ಜನಪದ ತೋರುವ ಹಲವು ಭಾರತಗಳು

ಇದು ೧೯೯೪ರಲ್ಲಿ ಪ್ರಕಟವಾದ ಎ. ಕೆ . ರಾಮಾನುಜನ್ ಸಂಪಾದಿಸಿರುವ ‘Folktales from India’ ಪುಸ್ತಕಕ್ಕೆ ರಾಮಾನುಜನ್ ಬರೆದಿರುವ ಪ್ರಸ್ತಾವಣೆಯಲ್ಲಿರುವ ಆಯ್ದ ಮಾತುಗಳು. ಈ ಪುಸ್ತಕವನ್ನು ಮಹಾಬಲೇಶ್ವರ್ ರಾವ್  ‘ಭಾರತೀಯ ಜನಪದ ಕಥೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ . National Book Trust India ಇದನ್ನು ಪ್ರಕಟಿಸಿದೆ.

‘ಭಾರತ ಅಥವಾ ಭಾರತೀಯತೆ’ಯ ಬಗೆಗೆ ಮಾತಾಡುವವರು ಯಾರೇ ಆಗಿರಲಿ, ಅವರು ಈ ಪುಸ್ತಕದ ಶೀರ್ಷಿಕೆಯಲ್ಲಿ ಸೂಚಿಸಿದ ಹಾಗೆ, ಭಾರತದಲ್ಲಿ ಅನೇಕ ಭಾರತಗಳಿವೆ ಎಂಬ ಮಾತನ್ನೂ ಸೇರಿಸಬೇಕು. ನೂರಕ್ಕೂ ಹೆಚ್ಚು ಭಾಷೆಗಳು, ಹತ್ತು ಪ್ರಮುಖ ಹಾಗೂ ಅಪ್ರಮುಖ ಲಿಪಿ ವ್ಯವಸ್ಥೆಗಳು, ಅಸಂಖ್ಯಾತ ಕುಲ, ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಸಾವಿರಾರು ವರ್ಷಗಳಲ್ಲಿ ನಡೆದಿರುವ ವರ್ಣಸಂಕರಗಳು, ಬಗೆಬಗೆಯ ಭೂಪ್ರದೇಶಗಳು, ನಾನಾ ತೆರನಾದ ಹವಾಗುಣಗಳು – ಇವೇ ಮುಂತಾದವುಗಳಿಂದಾಗಿ ಪರಂಪರೆ ಹಾಗೂ ವಿರುದ್ಧ ಪರಂಪರೆಗಳ ಅತ್ಯಂತ ಸಂಕೀರ್ಣವಾದ ಜಾಲ ನಿರ್ಮಾಣವಾಗಿದೆ. ನೀವು ಭಾರತ ಬಗೆಗೆ ಇದು ಸತ್ಯ ಎಂದು ಏನನ್ನೇ ಹೇಳಿ, ಅದಕ್ಕೆ ತೀರಾ ವಿರುಧ್ಧವಾದುದನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಬಹುದು.

ಭಾರತೀಯ ಪ್ರಾದೇಶಿಕ ಭಾಷೆಗಳು

ಭಾರತದಲ್ಲಿರುವ ಭಾಷೆಗಳ ವೈವಿಧ್ಯ ಇದಕ್ಕೊಂದು ಅತ್ಯುತ್ತಮ ನಿದರ್ಶನ. 1916ರ ಜನಗಣತಿಯ ಪ್ರಕಾರ ಜನರಾಡುವ ಮಾತುಗಳಿಗೆ ಅನುಸಾರವಾಗಿ 1652 ತಾಯ್ನುಡಿಗಳು ನಮ್ಮಲ್ಲಿವೆ. ಭಾಷಾ ವಿಜ್ಞಾನಿಗಳು ಈ ವೈವಿಧ್ಯಮಯ ಮಾತುಗಳನ್ನು ಅಥವಾ ಉಪಭಾಷೆಗಳನ್ನು ವರ್ಗೀಕರಿಸಿ ಸುಮಾರು 100 ಭಾಷೆಗಳಲ್ಲಿ ಅಡಕಗೊಳಿಸಿದ್ದಾರೆ. ಈ 105 ಭಾಷೆಗಳನ್ನು ನಾಲ್ಕು ಭಾಷಾ ಪರಿವಾರಗಳಾಗಿ ವ್ಯವಸ್ಥೀಕರಿಸಲಾಗಿದೆ. ಒಟ್ಟು ಜನಸಂಖ್ಯೆಯ ಶೇ.5ಕ್ಕಿಂತಲೂ ಕಡಿಮೆ ಪ್ರಮಾಣದ ಜನ ಈ 105 ಭಾಷೆಗಳಲ್ಲಿ 90 ಭಾಷೆಗಳನ್ನು ಆಡುವ ಗುಂಪಿಗೆ ಸೇರುತ್ತಾರೆ. 64 ಭಾಷೆಗಳು ಗುಡ್ಡಗಾಡು ಗುಂಪಿಗೆ ಸೇರಿವೆ. ಧಾರ್ಮಿಕ ಪಠ್ಯಗಳ ಭಾಷೆ, ಅಭಿಜಾತ ಸಾಹಿತ್ಯ ಕೃತಿ ಮತ್ತು ದೇಶೀಯ ಶಾಸ್ತ್ರಗಳ ಭಾಷೆ ಅಥವಾ ಪಿತೃ ಭಾಷೆ ಎಂದು ಕರೆಸಿಕೊಂಡಿರುವ ಸಂಸೃತ ಮತ್ತು ವಸಾಹತುಶಾಹಿ ಆಳ್ವಿಕೆಯಲ್ಲಿ ಮತ್ತು ವಸಾಹತೋತ್ತರ ಭಾರತದಲ್ಲಿ ದ್ವಿತೀಯ ಭಾಷೆಯಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಇಂಗ್ಲಿಷ್ ಅನ್ನು ಈ ಗುಂಪಿಗೆ ಸೇರಿಸಬೇಕು. 15 ಭಾಷೆಗಳನ್ನು ಭಾರತದ ಜನಸಂಖ್ಯೆಯ ಶೇ.95ರಷ್ಟು ಮಂದಿ ಮಾತು, ಓದು ಹಾಗೂ ಬರಹಗಳಿಗಾಗಿ ಬಳಸಿಕೊಳ್ಳುತ್ತಾರೆ. ಈ ಭಾಷೆಯಲ್ಲಿ ಪ್ರತಿಯೊಂದನ್ನೂ ಮತ್ತೆ ಹಲವು ಮಿಲಿಯ ಜನ ಮಾತಾಡುತ್ತಾರೆ.

ಈ ಹದಿನೈದು ಭಾಷೆಗಳಲ್ಲಿರುವ ಸಾಹಿತ್ಯವನ್ನು (ಇವುಗಳಲ್ಲಿ ಕೆಲವಕ್ಕೆ ಸುದೀರ್ಘ ಇತಿಹಾಸವಿದೆ) ಇದೀಗ ಪಾಶ್ಚಾತ್ಯ ರಾಷ್ಟ್ರಗಳ ವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿದೆ. ಈ ಭಾಷೆಗಳಲ್ಲಿರುವ ಸಾಹಿತ್ಯ ಕೃತಿಗಳನ್ನು ಅನುವಾದಿಸಲಾಗುತ್ತಿದೆ. ತಮಿಳು ಭಾಷಾ ಸಾಹಿತ್ಯದ ಇತಿಹಾಸ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಇನ್ನು ಬಂಗಾಳಿ, ಗುಜರಾತಿ ಭಾಷೆಗಳ ಸಾಹಿತ್ಯದ ಇತಿಹಾಸವು ಎಂಟು ನೂರು ವರ್ಷಗಳಷ್ಟು ಹಳೆಯದು. ಈಗಾಗಲೆ ನಾವು ವರ್ಗೀಕರಿಸಿರುವ 105 ಭಾಷೆಗಳಲ್ಲಿ ಅಡಕವಾಗಿರುವ ಸರಿಸುಮಾರು 1600 ಉಪಭಾಷೆ ಅಥವಾ ತಾಯ್ನುಡಿಗಳಲ್ಲಿರುವ ಲಿಖಿತ ಸಾಹಿತ್ಯ ಪರಂಪರೆಗಳೊಂದಿಗೆ ಒಗಟುಗಳು, ಗಾದೆಗಳು, ಹಾಡುಗಳು, ಲಾವಣಿಗಳು, ಕತೆಗಳು, ಮಹಾಕಾವ್ಯಗಳು ಎಂಬ ಹಲವು ಬಾಯ್ಮಾತಿನ ಪರಂಪರೆಗಳಿವೆ. ವಾಸ್ತವವಾಗಿ, ಭಾರತದಲ್ಲಿರುವ ಶಾಬ್ದಿಕ ಜಾನಪದವು ಹಳ್ಳಿಗಳಲ್ಲಿ, ಬೀದಿಗಳಲ್ಲಿ, ಅಡುಗೆಮನೆಗಳಲ್ಲಿ, ಗುಡ್ಡಗಾಡು ಜನರ ಹಟ್ಟಿಗಳಲ್ಲಿ, ಹಾದಿಬದಿಯ ಚಹಾದಂಗಡಿಗಳಲ್ಲಿ ಕೇಳಿ ಬರುವ ತಾಯ್ನುಡಿಗಳ, ಉಪಭಾಷೆಗಳ ಸಾಹಿತ್ಯ ಎಂದು ನಿರ್ವಚಿಸಬಹುದು.

ಭಾರತೀಯ ಪಿರಮಿಡ್ ನ ಈ ಅಗಲವಾದ ತಳಪಾಯವನ್ನು ಉಳಿದ ಎಲ್ಲ ಭಾರತೀಯ ಭಾಷೆಗಳ ಬಾಯ್ಮಾತಿನ ಪರಂಪರೆಯ ಸಾಹಿತ್ಯ ಕೃತಿಗಳು ಅವಲಂಬಿಸಿವೆ. ಭಾರತೀಯ ನಾಗರೀಕತೆಯನ್ನು ಅಧ್ಯಯನ ಮಾಡುವವರು ಈ ಪಿರಮಿಡ್ ನ ಮೇಲ್ತುದಿಗೆ ಹೆಚ್ಚು ಬೆಲೆ ಕೊಟ್ಟಿದ್ದಾರೆ ಮತ್ತು ಅದನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಪಾರಂಪರಿಕವಾಗಿ, ಭಾರತೀಯರು ಕಲಾಪ್ರಕಾರಗಳ ತಮ್ಮ ಜಿಜ್ಞಾಸೆಯನ್ನು ‘ಮಾರ್ಗ’ ಮತ್ತು ‘ದೇಸಿ’ ಎಂಬ ಎರಡು ಪ್ರಭೇದಗಳಾಗಿ ವಿಂಗಡಿಸಿದ್ದಾರೆ. 1950-60ರ ದಶಕದಲ್ಲಿ ಅಮೇರಿಕಾದ ಮಾನವಶಾಸ್ತ್ರ ವಿಭಾಗಗಲ್ಲಿ ಭಾರತದ ಬಗೆಗಿನ ಅಧ್ಯಯನಗಳಿಗೆ ಪ್ರೇರಣೆ ನೀಡಿದ ಚಿಕಾಗೋದ ಮಾನವಶಾಸ್ತ್ರಜ್ಞ ರಾಬರ್ಟ್ ರೆಡ್ ಫೀಲ್ಡ್ ಅವರ ಪ್ರಕಾರ “ಒಂದು ನಾಗರಿಕತೆಯಲ್ಲಿ ಹಿರಿದಾದ ಚಿಂತನಶೀಲ ಬಹುರೂಪಿ ಪರಂಪರೆಯೊಂದಿರುತ್ತದೆ ಮತ್ತು ಚಿಂತನಶೀಲವಲ್ಲದ ಬಹುರೂಪಿ ಕಿರು ಪರಂಪರೆಯೊಂದಿರುತ್ತದೆ.”

ಹಿರಿಯ ಪರಂಪರೆ ಎಂಬ ಹೆಗ್ಗಳಿಕೆ ಗಳಿಸಿದ ಸಂಸ್ಕೃತವು ಅಖಿಲ ಭಾರತ ವ್ಯಾಪ್ತಿಯನ್ನು, ಪ್ರಾಚೀನತೆಯನ್ನು, ಮಾನವಸಮ್ಮಾನಗಳನ್ನು ಮತ್ತು ಪಠ್ಯ ಆಧಾರಗಳನ್ನು ಹೊಂದಿದೆ. “ನಿಜವಾಗಿಯೂ ಕಿರುಪರಂಪರೆ ಅಥವಾ ಬಹುರೂಪಿ ಪರಂಪರೆಗಳು” ಸ್ಥಳೀಯವಾಗಿದ್ದು ಬಹುತೇಕ ಮೌಖಿಕ ರೂಪದಲ್ಲಿರುತ್ತದೆ. ಅನಾಮಧೇಯ, ಅನಕ್ಷರಸ್ಥರು (ಉದಾರವಾದಿಗಳು ನಿರಕ್ಷರರು ಎಂದು ಕರೆಯುತ್ತಾರೆ) ಈ ‘ಚಿಂತನಶೀಲವಲ್ಲದ ಬಹುರೂಪಿ ಪರಂಪರೆ’ಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಭಾವಿಸಲಾಗಿದೆ. ಸ್ವತಃ ರೆಡ್ ಫೀಲ್ಡ್ ಹಾಗೂ ಮುಂದೆ ಮಿಲ್ಟನ್ ಸಿಂಗರ್ ಈ ಕಲ್ಪನೆಗಳನ್ನು ಪರಿಷ್ಕರಿಸಿದರಾದರೂ ಉಳಿದ ಅನೇಕರು ಅವರ ವಿಚಾರಗಳನ್ನು ಟೀಕಿಸುತ್ತಾರೆ. ಒಂದು ಕಾಲದಲ್ಲಿ ಅವರ ವಿಚಾರಗಳು ಪ್ರಭಾವಪೂರ್ಣವೂ ನವನೂತನವೂ ಆಗಿದ್ದವು. ಕ್ಷೇತ್ರಕಾರ್ಯಕ್ಕೆ ಹೆಚ್ಚಿನ ಒತ್ತುಕೊಡುವ ನೆಪದಲ್ಲಿ ಸಂಸ್ಕೃತಿಯ ‘ಪಠ್ಯ’ಗಳನ್ನು ಕಡೆಗಣಿಸಬಾರದೆಂದು ಅವರು ಮಾನವಶಾಸ್ತ್ರಜ್ಞರನ್ನು ಆಗ್ರಹಪಡಿಸಿದ್ದುಂಟು.

ಈಗ ನಾವು ‘ಪಠ್ಯಗಳನ್ನು’ ಹೆಚ್ಚು ವಿಶಾಲ ದೃಷ್ಟಿಯಿಂದ ನೋಡಿ ಅವುಗಳಿಗೆ ವಿಶೇಷ ಒಟ್ಟು ನೀಡಬೇಕಾಗಿದೆ. ಭಾರತದಂಥ ಒಂದು ಸಂಸ್ಕೃತಿಯಲ್ಲಿ ಕೇವಲ ಲಿಖಿತ ಗ್ರಂಥಗಳು ಮತ್ತು ಪವಿತ್ರ ಗ್ರಂಥಗಳಷ್ಟೇ ಪಠ್ಯಗಳಲ್ಲ; ಪ್ರತಿಯೊಂದು ಬಗೆಯ ಬಾಯ್ಮಾತಿನ ಪರಂಪರೆಯೂ ತನ್ನದೇ ಆದ ಪಠ್ಯಗಳನ್ನು ಸೃಷ್ಟಿಸುತ್ತದೆ. ನಾಟಕಗಳು, ಆಚರಣೆಗಳು, ಆಟಗಳು – ಹೀಗೆ ಯಾವುದೇ ಬಗೆಯ ಸಾಂಸ್ಕೃತಿಕ ರಂಗಕಲೆಗಳಲ್ಲಿ ಲಿಖಿತ ಮತ್ತು ಮೌಖಿಕ ಪಠ್ಯವಿರುತ್ತದೆ. ಒಂದು ಅರ್ಥದಲ್ಲಿ ಪ್ರತಿಯೊಂದು ಸಾಂಸ್ಕೃತಿಕ ಪ್ರದರ್ಶನವೂ ತನ್ನಷ್ಟಕ್ಕೆ ತಾನೇ ಒಂದು ಪಠ್ಯವಾಗುತ್ತದೆ.

ಈ ನೆಲೆಯಿಂದ ಪಠ್ಯಗಳನ್ನು ನೋಡುವಾಗ, ನಾವು ‘ಹಿರಿಯ ಪರಂಪರೆ’ ಮತ್ತು ‘ಕಿರು ಪರಂಪರೆ’ ಎಂಬ ಪದಗಳನ್ನು ಪರಿಷ್ಕರಿಸಬೇಕಾಗುತ್ತದೆ. ಅಲ್ಲದೆ ಈ ಎಲ್ಲ ಸಾಂಸ್ಕೃತಿಕ ಪ್ರದರ್ಶನಗಳನ್ನು ಚಲನಶೀಲ ಸರಣಿ ಎಂದೂ ಒಂದಕ್ಕೊಂದು ಪ್ರತಿ ಸ್ಪಂದಿಸುವ, ನಿರಂತರವೂ ಚಲನಶೀಲವೂ ಆದ ಸಂವಾದದಲ್ಲಿ ತೊಡಗಿಸುವ ವಿವಿಧ ಪ್ರಕಾರಗಳ ಶ್ರೇಣಿ ಎಂದೂ ಪರಿಭಾವಿಸಬೇಕಾಗುತ್ತದೆ. ಭೂತ-ವರ್ತಮಾನಗಳು, ಅಖಿಲ ಭಾರತ ವ್ಯಾಪ್ತಿಯುಳ್ಳವುಗಳು ಹಾಗೂ ಸ್ಥಳೀಯವಾದವುಗಳು, ಲಿಖಿತ ಹಾಗೂ ಮೌಖಿಕ, ಶಾಬ್ದಿಕ ಹಾಗೂ ಅಶಾಬ್ದಿಕ ರೂಪಗಳು ಪರಸ್ಪರ ಪ್ರಭಾವಿಸುವ, ಪರಿಷ್ಕರಿಸಿಕೊಳ್ಳುವ, ಮರುವ್ಯಾಖ್ಯಾನಕ್ಕೆ ಒಳಪಡಿಸುವ ಕ್ರಿಯೆಯಲ್ಲಿ ತೊಡಗಿದೆ. ‘ಅಭಿಜಾತ’, ‘ಜನಪದ’ ಮತ್ತು ‘ಜನಪ್ರಿಯ’ ಎಂದು ಭಾರತೀಯ ಸಂಸ್ಕೃತಿಯಲ್ಲಿ ಯಾವುದು ಈಗಾಗಲೆ ವರ್ಗೀಕೃತವಾಗಿದೆಯೋ ಅದೆಲ್ಲವನ್ನೂ ನಿರಂತರವಾಗಿ ಪರಸ್ಪರ ಸ್ಪಂದಿಸುವ ಕ್ರಿಯೆಯ ಭಾಗವಾಗಿಯೇ ಪರಿಗಣಿಸಬೇಕು. ಪಠ್ಯಗಳು ಇತರ ಪಠ್ಯಗಳಿಗೆ ಸಂದರ್ಭಗಳಾಗಿ, ಆ ಪಠ್ಯಗಳ ಸೃಷ್ಟಿಗೆ ನೆಪಗಳಾಗಿ ಪರಿಣಮಿಸುತ್ತದೆ. ಈಚಿನ ನಮ್ಮ ಅಧ್ಯಯನಗಳಲ್ಲಿ ಜನಪದ ಪಠ್ಯಗಳನ್ನು ಅಂತರ್ ಪಠ್ಯದ ಸಂದರ್ಭದಲ್ಲಿಟ್ಟು ನೋಡುವ ಕೆಲಸವನ್ನು ಆರಂಭಿಸಿದ್ದೇವೆ. ಏಕೆಂದರೆ ಜನಪದ ಪಠ್ಯಗಳು ಕೇವಲ ಹಳ್ಳಿಗಳಲ್ಲಿ ಅನಕ್ಷರಸ್ಥರ ನಡುವೆ ರೂಪುಗೊಳ್ಳುವುದಿಲ್ಲ. ಒಂದು ಸಮಾಜ ರೂಪಿಸವ ಎಲ್ಲ ಪಠ್ಯಗಳಲ್ಲಿ, ಸಮಾಜದ ಎಲ್ಲ ಸ್ಥರಗಳಲ್ಲಿ ಅವು ಸರ್ವವ್ಯಾಪಿಯಾಗಿವೆ. ಪಟ್ಟಣ ಮತ್ತು ಹಳ್ಳಿ, ಕಾರ್ಖಾನೆ ಮತ್ತು ಅಡುಗೆಮನೆ, ಹಿಂದೂ, ಬೌದ್ಧ, ಜೈನ, ಕ್ರಿಶ್ಚಿಯನ್, ಮುಸ್ಲಿಂ ಎಂಬ ಮಠಗಳು, ಪ್ರತಿಯೊಂದು ಜಾತಿ, ಪ್ರತಿಯೊಂದು ವರ್ಗ, ಬುಡಭದ್ರವಿಲ್ಲದ ಪ್ರಸ್ತುತದ ಸುಲಭದ ಕಂಪ್ಯೂಟರ್ ಎಂಬ ಭೇದವಿಲ್ಲದೆ ಕತೆಗಳು, ಜೋಕುಗಳು, ನಂಬಿಕೆಗಳು, ಅಲಿಖಿತ ನಿಯಮಗಳು ಮುಂತಾದ ಬಾಯ್ಮಾತಿನ ಪರಂಪರೆಗಳು ಎಲ್ಲೆಲ್ಲೂ ವ್ಯಾಪಿಸಿವೆ.

ಪರಸ್ಪರ ಸ್ಪಂದಿಸುವ ಅಖಿಲ ಭಾರತ ವ್ಯವಸ್ಥೆ

ಇತ್ತೀಚಿನ ದೃಷ್ಟಿಕೋನದ ಪ್ರಕಾರ ನಾವು ಯಾವುದನ್ನು ಹಿರಿಯ ಪರಂಪರೆಯೆಂದು ಕರೆಯುತ್ತೇವೋ ಅದು ಕೂಡ ಏಕೈಕವಾದುದಲ್ಲ, ಬಹುರೂಪಿಯಾದುದು. ಅದು ಬ್ರಾಹ್ಮಣ, ಬೌದ್ಧ ಮತ್ತು ಜೈನಧರ್ಮ ಎಂದು ಪರಸ್ಪರ ಸ್ಪಂದಿಸುವ ಅಖಿಲ ಭಾರತೀಯ ವ್ಯವಸ್ಥೆ. ಇದರೊಂದಿಗೆ ತಂತ್ರ ಮತ್ತು ಭಕ್ತಿ ಕೂಡ ಬೇರೆ ಬೇರೆ ನೆಲೆಗೆಳಲ್ಲಿ ಪ್ರತಿಸ್ಪಂದಿಸುತ್ತದೆ. ಸಮಗ್ರತೆಯ ದೃಷ್ಟಿಯಿಂದ ಇಸ್ಲಾಂ, ಝೋರಾಷ್ಟ್ರಿಯನ್, ಕ್ರಿಶ್ಚಿಯನ್ ಧರ್ಮಗಳು ಹಾಗೂ ಆಧುನಿಕತೆ – ಇವು ಕೂಡ ಈ ಕೊಳು-ಕೊಡೆಯ ವ್ಯವಹಾರದಲ್ಲಿ ಭಾಗಿಗಳು ಎಂಬುದನ್ನು ಗಮನಿಸಬೇಕು. ಈ ಎಲ್ಲ ವ್ಯವಸ್ಥೆಗಳಲ್ಲಿ ಜಾನಪದ ಭಾಗಿಯಾಗಿದೆ. ಉದಾಹರಣೆಗೆ, ಈ ಗ್ರಂಥದಲ್ಲಿರುವ ಬಾಯ್ಮಾತಿನ ಕತೆಗಳನ್ನು ವಿವಿಧ ಸಮುದಾಯಗಳಿಂದ ಸಂಗ್ರಹಿಸಲಾಗಿದೆ. ಇಲ್ಲಿನ ಕೆಲವು ಕತೆಗಳಿಗೆ ಹಿಂದೂ, ಬೌದ್ಧ, ಜೈನ, ಇಸ್ಲಾಂ, ಕ್ರಿಶ್ಚಿಯನ್ ಪಠ್ಯಗಳಲ್ಲಿ ಸಂವಾದಿ ರೂಪಗಳಿವೆ.

ಹಿರಿಯ ಪರಂಪರೆ ಅಖಿಲ ಭಾರತದ ವ್ಯಾಪ್ತಿಯನ್ನು ಹೊಂದಿದೆ, ಆದರೆ ಕಿರು ಪರಂಪರೆಗಳಿಗೆ ಆ ವ್ಯಾಪ್ತಿಯಿಲ್ಲ ಎಂಬ ಅಭಿಪ್ರಾಯವನ್ನು ಸ್ಥೂಲವಾಗಿ ವಿವೇಚಿಸೋಣ. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಗೆ ಅಖಿಲ ಭಾರತ ಪ್ರಕಾರ ಇದೆಯಾದರೂ ಅವು ಕೆಲವೊಂದು ಪ್ರಾಂತ್ಯಗಳಲ್ಲಿ ಮಾತ್ರ ಪ್ರಚಲಿತವಾಗಿವೆ. ಸಂಸ್ಕೃತವು ಭೌಗೋಳಿಕ ಮಿತಿಗಳನ್ನು ಮೀರಿ ಸರ್ವವ್ಯಾಪಿಯಾದರೂ ಅದರಲ್ಲಿ ಬಂಗಾಳಿ, ಮಲೆಯಾಳ ಅಥವಾ ಬನಾರಸಿ ಎಂಬ ಪ್ರಭೇದಗಳನ್ನು ಗುರುತಿಸಬಹುದು. ಇದೇ ರೀತಿ ತಥಾಕಥಿತ ಕಿರು ಪರಂಪರೆಗಳು ತೀರಾ ಸಣ್ಣ ಪ್ರಾಂತ್ಯ ಅಥವಾ ಉಪಭಾಷೆಗಳಿಗೆ ಸೀಮಿತವೇನಲ್ಲ. ಗಾದೆಗಳು, ಒಗಟುಗಳು, ಕತೆಗಳು, ಹಾಡಿನ ಧಾಟಿಗಳು, ಆಶಯಗಳು, ಮತ್ತು ಹಾಡು-ಕುಣಿತದ ಶೈಲಿಗಳು ಲಿಪಿರಹಿತವಾದ ಉಪಭಾಷೆಗಳಲ್ಲಿ ಮತ್ತು ಸ್ವಯಂಪೂರ್ಣ ಗ್ರಾಮ ಸಮುದಾಯಗಳಲ್ಲಿ ಕಂಡುಬರಬಹುದಾದರೂ ಅವು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಸಾಂಸ್ಕೃತಿಕ ವಿನಿಮಯದಲ್ಲಿ ಈ ಬಗೆಯ ಜಾನಪದೀಯ ಅಂಶಗಳು ಇನ್ನಿತರ ಅಂಶಗಳಂತೆ ಸ್ವಯಂವಾಹಕಗಳಾಗಿವೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗದಿದ್ದರೂ ಈ ಅಂಶಗಳು ತಮ್ಮಷ್ಟಕ್ಕೆ ತಾವೇ ಇನ್ನೊಂದು ಕಡೆ ಕಂಡು ಬರುತ್ತದೆ. ಒಂದು ಗಾದೆ, ಒಂದು ಒಗಟು, ನಗೆಹನಿ, ಕತೆ, ಮನೆಮದ್ದು ಅಥವಾ ಅಡುಗೆ ವಿಧಾನವನ್ನು ಇನ್ನೊಬ್ಬರಿಗೆ ಹೇಳಿದ್ದಾದರೆ ಅದು ಇನ್ನೊಂದು ಕಡೆ ಚಲಾವಣೆಗೆ ಬರುತ್ತದೆ. ದ್ವಿಭಾಷಿಕನೊಬ್ಬ ಇದನ್ನು ಕೇಳಿದಾಗ ಅಥವಾ ಇತರರಿಗೆ ಹೇಳಿದಾಗ ಅದು ಆ ಭಾಷೆಯ ಮಿತಿಗಳನ್ನು ಮೀರುತ್ತದೆ. ಆದುದರಿಂದ ಭಾರತದ ನೆಲದಲ್ಲಿ ಮತ್ತು ಭಾಷೆಗಳಲ್ಲಿ ಪರಸ್ಪರ ಹಂಚಿಕೊಳ್ಳಬಹುದಾದ ವಿಫುಲವಾದ ಜಾನಪದ ಸಾಮಗ್ರಿಯಿದೆ. ಈ ಉಪಖಂಡದ ಉದ್ದಗಲದಲ್ಲಿ ಪರಸ್ಪರ ಸಮಾನವಾದ, ಒಂದೇ ಸ್ವರೂಪದ ಗಾದೆಗಳು, ಒಗಟುಗಳು ಹಾಗೂ ಕತೆಗಳನ್ನು ಸಂಗ್ರಹಿಸಬಹುದು. ಆದರೂ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಪರಸ್ಪರ ಸಮಾನವಾದ ಈ ಸಾಮಗ್ರಿಗಳ ಅರ್ಥ ಮತ್ತು ಬಳಕೆಯಲ್ಲಿ ವೈವಿಧ್ಯ ಹಾಗೂ ವ್ಯತ್ಯಾಸಗಳಿರಲು ಸಾಧ್ಯ. ಉದಾಹರಣೆಗೆ ‘ದೀಪದಡಿ ಕತ್ತಲೆ’ ಎಂಬ ಗಾದೆ ಕನ್ನಡ ಮತ್ತು ಕಾಶ್ಮೀರಿ ಭಾಷೆಗಳಲ್ಲಿ ಅಂದರೆ ಭಾರತೀಯ ಉಪಖಂಡದ ಎರಡು ತುದಿಗಳಲ್ಲಿ ಕಂಡು ಬರುತ್ತದೆ. ದೀಪದಡಿ ಹೇಗೆ ಕತ್ತಲೋ ಹಾಗೆಯೇ ಒಬ್ಬ ಒಳ್ಳೆಯ ಮನುಷ್ಯನಲ್ಲಿ ದುರ್ಗುಣಗಳು ಅಡಗಿರಬಹುದು ಎಂದು ಕನ್ನಡಿಗರು ಈ ಗಾದೆಯನ್ನು ಅರ್ಥೈಸಬಹುದು. ಆದರೆ ಕಾಶ್ಮೀರಿ ಭಾಷೆಯಲ್ಲಿ ಈ ಗಾದೆಗೆ ರಾಜಕೀಯ ಅರ್ಥವೂ ಇದೆ. ಒಬ್ಬ ಉದಾರಿ ದೊರೆಯ ಆಶ್ರಯದಲ್ಲಿ ದುಷ್ಟ ಹೊಂತಗಾರರು ಇರಬಹುದು. ಈ ಬಗೆಯ ಅರ್ಥ ವೈವಿಧ್ಯವೂ ಸಾಂಸ್ಕೃತಿಕ ರೂಪಗಳ ವೈಶಿಷ್ಯವಾಗಿದೆ. ಪ್ರತಿಮೆಗಳು, ಪಾತ್ರಗಳು, ಕಥಾನಕಗಳು ಅಥವಾ ತಥಾಕಥಿತ ರಚನೆಗಳು ಮತ್ತು ಆದಿಮರೂಪಗಳು ಇವೇ ಮುಂತಾದ ಅರ್ಥವ್ಯಂಜಕಗಳು ವಿವಿಧ ಕಾಲಗಳಲ್ಲಿ ಒಂದೇ ಆಗಿದ್ದರೂ ಅವುಗಳಿಗೆ ನಾವು ನೀಡುವ ಮಹತ್ವ ಆರೋಪಿಸುವ ಬದಲಾಗುತ್ತಿರುತ್ತದೆ. ರೂಪ/ ಪ್ರಕಾರಗಳಿಂದ ನೀವು ಅರ್ಥವನ್ನು ಊಹಿಸಲು ಬರುವುದಿಲ್ಲ. ಏಕೆಂದರೆ ಅರ್ಥವ್ಯಂಜಕಗಳಿಗೆ ಸಾಂಸ್ಕೃತಿಕ ಸಂದರ್ಭದಲ್ಲಿ ಅರ್ಥವನ್ನು ಆರೋಪಿಸಲಾಗುತ್ತದೆ. ಅದಕ್ಕೆ ಆವಾಹನೆ-ಆರೋಪಣೆಯ ಅಗತ್ಯವಿದೆ.

ಹೊಸತಾಗಿ ಉತ್ಪನ್ನವಾಗುತ್ತಿರುವ ಅಥವಾ ಈಗಾಗಲೆ ಚಲಾವಣೆಯಲ್ಲಿರುವ ಜಾನಪದೀಯ ಅಂಶಗಳು ಕೇವಲ ಸ್ಥಳೀಯ ಉಪಭಾಷೆಗಳಿಗೆ ಮತ್ತು ದುರ್ಗಮ ಪ್ರಾಂತ್ಯಗಳಿಗಷ್ಟೇ ಸೀಮಿತವಲ್ಲ. ಅವು ಒಂದು ದೇಶ ಮತ್ತು ಸಾಂಸ್ಕೃತಿಕ ಪರಿಧಿಗೆ ಮಾತ್ರ ಸೀಮಿತವಲ್ಲ; ಅವು ಅಂತಾರಾಷ್ಟ್ರೀಯ ಜಾಲವೊಂದರ ಭಾಗವೂ ಆಗಿರುತ್ತದೆ.

ಆರ್ಚರ್ ಟೇಲರ್ ನ ಇಂಗ್ಲಿಷ್ ರಿಡಲ್ಸ್ ಗ್ರಂಥವು ಸದ್ಯ ಚಲಾವಣೆಯಲ್ಲಿರುವ ಲಿಖಿತ ಒಗಟುಗಳ ಜೊತೆಗೆ ಶತಮಾನಗಳಷ್ಟು ಹಳೆಯದಾದ ಲಿಖಿತ ಒಗಟುಗಳನ್ನು ಆಫ್ರಿಕಾ, ಭಾರತ ಹಾಗೂ ಹೊಸ ಜಗತ್ತಿನಲ್ಲಿ ಪ್ರಚಲಿತವಿರುವ ಇದೇ ತೆರನಾದ ಅನೇಕ ಒಗಟುಗಳನ್ನು ಒಳಗೊಂಡಿದೆ. ನನ್ನ ಅನುಭವದಿಂದ ಹೇಳುವುದಾದರೆ, ಇಂಗ್ಲಿಷ್ ಭಾಷಾ ಜಗತ್ತಿನಲ್ಲಿ ಪರಿಚಿತವಾಗಿರುವ ಗ್ರೀಕ್ ನ ಈಡಿಪಸ್ ಅಥವಾ ಶೇಕ್ಸಪೀಯರ್ ನ ಕಿಂಗ್ ಲಿಯರ್ ನಂಥ ಕತೆಗಳ ವಸ್ತು, ಆಶಯಗಳಿಗೆ ಸರಿಸಾಟಿಯಾದ ಕತೆಗಳನ್ನು ಇವತ್ತು ದಕ್ಷಿಣ ಭಾರತದ ಹಳ್ಳಿಗಳಲ್ಲಿ ಹಳ್ಳಿಗರ ನೆರವಿನಿಂದ ಸಂಗ್ರಹಿಸಬಹುದು.

ಯುರೋಪ್ ನಲ್ಲಿ ಅರಿಸ್ಟಾಟಲ್ ನ ಬಗೆಗೆ ಪ್ರಚಲಿತದಲ್ಲಿರುವ ಒಂದು ಕತೆ ಮತ್ತು ಭಾರತೀಯ ತತ್ವಜ್ಞಾನಿಯೊಬ್ಬನ ಬಗೆಗೆ ಪ್ರಚಲಿತವಿರುವ ಒಂದು ಕತೆ ಹೀಗಿದೆ – ಒಬ್ಬ ತತ್ವಜ್ಞಾನಿ ಒಂದು ಹಳೆಯ ಚೂರಿಯನ್ನು ಇಟ್ಟುಕೊಂಡಿದ್ದ ಹಳ್ಳಿಯ ಬಡಗಿಯನ್ನು ಭೇಟಿಮಾಡಿ “ಎಷ್ಟು ಸಮಯದಿಂದ ಈ ಚೂರಿ ನಿನ್ನಲ್ಲಿದೆ”? ಎಂದು ಕೇಳುತ್ತಾನೆ. “ಓ ಅದಾ! ಅದು ತಲತಾಂತರದಿಂದ ನಮ್ಮ ಮನೆಯಲ್ಲಿದೆ. ನಾವು ಕೆಲವು ಸಲ ಅದರ ಹಿಡಿ ಬದಲಾಯಿಸುತ್ತೇವೆ. ಕೆಲವು ಸಲ ಸಾಣೆ ಹಿಡಿಸಿದ್ದೇವೆ. ಆದರೆ ನಮ್ಮ ತಾತ ಮುತ್ತಾತನ ಕಾಲದಿಂದಲೂ ಅದೇ ಚೂರಿ ನಮ್ಮಲ್ಲಿರೋದು” ಎಂದು ಬಡಗಿ ಉತ್ತರಕೊಡುತ್ತಾನೆ. ಜನಪದ ಕತೆ ಕೂಡ ಹೀಗೆಯೇ. ಒಬ್ಬ ಹೇಳಿದ ಕತೆಯನ್ನು ಇನ್ನೊಬ್ಬ ಇನ್ನೊಂದು ರೀತಿಯಲ್ಲಿ, ಮಗದೊಬ್ಬ ಮತ್ತೊಂದು ರೀತಿಯಲ್ಲಿ ಹೇಳುತ್ತಾನೆ. ಕತೆಯ ವಿನ್ಯಾಸ ಹಾಗೆಯೇ ಉಳಿದರೂ ಸಾಂಸ್ಕೃತಿಕ ವಿವರಗಳು ಕತೆಗಾರನಿಂದ ಕತೆಗಾರನಿಗೆ ಬದಲಾಗುತ್ತಿರುತ್ತವೆ. ಬೇರೆ ಬೇರೆ ಕತೆಗಳ ತುಣುಕುಗಳು ಜೊತೆಗೂಡಿ ಒಂದು ಕತೆ ಹುಟ್ಟುತ್ತದೆ. ಇಂಥ ಒಂದು ಕತೆಯು ಆ ಸಂಸ್ಕೃತಿಯ ವಿಶಿಷ್ಟ ಗುಣಲಕ್ಷಣವಾಗಿರುವ ಹೊಸ ನೈತಿಕತೆ ಮತ್ತು ಸೌಂದರ್ಯ ಪ್ರಜ್ಞೆಯನ್ನು ಅಭಿವ್ಯಕ್ತಿಪಡಿಸುತ್ತದೆ. ಇದೆ ಕತೆಯನ್ನು ಇನ್ನೊಮ್ಮೆ ಬೇರೆ ಕಾಲ, ಸ್ಥಳದಲ್ಲಿ ಹೇಳಿದಾಗ ಮೂಲಕಥಾ ಹಂದರಕ್ಕೆ ಚ್ಯುತಿ ಬರದಿದ್ದರೂ ಅದು ಆ ಸ್ಥಳಕ್ಕೆ, ಆ ಕಾಲಕ್ಕೆ ಸುಸಂಗತವಾದ ಅನೇಕ ಹೊಸ ಸಂಗತಿಗಳನ್ನು ಒಳಗೊಳ್ಳಬಹುದು. ಯಾವುದೇ ಬಗೆಯ ನಿಶ್ಚಿತತೆ ಅಥವಾ ಪುನರಾಚಿತ ಆದಿಮ ರೂಪವು ಒಂದು ಕಟ್ಟುಕತೆ; ಅದೊಂದು ಹಣೆಪಟ್ಟಿ ಅಥವಾ ನಾವು ಮಾಡಿಕೊಂಡ ಒಂದು ಸೌಲಭ್ಯ ಅಷ್ಟೇ.

ಕೃಪೆ : ನ್ಯಾಷನಲ್ ಬುಕ್ ಟ್ರಸ್ಟ್ , ನವದೆಹಲಿ

ಅನುವಾದ : ಮಹಾಬಲೇಶ್ವರ ರಾವ್

ಪ್ರತಿಕ್ರಿಯಿಸಿ