ಸಿಂಗಪೂರ್ ಡೈರೀಸ್ : ಎರಡು ‘ಅತಿ’ ಗಳ ನಡುವೆ

ಕಳೆದ ಮೂರು ತಿಂಗಳಿಂದ ನಾನು ಕಲಿಯುತ್ತಿರುವ ಶಾಲೆಯಲ್ಲಿ ಚೈನೀಸ್ ಒಪೇರಾ ತರಬೇತಿ ನಡೆಯುತ್ತಿತ್ತು. ಮೊನ್ನೆಯಷ್ಟೇ ಅದರ ಪ್ರದರ್ಶನ ಮುಗಿದು ಸೆಟ್, ಕಾಸ್ಟೂಮ್ಗಳನ್ನೆಲ್ಲ ಒಂದೆಡೆಗೆ ಸೇರಿಸಿ, ರೂಮಿನ ದಾರಿ ಹಿಡಿಯುವಷ್ಟರಲ್ಲಿ ರಾತ್ರಿ ಒಂದು ಗಂಟೆಯಾಗಿತ್ತು.ಸಿಂಗಪುರದಲ್ಲಿ ರಾತ್ರಿಗೂ ಹಗಲಿಗೂ ತೀರ ಹೆಚ್ಚು ಅನ್ನುವಷ್ಟು ಏನು ವ್ಯತ್ಯಾಸಗಳಿರುವುದಿಲ್ಲ.ರಾತ್ರಿಯವೇಳೆ ಸೂರ್ಯನಬೆಳಕಿಗೆ ಬದಲು ಅಷ್ಟೇ ಪ್ರಖರ ಅನ್ನಿಸಿವಷ್ಟು ತರವಾರಿಯಾಗಿ ಬೆಳಗುವ ವಿದ್ಯುತ್ ದೀಪಗಳ ಬೆಳಕಿರುತ್ತದೆ. ಹಲವು ಸಾರಿ ನನಗೆ ನಾನೇ ಅಂದುಕೊಂಡಿದ್ದೇನೆ ಇಷ್ಟು ಅತೀ ಬೆಳಕಿನಿಂದಾಗಿ ಹುಣ್ಣಿಮೆ ರಾತ್ರಿಗಳಲ್ಲಿ ಸಿಗಬಹುದಾದ ಚಂದಿರನ ಹೊನಲ ಸುಖದಿಂದ ಈ ದೇಶ ವಂಚಿತವಾಗಿದೆಯಲ್ಲ ಎಂದು. ನವಂಬರ್ ೧೪ ರಂದು ನಡೆದ ಬಾಹ್ಯಕಾಶದ ಬೆರಗಿನ ವಿದ್ಯಮಾನ “ಸೂಪರ್ ಮೂನ್” ಅದರ ಪೂರ್ಣ ಚೆಲುವುವಿನೊಂದಿಗೆ ಕಾಣದಿದ್ದಕ್ಕೆ ಈ ಅತಿಯಾದ ರಾತ್ರಿ ದೀಪಗಳೂ ಕೂಡ ಕಾರಣ ಎಂಬ ವರದಿಯೊಂದಿದೆ.

ಅಂದು ರಾತ್ರಿ ತಮಿಳು ನಾಡಿನ ಗೆಳೆಯನೊಬ್ಬನೊಂದಿಗೆ ನಡೆದು ಹೋಗುತಿದ್ದೆ. ದಿನದ ಸದ್ದು ಮಾತ್ರ ಕೊಂಚ ಕಮ್ಮಿ ಆಗಿತ್ತು. ಎಲ್ಲ ಅಂಗಡಿಗಳು ಮುಚ್ಚುವ ಹಂತದಲ್ಲಿದ್ದವು.ನಮಗೆ ಸ್ಪಷ್ಟವಾಗಿ ಕಾಣುವಷ್ಟು ದೂರದಲ್ಲಿ ಕೊಂಚ ಹೆಚ್ಚೇ ವಯಸ್ಸಾದ ಹೆಂಗಸೊಂದು ತಳ್ಳುವ ಗಾಡಿಯಲ್ಲಿ ಕಸವನ್ನು, ಒಂದಷ್ಟು ರಟ್ಟಿನ ಡಬ್ಬಗಳನ್ನು ಹೇರಳವಾಗಿ ಪೇರಿಸಿಕೊಂಡು ನಿಧಾನಕ್ಕೆತಳ್ಳಿಕೊಂಡು ನಡೆದು ಬರುತ್ತಿತ್ತು. ಹೊರ ಜಗತ್ತಿಗೆ ಸದಾ ಸ್ವಚ್ಚವಾಗಿ ಕಾಣುವ ಈ ದೇಶದ ಕೊಳಕನ್ನು ದಿನ ನಿತ್ಯ ಗುಡಿಸುವವರು ಇಂತವರೆ.ಆ ಹೆಂಗಸು ಅದೆಷ್ಟು ಮುದಿಯಾಗಿತ್ತೆಂದರೆ  ಐದು ಅಡಿ ಎತ್ತರ ಇದ್ದಿರಬಹುದಾದ ಹೆಂಗಸಿನ ದೇಹ ಮುಪ್ಪಿನಿಂದಾಗಿ ಮೂರು ಮೂರುವರೆ ಅಡಿಯಷ್ಟು ಕುಬ್ಜತೆಗೆ ಕುಗ್ಗಿ ಹೋಗಿತ್ತು. ಇಡೀ ದಿನದ  ದಣಿವಿಗೆ ಆ ಮುದುಕಮ್ಮ ಹೈರಾಣಾಗಿ ಹೋಗಿತ್ತೆಂದರೆ. ಆ ದಣಿವೆಲ್ಲವು ಅವಳ ನಡೆಯಲಾರದೆ ನಡೆಯುತ್ತಿದ್ದ ಹೆಜ್ಜೆಗಳಲ್ಲಿ ಸ್ಪಷ್ಟವಾಗಿತ್ತು.ಅದೇ ಹೊತ್ತಿಗೆ ಪೇರಿಸಿದ್ದ ರಟ್ಟಿನ ಡಬ್ಬಗಳು ಉದುರಿಬಿದ್ದು,ಅಜ್ಜಮ್ಮನು ಉಸ್ಸೆಂದು ಕುಸಿದು ರಸ್ತೆ ಬದಿಗೆ ಕೂತಳು. ಇದೆಲ್ಲ ನಮ್ಮ ಎದುರಿಗೆ ತೀರ ನಿಧಾನದ ಚಿತ್ರದ ಹಾಗೆ ನಡೆಯುತ್ತಿತ್ತು ನಾವಿಬ್ಬರೂ ಒಬ್ಬರಿಗೊಬ್ಬರು ಏನೂ ಮಾತಾಡದಂತೆ ನೋಡುತ್ತಾ ನಿಂತಿದ್ದೆವು. ಆ ರಟ್ಟಿನ ಡಬ್ಬಗಳು ದಬದಬನೆ ಉದುರಿದ್ದೇ ಎಚ್ಚರಾದವರಂತೆ ಓಡಿಹೋಗಿ ಅವುಗಳನ್ನು ತುಂಬಿ ಅಷ್ಟು ದೂರ ಅದನ್ನು ತಳ್ಳಿಕೊಟ್ಟು ನಮ್ಮ ದಾರಿ ಹಿಡಿದೆವು. ಯಾರೂ ಏನೂ ಮಾತಾಡಲಿಲ್ಲ ನಾನು ಅವನೂ ಆ ಮುದುಕಿಯೂ… ನಡೆದದ್ದನ್ನು ನಡೆದ  ಹಾಗೆ ಹೇಳಿದ್ದಿರೂ ನನಗೇ ಇದು ಉತ್ಪ್ರೇಕ್ಷೆಯೋ ಕಾಲ್ಪನಿಕ ಚಿತ್ರವೋ ಅನ್ನಿಸುತ್ತಿದೆ. ನಾನು ಇಂಡಿಯದಲ್ಲಿದಾಗ ಸಿಂಗಾಪುರವೆಂಬ ಸಿರಿವಂತ ದೇಶದಲ್ಲಿ ಇಂತದ್ದೊಂದು ಚಿತ್ರವನ್ನು ಉಹಿಸಿಯೇ ಇರಲಿಲ್ಲ . ಈಗ ತಾನೆ ಸಿರಿವಂತ ದೇಶದ ಮತ್ತೊಂದು ಮಗ್ಗುಲು ಪರಿಚಿತವಾಗುತ್ತಿತ್ತು.

ಸಿಂಗಪುರದಲ್ಲಿ ಮುಪ್ಪಾದವರು ಕೆಲಸ ಮಾಡುವುದು ತೀರ ಸಾಮಾನ್ಯವಾದ ಸಂಗತಿ. ಹೋಟೆಲ್ಗಳಲ್ಲಿ ಟೇಬಲ್ ಕ್ಲೀನ್ ಮಾಡುವವರು,ಫುಡ್ ಕೋರ್ಟ್ಗಳಲ್ಲಿ  ಟಿಶ್ಯೂ ಪೇಪರ್ ಮಾರುವವರು,ಖಾಲಿ ಬೀರು ಬಾಟಲಿಗಳನ್ನು ಚಚ್ಚಿ ಗುಜರಿಗೆ ಹಾಕುವವರು,ಬೀದಿಯ ಬದಿಯ ಕಸದ ಬಿನ್ಗಳನ್ನು ತೆರವುಗೊಳಿಸುವವರು,ಟಾಯ್ಲೆಟ್ ಸ್ವಚ್ಛ ಗೊಳಿಸುವವರು , ಏ ಟಿ ಮ್  ಗಾರ್ಡ್ಗಳು ,ಎಲ್ಲ ಹೆಚ್ಚಿನ ಪಾಲು ಮುಪ್ಪಾದವರೇ.

ರೋಡ್ ಕ್ರಾಸ್ ಮಾಡಲು ಸಿಗ್ನಲ್ಗಳಲ್ಲಿ  ಸಿಗುವ ಮುವ್ವತ್ತು  ನಲವತ್ತು ಸೆಕೆಂಡ್ ಗಳಲ್ಲಿ ಅಗಲವಾದ  ಮಿಣುಗುವ ರಸ್ತೆಯನ್ನು ದಾಟಲಾರದೆ ಪಾಡು ಪಡುವ ವಯೋ ವೃದ್ಧರನ್ನೂ ನಾನಿಲ್ಲಿ ಕಂಡಿದ್ದೇನೆ. ಹೀಗೆ ಎಲ್ಲೆಲ್ಲು ಕಾಣಸಿಗುವ ಮುದಿ ಕೆಲಸಗಾರರ ಕುರಿತು ಸಿಂಗಪುರದ ಗೆಳೆಯನನ್ನು ಕೇಳಿದೆ “ಈ ರೀತಿಯ ಕೆಲಸ ಮಾಡುವವರಿಗೆ ತುಂಬಾ ಕಡಿಮೆ ಸಂಬಳವಿರುತ್ತದೆ. ಹಾಗಾಗಿ ಓದಿದ ಯುವಕರಾರು ಆ ಕೆಲಸಕ್ಕೆ ಬರುವುದಿಲ್ಲ. ಕೆಲವು ಏಜನ್ಸಿಗಳಿವೆ, ಅವು  ವಯಸ್ಸಾದ ಕೆಲಸಗಾರರನ್ನು ಸರಬರಾಜು ಮಾಡುತ್ತವೆ, ಅವರಲ್ಲಿ ಹೆಚ್ಚಿನವರು  ವಲಸಿಗರು ಮತ್ತು ಮನೆ ಮಕ್ಕಳನ್ನು ತೊರೆದು ಬೀದಿಗೆ ಬಿದ್ದವರು  ಅವರಿಗೆ ಕೆಲಸ ಮಾಡಲೇಬೇಕಾದ ತುರ್ತಿರುತ್ತದೆ”ಅಂದಿದ್ದ. ಮತ್ತೊಬ್ಬ ಗೆಳತಿ “ಇಲ್ಲಿ ನಿನಗೆ ಹೊರನೋಟಕ್ಕೆ ಕಾಣುವಷ್ಟು ಎಲ್ಲರಲ್ಲೂ ಸಿರಿವಂತಿಕೆ ಇಲ್ಲ. ತೀರ ಒಪ್ಪೊತ್ತಿನ  ಹೊಟ್ಟೆಪಾಡಿಗಾಗಿ ಪಾಡುವ ಕೆಳ,ಮಧ್ಯಮವರ್ಗದ ಜನ ಬಹಳವೇ ಇದ್ದಾರೆ ಎಲ್ಲ ದೇಶಗಳಿಗೂ ಇರುವಂತೆ ಸಿಂಗಾಪುರ ದೇಶಕ್ಕೂ ತನ್ನ ಎಲ್ಲ ಹುಳುಕುಗಳನ್ನು ಬಚ್ಚಿಟ್ಟುಕೊಂಡು ಜಗತ್ತಿನೆದುರು ತಾನೊಂದು ಸ್ವಚ್ಛ ,ಸಮೃದ್ಧ ,ಸಭ್ಯ,ಸ್ಥಿತಿವಂತ ದೇಶವೆಂದು ತೋರಿಸಿಕೊಳ್ಳುವ ಚಟವಿದೆ. ಮತ್ತೊಂದು  ಸಮಸ್ಯೆ ಭಾಷೆಯದು ಸದ್ಯಕ್ಕೆ ಇಂಗ್ಲೀಷ್ ಈ ದೇಶದ ಪ್ರಧಾನ ಆಡಳಿತ ಭಾಷೆಯಾಗಿ ಪ್ರಚಲಿತದಲ್ಲಿದೆಯಾದ್ದರಿಂದ ವಯಸ್ಸಾದವರಲ್ಲಿ  ಚೈನೀಸ್,ಮಲೈ,ತಮಿಳು ಭಾಷೆ ಬಲ್ಲವರೇ ಹೆಚ್ಚು ಇಂಗ್ಲಿಷ್ ಬರಲಾದ ತಪ್ಪಿಗೆ ತಮ್ಮದೇ ನೆಲದಲ್ಲಿ ಹೀಗೆ ಎರಡನೇ ದರ್ಜೆಯ ಪ್ರಜೆಗಳಾಗಿ, ಅನಾಥ ಜೀವಗಳಾಗಿ ಬದುಕುವ ಭಾರ” ಅಂದಿದ್ದಳು.

ಪ್ರತಿಯೊಂದು ನಾಗರಿಕ ಸಮಾಜವು ತನ್ನ ಬೆಳವಣಿಗೆಯ ಜೊತೆ ಜೊತೆಗೆ  ಪ್ರಜ್ಞಾಪೂರ್ವಕವಾಗಿಯೇ ಈ ರೀತಿಯ  ನಿರಾಶ್ರಿತರ ಸಮುಹವೊಂದನ್ನು ಸೃಷ್ಟಿಸಿಕೊಳ್ಳುತ್ತದೆ ಮತ್ತು ಅಂತರಗಳನ್ನ ಸುಖಿಸುತ್ತದೆ ಹಾಗೂ ಈ ರೀತಿಯ ಅಂತರಗಳು ಇರುವುದು ತೀರ ಸಹಜವೆಂದು ಒಪ್ಪುವಷ್ಟು ಪ್ರಜ್ಞೆಗಳನ್ನು ತಿರುಚುತ್ತಿರುತ್ತದೆ. ಆ ಪ್ರಕ್ರಿಯೆ ದೇಶಾತೀತವಾದ್ದು ,ಕಾಲಾತೀತವಾದ್ದು.

ಹೌದು ಪ್ರತಿಯೊಂದು ನಾಗರಿಕ ಸಮಾಜವು ತನ್ನ ಬೆಳವಣಿಗೆಯ ಜೊತೆ ಜೊತೆಗೆ  ಪ್ರಜ್ಞಾಪೂರ್ವಕವಾಗಿಯೇ ಈ ರೀತಿಯ  ನಿರಾಶ್ರಿತರ ಸಮುಹವೊಂದನ್ನು ಸೃಷ್ಟಿಸಿಕೊಳ್ಳುತ್ತದೆ ಮತ್ತು ಅಂತರಗಳನ್ನ ಸುಖಿಸುತ್ತದೆ ಹಾಗೂ ಈ ರೀತಿಯ ಅಂತರಗಳು ಇರುವುದು ತೀರ ಸಹಜವೆಂದು ಒಪ್ಪುವಷ್ಟು ಪ್ರಜ್ಞೆಗಳನ್ನು ತಿರುಚುತ್ತಿರುತ್ತದೆ. ಆ ಪ್ರಕ್ರಿಯೆ ದೇಶಾತೀತವಾದ್ದು ,ಕಾಲಾತೀತವಾದ್ದು. ಅದಕ್ಕಾಗಿಯೇ ಇರಬೇಕು ಇಲ್ಲಿ ಈ ತನಕ ಒಂದೇಒಂದು ಸಣ್ಣ ಮುಷ್ಕರವನ್ನು ನಾನು ನೋಡೇ ಇಲ್ಲ. ಆದರೆ ಇದಾವುದನ್ನು ಪ್ರಶ್ನೆಸದೆ ಇರುವುದು ಒಂದು ಸಮಾಜದ ಅಸ್ವಸ್ಥತೆಯಲ್ಲವೇ? ಈ ಎಲ್ಲ ವಿಷಯಗಳು ರಾತ್ರಿ ಮಲಗಿದಾಗ ಆ ಅಜ್ಜಿಯ ಚಿತ್ರದೊಂದಿಗೆ  ತಲೆಹೊಕ್ಕು ಕೊರೆಯ ತೊಡಗಿದವು.

ಮಾರನೆ ದಿನ ಬೆಳಿಗ್ಗೆ ಸಹಪಾಠಿಯೊಬ್ಬಳು ಕರೆ ಮಾಡಿದಳು. ಫ್ರಾನ್ಸ್ನವಳು.  .ಸಿಂಗಪುರದಲ್ಲಿ ಆ ದಿನ ಫಾರ್ಮುಲಾ ಒನ್ ಕಾರ್ ರೇಸ್ ಆರಂಭವಾಗುವುದರಲ್ಲಿತ್ತು. ಇವಳು ಅದಕ್ಕೆ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದಳು.ರೇಸ್ ನೋಡಲು ಅವಳ ಬಳಿ ಒಂದು ಎಕ್ಸ್ಟ್ರಾ ಫ್ರೀ  ಪಾಸ್ ಇತ್ತು.ನನ್ನನ್ನು ಬರಲು ಹೇಳಿದಳು .ನಾನು ಆಯಿತೆಂದು ಹೊರಟೆ.ಸಿಂಗಾಪುರದ ಸರ್ಕಾರ ಈವೆಂಟ್ಗೆ  ತನ್ನ ಎರಡು ಮುಖ್ಯ ರಸ್ತೆ ಮಾರ್ಗಗಳನ್ನೇ ಬಿಟ್ಟು ಕೊಟ್ಟಿತ್ತು,ಅದಕ್ಕಾಗಿ ತಿಂಗಳುಗಟ್ಟಲೆ ತಯಾರಿ ನಡೆಸಿತ್ತು ರಸ್ತೆಯನ್ನು ತಿಕ್ಕಿ, ತೊಳೆದು, ಪಾಲೀಷುಮಾಡಿ,ರೇಸ್ ಕಾರುಗಳು ಸರಾಗವಾಗಿ ಚಲಿಸುವಂತೆ ಮಾಡಿತ್ತು. ಎರಡು ಮುಖ್ಯ ರಸ್ತೆ ಮಾರ್ಗಗಳನ್ನು ಮುಚ್ಚಿದ್ದರಿಂದಲೂ  ಮತ್ತು  ರೇಸ್ ನೋಡಲು ದೇಶ ವಿದೇಶಗಳ ಜನ ಬಂದಿದ್ದರಿಂದಲೂ  ಎಂ ಅರ್ ಟಿ ರೈಲುಗಳು ಜನರಿಂದ ತುಂಬಿ ಹೋಗಿದ್ದವು.ರೇಸ್ ನಡೆಯುವ ರಸ್ತೆಯ ಕೆಲವು ಭಾಗಗಳಲ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕ ಗ್ಯಾಲರಿ ಇರುವಂತೆ ಆಸನಗಳನ್ನು ಆಯೋಜಿಸಲಾಗಿತ್ತು .ಅಲ್ಲಿ ಕೂತವರು,ನಿಂತವರು,ಕುಣಿಯುತ್ತಾ ಹುರಿದುಂಬಿಸುತ್ತಿದ್ದವರು,ಕಣ್ಣ ಮುಂದೆ ಗಾಳಿಯಂತೆ ಚಲಿಸುವ ಪ್ರತೀ ಕಾರಿನ ವೇಗಕ್ಕೂ ರೋಮಾಂಚಿತರಾಗುತ್ತಿದ್ದವರು,ಅದನ್ನು ಚಿತ್ರಿಸಲು ಥರಾವರಿ ದೊಡ್ಡ ದೊಡ್ಡ  ಕ್ಯಾಮರಾಗಳ ಹಿಡಿದು ನಿಂತ ಛಾಯಾಗ್ರಾಹಕರು ಅದೊಂದು ಉನ್ಮತ್ತ ರೋಚಕಲೋಕ.

ಎಂದೂ  ಅಂತದ್ದೊಂದು ದೃಶ್ಯ ಕಂಡಿರದ ನನಗೆ ಯಾವುದೋ ಒಂದು  ಕಂಪ್ಯೂಟರ್ ಗೇಮ್ ಸಾವಿರಾರು ಪಟ್ಟು ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು  ಹೊರಬಂದು ಕಣ್ಣೆದುರಿಗೆ ನಿಜ ಚಿತ್ರವಾದಂತೆ ಅನಿಸತೊಡಗಿತು. ಕಾರುಗಳ ವೇಗ ನನಗೆ ಭಯ ಹುಟ್ಟಿಸುತ್ತಿತ್ತು. ಪ್ರತಿ ಐದು, ಹತ್ತು ಸೆಕೆಂಡಿಗೊಂದು ಕಾರಿನಂತೆ ಕಣ್ಣ ಮುಂದೆ ಮಿಂಚಿ ಮಾಯವಾಗುತ್ತಿದ್ದವು. ಕಾರಿನ ವೇಗದ ಶಬ್ದವನ್ನಷ್ಟೇ ನಿಖರವಾಗಿ ಕೇಳಬಹುದಿತ್ತು ಅದರ ರೂಪ ಗೊತ್ತಾಗುತ್ತಲೇ ಇರಲಿಲ್ಲ.

ರಾತ್ರಿಯ ಆ ಹಣ್ಣಾದ ಹೆಂಗಸಿನ ಚಿತ್ರದ ಗುಂಗಿನಲ್ಲಿದ್ದರಿಂದ ಅಸಮಧಾನದಲ್ಲೇ ಗೆಳತಿಯನ್ನು ಕೇಳಿದೆ”ಅಲ್ಲ ಇದು ಮನುಷ್ಯರ ವಿಕ್ರುತಿಯಲ್ಲವೇ ಇಷ್ಟು ವೇಗದ ಮೋಜಿನ ಜರೂರಾದರು ಏನಿದೆ? ಯಾರಾದರು ಸತ್ತರೆ ?”

ಅವಳು ನಗಲು ಶುರುವಿಟ್ಟಳು. ಅಂದಳು “ಅಯ್ಯೋ ಇದೊಂದು ಕ್ರೀಡೆ ಮಾರಾಯ,ಸಾಹಸ ಕ್ರೀಡೆ ನೀನು ಇದನ್ನ ಹಾಗೇ ನೋಡಬೇಕು.ಇದಕ್ಕಿಂತ ರೋಚಕ ಅನಿಸುವಷ್ಟು ಕಾರಿನ ರೇಸ್ಗಳು ಜಗತ್ತಿನಾದ್ಯಂತ ನಡೆಯುತ್ತವೆ.ಕಣಿವೆಯ ಕಡಿದಾದ ರಸ್ತೆಗಳಲ್ಲಿ ಈ ರೀತಿ ಕ್ರೀಡೆಗಳು ನಡೆದು ಕೆಲವಾರು ಜನ ಸಾಯುವುದು ಮಾಮೂಲಿ. ಮೊದಲು ಯೂರೋಪ್ ದೇಶಗಳಲ್ಲಿ ಇದ್ದ ಟ್ರೆಂಡ್ ಈಗ ಏಷ್ಯ ದೇಶಗಳಲ್ಲೂ ಹೆಚ್ಚೆಚ್ಚು ಪ್ರಚಾರ ಪಡೆಯುತ್ತಿದೆ.ನೀನು ಈ ನೋಟಕ್ಕೆ ಇನ್ನೂ ರೂಡಿಯಾಗಿಲ್ಲ  ಅಷ್ಟೇ. ಮೋಜು ಅನ್ನುವುದು ಮನುಷ್ಯ ಜೀವನದ ಭಾಗ ಇಷ್ಟೊಂದು ಸಿರಿವಂತ ದೇಶದಲ್ಲಿ ಇಷ್ಟಾದರೂ ಮೋಜಿರದೆ ಹೋದರೆ ಹೇಗೆ? ”

ಹೌದೆ? ಒಂದು ದೇಶದ ಸಿರಿವಂತಿಕೆಗೆ ಅದರ ವೇಗ ಮತ್ತು ಮೋಜು ಮಾನದಂಡವೇ ? ಎಲ್ಲರ ನೋಟಗಳು ಇಂತದ್ದಕೆ ರೂಡಿಗೊಳ್ಳುತ್ತಿವೆಯೇ .? ಹಾಗಾದರೆ ಆ ಮುದುಕಿ ಈ ವೇಗದ ದಾರಿಯಲ್ಲಿ ಎಲ್ಲಿದ್ದಾಳೆ ?

ನನಗೆ ಅವಳ ಮಾತುಗಳು ಇನ್ನಷ್ಟು  ಗೊಂದಲಗಳ್ನು  ಸೃಷ್ಟಿಸಿತು .ನಿನ್ನೆಯ ವಯಸ್ಸಾದ ಹೆಂಗಸಿನ ನಡಿಗೆಯ ಚಿತ್ರಕ್ಕೂ  ಇಲ್ಲಿನ ಕಾರುಗಳ ವೇಗದ ಚಿತ್ರಕ್ಕೂ  ಎಷ್ಟು ಎಷ್ಟೊಂದು ಅಂತರವಿದೆ. ಈವರೆಗೆ ಬದುಕಿರುವ  ಬಹಳಷ್ಟು ದಿನ ಆ ವಯಸ್ಸಾದ ಹೆಂಗಸಿನಂತವರ  \ಜೊತೆ ಕಳೆದಿರುವ ನಾನು ಅವರ ಚಿತ್ರದೊಂದಿಗೆ ಕಾರಿನ ರೇಸಿನ ಬರಿಯ ಸಾಹಸ ಕ್ರೀಡೆ ಎಂದು  ಸಹಜವಾಗಿ ಹೇಗೆ ನೋಡಲಿ?ಇವೆರಡು ಮನುಷ್ಯಕುಲಗಳೇ ಸೃಷ್ಟಿಸಿಕೊಂಡಿರುವ ಎರಡು ಭಿನ್ನಚಿತ್ರಗಳು.? ಯಾವನೋ ದೇವರೋ ದಿಂಡಿರೋ ರೂಪಿಸಿರಲು ಸಾಧ್ಯವೇ ಇಲ್ಲ. ಹೌದು, ಮನುಷ್ಯ ನಾಗರೀಕತೆಯ ಆರಂಭದಿಂದಲೂ ಸಾಹಸ ಕ್ರೀಡೆಗಳಿವೆ.ಮೋಜು ಅನ್ನುವುದು ನಮ್ಮ ಬದುಕಿನ ಭಾಗವೇ ಅನ್ನೋಣ ಆದರೆ ರೋಮ್ ಗೂಳಿ ಕಾಳಗದಿಂದ ಹಿಡಿದು ಅವುಗಳ ಇಂದಿನ ರೂಪಂತರವೇನೋ ಅನ್ನಿಸುವ ಕಾರಿನ ರೇಸುಗಳು,ಡಬ್ಲ್ಯೂ ಡಬ್ಲ್ಯೂ ಎಫ್ ನಂತಹ  ಕುಸ್ತಿಗಳನ್ನು ಬರಿಯ ಸಾಹಸ ಕ್ರೀಡೆಗಳು ಎಂದು ಸುಮ್ಮನಾಗಿ ಬಿಡಬಹುದೇ?. ಇವೆಲ್ಲ ಮನುಷ್ಯನ ಅಂತರಂಗದೊಳಗಿನ ವಿಕೃತಿಯ,ಹಿಂಸೆಯ ಭೌತಿಕ ರೂಪಕಗಳಲ್ಲವೇ?.ಇವಗಳಿಗೆಲ್ಲ ಆರ್ಥಿಕ ಅಭಿವೃದ್ದಿಯ ಆದಾಯ ಮೂಲಗಳು ಎಂಬ ಚಂದದ ಡ್ರೆಸ್ ಗಳನ್ನು ತೊಡಿಸಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.ಕ್ರೀಡೆ ಅನ್ನುವುದು ಹಿಂಸೆಯನ್ನೇ ಪ್ರಧಾನ ಮಾಡಿಕೊಂಡರೆ ಅದು ಕ್ರೀಡೆಯಾಗಿ ಉಳಿಯಲು ಸಾಧ್ಯವೇ ಇಲ್ಲ. ಅದು ಐಪಿಎಲ್ ನಂತಹ ಕ್ರೀಡಾ ಟೂರ್ನಿಯು ನನ್ನ ಹಳ್ಳಿಯಲ್ಲಿ ನನ್ನದೇ ವಾರಿಗೆಯ ಹುಡುಗನನ್ನು ಆತ್ಮಹತ್ಯೆಗೆ ತಳ್ಳಿದ ಘಟನೆ ನೆನಪಿಗೆ ಬರುತ್ತದೆ.ಹೀಗಿರುವಾಗ ಅವುಗಳನ್ನು ಬರಿಯ ಕ್ರೀಡೆಯಾಗಿ ಹೇಗೆ ನೋಡುವುದು.ಇಡಿಯ ಜಗತ್ತಿನ ನಾಗರೀಕತೆಯು ತನ್ನ ವೇಗವನ್ನೇ ತನ್ನ ಉನ್ನತಿಯ ಕುರುಹು ಎಂದು ಅದರ ಬೆನ್ನ ಹತ್ತಿ ಓಡಲು ಶುರುವಿಟ್ಟರೆ,ಬದುಕೇ ಒಂದು ಸಾಹಸ ಕ್ರೀಡೆಯಾಗಿರುವವರ ಕಥೆ ಏನು, ದಿಣ್ಣೆಯಲ್ಲಿ ಹತ್ತಲಾಗದೆ ತಗ್ಗಿನಲ್ಲಿ ಇಳಿಯಲಾಗದೆ ಬದುಕಗಾಡಿ ಸಾಗಿಸುವ ಜೀವಗಳ ಕಥೆ ಏನು? ಆ ವೇಗದ ಜೊತೆ ಓಡಲಾಗದೆ ಹಿಂದುಳಿದು ಬುಸುಗುಡುತ್ತಾ ನಿಂತಿರುವವರ  ಕಥೆ ಏನು ? ಅವರ ಬದುಕಿನ ಅಡೆತಡೆಗಳಿಗೂ ಉಳ್ಳವರ ಮೊಜೀನ ವೇಗಕ್ಕೂ ತೀರ ಹತ್ತಿರದ ಸಂಭಂದವೆ ಇದೆ

ತನ್ನ ಸುತ್ತಲಿನ ಜೀವಗಳ ಬಗ್ಗೆ ಯಾವ ಪ್ರಜ್ಞೆಯೂ ಇರದ ಯಾವುದೇ ಸಮಾಜವೂ ಅಭಿವೃದ್ದಿಯ ಬೆನ್ನುಹತ್ತಿ ಮೊದಲು ತನ್ನ ಸುತ್ತಲಿನವರನ್ನು ನಾಶಮಾಡಿ ನಂತರ ತನ್ನನ್ನು ತಾನೆ ನಾಶ ಮಾಡಿಕೊಳ್ಳುತ್ತದೆ.ಇದು ಮಾನವ ಇತಿಹಾಸದ ಪ್ರತಿಪುಟದಲ್ಲೂ ನಿರೂಪಿತವಾಗಿದೆ. ಮತ್ತೂ ಹೇಳುವುದಾದರೆ ಇದನ್ನು ಒಂದು ನಾಗರೀಕತೆ ಅಂತಲಾದರೂ ಹೇಗೆ ಕರೆಯುವುದು? . ಸಿಂಗಾಪುರದಂತಹ  ಅಭಿವೃದ್ಧಿ ಹೊಂದಿದ ದೇಶವನ್ನು ಯಾವಾಗಲೂ ಸ್ಮರಿಸುವ, ಅದರ ಮಾದರಿಯನ್ನೇ ಅನುಸರಿಸಲು ಬಯಸುವ ಇಂಡಿಯಾದಂತಹ  ಹಲವು ದೇಶಗಳು ಇಲ್ಲಿ ಉಳ್ಳವರಿಗೂ ವಂಚಿತರಿಗೂ ಇರಬಹುದಾದ ದೊಡ್ಡ ಅಂತರವನ್ನು ಹೇಗೆ ನೋಡಬೇಕು ?.ತನ್ನ ದಿನಚರಿಯನ್ನು ಯಂತ್ರಗಳಿಲ್ಲದೆ ಹೋದರೆ ನಡೆಸಲಾಗದ ಸ್ತಿತ್ಹಿಯನ್ನು  ಶಾಪದಂತೆ ಹೊತ್ತಿರುವ ಇಂಡಿಯದ ಯಾವುದೋ ಪುಟ್ಟ ರಾಜ್ಯದಷ್ಟಿರುವ ಸಿಂಗಪುರದಂತ  ದೇಶ ಇಂಥ ದೊಡ್ಡ ಅಂತರವನ್ನು ಇರಿಸಿಕೊಂಡಿದೆ ಅಂದಮೇಲೆ ಇಂಡಿಯಾದಂತ ದೇಶವು ಡಿಜಿಟಲೀಕರಣಕ್ಕೆ ಹೇಗೆ ಒಗ್ಗಿ ಕೊಳ್ಳಬಹುದು ?

ತನ್ನ ಸುತ್ತಲಿನ ಜೀವಗಳ ಬಗ್ಗೆ ಯಾವ ಪ್ರಜ್ಞೆಯೂ ಇರದ ಯಾವುದೇ ಸಮಾಜವೂ ಅಭಿವೃದ್ದಿಯ ಬೆನ್ನುಹತ್ತಿ ಮೊದಲು ತನ್ನ ಸುತ್ತಲಿನವರನ್ನು ನಾಶಮಾಡಿ ನಂತರ ತನ್ನನ್ನು ತಾನೆ ನಾಶ ಮಾಡಿಕೊಳ್ಳುತ್ತದೆ.ಇದು ಮಾನವ ಇತಿಹಾಸದ ಪ್ರತಿಪುಟದಲ್ಲೂ ನಿರೂಪಿತವಾಗಿದೆ. ಮತ್ತೂ ಹೇಳುವುದಾದರೆ ಇದನ್ನು ಒಂದು ನಾಗರೀಕತೆ ಅಂತಲಾದರೂ ಹೇಗೆ ಕರೆಯುವುದು? . ಸಿಂಗಾಪುರದಂತಹ  ಅಭಿವೃದ್ಧಿ ಹೊಂದಿದ ದೇಶವನ್ನು ಯಾವಾಗಲೂ ಸ್ಮರಿಸುವ, ಅದರ ಮಾದರಿಯನ್ನೇ ಅನುಸರಿಸಲು ಬಯಸುವ ಇಂಡಿಯಾದಂತಹ  ಹಲವು ದೇಶಗಳು ಇಲ್ಲಿ ಉಳ್ಳವರಿಗೂ ವಂಚಿತರಿಗೂ ಇರಬಹುದಾದ ದೊಡ್ಡ ಅಂತರವನ್ನು ಹೇಗೆ ನೋಡಬೇಕು ?.ತನ್ನ ದಿನಚರಿಯನ್ನು ಯಂತ್ರಗಳಿಲ್ಲದೆ ಹೋದರೆ ನಡೆಸಲಾಗದ ಸ್ತಿತ್ಹಿಯನ್ನು  ಶಾಪದಂತೆ ಹೊತ್ತಿರುವ ಇಂಡಿಯದ ಯಾವುದೋ ಪುಟ್ಟ ರಾಜ್ಯದಷ್ಟಿರುವ ಸಿಂಗಪುರದಂತ  ದೇಶ ಇಂಥ ದೊಡ್ಡ ಅಂತರವನ್ನು ಇರಿಸಿಕೊಂಡಿದೆ ಅಂದಮೇಲೆ ಇಂಡಿಯಾದಂತ ದೇಶವು ಡಿಜಿಟಲೀಕರಣಕ್ಕೆ ಹೇಗೆ ಒಗ್ಗಿ ಕೊಳ್ಳಬಹುದು.? ಇಂಡಿಯಾದಂತ ಬಹು ಸಂಸ್ಕೃತಿಯ ,ಬಹುಜನರ ದೇಶದಲ್ಲಿ ಒಂದೇ ತೆರನಾದ ಡಿಜಿಟಲ್ ಮಾದರಿ ಎನ್ನುವುದೇ ತಮಾಷೆಯ , ಕೀಳಾದ, ಅತಿರೇಕದ ಮತ್ತು ಏಕ ಸಂಸ್ಕೃತಿಯ ಏರಿಕೆಯಾಗಿ ಕಾಣುವುದಿಲ್ಲವೇ ? ಸಿಂಗಪುರದಂತ ದೇಶಗಳ  ಅಭಿವೃದ್ಧಿಯ ಹೆಸರಿನ ಹಿಂದಿರುವ ಸೋಲುಗಳು ನಮಗೆ ಪಾಠಗಳಾಗಬೇಕು ಅನಿಸುತ್ತದೆ.ಸಿಂಗಾಪುರ ಮಲೇಶಿಯಾ ಒಕ್ಕೂಟದಿಂದ ಬೇರೆಯಾಗಿ ೫೦ ವರ್ಷದಲ್ಲಿ ಇಲ್ಲಿನ ವಲಸಿಗರ ಜೊತೆಜೊತೆಗೆ ತನ್ನದೇ ಆದ  ಸಾಮಾಜಿಕ,ಆರ್ಥಿಕ,ರಾಜಕೀಯ ಆಡಳಿತ ಮಾದರಿಗಳನ್ನು ಮತ್ತು ಬದುಕಿನ ಮಾದರಿಗಳನ್ನೂ ಕಂಡುಕೊಂಡಿದೆ. ಅದರ ಒಳಿತು ಕೆಡುಕುಗಳನ್ನು ಬಿಟ್ಟು ಹೇಳುವುದಾದರೆ ಈ ಮಾದರಿಗಳೆಲ್ಲವು ಇದೆ ನೆಲದ ಸಂವೇದನೆಯಲ್ಲಿ ರೂಪು ಪಡೆದಿರುವಂತಹವು.ಅದು ಒಂದು ದೇಶದ ಸ್ವಂತತೆ ಅಥವ ಸ್ವಾಯುತ್ತತೆ.

ಇಂಡಿಯಾದಂತ ಉಪಖಂಡಕ್ಕೆ ತನ್ನದೇ ಆದ ಮಾದರಿ ಹುಡುಕಿಕೊಳ್ಳುವುದು ತೀರ ಸುಲಭವಾದ ಸಂಗತಿಯೇ? ಆ ಕೆಲಸ ಅದೆಷ್ಟು ಸೂಕ್ಷ್ಮವಾದ ಸಂವೇದನೆಯನ್ನು ಮತ್ತು ದಾರ್ಶನಿಕತೆಯನ್ನು  ಬೇಡುವಂತದ್ದು?ಯಾವುದೋ ಕೆಲವು ಸಿದ್ಧಾಂತಗಳ ಮತ್ತು ಮಾದರಿಗಳ ಕಿಂಡಿಗಳೊಳಗೆ  ಬಹು ಸಂವೇದನೆಯ ದೇಶವನ್ನು ತುರಿಕಿ ಬಿಡುವುದು ಅದೆಷ್ಟು ಸರಿ. ಸದ್ಯಕ್ಕೆ ನನಗೆ ದೂರದಿಂದ ಇಂಡಿಯಾಯವನ್ನು ನೋಡಿದರೆ ಹೀಗೆ ಕಿರಿದಾದ ಕಿಂಡಿಗಳಿಗೆ ಇಡಿಯ ದೇಶವನ್ನು ತುರುಕಲು ಎಲ್ಲ ಕಡೆಯಿಂದಲೂ ಮಸಲತ್ತು ನಡೆಯುತ್ತಿರುವಂತೆ ಕಾಣುತ್ತದೆ. ಒಂದು ನೆಲ ,ಒಂದು ಭಾಷೆ,ಒಂದು ಧರ್ಮ ಎಂಬ ಹೀಗೆ ಹಲವು ಕಿರಿದಾದ ಕಿಂಡಿಗೊಳಳಕ್ಕೆ  ತುರುಕಲು ಬಯಸಿದಂತೆ. ಈ ನೂಕು ನುಗ್ಗಾಟದಲ್ಲಿ ಉಸಿರುಗಟ್ಟಿ ,ಮುದುಡಿ,ಕಾಲ್ತುಳಿತಕ್ಕೊಳಗಾಗಿ ಬದುಕುವವರೆಷ್ಟು ಸಾಯುವವರೆಷ್ಟು ? ಇದೆ ಇಂಡಿಯಾದ ಮಾದರಿಯೇ ?

ವಿಜ್ಞಾನದ ಮೂಲ ಪಾಠಗಳಿಗೆ ಮತ್ತೆ ಮರಳುವುದಾದರೆ ಅತಿಯಾದ ಕತ್ತಲು ಇದ್ದಾಗ ಹೇಗೆ ಕಣ್ಣು ಕಾಣುವುದಿಲ್ಲವೋ ಹಾಗೆ ಅತಿಯಾದ ಬೆಳಕಿದ್ದಾಗಲೂ ಕಣ್ಣು ಕಾಣುವುದಿಲ್ಲ.ಸದ್ಯಕ್ಕೆ ಜಗತ್ತು ಎರಡು ಅತಿಗಳ ಕಡೆ ಬದುಕುತ್ತಿದೆ ಒಂದು ಅತಿ ಕತ್ತಲಿನದು ಮತ್ತೊಂದು ಅತಿಬೆಳಕಿನದು ಇದು ವೇಗದ ವಿಷಯದಲ್ಲು ಇದು ಸತ್ಯ.

ಈ ಅತಿಗಳನ್ನು ಮೀರಿ ಹದವಾದ ಪ್ರಜ್ಞೆಗಳು ,ಮಾದರಿಗಳು ರೂಪುಗೊಳ್ಳಬೇಕಾದ್ದು ಕಾಲದ ಜರೂರು ಅನಿಸುತ್ತದೆ.

 

One comment to “ಸಿಂಗಪೂರ್ ಡೈರೀಸ್ : ಎರಡು ‘ಅತಿ’ ಗಳ ನಡುವೆ”

ಪ್ರತಿಕ್ರಿಯಿಸಿ