ಅಡಿಗರ ಈ ಪದ್ಯ 1948ರಲ್ಲಿ ಪ್ರಕಟವಾದ ‘ಕಟ್ಟುವೆವು ನಾವು’ ಕವನ ಸಂಕಲನದಲ್ಲಿದೆ. ಋತುಮಾನಕ್ಕಾಗಿ ನಿನಾದ ಕಾವ್ಯ ಗಾಯನ ಬಳಗ ಈ ಹಾಡನ್ನು ಹಾಡಿದ್ದಾರೆ .
ಪ್ರಸ್ತುತಿ : ನಿನಾದ ಕಾವ್ಯ ಗಾಯನ ಬಳಗ , ಉಡುಪಿ
ಸಂಗೀತ ಸಂಯೋಜನೆ : ಗುರುರಾಜ ಮಾರ್ಪಳ್ಳಿ
ಗಾಯನ : ವಿದ್ವಾನ್ ರವಿಕಿರಣ್ ಮಣಿಪಾಲ್ | ಡಾ . ಶಶಿಕಾಂತ್. ಕೆ
ಪಕ್ಕವಾದ್ಯ : ಭಾರವಿ ದೇರಾಜೆ | ಶಶಿಕಿರಣ್ ಮಣಿಪಾಲ್
ಎಂದು ಕೊನೆ ? – ಹಾ – ಎಂದು ಕೊನೆ?
ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
ಹಬ್ಬಕೆ ತಾ ಬರದೇನು ಕೊನೆ?
ಎಂದು ಕೊನೆ? – ಓ – ಎಂದು ಕೊನೆ ?
ಯುಗಯುಗದಿಂದಲು ಬಗೆಬಗೆಯಿಂದಲು
ನಗುವಿನೊಳೂ ಯಾತನೆಯೊಳಗೂ
ನರನೆದೆಯಾಳವನಳಲಿಪ ಅಳುಕಿದು ;
‘ಬರದೆ ಕೊನೆ ? – ಇದ – ಕಿರದೆ ಕೊನೆ !’
ಎನಿಬರೊ ನರವರರೆದ್ದು ಬಂದು ಕಡೆ
ಕಡೆದರು ನರನೆದೆಯ;
ಹಾಲಾಹಲವೇ ಹರಿಯಿತು, ಮೊರೆಯಿತು ;
ಬಾರದೇನೊ ಅಮೃತ – ಎಂದಿಗೂ –
ಬಾರದೇನೋ ಅಮೃತ ?
ಮುಗಿಲಲಿ ಮೂಡಿದ ಒಲವಿನ ಕನಸು
ಮನಸಿಗಿಳಿಯಲಿಲ್ಲ – ಇಳಿದರು –
ನನಸನಾಳದಲ್ಲ !
ಅರಿವಿಗೂ ಇರಿವಿಗು ಇರುವೀ ಅಂತರ
ಕಳೆಯಲಾರದೇನೋ – ಎಂದಿಗು –
ಅಳಿಯಲಾರದೇನೋ !
ಎದೆಗು ಎದೆಗು ನಡುವಿದೆ ಹಿರಿಗಡಲು ;
ಮುಟ್ಟಲಾರೆವೇನೋ – ಸೇತುವೆ –
ಕಟ್ಟಲಾರೆವೇನೋ !
ನಡುವಿನ ತೆರೆಗಳ ಮೊರೆಹವೆ ಮಾನವ
ಜೀವಗಾನವೇನೋ – ದೇವನ –
ದಿವ್ಯಗಾನವೇನೋ !
ಒಬ್ಬರನೊಬ್ಬರು ನಂಬುವ ತುಂಬುವ
ಹಬ್ಬವು ಕಬ್ಬದ ಕಾದಂಬಿನಿಯಲಿ
ಮೂಡುವ ಮಸುಳುವ ಮಳೆಬಿಲ್ಲಾಯಿತೆ ?
ಮೊಳೆಯದೆ ಅದು ಎದೆಯಾಳದಲಿ ?
ಬೆಳೆಯದೆ ಅದು ನಮ್ಮೀ ಬಾಳಿನಲಿ ?
ತಿಳಿಯುವ ಹೃದಯದ ಈ ತಳಮಳಕೆ ,
ಬೆಳೆಯುವ ಬುದ್ಧಿಯ ಈ ಕಳವಳಕೆ ,
ಬಲಿಯುವ ನರಕುಲದೀ ಒಳ ರೋಗಕೆ
ಎಂದು ಕೊನೆ ? – ಹಾ – ಎಂದು ಕೊನೆ ?
ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
ಹಬ್ಬಕೆ ತಾ ಇರದೇನು ಕೊನೆ ?
ಎಂದು ಕೊನೆ ? – ಹಾ – ಎಂದು ಕೊನೆ ?