“ನೋವಿನ ಅನಾವರಣದಲ್ಲಿ ಒಂದು ಸಮಾಧಾನವನ್ನ, ಭರವಸೆಯನ್ನ ಹುದುಗಿಡಿಸುವುದು ಒಳ್ಳೆಯ ಕಥೆಯ ಲಕ್ಷಣ.” – ಸಿಂಧು ರಾವ್

(ಸಿಂಧು ರಾವ್ ಅವರ ಮೊದಲ ಕಥಾ ಸಂಕಲನ “ಸರ್ವ ಋತು ಬಂದರು” ನಾಳೆ ಭಾನುವಾರ ೦೫-೦೨-೧೭ ರಂದು ಬಿಡುಗಡೆಯಾಗಲಿದೆ. ಆ ನೆಪದಲ್ಲಿ ಋತುಮಾನ ನಡೆಸಿದ ಕಿರು ಸಂದರ್ಶನ ಇಲ್ಲಿದೆ.)

ಋತುಮಾನ: ಸಿಂಧು ಅವರೆ ನಮಸ್ಕಾರ. ಮೊದಲ ಕಥಾ ಸಂಕಲನದ ಬಿಡುಗಡೆಯ ಖುಶಿಯಲ್ಲಿದ್ದೀರಿ. ನಿಮಗೆ ಅಭಿನಂದನೆಗಳು.
ನನ್ನ ಮೊದಲನೇ ಪ್ರಶ್ನೆ ಈ ಕತೆಗಳನ್ನು ಬರೆಯುವ ಹುಕಿ ನಿಮ್ಮಲ್ಲಿ ಹೇಗೆ ಹುಟ್ಟಿಕೊಳ್ತು? ನಿಮ್ಮ ಬರವಣಿಗೆಯ ಹಿಂದಿನ ಮೂಲ ಪ್ರೇರಣೆಯನ್ನೂ, ಅದಕ್ಕೆ ಕಾರಣವಾದ ಪರಿಸರವನ್ನೂ ಸ್ವಲ್ಪ ವಿವರವಾಗಿ ತಿಳಿಸಿ.

ಸಿಂಧು: ಕಥೆಗಾರರ ಜಗುಲಿಯನ್ನು ಬೆರಗಿನಿಂದ ನೋಡುತ್ತ ನಿಂತಿರುವ ಚಿಕ್ಕವಳು ನಾನು. ನನಗೇ ಇನ್ನೂ ಅರ್ಥವಾಗಿರದ ಬೆರಗನ್ನ ನನಗೆ ತಿಳಿದ ಮಟ್ಟಿಗೆ ಇಲ್ಲಿ ಹೇಳಲು ಪ್ರಯತ್ನಿಸಿರುವೆ.
ಚಿಕ್ಕವಳಿದ್ದಾಗಿನಿಂದಲೂ ನನಗೆ ಕತೆ ಮತ್ತು ಕಾವ್ಯ ಎಂದರೆ ಜೀವ. ನನ್ನ ಬಾಲ್ಯವನ್ನು ನನ್ನ ಕುಟುಂಬ ಕಥೆಗಳಿಂದ ಸಮೃದ್ಧಿಗೊಳಿಸಿದೆ. ಸಾಮಾನ್ಯವಾಗಿ ನನ್ನ ಸ್ನೇಹಿತರು, ಆಪ್ತರು ಎಲ್ಲರೂ ಸಾಹಿತ್ಯಾಸಕ್ತರೇ ಆಗಿದ್ದಿದ್ದರಿಂದ ಸಾಹಿತ್ಯದ ಬಯಲಿಗೆ ನನಗೆ ವಿಶೇಷ ಪ್ರವೇಶಿಕೆ ಬೇಕಾಗಲಿಲ್ಲ. ಓದಲು, ನಾವು ಸಿದ್ಧವಿದ್ದರೆ ಅಕ್ಷರಗಳ ಸೇತುವೆ ನಮ್ಮನ್ನು ಜಗತ್ತಿನ ತೀರಗಳಿಗೆ ಮುಟ್ಟಿಸುತ್ತದೆ. ಹೀಗೆ ಓದುತ್ತ ನನ್ನ ಭಾವಕೋಶ ಅರಳುವಾಗ ಆಗಾಗ ಕವಿತೆ ಬರೆಯುತ್ತಿದ್ದೆ. ಒಮ್ಮೆ ತೀರ ಬೇಸರದಲ್ಲಿ ಮನಸ್ಸು ಮುಳುಗಿದ್ದಾಗ, ಅದರಿಂದ ಹೊರಬರುವ ದಾರಿ ಕಾಣದಿದ್ದಾಗ, ಹಿಂದೆ ಕಳೆದ ಕಾಲದ ಒಂದು ಸುಂದರ ನೆನಪನ್ನು ನೇವರಿಸುತ್ತ ಇದ್ದೆ. ಈ ನೆನಪಿಗೆ ನನಗೆ ಬೇಕೆನಿಸಿದ ಹಾಗೆ ಕನಸಿನ ಲೇಪವಿಡುತ್ತ ಬರೆದರೆ ಹೇಗೆ ಅನ್ನಿಸಿತು. ಒಂದು ಕಥೆ ಬರೆದೆ. ಅದು ತುಂಬ ಕಾಲದವರೆಗೆ ನನ್ನ ನೋವಿಗೆ ಮದ್ದಾಯಿತು. ಹೀಗೆ ಮತ್ ಮತ್ತೆ ಬರೆಯುತ್ತ ಇರುವಾಗ ಕಥೆಯೊಂದನ್ನು ರೂಪಿಸುವ, ರಚಿಸುವ, ಅಥವಾ ಬರೆಯುವುದರಲ್ಲಿರುವ ಸೃಜನ ಶೀಲ ಸುಖದ ಬಯಲು ನನ್ನ ಪುಟ್ಟ ಹೆಜ್ಜೆಗಳಿಗೆ ತೆರೆದುಕೊಂಡವು..

ಆ ಬಯಲಿನ ಬೇಲಿ ಹುಡುಕದೆ, ಹೆದ್ದಾರಿಗಳನ್ನು ಬಳಸದೆ, ದಾರಿಯಿರದಲ್ಲಿ ಹೆಜ್ಜೆ ಹಾಕುವ ತೊಡರು ನಡಿಗೆ ಮತ್ತು ಅದರಲ್ಲಿರುವ ನಿಧಾನ, ಆ ನಿಧಾನದಲ್ಲಿ ಸುತ್ತಲೂ ಗೋಚರಿಸುವ ವಿಶೇಷಗಳು ಇವೆಲ್ಲ ನಂಗೆ ತುಂಬ ಇಷ್ಟ. ಮತ್ತೆ ಮತ್ತೆ ಬರೆದೆ. ಕಥೆಗೆ ನನ್ನನ್ನೆ ಒಪ್ಪಿಸಿ ಬರೆದೆ. ಕಥೆ ಬೆರಳಲ್ಲಿ ಇಳಿಯಿತು. ಕಥೆ ಕೇಳಿದ ಆಹ್ಲಾದದ ನೆನಪು ಬರೆಯುವ ಆಶೆಯನ್ನ ತೀವ್ರವಾಗಿಸಿತು ಎಂದರೇ ಸರಿ.

ನಮ್ಮ ಬದುಕಿನ ಮೂಲಸ್ರೋತವಾದ ಅಂತಃಕರಣ, ಅದು ಸಂಬಂಧಗಳಲ್ಲಿ ಹರಡುವ ಬಗೆ, ಒಬ್ಬರಿನ್ನೊಬ್ಬರ ಬಗೆಗಿನ ತೀವ್ರವಾದ ಅವಲಂಬನೆ ಮತ್ತು ತಾತ್ಸಾರ, ಸಹಜತೆಯನ್ನು ಒತ್ತಿಟ್ಟು ಮಾಡಿಕೊಳ್ಳುವ ಹೊಂದಾಣಿಕೆ ಮತ್ತು ಆ ರೇಜಿಗೆಯಲ್ಲೇ ಸುಖಿಸುವ ಮನೋವ್ಯಾಪಾರ, ಕಪ್ಪುಬಿಳುಪು ಗೆರೆಗಳ ನಡುವಿನ ಅಸಂಖ್ಯಾತ ಬಣ್ಣಗಳು, ಇವು ನನ್ನನ್ನು ಕಾಡಿವೆ, ಕಾಡುತ್ತಲೇ ಇವೆ. ಈ ಕಾಡುವಿಕೆಯನ್ನು ನನ್ನ ಅನುಭವಕ್ಕೆ ಸಿಕ್ಕಿದ, ಕೇಳಿದ, ತಿಳಿದ ಸಂಗತಿಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ.
ನಾನು ಓದಿದ ಕತೆಗಳು ನನ್ನ ಮನಸ್ಸನ್ನು ಅರಳಿಸಿವೆ. ಈ ಅರಳಿಸುವಿಕೆ ನನಗೆ ಬಹಳ ಇಷ್ಟ. ನೋವಿನ ಅನಾವರಣದಲ್ಲಿ ಒಂದು ಸಮಾಧಾನವನ್ನ ಭರವಸೆಯನ್ನ ಹುದುಗಿಡಿಸುವುದು ಒಳ್ಳೆಯ ಕಥೆಯ ಲಕ್ಷಣ. ಈ ಹುದುಗಿಸುವಿಕೆಯ, ಸುಳಿವಿನ ಜಾಡು ಹಿಡಿವ ಓದುಗನ ಖುಷಿಯೇ ಬೇರೆ. ಈ ಖುಷಿಯನ್ನು ಒದಗಿಸುವ ಸಣ್ಣ ಪ್ರಯತ್ನವಾಗಿ ನಾನು ಕಥೆ ಬರೆಯುತ್ತಿರುವೆ.
ಒಂದೇ ಕಥೆ ಬೇರೆ ಬೇರೆಯವರ ಕಾವ್ಯದಲ್ಲಿ, ಕಥೆಯಲ್ಲಿ, ಚಿತ್ರಿಕೆಯಲ್ಲಿ, ಹೇಳುವಿಕೆಯಲ್ಲಿ, ವಾಚನದಲ್ಲಿ, ಗಮಕದಲ್ಲಿ ಹೇಗೆ ಅಸಂಖ್ಯ ರೂಪಗಳನ್ನು ತಾಳುತ್ತವೆ ಎಂಬುದು ನಮ್ಮ ಸಾಮಾನ್ಯ ಅರಿವಿಗೆ ಬರುವ ಹಾಗೆ ನಮ್ಮಲ್ಲಿ ಕಥೆಗಳಿವೆ. ಇದು ನನಗೆ ಕುತೂಹಲದ ಆಸಕ್ತಿಯ ವಿಷಯ. ಇಂಟರ್ ಪ್ರಿಟೇಷನ್ಸ್…ಮತ್ತು ನಮ್ಮ ನಮ್ಮ ಭಾವಜಗುಲಿಯಲ್ಲಿ ಸಂಭವಿಸಿಬಹುದಾದ ಬೇರೆಯೇ ಒಂದು ಕಥೆ ಮತ್ತು ಅದು ಓದುವವರಲ್ಲಿ ಮರುಹುಟ್ಟು ಪಡೆಯುವ ಜಾದೂ ನನಗೆ ಈ ಬದುಕಿನಲ್ಲಿ ಅತಿ ವಿಶಿಷ್ಟ ಅನಿಸುತ್ತದೆ. ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಯಲ್ಲಿ ಒಂದು ಸಾಲಿದೆ. “ಒಂದೆ ಹೊಳೆಯ ನೀರಿನಲ್ಲಿ ಬೇರೆ ಬೇರೆ ಆಳ” ಇದು ಕಥೆಗೆ, ಕಥೆ ಓದಲು ಮತ್ತು ಬರೆಯಲೂ ಅನ್ವಯಿಸುತ್ತದೆ.

ಋತುಮಾನ: ನಿಮ್ಮ ಸಾಹಿತ್ಯದ ಓದಿಗೆ ಪ್ರವೇಶ ಯಾವ ಲೇಖಕರ / ಅಥವಾ ಪುಸ್ತಕಗಳಿಂದ ಆಯಿತು? ತದನಂತರದ ದಿನಗಳಲ್ಲಿ ನಿಮ್ಮ ಮನಸ್ಸನ್ನು ಅರಳಿಸಿದ ಕತೆಗಳು ಯಾವು್ವು?

ಸಿಂಧು: ಇದು ನಾನು ಉತ್ತರಿಲಾಗದ ಪ್ರಶ್ನೆ ಅನಿಸುತ್ತಿದೆ. ಫ್ಯಾಂಟಮ್ ಬಹಾದುರ್ ಕಾಮಿಕ್ಸ್, ಚಂದಮಾಮ, ಮತ್ತು ಕನ್ನಡಕ್ಕೆ ಅನುವಾದವಾಗಿದ್ದ ದೊಡ್ಡ ಚಿತ್ರಗಳ ರಷ್ಯನ್ ಕಥೆಗಳು ಇವು ನನ್ನ ಮೊದಮೊದಲ ಕಥಾಜಗತ್ತು. ಕಾವ್ಯದ ಜಗುಲಿ ಹತ್ತಿಸಿದ್ದು ಅಜ್ಜ ಓದಿ ಹೇಳುತ್ತಿದ್ದ ರಾಮಾಯಣ ದರ್ಶನಂ (ಕುವೆಂಪು)
ನಂತರ ಎಂಕೆ ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ಸಿದ್ದವನಹಳ್ಳಿ ಕೃಷ್ಣಶರ್ಮ, ಗಳಗನಾಥ, ಖಾಂಡೇಕರ್, ಆಲನಹಳ್ಳಿ, ಶರಶ್ಚಂದ್ರ, ವಿಭೂತಿ ಭೂಷಣ ಚಟ್ಟೋಪಧ್ಯಾಯ, ಮಾಣಿಕ್ ಬ್ಯಾನರ್ಜಿ. ಟ್ಯಾಗೋರ್, ಕಾರಂತರು, ಕುವೆಂಪು, ನಾಡಿಸೋಜ, ಡಿ.ವಿ.ರಾವ್, ಮೂರ್ತಿ ರಾವ್, ತೇಜಸ್ವಿ, ಭೈರಪ್ಪ, ಯಂಡಮೂರಿ ವೀರೆಂದ್ರನಾಥ್, ಮತ್ತು ಆಗ ಬರೆಯುತ್ತಿದ್ದ ಎಲ್ಲ ಸಾಹಿತಿಗಳು – ತರಂಗ, ಸುಧಾ, ಮಯೂರ, ತುಷಾರ, ಲಂಕೇಶ ಪತ್ರಿಕೆ, (ವೈದೇಹಿ, ಅನಂತಮೂರ್ತಿ, ಆಬಿದ್ ಸುರ್ತಿ, ಲಂಕೇಶ್, ತೇಜಸ್ವಿ, ಸಾರಾ ಅಬೂಬಕ್ಕರ್, ವಸುಮತಿ ಉಡುಪ, ಉಷಾ ನವರತ್ನರಾಮ್, ಕೆ.ಟಿ.ಗಟ್ಟಿ, ನಾಗತಿಹಳ್ಳಿ ಚಂದ್ರಶೇಖರ್,ಹಾಮಾನಾಯಕ್)
ಇವೆಲ್ಲ ನಾನು ಸಾಗರದಲ್ಲಿ ಹೈಸ್ಕೂಲ್ ಮುಗಿಸುವವರೆಗೆ ಕಳೆದ ಸಮಯದಲ್ಲಿ. ನನ್ನ ಊರು ಸಾಗರದ ಹತ್ತಿರ ಚಿಕ್ಕ ಹಳ್ಳಿ ತಡಗಳಲೆ. ನನ್ನ ಬಾಲ್ಯ ಸಾಗರದ ಶಾಲೆಗಳಲ್ಲಿ ಇತ್ತು. ನನ್ನ ಓದುವ ಆಸಕ್ತಿ ಗೊತ್ತಿದ್ದ ಅಪ್ಪನ, ಮತ್ತು ಅಜ್ಜನ ಸ್ನೇಹಿತರು ಅವರೋದುವ ಪುಸ್ತಕಗಳನ್ನೆಲ್ಲ ನನಗೆ ಓದಲು ಕೊಡುತ್ತಿದ್ದರು. ಸಾಗರದ ರವೀಂದ್ರ ಲೈಬ್ರರಿಯ ಅತ್ಯುತ್ತುಮ ಪುಸ್ತಕಗಳನ್ನ ದೊಡ್ಡೇರಿ ಶ್ರೀಧರಮೂರ್ತಿಯವರು (ನನ್ನ ಅಪ್ಪನ ಸ್ನೇಹಿತರು) ಮೊದಲು ನನಗೆ ಓದಲು ಕೊಟ್ಟು ತಾವೋದುತ್ತಿದ್ದ ನೆನಪು ಇವತ್ತು ನನ್ನ ಮನಸ್ಸನ್ನು ಮುದಗೊಳಿಸುತ್ತದೆ. ನನ್ನ ಹೈಸ್ಕೂಲ್ ವಿಜ್ಞಾನ ಟೀಚರಾಗಿದ್ದ ಲಕ್ಷ್ಮೀನಾರಾಯಣ ರಾವ್ (ಎಲ್ಲೆನ್ನಾರ್) ಅವರ ಮನೆಯಲ್ಲಿ ಅವರದ್ದೇ ಒಂದು ಪ್ರೈವೇಟ್ ಲೈಬ್ರರಿ ಇತ್ತು. ತೀವ್ರ ಸಾಹಿತ್ಯಾಸಕ್ತರಾಗಿದ್ದ ಅವರ ಬಳಿ ಆ ಕಾಲದ ಕ್ಲಾಸಿಕ್ ಗಳ ಸಂಗ್ರಹವಿತ್ತು. ನನ್ನ ಆಸಕ್ತಿ ತಿಳಿದ ಅವರು ನನಗೆ ತುಂಬ ಕಾಲದವರೆಗೆ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಬಂದಗದ್ದೆಯ ಭಾರತಿ ಹೈಸ್ಕೂಲಿನ ಟೀಚರಾಗಿದ್ದ ಮೋಹನ ಮಾಸ್ತ್ರು ನನ್ನ ಅಪ್ಪನ ಸ್ನೇಹಿತರು. ಅವರ ಲೈಬ್ರರಿಯಲ್ಲಿ ಅತ್ಯುತ್ತಮ ಪುಸ್ತಕಗಳ ಸಂಗ್ರಹವಿತ್ತು. ಅವರು ಆರಿಸಿ ಆರಿಸಿ ಪುಸ್ತಕಗಳನ್ನು ಓದಿಸುತ್ತಿದ್ದರು. ನನ್ನ ಅಜ್ಜ ಒಳ್ಳೆಯ ಓದುಗರಾಗಿದ್ದು ಅವರ ಬಳಿಯು ಒಳ್ಳೆಯ ಸಂಗ್ರಹವಿದ್ದು ಅವೆಲ್ಲವೂ ನನಗೆ ಓದಲು ಪೂರಕವಾಗಿದ್ದವು. ಟಾಲ್ ಸ್ಟಾಯ್ ಬಗ್ಗೆ ಶಾಲೆಯಲ್ಲಿ ಪಾಠವಿದ್ದಾಗ ಮನೆಗೆ ಬಂದು ಕಪಾಟು ಹುಡುಕಿದರೆ ಅವನ ಪುನರುತ್ಥಾನದ ಪುಸ್ತಕ ಸಿಕ್ಕಾಗ ಆದ ಅಚ್ಚರಿ ಮತ್ತು ಖುಷಿ ನನಗೆ ಇನ್ನೂವರೆಗೆ ನೆನಪಿದೆ. ನಾನು ಮತ್ತೆ ಮತ್ತೆ ನೆನಪಿಸಿಕೊಂಡು ಇವತ್ತಿಗೂ ಇಟ್ಟುಕೊಂಡು ಓದುವ ಕೆಲವು ಪುಸ್ತಕಗಳಲ್ಲಿ ಗಳಗನಾಥಾರ ಮಾಧವ ಕರುಣಾ ವಿಲಾಸ, ಟ್ಯಾಗೋರರ ಯೋಗಾಯೋಗ, ಮತ್ತು ಶರಶ್ಚಂದ್ರ ಚರಿತ್ರಹೀನ ಇವೆ. ನಾಡಿಸೋಜ ಮತ್ತು ಕೆಟಿ ಗಟ್ಟಿಯವರ ಕಥೆ ಮತ್ತು ಕಾದಂಬರಿಗಳು ನನ್ನ ಅರಿವಿನ ಲೋಕದ ಹೊಸ ವಿಸ್ತಾರದ ದಿಕ್ಕು ತೆರೆದವು. ಶಿವರಾಮ ಕಾರಂತರ ಬೆಟ್ಟದ ಜೀವ ಮತ್ತು ಮರಳಿ ಮಣ್ಣಿಗೆ ಇವು ನನ್ನ ಅತ್ಯಂತ ಪ್ರೀತಿಯ ಪುಸ್ತಕಗಳು. ಮುಳುಗಡೆ ಹಳ್ಳಿಗಳು, ಚಿಕ್ಕ ಪೇಟೆಯಾದ ಸಾಗರ ಇವುಗಳಲ್ಲಿ ಸಾವಧಾನವಾಗಿ ಹರಡಿಕೊಂಡಿದ್ದ ನಾನು ಬೆಂಗಳೂರಿನ ಮಹಾನಗರದಲ್ಲಿ ವೇಗದಲ್ಲಿ ನನ್ನದೇ ಒಂದು ಜಾಗಕ್ಕೆ ನಿಯುಕ್ತವಾದೆ. “ತನ್ನ ಪಾಡಿಗೆ ತಾನು ಲೋಕದುರುಳು”-ಕೆ.ಎಸ್.ನ ಅನ್ನುವುದನ್ನ ಜೀವಂತ ಅನುಭವಿಸಿ ನೋಡಲು ಈ ಪಯಣ ನನಗೆ ಸಹಾಯವಾಗಿದೆ. ದಾರಿ ಇನ್ನೂ ತುಂಬ ಇದೆ.

ಋತುಮಾನ: ನೀವು ಬರೆಯಲು ಪ್ರಾರಂಭಿಸಿದಾಗ – ಕತೆಯ ನೇಯ್ಗೆ ಅಥವಾ ವಸ್ತುವಿನ ವಿಚಾರದಲ್ಲಾಗಿರಬಹುದು- ನಿಮಗೆ ಎದುರಾದ ಸವಾಲುಗಳು ಯಾವ ತರಹದ್ದು.

ಸಿಂಧು: ಇದು ಬಹುಶಃ ತುಂಬ ಕ್ಲೀಷೆಯ ಪ್ರಶ್ನೆ. ನನ್ನಂತಹ ಆರಂಭದ ಕತೆಗಾತಿಗೆ ಬಹುಶಃ ಸವಾಲು ಎಂದರೆ ಪದಮಿತಿಯಲ್ಲಿ ಬರೆಯುವುದೇ ಇರಬಹುದು. ನನ್ನ ಬರವಣಿಗೆ ಈಗಷ್ಟೇ ಸೈಕಲ್ ಸವಾರಿ ಕಲಿತವರ ಹಾಗೆ. ಓಡಿಸಲು ಬರುವುದು. ನಿಲ್ಲಿಸಬೇಕಿದ್ದರೆ ಮಾತ್ರ ಮೋರಿಕಟ್ಟೆಯೊಂದು ಬೇಕು ಕಾಲು ಕೊಟ್ಟು ನಿಲ್ಲಿಸಲು. ಬ್ರೇಕು ಹಾಕಲು ಬರುವುದಿಲ್ಲ.

ನಾನು ಮೊದಲೆ ಹೇಳಿದ ಹಾಗೆ ವೈಯಕ್ತಿಕವಾಗಿ ನನಗೆ ಕಪ್ಪು ಅಥವಾ ಬಿಳುಪು ಎಂಬ ಸ್ಥಿತಿಸ್ಥಾಪಕತ್ವದಲ್ಲಿ ನಂಬಿಕೆಯಿಲ್ಲ. ಅವೆರಡೂ ಅಲ್ಲದ ಅಥವಾ ಅವೆರಡೂ ಆಗಿರಬಹುದಾದ ನಡುವಿನ ಅಸಂಖ್ಯಾತ ಬಣ್ಣಗಳ ಬಗ್ಗೆ ನನ್ನ ಕುತೂಹಲ. ಹಾಗಾಗಿ ನನ್ನ ಕತೆಯು ಇದಮಿತ್ಥಂ ಎನ್ನದ ಹಾಗೆ ಅಜ್ಜನ ನೋಟವನ್ನು ಕಂಡೂ ಸಹ ತನ್ನ ನೋಟವನ್ನು ತಾನೇ ನೋಡುವ ಮೊಮ್ಮಗಳ ಹಾಗೆ ನನ್ನ ನಿಲುವುಗಳು ನನ್ನ ಕತೆಯಲ್ಲಿ ಇಣುಕುತ್ತವೆ.

ಇದು ಸವಾಲೋ, ದೋಷವೋ..ಅಥವ ಇನ್ನೇನೋ ನನಗೆ ಗೊತ್ತಿಲ್ಲ. ಕಾವ್ಯವೆಂದರೆ ನನಗೆ ಜೀವಪ್ರೀತಿ. ಹಾಗಾಗಿ ನಾನು ಬರೆವ ಕಥೆಗಳಲ್ಲಿ ಅಲ್ಲಲ್ಲಿ ಆಗಾಗ ಮಾತನ್ನು ಸೋಲಿಸಿ, ಕವಿತೆ ಸಾಲಿಗೆ ಶರಣಾಗಿರುತ್ತೇನೆ. ನಾನು ಬದುಕನ್ನು ಗ್ರಹಿಸಿದ ಹಾಗೆ ಕಥೆಯನ್ನೂ ಕಟ್ಟುತ್ತಿರುತ್ತೇನೆ. ಕಥೆಯ ಹೊರಗೇ ಇದ್ದರೂ ಕಥೆ ನನ್ನ ಅಂಗಳದಲ್ಲೇ ಇರುತ್ತದೆ. ಇದು ಸವಾಲು ಮತ್ತು ನಾನೇ ಪ್ರವಹಿಸಿ ಹೋಗಬೇಕಿರುವ ದೊಡ್ಡ ಬಯಲು ಅಂಥ ನನಗೆ ಅನಿಸುತ್ತದೆ.
ವಸ್ತುವಿನ ವಿಚಾರದಲ್ಲಿ ನನಗೆ ಯಾವ ಸವಾಲು ಎದುರಾಗಿಲ್ಲ. ನಾನು ಬರೆದಿರುವುದು ತುಂಬ ಕಡಿಮೆ.ವೈವಿಧ್ಯ ವೈರುಧ್ಯಗಳ ಬದುಕು ಸಾಕಷ್ಟು ಫಸಲು ಕೊಟ್ಟಿದೆ. ನಿರೀಕ್ಷೆಯ ಹೆದ್ದಾರಿಯಲ್ಲಿ ಸಿಕ್ಕಿ ಹಾಕಿಕೊಳ್ಳದ ಹಾಗೆ ನನ್ನ ಬಯಲಿನ ಹುಡುಕಾಟ ಮುಂದುವರಿಯಬೇಕು ಎಂಬುದು ಇಷ್ಟ. ಹೇಗೆ ಏನೇನು ಆಗುತ್ತದೆ ಎಂಬುದನ್ನ ಕಾಲವೇ ಉತ್ತರಿಸಬೇಕು.

ಋತುಮಾನ: ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎನ್ನುವ ಆರೋಪವಿದೆ. ಇನ್ನೊಂದು ಕಡೆ ಸಾಗರೋಪಾದಿಯಲ್ಲಿ ಹೊಸ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಈ contradiction ನ ನೀವು ಹೇಗೆ ಗ್ರಹಿಸುತ್ತೀರಿ.

ಸಿಂಧು: ಹೌದು ಇದು ಆರೋಪ ಎನ್ನುವುದಕ್ಕಿಂತ ವಸ್ತುಸ್ಥಿತಿ ಎನ್ನಬಹುದು. ಹೊಸ ಪೀಳಿಗೆಗೆ ಅವರ ಭಾವಲೋಕದ ವಿಸ್ತಾರಕ್ಕೆ ಹಲವಾರು ದಾರಿಗಳಿವೆ. ಟೀವಿ,ನೆಟ್ಟು,ಫೋನು.. ವರ್ಚುಯಲ್ ಸಮಾಜತಾಣ. ಪುಸ್ತಕ ಮುಂಚೆ ಕೂಡ ಒಂದಿಷ್ಟು ಜನರ ಆಸಕ್ತಿಯ ಕೇಂದ್ರವಾಗಿತ್ತು. ಎಲ್ಲರೂ ಪುಸ್ತಕಗಳನ್ನೋದುತ್ತಿರಲಿಲ್ಲ. ಈಗ ಆ ಒಂದಷ್ಟು ಜನರು ಪುಸ್ತಕ ಓದುವವರೇ ಇದ್ದರೂ ಕೂಡ ಅವರ ಸಮಯದಲ್ಲಿ ಬೇರೆ ಬೇರೆ ಆಸಕ್ತಿಗಳು ನುಗ್ಗುತ್ತವೆ. ಮೊದಲಿನ ಸಾವಧಾನದ ಜೀವನಪದ್ಧತಿ ಈಗ ಎಲ್ಲ ಕಡೆಯೂ ಮರೆಯಾಗಿದೆ. ಧಾವಂತದಲ್ಲಿ ನುಗ್ಗುತ್ತಿರುವ ಜೀವನದ ವೇಗಕ್ಕೆ ಅಲ್ಲಿಲ್ಲಿ ಕಣ್ಣಾಡಿಸುವ ಓದು ಒಗ್ಗಿ ಹೋಗುತ್ತಿದೆ ಅನಿಸುತ್ತದೆ ನನಗೆ. ಆದರೆ ಇದು ನಾವೆ ಬರಮಾಡಿಕೊಂಡ ಬದಲಾವಣೆ. ನಮ್ಮ ಮನಸ್ಸಿಗೆ ಸಾವಧಾನ ಬೇಕಿದ್ದರೆ ಜೀವನ ಪದ್ಧತಿ ಬದಲಾಗಬಹುದು. ಬರಿಯ ಮಾತುಗಳಲ್ಲಿ, ವಿರೋಧದಲ್ಲಿ, ವಿಚಾರಮಂಡನೆಗಳಲ್ಲಿ ಇವು ಬದಲಾಗುವುದಿಲ್ಲ.

ಸಾಗರದೋಪಾದಿಯಲ್ಲಿ ಪುಸ್ತಕಗಳ ಬಿಡುಗಡೆಗೆ ಕಾರಣ ಇವತ್ತಿನ ಮುದ್ರಣಾನುಕೂಲ, ಒಬ್ಬರಿನ್ನೊಬರೊಡನೆಯ ಸಂವಹನ ಸುಲಭಗೊಂಡಿರುವುದು. ಇತ್ಯಾದಿ. ಯಾವುದು ಪುಸ್ತಕಗಳ ಪ್ರಕಟಣೆಗೆ ಪೂರಕವಾಗಿದೆಯೋ ಅದೇ ಪುಸ್ತಕಗಳ ಓದಿಗೆ ಮಾರಕವಾಗಿರುವ ವೈರುಧ್ಯವನ್ನ ನಾವು ಜಗತ್ತಿನೆಲ್ಲೆಡೆ ನೋಡುತ್ತಿದ್ದೀವಿ. ನಮ್ಮ ಮಕ್ಕಳಿಗೆ ನಾವು ಪುಸ್ತಕ ಓದಿ ತೋರಿಸಿ ಅವರು ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ – ನೋಡಿ ಕಲಿ- ದಾರಿಯ ಹೊರತಾಗಿ ಇನ್ಯಾವುದೂ ನನಗೆ ಗೊತ್ತಿಲ್ಲ. ನಾನು ಪುಸ್ತಕಗಳನ್ನು ಕೊಂಡು ಓದುತ್ತೇನೆ. ಪ್ರತೀ ತಿಂಗಳೂ ಒಂದಷ್ಟು ಪುಸ್ತಕಗಳನ್ನು ಕೊಂಡು ಓದುತ್ತೇನೆ. ಮತ್ತು ಮಕ್ಕಳಿಗೂ ಕೂಡ ಪುಸ್ತಕ ಕೊಡಿಸಿ, ಓದಿ, ಓದಿಸಿ ಅವರ ಜೊತೆಗೆ ನಾನೂ ಖುಷಿ ಪಡುತ್ತೇನೆ. ಓದು ಪ್ರೀತಿ ಎಂಬ ಸೆಲೆ ಜಿನುಗುತ್ತಿರುವರವರೆಗೆ ಪುಸ್ತಕಗಳು ಚಿರಾಯು.

ಋತುಮಾನ: ನಿಮ್ಮ ಮೊದಲನೆಯ ಕಥಾ ಸಂಕಲನವನ್ನು ನಾಡಿನ ಪ್ರತಿಷ್ಟಿತ ಪ್ರಕಾಶನ ಸಂಸ್ಥೆಯಾದ ಅಂಕಿತ ಪ್ರಕಟಿಸುತ್ತಿದೆ. ಹೊಸಬರ ಸಾಹಿತ್ಯ ಪ್ರಕಟಣೆಗೆ ಯಾರೂ ಪ್ರೋತ್ಸಾಹಿಸುವುದಿಲ್ಲ ಎನ್ನುವ ಆರೋಪ ಇರುವಾಗ ಇದೊಂದು ಆಶಾದಾಯಕ ಬೆಳವಣಿಗೆ. ನಿಮಗೇನನ್ನಿಸುತ್ತೆ?

ಸಿಂಧು: ಇದು ನನಗೆ ತುಂಬ ಖುಷಿ ಕೊಟ್ಟ ವಿಚಾರ ಅಂತ ವಿನಯದಿಂದ ಹೇಳಬಯಸುತ್ತೇನೆ. ನಾನು ಹೊಸಬಳಿದ್ದೀನಿ ಮತ್ತು ನನಗೆ ಸಮೂಹಾಕರ್ಷಣೆ ಇಲ್ಲ. ಇದರ ಹೊರತಾಗಿ ಒಬ್ಬ ಕಥೆಗಾರ್ತಿಯ ಕಥೆಗಳನ್ನ ಗುರುತಿಸಿ ಬೆನ್ನುತಟ್ಟುವುದೇ ಅಲ್ಲದೆ ಪ್ರಕಟಣೆಯನ್ನೂ ಮಾಡುತ್ತಿರುವುದು ಅಂಕಿತ ಪ್ರಕಾಶನ ಸಂಸ್ಥೆಯ ಬೋಲ್ಡ್ ರಿಸ್ಕ್ ಇದಕ್ಕೆ ಕಾರಣ ಈ ಪ್ರತಿಭಾ ಮಾಲೆಯ ಸಂಪಾದಕರಾದ ಜೋಗಿ. ಇವರಿಬ್ಬರೂ ಹೊಸತನ್ನ ಪರಿಚಯಿಸುವ ಹುಮ್ಮಸದಲ್ಲಿರುವರು. ಈ ಹುಮ್ಮಸ್ಸು ಸಮಾಜಕ್ಕೆ ನಾವು ಬೆಳೆದು ಬಂದ ಸಮುದಾಯಕ್ಕೆ ಒಂದು ಒಳಿತಿನ ಹಾದಿಯನ್ನೂ ಪರಿಚಯಿಸುತ್ತದೆ ಎನ್ನುವುದು ನನ್ನ ಅನಿಸಿಕೆ.

ಕಾಲಕಾಲಕ್ಕೆ ಹೊಸ ಆಲೋಚನೆ, ಕಟ್ಟೋಣಗಳು, ಹೊಸ ನೋಟಗಳೊಂದಿಗೆ ಹೊಸ ಹೊಸ ಬರಹಗಾರರು ಬರೆಯುತ್ತಲೇ ಇದ್ದಾರೆ, ಇರುತ್ತೇವೆ. ಬರಲಿದ್ದಾರೆ ಕೂಡ. ಈ ಸೂಕ್ಷ್ಮವನ್ನು ಗುರುತಿಸಿ ಜೀವಂತಿಕೆಯನ್ನು ಮೆರೆಯುವ ಹಲವು ಪ್ರಕಾಶನಗಳು ಇವತ್ತು ನಮ್ಮ ನಡುವೆ ಇರುವುದು ಖುಷಿ ನನಗೆ. ಅಂಕಿತ, ಛಂದ, ಅಭಿನವ, ಇವರುಗಳು ತರುವ ಅನೇಕ ಹೊಸಹೊಸ ಬರಹಗಾರರ ಪುಸ್ತಕಗಳನ್ನು, ನಾನು ಓದಿ ಖುಷಿ ಪಟ್ಟಿದ್ದೇನೆ. ಕನ್ನಡದಲ್ಲಿ ಹೊಸದಾಗಿ ಬರೆಯುತ್ತಿರುವವರನ್ನ ಗುರುತಿಸುವವರೆ ಕಡಿಮೆ ಇರುವ ಈ ಕಾಲದಲ್ಲಿ ಇದೊಂದು ಅಪೂರ್ವ ಪ್ರಯತ್ನ ಮಾಲಿಕೆ. ಈ ತರಹದ ಪ್ರಕಟಣೆಗಳನ್ನ ಮೊದಲು ಕೆಲವು ಕನ್ನಡ ಸಂಘಗಳು ಮಾಡುತ್ತಿದ್ದವು ಎಂದು ಕೇಳಿ ಬಲ್ಲೆ. ಇಂಥಹ ಪ್ರಯತ್ನದಲ್ಲಿ ಪ್ರಕಾಶನ ಸಂಸ್ಥೆಗಳೇ ಭಾಗಿಯಾಗುವುದುವು ಮತ್ತು ಮುಂಚೂಣಿಯಲ್ಲಿರುವುದು ಬಹಳ ಸಂತೋಷದ ವಿಷಯ. ಕನ್ನಡ ಸಾಹಿತ್ಯದ ಬಗ್ಗೆ ಕಾಳಜಿ ಇರುವ ಹಿರಿಯ ಸಾಹಿತಿಗಳು, ನಮ್ಮಂತಹ ಕಿರಿಯರ ಬರಹಗಳನ್ನು ಓದಬೇಕು. ತಿದ್ದಬೇಕು ಅಲ್ಲದೆ ಹೀಗೆ ಹೊಸ ಪುಸ್ತಕಗಳನ್ನ ತರಲು ಪ್ರೇರೇಪಣೆಯೂ ಆಗಬೇಕು ಎಂದನಿಸುತ್ತೆ ನನಗೆ. ಆದರೆ ಇವೆಲ್ಲ ಆಶಯದಲ್ಲಿ ನಿಲ್ಲುತ್ತವೆ. ಪ್ರಕಾಶನ ಸಂಸ್ಥೆಗಳು ತೆಗೆದುಕೊಳ್ಳುವ ರಿಸ್ಕ್ ಮುಖ್ಯವಾಗುತ್ತದೆ. ಮತ್ತು ಪ್ರಕಟಣ ಯೋಗ್ಯ ಬರಹಗಳನ್ನು ಬರೆಯುವತ್ತ ನಾವು ಬರೆಯುವವರ ಬದ್ಧತೆ ಇರಬೇಕಾಗುತ್ತದೆ.

೦೧-೦೨-೨೦೧೭

ಪ್ರತಿಕ್ರಿಯಿಸಿ