ಕತೆಗಾರ ವಿಕ್ರಮ್ ಹತ್ವಾರ್ ರ ‘ಜಿರೋ ಮತ್ತು ಒಂದು’ ಅವರ ಪ್ರಥಮ ಕಥಾ ಸಂಕಲನ. ಜೊತೆಗೆ ಅವರಿಗೆ ಯುವ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಂದುಕೊಟ್ಟ ಕೃತಿ. ಸದ್ಯ ಗಂಭೀರವಾಗಿ ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿರುವ ಕೆಲವೇ ಯುವ ಪ್ರತಿಭೆಗಳಲ್ಲಿ ಒಬ್ಬರಾದ ಸುರೇಶ ನಾಗಲಮಡಿಕೆ ಋತುಮಾನಕ್ಕಾಗಿ ಇಲ್ಲಿನ ಕತೆಗಳನ್ನು ವಿಮರ್ಶಿಸಿದ್ದಾರೆ.
ಕನ್ನಡ ಕಥನ ಜಗತ್ತಿಗೆ ಹೊಸ ಅನುಭವಗಳನ್ನು ಪರಿಚಯಸಿದ ಹಲವರು ಆಗಿಹೋಗಿದ್ದಾರೆ. ಅವು ನಗರದ ಮುಖೇನ ಬಂದಿವೆ ಎಂದರೂ ಆದೀತು. ಮುಂಬಾಯಿ ಬದುಕಿನ ಜತೆ ಕರ್ನಾಟಕದ ನೆಲೆಗಳಿಗೆ ಕೊಂಡಿಯನ್ನು ಕಲ್ಪಿಸಿದ್ದು ತಿಳಿದ ಸಂಗತಿ. ವ್ಯಾಸರಾಯ ಬಲ್ಲಾಳ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಜಯಂತಕಾಯ್ಕಿಣಿ, ಜೊಕಟ್ಟೆ ಮುಂತಾದವರ ಬರೆಹಗಳಲ್ಲಿ ಕಂಡಿದ್ದವು. ದೇಸಾಯಿಯವರ ಬರೆಹಗಳು ಭಾರತದ ಗಡಿಯನ್ನು ದಾಟಿದ್ದವು. ಆದರೆ ಅವರ ಕಥನಗಳನ್ನು ಕನ್ನಡ ವಿಮರ್ಶಕರು ಚರ್ಚೆ ಮಾಡಿದ್ದು ಬಹುಪಾಲು ನವ್ಯ ವಿಮರ್ಶೆಯ ಮಾನದಂಡಗಳ ಬೆಳಕಿನಲ್ಲಿ. ನಗರ ಬದುಕು ಇವರಿಗೆ ಕೇಂದ್ರವಾಗಿತ್ತು. ಒಂದು ಕಾಲಘಟ್ಟದಲ್ಲಿ ಹೊರಗಿನಿಂದ ಬಂದ ‘ಅಸ್ತಿತ್ವವಾದಿ’ ಪರಿಕಲ್ಪನೆ ಬಹಳ ಕಾಲ ನಮ್ಮ ವಿಮರ್ಶೆಯಲ್ಲಿ ಅಡ್ಡಾಡಿತು. ಈಗ ಮತ್ತೊಮ್ಮ ಅವರ ಕಥೆಗಳಿಗೆ ಹಿಂತಿರುಗಿದಾಗ ಪುನಃ ಅಲ್ಲಿಂದಲೇ ಬಂದ ‘ಡಯಾಸ್ಪೊರಾ’ ಕಾಡುತ್ತದೆ. ಆದರೆ ಇವೆಲ್ಲವನ್ನೂ ಮೀರಿ ಮನುಷ್ಯ ಸಂಕಟಗಳು ಇರುತ್ತವೆ. ಅವುಗಳು ಕೆಲವೊಮ್ಮೆ ನಾವು ಸೃಷ್ಟಿಸುವ ಭಾಷಿಕ ನುಡಿಗಟ್ಟುಗಳಾಚೆ ಬಾಳುತ್ತವೆ. ಈ ಬಗೆಯ ಕನ್ನಡದ ಕಥನ ಲೋಕವನ್ನು ಇಂದು ಓದುವುದಾದರೂ ಹೇಗೆ? ಓದುವ ಕಾಲದ ತಲ್ಲಣಗಳೇನು? ಅಸ್ತಿತ್ವವಾದದ ತಮ್ಮನೋ ಅಣ್ಣನೋ ಆದ ಡಯಾಸ್ಪೊರಾ ಬೆಳಕಿನಲ್ಲಿ ಇಂದು ಬರೆಯುತ್ತಿರುವ ಹತ್ವಾರರ ಕತೆಗಳನ್ನು ನೋಡಬೇಕೆ? ಲೋಕ ಬದುಕನ್ನು ಇಂಥಹ ಕಥೆಗಳು ಒಳಗುಮಾಡಿಕೊಳ್ಳುವ ರೀತಿ ಹೇಗೆ? ನಗರ ಬದುಕಿನ ಕಥೆಗಳು ಎನ್ನುವುದು ಈಗಲೂ ಕನ್ನಡ ಚರ್ಚೆಯ ಆವರಣದಲ್ಲಿ ತಾತ್ವಿಕಪರಿಕಲ್ಪನೆಯಾಗಿದ್ದು ಈಗ ದೇಶವೇ ನಗರ ವಾಗುತ್ತಿರುವಾಗ ನಮಗೆ ನೆರವಾಗುವ ನುಡಿಗಟ್ಟುಗಳು ಯಾವುವು? ಇವು ಪ್ರಶ್ನೆಗಳೂ ಹೌದು, ಸವಾಲುಗಳು ಕೂಡ.
ಡಯಾಸ್ಪೊರಾ ಅನ್ನುವುದು ಭಾರತದಲ್ಲಿಯೇ ಇತ್ತು ಅಂದರೆ ವಲಸೆಯ ಪ್ರಕ್ರಿಯೆ. ಆದರೆ ಒಂದು ಅಧ್ಯಯನದ ಶಿಸ್ತಾಗಿ ಕಂಡುಬಂದಿದ್ದು ಪಶ್ಚಿಮದ ಕಡೆಯಿಂದ. ಈಚೆಗೆ ಈ ಪರಿಕಲ್ಪನೆಯ ಕುರಿತಾಗಿ ತಾರಿಣಿ ಶುಭಾದಾಯಿನಿ ಯವರು ಒಳ್ಳೆಯ ಪುಸ್ತಕವನ್ನು ಬರೆದಿದ್ದಾರೆ. ಆದರೆ ವಸುಧೇಂದ್ರ, ವಿಕ್ರಮಹತ್ವಾರ, ವಸ್ತಾರೆ, ಗುರುಪ್ರಸಾದ ಕಾಗಿನೆಲೆ, ಎಂ.ಎಸ್.ಶ್ರೀರಾಮ್, ಆನಂದ ಕುಂಚನೂರ, ಇನ್ನೂ ಹಲವರು ತಮ್ಮ ಬದುಕಿನ ಕಸುಬುಗಳ ಪಲ್ಲಟದಿಂದಾಗಿ ಹೊರ ದೇಶಗಳಿಗೆ,ಅಥವಾ ಹೊರದೇಶಗಳ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವರು. ತಾವು ಸದಾ ಹೊರಗಿನ ಪ್ರಜ್ಞೆಗಳ ಜೊತೆ ಕೆಲಸ ಮಾಡುವಾಗಲೂ ತಮ್ಮ ನೆಲದ ಬದುಕಿನೊಂದಿಗೆ ನಂಟನ್ನು ಕಡಿದುಕೊಳ್ಳುವುದಿಲ್ಲ. ಇದನ್ನೇ ನಾವು ‘ಸ್ವಂತೀಕರಣ’ಎಂದು ಕರೆಯಬಹುದು. ಈ ನುಡಿಗಟ್ಟನ್ನು ತನ್ನದು, ಸ್ವ ಪ್ರಜ್ಞೆ, ಮೂಲ ಮುಂತಾದ ನೆಲೆಗಳಿಗೆ ಹಂಚಿಕೊಳ್ಳಬಹುದು. ಈ ಸ್ವಂತೀಕರಣವು ಡಯಾಸ್ಪೊರಾಕ್ಕೆ ಪರ್ಯಾಯವೂ ಆಗಬಹುದು. ಆದರೆ ದುರಂತ ವೆಂದರೆ ಒಂದನ್ನು ಬಿಟ್ಟು ಇನ್ನೊಂದು ಇರಲಾರದು.ಆಧುನಿಕೋತ್ತರ ಸಂದರ್ಭದಲ್ಲಿ ನಮಗೆ ಕೇಳಿಸುತ್ತಿರುವ ನುಡಿಗಟ್ಟುಗಳಲ್ಲಿ ‘ಪೋಸ್ಟ್ ಟ್ರೂತ್’ ಮತ್ತು ‘ಡಯಾಸ್ಪೊರಾ’ ಗಳೇ ಎನ್ನಬಹುದು. ಈ ಬಗೆಯ ನುಡಿಗಟ್ಟುಗಳು ನಮ್ಮ ನೆನಪುಗಳ ಭಾರತದ ಸತ್ಯಗಳನ್ನು ಹೇಗೆ ಅನಾವರಣ ಮಾಡಬಲ್ಲವು ಎಂಬುದು ಚರ್ಚೆ ನಡೆಯಬೇಕಾಗಿದೆ. ಏಕೆಂದರೆ ನಮ್ಮ ಮೂಲ ಕಸುಬುಗಳಾದ ಕೃಷಿ ಮತ್ತು ಭೂಮಿಯ ಪ್ರಶ್ನೆ ರಾಜಕೀಯ, ಆಥರ್ಿಕ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ವ್ಯಕ್ತಿಯ ಆಂತರಿಕ ತಲ್ಲಣಗಳನ್ನು ನಾವು ಯಾವ ಸಮಾಜದಲ್ಲಿ ಬೇಕಾದರೂ ಕಾಣಬಹುದು. ಆ ಬಗೆಯ ತಲ್ಲಣಗಳನ್ನು ಹೇಗೆ ಹೇಳುವುದು? ಕತೆ ಎಂದರೆ ಕೇವಲ ನಿರೂಪಿಸುವುದೇ ಆಗಲಾರದು. ಹಾಗೆ ಆದರೆ ಅದು ವರದಿಯಾಗುತ್ತದೆ. ಹೇಳಬೇಕಾದ ಅನುಭವಗಳನ್ನು ಲೋಕದ ಬದುಕಿಗೆ ದಾಟಿಸುವುದು ಕಲೆಗಾರಿಕೆ.ಈ ನಿಟ್ಟಿನಲ್ಲಿ ಬಹಳ ಹಿಂದೆ ಮಾಸ್ತಿಯವರು ಚಿತ್ತಾಲರಿಗೆ ಹೇಳಿದ ಮಾತುಗಳು ನೆನಪಾಗುತ್ತಿವೆ. ಚಿತ್ತಾಲರು ತಮ್ಮ ಒಂದು ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ನಮ್ಮ ತಲೆಮಾರಿನ ಕತೆಗಾರರು ಅವಗಾಹನೆಗೆ ತಂದುಕೊಳ್ಳುಬಹುದು. ಕತೆಯಲ್ಲಿ ಒಂದು ಜೀವದ ಬದುಕನ್ನು ಬೇರೊಂದು ಜೀವಕ್ಕೆ ಅಚ್ಚುಕಟ್ಟಾಗಿ ಹೇಳುವುದು. ಎಂದು ಮಾಸ್ತಿ ಹೇಳುತ್ತಾರೆ. ಕಥನ ಜೀವ ಜೀವಗಳ ನಂಟನ್ನು ಬೆಳಸುವಂತದ್ದು. ಇದರ ಬೆನ್ನಲ್ಲೆ ಚಿತ್ತಾಲರು ನವ್ಯರ ಕಾಲಕ್ಕೆ ಕತೆ ‘ಹೇಳುವುದು’ಬದಲಾಗಿ ‘ಬರೆ’ಯುವುದು ಎಂದಾಯ್ತು. ಆ ಬಗೆಯ ಕತೆಗಳಲ್ಲಿ ‘ನಾವು’ ಹೆಚ್ಚಾಗಿ ಕಾಣಿಸಿಕೊಂಡೆವು. ಎಂದು ಹೇಳುತ್ತಾರೆ. ಚಿತ್ತಾಲರ ಮಾತುಗಳು ಇಂದು ಗಂಭೀರವಾಗಿ ಪರಿಗಣಿಸಬೇಕು. ಬಹುಶಃ ಮಾಸ್ತಿ ಪರಂಪರೆ ಮತ್ತು ನವ್ಯದ ಮಾದರಿಗಳೆರಡು ನಮಗೆ ಬೇಕು. ಅಂದರೆ ‘ಕೇಳು’ ಪರಂಪರೆ ಮತ್ತು ‘ಹೇಳು’ಪರಂಪರೆಗಳು ಕತೆಯ ತಂತ್ರದಲ್ಲಿ ಜಾಗ ಪಡೆದಿರುವ ಮಾದರಿಗಳನ್ನು ಇಂದು ಗುರಿತಿಸಬೇಕು . ಹೊಸಬರಲ್ಲಿ ಕೆಲವರಾದರೂ ಈ ಮಾದರಿಗಳಿಗೆ ಒಗ್ಗಿಕೊಂಡಿರುವುದು ಕಾಣಬಹುದು.
ವಿಕ್ರಮ್ ಅವರ ‘ಕಥಾಸ್ತು’ ವಸ್ತುವಿನ ದೃಷ್ಟಿಯಲ್ಲಿ ಗೊಂದಲ ಇದ್ದರು ಕತೆಯ ತಂತ್ರದ ಮಾದರಿಗಳಲ್ಲಿ ಹೊಸ ಬಗೆಯನ್ನು ಸೂಚಿಸುತ್ತದೆ. ಕತೆಯ ಗರ್ಭದಲ್ಲಿ ಅಡಗಿರುವ ಹಲವು ಕತೆಗಳು, ಅವುಗಳ ಸರಣಿ ಬೆಳೆಯುವ ಕ್ರಮ :ಪಾತ್ರಗಳ ಬದುಕು ಕತೆಯ ಭಾಷೆಯಂತೆ ಚಂಚಲವೂ ಪ್ರಕ್ಷುಬ್ಧತೆ ಯಿಂದಲೂ ಕೂಡಿದೆ.ವಸ್ತಾರೆ ಯವರು ಬದುಕನ್ನು ನೋಡುವುದಕ್ಕೂ ವಿಕ್ರಮ್ ಗಮನಿಸುವುದಕ್ಕೂ ವ್ಯತ್ಯಾಸಗಳು ಇವೆ. ವಸ್ತಾರೆ ಅವರ ‘ಹಕೂನ ಮಟಾಟ’ ಕತೆಗಳಲ್ಲಿ ಬದುಕು ಗಂಭೀರವಾಗಿ ಕಾಡುವಷ್ಟು ಇರದೆ ಅದು ಅಂಗೈಯಲ್ಲಿನ ಆಟಿಕೆಯಂತೆ ಭಾವಿಸುವ ಇರಾದೆ ಇದೆ. ಆದರೆ ವಸುಧೇಂದ್ರ ಮತ್ತು ವಿಕ್ರಮರ ಹಲವು ಕತೆಗಳು ತಮ್ಮ ನೆಲದ ಸಂಬಂಧಗಳನ್ನು ಕಾಪಿಟ್ಟುಕೊಳ್ಳುವ ಕ್ರಿಯೆ ಬಹುಕಾಲ ನಿಲ್ಲುತ್ತದೆ. ಕುಂಚನೂರರ ‘ಗ್ರೀನ್ ಟೀ’ ಕತೆಯೂ ಕೂಡ ಈಬಗೆಯದೆ. ಇವರೆಲ್ಲ ತಮ್ಮ ಕತೆಗಳಲ್ಲಿ ಕೇವಲ ಕಾರ್ಪೊರೇಟ್ ಬದುಕಿನ ಲಯಗಳನ್ನು ಮಾತ್ರ ಬಿತ್ತರಿಸಿದ್ದರೆ ಅಷ್ಟೇನೂ ಮುಖ್ಯವಾಗುತ್ತಿರಲಿಲ್ಲ. ಆದರೆ ಅವರ ಕತೆಯ ಕೇಂದ್ರಗಳು ಪರದೇಶಗಳಲ್ಲಿ ಇದ್ದರೂ ಅವು ಸ್ವಂತೀಕರಣಕ್ಕೆ ಹಾತೊರೆಯುತ್ತವೆ. ಹತ್ವಾರ ಗೆಲ್ಲುವುದೇ ಇಲ್ಲಿ. ಅವರ ಹಲವು ಕತೆಗಳು ವಿಚಿತ್ರ ಬಗೆಯ ಸಂಕರವನ್ನು ಸಾಧಿಸುತ್ತವೆ. ಕತೆಯ ತಂತ್ರದ ಸಂಕರವೂ ಇದೆ ಜಾಡನ್ನು ಅನುಸರಿಸುತ್ತದೆ. ಘಟನೆಗಳನ್ನು ಜೋಡಿಸುವಾಗ ಹತ್ವಾರರ ಭಾಷಿಕ ನುಡಿಗಟ್ಟುಗಳು ತಾನಾಗಿಯೇ ಬದಲಾಗುತ್ತವೆ. ಈ ವಿಚಾರದಲ್ಲಿ ಅವರ ‘ಕನಕಾಭಿಷೇಕ’ ಮುಖ್ಯ ಕತೆ. ಇದರ ಕಲೆಗಾರಿಕೆ ಇನ್ನಿತರ ಕತಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಹಾಗಾಗಿಯೇ ಈ ಕತೆ ಕನ್ನಡದ ಈಚಿನ ಕಥನದಲ್ಲಿ ಬಹುಕಾಲ ಉಳಿಯಬಲ್ಲುದು. ನಾವು ಯಾವುದನ್ನು ಆಧುನಿಕ ಬದುಕು ಎಂದು ಕರೆಯಬಹುದಾಗಿತ್ತೊ ಅದನ್ನು ಮೀರಿದ ಬದುಕಿನ ಲಯಗಳು ಇಲ್ಲಿ ಗೊಚರಿಸಿವೆ. ತಲೆಮಾರುಗಳ ಮಾನಸಿಕ ಬಿಕ್ಕಟ್ಟು ಹಾಗು ನಮ್ಮ ನುಡಿಗಟ್ಟಾದ ಅನೈತಿಕ ಸಂಬಂಧಗಳು ಭಿನ್ನ ಬಗೆಯಲ್ಲಿ ಕಂಡಿವೆ. ಕತೆಯ ಸುದೇವನು ಇಪ್ಸಿತಾಳೊಂದಿಗೆ ಇಟ್ಟುಕೊಂಡಿರುವ ಸಂಬಂಧ ಆ ನೆಲದಲ್ಲಿ ಸಾಮಾನ್ಯ. ಇಷ್ಟೇ ಆಗಿದ್ದರೆ ಕತೆ ಮುಖ್ಯವಾಗುತ್ತಿರಲಿಲ್ಲ. ಆದರೆ, ಅದರ ಬೇರುಗಳು ಕನ್ನಡ ನೆಲಕ್ಕೇ ಚಾಚಿವೆ. ದೇವನ ಮನಸ್ಸು ಕಾಮ ದಲ್ಲಿ ಲೀನವಾದರೂ ನೆಲದ ನಂಟನ್ನು ಬಿಡಲಾರದು. ಮನುಷ್ಯ ವಲಸೆ ಹೋಗಿರಬಹುದು ಆದರೆ ಮನಸ್ಸಲ್ಲ ಎಂಬುದು ಅವನ ಮೂಲಕ ತಿಳಿಯಬಹುದು. ಮೊದಲ ತಲೆಮಾರಿನ ಅಜ್ಜಯ್ಯ ವೈದಿಕ ನಂಬಿಕೆಗಳಲ್ಲಿ ಮುಳುಗಿದ್ದರು,ಸೂಳೆಯರ ಸಹವಾಸವನ್ನು ಬೆಳೆಸಿದ್ದವರು. ಈತನ ಕನಕಾಭಿಷೇಕಕ್ಕೆ ಮೊಮ್ಮಕ್ಕಳ ಅಗತ್ಯವಿದೆ. ದೇವನಿಗೆ ಮದುವೆ ಆಗಿಲ್ಲವಾದರೂ, ಇಪ್ಸತಾಳ ಗರ್ಭಕ್ಕೆ ಪಿಂಡದಾನ ಮಾಡಿದ್ದಾನೆ. ಆದರೆ ಅವು ಅವರಿಗೆ ಬೇಕಿಲ್ಲ. ಕನ್ನಡ ನೆಲದಲ್ಲಿ ತನ್ನ ಅಣ್ಣನಿಗೆ ಮಕ್ಕಳ ಭಾಗ್ಯವಿಲ್ಲ. ಸುದೇವನ ಈ ಮಾನಸಿಕ ಬಿಕ್ಕಟ್ಟು ಬಹಳ ಬೇಗ ಶಮನವಾಗುವುದಿಲ್ಲ. ಭಾರತೀಯ ನೆಲದಲ್ಲಿ ನೈತಿಕ ಮತ್ತು ಅನೈತಿಕ ಸಂಬಂಧಗಳ ಘರ್ಷಣೆಗಳು ಬದುಕನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲವು. ಆದರೆ ಅಮೆರಿಕಾದಲ್ಲಿ ಇದು ಪ್ರಶ್ನೆಯೇ ಅಲ್ಲ. ಸುದೇವ ಮತ್ತು ಇಪ್ಸಿತಾಳ ಸಂಬಂಧ ತಮ್ಮ ಇಚ್ಚೆಯಿಂದಲೇ ಸಾಗಿದರೂ ಅವಳ ಗರ್ಭದಲ್ಲಿರುವ ಪಿಂಡಗಳು ಅಜ್ಜಯ್ಯನ ವಂಶವನ್ನು ಮುಂದುವರೆಸಲಾರವು ಎಂದು ಸುದೇವನಿಗೆ ಯಾಕಾಗಿ ಅನಿಸಿದೆ? ಅವುಗಳನ್ನು ಭೂಮಿಗೆ ಬರುವುದಕ್ಕೆ ಮೊದಲೇ ಇಲ್ಲವಾಗಿಸುವುದು ಕತೆಯ ಮುಖ್ಯವಾದ ತಿರುವು.ಸುದೇವನಿಗೆ ಕಾಮ ಸಹಜವಾದರೂ, ವೈದಿಕ ಬೇರುಗಳಿಂದ ಬಿಡುಗಡೆ ಪಡೆಯಲು ಕಷ್ಟ. ಹಾಗಾಗಿಯೇ ಇಪ್ಸತಾಳನ್ನು ಮದುವೆ ಆಗೆಂದು ಕೇಳಲು ಸಾಧ್ಯವಾಗಲ್ಲ. ವಾಸ್ತವವಾಗಿ ಹೊರದೇಶಗಳಲ್ಲಿ ತಮ್ಮನ್ನು ತಾವು ಹುಡುಕಿಕೊಳ್ಳುವ ಇಲ್ಲಿನ ಹಲವು ವ್ಯಕ್ತಿಗಳು, ನೆಲದ ನೈತಿಕ ಎನ್ನಬಹುದಾದ ನಂಬಿಕೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತವೆ. ಕಾಮವು ಇವರ ಬದುಕಿನ ನಂಟನ್ನು ಬೆಸಯಬಲ್ಲದು ಮತ್ತು ಬಿಕ್ಕಟ್ಟುಗಳನ್ನು ಸೃಷ್ಟಿಸಬಲ್ಲದು.ಕಾಮವು ಇವರ ಮನೋಲೋಕವನ್ನು ದುರ್ಬಲಗೊಳಿಸಿದೆ ಎನ್ನಲಾಗದು. ಈ ವಿಚಾರದಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಒಂದು ಬಗೆಯಲ್ಲಿ ‘ಕನಕಾಭಿಷೇಕ’ ಕತೆಯ ಸುದೇವ ಮತ್ತು ‘ಅನಾಮಿಕ’ ಕತೆಯ ಸಾಕ್ಷಿ( ಶ್ರೀಲಕ್ಮೀ) ಕಾಮದ ಮೂಲಕ ಬದುಕಿನೊಂದಿಗೆ ನಡೆಸುವ ಹೋರಾಟ ಏಕ ರೀತಿಯದೆಂದು ಹೇಳಬಹುದು. ವಿಕ್ರಮ್ ಇಂಥ ಕಡೆ ಕತೆಯ ಸಾಗುವಿಕೆಯನ್ನು ಅಚ್ಚುಕಟ್ಟಾಗಿ ತರಬಲ್ಲರು. ಕತೆಗಳು ಕರ್ನಾಟಕದಲ್ಲಿ ನಡೆಯುವಾಗ ಅದರ ಭಾಷಿಕ ಲಯಗಳು ಆ ಜನಾಂಗದ ನಂಬಿಕೆಗಳಿಗೆ ಅನುಗುಣವಾಗಿ ಬರುತ್ತವೆ. ಪಾತ್ರಗಳು ಜಿಗಿತವನ್ನು ಕಂಡಾಗ ಭಾಷೆಯೂ ಜಿಗಿತವನ್ನು ಕಾಣುತ್ತದೆ. ಇದು ವಸುಧೇಂದ್ರರ ಕತೆಗಳಲ್ಲೂ ಕಾಣಬಹುದು.ಒಂದೇ ಕತೆಯಲ್ಲಿ ಹಲವು ಕಥನಗಳ ಜಿಗತವನ್ನು ಕಂಡಾಗ ಬದುಕು ಕೂಡ ಪಲ್ಲಟಗಳಿಗೆ ಈಡಾಗುವುದು ಸಹಜ.ಇಲ್ಲಿನ ಘಟನೆಗಳು ಸೀಮೋಲ್ಲಂಘನೆ ಮಾಡಿದಂತೆ ತಂತ್ರವೂ ಮಾಡುತ್ತದೆ. ಮೂಲದಲ್ಲಿ ನೈತಿಕರಂತೆ ವತರ್ಿಸುವ ಇಲ್ಲಿನ ಹಲವರು ಅನ್ಯ ನೆಲದಲ್ಲಿ ತಮ್ಮ ನಿಜದ ಬದುಕನ್ನು ಕಾಣುತ್ತಾರೆ. ಲಕ್ಮೀ ತನ್ನ ಗರ್ಭಕ್ಕೇ ಸರಿಯಾದ ನ್ಯಾಯ ದೊರಕದಿದ್ದಾಗ ಸಾಕ್ಷಿಯಾಗಿ ಬದಲಾಗಿ ಬೇರೊಬ್ಬರಿಂದ ವೀರ್ಯವನ್ನು ಪಡೆಯಬಲ್ಲಳು. ಹಾಗೆ ನೋಡಿದರೆ ಇವರೆಲ್ಲಾ ವೈದಿಕ ಮೂಲದಿಂದ ಬಂದವರೆ. ಆದರೆ ಸುದೇವನಿಗೆ ಸ್ವಂತೀಕರಣ ಕಾಡಿದಂತೆ ಸಾಕ್ಷಿಗೂ ಕಾಡುತ್ತದೆ.ವಿಕ್ರಮರ ಹಲವು ಕತೆಗಳು ಮನುಷ್ಯ ತನ್ನನ್ನು ತಾನು ತೆರೆದು ಕೂಳ್ಳುವುದನ್ನು ಅನಾವರಣ ಮಾಡಬಲ್ಲವು. ಅನುಮಾನ, ತಲ್ಲಣ, ಖಿನ್ನತೆ, ಒಂಟಿತನಗಳು ಇಲ್ಲಿನ ಹಲವು ಕತೆಗಳನ್ನು ಆವರಿಸಿದ್ದರೂ, ಬದುಕಿನ ಮೇಲಿನ ಪ್ರೀತಿಯನ್ನು ಉಳಿಸಿಕೊಳ್ಳುವಾಗ ಹಲ ಬಗೆಯ ಗೊಂದಲಗಳನ್ನು ಇಲ್ಲಿನ ಅನೇಕ ಪಾತ್ರಗಳು ಎದುರುಗೊಳ್ಳುತ್ತವೆ.
ವಿಕ್ರಮ್ ಈ ನೆಲಕ್ಕೇ ಅಂಟಿಕೊಂಡಿರುವ ಧರ್ಮ ಸಂಘರ್ಷಗಳ ಸೂಕ್ಷ್ಮವನ್ನು ಮತ್ತು ನವೀನ ಬಂಡವಾಳಶಾಹಿಯ ರೂಕ್ಷತೆಗಳನ್ನು ತಮಗೆ ಒಗ್ಗಿದ ಕಥನಗಾರಿಕೆಯಲ್ಲಿ ತರಬಲ್ಲರು.’ವಿಮುಖ’ ದಂತಹ ಕತೆ ನವ ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಗಳನ್ನು ಸಮ್ಮಿಳಿತಗೊಂಡಿರುವ ಕತೆ.ಈ ನೆಲದಲ್ಲಿ ಭಕ್ತಿಯನ್ನು, ದೇವರನ್ನು ಮುಗ್ಧೆತೆಯ ಆವರಣದಲ್ಲಿ ಜನಪದಲೋಕ ಕಂಡಿದೆ. ಇದೇ ಮುಗ್ಧತೆಯನ್ನು ಬಂಡವಾಳವನ್ನಾಗಿಮಾಡಿಕೋಳ್ಳುವ ವಲಯವೂ ಎಂದಿಗಿಂತ ಇಂದು ಭಿನ್ನ ರೂಪಗಳಲ್ಲಿ ಗೋಚರಿಸುತ್ತಿದೆ. ಅಯ್ಯಪ್ಪ ದೇವಸ್ಥಾನವನ್ನು ಕಟ್ಟುವಲ್ಲಿ ಮುಂದಾದ ರಮೇಶ ಕೊಂಚ ಆಧುನಿಕ ಮನಸ್ಸಿನವನು. ಇದರಿಂದ ಪರಿಸರ ನಾಶವಾಗುತ್ತದೆ ಎಂದು ಹೇಳುವ ಹಿರಿ ಪುರೋಹಿತ ಜಗನ್ನಾಥ ಭಟ್ಟ ಕತೆಯ ಮೊದಲಲ್ಲಿ ಹಿರಿತನ ತೋರಿಸಿದರೂ ಅಂತಿಮವಾಗಿ ಭ್ರಷ್ಟನಾಗಿ ಕಾಣುತ್ತಾನೆ. ಅಯ್ಯಪ್ಪ ದೇವಸ್ಥಾನ ವನ್ನು ಕಟ್ಟುವುದರಿಂದ ಪರಿಸರ ನಾಶವಾಗುತ್ತದೆ ಎಂದು ಹೇಳುವ ಭಟ್ಟ ಫೇಸ್ಬುಕ್ ಮತ್ತು ಅಂತರಜಾಲಗಳಲ್ಲಿ ಇದನ್ನು ಪ್ರಚಾರ ಮಾಡುತ್ತಾನೆ. ರಮೇಶ ಕೇವಲ ದುಡ್ಡು ಮಾಡುವುದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾನೆಂದು ತನ್ನ ವಲಯದಲ್ಲಿ ಸುದ್ದಿ ಹಬ್ಬಿಸುತ್ತಾನೆ. ಇದಕ್ಕೆ ವಿರುದ್ದವಾಗಿ ರಮೇಶ ಕಮೆಂಟುಗಳನ್ನು ಬರೆಯುತ್ತಾನೆ. ಆದರೆ ಭಟ್ಟರ ಕುತಂತ್ರಗಳ ಮುಂದೆ ರಮೇಶ ಖಿನ್ನನಾಗುವ ಮಟ್ಟಕ್ಕೇ ತಲುಪುತ್ತಾನೆ.ಕತೆಯ ಮುಗಿತಾಯವನ್ನು ಅಚ್ಚುಕಟ್ಟಾಗಿ ಹೆಣಿದಿದ್ದಾರೆ ಹತ್ವಾರ್. ಆಧುನಿಕ ನಂತೆ ಕಾಣುವ ರಮೇಶನ ಗಣಕಯಂತ್ರದ ಅವತಾರಗಳು ಭಟ್ಟರ ಕುತಂತ್ರದ ಮತ್ತು ನವ ಬಂಡವಾಳಶಾಹಿಯ ಧೋರಣೆಗಳಿಂದ ಸಂಪೂರ್ಣವಾಗಿ ಸೋಲುತ್ತವೆ. ಅಯ್ಯಪ್ಪ ದೇವಾಲಯವನ್ನು ಕಟ್ಟುವಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದ ಭಟ್ಟರು ಕೊನೆಗೆ ಅದರ ನಿಮರ್ಾಣಕ್ಕೆ ಹಾತೊರೆಯುವುದು, ವ್ಯವಹಾರದಲ್ಲಿ ಲೀನವಾಗುವುದು ಇಂದಿನ ವ್ಯಂಗ್ಯ. ವಿಕ್ರಮ್, ಕತೆಯ ಕೇಂದ್ರವನ್ನು ನಿಮರ್ಾಣಮಾಡುವಲ್ಲಿ ತಮಗೆ ತಿಳಿದಿರುವ ವಾಸ್ತವಗಳನ್ನು ಮುಚ್ಚಿಡುವುದಿಲ್ಲ. ನಿಜವಾಗಿಯೂ ಪ್ರಕೃತಿಯನ್ನು ಲಾಭಕ್ಕೇ ಬಳಸುವ, ಆ ಮೂಲಕ ದೇವಾಲಯಗಳ ರಾಜಕಾರಣವನ್ನು ‘ವಿಮುಖ’ ಕತೆಯ ತಂತ್ರ ಗೊಂದಲಗಳಿಂದ ಕೂಡಿಲ್ಲ.ಕಂಪ್ಯೂಟರ್ ಕಾಲದಲ್ಲೂ ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ಪುರೋಹಿತಶಾಹಿ ಸಂಗತಿಗಳನ್ನು ಕತೆ ಹೊಸ ನಿರೂಪಣ ವಿಧಾನಕ್ಕೆ ತಾನಾಗಿಯೇ ಒಗ್ಗಿಕೊಳ್ಳುತ್ತದೆ. ಇಲ್ಲಿನ ಸಂವಾದ ತಂತ್ರ, ಸಾಮಾಜಿಕ ಜಾಲತಾಣಗಳು, ಅದಕ್ಕೆ ತಕ್ಕುದಾದ ಭಾಷಿಕ ನುಡಿಗಟ್ಟುಗಳು ಕತೆಯ ವಸ್ತುವಿಗೆ ಯಾವ ತೊಡಕನ್ನು ನೀಡುವುದಿಲ್ಲ.
ವಿಕ್ರಮ ಹತ್ವಾರ್
ವಿಕ್ರಮ ಕತೆಗಳಲ್ಲಿ ವೃತ್ತಿಗಳಿಂದ ನೆಲದ ನಂಟನ್ನು ಕಳೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಹಲವು ಪಾತ್ರಗಳು ಎದುರಿಸುವ ಮಾನಸಿಕ ಸಂಕಟಗಳನ್ನು ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ಒಂದು ಸಂಸ್ಕೃತಿಯ ವಿಚಾರ ಲಹರಿಗಳಿಗೆ, ಮತ್ತು ವೃತ್ತಿಯ ಪಲ್ಲಟಗಳಿಗೆ ಒಗ್ಗಿಕೊಳ್ಳುವಾಗ ತಮ್ಮ ಭಾಷಿಕ ನುಡಿಗಟ್ಟುಗಳಿಗೆ ಆವರಿಸುವ ವಿಸ್ಮ್ರತಿಯನ್ನು ಒಪ್ಪಲು ಸಿದ್ದರಿರುವುದಿಲ್ಲ. ಇದು ಡಯಾಸ್ಪೊರಾದ ಪರಿಕಲ್ಲನೆಯಲ್ಲಿ ಚಚರ್ೆಮಾಡಿದರೂ ಹಲವು ಒಳನೋಟಗಳು ದಕ್ಕಬಲ್ಲವು. ವಿಕ್ರಮರ ಕೆಲವು ಕತೆಗಳು ವಲಸೆ ಹೋಗುವ ತಮ್ಮ ಹೆಸರಿನಲ್ಲಿಯೇ ಗಟ್ಟಿಯಾದ ಸಂಸ್ಕೃತಿ ಅಡಗಿದೆ ಎಂದು ಭಾವಿಸುತ್ತವೆ. ಈ ಪ್ರಕ್ರಿಯೇ ವಸುಧೇಂದ್ರರ ಹಲವು ಕತೆಗಳಲ್ಲಿ, ವಸ್ತಾರೆಯವರ ಕೊಂಚ ಮಟ್ಟಿಗೆ ಒಳ್ಳೆಯ ಕತೆಯಾದ ‘ಹಕೂನ ಮಟಾಟ’ದಲ್ಲಿ, ಕುಂಚನೂರರ ‘ ಗ್ರೀನ್ ಟೀ’ ಕತೆಯಲ್ಲಿ ಕಾಣಬಹುದು. ವಿಕ್ರಮರ ‘ಪಿತೃಪಕ್ಷ’ ಕಾಯಕವೇ ಕೈಲಾಸ’ ಮುಂತಾದ ಕತೆಗಳು ಈ ಪ್ರಕ್ರಿಯೆಯನ್ನು ಗಂಭೀರ ವಾಗಿ ಸ್ವೀಕರಿಸಿವೆ. ಒಂದು ಕಾಲಕ್ಕೇ ವೃತ್ತಿ ನಿಮಿತ್ತ, ಓದುವ ಸಲುವಾಗಿ ಕೇವಲ ಬ್ರಾಹ್ಮಣರು ಮಾತ್ರ ವಿದೇಶಗಳಿಗೆ ತೆರಳುತ್ತಿದ್ದರು. ಈಗ ಕೆಳ ಸಮುದಾಯಗಳು ಡಯಾಸ್ಪೊರಾಗಳಾಗುತ್ತವೆ. ಸಹಜವಾಗಿ ಪ್ರಾರಂಭದಲ್ಲಿ ಹಲವು ಸವಾಲುಗಳನ್ನು ಎದುರಾಗುತ್ತವೆ. ‘ಸೀಮೋಲ್ಲಂಘನ’ ಕತೆ ಇದರ ಒಳ ಬದುಕನ್ನು ಅನಾವರಣ ಮಾಡುತ್ತದೆ. ಶೂದ್ರ ಸಮುದಾಯದ ಚಂದ್ರ ಅಮೇರಿಕ ಸಂವಹನದ ಬದುಕಿನಲ್ಲಿ ಚಾಂದ್ ಆಗುವ ಬಗೆ ಅವನ ಬದುಕನ್ನು ನಿರ್ಧರಿಸಿದೆ. ವೀಸಾ, ಸಂವಹನದ ತೊಡಕು, ವಲಸೆಯ ಶೈಲಿಗೆ ಒಗ್ಗಿಕೊಳ್ಳುವುದು: ಬ್ರಾಹ್ಮಣರ ಮನೆಗಳಲ್ಲಿ ಕೆಲಸ ಮಾಡುವ ತಾಯಿಯನ್ನು ಒಮ್ಮೆ ಅಮೇರಿಕೆದಲ್ಲಿ ಅಡ್ಡಾಡಿಸಬೇಕೆನ್ನುವ ಹಂಬಲ ಎಲ್ಲವೂ ಈ ನೆಲದ ಆಲೋಚನೆಗಳಿಂದಲೇ ಉದ್ಭವಗೊಂಡಿವೆ. ಈ ಕ್ರಮಗಳಿಂದಲೇ ಕತೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ‘ಕಾಯಕವೇ ಕೈಲಾಸ’ಕತೆಯ ಸಂಗಮೇಶ ಹಿರೇಮಠ ಸ್ಯಾಂಗಿ ಯಾಗಿ ಅಮೇರಿಕದ ಸಾಫ್ಟವೇರ್ ಲೋಕದಲ್ಲಿ ಅನನ್ಯ ಸಾಧನೆಯನ್ನು ಸಾಧಿಸುವ ಮಟ್ಟಕ್ಕೆ ಬೆಳದರೂ ಆ ನೆಲದ ಆತಂಕಗಳಿಂದ ತಪ್ಪಿಸಿಕೊಳ್ಳಲಾರ. ‘ಪ್ರಾಜೆಕ್ಟ್ ಬ್ರಿಜ್’ ಕತೆಯಲ್ಲಿನ ಪಾತ್ರಗಳು ಪದೇ ಪದೇ ತಮ್ಮ ಈಮೇಲ್ ಸಿಗ್ನೇಚರ್ ಗಳನ್ನು ಬದಲಿಸುವ ಕ್ರಮ ಅವರ ಬದುಕನ್ನು ಅನಾವರಣ ಮಾಡಬಲ್ಲದು. ಈ ಸಿಗ್ನೇಚರ್ ಗಳು ಅವರ ಮಾನಸಿಕ ಸ್ಥಿತಿಯನ್ನು ಪಲ್ಲಟ ಗೊಳಿಸಬಲ್ಲವು. ಇವರ ಬಹುಪಾಲು ಜೀವನ ಕಂಪ್ಯೂಟರ್ ಎಂಬ ಓಡುವ ಯಂತ್ರ ದಂತೆ ಬದಲಾಗುತ್ತಲೇ ಇರುತ್ತದೆ.ವಿಕ್ರಮ ಇಂತ ಕಡೆ ಸಾಕಷ್ಟು ಮಾಗುವ ಹಂತದಲ್ಲಿ ಇದ್ದಾರೆ. ‘0 ಮತ್ತು ಓಂದು’ ಕತೆಯಲ್ಲಿ ಕೇವಲ ಯಂತ್ರದ ಚಲನೆಯನ್ನು ಹೇಳಿದ್ದರೆ ಕತೆ ಮುಖ್ಯವಾಗುತ್ತಿರಲಿಲ್ಲ. ಆದರೆ ಯಂತ್ರದ ವಿವರಗಳು ಬದುಕನ್ನು ಆವರಿಸಿಕೊಂಡು ಬಿಡುತ್ತವೆ. ಯಂತ್ರದ ಚಲನೆ ಮತ್ತು ಮನುಷ್ಯನ ಚಲನೆ ಏಕೀಭವಿಸುವ ಹಂತಕ್ಕೇ ಬಂದು ಮುಟ್ಟುತ್ತದೆ. ಟೆಕ್ಕೀ ಲೋಕವನ್ನು ಕಾಮ ಆವರಿಸುವಷ್ಟು ಜಾತಿ ಧರ್ಮಗಳು ಅಪ್ರಜ್ಞಾಪೂರ್ವಕವಾಗಿವೇ ನುಸುಳುವುದನ್ನು ‘ಏನಾದನು ಚಂದಿರಾ’ಕತೆ ಜುನೇದ ಮತ್ತು ಶ್ರೀಶ ರ ಮೂಲಕ ಸೂಕ್ಷ್ಮವಾಗಿ ತೆರದಿಟ್ಟಿದೆ. ಕಂಪನಿಯಲ್ಲಿಯೇ ನಮಾಜ್ ಮಾಡುವ ಜುನೇದನನ್ನು ಶ್ರೀಶನ ಪಕ್ಕ ಹಿಂದೂ ಮನಸ್ಸು ಒಪ್ಪದೇ ಹೋಗುತ್ತದೆ ಇಂಥ ಕಡೆ ಹತ್ವಾರ ಕಂಪನಿ ಲೋಕ ಹಾಗು ಮನುಷ್ಯನ ಆಲಯದ ಜಗತ್ತುಗಳನ್ನು ನಮನಶೀಲತೆಯಿಂದ ಸಾಧಿಸಬಲ್ಲರು.
ಕತೆಯನ್ನು ಅಚ್ಚುಕಟ್ಟಾಗಿ ಕೂರಿಸುವ ಹತ್ವಾರ ಅದಕ್ಕೆ ಅಗತ್ಯವೆನಿಸುವ ಪರಿಕರಗಳನ್ನು ಸಾಧಿಸುವ ಹಂತದಲ್ಲಿ ಇದ್ದಾರೆ.ಭಾಷೆ, ನಿರೂಪಣಾ ತಂತ್ರ, ಮುಂತಾದ ವಿಚಾರಗಳಲ್ಲಿ ಅವರ ಕತೆಗಳು ಮುಂದೆ ಹೊಸದನ್ನು ಹುಡುಕುವ ಭರವಸೆ ಇದೆ. ಉಳಿದ ಕತೆಗಳಂತೆ ‘ಪೇಣಿ’ ‘ಅಲಾರಂ’ ‘ಬೇಟೆ’ ಮುಂತಾದ ಕತೆಗಳು ಅವಸರದಲ್ಲಿ ಮುಗಿದು ಮತ್ತಷ್ಟು ಪಕ್ವತೆಯನ್ನು ಬೇಡುತ್ತವೆ. ಆಧುನಿಕೋತ್ತರ ಸಂದರ್ಭದಲ್ಲಿ ಹತ್ವಾರ,ವಸುದೇಂದ್ರ ಮುಂತಾದವರ ಕೆಲವು ಕತೆಗಳು ಉಳಿದುಕೊಳ್ಳಲು ಕಾರಣ ಅವರು ಯಾವುದೇ ನೆಲದಲ್ಲಿ ನಿಂತು ಬರೆದರೂ ನೆಲದ ಸಂಕಟಗಳ ಜತೆ ಉಸಿರಾಡಬಲ್ಲರು. ಆದರೆ ನೆಲದ ನಂಟನ್ನು ಬಳಸಿಕೊಂಡು ಮುಂದೆ ಯಾವ ಬಗೆಯ ಬರೆಹಗಳನ್ನು ಸೃಷ್ಟಿಸ ಬಲ್ಲರು ಎಂಬ ಪ್ರಶ್ನೆ ಇದ್ದೇ ಇದೆ.
ಕೃತಿ : ಜೀರೋ ಮತ್ತು ಒಂದು
ಪ್ರಕಟಣೆ : ಸಾಗರ ಪ್ರಕಾಶನ ,2012
ಪುಟಗಳು: 176
ಬೆಲೆ : 90
ಇತ್ತೀಚಿನ ಬರಹಗಾರರಲ್ಲಿ ಸುರೇಶ್ ರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ, ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ.
Like this:
LikeLoading...
3 comments to “ಸ್ವಂತೀಕರಣಕ್ಕೆ ಹಾತೊರೆಯುವ ಕತೆಗಳು”
ಸಮಚಿತ್ತದ ಮೌಲಿಕ ವಿಮರ್ಶೆ. ಧನ್ಯವಾದಗಳು ಸುರೇಶ್. ವಿಕ್ರಮ್ ಅವರ ಕಥಾ ಪ್ರಪಂಚಕ್ಕೆ ಅಭಿನಂದನೆಗಳು.
ಸಮಚಿತ್ತದ ಮೌಲಿಕ ವಿಮರ್ಶೆ. ಧನ್ಯವಾದಗಳು ಸುರೇಶ್. ವಿಕ್ರಮ್ ಅವರ ಕಥಾ ಪ್ರಪಂಚಕ್ಕೆ ಅಭಿನಂದನೆಗಳು.
ಒಳ್ಳೆಯ ವಿಶ್ಲೇಷಣೆ…!
ವಿಕ್ರಮ್ ಹತ್ವಾರ್ ರ ಕಥಾಲೋಕವೂ ಅದ್ಬುತ…!
ಹೊಸಾ ತಲೆಮಾರಿನ ಕತೆಗೆ ಹೊಸಾ ತಲೆಮಾರಿನ ವಿಮರ್ಶೆ ಅದ್ಬುತ.ವಿನೂತನ ಪ್ರಕ್ರಿಯೆ,ಈ ತಲೆಮಾರಿನ ವರ್ತಮಾನ ಈ ಲೇಖನದಲ್ಲಿ ರಾಚುವಂತದ್ದು.