ಯೋಗಿ ಆದಿತ್ಯನಾಥ ಕೇವಲ ಸಂಘ ಪರಿವಾರದ ಸೃಷ್ಟಿ ಮಾತ್ರವಲ್ಲ, ಜಾತ್ಯಾತೀತ ಪಕ್ಷಗಳದ್ದೂ ಹೌದು

ಮುಖವಾಡಗಳು ಕೊನೆಗೂ ಕಳಚಿ ಬಿದ್ದಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ನಂಬಿಕೆಯ ಬಂಟ ಹಾಗೂ ಬಿಜೆಪಿ ರಾಷ್ಟ್ರ‍ಾಧ್ಯಕ್ಷರಾದ ಅಮಿತ್ ಷಾ, ಇನ್ನು ಮುಂದೆ ಮುಖವಾಡಗಳ, ತೆರೆಮೆರೆಯ ಆಟಗಳ ಅಗತ್ಯವಿಲ್ಲವೆಂದು ಉದ್ಧಟತನದ ಸೂಚನೆಯನ್ನು ದೇಶ ಮಾತ್ರವಲ್ಲ ಜಗತ್ತಿನ ನಾಗರೀಕರಿಗೆ ನೀಡಿದ್ದಾರೆ. ಮುಖ್ಯವಾಹಿನಿಗೆ ಸೇರಿದ ಎಷ್ಟೋ ಮಾಧ್ಯಮ ವಿಮರ್ಶಕರು, ೨೦೧೭ನೇ ಸಾಲಿನ ಉತ್ತರಪ್ರದೇಶ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವು, “ಹೊರಗಿನವರಾದ” ಮುಸಲ್ಮಾನರ ವಿರುದ್ಧ ಬಲವರ್ಧಿತಗೊಂಡ ಹಿಂದೂ ಮತಗಳು ಅಲ್ಲವೇ ಅಲ್ಲ ಎಂದು ಅಲ್ಲಗಳೆದು ವಾದಿಸಿ ಪುಟಗಳನ್ನು ವ್ಯರ್ಥ ಮಾಡಿದರೇ ಹೊರತು, ನಮ್ಮನ್ನಂತೂ ನಂಬಿಸಲಿಲ್ಲ. ಅವರ ಪ್ರಕಾರ, ಈ ಗೆಲುವು ಜಾತಿ-ಸಮುದಾಯಗಳನ್ನು ಮೀರಿದ ‘ಸಬ್ ಕಾ ವಿಕಾಸ್’ (ಎಲ್ಲರ ಏಳಿಗೆ) ಎಂಬ ಧ್ಯೇಯ ವಾಕ್ಯಕ್ಕಾಗಿತ್ತು ಮತ್ತು ಮೋದಿ, ಬಡವರ ಜೀವನವನ್ನು ಉದ್ಧಾರ ಮಾಡುವ ಹೊಸ ಇಂದಿರಾ ಗಾಂಧಿಯಾದರು.

ಹಲವು ಹಿಂದೂ ಮತದಾರರು ಮಾತ್ರ ಈ ಫಲಿತಾಂಶವನ್ನು ಬೇರೆಯೇ ರೀತಿಯಾಗಿ ನೋಡಿದರು. ಕೆಲವು ತಿಂಗಳ ಹಿಂದೆ, ಹೇಗೆ ಜನ ಡೊನಾಲ್ಡ್ ಟ್ರಂಪ್ ನ ಚುನಾವಣಾ ಗೆಲುವನ್ನು ಅರ್ಥೈಸಿದರೋ, ಹಾಗೆಯೇ, ಬಿಜೆಪಿಯ ಗೆಲುವನ್ನು, ಬಹುಸಂಖ್ಯಾತರ ವಿಜಯದ ಮತವಾಗಿ, ಮುಸ್ಲಿಮ್ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಮತವಾಗಿ ನೋಡಿದರು. ಈ ಮತ ತಮ್ಮ ದ್ವೇಷ ಹಾಗೂ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ಅಧಿಕೃತಗೊಳಿಸಿದವು ಎಂದು ಅವರು ನಂಬಿದ್ದಾರೆ. ನಾನು ಉತ್ತರಪ್ರದೇಶದ ಗೋರಖ್ ಪುರ ಜಿಲ್ಲೆಯ ಹಳ್ಳಿಗಳಲ್ಲಿ ಅಂಟಿಸಿದ್ದ ನೋಟೀಸ್ ಹೊಂದಿದ್ದ ಫೇಸ್ಬುಕ್ ಪೋಸ್ಟ್ ನೋಡಿದೆ .

ಜೈ ಶ್ರೀ ರಾಮ್ – ಎಂದು ರಾಮಜನ್ಮಭೂಮಿ ಹೋರಾಟದ ಧ್ಯೇಯ ವಾಕ್ಯದೊಂದಿಗೆ ಶುರುವಾಗುವ ಈ ನೋಟೀಸ್, ಮುಸ್ಲಿಮರು ಈ ವರ್ಷ ಕೊನೆಯಾಗುವ ಮೊದಲು ಊರು ಬಿಟ್ಟು ಹೋಗಬೇಕೆಂದು ಸೂಚಿಸುತ್ತದೆ. ಹಾಗೇನಾದರೂ ಅವರು ಬಿಟ್ಟು ಹೋಗದಿದ್ದರೆ, ಮುಂದಾಗುವ ಎಲ್ಲಾ ಪರಿಣಾಮಗಳಿಗೆ ಅವರು ಮಾತ್ರವೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆಯನ್ನೂ ನೀಡುತ್ತದೆ. ಗೋರ‍ಖ್ ಪುರದ ಸಂಸದನಾದ ಯೋಗಿ ಆದಿತ್ಯನಾಥನ ಪೋಷಣೆ ಮತ್ತು ಸಂರಕ್ಷಣೆಯಲ್ಲಿರುವವರೂ ಎಂದು ಹೇಳಲಾಗುವ ಹಳ್ಳಿಯ ಹಿಂದೂಗಳ ಹಸ್ತಾಕ್ಷರಗಳೂ ಆ ನೋಟೀಸ್ ನಲ್ಲಿವೆ.

ಯಾವುದೇ ಮುಲಾಜಿಲ್ಲದೇ ದ್ವೇಷದ ಮಾತುಗಳನ್ನು ಕಕ್ಕುತ್ತಾ, ಚಕಮಕಿಗೆ ಈಡಾಗುವ ಯೋಗಿ ಆದಿತ್ಯನಾಥನಂತವರನ್ನು, ದೇಶದ ಅತಿ ಹೆಚ್ಚಿನ ಜನಸಂಖ್ಯೆಯಿರುವ ರಾಜ್ಯದ ಮುಖ್ಯಮಂತ್ರಿಯ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಮೋದಿ ಮತ್ತು ಷಾ, ನಿಸ್ಸಂದೇಹವಾಗಿ ತೀವ್ರವಾದಿ ಹಿಂದುತ್ವವೇ ತಮ್ಮ ಪಕ್ಷದ ಅಸ್ಮಿತೆ ಎಂದು ಲಜ್ಜೆಗೆಟ್ಟವರಂತೆ ತೋರಿದ್ದಾರೆ.

ಪ್ರಚೋದನಾಕಾರಿ ಭಾಷಣಗಳು

ಈಗಾಗಲೇ ಮೋದಿ ಮತ್ತು ಷಾರವರ ಚುನಾವಣಾ ಭಾಷಣಗಳು, ಪಕ್ಷ ಆಯ್ಕೆ ಮಾಡಿರುವ ದಿಕ್ಕನ್ನು ಸೂಚಿಸುತ್ತಿದೆ. ಆದಿತ್ಯನಾಥರ ಭಾಷಣಗಳು ಮುಖಕ್ಕೆ ರಾಚುವಷ್ಟು ವಿಷಪೂರಿತ ಮತ್ತು ಅಪಾಯಕಾರಿಯಾಗಿರುವವು. ಮೋದಿ ಮತ್ತು ಷಾ ಆದಿತ್ಯನಾಥನರನ್ನು ತಾವೇ ಕೈಯಾರೆ ಆಯ್ಕೆ ಮಾಡಿದ್ದಾಗಿನಂದಲೂ, ಸಾಮಾಜಿಕ ಜಾಲತಾಣಗಳಲಿ ಬರೀ ಯೋಗಿಯ ಘೋಷಣೆಗಳೇ ತುಂಬಿವೆ. ಇಲ್ಲಿ ನಾನು ಅಂತಹದೊಂದು ಸಂಕಲನದ ಮೇಲೆ ಅವಲಂಬಿಸುತ್ತೇನೆ.

ನಿಸ್ಸಂದೇಹವಾಗಿ ಇದೇ ಆತನ ಉದ್ದೇಶ: “ಇಡೀ ಉತ್ತರಪ್ರದೇಶ ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ವರೆಗೂ ನಾನು ನಿಲ್ಲಲಾರೆ.” ಕೋಮುಹಿಂಸೆಗೆ ಮುಸ್ಲಿಮರೇ ಕಾರಣ ಎಂಬುದು ಆತನ ನಿಲುವು: “ಯಾವ ಯಾವ ಪ್ರದೇಶಗಳಾಲ್ಲಿ ಅಲ್ಪಸಂಖ್ಯಾತರ ಜನಸಂಖ್ಯಾ ಪ್ರಮಾಣ ಶೇಕಡಾ ೧೦-೨೦ರಷ್ಟು ಇರುವುದೋ, ಅಲ್ಲಿ ಕೋಮುಗಲಭೆಯ ನಿದರ್ಶನಗಳು ಅಪರೂಪ. ಎಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇಕಡ ೨೫-೩೦ ರಷ್ಟು ಇದೆಯೋ ಅಲ್ಲಿ ಗಂಭೀರ ಮಟ್ಟದ ಕೋಮುಗಲಭೆಗಳು ನಡೆಯುತ್ತವೆ ಮತ್ತು ಎಲ್ಲಿ ಅದು ಶೇಕಡಾ ೩೫% ಕ್ಕಿಂತಾ ಹೆಚ್ಚಾಗುವುದೋ ಅಲ್ಲಿ ಮುಸ್ಲಿಮೇತರಿಗೆ ಜಾಗವಿಲ್ಲ.”

ಬಹಳಷ್ಟು ವರದಿಗಳು “ಕೈರಾನದ ಹಿಂದೂಗಳ ವಲಸೆ”ಯ ಸುದ್ದಿಯನ್ನು ಸುಳ್ಳೆಂದು ಅಲ್ಲಗೆಳೆದಿದ್ದರೂ, ” ಅಲ್ಲಿ ಹಿಂದೂಗಳ ಜನಸಂಖ್ಯೆಯ ಪ್ರಮಾಣ ಶೇಕಡಾ ೬೮ರಿಂದ ೮ಕ್ಕೆ ಇಳಿದಿದೆ” ಎಂದು  ಈಗಿನ “ಸತ್ಯೋತ್ತರ” ಯುಗದ ಹುಮ್ಮಸ್ಸಿನಲ್ಲಿ ಯೋಗಿ ವಾದಿಸುತ್ತಾರೆ. ಇದಕ್ಕೆ ಉತ್ತರ ಪ್ರದೇಶದ ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದ “ಸೂಡೋ-ಸೆಕ್ಯುಲರ್ ಮತ್ತು ಓಲೈಕೆಯ” ನೀತಿಗಳೇ ಕಾರಣ ಎಂಬುದು ಅವರ ನಂಬಿಕೆ. ಅವರ ಪ್ರಕಾರ, ಈ ಸರ್ಕಾರಗಳು “ಜಾತ್ಯಾತೀಯತೆಯ ಹೆಸರಲ್ಲಿ ಬಹುಸಂಖ್ಯಾತರ ವಿರುದ್ಧ ತಿರುಗಿ ಬೀಳುತ್ತವೆ.”

ಉತ್ತರಪ್ರದೇಶದಲ್ಲಿನ ಸರ್ಕಾರಗಳು ಹೆಣ ಹೂಳಲು ಜಾಗ ಕೊಡುತ್ತವಯೇ ಹೊರತು, ಹೆಣ ಸುಡಲು ಕೊಡುವುದಿಲ್ಲ ಎಂಬ ಇವರ ಮತ್ತೊಂದು ಸುಳ್ಳು, ಪ್ರಧಾನ ಮಂತ್ರಿ ಮೋದಿಯವರ ಭಾಷಣದಲ್ಲಿ ಪ್ರತಿಧ್ವನಿಸಿತು. “ಕೈರಾನದ ಹಿಂದೂ ವಲಸೆ, ಲವ್ ಜಿಹಾದ್, ಮಹಿಳೆಯರ ರಕ್ಷಣೆಯಂತಹ ಸಮಸ್ಯೆಗಳಿಂದ, ಪಶ್ಚಿಮ ಉತ್ತರ ಪ್ರದೇಶ ಮತ್ತೊಂದು ಕಾಶ್ಮೀರವಾಗುವ ಅಪಾಯವಿದೆ”, ಎಂಬುದು ಆದಿತ್ಯನಾಥರ ನಿಲುವು.

ಇವೆಲ್ಲಕಿಂತಲೂ ಹೆಚ್ಚಿನ ಭಯಹುಟ್ಟಿಸುವ ಸಂಗತಿಯೆಂದರೆ  ಅವರು ಮುಸ್ಲಿಮರಿಗೆ ಖುಲ್ಲಂಖುಲ್ಲವಾಗಿ ಹಾಕುವ ಬೆದರಿಕೆಗಳು. “ಪ್ರತಿಬಾರಿ ಯಾವುದೇ ಒಬ್ಬ ಹಿಂದು ವಿಶ್ವನಾಥ ಮಂದಿರಕ್ಕೆ ಬಂದರೆ, ಗ್ಯಾನ್ವಾಪಿ ಮಸೀದಿ ನಮ್ಮನ್ನು ಹಂಗಿಸುತ್ತದೆ. ನಮಗೇನಾದರೂ ಅವಕಾಶ ಪ್ರತೀ ಮಸೀದಿಯಲ್ಲೂ ಮಾತೆ ಗೌರಿ, ಗಣೇಶ, ನಂದಿಯನ್ನು ಪ್ರತಿಷ್ಟಾಪಿಸಿ ಬಿಡುತ್ತೇವೆ.” ರಾಮ ಮಂದಿರ ನಿರ್ಮಾಣವೂ ಅವರ ಬಹುಮುಖ್ಯವಾದ ಅಜೆಂಡಾಗಳಲ್ಲಿ ಒಂದು. “ಬಾಬ್ರಿ ಮಸೀದಿಯು ನೆಲಸಮವಾಗುವುದನ್ನು ತಡೆಯಲು ಸಾಧ್ಯವಾಗದೇ ಇದ್ದಾಗ, ಈ ಮಂದಿರ ನಿರ್ಮಾಣವಾಗುವುದನ್ನು ಹೇಗೆ ತಡೆದಾರು?”

ಯೋಗಿ ಆದಿತ್ಯನಾಥ್. ಚಿತ್ರ : ಹಿಂದೂಸ್ತಾನ್ ಟೈಮ್ಸ್

ಇವುಗಳಲ್ಲಿ ಯಾವುದೇ ಘೋಷಣೆಯನ್ನು ಪರಿಗಣಿಸಿದರೂ, ಅವುಗಳ ಪ್ರಚೋದನಾಕಾರಿ ಅಂಶಗಳು ಆ ಹೇಳಿಕೆಗಳನ್ನು ಶಿಕ್ಷಾರ್ಹ ಅಪರಾಧಗಳನ್ನಾಗಿ ಮಾಡುತ್ತವೆ. ಅವರ ವಿರುದ್ಧ ಎಷ್ಟೋ ದ್ವೇಷಾಪರಾಧಗಳು (ಹೇಟ್ ಕ್ರೈಮ್) ದಾಖಲಾಗಿವೆ. ಇವು ಯಾವುದೋ ದೊಂಬಿಯ ಅಂಚಿನಲ್ಲಿರುವ ಕ್ಷುದ್ರಜೀವಿಯ ಅತಿರೇಕದ ಉಚ್ಚಾರಣೆಗಳಲ್ಲ. ಈತ ದೇಶದ  ಅತಿ ದೊಡ್ಡ ರಾಜ್ಯವನ್ನು (ಜನಸಂಖ್ಯೆಯ ಮಟ್ಟಿಗೆ) ಮುನ್ನಡೆಸಲು ಪ್ರಧಾನಿಗಳು ಆಯ್ಕೆ ಮಾಡಿರುವ ಮುಖ್ಯಮಂತ್ರಿ ಅಭ್ಯರ್ಥಿ. ಉತ್ತರಪ್ರದೇಶವೇನಾದರೂ ಒಂದು ಸ್ವಾಯತ್ತ ರಾಷ್ಟ್ರ‍ವಾಗಿದ್ದರೆ, ಅದು  ೨೦ ಕೋಟಿ ಜನಸಂಖ್ಯೆಯೊಂದಿಗೆ, ಜಗತ್ತಿನ ೫ನೇ ಅತಿ ದೊಡ್ಡ ದೇಶವಾಗುತ್ತಿತ್ತು. ಈ ೨೦ ಕೋಟಿಯಲ್ಲಿ ಐದನೇ ಒಂದು ಭಾಗದಷ್ಟು ಜನ ಅಥವಾ ಸುಮಾರು ೪ ಕೋಟಿ ಜನ ಮುಸ್ಲಿಮ್ ಧರ್ಮಕ್ಕೆ ಸೇರ‍ಿದವರಾಗಿರುತ್ತಿದ್ದರು.

ಇಂದು ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಧರ್ಮದವರು ಒಂದು ರೀತಿಯ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಎಲ್ಲಾ ಹಿಂದೂ ಗುಂಪಿನವರು ಜಾತಿ-ಅಂತಸ್ತು ಮೀರಿ ಒಗ್ಗಾಟ್ಟಾಗಿ ಮುಸ್ಲಿಮರ ವಿರುದ್ಧ ಮತ ಹಾಕಿರುವುದು, ಬಿಜೆಪಿಯೂ ಉತ್ತರಪ್ರದೇಶದಂತಹ ಐದನೇ ಒಂದು ಭಾಗದಷ್ಟು ಮುಸ್ಲಿಮರಿರುವ ರಾಜ್ಯದಲ್ಲಿ ಒಬ್ಬ ಮುಸ್ಲಿಮ್ ಅಬ್ಯರ್ಥಿಯನ್ನೂ ಕಣಕ್ಕೆ ಇಳಿಸುವ ಅಗತ್ಯ ಕಾಣದಿರುವುದೂ, ಪ್ರಧಾನ ಮಂತ್ರಿಗಳೂ, ರಾಷ್ಟ್ರ‍ಾಧ್ಯಕ್ಷರೂ ಸೇರ‍ಿದಂತೆ ಪಕ್ಷದ ಇತರ ಅಬ್ಯರ್ಥಿಗಳು ಕೋಮುವಾದದ ಭಾಷೆಯನ್ನು ಬಳಕೆ ಮಾಡಿದ್ದು- ಎಲ್ಲವೂ ಆತಂಕ ಹುಟ್ಟಿಸುವ ವಿಚಾರಗಳು. ಆದರೆ ಇಂತಹ ದೊಡ್ಡ ಬಹುಸಂಖ್ಯಾತರ ವಿಜಯದ ಹೊರತಾಗಿಯೂ, ಇವರು ಒಂದು ಜವಾಬ್ದಾರಿಯುತ ಸರ್ಕಾರವನ್ನು ನಡೆಸುತ್ತಾರೆ ಎಂದು ಕೆಲವು ಮುಸ್ಲಿಮರು ಆಶಾಭಾವನೆಯನ್ನು ಹೊಂದಿದ್ದರೆ, ಯೋಗಿ ಆದಿತ್ಯನಾಥರ ಆಯ್ಕೆಯು, ಈ ರಾಜ್ಯದಲ್ಲಿ ಅವರ ಸ್ಥಾನ ಏನು ಎಂಬುದರ ಬಗ್ಗೆ ಯಾವ ಸಂದೇಹವೂ ಉಳಿದಿಲ್ಲ.

ಯೋಗಿಯ ಪ್ರಕಾರ, ಗುಜರಾತಿನ ಮುಸ್ಲಿಮರು ೨೦೦೨ರಿಂದ ಇಲ್ಲಿಯವೆರೆಗೆ  ಹೇಗೆ ನೋವುಂಡು ಪಾಠ ಕಲಿತರೋ, ಉತ್ತರ ಪ್ರದೇಶದ ಮುಸ್ಲಿಮರೂ ಪಾಠ ಕಲಿಯಬೇಕಾಗಿದೆ. ಮುಸ್ಲಿಮರು ತಮ್ಮ ನೆರೆಹೊರೆಯ ಹಿಂದೂಗಳ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ಸಾರ್ವಭೌಮತ್ವ ಮತ್ತು ಪ್ರಾಬಲ್ಯವನ್ನು ಒಪ್ಪಿಕೊಂಡರೆ ಮಾತ್ರ, ಅವರಿಗೆ ಅಲ್ಲಿ ಜೀವಿಸಲು “ಅವಕಾಶ” ಮಾಡಿಕೊಡಲಾಗುತ್ತದೆ, ಅದೂ ಎರಡನೇ ದರ್ಜೆಯ ಪ್ರಜೆಯಾಗಿ. ೧೯೨೫ರಲ್ಲಿ ಸೃಷ್ಟಿಯಾದ ರಾಷ್ಟ್ರ‍ೀಯ ಸ್ವಯಂಸೇವಾ ಸಂಘದ ಕನಸಿನ ಭಾರ್ತ ಪರಿಕಲ್ಪನೆ, ತನ್ನ ಶತಮಾನೋತ್ಸವ ಆಚರಿಸುವ ಮೊದಲೇ, ನನಸಾಗುವ ಪರಿಸ್ಥಿತಿ ಬಂದಿದೆ. 

ಜಾತ್ಯಾತೀತತೆಯ ದೋಷಗಳು

ಹೌದು, ಇದು ಆರೆಸ್ಸೆಸ್ಸ್, ಅದರ ಸಿದ್ಧಾಂತಗಳು ಮತ್ತು ಕಾರ್ಯಕರ್ತರ ಗೆಲುವಿನ ಜೊತೆ ಜೊತೆಗೆ ಮೋದಿಯ ತೋಳ್ಬಲದ ಮತ್ತು ವಿಧ್ವಂಸಕ ನಾಯಕತ್ವದ ಗೆಲುವೂ ಹೌದು. ಆದರೆ ಯಾವ ತೋಳ್ಬಲದ ರಾಜಕೀಯ ಮತ್ತು ವಿಭಜನೆಯ ಮಾತುಗಳ ಮೂಲಕ ನಮ್ಮ ಸಂವಿಧಾನಿಕ ಮೌಲ್ಯಗಳಾದ ಭ್ರಾತೃತ್ವ ಮತ್ತು ಸಮಾನತೆ ನೆಲಕಚ್ಚುವಂತೆ ಮಾಡಿದವೋ, ಅಂತಹ ರಾಜಕೀಯದ ಜಯದ ಹೊಣೆಯನ್ನು ಕೇವಲ ಇವರ ಮೇಲೆ ಹೊರಿಸಲಾಗದು. ತಮ್ಮ ಜಾತ್ಯಾತೀತ ಮೌಲ್ಯಗಳನ್ನೂ ಸೇರ‍ಿದಂತೆ, ಅಲ್ಪಸಂಖ್ಯಾತರ ರಕ್ಷಣೆಯ ಬದ್ಧತೆಯನ್ನೂ ಮೂಲೆಗೆ ತಳ್ಳಿರುವ ವಿರೋಧ ಪಕ್ಷಗಳೂ ಸಹ ಈ ಪರಿಸ್ಥಿತಿ ಒದಗಿ ಬರಲು ಕಾರಣಕರ್ತರು.

ಪಶ್ಚಿಮ ಉತ್ತರಪ್ರದೇಶದ ಮುಜ಼ಾಫರನಗರದಲ್ಲಿ ೨೦೧೩ರಲ್ಲಿ ನಡೆದ ಕೋಮು ದಳ್ಳುರಿಯಲ್ಲಿ ಬದುಕುಳಿದವರ ಜೊತೆ ನಾನು ನಿಕಟವಾಗಿ ಕೆಲಸಮಾಡಿರುವುದರಿಂದ, ಇದನ್ನೇ ಒಂದು ಉದಾಹರಣೆಯಾಗಿಟ್ಟುಕೊಂಡು,  ಈ ಊರಿನಲ್ಲಿ ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಡೆಸುವಲ್ಲಿ ವಿರೋಧ ಪಕ್ಷಗಳು ಹೇಗೆ ವಿಫಲರಾದರು ಎಂಬುದನ್ನು ನಾನಿಲ್ಲಿ ವಿವರಿಸುತ್ತೇನೆ.

ಭಾರತ-ಪಾಕ್ ವಿಭಜನೆ ಮತ್ತು ರಾಮಜನ್ಮಭೂಮಿ ಹೋರಾಟದ ಪ್ರಕ್ಷುಬ್ಧ ವಾತಾವರಣದ ಸಮಯದಲ್ಲೂ ಶಾಂತಿ ಕಾಯ್ದುಕೊಂಡ ಮುಜ಼ಾಫರನಗರ ಪ್ರದೇಶಕ್ಕೆ, ಕೋಮು ಸೌಹಾರ್ದತೆಯ ದೊಡ್ಡ ಇತಿಹಾಸವಿದೆ. ಇಂತಹ ಪ್ರದೇಶದಲ್ಲಿ ಕೋಮು ದಳ್ಳುರಿಯ ಉರಿ ಹಚ್ಚುವಲ್ಲಿ ಬಿಜೆಪಿ-ಅರೆಸ್ಸೆಸ್ ಕಾರ್ಯಕರ್ತರ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪಾತ್ರ ಬಹು ವಿನಾಶಕಾರಿಯಾದದ್ದು. ಇಲ್ಲಿಂದಲೇ ಈ ಕಥೆ ಆರಂಭ.

ಬಿಜೆಪಿ ಶಾಸಕ ಸಂಗೀತ್ ಸೋಮ್ ಪಸರಿಸಿದ್ದ ಮುಸ್ಲಿಮ್ ಜನರ ಗುಂಪೊಂದು ಇಬ್ಬರು ಯುವಕರನ್ನು ಥಳಿಸಿ ಕೊಂದ ವಿಡಿಯೋ ನಿಸ್ಸಂದೇಹವಾಗಿ ನಕಲಿ ಎಂದು ಸಾಬೀತಾಗಿದೆ. ಉದ್ರಿಕ್ತ ಗುಂಪಿನಲ್ಲಿದ್ದವರು ಆ ಪ್ರದೇಶದ ಮುಸ್ಲಿಮರೆಂದೂ, ಸತ್ತ ಇಬ್ಬರು ಜಾಟ್ ಯುವಕರು ಒಬ್ಬ ಮುಸ್ಲಿಮ್ ಯುವಕನ ಲೈಂಗಿಕ ಕಿರುಕುಳದಿಂದ ತಮ್ಮ ತಂಗಿಯ ಗೌರವವನ್ನು ಕಾಪಾಡಲು ಪ್ರಯತ್ನಿಸುತ್ತಿದ್ದರೆಂದೂ ಬಹಳ ಅಪಾಯಕಾರಿಯಾದ ಹೇಳಿಕೆಗಳನ್ನು ನೀಡಿದರು. ಪೂರ್ವಾಗ್ರಹ ಪೀಡಿತ ನಮ್ಮೀ ಸತ್ಯೋತ್ತರ ಯುಗದಲ್ಲಿ, ಇವೆಲ್ಲವೂ ಸುಳ್ಳೆಂದೂ, ಆ ವಿಡಿಯೋ ಪಾಕಿಸ್ತಾನದಲ್ಲಿನ ನಡೆದ ಗಲಭೆಯೆಂದೂ, ಆ ಇಬ್ಬರು ಜಾಟ್ ಯುವಕರು ಮತ್ತು ಮುಸ್ಲಿಮರು ಒಬ್ಬರೊನ್ನಬ್ಬರು ಕೊಂದದ್ದೂ ಒಂದು ದ್ವಿಚಕ್ರ ವಾಹನ ಅಪಘಾತದಿಂದ ಭುಗಿಲೆದ್ದ ವಿವಾದದಿಂದಲೇ ಹೊರತು, ಯಾವುದೇ ರೀತಿಯ ಲೈಂಗಿಕ ಕಿರುಕುಳದಿಂದ ಕಾರಣದಿಂದಲ್ಲ, ಎಂಬುದು ಲೆಕ್ಕಕ್ಕೆ ಬರಲೇ ಇಲ್ಲ. ಈ ಎಲ್ಲಾ ಸುಳ್ಳುಗಳು ಈ ದಶಕ ಕಂಡ ಅತಿ ದೊಡ್ಡ (ಕಂದಮಲ್ ಕ್ರೈಸ್ತರ ಮೇಲೆ ನಡೆದ ಹಲ್ಲೆಯ ಘಟನೆಯ ಜೊತೆ) ಕೋಮು ಹಿಂಸೆಯ ಘಟನೆಗೆ  ಕಾರಣವಾದವು.

ಎಷ್ಟೋ ತಲೆಮಾರುಗಳ ಕಾಲ ಜೊತೆಗೆ ಬಾಳಿದ್ದ ನೆರೆಹೊರೆಯವರು, ಇದ್ದಕ್ಕಿಂದಂತೆ ತಮ್ಮ ಮೇಲೆ ತಿರುಗಿಬಿದ್ದು, ತಾವು ವಾಸವಿದ್ದ ಮನೆಗಳನ್ನು ಲೂಟಿ ಮಾಡಲು, ಸುಡಲು ಶುರು ಮಾಡಿದ್ದರಿಂದ, ತಮ್ಮ ಹೆಂಗಸರನ್ನು ಅತ್ಯಾಚಾರ ಮಾಡಿದ್ದರಿಂದ, ಮಕ್ಕಳು-ಹಿರಿಯರೆಂದೂ ನೋಡದೆ ಕೊಂದದ್ದರಿಂದ, ಸುಮಾರು ೭೦ ಸಾವಿರದಿಂದ ಒಂದು ಲಕ್ಷದಷ್ಟು ಮುಸ್ಲಿಮರು ಭಯದಲ್ಲಿ ಹಳ್ಳಿಗಳನ್ನು ಬಿಟ್ಟು ಓಡಿದರು. ಇಲ್ಲಿ ಅರೆಸ್ಸೆಸ್ ನ ಪಾತ್ರ ಭಾರತ-ಪಾಕ್ ವಿಭಜನೆಯ ಕಾಲದ ದಂಗೆಗಳಲ್ಲಿ ವಹಿಸಿದ್ದ ಪಾತ್ರಕ್ಕಿಂತ  ಭಿನ್ನವೇನೂ ಆಗಿರಲಿಲ್ಲ: ದ್ವೇಷಪೂರಿತ ಪ್ರಚಾರ ಮತ್ತು ವದಂತಿಗಳ ಮೂಲಕ ಕೋಮುದ್ವೇಷದ ಹಿಂಸೆಗೆ ಸಂಘ ನಾಂದಿ ಹಾಡಿತು. ಆದರೆ ಇದೆಲ್ಲದರಲ್ಲೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ  ಜಾತ್ಯಾತೀತ ಎಂದು ಕರೆದುಕೊಳ್ಳುವ ಇನ್ನಿತರ ಪಕ್ಷಗಳನ್ನು ನಿಕಟವಾಗಿ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ.

ಆದ ಘಟನೆಯಲ್ಲಿನ ಉತ್ತರಪ್ರದೇಶ ಸರ್ಕಾರದ  ಪಾತ್ರ, ನಡೆದುಕೊಂಡ ರೀತಿ, ವರ್ತನೆ, ಯಾವುದೂ ೨೦೦೨ರಲ್ಲಿ ಗುಜರಾತ್ ಸರ್ಕಾರದ ವರ್ತನೆಗಿಂತ ಸಾಕಷ್ಟು ಭಿನ್ನವಾಗೇನೂ ಇರಲಿಲ್ಲ. ಸರ್ಕಾರವೇನಾದರೂ ಅಚಲವಾಗಿ ನಿಂತು ಆರೆಸ್ಸೆಸ್ಸ್ ವದಂತಿಗಳ ಆಧಾರದ ಮೇಲೆ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಮಾತುಗಳನ್ನಾಡುವ ಮಹಾಪಂಚಾಯತ್ ಗಳಿಗೆ ಅವಕಾಶ ಕೊಡದಿದ್ದರೆ, ಈ ಮಟ್ಟದ ಹಿಂಸಾಚಾರವಾಗುವುದನ್ನು ತಡೆಯಬಹುದಿತ್ತು. ಇಂತಹಾ ಒಂದು ಮಹಾಪಂಚಾಯತ್ ಇಂದಲೇ ರೊಚ್ಚಿಗೆದ್ದ ಜನ ದೊಡ್ಡ ದೊಡ್ಡ ಗುಂಪಿನಲ್ಲಿ ಸೇರಿ ತಮ್ಮ ಮುಸ್ಲಿಮ್ ನೆರೆಹೊರೆಯವರ ಮೇಲೆ ದ್ವೇಷಪೂರಿತ ಹಿಂಸಾಚಾರ ನಡೆಸಲು ಆರಂಭಿಸಿದರು.

ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಸೋತ ಆಡಳಿತದ ಮೃದು ಧೋರಣೆ, ಕೇವಲ ಅವರ ಅದಕ್ಷತೆಯನ್ನು ಸೂಚಿಸಲಿಲ್ಲ, ಅಷ್ಟೇ ಆಗಿದ್ದರೂ ಅದು ಕೆಟ್ಟದೇ ಆಗಿರುತಿತ್ತು. ಆದರೆ ನಿಜವಾದ ಒಂದು ಅನುಮಾನವೆಂದರೆ, ಸರ್ಕಾರವೂ ಸಹ ಹಿಂದೂ-ಮುಸ್ಲಿಮ್ ಗಲಭೆಯಿಂದಾಗುವ ಧ್ರುವೀಕರಣದಿಂದ ಬಿಜೆಪಿಯ ಜೊತೆಜೊತೆಗೂ ತನಗೂ ಲಾಭವಾಗಬಹುದು ಎಂದು ಯೋಚಿಸಿರುವ ಸಾಧ್ಯತೆ. ಇದರ ಫಲವನ್ನು ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಪಡೆಯಬಹುದೆಂಬ ದೂರಾಲೋಚನೆ.

ಮುಜ಼ಫ್ಫಾರ್‌ನಗರ

ದೂರವೇ ಉಳಿದ ಪಾವತಿಗಳು

ಇನ್ನೂ ನಾಚಿಕೆಗೇಡಿನ ವಿಷಯವೆಂದರೆ, ಉತ್ತರ ಪ್ರದೇಶ ಸರ್ಕಾರ  ಈ ಕೋಮುಗಲಭೆಯ ನಿರಾಶ್ರಿತರಿಗೆ ಶಿಬಿರಗಳಲ್ಲಿ ತೋರಿದ ನಿರ್ಲಕ್ಷ್ಯತೆ ಹಾಗೂ ಶತ್ರುತ್ವ. ನಾನು ಅನೇಕ ಬಾರಿ ಈ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದೆ. ಆದರೆ ಅವು ನಾನು ೨೦೦೨ರಲ್ಲಿ ನೋಡಿದ ಗುಜರಾತಿನ ಶಿಬಿರಗಳಿಗಿಂತ ಭಿನ್ನವಾಗಿರಲಿಲ್ಲ. ಎರಡೂ ರಾಜ್ಯ ಸರ್ಕಾರಗಳು ಈ ಹಿಂಸಾಚಾರದಿಂದ ಮನೆಮಠಗಳನ್ನು ಕಳೆದುಕೊಂಡವರಿಗಾಗಿ ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲು ಮತ್ತು ನಡೆಸಲು ನಿರಾಕರಿಸಿದವು.

ಹಿಂಸೆಯಿಂದ ಜರ್ಜರಿತಗೊಂಡ ಇಡೀ ಸಮುದಾಯವನ್ನು ಅವರಷ್ಟಕ್ಕೇ ಬಿಟ್ಟ ಸರ್ಕಾರ, ಅವರನ್ನು ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಲ್ಲ ಬದಲಾಗಿ ಸ್ಥಳೀಯ ಮುಸ್ಲಿಮ್ ಸಂಸ್ಥೆಗಳ ಜವಾಬ್ದಾರಿಯೆಂಬಂತೆ ಕೈ ತೊಳೆದುಕೊಂಡಿತು. ಹೋಗಲೆಲ್ಲೂ ಜಾಗವಿಲ್ಲದೇ ಇದ್ದಿದ್ದರಿಂದ ಕೊರೆವ ಚಳಿಯನ್ನೂ, ಸುಡುವ ಧೂಳುತುಂಬಿದ ಬೇಸಿಗೆಯನ್ನೂ ಮತ್ತು ಸುರಿಯುವ ಮಳೆಯನ್ನು ಪ್ಲಾಸ್ಟಿಕ್ ಅಡಿಯಲ್ಲಿ ನಿಂತು ಅನುಭವಿಸಿದರು. ಮಕ್ಕಳು ಸಾಯುತ್ತಿರುವ ವರದಿಗಳು ಬಂದರೂ, ರಾಜ್ಯ ಸರ್ಕಾರ ಕಿಂಚಿತ್ತೂ ಕರುಣೆ ತೋರ‍ದೆ ಅಚಲವಾಗಿತ್ತು. ೨೦೦೨ರಲ್ಲಿ ನಾವು ಗುಜರಾತಿನಲ್ಲಿ ಕಂಡಂತೆ, ಸರ್ಕಾರದ ಸುಳಿವು ಇಲ್ಲೆಲ್ಲೂ ಇರಲಿಲ್ಲ: ಯಾವುದೇ ರೀತಿಯ ಶೌಚಾಲಯ, ಅರೋಗ್ಯ, ಮಕ್ಕಳ ಆರೈಕೆಯ ಸೌಲಭ್ಯಗಳೂ ಸೇರ‍ಿದಂತೆ, ಜನರ ದೂರುಗಳನ್ನು ದಾಖಲಿಸಲು ಯಾವುದೇ ರೀತಿಯ ಪೊಲೀಸ್ ಔಟ್ ಪೋಸ್ಟ್ ಗಳೂ ಇಲ್ಲಿ ಕಾಣಸಿಗಲಿಲ್ಲ.

೧೧ ವರ್ಷದ ಹಿಂದೆ ಗುಜರಾತ್ ಸರಕಾರದ ವರ್ತನೆಗೂ, ಇಂದಿನ ಉತ್ತರಪ್ರದೇಶ ಸರ್ಕಾರದ ವರ್ತನೆಗೂ ಇದ್ದ ಒಂದೇ ಒಂದು ವ್ಯತ್ಯಾಸವೆಂದರೆ, ತಾವು ತಮ್ಮ ಊರಿಗೆ ಮರಳುವುದಿಲ್ಲ ಎಂದು ನಿರ್ಧರಿಸಿದ ಜನರಿಗೆ ಕೊಟ್ಟ ೨ ಲಕ್ಷ ರೂಪಾಯಿಗಳ ಪರಿಹಾರಧನ. ಇಂತಹ ನೀತಿಯನ್ನು ಹಿಂದೆಂದೂ ಭಾರತ ಅನುಸರಿಸಿದ್ದ ನಿದರ್ಶನಗಳಿಲ್ಲ. ಹಿಂಸಾಚಾರದಿಂದ ನಿರಾಶ್ರಿತರಾದವರನ್ನು ವಾಪಸ್ಸು ತಮ್ಮ ಊರು-ಮನೆಗಳಿಗೆ ಮರಳಲು, ರಾಜ್ಯ ಸರ್ಕಾರ ಅನುವು ಮಾಡಿ ಕೊಡುವುದೇ ಅದರ ಕರ್ತವ್ಯವಾಗಿತ್ತು. ಅದಕ್ಕಾಗಿಯೇ ಸಮುದಾಯಗಳ ನಡುವೆ ಹಳಸಿ ಹೋದ ಸಂಬಂಧಗಳನ್ನು ಪುನರ್ ನಿರ್ಮಿಸುವಲ್ಲಿ ಹಾಗೂ ತಮ್ಮೂರಿಗೆ ಮರಳಿ ಬಂದವರಿಗೆ ಸರಿಯಾದ ರಕ್ಷಣೆ ನೀಡುವಲ್ಲಿ ಆಡಳಿತ ಪ್ರಮುಖ ಪಾತ್ರ ವಹಿಸಬೇಕಾಗಿತ್ತು.

ಆದರೆ, ಇದನ್ನು ಮಾಡುವುದನ್ನು ಬಿಟ್ಟು, ಹಿಂದೂ-ಮುಸ್ಲಿಮರು ಇನ್ನು ಮುಂದೆ ಜೊತೆಯಾಗಿ ಬಾಳಲು ಸಾಧ್ಯವೇ ಇಲ್ಲವೆಂದು ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಂಡು ಬಿಟ್ಟಿದ್ದಲ್ಲದೇ, ಎರಡೂ ಸಮುದಾಯದವರು ತಮ್ಮಷ್ಟಕ್ಕೇ ಪ್ರತ್ಯೇಕವಾಗಿ ಬಾಳಲು ಕುಮ್ಮಕ್ಕನ್ನೂ ನೀಡಿದರು. ಈ ಹಿಂದೆ ಭಾಗಲ್ಪುರ ಮತ್ತು ಗುಜರಾತಿನಲ್ಲಿ ನಡೆದ ಗ್ರಾಮೀಣ ಭಾಗದ ಕೋಮು ಗಲಭೆಗಳಲ್ಲಿ, ಸಾಮಾಜಿಕ ಒಡಕುಗಳು ಹಾಗೇ ಇದ್ದಿದ್ದನ್ನೂ ಮತ್ತು ಎರಡೂ ಸಮುದಾಯದವರು ಸಮನಾಗಿರುವ ಮಿಶ್ರಿತ ಪ್ರದೇಶಗಳಲ್ಲಿ ಮುಸ್ಲಿಮರನ್ನು ಹೊರಹಾಕಿರುವುದನ್ನು ನಾವು ಗಮನಿಸಿದೆವು.  ಜನರು ಪ್ರತ್ಯೇಕವಾಗಿ ತಮ್ಮ ತಮ್ಮ ಧರ್ಮದವರ ಜೊತೆ ಮಾತ್ರ ಬದುಕುವುದಕ್ಕೆ ಉತ್ತೇಜನ ಕೊಡುವ ಬದಲು, ಸರ್ಕಾರ ಮಿಶ್ರ ರೀತಿ ಜೀವಿಸಲು ಪ್ರೇರೇಪಿಸುವ ಮೂಲಕ ಈ ಪ್ರತ್ಯೇಕ ವಾಸದ ವಿರುದ್ಧ ಹೋರಾಡಬೇಕಾಗಿತ್ತು , ಪ್ರತಿರೋಧವನ್ನು ಒಡ್ಡ ಬೇಕಾಗಿತ್ತು. ನೈತಿಕವಾಗಿ ದಿವಾಳಿಯೆದ್ದಿರುವ ಅಖಿಲೇಶ್ ಸರ್ಕಾರದ ಕೋಮುವಾದದ ಛಾಯೆಯಿರುವ ಈ ರಾಜ್ಯ ನೀತಿಯನ್ನು ನಮ್ಮ ದೇಶದ ಕೋಮುಗಲಭೆಗಳ ಇತಿಹಾಸದಲ್ಲಿ ಹಿಂದೆಂದೂ ಕಂಡಿರಲಿಕ್ಕಿಲ್ಲ. 

ಮುಜ಼ಫ್ಫಾರ್‌ನಗರ್ ಜಿಲ್ಲೆಯ ಜೌಲ ಗ್ರಾಮದಲ್ಲಿನ ನಿರಾಶ್ರಿತರ ಒಂದು ಡೇರೆ .. ಏಪ್ರಿಲ್ 10,2014 | ಚಿತ್ರ : ಎ. ಎಫ್. ಪಿ ಫೋಟೋ/ಪ್ರಕಾಶ್ ಸಿಂಘ್

ಶಿಬಿರಗಳ ಅವಧಿಪೂರ್ವ ಮುಚ್ಚುವಿಕೆ

ಈ ರಕ್ತದ ಕೋಡಿ ಹರಿದು ಮೂರು ತಿಂಗಳಾಗುವ ಮೊದಲೇ, ಸರ್ಕಾರ– ಪುನಃ ಗುಜರಾತಿನಲ್ಲಿ ಮಾಡಿದಂತೆ– ಎಲ್ಲಾ ನಿರಾಶ್ರಿತರ ಶಿಬಿರಗಳನ್ನು ಮುಚ್ಚಿದರು. ಸಾವಿರಾರು ಜನರು ಇನ್ನೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದರೂ, ಅಸರುಕ್ಷತೆಯ ಭಾವದಿಂದ ವಾಪಸ್ಸು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಹೆದರುತ್ತಿದ್ದರೂ, ಶಿಬಿರಗಳು ಮುಚ್ಚಲ್ಪಟ್ಟವು. ನಿರಾಶ್ರಿತ ಶಿಬಿರಗಳಲ್ಲಿರುವ ವ್ಯಕ್ತಿಗಳಿಗೆ ತಮ್ಮ ತಮ್ಮ ಮನೆಗೆ ಮರಳಲು ಅಧಿಕೃತವಾಗಿ ನೆರವು, ಸಹಕರ ನೀಡುವ ಅಗತ್ಯವಿದ್ದರೂ, ಈ ರೀತಿಯ ಹೊರದಬ್ಬುವಿಕೆಯಿಂದ ಸಾವಿರಾರು ಜನರು ಸರ್ಕಾರಿ ಶಿಬಿರದಲ್ಲಿ ಸಿಗುತ್ತಿದ್ದ ಊಟವಿಲ್ಲದೆ, ಆರೋಗ್ಯ ನೆರವಿಲ್ಲದೆ ಅಕ್ಷರಶಃ ಬೀದಿಗೆ ಬಿದ್ದರು.

ಮುಸ್ಲಿಮರ ಸಾಮಾಜಿಕ ಮತ್ತು ಅರ್ಥಿಕ ಬಹಿಷ್ಕಾರದ ವರದಿಗಳು ಬರತೊಡಗಿದಂತೆ, ಬದುಕುಳಿದವರ ಭಯ ಮತ್ತು ಒಂಟಿತನದ ಭಾವಗಳು ಇನ್ನೂ ಹೆಚ್ಚಾಗುತ್ತ ಹೋದವು. ಇದೂ ಸಹ ಗುಜರಾತನ್ನು ಮತ್ತೆ ನೆನಪಿಸುತ್ತದೆ. ತಾವು ವಾಪಸ್ಸು ತಮ್ಮ ಹಳ್ಳಿಗಳಲ್ಲಿ ಬದುಕಬೇಕೆಂದರೆ, ತಮ್ಮ ಗಡ್ಡಗಳನ್ನು ಬೋಳಿಸಬೇಕೆಂದು ಹೇಳಲಾಗುತ್ತಿದೆ ಎಂದು ಬಹಳಷ್ಟು ಮುಸ್ಲಿಮ್ ಗಂಡಸರು ಸಾಕ್ಷ್ಯ ನುಡಿದರು. ಬಸ್ ಗಳಲ್ಲಿ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇದೇ ರೀತಿಯ ದ್ವೇಷದ ಮಾತುಗಳ ವಿನಿಮಯವಾಗುವುದನ್ನು ಜನರು ವಿವರಿಸಿದರು. ಮನೆಗೆ ಮರಳಿದ ಎಷ್ಟೋ ನಿರಾಶ್ರಿತರು ಇದೇ ರೀತಿ ತಮ್ಮ ವಿರುದ್ಧ ಕೆಲಸದ ಜಾಗಗಳಲ್ಲಿ, ಬೇಸಾಯ, ಆರ್ಥಿಕ ಚಟುವಟಿಕೆಗಳಲ್ಲಿ, ಮನೆಯಿಂದ ಮನೆಗೆ ಹೋಗಿ ಬಟ್ಟೆ ಮತ್ತು ಇನ್ನಿತರ ಮಾರುವ ಕೆಲಸಗಳಲ್ಲಿ ನಡೆಯುತ್ತಿರುವ ಬೆದರಿಕೆ ಮತ್ತು ಬಹಿಷ್ಕಾರದ ಕಥೆಗಳನ್ನು ಮೆಲುಕು ಹಾಕಿದರು.

ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಬದುಕುಳಿದವರು ತಾವು ಹುಟ್ಟಿದ ಹಳ್ಳಿಗಳಿಗೆ ಸುರಕ್ಷತಾ ಭಾವದಿಂದ ಮರಳಲು ಅವಕಾಶ ಮಾಡಿಕೊಡುವಂತಹ ಸ್ಥಿತಿಯನ್ನು ನಿರ್ಮಿಸಲೇ ಇಲ್ಲ. ಇವರ ವಿರುದ್ಧ ಹಿಂಸಾಚಾರ ನಡೆಸಿದವರಿಂದ ಯಾವುದೇ ರೀತಿಯ ಪಶ್ಚಾತ್ತಾಪದ ಮಾತುಗಳು ಸಾರ್ವಜನಿಕವಾಗಿ ಬರದೇ ಇದ್ದಿದರಿಂದ, ಸರ್ಕಾರ-ಸಮುದಾಯಗಳಿಂದಲೂ ಯಾವುದೇ ರೀತಿಯ ರಾಜಿ-ಸಂಧಾನ ಹಾಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡದೇ ಇದ್ದಿದ್ದರಿಂದ, ಅವರಾರೂ ತಾವು ಹುಟ್ಟಿದ ಊರಿಗೆ ಮರಳಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಕೊಡುವ ಸಣ್ಣ ಅನುದಾನಗಳಿಂದಲೋ, ಅಥವಾ ಬಹಳಷ್ಟು ಬಾರಿ ಲೇವಾದೇವಿದಾರರಿಂದ ದುಬಾರಿ ಸಾಲವನ್ನು ಮಾಡಿ ತರಾತುರಿಯಲ್ಲಿ ಮುಸ್ಲಿಮ್ ಸಂಖ್ಯೆ ಹೆಚ್ಚಿರುವ ಹಳ್ಳಿಗಳ ಕೃಷಿ-ಜಾಗಗಳ ಮೇಲೆ ಕಟ್ಟಿಸಿದ ಕಾಲೊನಿಗಳಲ್ಲಿ ನಿವೇಶನವನ್ನು ಖರೀದಿ ಮಾಡಿದರು. ಸಿಕ್ಕಿದ್ದೇ ಅವಕಾಶವೆಂಬಂತೆ, ಸ್ಥಳೀಯ ದೊಡ್ಡ ದೊಡ್ಡ ರೈತರು ಮತ್ತು ರಿಯಲ್ ಎಸ್ಟೇಟ್ ದಲ್ಲಾಳಿಗಳು ಈ ನಿವೇಶನಗಳನ್ನು ದುರ್ದೈವಕ್ಕೆ ಒಳಗಾಗಿದ್ದ ಈ ಸ್ಥಳಾಂತರಿತ ವ್ಯಕ್ತಿಗಳಿಗೆ ದುಬಾರಿ ಬೆಲೆಗೆ ಮಾರಿದರು.

ಪ್ರತ್ಯೇಕ ವಾಸ

ಈ ರೀತಿ ತಾವೇ ಸ್ವಯಂ ಕಟ್ಟಿಕೊಂಡ ಕಾಲೊನಿಗಳ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳೂ ಇಲ್ಲದ್ದು ರಾಜ್ಯ ಸರ್ಕಾರದ ಉದಾಸೀನತೆಯನ್ನು ತೋರುತ್ತದೆ. ಇನ್ನು ಈ ಜನರಿಗೆ ಮೂಲ ಸೌಕರ್ಯಗಳು ಹಗೂ ಪೌರತ್ವದ ಹಕ್ಕುಗಳನ್ನು ಪಡೆದುಕೊಳ್ಳಲು ಅನುವು ಮಾಡಿ ಕೊಟ್ಟಿತೆ ಎಂಬುದು ದೂರದ ವಿಚಾರ.  ಅಮನ್ ಬಿರಾದಾರಿ ಮತ್ತು ಅಫ಼್ಕರ್ ಇಂಡಿಯಾ ಸಂಸ್ಥೆ ನಡೆಸಿದ ಒಂದು ಸಮೀಕ್ಷೆಯಲ್ಲಿ ೨೯,೩೨೮ ಜನ ೬೫ ನಿರಾಶ್ರಿತ ಕಾಲೊನಿಗಳು– ೨೮ ಮುಜ಼ಾಫರನಗರದಲ್ಲಿ, ೩೭ ಶಾಮ್ಲಿಯಲ್ಲಿ– ಜೀವಿಸುತ್ತಿದ್ದರು. ಇವನ್ನು  ನಾನು ಮತ್ತು ನನ್ನ ಸಹೋದ್ಯೋಗಿಗಳಾದ ಅಕ್ರಮ್ ಅಖ್ತರ್ ಚೌದರಿ, ಜ಼ಾಫ಼ರ್ ಇಕ್ಬಾಲ್ ಮತ್ತು ರಜನ್ಯಾ ಬೋಸ್ ಜೊತೆಯಾಗಿ ಬರೆದ ಪುಸ್ತಕ, Living Apart: Communal Violence and Forced Displacement in Muzaffarnagar and Shamli ಅಲ್ಲಿ ಕಾಣಬಹುದು.

ನರಕದಂತಹ ಕೊಳಗೇರ‍ಿ ತರಹದ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ನಿರಾಶ್ರಿತರು, ಇಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮ್ಮ ಸಮೀಕ್ಷೆಯಿಂದ ತಿಳಿದ ಬಹುಮುಖ್ಯ ಅಂಶವೆಂದರೆ, ಈ ಹೊಸ ಬದುಕ ಕಟ್ಟುವಿಕೆಯಲ್ಲಿ ಇರದಿರುವ ರಾಜ್ಯದ ಉಪಸ್ಥಿತಿ.  ನೇರವಾಗಿ ದಾಳಿಗೊಳಗಾದವರಿಗೆ ಕೊಟ್ಟ ೫ ಲಕ್ಷದ ಹೊರತಾಗಿ (ಇನ್ನು ದಾಳಿಗೆ ಹೆದರಿ ಹಳ್ಳಿಗಳನ್ನು ಬಿಟ್ಟು ಓಡಿದ ಇನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಪುಡಿಗಾಸೂ ಸಿಗಲಿಲ್ಲ) ರಾಜ್ಯ ಸರ್ಕಾರ ಅವರನ್ನು ಪುನರ್ ನೆಲೆಗೊಳಿಸುವ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲ್ಲಿಲ್ಲ, ಸಹಾಯವನ್ನು ಮಾಡಲಿಲ್ಲ. ಹಿಂಸಾಚಾರದಿಂದ ಸ್ಥಳಾಂತರಿತಗೊಂಡವರು ಯಾವುದೇ ದಾರಿಯಿಲ್ಲದೆ ತಮ್ಮ ಹುಟ್ಟಿದೂರಿನ ಆಸ್ತಿಗಳನ್ನು ತ್ಯಜಿಸಬೇಕಾಯಿತು ಇಲ್ಲವೇ ಅತ್ಯಂತ ಕಡಿಮೆ ಬೆಲೆಗೆ ಮಾರುವಂತಹ ಪರಿಸ್ಥಿತಿ ಎದುರಾಯಿತು. ಚರಾಸ್ತಿಗಳಿಗಾದ ನಷ್ಟಕ್ಕೆ ಕೊಟ್ಟ ಸರಕಾರದ ಪರಿಹಾರದ ಹಣ ಗಣನೀಯವಾಗಿರಲಿಲ್ಲ. ಕಾಲೊನಿಗಳೆಲ್ಲವೂ ಈ ಬಡ ಮತ್ತು ಜರ್ಜರಿತ ನಿರಾಶ್ರಿತರ ಸ್ವ ಪ್ರಯತ್ನದಿಂದಲೇ ಸ್ಥಾಪಿತವಾದವು. ಇದು ಮತ್ತೆ ನಮಗೆ ಗುಜರಾತಿನ ಹಿಂಸಾಚಾರದಿಂದ ನೊಂದ ಜನರ ಕಥೆಗಳನ್ನು ಹೋಲುತ್ತದೆ. 

ಗಲಭೆಗಳ ನಂತರದಲ್ಲಿ ಮುಜ಼ಫ್ಫಾರ್‌ನಗರ್ ಸೆಪ್ಟೆಂಬರ್ 9, 2013. | ಚಿತ್ರ : AFP PHOTO/STR STRDEL / AFP

 

ಇಲ್ಲಿ ನ್ಯಾಯವಿಲ್ಲ

ಕೊಲೆ, ಅತ್ಯಾಚಾರ, ಲೂಟಿ ಮತ್ತು ಬೆಂಕೆ ಹಚ್ಚಿ ಧ್ವಂಸ ಗೊಳಿಸಿದ ಆರೋಪಿಗಳು ಯಾವುದೇ ಬಂಧನಕ್ಕೆ ಅಥವಾ ಶಿಕ್ಷೆಗೊಳಗಾಗದಿದ್ದದ್ದು ನಿರಾಶ್ರಿತರ ಮರಳುವಿಕೆಯ ವಿಶ್ವಾಸವನ್ನು ಮತ್ತಷ್ಟು ಕುಂಠಿತಗೊಳಿಸಿತು.

ನ್ಯಾಯ ಸಿಗದೆ ಗಾಯಗಳು ಗುಣವಾಗುವುದಿಲ್ಲ, ಹೊಸ ಹಿಂಸಾಚಾರಗಳನ್ನು ತಡೆಯಲು ಆಗುವುದಿಲ್ಲ ಎಂಬುದನ್ನು ನಾವು ಈ ಹಿಂದಿನ ಕೋಮುಗಲಭೆಗಳಲ್ಲಿ ಬದುಕುಳಿದವರಿಂದ ಕಲಿತಿದ್ದೇವೆ. ತಮ್ಮ ಗುಜರಾತಿನ ಸಹೋದ್ಯೋಗಿಗಳಂತೆ, ಪೊಲೀಸ್ ಮಾತ್ರವಲ್ಲ, ಉತ್ತರ ಪ್ರದೇಶದ ನ್ಯಾಯಂಗವೂ ಸಹ ಪೂರ್ವಾಗ್ರಹಪೀಡಿತವಾಗಿ ವರ್ತಿಸಿತು. ಒಟ್ಟು ೫೩೪ ಎಫ್.ಐ.ಆರ್. ಗಳಲ್ಲಿದ್ದ ೬೪೦೦ ಆರೋಪಿಗಳಲ್ಲಿ ಕೇವಲ ೧೫೪೦ ಜನರ ವಿರುದ್ಧ ಮಾತ್ರ ಅಪರಾಧಗಳು ದಾಖಲಾದವು. ಆರೋಪಿಗಳು “ಅಪರಿಚಿತ ವ್ಯಕ್ತಿಗಳು” ಎಂದು ಉಲ್ಲೇಖಿಸಿದ್ದರಿಂದ ಬಹುತೇಕ ಕೇಸ್ ಗಳು ಯಾವುದೇ ಚಾರ್ಜ್ ಶೀಟ್ ಅಥವಾ ವಿಚಾರಣೆ ಇಲ್ಲದೆ ಮುಚ್ಚಿದವು. ಈ ರಕ್ತದೋಕುಳಿ ಕಳೆದು ಒಂದು ವರ್ಷವಾದ ಮೇಲೂ ಕೇವಲ ೮೦೦ ಜನರನ್ನು ಮಾತ್ರ ಬಂಧಿಸಲಾಯಿತು ಮತ್ತು ಅವರಲ್ಲಿ ಬಹುತೇಕರನ್ನು ತ್ವರಿತವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಎಷ್ಟೊ ಬಾರಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಊರಿನ ಹೆಂಗಸರು ಗುಂಪುಗೂಡಿ ಗ್ರಾಮವನ್ನು ಪ್ರವೇಶಿಸದಂತೆ ತಡೆ ಹಿಡಿಯುತ್ತಿದ್ದರು ಅಥವಾ ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ಪೋಲೀಸರು ಹೋಗುವ ದಾರಿಯಲ್ಲಿ ಅಡ್ಡ ಹಾಕಿ ನಿಲ್ಲಿಸುತ್ತಿದ್ದರು. ಇದೇ ಅಷ್ಟು ಕಡಿಮೆ ಪ್ರಮಾಣದ ಬಂಧನಕ್ಕೆ ಇರುವ ಕಾರಣಗಳು.

ಇನ್ನು ಸಂತ್ರಸ್ತರ ನಂಬಿಕೆಯೆಂದರೇ ಪೊಲೀಸರೇ ಗೌಪ್ಯವಾಗಿ ಹಳ್ಳಿಗರಿಗೆ ತಾವು ಬರುತ್ತಿದ್ದೇವೆ ಎಂಬ ಸೂಚನೆಯನ್ನು ನೀಡುತ್ತಿದ್ದರು ಎಂಬುದು. ಇಲ್ಲದಿದ್ದರೆ ಹೇಗೆ ಅಷ್ಟೊಂದು ಜನ, ಅಷ್ಟು ಕಡಿಮೆ ಸಮಯದಲ್ಲಿ ರಸ್ತೆಗಳನ್ನು ತಡೆ ಹಿಡಿಯಲು ಜಮಾಯಿಸುತ್ತಿದ್ದರು? ಈ ಅರೋಪವನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಕಷ್ಟಸಾಧ್ಯವಾದರೂ, ಯಾವ ಆತ್ಮಗೌರವ ಇರುವ ಪೊಲೀಸ್ ತಮ್ಮ ಕರ್ತವ್ಯ ಪೂರೈಸಲು ಒಡಕಾಗುತ್ತಿರುವ ಇಂತಹ ಸಾರ್ವಜನಿಕರ ತಡೆಗೋಡೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ.

ಸಾಮೂಹಿಕ ಅತ್ಯಾಚಾರದ ೬ ಕೇಸುಗಳ ೨೫ ಆರೋಪಿಗಳಲ್ಲಿ, ಕೇವಲ ೩ ಜನರನ್ನು ಮಾತ್ರ ಹಿಡಿಯಲಾಗಿತ್ತು. ಒಂದು ಅತ್ಯಾಚಾರದ ಕೇಸಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಲಾಯಿತು. ಇನ್ನು ಉಳಿದಿರುವ ಅತ್ಯಾಚಾರದ ಕೇಸುಗಳಲ್ಲಿ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹೇಳಿಕೆಗಳನ್ನು ವಾಪಸ್ಸು ಪಡೆಯುವಂತೆ ಸಾಕ್ಷಿದಾರರ ಮೇಲೆ ವಿಪರೀತ ಒತ್ತಡವಿತ್ತು. ಎಷ್ಟೋ ಸಾಕ್ಷಿಗಳು ನ್ಯಾಯಾಲಯದಲ್ಲಿ ತಾವು ಕೊಟ್ಟ ಹೇಳಿಕೆಗಳ ವಿರುದ್ಧವೇ ತಿರುಗಿದರು.

ಭಾರತೀಯ ಅಪರಾಧ ಕಾಯ್ದೆ-ಕಾನೂನುಗಳು ಇಂತಹ ಘೋರ ಅಪರಾಧಗಳಿಗೆ ರಾಜಿ-ಸಂಧಾನಕ್ಕೆ ಅನುವು ಮಾಡಿಕೊಡದ್ದಿದ್ದರೂ, ಬಹುತೇಕ ಕೋಮುಗಲಭೆಗಳಂತಹ ಸಾಮೂಹಿಕ ಹಿಂಸಾಚಾರದ ನಂತರ ನಡೆಯುವುದು ಇದೇ. ಬಂಧನವನ್ನು ತಪ್ಪಿಸಿಕೊಂಡೋ ಅಥವಾ ಜಾಮೀನಿನ ಮೇಲೆ ಹೊರಬಂದೋ, ಆರೋಪಿಗಳು ತಮ್ಮದೇ ಊರಿನಲ್ಲಿ ಸ್ವೇಚ್ಛವಾಗಿ ಓಡಾಡುವುದರಿಂದ, ದೂರು ಕೊಟ್ಟವರನ್ನು ಮತ್ತು ಸಂತ್ರಸ್ತರನ್ನು ಬೆದರಿಸುವುದು ಬಲು ಸುಲಭ. ಇದಷ್ಟು ಸಾಲದೆಂಬಂತೆ, ಬಹುತೇಕ ಸಂತ್ರಸ್ತರು ಗದ್ದೆಗಳಲ್ಲಿ ಅಥವಾ ಕೂಲಿ ಕೆಲಸ ಮಾಡುವುದರಿಂದ, ಅವರು ತಮ್ಮ ಜಾಟ್ ಭೂಮಾಲೀಕರ ಮೇಲೆ ಆರ್ಥಿಕವಾಗಿ, ಕೆಲಸ ಹಾಗೂ ಸಾಲಗಳಿಗೆ, ಅವಲಂಬಿತರಾಗಿರುತ್ತಾರೆ.

ವಿಶೇಷವಾಗಿ, ಈ ಘಟನೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರಾಜಕಾರಣಿಗಳ ವಿರುದ್ಧ ಪೋಲೀಸರು ಮೃದು ಧೋರ‍ಣೆ ತಾಳಿದರು. ಅವರನ್ನು ಭಾರತ ಕಾನೂನು ಸಂಹಿತೆ ಸೆಕ್ಷನ್ ೧೮೮ ನಂತಹ ಸಣ್ಣ ಸೆಕ್ಷನ್ ಗಳ ಅಡಿಯಲ್ಲಿ ದಾಖಲಿಸಿದರು. ಅದರಲ್ಲಿ ಬಹಳಷ್ಟು ಜನ ಜೈಲಿನ ಒಳಗೆ ಕಾಲಿಡಲೂ ಇಲ್ಲ. ಇನ್ನೂ ಹಲವಾರು ಕಡೆ ನ್ಯಾಯಾಂಗವೇ ಪಕ್ಷಪಾತ ಮಾಡಿದ್ದ ನಿದರ್ಶನಗಳಿವೆ: ಬಂಧನಕ್ಕೆ ಒಳಗಾಗಿದ್ದ ಬಹುತೇಕ ಆರೋಪಿಗಳು ಅದೇ ದಿನ ಅಥವಾ ಹೆಚ್ಚಂದರೇ ಮಾರನೇ ದಿನವೇ ಬಿಡುಗಡೆಯಾಗುತ್ತಿದ್ದರು. ಇವೆಲ್ಲವೂ ದ್ವೇಷಾಪರಾಧಗಳ ಗಂಭೀರತೆಯನ್ನು ನಿರ್ಲಕ್ಷಿಸಿದ್ದಲ್ಲದೇ, ಮನೆ-ಮಠ ಕಳೆದುಕೊಂಡು ಹಿಂಸಾಚಾರದಿಂದ ಬದುಕುಳಿದವರ ಮೇಲೆ ಎಷ್ಟು ಸುಲಭವಾಗಿ ಬೆದರಿಕೆಗಳನ್ನು ಒಡ್ಡಬಹುದು ಎಂಬುದನ್ನೂ ತೋರ‍ಿಸಿತು.

ರಾಜಕೀಯ ಪಕ್ಷಗಳ ಅನುಪಸ್ಥಿತಿ

ಈ ಹಿಂಸಾಚಾರದ ಸಮಯದಲ್ಲಿ ಮತ್ತು ಅದರ ನಂತರದ ಕೆಲವು ತಿಂಗಳುಗಳಲ್ಲಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿತ್ತು. ಆದರೆ ಅದು  ಸಂತ್ರಸ್ತರ ಜೊತೆ  ನಿಂತು ಸಾಂವಿಧಾನಿಕ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ಮತ್ತು ಸಹನಾಭೂತಿಯಿಂದ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲೂ ಇಲ್ಲ, ತಾನೂ ಅವರನ್ನು ನೇರ‍ವಾಗಿ ಸಂಪರ್ಕಿಸಲೂ ಯಾವುದೇ ರೀತಿಯ ಪ್ರಯತ್ನವನ್ನು ಮಾಡಲೂ ಇಲ್ಲ.

ಒಂದು ಪಕ್ಷದ ಕಾರ್ಯಕ್ಷಮತೆಯನ್ನು ನೋಡುವುದಾದರೆ,  ನಾನು ಕಾಂಗ್ರೆಸ್ಸಿನ ಕಾರ್ಯಕರ್ತರನ್ನು ಗುಜರಾತಿನಲ್ಲಿದ್ದಂತೆ ಮುಜ಼ಾಫರನಗರದ ನಿರಾಶ್ರಿತರ ಶಿಬಿರಗಳಲ್ಲಿ ನೋಡಲೇ ಇಲ್ಲ. ಇಲ್ಲಿ ಕಾಂಗ್ರೆಸ್ಸಿನ ಸೇವಾ ದಳ (ಅದು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ?)  ಸಂತ್ರಸ್ತರ ಜೊತೆನಿಲ್ಲುವ ಮೂಲಕ, ಸೇವೆ ಮಾಡುವ ಮೂಲಕ ತನ್ನ ಇರುವನ್ನು ಜನರಿಗೆ ತೋರಬೇಕಿತ್ತು.

ಹಾಗೇ ಮಾಯಾವತಿ ಸಹ ಒಮ್ಮೆಯೂ ಹಿಂಸಾಚಾರದಿಂದ ನೊಂದಿರುವ ಜನರನ್ನು ತಲುಪಲು ಪ್ರಯತ್ನ ಮಾಡಲೇ ಇಲ್ಲ. ಉದಾಸೀನತೆಯ ಮೌನ ದೇವತೆಯಾಗಿ ಉಳಿದರು. ಆದರೆ ಕೆಲವೇ ವರ್ಷಗಳಲ್ಲಿ ಚುನಾವಣೆಯ ಸಮಯ ಬಂದಾಗ ರಾಜ್ಯದ ಮುಸ್ಲಿಮರಿಗೆ ಆಕೆ ಮೈತ್ರಿಯ ಹಸ್ತ ಚಾಚಿದಾಗ, ಯಾವ ಅರ್ಹತೆಯ ಮೇಲೆ ಆಕೆ ಅವರ ಬಳಿ ಮತಕ್ಕಾಗಿ ಅಂಗಲಾಚಿದರು?

ಕೇವಲ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) ಮಾತ್ರ ಒಂದು ಪುನರ್ವಸತಿ ಕಾಲೊನಿಯನ್ನು ಸ್ಥಾಪಿಸಲು ಸಹಾಯ ಮಾಡುವ ಮೂಲಕ ಮುಜ಼ಾಫರನಗರದ ಸಂತ್ರಸ್ತರಿಗೆ ನೆರವಾಯಿತು. ಆದರೆ ಈ ನೆರವೂ ಸಹ ಹಿಂದಿನ ಎಷ್ಟೋ ಸ್ವಾತಂತ್ರ್ಯೊತ್ತರ ಕೋಮುಗಲಭೆಗಳಲ್ಲಿ ಅದು ವಹಿಸಿದ ಪಾತ್ರಕ್ಕೆ ಹೋಲಿಸಿದರೆ, ಇದು ಬಹಳ ಸಣ್ಣದ್ದು ಮತ್ತು ಅಷ್ಟಾಗಿ ಯಾರ ಗಮನಕ್ಕೂ ಬರಲಿಲ್ಲ.

ಪರ್ಯಾಯ ಆಯ್ಕೆಗಳಾವುವು ಇಲ್ಲ

ಈ ಘಟನೆಯಿಂದ ಕಲಿತ ಪಾಠವೇನೆಂದರೆ, ೨೦೧೭ನೇ ಉತ್ತರ ಪ್ರದೇಶದ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವಿಗೆ, ಬಿಜೆಪಿಯ ಹಿಂದೂ-ಮುಸ್ಲಿಮ್ ಧ್ರುವೀಕರಣದ ಪ್ರಚಾರ ಮತ್ತು ಮೋದಿಯ ಮೋಡಿ ಮತ್ತು ಒಡಕಿನ ರಾಜಕಾರಣದ ಜೊತೆಜೊತೆಗೆ ಯಾವುದೇ ವಿಶ್ವಾಸನೀಯ ಜಾತ್ಯಾತೀಯ ಆಯ್ಕೆಗಳು ಇಲ್ಲದಿರುವುದು ಕಾರಣ.

ಜಾತ್ಯಾತೀತತೆಯೆಂದರೆ ಕೇವಲ ಮುಸ್ಲಿಮರನ್ನು ಒಂದು ದುರ್ಬಲ, ಅವಲಂಬಿತ ಜನತೆಯನ್ನಾಗಿ ನೋಡುವುದಲ್ಲ; ಚುನಾವಣಾ ಸಮಯದಲ್ಲಿ ಅವರ ಮತಗಳು ತಮಗೆ ಬಂದೇ ಬರುತ್ತದೆ ಎಂಡು ಲಘುವಾಗಿ ಪರಿಗಣಿಸಿ, ಉಳಿದ ಸಮಯದಲ್ಲಿ ಅವರನ್ನು ಮರೆತು ಹೋಗುವುದಲ್ಲ. ಜಾತ್ಯಾತೀತತೆಯ ಎಂದರೆ ಬೇಕಾದಾಗ ಓಲೈಕೆ, ಬೇಡದಿದ್ದಾಗ ತೊರೆಯುವಿಕೆ ಎಂದು ಬಹುಸಂಖ್ಯಾತರ ಮನಸ್ಸಿಗೆ ನೋವಾಗದಂತೆ ನಡೆಯುವ ಅವಕಾಶವಾದಿ ನೀತಿಯಲ್ಲ. ಜಾತ್ಯಾತೀತತೆಯೆಂಬುದು ಚುನಾವಣೆಯ ಆಟಗಳನ್ನು ಮೀರಿದ ನಂಬಿಕೆಯ ತತ್ವ.

ಭಾರತದ ಅಲ್ಪಸಂಖ್ಯಾತರ ಹಾಗೂ ಜಾತ್ಯಾತೀತತೆಯ ಬಹುಸಂಖ್ಯಾತರ ದೊಡ್ಡ ದುರಂತವೆಂದರೆ, ರಾಜಕೀಯವಾಗಿ ಇದೆಲ್ಲದರ ವಿರುದ್ಧ ಹೋರಾಡುವ ಒಂದು ಬಲವಾದ, ನಿಜವಾದ ಅರ್ಥದ ಜಾತ್ಯಾತೀತ ಶಕ್ತಿ ಇಲ್ಲದಿರುವುದು. ಆದ್ದರಿಂದಲೇ ಮೋದಿ-ಷಾ ನೇತೃತ್ವದಲ್ಲಿ ಬಲಪಂಥೀಯ ಮತೀಯ ಶಕ್ತಿಗಳ ಆಟಾಟೋಪ ಯೋಗಿ ಆದಿತ್ಯನಾಥರ ಆಯ್ಕೆಯ ಮೂಲಕ ತಾರಕಕ್ಕೇರಿದೆ.

ಸಾಮಾನ್ಯ ಜನರು ಈಗ ವಿರೋಧ ಪಕ್ಷಗಳ ಕೆಲಸ ಮಾಡಬೇಕಾಗಿದೆ. ಜಾತ್ಯಾತೀಯ ಎಂದು ಕರೆಯಲ್ಪಡುವ ನಮ್ಮ ವಿರೋಧ ಪಕ್ಷಗಳು ನಮ್ಮ ಮೇಲೆ ದ್ರೋಹ ಎಸಗಿವೆ, ಭಾರತೀಯರಾದ ನಾವು ಅದರ ಬೆಲೆ ತೆತ್ತುತ್ತಿದ್ದೇವೆ. ಕಳೆದ ಮೂರು ವರ್ಷದ ಕೋಮುವಾದದ ಬಿಸಿಗಾಳಿಯು ಇನ್ನೇನು ಬಿರುಗಾಳಿಯಾಗುವ ಎಲ್ಲಾ ಸಾಧ್ಯತೆಗಳಿವೆ.


ಅನುವಾದ : ಅಮೂಲ್ಯ ಅರಸಿನಮಕ್ಕಿ
ಎಮ್.ಎ ಕಲ್ಚರ್ಲ್ ಸ್ಟಡೀಸ್ ಪದವೀಧರೆ. ಬಿಎ ಇಂಗ್ಲೀಷ್, ಪತ್ರಿಕೋದ್ಯಮ, ಮನಃಶಾಸ್ತ್ರ ಮಾಡಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ೨೦೧೪ನೇ ಸಾಲಿನ ಯುವ ಭಾರತ ಫೆಲ್ಲೊ. ಕಲೆ, ಸಾಹಿತ್ಯ ಸೇರಿದಂತೆ ನಾಟಕದ ಜೊತೆಗಿನ ನಿಕಟವಾದ ಒಡನಾಟವೂ ಇದೆ.

One comment to “ಯೋಗಿ ಆದಿತ್ಯನಾಥ ಕೇವಲ ಸಂಘ ಪರಿವಾರದ ಸೃಷ್ಟಿ ಮಾತ್ರವಲ್ಲ, ಜಾತ್ಯಾತೀತ ಪಕ್ಷಗಳದ್ದೂ ಹೌದು”
  1. ತಣ್ಣಗಿನ ಕ್ರೌರ್ಯ ಬಣ್ಣ ಬಣ್ಣದ ಮುಸುಕಿನಲ್ಲಿ ಆಕ್ರಮಿಸಿದೆ. ನಮ್ಮ ಻ಅಜ್ಞಾನ ಅಲಕ್ಷ್ಯ ಕುರುಡು ಜಾಣತನ ಸ್ವಾರ್ಥ ದಂಥ ವ್ಯಾಧಿಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿ ಕೊಳ್ಳುತ್ತ ೆಎಲ್ಲ ಪಟ್ಟ ಭದ್ರ ಹಿತಾಸಕ್ತಿಗಳು ಕೊಬ್ಬುತ್ತಿವೆ. ರಾಜಕೀಯ ಪಕ್ಷಗಳು , ಸರಕಾರಗಳು ಸದಾ ತಮ್ಮ ಅಧಿಕಾರ ರಕ್ಷಣೆಯಲ್ಲಿಯೇ ನಿರತರಾಗಿ ಸಾಮಾನ್ಯ ಮುಗ್ಧ ಜನತೆಯ ಕಗ್ಗೊಲೆಗೆ ಕಾರಣವಾಗುತ್ತಿರುವುದು ಪ್ರಸ್ತುತ ವರ್ತಮಾನದ ಭಾರೀ ದುರಂತ. ಕಣ್ಣು ತೆರೆಸುವ ಲೇಖನ ನೀಡಿದ್ದಕ್ಕೆ ಅನಂತ ಕೃತಜ್ಞತೆಗಳು.

ಪ್ರತಿಕ್ರಿಯಿಸಿ