ಡೇವಿಡ್ ಬಾಂಡ್ ಬರೆಯುವ ಚಿತ್ರಭಾರತ: ಫೆಸ್ಟಿವಲ್ ಸಿನೆಮಾ

ಮೂಲತಃ ಫ್ರಾನ್ಸ್ ನ ಡೇವಿಡ್ ಭಾರತದ ಸಿನೆಮಾಗಳೂ ಸೇರಿದಂತೆ ಜಾಗತಿಕ ಸಿನೆಮಾ ಚರಿತ್ರೆಯ ಕುರಿತು ಹೆಚ್ಚಿನ ಆಸಕ್ತಿ, ತಿಳುವಳಿಕೆ ಹೊಂದಿದ್ದಾರೆ. ತಮ್ಮನ್ನು ಚರಿತ್ರಕಾರ ಎಂದು ಕರೆದುಕೊಳ್ಳುವ ಡೇವಿಡ್ ಪ್ರತಿವಾರ ಭಾರತೀಯ ಸಿನೆಮಾಗಳನ್ನು ವಿಮರ್ಶಿಸಲಿದ್ದಾರೆ.

locarnoಈ ಅಂಕಣದಲ್ಲಿ ನಾನು ವಿಮರ್ಶಿಸಲಿರುವ ಚಿತ್ರಗಳು. ಕೋರ್ಟ್ (ಮರಾಠಿ,೨೦೧೪,ಚೈತನ್ಯ ತಮ್ಹಾನೆ), ಮಸಾಣ್ (ಹಿಂದಿ,೨೦೧೫,ಇಂಡಿಯನ್/ಫ್ರೆಂಚ್ ಸಹನಿರ್ಮಾಣ, ನೀರಜ್ ಘ್ಯಾವನ್) ಮತ್ತು ತಿಥಿ (ಕನ್ನಡ, ೨೦೧೬, ಇಂಡಿಯನ್/ಅಮೆರಿಕ ಸಹ ನಿರ್ಮಾಣ, ರಾಮ್ ರೆಡ್ಡಿ)

ಫೆಸ್ಟಿವಲ್ ಸಿನೆಮಾ

ವಿಮರ್ಶಾತ್ಮಕವಾಗಿ ಮನ್ನಣೆ ಪಡೆದ ಚಿತ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಪ್ರತಿಕ್ರಿಯೆಗಳಿರುತ್ತೆ. ಒಂದು, ಅದು ತಪ್ಪದೇ ನೋಡಲೇ ಬೇಕಾದ ಚಿತ್ರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದು- ಹೊಸ ಬ್ರಾಂಡಿನ ಶೂ ಅಥವಾ ‘ಮೊಬೈಲ್ ಫೋನ್’ ಮಾರ್ಕೆಟ್ ನಲ್ಲಿ ಬಂದಿದೆ ಎಂದಾಕ್ಷಣ ಅದನ್ನ ಖರೀದಿಸಿಬಿಡಬೇಕೆಂಬ ಹಪಾಹಪಿ ತರಹದ್ದಿದು. ಇನ್ನೊಂದು ಸ್ವಲ್ಪವೂ ಆಚಿಚೆ ನೋಡದೇ ಅಂದರೆ ಚಿತ್ರವನ್ನು ನೋಡದೆಯೇ ಅಥವಾ ಅರ್ಥೈಸದೇ ಅದನ್ನ ಒಪ್ಪಿಕೊಂಡು ಬಿಡುವುದು.
ಇಂದಿನ ಸಿನೆಮಾ ಜಗತ್ತಿನಲ್ಲಿ “ವಿಮರ್ಶಕ” ರೆನಿಸಿಕೊಂಡವರು ಈ ಬಗೆಯ ಬ್ರಾಂಡೆಡ್ ಸಿನೆಮಾಗಳನ್ನು ಮಾರ್ಕೆಟ್ ಮಾಡುವ ಸೇಲ್ಸ್ ಮನ್ ರ ಹಾಗೆ ವರ್ತಿಸುತ್ತಿದ್ದಾರೆ. ಜಾಗತಿಕ ಸಿನೆಮಾ ವೀಕ್ಷಕರು (ಫಿಲಂ ಪೆಸ್ಟಿವಲ್ ಗಳಲ್ಲಿ ಅಂಡಲೆಯುವವರು) ಮೆಚ್ಚಿಕೊಳ್ಳುವ ಶೈಲಿ ಈ ಚಿತ್ರಗಳಲ್ಲಿದೆ ಎನ್ನುವ ಗ್ಯಾರಂಟಿಯನ್ನೂ ಅವರು ಕೊಡುತ್ತಾರೆ. ಹೆಚ್ಚಿನ ಸಮಯ ಇವರ ಅಭಿಪ್ರಾಯಗಳು ಡಾಂಭಿಕತೆಯಿಂದ ಕೂಡಿದ್ದರೂ ಕೆಲವೊಮ್ಮೆ ಅದೃಷ್ಟವಶಾತ್ ಇಂತಹ ಹೊಗಳು ವಿಮರ್ಶೆಗಳಿಂದ ಕೆಲವು ಕಳಪೆ ಫೆಸ್ಟಿವಲ್ ಸಿನೆಮಾಗಳು ಬಚಾವಾಗುವುದುಂಟು.

Picture22ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗುವ ಚಿತ್ರಗಳ ಕುರಿತು ಅತ್ಯುತ್ಸಾಹಿಗಳಾಗಿರುವವರ ನಡುವೆ ನಾನು ನನ್ನನ್ನ ಸ್ವಲ್ಪ ಅನುಮಾನದ ಪ್ರವೃತ್ತಿಯವನು ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ. ಒಂದು ಸಿನೆಮಾ, ವಿಮರ್ಶಕರಿಂದ ಮನ್ನಣೆ ಪಡೆದಿದೆ ಎಂದಾಗಲೀ ಅಥವಾ ಜಗತ್ತಿನೆಲ್ಲೆಡೆ ನಡೆಯುವ ಚಿತ್ರೋತ್ಸವಗಳಲ್ಲಿ ವಿಜೇತವಾಗಿದೆಯೆನ್ನುವುದಾಗಲೀ ನನ್ನನ್ನು ಹೆಚ್ಚು ಇಂಪ್ರೆಸ್ ಮಾಡುವುದಿಲ್ಲ. ಇದಕ್ಕೆ ಸಕಾರಣವೂ ಇದೆ. ಚಾರಿತ್ರಿಕವಾಗಿ ಇಂತಹ ಹೊಗಳು ವಿಮರ್ಶಕರು ಮತ್ತು ಚಿತ್ರೋತ್ಸವಗಳು ಸುಲಭವಾಗಿ ಮನ್ನಣೆ ನೀಡುವ ಈ ಸಿನೆಮಾಗಳು ಹೆಚ್ಚಿನ ಸಂದರ್ಭಗಳಲ್ಲಿ ಶ್ರೇಷ್ಟ ಸಿನೆಮಾಗಳಾಗಿರುವುದಿಲ್ಲ. (ಸಹಜವಾಗಿ ಇದಕ್ಕೆ ಅಪವಾದಗಳೂ ಇವೆ.) ಅಥವಾ ಇದನ್ನೂ ಹೀಗೂ ಹೇಳಬಹುದೆನೋ. ಬಹಳಷ್ಟು ಸಂದರ್ಭಗಳಲ್ಲಿ ಅತ್ಯುತ್ತಮ ಸಿನೆಮಾಗಳಿಗೇ ಈ ಚಿತ್ರೋತ್ಸವದ ಪ್ರಶಸ್ತಿಗಳು ದೊರಕುತ್ತವೆ ಎನ್ನುವ ಹಾಗಿಲ್ಲ. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಚೇತನ್ ಆನಂದ್ ರ ನೀಚಾ ನಗರ್ ಅನ್ನೇ ನೋಡಿ. ೧೯೪೬ ರ ಕೇನ್ಸ್ ಚಿತ್ರೋತ್ಸವದಲ್ಲಿ ‘ಗ್ರಾಂಡ್ ಪ್ರಿಕ್ಸ್’ ಪಡೆದ ಸಿನೆಮಾ ಇದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ಆದರೇ ಹೀಗೆ ಹೆಮ್ಮೆ ಪಡುವವರು ಮರೆಯುವ ವಿಚಾರವೆಂದರೆ ಕೇನ್ಸ್ ಚಿತ್ರೋತ್ಸವದ ಮೊದಲ ವರ್ಷ ಕೇವಲ ನೀಚಾ ನಗರ್ ಗೆ ಮಾತ್ರವಲ್ಲದೆ ೧೧ ಬೇರೆ ಬೇರೆ ದೇಶ ಭಾಶೆಗಳ ಸಿನೆಮಾಗಳಿಗೂ ಗ್ರಾಂಡ್ ಪ್ರೀಕ್ಸ್ ನೀಡಲಾಗಿತ್ತು!!. ಚಿತ್ರೋತ್ಸವಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವುದರ ಜೊತೆಗೆ , ಹೆಚ್ಚಿನ ಸಿನೆಮಾಗಳು ಚಿತ್ರೋತ್ಸವಕ್ಕೆ ಹರಿದು ಬರಲು ಪ್ರೇರೆಪಿಸುವ ಉದ್ದೇಶ ಈ ನಡೆಯಲ್ಲಿತ್ತು ಎನ್ನುವುದನ್ನು ತಿಳಿದುಕೊಂಡರೆ ನಾನು ಮೇಲೆ ಪ್ರಸ್ತಾಪಿಸಿದ ಅಂಶ ಸ್ಪಷ್ಟವಾಗುತ್ತದೆ. ಇಲ್ಲಿ ಪ್ರಶಸ್ತಿ ಗೆದ್ದ ಹನ್ನೊಂದಕ್ಕೆ ಹನ್ನೊಂದೂ ಚಿತ್ರಗಳು ಹೆಚ್ಚಿನ ಜನರ ನೆನಪಿನಿಂದ ಮರೆಯಾಗಿದೆ. ನೀಚಾ ನಗರ್ ಒಂದು ಒಳ್ಳೆಯ ಚಿತ್ರವಾಗಿದ್ದರೂ ಹೆಚ್ಚಿನ ಭಾರತೀಯ ಸಿನೆಮಾಸಕ್ತರಿಗೇ ಈ ಚಿತ್ರದ ಪರಿಚಯವಿಲ್ಲ.

ಸದ್ಯದ ಉದಾಹರಣೆಯನ್ನೇ ಕೊಡುವುದಾದರೇ, ೨೦೧೬ ರ ಕನ್ನಡ ಚಿತ್ರ ತಿಥಿಯ ಪ್ರಿಮಿಯರ್ ಪ್ರದರ್ಶನ ಅದರ ತವರು ಕರ್ನಾಟಕದಲ್ಲಾಗದೇ ದೂರದ ಇಟಲಿಯ ಲೊಕಾರ್ನೊ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಅಲ್ಲಿ ‘ಗೋಲ್ಡನ್ ಲಿಪಾರ್ಡ್’ ಮನ್ನಣೆಯನ್ನೂ ಪಡೆದುಕೊಂಡಿತು. ಇದಾದ ನಂತರ ಮುಂಬೈ, ಪಾಮ್ ಸ್ಪ್ರಿಂಗ್ಸ್‍, ಮುಂತಾದ ಚಿತ್ರೋತ್ಸವಗಳನ್ನು ಸುತ್ತಿ ಕರ್ನಾಟಕದ ಜನ ಈ ಚಿತ್ರ ನೋಡುವಂತಾಗಿದ್ದು ಬೆಂಗಳೂರು ಚಿತ್ರೋತ್ಸವದಲ್ಲಿ, ಅದೂ ಸುಮಾರು ಒಂದು ವರುಷದ ನಂತರ. ಆದರೇ ಕನ್ನಡ ಸಿನೆಮಾ ಒಂದಕ್ಕೆ ಅದೆಲ್ಲೋchakra ಇಟಲಿಯಲ್ಲಿ ‘ಗೋಲ್ಡನ್ ಲಿಪಾರ್ಡ್ ಪ್ರಶಸ್ತಿ’ ಬಂದಿರುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಆ ಚಿತ್ರೋತ್ಸವದಲ್ಲಿ ಈ ಹಿಂದೆ ಪ್ರಶಸ್ತಿ ಬಂದ ಚಿತ್ರಗಳ ಪಟ್ಟಿ ಅಂತಹ ಉತ್ತಮ ಚಿತ್ರಗಳದ್ದೇನೂ ಅಲ್ಲ, ಸಹಜವಾಗಿ ಕೆಲವೊಂದು ಒಳ್ಳೆಯ ಸಿನೆಮಾಗಳು ಆ ಪಟ್ಟಿಯಲ್ಲಿರುವುದು ಹೌದಾದರೂ ಅಲ್ಲಿ ಪ್ರಶಸ್ತಿ ಪಡೆದ ಚಿತ್ರಗಳೆಲ್ಲ ಉತ್ಕೃಷ್ಟ ಗುಣಮಟ್ಟದ ಚಿತ್ರಗಳೇನಲ್ಲ. ತಿಥಿ ಬಿಟ್ಟರೆ ಗೋಲ್ಡನ್ ಲಿಪಾರ್ಡ್ ಪ್ರಶಸ್ತಿ ಪಡೆದ ಇನ್ನೊಂದೇ ಒಂದು ಭಾರತೀಯ ಚಿತ್ರ ರವೀಂದ್ರ ಧರ್ಮರಾಜರ ‘ಚಕ್ರ’ (೧೯೮೧). ವೈಯಕ್ತಿಕವಾಗಿ ನಾನು ತುಂಬಾ ಇಷ್ಟಪಟ್ಟು ಹಲವು ಬಾರಿ ನೋಡಿದ ಸಿನೆಮಾ ಇದಾದರೂ ಭಾರತದಲ್ಲಿ ಈ ಚಿತ್ರ ನೋಡಿರುವವರಾಗಲೀ, ತಿಳಿದವರಾಗಲೀ ತುಂಬಾ ಕಡಿಮೆ.

ಇತ್ತೀಚಿನ ದಿನಗಳಲ್ಲಿ ಚಿತ್ರೋತ್ಸವದ ಪ್ರೇಕ್ಷಕರನ್ನ ಗಮನದಲ್ಲಿಟ್ಟುಕೊಂಡು ಸಿನೆಮಾ ನಿರ್ಮಿಸುವವರ ಸಂಖ್ಯೆ ಹೆಚ್ಚಾಗಿದೆ. ಸ್ಪಷ್ಟವಾಗಿ ಈ ಚಿತ್ರೋತ್ಸವದ ಚಿತ್ರಗಳಿಂದ ಸಿನೆಮಾ ನಿರ್ದೇಶಕರಿಗೆ ಸಾಕಷ್ಟು ಅನುಕೂಲ, ಪ್ರಯೋಜನಗಳಿದ್ದರೂ ಪ್ರೇಕ್ಷಕನಿಗೆ ಸಿಗುವುದು ಅಷ್ಟರಲ್ಲೇ ಇದೆ. ನಿರ್ದೇಶಕನಿಗೆ ಸ್ಥಳಿಯ ಮಾರುಕಟ್ಟೆಯ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರವಾಗಿ ಪ್ರಯೋಗಶೀಲ ಸಿನೆಮಾ ನಿರ್ಮಿಸುವ ಅವಕಾಶ ಒದಗಿಸುತ್ತದೆ. ಭಾರತೀಯ ಸಿನೆಮಾ ಪರಿಸರದಲ್ಲಿ ಇದು ವಾಸ್ತವ. (ಆದರಲ್ಲೂ ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳ ಸಂಪ್ರದಾಯಗಳಿಗೆ ಮಟ್ಟಿಗೆ ಇದು ಅಕ್ಷರಶಃ ನಿಜ). ಇನ್ನೊಂದು ಕಡೆ ಜಾಗತಿಕ ಮಾರುಕಟ್ಟೆ ಹೆಚ್ಚು ಸಾಂಪ್ರದಾಯಿಕವಾಗಿರದಿದ್ದರೂ ಇದಕ್ಕೂ ಇದರದ್ದೆ ಆದ ಆದ್ಯತೆಗಳಿವೆ. ಉದಾಹರಣೆಗೆ ಒಂದು ಕಡೆ ಗಂಭೀರ ಸಾಹಿತ್ಯಾಧರಿತ ಚಿತ್ರಗಳನ್ನ ಫೆಸ್ಟಿವಲ್ ಸಿನೆಮಾಗಳೆಂದು ಗುರುತಿಸಿದರೆ, ಇನ್ನೊಂದು ಕಡೆ ದುರ್ಬಲ ಕತೆ ಮತ್ತು ಕೆಟ್ಟ ಸಂಕಲನವಿದ್ದರೂ , ಹೆಚ್ಚು ಆಡಂಬರವಿಲ್ಲದೆ ಸರಳವಾಗಿ ಚಿತ್ರಿಸಿದ್ದಾರೆ, ಚಿತ್ರ ನಿಧಾನಗತಿಯಲ್ಲಿದೆ ಎಂಬ ಕಾರಣಕ್ಕೂ ಫೆಸ್ಟಿವಲ್ ನಲ್ಲಿ ಸಿನೆಮಾಗಳು ಹುಟ್ಟಿಕೊಂಡ ಉದಾಹರಣೆಗಳಿವೆ.

ಸ್ಥಳಿಯ ಮುಖ್ಯವಾಹಿನಿಯ ಪ್ರೇಕ್ಷಕ ಅದೇ ಹಳೆಯ ಸವಕಲು ಸಿನೆಮಾಗಳನ್ನು ವಿಧಿಯಿಲ್ಲದೆ ಒಪ್ಪಿಕೊಂಡರೆ, ಫೆಸ್ಟಿವಲ್ ಸಿನೆಮಾಗಳಲ್ಲಿ ನಿರ್ದೇಶಕನ ಆತ್ಮ ರತಿಯ ಪ್ರದರ್ಶನವನ್ನು ಪ್ರತಿ ಬಾರಿ ಒಪ್ಪಿಕೊಳ್ಳುವ ಪ್ರೇಕ್ಷಕನ ಸಹನೆ ದೊಡ್ಡದು. ಈ ಬಗೆಯ ಫೆಸ್ಟಿವಲ್ ಸಿನೆಮಾ ಅಥವಾ ಕ್ಲಾಸ್ ಸಿನೆಮಾ ಎನ್ನುವ “ಬ್ರ್ಯಾಂಡ್” ನ ಅಡಿಯಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು- “ಜನಪ್ರಿಯ” ಸಿನೆಮಾಗಳಂತೆಯೇ- ಬಿಡುಗಡೆ ಮುಂಚೆ ಪಡೆಯುವ ಬಿಟ್ಟಿ ಪ್ರಚಾರವನ್ನು ನಿರ್ಲಕ್ಷಿಸುವುದೊಳಿತು. ಬದಲಿಗೆ ಪ್ರತಿ ಸಿನೆಮಾವನ್ನು ಬಿಡಿ ಬಿಡಿಯಾಗಿ ನೋಡಿ ಆ ಪ್ರಕಾರದ ಸಿನೆಮಾಗಳಲ್ಲಿ ಈ ಚಿತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನ ಅಳೆಯಬೇಕು.
ನಾನು ಮುಂದೆ ವಿಮರ್ಶಿಸಲಿರುವ ಮೂರೂ ಚಿತ್ರಗಳು ಈ ಫೆಸ್ಟಿವಲ್ ಫಿಲಂ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಂತವೆ ಆಗಿವೆ. ಅದರಲ್ಲಿ ಎರಡು ಚಿತ್ರಗಳು ವಿದೇಶದ ಸಹನಿರ್ಮಾಣದೊಂದಿಗೆ ತಯಾರಾಗಿವೆ ಎನ್ನುವುದು ಕೌತುಕದ ಸಂಗತಿ. ಈ ವಿದೇಶಿ ಸಹನಿರ್ಮಾಣದೊಂದಿಗೆ ತಯಾರಾಗುವ ಚಿತ್ರಗಳಿಗೂ ಒಂದು ಇತಿಹಾಸವಿದೆ ಮತ್ತು ಇಂತಹ ಚಿತ್ರಗಳಿಗೆ ಅದರದ್ದೇ ಆದ ಒಳಿತು ಕೆಡುಕುಗಳಿವೆ. ಅದನ್ನ ಮುಂದಿನ ಅಂಕಣದಲ್ಲಿ ಚರ್ಚಿಸೋಣ.

ಚಿತ್ರಗಳು: ಇಂಟರ್ನೆಟ್‌

ಪ್ರತಿಕ್ರಿಯಿಸಿ