ನನಗವಳು ಅನನ್ಯ ಆಕರ್ಷಣೆಯ ಸಾಕಾರ ರೂಪ

ಗೌರಿ ಲಂಕೇಶ್ ರ ವಿಚ್ಛೇದಿತ ಪತಿ ಚಿದಾನಂದ ರಾಜಘಟ್ಟ ಅವರು ತಮ್ಮ ಫೇಸ್ ಬುಕ್ ಪೋಸ್ಟಿನ ಮೂಲಕ ಮೂಲಕ ಗೌರಿಗೆ ಅರ್ಪಿಸಿರುವ ಭಾವಪೂರ್ಣ ಶೃದ್ಧಾಂಜಲಿ . ಇಂಗ್ಲೀಷ್‌ನಲ್ಲಿದ್ದ ಅವರ ಬರಹದ ಕೆಲವು ಭಾಗಗಳು ಕೆಲ ದಿನಗಳ ಹಿಂದೆ ಅಂತರ್ಜಾಲದಲ್ಲಿ ಹರಿದಾದಾಡವು . ಇಲ್ಲಿ ಋತುಮಾನ ಅವರ ಬರಹದ ಪೂರ್ಣ ಕನ್ನಡ ಭಾಷಾಂತರವನ್ನು ಪ್ರಕಟಿಸುತ್ತಿದೆ.

ಹದಿನೈದು ತಾಸಿನ ವಿಮಾನ ಪ್ರಯಾಣದ ನಂತರ ಈಗಷ್ಟೇ ಇಳಿದ ನನಗೆ ಕಂಡಿದ್ದು ಗೌರಿಯ ಕೆಲಸದ ಕುರಿತಾಗಿ ಹಾಗೂ ಅವಳ ಆದರ್ಶಗಳ ಕುರಿತಾದ ಪ್ರೀತಿಯ ಬರಹಗಳು. ಆಕೆಯದ್ದು ಸದುದ್ದೇಶಕ್ಕಾಗಿ ಬದುಕಿದ ಸುಂದರ ಬದುಕು, ಹಾಗೂ ಆ ಉದ್ದೇಶಗಳಿಗಾಗಿಯೇ ತಾನು ಹೋರಾಟವನ್ನು ನಡೆಸಿದಳು. ಅವಳ ಹೋರಾಟ ವ್ಯರ್ಥವಾಗುವುದಿಲ್ಲ. ವಿಮಾನದಲ್ಲಿ ಕುಳಿತಾಗಿನಿಂದ ನಾವು ಬೆಳೆಯುತ್ತಿದ್ದ ದಿನಗಳ ನೆನಪುಗಳನ್ನು ಮೆಲುಕು ಹಾಕತೊಡಗಿದೆ. ಅದರಲ್ಲಿ ಕೆಲವನ್ನು ಈ ಕೆಳಗೆ ಹೇಳಿದ್ದೇನೆ, ಏಕೆಂದರೆ ನಾವು ಬೆಳೆದ ಪರಿಸರವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಮನಮುಟ್ಟುವ ಪ್ರೀತಿಪೂರ್ವಕ ಸಂದೇಶಗಳನ್ನು ಕಳುಹಿಸಿದ ಗೆಳೆಯರೆಲ್ಲರಿಗೂ ಧನ್ಯವಾದಗಳು. ಪ್ರೀತಿ ಮತ್ತು ಶಾಂತಿ ಸದಾ ಇರಲಿ.

ಗೌರಿ ಲಂಕೇಶ್: ಅನನ್ಯ ಆಕರ್ಷಣೆಯ ಸಾಕಾರ ರೂಪ

ಇವತ್ತು ಗೌರಿ ಆಕೆಗೆ ಸಂದ ಎಲ್ಲ ವಿದಾಯ ಹಾಗೂ ಪ್ರಶಂಸೆಗಳನ್ನು ಓದಿದ್ದರೆ, ಅದರಲ್ಲಿಯೂ ಆತ್ಮ, ಪುನರ್ಜನ್ಮ ಹಾಗೂ ಸ್ವರ್ಗದ ಬಗೆಗಿನ ಮಾತುಗಳನ್ನು ಕೇಳಿದ್ದರೆ ಚೆನ್ನಾಗಿ ನಕ್ಕುಬಿಡುತ್ತಿದ್ದಳು. ಜೋರಾಗಿ ನಗದಿದ್ದರೂ, ಮುಸಿನಗುವಂತೂ ಖಂಡಿತಾ ಮೂಡುತ್ತಿತ್ತು. ನಾವು ಕಾಲೇಜಿನಲ್ಲಿರುವಾಗಲೇ ಸ್ವರ್ಗ, ನರಕ ಹಾಗೂ ಪುನರ್ಜನ್ಮಗಳೆಲ್ಲ ಬರೀ ಬೋಗಸ್ಸು ಎಂದು ತೀರ್ಮಾನಿಸಿದ್ದೆವು. ಈ ಭೂಮಿಯಲ್ಲೆ ಸಾಕಷ್ಟು ಸ್ವರ್ಗ ನರಕಗಳಿವೆ. ದೇವರಿಗೆ ಕೈತುಂಬ ಕೆಲಸ ಇರುವಾಗ ಅದನ್ನು ಕೊಡು, ಇದನ್ನು ಕೊಡು ಎಂದು ಗೋಗರೆಯುವುದನ್ನು ಬಿಟ್ಟು ಅವನ ಪಾಡಿಗೆ ಬಿಡುವುದು ಒಳ್ಳೆಯದು.

ಆದರೆ ನಮ್ಮೊಳಗೆ ಒಂದು ಒಪ್ಪಂದವಿತ್ತು. ಏನೇ ಆದರೂ, ಕುಟುಂಬದವರನ್ನೂ ಸೇರಿಸಿ ಯಾರನ್ನೂ ನಮ್ಮ ನಂಬಿಕೆಗಳು ಮತ್ತು ವಿಚಾರಗಳನ್ನು ಪಾಲಿಸುವುದಿಲ್ಲವೆನ್ನುವುದಕ್ಕಾಗಿ ನೋಯಿಸಬಾರದು. ಯೌವನದ ಬಿಸಿ ರಕ್ತ ಎನ್ನಿ. ಹಾಗೆ ನಡೆದುಕೊಳ್ಳುವುದು ಸ್ವಲ್ಪ ಕಷ್ಟಕರವೇ ಆಗಿತ್ತು. ಆದರೆ ಈ ರೀತಿಯ ಯೋಚನೆ ನಮಗೆ ಮುಂದಿನ ದಿನಗಳಲ್ಲಿ ಬಹಳ ಪ್ರಯೋಜನಕಾರಿಯಾಯಿತು. ಐದು ವರ್ಷದ ಪ್ರಣಯ ಮತ್ತು ಐದು ವರ್ಷಗಳ ವಿವಾಹದ ಸಾಮಿಪ್ಯದ ನಂತರ ವಿಚ್ಛೇದನವಾಗಿ ಇಪ್ಪತ್ತೇಳು ವರ್ಷಗಳಾದರೂ ನಾವು ಉತ್ತಮ ಸ್ನೇಹಿತರಾಗಿ ಉಳಿಯಲು ಇದೇ ಆಲೋಚನೆ ಸಹಾಯ ಮಾಡಿತು. ಯಾರನ್ನೂ ನೋಯಿಸಬಾರದು, ಪರಸ್ಪರರನ್ನು ಕೂಡ.

ನಾವು ಭೇಟಿಯಾಗಿದ್ದು ಭಾರತದ ವಿಚಾರವಾದಿ ಚಳುವಳಿಯ ತವರಾದ ನ್ಯಾಷನಲ್ ಕಾಲೇಜಿನಲ್ಲಿ. ನಮ್ಮ ಪ್ರಾಂಶುಪಾಲರದ ಎಚ್ ನರಸಿಂಹಯ್ಯನವರು ಮತ್ತು ಶ್ರೀಲಂಕಾದ ವಿಚಾರವಾದಿ ಡಾ. ಅಹಮದ್ ಕವೂರರು ಈ ಚಳುವಳಿಯ ಮುನ್ನುಡಿಕಾರರಾಗಿದ್ದರು. ಹದಿಹರೆಯದಿಂದಲೇ ನಾವು ಪ್ರಶ್ನೆ ಮಾಡುವುದನ್ನು, ದೇವ ಮಾನವರನ್ನು, ಅಂಧವಿಶ್ವಾಸಿಗಳನ್ನು, ಮೋಸಮಾಡುವವರನ್ನು ಬಯಲು ಮಾಡುವುದರಲ್ಲಿ ರೋಚಕತೆಯನ್ನು ಕಂಡೆವು . ಇದರ ಬಗ್ಗೆ ಮತ್ತೆ ವಿವರವಾಗಿ ಹೇಳುತ್ತೇನೆ.
ಈಗ ಇಲ್ಲಿ ಮೊದಲೇ ಹೇಳುತ್ತಿರುವ ಕಾರಣ, ಆಕೆಯ ಸಾವಿನ ಸಂದರ್ಭದಲ್ಲಿ, ಅವಳು ಬೆಳೆದು ಬಂದ ವಾತಾವರಣವನ್ನು ಅರ್ಥೈಸಿಕೊಳ್ಳುವುದು. ವಿಚಾರವಾದಿಗಳು ಮತ್ತು ಮುಕ್ತ ಚಿಂತಕರು ಇಂದು ಸ್ವಮತಾಂಧರ ತದ್ವಿರುದ್ಧವಾಗಿ ನಿಂತಿದ್ದಾರೆ.

ಧಾರ್ಮಿಕತೆ, ರಾಜಕೀಯ ಹಾಗೂ ಜೀವನದಂತಹ ವಿಚಾರಗಳ ಮತ್ತಿನಲ್ಲಿ(ಉಪಮೆಯಾಗಿ ಮಾತ್ರ) ಬೀಳುವ ಮುನ್ನ ನಾವು ಓದಿದ ಮೊದಲ ಪುಸ್ತಕಗಳಲ್ಲಿ ಒಂದು, ವಿಲ್ ಡ್ಯೂರಂಟ್ ಅವರ ‘ಸ್ಟೋರಿ ಆಫ್ ಫಿಲಾಸಫಿ’. ನಾವಿಬ್ಬರೂ ನಮ್ಮ ಮಾತೃಭಾಷೆ ಕನ್ನಡದಲ್ಲಿ ಪ್ರವೀಣರಾಗಿರಲಿಲ್ಲ. ಹಾಗಾಗಿ ಪಶ್ಚಾತ್ತಾಪದೊಂದಿಗೆಯೇ ನಾವು ವುಡ್‍ಹೌಸ್‍ನಿಂದ ಗ್ರಹಾಮ್ ಗ್ರೀನ್‍ವರೆಗೆ ಶಾನುಭೋಗರ ಪ್ರೀಮಿಯರ್ ಬುಕ್ ಶಾಪಿನಲ್ಲಿ ನಮಗಾಗಿಯೇ ದೊರೆಯುತ್ತಿದ್ದ ೨೦ ಶೇಕಡ ರಿಯಾಯಿತಿಯಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದೆವು. ವರ್ಷಗಳ ನಂತರ ಗೌರಿ ಕನ್ನಡಕ್ಕೆ ಮರಳಿದಳು.

ಇಷ್ಟರ ನಡುವೆ ನಾವು  “skinned our hearts and skinned our knees, learned of the love ABC’s.” ಡಿಲನ್ ಮತ್ತು ಬೀಟಲ್ಸ್‍ನ ಜೊತೆಗೆ ಟೆರಿ ಜಾಕ್ಸನ್ ಅವರ ಮಧುರವಾದ ‘Season in the sun’ ಹಾಡುಗಳನ್ನು ಗುನುಗುತ್ತಿದ್ದೆವು. ನಾನು ವರ್ಷಗಳ ನಂತರ ಭಾರತೀಯ ಸಂಗೀತದತ್ತ ತಿರುಗಿದೆ. ಆಕೆಗೆ ಅಷ್ಟಾಗಿ ಸಂಗೀತಜ್ಞಾನವಿರಲಿಲ್ಲ. ನಾವು ಎರಿಕ್ ಸೆಗಲ್ ಅವರ ‘Love story’ ಓದಿ ಬಹಳ ನಗುತ್ತಿದ್ದೆವು. ಒಟ್ಟಿಗೆ ತಿರುಗಾಡಲು ಶುರುವಿಟ್ಟ ಆರಂಭದಲ್ಲಿ ‘ಅಬ್ಬಾ’, ‘ಸಾಟರ್ಡೇ ನೈಟ್ ಫಿವರ್’, ‘ಗಾಂಧಿ’ ಮುಂತಾದ ಚಿತ್ರಗಳನ್ನು ನೋಡುತ್ತಿದ್ದೆವು. ಕಾರ್ಲ್ ಸಾಗನ್ ನನ್ನು ಓದಿದ ಹಾಗೂ ನೋಡಿದ ಬಳಿಕ ಎಷ್ಟೋ ಚಂದ್ರನಿಲ್ಲದ ರಾತ್ರಿಗಳಲ್ಲಿ ದೂರದ ಜಾಗಗಳಿಗೆ ಬಿಲಿಯನ್ನುಗಟ್ಟಲೆ ನಕ್ಷತ್ರಗಳನ್ನು ನೋಡಲು ಹೋಗುತ್ತಿದ್ದೆವು.

1983ರಲ್ಲಿ ಗೌರಿ. ನಮ್ಮ ಮದುವೆಗೆ ಸ್ವಲ್ಪ ಮುಂಚೆ. ಆಗ ಅವಳು 21. ಇದನ್ನು ನಾನು ನಮ್ಮ ಬನಶಂಕರಿಯ ಮನೆಯ ಮಹಡಿ ಮೇಲೆ ಸೆರೆ ಹಿಡಿದಿದ್ದೆ.

ಉತ್ಸಾಹಿ ಎನ್ನುವ ಪದ ಆಕೆಯನ್ನು ವರ್ಣಿಸಲಿಕ್ಕೆ ಎಳ್ಳಷ್ಟೂ ಸಾಲದು. ಕಾಲೇಜಿನಲ್ಲಿರುವಾಗ ನಾನು ಸಿಗರೇಟು ಸೇದುವುದು ಆಕೆಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಕೆಲವು ವರ್ಷಗಳ ನಂತರ ನಾನು ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದಾಗ ಅವಳು ಶುರು ಮಾಡಿಕೊಂಡಿದ್ದಳು. ಒಮ್ಮೆ ಆಕೆ ಅಮೇರಿಕದಲ್ಲಿ ನನ್ನನ್ನು ಕಾಣಲು ಬಂದಾಗ(ವಿಚಿತ್ರವೆನಿಸಬಹುದು? ಮಾಜಿ ಪತ್ನಿ ಕಾಣಲು ಬಂದಿದ್ದು ? ಆದರೆ ನಾವು ಗೆಳೆಯರು! ) ಮನೆ ಒಳಗೆ ಸಿಗರೇಟ್ ಸೇದಬಾರದೆಂದು ತಾಕೀತು ಮಾಡಿದೆ. ಏಕೆಂದರೆ ನೆಲಕ್ಕೆ ಕಾರ್ಪೆಟ್ ಹೊದಿಸಲಾಗಿತ್ತು. ವಾಸನೆ ಅದರಿಂದ ಹೋಗುವುದಿಲ್ಲ. ಚಳಿಗಾಲದ ಸಮಯ.

“ನನ್ನನ್ನೇನು ಮಾಡು ಅಂತೀಯಾ ?”
“ಸೇದಲೇ ಬೇಕು ಅಂತಿದ್ದರೆ ಮಹಡಿಮೇಲೆ ಹೋಗಿ ಸೇದು”
“ಅಲ್ಲಿ ಚಳಿ. ಮಂಜು ಕೂಡ ಬೀಳ್ತಿದೆ”
“(ಹೆಗಲು ಬಿಗಿಗೊಳಿಸಿ)”
“ಲೇ , ನಿನ್ನಿಂದಲೇ ನಾನು ಸೇದುವುದನ್ನು ಕಲಿತಿದ್ದು”
“ಅಯ್ಯೋ ಕ್ಷಮಿಸು ಮಾರಾಯ್ತಿ , ಈಗ ನಿಲ್ಲಿಸು ಅಂತ ನಾನು ಕೇಳ್ತಾ ಇದ್ದೀನಿ”
“ಹೌದು, ಸರಿ. ನೀನು ಒಳ್ಳೆ *&^%$#@ ಅಮೇರಿಕನ್ ಆಗಿದ್ದೀಯ”
“ಅಮೇರಿಕನ್‍ಗೂ ಅದಕ್ಕೂ ಏನೂ ಸಂಬಂಧವಿಲ್ಲ. ಇದು ಆರೋಗ್ಯದ ಪ್ರಶ್ನೆ”
“ಹೋಗು, ನಾನು ನಿನಗಿಂತ ಹೆಚ್ಚು ಬದುಕ್ತೇನೆ ! “

ಸುಳ್ಳುಗಾರ್ತಿ.

ಬಹಳಷ್ಟು ಜನರಿಗೆ ನಮ್ಮ ಸ್ನೇಹ ಮುರಿಯದೇ ಇದ್ದಿದ್ದು ಅಚ್ಚರಿಯನ್ನುಂಟು ಮಾಡಿತ್ತು. ಭಾರತದಲ್ಲಿ ಅಥವಾ ಯಾವುದೇ ದೇಶವಾಗಿರಲಿ, ವಿಚ್ಛೇದನ ಹಾಗೂ ದೂರವಾಗುವಿಕೆ ಪರಸ್ಪರರಲ್ಲಿ ಕಹಿ ಭಾವನೆ, ಮಾನಸಿಕ ಹಿಂಸೆ, ಗೊಂದಲ ಮತ್ತು ದ್ವೇಷವನ್ನುಂಟುಮಾಡುತ್ತದೆ. ನಾವು ಸಿಡಿಮಿಡಿಗೊಂಡ ಗಳಿಗೆಗಳೇ ಇಲ್ಲವೆಂದಲ್ಲ. ಆದರೆ ಇವಕ್ಕಿಂತ ದೊಡ್ಡದಾದ ಆದರ್ಶಗಳಿಂದಾಗಿ ಬೇಗ ಈ ಮನಸ್ಥಿತಿಯಿಂದ ಹೊರಬರುತ್ತಿದ್ದೆವು. ವಿಚ್ಛೇದನಕ್ಕೆಂದು ಕೋರ್ಟಿನಲ್ಲಿ ನಿಂತಿದ್ದಾಗ ನಾವು ಅಕ್ಕ ಪಕ್ಕ ನಿಂತಿದ್ದೆವು. ತಾನಾಗಿಯೇ ಕೈ ಮತ್ತೊಬ್ಬರೆಡೆಗೆ ಚಾಚಿ ಬೆರಳುಗಳು ಹೆಣೆದುಕೊಂಡವು. ನೀವಿಬ್ಬರೂ ನಿಮ್ಮದೇ ಹಾದಿಗಳಲ್ಲಿ ಹೋಗಬೇಕಾದರೆ ದೂರವಿರುವುದು ಅಗತ್ಯ ಎಂದು ವಕೀಲರು ಪಿಸುಗುಟ್ಟಿದರು.

ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪ್ರಕ್ರಿಯೆಯನ್ನು ಮುಗಿಸಿದ ನಾವು ಮಧ್ಯಾಹ್ನ ಊಟದ ಸಲುವಾಗಿ ಎಂಜಿ ರೋಡ್‍ಗೆ ತೆರಳಿದೆವು. ರೆಸ್ಟೋರೆಂಟ್‍ನ ಹೆಸರು ಸದರ್ನ್ ಕಂಫರ್ಟ್ಸ್ . ನಾವಿಬ್ಬರೂ ವಿಪರ್ಯಾಸವನ್ನು ನೆನೆದು ನಕ್ಕೆವು,ವಿದಾಯ ಹೇಳಿದೆವು . ನಾನು ಮೊದಲು ದೆಹಲಿ ನಂತರ ಮುಂಬೈ ಹಾಗೂ ತದನಂತರ ವಾಷಿಂಗ್‍ಟನ್‍ ಡಿ ಸಿ – ಗೆ ಹೋದೆ. ನಾನು ಹೋದ ಪ್ರತಿ ಜಾಗಕ್ಕೂ ಆಕೆ ಜೀವನ, ಜಗತ್ತು ಮತ್ತು ಎಲ್ಲದರ ಕುರಿತಾಗಿ ಚರ್ಚಿಸಲು ಭೇಟಿ ನೀಡುತ್ತಿದ್ದಳು. (ಶಾಲೆಯಲ್ಲಿರುವಾಗ ನಾವು ಡಗ್ಲಸ್ ಆಡಮ್ಸ್ ನನ್ನು ಓದಿದವರು).

ಗೌರಿ ಬಂಡಾಯ ಸ್ವಭಾವದವಳಾಗಿದ್ದರೂ ನನ್ನ ತಂದೆ ತಾಯಿಗೆ ಅವಳೆಂದರೆ ಬಹಳ ಪ್ರೀತಿ. ವಿಚ್ಛೇದನದ ನಂತರವೂ ಸಂಪ್ರದಾಯ ನಿಷ್ಟ ನನ್ನ ತಾಯಿ ತಂದೆ ಆಕೆಯ ಜೊತೆ ಹಾಗೂ ಆಕೆ ಅವರ ಜೊತೆ ಸಂಪರ್ಕದಲ್ಲಿದ್ದರು. ಒಮ್ಮೆ ನಾನು ಅವರ ನಡುವಿನ ಆತ್ಮೀಯತೆಯ ಬಗ್ಗೆ ಹೇಳಿ ತಮಾಷೆ ಮಾಡಿದ್ದಾಗ ಆಕೆ ತನ್ನ ಪೂರ್ಣ ಎತ್ತರಕ್ಕೆ ನಿಂತು(ಇಡೀ ಐದುವರೆ ಅಡಿ, ಅವಳು ಆ ‘ವರೆ’ಯನ್ನು ಒತ್ತಿ ಹೇಳಲು ಎಂದೂ ಮರೆಯುತ್ತಿರಲಿಲ್ಲ) “ಹಾ! ಕುಟುಂಬದ ಮೊದಲ ಸೊಸೆಯಾದ ಗೌರವವನ್ನು ನೀನು ಕಿತ್ತುಕೊಳ್ಳಲಿಕ್ಕೆ ಆಗುವುದಿಲ್ಲ” ಎಂದಿದ್ದಳು. ಈ ಕಳೆದ ಫೆಬ್ರವರಿಯಲ್ಲಿ ನನ್ನ ತಾಯಿ ತೀರಿಕೊಂಡಾಗ ನಾನು ಮನೆಮುಟ್ಟುವ ತನಕ ನನಗೆ ಅಂತ್ಯಕ್ರಿಯೆಯ ಪ್ರತಿಕ್ಷಣವನ್ನು ನೇರ ಪ್ರಸಾರ ಮಾಡಿದಳು.

ಅವಳ ಕುಟುಂಬದೊಂದಿಗಿನ ನನ್ನ ಸಂಬಂಧ ಸ್ವಲ್ಪ ವಿಲಕ್ಷಣವಾದದ್ದು ಎನ್ನಿಸಬಹುದು. ಬರಹಗಾರ, ನಾಟಕಗಾರ, ಚಲನಚಿತ್ರ ನಿರ್ದೇಶಕ, ಹಾಗೂ ಇಡೀ ಒಂದು ತಲೆಮಾರಿನ ಬಂಡಾಯ ಲೇಖಕರಿಗೆ, ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದ ಅವಳ ತಂದೆ ಪಿ. ಲಂಕೇಶ್ ಹಾಗೂ ನಾವು ‘ಬೇಬಿ’ ಎಂದು ಕರೆಯುತ್ತಿದ್ದ ಈಗ ಸ್ವತಃ ಅತ್ಯುತ್ತಮ ಚಿತ್ರ ನಿರ್ದೇಶಕಿಯಾಗಿರುವ ಅವಳ ತಂಗಿ ಕವಿತಾರನ್ನು ನಾವು ಬೇರ್ಪಡುತ್ತಿದ್ದ ದಿನಗಳಲ್ಲಿಯೂ ನಾನು ಕಾಣುತ್ತಲೇ ಇದ್ದೆ. ನಮ್ಮ ಕಾಲೇಜಿನ ಪ್ರಣಯ ಸಲ್ಲಾಪದ ನಡುವೆ ಲಂಕೇಶರು ನನ್ನನ್ನು ಒಳಪಡಿಸಿದ ಸಾಹಿತ್ಯಿಕ ‘ಲಿಟ್‍ಮಸ್ ಟೆಸ್ಟ್’ ಪಾಸಾಗಿ ಅವರ ಕುಟುಂಬದಲ್ಲಿ ಒಬ್ಬನಾದೆ. ಇದರ ಜೊತೆಗೆಯೇ ಇದರ ವಿಸ್ತೃತಿಯಾಗಿ ನಾನು ತಮಾಷೆಯಾಗಿ ‘ಬುದ್ಧಿಜೀವಿ ಪ್ರಪಂಚ ‘ ಎಂದು ಕರೆಯುವವರ, ಬರಹಗಾರ, ಕವಿ, ಕಲಾವಿದರ ಗುಂಪಿನ ಭಾಗವೂ ಆದೆ.

೮೦ರ ದಶಕದ ಪ್ರಾರಂಭದಲ್ಲಿ ಶುರುವಾಗಿ ನಾವು ಪ್ರತಿ ಭಾನುವಾರ ಸಂಜೆ ಕಾರ್ಡ್ಸ್ ಆಡಲು ಪ್ರಾರಂಭಿಸುತ್ತಿದ್ದೆವು. ಅಲ್ಲಿ ಪಣಕ್ಕಿಡುತ್ತಿದ್ದಿದ್ದು ಸ್ವಲ್ಪ, ಆದರೆ ಮಾತುಕತೆ ಬಹಳ ಶ್ರೀಮಂತವಾಗಿತ್ತು. ಕವಿತೆಗಳು, ಗಾದೆಗಳು, ಚುಟುಕುಗಳು ಹಾಗೇ ನಗೆ ಚಟಾಕಿಗಳು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ನಿರರ್ಗಳವಾಗಿ ಹರಿಯುತ್ತಿದ್ದವು. ಯಾರಾದರೂ ಆಟವನ್ನು ಸ್ವಲ್ಪ ನಿಧಾನ ಮಾಡಿದರೆ ಮತ್ತೊಬ್ಬರು “Tomorrow and tomorrow and tomorrow…”, ಇನ್ನೊಬ್ಬರು “creeps at this petty pace from day to day”, ಮತ್ತೊಬ್ಬರು “…to the last syllable of recorded time!” ಎನ್ನುತ್ತಿದ್ದರು. ಸಾಹಿತ್ಯಾತ್ಮಕ ವರ್ಣನೆಗಳಲ್ಲದೆ(ಯಾವುದೇ ಭಾಷೆಯಲ್ಲಾಗಿರಬಹುದು) ಬೇರೆ ಯಾವ ರೀತಿಯ ಮಾತುಗಳೂ ಅಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ತುಸು ಧೈರ್ಯದವರಾದರೆ “ವಿನಾಶಕಾಲೇ ವಿಪರೀತ ಬುದ್ಧಿ” ಎನ್ನುತ್ತಿದ್ದರು.

ಅವರೆಲ್ಲ ಬುದ್ಧಿವಂತ, ಉತ್ಸಾಹಿ ಮನುಷ್ಯರಾಗಿದ್ದರು. ಗೌರಿ(ನಮ್ಮ ಜೊತೆ ಅಪರೂಪಕ್ಕೆ ಸೇರಿಕೊಳ್ಳುತ್ತಿದ್ದಳು ಮತ್ತು ಅಲ್ಲಿದ್ದ ಒಬ್ಬಳೇ ಮಹಿಳೆ) ಮತ್ತು ನಾನು ಅವರ ಜೊತೆಗಿನ ಕಲಿಕೆಯಲ್ಲಿ ಮುಳುಗಿ ಪಕ್ವವಾದೆವು. ಅಪ್ಪ(ಲಂಕೇಶರನ್ನು ನಾನು ಕರೆಯುತ್ತಿದ್ದುದು) ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದರು ಆದರೆ ನಾವು ಭೇಟಿ ಮಾಡುವಷ್ಟರಲ್ಲಿ ತಮ್ಮ ಪ್ರಥಮ ಚಿತ್ರ(ಅನುರೂಪ ಅಥವಾ ಪಲ್ಲವಿ ಅನುಪಲ್ಲವಿ ಇರಬೇಕು, ಇದಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಿತು) ನಿರ್ದೇಶಿಸುವುದರೊಂದಿಗೆ ಕನ್ನಡಕ್ಕೆ ಜಿಗಿದಿದ್ದರು. ಕನ್ನಡದ ಮಹಾನ್ ಲೇಖಕರಾದ ಬೇಂದ್ರ ಕುವೆಂಪು ಮತ್ತು ಇತರರಂತೆ ಇವರು ಕೂಡ ತಮ್ಮ ಬೇರಿನಲ್ಲಿ ಸೆಲೆ ಕಾಣುವ ಮುನ್ನ ಇಂಗ್ಲೀಷ್‍ನಲ್ಲಿ ಬರೆಯಲು ಪ್ರಾರಂಭಿಸಿದ್ದರು. ಅವರ ನಾಟಕ ‘ಸಂಕ್ರಾಂತಿ’ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಆದರೆ ನಾವು ಕಾಳಿದಾಸನಿಂದ ಪ್ರಾರಂಭವಾಗಿ ಇಬ್ಸನ್, ಚೆಕೋವ್, ಬ್ರೆಕ್ಟ್‍ನವರೆಗೆ ಎಲ್ಲರ ಬಗೆಗೂ ಚರ್ಚಿಸುತ್ತಿದ್ದೆವು.


ಇವೆಲ್ಲವೂ ನಮ್ಮ ಪ್ರಣಯ, ವಿವಾಹ, ದೂರವಾಗುವಿಕೆ ಹಾಗೂ ನಾನು ಯುಎಸ್‍ಗೆ ತೆರಳಿದ ನಂತರವೂ ಮುಂದುವರೆಯಿತು. ನಾನು ಪ್ರತಿ ಬಾರಿ ಅವರ ಮನೆಗೆ ಹೋದಾಗಲೂ ಒಂದೆರಡು ಗ್ಲಾಸ್‍ನ ಜೊತೆಗೆ ನಾನು ಮತ್ತು ಅಪ್ಪ, ಅವರ ಮಗಳ ಮಧ್ಯಸ್ಥಿಕೆಯಲ್ಲಿ ರಾಜಕೀಯ, ಧರ್ಮ, ಸಾಹಿತ್ಯ, ಸಿನೆಮಾ, ಭಾರತ-ಅಮೇರಿಕ ಸಂಬಂಧ, ರೈತರ ಸಂಕಟ, ಆರೋಗ್ಯ ಮತ್ತು ಜಗತ್ತಿನ ಬಗೆಗೆಲ್ಲ ಚರ್ಚಿಸುತ್ತಿದ್ದೆವು. ನಿಜದ ಹೋರಾಟವನ್ನು ಬಿಟ್ಟು ಹೋಗಿದ್ದರ ಬಗ್ಗೆ ಅಪ್ಪ ಮಗಳು ಅಣಕಿಸುತ್ತಿದ್ದರು, ಅದಕ್ಕೆ ನಾನು ಇದು ತಾತ್ಕಾಲಿಕ, ಮತ್ತೆ ಸ್ಪಲ್ಪ ಸಮಯ ದೂರವಿರುವುದರಿಂದ ದೃಷ್ಟಿಕೋನ ಹೊಸದಾದೀತೆಂದು ಸಮರ್ಥಿಸಿಕೊಳ್ಳುತ್ತಿದ್ದೆ. ಲಂಕೇಶ್‍ರಿಗೆ ಮೂರ್ಖತನವನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ  (ಕಾರ್ಡ್ಸ್ ಟೇಬಲ್ಲಿನಲ್ಲಿ ಮೊದಮೊದಲು ಬಹಳ ಜನರಿದ್ದು ಲಂಕೇಶರ ತಾಪ ತಾಳಲಾಗದೇ ಬಿಟ್ಟವರು ಬಹಳ ಜನರಿದ್ದರು), ಆದರೆ ಅವರು ನನ್ನ ಮೇಲೆ ಸದಾ ಮಮಕಾರವಿಟ್ಟಿದ್ದು ಗೌರಿಯ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಬೀರಲು ಸಹಕಾರಿಯಾಯಿತು. ಅವರು ೨೦೦೦ದಲ್ಲಿ ತೀರಿಕೊಂಡಾಗ, ಗೌರಿ ತಂದೆಗೆ ತಕ್ಕ ಮಗಳಾಗಿ, ತಂದೆ ಪ್ರಾರಂಭಿಸಿದ ಪತ್ರಿಕೆಯನ್ನು ಮತ್ತು ಹೋರಾಟವನ್ನು ಕೈಗೆತ್ತಿಕೊಂಡಳು.

ಈ ದಿನಕ್ಕೂ ನಾನು ತಪ್ಪದೇ ಭಾನುವಾರದ ಕಾರ್ಡ್ಸ್ ಆಟಕ್ಕೆ ಹಾಜರಾಗುತ್ತೇನೆ (ಲಂಕೇಶರು ತೀರಿಹೋಗಿ ಬಹಳ ವರ್ಷಗಳಾಗಿರುವ ಈ ಸಮಯದಲ್ಲಿ ಬರಹಗಾರ-ವೈದ್ಯರಾದ ಡಾ.ಗೌಡ ಅವರ ಸ್ಥಾನ ವಹಿಸಿದ್ದಾರೆ). ಹೆಚ್ಚು ಕಡಿಮೆ ಪ್ರತಿ ಭೇಟಿಯಲ್ಲೂ ಕಾಲ ಹಳೆಯ ತಲೆಮಾರನ್ನು ಆವರಿಸುತ್ತಿದ್ದಂತೆಯೇ, ಒಬ್ಬರು ಆಟದ ಟೇಬಲ್ಲಿನಿಂದ ಮರೆಯಾಗಿರುತ್ತಾರೆ. ಒಮ್ಮೆ ನಾನು ಅವರುಗಳು ಕಾರ್ಡ್ಸ್ ಜೋಡಿಸುತ್ತಿರುವಂತೆಯೇ “ಎಲ್ಲಿ ಶರ್ಮಾ?” ಎಂದು ಕೇಳಿದೆ, ಅತ್ಯುತ್ತಮ ಕವಿಯಾದ ರಾಮಚಂದ್ರ ಶರ್ಮರ ಕುರಿತಾಗಿ. “ಓಹ್! ಅವರು ಲಂಕೇಶರೊಡನೆ ಮತ್ತೊಂದು ಟೇಬಲ್ಲಿನಲ್ಲಿ ಹೋಗಿ ಸೇರಿಕೊಂಡಿದ್ದಾರೆ !” ಎಂದು ಆಟ ನಿಲ್ಲಿಸದೆಯೇ, ಕಣ್ಣು ಮಿಟುಕಿಸದೆಯೇ ಹೇಳಿದರು. “ಮೈಸೂರುಮಠ ಅದೇ ಹಾದಿಯಲ್ಲಿದ್ದಾನೆ, ಈಗ ಆಸ್ಪತ್ರೆಯಲ್ಲಿದ್ದಾನೆ” ಎಂದು ಸೇರಿಸುತ್ತಿದ್ದರು. 

ಇವೆಲ್ಲವನ್ನು ನಾನು ಗೌರಿ ಬೆಳೆದ, ವಾಸ್ತವಿಕ, ವೈಚಾರಿಕ ಮತ್ತು ಬಹುಮಟ್ಟಿಗೆ ನಾಸ್ತಿಕ, ಬೌದ್ಧಿಕ ವಾತಾವರಣದ ಕುರಿತು ತಿಳಿಸಲು ಹೇಳಿದೆ. ಸಾವು ಹಾಗೆಯೇ ಘಟಿಸುವಂತಹದ್ದಾಗಿತ್ತು. ಜನ ಮಾಡಿದ ಒಳಿತಿಗೆ ಹಾಗೂ ಅವರು ಯಾವುದಕ್ಕಾಗಿ ಬದುಕುತ್ತಾರೆಂಬುದರ ಬಗ್ಗೆ ಗೌರವ, ಪ್ರೀತಿ, ಪ್ರಶಂಸೆ ನೀಡುವುದು ಮುಖ್ಯವಾಗಿತ್ತು. ನನ್ನ ಮತ್ತು ಅವಳ ಇತ್ತೀಚಿಗಿನ ಸಂಭಾಷಣೆಗಳಲ್ಲಿ ನೆಚ್ಚಿನ ಪದ ‘ಹೋರಾಟ’ ಆಗಿತ್ತು. ಅಪರೂಪಕ್ಕೆ ಕರೆ ಮಾಡಿದಾಗ “ಹೇಗಿದೆ ಹೋರಾಟ?” ಎಂದು ಕೇಳುತ್ತಿದ್ದೆ. ಅವಳು ಆ ಸಮಯದಲ್ಲಿ ನಿರತವಾಗಿದ್ದ ಹಲವು ಹೋರಾಟಗಳ ಬಗ್ಗೆ ಅವಳು ಹೇಳತೊಡಗುತ್ತಿದ್ದಳು.

ಬಲಪಂಥೀಯ ತೀವ್ರವಾದಿಗಳು, ಮತಾಂಧರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡ ಬಳಿಕ ಅವಳು ಟೇಬಲ್ಲಿನ ಕಡೆಗೆ ಬಂದದ್ದು ಬಹಳ ವಿರಳ. ಕೆಲವು ಗೆಳೆಯರು ಆಕೆ ಇನ್ನೊಂದು ತೀವ್ರ ನಿಲುವಿಗೆ ತಲುಪಿದ್ದಾಳೆಂದು ಅನ್ನಿಸಿದ್ದರಿಂದ ಈ ಕುರಿತು ಟೇಬಲ್ಲಿನಲ್ಲಿಯೇ ಕುಳಿತು ಚರ್ಚೆಯನ್ನೂ ಮಾಡಿದೆವು. ಅವಳು ಮಧ್ಯ ನಿಲುವಿನ ಎಡದಲ್ಲಿ ಅಥವಾ ಮಧ್ಯದ ಎಡ ‘ತುದಿ’ಯಲ್ಲಿದ್ದಳೆಂದು ಅನುಮಾನವೇ ಇಲ್ಲ. ಆದರೆ ಅವಳ ಹೃದಯ ಸರಿಯಾದ ಜಾಗದಲ್ಲಿತ್ತು, ಅವಳ ಜಗತ್ತಿನಲ್ಲಿ ಹಿಂಸೆಗೆ ಯಾವುದೇ ಜಾಗವಿರಲಿಲ್ಲ. ಹಿಂಸೆಯ ಮಾರ್ಗ ಹೇಡಿಗಳದ್ದು.

ಚಿತ್ರ ಕೃಪೆ : ಭಾನು ಪ್ರಕಾಶ್ ಚಂದ್ರ | ಔಟ್ ಲುಕ್

ಸುಮಾರು ಎಂಟು ವರ್ಷಗಳ ಹಿಂದೆ ಭಾರತಕ್ಕೆ ಮರಳುವೆನೆಂಬ ನಂಬಿಕೆಯೊಂದಿಗೆ ನಾನು ಒಂದು ಮನೆ ಖರೀದಿಸಿದೆ. ಮನೆಯನ್ನು ನೋಡಿಕೊಳ್ಳಲು ಯಾರಾದರೂ ಬೇಕೆಂದು ಅವಳು ತೀರ್ಮಾನಿಸಿ, ಫೋನಿನಲ್ಲಿ “ನಾನು ಒಬ್ಬರನ್ನು ಕಳಿಸುತ್ತಿದ್ದೇನೆ, ಆಕೆ ಎರಡು ಹೆಣ್ಣು ಮಕ್ಕಳಿರುವ ವಿಧವೆ. ಅವರನ್ನು ಶಾಲೆಗೆ ಸೇರಿಸಿ ಯೋಗಕ್ಷೇಮ ನೋಡು” ಎಂದು ಆಜ್ಞೆ ಇತ್ತಳು. ನಾನು ಪರಿಪಾಲಿಸಿದೆ.

ಅವಳು ನಮಗೆ ಉಡುಗೊರೆಯಾಗಿತ್ತ ರಾಮಕ್ಕ, ಇಂದಿಗೂ ನಮ್ಮೊಡನಿದ್ದಾರೆ. ಅವರ ಮಕ್ಕಳು ಆಶಾ ಮತ್ತು ಉಷಾ ಇಬ್ಬರೂ ಪದವಿ ಮುಗಿಸಿ ಕೆಲಸ ಮಾಡುತ್ತಿದ್ದಾರೆ. ಆಶಾ ಸಿಂಡಿಕೇಟ್ ಬ್ಯಾಂಕಿನಲ್ಲಿ, ಮತ್ತು ಉಷಾ ಒಂದು NGOದಲ್ಲಿ. ಗೌರಿಯಿಂದಾಗಿ ಹೀಗೆ ಬೆಳೆದ ನೂರಾರು ಆಶಾ ಮತ್ತು ಉಷಾ ಇದ್ದಾರೆ.

ಕೆಲವೇ ವಾರಗಳ ಹಿಂದೆ ನಾನು, ಮೇರಿ ಮತ್ತು ಮಕ್ಕಳೆಲ್ಲ ಭಾರತಕ್ಕೆ ಬಂದಾಗ ಅವಳು ಭೇಟಿ ನೀಡುತ್ತೇನೆಂದು ಘೋಷಿಸಿ ಬಿಟ್ಟಳು. ಅವಳು ಯಾವತ್ತೂ ಉಡುಗರೆಗಳೊಂದಿಗೆ ಮಕ್ಕಳನ್ನು ನೋಡಲು ಬರುತ್ತಿದ್ದಳು,. ಆದರೆ ಆ ಉಡುಗೊರೆಗಳೆಲ್ಲದಕ್ಕಿಂದ ಅವಳು ಅವರಿಗೆ ನೀಡುತ್ತಿದ್ದ ಪ್ರೀತಿ ಬಹಳ ದೊಡ್ಡದು. ಆದರೆ ದಿನಗಳು ಕಳೆದರೂ ಅವಳು ಬರಲಿಲ್ಲ. ಬ್ಯುಸಿ ಬ್ಯುಸಿ ಬ್ಯುಸಿ ಎನ್ನುತ್ತಿದ್ದಳು. ಪತ್ರಿಕೆಯನ್ನು ನಡೆಸುವುದು ಮತ್ತು ಚಡ್ಡಿಗಳನ್ನು ನಿಭಾಯಿಸುವುದು ಎಷ್ಟು ಕಷ್ಟ ಎನ್ನುವುದು ನಿಮಗೆ ಗೊತ್ತೇ ಇದೆ (ಬಲಪಂಥೀಯ ತೀವ್ರವಾದಿಗಳಿಗೆ ಅವಳು ಚಡ್ಡಿಗಳು ಎನ್ನುತ್ತಿದ್ದಳು).

ಒಂದು ದಿನ ತನ್ನ ಮಗನ ಜೊತೆಗೆ ಬರುತ್ತಿರುವುದಾಗಿ ಘೋಷಿಸಿದಳು. “ಈಗ ಯಾರನ್ನು ದತ್ತು ತೆಗೆದುಕೊಂಡಿದ್ದೀಯ?” ಎಂದು ಕೇಳಿದೆ. “ಕನ್ಹಯ್ಯ ಕುಮಾರ್” ಎಂದು ಅವಳು ಮುಸಿ ನಕ್ಕಳು. “ಜೆ ಎನ್ ಯು ಹುಡುಗನ?”, “ಹೌದು, ಅವನನ್ನು ಭೇಟಿಯಾದರೆ ನಿನಗೆ ಬಹಳ ಖುಷಿಯಾಗುತ್ತದೆ” ಅಂದಿದ್ದಳು. ಸ್ವಲ್ಪ ಸಮಯದಲ್ಲೇ ಕರೆ ಮಾಡಿ ವಿಮಾನ ತಡವಾಗಿದ್ದರಿಂದ ಬರಲಾಗುವುದಿಲ್ಲ ಎಂದು ಹೇಳಿದಳು. ನಾನು ಅವಳ ಧ್ವನಿಯನ್ನು ಕೇಳಿದ್ದು ಇದೇ ಕೊನೆಯ ಬಾರಿ. ಚಿಕ್ಕ, ದೊಡ್ಡ ಉದ್ದೇಶಗಳಿಗಾಗಿ ಸದಾ ಹುಮ್ಮಸ್ಸಿನಿಂದ ತೊಡಗಿರುತ್ತಿದ್ದಳು.

ವಿಮಾನ ಗೌರಿಯಿಲ್ಲದ ಭಾರತದೆಡೆ ಚಲಿಸುತ್ತಿರುವಂತೆಯೇ, ನನ್ನ ಮನಸ್ಸು ಬಿಡಿ ಬಿಡಿ ನೆನಪುಗಳ ಮೇಲೊಗರವಾಗಿದೆ. ನನ್ನ ಮನಸ್ಸಿನಲ್ಲಿ ಒಂದೇ ವರ್ಣನೆ ಪ್ರತಿಧ್ವನಿಸುತ್ತಿದೆ. ಬೇರೆಲ್ಲ ಹಣೆಪಟ್ಟಿಗಳನ್ನು ಬಿಟ್ಟುಬಿಡಿ: ಎಡಪಂಥೀಯ, ತೀವ್ರವಾದಿ, ಹಿಂದುತ್ವ ವಿರೋಧಿ, ಸೆಕ್ಯುಲರ್ ಇತ್ಯಾದಿ… ನನಗೆ ಇಷ್ಟೇ : ಅವಳು ಅನನ್ಯ ಆಕರ್ಷಣೆಯ ಸಾಕಾರ ರೂಪ.

ಅನುವಾದ : ಸುಬ್ರಮಣ್ಯ ಹೆಗಡೆ | ಅಪೂರ್ವ ಯರಬಹಳ್ಳಿ

3 comments to “ನನಗವಳು ಅನನ್ಯ ಆಕರ್ಷಣೆಯ ಸಾಕಾರ ರೂಪ”
  1. ತುಂಬಾ ಚೆಂದದ ಭಾ‍ಷಾಂತರ. ಇದನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಆದರೆ, ಈ ಭಾ‍ಷಾಂತರ ತುಂಬಾ ಚೆನ್ನಾಗಿದೆ. ಧನ್ಯವಾದಗಳು

Leave a Reply to Renuka Cancel reply