ಒಂದು ಪದದ ಅರ್ಥವನ್ನು ಬದಲಿಸುವ ಅಥವಾ ಹಿಗ್ಗಿಸುವ ಪ್ರತಿಭೆಯನ್ನು ನಾವು ಬೇಂದ್ರೆಯವರ ಅನೇಕ ಕವನಗಳಲ್ಲಿ ಕಾಣುತ್ತೇವೆ. ತಮ್ಮ ‘ನೋಽಽ’ ಎನ್ನುವ ಕವನದಲ್ಲಿ ಬೇಂದ್ರೆಯವರು ‘ನೋ’ ಎನ್ನುವ ಪದವನ್ನು ಹಲವು ಧ್ವನಿಗಳಲ್ಲಿ ಬಳಸುತ್ತಾರೆ . ಕನ್ನಡದಲ್ಲಿ ‘ನು’ ಧಾತುವಿಗಿರವ ‘ಸಂವೇದನೆ’ ಎಂಬರ್ಥದಲ್ಲೂ , ಮುಂದಕ್ಕೆ ಇಂಗ್ಲಿಶ್ ಭಾಷೆಯ ಎರಡು ಅರ್ಥಗಳಲ್ಲಿ ಬಳಸಿದ್ದಾರೆ. NO ಎಂದು ಆಗುವಂತೆಯೇ KNOW ಎಂದೂ ಆಗಬಲ್ಲದು. ಇಲ್ಲಿ ವೈದಿಕ ಛಂದಸ್ಸಿನಲ್ಲಿ ಈ ಕವಿತೆಯನ್ನು ಬೇಂದ್ರೆ ಹಾಡಿದ್ದಾರೆ .
ಕವಿತೆ : ನೋಽಽ
ಕವನ ಸಂಕಲನ : ನಾಕುತಂತಿ
೧
ಅದು ಏಽನೋ ಇತ್ತು
ನೋ, ನೋ, ನೋ, ಎನುತಿತ್ತು
ಎನುತಲೆ ಇತ್ತು;
ತಲೆ ಇತ್ತು; ಅತ್ತಲೆ ಇತ್ತು
ಬತ್ತಲೆ ಬಾಲಕನಂತಿತ್ತು
ಅಳುತಿತ್ತು ನಗುತಿತ್ತು.
೨
ತಾ, ತಾ, ತಾಯೀ
ಎನುತಿತ್ತು
ತಾಽನೋ? ನಾಽನೋ?
ನೀಽನೋ?
ಏಽನೇಽನೋಽ
ಆತನೋ? ಆತ್ಮನೋ?
ಅವನೋ?
ಅಮ್ಮನೋ? ಅಪ್ಪನೋ?
ಅಪ್ಪುವನೋಽಽಽ?
ತಪ್ಪುವನೋಽಽಽ?
ಒಪ್ಪುವನೋಽಽಽ?
ನೋ, ನೋಡೂ, ಕೂಡೂ
ಒಡಂಬಡು
೩
ನೋ, ನೋಯದೆ ಇಲ್ಲಾ
ಎಲ್ಲಮ್ಮಾ!
ನೋವಿನ ಸಿಪ್ಪೆಯ ಸುಲಿದೀಽಽ
ನಂದನೋ? ಕಂದನೋ?
ಬೆಂದರೆ ನೋ-ತಿಂದರೆ ನೋ
ನೋ, ಸೈ ಸೈನೋ?
ಯಾ ಸೈನೋ?
ನೋ? ನೊಣವೋ?
ಅಣುವೋ? ಗುಣವೋ?
ಗುಣಗುಣವೋ?
ಜೇನ್ನೊಣವೋ?
ಜೇಽಽನೋಽಽ ಮೇಽಽಣೋಽಽ
ಹುಟ್ಟಿನ ತುಂಬೆಲ್ಲಾ
ರಾಣಿಯು ನೋ, ರಾಜನು ನೋ
ತಂಬುಲ ನೋ-ರಸದಂಬುಲ ನೋ
ಚರ್ವಣೋ-ಪರ್ವಣೋ
ಣೋಽ ನೋಽ ಮೋಽ
ನಮೇಽ ನಮೋಽ ಚಮೇಽ ನಮೋಽ
ನೋಽ, ನೋಽ, ನೋಽ
ಕವಿ ಗಾರುಡಿಗ ಬೇಂದ್ರೆ ತಮ್ಮ ಧ್ವನಿಪೂರ್ಣ ಕವನವನ್ನು ಅರ್ಥಪೂರ್ಣವಾಗಿಸಿದ್ದಾರೆ. ಅವರ ದನಿಯನ್ನು ದಾಖಲಿಸಿ ನಮಗೆ ಈ ಮೂಲಕ ಕೇಳಿಸಿದವರಿಗೆ ನಮೋ ನಮೋ.