ಋತುಮಾನ ಆಂಡ್ರಾಯ್ಡ್ ಆ್ಯಪ್ ಈಗ ಲಭ್ಯ. ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
ಇದು ಹೇಗೆ ಸಾಧ್ಯವಾಯಿತು?
ಹೇಮಲತಾ: ನಿರ್ದಿಷ್ಟ ಕಾರಣ ಅಂತೇನಿಲ್ಲ. ಚಿಕ್ಕ ವಯಸ್ಸಿನಿಂದಲೂ ಓದುವ ಹುಚ್ಚು ಹೆಚ್ಚು ನನಗೆ, ಪಠ್ಯಕ್ಕಿಂತ ಕತೆ ಕಾದಂಬರಿ ಜೀವನಚರಿತ್ರೆ, ಪದ್ಯಗಳು ಎಲ್ಲವನ್ನು ಓದುತ್ತಿದೆ. ತುಂಬಾ ಬೇಗನೆ ನನ್ನ ವಿದ್ಯಾಭ್ಯಾಸ ಕೊನೆಗೊಂಡು ಮದುವೆ ಆಯಿತು.
ಮದುವೆ, ಮಕ್ಕಳು ಸಂಸಾರ ಎಲ್ಲವೂ ಬೇಗ ಬೇಗ ಕಂಡ ನನಗೆ ಆನಂತರ ಒಂದು ರೀತಿಯ ಶೂನ್ಯಾವಸ್ತೆ ಆವರಿಸಿತು. ನಾನು ಯಾರು ನನ್ನ ಅಸ್ಮಿತೆ ಏನು ಎಂಬ ಪ್ರಶ್ನೆಗಳು ಕಾಡತೊಡಗಿತು. ಬದುಕಿನ ತಲ್ಲಣ, ನೋವು, ನಿರಾಶೆ, ಖುಷಿ, ಇದ್ದಕ್ಕಿದ್ದಂತೆ ಆದ ಜೀವನದ ಪಲ್ಲಟಗಳೆಲ್ಲ ಹೆಪ್ಪುಗಟ್ಟಿದ್ದು ಅಕ್ಷರಗಳಾಗತೊಡಗಿತು. ನನಗರಿವಿಲ್ಲದಂತೆ ಅದನ್ನು ಕಾವ್ಯವಾಗಿಸಿದೆ.
ನಿಮ್ಮ ಊರು, ಬಾಲ್ಯದ ಓದು, ಮೊದಲು ಖುಶಿಕೊಟ್ಟ ಪುಸ್ತಕಗಳ ಕುರಿತು ಇನ್ನಷ್ಟು ಹೇಳಿ
ಹೇಮಲತಾ: ಹುಟ್ಟಿದ ಊರು ಬೆಂಗಳೂರು, ಮದುವೆ ನಂತರ ಇಪ್ಪತ್ತು ವರ್ಷಗಳ ಕಾಲ ಭದ್ರಾವತಿಯಲ್ಲಿ ನೆಲಸಿದ್ದೆ. ಈಗ ಮತ್ತೆ ತವರೂರು ಬೆಂಗಳೂರಲ್ಲಿ ನನ್ನ ವಾಸ.
ಬಾಲ್ಯದಿಂದಲೂ ಕೊಂಚ ಗಂಭೀರವಾದ ಸ್ವಭಾವ ನನ್ನದು. ಆಟಗಳಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಪುಸ್ತಕವೇ ನನ್ನ ಪ್ರಪಂಚ ಮನೆಯಲ್ಲಿ ಬಡತನ ಹೆಚ್ಚಿದ್ದರಿಂದ ನನ್ನ ಓದಿಗೆ ಪ್ರೋತ್ಸಾಹದಾಯಕವಾದ ವಾತವರಣ ಇರಲಿಲ್ಲ.
ಇನ್ನೂ ನಾ ಓದಿದ ಹೆಚ್ಚು ಇಷ್ಟ ಪಟ್ಟ ಪುಸ್ತಕ ಬಹುಶಃ ೫ ನೇ ತರಗತಿಯಲ್ಲಿ ಇದ್ದೆ ಅನ್ನಿಸುತ್ತೆ. ಕುವೆಂಪು ಅವರ ಮಲೆನಾಡಿನ ಚಿತ್ರಗಳು. ಆ ಸಮಯದಲ್ಲಿ ಲಂಕೇಶ್ ಪತ್ರಿಕೆ ಉತ್ತುಂಗದಲ್ಲಿ ಇದ್ದ ಕಾಲ. ನನ್ನನ್ನು ಅಂದಿಗೂ ಇಂದಿಗೂ ಕಾಡುವ ಲೇಖಕರು ಅವರು. ಅವರ ಮರೆಯುವ ಮುನ್ನ ತಪ್ಪದೇ ಓದುತ್ತಿದ್ದೆ. ಹಾಗೇಯೇ ತೇಜಸ್ವಿ ಅವರ ಕರ್ವಾಲೋ ನನ್ನ ಅಚ್ಚುಮೆಚ್ಚಿನ ಪುಸ್ತಕ. ಇವು ನನಗೆ ಮೊದ ಮೊದಲು ಖುಷಿ ಕೊಟ್ಟ ಪುಸ್ತಕಗಳು.
ನೀವು ಬರವಣಿಗೆ ಪ್ರಾರಂಭಿಸಿದ್ದು ಯಾವ ವಯಸ್ಸಿನಲ್ಲಿ? ಇದು ನಿಮ್ಮ ಮೊದಲ ಕಾವ್ಯ ಸಂಕಲನವೇ?
ಹೇಮಲತಾ: ನಾನು ಮೊದಲು ಪದ್ಯ ಬರೆದಾಗ ಸುಮಾರು ಹನ್ನೆರಡನೇ ವಯಸ್ಸು. ಎಂಟನೇ ತರಗತಿಯಲ್ಲಿ ಇದ್ದಾಗ, ಅದನ್ನು ನಮ್ಮ ಟೀಚರ್ ಗೆ ತೋರಿಸಿದಾಗ ಅವರು ಮೆಚ್ಚುಗೆ ವ್ಯಕ್ತಪಡಿಸಿ ಆಗ ವನಿತ ಎಂಬ ಮಹಿಳಾ ಮಾಸ ಪತ್ರಿಕೆ ಬರುತಿತ್ತು. ಆ ಪತ್ರಿಕೆಯ ಮಹಿಳಾ ವಿಭಾಗಕ್ಕೆ ಕಳುಹಿಸಿ ಕೊಟ್ಟರು. ಅದು ಅಲ್ಲಿ ಪ್ರಕಟವಾಯಿತು. ಮದುವೆ ನಂತರ ಬರವಣಿಗೆ ಸಂಪೂರ್ಣ ನಿಂತು ಹೋಗಿತ್ತು. ಇತ್ತಿಚೆಗೆ ಮೂರು ವರ್ಷಗಳಿಂದ ಮತ್ತೆ ಬರವಣಿಗೆಯಲ್ಲಿ ತೊಡಗಿಕೊಂಡೆ.
ಇದು ನನ್ನ ಎರಡನೆಯ ಕವನ ಸಂಕಲನ. ಭಾವ ಭಾಮಿನಿ ಎಂಬ ಕವನ ಸಂಕಲನ ಈ ಮೊದಲು ಪ್ರಕಟವಾಗಿತ್ತು. ಆದರೆ ಪುಸ್ತಕದಲ್ಲಿ ಸರಿಯಾದ ಕವನಗಳನ್ನು ಆಯ್ಕೆ ಮಾಡುವಲ್ಲಿ ಸ್ವಲ್ಪ ಎಡವಿದೆ.
ನಿಮ್ಮ ಕಾವ್ಯಾಭಿವ್ಯಕ್ತಿಗೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯನ್ನೊದಗಿಸಿದೆ ಎನಿಸುತ್ತದೆಯೇ? ಈ ಕಾಲದ ಬಹಳಷ್ಟು ಬರಹಗಾರರನ್ನ ಫೇಸಬುಕ್ ನಂತಹ ತಾಣಗಳು ಸಾಕಷ್ಟು ಪ್ರೇರೆಪಿಸಿದೆ. ಇದರ ಕುರಿತು ನಿಮ್ಮ ಅಭಿಪ್ರಾಯ?
ಹೇಮಲತಾ: ನಾನು ಕಾವ್ಯದ ಮುಖೇನ ಗುರುತಿಸಿಕೊಳ್ಳಲು ಖಂಡಿತವಾಗಿ ಫೇಸ್ಬುಕ್ ವೇದಿಕೆ ಒದಗಿಸಿಕೊಟ್ಟಿತು ಮಾತ್ರವಲ್ಲ. ಅಲ್ಲಿ ನನಗೆ ಸಾಹಿತ್ಯದ ಒಡನಾಟ ಇರುವ ಹಲವಾರು ವ್ಯಕ್ತಿಗಳ ಪರಿಚಯವು ಆಯಿತು. ತುಂಬಾ ಜನ ನನ್ನನ್ನು ಪ್ರೋತ್ಸಾಹಿಸಿದರು. ಬೆಂಬಲವಾಗಿ ನಿಂತರು. ಸಾಮಾಜಿಕ ಜಾಲತಾಣಗಳನ್ನು ನಾವು ಸರಿಯಾಗಿ ಬಳಸಿಕೊಂಡಲ್ಲಿ ಖಂಡಿತ ಅದು ನಮಗೆ ಮುಖ್ಯ ವೇದಿಕೆ ಆಗಬಲ್ಲದು. ಇಲ್ಲಿಯೇ ಬೇಲೂರು ರಘುನಂದನ್ ಅವರಂತ ಕಾವ್ಯಾಸಕ್ತರು ನನಗೆ ಪರಿಚಯ ಆಗಿ “ಕಳಚಿಟ್ಟಿದ್ದೇನೆ ಇದೋ ನಿರ್ವಾಣ” ಪುಸ್ತಕ ರೂಪದಲ್ಲಿ ತರಲು ಸಾಧ್ಯವಾಗಿದ್ದು.
ಕನ್ನಡದಲ್ಲಿ ಸಾಕಷ್ಟು ಕಾವ್ಯದ ಫಸಲು ಬರುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಕಾವ್ಯ ಸಂಕಲನಕ್ಕೆ ಸಾಹಿತ್ಯ ಲೋಕದಿಂದ ಬಂದ ಪ್ರತಿಕ್ರಿಯೆ ಹೇಗಿದೆ?
ಹೇಮಲತಾ: ಹೌದು ಈಗ ಕನ್ನಡದಲ್ಲಿ ಕಾವ್ಯದ ಫಸಲು ಹುಲುಸಾಗಿದೆ. ಆದರೆ ಎಲ್ಲವೂ ಕಾವ್ಯಾಸಕ್ತರನ್ನೂ ತಲುಪುತ್ತವೆ ಎಂದೂ ಹೇಳಲು ಬರುವುದಿಲ್ಲ. ಸಮಾಜದೊಂದಿಗೆ ಸಂವಹನ, ಸ್ಪಂದನ ಮತ್ತು ಚಿಂತನೆಗಳು ಇರುವಂತವು ಉಳಿಯುತ್ತವೆ. ಮತ್ತು ಇಲ್ಲಿ ಹೊಸ ಪ್ರಯೋಗಗಳ ಅವಶ್ಯಕತೆಯೂ ಇಂದಿಗೆ ಪ್ರಸ್ತುತ ಅನ್ನಿಸುತ್ತೆ.
ಸಾಹಿತ್ಯ ಲೋಕದಿಂದ ಉತ್ತಮ ಪ್ರತಿಕ್ರಿಯೆ ನನ್ನ ಕವನ ಸಂಕಲನಕ್ಕೆ ಬಂದಿದೆ. ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಕಾವ್ಯಾಸಕ್ತರನ್ನು ತಲುಪುತ್ತದೆ
ಎಂಬ ಭರವಸೆ ಇದೆ. ಇಲ್ಲೊಂದು ವಿಚಾರ ಹೇಳ್ಬೇಕು. ಏನಂದ್ರೆ ಎಷ್ಟು ಮಂದಿ ಇಷ್ಟ ಪಟ್ಟಿದ್ದಾರೆ ಅನ್ನೋದಕ್ಕಿಂತ ಎಂತವರು ಇಷ್ಟಪಟ್ಟಿದ್ದಾರೆ ಅನ್ನೋದು ಮುಖ್ಯ ಆಗುತ್ತೆ. ಆದರೆ ನನ್ನ ಮಟ್ಟಿಗೆ, ನನ್ನ ಕಾವ್ಯ ಜಗತ್ತಿನ ಪಯಣಕ್ಕೆ ಹೋಲಿಸಿದರೆ ದೊಡ್ಡ ಮಟ್ಟಿಗಿನ ಬೆಂಬಲ ಸಿಗುತ್ತಿದೆ. ಓದಿದವರು ತುಂಬಾ ಇಷ್ಟ ಪಟ್ಟು ಪ್ರತಿಕ್ರಯಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾವ್ಯಕ್ಕೆ ಮನ್ನಣೆ ಕಡಿಮೆ ಅಂತ ಹೇಳುತ್ತಿರುವ ಹೊತ್ತಲ್ಲಿ ನನಗೆ ಸಿಕ್ಕಿರುವ ಪ್ರತಿಕ್ರಿಯೆ ತುಂಬಾ ಖುಷಿ ಕೊಟ್ಟಿದೆ.
ಹೆಣ್ಣಿನ ಅಂತರ್ಗತ ನೋವುಗಳು, ಒಂಟಿದನಿಯಾಗದೇ ಒಗ್ಗಟ್ಟಿನ ಗಂಟೆಯಾಗಿ ಮೊಳಗಬೇಕು. ಭ್ರೂಣ ಹತ್ಯೆ, ಲೈಂಗಿಕ ಶೋಷಣೆ, ಲಿಂಗತಾರತಮ್ಯ ಇವೆಲ್ಲವು ಈಗಲೂ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಂಕಟಗಳು. ಅದನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಮೆಚ್ಚುಗೆಯ ಜೊತೆ ವ್ಯಂಗ್ಯ, ಅವಮಾನ , ಚುಚ್ಚುಮಾತುಗಳ ಮೂಲಕ ನನ್ನನ್ನು ತೇಜೋವಧೆ ಮಾಡಲಾಯಿತು. ಆ ಸಮಯದಲ್ಲಿ ಜೊತೆಯಾಗಿ ನಿಂತ ಸ್ನೇಹಿತರಿಗೆ ನಾ ಎಂದಿಗೂ ಋಣಿ.
ಅಕ್ಷರಗಳು ಸಮಾಜದ ಬದಲಾವಣೆಗೆ ಕಾರಣವಾಗಬೇಕೆಂಬುದೆ ನನ್ನ ಬಯಕೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿ ಋತುಮಾನದ ಮೂಲಕ ಕೇಳಿಕೊಳ್ಳುತ್ತೇನೆ.
07-02-2017
ಬಹುತ್ ಖೂಬ್ ಹೇಮಕ್ಕ❤
superb, Hema!! Lots of love!!