ಕಂಬನಿಯ ಮೊಹರು

divderspverticle

ಮಳೆ ಸುರಿವ ಇರುಳಲ್ಲಿ
ನಾನು ಮೊಂಬತ್ತಿ ಹಚ್ಚುತ್ತಿದ್ದೆ,
ಅವನು ಅಲ್ಬಮ್ಮು ತೆರೆಯುತ್ತಿದ್ದ..
ಹಳೆ ದಿನಗಳ ಹರಡಿಕೊಂಡು
ಕೂರುತ್ತಿದ್ದೆವು..
ಆಗಷ್ಟೆ ಬಂದ ಅಪ್ಪನ ಕನ್ನಡಕ,
ಅಮ್ಮನ ಹೊಸ ಸೀರೆ, ನನ್ನ ಕೈಯ್ಯ
ಕೆಂಪು, ಅವನ ಗಡ್ಡದ ನೊಂಪು
ಹೀಗೆ ಮನದ ಗೋಡೆ ತುಂಬ ನೆನಪುಗಳು ಚಟ್ಟು ಹೊಯ್ಯುತ್ತಿದ್ದವು,
ಕಣ್ಣ ಗೊಂಬೆಗಳು ಹಳೆ ಅಂಗಿ ತೊಟ್ಟು ನಲಿಯುತ್ತಿದ್ದವು..

ಈಗ ಅವುಗಳ ಮುಗ್ಗಲು ವಾಸನೆಗೆrect6317
ಬೆತ್ತಲಾಗುವ ಬಯಕೆ ಅಷ್ಟೆ..

ಬಿಕ್ಕುವ ಗಾಜಿನ ಬೆನ್ನಿಗೆ
ಉಸಿರು ಚೆಲ್ಲಿ ಈಗಲೂ ಅವನ
ಹೆಸರ ಬರೆವ ಚಟ ಬೆರಳಿಗೆ..
ಮುರಿದ ಉಗುರ ಚೂರಿಗೆ ಚಂದಿರನ
ಹುಚ್ಚು ನೆನಕೆ..

ಇತ್ತೀಚಿಗೆ ಎಷ್ಟು ಕಾದರೂ
ಚುಕ್ಕಿಗಳು ಹುಟ್ಟಿಕೊಳ್ಳುವುದಿಲ್ಲ,
ಕತ್ತಲ ಕೊಡೆಗೆ ತೂತು ಬೀಳುವುದೂ ಇಲ್ಲ..

               *

ನಾನು ಅವನು ಕವಲ ನೆನಪಿಲ್ಲದೇ
ನಡೆದ ರಸ್ತೆಯಲ್ಲಿ
ಹೆಜ್ಜೆಗಳ ಹುರುಪೆ ಕಿತ್ತು ಅಲೆಯುತಿವೆ
ಎಲೆಗಳು, ಈಗಷ್ಟೆ ತೊಳೆದು ಮಗುಚಿಟ್ಟ
ಹಣತೆಯ ಸಂಗಾತಿಗಳಂತೆ ಅಂಗಳದ ಪಾಚಿ ಮೇಲೆ ಹರವಿದ ಚಾಲಿಸಿಪ್ಪೆಗಳು,

ಅವುಗಳ ಬೆನ್ನ ಮೇಲೆ ಬಣ್ಣವಿಲ್ಲದ ಚಿತ್ರ ಬರೆಯುತ್ತಿದೆ ಮಳೆ, ಕಣ್ಣ ತುದಿಯಲ್ಲಿ
ಮೂಡುತ್ತಿದೆ ಕಂಬನಿಯ ಮೊಹರು..

ಚಿತ್ರ : ನಿಹಾರಿಕಾ ಶೆಣೈ

One comment to “ಕಂಬನಿಯ ಮೊಹರು”

ಪ್ರತಿಕ್ರಿಯಿಸಿ