ರಮೇಶ್ ಅರೋಲಿ ಕವಿತೆ : ನೇಣಿನ ಹಕ್ಕಿ

ದಿಕ್ಕು ದಿಕ್ಕಿಗೆ ಉಯ್ಯಾಲೆ
ನೀನು ದಿಕ್ಕಿಲ್ಲದ ಹಕ್ಕಿಯೆ ಉಯ್ಯಾಲೆ
ಮಡಲಿಗೆ ಬಂದಾಗ ಮನೆಯೆಲ್ಲ ತುಂಬಿತ್ತು
ಅಂಬೆಗಾಲಿಡುವಾಗ ಅಂಗಳ ನಕ್ಕಿತ್ತು
ಹೆಸರಿಟ್ಟು ಹೆತ್ತವರೆ ಉಯ್ಯಾಲೆ
ನಿನ್ನ ತೊಟ್ಟಿಲು ಹರಿದಾರೆ ಉಯ್ಯಾಲೆ

ಓಣಿ ಓಣಿಗೆ ಉಯ್ಯಾಲೆ nh_21
ನೀನು ನೇಣಿನ ಹಕ್ಕಿಯೆ ಉಯ್ಯಾಲೆ
ಕರಳುಗಂಟಿದ ತಮ್ಮ ಕೈ ತುತ್ತು ಕೊಟ್ಟಮ್ಮ
ಕೇಳದಾದರೆ ಯಾರು ನಿಟ್ಟಿಸಿರು ಕೂಗಮ್ಮ
ಗೆಜ್ಜೆ ಕಟ್ಟಿದ ಬೆರಳೆ ಉಯ್ಯಾಲೆ
ನಿನ್ನ ಚೆಟ್ಟಕ್ಕೆ ಬಿಗಿದಾವೆ ಉಯ್ಯಾಲೆ

ವಾಡೆ ವಾಡೆಗೆ ಉಯ್ಯಾಲೆ
ನೀನು ಗೋಡೆ ಮ್ಯಾಲಿನ ಹಕ್ಕಿ ಉಯ್ಯಾಲೆ
ಬೇರಿಗಿಲ್ಲದ ಮಾನ ಹೂವಿಗೆ ಜುಲುಮೆನ
ನದುರುಬೊಟ್ಟೆ ನಿನ್ನ ಹೊಟ್ಟ್ಯಾಗ ಕುಲುಮೆನ
ಕಾಡಿಗೆ ಉಬ್ಬೆಲ್ಲ ಉಯ್ಯಾಲೆ
ನಿನ್ನ ಕಣ್ಣಾಗ ನಾಟ್ಯಾವೆ ಉಯ್ಯಾಲೆ

ಕೇರಿ ಕೇರಿಗೆ ಉಯ್ಯಾಲೆ
ನೀನು ಕೆರೆದಂಡೆ ಹಕ್ಕಿಯೆ ಉಯ್ಯಾಲೆ
ಸಣ್ಣಾಕಿ ದೊಡ್ಡಾಕಿ ಸಂಜ್ಯಾಗ ಕೂಡ್ಹಾಕಿ
ಕಂಡ ದಾರಿಗೆಲ್ಲ ಒಂದೊಂದು ಕಣ್ಣಾಕಿ
ಹುಟ್ಟಿದ ಒಲವಿಗೆ ಉಯ್ಯಾಲೆ
ನಿನ್ನ ಬದುವಲ್ಲೆ ಸುಟ್ಟಾರ ಉಯ್ಯಾಲೆ

ಗಲ್ಲಿ ಗಲ್ಲಿಗೆ ಉಯ್ಯಾಲೆ
ನೀನು ಗರಿಯಿಲ್ಲದ ಹಕ್ಕಿಯೆ ಉಯ್ಯಾಲೆ
ಕಳ್ಳುಬಳ್ಳಿಯ ಬಳಗ ಕಣ್ಣು ಮಿಟುಕದ ಹೊತ್ತು
ಕಲರು ಟೀವ್ಯಾಗ ಕಂಡಾರೆ ನಿನ ಕತ್ತು
ಗಳಗಳನೆ ಅತ್ತಾರೆ ಉಯ್ಯಾಲೆ
ನಿನ್ನ ಗೋರಿಯ ತೋಡ್ಯಾರೆ ಉಯ್ಯಾಲೆ

nb1 - Copy

ಚಿತ್ರಗಳು: ನಿಹಾರಿಕಾ ಶೆಣೈ

ಪ್ರತಿಕ್ರಿಯಿಸಿ