ಹೆಣ್ಣು ಮತ್ತು ಸುಳ್ಳು; ಕೆಲವು ಟಿಪ್ಪಣಿಗಳು

ಪ್ರಸ್ತುತ ಬರಹವನ್ನು ರಿಚ್ ಅವರ ‘On Lies,Secrets,and Silence:Selected Prose, 1966-778’ಕೃತಿಯಿಂದ ಆರಿಸಲಾಗಿದೆ. ಅನುವಾದಿಸಿದವರು ಸುಕನ್ಯಾ ಕನಾರಳ್ಳಿ

ಗಂಡಸಿನ ಘನತೆ ಎಂದರೆ ಮಾತಿನ ತೂಕ. ಯಾವ ಗ್ಯಾರಂಟಿಯ ಅಗತ್ಯವೂ ಇಲ್ಲದೆ ತನ್ನ ಮಾತನ್ನು ಇನ್ನೊಬ್ಬ ಗಂಡಸು ಮಾನ್ಯ ಮಾಡುವುದು.

ನಮ್ಮ ನಾಡು ಸ್ವತಂತ್ರ, ನಮ್ಮ ಗಂಡಸರು ಪ್ರಾಮಾಣಿಕರು, ನಮ್ಮ ಹೆಂಗಸರು ಫಲವತಿಯರು‘—ಹಳೆಯ ಅಮೆರಿಕನ್ ಘೋಷಣೆ.

ಗಂಡಸಿನ ಘನತೆಯ ಪರಿಕಲ್ಪನೆಯಲ್ಲಿ ಕೊಲ್ಲುವುದೂ ಒಂದು ಭಾಗ. ‘ಘನತೆಯನ್ನು ಪ್ರೀತಿಸಿದಷ್ಟು ನಿನ್ನ ಪ್ರೀತಿಸಲಾರೆ(‘ಲೂಕಾಸ್ಟಳಿಗೆ: ಯುದ್ಧಕ್ಕೆ ಹೋಗುವುದರ ಬಗ್ಗೆ‘) ಗಂಡಸಿಗೆ ಘನತೆಯೆಂದರೆ ಲೆಕ್ಕ ಚುಕ್ತಾ ಮಾಡುವುದು. ಅದಕ್ಕೇ ದ್ವಂದ್ವ ಯುದ್ಧ ಇತ್ಯಾದಿ

ಹೆಣ್ಣಿನ ಘನತೆ ಎಂದರೆ ಬೇರೆಯೇ: ಕನ್ಯತ್ವ, ಶೀಲ, ಪಾತಿವ್ರತ್ಯ. ಆದರೆ ಪ್ರಾಮಾಣಿಕತೆ ಹೆಣ್ಣಿಗೆ ಮುಖ್ಯವಲ್ಲ. ಗಂಡಸರ ಪ್ರಕಾರ ಹೆಣ್ಣು ಚಪಲೆ, ಚಂಚಲೆ, ಕುಟಿಲೆ, ನಿಗೂಢ. ಸುಳ್ಳು ಹೇಳುವುದು ಅವಳಿಗೆ ಭೂಷಣ.

ನಮ್ಮ ದೇಹದ ಬಗ್ಗೆ ಸುಳ್ಳು ಹೇಳಬೇಕು: ಮೈಯನ್ನು ತೆಳ್ಳಗಾಗಿಸಿ, ಚರ್ಮವನ್ನು ಬೆಳ್ಳಗಾಗಿಸಿ, ಕೂದಲನ್ನು ಗುಂಗುರಾಗಿಸಿ, ಹುಬ್ಬನ್ನು ಬಿಲ್ಲಿನಂತೆ ಬಾಗಿಸಿ, ಕಂಕುಳನ್ನು ನುಣ್ಣಗಾಗಿಸಿ, ಉಗುರುಗಳನ್ನು ಹೊಳೆಯಿಸಿ, ತುಂಬಿಲ್ಲದ ಕಡೆ ಹತ್ತಿ ತುಂಬಿ ದಪ್ಪಗಾಗಿಸಿ, ನಮ್ಮ ಅಬಲೆತನ ಎತ್ತಿ ತೋರುವಂಥ ಉಡುಪು ಧರಿಸಿ

ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸುಳ್ಳು. ಆಯಾಯ ಕಾಲದಲ್ಲಿ ಗಂಡಸರು ಏನನ್ನು ಕೇಳಲು ಇಷ್ಟಪಡುತ್ತಾರೋ ಅದು. ಹೆಣ್ಣಿನಲ್ಲಿ ಸಕ್ರಿಯ ಲೈಂಗಿಕತೆ ಒಪ್ಪದ ಕಾಲದಲ್ಲಿನ ಗೃಹಿಣಿಯರು ಸಂಭೋಗದಲ್ಲಿ ತೆಪ್ಪನೆ ಮಲಗುವುದು ಭೂಷಣವಾದರೆ ಇಪ್ಪತನೆಯ ಶತಮಾನದಬಿಡುಗಡೆಗೊಳಿಸಲ್ಪಟ್ಟಮಾದರಿ ಹೆಣ್ಣು ಸಂಭೋಗದ ಉತ್ತುಂಗವನ್ನು ಏರುತ್ತಿರಬೇಕು. ಇಲ್ಲಾ, ಕೊನೇ ಪಕ್ಷ ನಟಿಸುತ್ತಲಾದರೂ ಇರಬೇಕು. ನಾವು ಒಪ್ಪಿಕೊಂಡ ಸುಳ್ಳುಗಳು ಯಾವು, ಬಲವಂತವಾಗಿ ಷಾಮೀಲಾದ ಸುಳ್ಳುಗಳು ಯಾವು ಎಂದು ಹೊಳೆಯದೆ ತಬ್ಬಿಬ್ಬಾಗುವುದು ಅನಿವಾರ್ಯವೆನ್ನಿಸಿಬಿಡಬೇಕು.

ಬದುಕಲ್ಲಿ ನೆಮ್ಮದಿ ತರುವ ಮದುವೆ, ಮನೆವಾಳ್ತೆಅಥವಾಗಂಡ ಹೆಂಡತಿ ಸುಖವಾಗಿದ್ದರಂತೆಎಂಬ ಕಟ್ಟು ಕಥೆಗಳು ಅತ್ಯಾಚಾರ, ಹೊಡೆತಬಡಿತ, ಮಾನಸಿಕ ಹಿಂಸೆ, ಮನೆಯ ಒಳಗೆ ಮತ್ತು ಹೊರಗೆ ಆದ ಅವಮಾನಗಳ ವಿರುದ್ಧ ಕೋರ್‍ಟಿನಲ್ಲಿ ನಿಂತು ಸಾಕ್ಷಿ ಹೇಳಬೇಕಾದಾಗ ಬಯಲಾಗುತ್ತವೆ.

ಹೆಣ್ಣು ಬದುಕುವುದು ತನ್ನ ಬಗ್ಗೆ ಇರುವ ಗಂಡಿನ ಕಲ್ಪನೆಗಳನ್ನು ಸಾಕಾರ ಮಾಡಲಿಕ್ಕೆ. ತನ್ನದಲ್ಲದ ಬದುಕನ್ನು ಬದುಕುವುದಕ್ಕೆ. ತನ್ನ ದೇಹದ ಬಗ್ಗೆ ಸುಳ್ಳು ಹೇಳುವುದನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಲು ನಡೆಸುವ ಪ್ರಯತ್ನದ ಗಳಿಗೆಯಲ್ಲಿ, ತನ್ನ ಬಗ್ಗೆ ಆತ ಹೇಳುವ ಸುಳ್ಳುಗಳನ್ನು ನಂಬಲು ನಿರಾಕರಿಸುವ ಪ್ರಯತ್ನದ ಕ್ಷಣದಲ್ಲಿ ಪ್ರಾಮಾಣಿಕ ಹೆಣ್ಣೊಬ್ಬಳು ಹುಟ್ಟುತ್ತಾಳೆ.

ಗಂಡಸಾದವನು ನಡೆದಿರುವುದರ ಬಗ್ಗೆ ಮಾತಾಡಬೇಕು. ಭಾವನೆಗಳ ಬಗ್ಗೆ ಅಲ್ಲ. ಆದರೂ ನಡೆದಿರುವುದರ ಬಗ್ಗೆಯೂ ಗಂಡಸರು ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ.

…..

ವೈಯುಕ್ತಿಕ ಸಂಬಂಧದಲ್ಲಿ ಹೇಳುವ ಸುಳ್ಳು ತಲೆ ಕೆಡಿಸಿ ಹುಚ್ಚು ಹಿಡಿಸಬಲ್ಲದು. ‘ನಾನಲ್ಲಿ ಊಟ ಮಾಡಿದೆಎಂದು ನೀನು ಹೇಳಿದಾಗ ದಿನ ನಾನಲ್ಲಿ ಇದ್ದೆಎಂದಾಗ ನಿನ್ನ ಮಾತಿನ ಸತ್ಯವನ್ನು ನಂಬಿಕೆಯ ಮೇಲೆ ಸುಮ್ಮನೆ ಒಪ್ಪಿಕೊಂಡಿರುತ್ತೇನೆ. ಯಾರನ್ನು ನಂಬುತ್ತ ಬಂದಿದ್ದೇವೋ, ಅವರು ನಂಬಿಕೆಗೆ ಅನರ್ಹರು ಎಂದಾಗ ನನ್ನ ವೈಯುಕ್ತಿಕ ಪ್ರಪಂಚ ಸ್ತಿಮಿತ ತಪ್ಪಿ ತುಯ್ಯಲಾರಂಭಿಸುತ್ತದೆ. ತಳವಿಲ್ಲದ ಆಳಕ್ಕೆ ಬೀಳುತ್ತಿದ್ದೀನೋ ಎಂದೆನಿಸುತ್ತದೆ.

ನಿನಗೆ ನೋವಾಗುವುದನ್ನು ತಡೆಯಲು ಸುಳ್ಳು ಹೇಳಿದೆಎಂದು ಹೇಳುತ್ತೀ. ಅದೂ ಒಂದು ಸುಳ್ಳು. ನನ್ನ ನೋವನ್ನು ನಿಭಾಯಿಸುವ ಶಕ್ತಿ ನಿನಗಿಲ್ಲ ಎನ್ನುವುದು ಸತ್ಯಕ್ಕೆ ಹತ್ತಿರ.

ಮಾತಿನಲ್ಲಿ ಮಾತ್ರ ಸುಳ್ಳು ಹೇಳಬೇಕಾಗಿಲ್ಲ. ಮೌನದಲ್ಲಿಯೂ ಹೇಳಬಹುದು.

ಸುಳ್ಳುಗಾರಳಿಗೆ ಸದಾ ಕಳೆದುಕೊಳ್ಳುವ ಭಯ. ಸಂಬಂಧಗಳನ್ನು ನಿಭಾಯಿಸಲು ಜಾಣತನ ಬೇಕು, ಪ್ರಾಮಾಣಿಕತೆ ಅಲ್ಲ. ಅವಳಿಗೆ ಅರೆದು ಕುಡಿಸಿರುವ ಪಾಠ ಇದೇ.

ಸುಳ್ಳುಗಾರಳಿಗೆ ಅನೇಕ ಸ್ನೇಹಿತರು. ಆದರೂ ಮಹಾ ಒಂಟಿ.

ಅವಳಿಗೆ ಭಯವೂ ಜಾಸ್ತಿ.

ಅದರೆ ಭಯ ಯಾರಿಗಿಲ್ಲ? ಸುಳ್ಳುಗಾರಳಿಗೇ ವಿಶಿಷ್ಟವಾದ ಭಯಗಳಿವೆಯೆ?

ಅವಳಿಗೆ ತಾನು ಕಂಡುಕೊಂಡ ಸತ್ಯಗಳು ಸಾಕಾಗಲಾರವು ಎಂಬ ಭಯ. ಕಳೆದುಕೊಳ್ಳುವ, ಖಾಲಿತನದ, ಆಳದ ಕತ್ತಲೆಯ ಭಯ. ಆಳದ ಕತ್ತಲೆಯಿಂದ ಮಕ್ಕಳನ್ನು ಹುಟ್ಟಿಸಿ ತಾನು ತುಂಬಿಕೊಂಡಂತೆ ತೃಪ್ತಿಯಿಂದ ನಿಟ್ಟುಸಿರು ಬಿಡುತ್ತಾಳೆ. ಖಾಲಿತನವನ್ನು ಮೀರಿದೆ ಎಂದು ಸಂಭ್ರಮಿಸುತ್ತಾಳೆ. ತನ್ನ ಭಯವನ್ನು ಮೀರಲು ಸುಳ್ಳುಗಳನ್ನು ಒಪ್ಪಿಕೊಳ್ಳಲಾರಂಭಿಸುತ್ತಾಳೆ. ಬದುಕು ತನ್ನ ಕೈಲಿದೆ ಎಂಬ ಭ್ರಮೆಯಲ್ಲಿ ಮುಳುಗಿ ಹೋಗುತ್ತಾಳೆ. ಬದುಕುಳಿಯಲು ಸುಳ್ಳು ಹೇಳುತ್ತಾಳೆ.  

ವಿಸ್ಮೃತಿ ಸುಳ್ಳುಗಾರಳನ್ನು ಆಗಾಗ್ಗೆ ಕಾಡುತ್ತದೆ. ನೆನಪಿನ ನಾಶವೆಂದರೆ ಸುಪ್ತಪ್ರಜ್ಞೆಯ ಮೌನ.

ಸುಳ್ಳು ಹೇಳುವುದೇ ಅಭ್ಯಾಸವಾದಾಗ, ಸುಪ್ತಪ್ರಜ್ಞೆಯೊಂದಿಗೆ ನಮ್ಮ ತಂತು ಕಡಿದು ಹೋಗುತ್ತದೆ. ನಿದ್ದೆಯನ್ನು ನೀಡುವ, ಆದರೆ ಕನಸುಗಳನ್ನು ಅಳಿಸಿ ಹಾಕುವ ನಿದ್ದೆ ಮಾತ್ರೆಯಂತೆ. ಸುಪ್ತಪ್ರಜ್ಞೆಗೆ ಸತ್ಯ ಬೇಕು. ಸತ್ಯ ಬೇಕಿಲ್ಲದವರ ಜೊತೆ ಸುಪ್ತಪ್ರಜ್ಞೆ ಮಾತನಾಡುವುದಿಲ್ಲ.

ಸುಳ್ಳಿನ ಬಗ್ಗೆ ಹೇಳಬೇಕೆಂದರೆ ಸತ್ಯದ ಬಗ್ಗೆ ಹೇಳಲೇಬೇಕು. ಆದರೆ ಅಷ್ಟು ಸರಳವಲ್ಲ. ‘ಇದೇ ಸತ್ಯಅಥವಾಇದೂ ಸತ್ಯವೆನ್ನುವುದು ಇಲ್ಲ. ಸತ್ಯವೆಂದರೆ ವಸ್ತುವಲ್ಲ, ವ್ಯವಸ್ಥೆಯೂ ಅಲ್ಲ. ಅದೊಂದು ತೀವ್ರವಾಗುತ್ತ ಹೋಗುವ ಸಂಕೀರ್ಣತೆ. ಕಂಬಳಿಯ ವಿನ್ಯಾಸವೆನ್ನುವುದು ಬರೀ ಹೊದಿಕೆ ಮಾತ್ರ. ಹತ್ತಿರದಿಂದ ನೋಡಿದಾಗ, ಅಥವಾ ನಾವೇ ಅದನ್ನು ನೇಯ್ದಾಗ, ಹೊದಿಕೆಯ ಒಳಗೆ ಹರಿಯುತ್ತಿರುವ ನೂರಾರು ಎಳೆಗಳು, ಕಂಬಳಿಯ ಬೆನ್ನಲ್ಲಿ ಬಿಗಿದ ಹತ್ತಾರು ಗಂಟುಗಳು ಕಾಣುತ್ತವೆ.

ಅದಕ್ಕೇ ಪ್ರಾಮಾಣಿಕತೆಯಿಂದ ಮಾತನಾಡುವ ಪ್ರಯತ್ನ ತುಂಬಾ ಮುಖ್ಯ. ಸುಳ್ಳುಗಾರರಿಗೆ ಸುಳ್ಳೆನ್ನುವುದು ಎಲ್ಲವನ್ನೂ ಸರಳೀಕರಿಸುವ ಸಾಧನ. ಸತ್ಯ ಅಷ್ಟು ಸರಳವಲ್ಲ.

ಬೇರೆಯವರಿಗೆ ಸುಳ್ಳು ಹೇಳುತ್ತಾ ನಮಗೇ ಸುಳ್ಳು ಹೇಳಿಕೊಳ್ಳಲು ಆರಂಭಿಸುತ್ತೇವೆ. ಘಟನೆಯೊಂದರ, ವ್ಯಕ್ತಿಯೊಬ್ಬರ ಮಹತ್ವವನ್ನು ಅಲ್ಲಗಳೆದು ಬದುಕಿನ ಒಂದು ಭಾಗವನ್ನೇ ಕಳೆದುಕೊಳ್ಳುತ್ತೇವೆ. ಗತದ ಒಂದು ಭಾಗವನ್ನೆಳೆದು ಮುಂದೆ ತಂದು ಇನ್ನೊಂದನ್ನು ಒತ್ತರಿಸಿ ನಮ್ಮನ್ನೇ ವಂಚಿಸಿಕೊಳ್ಳುತ್ತೇವೆ.

ದೇಹದಂತೆ ಸುಪ್ತಪ್ರಜ್ಞೆಯೂ ಸತ್ಯವನ್ನು ಬೇಡುತ್ತದೆ. ತರಾವರೀ ಕನಸುಗಳು ಸುಪ್ತಪ್ರಜ್ಞೆಯ ಸಂಕೀರ್ಣತೆಗೆ, ಕನಸುಗಳನ್ನು ನನಸಾಗಿಸುವ ಪ್ರಯತ್ನಕ್ಕೆ ಹಿಡಿದ ಕನ್ನಡಿ. ಕಾವ್ಯವೆನ್ನುವ ಸಮೃದ್ಧಿ ಹುಟ್ಟುವುದು ಪ್ರಯತ್ನದಿಂದಲೇ.

….

ಪ್ರೀತಿಎನ್ನುವುದು  ಇಬ್ಬರು ವ್ಯಕ್ತಿಗಳನ್ನೊಳಗೊಂಡ ಒಂದು ಸತತ ಕ್ರಿಯೆ. ಅದು ಸೂಕ್ಷ್ಮವಾಗಿ, ಹಿಂಸೀಯವಾಗಿ, ಕೆಲವೊಮ್ಮೆ ಭಯ ಹುಟ್ಟಿಸುತ್ತಾ, ಹಲವೊಮ್ಮೆ ಸತ್ಯವೆಂದುಕೊಂಡಿದ್ದನ್ನು ಇಲ್ಲವಾಗಿಸಿ ಹೊಸ ಸತ್ಯಗಳನ್ನು ಹುಟ್ಟಿಸುವ, ಅದರ ಬಗ್ಗೆ ಅವರಿಬ್ಬರೂ ಮಾತನಾಡಬಲ್ಲ ಶಕ್ತಿ ಕೊಡುವ ಪ್ರಕ್ರಿಯೆ. ಆತ್ಮವಂಚನೆ, ಒಂಟಿತನ ಬೇಡವೆನ್ನುವುದಾದರೆ ಪ್ರಕ್ರಿಯೆಗೆ ಒಡ್ಡಿಕೊಳ್ಳುವ ಧೈರ್ಯ ಬೇಕು.

ಹೀಗೆ ಒಡ್ಡಿಕೊಳ್ಳುವುದೆಂದರೆ ನಮ್ಮನ್ನು ನಾವು ಗೌರವಿಸಿದಂತೆ.

….

ಮನುಷ್ಯರ ನಡುವಿನ ಸಂಬಂಧಗಳಿಗೆ ಅನಂತ ಸಾಧ್ಯತೆಗಳಿವೆ. ಬದುಕಿನ ಅತ್ಯಂತ ವಿಶಿಷ್ಟ ಸತ್ಯ ಎಂದರೆ ಇದೇ. ಸುಳ್ಳು ಹೇಳುವುದು ಸಾಧ್ಯತೆಗಳನ್ನು ನಿರ್ಲಕ್ಷಿಸಿದಂತೆ. ಸಂಬಂಧಗಳಲ್ಲಿ ಜಾಣತನ, ನಿಯಂತ್ರಿಸುವ ಹುನ್ನಾರವೇ ಮುಖ್ಯವಾದಾಗ ಸಿಕ್ಕಿಕೊಂಡ ಟೇಪಿನಂತೆ ಹಾಡಿದ್ದನ್ನೇ ಹಾಡುತ್ತಿರುತ್ತದೆ. ಅಲ್ಲಿ ಸಂಬಂಧಗಳ ಸಂಗೀತವಿರುವುದಿಲ್ಲ.

ನನಗಿಲ್ಲಿಯವರೆಗೆ ಗೊತ್ತಿಲ್ಲದ ಸತ್ಯವೊಂದು ನನ್ನೆದುರಿಗೆ ಬಿಚ್ಚಿಕೊಂಡಾಗ ಇನ್ನಿಲ್ಲದಂತೆ ನೋವಾಗುತ್ತದೆ ನಿಜ. ಅದರ ಜೊತೆಯೇ ಸಮಾಧಾನದ ಅಗಾಧ ಅಲೆಯೊಂದು ಬಂದು ನನ್ನನ್ನು ನಿಟ್ಟುಸಿರಲ್ಲಿ ಮುಳುಗಿಸುತ್ತಲ್ಲ? ಬದುಕನ್ನು ಹೆಚ್ಚು ಹತ್ತಿರದಿಂದ ನೋಡುವ ಶಕ್ತಿಯನ್ನು ಅದು ಕೊಡುತ್ತದೆ ಎಂದರೆ ಸುಳ್ಳೆ? ಹಲವೊಮ್ಮೆ ಸತ್ಯಗಳು ಅಚಾನಕ್ಕಾಗಿ, ಅಪರಿಚಿತರಿಂದ ಬರುತ್ತವೆ.

ನಿನ್ನೊಂದಿಗೆ ಘನತೆ ಗೌರವದಿಂದ ಬದುಕುವುದೆಂದರೆ ನಿನ್ನೊಂದಿಗೆ ಒಮ್ಮೆಲೇ ಎಲ್ಲವನ್ನೂ ಹೇಳಿಬಿಡಬಹುದು ಎಂದಲ್ಲ. ಅಥವಾ ಮುಂಚೆಯೇ ಏನು ಹೇಳಬೇಕೆಂದು ನನಗೆ ಗೊತ್ತು ಅಂತ ಸಹ ಅಲ್ಲ. ನಿನ್ನೊಂದಿಗೆ ಹೇಳಿಕೊಳ್ಳುವ ತಹತಹ ನನ್ನಲ್ಲಿದೆ ಎಂದಷ್ಟೇ ಅರ್ಥ. ಅದರ ಸಾಧ್ಯತೆಗಳು ಭಯ ಹುಟ್ಟಿಸಬಹುದು, ಆದರೆ ಘಾತಿಸುವುದಿಲ್ಲ. ನಿನ್ನ ತಡವರಿಸುವಿಕೆಯಲ್ಲಿ ನನಗೆ ಸ್ಥೈರ್ಯ ಸಿಗಬಹುದು. ನನ್ನ ನಿನ್ನ ನಡುವೆ ಸತ್ಯ ಹೇಳುವ ಸಾಧ್ಯತೆಗಳನ್ನು ನಾವು ಸದಾ ಹುಡುಕುತ್ತಿರುತ್ತೇವೆ.

ಅದೇ ನಮ್ಮಿಬ್ಬರ ನಡುವಿನ ಬದುಕಿನ ಸಾಧ್ಯತೆ.

***

ಆಡ್ರಿಯನ್ ರಿಚ್

ಲೈಂಗಿಕತಾ ರಾಜಕೀಯದ ಬಗೆಗೆ, ಜನಾಂಗೀಯತೆ, ಭಾಷೆ, ಶಕ್ತಿ, ಇತ್ಯಾದಿಗಳ ಬಗೆಗೆ ವಿದ್ವತ್ಪೂರ್ಣವಾಗಿ ಬರೆದಿರುವ ಮಹತ್ವದ ಲೇಖಕಿ ಆಡ್ರಿಯನ್ ರಿಚ್. ಆಕೆಯ ಬರಹಗಳಿಲ್ಲದ ಸ್ತ್ರೀವಾದಿ ಬರಹಗಳ ಸಂಕಲನ, ಮಹಿಳಾ ಅಧ್ಯಯನದ ಪಠ್ಯ ಅಪೂರ್ಣವೆನ್ನಿಸುವಷ್ಟರ ಮಟ್ಟಿಗೆ ಆಕೆ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹೋರಾಟಗಾರ್ತಿ. ಹತ್ತೊಂಬತ್ತು ಕವಿತಾ ಸಂಕಲನಗಳು,  On Lies, Secrets, and Silence (1979), Blood, Bread and Poetry (1986),  What is Found There: Notebooks on Poetry and Politics (1993), ಮತ್ತು  What is Found There: Notebooks on Poetry and Politics (1993) ಎಂಬ ಶೀರ್ಷಿಕೆಗಳುಳ್ಳ ಪ್ರಬಂಧ ಸಂಕಲನಗಳ ಜೊತೆಗೆ ತಾಯ್ತನದ ಬಗೆಗಿನ ಸಿದ್ಧ ಮಾದರಿಗಳನ್ನು ಪ್ರಶ್ನಿಸುವ Of Woman Born: Motherhood as Experience and Institution (1976) ಕೃತಿ ಪ್ರಸ್ತುತ ಸ್ತ್ರೀವಾದದ ಧ್ವನಿಗಳನ್ನು ಸಮರ್ಥವಾಗಿ ಬಿಂಬಿಸುವಂತಹದು.

ಮೇ 16, 1929 ರಂದು ಉತ್ತರ ಅಮೆರಿಕದ ಮೇರಿಲ್ಯಾಂಡಿನ ಬಾಲ್ಟಿಮೋರಿನಲ್ಲಿ ಹುಟ್ಟಿದ ರಿಚ್ ಅವರ ತಂದೆ ಸುಪ್ರಸಿದ್ಧ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ  ಪ್ರೊಫ಼ೆಸರ್ ಮತ್ತು ಡಾಕ್ಟರ್ ಮತ್ತು ತಾಯಿ ಕುಟುಂಬಕ್ಕೋಸ್ಕರ ತನ್ನ ಸಂಗೀತ ಸಾಧನೆಯನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿಯನ್ನು ನಿಭಾಯಿಸಿದವಳು. ತನ್ನ ತಂದೆಯ ವಿದ್ವತ್ತು ತನ್ನ ಬರವಣಿಗೆಗಳ ಮೇಲೆ ಹೇಗೆ ಪ್ರಭಾವ ಬೀರಿತು ಎನ್ನುವುದರ ಜೊತೆಗೆ ಯಹೂದಿ ತಂದೆ ಮತ್ತು ಪ್ರೊಟೆಸ್ಟೆಂಟ್ ತಾಯಿಯ ನಡುವಿನ ಸೂಕ್ಷ್ಮವಾದ ಸಾಂಸ್ಕೃತಿಕ ಸಂಘರ್ಷಗಳ ನಡುವೆ ತಾವು ಬೆಳೆದದ್ದನ್ನೂ ರಿಚ್ ತಮ್ಮ ಆತ್ಮಕಥಾನಕ ಬರಹಗಳಲ್ಲಿ ದಾಖಲಿಸುತ್ತಾರೆ.

1951 ರಲ್ಲಿ ಪದವಿ ಪಡೆದ ರಿಚ್ ತಮ್ಮ ಮೊದಲ ಕವಿತಾ ಸಂಕಲನA Change of World ಕೃತಿಗೆ ಪ್ರತಿಷ್ಠಿತ ಯೇಲ್ ಯುವಕವಿ ಪ್ರಶಸ್ತಿಯನ್ನು ಗೆದ್ದುಕೊಂಡರು. ತೀರ್ಪುಗಾರರಾಗಿದ್ದ ಕವಿ ಡಬ್ಲೂ. ಎಚ್. ಆಡೆನ್ ಸಂಕಲನಕ್ಕೆ ಮುನ್ನುಡಿಯನ್ನೂ ಬರೆದರು. ಸ್ತ್ರೀ ಬರಹಗಾರರ ಬಗೆಗಿನ ಅನುಗ್ರಹದ ಧೋರಣೆಯನ್ನು ಬಿಂಬಿಸಿದ ಮುನ್ನುಡಿ ಸಾಕಷ್ಟು ವಿವಾದವೆಬ್ಬಿಸಿದರೂ ರಿಚ್ ಅವರ ಕವಿತೆಯ ತಾಂತ್ರಿಕ ಕೌಶಲತೆಯನ್ನು ಮತ್ತು ಹದ ಮೀರದ ಭಾವಗಳ ಸಮೃದ್ಧತೆಯನ್ನೂ ಅದು ಸ್ಪಷ್ಟವಾಗಿ ಗುರುತಿಸಿದೆ ಎನ್ನುವುದನ್ನು ಟೀಕಾಕಾರರೂ ಒಪ್ಪಿಕೊಂಡರು.  

1953 ರಲ್ಲಿ ರಿಚ್ ಅರ್ಥಶಾಸ್ತ್ರಜ್ಞ ಆಲ್ಫ್ರೆಡ್ ಕಾನ್ರಾಡ್ ಅವರನ್ನು ಮದುವೆಯಾಗಿ ಮೆಸಾಚುಸೆಟ್ಸ್ಗೆ ತೆರಳಿದರು. ಮುಂದಿನ ಐದು ವರ್ಷಗಳಲ್ಲಿ ಮೂರು ಮಗಂದಿರನ್ನು ಹೆತ್ತ ರಿಚ್ ತಮ್ಮ ದಾಖಲೆಗಳಲ್ಲಿ ಭಾವನೆಗಳ ಮತ್ತು ಕಲೆಯ ನಡುವಿನ ತಾಕಲಾಟದಲ್ಲಿ ತಾವು ಹೇಗೆ ಹೈರಾಣಾದೆ ಎನ್ನುವುದನ್ನು ವಿವರಿಸುತ್ತಾರೆ. ಸಿದ್ಧ ಪಾತ್ರಗಳ ಮತ್ತು ಸೃಜನಶೀಲತೆಯ ನಡುವಿನ, ಪ್ರೀತಿ ಮತ್ತು ಕೋಪದ ನಡುವಿನ ಸಂಘರ್ಷವನ್ನು ಗುರುತಿಸಿಕೊಳ್ಳುವ, ವಿಶ್ಲೇಷಿಸುವ, ಬೌದ್ಧಿಕ ಸಾಧನಗಳು ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಇರಲಿಲ್ಲ ಎಂಬ ಅಂಶ ಇಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ರಿಚ್ ಅವರ ಮೂರನೆಯ ಕೃತಿ Snapshots of a Daughter-in-Law (1963) ಅವರಿಗೆ ಅಪಾರ ಕವಿ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಆಯ್ಕೆ, ಸೀಮೆ, ಭಾಷೆ, ವಿರೋಧ, ಪಾರಾಗುವಿಕೆ ಇತ್ಯಾದಿ ಹಿನ್ನೆಲೆಗಳಲ್ಲಿ ಮೊದಲ ಬಾರಿಗೆ ಧ್ವನಿಸುವ ಆಕೆಯ ಕಾವ್ಯ ಹೆಚ್ಚು ಆತ್ಮೀಯ ಸಂವಾದದ ರೂಪವನ್ನು ಪಡೆಯಿತು ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. “ನಾನು ಆರಿಸಿಕೊಂಡಿರದ ಬದುಕೊಂದು ನನ್ನನ್ನು ಆರಿಸಿಕೊಂಡಿತುಎಂದು ಪ್ರಾರಂಭವಾಗುವ ಕವನದಲ್ಲಿಯಂತೆಯೇ Prospective Immigrants, Please Note ಎಂಬ ಕವಿತೆ ಮುಚ್ಚುಗೆಯಲ್ಲಿನ ಬೆಚ್ಚಗಿನ ಬದುಕು ನೀಡುವ ಭ್ರಮೆಗಳಿಗಿಂತ ವಾಸ್ತವತೆಗೆ ಬಿಚ್ಚಿಕೊಳ್ಳುವ ಬದುಕು ತರುವ ಸ್ವಾತಂತ್ರ್ಯ ಮೇಲೆಂದು ಕಲಾತ್ಮಕವಾಗಿ ನಿರೂಪಿಸುತ್ತದೆ. 1966 ರಲ್ಲಿ ಪ್ರಕಟವಾದ Necessities of Lifeಕೃತಿ ಸಾವಿಗೆ ನೀಡುವ ಮಹತ್ವ ಆಕೆಯ ಅನನ್ಯತೆಯನ್ನು ರೂಪಿಸಿಕೊಳ್ಳುವ ಪ್ರಯತ್ನಗಳನ್ನು ಸಾಮಾಜಿಕ ಶಕ್ತಿಗಳು ಸಾವಿರಾರು ರೂಪದಲ್ಲಿ ದಮನಿಸಿದಾಗ ಮೂಡುವ ಹತಾಶೆಯ ಚಿತ್ರಣ. ಆದರೂ ವೈಯುಕ್ತಿಕವಾಗಿ ಕೃತಿ ಹೋರಾಟದಿಂದ ಕಾಲ್ತೆಗೆದ ಸೂಚನೆಯಲ್ಲ, ಸಧ್ಯಕ್ಕೆ ತನಗೆ ಕೊಟ್ಟುಕೊಂಡ ವಿರಾಮ ಎಂದು ರಿಚ್ ಅಭಿಪ್ರಾಯಪಡುತ್ತಾರೆ. ಕವಿಯಾಗಿ ಬೆಳೆದ ರಿಚ್ ಅವರಿಗೆ ಅರವತ್ತರ ದಶಕದ ನಾಗರಿಕ ಹಕ್ಕುಗಳ ಹೋರಾಟ, ಯುದ್ಧವಿರೋಧಿ ಚಳುವಳಿ ಮತ್ತು ನಂತರ ಬಂದರ ಮಹಿಳಾ ಚಳುವಳಿಗಳು ಅಪಾರ ಪ್ರಭಾವ ಬೀರಿದವು.

1966 ರಲ್ಲಿ ರಿಚ್ ಅವರ ಗಂಡ ನ್ಯೂಯಾರ್ಕಿನಲ್ಲಿ ಬೋಧಕ ಹುದ್ದೆಯನ್ನು ನಿರ್ವಹಿಸಲು ಹೋದಾಗ ಜೊತೆ ಹೋದ ರಿಚ್ S ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಡವರಿಗೆ, ಕಪ್ಪು ಜನರಿಗೆ, ಮತ್ತು ಕಾಲೇಜನ್ನು ಪ್ರವೇಶಿಸುವ ಮೂರನೆಯ ಜಗತ್ತಿನ ವಿದ್ಯಾರ್ಥಿಗಳಿಗೆ ಇಂಗ್ಲೀಷನ್ನು ಹೇಳಿಕೊಡುವ ಯೋಜನೆ ಸಾಕಷ್ಟು ರಾಜಕೀಯ ವಿವಾದವನ್ನೆಬ್ಬಿಸಿತ್ತು. ಭಾಷೆ ಮತ್ತು ಪ್ರಾಬಲ್ಯಕ್ಕೆ ಇರುವ ಸಂಬಂಧವನ್ನು ರಿಚ್ ತಮ್ಮ ಕೃತಿಯಲ್ಲಿ ಸತತವಾಗಿ ಅನ್ವೇಷಿಸಿದ್ದಾರೆ. ಮಹಿಳಾ ಹೋರಾಟದಲ್ಲಿ ತಮ್ಮನ್ನು ಹೆಚ್ಚು ಗುರುತಿಸಿಕೊಂಡ ರಿಚ್ ಅವರ ಪ್ರಕಾರ ಭಾಷೆ, ಲೈಂಗಿಕತೆ, ಶಕ್ತಿ ಇತ್ಯಾದಿಗಳಿಗೆ ಸಂಬಂಧಪಟ್ಟ ಹೋರಾಟಗಳೆಲ್ಲವೂ ಪೌರುಷೇಯಕೇಂದ್ರಿತ ದೌರ್ಜನ್ಯವನ್ನು ವಿರೋಧಿಸುವ ಸ್ತ್ರೀಪರ ಹೋರಾಟದ ಅವಿಚ್ಛಿನ್ನ ಭಾಗಗಳು.

1956ರ ನಂತರ ಬಂದ ರಿಚ್ ಅವರ ಕವಿತೆಗಳೆಲ್ಲವೂ ಬರೆದ ತಾರೀಖನ್ನು ಉಳ್ಳಂತವು. ಕವಿತೆಯೊಂದು ಸಂಧರ್ಭದ ಶಿಶು, ಕಾವ್ಯ ಕವಿಯ ಜೀವನದ ಘಟನೆಗಳಿಂದ ಬೇರೆಯಲ್ಲ ಎಂಬುದನ್ನು ವೈಯುಕ್ತಿಕವಾಗಿ ಸ್ಪಷ್ಟಪಡಿಸುವ ನಿಲುವು ಇದು ಎಂದು ರಿಚ್ ಹೇಳಿಕೊಂಡಿದ್ದಾರೆ. ‘ಹೆಣ್ಣಾಗಿ, ಹೆಣ್ಣಿನ ದೇಹದ ಮೂಲಕ ನೇರವಾಗಿ ಹೆಣ್ಣಿನ ಅನುಭವವನ್ನು ನಿರೂಪಿಸುವುದು ತನ್ನ ಬರಹದ ಉದ್ದೇಶಎಂದ ರಿಚ್ Tear Gas ಎಂಬ ಕವಿತೆಯಲ್ಲಿ

ಬದಲಾವಣೆಯ ಸಂಕಲ್ಪ ಮೂಡುವುದು

ಮನಸ್ಸಿನಲ್ಲಿ ಅಲ್ಲ,

ದೇಹದಲ್ಲಿ.

ನನ್ನ ದೇಹವೇ ನನ್ನ ನಿಲುವು   

ಎಂದು ಸ್ಪಷ್ಟವಾಗಿಸುತ್ತಾರೆ. ಬದುಕನ್ನು, ಮೌಲ್ಯಗಳನ್ನು, ಶಕ್ತಿಕೇಂದ್ರಗಳನ್ನು ಪುನರಾವಲೋಕಿಸಿ ಎಂದು ಹೆಣ್ಣಿಗೆ ಹೇಳುವ ರಿಚ್ನಿಷ್ಠೆಎನ್ನುವುದು ನೇತ್ಯಾತ್ಮಕ ಮೌಲ್ಯ ಎನ್ನುವುದನ್ನು ವಿವರಿಸುತ್ತಾರೆ. ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿರುವ ರಿಚ್ ಗೇ ಮತ್ತು ಲೆಸ್ಬಿಯನ್ ಹಕ್ಕುಗಳ, ಸಂತಾನೋತ್ಪತ್ತಿ ಹಕ್ಕುಗಳ ಹೋರಾಟಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರು. 1974 ರಲ್ಲಿ ತಮ್ಮ Diving into the Wreck ಕೃತಿಗೆ ನ್ಯಾಷನಲ್ ಬುಕ್ ಪ್ರಶಸ್ತಿಯನ್ನು ಪಡೆದುಕೊಂಡರು. ಅದೊಂದೇ ಅಲ್ಲ, ಹಲವಾರು ಪ್ರಶಸ್ತಿಗಳು ರಿಚ್ ಅವರನ್ನು ಅರಸಿ ಬಂದವು. ಕಾಮನ್ವೆಲ್ತ್ ಪ್ರಶಸ್ತಿ, ವಿಲಿಯಂ ವೈಟ್ಹೆಡ್ ಅವಾರ್ಡ್ ಫ಼ಾರ್ ಲೈಫ಼್ಟೈಮ್ ಅಚೀವ್ಮೆಂಟ್ ಮತ್ತು ನ್ಯಾಷನಲ್ ಪೊಯಟ್ರಿ ಅಸೋಸಿಯೇಷನ್ ಪ್ರಶಸ್ತಿ ಅವುಗಳಲ್ಲಿ ಕೆಲವು ಮಾತ್ರ.

ಪ್ರಸ್ತುತ ಬರಹವನ್ನು ರಿಚ್ ಅವರ ‘On Lies,Secrets,and Silence:Selected Prose, 1966-778’ಕೃತಿಯಿಂದ ಆರಿಸಲಾಗಿದೆ

4 comments to “ಹೆಣ್ಣು ಮತ್ತು ಸುಳ್ಳು; ಕೆಲವು ಟಿಪ್ಪಣಿಗಳು”
  1. ಗಡಿಗಡಿಗಳಾಚೆಗೂ ಹೆಣ್ಣಿನ ಪರಿಸ್ಥಿತಿಯೊಂದೇ.
    ಉತ್ತಮ ಬರಹ!

  2. ಸುಳ್ಳಿನಿಂದಲೇ ಸಮಾಜಿಕವಾಗಿ ಹೆಣ್ಣನ್ನು ಅಲಂಕರಿಸಲಾಗಿದೆ. ಆ ಅಲಂಕಾರವನ್ನು ಹೆಣ್ಣು ತೆಗೆದು ಸಹಜ ಸೌಂದರ್ಯವತಿಯಾಗಲು ಪ್ರಯತ್ನಿಸುತ್ತಿದ್ದಾಳೆ. ಈ ಪ್ರಯತ್ನಕ್ಕೆ ಶತಮಾನಗಳಿಂದಲೂ ಅಡ್ಡಿ ಆತಂಕಗಳು ಮುಂದಗುತ್ತಲೇ ಇದೆ.

  3. ಅತ್ಯಂತ ಮಹತ್ವಪೂರ್ಣ ಸೃಜನಶೀಲ ಲೇಖಕಿಯನ್ನು ಕನ್ನಡಕ್ಕೆ ಪರಿಚಯಿಸಿದ ನಿಮಗೆ ಅನಂತ ಕೃತಜ್ಞತೆಗಳು. ಪೌರುಷಶಾಹೀ ಜಗತ್ತಿಗೆ
    ಸತ್ಯವನ್ನ ಮನಮುಟ್ಟುವಂತೇ ಚುಚ್ಚಿ ಬೆಚ್ಚಿ ಬೀಳಿಸುವಂತೇ ಅಭಿವ್ಯಕ್ತಿಸಿದ ರಿಚ್ ರವರ ಕೃತಿ ಕನ್ನಡಕ್ಕೆ ಅವಶ್ಯ ಻ಅನುವಾದವಾಗಬೇಕು. ಆ ಪ್ರಯತ್ನವನ್ನೂ ನೀವೇ ಮಾಡಬಾರದೇಕೆ..? ಇದೀಗ ತಾನೇ ಕನ್ನಡದಲ್ಲಿ ಗಟ್ಟಿ ಹೆಜ್ಜೆ ಮೂಡಿಸುತ್ತಿರುವ ಮಹಿಳಾ ಚಳುವಳಿ ಪ್ರಸ್ತುತ ಕವಯತ್ರಿಯ ಕೃತಿಗಳಿಂದ ಹೊಸ ಹರಿವನ್ನು ಪಡೆದೀತು. ಧನ್ಯವಾದಗಳು.

ಪ್ರತಿಕ್ರಿಯಿಸಿ