಅಲ್ಲಿಗೆ ದಲಿತ ಸಂಘದವರೊಬ್ಬರು ಬಂದ್ರು. ನನ್ನ ಹೆಂಡತಿ ಕೂಡ ಇದ್ಲು. ನೀವು ಸುಳ್ಳು ಹೇಳಬಹುದೇ ಅಂದ್ರು. ಇಲ್ಲ, ನಾನು ಅವರಿಗೆ ಸತ್ಯವನ್ನು ಹೇಳಿದ್ದೀನಿ. ನನಗಿರೋದು ಪುಲ್ಲಿಂಗ. ನನ್ನ ಹೆಂಡತಿಗಿರೋದು ಸ್ತ್ರೀಲಿಂಗ. ನಾನು ಹುಟ್ಟುತ್ತಲೇ ಲಿಂಗಾಯತನಾದ್ದರಿಂದ ನಾವು ಲಿಂಗಾಯತರೇ ಅಂತ ಹೇಳಿದ್ದು ನಿಜ ಎಂದೆ. ಅವರು ನಕ್ಕುಬಿಟ್ಟು ಸುಮ್ಮನಾದ್ರು.

1982ನೇ ಇಸವಿಯಲ್ಲಿ ನಮ್ಮ ಅಳಿಯನವರು ಕುಂದಾಪುರದಲ್ಲಿ ಕೆಲಸದಲ್ಲಿದ್ದ ಕಾರಣ ನನ್ನ ಮಗಳ್ನ ನೋಡೋದಿಕ್ಕೋಸ್ಕರ ಕುಂದಾಪುರಕ್ಕೆ ಹೋಗಿದ್ದೆ. ಆವಾಗ ಉಡುಪಿಯ ಮಠವನ್ನೂ ಕೂಡ ನೋಡುವಂತಹ Chance ನನಗೆ ಸಿಕ್ತು. ಉಡುಪಿಯಲ್ಲಿ ಹೋದೆ ಆ ಕೃಷ್ಣನ ಮಂದಿರದ ಹತ್ತಿರಕ್ಕೂ ಕೂಡ ಹೋದೆ. ಅಲ್ಲೋದಾಗ ನಾನು ಸಾಹಿತ್ಯದಲ್ಲಿ ಏನ್‌ ಓದಿ ತಿಳಿದುಕೊಂಡಿದ್ನೋ ಆ ಸಂತರು ಕನಕದಾಸರ ಮಹತ್ವಕ್ಕೆ ಸೋತು ಶ್ರೀಕೃಷ್ಣನೇ ಬ್ರಾಹ್ಮಣರಿಗೆ ಬುದ್ಧಿಯನ್ನ ಕಲಿಸಲಾರದೆ ಗೋಡೆಯನ್ನ ತೂತು ಮಾಡಿ ದರ್ಶನವನ್ನ ಕೊಟ್ಟ ಅನ್ನೋ ವಿಚಾರವನ್ನ ನಂಬಿಕೊಂಡಿದ್ದೆ. ಅಲ್ಲಿಗೆ ಹೋದ ಮೇಲೆ ನನಗೆ ಗೊತ್ತಾದದ್ದು ಆ ‍ಶ್ರೀಕೃಷ್ಣಮಂದಿರ ಕಲ್ಲಿನಿಂದ ಕಟ್ಟಿರುವಂತ ಕಟ್ಟಡ. ಕನಕದಾಸರ ಪ್ರತಿಮೆಯನ್ನ ನಿಲ್ಲಿಸಿರೋರು ವಾಚ್‌ಮನ್‌ಗಳ ಗೋಡೆನಲ್ಲಿ ಒಂದು ಕಲ್ಲನ್ನ ಇಟ್ಟಿರಲಿಲ್ಲ. ಮನೆ ಕಟ್ಟಿಸೋರು ವಾಚ್‌ಮನ್‌ಗಳ್ನ ಇಡುವಾಗ ಒಂದು ಇಟ್ಟಿಗೆನ್ಲಲಿ Shed ಹಾಕಿರುತ್ತಾರೆ. ಒಂದೆರಡು ಇಟ್ಟಿಗೆಯನ್ನ ಇಡಲಾರದೆ ಸಂದಿಯನ್ನ ಬಿಟ್ಟಿರುತ್ತಾರೆ. ಆ ಸ್ಥಿತಿನಲ್ಲಿ ಅದಿತ್ತು. ನನಗೆ ಅದನ್ನನೋಡ್ಬುಟ್ಟು ಬಹುಶಃ ಇದು ಬ್ರಾಹ್ಮಣರ ಕುತಂತ್ರ. ಕನಕದಾಸರಂತವರೇ ಗುಡಿಯನ್ನ ಪ್ರವೇಶ ಮಾಡೋಕೆ ಆಗಲಿಲ್ಲ. ನಿಮ್ಮಂತ ಸಾಮಾನ್ಯರಿಂದ ಸಾಧ್ಯಾನಾ ಅಂತ ಭಯ ಹುಟ್ಟಿಸೋಕೆ ಕನಕದಾಸರ ಮೂರ್ತಿಯನ್ನ ಇಟ್ಟಿದ್ದಾರೆ ಅನ್ನೋದು ನನಗೆ ಅರ್ಥ ಆಯ್ತು. ಒಂದು ವೇಳೆ ಸಂವಿಧಾನದ ಪ್ರಕಾರ ಈ ಅಷ್ಟಮಠದ ಗುರುಗಳ ಮೇಲೆ ನಾನು ಕೋರ್ಟ್‌ಗೆ ಯಾಕೆ ಹೋಗಬಾರದು ಅನ್ನುಸ್ತು ನನಗೆ. ಆದರೆ ಆ ಶಕ್ತಿ ನನಗಿರಲಿಲ್ಲಾ. ಕನಕದಾಸರ ಕೋಮಿನವರಿಗೂ ಕೂಡ ಇದು ಗಂಭೀರವಾಗಿ ತಿಳಿದಿಲ್ಲ.

ಒಮ್ಮೆ ನಾನು ವಿಶ್ವೇಶ್ವರ ಸ್ವಾಮಿಗಳ ಮಠಕ್ಕೆ ಹೋದೆ. ಅಲ್ಲಿ ನನ್ನ ದುರಾದೃಷ್ಟಕ್ಕೆ ವಿಶ್ವೇಶ್ವರ ತೀರ್ಥರು ಅಲ್ಲಿ ಇರಲಿಲ್ಲಾ. ಹೋಗಿ ನಾನು ಮಠವೆಲ್ಲಾ ನೋಡಿಕೊಂಡು ಬಂದೆ. ನೋಡಿಕೊಂಡು ಬಂದ ಮೇಲೆ ಒಬ್ಬರು ಅಲ್ಲಿ ಪಾರ್ ಪತ್ತೇದಾರ ಅಂತ ಒಬ್ಬ ಯುವಕ ಇದ್ದ. ಆ ಯುವಕನ್ನ ಏನಪ್ಪ ಈ ಮಠದಲ್ಲಿ ಎಷ್ಟು ಜನ ವಿದ್ಯಾರ್ಥಿಗಳ ಇದ್ದಾರೆ ಅಂತ ಕೇಳಿದೆ. 82 ಜನ ವಿದ್ಯಾರ್ಥಿಗಳು ಇದ್ದಾರೆ ಅಂತ ಹೇಳ್ದ. ಅದರಲ್ಲಿ ಅಸ್ಪೃಶ್ಯರು ಎಷ್ಟು ಜನ ಅಂದೆ. ಒಬ್ಬರೂ ಇಲ್ಲ. ತಕ್ಷಣ ಅಲ್ಲಪ್ಪ ನಿಮ್ಮ ಸ್ವಾಮಿಗಳು ಹರಿಜನರ ಬೀದಿಗೆಲ್ಲಾ ಹೋಗ್ತಾ ಇದ್ದಾರೆ. ಈ ಜಾತಿಯಿಲ್ಲದೆ ಧರ್ಮವನ್ನು ನಿರ್ಮಿಸ್ತೀನಿ ಅಂತಕಂತವರು ತಮ್ಮ ಮಠದಲ್ಲಿ ಅಸ್ಪೃಶ್ಯರಿಗೆ ಜಾಗ ಕೊಟ್ಟಿಲ್ಲಾ ಅಂದ್ರೆ ಇವರ ಮಾತಿಗೂಕೃತಿಗೂ ಸಂಬಂಧ ಇಲ್ಲವಲ್ಲ ಅಂದೆ. ತಕ್ಷಣ ಪಾರುಪತ್ತೇದಾರನಿಗೆ ಸ್ವಲ್ಪ ಸಂದಿಗ್ದ ಆಯಿತು. ಅವನಿಗೆ ಇವರ್ಯಾರೋ ಬೇರೆ ಏನೋ ಪ್ರಶ್ನೆ ಮಾಡ್ತಾ ಇದ್ದಾರೆ ಅಂತ ಹೇಳಿ ಭಯ ಆಯ್ತು. ಅಯ್ಯಯ್ಯೋ ಹಂಗಂದುಕೋಬೇಡಿ ನಮ್ಮ ಸ್ವಾಮಿಗಳು ಅದಕ್ಕೆ ಅವಕಾಶ ಕೊಡೋದಕ್ಕೆ ready ಇದಾರೆ. ಇನ್ನೇಳು ಮಠದ ಇತರೇ ಸ್ವಾಮಿಗಳು ವಿರೋಧಿಸ್ತಾರೆ ಅಂದ. ಅಲ್ಲಪ್ಪಾ ಮಠದ ಸ್ವಾಮಿಗಳನ್ನೆ ಸಂಸ್ಕೃತ ಪಾಂಡಿತ್ಯವನ್ನೆ ದೇವರನ್ನೇ ಸಾಕ್ಷಾತ್ಕರಿಸಿಕೊಂಡಿರೋರನ್ನೇ ಸರಿಪಡಿಸೋಕೆ ಸಾಧ್ಯವಾಗದೇ ಇದ್ದಮೇಲೆ ಇನ್ನೂ ಹರಿಜನರನ್ನ ಉದ್ಧಾರ ಮಾಡೋದು ಇವರಿಗೆಲ್ಲಿಂದ ಆಗುತ್ತೆ ಅಂದ. ಆಗ ಅವನ ಬಾಯಿ ಕಟ್ಬುಡ್ತು. ಇಂಥಾ ವಿತಂಡ ವಾದಗಳನ್ನ ಹೇಳುವಂತ ಈ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ಗ್ರಂಥಗಳು ನನಗೆ ಬೇಸರಿಕೆಯನ್ನು ಉಂಟು ಮಾಡಿತ್ತು. ಇಂದೂ ಕೂಡ ಇಂಥ ಪರಿಸ್ಥಿತಿಗಳು ಅನೇಕ ನಡೀತಾನೆ ಇದೆ. ಪಟ್ಟಣಗಳಲ್ಲಿ ಅಸ್ಪೃಶ್ಯತೆಯ ಪರಿಸ್ಥಿತಿ ಕಡಿಮೆ ಇರಬಹುದೇ ವಿನಃ ಇಲ್ಲಾ ಅಂತ ಹೇಳೋಕೆ ಆಗೋಲ್ಲಾ. ಹಳ್ಳಿಗಳಲ್ಲಂತೂ ಈವತ್ತಿಗೂ ಕೂಡ ಅಂತದ್ದೇ ಪರಿಸ್ಥಿತಿ ಇದೆ.

ಸಂದರ್ಶಕರು: ನಿಮಗೆ ಅಂಬೇಡ್ಕರ್ ಬಗ್ಗೆ ಗೊತ್ತಾದದ್ದು, ಅದರ ವಿಚಾರಧಾರೆ ಬಗ್ಗೆ ಆಕರ್ಷಣೆ ಆದದ್ದು ಯಾವಾಗ, ಸಂದರ್ಭ ಎಂತದ್ದು?

ಭಂತೇಜಿ:      ನಾನು ಮಿಡ್ಲಿಸ್ಕೂಲ್ ಟೀಚರ್ ಆಗಿದ್ದಾಗ ಅಂಬೇಡ್ಕರ್ ಹೆಸರು ಕೇಳ್ತಾ ಇದ್ದೆ ವಿನಃ ಈಗಿನ ಹಾಗೆ ಯಾವ function ಗಳೂ ನಡಿತಾ ಇರಲಿಲ್ಲ. ಅಂಬೇಡ್ಕರ್ ದಿನಾಚರಣೆ ಅಂಥಾದ್ದೇನು ಇರಲಿಲ್ಲ. ನನಗೆ 1970ನೇ ಇಸವಿನಲ್ಲಿ ಚಿಕ್ಕಮಗಳೂರು college ಗೆ ಹಿಂದಿ ಲೆಕ್ಚರರ್ ಆಗಿ posting ಆಯ್ತು. ನನಗೆ ಒಂದು ಜ್ಞಾಪಕ ಅಂದ್ರೆ ವಿದ್ಯೆ ಮತ್ತು ಪದವಿ ಮನುಷ್ಯನನ್ನ ಹೇಗೆ ನೋಡುತ್ತೆ ಅಂದ್ರೆ ನಾನು ಹಿಂದಿನ ದಿನ 10ನೇ ತಾರೀಕಿನಲ್ಲಿ ನಾನು ಮಿಡ್ಲಿಸ್ಕೂಲ್ ಮೇಷ್ಟ್ರು, 11ನೇ ತಾರೀಕಿನಲ್ಲಿ ರಿಪೋರ್ಟ್ಮಾಡಿಕೊಂಡಾಗ ಕಾಲೇಜ್ ಲೆಕ್ಷರರ್. ಈ ಕಡೆಯಿಂದ ಬಸ್ ನಲ್ಲಿ ಹೋಗೋವಾಗ ನಾನು ಮಿಡ್ಲಿಸ್ಕೂಲ್ ಮೇಷ್ಟ್ರು ಅಂತ ಹೇಳ್ಕೋಂಬಂದೆ. ಅಲ್ಲಿಂದ ರಿಪೋರ್ಟ್ ಮಾಡಿಕೊಂಡು ಲೆಕ್ಚರರ್ ಅಂತ ಹೇಳ್ಕೊಂಡು ಬಂದೆ. ನಾನು ಲೆಕ್ಚರರ್ ಅಂದಾಗ ನನ್ನ ಪಕ್ಕದಲ್ಲಿ ಕೂತಿದ್ದೋರು ನನ್ನ ಜೊತೆನಲ್ಲಿ ವ್ಯವಹರಿಸಿದ ರೀತಿಯೇ ವಿಭಿನ್ನವಾಗಿತ್ತು. ಗೌರವ ಇತ್ತು. ಅದಕ್ಕೆ ನಾನು ನಮ್ಮ ದಲಿತ ಮಕ್ಕಳಿಗೆ ಹೇಳ್ತೀನಿ. ವಿದ್ಯೆಗೆ ಎಷ್ಟು ಬೆಲೆ ಇದೆ, ನೀವು ಯಾವ ವೃತ್ತಿನಾದ್ರು ಮಾಡಿ, ಡಿಗ್ರಿನ ಪಡೀಬೇಕು. ಒಂದು ಒಳ್ಳೇ ಹುದ್ದೆನಲ್ಲಿ ಇರಬೇಕು ಅಂತ ನಾನು ಹೇಳ್ತೀನಿ. ಯಾಕೆಂದರೆ ನನಗೇ ಆದಂತಹ ಅನುಭವ.

ಸಂದರ್ಶಕರು: ಅಂಬೇಡ್ಕರ್ ಬಗ್ಗೆ ಹೇಳ್ತಾ ಇದ್ರಿ

ಭಂತೇಜಿ:  ನಾನು College ಗೆ ಹೋದ ಮೇಲೆ ಕೆಲವರು ಭಾಷಣಕ್ಕೆ ಕರೆಯೋಕೆ ಪ್ರಾರಂಭಿಸಿದ್ರು. ನನ್ನನ್ನ ಡೈರೆಕ್ಟ್ ಆಗಿ ಯಾರೂ ಕರೀತಿರಲಿಲ್ಲಾ. ಬೇರೆಯವರನ್ನ ಕರೀತಾ ಇದ್ರು. ಅವರು ಒಪ್ಪಿಕೊಳ್ಳದೇ ಇದ್ದಾಗ ಯಾರಾದ್ರು ಬೇಕಲ್ಲ ಅಂತ ಹೇಳಿ ನನ್ನನ್ನೂ ಕರಿತಿದ್ರು. ಈ ಮಧ್ಯೆ ಏನಾಯ್ತು ಅಂದ್ರೆ ಮನೆ ಹುಡುಕೋದಿಕ್ಕೋಸ್ಕರ ಚಿಕ್ಕಮಗಳೂರಿನಲ್ಲಿ ನಾನಾ ಕಡೆ ಮನೇನ ಹುಡುಕಿದೆ. ಸಂಸಾರ ಮೈಸೂರಿನಲ್ಲಿ ಇತ್ತು.

ನನಗೆ ಒಬ್ಬರು ರಾಮಲಿಂಗಪ್ಪ ಅಂತ ಹೇಳಿ ಲಿಂಗಾಯತರು, History Professor ಇದ್ರು. ಅವರು ನಿಮಗೆ ಒಂದು ಹೊಸ ಮನೆ ಆಗಿದೆ, ತೋರಿಸ್ತೀನಿ ಅಂತ scooterನಲ್ಲಿ ಹಿಂದೆ ಕೂರಿಸಿಕೊಂಡು ಕರೆದುಕೊಂಡು ಹೋದ್ರು. ಆ ಮನೆಯನ್ನ ತೋರಿಸಿದ್ರು. ಆಗ ತಾನೆ ಹೊಸದಾಗಿ ಹೆಂಚಿನ ಮನೆ ಕಟ್ಟಿದ್ರು. ಅನುಕೂಲವಾಗಿ ಇತ್ತು. ಅವರು ಏನು ಕೇಳಿದ್ರು ಅಂದ್ರೆ, ಕೊನೆಗೆ ಎಲ್ಲಾ settle ಆದ ಮೇಲೆ ನಿಮ್ಮ ಜಾತಿ ಯಾವುದು ಅಂತ ಕೇಳುದ್ರು. ಆಗ ನಾನು ನಿಜವನ್ನ ಹೇಳಿದೆ. ನಾನು SC ಅಂತ. ಅವರು ಎರಡು ದಿನ ಬಿಟ್ಟು ಹೇಳ್ತೀನಿ ಅಂದ್ರು. ಎರಡು ದಿನ ಕಳೆದ ಮೇಲೆ ಆ ಮನುಷ್ಯ ಏನ್ ಹೇಳಿದ ಅಂದರೆ ಕ್ಷಮಿಸಿ ನಾನೇನೋ ಕೋಡೋದಿಕ್ಕೆ ತಯಾರಿದ್ದೀನಿ ಆದರೆ ನಮ್ಮತಾಯಿ ಇದಕ್ಕೆ ಒಪ್ಪಲ್ಲಾ, ದಯವಿಟ್ಟು ಬೇರೆ ಮನೆಯನ್ನು ತಾವು ಹುಡುಕೊಳ್ಳಿ ಅಂತ ನೈಸಾಗಿ ಹೇಳುದ್ರು. ಅವರು ಹೇಳಿದ್ದು ನನಗೆ ನೋವಾಗಲಿಲ್ಲ. ಯಾಕೆಂದರೆ ಅವರ ತಾಯಿ ತಂದೆಗಳಿಗೆ ಇಷ್ಟ ಇಲ್ಲ ಅಂದ್ರೆ ಬೇಡ ಅಂತ ಹೇಳಿ ಹೊರಗಡೆ ಬಂದ್ವಿ. ಅನೇಕ ಕಡೆ ಮನೆಗೆ ಹುಡುಕಾಡಿದೆ. ಎಲ್ಲಾ ಕಡೆ ಹುಡುಕಾಡಿದೆ. ಎಲ್ಲಾ ಹುಡುಕಾದ ಮೇಲೆ SC ಬೀದಿ ಎಲ್ಲಿದೆ ಅಂತ ಹೇಳಿ ಒಬ್ಬ ಚೆನ್ನಯ್ಯ ಅನ್ನೋ ಮೇಷ್ಟ್ರು ಹಿಡಿದುಕೊಂಡು ಹೋದೆ. ಆ ಬೀದಿನ ದೊಡ್ಡಿ ಬೀದಿ ಅಂತ ಕರೀತಾ ಇದ್ರು. ಅಲ್ಲಿ ಇದ್ದಂತಹ ಸಮೂಹ ಬೇರೆ ವರ್ಣದವರು ಆ ಬೀದಿನ ಬಹಳ ನಿಕೃಷ್ಟವಾಗಿ ಕಾಣುತ ಇದ್ರು. ಯಾಕೆ ಅಂದ್ರೆ ಈ ಜೋಗತಿ ಅನ್ನೋ ಪದ್ಧತಿ ಅನುಸರಿಸೋ ತಕ್ಕಂತ ಜನ ಅಲ್ಲಿ ಬಹಳ ಇದ್ರು. ನಮ್ಮ SCನಲ್ಲಿ ಈ ಜೋಗತಿ, ಬೆತ್ತಲೆ ಸೇವೆ ಮುಂತಾದ ವೃತ್ತಿಗಳನ್ನ ಅನುಸರಿಸುವವರು ಬಹಳ ಇದ್ರು.

ಸಂದರ್ಶಕರು: ಯಾವ ಊರು?

ಭಂತೇಜಿ:  ಚಿಕ್ಕಮಗಳೂರಿನಲ್ಲಿ ಅದೇ ದೊಡ್ಡಿ ಬೀದಿ. ಜೋಗತಿ ಬೀದಿ, ಅದನ್ನ ನಿಕೃಷ್ಟವಾಗಿ ಕಾಣ್ತಾ ಇದ್ರು. ಒಂದು ಬೀದಿ ಮಾತ್ರ ಸ್ವಲ್ಪ ಅಚ್ಚುಕಟ್ಟಾಗಿ ಇತ್ತು. ಅಲ್ಲಿ ಒಂದು ಮನೆ ಸಿಕ್ಕತು.

ಸಂದರ್ಶಕರು: ಅಂಬೇಡ್ಕರ್ ಬಗ್ಗೆ ನಿಮಗೆ ಸಂಪರ್ಕ ಬಂದದ್ದು ಯಾವಾಗ? ನಿಮಗೆ ನೆನಪಿನಲ್ಲಿ ಇರುವ ಸಂದರ್ಭ?

ಭಂತೇಜಿ: ನಾನು ಅದನ್ನೇ continue ಮಾಡ್ತಾ ಇದ್ದೀನಿ. ಆ ದೊಡ್ಡಿಬೀದಿನಲ್ಲೇನೆ. ಸಿದ್ದರಾಜು ಅಂತ ಅವರು ಇದ್ದಂತಹ ಮೊದಲನೆ ಬೀದಿನಲ್ಲೇನೆ ನನಗೆ ಒಂದು ಮನೆ ಕೂಡ ಸಿಕ್ಕಿತು. ಅಲ್ಲಿ ವಾಸ ಮಾಡ್ತಾ ಇದ್ದೆ. ಆಕಸ್ಮಿಕವಾಗಿ ಶಂಕರಪ್ಪ ಎಂಬುವರು IAS Officer ಚಿಕ್ಕಮಗಳೂರಿಗೆ DC ಆಗಿ ಬಂದ್ರು. ಆಗ ನಾನ್ ಏನು ಮಾಡ್ದೆ, ಕೆಲವು ಆ ಬೀದಿಯಲ್ಲಿ ಇದ್ದಂತಹ ಪ್ರಮುಖರನ್ನ ಸೇರಿಸಿಕೊಂಡು ಶಂಕರಪ್ಪ ಅನ್ನೋರು ನಮ್ಮವರಂತೆ. ಟಿ.ನರಸೀಪುರದವರು, ನಮ್ಮ ತಾಲ್ಲೂಕಿನವರು. ಹೋಗಿ ಅವರನ್ನ ಕಾಣೋಣ ಅಂತ ಒಂದು garland ತಗೊಂಡು ಹೋದ್ವಿ. ಅವರಿಗೆ garland ಕೊಟ್ಟು, ಪರಿಚಯ ಮಾಡಿಕೊಂಡ್ವಿ. ನಮ್ಮ ಹತ್ತಿರ ಬಹಳ ಪ್ರೀತಿಯಿಂದ ಯಾರು ಏನು ಅಂತ ವಿಚಾರಿಸಿದರು. ನಾನು ನಮ್ಮ ಪರಿಸ್ಥಿತಿನೆಲ್ಲಾ ಹೇಳ್ದೆ. ನಾನು ನಿಮಗೆ ಅನುಕೂಲ ಮಾಡಿಕೊಡ್ತೇನೆ ಅಂತ ಹೇಳಿ ಆಶ್ವಾಸನೆ ಕೊಟ್ಟರು. ಒಂದು ತಿಂಗಳೊಳಗಾಗಿ ಜೆಲ್ಲಿ ಹಾಕಿ ಟಾರ್ ಹಾಕಿಸಿದ್ರು, ಇದೆಲ್ಲಾ ಆದ ಮೇಲೆ ಮತ್ತೆ ಒಂದು ದಿನ ಹೋದೆ. ಅರೆ ಏನಪ್ಪಾ ಎಲ್ಲಾ ಆಗಿದೆ ಮತ್ತೇನು ಬೇಕು ಅಂದ್ರು. ಅದಕ್ಕೆ ಸಾರ್ ನಾವು ಒಂದು ಸಂಘ ಮಾಡಿಕೊಂಡಿದ್ದೀವಿ, ಕೂತ್ಕೊಳ್ಳೋಕೆ ಜಾಗ ಇಲ್ಲಾ. ಅಲ್ಲಿ ದೊಡ್ಡಿಬೀದಿ ಅಂದ್ರೆ ದನಗಳನ್ನ ದೊಡ್ಡಿಗೆ ದೂಡುತ್ತಾರೆ. ಅದಕ್ಕಾಗಿ ಒಂದು ಖಾಲಿ ಮಾಳ ದೆ. ಆ ದನಗಳನ್ನ ಬೇರೆ ಕಡೆ ಬಿಟ್ಟು ಆ ಜಾಗ (ಮಾಳ)ವನ್ನು ನಮಗೆ ಕೊಡಿಸಿಕೊಟ್ರೆ ಸಂಘ ಮುಂದುವರಿಸ್ತೀವಿ ಅಂದೆ.  ಅದೇನು ಮಾಡುದ್ರೋ ಹೇಗ್ ಮಾಡುದ್ರೋ ಆ ಜಾಗಾನಾ ಮುನಿಸಿಪಾಲಿಟಿಯಿಂದ ಕ್ಲೀನ್ ಮಾಡಿಸಿ White Wash ಮಾಡಿಸಿ, ನೆಲಕ್ಕೆಲ್ಲ ಕಲ್ಲು ಗಿಲ್ಲು ಹಾಕಿ ಸರಿ ಮಾಡಿಸಿದ್ರು. ಆಗ ಅದಕ್ಕೆ ಅಂಬೇಡ್ಕರ್ ಸಂಘ ಅಂತ ಹೆಸರು ಇಟ್ಟು.

ಸಂದರ್ಶಕರು: ಯಾವ ವರ್ಷ?

ಭಂತೇಜಿ :  1972 ಇರಬೇಕು. ನಂತರ ಆ ಏರಿಯಾಗೆ ಶಂಕರಪುರ ಅಂತ ಹೆಸರಿಟ್ವಿ. DC ಹೆಸರಿಟ್ವಿ. DC ಹೆಸರನ್ನೆ ಇಟ್ವಿ. ಅಂಬೇಡ್ಕರ್ function ಪ್ರಾರಂಭ ಆಯಿತು. ವೆಂಕಣ್ಣ ಗುಡ್ಡ ಅಂತ ನಮ್ಮ college  ಗೆ ಆಗ ತಾನೇ ಬಂದಿದ್ರು. ಅವರು ಮಹಾರಾಜ ಕಾಲೇಜ್ ನಲ್ಲಿ ಒಂದು ಬುಕ್ ಇದೆ ಅಂತ ಹೇಳಿ ಆ ಬುಕ್ ನೂ ನನಗೆ ತಂದುಕೊಟ್ರು. ಧನಂಜಯ್ ಖೀರ್ ಅನ್ನೋರು ಬರೆದಿದ್ದಂತ Life and Mission of Dr. Ambedkar’ ಅನ್ನೋ ಬುಕ್ ನನಗೆ ದೊರಕಿತು. ಆ ಬುಕ್ ನ ಓದುತ್ತಾ ಓದುತ್ತಾ ನಮ್ಮ ನಾಯಕ ಯಾರು ಅನ್ನೋದು ನನಗೆ ಪರಿಚಯ ಆಯಿತು. ನಾವು ಕೊಚ್ಚೆನಲ್ಲಿ ಇದ್ದಂತವರನ್ನ ಎತ್ತಿ ಇಂಥ ಭವ್ಯವಾದ ಸ್ಥಿತಿಗೆ ತರಬೇಕಾದ್ರೆ ಒಬ್ಬನೇ ಮನುಷ್ಯ ತನ್ನ ಹೋರಾಟದಿಂದ ಇಂಥ ಪವಾಡವನ್ನ ಮಾಡಿದ್ದಾನಲ್ಲಾ ಅಂತ ಹೇಳಿ ಆ ಬುಕ್ ನ ಓದುತ್ತಾ ಓದುತ್ತಾ ಅತ್ತುಬಿಟ್ಟೆ ನಾನು.

ಅಲ್ಲಿಂದ ಭಾಷಣಗಳು ಪ್ರಾರಂಭವಾದವು. ಆ ಊರಿಂದ ಕರೆಯೋರು, ಈ ಊರಿಂದ ಕರಿಯೋರು. ಅಂಬೇಡ್ಕರ್ ಬಗ್ಗೆ ಭಾಷಣಕ್ಕಾಗಿ ಹೋಗ್ತಾ ಇದ್ವಿ. ಈ ಸಂಘವನ್ನು ಕಟ್ಟಿದ್ದರಿಂದ ಪರಿಚಯ ಆಯಿತು. ಈ ಮಧ್ಯೆ ಏನಾಯ್ತು ಅಂದ್ರೆ ಪೂರ್ಣಚಂದ್ರ ತೇಜಸ್ವಿ ಅವರು ಚಿಕ್ಕಮಗಳೂರಿನಲ್ಲೇ ವಾಸ ಆಗಿದ್ರು. ಅವರಿಗ್ಯಾಕೋ ನಾನು ಅಂಬೇಡ್ಕರ್ ಬಗ್ಗೆ ಭಾಷಣ ಮಾಡ್ತಾ ಇದ್ದದ್ದು ಗೊತ್ತಾಗಿ ಅವರೇ ಬಂದ್ರು. ತೇಜಸ್ವಿ ಅವರಿಗೆ ಅಂಬೇಡ್ಕರ್ ಬಗ್ಗೆ ಎಷ್ಟು ಒಲವಿತ್ತು ಅನ್ನೋದರ ಬಗ್ಗೆ ಇಲ್ಲಿ ಹೇಳ್ಬೇಕು. ಅವರು ಬಂದು ಪರಿಚಯ ಮಾಡ್ಕೊಂಡು ನೀವು ಅದ ಮಾಡ್ಬೇಕು. ನೀವು ಇದ್ ಮಾಡ್ಬೇಕು. ಹೀಗೆಲ್ಲಾ ಓದಬೇಕು. ನಾನು ನಿಮಗೆ support ಮಾಡ್ತೇನೆ ಅಂತ ಈ ರೀತಿಯಾಗೆಲ್ಲಾ ಆಶ್ವಾಸನೆ ಕೊಟ್ರು. ಈ ಮಧ್ಯೆ RSS ನವರಿಗೆ ಕಣ್ಣು ಬಿತ್ತು. ಅವರೂ ಕೂಡ ತಾವು capture ಮಾಡ್ಕೋಬೇಕು ಅಂತ ಹೇಳಿ ನಮ್ಮದೊಂದು ಹಿಂದು ಸಭೆಯೊಂದಿದೆ. Northern India ದಿಂದ ಕೆಲವರೆಲ್ಲಾ ಬರ್ತಾ ಇದ್ದಾರೆ. ನೀವು ಆ ಸಭೆಗೆ ಬರಬೇಕು ಅಂತ ಹೇಳಿ ನನ್ನನ್ನು ಕರಕೊಂಡು ಹೋದ್ರು. ಆಗ ಅವರು ಬಂದಿದ್ದಂತಹ ಮಹಾನುಭವರು, ಅವರ ಹೆಸರನ್ನ ಮರೆತಿದ್ದೀನಿ, ಹಿಂದಿನಲ್ಲಿ ಅವರೆಲ್ಲ ಭಾಷಣವನ್ನ ಕೊಟ್ರು. ಅವರು ಹೇಳಿದ ನಂತರ ವಿಚಾರವೇನು ಅಂದ್ರೆ ಹಿಂದೂ ಧರ್ಮ ಒಂದೇ ಶ್ರೇಷ್ಠ. ಅನ್ಯಧರ್ಮಗಳೆಲ್ಲಾ ನಿಕೃಷ್ಠ. ಕ್ರೈಸ್ತ ಧರ್ಮಕ್ಕೆ ಹೊಗಿರತಕ್ಕಂತವರು, ಮುಸ್ಲಿಂ ಧರ್ಮಕ್ಕೆ ಹೋಗಿರತಕ್ಕಂತವರಿಲ್ಲಾ ವಾಪಸ್ ಬರಬೇಕು, ಈ ಹಿಂದೂ ಧರ್ಮಕ್ಕೆ ಅವರನ್ನೆಲ್ಲಾ ಸೇರಿಸಿಕೊಳ್ಳೋದಕ್ಕೆ ನಾವು ಏರ್ಪಾಡ್ ಮಾಡಬೇಕು. ಅಂತ ಭಾಷಣ ಮಾಡುದ್ರು. ಭಾಷಣ ಡಿದ ಮೇಲೆ ಯಾರಾದ್ರು ಪ್ರಶ್ನೆ ಮಾಡಬಹುದಾ ಅಂತ ಕೇಳುದ್ರು.

ಆಗ ನಾನು ಹಿಂದಿ ಗೊತ್ತಿರುವವನಾಗಿದ್ರಿಂದ ಕೇಳಿದೆ. ಆಪ್ ನೇ ಬತಾಯ ಹೈ ಕೀ ಹಿಂದೂ ಧರ್ಮ್ ಹೀ ಶ್ರೇಷ್ಟ್ ಹೈ. ಲೇಕಿನ್ ಕ್ಯೂ ಕುಚ್ ಲೋಗ್ ಹಿಂದು ಧರ್ಮ್ ಕೋ ಚೋಡ್ ಕರ್ ಇಸ್ಲಾಂ ಧರ್ಮ್ ಕೋ, ಕ್ರಿಶ್ಚಿಯನ್ ಧರ್ಮ್ ಕೋ ಚಲೇಗಯೆ ಅಂದೆ. ಶ್ರೇಷ್ಠವಾದ ಮೇಲೆ ಅದನ್ನ ಬಿಟ್ಟು ಯಾಕೆ ಹೋದ್ರು ಅಂತ. ತುಮ್ ಜಾನತೇ ನಹೀ ಹೋ ಯೇ ಜಾನ್ ನೇ ಕೆ ಲಿಯೇ ಬಹುತ್ ಕಾತಾಬೋಕೋ ಪಡ್‌ನಾ ಪಡಂತಾ ಹೈ. ಮೈ 25 ಕಿತಾಬೋ ಕೋ ಪಡಾ, ತುಮ್ ಪಡೋ. ಅಂದ್ರು ಅದಕ್ಕೆ ನಾನು ಮೈ ಪಡಾ ನಹೀ ಹೋನಾ, ತುಮ್ಪಡೇ ಹೋನಾ, ಲೋಗ್ ಹಿಂದೂ ಧರ್ಮ್ ಕೋ ವಾಪಸ್ ಆಯೇಗೇತೋ ಕಿಸ್ ಮಾರ್ಗ್ ಕೋ ಆಪ್ ಮಿಲಾ ಸಕ್ ತೇ ಹೈ ಅವನಿಗೆ ಉರಿ ಬಂದು ಬಿಡ್ತು. ಅಕ್ಕಪಕ್ಕದವರೆಲ್ಲಾ ನನ್ನನ್ನ ಸಮಾಧಾನ ಮಾಡೋಕೆ ಶುರು ಮಾಡುತ್ತು. ಕ್ರೈಸ್ತ ಧರ್ಮ, ಮುಸ್ಲಿಂ ಧರ್ಮ ಎಲ್ಲಾ ಬಿಟ್ಟು ಬಂದ್ರೆ ಬ್ರಾಹ್ಮಣ ಅಂತ ಸೇರಿಸಿಕೊಳ್ತಾರಾ ಅಂತಾ ಕೇಳ್ದೆ. ಆಗ ಅವರಿಗೆ ಕಷ್ಟ ಆಯಿತು. ಅಲ್ಲಿಗೆ ಸಭೇನೇ ಮುಕ್ತಾಯ ಆಯ್ತು.

ನಂತರದ ದಿನಗಳಲ್ಲಿ ನನಗೆ ಚಿಕ್ಕಮಗಳೂರಿನಿಂದ ತುಮಕೂರಿಗೆ Transfer ಆಯ್ತು. ದೇವನೂರ ಮಹಾದೇವ, ದೇವಯ್ಯಹರವೆ, ಸಿದ್ಧಲಿಂಗಯ್ಯ ಮತ್ತು ನಮ್ಮ ಬಿ.ಕೃಷ್ಣಪ್ಪ ತ್ಯಾಗಿ ಇವರೆಲ್ಲಾ ಒಂದು ಕಡೆಯಿಂದ ದೊಡ್ಡ ದೊಡ್ಡ ಸಭೆಯನ್ನ ಪ್ರಾರಂಭ ಮಾಡಿದ್ರು. ಅದು ಚಿಕ್ಕಮಗಳೂರಿನಲ್ಲಿದ್ದಾಗ ದೊಡ್ಡಿ ಇದೆಯಲ್ಲಾ ಆ ದೊಡ್ಡಿನಲ್ಲಿ ಒಂದು ಸಭೆ ನಡೆಯಿತು. ಅಂದಿನ ಚರ್ಚೆಯ ಫಲದಿಂದ ದಲಿತ ಸಂಘರ್ಷ ಸಮಿತಿ 1974 ರಲ್ಲಿ ಆರಂಭವಾಯಿತು ಎಂದು ಹೇಳಬಹುದು.

ಸಂದರ್ಶಕರು: ನಿಮಗೆ  ಬುದ್ಧ ಧರ್ಮದ ಬಗ್ಗೆ ಆಕರ್ಷಣೆ ಬಂದದ್ದು ಯಾವಾಗ?

ಭಂತೇಜಿ: ನಾವು ತುಮಕೂರಿಗೆ ಬಂದು ಆದಮೇಲೆ ಆಕಸ್ಮಿಕವಾಗಿ H.M ಗಂಗಾಧರಯ್ಯನವರ ಪರಿಚಯ ಆಯ್ತು. ಗಂಗಾಧರಯ್ಯನವರ ಯಾವುದೋ ಒಂದು ಭಾಷಣಕ್ಕೆ ಹೋಗಿದ್ದಾಗ ಅವರೇ ಅಧ್ಯಕ್ಷರು ನನ್ನ ಭಾಷಣಗಳನ್ನು ಕೇಳಿ ಅವರಿಗೆ ನನ್ನ ಮೇಲೆ ಪ್ರೀತಿ ಹುಟ್ಟಿ ಅವರೇ ಒಂದು ಸಾರಿ ಯಾಕಪ್ಪ ನೀನು ಇಷ್ಟು ರ್ಯಾಷ್ ಆಗಿ ಭಾಷಣ ಮಾಡ್ತೀಯ. ಬ್ರಾಹ್ಮಣರುಗಳ ಬುದ್ದಿ ನಿನಗೆ ಗೊತ್ತಿಲ್ವಾ. ಬ್ರಾಹ್ಮಣರ ತರಹ ನಾವು ಬದಲಾಗಬೇಕು. ನಮ್ಮ ವಾಕ್ಯಗಳೂ ಕೂಡ ಬಹಳ soft ಆಗಬೇಕು. ಹಾಗೆ ಹೇಳಿ ಅವರ ಮನೆಗೆ ಕರಕೊಂಡು ಹೋಗಿ ಬುದ್ಧ ಧರ್ಮದ ಬಗ್ಗೆ ಇದ್ದಂತಹ ಒಂದು ಪುಸ್ತಕವನ್ನ ನನಗೆ ಕೊಟ್ರು. ಆ ಪುಸ್ತಕವನ್ನ ಓದಿದ ಮೇಲೆ ಇಂತ ಸರಳವಾದ, ನೇರವಾದ, ಪರಿಪಕ್ವವಾದಂತಹ ಜ್ಞಾನ. ಈ ತನಕ ನನಗೆ ದೊರೆಯಲಿಲ್ಲವಲ್ಲಾ ಅಂತ ಹೇಳಿ ನನಗೆ ತುಂಬಾ  ಸಂತೋಷ ಆಯ್ತು. ಬುದ್ಧ ಧರ್ಮದ ಮುಂದೆ ಜಗತ್ತಿನಲ್ಲೇ ಶ್ರೇಷ್ಠವಾದಂತಹ ಯಾವ ಧರ್ಮವೂ ಇಲ್ಲ ಅನಿಸಿಬಿಡ್ತು.

ಸಂದರ್ಶಕರುಅಂದರೆ ಅಂಬೇಡ್ಕರ್ ರಿಂದ ಪಡೆದಿದ್ದ ಪ್ರೇರಣೆ ಜೊತೆಗೆ ನಿಮಗೆ ಸಿಕ್ಕಿದಂತಹ  ಪುಸ್ತಕಗಳೂ ಕೂಡ ಮಾರ್ಗದರ್ಶನ ನೀಡಿದವು ಅಲ್ವೇ

ಭಂತೇಜಿ: ಬಾಬಾಸಾಹೇಬರು ನೈಜವಾದ ಪ್ರೇರಕರು. ಜೊತೆಗೆ ಸಿಕ್ಕಿದಂತಹ ಅವರ ಪುಸ್ತಕ ನನ್ನ ಕಣ್ಣನ್ನ ತೆರೆಸಿತು. ಬಾಬಾ ಸಾಹೇಬರ ನೋಡೋ ಪುಣ್ಯವೂ ನಂಗೆ ದೊರಕಲಿಲ್ಲಾ. ಆ ಧನಂಜಯ ಅವರು ಬರೆದಂತಹ ಒಂದು ಬುಕ್ ಅನ್ನು ಬಿಟ್ಟರೆ ಬಾಬಾ ಸಾಹೇಬರ ಬಗ್ಗೆ ಇನ್ನೇನನ್ನೂ ನಾನು ಓದಿರಲಿಲ್ಲ.  ಈ ಪುಸ್ತಕ ಸಿಕ್ಕಿದ್ದಾಗ ನನಗೆ ಕತ್ಲೇನಲ್ಲೇ ಸಾಯ್ತಾ ಇದ್ದೆ. ಇವತ್ತು ಬೆಳಕಿನಲ್ಲಿ ಜೀವಿಸಿದ್ದೀನಿ. ಈ ಬೆಳಕಿನ ಧರ್ಮ ನನಗೆ ಪರಿಚಯ ಆಯ್ತು ಅನ್ನೋದನ್ನ ನಾನು ಹೆಮ್ಮೆಯಿಂದ ಹೇಳ್ಕೋತೇನೆ. ಒಂದು ವೇಳೆ ಬೌದ್ಧ ಧರ್ಮದ ಪರಿಚಯ ಆಗದೆ ಇದ್ದಿದ್ರೆ ನಾನು ಒಬ್ಬ ಸಾಮಾನ್ಯ ಅಜ್ಞಾನಿಯಾಗಿ ಅವಿವೇಕಿಯಾಗಿ ಸಾಯ್ತಾ ಇದ್ದೆ.

ಸಂದರ್ಶಕರು: ನಿಮ್ಮ ಆಲೋಚನೆ  ಪ್ರೇರಣೆ ಒದಗಿ ಬಂದಿದ್ದ ಕ್ಯೂನೂ, ನೀವು ಇದನ್ನ ಸ್ವೀಕಾರ ಮಾಡಿದಕ್ಕೂ ಎಷ್ಟು ವರ್ಷದ ಅಂತರವಿತ್ತು.  ಅಂತರದಲ್ಲಿ ನಿಮ್ಮ ಮನಸ್ಸಿನಲ್ಲಿ ಆಗ್ತಿದ್ದಂತಹ ಭಾವನೆಗಳು ಏನು…?

ಭಂತೇಜಿ: 1976 ಇಸವಿನಲ್ಲಿ ನನಗೆ ಬೌದ್ಧ ಧರ್ಮದ ಪರಿಚಯ ಆಯ್ತು. ಆಗ ಧ್ಯಾನವನ್ನ ಅಭ್ಯಾಸ ಮಾಡ್ಬೇಕು ಅನ್ನೋ ಒಲವು ನನಗೆ ಬಂತು. H.M ಗಂಗಾಧರಯ್ಯನವರೇ ಒಂದು ದಿನ ಬೆಂಗಳೂರಿನ ಮಹಾಬೋಧಿಗೆ ಕರಕೊಂಡು ಹೋಗಿ ಬುದ್ಧರಖ್ಖಿತರಿಗೆ ಪರಿಚಯ ಮಾಡಿಕೊಟ್ಟರು. ಅಲ್ಲಿನಾನು ಧ್ಯಾನವನ್ನ ಅಭ್ಯಾಸ ಮಾಡ್ದೆ. ಆ ಧ್ಯಾನವನ್ನ ಮಾಡ್ತಾ ಮಾಡ್ತಾ ನನಗೆ ಬೌದ್ಧ ಧರ್ಮ ಮತ್ತು ಆಂತರಿಕ ಬೌದ್ಧಧರ್ಮ ಎರಡೂ ಪರಿಚಯ ಆಗುತ್ತಾ ಬಂತು. ಆದರೆ ದೀಕ್ಷೆ ತಗೋಳ್ಳೋವಂತ ಅವಕಾಶಗಳೇ ಇರಲಿಲ್ಲ. ದೀಕ್ಷೆ ಕೊಡೋರು ಇರಲಿಲ್ಲ. ಅದನ್ನ ಪ್ರೋತ್ಸಾಹ ಮಾಡೋರು ಇರಲಿಲ್ಲಾ. ಧ್ಯಾನ ಕಲಿಸೋರು ಅಷ್ಟೆ. 84 ರಲ್ಲಿ ನನಗೆ ರಿಟೈರ್ಡ್ ಆಯ್ತು. ನನಗಿದ್ದಂತಹ ಒಲವು ಹುಣಸೂರಿನಲ್ಲಿ ಇರುವಂತಹ ಲಕ್ಕಪ್ಪ ಸ್ವಾಮೀಜಿಯವರ ಬಳಿ ಸೇರಿಕೋಬೇಕು ಅಂತ ನನಗೆ ಸಂಕಲ್ಪ ಇದ್ದದ್ದು. ಏಕೆಂದ್ರೆ ನಾನು ಮೂರು ಮಕ್ಕಳನ್ನ ಸಾಕೋದೆ ನನ್ನ ಕರ್ತವ್ಯ ಅಲ್ಲಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಿದ ರೀತಿಯಲ್ಲಿ ಲಕ್ಕಪ್ಪ ಸ್ವಾಮೀಜಿಯವರು ಮಾಡ್ತಕ್ಕಂತ ಸೇವೆಯಲ್ಲಿ ನಾನು ಕೂಡ ಸೇರಿಕೊಂಡು ಸೇವೆಯನ್ನ ಮಾಡ್ಬೇಕು ಅಂತ ಇತ್ತು.

1963 ರಿಂದ ಲಕ್ಕಪ್ಪ ಸ್ವಾಮಿಯವರು ನಂಗೆ ಪರಿಚಿತರು. ನಾನು ಇದ್ದಂತಹ ಚಿಕ್ಕಮಗಳೂರಿನಿಂದ contribution ಕಲೆಕ್ಟ್ ಮಾಡಿ ಅವರಿಗೆ ಕಳುಹಿಸ್ತಾ ಇದ್ದೆ. ಆದರೆ 1988 ಆದ ನಂತರ ನಾನು ಲಕ್ಕಪ್ಪನವರನ್ನ ಯಾಕೆ ಸೇರಲಿಲ್ಲಾ ಅಂದ್ರೆ ಅಂಬೇಡ್ಕರ್ ಅವರ ಬಗ್ಗೆ ಆಗಲಿ ಬುದ್ಧನ ಮಾನವೀಯ ಪಥ ಆಗಲಿ ಅವರಿಗೆ ತಿಳಿದಿರಲಿಲ್ಲ. ಅವರಿಗೆ ಇನ್ನೂ ಮೂಢನಂಬಿಕೆ ಹೋಗಿರಲಿಲ್ಲಾ. ಯಾಕೆಂದರೆ ಇನ್ನೂ ದೇವರು ಅನ್ನೋದನ್ನೇ ನಂಬಿಕೊಂಡು ಅಲ್ಲೆಲ್ಲೋ ಹಣ ದೆ. ಇದು ಸಿಕ್ಕುತ್ತೆ ಅದು ಸಿಕ್ಕುತ್ತೆ ಅಂತ ಪೇಚಾಡಿಬೇಡಿ, ಬದುಕುತ್ತಿದ್ರು. ಸ್ವಾಮಿ ನೀವು ಹಿಂದೂ ಸ್ವಾಮಿಗಳಂತೆ ಒಬ್ಬರು ಸಾಧು. ನೀವು ಸತ್ಯವನ್ನು ಮಾತಾಡೋರಲ್ಲಾ. ಸತ್ಯವನ್ನ ಬಿಚ್ಚಿ ಹೇಳೋರಲ್ಲಾ ನಿಮ್ಮ ಸಹವಾಸ ಬೇಡ ಅಂತ ಹೇಳಿಬಿಟ್ಟೆ. ಲಕ್ಕಪ್ಪನವರನ್ನ ಬಿಟ್ಟ ಮೇಲೆ ಇನ್ನೇನು ಮಾಡೋದು ಅಂತ ಹೇಳಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಒಂದು ತಿಂಗಳು ಬಂದೆ. ರಿಟೈರ್ ಆದ ಮೇಲೆ ನಾನು ಧರಿಸ್ತಾ ಇದ್ದುದ್ದು ಬಿಳೀ ಜುಬ್ಬ ಮತ್ತೆ ಬಿಳಿ ಪಂಚೆ. ಸುದರ್ಶನ್ ಅವರು ನನ್ನನ್ನು ಕಂಡು ಬಹಳ ಆತ್ಮೀಯವಾಗಿ ಸ್ವಾಗತಿಸಿ ನೀವು ಇಲ್ಲೇ ಇದ್ದು ಬಿಡಿ. ನಿಮಗೇನೇ Education Administration ನ ವಹಿಸಿಕೊಡ್ತೇನೆ ಅಂತ ಹೇಳಿ quarters ಎಲ್ಲಾ ಕೊಟ್ರು. ಅಲ್ಲಿ ನಿರ್ಮಲಾನಂದ ಅಂತ ಯೋಗಿ ಇದ್ರು. ಅಧ್ಯಾತ್ಮದ ಒಲವು ಇದ್ದಿದ್ದರಿಂದ ನಾನು ಅಲ್ಲಿಗೆ ಹೋದೆ. ನಿರ್ಮಲಾನಂದರು ಬಂದ್ರು. ನಾನು ನಮಸ್ಕಾರ ಮಾಡ್ದೆ. ಅವರು ಮೌನವಾಗಿಯೇನೆ ಮಾತನಾಡದೆ 2 ಗುಳಿಗೆಗಳನ್ನ ಕೊಟ್ರು. ಒಂದೆರಡು ಊದುಬತ್ತಿಯನ್ನ ಕೊಟ್ಟು ಹೋಗಿ ಆ ಗಣೇಶನ ವಿಗ್ರಹಕ್ಕೆ ಪೂಜೆ ಮಾಡ್ಕೊಂಡು ಬನ್ನಿ ಅಂದ್ರು. ನೀವು ಹೀಗೆ ಮೂರ್ತಿ ಪೂಜೆನೇ ಏಕೆ ಬೋಧಿಸ್ತಿರಾ ಅಂತ ನನ್ನ ಪ್ರಶ್ನೆ. ಅವರು ಮಾತನಾಡ್ತಾ ಇರಲಿಲ್ಲ. ಅವರು ಒಂದು ಹೇಳುದ್ರು ನಿನ್ನಂತವನಿಗಲ್ಲಾ ನಾನು ಹೇಳ್ತಾ ಇರೋದು ordinary people ಗೆ ಅಂತ. ನಾನು ಹೇಳಿದೆ. ನೀವು ತಿದ್ದಬೇಕಾಗಿರೋದೆ ordinary people ನ ಅವರಿಗ್ಯಾಕೆ ಮೊದಲೇ ಮುಢನಂಬಿಕೆಯನ್ನ ಹಾಕ್ತೀರಿ ಅಂದೆ. ಆಗ ಅವರು ನನಗೆ ಒಂದು ಚಾಪೆ ಹಾಸಿಸುದ್ರು. ಟೀ ಎಲ್ಲಾ ಕೊಟ್ರು. ಅವರು 11 ವರ್ಷಗಳು ಮಾತಾಡಿರಲಿಲ್ಲ. ಮೌನವಾಗಿದ್ದೋರು. ಅವರು ನಾನು 11 ವರ್ಷಗಳಿಂದ ಮಾತಾಡಿರಲಿಲ್ಲ. ಮೌನವಾಗಿದ್ದೆ ಅಂತ ಹೇಳುದ್ರು. ಅದಕ್ಕೆ ತಕ್ಷಣ ನಾನಂದೆ ನೀವು ಮೌನಿ ಅಲ್ಲಾ ಅಂತ. ಹಾ! ಅಂದ್ರು. ಬಾಯಿನಲ್ಲಿ ಮಾತನಾಡುತಾ ಇರಲಿಲ್ಲ. ಆದರೆ ಬರೆದು ತೋರಿಸಬೇಕಾದರೆ ನಿಮ್ಮ mental ಮಾತನಾಡುತಾ ಇದೆ ಅಲ್ವಾ ಅಂದೆ. ಮನಸ್ಸಿನಲ್ಲಿ ಮಾತನಾಡಿದ ಮೇಲೆ ನೀವು ಬಾಯಿಬಿಟ್ಟು ಮಾತನಾಡಿದರೇನು ಬಿಟ್ಟರೇನು ಅಂದೆ ಅವರು ನಿರುತ್ತರಿಯಾದ್ರು.

ಸುದರ್ಶನ್ ಇದ್ದ ಕಡೆ ಒಂದು ವಿಚಿತ್ರ ಸನ್ನಿವೇಶ. ಏನಂದ್ರೆ ಸುದರ್ಶನ್ ಇದ್ದ ದಿವಸ ಒಂದು ರೀತಿ ನಡೆಯುತ್ತೆ. ಸುದರ್ಶನ್ ಅವರು ಇಲ್ಲದೇ ಇದ್ದಾಗ ಮತ್ತೊಂದು ರೀತಿ. ಅಲ್ಲೊಬ್ಬ ಚಕ್ರವರ್ತಿ ಅನ್ನೋ ಬ್ರಾಹ್ಮಣ, ರಾಮಾಚಾರಿ ಅಂತ ಅಕ್ಕಸಾಲಿಗ ಅವರಿಬ್ಬರೇ ಸುದರ್ಶನ್ ಅವರು ಇಲ್ಲದೆ ಇದ್ದಾಗ control ಮಾಡ್ತಾ ಇದ್ದೋರು. ಎಲ್ಲಾ ಕಿತಾಪತಿಗಳು ಈ ಇಬ್ಬರಲ್ಲೇ ನಡೆಯುತ್ತಿತ್ತು. ಒಂದು ತಿಂಗಳು ಇದ್ದೆ. ಇಲ್ದೆ ಇದ್ರೆ ಇದನ್ನೆಲ್ಲಾ ಹೇಳಬೇಕು, ನನಗ್ಯಾಕೆ ಇದು ಬೇಕು ಅಂತ ಹೇಳಿ ನಾನು ಜಾಗ ಖಾಲಿ ಮಾಡಿದೆ. ಅದಾದ ಮೇಲೆ ಇನ್ನೆಲ್ಲಿಗಪ್ಪ ಹೋಗೋದು ಅಂತ ತೊಳಲಾಟದಲ್ಲಿ ಇದೇ ದಮ್ಮನ ಸ್ವೀಕಾರ ಮಾಡ್ದೆ. ಆದರೆ ಸನ್ಯಾಸಿಯಾಗಿ ಇರಲಿಲ್ಲಾ.ಉಪಾಸಕನಾಗಿ ಸ್ವೀಕಾರ ಮಾಡ್ದೆ. ತದನಂತರ  ಸಾಮಾಜಿಕ ಒಲವು ನನಗೆ ಇದ್ದೇ ಇತ್ತು. ಆಕಸ್ಮಿಕವಾಗಿ ಈ ನರಸೀಪುರದಲ್ಲಿ ವಾಸ ಮಾಡ್ತಾ ಇದ್ದೆ. ಜಯಶಂಕರ್ ಸಾಹೇಬರು ಅಲ್ಲಿ ಸೂಪರ್ ಡಂಟ್ ಇಂಜಿನಿಯರ್ ಆಗಿದ್ದು, ಆಕಸ್ಮಿಕವಾಗಿ ಅವರ ಪರಿಚಯ ಆಯ್ತು. ಅವರಿಗೆ ದಮ್ಮದ ಬಗ್ಗೆ ಒಲವಿತ್ತು. ಅನೇಕ ಸಂಘಟನೆಗಳಿಗೆ ಸಹಾಯ ಮಾಡ್ತಾ ಇದ್ರು.  ನಾವು ಅಲ್ಲಿ ಹೋಗಿ ಉಳಿದುಕೊಂಡು ಟಿ.ನರಸಿಪುರದ ತ್ರಿವೇಣಿ ನಗರದಲ್ಲಿ ಹೊಸದಾಗಿ ನಮ್ಮ ದಲಿತರೆಲ್ಲಾ ಬಂದು ಸೇರಿಕೊಂಡು ಒಂದು ಸಂಘ ಮಾಡಿ ಏನಾದ್ರೂ ಮಾಡ್ಬೇಕು ಅನ್ನೋ ಪ್ರಯತ್ನವನ್ನ ಮಾಡ್ತಾ ಇದ್ವಿ. ಆಗ ನಾವು ಅಂಬೇಡ್ಕರ್ ಭವನವನ್ನ ಕಟ್ಟೋದಿಕ್ಕೆ ಜಯಶಂಕರ್ ಹತ್ತಿರ ಹೋಗಿ ಒಂದು plan ಹಾಕಿ ಕೊಡಿ ಅಂದ್ವಿ. ಅವರು ಪ್ಲಾನ್ ಹಾಕ್ಕೊಟ್ರು. ಜಯಶಂಕರ್ ಅಲ್ಲೇ ಇದ್ರು. ಶಂಕುಸ್ಥಾಪನೆಯನ್ನ ಮಾಡುದ್ವಿ. ಆ ಶಂಕುಸ್ಥಾಪನೆಯನ್ನ ಮಾಡಿದಾಗ ಶ್ರೀನಿವಾಸಪ್ರಸಾದ್ ಅವರು ಮತ್ತು ಕೊಳ್ಳೇಗಾಲದ ಶಾಸಕರಾಗಿದ್ದ ಜಯಣ್ಣ.ಕೆ ಶಿವರಾಮ್ ಅವರು ಆಗ ಮೈಸೂರಿನಲ್ಲಿ commissioner ಆಗಿದ್ರು. ಎಲ್ಲ ಸೇರಿ ಶಂಕುಸ್ಥಾಪನೆಯನ್ನ ಮಾಡಿದ್ವಿ. ಕಟ್ಟಡದಲ್ಲಿ ಒಂದಷ್ಟು ಮೋಸ ಎಲ್ಲಾ ಆಯ್ತು. Contractor ನಿಂದ ಹಿಡಿದು ರಾಜಕಾರಣಿವರೆಗೆ ಎಲ್ಲಾ ದುಡ್ಡು ತಿನ್ನೋರು. ನಾನು ಅದಕ್ಕೆ ಅವಕಾಶ ನೀಡಲಿಲ್ಲ. ಕಿರುಕುಳ ಹಿಂಸೆ ಎಲ್ಲಾ ಆಗ್ತಿತ್ತು. ಈ ಸಮಾಜದ ಮಧ್ಯೆ ಇರೋದು ಬೇಡ ಅಂತ ಹೇಳಿ ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಂಡೆ ಮತ್ತು ನಮ್ಮ ರಾಜಕಾರಣಿಗಳು support ಕೊಡಲ್ಲಾ. ಯಾಕಂದ್ರೆ ಅವರಿಗೆ ತಿನ್ನೋಕೆ ಅವಕಾಶ ಇರೊಲ್ಲಾ. ಸಂಘದಲ್ಲಿ ಇರೋ ಅಂತ ಪದಾಧಿಕಾರಿಗಳಿಗೂ support ಇಲ್ಲ. ಇದನ್ನು ನೋಡಿ ಬೇಸರವಾಯ್ತು. ಎಲ್ಲವನ್ನು ಬಿಟ್ಟು ಬಂದೋನು ನೆಟ್ಟಗೆ ಬೆಂಗಳೂರಿಗೆ ಹೋಗಿ ಸನ್ಯಾಸಿ ಆಗಿಬಿಟ್ಟೆ. ಹಾಗಾಗಿ ನಾನು ಕಟ್ಟಬೇಕು ಅಂತ ಹೋದಾಗ ಸಮಾಜ ಸಹಕರಿಸದೆ ಇದ್ದಾಗ ಬೇಸರಪಟ್ಟು ಇನ್ನು ಈ ಸಾಂಸಾರಿಕ ಜೀವನ ಬೇಡ ಅಂತ ಹೇಳಿ ಬೌದ್ಧ ಧರ್ಮದ ದೀಕ್ಷೆಯನ್ನು ಪಡೆದೆ.

ಸಂದರ್ಶಕರು:  ಭಂತೇಜಿಯವರೇ ಈಗ ನಿಮ್ಮ ಬೌದ್ಧ ಧರ್ಮ ಮತಾಂತರಕ್ಕೆ 

ಇನ್ನೂ ಪೂರಕವಾದ ಪ್ರೇರಣೆಗಳೇನು?

ಭಂತೇಜಿ: ಇದು ಮತಾಂತರ ಆಗೋಲ್ಲಾ. ಸ್ವಧರ್ಮ ಸ್ವೀಕಾರ ಬಾಬಾ ಸಾಹೇಬರು ನಾನು ಆಕಸ್ಮಿಕವಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದೆ. ಆದರೆ ಹಿಂದೂ ಆಗಿ ಸಾಯೋದಿಲ್ಲಾ ಅಂತ ಹೇಳಿ ಪ್ರತಿಜ್ಞೆ ಮಾಡಿದ್ದು 35 ರಲ್ಲಿ. ಈ 21 ವರ್ಷದ ಅಂತರದಲ್ಲಿ ಅದಕ್ಕೆ ಹಿನ್ನೆಲೆನಲ್ಲೇ ಅವರಿಗೆ ಅವರ ಮನಸ್ಸಿನಲ್ಲಿ ಇತ್ತು. ಯಾಕೆಂದ್ರೆ ಅವರಿಗೆ ದಮ್ಮ ಗೊತ್ತಿರಲಿಲ್ಲಾ ಅಂತಲ್ಲಾ. ಪ್ರಮುಖವಾದಂತಹ ಎಲ್ಲಾ ಧರ್ಮಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡುದ್ರು. ಅವರ ಸಮಯವನ್ನ ಯಾವ ರೀತಿ ಕಳೆದರು ಅನ್ನೋ ಕಲ್ಪನೇನೂ ನಮಗೆ ಆಗೋದಿಲ್ಲಾ. ಆವಾಗ ಸತ್ತಂತೆ ಬದುಕುತಾ ಇದ್ದಂತಹ ಜನಾಂಗವನ್ನು ಅಂದ್ರೆ ದಲಿತರು ಮಾತ್ರ ಅಲ್ಲಾ. ಯಾರು ಶೋಷಣೆಗೆ ಒಳಗಾಗಿ ಸವರ್ಣಿಯರ ದಬ್ಬಾಳಿಕೆಯಲ್ಲಿ ಕೆಳಗೆ ಬಿದ್ದಿದ್ದಾರೋ ಅವರೆಲ್ಲರೂ ಸ್ವಾತಂತ್ರನೇ ಕಾಣದೆ ಸತ್ತಂತೆ ಬಿದ್ದಿದ್ದಾರೆ.  ಸಂವಿಧಾನದಲ್ಲಿ ಬೇಕಾದಷ್ಟು ಸೌಲಭ್ಯಗಳನ್ನು ಅವರಿಗೆ ಕಲ್ಪಿಸಿದ್ರು ಆದರೆ ಇವತ್ತು ತಿಳುವಳಿಕೆಗಳಿಲ್ಲಾ. ಕಾರಣ ಏನು ಅಂದ್ರೆ ಸಂವಿಧಾನದಲ್ಲಿ ಇವರನ್ನ ಭೌತಿಕ ಗುಲಾಮಗಿರಿಯಿಂದ ಬಿಡಿಸೋಕೆ ಸಾಧ್ಯ ಆಯಿತೇ ವಿನಹ ಇವರನ್ನ ಮಾನಸಿಕ ಗುಲಾಮಗಿರಿಯಿಂದ ಬಿಡಿಸೋಕೆ ಆಗಿಲ್ಲಾ. ಎಲ್ಲಿಯವರೆಗೂ ಮಾನಸಿಕ ಗುಲಾಮಗಿರಿಯಿಂದ  ಬಿಡಿಸೋಕೆ ಆಗೋದಿಲ್ವೋ, ಅಲ್ಲಿಯವರೆಗೂ ಈ ಸತ್ತಂತೆ ಬದುಕುತಾ ಇರುವಂತ ಜನ ಎದ್ದು ಕೂತ್ಕೊಳಕೆ ಸಾಧ್ಯ ಇಲ್ಲಾ ಎಂಬ ಅಂಶಗಳೆಲ್ಲ ನನ್ನ ಪ್ರೇರೇಪಿಸಿದವು.

ಸಂದರ್ಶಕರು: ನಿಮಗೆ ಪ್ರೇರಣೆ ಆಗಿದ್ದು ಕೂಡ ಅದೇ ಅಂಶಾನ?

ಭಂತೇಜಿ:  ಬಾಬಾಸಾಹೇಬರು ಎಷ್ಟು ಸಂಶೋಧನೆಯನ್ನ ಮಾಡಿದ್ದಾರೆ ಅಂದ್ರೆ, son of the god, ನಾನು ದೇವರ ಮಗ ಬೈಬಲ್ ನಲ್ಲಿ ನಾನು ಹೇಳಿರತಕ್ಕದ್ದು ದೇವರು, ಕೊಟ್ಟಂತಹ ವಾಣಿ. ಬಾಬಾ ಸಾಹೇಬರ ಮನಸ್ಸಿನಲ್ಲಿ ಪ್ರಶ್ನೆ ಹುಟ್ಟುತ್ತೆ. If Jesus Christ is son of the God, the other people who are they? ಅದು ಬಾಬಾಸಾಹೇಬರ ಪ್ರಶ್ನೆ ಆಗುತ್ತೆ. ಮತ್ತು ಅಲ್ಲಿ ಹೇಳಿರತಕ್ಕದ್ದು ಸ್ವಂತ ಮಾತಲ್ಲಾ. ದೇವರು ಹೇಳಿರೋ ಅಂತ ಮಾತು ಅಂತ. Next ಇಸ್ಲಾಂ ಧರ್ಮವನ್ನ ಅಧ್ಯಯನ ಮಾಡ್ತಾರೆ. ಅಲ್ಲಿ The messenger of the God and the last messenger of the god. ದೇವರು ಹೇಳಿದ ಮಾತು ಕುರಾನ್ ನಲ್ಲಿ ಇದೆ. ಆದರೆ ನನ್ನ ಮಾತಲ್ಲಾ ಅಂತಾರೆ.  Messenger of the God ಅಂದಾಗ ಅದೂ ವೈಜ್ಞಾನಿಕವಲ್ಲ ಇನ್ನು ಹಿಂದೂ ಧರ್ಮವನ್ನು ತಗೊಂಡರಂತೂ ಕೇಳೋ ಹಾಗೆ ಇಲ್ಲಾ. 62 ಕೋಟಿ ದೇವರುಗಳು. ಕೃಷ್ಣ ನಾನೇ ಲೋಕ ಸೃಷ್ಟಿ ಮಾಡಿದೋನು ಅಂತಾನೆ. ಇನ್ನು ರಾಮ… ಇವರೆಲ್ಲಾರೂ ಕೂಡ ಯಾರು ಕೂಡ ವೈಚಾರಿಕವಾಗಿ ನಿಲ್ಲೋರಲ್ಲಾ. ಕೊನೆಗೆ ಬುದ್ಧನನ್ನು ಅವಲೋಕನೆ ಮಾಡಿದಾಗ ಬುದ್ಧನ ಜೀವನಾನೇ ಅದ್ಭುತವಾದಂತಹ ಜೀವನ ಅಂಬೇಡ್ಕರ್ ಅವರು ನಮಗೆ ವ್ಯಾಖ್ಯಾನಿಸಿ ಕೊಟ್ಟರು. ಅದು ನಮಗೆ ಪ್ರೇರಣೆ ನೀಡಿತು.

ಸಂದರ್ಶಕರು: ಇಷ್ಟಾದ್ರುನೂ ಜಗತ್ತಿನ ಎಲ್ಲಾ ಧರ್ಮಗಳಿಗಿಂತಲೂ ಬೌದ್ಧ ಧರ್ಮ ಶ್ರೇಷ್ಠ  ಅಂತ ಅನ್ನಿಸ್ತಾ ಇದ್ದವು. ಸ್ವಧರ್ಮ ಸ್ವೀಕಾರಕ್ಕೆ ಯಾಕೆ ಇನ್ನೂ ದಲಿತ ವರ್ಗದ ಜನ ಬರ್ತಾ ಇಲ್ಲ.

ಭಂತೇಜಿ: ಒಂದು Point…ನಾನು ಇನ್ನೂ ಸ್ವಲ್ಪ ಮುಂದೆ ಹೇಳಿ ಬಿಡುತ್ತೇನೆ. ಬುದ್ಧ ಮಾಡಿರುವ ತಪಸ್ಸನ್ನ ಇನ್ನೊಬ್ಬರು ಮಾಡಲಿಕ್ಕೆ ಸಾಧ್ಯ ಇಲ್ಲಾ. ಅದೂ ಕೂಡ ನಿರರ್ಥಕ ಅಂತ ಗೊತ್ತಾದ ಮೇಲೆ ಎಲ್ಲಾವನ್ನು ಬಿಟ್ಟು ತನ್ನ ಸ್ವಪ್ರಯತ್ನದಿಂದ ಕಠಿಣವಾದಂತಹ ಸಾಧನೆಯನ್ನ ಮಾಡಿ ಯಾರೂ ಕಂಡರಿಯದಂತಹ ಮಹಾಜ್ಞಾನವನ್ನ ಪ್ರತ್ಯಕ್ಷವಾಗಿ ಅನುಭವದಿಂದ ಕಾಣ್ತಾರೆ. ಅದಕ್ಕೆ ಅವರನ್ನ ನಮ್ಮ ಸಂಬುದ್ಧಅಂತ ಹೇಳೋದು. ಎಲ್ಲರಿಗೂ ಆ ಕಾರಣದಿಂದ ಬುದ್ಧನನ್ನ ಬೇರೆ ಯಾವ ಮಹಾಪುರುಷನ ಜೊತೆಯಲ್ಲೂ ಹೋಲಿಸೋಕೆ ಸಾಧ್ಯವಿಲ್ಲ. ಬುದ್ಧ ಬುದ್ಧನೇ. ಈ ಎಲ್ಲಾ ಅಂಶಗಳು. ವಿಚಾರಗಳು ನಾನು ಧಮ್ಮದ ದಾರಿಗೆ ಬರಲು ಮೂಲ ಪ್ರೇರಣೆ ಎಂದು ಭಾವಿಸುತ್ತೇನೆ.

ಈಗ ನಾನು ಸ್ವಧರ್ಮ ಸ್ವೀಕಾರದ ಬಗ್ಗೆ ಹೇಳ್ತೀನಿ ಕೇಳಿ… ಈ ಹಿಂದೂ ಸಮಾಜ ಭಾರತದಲ್ಲಿ ಕೆಳಗಿನಿಂದ ಮೇಲಕ್ಕೆ ಹೋಗ್ತಾ ಗೌರವ ಹೆಚ್ಚಾಗುತ್ತೆ. ಮೇಲಿನಿಂದ ಕೆಳಗಡೆಇಳಿದಾಗ ಗೌರವ ಕಡಿಮೆಯಾಗುತ್ತೆ. ಇದಕ್ಕೆ ಹೊಂದಿಕೊಂಡು ಬುದುಕುತಾ ಇರುವಂತ ಈ ಹಿಂದೂ ಜನ ಮೇಲ್ವರ್ಗದವರು ತಮ್ಮ ಗೌರವವನ್ನು ಕಳಕೊಳ್ಳೋಕೆ ಇಷ್ಟಾ ಇಲ್ಲಾ. ನಮ್ಮಲ್ಲಿ ಕ್ಷೌರಿಕರಾದವರುಊ ಕೂಡ ಐದು ಪೈಸದ ಗೌರವ ಇದೆ. ಅಗಸನಾದವನಿಗೂ ಕೂಡ 10 ಪೈಸದ ಗೌರವ ಇದೆ. ಈ 5 ಪೈಸೆ, 10 ಪೈಸೆ ಗೌರವವನ್ನ ಕಳೆದುಕೊಳ್ಳೋಕೆ ಅವರಿಗೆ ಇಷ್ಟಾ ಇಲ್ಲಾ. ಬುದ್ಧನ ಧರ್ಮ ಶ್ರೇಷ್ಠವಾದ ಮಾನವ ಧರ್ಮ ಬ್ರಾಹ್ಮಣರಿಗೆ ಗೊತ್ತು. ಬ್ರಾಹ್ಮಣರೇ ತಾನೇ ಗ್ರಂಥವನ್ನ ಬರೆದಿರೋದು. ಆದರೆ ತಮ್ಮ ಗೌರವಕ್ಕೆ ಧಕ್ಕೆ ಬರುತ್ತೆ ಅಂತ ಅವರಿಗೆ ಹೆದರಿಕೆ. ತಮ್ಮ ಐದು ಪೈಸೆ ಗೌರವ ಹೋಗುತ್ತೆ ಅಂತ ಇನ್ನು ದಲಿತರಿಗೆ ಯಾಕೇ ಬೌದ್ಧ ಧರ್ಮ ತಲುಪುತ್ತಿಲ್ಲಾ ಅಂದ್ರೆ ಅವರ ಭಾವನೆ. ಇವರಿಗೆ ಆ ಪ್ರಜ್ಞೆನೇ ಇಲ್ಲಾ. ಪಂಚಶೀಲಗಳಲ್ಲಿ ಒಂದನ್ನೂ ಪಾಲಿಸೋಕೆ ಇವರಿಂದ ಆಗ್ತಾ ಇಲ್ಲಾ. ನಮ್ಮಲ್ಲಿ IAS, IPS Officers ಇದ್ದಾರೆ. Graduates ಇದ್ದಾರೆ. ದೊಡ್ಡ ದೊಡ್ಡ ಅಧಿಕಾರಿಗಳು ಇದ್ದಾರೆ. ಅವರೆಲ್ಲಾರಿಗೂ ಗೊತ್ತು. ಬಾಬಾಸಾಹೇಬರು ಒಪ್ಪಿಕೊಂಡಿರುವಂತಹ ಧರ್ಮ ಶ್ರೇಷ್ಠ ಧರ್ಮ. ಅದನ್ನ ಪಾಲಿಸಬೇಕು ಅಂತ ಇಚ್ಛೆ ಇದೆ. ಆದರೆ ಪರನಾರಿಯನ್ನ ನೋಡಬೇಕು. ಸಾಯಂಕಾಲ clubಗೋ ಹೋಗಬೇಕು. ಚೆನ್ನಾಗಿ ಕುಡಿಬೇಕು. ಮಜಾ ಮಾಡ್ಬೇಕು, ಇದನ್ನ ಬಿಡೋಕೆ ಅವರು ತಯಾರಿಲ್ಲಾ. ಇಲ್ಲಿ ಪಂಚಶೀಲವನ್ನ ಪಾಲಿಸಿ ಅಂತ ಹೇಳ್ತಾರಲ್ಲಾ ಅದು ನಮ್ಮಲ್ಲಿ ಇರುವ ಅನೇಕರಿಗೆ ಬೇಕಿಲ್ಲ. ರೈತನಿಗೆ ಮತ್ತು ಕೂಲಿಕಾರನಿಗೆ ಈ ಪ್ರಶ್ನೆನೇ ಇಲ್ಲಾ. ಅಯ್ಯೋ ಬಿಡಿ ಸ್ವಾಮಿ, ನಾವು ಕುಡಿದೇ ಬದುಕಿದ್ದೀವಿ ಅಂತ ಹೇಳ್ತಾರೆ.

ಸಂದರ್ಶಕರುಹಾಗಿದ್ದರೆ  ಸಮುದಾಯನಾ ಬೌದ್ಧ ಧರ್ಮದತ್ತ ಸೆಳೆಯಲು ಇನ್ನು 

ಎಷ್ಟು ಕಾಲ ಬೇಕಾಗುತ್ತೆ?

ಭಂತೇಜಿ: ನಾವು ಅವರಿಗೆ ಈ ಪಂಚಶೀಲಗಳನ್ನ ಪಾಲಿಸಲೇ ಬೇಕು. ಪಾಲಿಸಿದ್ರೆ ಮಾತ್ರ ನೀವು ಬೌದ್ಧರು ಅನ್ನೋ ಒತ್ತಾಯವನ್ನ ಹೇರುದ್ರೆ ಜನ ಸಲೀಸಾಗಿ ಬರಲಾರರು. ನನ್ನ ವೈಯಕ್ತಿಕವಾಗಿ ಹೇಳೋದಾದ್ರೆ. ಎರಡೇ ಎರಡು ವಿಚಾರಗಳನ್ನು ಇವರು ಪಾಲಿಸೋದಾದ್ರೆ, ಬೌದ್ಧಧರ್ಮಿಗಳಾಗಿ ಬರಬಹುದು. ಒಂದನೆಯದು ದೇವತೆಗಳನ್ನ ಮರೀಬೇಕು. Useless ದೇವರುಗಳನ್ನ ನಂಬಿಕೊಂಡು ಎಲ್ಲಿಯವರೆಗೂ ಬದುಕಿರುತ್ತೀರಾ ಅಂತ ಹೇಳಬೇಕು. ಶತಮಾನಗಳಿಂದ ಉಪಯೋಗಕ್ಕೆ ಇಲ್ಲದಂತಹ ದೇವರುಗಳನ್ನ ಕಟ್ಟಿಕೊಂಡು ಇನ್ನೂ ಅದಕ್ಕೆ ಅಡ್ಡಬೀಳೋದು ದೊಡ್ಡ ತಪ್ಪು. ಅದರಲ್ಲೂನು ದಲಿತರು ಇವರು ಆ ದೇವರನ್ನ ಬಿಡೋದಿಲ್ಲಾ ಆ ದೇವರ ಹಬ್ಬವನ್ನ ಬಿಡೋದಿಲ್ಲಾ. ಅಲ್ಲಿಯವರೆಗೂ ಇವರು ಆರ್ಥಿಕ ಸ್ಥಿತಿಯಿಂದ ಮೇಲಕ್ಕೆ ಬರೋದಿಲ್ಲಾ. ಆ ದೇವರ ಹಬ್ಬವನ್ನ ಮಾಡಿ, ಕುಡಿದು ಅದರ ಜೊತೆಗೇ ಸಾಯೋದನ್ನ ಬಿಟ್ಟು ಇವರೆಲ್ಲರೂ ಬೌದ್ಧಧರ್ಮಕ್ಕೆ ಬರಬಹುದು. ಅದಕ್ಕೆ ಇನ್ನೂ ಕಾಲಾವಕಾಶ ಬೇಕು.

ಸಂದರ್ಶಕರು:    ಭಂತೇಜಿಯವರೇ ನೀವು ಬೌದ್ಧ ಧರ್ಮವನ್ನು ಸ್ವೀಕಾರ ಮಾಡೋದಿಕ್ಕೆ ಮುಂಚೆ  ತುಂಬು ಸಂಸಾರಸ್ತರಾಗಿದ್ದೋರು. ಸಂಸಾರ ನಿರ್ವಹಣೆಯನ್ನ ಮಾಡ್ತಾ ಇದ್ದೋರು. ನೀವು ಸ್ವಧರ್ಮ ಸ್ವೀಕಾರಕ್ಕೆ ಹೆಜ್ಜೆ ಇಟ್ಟ ಕೂಡಲೇ ನಿಮ್ಮ ಪರಿವಾರ, ನಿಮ್ಮ ಸ್ನೇಹಿತರು, ನಿಮ್ಮ ಸುತ್ತಿನ ಬಳಗ ಹೇಗೆ ಪ್ರತಿಕ್ರಿಯೆ ಮಾಡ್ತು? ನೀವು ಅದನ್ನ ಹೇಗೆ ಸ್ವೀಕರಿಸಿದ್ರಿ?

ಭಂತೇಜಿ:   ಈ ಸಂದರ್ಭದಲ್ಲಿ ಅದನ್ನ ಹೇಳಬೇಕಾದ್ರೆ ನನ್ನ ತಂದೆಯ ಹೆಸರೇ ಹೆಂಡದ ಮಾದಯ್ಯ ಅಂತ. ಹೆಂಡವನ್ನ ಮಾರ್ತಾ ಇದ್ದ. ಪ್ರತಿ ದಿನ ಹೆಂಡವನ್ನ ಕುಡಿತಾ ಇದ್ದ. ಬಹುಶಃ ನಮ್ಮ 8 ಮಕ್ಕಳನ್ನು ಹುಟ್ಟಿಸಿದ್ದು ಪ್ರಾಣಿಗಳು ಅಂತ ಹೇಳಿಯೇ ವಿನಃ ಅವನು ಮನುಷ್ಯನನ್ನಾಗಿ ಸೃಷ್ಟಿಸಲಿಲ್ಲ. ಅದರಿಂದಲೇ ನನಗೆ ನನ್ನ ತಾಯಿ ಬಗ್ಗೆ ಹೆಚ್ಚಿಗೆ ಒಲವು. ಆದರೆ ಹಬ್ಬವನ್ನು ಇದನ್ನೆಲ್ಲಾ ಮಾಡಿ ಅವನು ಅವಿವೇಕಿಯಾಗಿ ಬದುಕಿದ್ದ. ಇದು ನನಗೆ ತಪ್ಪು ಅಂತ ಅನ್ನಿಸಿರಲಿಲ್ಲ ಆಗ. ಯಾಕೆಂದರೆ ಆಗ ನಾನು ಅದೇ ಧರ್ಮದಲ್ಲಿದ್ದೆ. ನಾನು ಉಪಾಧ್ಯಾಯನಾಗಿದ್ದಾಗ ಮತ್ತು college ಅಧ್ಯಾಪಕನಾಗಿದ್ದಾಗಲೂ ಕೂಡ ನಾನು ಕುಡಿದಿದ್ದೇನೆ. ಇದು ತಪ್ಪು ಅಂತ ನನಗೆ ಗೊತ್ತಿರಲಿಲ್ಲಾ. ನಾವು ಸದಾ ಕುಡುಕನಾಗದೇ ಇದ್ರೂ ಕೂಡ ನಾವು ಪ್ರತಿವರ್ಷ ಕಾಲೇಜಿನಿಂದ picnic ಹೋಗ್ತಾ ಇದ್ವಿ. ವರ್ಷಕ್ಕೆ ಒಂದು ಸಾರಿ. ಅಲ್ಲಿಗೆ ಮಾಂಸದ ಅಡಿಗೆ ಮಾಢಿಸಿ, ಬೀರು, ಬ್ರಾಂಡಿ, ಎಲ್ಲವನ್ನು ತಗೊಂಡು ಹೋಗಿ ಕುಡುದು ಮನೆಗೆ ಬರ್ತಾ ಇದ್ವಿ. ಕುಡಿಯೋದು ತಪ್ಪು ಅಂತ ಆಗ ನನಗೆ ಅನ್ನಿಸಿಯೇ ಇರಲಿಲ್ಲ. ಯಾವಾಗ ಬುದ್ದನ ಪರಿಚಯ ಆಯ್ತೋ. ಬುದ್ಧನ ಸಿದ್ಧಾಂತ ಗೊತ್ತಾದ ಕೂಡಲೇ ನಾನು automatic ಆಗಿ ಅದ್ನ ಬಿಟ್ಟೆ. ನನ್ನಿಂದ ಏನು ಪರಿವರ್ತನೆ ಆಗಿದೆ ಅಂತ ಹೇಳೋದಾದ್ರೆ ನನ್ನ ಹೆಂಡ್ತಿ 3ನೇ ಕ್ಲಾಸ್ ಓದಿದೋಳು. ಅವಳು ನಾನಿನ್ನೂ ಅಧ್ಯಾಪಕನಾಗಿದ್ದಾಗಲೇನೆ ಬುದ್ಧ ಧರ್ಮವನ್ನ ಸ್ವೀಕಾರ ಮಾಡೋದಕ್ಕೆ ಮೊದಲಿಂದಾನೇ ಕುರುಡು ನಂಬಿಕೆ ಕಂದಾಚಾರಗಳನ್ನು ನನ್ನ ಮೂಲಕ ಬಿಟ್ಟಿದ್ಲು. ನಾವು ಹಬ್ಬ ಮಾಡ್ತ ಇರಲಿಲ್ಲಾ. ನನ್ನ ಹೆಂಡ್ತಿಗೆ ನಾನು ಹೇಳ್ತಾ ಇದ್ದದ್ದು ಏನು ಅಂದರೆ ಆ ಹಬ್ಬ ಮಾಡಿದ ದಿನ ಯಾರಾದ್ರೂ ತಿರುಕ ಬಂದ್ರೆ. ಮೊದಲು ಅವನಿಗೆ ಊಟಕ್ಕೆ ಕೊಡು ಇಲ್ಲ ಅಂದ್ರೆ ಮಕ್ಕಳಿಗೆ ಕೊಡು. ಮಕ್ಕಳೇ ನಮಗೆ ದೇವರು ಅಂತಿದ್ದೆ. ಆ ಪ್ರಜ್ಞೆ ನನಗೆ ಮೊದಲಿನಿಂದಲೂ ಇತ್ತು. ಈ ಧರ್ಮವನ್ನ ಸ್ವೀಕಾರ ಮಾಡಿದ ಮೇಲೆ automatic ಆಗಿ ಅವಳು ನನಗೆ ಸಹಕರಿಸಿದ್ಲು. ನಮ್ಮ ಮನೇನಲ್ಲಿ ಎಷ್ಟು ಫೋಟೋಗಳಿತ್ತೋ ಅದನ್ನೆಲ್ಲಾ ನೆಂಟರಿಗೆಲ್ಲಾ ಕೊಟ್ವಿ. ಈಗ ನಮ್ಮ ಮನೆಯಲ್ಲಿ ಬುದ್ಧ ಮತ್ತು ಬಾಬಾ ಸಾಹೇಬರು ಬಿಟ್ರೆ ಇನ್ಯಾರ ಫೋಟೋ ಇಲ್ಲಾ. ನಮ್ಮ ಮಕ್ಕಳು ಆಧುನಿಕರು. ನಾನು ಅಕಸ್ಮಾತ್ತಾಗಿ ಬುದ್ಧನಿಗೆ ಕೈ ಮುಗಿಯಬಹುದು. ಅವರು ಬುದ್ಧನಿಗೆ ಕೈ ಮುಗಿಯಬೇಕಾದ್ರು ಆಲೋಚನೆ ಮಾಡೋ ಮನೋಧರ್ಮದಲ್ಲಿ ಇದ್ದಾರೆ. ಇನ್ನು ಸೊಸೆಯಂದಿರು ನನ್ನ ಇಬ್ಬರು ಮಕ್ಕಳು Inter caste ಮದುವೆ ಆದ್ರು. ಮೊದಲನೇ ಮಗ ಆಚಾರರ caste ನಲ್ಲಿ ಮದುವೆ ಆಗಿದ್ದಾನೆ. ಎರಡನೆಯವನು ಬ್ರಾಹ್ಮಣರನ್ನ ಮದುವೆಯಾಗಿದ್ದಾನೆ. ಅವಳೂ ಕೂಡ ಡಾಕ್ಟ್ರು. ನನ್ನ ಹೆಂಡ್ತಿ ಊದುಬತ್ತಿನಾದ್ರೂ ಹಚ್ಚುತ್ತಾಳೆ. ನನ್ನ ಹಿಂದಿನ ಗುರು ರಮಾನಂದ ಶಾಸ್ತ್ರಿಗಳಿಗೆ. ಆದರೆ ನನ್ನ ಸೊಸೆಯಂದಿರು ಊದುಗಡ್ಡಿಯನ್ನೂ ಹಚ್ಚೊಲ್ಲ. ಮೊಮ್ಮಕ್ಕಳೂ ಕೂಡ ಅಷ್ಟೇ ಬದಲಾವಣೆಯಲ್ಲಿ ಇದ್ದಾರೆ.

ಏನಿಲ್ಲಾ. ಮಾನಸಿಕವಾಗಿ ನಾವು ಬದಲಾಗಬೇಕು ಅನ್ನೊಂದು ಬಂದ್ರೆ ಸಾಕು ಅಷ್ಟೇ. ಎಲ್ಲಾ ತಾನಾಗೇ ಸರಿಹೋಗುತ್ತೆ.

ಸಂದರ್ಶಕರು:     ಈಗ  ಸಾತ್ವಿಕವಾದ ಸ್ವಧರ್ಮದ ಹೆಜ್ಜೆ ಗುರುತುಗಳು ನಮ್ಮ ಕಣ್ಣ ಮುಂದೆ ಇದಾವೆ.  ಧರ್ಮವನ್ನ ಅಂಬೇಡ್ಕರ್ ಸ್ವೀಕಾರ ಮಾಡಿದಂತ ಆದರ್ಶ ಭಾವದ ಹೆಜ್ಜೆಗಳಿವೆ. ಆದ್ರೂ ಕೂಡ ಬಹಳಷ್ಟು ಜನ  ಕಡೆ ಒಲವು ತೋರದೆ ಇರೋದಕ್ಕೆ ಏನ್ ಕಾರಣ, ಸವಾಲುಗಳೇನು?    

ಭಂತೇಜಿ:   ಗೊಂದಲಗಳಿದ್ದಾವೆ. ವೈಯಕ್ತಿಕವಾದಂತಹ ಮಾನಸಿಕವಾದಂತಹ ಗೊಂದಲಗಳಿದ್ದಾವೆ. ಸಂದರ್ಶಕರು: ಎಂತವು? ಹೇಗೆ ನಿವಾರಿಸಬಹುದು? ಭಂತೇಜಿ: ಈ ದೇವರನ್ನ ಬಿಟ್ರೆ ನಮಗೆ ಏನ್ ಅನ್ಯಾಯ ಆಗೋಗುತ್ತೋ ಅಂತ ಭೀತಿ ಎಲ್ಲರಿಗೂ. ಸಂದರ್ಶಕರು: ಅದನ್ನ ಸ್ವಲ್ಪ ವಿಸ್ತರಿಸಿ.

ಭಂತೇಜಿ: ದೇವರ ನಂಬಿರೋರಂತವರಲ್ಲಿ ಲಂಚಕೋರರಿದ್ದಾರೆ. ಇನ್ನೂ ಅವರು ತಿಳಿದುಕೊಂಡಿರೋದು ಏನು ಅಂದರೆ ಈ ಸಂಪತ್ತು. ಈ ವೈಭವದ ಮನೆ ಇದೆಲ್ಲಾ. ದೇವರ ಮಹಿಮೆಯಿಂದ ಬಂದಿರೋದು ಅನ್ನೋ ಭಾವನೆ ತುಂಬಿಕೊಂಡಿದೆ. ಅಂಬೇಡ್ಕರ್ ನಿಜವಾದ ಸಂಪತ್ತನ್ನು ಕೊಟ್ರು ಅನ್ನೋದು ನಮ್ಮ ಜನಾಂಗದವರಿಗೆ ಗೊತ್ತೇ ಇಲ್ಲ. ಈಗಲೂ ಕೂಡ ಎಷ್ಟೊಂದು ಜನ ದೊಡ್ಡ ದೊಡ್ಡ Officer ಮನೆ light ಅಚ್ದ ಕೂಡಲೇ ಕೈ ಮುಗಿತಾರೆ. ನನಗೆ ಹುಸಿನಗು ಬರುತ್ತೆ. ಬುದ್ಧ ಹೇಳಿರೋದು ಜ್ಞಾನದ ಬೆಳಕನ್ನ ಪಡೀರಿ ಅಂತ. ಆ ಜ್ಞಾನದ ಬೆಳಕನ್ನು ಬಿಟ್ಟು ಈ electric light ಗೆ ಕೈ ಮುಗಿತಾರೆ. ಯಾಕೆಂದ್ರೆ ತಮ್ಮಲ್ಲಿರೋ ದೌರ್ಬಲ್ಯಗಳನ್ನು ಬಿಡೋಕೆ ಆಗದೇ ಇರೋ ಕಾರಣ ಇಂತ ಎಷ್ಟೋ ವಿಚಾರಗಳು…. ಈಗ ನಮ್ಮ ದೇವನೂರು ಮಹದೇವು ಅವರು ನಮಗೆಲ್ಲಾ ವೈಚಾರಕತೆಯನ್ನು ಕಲಿಸುದ್ರು. ನಾನು ಹಿರೀಕನಾದ್ರೂ ಅವರಿಂದ ಬೇಕಾದಷ್ಟು ಕಲಿತಿದ್ದೀನಿ. ಈ ವೈಚಾರಿಕ ಪ್ರಜ್ಞೆಯನ್ನು ಪೂರ್ಣ ಬೆಳೆಸಿಕೊಂಡು ನಾನು ಮಾನವನಾಗಿ ಬದುಕುತ್ತೇನೆ. ಬುದ್ಧ ಹೇಳ್ತಾನೆ, ನೂರು ವರ್ಷ ನೀನು ಅಜ್ಞಾನಿಯಾಗಿ ಬದುಕೋದಕ್ಕೆ ಬದಲು ನೀನು ಒಂದು ವರ್ಷ ಜ್ಞಾನಿಯಾಗಿ ಬದುಕು ಅಂತ. ನಮ್ಮೆಲ್ಲರಿಗೂ ಸಾವು ಕಾದಿದೆ. ದೇವನೂರು ಮಹದೇವು ಆಗಿರಬಹುದು. ಸಿದ್ದಲಿಂಗಯ್ಯನವರಾಗಿರಬಹುದು, ಶ್ರೀನಿವಾಸ ಪ್ರಸಾದ್ ಆಗಿರಬಹುದು. ನಾವು ಯಾವುದೇ ಅಧಿಕಾರದಲ್ಲಿ ಇರಬಹುದು. ಸಾವು ಯಾವ ಘಳಿಗೆಯಲ್ಲಿ ಬರ್ತದೆ ಅಂತ ನಮಗೆ ಗೊತ್ತಿಲ್ಲಾ. ಆದರೆ ಬುದ್ಧ ಏನು ಹೇಳ್ತಾನೆ ಅಂದ್ರೆ ನಿನಗೆ ಸಾವು ಬರೋದಕ್ಕಿಂತ ಮುಂಚೆ ನೀನು ಏನು ಸಾಧಿಸಬೇಕೋ ಅದನ್ನ ಸಾಧಿಸು ಅಂತ.  ಈ ಪ್ರಜ್ಞೆ ನಮ್ಮಲ್ಲಿ ಇಲ್ಲದೆ ಇರೋದ್ರಿಂದ ಬುದ್ಧ ಮಾರ್ಗದ ಬಗ್ಗೆ ಯೋಚನೇನೆ ಮಾಡ್ತಾ ಇಲ್ಲ.

ಸಂದರ್ಶಕರುಇಷ್ಟು ವರ್ಷದಲ್ಲಿ, ನೀವು ಸ್ವಧರ್ಮ ಸ್ವೀಕಾರ ಮಾಡಿದ ಇವತ್ತಿನವರೆಗೂ ಯಾವತ್ತಾದರೂ ಇದು ಬಹಳ ಕಠಿಣ, ಕಷ್ಟ ಅಂತ ವಾಪಸ್ ಹೋಗೋಣ ಅಂತ ಏನಾದ್ರೂ ಅನ್ನಿಸಿತ್ತಾ?

ಭಂತೇಜಿ: ನಾನು ಒಂದು ಸಾರಿ ಬಟ್ಟೆಯನ್ನ ತೆಗೆದಿಟ್ಟೆ. ಅದು ಬುದ್ಧನಿಂದ ಬೇಸರ ಆಗಿ ಅಥವಾ ಧರ್ಮದಿಂದ ಬೇಸರ ಆಗಿ ಅಲ್ಲ. ಜನಗಳ ಅವಿವೇಕದಿಂದ ಬೇಸರಗೊಂಡು ನಾನು ಪುನಃ ಬಟ್ಟೆಯನ್ನು ತೆಗೆದು ಗೃಹಸ್ಥನಾದೆ. ಯಾಕೆ ಅಂದ್ರೆ ನಮ್ಮ ಜನ, ಸಂಘ ಸಂಸ್ಥೆಗಳನ್ನ ಸ್ಥಾಪಿಸಿದ್ದಾರೆ ಮತ್ತು ಅದನ್ನು trust ರೀತಿ ಮಾಡ್ತಾರೆ. ಅವರ ಹಿನ್ನೆಲೆಯೆಲ್ಲಾ ಚೆನ್ನಾಗಿಲ್ಲ. ಲಂಚಕೋರ ಆಫೀಸರ್ ಗಳು Trust ನ ಮಾಡಿಕೊಂಡು Retire ಆದಮೇಲೆ ಈ ಭವ್ಯದ ಜೀವನದ ಸುಖವನ್ನೇ ಪಡೋದಕ್ಕೆ ಈ ಸಂಘದ ಸ್ಥಾಪನೆಗಳಿಗೆ ತೊಡಗಿದ್ದಾರೆ. ಅಂಬೇಡ್ಕರ್ ಹೆಸರನ್ನ ಹೇಳಿಕೊಂಡು ತಾವು ಸುಲಿಗೆ ಮಾಡಿಕೊಂಡು ನನ್ನಂತವನನ್ನ ಅಲ್ಲಿಗೆ ಕೂರಿಸ್ತಾರೆ. ಇದನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟ. ಅದಕ್ಕೊಬ್ಬರಿಗೆ ನಾನ್ ಹೇಳಿದೆ. ನೀನು ಬೆಲ್ಟ್ ಹಾಕಿ ಸಾಕೋ ನಾಯಿಗೂನೂ ನನಗೂ ಏನು ವ್ಯತ್ಯಾಸ ಅಂತ. ಅದನ್ನು ಕಾರ್ ನಲ್ಲಿ ಕೂರಿಸ್ಕೋತ್ತೀಯ ಕತ್ತಿಗೆ ಬೆಲ್ಟ್ ಹಾಕುತ್ತೀಯ. ಚಿನ್ನದ ಸರಪಣಿಯನ್ನೇ ಹಾಕ್ತೀಯಾ ಹಂಗೆ ನನ್ನನ್ನೂ ಕಾರಿನಲ್ಲಿ ಕೂರಿಸಿಕೊಂಡು ಓಡಾಡುತ್ತೀಯಾ. ನನಗೂ ಗೌರವ ಕೊಡ್ತೀಯಾ, ನಿನ್ನ ಆಸ್ತಿ ಕಾಯ್ಕೊಳ್ಳೋದಕ್ಕೆ ನಾನು ಸನ್ಯಾಸಿನೇ ವಿನಃ ಜನಾಂಗಕ್ಕೋಸ್ಕರ ಅಲ್ಲ ಅಂತ ಹೇಳಿಬಿಟ್ಟೆ. ಇದನ್ನೆಲ್ಲ ನೋಡಲು ಸಾಧ್ಯವಿಲ್ಲ ಎನಿಸಿಬಿಟ್ಟಿದೆ. ಈಗ ಚೇತವನದಲ್ಲಿ ಇದ್ದೀನಿ. ಇಲ್ಲಿ ಯಾಕೆ ಇದ್ದೀನಿ ಅಂದ್ರೆ ಇದು ಟ್ರಸ್ಟ್ ಅಲ್ಲಾ. ಇದು society. ಮನೋರಖ್ಖಿತ ಭಂತೇಜಿಯವರು ಇದನ್ನ ಪ್ರಾಮಾಣಿಕವಾಗಿ ಮಾಡಿದ್ದಾರೆ. ಈ ಜಮೀನನ್ನ ಕೊಂಡುಕೊಳ್ಳೋಕೆ 75 ಸಾವಿರಗಳನ್ನ ಅವರೊಬ್ಬರೇ ಹಾಕಿದ್ದಾರೆ. ಮುಂದೆ ಇವರ ಆಸ್ತಿಯಾಗಿ ಇದು ಉಳಿಯೋದಿಲ್ಲ. ಇದು society ಆಸ್ತಿ ಆಗುತ್ತೆ. ಅದಕ್ಕಾಗಿ ನಾನು ಇವರನ್ನ ಹುಡುಕಿಕೊಂಡು ಬಂದಿದ್ದೀನಿ. ಈಗ ಇಲ್ಲಿ ‘ಜೇತವನ’ದಲ್ಲಿ ನನಗೆ ಸಮಭಾವವಿದೆ.

ಸಂದರ್ಶಕರು:    ಅಂಬೇಡ್ಕರ್ ರವರ  50 ವರ್ಷ ಸ್ವಧರ್ಮವನ್ನ ಸ್ವೀಕಾರ ಮಾಢಿದ ನೆನಪಿನ ಸಂದರ್ಭದಲ್ಲಿ ಬೌದ್ಧಧರ್ಮದತ್ತ ಹೋಗೋದಕ್ಕೆ ನಾವು ಏನೇನು ಕಾರ್ಯಕ್ರಮಗಳನ್ನು ಹಾಕಿದ್ರೆ ಸಾಮೂಹಿಕ ಬೆಂಬಲ ಬರುತ್ತೆ, ಸಹಕಾರ ಬರುತ್ತೆ, ಒಲವು ಬರುತ್ತೆ.

ಭಂತೇಜಿ: ಒಮ್ಮೆ ಶ್ರೀನಿವಾಸ ಪ್ರಸಾದ್ ಅವರನ್ನ ನಾನು ಕೇಳಿಕೊಂಡೆ. ನೀವೊಬ್ರು ನಮಗೆ ಸಹಕಾರ ಕೊಡಿ ಒಂದು ವರ್ಷದಲ್ಲಿ 3 ಜಿಲ್ಲೆನಲ್ಲಿ ಎಲ್ಲಾ ದಲಿತರನ್ನು ನಾನು ಬೌದ್ಧರಾಗಿ ಪರಿವರ್ತನೆ ಮಾಡ್ದೇನೆ ಅಂತ ಶ್ರೀನಿವಾಸ ಪ್ರಸಾದ್ ಅವರಿಗೆ ಆ ವ್ಯಕ್ತಿತ್ವ ಇದೆ. ಒಳ್ಳೆ ಭಾಷಣಕಾರರು. ಜನ ಅವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆವತ್ತು ಬುದ್ಧನೂ ಸಾಧನೆ ಮಾಡಬೇಕಾದರೆ ರಾಜರ ಬೆಂಬಲವಿತ್ತು. ಬಿಂದುಸಾರ, ಪ್ರಸೇನಜಿತು ಮುಂತಾದಂತ ರಾಜರುಗಳಿದ್ರು. ಈವತ್ತು ರಾಜಕೀಯ ಅಸ್ತ್ರ ಇಲ್ಲದೆ ಜನ ನಮ್ಮ ಮಾತನ್ನ ಕೇಳೋದಕ್ಕೆ ತಯಾರಿಲ್ಲಾ. ಶ್ರೀನಿವಾಸ್ ಪ್ರಸಾದ್ ಅವರು H.C.ಮಹದೇವಪ್ಪನವರು ಸಿದ್ದಲಿಂಗಯ್ಯನವರು ಮತ್ತು ದೇವನೂರ ಮಹದೇವ ಅವರು ನಮ್ಮ ಜೊತೆ ಸೇರಿಕೊಂಡ್ರೆ ನಾವು ಈ ಕೆಲಸ ಮಾಡೋಕೆ ಸಾಧ್ಯ. ಇಂಥಾ ಹಿರಿಯ ನಾಯಕರು ನಮ್ಮ ಜೊತೆ ಸ್ಪಂದಿಸಿದ್ರೆ ಖಂಡಿತ ನಾನು ಅವರಿಗೆ ಭರವಸೆ ಕೊಡ್ತೇನೆ. 5ನೇ ವರ್ಷದಲ್ಲಿ ಕರ್ನಾಟಕದಲ್ಲಿ ಇರುವಂತ ದಲಿತರೆಲ್ಲರಲ್ಲೂ ಬೌದ್ಧಧರ್ಮಕ್ಕೆ ಪರಿವರ್ತನೆ ಮಾಡೋಕೆ ಸಾಧ್ಯ. ನಮಗೆ ಇರೋವಂತ ಮುಖ್ಯ ಕೊರತೆ ಹಣ, ಎರಡನೆಯದು ಈ ನಮ್ಮ ಜನರ ಸಹಕಾರ.

ಸಂದರ್ಶಕರು:    ಭಂತೇಜಿಯವರೆ ಈಗ ನೀವು ಬೌದ್ಧ ಧರ್ಮ ಸ್ವೀಕರಿಸಿದ ನಂತರ  ಅಸ್ಪೃಶ್ಯತೆ ಮತ್ತು ಮಾನಸಿಕ ಕೀಳರಿಮೆಯಿಂದ ಬಿಡುಗಡೆ ಆಗಿದೆ ಅಂತಾ ಭಾವಿಸಿದ್ದೀರಾ?

ಭಂತೇಜಿ: ಬುದ್ಧ ಒಂದು ಸಂದರ್ಭದಲ್ಲಿ ಹೇಳ್ತಾನೆ. ನಾನು ಕೀಳು ನಾನು ಅಂತ ತಿಳಿದುಕೊಂಡಿರೋದೆ ದೊಡ್ಡ ಪಾಪ, ತಪ್ಪು. ಸರ್ವರಿಗೂ ನಾನು ಸಮ, ಸರ್ವರಂತೆ ನಾನು ಬೆಳೆಯಬಲ್ಲೆ ಅಂದುಕೊಂಡರೆ ಸಾಕು. ನಮಗೆ ಏನು ಕಾಡದು. ನಾನು ಯಾರಿಗಿಂತಲೂ ಹೆಚ್ಚು ಅಲ್ಲಾ ಅಥವಾ ಯಾರಿಗಿಂತಲೂ ಕಡಿಮೆ ಅಲ್ಲಾ. ಸರ್ವರಂತೆ ಸಮಾನ ಅನ್ನೋದು ಬೌದ್ಧ ಧರ್ಮ ಸ್ವೀಕಾರ ಮಾಡಿದ ಮೇಲೆ ನನಗೆ ಬಂದಿರತಕ್ಕದ್ದು. ಈವತ್ತು ಒಬ್ಬ ಬ್ರಾಹ್ಮಣ ನನ್ನನ್ನ SC ಅಂಥ ಗುರುತಿಸಬಹುದು. ನನ್ನ ಮನಸ್ಸಿನಲ್ಲಿ ನಾನು ನಿನಗಿಂತಲೂ ಶ್ರೇಷ್ಟ ಅಂತ ನನ್ನ ಮನಸ್ಸು ಹೇಳುತ್ತೆ. ಅಷ್ಟರಮಟ್ಟಿಗೆ ನನಗೆ ಕೀಳರಿಮೆ ನಾಶವಾಗಿದೆ.

ಅದಕ್ಕೊಂದು ಉದಾಹರಣೆ ಕೂಡ ಕೊಟ್ಟುಬಿಡ್ತೇನೆ. ಹಾಲಿಗೆ ಹೆಪ್ಪು ಹಾಕಿದ ಮೇಲೆ ಅದು ಮೊಸರಾಗುತ್ತೆ. ಅದನ್ನು ಪುನಃ ಹಾಲು ಮಾಡೋಕೆ ಆಗಲ್ಲ. ಹಾಗೆ ದಲಿತನಾಗಿದ್ದಂತಹ ನನಗೆ ಬೌದ್ಧ ಧರ್ಮದ ಹೆಪ್ಪು ಬಿದ್ದೋಗಿದೆ. ಈಗ ನಾನು ಮೊಸರಾಗಿದ್ದೀನಿ ಇನ್ನುನೂ ಬೆಣ್ಣೆ ಆಗಬೇಕು. ಇನ್ನೂ ತುಪ್ಪ ಆಗಬೇಕು. ನಾನು ಒಬ್ಬನೇ ಅಲ್ಲಾ. ನಾವೆಲ್ಲರೂನೂ ಆಗಬೇಕು. ಆ ಚೇತನ ಬಂದ ಮೇಲೆ ನಮಗೆ ಅಸ್ಪೃಶ್ಯ ಅಂತ ಆಗಲಿ, ಜಾತಿ ಅಂತ ಆಗಲಿ ಎಲ್ಲಿಂದ ಬರೋಕೆ ಸಾಧ್ಯ.

ಸಂದರ್ಶಕರು: ಬಹಳಾ ಒಳ್ಳೇ ಮಾತು. ಕಣ್ಣು ತೆರೆಸುವಂತಹ ಮಾತು. ಭಂತೇಜಿ ಇನ್ನೊಂದು ಮಾತಿದೆ. ದಲಿತರಾಗಿ ಬೌದ್ಧ ಧರ್ಮನ ಸ್ವೀಕಾರ ಮಾಡಿರೋರು ಮತ್ತು ಮೇಲ್ವರ್ಗದವರಾಗಿ ಬೌದ್ಧ ಧರ್ಮವನ್ನ ಸ್ವೀಕಾರ ಮಾಡಿರೋರ ಮಧ್ಯ ಒಂದು ತಾರತಮ್ಯ ಕೆಲಸ ಮಾಡ್ತಾ ಇದೆ ಅನ್ನೋ ಮಾತಿದೆ.  ರೀತಿ ಮಾತಿರೋದು ನಿಜಾನಾ. ಭಂತೇಜಿ:  ಬೌದ್ಧ ಧರ್ಮವನ್ನ ಸ್ವೀಕಾರ ಮಾಡಿದ ಮೇಲೆ ನಮ್ಮ ಜಾತಿ. ನಮ್ಮ ಧರ್ಮ ಎಲ್ಲ ಬಿಡಬೇಕಾಗುತ್ತೆ. ನಿಜವಾಗ್ಲೂ ಬುದ್ಧನನ್ನು ಸ್ವೀಕಾರ ಮಾಡಿದ್ರೆ ಅವನು ಬಿಟ್ಟಿರುತ್ತಾನೆ. ಯಾವುದೋ ವಿಚಾರಕ್ಕಾಗಿ ಈ ದಮ್ಮವನ್ನ ಸ್ವೀಕಾರ ಮಾಡಿದ್ರೆ ಅಂಥವರಲ್ಲಿ ನೀವು ಹೇಳೋದನ್ನ ಗುರುತಿಸಬಹುದು. ಬುದ್ಧನ ಸದ್ದಮ್ಮದ ಕುರಿತು ಯಾರಿಗೆ ಗೌರವ, ವಿನಯ ಅಂತರಂಗದಲ್ಲಿ ಇರೋದಿಲ್ವೋ ಅಂತವರು ಹಾಗೇ ಮಾಡ್ತಾರೆ ಅಷ್ಟೆ. ಸಂದರ್ಶಕರು: ಇದು ನಿಜವಾಗಿದ್ರೆ Challenge  ನಾವು face ಮಾಡೋದು ಹೆಂಗೆ? ಭಂತೇಜಿ:  Face ಮಾಡ್ಬೇಕು. ಓದಬೇಕು. ಕಲಿತ್ಕೋ ಬೇಕು. ಇಂಥ ಸವಾಲುಗಳನ್ನು ಧಮ್ಮದ ಮೂಲಕವೇ ಎದುರಿಸಬೇಕು ಅಂಥ Challenge ನಮ್ಮೆಲ್ಲರಿಗೂ ಬರಬೇಕು. ದಲಿತರಾಗಿದ್ದು ನಾವು ಧಮ್ಮ ಸ್ವೀಕಾರ ಮಾಡಿದ ಮೇಲೆ, ವಿಚಾರಗಳನ್ನು ಆಳವಾಗಿ, ಸ್ಪಷ್ಟವಾಗಿ ತಿಳ್ಕೋಬೇಕು. ಇನ್ನೊಬ್ಬರನ್ನ ಹಲವು ವಿಧದಲ್ಲಿ Face ಮಾಡಬೇಕು ಅಂತ ನಾವು ತಯಾರ್ ಆಗಬೇಕು ಆದರೆ ಮಾಂಕ್ ಆದೋರಿಗೂ ಕೂಡ  ಆ Challenge ಬರ್ತಾ ಇಲ್ಲ. ಸಂದರ್ಶಕರು: ಬುದ್ದನ ಧರ್ಮಕ್ಕೆ ಸೇರುದ್ರೆ ಸಮುದಾಯ ಪರಿವರ್ತನೆ ಸಾಧ್ಯ ಅಂತ ಹೇಳ್ತೀರ ಭಂತೇಜಿ: ಖಂಡಿತಾ ಸಾಧ್ಯ, ಸಂಖ್ಯೆ ಜಾಸ್ತಿ ಆಗಬೇಕು ಅಷ್ಟೆ. ಅದಕ್ಕೆ ಉದಾಹರಣೆ ಏನು ಅಂದ್ರೆ ಇವತ್ತು ಇರತಕ್ಕಂತಹ ಮುಸಲ್ಮಾನರು ಅರಬ್ ನಿಂದ ಬಂದೋರಲ್ಲಾ. ಇಲ್ಲೇ ಇದ್ದು convert ಆಗಿರೋದು. ಈ ವೀರಶೈವರಲ್ಲಿ ಹೆಚ್ಚು ಇದೇ ದಲಿತರು. ಈಗ ಇರತಕ್ಕಂತಹ ಕ್ರೈಸ್ತರೆಲ್ಲಾ ಈ ದೇಶದವರೇ. ಅವರೆಲ್ಲಾ ನಮ್ಮಲ್ಲೇ ಇದ್ದು ಪರಿವರ್ತನೆ ಆದೋರು ತಾನೆ. ಸಾಮೂಹಿಕ ಪರಿವರ್ತನೆ ಆಗದೆ ಇದ್ರು ಚಿಂತೆಯಿಲ್ಲಾ. ವೈಯಕ್ತಿಕ ಪರಿವರ್ತನೆ ಖಂಡಿತಾ ಆಗುತ್ತೆ. ಸಂದರ್ಶಕರು: ಈಗ ನೀವು ತುಂಬಾ ಶ್ರಮ, ಶ್ರದ್ಧೆ, ಬಹಳ ದೊಡ್ಡ ಸಂಕಲ್ಪ ಮಾಡಿ ಜೇತವನ ಮಾಡಿದ್ದೀರಿ. ಯಾವ ರೀತಿ ಸಹಕಾರಗಳನ್ನ ನಿರೀಕ್ಷೆ ಮಾಡ್ತೀರಿ, ನಿಮ್ಮ ಮುಂದಿನ ಆಲೋಚನೆಗಳು ಏನ್ ಇದ್ದಾವೆ.

ಭಂತೇಜಿ: ಒಂದು ಮಾತು ಮೊದಲೇ ಹೇಳಿಬಿಡ್ತೀನಿ. ಈ ವಿಹಾರ ಕಟ್ಟೋದು, ದಮ್ಮವನ್ನ ಬೋಧಿಸಬೇಕು ಇತ್ಯಾದಿ ಮೋಹಗಳು ನನಗಿಲ್ಲಾ. ಅಲ್ಲದೆ ಈ ಸಂಕಲ್ಪ ಕೂಡಾ ನನದಲ್ಲಾ. ಈ ಸಂಕಲ್ಪವನ್ನ ಕಂಡೋರು ನಮ್ಮ ಮನೋರಖ್ಖಿತ ಭಂತೇಜಿಯವರು ಇಲ್ಲಿ ಬಹಳಷ್ಟು ಜನ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಓದಿದೋರು ಇದ್ದಾರೆ. ವಿಚಾರವಾದಿಗಳಿದ್ದಾರೆ. ಇವರೆಲ್ಲಾ ನಮಗೆ ಸಹಕಾರ ಕೊಡ್ತಾರೆ. ಇಲ್ಲಿ ಒಂದು ಬೌದ್ಧ ವಿಹಾರವನ್ನ ಮಾಡುದ್ರೆ ನಮ್ಮ ಜನಕ್ಕೂ ಅನುಕೂಲವಾಗುತ್ತೆ. ನಾವು ಹಳ್ಳಿಗಳಿಗೆ ಹೋಗೋಣ. ನಮ್ಮ ಜನ ಸಹಕಾರ ನೀಡೇ ನೀಡ್ತಾರೆ. ಈಗಿನ ಯುವಕರಂತೂ ನಮಗೆ ಸಹಕಾರವನ್ನ ಕೊಟ್ಟೇ ಕೊಡ್ತಾರೆ ಅಂತ ಅನ್ನಿಸಿದೆ. ಹಂತ ಹಂತವಾಗಿ ಧರ್ಮವನ್ನ ಬೆಳೆಸಬೇಕು ಅಂತ ಆಸೆ, ಆದ್ರೆ ಇಲ್ಲಿಯವರೆಗೂ contribution ಕೊಟ್ಟಿರೋರೆಲ್ಲಾ ಹೊರಗಿನವರೇ ಹೊರತು. ಇಲ್ಲಿಯವರು ಕಡಿಮೆ. ತಿಂಗಳಿಗೊಂದು ಸಾರಿ ಇಲ್ಲಿ ಪೂರ್ಣಿಮೆ ಅಂತ ಹೇಳಿ ಪೂಜೆಯನ್ನು ಇಟ್ಕೊತ್ತೀವಿ. ಅಕ್ಕಪಕ್ಕದ ಗ್ರಾಮಗಳಿಂದ ಬರ್ತಾರೆ. ನಗರಗಳಿಂನೂ ಬರ್ತಾರೆ. ಸ್ವಲ್ಪ ಸಹಾಯಗಳು ನಡೀತಾ ಇದೆ. ಯಾರೂ ದಿಕ್ಕಿಲ್ಲದಂತಹ ಮಕ್ಕಳನ್ನ ಇಲ್ಲಿಇಟ್ಟುಕೊಂಡು ಊಟ, ತಿಂಡಿ, ವಸ್ತ್ರ ಕೊಟ್ಟು ಧಮ್ಮನೂ ಬೆಳೆಸೋಣ ಅಂತ ಸಂಕಲ್ಪ ಮಾಡಿದ್ದೀವಿ. ದೇವನೂರ ಮಹದೇವ, ಸಿದ್ಧಲಿಂಯ್ಯನವರು, ಗೋವಿಂದಯ್ಯನವರು ಉಳಿದ ನಮ್ಮ ಅನುಕೂಲಸ್ಥ ಜನ ಇವರೆಲ್ಲರೂ ಸಹಕಾರವನ್ನ ಕೊಟ್ರೆ. ಈ ವಿಹಾರವನ್ನ ಚೆನ್ನಾಗಿ ಬೆಳೆಸಬಹುದು… ನಮಗೆ ಈಗ ಮೈಕ್ ಸೆಟ್ ಬೇಕು. ಬೀದಿ ನಾಟಕ ಆಡೋರು, ಹಾಡು ಹೇಳೋರು ಬೇಕು. ಇದೆಲ್ಲಾ ಆಗಬೇಕು ಅಂದ್ರೆ ಹಣ ಬೇಕು. ಇವರೆಲ್ಲಾ ಮನಸ್ಸು ಮಾಡುದ್ರೆ ಇದನ್ನೆಲ್ಲಾ ಬೆಳೆಸಬಹುದು ಮತ್ತು ಇದರ ಶಾಖೆಗಳನ್ನ ತೆಗಿಬಹುದು.

ಸಂದರ್ಶಕರು:    ಸಂದರ್ಭದಲ್ಲಿ ನೀವು ಮುಂದೆ ಬೌದ್ಧ ಧರ್ಮವನ್ನ ಸ್ವೀಕಾರ ಮಾಡಬೇಕು

 ಅನ್ನೋರಿಗೆ ಏನು ಸಂದೇಶವನ್ನ ಕೊಡ್ತೀರಿ?

ಭಂತೇಜಿ:  ಇಂದು ವೈಜ್ಞಾನಿಕ ಮತ್ತು computer ಯುಗ, ಜ್ಞಾನದ ಬೆಳವಣಿಗೆ ಅವಿರತವಾಗಿ ಆಗ್ತಾ ಇದೆ. ಇದು ಸದಾವಕಾಶ.  ಇದೊಂದು ಸುಸಂದರ್ಭ, ನಮಗೆ ಬೇಕಿರಲಿ ಅಥವಾ ಬೇಡದಿರಲಿ, ನಾವು ಎಲ್ಲರೂ ಬದಲಾಗಬೇಕು. ಬೌದ್ಧರು ಅನ್ನೋ ಮನೋಭಾವ ಸರ್ವರಿಗೂ ಬರಬೇಕು. ಅವನು ಕೂಲಿಕಾರನಾಗಲಿ, ಅವನು ಯಾರು ಅಂತ ಕೇಳುದ್ರೆ ನಾನು ಬೌದ್ಧ ಅಂತ ಹೇಳೋ ಕಿಚ್ಚು ಬರಲಿ. ಪುನಃ ನಾನು ಮಾನವನಾಗಿ ಬದುಕಬೇಕು ಅಂದ್ರೆ ಬೌದ್ಧಧರ್ಮ ಒಂದೇ ಎಂದು ಪ್ರತಿಯೊಬ್ಬರೂ ತಿಳಿಯಬೇಕು. ತಮ್ಮೆಲ್ಲರ ಸಹಕಾರದಿಂದ ಇದು ಇನ್ನು ಮುಂದೆ ಖಂಡಿತವಾಗಿ ಯಶಸ್ವಿಯಾಗುತ್ತೆ. ಹೀಗಾಗಿ ಎಲ್ಲರೂ ಬುದ್ಧನೆಡೆಗೆ ಬನ್ನಿ ಅಂತ ಹೇಳೋಕ್ಕೆ ಇಚ್ಛೆಪಡ್ತೀನಿ.

ಬಾಬಾ ಸಾಹೇಬರು ಧರ್ಮಾಂತರ ಮಾಡಿಕೊಳ್ಳಲಿಲ್ಲ.  ಸ್ವಧರ್ಮವಾದ ಬೌದ್ಧಧರ್ಮವನ್ನ ಸ್ವೀಕರಿಸಿದರು ಅಂತ ನಾವು ಹೇಳಬೇಕು. He embraced Buddhism ಅಂತ ನಾವು ಹೇಳ್ಬೇಕು. ಖಂಡಿತವಾಗಿಯೂ ಬಾಬಾಸಾಹೇಬರು ಧರ್ಮಾಂತರ ಮಾಡಲಿಲ್ಲಾ. ಅವರು ಎಲ್ಲಾ ಧರ್ಮವನ್ನ ಅಧ್ಯಯನ ಮಾಡಿ ಬೌದ್ಧ ಧರ್ಮ ಒಂದೇ ಮಾನವ ಧರ್ಮ ಅಂತ ಕಂಡುಕೊಂಡಿದ್ರು ಮತ್ತು ಅವರೇ ಇತಿಹಾಸಕಾರರಾಗಿದ್ದರಿಂದ ಬೌದ್ಧಧರ್ಮ ಹಿಂದೆ ಈ ಭಾರತದ ಮೂಲ ನಿವಾಸಿಗಳ ಮೂಲ ಧರ್ಮ ಅನ್ನೋದನ್ನ ಸಂಶೋಧನೆ ಮಾಡಿದ್ರು. 1956ನೇ ಇಸವಿಯಲ್ಲಿ ಬೌದ್ಧಧರ್ಮ ಸ್ವೀಕರಿಸೋ ಉತ್ಸಾಹ ನಮ್ಮ ಎಲ್ಲಾ ಜನರಿಗೆ ಬರಲಿ ಅನ್ನೋ ಕಾರಣಕ್ಕೆ ಬೌದ್ಧಧರ್ಮವನ್ನ ಸ್ವೀಕಾರ ಮಾಡುದ್ರು. ಅದು ಸ್ವಧರ್ಮವನ್ನು ಸ್ವೀಕಾರ ಮಾಡಿದ್ದೇ ವಿನಃ ಅದು ಧರ್ಮಾಂತರ ಅಲ್ಲಾ. ಈ ಹಿಂಸೆ ಇರತಕ್ಕಂತಹ ಒಂದು ಧರ್ಮವನ್ನು ಬಿಟ್ಟು ಮಾನವ ಧರ್ಮವಾದಂತಹ ಮತ್ತು ನಮ್ಮದೇ ಆದಂತಹ ಸ್ವತಃ ಬೌದ್ಧಧರ್ಮವನ್ನ ಸ್ವೀಕರಿಸ್ತಾ ಇದ್ದೀವಿ ಅನ್ನುವ ಮನೋ ಇಚ್ಛೆ ಇರಬೇಕು ವಿನಃ ಇದು ಧರ್ಮಾಂತರ ಅಲ್ಲ. ನಮ್ಮದೇ ಮನೆ ಸುಣ್ಣಬಣ್ಣ ಹೊಡೆಸಿಕೊಂಡು ನಾವು ಪುನಃ ಗೃಹಪ್ರವೇಶ ಮಾಡ್ತಾ ಇದ್ದೀವಿ. ಈ ಧರ್ಮಸ್ವೀಕಾರ ಮಾಡಬೇಕು ಅಂದ್ರೆ ಬಿಕ್ಕುಗಳೇ ಆಗಬೇಕಾಗಿಲ್ಲ. ಉಪಾಸಕ, ಉಪಾಸಕಿ ಆಗೋದಕ್ಕೆ ಯಾರು ಬೇಕಾದ್ರು ಆಗಬಹುದು. ನಾವು ಪಂಚಶೀಲಗಳನ್ನು ಪಾಲಿಸೋದ್ರಲ್ಲಿ ಲೋಪ ಇದ್ರೂ ಕೂಡ ನಾವು ಬೌದ್ಧರು ಅಂತ ಹೇಳೋ ಛಾತಿ ನಮಗೆಲ್ಲ ಬರಬೇಕು. ಬರಲಿ. ಯಾಕೆ ಅಂದ್ರೆ ಯಾರು ಕೂಡ 5 ಶೀಲಗಳನ್ನು Perfect ಆಗಿ ಓದಿಲ್ಲಾ. Even ಮೂಲ Buddhist ಕೂಡ. ಸಣ್ಣಪುಟ್ಟ mistake ಗಳು ಇದ್ರುಕೂಡ ಚಿಂತೆಯಿಲ್ಲ. 50ನೇ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಬೌದ್ಧ ಧರ್ಮ ಸ್ವೀಕಾರ ಎಲ್ಲಾ ಕಡೆ ನೆರವೇರಬೇಕು.

ಸಂದರ್ಶಕರುಬೌದ್ಧ ಧರ್ಮ ಪ್ರಚಾರದಲ್ಲಿ ನಿಮ್ಮ ಕೊಡುಗೆ ಏನು ಎಂಬ ಬಗ್ಗೆ ಕೊಂಚ ವಿವರಿಸಿ.

ಭಂತೇಜಿ:  ಈ ದಮ್ಮದ ಮಹತ್ವವನ್ನ ಜನರಿಗೆ ಬೋಧಿಸಿದ್ದೇನೆ. ಎಷ್ಟೋ ಜನರ ದೀಕ್ಷೆಯನ್ನು ಪಡೆದಿದ್ದಾರೆ. ನನ್ನ ಭಾಷಣವನ್ನ ಕೇಳಿದ ಮೇಲೆ ಎಷ್ಟೋ ಜನ ದಲಿತರು ಈ ಹಿಂದೂ ಧರ್ಮ ನಮಗೆ ಬೇಡ. ಇವತ್ತಿನಿಂದ ನಾವು ಬೌದ್ಧರು ಅಂತಕ್ಕಂತ ವಿಚಾರವನ್ನ ಹೇಳುದ್ರು. ಇದಲ್ಲದೆ ನಾನು ಒಂದು ಸಾರಿ ರಾಮನಗರದ ಹತ್ತಿರ ಜನಪದ ಲೋಕದಲ್ಲಿ ಮೂರುದಿನ ದಲಿತ ಸಂಘರ್ಷ ಸಮಿತಿಯನ್ನ ಒಗ್ಗೂಡಿಸಿ ಕಾರ್ಯಕರ್ತರಿಗೆ ಬೌದ್ಧಧರ್ಮ ಕುರಿತು ಬೌದ್ಧ ಧರ್ಮದ ಮಹತ್ವ. ಧ್ಯಾನದ ಮಹತ್ವ ಮತ್ತು ಧ್ಯಾನವನ್ನು ಹೇಗೆ ಮಾಡಬೇಕು ಅಂತಕ್ಕದ್ದನ್ನ ಅಲ್ಲಿ ಹೇಳಿಕೊಟ್ಟಿದ್ದೇನೆ. ಅನೇಕ ಆಹ್ವಾನಗಳು ಬರುತ್ತಲೇ ಇವೆ. ಹೊಸಪೇಟೆ ಬಳಿ ನಡೆದ ಸಮಾರಂಭವೊಂದರಲ್ಲಿ ಭಾಷಣ ಮಾಡಿದೆ. ಬರೀ ದಲಿತರೇ ಅಲ್ಲಾ ಬೇರೆ ಜಾತಿಯ ಮುಖಂಡರೂ ಕೂಡ ಆ ದಮ್ಮದ ಪ್ರಭಾವವನ್ನ ಕೇಳಿ ಬೌದ್ಧ ಧರ್ಮ ಅಂದರೆ ಹೀಗಿದೆಯೆ ಅಂತ ಆಶ್ಚರ್ಯವನ್ನ ವ್ಯಕ್ತಪಡಿಸಿದ್ರು. ಮಂಗಳೂರು ಜಿಲ್ಲೆಯಲ್ಲೂ ಕೂಡ 3 ದಿನದ ಒಂದು ಕಾರ್ಯಕ್ರಮವನ್ನ ಇಟ್ಟುಕೊಂಡಿದ್ರು. ಹಾಗೇನೆ ಹೊಳೇನರಸೀಪುರ ಮತ್ತು ಸಕಲೇಶಪುರ ಮುಂತಾದ ಕಡೆಗಳಲ್ಲೂ ಬೌದ್ಧ ಧರ್ಮದ ಬಗ್ಗೆ ತರಬೇತಿಯನ್ನ ಕೊಟ್ಟಿದ್ದೇನೆ ಮತ್ತು ದೀಕ್ಷೆಯನ್ನ ಕೊಟ್ಟಿದ್ದೇನೆ. ಇದೆಲ್ಲಾ ಅಲ್ಲದೆ ಗುಲ್ಬರ್ಗಾದಲ್ಲೂ ಕೂಡ ಒಂದು ಸಮಾರಂಭದಲ್ಲಿ ಉಪನ್ಯಾಸ ಮಾಡಿದೆ. ಅಂದು ಭಾಷಣವನ್ನು ಕೇಳಿದಂತಹ ಅನೇಕ ದೀಕ್ಷೆಯನ್ನ ಪಡೆದು ಧಾರ್ಮಿಕ ವಿಚಾರ ಹೇಗಿರಬೇಕು ಅನ್ನೋದನ್ನ ಚರ್ಚೆ ಮಾಡಿ ತಿಳಿದುಕೊಂಡಿದ್ದಾರೆ.

ಹೀಗೆ ಅನೇಕ ಹಳ್ಳಿಗಳಲ್ಲಿ ಅನೇಕ ನಗರಗಳಲ್ಲಿ ಈ ಬೌದ್ಧ ಧರ್ಮದ ಪ್ರಚಾರ ನಡೀತಾನೆ ಇದೆ. ನನಗೆ ಬಹಳ ಹತ್ತಿರಕ್ಕೆ ಬಂದವರೆಲ್ಲಾ ಬೌದ್ಧ ಧರ್ಮಸ್ವೀಕಾರ ಮಾಡಿ ಪರಿವರ್ತನೆ ಆಗ್ತಾ ಇದ್ದಾರೆ. ಈ ಧಮ್ಮವನ್ನು ಸ್ವೀಕಾರ ಮಾಡಿ ಅವರ ಜೀವನವನ್ನ ಮಾರ್ಪಾಡು ಮಾಡಿಕೊಂಡರೆ ಅದೇ ನನಗೆ ಮಿಗಿಲಾದ ಸಂತೋಷ. ಗಾಳಿಧ್ವಜಚಿತ್ತ ಗಾಳಿ ಬಲವಾಗಿ ಬೀಡುತ್ತಿತ್ತು. ಎದುರಿನ್ಲಲಿ ತೂಗುಬಿಟ್ಟಿದ್ದ ಧ್ವಜ ಗಾಳಿಗೆ ಪಟಪಟಿಸುತ್ತಿತ್ತು. ಅಲ್ಲಿ ಇಬ್ಬರು ಭಿಕ್ಷುಕರು ನಿಂತಿದ್ದರು. ಅವರಲ್ಲಿ ಒಬ್ಬ ಹೀಗೆ ಹೇಳಿದ. ʼಚಲಿಸುತ್ತಿರುವುದು ಗಾಳಿಯಲ್ಲʼ ಅದನ್ನು ವಿರೋಧಿಸಿ, ಇನ್ನೊಬ್ಬ ಹೀಗಂದ. ʼಅಲ್ಲ, ಗಾಳಿಯೇ ಚಲಿಸುತ್ತಿರುವುದು, ಧ್ವಜವಲ್ಲʼ ಅಷ್ಟರಲ್ಲಿ, ಅಲ್ಲಿ ಹಾದು ಹೋಗುತ್ತಿದ್ದ ಮೂರನೆಯ ಭಿಕ್ಷು, ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡು ತಾನು ಹೀಗೆ ತೀರ್ಮಾನ ಹೇಳಿದ. ʼಗಾಳಿ ಚಲಿಸುತ್ತಿಲ್ಲ. ಧ್ವಜ ಚಲಿಸುತ್ತಿಲ್ಲ. ಚಲಿಸುತ್ತಿರುವುದು ನಿಮ್ಮ ಚಿತ್ತ.  
ಋತುಮಾನ ಒಂದು ಲಾಭರಹಿತ ಪ್ರಯೋಗ. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ razorpay.me/@ruthumanatrust Download RUTHUMANA App here : ** Android *** : https://play.google.com/store/apps/details?id=ruthumana.app ** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ