ಆದಿಕವಿ ಪಂಪನ ಕೃತಿಗಳ ವಿಮರ್ಶೆ ಇಂದೂ ಕೊನೆ ಮುಟ್ಟಿಲ್ಲ. ಇನ್ನೂ ಮಟ್ಟುವಂತಿಲ್ಲ. ಸಹಜ ಕವಿಯೂ , ವಿದ್ವತ್ಕವಿಯೂ ಆದ ಪಂಪನಂತವರ ಕೃತಿಯ ಕುರಿತು ಕೊನೆಯ ಮಾತನ್ನು ಹೇಳಲು ಸಾಧ್ಯವೂ ಇಲ್ಲ . ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಸುಮಾರು 70 ವರ್ಷಕ್ಕಿಂತಲೂ ಮೇಲ್ಪಟ್ಟು ಕಾಲ ಪಂಪನ ಒಂದು ಪದ್ಯ ಸುದೀರ್ಘ ಚರ್ಚೆಯನ್ನು ಹುಟ್ಟುಹಾಕಿತು.
ವಿಕ್ರಮಾರ್ಜುನ ವಿಜಯದ ಒಂಬತ್ತನೇ ಆಶ್ವಾಸದ ಈ ಅರವತ್ತೊಂಬತ್ತನೇ ಪದ್ಯವನ್ನು ಎಸ್. ವಿ ರಂಗಣ್ಣ ಆದಿಯಾಗಿ ಇತ್ತೀಚಿನ ತನಕವೂ ಕನ್ನಡದ ಹಲವಾರು ಪ್ರಮುಖ ವಿದ್ವಾಂಸರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ . ಬಹುಕಾಲ ವಿದ್ವಾಂಸರ ಮಧ್ಯೆ ವಿವಾದ, ಚರ್ಚೆಗೆ ಕಾರಣವಾಗಿದ್ದ ಈ ಪದ್ಯಕ್ಕೆ ಕೊನೆಗೆ ದಿ. ಸೇಡಿಯಾಪು ಕೃಷ್ಣ ಭಟ್ಟರು ನೀಡಿದ ವ್ಯಾಖ್ಯಾನ ಕೊನೆಯ ಮಾತಾಗಿ ಈ ವರೆಗೆ ನಿಂತಿದೆ.
ಇದುವರೆಗೆ ಈ ಒಂದು ಪದ್ಯದ ಕುರಿತಾಗಿ ವಿವಿಧ ಲೇಖಕರು ಬರೆದದ್ದೆಲ್ಲವನ್ನು ಒಂದೆಡೆ ಸೇರಿಸಿ , ಕಾಲಾನುಕ್ರಮವಾಗಿ ಜೋಡಿಸಿ , ಸಂದರ್ಭಯೋಚಿತವಾದ ಹಾಗೂ ವಿಮರ್ಶಾತ್ಮಕವಾದ ಟಿಪ್ಪಣಿ – ಪ್ರಸ್ತಾವಣೆಯಿಂದ ಪುಷ್ಟಿಗೊಳಿಸಿ ಪುಸ್ತಕ ರೂಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ‘ಭಾನುಮತಿಯ ನೆತ್ತ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ . ಪಾದೇಕಲ್ಲು ವಿಷ್ಣು ಭಟ್ ಇದರ ಸಂಪಾದಕರು.
ಋತಮಾನದ ‘ವ್ಯಕ್ತ ಮಧ್ಯ’ ಸರಣಿಯ ಈ ವಿಡಿಯೋದಲ್ಲಿ ಪಾದೇಕಲ್ಲು ವಿಷ್ಣು ಭಟ್ಟರು ಈ ಪದ್ಯದ ಕುರಿತಾದ ವಾದ ಸರಣಿಯ ಸುಧೀರ್ಘ ಇತಿಹಾಸವನ್ನು ಪರಿಚಯಿಸುತ್ತಾ ಪದ್ಯದ ಅರ್ಥ ವಿವರಣೆಯನ್ನೂ ಮಾಡಿದ್ದಾರೆ. ಗಮಕಿ ಸಮುದ್ಯತಾ ವೆಂಕಟರಾಮ್ ಈ ಪದ್ಯವನ್ನು ವಾಚಿಸಿದ್ದಾರೆ.
ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಱಯೆ ಮುತ್ತಿನ ಕೇಡನೆ ನೋಡಿ ನೋಡಿ ಬ
ಳ್ಕುತ್ತಿರೆ ಯೇವಮಿಲ್ಲದಿವನಾಯ್ವುದೊ ತಪ್ಪದೆ ಪೇೞಮೆಂಬ ಭೂ
ಪೊತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ ||