ನನ್ನ ದೇವರು-ಕೃಷಿಕ್ ಎ.ವಿ

ದೇವರು ಯಾರು ಮತ್ತು ಏಕೆ ಎಂಬ ಮೂಲಭೂತ ಪ್ರಶ್ನೆ ಇಲ್ಲದೆಯೇ ನಾವು ನಂಬಿಕೆಗಳ ವ್ಯವಸ್ಥೆಯೊಂದನ್ನು ನಮ್ಮ ದೇವರು ಎಂದು ಕರೆದುಕೊಂಡಿದ್ದೇವೆ. ಹಾಗಾದರೆ ಈ ದೇವರ ಕಲ್ಪನೆ ಹೇಗೆ ಹುಟ್ಟಿತು?.
ಅಲೆಮಾರಿಗ ಳಾಗಿದ್ದ ನಮ್ಮ ಪೂರ್ವಿಕರು ಒಂದೆಡೆ ಕಲೆತು ವಾಸಿಸಲು ಶುರುಮಾಡಿದಾಗ ಸಮುದಾಯದ ವಿವಿಧ ಅವಶ್ಯಕತೆಗೆ ಕಾನೂನು ಕಟ್ಟಳೆ ಬೇಕಾಗಿತ್ತು. ಆಗ ಉದಯಿಸಿದ್ದು ಧರ್ಮಗಳೆಂದು ಕರೆಯಲಾಗುವ ವ್ಯವಸ್ಥೆ, ನಂಬಿಕೆ ಇತ್ಯಾದಿಗಳ ಬೆಳವಣಿಗೆ. ನಂಬಿಕೆಗಳು ಮೊದಲಿಗೆ ಆರಂಭವಾಗಿದ್ದು ಅಗೋಚರ ವಿಚಾರಗಳ(ನೈಸರ್ಗಿಕ ಶಕ್ತಿ, ಆತ್ಮ, ದೆವ್ವ ಇತ್ಯಾದಿ ಕಾಣದ ಕೇವಲ ಜ್ಞಾನದ ಕೊರತೆಯಿಂದ ಮನಸ್ಸಿನ ಅನುಭವಕ್ಕೆ ಬರುವ) ಬಗ್ಗೆ ನಂತರ ಅದು ಮೂರ್ತಿ ಪೂಜೆ ಇತ್ಯಾದಿ ಆಚರಣೆಗಳಲ್ಲಿ ತಂದು ನಿಲ್ಲಿಸಿತು.
ಪ್ರಾಚೀನ ಶಿಲಾಯುಗದ(ಪೇಲಿಯೊಲಿತಿಕ್) ಪಳೆಯುಳಿಕೆಗಳಲ್ಲಿ ಸಂಶೋಧಕರು ನಂಬಿಕೆಗಳ ಹುಟ್ಟನ್ನು ಗುರುತಿಸುತ್ತಾರೆ. ಹಲವೆಡೆ ಸಿಕ್ಕ ಗೋರಿಗಳಲ್ಲಿನ ಸಂಸ್ಕಾರದ ಕ್ರಮ ಮತ್ತು ಕೆಲವೆಡೆ ದೊರಕಿದ ಕರಡಿಯ ಮೂಳೆಗಳ ವಿಶೇಷ ರಚನೆ ಇದಕ್ಕೆ ಪುಷ್ಟಿ ಕೊಡುತ್ತವೆ. ಪ್ರಾಚೀನ ಕಾಲದ ಮಾನವರಿಗೆ ವಿಜ್ಞಾನ ತಂತ್ರಜ್ಞಾನ ಇನ್ನೂ ವಿಕಾಸವಾಗುತ್ತಿದ್ದ ಹೊತ್ತಿನಲ್ಲಿ ಹುಟ್ಟು-ಸಾವಿನ ಮರ್ಮ, ಬದುಕಿನ ಏರಿಳಿತಗಳು, ನೈಸರ್ಗಿಕ ಏರ್ಪಾಟುಗಳು, ಕನಸು, ಒಬ್ಬರ ಮುಖ ಚಹರೆ ಹೋಲುವ ಮತ್ತೊಬ್ಬರು, ಅಕಾಲಿಕ ಮರಣಗಳು ಗೊಂದಲವನ್ನು ಉಂಟುಮಾಡಿ ಅದು ಕ್ರಮೇಣ ನಂಬಿಕೆಯಲ್ಲಿ ಪರಿವರ್ತಿತವಾಯಿತು ಎಂದು ಗಮನಿಸಬಹುದು. ಹುಟ್ಟಿನ ಬಗ್ಗೆ ಜ್ಞಾನವಿಲ್ಲದೆ , ವಂಶವಾಹಿಯ ಹುಡುಕಾಟ ಇನ್ನೂ ಆಗದಿದ್ದ ಸಮಯದಲ್ಲಿ ಲೈಂಗಿಕ ಸಂಪರ್ಕದಲ್ಲಿ ವಿಶೇಷಾನುಭವ ಪಡೆಯುತ್ತಿದ್ದ ಮಾನವ ಲೈಂಗಿಕ ಅವಯವವನ್ನು ಪೂಜಿಸುವ ಕ್ರಿಯೆ ಪ್ರಾರಂಬಿಸಿರಬೇಕು. ಮೊದಲಿಗೆ ಕಾಡಿನಲ್ಲಿ ನೀರಿನ ಮೂಲಕ್ಕೆ ಹತ್ತಿರವಿದ್ದ ಮಾನವರು ತಮಗೆ ಅನ್ನ ನೀಡುವ ಕಾಡು-ಮೇಡು, ಬೆಟ್ಟ-ನದಿ, ಪ್ರಾಣಿ-ಪಕ್ಷಿ ಇತ್ಯಾದಿಯಲ್ಲಿ ಆತ ಆತ್ಮದ ಹುಡುಕಾಟ ಮತ್ತು ದೇವರ ಅಸ್ತಿತ್ವವನ್ನು ಕಂಡುಕೊಂಡಿದ್ದು. ಇದು ಮುಂದುವರೆದು ನಿಸರ್ಗವನ್ನೇ ದೇವರೆಂದು ಪೂಜಿಸುವ ನಂಬಿಕೆಗೆ ನಾಂದಿ ಹಾಡಿತು. ಅಪರಿಮಿತ ಆಗಸ, ಅಲ್ಲಿಂದ ಉದಯಿಸುವ ಸೂರ್ಯ ಚಂದ್ರ ತಾರೆಗಳು, ಮಳೆ, ಮೋಡ, ಮಿಂಚು ಗುಡುಗು, ಭಯದ ಜೊತೆಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಸುಳ್ಳಲ್ಲ, ಅದೇ ಮುಂದುವರೆದು ಆಗಸದಲ್ಲಿ ದೇವರ ಅಸ್ತಿತ್ವವನ್ನು ಸ್ಥಾಪಿಸಿತು. ಆಕಾಶವನ್ನು ಅಳೆದೂ ತೂಗಿ ಸಂಶೋಧನೆ ಮಾಡುತ್ತಿರುವ ಇಂದಿನ ಆಧುನಿಕ ಪ್ರಪಂಚದಲ್ಲೂ ನಾವು ದೇವರನ್ನು ಆಗಸದಲ್ಲೇ ಇಟ್ಟಿದ್ದೇವೆ.
ಕಾಲ ಮುಂದುವರೆದು ಮಾನವನ ಮೆದುಳು ವಿಕಾಸಗೊಂಡು ಚಿಂತನ ಮಂಥನದಿಂದ ಉಡಾಯಿಸಿದ ವಿಜ್ಞಾನ ತಂತ್ರಜ್ಞಾನದ ನಡುವೆಯೂ ನಂಬಿಕೆ ಮತ್ತು ಧಾರ್ಮಿಕ ಕಟ್ಟಳೆಗಳನ್ನು ಮುಂದುವರೆಕೊಂಡು ಬಂದಿದ್ದು ಸೋಜಿಗ. ಇದಕ್ಕೆ ಮುಖ್ಯ ಕಾರಣ ಪುರೋಹಿತಶಾಹಿ ವರ್ಗ. ಪುರಾತನ ಸಮುದಾಯದಲ್ಲಿ ಮುಖ್ಯ ಸ್ಥಾನ ಇದ್ದದ್ದು ಔಷಧಿ ಕೊಡುವ ವ್ಯಕ್ತಿಗೆ ಆಗಿತ್ತು. ಸಮುದಾಯದ ಖಾಯಿಲೆ-ಕಸಾಲೆಗೆ ಎಲ್ಲರೂ ಹೋಗುತ್ತಿದ್ದುದು ಈ ವೈದ್ಯನ ಬಳಿಯೇ. ಆತ ಗಿಡಮೂಲಿಕೆಗಳ ಜೊತೆಗೆ ಆತನ ಪ್ರಭಾವ ಮತ್ತು ಔಷಧೀಯ ಮೆರುಗು ಹೆಚ್ಚಿಸಲು ಅಶರೀರ ವಾಣಿಯ ಆವಾಹನೆ ಆದಂತೆ, ಅಥವಾ ಅದಕ್ಕೊಂದು ದೈವೀಕ ಶಕ್ತಿಯನ್ನು ಆಪಾದಿಸಿದ ಎಂದು ಮಾನವನ ವಿಕಾಸ ಮತ್ತು ನಂಬಿಕೆಗಳ ಹುಟ್ಟನ್ನು ಸಂಶೋಧಿಸಿದ ವಿಜ್ಞಾನಿಗಳು. ಅವರು ಇಂದಿಗೂ ಕಾಡುಗಳಲ್ಲಿ ಆಧುನಿಕ ಜಗತ್ತಿನ ಸಂಪರ್ಕವೇ ಇಲ್ಲದೆ ವಾಸಿಸುತ್ತಿರುವ ಮೂಲನಿವಾಸಿ ಸಮುದಾಯಗಳನ್ನು ಅಭ್ಯಾಸ ಮಾಡಿ ಇದನ್ನು ಕಂಡು ಕೊಂಡಿದ್ದಾರೆ. ಇದೆ ವೈದ್ಯ ಸಮುದಾಯವಾಗಿ ಪುರೋಹಿತಶಾಹಿ ವರ್ಗದ ಉಗಮಕ್ಕೆ ನಾಂದಿ ಹಾಡಿತು. ಸಮುದಾಯಗಳು ದೊಡ್ಡದಾಗಿ ಬೇರೆ ಬೇರೆ ಚಿಕ್ಕ ಗುಂಪುಗಳು ಸೃಷ್ಟಿಯಾದರೂ ವಂಶಪಾರಂಪರ್ಯವಾಗಿ ದಾಟಿಸಿದ ಔಷಧಿ ಜ್ಞಾನ ಮತ್ತು ಪೂಜೆ ಇತ್ಯಾದಿ ದೊಂಬರಾಟದ ಆಚರಣೆಗೆ ಈ ವರ್ಗವೇ ಉಸ್ತುವರಿಯಾಯಿತು. ಅವರೇ ಇಂದಿನ ಆಧುನಿಕ ಕಾಲಘಟ್ಟದಲ್ಲೂ ಆಡಳಿತ ವ್ಯವಸ್ಥೆ ಸಮುದಾಯ ವ್ಯವಸ್ಥೆ ಮೆಳ್ಳೆ ತಮ್ಮ ಹಿಡಿತವನ್ನು ಹಿಂದೆಂದಿಗಿಂತಲೂ ಹೆಚ್ಚು ಹೊಂದಿದ್ದು ತಲೆಮಾರಿನಿಂದ ತಲೆಮಾರಿಗೆ ನಂಬಿಕೆಯ ಗಂಟನ್ನು ದಾಟಿಸುತ್ತಾ ಬಂದಿದ್ದಾರೆ. ನಿಸರ್ಗದ ಮೇಲಿನ ಅವಲಂಬನೆ ಮತ್ತು ಇತರ ಜೀವಿಗಳ ನಡುವಿನ ಸಹಬಾಳ್ವೆಯನ್ನು ದೈವ ಎಂದು ಪೂಜಿಸುವ ಮೂಲ ನಿವಾಸಿಗಳು ಮತ್ತು ದೇವರು ಎಂಬ ಸೃಷ್ಟಿಕರ್ತ, ಆತನ ಸೃಷ್ಟೀವಾಣಿ, ಆತನಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳು ಇತ್ಯಾದಿ ಬಹಳ ಪ್ರಭಲ ಆಧುನಿಕ ಸಮಾಜದ ಧಾರ್ಮಿಕ ನಂಬಿಕೆ ವ್ಯವಸ್ಥೆ ನಮ್ಮ ನಡುವಿದೆ.
ಸಂಪಾದಕರು ‘’ ನನ್ನ ದೇವರು’’, ವಿಚಾರವಾಗಿ ನನ್ನನ್ನು ಲೇಖನಕ್ಕಾಗಿ ಕೇಳಿದಾಗ ಅಚ್ಚರಿಯಾಯಿತು. ದೇವರ ಅಸ್ತಿತ್ವವನ್ನೇ ನಿರಾಕರಿಸುವ ನನಗೂ ಒಬ್ಬ ದೇವಾನಿರುವನೆ? ಆತ ನನ್ನನ್ನು ಆಗಾಗ ಕಾಡುವನೆ? ಅವನನ್ನು ನಾನು ಹೇಗೆ ಸಂಬಾಳಿಸುತ್ತೇನೆ, ಮನುಷ್ಯ ಸಹಜವಾದ ಪ್ರಶ್ನೆಗಳು, ಕುತೂಹಲ, ಜ್ಞಾನ ದಾಹ, ಅನ್ವೇಷಣೆ ಮನೋಭಾವದ ಯಾವುದೇ ವ್ಯಕ್ತಿಗೆ ದೇವರ ಅಸ್ತಿತ್ವ ಒಪ್ಪುವುದು ಸಾದ್ಯವೇ? ಎಂಬ ಬಗ್ಗೆ ಗೊಂದಲವಾಯಿತು.
ನನ್ನು ಹುಟ್ಟಿದ ಮನೆ, ಸ್ವಲ್ಚ ವಿಶೇಷವಾದದ್ದು. ಅದರ ಬಗ್ಗೆ ಹೇಳುವುದು ಉತ್ತಮ ಎಂದು ಅನಿಸುತ್ತದೆ. ಜಾತಿ ಧರ್ಮಕ್ಕೆ ತಿಲಾಂಜಲಿ ಕೊಟ್ಟು, ಜಾತಿ ತಾರತಮ್ಯಕ್ಕೆ ಮನೆ ಬಿಟ್ಟ ಅಪ್ಪ ಕ್ರೈಸ್ತ ಧರ್ಮದ ಹುಡುಗಿಯೊಂದಿಗೆ ಪ್ರೇಮಿಸಿದ ಪಲಿತಾಂಶವೆ ನಾನು. ಹಾಗಾಗಿ ಚಿಕ್ಕಂದಿನಿಂದಲೇ ಮನೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ, ದೇವರು ಇತ್ಯಾದಿ ಪೂಜೆ ಪುನಸ್ಕಾರದ ಆದಿಯಾಗಿ ಏನು ಇರಲಿಲ್ಲ. ನನ್ನ ಬಾಲ್ಯ ಬ್ರಾಹ್ಮಣ ಅಗ್ರಹಾರದಲ್ಲೂ ನಂತರ ಪುಣ್ಯ ಕ್ಷೇತ್ರ ಎಂದು ಕರೆಸಿಕೊಳ್ಳುವ ಶೃಂಗೇರಿಯಲ್ಲಿ ನನ್ನ ವಾಸವಾದರೂ ದೇವರು ನನ್ನ ಬಳಿ ಬಂದದ್ದು, ಅಥವಾ ನಾನು ದೇವರ ಬಳಿ ಹೋಗಿದ್ದು ಕಡಿಮೆಯೇ. ಚಿಕ್ಕಂದಿನಲ್ಲಿ ಪುರೋಹಿತರ ಮನೆಗಳಲ್ಲಿ ಸಮಯ ಕಳೆದ ಕಾರಣ ಪೂಜೆ, ಸಂದ್ಯಾವಂದನೆ ಇತ್ಯಾದಿ ಆಚರಣೆ ನಕಲು ಮಾಡುವುದು, ಅನುಕರಣೆ ಮಾಡುವುದು ಮಾಡುತ್ತಿದ್ದೆ, ನಂತರ ಸ್ನೇಹಿತರ ಜೊತೆಗೆ ದೇವಸ್ಥಾನಕ್ಕೆ ಆಟವಾಡಲು ಹೋಗುತ್ತಿದ್ದ ನಾನು ಅವರಂತೆ ನಮಸ್ಕರಿಸುವುದು ಇತ್ಯಾದಿ ಮಾಡಿದ್ದು ಬಿಟ್ಟರೆ ನಾನು ದೇವರಲ್ಲಿ ನನ್ನಲ್ಲಿ ದೇವರ ಆವಾಹನೆ ಆಗಿದ್ದು ಅಥವಾ ದೇವರನ್ನು ಸಂಬಾಳಿಸಬೇಕಾದ ಅನಿವಾರ್ಯತೆ ಬಂದದ್ದು ಇಲ್ಲ. ! ನಂಬಿಕೆಯನ್ನು ಅತಿಯಾಗಿ ಹೊಂದಿರುವ ಹಲವಾರು ಜನರು ಹೇಳುವಂತೆ ಕನಸಲ್ಲಿ ದೇವರಗಲಿ ದೆವ್ವವಾಗಲಿ ನನ್ನನ್ನು ಇನ್ನೂ ಸಂಧಿಸಿಲ್ಲ.
ದೇವರ ಅವಶ್ಯಕತೆ ಹೆಚ್ಚಿನವರಿಗೆ ಬೇಕಾಗಿರುವುದು ನಿರ್ಧಾರದ ಸಮಯದಲ್ಲಿ, ಪ್ರಯತ್ನದ ಸಮಯದಲ್ಲಿ, ಫಲಿತಾಂಶದ ಸಮಯದಲ್ಲಿ ಇಲ್ಲವೇ ಅನ್ಯಾಯ ಮಾಡುವಲ್ಲಿ ಕ್ಷಮೆಯ ಮಾರ್ಗವಾಗಿ. ನಮ್ಮ ಮೇಲೆ ನಮಗೆ ಭರವಸೆ ಇರುವಾಗ,ಮಾಡುವ ಕೆಲಸದ ಬಗ್ಗೆ ಮಾಹಿತಿ ಇರುವಾಗ, ಪ್ರಯತ್ನವನ್ನು ಸಂಪೂರ್ಣವಾಗಿ ಮತ್ತು ಪ್ರಾಮಾಣಿಕವಾಗಿ ಮಾಡುವಾಗ ನಮಗೆ ದೇವರ ಅವಶ್ಯಕತೆ ಯಾಕಾಗಿ ಇರುತ್ತದೆ.?
ಕೆಲವರು ನಮ್ಮ ಮಾನಸಿಕ ನೆಮ್ಮದಿಗೆ, ಸಮಾಜ ಸರಿದಾರಿಯಲ್ಲಿ ನಡೆಯಲು, ಸತ್ಯ-ನಿಷ್ಟೆ ಇತ್ಯಾದಿ ಒಳ್ಳೆಯ ಅಂಶಗಳು ಸಮಾಜದಲ್ಲಿ ಇರಲು ದೇವರು-ನಂಬಿಕೆಯ ವ್ಯವಸ್ಥೆ ಬೇಕು ಎಂದು ವಾದಿಸುತ್ತಾರೆ. ಜೀವಿಗಳ ವಿಕಾಸ ಆಗುತ್ತಾ ಹೋದಂತೆ ಬದುಕುಳಿಯುವ ಜೀವಿಗಳು ತಮ್ಮ ಅಸ್ತಿತ್ವವನ್ನು ಸ್ಥಿರಗೊಳಿಸಿಕೊಳ್ಳುವ ದಿಶೆಯಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಯಿತು ವಿವಿಧ ಭಾವನೆಗಳು, ಪ್ರವೃತ್ತಿಗಳು, ಸರಿ-ತಪ್ಪು, ನೈತಿಕ ಅನೈತಿಕಗಳ ವರ್ಗೀಕರಣ, ದೈವತ್ವ ಮತ್ತು ಧರ್ಮಗಳ ಉಗಮಕ್ಕಿಂತ ಮುಂಚೆ ಪರಿಸರದ ಇತರ ಜೀವಿಗಳನ್ನು ಅನುಕರಿಸಿ ಮಾನವ ಕಲಿತ ಎಂದು ಕೋವುರ್ ತಮ್ಮ ಲೇಖನದಲ್ಲಿ ಬರೆಯುತ್ತಾರೆ. ಹಾಗಾಗಿ ನಂಬಿಕೆ ಧರ್ಮಗಳ ಹೊರತಾಗಿಯೂ ನಾವು ಆರೋಗ್ಯವಂತ ಸಮಾಜವನ್ನು ಸೃಷ್ಟಿಸಬಹುದು ಮತ್ತು ಇರಬಹುದು. ಇಂದಿನ ಕಾಲಘಟ್ಟದಲ್ಲಂತೂ ದೇವರು-ಧರ್ಮದ ಕಾರಣಕ್ಕೆ ಜಗತ್ತು ಅಶಾಂತಿಯ ಬೀಡಾಗಿದೆ, ಹೆಚ್ಚಿನ ಸಾವು-ನೋವು, ಹಿಂಸೆ, ವಿನಾಶ ದೇವರು-ಧರ್ಮದ ಹೆಸರಲ್ಲೇ ಸಂಭವಿಸುತ್ತಿವೆ. ನಂಬಿಕೆ ಧರ್ಮದ ಆಚರಣೆಯನ್ನು ಹೊಂದಿರದ ನಾಸ್ತಿಕರು ಹೆಚ್ಚಿರುವ ಕಡೆ ಸುಭಿಕ್ಷೆ ಇದೆ. ಮಾನಸಿಕ ಖಾಯಿಲೆ ಹೆಚ್ಚಾಗಿರು ಇಂದಿನ ದಿನದಲ್ಲಿ ಮಾನಸಿಕ ಸ್ವಾಸ್ತ್ಯಕ್ಕೆ ಆಧುನಿಕ ವೈದ್ಯ ಪದ್ಧತಿಯ ಮೊರೆ ಹೋಗಬೇಕೆ ಹೊರತು ನಂಬಿಕೆಯ ಕಡೆಗಲ್ಲ. ಅದು ಕ್ಷಣಿಕ ನೆಮ್ಮದಿ ತಂದುಕೊಟ್ಟರು ಚೇತರಿಸಿಕೊಳ್ಳಲಾಗದ ವಿಘಟನೆಗೆ ನಮ್ಮನ್ನು ತಳ್ಳುತ್ತದೆ.
ಇದಕ್ಕೂ ಮೀರಿದ ಆಧ್ಯಾತ್ಮಿಕ ಸಾಧನೆಗೆ ನಂಬಿಕೆಗಳು ಬೇಕೇ ಎಂದಾದಲ್ಲಿ ನಾವು ಹಳಸಿರುವ ನಂಬಿಕೆಗಳನ್ನು ಆಚರಣೆಗಳು ಮತ್ತಷ್ಟು ಮುಘ್ದವಾಗಿ, ಮೂಢರಾಗಿ ಮಾಡುವ ಬದಲು ಆಧ್ಯಾತ್ಮಿಕ ಅನ್ವೇಷಣೆ; ಹುಡುಕಾಟ ಮಾಡುವ ಅವಶ್ಯಕತೆಯಿದೆ.

2 comments to “ನನ್ನ ದೇವರು-ಕೃಷಿಕ್ ಎ.ವಿ”
  1. ನೀವು ಹೇಳಿದ್ದು ಅಕ್ಷರಸ್ಥ ನಿಜ.ಮನುಷ್ಯನಿಗೆ ವಾಸ್ತವ ದ ಅರಿವಾ ದರೆ ಈ ಎಲ್ಲ ದರ ಗೂಡವೆ , ಗೂಂದಲಗಳು ದೂರಾಗುತ್ತವೆ.

  2. ಪ್ರಕೃತಿ ಮಾನವನನ್ನ ಸೃಷ್ಟಿಸಿತು ಮಾನವ ದೇವರನ್ನು ಸೃಷ್ಟಿಸಿದ. ದೇವರು ಬೆಳೆದ. ಪ್ರಕೃತಿ ನಾಶವಾಯಿತು.

ಪ್ರತಿಕ್ರಿಯಿಸಿ