ಮುಟ್ಟುವಷ್ಟು ಹತ್ತಿರ..ಮುಟ್ಟಲಾರದಷ್ಟು ದೂರ!

ಇವತ್ತು ಮತ್ತೆ ಹೊಸತಾಗಿ ಇದೇ ಈಗಿನ್ನೂ ನಡೆಯಿತೇನೋ ಎಂಬಂತೆ ಎಲ್ಲವೂ ನೆನಪಾಗುತ್ತಿದೆ. ಅವೊತ್ತು ನಾವು ಭೇಟಿಯಾದಾಗ ಸುವಿ ಹಸಿರು ಚೂಡಿ ಧರಿಸಿದ್ದಳು,ಅದರ ಬಾರ್ಡರಿನಲ್ಲಿ ಅದರ ಬೆಲೆಯ ಚೀಟಿ ಇನ್ನೂ ಹಾಗೇ ಅಂಟಿಕೊಂಡಿತ್ತು, ಅವರಸದಲಿ ಅದರ ಬೆಲೆಯ ಚೀಟಿ ತೆಗೆಯದೇ ಹಾಗೇ ಬಿಟ್ಟಿದ್ದಾಳೆ ಅಂದುಕೊಂಡು ನಾನು ಅವಳ ಅದರತ್ತ ಅವಳ ಗಮನ ಸೆಳೆದಾಗ ಅವಳು ನಕ್ಕಿದ್ದಳು

blueನಾನು ಬರುವ ಮೊದಲೇ ಅವಳು ಅಲ್ಲಿ ಕಾದಿದ್ದಳು.ಕುಕ್ಕರಹಳ್ಳಿ ಕೆರೆಯ ಉತ್ತರಕೆ ಕೆರೆಯ ಒತ್ತಿಗೇ ಚಾಚಿಕೊಂಡಿದ್ದ ಕಾಲುದಾರಿಯ ಬದಿಗೆ ಸಾಲಾಗಿ ಹಾಕಿದ್ದ ಕಲ್ಲುಬೆಂಚಿನ ಮೇಲೆ ಕೂತಿದ್ದವಳು ನನ್ನನ್ನು ಕಂಡವಳೇ ರಾಗರಂಜಿತ ಮುಖವರಳಿಸಿಕೊಂಡು ಹೆಚ್ಚುಕಮ್ಮಿ ತೇಲಿದಂತೆ ನಡೆದು ನನ್ನತ್ತ ಬಂದಳು.ಬೆಳಗಿನ ಹೊಂಬಿಸಿಲು ಅವಳ ಮುಖದ ಮೇಲೆ ಬಿದ್ದು ಫಳಫಳಿಸುತ್ತಿತ್ತು.

ವಿಶಾಲವಾಗಿ ನಗುತ್ತಿದ್ದವಳ ಕೆನ್ನೆಯಲಿ ಅರಳಿಕೊಂಡ ಗುಳಿ ನೀಳವಾಗಿ ಕಾಣುತ್ತ ಅವಳ ಬತ್ತಿದ ಕೆನ್ನೆಗಳನ್ನು ಬಯಲು ಮಾಡುತ್ತಿತ್ತು..ಒಂದುಕಾಲಕೆ ಅವಳ ತುಂಬುಕೆನ್ನೆಗಳಲ್ಲಿ ಇಳಿಯುತ್ತಿದ್ದ ಗುಳಿ ಎಷ್ಟು ಚೆಂದವಿತ್ತು! ಓರಗೆಯ ಹುಡುಗಿಯರೆಲ್ಲ ಅವಳ ಕೆನ್ನೆಗುಳಿ ಕಂಡು ಅಸೂಯೆಯಿಂದಲೇ ಮೆಚ್ಚಿಕೊಳ್ಳುತ್ತಿದ್ದರೆ ನಾನು ಅದರ ಹಕ್ಕುದಾರನೆಂಬ ಬಿಂಕದಲ್ಲಿ ಒಳಗೊಳಗೇ ಖುಷಿಪಡುತ್ತಿದ್ದೆ. ಅದೊಂದು ಕಾಲ! ಇದೀಗ ,ಕಾಲವುರುಳಿ ಬದುಕು ಪುಟಮಗುಚಿಕೊಂಡ ಮೇಲೆ ಇದೆಲ್ಲೋ ಒಂದು ಆಕಸ್ಮಿಕ ತಿರುವು.

ಅವಳಿಗೂ ಹಾಗೇ ಅನಿಸಿರಬೇಕೇನೋ “ಅಂದರೂ ಇದೊಂದು ದೊಡ್ಡ ಸರ್ಪ್ರೈಸ್ ಅಲ್ವಾ?ಈಗ್ಲೂ ನಂಗೆ ನಂಬಕ್ಕೇ ಆಗ್ತಿಲ್ಲ..,ಹೌದೂ ನೀನ್ಯಾಕೆ ಈಗ ಇಲ್ಲಿಗೆ ಬಂದಿದ್ದು?”ಅವಳ ದನಿ ವಿಚಿತ್ರವಾಗಿ ಕಂಪಿಸುತ್ತಿದೆಯೆಂದು ನನಗೆ ಅನಿಸಿತು.

ದನಿಯಷ್ಟೇ ಅಲ್ಲ..ಅವಳ ಶರೀರವೇ ಸಣ್ಣಗೆ ಕಂಪಿಸುತ್ತಿರುವಂತೆ ನನಗೆ ಕಂಡಿತು. ಅದಾಗಲೇ ನನಗೆ ಮಹಾಂತೇಶ ಎಲ್ಲವನೂ ಹೇಳಿದ್ದ. ಹಾಗಾಗಿಯೋ ಏನೋ ನಾನು ಅವಳ ಪ್ರತಿಯೊಂದು ನಡೆಯನ್ನೂ ಒರೆಕಲ್ಲು ಹಚ್ಚಿ ತೂಗಿ ನೋಡುತ್ತಿದ್ದೆ.ವರ್ಷಗಳ ಹಿಂದೆ ಹಾಗಾಗದೇ ಹೋಗಿದ್ದರೆ ಬಹುಃಶ ಇವತ್ತು ಇಲ್ಲಿಗೆ ಬರುವಾಗ ಇದೇ ಸುಕೋಮಲ ಸುವಿ ನನ್ನ ಒತ್ತಿಗೆ ಕೂತು ತೋಳು ಬೆಸೆದು ಮೊಂಡಾಟವಾಡುತ್ತ ಬಂದಿರುತ್ತಿದ್ದಳೋ ಏನೋ.. !ಉಹೂಂ ,ಅದಕ್ಕೇನಿದ್ದರೂ ಮಾಧುರಿಯೇ ಸರಿ..ಮದುವೆಯಾಗಿ ಇಷ್ಟು ವರ್ಷವಾಗಿ,ಮಕ್ಕಳ ತಾಯಾದರೂ..ಇನ್ನೂ ಹುಡುಗಾಟ ಬಿಟ್ಟಿಲ್ಲ.ಎಷ್ಟೊಂದು ಮುದ್ದುಗರೆಯುತ್ತಾಳೆ,ಹಾಲಿನಲ್ಲಿ ಎಲ್ಲರೊಂದಿಗೆ ಕೂತಿರವಾಗಲೂ ಗೊತ್ತೇ ಆಗದಂತೆ ನನ್ನ ಕಾಲಿಗೋ ಕೈಗೋ ಮೈಸೋಕಿಸಿ ನಡೆದು ಹೋಗುವುದೊಂದು ಚೆಂದ.ಅಡುಗೆ ಮಾಡುವಾಗ,ಬಡಿಸುವಾಗ,ಹೊಲಕ್ಕೆ ಹೋದಾಗ…ಎಲ್ಲಾದರೂ ಸರಿ,ಅವಕಾಶವಾದರೆ ಸಣ್ಣಗೊಮ್ಮೆ ಪ್ರೇಮಿಸಿಯೇ ತೀರುತ್ತಾಳೆ.ಸುಮ್ಮನೊಂದು ಕುತೂಹಲಕೆ ಕೂಡ ಅವಳನ್ನ ದಿಟ್ಟಿಸ ನೋಡಿರಲಿಲ್ಲ ತಾನು! ಅದೇ ಅವಳೀಗ ನನ್ನ ಮನೆಯನೇ ಮುಷ್ಟಿಯಲ್ಲಿಟ್ಟುಕೊಂಡು ಆಳುತ್ತಾಳೆ..ನಾನು ಪ್ರತಿನಿತ್ಯ ಕನಸಿದ ಬಯಸಿದ ಪ್ರೇಮಿಸಿದ ,ರಮಿಸಿದ ಹುಡುಗಿ ಇವತ್ತು ಮುಟ್ಟುವಷ್ಟು ಹತ್ತಿರವಿದ್ದೂ ಮುಟ್ಟಲಾರದಷ್ಟು ದೂರವಿದ್ದಾಳೆ.ಬದುಕೆಂದರೆ ಇದೇ ಇರಬೇಕು! ಮುಟ್ಟುವಷ್ಟು ಹತ್ತಿರ..ಮುಟ್ಟಲಾರದಷ್ಟು ದೂರ.!

ನಾನು ಅವಳನ್ನೇ ದಿಟ್ಟಿಸಿ ನೋಡಿದೆ.ಮೊನ್ನೆ ಸಂಜೆ ಸಯ್ಯಾಜಿರಾವ್ ರೋಡಿನ ನಸುಗತ್ತಲು,ಅರೆಬೆಳಕಿನ ಕಲಬೆರಕೆಯೊಳಗೆ ಅವಳ ಮುಖ ಸರಿಯಾಗಿ ಕಂಡಿರಲಿಲ್ಲವಾದರೂ ನನ್ನನ್ನು ಕಂಡವಳು ಬೆಚ್ಚಿದ್ದು ಮಾತ್ರ ಸ್ಪಷ್ಟ ತಿಳಿದಿತ್ತು.ಅವಳ ಮುಖ ಬಿಳಿಚಿಕೊಂಡದ್ದನ್ನು ಆ ನಸುಗತ್ತಲಲ್ಲೂ ನಾನು ಗ್ರಹಿಸಿದ್ದೆ.

“ಏ..ಏನು ಇಲ್ಲಿ?”ತೊದಲಿದ್ದಳು.ಕೆಲಸದ ಮೇಲೆ ಬಂದಿದೀನಿ” ಅಂದವನು ಮೊದಲಿನಂತೆ ಸಹಜವಾಗಿ ಅವಳನ್ನು ಮಾರಾಯ್ತಿ ಅನ್ನಲು ಬಾಯಿ ಬಾರದೆ ತೊದಲಿದ್ದೆ.

” ಓ,ಸರಿ ಸರಿ,ನಾ ನಾಳೆ ಸಿಗ್ತೀನಿ,ಎಲ್ಲಿ ಉಳಿದಿದೀಯ? ಅಲ್ಲಿಗೇ ಬರ್ತೀನಿ.ನೈಟ್ ಡ್ಯೂಟಿ ಟೈಮ್ ಆಗಿದೆ ಹೊರಡಬೇಕು,ನಿನ್ನ ನಂ ಕೊಡು ಫೋನ್ ಲಿ ಮಾತಾಡ್ತೇನೆ” ಮರುಕ್ಷಣವೇ ಅವಳು ಎಚ್ಚೆತ್ತುಕೊಂಡವಳಂತೆ ಹುರುಪೇರಿಸಿಕೊಂಡು ಗಡಿಬಿಡಿಯಲಿ ಫೋನ್ ನಂ ಇಸಕೊಂಡು ಹೊರಟೇ ಹೋಗತೊಡಗಿದ್ದಳು,ಅವಸರದ ಓಡು ನಡಿಗೆ .ಅವಳ ಜೊತೆಗಿದ್ದವಳೂ ಬೇರೆ ದಾರಿ ತೋರದವಳಂತೆ ಅದೇ ಗಡಿಬಿಡಿಯಲ್ಲಿ ತಾನೂ ಹಿಂಬಾಲಿಸಿದ್ದಳು

.”ಮಿಸ್ ಕಾಲ್ ಕೊಡು ,ಸೇವ್ ಮಾಡ್ಕೊತ್ತೀನಿ.” ನಾನು ಕೂಗಿದ್ದೆ .ಅವಳು ಅದನ್ನು ಗಮನಿಸಿದಂತೆ ಕಾಣಲಿಲ್ಲ.

ಹಾಗೆ ಅವಳನ್ನು ಕಂಡು ಬಂದ ರಾತ್ರಿ ಮಹಾಂತೇಶನ ಜೊತೆ ಮಾತಾಡಿದಮೇಲಂತೂ ಅವಳು ಯಾವ ಕಾರಣಕ್ಕೂ ಸಿಕ್ಕುವುದೂ ಇಲ್ಲವೆನಿಸಿ ನನ್ನೊಳಗೆ ವಿಪರೀತ ಬೇಸರವಾಗಿತ್ತು. ಮನೆ ಹುಡುಕಿಕೊಡೆಂದರೆ ಬಹುಶಃ ಮಹಾಂತೇಶನಿಗೆ ಹುಡುಕುವುದೇನೂ ಕಷ್ಟವಾಗಲಾರದು ಆದರೆ ಅವನು ಕೇಳಿದಾಗ ಅವಳು ನನ್ನ ಕ್ಲಾಸ್ಮೇಟೆಂದು ಸುಳ್ಳಾಡಿದ್ದೆ ಈಗವನು ಇದ್ಯಾಕೋ ಇಷ್ಟೊಂದು ಕಳಕಳಿ? ಹಳೆಯ ಕ್ಲಾಸ್ಮೇಟು ಅಷ್ಟೇ ತಾನೇ? ಅಂತ ನಕ್ಕು ಹೋಗಿಬಿಡುತ್ತಾನೇನೋ ಅಂತ ಯೋಚಿಸುತ್ತಿರುವಾಗ ಅವಳ ಫೋನು ಬಂದಿತ್ತು.

“ಮನು,ಸ್ಸಾರಿ ರಜೆಯ ಸಮಸ್ಯೆ,ಇನ್ನೆಷ್ಟು ದಿನ ಇಲ್ಲಿರ್ತೀಯ,ನಾ ಎರಡು ದಿನ ಬಿಟ್ಟು ಸಿಗಲಾ ? ಅಂದಿದ್ದಳು.

“ಸರಿ ” ಅಂದಿದ್ದೆ,ಒಂಚೂರೂ ಯೋಚಿಸದೇ.

“ಎರಡು ದಿನ! ಅವಳ ಸೊಕ್ಕು ನೋಡಿದ್ಯ? ಅಂಥ ಘನಂದಾರಿ ಕೆಲಸ ಮಾಡ್ತಾ ಇದಾಳಂತ ಅವಳು? ” ಮಹಾಂತೇಶ ಕೋಪಿಸಿಕೊಂಡರೂ “ಸರಿ ಬಿಡು ಅವಳ ನೆವನದಲಿ ನೀ ಇನ್ನೆರಡು ದಿವಸ ಜೊತೆಗಿರ್ತೀಯಲ್ಲ ನಂಗೆ ಅದೇ ಖುಷಿ,” ಎಂದು ಹಗುರಾಗಿ ನಕ್ಕು ಹೊರಟುಹೋಗಿದ್ದ.

ಹೇಗೂ ಫೋನ್ ನಂ ಇತ್ತು,ಅವಳ ಜೊತೆ ಫೋನಿನಲ್ಲೇ ಮಾತಾಡಬಹುದಿತ್ತು,ಆದರೂ ಮಹಾಂತೇಶ ಹೇಳಿದ ಅಷ್ಟೆಲ್ಲವನೂ ಕೇಳಿಸಿಕೊಂಡ ಮೇಲೆ ಅವಳನ್ನು ಕಾಣದೇ ಹೋಗುವುದರಲ್ಲಿ ಮನಸಿಗೆ ತಕರಾರಿತ್ತು.ಹೇಗೂ ಬಂದಿದೇನೆ ಅವಳನ್ನ ಕಂಡೇ ಹೋಗುವುದಂತ ಗಟ್ಟಿಮಾಡಿಕೊಂಡು ಮಲಗಿದರೆ ರಾತ್ರಿಯಿಡೀ ಹಳೆಯ ನೆನಪುಗಳು ಕನಸಾಗಿ ಬಂದಿದ್ದವು.

ಹೇಗೆ ನಿರಾಕರಿಸಿದರೂ ಅವಳು ನನ್ನೊಳಗೆ ಉಳಿಸಿಹೋದ ನೆನಪುಗಳಿಗೆ ಕಹಿಯೊಂದು ಅಂಟಿಕೊಂಡಿತ್ತು. ಮಾರನೇ ಬೆಳಗೆ ನಾನೂ ಮಹಾಂತೇಶನೂ ಸುಮ್ಮನೆ ಶ್ರೀರಂಗಪಟ್ಟಣದ ಕಡೆಗೆ ಹೋಗಿಬರುವುದಂತ ಮಾತಾಡಿಕೊಂಡಿದ್ದೆವು,ಆದರೆ ಬೆಳಬೆಳಗೇ ಅವಳ ಫೋನು.

“ಇವತ್ತು ಕುಕ್ಕರಹಳ್ಳಿ ಕೆರೆ ಹತ್ರ ಬಂದುಬಿಡ್ತೀಯಾ? ,ನಾ ನಿನ್ನಮಾತಾಡಿಸಿ ಹಾಗೇ ಡ್ಯೂಟಿಗೆ ಹೋಗ್ತೀನಿ” ವಿಷಯ ತಿಳಿದು ಮಹಾಂತೇಶ ಸಿಡಿಮಿಡಿಗೊಂಡಿದ್ದ,ಆದರೂ ನನಗೆ ಇಲ್ಲವೆನ್ನಲಾಗದೆ ತಾನೇ ಕೆರೆಯ ಗೇಟಿನ ಬಳಿ ನನ್ನನ್ನು ಡ್ರಾಪ್ ಮಾಡಿ ತಿರುಗಿಯೂ ನೋಡದೆ ಹೊರಟು ಹೋಗಿದ್ದ.

ನನ್ನನ್ನು ಕಂಡ ಒಡನೇ ಹನಿಗಣ್ಣಾಗಿ ದುಃಖಉಬುಕಿ ಕೊರಳು ಬಿಗಿದು ಮಾತಿಗೆ ತಡಕಾಡುತಾಳೇನೋ ಅಂತಲೇ ಅಂದುಕೊಂಡಿದ್ದೆ , ಆದರೆ ಅವಳು ಚೆಂದಗೆ ಶುಭ್ರವಾಗಿ ನಗುತ್ತಿದ್ದಳು.

“ಏಯ್ ಏನ್ ಯೋಚ್ನೆ? ಏನಿಲ್ಲಿ ಅಂತ ಕೇಳ್ದೆ? ” ಅವಳು ಈಗ ಇನ್ನಷ್ಟು ನಕ್ಕು ಕೇಳಿದಳು.ಹಾರ್ದಿಕವಾಗಿ ನಗುತ್ತಿದ್ದಾಳೆ ..ಇದು ನಿಜವೇ ಅಥವಾ ನೋವನ್ನು ಮುಚ್ಚಿಟ್ಟುಕೊಳ್ಳಲು ಏನಾದರೂ…ನಟಿಸುತ್ತಿದ್ದಾಳೋ..ನನಗೆ ಅನುಮಾನವಾಯ್ತು.ಇಲ್ಲದಿದ್ದರೂ ಅವಳು ಮಹಾಚಾಲಾಕಿ ನಟಿಯೇ ಸರಿ,ಇಲ್ಲವಾದರೆ ತೀರ ಮದುವೆಯ ಮಂಟಪದವರೆಗೂ ಒಂದು ಚಿಕ್ಕ ಸುಳಿವು ಕೂಡ ಕೊಡದೆ ಎದ್ದುಹೋಗುವುದೆಂದರೆ ಸುಮ್ಮನೆ ಮಾತಲ್ಲ. ಮದುವೆಯ ದಿನ ಅವಳಿಗೆ ನಾವು ಕೊಟ್ಟಿದ್ದ ನವಿಲು ಬಣ್ಣದ ಧಾರೆಸೀರೆಯ ಒಂದು ಮಡಿಕೆ ಬಿಚ್ಚಿ,ಅದರೊಳಗೆ ಚಿಕ್ಕ ಚೀಟಿಯಲ್ಲಿ ‘ನನ್ನ ಹುಡುಕಬೇಡಿ’..ಎಂದು ಗೀಚಿದಂತೆ ಬರೆದಿದ್ದಳು. ಹೀಗೇನಾದರೂ ನಡೆಯಬಹುದೆಂಬ ಸಣ್ಣ ಸಂದೇಹವೂ ಇಲ್ಲದ ನಮಗೆ ಇದು ಅವಳ ಹುಡುಗಾಟವೇನೋ ಅನಿಸಿ ಮೊದಲಿಗೆ ಎಲ್ಲೋ ಬಚ್ಚಿಕೊಂಡು ಸತಾಯಿಸುತ್ತಿದ್ದಳೇನೋ ಮದುವೆ ವಯಸ್ಸಿಗೂ ತುಂಟತನ ಬಿಡಬಾರದೇ ಅಂತ ಸುಳ್ಳೇ ರೇಗಿಕೊಂಡು ಹುಡುಕುಡುಕಿ..ಕಡೆಗೆ ಇದು ಸುಳ್ಳಲ್ಲ ನಿಜವೇ ಎಂದು ಮನದಟ್ಟಾಗುವ ಹೊತ್ತಿಗೆ,ಅತ್ತೆ ಮಾವನ ಮುಖದಲಿ ನೀರಿಳಿದು,ಅತ್ತೆ ತಲೆ ಸುತ್ತಿ ಬಸವಳಿದು ಬಿದ್ದಿದ್ದಳು.ಅಕ್ಕನ ಮದುವೆಗೆಂದು ಅದೇ ಮೊದಲ ಬಾರಿಗೆ ಆಸೆಯಿಂದ ಸೀರೆಯುಟ್ಟುಕೊಂಡು,ನವಿಲಿನಂತೆ ಓಡಾಡುತ್ತಿದ್ದ ಮಾಧುರಿಯನ್ನು ನಮ್ಮ ಮುಂದೆ ನಿಲ್ಲಿಸಿ ಮಾವ ಕೈಮುಗಿದು ಕಣ್ಣೀರಿಟ್ಟಿದ್ದ.ಮುಂದೆ ಅದೇ ನವಿಲುಬಣ್ಣದ ಸೀರೆಯುಟ್ಟು ಮಾಧುರಿ ಹಸೆಯೇರಿದ್ದಳು.ಮುಂದೆ ವರ್ಷದುದ್ದಕ್ಕೂ ಬಹುಃಶ ಈಗಲೂ ಊರಿನವರಿಗೆ ಸಮಯ ಹೋಗಲು ಈ ಘಟನೆ ಹೋಳಿಗೆ ತುಪ್ಪದ ಹಾಗೆ ತಟ್ಟೆಗೆ ಬಂದು ಬಿದ್ದಿತ್ತು.ನನ್ನನ್ನು ಬಿಟ್ಟು ಹೋಗುವಂತಾದ್ದೇನಾಯ್ತು,ಅವಳಿಗೆ ನಾನು ಸೂಕ್ತನಲ್ಲ ಎಂದು ಅವಳು ಯಾವಾಗ ತೀರ್ಮಾನಿಸಿದಳು,ನನ್ನಲ್ಲಿ ಅಂಥ ಯಾವ ಕೊರತೆ ಕಂಡು ಅವಳು ನನ್ನನ್ನು ಬಿಟ್ಟುಹೋದಳು ಎಂಬ ಪ್ರಶ್ನೆಗಳು ನನ್ನನ್ನು ಇಂಚಿಂಚಗಿ ಇರಿದಿದ್ದವು.

ಇವತ್ತಿಗೆ ನಿಜಕ್ಕೂ ನನ್ನಲ್ಲಿ ಯಾವ ತಕರಾರಿಲ್ಲ,ಕಳೆದುಕೊಂಡಿದ್ದಕ್ಕಿಂತ ಹೆಚ್ಚಿಗೇ ತುಂಬಿಕೊಟ್ಟಿದ್ದಾಳೆ ಮಾಧುರಿ. ಅವಳ ಸಾಂಗತ್ಯದಲ್ಲಿ ಎಲ್ಲವೂ ಹೊಸತೆನಿಸಿ ಬದುಕಿನ ರಂಗೇ ಬದಲಾಗಿದೆ.ಅಷ್ಟಾದರೂ ಆ ಕೊರಗು ನೀಗಲೇ ಇಲ್ಲ ಇಂದಿನವರೆಗೂ! ಬಹುಶಃ ಇಲ್ಲಿ ಕಾಡುತ್ತಿರುವುದು ಕಳೆದು ಪ್ರೀತಿಯೇ ಅಲ್ಲವೇನೋ, ಅವಳ ತಿರಸ್ಕಾರದಿಂದ ಆ ಅವಮಾನವೇ ಇರಬೇಕು.

ತುಂಬ ಚೆಂದನೆ ದಿನಗಳವು! ಸಣ್ಣ ಹುಡುಗರಾದಾಗಿಂಲೂ ಒಟ್ಟಿಗೆ ಓಡಿ ಆಡಿ ಬೆಳೆದಿದ್ದೆವು,ಮಕ್ಕಳಾಟದ ಗಂಡಹೆಂಡತಿ ಆಟದಲಿ ಕೂಡ ಅವಳೇ ನನ್ನ ಹೆಂಡತಿ. ಮೊದಲಿಂದಲೇ ಅವಳು ನನ್ನವಳೆಂಬ ಭಾವ,ಮನೆಯಲ್ಲೂ ಅದೇ ಸಡಿಲಿಕೆ.ನೆಪಕೆ ತಾಳಿ ಅನ್ನುವುದು ಬಿಟ್ಟರೆ ಅವಳು ನನಗೆ ಸೇರಿದವಳೆಂಬುದು ಎಂದಿಗೋ ನಿಶ್ಚಯವಾದ ವಿಷಯ.ಅವಳಾದರೂ ಹಾಗೆಯೇ ಇದ್ದಳು. ನಾನು ಪೇಟೆಗೆ ಓದಲು ಹೊರಟಾಗ ಹಿತ್ತಲಿನ ಕುಂಬಳಬಳ್ಳಿಯ ಬದಿಯಲ್ಲಿ ನಿಂತು “ಅಲ್ಲಿ ಜೋಪಾನ ” ಅನ್ನುವಾಗ ಎಷ್ಟೊಂದು ಹೆಂಡತಿಯೆನಿಸಿದ್ದಳು. ಥೇಟ್ ಹಾಗೇ! ಅದೇ. ಹಾಗಿದ್ದವಳು ಬದಲಾಗಿದ್ದು ಯಾವಾಗ ಎಂದು ಯಾರೊಬ್ಬರಿಗೂ ಸುಳಿವು ಹತ್ತಲಿಲ್ಲವೇ? ಹತ್ತಿರಲಿಲ್ಲ ..! ತೀರ ಹಸೆಯೇರದೆ ಹೊರಬೀಳುವವರೆಗೂ ಅವಳು ಹಾಗೆ ಅದನ್ನು ನಿಭಾಯಿಸಿದ್ದಳು,ಗಟ್ಟಿಗಿತ್ತಿ! ಅವೊತ್ತು ಹಾಗೆ ಹೋದವಳ ಮೇಲೆ ಮಾವ ಪೋಲಿಸ್ ಸ್ಟೇಷನ್ನಿನಲ್ಲಿ ಕಂಪ್ಲೇಂಟ್ ಕೂಡ ಕೊಟ್ಟಿದ್ದ,ಉಪಯೋಗವಾಗಿರಲಿಲ್ಲ ,ನಮಗೂ ಏನೂ ಹೊಳವಾಗಿರಲಿಲ್ಲ ಕಡೆಗೆ ಏನೇನೂ ಸುಳಿವು ಸಿಗದಾಗಿ ನಾವು ಅವಳನ್ನು ಹುಡುಕುವ ಯತ್ನವನ್ನೇ ಕೈಬಿಟ್ಟಿದ್ದೆವು.’ಸತ್ತವರನ್ನ ನಾವು ಕಾಯ್ತಾ ಕೂರ್ತೇವಾ ಹೇಗೆ?’ಒಂದುತಿಂಗಳ ಬಳಿಕ ಮಾವ ಅವಳಿಗೆ ಸಂಬಂಧಿಸಿದ ಎಲ್ಲವನ್ನೂ ಮೂಟೆ ಕಟ್ಟಿ ಸೀತೆಕೆರೆಯ ದಡಕ್ಕೆಸೆದು ಬಂದಿದ್ದ.ಆಮೇಲೆ ಅತ್ತೆ ಸಮಯ ನೋಡಿಕೊಂಡು ಹೋಗಿ ಅವೆಲ್ಲವನ್ನೂ ಮತ್ತೆ ತಂದು ಅಟ್ಟದಲ್ಲಿ ಬಚ್ಚಿಟ್ಟಿದ್ದಳು. ಯಾವತ್ತಾದರೊಂದು ದಿನ ಬಂದೇ ಬಿಡುತ್ತಾಳೆಂದು ಕಾಯುತ್ತಲೇ ಇಷ್ಟೂ ವರ್ಷಗಳನ್ನ ದಾಟಿದ್ದಳು.

ಈಗ ನಿಜಕ್ಕೂ ಅವಳೆದುರು ಇವಳನ್ನ ಕರೆದೊಯ್ದು ನಿಲ್ಲಿಸಿದರೆ ಹೇಗಿರಬಹುದು..ಯೋಚಿಸುತ್ತ ಮೈ ಮರೆತೆ!

“ಇದ್ಯಾಕೆ ಹೀಗೆ ಬೆರಗಾಗಿದ್ದಿ? ” ಅವಳು ಮುನಿದಂತೆ ಮಾಡಿದಳು.ಅದೇ ಹಳೆಯ ಸುವಿಯಂತೆ!

“ಸ್ಸಾರಿ ,ಹಳೆದೆಲ್ಲ ನೆನಪಾಗ್ತಿದೆ ,ಈಗ್ಲೂ ನಿನ್ನನ್ನೇ ನೋಡ್ತಿದೀನಿ ಅಂತ ನಂಬಕ್ಕಾಗ್ತಿಲ್ಲ” ನಾನು ನಕ್ಕಂತೆ ಮಾಡಿದೆ.

“ನಂಗೂ ಹಾಗೇ ಅನಿಸ್ತಿದೆ , ಓ!! ಸರಿ ಸರಿ ,ನಿಂತೇ ಇರ್ತೀಯಾ?ಬಾ ಕೂರುವ..”

ಹಾಗನ್ನುತ್ತ ಅವಳು ಕಲ್ಲುಬೆಂಚಿನತ್ತ ನಡೆಯುವಾಗ ನಾನೂ ಮಾತಿಲ್ಲದೆ ಹಿಂಬಾಲಿಸಿದೆ.ಎದುರಿಗೆ ಮೈ ಹರವಿಕೊಂಡು ನಿರುಮ್ಮಳವಾಗಿ ಮಲಗಿದಂತೆ ಕಾಣುತ್ತಿರುವ ಕೆರೆ,ಪಕ್ಕದಲ್ಲಿ ಅದೇ ಹಳೆಯ ಪುಟ್ಟಹುಡುಗಿಯಂತೆ ಕೂತಿರುವ ಸುವಿ! ಎಷ್ಟೋ ವರ್ಷಗಳಿಂದ ಒಳಗೆ ಹೂತಿಟ್ಟ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಏಕೈಕ ಜೀವದ ಜೊತೆ ಮುಖಾಮುಖಿಯಾಗಿರುವ ಈ ಎಂದಿನಂತಿಲ್ಲದ ಬೆಳಗಿನಲ್ಲಿ ಏನೆಲ್ಲ ಮಾತಾಡಬೇಕೆಂದು ಕೊಂಡು ಬಂದ ನಾನು ಮಾತು ಕಳೆದುಕೊಂಡು ಕೂತಿರುವುದನ್ನು ಸುವಿ ಹಾಗಿರಲಿ ,ನಾನೇ ಸಹಿಸದಾದೆ. ನಾನು ಮಾತಾಡಲೇಬೇಕಿತ್ತು.

“ಹೇಗಿದ್ದಿ?” ನನ್ನ ಗಂಟಲಿನಿಂದ ದೊರಗಾಗಿ ಬಂತು ದನಿ.

“ನೋಡಿದರೆ ಏನನಿಸುತ್ತೆ? ಚೆನ್ನಾಗಿದೀನಿ ಅನಿಸ್ತಿಲ್ವಾ?, ನಾನು ಆರಾಮಿದೀನಿ.ನೀನು ಹೇಗಿದ್ದಿ? ಏನು ಇಲ್ಲಿ? ಆಗ್ಲಿಂದ ಕೇಳ್ತಾ ಇದೀನಿ,ಏನೂ ಹೇಳ್ದೆ ಕೂತಿದ್ದೀಯ! ಅವಾಗ್ಲಿಂದ ಹಾಗೇ! ಒಂಚೂರೂ ಬದ್ಲಾಗಿಲ್ಲ ನೀ, ಜೊತೆಲಿರೋ ಹಾಗೇ ಎಲ್ಲೋ ಕಳ್ದುಹೋಗ್ತಿ,”ಅವಳು ಹುಬ್ಬುಸುರುಗಿಸಿ ಸುಳ್ಳೇ ಕೋಪಿಸಿಕೊಂಡ ನಾಟಕವಾಡಿದಳು.

ಅವಳನ್ನು ಹಾಗೆ ನೋಡುವಾಗ ಅವಳಾದರೂ ಏನೂ ಬದಲಾಗಿಲ್ಲ ಅನಿಸಿತು.ಅದ್ಯಾವ ಘಳಿಗೆಯಲ್ಲಿ,ಅದಿನ್ಯಾವ ಕ್ಷುದ್ರ ಧೃವ ಇವಳನ್ನು ತನ್ನತ್ತ ಸೆಳೆಯಿತೋ,ಅದ್ಯಾವ ಸಮಯದಲಿ ನಾವೆಲ್ಲ ಬೇಡವೆಂದು ನಿರ್ಧರಿಸಿದಳೋ..ಅಷ್ಟೊಂದು ಪ್ರೀತಿಸುತ್ತಿದ್ದ ನಮ್ಮೆಲ್ಲರನ್ನೂ ನಿವಾಳಿಸಿ ಎಸೆದು ಹೊರಬರುವಷ್ಟರ ಮಟ್ಟಿಗಿನ ಸೆಳೆತ ಯಾವುದ್ದಿದ್ದಿರಬೇಕು? ನನಗೆ ಅವತ್ತಿನಿಂದಲೂ ಅದೇ ಸೋಜಿಗ,ಹಾಗೆ ಅವಳು ಯಾರೊಂದಿಗೆ ಬಂದಳು?ಯಾರಾತ?ನನಗಿಂತಲೂ ಬೇಕೆನಿಸಿದವ?ನಮ್ಮೆಲ್ಲರನ್ನೂ ಮರೆಸಿದವ? ಇವತ್ತು ಅದಕೆ ಉತ್ತರ ಪಡೆಯುವ ಹುಕಿಯಲ್ಲಿ ನನಗೊಂದು ಹುರುಪು ಬಂತು.

“ನಾವೆಲ್ಲ ಚೆನ್ನಾಗಿದೀವಿ ಸುವಿ,ನಮ್ಮ ಬಾಲಣ್ಣನ ಮಗಳಿಗೆ ಇಲ್ಲಿ ಮೆಡಿಕಲ್ ಸೀಟ್ ಸಿಕ್ಕಿದೆ,ಅದಕೆ ಅವಳನ್ನ ಬಿಟ್ಟು ಹೋಗುವಂತ ಬಂದೆ.”

“ಮಂಜರಿಗೆ? ಪ್ಪ! ಅಷ್ಟು ದೊಡ್ಡೊಳಾಗಿ ಬಿಟ್ಟಳ? ಖುಷಿಯಾಗ್ತಿದೆ,ನಮ್ಮಲ್ಲಿ ಇಲ್ಲಿ ತಂಕ ಯಾರೂ ಡಾಕ್ಟ್ರಾಗಿಲ್ಲ ನೋಡು,ಇವಳೇ ಫಸ್ಟು ” ಉದ್ಗರಿಸಿದಳು.

ಆಗ ಅವಳು ನಿಜಕ್ಕೂ ಖುಷಿಯಾಗಿದ್ದಂತೆ ಕಂಡಳು. ಅವಳ ಕೆನ್ನೆಗುಳಿ ಮತ್ತಷ್ಟು ಆಳಕ್ಕಿಳಿದು ಕಂಗಳು ಅರೆಮುಚ್ಚಿ ,ಹುಬ್ಬುಗಳು ನಿಡಿದಾಗಿ ಇಳಿದು,ಕೆನ್ನೆ ಮಿಂಚಿ,ಅವಳು ಮುಖವೆತ್ತಿ ಆಗಸ ನೋಡುತ್ತ ನಗುವಾಗ ಕತ್ತಿನ ನರಗಳು ಉಬ್ಬಿನಿಂತವು, ನಮ್ಮಲ್ಲಿ ಇಲ್ಲಿ ತಂಕ ಯಾರೂ ಡಾಕ್ಟ್ರಾಗಿಲ್ಲ ನೋಡು ಅವಳ ಮಾತುಗಳು ನಂಗೆ ಇಷ್ಟವಾಗಿ ಮನಸು ಒಂದುಕ್ಷಣ ಮೃದುವಾಯ್ತು. ನಮ್ಮನ್ನು ಎದುರಿಸಲಾರದೆ ಹೀಗೆ ಉಳಿದಿದ್ದಾಳೇ ಹೊರತು ನಾವೆಂದರೆ ಅಷ್ಟೇ ಅಕ್ಕರೆ ಈಗಲೂ ಇದೆಯೆನಿಸಿ ಮತ್ತೂ ಅಕ್ಕರೆ ಉಕ್ಕಿತು.

“ಎಲ್ಲ ಚೆನ್ನಾಗಿದ್ದಾರೆ ಸುವಿ,ಅತ್ತೆ ಇವತ್ತಿಗೂ ನಿನ್ನ ದಾರಿ ಕಾಯ್ತಿದಾರೆ..ನೀನು ಸುಮ್ಮನೆ ಊರಿಗೆ ಬಂದುಬಿಡು ಸುವಿ”ನಾನು ಹಾಗಂದಾಗ ಅವಳ ಮುಖ ನಸು ಗಂಟುಗೂಡಿತು.ಆದರವಳು ಒಡನೇ ಅದನ್ನು ಸಡಿಲಿಸಿ ನಕ್ಕಂತೆ ಮಾಡಿ,

“ಎಲ್ಲಿ ಇವರು ಬಿಟ್ಟರಲ್ಲ ಮನು,ಇಲ್ಲಿಗೆ ಬರಲಿಕ್ಕೇ ನಾನು ಆಫೀಸಿಗೆ ಹೋಗತೀನಂತ ಸುಳ್ಳು ಹೇಳಿ ಬಂದಿದೀನಿ,ಅವರು ಸಿಕ್ಕಪಟ್ಟೆ ಪೊಸೆಸ್ಸಿವ್ ಒಟ್ರಾಸಿ ನಾ ಯಾವಾಗ್ಲೂ ಅವರ ಕಣ್ಣೆದುರು ಇರಬೇಕು,ಅವರಾದರೂ ಅವರ ಮನೆಗೆ ಅಷ್ಟೇನೂ ಹೋಗೋದಿಲ್ಲ” ಹಾಗನ್ನುವಾಗ ಅವಳ ಕಂಗಳು ಎಷ್ಟೊಂದು ಪ್ರಶಾಂತವಾಗಿದ್ದವೆಂದರೆ ಮಹಾಂತೇಶ ಹೇಳಿದ್ದಕ್ಕೂ ಇವಳು ಹೇಳುತ್ತಿರುವುದಕ್ಕೂ ಏನೇನೂ ಸಂಬಂಧವಿರಲಿಲ್ಲ.

ನನ್ನನ್ನು ಕಂಡೊಡನೇ,ಎದೆಗೆ ಬಿದ್ದು ಬಿಡುತ್ತಾಳೇನೋ ಅಂತಂದುಕೊಂಡೇ ಬಂದಿದ್ದೆ..ಆದರೆ ಅವಳು ಒಂಚೂರು ಬಿಗುವು ಸಡಿಲಿಸದೆ ನಮ್ಮ ನಡುವೆ ಏನೇನೋ ನಡೆದೇ ಇಲ್ಲವೇನೋ ಎಂಬಷ್ಟು ಸಹಜವಾಗಿ ಅವಳು ಮಾತಾಡುತ್ತಿದ್ದರೆ ನನಗೆ ಮಾತಿಗೆ ತಡಕಾಡುವಂತಾಯ್ತು.ಅವಳನ್ನು ಕಂಡಾಗ ನಾ ಕೇಳಬೇಕೆಂದಿದ್ದ ಮೊದಲ ಪ್ರಶ್ನೆ ಅವಳು ಹಾಗೆ ಯಾರೊಡನೆ ಬಂದಳೆಂದು ಕೇಳುವುದೇ ಆಗಿತ್ತು,ಆದರೆ ಸುಳ್ಳುಗಳನ್ನೇ ಹೇಳುತ್ತಿರುವ ಇವಳು,ಅದನ್ನಾದರೂ ಹೇಳಿಯಾಳೆ ಎಂದು ನಿರೀಕ್ಷಿಸುವುದಾದರೂ ಎಷ್ಟು ಸರಿ ಎಂದು ಯೋಚಿಸುವಾಗ ಅವಳನ್ನು ಏನೂ ಕೇಳದಿರುವುದೇ ಉತ್ತಮೆವೆಂಬಂತೆ ಸುಮ್ಮಗುಳಿದೆ.

“ಹೌದೂ ನಿಂದು ಮದ್ವೆ ಆಯ್ತಾ? ಎಲ್ಲಿದು ಹುಡ್ಗಿ? ಫೋಟೋ ಇದ್ರೆ ತೋರಿಸು ಅಂದಳು.

” ಅವತ್ತು ನೀ ಹೋದ ದಿವಸವೇ ಮದ್ವೆ ನಡೀತು ಸುಮಿ,ಮಾಧುರಿನ ಮದ್ವೆ ಆಗ್ಬೆಕಾಯ್ತು,ಈಗ ಎರಡು ಮಕ್ಕಳಿವೆ.ಚೆನ್ನಾಗಿದೀವಿ. ಅಮ್ಮ ಈಗ್ಲೂ ನಿನ್ನ ನೆನಪಿಸ್ಕೋತ್ತಾ ಇರ್ತಾಳೆ.”

ಅಪ್ಪ?” ಅವಳ ದನಿ ಮೆಲ್ಲಗೆ ನಡುಗಿತು.

“ಅಪ್ಪ ಕಳೆದ ವರ್ಷ ತೀರಿಕೊಂಡ್ರು ಸುವಿ”,ಅದನ್ನು ಕೇಳಿ ಅವಳ ಕಂಗಳು ತುಂಬಿದವು.

“ನಂಗೆ ಬೇರೆ ದಾರಿ ಇರ್ಲಿಲ್ಲ ಮನು ನಿಜ ಹೇಳಬೇಕೂಂದ್ರೆ ನಾ ಅವೊತ್ತು ಹಾಗೆ ಹೋಗಬಹುದೂಂತ ನಂಗೇ ಗೊತ್ತಿರ್ಲಿಲ್ಲ..ನಂಬು ನೀನಾದ್ರೂ” ಅವಳ ದನಿ ಆರ್ತವಾಗಿತ್ತು.

” ಸರಿ ಬಿಡು ಮಾರಾಯ್ತಿ ಈಗ್ಲಾದರೂ ಹೇಳು,ಯಾರವ್ನು? ನಿನ್ನ ಆ ಕ್ಷಣದಲಿ ಹಾಗೆ ಎಬ್ಬಿಸಿ ಓಡಿಸಿಕೊಂಡು ಬಂದವನು?”ಕಡೆಗೂ ನಾ ಕೇಳಬೇಕಿದ್ದ ಪ್ರಶ್ನೆಯನ್ನು ಕಡೆಗೂ ಕೇಳಿಯೇ ಕೇಳಿದ್ದೆ.” ಅರೆ ಅವಸರ ನೋಡು! ಇರು ನೇರ ಭೇಟಿ ಮಾಡಿಸ್ತೀನಿ.” ಅವಳು ಮುಖ ತಿರುಗಿಸುವಾಗ ಅವಳ ಕಂಗಳಲ್ಲೇನೋ ಬೆಳಕು ಹೊಳೆಯಿತು. ಬಚ್ಚಿಟ್ಟ ಒಂದು ಕಣ್ಣಹನಿಯಂತೆ.! ನನ್ನೊಳಗೆ ನೋವೊಂದು ಹೊರಳಿತು.

“ಸರಿ ಬಿಡು ನೀ ನಿಜಕ್ಕೂ ಹೇಗಿದೀಯ ,ಅದನ್ನಾದರೂ ಹೇಳೂ ಸುವಿ, ನಮ್ಮ ದಾರಿ ಯಾವಾಗಲೋ ಬೇರೆಯಾಗಿ ಹೋಯ್ತು, ಇನ್ನೆಂಥ ಮುಚ್ಚುಮರೆ?”

“ಏ ಏನು ಮುಚ್ಚುಮರೆಯೋ? ಚೆನ್ನಾಗಿದೀನೋ ಮಾರಾಯ,ಹಾಗೆ ನೋಡಿದ್ರೆ ಅವ್ರು ನನ್ನ ತೀರ ಅಜೀರ್ಣ ಆಗೋವಷ್ಟು ಪ್ರೀತಿಸ್ತಾರೆ ಸಾಕಾ?”

ನಂಗೆ ಈಗಲಂತೂ ಸಹನೆ ಮೀರಿತ್ತು,ಇವಳನ್ನು ಕಂಡಿದ್ದಕ್ಕಿಂತ ಕಾಣದೇ ಇರುತ್ತಿದ್ದರೆ ಚೆನ್ನಾಗಿತ್ತೇನೋ ಅನಿಸಿ ಇರಿಸುಮುರಿಸಾಯ್ತು,ಸುಮ್ಮನೇ ಸುಳ್ಳನ್ನೇ ಅವಳು ಹೊಸೆದೊಸೆದು ಕಟ್ಟುತ್ತಿದ್ದರೆ ಅಲ್ಲಿಂದ ಎದ್ದು ಹೊರಡಬೇಕೆಂಬ ತುಡಿತ ಬಲವಾಗ ತೊಡಗಿತ್ತು.ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಸುವಿ ಮತ್ತೆ ಮಾತಾಡಿದಳು.

“ನಾನು ನನ್ನ ದಾರಿ ಹುಡುಕ್ಕೊಂಡು ಬಂದಿದ್ರೂ,ಬಂದಿದ್ದು ಒಳ್ಳೆದಕ್ಕೇ ಅನಿಸೋವಷ್ಟು ಚೆನ್ನಾಗಿದೀನಿ, ಅವರು ನನ್ನ ಚೆನ್ನಾಗಿ ನೊಡ್ಕೊಂಡಿದಾರೆ ಅನ್ನೋದು ನಿಜವೇ ಮನು ,ಆದರೆ ಈಗ ಅವರ ಸ್ವಲ್ಪ ಆರೋಗ್ಯ ಹಾಳಾಗಿದೆ, ಬ್ಯುಸಿನೆಸ್ ಕೈಬಿಟ್ಟಿದೆ ,ಹಾಗಾಗಿ ನಾನೂ ಕೆಲಸಕೆ ಹೋಗ್ಬೇಕಾಗಿದೆ,ನಿಂಗೊತ್ತಾ ನಾನು ಆಸ್ಪತ್ರೆಲಿ ರಾತ್ರಿ ಹೌಸ್ಕೀಪಿಂಗ್ ಕೆಲಸ ಮಾಡ್ತೀನಿ,ಬೆಳಗೆ ಗಾರ್ಮೆಂಟ್ಸ್ ಹೋಗ್ತೀನಿ,ಅವ್ರಿಗೆ ವಾರಕ್ಕೆರಡು ಡಯಾಲಿಸಿಸ್ ಬೇಕು,ಕಿಡ್ನಿ ಫೇಲೂರ್ ಆಗಿದೆ ,ಬದಲಿಸಬೇಕಂತೆ ,ಅದೇ ಸ್ವಲ್ಪ ಒದ್ದಾಟ ಅಷ್ಟು ಬಿಟ್ಟರೆ ಬೇರೇನೂ ತೊಂದರೆ ಇಲ್ಲ ಮನು,ಇಷ್ಟೂ ದಿನ ಚೆನ್ನಾಗಿ ನೋಡಿಕೊಂಡಿದಾರೆ,ಈಗ ಅವರ ಕೈಲಿ ಆಗ್ತಾ ಇಲ್ಲ ಅಷ್ಟೇ,ಸರಿ ಈಗ ನಿಂದು ಹೇಳು.” ಅಂದು ನೇರ ನನ್ನನ್ನೇ ನೋಡಿದಳು.

ವರ್ಷಗಳ ಕಾಲ ಒಟ್ಟಿಗೇ ಬೆಳೆದವರು ನಾವು,ಒಟ್ಟಿಗೆ ಶಾಲೆ,ಊಟ,ಓದು ಬರಹ ಆಟ ಪಾಠ ಎಲ್ಲ.ಏನೇ ಹೇಳುವುದಿದ್ದರೂ ಅದನ್ನು ಮೊದಲು ನನ್ನಲ್ಲಿಯೇ ಹೇಳುತ್ತಿದ್ದವಳು,ಅದು ಯಾವ ಹೊತ್ತಿನಲಿ ಬದಲಾದಳೋ ನಂಗಂತೂ ಗೊತ್ತಾಗಿರಲಿಲ್ಲ. ಡಿಗ್ರಿ ಓದಲಿಕ್ಕೆ ನಾ ಸಿಟಿಗೆ ಹೋದರೆ ಇವಳು ಓದು ನಿಲ್ಲಿಸಿ ಮನೆಯಲ್ಲೇ ಉಳಿದಿದ್ದಳು,ಮೂರು ವರ್ಷದ ಆ ಗ್ಯಾಪಿನಲ್ಲಿ ನಂಗೆ ಪತ್ರಿಸುವುದು,ಆಗೀಗ ಫೋನಿಸುವುದು ಮಾಡುವಳು ಆಗಲೂ ಏನೊಂದು ಸುಳಿವು ಬಿಟ್ಟಿರಲಿಲ್ಲ,ಈಗಲೂ ಹಾಗೆಯೇ ಇದ್ದಾಳೆ. ಯಾವ ಸುಳಿವನ್ನೂ ಕೊಡಬಾರದೆನ್ನುವುದು ಯಾತರ ಹಠ? ನಾನು ಸುಖವಾಗಿದ್ದೀನೆಂದು ಸುಳ್ಳೇ ತೋರಿಸಿಕೊಂಡಾದರೂ ತಮ್ಮ ಅಹಂ ಅನ್ನು ಸಂತೃಪ್ತಗೊಳಿಸಿಕೊಳ್ಳುವ ಈ ಸಣ್ಣತನವೇಕೆ ಮನುಷ್ಯನಿಗೆ? ಅಸಲು ಯಾರಿಗಾಗಿ ಇದನೆಲ್ಲ ಮುಚ್ಚಿಡ್ತಾ ಇದಾಳೆ! ನಾನು ಕುದಿದೆ.ಅವಳು ಹೇಳುತ್ತಿರುವ ಸುಳ್ಳುಗಳನ್ನೆ ಎಷ್ಟು ಹೊತ್ತೆಂದು ಕೂತು ಕೇಳಿಸಿಕೊಳ್ಳುವುದು! ಅವಳನ್ನ ಕಾಣುವ ಮೊದಲು ಇದ್ದ ಆಸೆ ,ತಹತಹ ,ಅಕ್ಕರೆ ಎಲ್ಲವೂ ಈಗ ಉರಿಯುತ್ತ ಅವಳ ಮೇಲೆ ಬೆಂಕಿಯಾಗಿ ಕುದಿಯ ತೊಡಗಿತ್ತು. ಮಹಾಂತೇಶ ಹೇಳಿದ್ದ.ಅವಳ ಕಥೆ ಕಟ್ಟುವುದರಲ್ಲಿ ಜಾಣೆ,ಒಂದೊಂದು ಸ್ಟೇಷನ್ನಿನಲ್ಲಿ ಒಂದೊಂದು ಕಥೆ ಇದೆ ಅಂತ. ಅದು ಖಂಡಿತಾ ನಿಜವಿರಬೇಕು.ಯಾಕೆಂದರೆ ಅವಳಿಗೆ ನಂಜೊತೆ ಸುಳ್ಳು ಹೇಳಬೇಕಾದ ಅವಶ್ಯಕತೆಯಿದೆ,ತಾನು ನಿಮ್ಮನೆಲ್ಲ ಬಿಟ್ಟು ಓಡಿ ಬಂದಿದ್ದರೂ ಚೆಂದಗೇ ಬದುಕು ಕಟ್ಟಿಕೊಂಡಿದ್ದೇನೆಂದು ತೋರಿಸಿಕೊಳ್ಳುವ ತುಚ್ಛ ಆಸೆ. ಸಿಟ್ಟಿನಲಿ ನಾ ಕುದ್ದೆ

“ಸುವಿ,ನಾನು ಎಲ್ಲಿ ಉಳಕೊಂಡದೀನಂತ ನೀ ಕೇಳಲೇ ಇಲ್ವಲ್ಲ! ಮನೆಗಾದ್ರೂ ಕರತೀಯೇನೋಂದ್ರೆ ಅದಕ್ಕೂ ಸಬೂಬು ಹೇಳ್ತೀಯ,ಗಂಡ ಪೊಸೆಸ್ಸಿವ್ ಅಂತೀಯ,ಇದೆಲ್ಲ ಏನ್ ಚೆಂದವೇ? ಸುಖವಾದ ಬದುಕಾ ಇದು?”ನಾನು ರೇಗಿಯೇ ತೀರಿದೆ.

“ಸ್ಸಾರಿ ಮನು,ಇರು ಅವರ ಜೊತೆ ಮಾತಾಡಿ ನಾನೇ ನಿಧಾನಕೆ ಕರಕೊಂಡು ಹೋಗ್ತೀನಿ,ನೀವೆಲ್ಲ ಹೇಗೋ ಏನೋ ನನ್ ಮೇಲೆ ಎಷ್ಟು ಕೋಪಿಸ್ಕೊಂಡಿರ್ತೀರಂತ ನಾ ಅರ್ಧ ದೂರ ಉಳ್ದೆ,ಈಗಿನ್ನೂ ಮತ್ತೆ ಸಿಕ್ಕಿದೀವಿ,ಖಂಡಿತ ಆದಷ್ಟು ಬೇಗ ಕರಕೊಂಡು ಹೋಗ್ತೀನಿ ಮ್? ” ನನ್ನನ್ನು ಅನುನಯಿಸುವಂತೆ ಹೇಳಿದವಳು ಹಿಂದೆಯೇ “ಸರೀ ಈಗ ಎಲ್ಲಿ ಉಳಕೊಂಡಿದ್ದಿ? ಯಾವಾಗ ವಾಪಸ್? ” ಎಂದು ಕೇಳಿದಳು.

ಅವಳು ಹಾಗೆ ಹೇಳಿದ್ದು ಕೇಳಿದ್ದು ಎರಡೂ ನಂಗೆ ಇಷ್ಟವಾಗಿತ್ತು. ನಾನು ಆಡಲೇಬೇಕೆಂದುಕೊಂಡಿದ್ದ ಮಾತಿಗೊಂದು ದಾರಿ ಸಿಕ್ಕಿದ ಹಾಗಾಗಿತ್ತು,

” ನಾನು ನನ್ನ ಕಾಲೇಜು ಫ್ರೆಂಡ್ ಮನೇಲಿ ಉಳಕೊಂಡಿದೀನಿ,ಅವನು ಇಲ್ಲೇ ಸಿಟಿ ಸ್ಟೇಷನ್‍ಲಿ ಇನ್ಸ್ಪೆಕ್ಟರಾಗಿದಾನೆ. ಮಹಾಂತೇಶ ಅಂತ. ಅವೊತ್ತು ನಿನ್ನ ಅಲ್ಲಿ ಸಯ್ಯಾಜಿರಾವ್ ರೋಡಲ್ಲಿ ಭೇಟಿ ಆಗಿದ್ನಲ್ಲ ,ಆಗ ಅವ್ನೂ ಇದ್ದ ಜೊತೆಲಿ.”

ಅವಳ ಮುಖವನ್ನೇ ನೇರ ನೋಡುತ್ತ ಹೇಳುವಾಗ ನಾನು ನಿಜಕ್ಕೂ ಅದೆಷ್ಟು ವಿಕೃತವಾಗಿ ಸುಖಿಸಿದೆನೆಂದರೆ ಅಷ್ಟೂ ದಿನಗಳು ನಾನು ಒಳಗೊಳಗೇ ಕುದಿಸಿದ ಕುಲುಮೆಯಲಿ ಹೂವರಳಿದ ತಂಪು! ನನ್ನ ಮಾತು ಕೇಳಿ ಅವಳ ಮುಖ ಕಪ್ಪಿಟ್ಟಿತು. ಸ್ವಲ್ಪ ತಡೆದು ಉಸಿರೆಳೆದುಕೊಂಡಂತೆ ಮಾಡಿದವಳು

“ಓ! ಹೌದಾ ” ಅಂದು ಸ್ವಲ್ಪ ಹೊತ್ತು ಸುಮ್ಮನಾಗಿ ಬಿಟ್ಟಳು.

ನನ್ನನ್ನು ಧಿಕ್ಕರಿಸಿ ಹೋಗಿ ನನ್ನ ಅಹಂ ಅನ್ನು ಘಾಸಿಗೊಳಿಸಿ,ಇವತ್ತು ಹೀನಾಯವಾಗಿ ಬದುಕುತ್ತಿರುವ ಹೊತ್ತಿನಲ್ಲೂ ತಾನಿನ್ನೂ ಸುಖವಾಗಿದ್ದೇನೆಂಬಂತೆ ತೋರಿಸಿಕೊಳ್ಳುತ್ತ ತನ್ನ ಅಹಂನ್ನು ಕಾಪಿಟ್ಟುಕೊಳ್ಳುತ್ತಿರುವವಳನ್ನು ನಿಕೃಷ್ಟವಾಗಿ ಸೋಲಿಸಿದ ಮಹದಾನಂದವೊಂದು ನನ್ನನ್ನು ಆವರಿಸಿ ಹಗುರಾಗಿಸಿತು. ಎಷ್ಟೇ ಇಲ್ಲವೆಂದರೂ ಈ ರೀತಿಯ ಸಣ್ಣತನಗಳಿಗೂ ಒಂದು ತೂಕವಿದೆ ,ಅವು ತನ್ನದೇ ಆದ ರೀತಿಯಲ್ಲಿ ಒಂದು ವಿಚಿತ್ರ ಸಂತೋಷ ಕೊಡುತ್ತವೆ.

ಹಾಗೆ ನೋಡಿದರೆ..ಇವುಗಳೇ ಮನುಷ್ಯನ ದಿನನಿತ್ಯದ ಬದುಕಿನ ವಾಸ್ತವಗಳು. ನಾನು ಎದ್ದೆ.

“ಸರಿ ನಾ ಹೊರಡುತ್ತೇನೆ ಸುವಿ,ಚೆನ್ನಾಗಿರು”

“ಸರಿ ಮನು,ನಾನೂ ಹೊರಡ್ತೀನಿ,ಮತ್ತೆ ಕೆಲಸಕೆ ಲೇಟ್ ಆಗುತ್ತೆ ,ನೀನೂ ಚೆನ್ನಾಗಿರು,ಆಗೂದಾದ್ರೆ ನನ್ನನ್ನ ನೋಡಿದ ಬಗೆ ಮನೇಲಿ ಹೇಳಬೇಡ” ಅವಳ ದನಿ ಮೊದಲಿಗಿಂತ ಭಾರವಾಗಿತ್ತು.

“ಸುವಿ,ನೀನು ಏನೇನೂ ಬದಲಾಗಿಲ್ಲ ,ಅಷ್ಟೇ ಸುಳ್ಳಿ ಮತ್ತು ಕಪಟಿಯಾಗೇ ಇದ್ದೀಯ,ನಿನ್ನ ಬಗೆ ಮಹಾಂತೇಶ ಎಲ್ಲ ಹೇಳಿದಾನೆ,ನಿನ್ನ ಜೊತೆ ಮಾತಾಡುತ್ತ ಸಮಯ ಕಳೆಯಲು ನಂಗೂ ಅಂಥ ಇಂಟರೆಸ್ಟ್ ಇಲ್ಲ.ನಿನ್ನ ನೋಡಬೇಕೆಂದು ಬಹಳಾ ಕಾದಿದ್ದೆ ಆದರೆ ನಿನ್ನ ನೋಡಿದ ಮೇಲೆ ನೋಡಿರಲೇ ಬಾರದಿತ್ತು ಅನಿಸುತ್ತಿದೆ,ಇದನ್ನು ಕೂಡ ನಾ ಯಾವತ್ತಿಗೂ ನೆನಪಿಡಲಾರೆ ಹಾಗಿರೋವಾಗ ಯಾರಿಗೇನು ಹೇಳುವುದು? ನಿನಗಂತೂ ಇದನ್ನೆಲ್ಲ ಮರೆಯುವುದೊಂದು ವಿಷಯವೇ ಅಲ್ಲ ಬಿಡು” ಎಂದು ಬಿರುಸಾಗಿ ಹೇಳಿ ಎದ್ದು ಬಂದು ಇವತ್ತಿಗೆ ಸರಿಯಾಗಿ ಒಂದು ತಿಂಗಳಮೇಲೆ ಒಂದಷ್ಟು ಚಿಲ್ಲರೆ ದಿನಗಳು.ಒಂದುವೇಳೆ ಇವತ್ತು ಬೆಳಗೆ ಮಹಾಂತೇಶನ ಫೋನು ಬಾರದೇ ಹೋಗಿರುತ್ತಿದ್ದರೆ ಬಹುಶಃ ನಾನಿದನ್ನೆಲ್ಲ ಬರೆಯುತ್ತಿರಲಿಲ್ಲ,ಅದಲ್ಲದೆ ಇದನ್ನು ಬರೆಯುವ ಹೊತ್ತಿನಲಿ ಅವಳೂ ಇಲ್ಲ! ಮೊನ್ನೆ ಮಧ್ಯಾಹ್ನ ಟಿವಿಯಲ್ಲಿ ಕಾಣಿಸುತ್ತಿದ್ದ ಫ್ಲ್ಯಾಶ್ ನ್ಯೂಸ್ ಅವಳ ಕುರಿತೇ ಇರಬೇಕು.

ಮೈಸೂರಿನಲ್ಲಿ ಮಹಿಳೆ ಆತ್ಮಹತ್ಯೆ,ಗಂಡನ ಸಾವಿನಿಂದ ಮನನೊಂದು ಈ ಕೃತ್ಯ ಎಸಗಿರುವ ಶಂಕೆ.

final2ಇವತ್ತು ಮತ್ತೆ ಹೊಸತಾಗಿ ಇದೇ ಈಗಿನ್ನೂ ನಡೆಯಿತೇನೋ ಎಂಬಂತೆ ಎಲ್ಲವೂ ನೆನಪಾಗುತ್ತಿದೆ.

ಅವೊತ್ತು ನಾವು ಭೇಟಿಯಾದಾಗ ಸುವಿ ಹಸಿರು ಚೂಡಿ ಧರಿಸಿದ್ದಳು,ಅದರ ಬಾರ್ಡರಿನಲ್ಲಿ ಅದರ ಬೆಲೆಯ ಚೀಟಿ ಇನ್ನೂ ಹಾಗೇ ಅಂಟಿಕೊಂಡಿತ್ತು, ಅವರಸದಲಿ ಅದರ ಬೆಲೆಯ ಚೀಟಿ ತೆಗೆಯದೇ ಹಾಗೇ ಬಿಟ್ಟಿದ್ದಾಳೆ ಅಂದುಕೊಂಡು ನಾನು ಅವಳ ಅದರತ್ತ ಅವಳ ಗಮನ ಸೆಳೆದಾಗ ಅವಳು ನಕ್ಕಿದ್ದಳು

“ಇದು ಅವರು ಚೆನ್ನಾಗಿರೋ ಕಾಲಕೆ ಕೊಡಿಸಿದ್ದು..,ಒಳ್ಳೆ ಸಂದರ್ಭ ಬಂದರೆ ಹಾಕುವಾಂತ ಹಾಗೇ ಇಟ್ಟಿದ್ದೆ,ಇವತ್ತು ಹಾಕೊಂಡೆ..ಮೊದಲ ಸಲ,ಇವಾಗ ಅವರಿಗೆ ಹುಶಾರು ತಪ್ಪಿದ ಮೇಲೆ ಕಷ್ಟ ಅಂದ್ರೇನು ಅಂತ ಗೊತ್ತಾಗ್ತಿದೆ,ಮೊದಲೆಲ್ಲ..ತೋಚಿದಾಗೆಲ್ಲ ಶಾಪಿಂಗ್ ಹೊರಡ್ತಿದ್ದೆ.ಯಾವಾಗ್ಲೂ ಖುಷೀ ಖುಷೀ ಖುಷಿ.!” ಅಂದಿದ್ದಳು.

ಅದನ್ನು ಅಷ್ಟೇನೂ ಗೋಷ್ಠಿಗೆ ತೆಗೆದುಕೊಳ್ಳದೆ ನಾನು “ಸರೀ ನನ್ನಿಂದೇನಾದರೂ ಸಹಾಯ ಬೇಕಾ?” ಎಂದು ಕೇಳಿದ್ದೆ. ಅದಕ್ಕವಳು

“ಸಧ್ಯಕೆ ಬೇಡ ಮನು,ಆದರೆ ಅವರಿಗೆ ಟ್ರಾನÁ್ಸ್ಪ್ಯಂಟೇಶನ್ ಟೈಮಿನಲಿ ಬೇಕಾಗಬಹುದು ಆಗ ಹೇಳ್ತೀನಿ” ಅಂದಿದ್ದಳು. ಆದರೆ ನನಗೆ ಅದ್ಯಾವುದೂ ನಿಜವೆನಿಸಿರಲೇ ಇಲ್ಲ. ಮಹಾಂತೇಶ ಅವಳ ಕುರಿತಾಗಿ ಹೇಳಿದ್ದೆಲ್ಲವೂ ತಲೆಯಲ್ಲಿ ಹಾಗೇ ಇದ್ದ ಆ ಹೊತ್ತಿನಲ್ಲಿ ಅವಳ ಮಾತ್ಯಾವುದನ್ನೂ ನಾ ಸರಿಯಾಗಿ ಕಿವಿಕೊಟ್ಟು ಕೇಳಿಸಿಕೊಂಡಿರಲೇ ಇಲ್ಲ.

ಹಾಗೆ ನೋಡಿದರೆ ಅವಳು ನಮಗೆ,ಅದರಲ್ಲೂ ನನಗೆ ,ದ್ರೋಹ ಬಗೆದು ಹೋಗಿದ್ದವಳು,ಹಾಗೆ ಹೋದವಳು ಎಲ್ಲೋ ಒಂದು ಕಡೆ ಸುಖಿಯಾಗಿ ನೆಮ್ಮದಿಯಾಗಿ ಬದುಕುತ್ತಾಳೆಂಬುವುದನ್ನು ನಾನು ಊಹಿಸಿಕೊಂಡಿರಲಿಲ್ಲ,ಬಹುಶಃ ಬಯಸಿರಲಿಲ್ಲ ಹಾಗಾಗಿಯೋ ಏನೋ ಪ್ರಸ್ತುತವನು ಒಪ್ಪಿಕೊಳ್ಳುವುದೂ ಆಗುತ್ತಿರಲಿಲ್ಲ. ಅವಳು ನನ್ನಿಂದ ದೂರವಾಗಿದ್ದರೂ ಅವಳು ನನ್ನ ಮನಸಿನಲ್ಲಿ ಇದ್ದೇ ಇದ್ದಳು.

ಕಷ್ಟದಲ್ಲಿ ,ನೊಂದು ಬೆಂದು ಬಸವಳಿದು ಕಡೆಗೆ ಒಂದು ದಿನ ಮತ್ತೆ ನಮ್ಮಲ್ಲಿಗೇ ಬಂದು ನನ್ನೆದುರು ನಿಂತು ಕಣ್ಣೀರಿಡುತ್ತಾಳೆಂದು ನಾನು ಅನೇಕ ಸಲ ಕಲ್ಪಿಸಿಕೊಂಡಿದ್ದೆ,ಅದನ್ನೇ ಆಪ್ತವಾಗಿ ನಂಬಿದ್ದೆ..ಅಥವಾ ಬಯಸಿದ್ದೆ. ಅದಕೆ ತಕ್ಕಂತೆ ಮಹಾಂತೇಶ ಅವಳ ಕುರಿತ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾಗ ನಿಜಕ್ಕೂ ನನಗೆ ತ್ಯಂತ ಸಂತೋಷವಾಗಿತ್ತೆಂದು ಈ ಮರಣ ಸಮ್ಮುಖದಲ್ಲಾದರೂ ಒಪ್ಪಿಕೊಳ್ಳದೇ ಹೋದರೆ ನಾನು ನೀಚನಾಗಿಬಿಡುತ್ತೇನೆ..ಮತ್ತದೇ ಸಮಯ ನನಗೆ ಅವಳನ್ನು ಮುಖತಃ ಕಂಡು ,ಅವಳ ಪಶ್ಚತ್ತಾಪದ ,ಹಳಹಳಿಕೆಯ ಕಣ್ಣೀರನ್ನು ಕೂಡ ಅವಶ್ಯ ನೋಡಬೇಕೆನಿಸಿತ್ತು, ಆಗ ನಾನು ಅವಳನ್ನು ಕ್ಷಮಿಸಿದಂತೆ ಮಾಡಿ, ಶಿಕ್ಷಿಸಿದ ತೃಪ್ತಿ ಬೇಕಿತ್ತು..ಅವತ್ತಿಗಂತೂ ಅವಳನ್ನು ಹಾಗೆ ಘಾಸಿಗೊಳಿಸಬೇಕೆಂಬುದು ಸಹಜವೂ ನ್ಯಾಯಯುತವೂ ಆದ ಹಪಹಪಿಯೆಂದೇ ನನಗೆ ಅನಿಸಿತ್ತು.ಆದರೆ ಅವಳು ನನಗೆ ಅದ್ಯಾವುದಕ್ಕೂ ಅವಕಾಶ ಕೊಡದೆ ಪ್ರೀತಿ ,ಬದುಕು ,ಬದ್ಧತೆ,ತ್ಯಾಗ ರೋಮಾಂಚನ ಹೀಗೆ ಏನೇನೋ ಮಾತಾಡಿ ತಲೆ ಕೆಡಿಸಿದ್ದಳು.

ಈಗ ನೋಡಿದರೆ ಕಥೆಗೆ ಮತ್ತೊಂದು ತಿರುವು ಸಿಕ್ಕಿದೆ! ಅವೊತ್ತು ಹಾಗೆ ಅವಳೊಂದಿಗೆ ನಿಷ್ಟುರವಾಗಿ ಮಾತಾಡಿಬಂದ ಇಷ್ಟು ದಿನಗಳ ಬಳಿಕ ಮಹಾಂತೇಶ ಹೊಸ ಕಥೆ ಹೇಳುತಿದಾನೆ ,ಅದರ ಪ್ರಕಾರ ಅವಳಿಗೆ ಗಂಡ ಇದ್ದದ್ದು, ಅವರು ಒಂದು ಕಾಲಕ್ಕೆ ತುಂಬ ಚೆಂದಗೆ ಬದುಕಿದ್ದು, ನಡುವೆ ಅವನಿಗೆ ಕಿಡ್ನಿ ಹೋಗಿದ್ದು,ಬ್ಯುಸಿನೆಸ್ ಕುಸಿದದ್ದು ಎಲ್ಲ ನಿಜವೇ ಅಂತೆ,ಅವನ ಟ್ರೀಟ್ಮೆಂಟ್ ಖರ್ಚಿಗೆ ಹಣ ಹೊಂದಿಸಲಿಕ್ಕೇ ಅವಳು ಹಾಗೆಲ್ಲ ಹೆಣಗ್ತಾ ಇದ್ದಳಂತೆ,ಅವಳ ಗಂಡನ ಹೆಸರು ಕೂಡ ಅದೇನೋ ರಾಜನಾಯಕನಂತೆ! ರಾಜನಾಯಕ?? ಒಂದುವೇಳೆ ನಮ್ಮೂರ ರಾಜನಾಯಕನೇ?ಅವನು ಊರು ಬಿಟ್ಟು ವರ್ಷಗಳಾಗಿದ್ದವು. ಬೆಂಗಳೂರಿನಲಿ ಇದೀನಿ ಆನ್ನುತ್ತಿದ್ದ,ತಾಯಿ ಇರುವ ತನಕ ಅವಳನ್ನ ನೋಡಿಕೊಂಡು ಹೋಗಲು ಬರುತ್ತಲೂ ಇದ್ದ.ಮದುವೆ ಇನ್ನೂ ಆಗಿಲ್ಲ ಅನ್ನುತ್ತಿದ್ದ,ಎಲ್ಲಕ್ಕಿಂತ ಈಗ ಎರಡು ವರ್ಷದ ಮೊದಲೊಮ್ಮೆ ನಮ್ಮನೆಗೆ ಏನೋ ನೆಪದಲ್ಲಿ ಮಾತಾಡಿಸಿಕೊಂಡು ಹೋಗಿದ್ದ. ಅಲ್ಲಿಗೆ ಸುವಿಗೆ ನಮ್ಮನೆಯ ಎಲ್ಲ ಕಥೆ ಗೊತ್ತಿತ್ತೇ? ಒಂದುವೇಳೆ ತಾನು ರಾಜನಾಯಕಯನ್ನ ಮದುವೆಯಾಗಿರದೇ ಹೋಗಿದ್ದರೆ ಅವಳು ನನ್ನನು ಅವನಲ್ಲಿ ಭೇಟಿ ಮಾಡಿಸಿರುತ್ತಿದ್ದಳೇ?

ಹಾಗೆ ನೋಡಿದರೆ ಅವಳು ಹೇಳಿದ್ದರಲ್ಲಿ ಏನೇನೂ ತಪ್ಪಿರಲಿಲ್ಲ,

“ನಮ್ಮ ನಡುವೆ ಏನೋ ಮಿಸ್ಸಿಂಗ್ ಇತ್ತು ಮನು,ಸಿಂಪಲ್ ಆಗಿ ಹೇಳೂದಾದರೆ ನಮ್ಮ ನಡುವೆ ಒಂದು ಸೆಳೆತ ಇರಲಿಲ್ಲ.!ನಿನ್ನ ಹೆಂಡತಿ ಅಂತಲೇ ಬೆಳೆದಿದ್ದಕ್ಕೋ ಏನೋ,ನಂಗೆ ನಿನ್ನಲ್ಲಿ ಒಬ್ಬ ಪ್ರಿಯಕರ ಕಾಣಲೇ ಇಲ್ಲ,ಎಲ್ಲವೂ ತುಂಬ ಸಹಜವೆನಿಸಿ,ಒಂದೇ ಒಂದು ಸಲವಾದರೂ ಮೈಯೆಲ್ಲ ರೋಮಾಂಚಗೊಳ್ಳಬೇಕೆಂದು ಉತ್ಕಟವಾಗಿ ಅನಿಸಿತ್ತು.

ತೀರ ಒಂದು ನೋಟವೇ ಎದೆಯೊಳಗೆ ಸಂಚಲನೆ ತರಬಹುದೆಂದು ನಂಗೆ ಅವರನ್ನ ನೊಡುವ ತನಕ ಗೊತ್ತೇ ಇರಲಿಲ್ಲ ಮನು. ನಾನು ಮಾಡಿದ್ದು ಲೋಕದ ಕಣ್ಣಿಗೆ ತಪ್ಪೇ ಇರಬಹುದು,ಆದರೆ ನಂಗೇನೋ ನಾನು ಇವರನ್ನ ಮದುವೆಯಾಗಿ ಪಡೆದ ಸಂತೋಷಕೆ ಈಡೇ ಇಲ್ಲ ಅನಿಸುತ್ತೆ,ಇವತ್ತು ಸ್ವಲ್ಪ ಕಷ್ಟದಲಿದೀವಿ ಆದರೆ ಅವರು ಚೆನ್ನಾಗಿರೋ ಕಾಲದಲ್ಲಿ ನಾವು ಹೇಗಿದ್ವಿ ಗೊತ್ತಾ! ಬಹುಶಃ ನಮ್ಮಷ್ಟು ಖುಷಿಯಾಗಿ ಯಾರೂ ಇರಲಿಲ್ಲ ಅನ್ಸುತ್ತೆ ,ಏನ್ಮಾಡ್ತಿ ಗ್ರಹಚಾರ ಸರಿ ಇಲ್ಲ,ನೋಡುವ ಬೇಗ ಎಲ್ಲ ಸರಿಯಾಗುತ್ತೆ,ಮೊದಲಿನ ಹಾಗೇ!”ಅಂದಿದ್ದಳು.

ಸುವೀ ಸ್ಸಾರಿ ಅನ್ನಬೇಕೆನಿಸುತ್ತಿದೆ…ಹೇಗೆ ಹೇಳುವುದು?

2 comments to “ಮುಟ್ಟುವಷ್ಟು ಹತ್ತಿರ..ಮುಟ್ಟಲಾರದಷ್ಟು ದೂರ!”
  1. ಮನದ ಕೊಳದಲ್ಲಿ ಭಾವತರಂಗಗಳನ್ನು ಹೊಮ್ಮಿಸುವ ಬರಹದ ಶೈಲಿ ಸೊಗಸಾಗಿದೆ.

ಪ್ರತಿಕ್ರಿಯಿಸಿ