ತಿಥಿ ಸಿನೆಮಾದ ಪ್ರಚಾರದಲ್ಲಿ ಒತ್ತು ಕೊಟ್ಟ ಮತ್ತೊಂದು ಅಂಶವನ್ನು ನಾವು ಗಮನಿಸಬೇಕು. ಚಿತ್ರದಲ್ಲಿ ನಟಿಸಿದವೆರೆಲ್ಲರೂ ವೃತ್ತಿಪರ ನಟರಾಗಿರದೇ ಅದೇ ಹಳ್ಳಿಯ ಜನರಾಗಿದ್ದುದು ಪ್ರಶಂಸನೀಯ. ಇಲ್ಲಿ ಪ್ರಮುಖವಾದ ಅಂಶವೆಂದರೆ, ಇದೇನು ಹೊಸ ಪದ್ಧತಿಯೇನಲ್ಲ. ಇದು ಸಿನೆಮಾ ಎಂಬ ಕಲೆಯಷ್ಟೇ ಹಳೆಯದಾದದ್ದು. ಕೆಲವೊಮ್ಮೆ ಇದು ಯಶಸ್ವಿಯಾಗುತಿತ್ತು, ಇನ್ನೂ ಕೆಲವೊಮ್ಮೆ ನೆಲ ಕಚ್ಚುತಿತ್ತು. ಆದರೆ ಈ ಪದ್ಧತಿ ತುಂಬಾ ಅಪರೂಪವಾಗಲು ಒಂದು ಒಳ್ಳೆಯ ಕಾರಣವಿದೆ; ಅದೇನೆಂದರೆ ಬಹುತೇಕ ‘‘ರಿಯಲ್ ಜನರಿಗೆ” ಅಭಿನಯಿಸಲು ಬರದೇ ಇರಬಹುದು ಮತ್ತು ಕ್ಯಾಮೆರ ಕಣ್ಣಿಗೆ ಒಗ್ಗದೆ ಇರಬಹುದು. ಆದ್ದರಿಂದಲೆ ವೃತ್ತಿನಿರತ ನಟರೇ (ಹಾಗೂ ದೊಡ್ಡ-ದೊಡ್ಡ ಸ್ಟಾರ್ ಗಳೇ) ಆಯಾ ಪಾತ್ರಗಳ ಶರೀರ-ಶಾರೀರಗಳಿಗೆ ಸೂಕ್ತರೋ ಇಲ್ಲವೋ ಎಂದು ಪರೀಕ್ಷಿಸಲು ಸ್ಕ್ರೀನ್ ಟೆಸ್ಟ್ ಗೆ ಒಳಪಡುತ್ತಾರೆ.
ನಟರಲ್ಲದವರನ್ನು ಬಳಸಿಕೊಂಡು ಮಾಡುವ ಸಿನೆಮಾಗಳು ಅಪರೂಪ. ಹಾಗೇ ಮಾಡಿದರೂ ಕೆಲವು ಪಾತ್ರಗಳಿಗೆ ಮಾತ್ರ ಅವರನ್ನು ಸೀಮಿತಗೊಳಿಸುತ್ತಾರೆ. ಇಂತಹ ಸಿನೆಮಾಗಳ ನಿರ್ದೇಶಕರು ತಮ್ಮ ಪ್ರಯೋಗಗಳಲ್ಲಿನ ನಟರು ವೃತ್ತಿಪರರಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಪ್ರದರ್ಶನ ಕಲೆಗಳ ಅನುಭವವಾದರೂ ಇರುವಂತೆ ನೋಡಿಕೊಳ್ಳುತ್ತಾರೆ; ಉದಾಹರಣೆಗೆ, ಇದನ್ನು ನಾವು ಸತ್ಯಜಿತ್ ರೇ ಅವರ ’ಪಥೇರ್ ಪಾಂಚಾಲಿ’ ಯಲ್ಲಿ ಕಾಣಬಹುದು. ರೇ ಗೆ ವೃತ್ತಿಪರರಲ್ಲದ ನಟರ ಪರವಾಗಿ ಯಾವುದೇ ವಿಶೇಷ ಬದ್ಧತೆಯೇನೂ ಇರಲಿಲ್ಲ, ಬದಲಾಗಿ ಇಂತಹ ಅಮೆಚ್ಯೂರ್ ನಟರಿಂದ ಸಿನೆಮಾದ ಖರ್ಚು ಉಳಿಸಬಹುದು ಎಂಬ ನಿಲುವು. ೧೯೪೮ರ ಇಟಾಲಿಯನ್ ಸಿನೆಮಾ ’ಬೈಸಿಕಲ್ ಥೀವ್ಸ್’ (ಇದು ರೇ ಅವರಿಗೆ ಪ್ರಭಾವ ಬೀರಿದ್ದ ಸಿನೆಮಾವು ಹೌದು) ಸಹ ವೃತ್ತಿಪರರಲ್ಲದ ನಟರನ್ನು ಬಳಸಿ ಪ್ರಸಿದ್ಧವಾಯಿತು. ಆದರೆ, ಅದರ ನಿರ್ದೇಶಕ ಮತ್ತು ತಾನೇ ಒಬ್ಬ ವೃತ್ತಿ ಕಲಾವಿದನಾದ ವಿತ್ತೋರಿಯೋ ದ ಸೀಕಾ ತನ್ನ ಉಳಿದ ಸಿನೆಮಾಗಳಿಗೆ ಯಾವುದೇ ಮುಲಾಜಿಲ್ಲದೆ ವೃತ್ತಿನಿರತ ಕಲಾವಿದರನ್ನೇ ಬಳಸಿದ. ಮೀರಾ ನಾಯರ್ ಅವರ ಸಲಾಂ ಬಾಂಬೆ (೧೯೭೮) ವೃತ್ತಿಪರರಲ್ಲದ ನಟರನ್ನು ಒಂದು ಮಾರುಕಟ್ಟೆಯ ತಂತ್ರವನ್ನಾಗಿ ಬಳಸಿದರೂ, ಬಹುಪಾಲು ಪಾತ್ರಗಳು ಮಕ್ಕಳೇ ಆಗಿದ್ದವು; ಎಷ್ಟಾದರೂ ಮಕ್ಕಳು ವೃತ್ತಿಪರ ನಟರೇನೂ ಅಲ್ಲವಲ್ಲ.
ಎಲ್ಲಿ ಒಂದು ಸಿನೆಮಾ ಅವರ ಬದುಕಿನ ನೈಜಚಿತ್ರಣವನ್ನೋ ಅಥವಾ ಆ ನಿಜಬದುಕಿಗೆ ಹತ್ತಿರವಾದ ಕಥೆಗಳನ್ನು ಕಟ್ಟಿಕೊಡಲು ಹೊರಡುತ್ತದೆಯೋ ಅಲ್ಲಿ ಈ ಯಶಸ್ಸಿನ ಸಾಧ್ಯತೆ ಹೆಚ್ಚಿರುತ್ತದೆ. ವೃತ್ತಿಪರರೋ ಅಥವಾ ಹವ್ಯಾಸಿಗಳೋ, ಎಲ್ಲಾ ನಟರು ಅಭಿನಯವನ್ನಂತೂ ಮಾಡಲೇ ಬೇಕಾಗುವುದರಿಂದ, ”ಅವರು ತಾವಾಗಿಯೇ ಇರಬಹುದು” ಎಂಬ ಕಾರಣವನ್ನು ಕೊಡಲಾಗುವುದಿಲ್ಲ. ಬದಲಾಗಿ, ಎಲ್ಲೆಲ್ಲಿ ಅವರು ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾರೋ ಅಲ್ಲಲ್ಲಿ ಅವರ ವಿಶಿಷ್ಟ ಜ್ಞಾನ (ತಮ್ಮ ಪರಿಸರದೊಂದಿಗಿನ ಅವಿನಾಭಾವ ಸಂಬಂಧ) ಅವರ ಪ್ರದರ್ಶನಕ್ಕೆ ಒಂದು ಹೊಸ ಅಂಶವನ್ನೇ ಸೇರಿಸುತ್ತದೆ.
ಆದ್ದರಿಂದಲೇ ವೃತ್ತಿಪರರಲ್ಲದ ನಟರನ್ನು ಬಳಸುವುದು ಹೊಸದಾಗಿ ಕಂಡುಹಿಡಿದ ಕಾರ್ಯತಂತ್ರವೂ ಅಲ್ಲ ಅಥವಾ ಯಶಸ್ಸಿನ ಮಾಯಾ ಫಾರ್ಮುಲವೂ ಅಲ್ಲ. ಇದು ಸಾಮಾನ್ಯವಾಗಿ ಯಶಸ್ಸು ಕಾಣುತ್ತದೆ, ಆದರೆ ಸಂಧರ್ಭಕ್ಕನುಗುಣವಾಗಿ.
ಎಲ್ಲಿ ಒಂದು ಸಿನೆಮಾ ಅವರ ಬದುಕಿನ ನೈಜಚಿತ್ರಣವನ್ನೋ ಅಥವಾ ಆ ನಿಜಬದುಕಿಗೆ ಹತ್ತಿರವಾದ ಕಥೆಗಳನ್ನು ಕಟ್ಟಿಕೊಡಲು ಹೊರಡುತ್ತದೆಯೋ ಅಲ್ಲಿ ಈ ಯಶಸ್ಸಿನ ಸಾಧ್ಯತೆ ಹೆಚ್ಚಿರುತ್ತದೆ. ವೃತ್ತಿಪರರೋ ಅಥವಾ ಹವ್ಯಾಸಿಗಳೋ, ಎಲ್ಲಾ ನಟರು ಅಭಿನಯವನ್ನಂತೂ ಮಾಡಲೇ ಬೇಕಾಗುವುದರಿಂದ, ”ಅವರು ತಾವಾಗಿಯೇ ಇರಬಹುದು” ಎಂಬ ಕಾರಣವನ್ನು ಕೊಡಲಾಗುವುದಿಲ್ಲ. ಬದಲಾಗಿ, ಎಲ್ಲೆಲ್ಲಿ ಅವರು ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾರೋ ಅಲ್ಲಲ್ಲಿ ಅವರ ವಿಶಿಷ್ಟ ಜ್ಞಾನ (ತಮ್ಮ ಪರಿಸರದೊಂದಿಗಿನ ಅವಿನಾಭಾವ ಸಂಬಂಧ) ಅವರ ಪ್ರದರ್ಶನಕ್ಕೆ ಒಂದು ಹೊಸ ಅಂಶವನ್ನೇ ಸೇರಿಸುತ್ತದೆ.
ಒಬ್ಬ ವೃತ್ತಿನಿರತ ಕಲಾವಿದನಿಗೆ ಇದು ಕಷ್ಟಸಾಧ್ಯ ಎಂದು ಹೇಳುವುದಕ್ಕಿಂತಲೂ ಅಸಾಧ್ಯವೆನ್ನುವುದೇ ಸರಿ.
’ತಿಥಿ’ಯಲ್ಲಿ ಎಲ್ಲಾ ಹಳ್ಳಿಗರ ಅಭಿನಯ (ಒಂದು ಆನ್ಸಾಂಬೆಲ್ ಆಗಿ), ಜಿಲ್ಲೆಗೆ ಸೇರಿದ ಯಾವುದೇ ಜನ ಥಟ್ಟನೇ ಗುರುತಿಸಬಹುದಾದಂತಹ ಒಂದು ವಿಶಿಷ್ಟ ನೈಜತೆಯ ವಾತಾವರಣವನ್ನು ಇಡೀ ಸಿನೆಮಾಕ್ಕೆ ಕಟ್ಟಿಕೊಟ್ಟಿತು. ನಾನು ಜಗತ್ತಿನ ಮೂಲೆಮೂಲೆಯ ಹಳ್ಳಿಗಳಲ್ಲಿ ವಾಸಿಸಿದ್ದೇನೆ, ಹಳ್ಳಿಜೀವನದ ಒಳ ಗುಟ್ಟುಗಳ ಬಗ್ಗೆ ನಾ ಬಲ್ಲೆ. ನಾನು ಮಂಡ್ಯ ಜಿಲ್ಲೆಯಲ್ಲಿ ಕೆಲವು ದಿನಗಳನ್ನು ಮಾತ್ರ ಕಳೆದಿದ್ದರೂ, ಅಲ್ಲಿನ ಗೌಡರುಗಳ ಬಾಯಿಬಡುಕತನ ಹೇಗೆ ಒಬ್ಬ ಅಪರಿಚಿತನನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದನ್ನು ನಾನು ಕಣ್ಣಾರೆ ಕಂಡೆ. ಬೇರೆಲ್ಲೋ ತಿಂಗಳು-ವರ್ಷಗಳ ಆತ್ಮೀಯತೆಯನ್ನು ಇಲ್ಲಿ ಕ್ಷಣಮಾತ್ರದಲ್ಲಿ ಪಡೆಯಬಹುದು. ನಾನು ಹೀಗೆ ಒಂದು ಕಾಫಿ-ಸ್ಟಾಲ್ ನಲ್ಲಿ ಕುಳಿತಾಗ ಕೇಳಿದ ಕಥೆಯೂ ಸಿನೆಮಾದಲ್ಲಿ ಗದ್ದಪ್ಪ ಕುರಿಕಾಯುವವರಿಗೆ ಹೇಳುವ ತನ್ನ ಬದುಕಿನ ಕಥೆಯೂ ಬಹಳ ಸಾಮ್ಯತೆಯನ್ನು ಹೊಂದಿದ್ದವು.
ಸೆಂಚುರಿ ಗೌಡ, ಗಡ್ಡಪ್ಪ ಮುಂತಾದ ಪಾತ್ರಗಳ ಯಶಸ್ಸು ಈ ಸಿನೆಮಾದ ನಿರ್ದಿಷ್ಟವಾದ ಸಂದರ್ಭಕ್ಕೆ ಸಲ್ಲುತ್ತದೆ. ಈ ಪಾತ್ರಗಳನ್ನು ಅವರಲ್ಲದ ಜಾನಪದ ಹೀರೋಗಳನ್ನಾಗಿ ದುರುಪಯೋಗ ಮಾಡುವುದು ತಪ್ಪು; ಎಷ್ಟೇ ಆದರೂ, ಅವರ ಜೀವನದ ಚಿತ್ರಣ ಯಾವುದಕ್ಕೂ ಕಡಿಮೆಯಿಲ್ಲದಂತೆ ಮೂಡಿಬಂದಿದೆ. ಹೇಗೆ ಗೌಡರ ವೈರಿಗಳು ತಮ್ಮ ತಪ್ಪುಗಳನ್ನು ತಾವೇ ಕಂಡುಕೊಳ್ಳಬಲ್ಲರೋ ಅಷ್ಟೇ ಸುಲಭವಾಗಿ ಅವರ ಸ್ನೇಹಿತರು ಸಹ ತಮ್ಮಲ್ಲಿರುವ ಒಳ್ಳೆಯ ಗುಣಗಳ ಗುರಿತಿಸಿಕೊಳ್ಳಬಲ್ಲರು. ಸಿನೆಮಾದ ಯಶಸ್ಸು ಅವರನ್ನು ಅಹೋರಾತ್ರಿ ಕುಶಲ ನಟರನ್ನಾಗೇನೂ ಮಾಡಲಿಲ್ಲ. ಇದೇ ವೃತ್ತಿಪರರಲ್ಲದ ನಟರನ್ನು ಹಾಕಿಕೊಂಡು ಮತ್ತೊಂದು ಕಾಮಿಡಿ ಸಿನೆಮಾವನ್ನು ಮಾಡುವ ಯೋಚನೆ ಇದೆ ಎಂಬ ವಿಷಯವನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಆದರೆ ಈ ಯೋಜನೆಯನ್ನು ಕೈ ಬಿಡುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ. ಈ ಮುಂದುವರಿದ ಭಾಗ, ಬಹುತೇಕ ಎಲ್ಲಾ ಸೀಕ್ವಲ್ ಗಳಂತೆ, ನಿಸ್ಸಂದೇಹವಾಗಿ ನಿರಾಶೆಯನ್ನು ಉಂಟು ಮಾಡಿ ಮೂಲ ಸಿನೆಮಾದ ಖ್ಯಾತಿಗೆ ಕುಂದು ಬರುವಂತೆ ಮಾಡುತ್ತದೆ.
ನಾನು ಆಗಲೇ ಒಬ್ಬ ಸ್ನೇಹಿತನ ಅಭಿಪ್ರಾಯವನ್ನು ನಿಮ್ಮೊಡನೆ ಹಂಚಿಕೊಂಡೆ. ಮತ್ತೊಬ್ಬ ಸ್ನೇಹಿತ ಸಿನೆಮಾವನ್ನು ಪ್ರಶಂಸಿಸುತ್ತಾ, ಅದರಲ್ಲಿರುವ ಒಂದು ಅಸಾಧಾರಣ ಗುಣ ಪರದೆ ಮತ್ತು ಪ್ರೇಕ್ಷಕನ ನಡುವೆ ಇರುವ ಅಂತರವನ್ನು ಅಳಸಿ ಹಾಕಿ, ನೋಡುಗರನ್ನು ತನ್ನ ಕಥೆಯೊಳಗೆ ಸೆಳೆಯುತ್ತದೆ. ನನ್ನ ಸ್ನೇಹಿತ ಹೇಳಿದ್ದು ಸರಿಯೇ, ಆದರೆ ಪ್ರೇಕ್ಷಕರ ಮೇಲಾಗುವ ಈ ಪರಿಣಾಮದ ಬಹುಪಾಲು ಕೀರ್ತಿ ಅದರ ಉತ್ಕೃಷ್ಟ ಮಟ್ಟದ ಛಾಯಾಗ್ರಹಣಕ್ಕೆ ಸಲ್ಲುತ್ತದೆ. ಇದೇ ಕಾರಣಕ್ಕೆ ಈ ಮೂರೂ ಸಿನೆಮಾಗಳಲ್ಲಿ ತಿಥಿ ಉಳಿದವುಗಳಿಗಿಂತ ಮೇಲ್ದರ್ಜೆಯಲ್ಲಿದೆ.
ನಾನು ಈ ಹಿಂದೆ ಶೂಟಿಂಗ್ ನ ಸಮಯದಲ್ಲಿ ನಿರ್ದೇಶಕ ಮತ್ತು ಆತನ ಕ್ಯಾಮೆರಾಮೆನ್ ಗಳ ನಡುವೆ ಜಟಾಪಟಿ ನಡೆದಿತ್ತು ಎಂದು ಕೇಳಿದ್ದೆ. ನಿರ್ದೇಶಕ ಸಿನೆಮಾದ ’ಲುಕ್’ ಅನ್ನು ವಿಪರೀತವಾಗಿ ಕಂಟ್ರೊಲ್ ಮಾಡುವುದು ಹಾಗೂ ಆತನ ಬಲವಾದ ನಿಲುವುಗಳು ಛಾಯಾಗ್ರಹಕರಿಗೆ ಇಷ್ಟವಾಗಲಿಲ್ಲವಂತೆ. ಇದೇನಾದರೂ ಸತ್ಯವೇ ಆಗಿದ್ದಲ್ಲಿ, ನಾನು ನಿರ್ದೇಶಕನ ಪರವಾಗಿ ನಿಲ್ಲುತ್ತೇನೆ. ಒಬ್ಬ ಛಾಯಾಗ್ರಾಹಕನ ಕೆಲಸ ಸಿನೆಮಾವನ್ನು ಶೂಟ್ ಮಾಡುವುದು. ಆದರೆ ಸಿನೆಮಾವನ್ನು ಸರಿಯಾದ ದಿಕ್ಕಿನೆಡೆ ಕರೆದೊಯ್ಯುವುದು ಒಬ್ಬ ನಿರ್ದೇಶಕನ ಜವಾಬ್ದಾರಿ.
ನಮ್ಮ ಆಧುನಿಕ ಛಾಯಾಗ್ರಾಹಕರು ಬಹುವಾಗಿ ಇಷ್ಟ ಪಡುವ ಇಕ್ಕಟ್ಟಿನ ’ಕ್ಲೋಸ್ ಫಿಲ್ಮಿಂಗ್’ ಇಲ್ಲೆಲ್ಲೂ ಕಾಣಸಿಗುವುದಿಲ್ಲ; ಅಂದರೆ ಇಲ್ಲಿ ಪ್ರೇಕ್ಷಕ ಒಂದು ಫ್ರೇಂನಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಅವಕಾಶವಿದೆ. ’ಕ್ಲೋಸ್ ಫಿಲ್ಮಿಂಗ್’ ನಲ್ಲಿ ಪ್ರೇಕ್ಷಕರಿಗೆ ಜಾಗ ಸಿಗುತ್ತದೆ ಎಂಬುದು ಅಕ್ಷರಶಃ ಸುಳ್ಳು. ಬದಲಾಗಿ, ಅದು ಪ್ರೇಕ್ಷಕರನ್ನು ಪೂರ್ತಿ ಬ್ಲಾಕ್ ಮಾಡಿ ಬಿಡುತ್ತದೆ. ಆದರೆ ಈ ಸಿನೆಮಾ, ನನ್ನ ಸ್ನೇಹಿತ ಗಮನಿಸಿದಾಗ ಹಾಗೆ, ನಮ್ಮನ್ನು ಸಂಪೂರ್ಣವಾಗಿ ತನ್ನೊಳಗೆ ಸೆಳೆದುಕೊಂಡು ಬಿಡುತ್ತದೆ.
ಹ್ಯಾಂಡ್ ಹೆಲ್ಡ್ ಕ್ಯಾಮೆರಾಗಳನ್ನು ಉಪಯೋಗಿಸಿದ ರೀತಿ ಸಹ ಶ್ಲಾಘನೀಯ. ಬೇಕಾದ್ದಕ್ಕಿಂತ ಹೆಚ್ಚಾಗಿ ಉಪಯೋಗಿಸಿದರೆ ಕಿರಿಕಿರಿ ಉಂಟುಮಾಡಬಹುದಾದ ಈ ವಿಧಾನವನ್ನು ’ತಿಥಿ’ಯಲ್ಲಿ ಸೂಕ್ತವಾದ ಆಯ್ದ ಕಡೆಗಳಲ್ಲಿ ಮಾತ್ರ ಉಪಯೋಗಿಸಿದ್ದಾರೆ.
ಈ ’ಸೆಳೆತ’ ದ ಜೊತೆಜೊತೆಗೆ ಇಡೀ ಪಾತ್ರಗಣದ ಅಭಿನಯವು, ಪ್ರೇಕ್ಷಕರನ್ನು ಕಥೆ ಹಾಗು ಪಾತ್ರಗಳ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿತು. ಈ ರೀತಿಯ ಸ್ವಯಂ ಗುರುತಿಸುವಿಕೆ ಅಥವಾ ಸೆಲ್ಫ್ ಐಡೆಂಟಿಫಿಕೇಷನ್, ಬೀಡಿ ಬಿಟ್ಟು ಮತ್ತೇನನ್ನೂ ಸೇದದ, ಮೊಬೈಲ್ ಫೋನ್ ಸಂಸ್ಕೃತಿಯನ್ನು (ಇದರ ದುಷ್ಪರಿಣಾಮಗಳನ್ನು ಚಿತ್ರದಲ್ಲಿ ಚೆನ್ನಾಗಿ ಬಿಂಬಿಸಲಾಗಿದೆ) ಅತಿಯಾಗಿ ದ್ವೇಷಿಸುವ ಮತ್ತು ಆಡಂಬರವನ್ನು ನಿರಾಕರಿಸುವ ಆಜನ್ಮ ಸಿನಿಕ ಮತ್ತು ಅನಾರ್ಕಿಸ್ಟ್ ಆದ ನನ್ನಂತವನಿಗೆ ಬಹು ಕಷ್ಟವೇನೂ ಆಗಲಿಲ್ಲ. ನಾನೇನೂ ’ಟೈಗರ್ ಬ್ರಾಂಡಿ’ಯನ್ನು ಕುಡಿಯುವ ಅಭ್ಯಾಸವನ್ನು ಕೈಗೆತ್ತಿಕೊಳ್ಳದಿದ್ದರೂ (ಅದು ನನಗೆ ಅಜೀರ್ಣವಾಗಬಹುದು), ಒಬ್ಬ ಹೊರದೇಶದವನಾಗಿ ನನಗೆ ಅನ್ನಿಸಿದ್ದು ಇದು: ಉಳಿದ ಪ್ರೇಕ್ಷಕರಂತೆ, ಈ ಸಿನೆಮಾ ನನ್ನ ಭಾಗವಾಯಿತು, ನಾನು ಸಿನೆಮಾದ ಭಾಗವಾದೆ.
ಈ ಸಿನೆಮಾದ ಯಶಸ್ಸಿನಿಂದ ನಿರ್ಮಾಪಕರು ಮತ್ತು ವಿತರಕರು ಸಾಕಷ್ಟು ಪಾಠಗಳನ್ನು ಕಲಿಯಬಹುದು. ಜನರು ಸಿನೆಮಾ ಮಂದಿ ಯೋಚಿಸುವಷ್ಟು ಪೆದ್ದರಲ್ಲ, ಅವರೂ ಸಹ ಒಂದು ಒಳ್ಳೆಯ ಚಿತ್ರವನ್ನು ಆಸ್ವಾದಿಸಬಲ್ಲರು. ರೆಡ್ಡಿ ಇನ್ನೂ ತಮ್ಮ ವೃತ್ತಿಜೀವನದ ಆರಂಭದಲ್ಲಿರುವ ಯುವ ನಿರ್ದೇಶಕರು, ಅವರು ಇನ್ನೂ ಇದೇ ರೀತಿಯ ಎಷ್ಟೋ ಒಳ್ಳೆಯ ಚಿತ್ರಗಳನ್ನು ಮಾಡಲಿ ಎಂಬುದು ನನ್ನ ಆಶಯ. ಆದರೆ ಇಂತಹ ಪ್ರಯತ್ನಗಳು ನಿಜವಾಗಬೇಕಾದರೆ ನಿರ್ಮಾಣ ಸಂಸ್ಥೆಗಳು ನೆರವಾಗಬೇಕು, ಇಡೀ ರಾಜ್ಯದ ಉದ್ದಗಲಕ್ಕೂ ಚಿತ್ರ ಬಿಡುಗಡೆಯಾಗಲು ವಿತರಕರು ಮುಂದಾಗಬೇಕು. ಮುಖ್ಯವಾಗಿ, ಇಂತಹ ಸಿನೆಮಾಗಳ ಪ್ರೆಮಿಯರ್ ಶೋಗಳು ಲೊಕಾನೊ, ಟೆಕ್ಸಸ್, ಟಿಂಬಕ್ಟೂವಿಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ ನಡೆಯಬೇಕು.
ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಅನುವಾದ : ಅಮೂಲ್ಯ ಅರಸಿನಮಕ್ಕಿ
ಎಮ್.ಎ ಕಲ್ಚರ್ಲ್ ಸ್ಟಡೀಸ್ ಪದವೀಧರೆ. ಬಿಎ ಇಂಗ್ಲೀಷ್, ಪತ್ರಿಕೋದ್ಯಮ, ಮನಃಶಾಸ್ತ್ರ ಮಾಡಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ೨೦೧೪ನೇ ಸಾಲಿನ ಯುವ ಭಾರತ ಫೆಲ್ಲೊ. ಕಲೆ, ಸಾಹಿತ್ಯ ಸೇರಿದಂತೆ ನಾಟಕದ ಜೊತೆಗಿನ ನಿಕಟವಾದ ಒಡನಾಟವೂ ಇದೆ.
ಚಿತ್ರಗಳು: ಅಂತರ್ಜಾಲ
ಡೇವಿಡ್ ತನ್ನ ವೃತ್ತಿ ಜೀವನದಲ್ಲಿ ಈಗಾಗಲೇ ಸಂಶೋಧಕ, ಪ್ರಾಧ್ಯಾಪಕ, ಪತ್ರಕರ್ತ ಹೀಗೆ ಹಲವು ಪಾತ್ರಗಳನ್ನ ಅಭಿನಯಿಸಿದ್ದರೂ ತನ್ನನ್ನು ‘ಆಲೋಚನೆಯ ಹುಳ’ (thinking reed) ಎಂದಷ್ಟೇ ಕರೆದುಕೊಳ್ಳುತ್ತಾರೆ. ಮೂಲತಃ ಇಂಗ್ಲೇಂಡಿನವರು. ಬದುಕಿನ ಹೆಚ್ಚಿನ ಭಾಗ ಕಳೆದದ್ದು ಫ್ರಾನ್ಸಿನಲ್ಲಿ. ಸದ್ಯ ಬೆಂಗಳೂರು ವಾಸಿ.