ಎ.ಕೆ. ರಾಮಾನುಜನ್ ಸಂದರ್ಶನ – ಭಾಗ ೧

ಸಂದರ್ಶಕರು : ತೀ.ನಂ.ಶಂಕರನಾರಾಯಣ ಮತ್ತು ಎಸ್.ಎ.ಕೃಷ್ಣಯ್ಯ

೧೯೯೦ರ ಜೂನ್ ತಿಂಗಳಲ್ಲಿ ತಮಿಳುನಾಡಿನ ಪಾಲಿಯೆಂಕೋಟ್ ನ ಸೈಂಟ್ ಝೇವಿಯರ್ ಕಾಲೇಜಿನ ಜಾನಪದ ಅಧ್ಯಯನ ಕೇಂದ್ರದವರು ಫೋರ್ಡ್ ಫೌಂಡೇಶನ್ ನೆರವಿನಿಂದ ತಮಿಳುನಾಡು ಮತ್ತು ಕೇರಳದ ಯುವ ಜಾನಪದ ವಿದ್ವಾಂಸರಿಗಾಗಿ ಕಮ್ಮಟವನ್ನು ನಡೆಸಿದರು. ಎ. ಕೆ. ರಾಮಾನುಜನ್ ಈ ಕಮ್ಮಟದಲ್ಲಿ ಉಪನ್ಯಾಸಗಳನ್ನು ನೀಡಿದರು. ಸಂದರ್ಶಕರಿಬ್ಬರು ೬-೬-೯೦ರಂದು ರಾಮಾನುಜನ್ ಅವರನ್ನು ಭೇಟಿಮಾಡಿ ಈ ಸಂದರ್ಶನ ಮಾಡಿದರು . ಆ ಸಂದರ್ಶನದ ಧ್ವನಿಯನ್ನು ಇಲ್ಲಿ ಕೊಡಲಾಗಿದೆ . ಮಾತುಗಳು ಇಂಗ್ಲಿಷಿನಲ್ಲಿ ಇರುವುದರಿಂದ ಸಂದರ್ಶನದ ಪಠ್ಯ ರೂಪವನ್ನು ಕನ್ನಡದಲ್ಲಿ ಕೊಡಲಾಗಿದೆ . ಈ ಅಮೂಲ್ಯ ಧ್ವನಿಮುದ್ರಣವನ್ನು ಋತುಮಾನಕ್ಕಾಗಿ ನೀಡಿದ ಎಸ್. ಎ. ಕೃಷ್ಣಯ್ಯ ಅವರಿಗೆ ಋತುಮಾನ ಆಭಾರಿ. 

ರಾಮಾನುಜನ್ ಅವರು ಜಾನಪದ ಅಧ್ಯಯನದ ಬಗ್ಗೆ, ಕಾವ್ಯ ಮೀಮಾಂಸೆಯ ಬಗ್ಗೆ ಆ ಕಾಲದ ನಮ್ಮ ಕನ್ನಡದ ಇತರ ವಿದ್ವಾಂಸರಿಗಿಂತ ಭಿನ್ನವಾಗಿ ಆಲೋಚನೆ ಮಾಡಿರುವುದನ್ನು, ಆ ಬಗ್ಗೆ ಅನೇಕ ಒಳನೋಟಗಳನ್ನು ನೀಡಿರುವುದನ್ನು ಈ ಸಂದರ್ಶನದಲ್ಲಿ ಕಾಣಬಹುದು.

ಸಂದರ್ಶನದ ಎರಡನೇ ಭಾಗ ನಾಳೆ ಪ್ರಕಟವಾಗುವುದು.


ಸಾರ್ ನೀವು ಪ್ರಸಿದ್ಧ ಭಾಷಾ ವಿಜ್ಞಾನಿ, ಕವಿ, ಮತ್ತು ಅನುವಾದಕರು ,ಇಲ್ಲದರ ನಡುವೆ ನೀವು ಜಾನಪದದಲ್ಲಿ ಆಸಕ್ತಿ ಬೆಳೆಸಿಕೊಂಡದ್ದು ಹೇಗೆ ?

ಮೊದಲನೆಯದಾಗಿ ನಾನು ಭಾಷಾವಿಜ್ಞಾನದಿಂದ ನನ್ನ ವೃತ್ತಿ ಜೀವನವನ್ನು ಆರಂಭಿಸಲಿಲ್ಲ. ನಾನು ಮಾಡಿದ್ದು ಇಂಗ್ಲಿಷ್ ಎಂ.ಎ. ಆದರೆ ನನ್ನ ಆಸಕ್ತಿ ಇದ್ದದ್ದು ದಕ್ಷಿಣ ಭಾರತದ ಭಾಷೆಗಳಲ್ಲಿ – ಕನ್ನಡ ಮತ್ತು ತಮಿಳಿನಲ್ಲಿ ನಾನು ಡಿಗ್ರಿಗಳನ್ನು ಪಡೆಯಲಿಲ್ಲ. ಆದರೆ ಇಂಗ್ಲಿಷನ್ನು ಅಭ್ಯಾಸ ಮಾಡುತ್ತಿರುವಾಗ ನಾನು ಕನ್ನಡ ಮತ್ತು ತಮಿಳು ಭಾಷೆಗಳ ಅಭ್ಯಾಸವನ್ನೂ ಮಾಡುತ್ತಿದ್ದೆ. ನಮ್ಮ ಮಾತೃಭಾಷೆಯನ್ನೂ ಕೂಡ ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಲೇ ಬೇಕಾಗಿದೆಯೆಂಬುದು ನನಗೆ ಬಹು ಬೇಗ ಮನವರಿಕೆಯಾಯಿತು. ವಿದೇಶೀ ಭಾಷೆಯನ್ನು ಮಾತ್ರ ಕಷ್ಟಪಟ್ಟು ಕಲಿತರೆ ಸಾಕಾಗುವುದಿಲ್ಲ. ಅದನ್ನು ಕಲಿಯಲು ಎಷ್ಟು ಪ್ರಯತ್ನ ಪಡುತ್ತೇವೆಯೋ ಎಷ್ಟು ಆಳವಾಗಿ ಕಲಿಯುತ್ತೇವೆಯೋ, ಅದಕ್ಕಾಗಿ ಎಷ್ಟು ಶ್ರಮ ಪಡುತ್ತೇವೆಯೋ ಅಷ್ಟೇ ಆಳವಾಗಿ , ಅಷ್ಟೇ ಶ್ರಮಪಟ್ಟು ಮಾತೃಭಾಷೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡದಿದ್ದರೆ ಯಾರೂ ಕೂಡ ತನ್ನ ಸಂಸ್ಕೃತಿಯಲ್ಲಿ ಪೂರ್ಣವಾಗಿ ಅಭಿವ್ಯಕ್ತಿ ಪಡೆದುಕೊಳ್ಳಲು, ತನ್ನ ಅಥವಾ ಇತರ ಸಂಸ್ಕೃತಿಗಳಲ್ಲಿ ಒಳನೋಟಗಳನ್ನು ಕಾಣಲು ಸಾಧ್ಯವಾಗುವುದಿಲ್ಲ, ಮಾತೃಭಾಷೆ ಬಾಲ್ಯದಲ್ಲಿ ಮನಸ್ಸಿನ ಆಳಕ್ಕೆ ಇಳಿಯುತ್ತದೆ ಮತ್ತು ಸಮಾಜದ ಎಲ್ಲಾ ಸ್ತರಗಳನ್ನೂ ವ್ಯಾಪಿಸುತ್ತದೆ. ಆದರೆ ಅದರ ಬದಲು ಇಂಗ್ಲಿಷಿಗೆ ಅಂಟಿಕೊಂಡರೆ ಅಭಿವ್ಯಕ್ತಿ ಸಾಮರ್ಥ್ಯ ಕೇವಲ ಶೇಕಡಾ ಒಂದಕ್ಕೆ ಸೀಮಿತವಾಗುತ್ತದೆ. ಈ ದೃಷ್ಟಿಯಿಂದ ಸಂಸ್ಕೃತ ವಾಸಿ. ಸಂಸ್ಕೃತ ಕಲಿಯುವುದರ ಮೂಲಕ ನಮ್ಮ ದೇಶದ ಪ್ರಾಚೀನ ಧರ್ಮ, ವಿವಿಧ ತಾತ್ವಿಕ ಗ್ರಂಥಗಳು ಭಾರತದ ವಿಜ್ಞಾನ ಮೊದಲಾದ ವಿಷಯಗಳಲ್ಲಿ ಒಳನೋಟಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇಂಗ್ಲಿಷ್ ಅಂತರರಾಷ್ಟ್ರೀಯ ವ್ಯಾಪ್ತಿಯುಳ್ಳ ಭಾಷೆ. ಅದು ನಮಗೆ ಅಗತ್ಯವಾಗಿ ಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಅದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಹೀಗಾಗಿ ಕನ್ನಡ ಮತ್ತು ತಮಿಳು ಭಾಷೆಗಳನ್ನು ವಿಶೇಷವಾಗಿ ರೂಢಿಸಿಕೊಳ್ಳುವುದು ಅಗತ್ಯ ಎಂದು ನನಗನ್ನಿಸಿತು. ಹೀಗೆಯೇ ಆಲೋಚನೆ ಮಾಡುತ್ತಾ ಹೋದಾಗ ಯಾವುದೋ ಒಂದು ಹಂತದಲ್ಲಿ ನನಗೆ ಹೀಗೆನ್ನಿಸಿತು: ಪ್ರತಿಯೊಬ್ಬ ಭಾರತೀಯನಿಗೂ ಸಂಸ್ಕೃತ ಮತ್ತು ಇಂಗ್ಲಿಷ್ ಪಿತೃ ಭಾಷೆಗಳಿಂದ ರೂಪುಗೊಂಡ ಸಂಸ್ಕೃತಿಯಂತೆಯೇ ಮಾತೃಭಾಷೆಗಳ ಸಂಸ್ಕೃತಿಯೂ ಒಂದಿದೆ. ಈ ಮಾತೃಭಾಷೆಗಳಿಂದ ರೂಪುಗೊಂಡ ಸಂಸ್ಕೃತಿಯಲ್ಲಿ ಶಿಷ್ಟ ಸಾಹಿತ್ಯ ಮಾತ್ರವಲ್ಲ, ಜಾನಪದವೂ ಇದೆ. ನಾನು ಈಚೆಗೆ ಬರೆದ ಒಂದು ಪ್ರಬಂಧದಲ್ಲಿ ಈ ರೀತಿ ಬರೆದೆ: ನಾವು ಮೈಸೂರಿನಲ್ಲಿ ವಾಸ ಮಾಡುತ್ತಿದ್ದ ಮನೆಯಲ್ಲಿ ಹಲವು ಅಂತಸ್ತುಗಳಿದ್ದು, ನೆಲ ಅಂತಸ್ತಿನಲ್ಲಿ ನಾನು, ನನ್ನ ತಾಯಿ, ಅಜ್ಜಿ ಮತ್ತು ಅಡಿಗೆಯವರು ಮೊದಲಾದವರೊಡನೆ ನನ್ನ ಮಾತೃಭಾಷೆಯಾದ ತಮಿಳಿನಲ್ಲಿ ಮಾತನಾಡುತ್ತಿದ್ದೆ. ಎರಡನೆಯ ಅಂತಸ್ತಿನಲ್ಲಿ ಗಣಿತಶಾಸ್ತ್ರಜ್ಞರಾಗಿದ್ದ ನಮ್ಮ ತಂದೆಯೊಡನೆ ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಮಾತನಾಡುತ್ತಿದ್ದೆ, ಅದಕ್ಕೂ ಮೇಲಿದ್ದ ತೆರೆದ ಅಂತಸ್ತಿನಲ್ಲಿ ನಿಂತು ಆಕಾಶವನ್ನು ನೋಡುತ್ತಿದ್ದೆ. ಅಲ್ಲಿಂದ ನಿಂತು ಕೆಳಗೆ ನೋಡಿದಾಗ ನಾನು ಕಾಣುತ್ತಿದ್ದದ್ದು ಗೊಲ್ಲರಕೇರಿ, ಸಾಮಾನ್ಯವಾಗಿ ಅಲ್ಲಿ ಕನ್ನಡದಲ್ಲಿ ನಡೆಯುತ್ತಿದ್ದ ಜಗಳವನ್ನು ಕೇಳುತ್ತಿದ್ದೆ. ಅಲ್ಲಿಂದ ಕೆಳಗಿಳಿದು ಹೀಗೇ ಅದನ್ನು ಹತ್ತಿರದಲ್ಲಿಯೇ ನೋಡಬಹುದಾಗಿತ್ತು. ಹೀಗಾಗಿ ನಾನು ಚಿಕ್ಕಂದಿನಲ್ಲಿ ಬೆಳೆದ ಮನೆ ಬಹು ಸಂಸ್ಕೃತಿಯ ಪ್ರತೀಕವಾಗಿತ್ತು. ಇದು ನನಗೊಬ್ಬನಿಗೇ ವಿಶೇಷವಾದ ಸಂಸ್ಕೃತಿಯೇನೂ ಅಲ್ಲ. ಪಟ್ಟಣಗಳಲ್ಲಿ ಬೆಳೆಯುವ ಬಹಳಷ್ಟು ಜನ ಹೀಗೆಯೇ ಬೆಳೆಯುತ್ತಾರೆ. ಯಾವದೋ ಒಂದು ಹಂತದಲ್ಲಿ ನಮಗೆ ನಮ್ಮ ಸಂಸ್ಕೃತಿಯ ಬಗೆಗೆ ಎಷ್ಟೆಲ್ಲ ಸಾಧ್ಯವೋ ಅಷ್ಟನ್ನೂ ತಿಳಿದುಕೊಳ್ಳುವುದು ಮುಖ್ಯ ಎನಿಸಿತು. ವಿಶೇಷವಾಗಿ ನನ್ನ ತಾಯಿ, ಅತ್ತೆಯರು, ಅಜ್ಜಿ ಮತ್ತು ಅಡಿಗೆಯವರು ಹೇಳುತ್ತಿದ್ದ ಅನೇಕ ಜನಪದ ಕಥೆಗಳನ್ನು ಕೇಳುತ್ತಿದ್ದೆ.ಜನಪದ ಕಥೆಗಳ ಬಗ್ಗೆ ನನ್ನ ಪ್ರೀತಿ ಆರಂಭವಾದದ್ದು ಹೀಗೆ. ಸುಮಾರು ಇಪ್ಪತ್ತನೆಯ ವಯಸ್ಸಿನಲ್ಲಿ ನಾನು ವೆರಿಯರ್ ಎಲ್ವಿನ್ ಕೃತಿಗಳನ್ನು ಓದಿ ಸಾಹಿತ್ಯವನ್ನು ಕೈಬಿಟ್ಟು ಅವರಂತೆ ಮಾನವ ವಿಜ್ಞಾನಿಯಾಗಬೇಕೆಂದು ಅಪೇಕ್ಷೆಪಟ್ಟೆ. ಅವರ ‘ಫೋಕ್ ಟೇಲ್ಸ್ ಆಫ್ ಮಹಾಕೋಶಲ’ ಮತ್ತು ‘ಫೋಕ್‌ಸಾಂಗ್ಸ್ ಆಫ್ ಛತ್ತೀಸ್ ಗಢ’ ಮೊದಲಾದ ಕೃತಿಗಳನ್ನು ಓದಿ ಅವುಗಳಿಂದ ಪ್ರಭಾವಿತನಾಗಿದ್ದೆ. ‘ನಾನು ನಿಮ್ಮೊಡನೆ ಬಂದು ಕೆಲಸ ಮಾಡುತ್ತೇನೆ’ ಎಂದು ಅವರಿಗೆ ಪತ್ರ ಬರೆದೆ .ಅವರು ಅದಕ್ಕೆ ಉತ್ತರ ಬರೆಯಲಿಲ್ಲ. ಆನಂತರ ನಾನು ಬೆಳಗಾವಿಗೆ ಹೋಗಿ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇರಿದೆ. ಆ ವೇಳೆಗಾಗಲೇ ನಾನು ಗಾದೆಗಳನ್ನು ಸಂಗ್ರಹ ಮಾಡಿದ್ದೆ. ಜಗತ್ತಿನ ವಿವಿಧ ದೇಶಗಳ ಗಾದೆಗಳಲ್ಲಿ ನನಗೆ ಆಸಕ್ತಿಯುಂಟಾಗಿತ್ತು. ವಿವಿಧ ಭಾಷೆಗಳಿಂದ ಇಂಗ್ಲಿಷ್‌ನ ಮೂಲಕ ನಾಲ್ಕೈದು ಸಾಲಿನ ಗಾದೆಗಳನ್ನು ನಾನು ಆ ವೇಳೆಗಾಗಲೇ ಸಂಗ್ರಹಿಸಿದ್ದೆ. ಅದರ ಬಗ್ಗೆ ನನಗೆ ವಿಶೇಷ ಆಸಕ್ತಿ ಇದ್ದುದರಿಂದ ಅಲ್ಲಲ್ಲಿ ಉಪನ್ಯಾಸಗಳನ್ನು ಕೊಡುತ್ತಿದ್ದೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಗಾದೆಗಳ ಬಗ್ಗೆ ಪ್ರಚಾರೋಪನ್ಯಾಸವನ್ನೂ ಮಾಡಿದೆ. ನನ್ನ ಪುಟ್ಟ ಪುಸ್ತಕ ‘ಗಾದೆಗಳು ‘ ಕರ್ನಾಟಕ ವಿಶ್ವವಿದ್ಯಾನಿಲಯ ಪ್ರಚಾರೋಪನ್ಯಾಸ ಮಾಲೆಯಲ್ಲಿ ಪ್ರಕಟವಾಯಿತು. ಆ ವಿಷಯದ ಬಗ್ಗೆ ಬರೆದ ಮೊದಲನೇ ಪುಸ್ತಕ ಅದು. ಗಾದೆಗಳಿಗೆ ಸಂಬಂಧಿಸಿದ ಸಂಗ್ರಹವೊಂದನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಪ್ರಕಟ ಮಾಡಬೇಕೆಂಬುದು ನನ್ನ ಆಶಯವಾಗಿತ್ತು. ಆದರೆ ಆ ಹಂತದಲ್ಲಿ ಅವರು ಪ್ರಕಟಿಸುವುದರಲ್ಲಿ ಆಸಕ್ತಿ ತೋರಿಸಲಿಲ್ಲ. ಚೀನಾ, ಜಪಾನ್ ಮೊದಲಾದ ಹಲವಾರು ದೇಶಗಳ ಗಾದೆಗಳಿಂದ ಕೂಡಿದ್ದ ಆ ಸಂಕಲನವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಾಗಬದಲಾಯಿಸುವಾಗ ಕಳೆದುಕೊಂಡು ಬಿಟ್ಟೆ. ಅದು ಎಲ್ಲಿ ಹೋಯಿತೋ ಗೊತ್ತಗಾಲಿಲ್ಲ. ನಾನು ಕರ್ನಾಟಕ ವಿಶ್ವವಿದ್ಯಾನಿಲಯದವರಿಗೆ – ಬೆಳಗಾಂ ಪ್ರದೇಶದ ಗಾದೆಗಳನ್ನು ಸಂಗ್ರಹಿಸಿಕೊಟ್ಟರೆ ಅದನ್ನು ಪ್ರಕಟಿಸುತ್ತೀರಾ ಎಂದು ಕೇಳಿದೆ. ಅದಕ್ಕೆ ಅವರು ಆಸಕ್ತಿ ತೋರಿಸಲಿಲ್ಲ. ಈ ಸಂದರ್ಶನದ ದೃಷ್ಟಿಯಿಂದ ಇವೇನೂ ಮುಖ್ಯವಾದ ವಿಷಯಗಳಲ್ಲ. ಆದರೆ ಆ ಕಾಲಕ್ಕೆ ನಾನು ಏನು ಕೆಲಸ ಮಾಡಬೇಕು ಎಂದಿದ್ದೆನೋ ಆ ಕೆಲಸವನ್ನು ನನಗೆ ಇಂದಿಗೂ ಮಾಡಲು ಆಗಿಲ್ಲ ಎಂದಷ್ಟೆ ನಾನು ಹೇಳುತ್ತಿರುವುದು. ನಾನು ವಾಸ್ತವವಾಗಿ ಕ್ಷೇತ್ರಕ್ಕೆ ಹೋಗಿ ಗಾದೆಗಳನ್ನು ಸಂಗ್ರಹಿಸಬೇಕು. ನಮ್ಮಲ್ಲಿ ಬಂದಿರುವ ಗಾದೆಯ ಸಂಕಲನಗಳು ಮುಖ್ಯವಾಗಿ ಜನರ ನೆನಪಿನಿಂದ ಸಂಗ್ರಹಿತವಾಗಿವೆ. ನಾವು ಕ್ಷೇತ್ರಕ್ಕೆ ಹೋದರೆ, ಗಾದೆಗಳನ್ನು ಯಾವ ಸಂದರ್ಭದಲ್ಲಿ ಹೇಳುತ್ತಾರೋ ಆ ಸಂದರ್ಭದ ವಿವರಗಳೊಂದಿಗೆ ಸಂಗ್ರಹಿಸಬೇಕು…ಇದೆಲ್ಲಾ ನಡೆದದ್ದು ೧೯೫೫ರಲ್ಲಿ.

ಜಾನಪದ ಕಥೆಗಳ ಬಗ್ಗೆ ನೀವು ಹೆಚ್ಚು ಕೆಲಸ ಮಾಡಿದ್ದೀರಿ. ಈ ಕಥೆಗಳ ಸಂಗ್ರಹಕ್ಕೆ ನಿಮಗೆ ಹೇಗೆ ಪ್ರೇರಣೆ ದೊರೆಯಿತು?

ಗಾದೆಗಳ ಸಂಗ್ರಹದ ಅನಂತರ …ಜನಪದ ಕಥೆಗಳನ್ನು ಸಂಗ್ರಹ ಮಾಡುವುದರ ಬಗ್ಗೆ ನನಗೆ ಆಸಕ್ತಿ ಬಂದದ್ದು ಈ ಹಂತದಲ್ಲಿಯೇ. ನನ್ನ ಮನೆಯ ಜನಗಳಿಂದ ನಾನು ಜಾನಪದದ ಕಥೆಗಳನ್ನು ಸಂಗ್ರಹಿಸಿದ್ದೆ. ಬೆಳಗಾಂನಲ್ಲಿದ್ದಾಗ ಕುರುಬೇಟ ಎಂಬ ಪ್ರಾಥಮಿಕ ಶಾಲಾ ಉಪಾಧ್ಯಾಯರ ಪರಿಚಯ ನನಗಾಯಿತು. ಈಗ ನನಗೆ ಅವರ ಸಂಪರ್ಕವೇ ಇಲ್ಲದಂತಾಗಿದೆ. ಈಗ ಅವರು ಎಲ್ಲಿದ್ದಾರೋ … ಬದುಕಿದ್ದಾರೋ ಇಲ್ಲವೋ ಎಂಬುದೂ ತಿಳಿಯದು … ಆಗ ನನ್ನನ್ನು ನೋಡುವುದಕ್ಕೆ ಅಲ್ಲಿ ಅನೇಕರು ಬರುತ್ತಿದ್ದರು. ನನ್ನೊಡನೆ ಮಾತನಾಡುತ್ತಿದ್ದರು. ನಾನೇನು ಮಾಡ್ತಾ ಇದ್ದೀನಿ ಅನ್ನೋದನ್ನ ತಿಳಿಯುವ ಕುತೂಹಲ ಅವರಲ್ಲಿರುತ್ತಿತ್ತು. ಅಂಥವರಲ್ಲಿ ಕುರುಬೇಟರವರು ಕೂಡ ಒಬ್ಬರು. ಏಳು ವರ್ಷದ ಹುಡುಗರು ಅವರ ವಿದ್ಯಾರ್ಥಿಗಳಾಗಿದ್ದರು. ಆ ಹುಡುಗರು ತಾವು ಕೇಳಿದ್ದ ಜನಪದ ಕಥೆಗಳನ್ನು ಅವರು ಕೇಳಿದಂತೆಯೇ ಬರೆದುಕೊಡುವಂತೆ ಮಾಡಲು ಸಾಧ್ಯವೇ ಎಂದು ಅವರನ್ನು ಕೇಳಿದ್ದೆ. ಕುರುಬೇಟ ಅವರು ಅದಕ್ಕೆ ಒಪ್ಪಿ ಅವರು ತಮ್ಮ ಕಾಂಪೋಜಿಶನ್‌ ಕ್ಲಾಸ್‌ನಲ್ಲಿ ಮಕ್ಕಳಿಗೆ ಅವರು ಕೇಳಿದ್ದ ಕಥೆಗಳನ್ನು ಬರೆದುಕೊಡುವಂತೆ ಹೇಳಿದರು. ಮಕ್ಕಳು ಬರೆದುಕೊಟ್ಟರು. ಅವು ಅದ್ಭುತವಾದ ಕಥೆಗಳಾಗಿದ್ದವು. ಮಕ್ಕಳು ಅವುಗಳನ್ನು ವ್ಯಾಕರಣಬದ್ಧವಾದ ಭಾಷೆಯಲ್ಲಿ ಬರೆದಿರಲಿಲ್ಲ. ಅವರು ಹೇಗೆ ಕೇಳಿಸಿಕೊಂಡಿದ್ದರೋ ಹಾಗೆಯೇ ಬರೆದು ಕೊಟ್ಟಿದ್ದರು. ‘ಹಂಚಿ ‘ ಕಥೆ ನನಗೆ ಸಿಕ್ಕದ್ದು ಹೀಗೆ. ಆ ಹಸ್ತಪ್ರತಿ ಈಗಲೂ ನನ್ನಲ್ಲಿದೆ.

ನಮ್ಮ ಜಾನಪದವನ್ನು ಕುರಿತು ಇಂಗ್ಲಿಷಿನಲ್ಲಿ ಬರೆಯುವುದಕ್ಕೆ ನಿಮಗೆ ಪ್ರೇರಣೆಯಾದದ್ದು ಹೇಗೆ?

೧೯೫೫ರಲ್ಲಿ ಎಡ್ವಿನ್ ಕಿರ್ಕ್ ಲ್ಯಾನ್ದ್ ಎಂಬುವವರು ಅಮೆರಿಕಾದ ಫ್ಲೋರಿಡಾದಿಂದ ಬೊಂಬಾಯಿಗೆ ಕಲ್ಬರಲ್ ಅಫೇರ್ಸ್  ಆಫೀಸರ್ ಆಗಿ ಬಂದರು. ಲಿಂಗರಾಜ ಕಾಲೇಜಿನಲ್ಲಿ ನಾನು ಇಂಗ್ಲಿಷ್ ಯೂನಿಯನ್ ಅಧ್ಯಕ್ಷನಾಗಿದ್ದೆ. ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೆ. ನಿಮಗೇ ಗೊತ್ತಲ್ಲಾ… ಕಾಲೇಜಿನಲ್ಲಿ ಅಧ್ಯಾಪಕರು ಈ ಕೆಲಸಗಳನ್ನೆಲ್ಲಾ ಮಾಡಬೇಕಾಗುತ್ತದೆ. ನಾನು ಕೂಡ ನಾಟಕ ಆಡಿಸುವುದು, ಚರ್ಚಾ ಸ್ಪರ್ಧೆಯನ್ನು ಏರ್ಪಡಿಸುವುದು ಎಲ್ಲಾ ಮಾಡುತ್ತಿದ್ದೆ. ಆ ಕಾಲಕ್ಕೆ ಕಲ್ಬರಲ್ ಅಫೇರ್ ಆಫೀಸರ್ ಗಳು ಎಲ್ಲಾ ಕಾಲೇಜುಗಳಿಗೂ ಭೇಟಿ ನೀಡಿ ಅಮೆರಿಕನ್ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದರು. ಆ ಕೆಲಸದ ಮೇಲೆ ಒಂದು ಸಲ ಕಿರ್ಕ್‌ಲ್ಯಾಂಡ್‌ ಅವರು ನಮ್ಮ ಕಾಲೇಜಿಗೆ ಬಂದರು. ನಾವು ಅವರದೊಂದು ಉಪನ್ಯಾಸ ಏರ್ಪಡಿಸಿದ್ದೆವು. ಉಪನ್ಯಾಸ ಆದ ಮೇಲೆ ನಾನು ಅವರು ಬಹಳ ಹೊತ್ತು ಮಾತನಾಡಿದೆವು. ಅವರು ಅಮೆರಿಕಾದ ಒಂದು ಜನಪದ ಕಥೆಯನ್ನು ಹೇಳಿದರು. ಅದಕ್ಕೆ ನಾನು ಸಂವಾದಿಯಾದ ಭಾರತದ ಒಂದು ಕಥೆಯನ್ನು ಹೇಳಿದೆ. ಇದು ಹೀಗೆಯೇ ಮುಂದುವರಿಯಿತು. ಬೆಳಗಾಂನಲ್ಲಿ ಜಾನಪದದ ಬಗ್ಗೆ ತಿಳಿದಿರುವ ವ್ಯಕ್ತಿ ಇದ್ದಾನೆ, ಕಥೆಗಳ ಬಗ್ಗೆ, ಗಾದೆಗಳ ಬಗ್ಗೆ ಇವನಿಗೆ ಆಸಕ್ತಿಯಿದೆ ಎಂಬ ವಿಷಯ ತಿಳಿದು ಅವರಿಗೆ ತುಂಬಾ ಆಶ್ಚರ್ಯವಾಯಿತು. ಅವರು ವಾಪಸ್ ಹೋದ ಮೇಲೆ ಸ್ಮಿತ್  ಥಾಮ್ಸನ್ ಅವರ ‘ಫೋಕ್‌ಟೇಲ್’ ಪುಸ್ತಕ ಕಳಿಸಿದರು. ನಾನು ಆ ಪುಸ್ತಕದ ವಿಷಯ ಕೂಡ ಕೇಳಿರಲಿಲ್ಲ. ಅದನ್ನು ಓದಿದಮೇಲೆ ನನಗೆ ಮೋಟಿಫ್, ಟೈಪ್ಸ್ ಇವುಗಳ ಪರಿಚಯವಾದದ್ದು. ಟೈಪ್ಸ್ ಮತ್ತು ಮೋಟಿಫ್ ಗಳಿಗೆ ಅನುಗುಣವಾಗಿ ನಾನು ಕಥೆಗಳನ್ನು, ಅದಕ್ಕೆ ಸಂಬಂಧಪಟ್ಟ ಟಿಪ್ಪಣಿಗಳನ್ನು ಮಾಡಿ, ಇಂಗ್ಲಿಷಿಗೆ ಅನುವಾದ ಮಾಡಿಕೊಡುವುದಾದರೆ ಅದು ಪ್ರಕಟವಾಗಲು ಸಹಾಯಮಾಡುವುದಾಗಿ ಹೇಳಿದರು. ಆಗ ಫ್ಲಾರಿಡಾದಲ್ಲಿ ಅಚ್ಚಾಗುತ್ತಿದ್ದ ‘ಸದರ್ನ್ ಫೋಕ್ಲೋರ್ ಕ್ವಾರ್ಟರ್’ ಎಂಬ ತ್ರೈಮಾಸಿಕ ಪತ್ರಿಕೆಗೆ ಅವರು ಸಂಪಾದಕರಾಗಿದ್ದರು. ಅವರು ಹೇಳಿದಂತೆ ನಾನು ನಾಲ್ಕು ಕಥೆಗಳನ್ನು ಟೈಪ್ ಮತ್ತು ಮೋಟಿಫ್‌ಗಳ ವಿವರಗಳೊಡನೆ ಹಾಗೂ ಟಿಪ್ಪಣಿಗಳೊಂದಿಗೆ ಅನುವಾದ ಮಾಡಿ ಅವರಿಗೆ ಕಳಿಸಿಕೊಟ್ಟೆ. ಅವರು ಅದನ್ನು ಪ್ರಕಟ ಮಾಡಿದರು. ‘ಬಿಬ್ಲಿಯಾಗ್ರಾಫಿ ಆಫ್ ಸೌಥ್ ಏಶಿಯನ್ ಫೋಕ್ಲೋರ್’ ಎಂಬ ಪುಸ್ತಕವನ್ನು ಎಡ್ವಿನ್ ಕಿರ್ಕ್ಲ್ಯಾಂಡ್‌ ಅವರೇ ಸಂಪಾದಿಸಿ ಪ್ರಕಟಿಸಿದರು. ಇಲ್ಲಿಂದ ಮುಂದೆ ನಾನು ಕಥೆಗಳ ಬಗ್ಗೆ ಇನ್ನೂ ಹೆಚ್ಚು ಕೆಲಸ ಮಾಡಲು ಆರಂಭಿಸಿದೆ. ‘ಸ್ಪಾಂಡರ್ಡ್ ಡಿಕ್ಷನರಿ ಆಫ್ ಫೋಕ್ಲೋರ್’, ‘ಮೈಥಾಲಾಜಿ ಆಂಡ್ ಲೆಜೆಂಡ್’ ಗ್ರಂಥವನ್ನು ಕೂಡ ಅವರೇ ಕಳಿಸಿಕೊಟ್ಟರು. ಆಮೇಲೆ ನಾನು ಗ್ರಿಮ್ ಸಹೋದರರ ಜೀವನ ಮತ್ತು ಅವರ ಜನಪದ ಕಥಾ ಸಂಕಲನವನ್ನು ಓದಿದೆ. ಮೇರಿ ಫ್ರೆರೆಯನ್ನು ಬಿಟ್ಟರೆ ಯಾರೂ ಕೂಡ ಕನ್ನಡ ಜನಪದ ಕಥೆಗಳ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎನ್ನಿಸಿತು. ಕನ್ನಡದಲ್ಲಿ ಆಗ ಜಾನಪದ ಕಥೆಗಳ ಯಾವ ಸಂಗ್ರಹವೂ ಪ್ರಕಟವಾಗಿರಲಿಲ್ಲ. ಹೀಗಾಗಿ ನಾನು ಹೆಚ್ಚು ಕಥೆಗಳನ್ನು ಸಂಗ್ರಹಿಸಲು ಆರಂಭ ಮಾಡಿದೆ.

ಇಲ್ಲಿಂದ ಮುಂದೆ ನಿಮಗೆ ಇದು ಒಂದು ಬೌದ್ಧಿಕವಾದ ಕೆಲಸ ಎನ್ನಿಸಿತಲ್ಲವೆ ?

ಹೌದು ನಾನು ಕಥೆಗಳನ್ನು ಸಂಗ್ರಹಿಸುತ್ತಲೇ ಹೋದೆ.

ನೀವು ಸುಮಾರು ಎಷ್ಟು ಕಥೆಗಳನ್ನು ಸಂಗ್ರಹಮಾಡಿದ್ದೀರಿ?

ಸುಮಾರು ೫೦೦ರಿಂದ ೬೦೦ ಕಥೆಗಳಿರಬಹುದು. ಅವೆಲ್ಲವನ್ನೂ ಟ್ರಾನ್ಸ್‌ಲೇಟ್ ಮಾಡಿ ಫೈಲ್ ಮಾಡಿದ್ದೇನೆ. ಇವುಗಳಲ್ಲಿ ಬಹಳಷ್ಟು ಕೆಲವೇ ಕಥೆಗಳ ಭಿನ್ನರೂಪಗಳೇ ಆಗಿವೆ. ನನ್ನ ಹತ್ತಿರ ೧೨೦ರಿಂದ ೧೩೦ ಟೈಪ್‌ನ ಕಥೆಗಳಿವೆ. ಪ್ರತಿಯೊಂದು ಟೈಪ್‌ಗೂ ಐದಾರು ಭಿನ್ನ ಪಾಠಾಂತರಗಳಿವೆ. ೧೯೬೩ರಲ್ಲಿ ಕಿತ್ತೂರಿನಲ್ಲಿ ನಾನು ಸಂಗ್ರಹಿಸಿದ ಈಡಿಪಸ್ ಕತೆಯ ೪೦ ಭಿನ್ನ ಪಾಠಗಳನ್ನು ಸಂಗ್ರಹಮಾಡಿದ್ದೇನೆ. ಇವನ್ನು ಸಂಗ್ರಹಿಸಲು ನಾನೊಂದು ಕೆಲಸ ಮಾಡಿದೆ. ‘ಸುಧಾ’ ಪತ್ರಿಕೆಯಲ್ಲಿ ಈ ಕಥೆಯನ್ನು ಕೊಟ್ಟು ಅದೇ ರೀತಿಯ ಕಥೆಗಳಿದ್ದರೆ ನನಗೆ ಕಳಿಸಿಕೊಡಬೇಕೆಂದು ಕೇಳಿಕೊಂಡಿದ್ದೆ. ನಲವತ್ತು ಜನ ತಾವು ಸಂಗ್ರಹಿಸಿದ ಕಥೆ ಕೊಟ್ಟರು. ಮುಂದೆ ಸಾಧ್ಯವಾದಾಗ ಈಡಿಪಸ್ ಕಥೆಯ ಭಿನ್ನ ಪಾಠಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಕುರಿತು ಬರೆಯಬೇಕೆಂದಿದ್ದೇನೆ.

ನಿಮ್ಮ ಸೃಜನಶೀಲ ಬರವಣಿಗೆಗಳಲ್ಲಿ ನೀವು ಜಾನಪದದಿಂದ ಪ್ರಭಾವಿತರಾಗಿದ್ದೀರ?

ಹೌದು …ಹಾಗೆನ್ನಿಸುತ್ತದೆ. ನನ್ನ ಕನ್ನಡ ಮತ್ತು ಇಂಗ್ಲಿಷ್ ಕವನಗಳಲ್ಲಿ ಜನಪದ ಆಶಯಗಳನ್ನು ಬಳಸಿಕೊಂಡಿದ್ದೇನೆ…

ಉದಾಹರಣೆಗಳು…

ಉದಾಹರಣೆಗೆ ನನ್ನ ಸ್ಟ್ರೈಡರ್ಸ್ ಸಂಕಲನದಲ್ಲಿ ಒಂದು ಪದ್ಯ ಇದೆ …ಆ ಪದ್ಯದಲ್ಲಿ ನಾನೊಂದು ಕಥೆಯನ್ನು ಬಳಸಿಕೊಂಡಿದ್ದೇನೆ. ಆ ಕಥೆ ಹೀಗಿದೆ: ಒಬ್ಬ ರಾಜ ಅವನಿಗೆ ಅನೇಕ ಜನ ಹೆಂಡತಿಯರು. ಅವರಾರಿಗೂ ಮಕ್ಕಳಿಲ್ಲ. ಅವನು ಯಥಾ ಪ್ರಕಾರ ಕಾಡಿಗೆ ಹೋಗಿ ಒಬ್ಬ ಋಷಿಯನ್ನು ಭೇಟಿಮಾಡುತ್ತಾನೆ. ಆ ಋಷಿ ಅವನಿಗೆ ಒಂದು ಮಾವಿನ ಹಣ್ಣು ಕೊಡುತ್ತಾನೆ. ಅವನು ಅದನ್ನು ತಂದು ಉಪ್ಪರಿಗೆಯ ಮೇಲೆ ಕುಳಿತಿದ್ದ ತನ್ನ ರಾಣಿಗೆ ಕೊಟ್ಟು ಅವಳಿಗೆ ಸಿಹಿ ಭಾಗವನ್ನು ತಿಂದು ಗೊರಟನ್ನು ಎಸೆಯಲು ಹೇಳುತ್ತಾನೆ. ಅವಳು ಅದನ್ನು ಎಸೆದಾಗ ಕೆಳಗಿದ್ದ ಒಂದು ಹೆಣ್ಣು ನಾಯಿ ಆ ಗೊರಟನ್ನು ತಿಂದು ಬಸಿರಾಗುತ್ತದೆ. ರಾಣಿಯರು ಹಣ್ಣಿನ ಸಿಹಿ ಭಾಗವನ್ನೆಲ್ಲಾ ತಿಂದೂ ಬಂಜೆಯಾಗಿ ಉಳಿದರು. ಆದರೆ ಆ ನಾಯಿ ಬಸಿರಾಯಿತು. ಈ ಉದಾಹರಣೆ ಕೊಟ್ಟು ಕವಿಗಳು ಒಂದು ರೀತಿ ಈ ನಾಯಿ ಇದ್ದಂತೆ. ಕವಿಗಳು ಶ್ರೀಮಂತರಲ್ಲ. ಅವರು ಉಪ್ಪರಿಗೆಯ ಮೇಲೆ ಕೂತಿರುವುದಿಲ್ಲ. ಅವರು ಸಿಹಿ ಭಾಗವನ್ನೇ ತಿನ್ನಬೇಕಾಗಿಲ್ಲ. ಆದರೆ ಅವರೇನೂ ಬಂಜೆಯರಾಗಿರುವುದಿಲ್ಲ. ಇದಕ್ಕೆ ಈ ಕಥೆಯನ್ನೊಳಗೊಂಡ ‘ವಿಚ್ ರಿಮೈಂಡ್ಸ್ ಮಿ’ ಎಂಬ ಕವನವೇ ಒಂದು ಒಳ್ಳೆಯ ಉದಾಹರಣೆಯಾಗಬಲ್ಲದು.

ನೀವು ಬರೋಡಾದಲ್ಲಿದ್ದಾಗ ಕಥೆಗಳನ್ನು ಸಂಗ್ರಹಿಸಿದ್ದಿರಾ?

ಇಲ್ಲ ಇಲ್ಲ…ನಾನು ಆ ಅರ್ಥದಲ್ಲಿ ಸಂಗ್ರಹಕಾರನಲ್ಲ. ಕೊನೆಗೂ ನಾವು ಸಂಗ್ರಹ ಮಾಡಬೇಕಾದದ್ದು ನಮ್ಮ ಮಾತೃಭಾಷೆಯಲ್ಲಿಯೇ. ಅದು ಬಹಳ ಮುಖ್ಯವಾದದ್ದು. ಇಲ್ಲದಿದ್ದರೆ ಏನಾಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ….

ನೀವು ದಕ್ಷಿಣ ಏಷ್ಯಾದ ಜಾನಪದದ ಬಗ್ಗೆ ವಿಶೇಷ ಗಮನ ಹರಿಸಿದ್ದು ಹೇಗೆ…

ದಕ್ಷಿಣ ಏಷ್ಯಾದ ಜಾನಪದ ಅಲ್ಲ. ಕೇವಲ ಕನ್ನಡ ಮತ್ತು ತಮಿಳು ಮಾತ್ರ.

ದಾಟ್ಸ್ ಆಲ್…?

ಡೊಂಟ್ ಸೇ ದಾಟ್ಸ್ ಆಲ್! ಇಟ್ ಈಸ್ ಎ ಗ್ರೇಟ್ ಡೀಲ್. ಅದು ಬಹಳ ಎಂದು ನಾನು ಹೇಳುತ್ತೇನೆ. ಯಾವುದೇ ಒಂದು ಭಾಷೆಯನ್ನು ಚೆನ್ನಾಗಿ ಕಲಿತರೂ ಅದರಲ್ಲಿ ಎಷ್ಟು ಬೇಕಾದರೂ ಕೆಲಸ ಮಾಡಬಹುದು. ಯಾವುದೇ ಒಂದು ಭಾಷೆಯಲ್ಲಿಯೂ ಅನಂತವಾದ ಶ್ರೀಮಂತಿಕೆ ಇದೆ. ಅದರಿಂದಾಗಿಯೇ ನಾನು ಹೊಸ ಭಾಷೆಗಳನ್ನು ಕಲಿಯುವ ಗೋಜಿಗೇ ಹೋಗಲಿಲ್ಲ. ಕನ್ನಡ ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೇ ನಾನು ನನ್ನ ಜೀವಮಾನವೆಲ್ಲಾ ಕೆಲಸಮಾಡಬಹುದು. ನಾನು ಈ ಭಾಷೆಗಳಲ್ಲಿ ಶ್ರೇಷ್ಟವಾದ ಎಷ್ಟೋ ಕೃತಿಗಳನ್ನು ಓದಿಲ್ಲ. ಜಾನಪದವನ್ನೇ ತೆಗೆದುಕೊಳ್ಳಿ ನಾನಿಲ್ಲಿಗೆ ಬಂದಾಗಲೆಲ್ಲಾ ಮಾಡುವ ಎಷ್ಟೋ ಕೆಲಸವಿರುತ್ತದೆ. ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ವಿಷಯ ಕಲಿಯುತ್ತೇನೆ. ಅದು ಜಾನಪದ ಇರಬಹುದು ಸಾಹಿತ್ಯ ಇರಬಹುದು. ಅಥವಾ ಸಂಸ್ಕೃತಿ ಇರಬಹುದು. ಒಂದು ಹೊಸ ಭಾಷೆ ಕಲಿಯುವುದು ಕೇವಲ ಸುಪರ್ ಫಿಸಿಯಲ್ ಆಗುತ್ತದೆ. ದಕ್ಷಿಣ ಏಷ್ಯಾದ ಭಾಷೆಗಳು ಎಂದರೆ ಅದು ತುಂಬ ದೊಡ್ಡ ಕ್ಷೇತ್ರ. ನನ್ನ ಮಟ್ಟಿಗಂತೂ ತುಂಬಾ ದೊಡ್ಡದು. ನಾನು ಭಾಷಾ ವಿಜ್ಞಾನ ಅಭ್ಯಾಸ ಮಾಡಿದಾಗ ಹೊಸ ಭಾಷೆಗಳನ್ನು ಕಲಿತೆ. ಫ್ರೆಂಚ್, ಜರ್ಮನ್ ಭಾಷೆಗಳ ಪರೀಕ್ಷೆಗಳಲ್ಲಿ ಪಾಸಾದೆ. ರಷ್ಯನ್ ಮತ್ತು ಜಪಾನೀ ತರಗತಿಗಳಿಗೂ ಹೋದೆ. ಯಾವುದೇ ಒಂದು ಭಾಷೆಯಲ್ಲಿ ಏನಾದರೂ ಉಪಯುಕ್ತ ಕೆಲಸ ಮಾಡಬೇಕಾದರೂ ಕನಿಷ್ಟ ಪಕ್ಷ ತಲಾ ಇಪ್ಪತ್ತು ವರ್ಷಗಳಾದರೂ ಬೇಕಾಗುತ್ತದೆ. ಅದರಿಂದಾಗಿಯೇ ನನಗೆ ಈ ಭಾಷಗಳು ಬರುತ್ತವೆ ಎಂದು ಎಲ್ಲಿಯೂ ಹೇಳುವುದೇ ಇಲ್ಲ. ಈ ಭಾಷೆಗಳ ಬಗ್ಗೆಯೂ ನಾನು ತಲಾ ಆರು ತಿಂಗಳು ಕೆಲಸ ಮಾಡಿರಬಹುದು. ಪ್ರತಿಯೊಂದು ಭಾಷೆಯನ್ನು ಕಲಿಯುವುದು ಎಷ್ಟೊಂದು ಕಷ್ಟ ಎಂಬ ತಿಳುವಳಿಕೆ ನನಗೆ ಬಂತು. ಈ ಯಾವ ಭಾಷೆಯಲ್ಲಿಯೂ ನಾನು ಪ್ರಭುತ್ವ ಸಂಪಾದಿಸಲಾರೆ ಎನಿಸಿತು. ನನಗೀಗಲೇ ಗೊತ್ತಿರುವ ಭಾಷೆಗಳಲ್ಲಿಯೇ ಹೆಚ್ಚಿನ ಪ್ರಭುತ್ವ ಗಳಿಸುವುದು ಸೂಕ್ತ ಎನಿಸಿತು.

ಈ ಕಾರಣದಿಂದಲೇ ನೀವು ಅಮೆರಿಕಾದಲ್ಲಿ ಅನೇಕ ವರ್ಷಗಳು ವಾಸವಾಗಿದ್ದರೂ ಕೂಡ ಅಮರಿಕನ್ ಜಾನಪದದ ಬಗ್ಗೆ ಕೆಲಸ ಮಾಡಲಿಲ್ಲ ಅಲ್ಲವೆ?

ಹೌದು. ನನಗಿದೇ ಸಾಕಾಗಿದೆ. ನನಗೆ ಸಮಯವಿಲ್ಲ. ಷಿಕಾಗೋದಲ್ಲಿ ಪ್ರತಿನಿತ್ಯ ಕನ್ನಡದ ಮತ್ತು ತಮಿಳಿನ ಪುಸ್ತಕಗಳು ದೊರೆಯುತ್ತವೆ. ನನಗೆ ಯಾವುದು ಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ. ಇಂಗ್ಲಿಷ್ ಮತ್ತು ಪ್ರಕಾರಗಳನ್ನು ಹುಡುಕಲು ಹೋಗುವುದಿಲ್ಲ. ಅಮೆರಿಕನ್ ಸಾಹಿತ್ಯ, ಅದರಲ್ಲೂ ಮತ್ತೆ ಕಾವ್ಯದ ಬಗೆಗೆ ನನಗೆ ವಿಶೇಷ ಆಸಕ್ತಿಯಿದೆ. ನನಗೆ ಸಮಯವಿದ್ದಾಗ ಅದನ್ನು ಓದುತ್ತೇನೆ.

ನೀವು ತಮಿಳು ಜಾನಪದವನ್ನು ಅರ್ಥಮಾಡಿಕೊಳ್ಳಲು ‘ಅಕಂ’ ಮತ್ತು ‘ಪುರಂ’ ಎಂಬ ಎರಡು ಪ್ರಕಾರಗಳನ್ನು ಬಳಸಿಕೊಂಡಿದ್ದೀರಿ. ಇವು ಸಾರ್ವತ್ರಿಕ ಪ್ರಕಾರಗಳೇ?

ಇಲ್ಲ. ಸಾರ್ವತ್ರಿಕ ಎಂಬ ಪದ ನನಗೆ ಇಷ್ಟವಾಗುವುದಿಲ್ಲ. ಭಾಷಾ ವಿಜ್ಞಾನದಲ್ಲಾಗಲೀ, ಸಾಂಸ್ಕೃತಿಕ ಮಾನವ ವಿಜ್ಞಾನದಲ್ಲಾಗಲೀ ಈ ಪದ ನನಗೆ ಇಷ್ಟವಾಗುವುದಿಲ್ಲ. ವಿದ್ವಾಂಸರು ಯಾವಾಗಲೂ ಈ ಸಾರ್ವತ್ರಿಕ ಅಂಶಗಳ ಕಡೆಗೇ ನೋಡುತ್ತಿರುತ್ತಾರೆ. ಅದು ನಮಗೆ ಸಿಗಲೆಂದು ನನ್ನ ಆಸೆ. ಆದರೆ ಯಾವುದೇ ಸಾರ್ವತ್ರಿಕ ಪ್ರಕಾರಗಳು ಸಿಗುವುದು ಅನುಮಾನ ಎಂದು ನನಗನಿಸುತ್ತದೆ. ಆದ್ದರಿಂದ ನಾನು ಸಾರ್ವತ್ರಿಕ ಪ್ರಕಾರಗಳನ್ನು ಹುಡುಕಲು ಹೋಗುವುದಿಲ್ಲ.

ಹಾಗಾದರೆ ಈ ಪ್ರಕಾರಗಳು ಸಂಸ್ಕೃತಿ ವಿಶಿಷ್ಟವಾದವುಗಳೇ?

ಹೌದು. ಇವು ಸಂಸ್ಕೃತಿ ವಿಶಿಷ್ಟವಾದುವು. ಅವನ್ನು ಅಭ್ಯಾಸ ಮಾಡಬೇಕು. ಎಲ್ಲಕ್ಕಿಂತ ಮೊದಲು ನನಗೆ ಕನ್ನಡ ಮತ್ತು ತಮಿಳಿನಲ್ಲಿ ಏನಿದೆ ಎಂಬುದನ್ನು ತಿಳಿಯುವುದು ಮುಖ್ಯ. ನಾನು ಈ ಸಾರ್ವತ್ರಿಕ ಪ್ರಕಾರಗಳನ್ನು ಏಕೆ ಹುಡುಕುತ್ತಿಲ್ಲ ಎಂದರೆ ವಿದ್ವಾಂಸರು ಇವನ್ನು ಬಹಳ ಬೇಗ ಹುಡುಕಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಅವರು ಕಂಡುಹಿಡಿದ ಸತ್ಯವನ್ನು ಸಿದ್ಧ ಮಾಡಿ ತೋರಿಸುವುದು ಕಷ್ಟ. ಹೀಗೆ ಮಾಡುವುದರಿಂದ ಸ್ಥಳೀಯವಾದ ಸಾಮಗ್ರಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಅಡ್ಡಿಯಾಗುತ್ತದೆ. ಈ ಸಾರ್ವತ್ರಿಕ ಪ್ರಕಾರಗಳನ್ನು ಕಂಡುಕೊಳ್ಳಲು ನಾವು ಪ್ರಯತ್ನ ಮಾಡಬೇಕು ಎಂಬುದರಲ್ಲಿ ನನಗೆ ನಂಬಿಕೆಯಿದೆ. ಆದರೆ ನಾವು ಅದನ್ನು ಸಾಧಿಸುತ್ತೇವೋ ಇಲ್ಲವೋ ಎಂಬುದು ಅನುಮಾನಾಸ್ಪದ.

‘ಅಕಂ’ ಮತ್ತು ‘ಪುರಂ’ ಎಂದರೇನು? ವಿವರಿಸುತ್ತೀರಾ?

‘ಅಕ’ ಮತ್ತು ‘ಪುರಂ’ ತಮಿಳು ಸಾಹಿತ್ಯದ ವಿಶೇಷವಾದ ಸಾಂಸ್ಕೃತಿಕ ಪರಿಕಲ್ಪನೆಗಳು ಮಾತ್ರವಲ್ಲ ಬಹುಶಃ ಪ್ರಾಚೀನ ದ್ರಾವಿಡ ಪರಿಕಲ್ಪನೆಗಳು. ದ್ರಾವಿಡಿಯನ್ ಎಟಿಮಾಲಾಜಿಕಲ್ ಡಿಕ್ಷನರಿಯಲ್ಲಿ ಇವುಗಳ ಪ್ರಸ್ತಾಪವಿದೆ. ಕನ್ನಡ, ತಮಿಳು, ತುಳು, ಮಲೆಯಾಳಂ ಮೊದಲಾದ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಇದು ಬಳಕೆಯಲ್ಲಿದೆ. ಅಂಗೈ, ಅಂಗಾಲು, ಅಕ್ಕ ಮೊದಲಾದ ಶಬ್ದಗಳಲ್ಲಿ ಇದನ್ನು ಕಾಣಬಹುದು. ಇದು ತೋಡ ಭಾಷೆಯಲ್ಲಿ ಇದೆಯೋ ಇಲ್ಲವೋ ಹೇಳಲಾರೆ. ಈ ಪದಗಳನ್ನು ಪುನಾರಚನೆ ಮಾಡಿದರೆ ಅವು ತಮಿಳಿಗಿಂತಲೂ ಪ್ರಾಚೀನವಾದವು ಎಂದು ತಿಳಿದುಬರುತ್ತದೆ. ಇವು ಪ್ರಾಚೀನ ಸಾಂಸ್ಕೃತಿಕ ಪ್ರಕಾರಗಳಂದು ತೋರುತ್ತವೆ. ತಮಿಳು ಕಾವ್ಯ ಮೀಮಾಂಸೆಯಲ್ಲಿ ವಿಶೇಷವಾಗಿ ತೋಲ್ ಕಾಪ್ಪಿಯಂನಲ್ಲಿ ಈ ಪದಗಳನ್ನು ವಿರುದ್ಧಾರ್ಥಕ ಪದಗಳಾಗಿ ರೂಪಿಸಿರುವ ರೀತಿ ನನ್ನ ಮನಸ್ಸಿಗೆ ಹಿಡಿಸಿದೆ. ಇವು ಇತರ ವಿರುದ್ಧಾರ್ಥಕ ಪದಗಳಿಗಿಂತ ಭಿನ್ನವಾದುವು. ಇದರಲ್ಲಿಯೇ ಒಳಗೆ ಹೊರಗೆ, ತಾನು – ಇತರರು, ಹೃದಯ -ದೇಹದ ಇತರ ಭಾಗಗಳು, ಮಾನವ ವಾಸಸ್ಥಳ – ಕಾಡು, ಭೂಮಿ – ಸಮುದ್ರ ಮೊದಲಾದ ವಿರುದ್ದಾರ್ಥಕ ಪರಿಕಲ್ಪನೆಗಳು ಅಡಕವಾಗಿರುವುದು ಇದಕ್ಕೆ ಕಾರಣ. ‘ಅಕಂ’ ಕಾವ್ಯದ ಇಡೀ ಪ್ರಕಾರ ಸಾಮಾನ್ಯವಾಗಿ ಗಂಡು ಹೆಣ್ಣಿನ ಪ್ರೇಮಕಾವ್ಯವಾಗಿರುತ್ತದೆ. ‘ಪುರಂ’ ಪ್ರಕಾರ ಸಮಾಜ, ರಾಜಕೀಯ, ಯುದ್ಧ ಘರ್ಷಣೆ ಇವುಗಳನ್ನು ಕುರಿತದ್ದು. ಇವೆರಡೂ ಅಪ್ಪಟ ದೇಸಿ ಪ್ರಕಾರಗಳು. ನನಗೆ ದೇಸಿ ಪ್ರಕಾರಗಳಲ್ಲಿ ಆಸಕ್ತಿ. ಉದಾಹರಣೆಗೆ, ಎಲ್ಲಾ ಭಾಷೆಗಳಲ್ಲಿಯೂ ಕಾಲದ ವರ್ಗೀಕರಣ ಇರುತ್ತದೆ ಎಂದರೆ ಸಾಕಾಗುವುದಿಲ್ಲ. ಕನ್ನಡದ ಬಗ್ಗೆ ಮಾತಾಡುವಾಗ ಕನ್ನಡದಲ್ಲಿ ಕಾಲವನ್ನು ಹೇಗೆ ವರ್ಗೀಕರಿಸಿರುತ್ತಾರೆ ಎಂಬುದನ್ನು ಪರಿಶೀಲಿಸಬೇಕು. ಇದನ್ನು ಯಾವದೇ ಒಂದು ಜನರಲ್ ಥಿಯರಿಯಿಂದ ಕಂಡುಹಿಡಿಯಲು ಸಾಧ್ಯವಿಲ್ಲ. ಇದನ್ನು ಕಂಡುಹಿಡಿಯಲು ಮಾಡಬಹುದಾದ ಒಂದೇ ಕೆಲಸ ಎಂದರೆ ಕನ್ನಡದಲ್ಲಿ ಜನರು ಕಾಲವನ್ನು ಹೇಗೆ ನಿರ್ದೇಶಿಸುತ್ತಾರೆ ಎಂಬುದನ್ನು ವಾಸ್ತವವಾಗಿ ತಿಳಿಯುವುದು. ಜಾನಪದದಲ್ಲಿಯೂ ಇಂಥದೇ ಕೆಲಸ ಮಾಡಬೇಕಾಗುತ್ತದೆ. ಪುರಾಣ ಮತ್ತು ಜನಪದ ಕಥೆ ಇವೆರಡಕ್ಕೂ ಎಲ್ಲ ಭಾಷೆಗಳಲ್ಲಿಯೂ ವ್ಯತ್ಯಾಸವಿದೆ. ಜನಪದ ಕಥೆ ಕಾಲ್ಪನಿಕ ಪುರಾಣ ಸತ್ಯವಾದದ್ದನ್ನು ಕುರಿತಾದದ್ದು. ಜನಪದ ಕಥೆ ಲೌಕಿಕವಾದ್ದು; ಪುರಾಣ ಪವಿತ್ರವಾದದ್ದು. ಆದರೆ ಎಲ್ಲ ಭಾಷೆಗಳಲ್ಲಿಯೂ ಇವೆರಡರ ವ್ಯತ್ಯಾಸ ಇದೇ ರೀತಿ ಇರುತ್ತವೆಂದು ಭಾವಿಸಲು ಸಾಧ್ಯವಿಲ್ಲ. ಪುರಾಣ ಮತ್ತು ಜನಪದ ಕಥೆ ಭಿನ್ನ ಸ್ವರೂಪದವು ಎಂದು ಗೆರೆ ಎಳೆಯಬಹುದಾದರೂ, ಇವೆರಡಕ್ಕೂ ಇರುವ ವ್ಯತ್ಯಾಸ ಸಾಂಸ್ಕೃತಿಕ ಕೋಡಿಂಗ್‌ನಿಂದ ಕೂಡಿರುತ್ತವೆ. ಜನಪದ ಕಥೆ ಮತ್ತು ಪುರಾಣ ಕ್ರಮವಾಗಿ ಅಕಂ ಮತ್ತು ಪುರಂ ಪ್ರಕಾರಗಳೆಂದು ಹೇಳಬಹುದು. ಹೀಗೆ ಹೇಳಲು ಅನೇಕ ಕಾರಣಗಳಿವೆ. ಅಕಂ ಕಾವ್ಯ ಪ್ರಕಾರದಲ್ಲಿ ಹೆಸರುಗಳಿರುವುದಿಲ್ಲ, ಜನಪದ ಕಥೆಗಳಲ್ಲಿಯೂ ಹೆಸರುಗಳಿರುವುದಿಲ್ಲ.  ಅಕಂ ಪ್ರಕಾರ ಆಂತರಿಕ ವಿಷಯಗಳಿಗೆ ಅಂದರೆ ರಕ್ತ ಸಂಬಂಧಗಳಿಗೆ, ಮದುವೆಗೆ ಪ್ರೀತಿಗೆ ಸಂಬಂಧಿಸಿದುದು. ಆದರೆ ಪುರಂ ಸಮಾಜ, ಬ್ರಹ್ಮಾಂಡ, ಘರ್ಷಣೆ, ಯುದ್ಧ ಮೊದಲಾದ ಬಾಹ್ಯ ವಿಷಯಗಳಿಗೆ ಸಂಬಂಧಪಟ್ಟವು. ಭಾರತದ ಪುರಾಣಗಳನ್ನು ನೋಡಿ, ದೇವತೆಗಳು ಮತ್ತು ರಾಕ್ಷಸರಿಗೆ ನಡೆಯುವ ಯುದ್ಧಗಳು ಸಾಮಾನ್ಯವಾಗಿ ಎಲ್ಲಾ ಪುರುಷ ಮತ್ತು ಸ್ತ್ರೀ ದೇವತೆಗಳಿಗೆ ಸಂಬಂಧಿಸಿದ ಪುರಾಣಗಳಲ್ಲಿಯೂ ಇರುತ್ತವೆ. ವಿಷ್ಣು, ಶಿವ, ಶಕ್ತಿ ಈ ಯಾವ ದೇವತೆಯೂ ಯಾರಾದರೂ ರಾಕ್ಷಸನ ಜೊತೆ ಯುದ್ಧ ಮಾಡುತ್ತಾರೆ. ಪುರಾಣಗಳಲ್ಲಿ ಎಲ್ಲಿಯೂ ನಿಮಗೆ ಅತ್ತೆಯ ಪಾತ್ರ ಬರುವುದಿಲ್ಲ. ಜನಪದ ಕಥೆಗಳಲ್ಲಿ ಯಾವುದೇ ಒಂದು ದೊಡ್ಡ ಪ್ರಮಾಣದ ಯುದ್ಧದ ವರ್ಣನೆ ಬರುವುದಿಲ್ಲ. ಅಕಂ ಮತ್ತು ಪುರಂ ಪ್ರಕಾರಗಳಿಗೆ ವ್ಯತ್ಯಾಸ ಕಲ್ಪಿಸುವ ಇಂತಹ ಎಷ್ಟೋ ಅಂಶಗಳಿವೆ.

ಇದು ಒಂದು ಹೊಸ ವಿಚಾರವಲ್ಲವೆ?

ಆದರೆ ಜನಪದ ಕಥೆ ಮತ್ತು ಪುರಾಣಕ್ಕೆ ಈ ರೀತಿಯ ವ್ಯತ್ಯಾಸವಿದೆಯೆಂದು ನಾವು ಯೋಚನೆ ಮಾಡುವುದಿಲ್ಲ. ಅವುಗಳ ಕಾರ್ಯ ಕೂಡ ವಿಭಿನ್ನವಾದುದು. ಆದರೆ ಈ ವ್ಯತ್ಯಾಸವನ್ನು ತೀರಾ ಖಚಿತವಾಗಿ ತೆಗೆದುಕೊಳ್ಳಬಾರದು. ಇವೆರಡಕ್ಕೂ ನಡುವೆ ವ್ರತ ಕಥೆ ಬರುತ್ತದೆ. ಇದು ಜನಪದ ಕಥೆಯಂತೆ ಆರಂಭವಾಗಿ ಅನಂತರ ಪುರಾಣದ ಕೆಲಸವನ್ನು ಮಾಡುತ್ತದೆ. ಸಂದರ್ಭದ ದೃಷ್ಟಿಯಿಂದಲೂ ಈ ಪ್ರಕಾರಗಳನ್ನು ಪರಿಶೀಲಿಸಬೇಕಾಗುತ್ತದೆ. ಪುರಾಣಗಳನ್ನು ಅಜ್ಜಿಯರು ಮೊಮ್ಮಕ್ಕಳಿಗೆ ಹೇಳುವುದಿಲ್ಲ. ಆದರೆ ಜನಪದ ಕಥೆಗಳನ್ನು ಹೇಳುತ್ತಾರೆ.

ಈ ವರ್ಗೀಕರಣದಲ್ಲಿ ಐತಿಹ್ಯಗಳನ್ನು ಎಲ್ಲಿ ಹೊಂದಿಸಬಹುದು?

ಐತಿಹ್ಯಗಳು ಸಾರ್ವಜನಿಕ ವಿಷಯಗಳಿಗೆ ಸಂಬಂಧಪಡುತ್ತವೆ. ಹೀಗಾಗಿ ನಾನು ಅವುಗಳನ್ನು ಪುರಂ ಪ್ರಕಾರಕ್ಕೆ ಸೇರಿಸುತ್ತೇನೆ. ಒಂದು ಪಟ್ಟಣಕ್ಕೆ ಇಟ್ಟಿರುವ ಹೆಸರು ಏಕೆ ಬಂತು? ಒಂದು ಬೆಟ್ಟಕ್ಕೆ ಇಟ್ಟಿರುವ ಹೆಸರು ಏಕೆ ಬಂತು? ಎಂಬುದಕ್ಕೆ ಸಂಬಂಧಿಸಿದ ಕಥೆ; ಅಥವಾ ಒಬ್ಬ ಸಾಂಸ್ಕೃತಿಕ ವೀರನ ಬಗ್ಗೆ ಕಟ್ಟುವ ಕಥೆ ಇವಲ್ಲಾ ಐತಿಹ್ಯಗಳಾಗುತ್ತವೆ. ಸಾಮಾನ್ಯವಾಗಿ ಇವು ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದವುಗಳು ಆಗಿರುವುದಿಲ್ಲ, ಆದರೆ ಜನಪದ ಕಥೆಗಳು ಹೆಚ್ಚಾಗಿ ಅತ್ತೆ ಸೊಸೆ, ತಂದೆ ಮಕ್ಕಳು, ತಾಯಿ ಮತ್ತು ಹೆಣ್ಣು ಮಕ್ಕಳು, ಸಹೋದರರು, ಸಹೋದರಿಯರು ಇವರ ಸಂಬಂಧಗಳನ್ನು ಕುರಿತದ್ದಾಗಿರುತ್ತದೆ. ಮಾನಸಿಕವಾಗಿಯೂ ಇವು ಪುರಾಣಗಳಿಗಿಂತ ಹೆಚ್ಚು ಹತ್ತಿರವಾಗುತ್ತವೆ. ಹಾಗೆ ನೋಡಿದರೆ ಪುರಾಣಗಳಿಗಿಂತಲೂ ಹೆಚ್ಚಾಗಿ ಜನಪದ ಕಥೆಗಳಲ್ಲಿಯೇ ದೇಸಿ ಮನೋವಿಶ್ಲೇಷಣೆಯನ್ನು ಮತ್ತು ಮನುಷ್ಯ ಸಂಬಂಧಗಳಲ್ಲಿರುವ ನಿಜವಾದ ಸಮಸ್ಯೆಗಳನ್ನು ಕಾಣಬಹುದು. ಈ ರೀತಿಯ ಸಂಬಂಧಗಳು ಪುರಾಣದಲ್ಲಿ ಕಂಡುಬರುವುದಿಲ್ಲ. ಈ ದೃಷ್ಟಿಯಿಂದ ಪುರಾಣಗಳನ್ನು ‘ಪುರಂ’ ಪ್ರಕಾರಕ್ಕೂ, ಜನಪದ ಕಥೆಗಳನ್ನು ‘ಅಕಂ’ ಪ್ರಕಾರಕ್ಕೂ ಸೇರಿಸಬಹುದು. ಆದರೆ ಪ್ರಾಚೀನ ತಮಿಳರು ಇಷ್ಟೆಲ್ಲಾ ಯೋಚನೆ ಮಾಡಿರಲಿಕ್ಕಿಲ್ಲ. ಕಾವ್ಯವನ್ನು ಮಾತ್ರ ಅವರು ಈ ಎರಡು ಪ್ರಕಾರಗಳನ್ನಾಗಿ ವರ್ಗೀಕರಿಸಿದ್ದರು ಅಷ್ಟೆ. ಆದರೆ ಈ ಒಂದು ವರ್ಗೀಕರಣವನ್ನು ಇತರ ಸಾಂಸ್ಕೃತಿಕ ಪ್ರಕಾರಗಳಿಗೂ ವಿಸ್ತರಿಸಬಹುದೇ ಎಂಬುದು ನನ್ನ ಆಸಕ್ತಿಯ ವಿಷಯ. ಹೀಗಾಗಿ ಇದು ಉಪಯುಕ್ತವಾದುದು ಎಂದು ನಾನು ಭಾವಿಸಿದ್ದೇನೆ. ಇದು ಬಹುಶಃ ದಕ್ಷಿಣ ಭಾರತಕ್ಕೆ ಮಾತ್ರವಲ್ಲ, ಭಾರತದ ಬಹು ಭಾಗಗಳಿಗೆ ಅನ್ವಯಿಸುತ್ತದೆ. ಇದು ವಿಶ್ವವ್ಯಾಪಿ ಆದುದು ಎಂದು ನಾನು ಹೇಳಲಾರೆ. ಪಿಯರ್ ಬೋರ್ಡಿಯೋ ಎಂಬುವವರು ಆಫ್ರಿಕಾದ ಸಮಾಜಗಳ ಬಗ್ಗೆ ಬರೆದಿದ್ದಾರೆ. ಅಲ್ಲಿಯೂ ಕೂಡ ಜನಪದ ಕಥೆಗಳು ಮಾತ್ರವಲ್ಲ, ಆಟಗಳು, ಆಚರಣೆಗಳನ್ನು ಕೂಡ ಅಕಂ ಮತ್ತು ಪುರಂ ಪ್ರಕಾರಗಳಾಗಿ ವರ್ಗೀಕರಿಸಬಹುದು. ಎಷ್ಟೋ ಆಚರಣೆಗಳನ್ನು ಸಾರ್ವಜನಿಕವಾಗಿ ಮಾಡುವುದೇ ಇಲ್ಲ. ಸಂಸ್ಕೃತದಲ್ಲಿಯೂ ಇವುಗಳನ್ನು ‘ಗ್ರಹ’ ಎಂದು ಕರೆಯುತ್ತಾರೆ. ಹಾಗೆಯೇ ವೈದಿಕ ಸಂಸ್ಕೃತಿಯಲ್ಲಿ ಬಲಿ ಕೊಡುತ್ತಿದ್ದುದು ಮನೆಯಿಂದ ಹೊರಗೆ. ಅದಕ್ಕಾಗಿಯೇ ಸಾರ್ವಜನಿಕ ಸ್ಥಳ ಕೂಡ ಇತ್ತು. ಈ ಬಗ್ಗೆ ಯೋಚನೆ ಮಾಡಿದಾಗ ಈ ಎರಡೂ ಪ್ರಕಾರಗಳನ್ನು ಇದಕ್ಕೆಲ್ಲಾ ವಿಸ್ತರಿಸಬಹುದು ಎನಿಸಿತು. ಇದು ವಿಶ್ವ ವ್ಯಾಪಿಯಾದದ್ದೇ ಅಲ್ಲವೇ ನನಗೆ ಗೊತ್ತಿಲ್ಲ .ಆದರೆ ಬಹಳಷ್ಟು ಕಡೆ ಇದು ಅನ್ವಯವಾಗುತ್ತದೆ. ಪ್ರಾಚೀನ ತಮಿಳು ಕಾವ್ಯದಲ್ಲಿಯ ಈ ಕಲ್ಪನೆಯನ್ನು ಜಾನಪದ ಸಾಮಗ್ರಿಗೂ ನಾನು ಅನ್ವಯಿಸಿದ್ದೇನೆ. ಶಿಷ್ಟ ಮತ್ತು ಜನಪದ ಇವುಗಳ ನಡುವೆ ತೀರಾ ಖಚಿತವಾದ ಗೆರೆ ಎಳೆಯುವುದು ಕಷ್ಟ. ಅವು ಒಂದಕ್ಕೊಂದು ಹಲವಾರು ರೀತಿಗಳಲ್ಲಿ ಸಂಬಂಧಪಟ್ಟಿರುತ್ತವೆ. ಇವೆರಡರ ನಡುವೆ ಸಂವಾದವಿದೆ ಸಾಂಸ್ಕೃತಿಕ ಸಾಮಗ್ರಿಯನ್ನು ಇದು ಜಾನಪದ ಇದು ಜಾನಪದವಲ್ಲ ಎಂದು ಪ್ರತ್ಯೇಕಿಸಬಾರದು. ಇವುಗಳನ್ನು ಪ್ರತ್ಯೇಕಿಸುವುದಕ್ಕಿಂತ ಇವುಗಳಲ್ಲಿ ಒಂದಕ್ಕೂ ಇನ್ನೊಂದಕ್ಕೂ ಇರುವ ಸಂಬಂಧಗಳನ್ನು ಕುರಿತು ವಿಚಾರಮಾಡುವುದು ಸೂಕ್ತ.

ಪುರಾಣ ಮತ್ತು ಐತಿಹ್ಯಗಳಿಗೆ ಹೇಗೆ ವ್ಯತ್ಯಾಸ ಕಲ್ಪಿಸುತ್ತೀರಿ? ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ಇವುಗಳ ಸಂಬಂಧ ವ್ಯತ್ಯಾಸವಾಗುತ್ತದಲ್ಲವೆ?

ಹೌದು ನನಗೂ ಹಾಗೇ ಅನಿಸುತ್ತದೆ. ಐತಿಹ್ಯಗಳ ಬಗೆಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ನಾನು ಅದರ ಬಗ್ಗೆ ಹೆಚ್ಚು ಕೆಲಸ ಮಾಡಿದವನಲ್ಲ. ಆದರೆ ಪ್ರತಿ ಸ್ಥಳೀಯ ಇತಿಹಾಸಕ್ಕೆ ಸಂಬಂಧಪಟ್ಟದ್ದು ಮತ್ತು ಅದರ ಸಮೀಪ ಭೂತಕಾಲಕ್ಕೆ ಸಂಬಂಧಿಸಿದ್ದು. ಆದರೆ ಪುರಾಣ ಕಾಲಾತೀತವಾದ್ದು ಅಥವಾ ದೂರ ಭವಿಷ್ಯಕ್ಕೆ ಸಂಬಂಧಿಸಿದ್ದು. ಐತಿಹ್ಯಗಳು ಐತಿಹಾಸಿಕ ವ್ಯಕ್ತಿಗಳಿಗೆ ಪ್ರದೇಶಗಳಿಗೆ ಹತ್ತಿರವಾದದ್ದು. ಆದರೆ ಪುರಾಣಗಳು ಹಾಗಿರುವುದಿಲ್ಲ. ಇವೆರಡಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ನಾನು ಖಚಿತವಾಗಿ ಹೇಳಲಾರೆ. ನಾನು ಈ ಬಗ್ಗೆ ಇನ್ನೂ ಹೆಚ್ಚು ಯೋಚಿಸಬೇಕು.

ಅಕಂ ಪ್ರಕಾರದ ಜನಪದ ಕಥೆಗಳನ್ನು ಹೇಳುವಾಗ ಮಕ್ಕಳು ಮತ್ತು ಕುಟುಂಬದ ಸದಸ್ಯರು ಶೋತೃಗಳಾಗಿರುತ್ತಾರೆ. ಕಥೆಯನ್ನು ಕೇಳುತ್ತಾ ಹೂಂ ಗುಟ್ಟುತ್ತಾರೆ. ಆದರೆ ಸಾರ್ವಜನಿಕ ಪ್ರದರ್ಶನಗಳಲ್ಲಿ ನಾವು ಇದನ್ನು ಕಾಣುವುದಿಲ್ಲ ಅಲ್ಲವೆ?

ಸಾರ್ವಜನಿಕ ಪ್ರದರ್ಶನಗಳಲ್ಲಿ ಪ್ರದರ್ಶಕನಿಗೆ ಸಹಾಯಕನೊಬ್ಬನಿರುತ್ತಾನೆ. ಅವನು ಹೂಂಗುಟ್ಟುತ್ತಾನೆ. ಇತರ ಬಗೆಯ ಪ್ರತಿಕ್ರಿಯೆಗಳನ್ನು ತೋರಿಸುತ್ತಾನೆ. ಶೋತೃವರ್ಗದಿಂದಲೂ ಚಪ್ಪಾಳೆ ತಟ್ಟುವುದು, ಮೊದಲಾದ ಪ್ರತಿಕ್ರಿಯೆಗಳೂ ಇರುತ್ತವೆ. ಉದಾಹರಣೆಗೆ ಗೊಂದಲಿಗರ ಮೇಳವನ್ನು ತೆಗೆದುಕೊಳ್ಳಿ. ಮುಖ್ಯ ಪ್ರದರ್ಶಕನ ಜೊತೆಗಿರುವ ಸಹಾಯಕ ‘ಹೌದು ಗುರುವೇ,’ ‘ಇನ್ನಷ್ಟು ಹೇಳಿ’, ಎಂದು ಮುಂತಾಗಿ ಪ್ರತಿಕ್ರಿಯೆ ಸೂಚಿಸುತ್ತಾನೆ. ಅವನು ಒಂದು ರೀತಿಯಲ್ಲಿ ಪ್ರೇಕ್ಷಕರಿಗೆ ಬದಲೀ ವ್ಯಕ್ತಿಯಾಗಿ ಕೆಲಸ ಮಾಡುತ್ತಾನೆ ಪ್ರೇಕ್ಷಕರನ್ನು ಒಳಕ್ಕೆ ತರುವ ಪ್ರಯತ್ನ ಮಾಡುತ್ತಾನೆ.

ಈ ಬಗೆಯ ಪ್ರದರ್ಶನ ಟೆಲಿವಿಜನ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಂದಾಗ ಏನಾಗುತ್ತದೆ?

ಭಾರತದ ಟೆಲಿವಿಜನ್‌ನಲ್ಲಿ ಹೇಗೆ ನಿಭಾಯಿಸುತ್ತಾರೋ ನನಗೆ ಗೊತ್ತಿಲ್ಲ. ಆದರೆ ಅಮೆರಿಕದ ಟಿ.ವಿ.ಯಲ್ಲಿ ನಗುವನ್ನು ಬಿತ್ತರಿಸುತ್ತಾರೆ. ಇದನ್ನು ಕ್ಯಾನ್ನಡ್ ಲಾಫ್ಟರ್ ಎಂದು ಕರೆಯುತ್ತಾರೆ. ಅಲ್ಲಿಯೂ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕೆ ಪ್ರೇಕ್ಷಕರಿರುತ್ತಾರೆ. ಹೀಗಾಗಿ ಒಂದು ಕಾಮೆಡಿಯಲ್ಲಿ ಜೋಕನ್ನು ಹೇಳಿದಾಗ ನಗು ಇದ್ದೇ ಇರುತ್ತದೆ. ಸಾಮಾನ್ಯವಾಗಿ ಅಲ್ಲಿ ನಗುವನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡುತ್ತಾರೆ. ‘ಯಸ್ ಪೈಮ್ ಮಿನಿಸ್ಟರ್’ ಎಂಬ ಒಂದು ಸೀರಿಯಲ್ ಬಂದಿತ್ತು. ಅದರಲ್ಲಿ ನಗು ಬಿತ್ತರಿಸುತ್ತಿದ್ದರು. ಇದು ಅಮೆರಿಕನ್ ಟೆಲಿವಿಜನ್‌ನಲ್ಲಿ ಮಾಮೂಲಾದ ವಿಷಯ.

ನಾನು ಕಥೆ ಹೇಳುವ ಒಬ್ಬ ಹೆಂಗಸಿಗೆ ಕಥೆ ಹೇಳುವಂತೆ ಕೇಳಿದೆ. ಆದರೆ ನಾನು ಹೂಂಗುಟ್ಟುವದಿಲ್ಲವೆಂದು ಹೇಳಿದೆ. ಇದನ್ನು ಪ್ರಯತ್ನಪೂರ್ವಕವಾಗಿ ಮಾಡಿದಾಗ ಆಕೆ ಅದು ಚೆನ್ನಾಗಿರುವುದಿಲ್ಲ ಎಂದು ಹೇಳಿದಳು. ಇದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲವೆಂದು ಹೇಳಿದಳು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅದು ಸರಿಯಲ್ಲ. ನೀವೊಂದು ಪುಸ್ತಕವನ್ನು ಓದುತ್ತೀರಿ ಎಂದಿಟ್ಟುಕೊಳ್ಳಿ. ಅದಕ್ಕೆ ಯಾರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತೀರಿ? ಪುಸ್ತಕ ಒಂದು ವಿಭಿನ್ನ ಮಾಧ್ಯಮ. ನಾಗರೀಕತೆಯಿಂದಾದ ಪರಿಣಾಮ ಎಂದರೆ ಮುಖಾಮುಖಿಯಾದ ಸಾಮಾಜಿಕ ಸಂದರ್ಭದ ಬದಲು ಪ್ರದರ್ಶಕ ಮತ್ತು ಪ್ರೋತ್ಸಾಹ ದೂರದಲ್ಲಿರುವಂತಾಗಿದೆ. ಉದಾಹರಣೆಗೆ ನೀವು ಟೆಲೆಫೋನ್‌ನಲ್ಲಿ ಮಾತನಾಡುತ್ತೀರಿ. ಆದರೆ ಅವರನ್ನು ನೀವು ನೋಡುವುದಿಲ್ಲ. ಟೆಲಿವಿಜನ್ ಪ್ರದರ್ಶನವೊಂದನ್ನು ನೋಡುತ್ತೀರಿ. ಟಿ.ವಿ.ಯಲ್ಲಿರುವವರನ್ನು ನೀವು ನೋಡಬಹುದು ಆದರೆ ಅದರಲ್ಲಿರುವವರು ನಿಮ್ಮನ್ನು ನೋಡಲಾರರು. ನೀವು ಪುಸ್ತಕ ಓದುವಾಗ ಆ ಪುಸ್ತಕದ ಕರ್ತೃ ಹತ್ತು ಸಾವಿರ ಮೈಲಿ ದೂರ ಇರಬಹುದು. ಸಾವಿರ ವರ್ಷದ ಹಿಂದೆ ಪುಸ್ತಕವನ್ನು ಬರೆದಿರಬಹುದು. ಆದರೂ ನೀವು ಆ ಪುಸ್ತಕವನ್ನು ಓದುತ್ತೀರಿ.ಇಂತಹ ಸಂದರ್ಭಗಳಲ್ಲಿ ಪ್ರೇಕ್ಷಕರನ್ನು ನಿಮ್ಮ ಮನಸ್ಸಿನ ಒಳಗೇ ಸೃಷ್ಟಿಸಿಕೊಳ್ಳುತ್ತೀರಿ. ಇದಕ್ಕೆ ಭಿನ್ನವಾದ ಪ್ರತಿಕ್ರಿಯೆಗಳನ್ನು ಪಡೆಯುತ್ತೀರಿ. ಮುಖಾಮುಖಿ ಪ್ರತಿಕ್ರಿಯೆಯೊಂದೇ ಪ್ರತಿಕ್ರಿಯೆ ಎಂದು ನಾವು ಭಾವಿಸಬಾರದು.

ಭಾರತೀಯ ಮತ್ತು ಅಮೆರಿಕನ್ ಶೋತೃಗಳು ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಭಿನ್ನವಾಗಿರುವುದಿಲ್ಲವೆ? ಈ ಬಗ್ಗೆ ಏನು ಹೇಳುತ್ತೀರಿ?

ಇದು ಒಂದು ರೀತಿಯ ಪಂಕ್ಚುಏಶನ್‌ ಕ್ರಮ ಎಂದು ಹೇಳಬಹುದು. ಇದು ಸಂಜ್ಞೆಗಳನ್ನು ಮಾಡಿದಂತೆ. ಅಥವಾ ವಾಕ್ಯವನ್ನು ಪಂಕ್ಚುಏಟ್ ಮಾಡಿದಂತೆ. ನಾನು ಸಂಜ್ಞೆಗಳನ್ನು ಮಾಡುವಾಗ ನನ್ನ ವಾಕ್ಯವನ್ನು ಪಂಕ್ಚುಏಟ್ ಮಾಡುತ್ತಿರುತ್ತೇನೆ. ನನ್ನ ಸಂಜ್ಞೆಗಳಿಗೆ ನನ್ನ ವಾಕ್ಕದ ರಚನೆಗೆ ಸಂಬಂಧವಿದೆ. ಜನರ ನಡವಳಿಕೆ ಗಮನಿಸಿ. ಅವರು ಎರಡು ರೀತಿ ಪಂಕ್ಚುಏಟ್ ಮಾಡುತ್ತಾರೆ. ಅವರ ಮಾತಿನ ನಡುವೆ ಅಲ್ಲಲ್ಲಿ ನಿಲ್ಲಿಸುವುದರ ಮೂಲಕ ಮತ್ತು ಸಂಜ್ಞೆಗಳ ಮೂಲಕ ಶೋತೃಗಳ ಪ್ರತಿಕ್ರಿಯೆ, ಇನ್ನೊಂದು ಬಗೆಯಾದ ಪಂಕ್ಚುಏಶನ್‌ ಎಂದು ಹೇಳಬಹುದು. ಇದೊಂದು ರೀತಿಯ ಫೀಡ್ ಬ್ಯಾಕ್. ಮುಖಾಮುಖಿ ಸಂವಹನದಲ್ಲಿ ಒಂದು ಚಕ್ರ ಪೂರ್ಣಗೊಂಡಂತಾಗುತ್ತದೆ.

ಇತರ ಸಮಾಜವಿಜ್ಞಾನಗಳಿಗೆ ಹೋಲಿಸಿದಾಗ ಜಾನಪದ ವಿಜ್ಞಾನ ತೀರ ಇತ್ತೀಚಿನದು. ಇದರ ಪ್ರಭಾವ ಇತರ ಸಮಾಜ ವಿಜ್ಞಾನಗಳ ಮೇಲೆ ಹೇಗೆ ಆಗಿದೆ?

ಹೌದು. ಜಾನಪದ ವಿಜ್ಞಾನ ತೀರ ಈಚಿನ ಬೆಳವಣಿಗೆ. ಭಾರತದಲ್ಲಿ ಭಾಷಾ ವಿಜ್ಞಾನ ರೂಪುಗೊಂಡ ಆರಂಭದ ದಿನಗಳಲ್ಲಿ ಭಾಷಾ ವಿಜ್ಞಾನಿಗಳು ಕ್ಷೇತ್ರ ಕಾರ್ಯ ಮಾಡುತ್ತಿದ್ದರು. ಉದಾಹರಣೆಗೆ ಗ್ರಿಯರ್‌ಸನ್ ಅವರ ‘ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ದಲ್ಲಿ ಅವರು ಸಂಗ್ರಹಿಸಿದ ಪಠ್ಯಗಳು ಜನಪದ ಪಠ್ಯಗಳೇ ಆಗಿವೆ. ಜಾನಪದ ವಿಜ್ಞಾನ ಭಾಷಾ ವಿಜ್ಞಾನದ ಮೇಲೆ ಮಾಡಿರುವ ಪರಿಮಕ್ಕಿಂತ ಭಾಷಾವಿಜ್ಞಾನ ಜಾನಪದ ವಿಜ್ಞಾನದ ಮೇಲೆ ಮಾಡಿರುವ ಪರಿಣಾಮಗಳೇ ಹೆಚ್ಚು.  ಭಾಷಾವಿಜ್ಞಾನಿಗಳೇ ಜಾನಪದ ವಿಜ್ಞಾನಿಗಳ ತಿಳುವಳಿಕೆಯನ್ನು ಹೆಚ್ಚಿಸಿದ್ದಾರೆ. ಗ್ರಿಮ್ ಸಹೋದರರ ವಿಚಾರದಲ್ಲಿ ಆದದ್ದು ಹೀಗೆಯೇ. ಮ್ಯಾಕ್ಸ್ ಮುಲ್ಲರ್ ಸ್ಪಷ್ಟವಾಗಿ ಒಬ್ಬ ಜಾನಪದ ವಿದ್ವಾಂಸರಾಗಿರಲಿಲ್ಲ. ಶ್ರೇಷ್ಠ ದ್ರಾವಿಡ ಭಾಷಾ ವಿಜ್ಞಾನಿಯಾಗಿದ್ದ ಎಂ.ಬಿ .ಎಮಿನೋ ಅವರು ತೋಡಾ ಭಾಷೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ. ಹಲವಾರು ಪ್ರಬಂಧಗಳನ್ನು ಒಳಗೊಂಡ ಅವರ ಪುಸ್ತಕಗಳಲ್ಲಿ ಜನಪದ ಆಶಯಗಳನ್ನು ಕುರಿತು ಪ್ರಸ್ತಾಪಿಸಿದ್ದಾರೆ. “ಕೊಟಾ ಟೆಕ್ಸ್ಟ್”, “ತೋಡಾ ಸಾಂಗ್ಸ್ ” ಭಾರತದಲ್ಲಿ ಸಂಗ್ರಹಿಸಿದ ಅತ್ಯುತ್ತಮ ಜಾನಪದ ಸಾಮಗ್ರಿ. ಈ ಜಾನಪದ ಪಠ್ಯಗಳನ್ನು ಅಭ್ಯಾಸ ಮಾಡುವುದರ ಮೂಲಕ ಅವರು ಭಾಷೆಯ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿದರು ಎಂಬುದು ಸ್ಪಷ್ಟ ವಿಷಯವನ್ನು ಸಂಗ್ರಹಿಸಲು ಇದು ಅತ್ಯುತ್ತಮವಾದ ಒಂದು ಕ್ರಮ. ಬಹಳಷ್ಟು ಜನ ಮಾನವ ವಿಜ್ಞಾನಿಗಳು ಜಾನಪದದಲ್ಲಿ ಕೆಲಸ ಮಾಡಿಲ್ಲ. ಹಾಗೇನಾದರೂ ಮಾಡಿದ್ದೇ ಆದರೆ ಮಾನವ ವಿಜ್ಞಾನ ಕ್ಷೇತ್ರದ ಸ್ವರೂಪವನ್ನೇ ಅದು ಬದಲಾಯಿಸುತ್ತದೆ. ಭಾರತದ ಮಾನವ ವಿಜ್ಞಾನಿಗಳು ಜಾನಪದ ಸಂಗ್ರಹದಲ್ಲಿ ತೊಡಗಿದರೆ, ಜಾನಪದವನ್ನು ಅಭ್ಯಾಸ ಮಾಡಿದರೆ ಅವರಿಗೆ ಅದರಿಂದ ವಿಶೇಷವಾದ ಪ್ರಯೋಜನವಿದೆ. ಆದರೆ ವಾಸ್ತವವಾಗಿ ಆ ಪರಿಸ್ಥಿತಿ ಇನ್ನೂ ಬಂದಿಲ್ಲ. ಅಂತಹ ಅಪರೂಪದ ಕೆಲವು ವ್ಯಕ್ತಿಗಳಲ್ಲಿ ಎಂ.ಎನ್. ಶ್ರೀನಿವಾಸ ಅವರು ಒಬ್ಬರು. ಪೀಟರ್ ಕ್ಲಾಸ್ ಬಹುಮಟ್ಟಿಗೆ ಸಂಪೂರ್ಣ ಜಾನಪದ ವಿದ್ವಾಂಸರೇ ಆಗಿಬಿಟ್ಟಿದ್ದಾರೆ. ತಮ್ಮ ಕ್ಷೇತ್ರದ ತಿಳುವಳಿಕೆಯ ಜೊತೆಗೆ ಜಾನಪದ ಸಾಮಗ್ರಿಯಲ್ಲಿಯೂ ಕೂಡ ಮಾನವ ವಿಜ್ಞಾನಿಗಳು ಆಸಕ್ತಿಯನ್ನು ಇಟ್ಟುಕೊಂಡಿದ್ದೇ ಆದರೆ ಬಹಳಷ್ಟನ್ನು ಕಲಿಯಬಹುದು. ಈ ಕೆಲಸ ಈಗ ಆರಂಭವಾಗಿದೆ. ಈ ಸತ್ಯಾಂಶವನ್ನು ಈಗ ಕಂಡುಕೊಳ್ಳುತ್ತಿದ್ದಾರೆ. ಜಾನಪದದ ಕಲಾತ್ಮಕ ಅಭಿವ್ಯಕ್ತಿಯ ಕಡೆಗೆ ಮಾನವ ವಿಜ್ಞಾನಿಗಳು ಕೆಲಸ ಮಾಡಿದ್ದು ಕಡಿಮೆ. ಅವರಲ್ಲಿ ಎತ್ನೋ ಮ್ಯುಜಿಕಾಲಾಜಿಯಲ್ಲಿ ಪರಿಣತರಾದವರಿದ್ದಾರೆ. ಆದರೆ ಈ ಬಗೆಯ ವಿಶೇಷ ಪರಿಣತಿಯ ಅಡ್ಡಗೋಡೆಗಳು ಕೆಳಗುರುಳಿ ಅವೆಲ್ಲಾ ಒಂದಾಗಬೇಕಾದ ಕಾಲ ಬರುತ್ತದೆ.

ಜಾನಪದದಮೇಲೆ ಅಭಿಜಾತ ಸೌಂದರ್ಯ ಮೀಮಾಂಸೆಯ ಪ್ರಭಾವಗಳೇನು?

ಭಾರತದಂತಹ ದೇಶದಲ್ಲಿ ಕಾವ್ಯ ಮೀಮಾಂಸೆಯ ಬಗ್ಗೆ ಮಾತಾಡುವಾಗ ಜನಪದ ಗೀತೆ, ಜನಪದ ಕಥೆ ಜನಪದ ಮಹಾಕಾವ್ಯಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಉದಾಹರಣೆಗೆ ರಸ ಸಿದ್ದಾಂತವನ್ನೇ ತೆಗೆದುಕೊಳ್ಳಿ. ರಸಸಿದ್ಧಾಂತದಿಂದ ಭಾರತದ ಎಲ್ಲ ಸಾಹಿತ್ಯವನ್ನು ವಿವರಿಸಲು ಬಹಳಷ್ಟು ಸಾಧ್ಯವಾಗುವುದಿಲ್ಲ. ಅಥವಾ ಭಾರತದ ಬಹುಪಾಲು ಸಾಹಿತ್ಯಕ್ಕೆ ಅದು ಹೊಂದುವುದಿಲ್ಲ. ಮಹಾಭಾರತಕ್ಕೆ ಅದು ಹೊಂದುವುದು ಕಷ್ಟ. ಮಹಾಭಾರತ ಶಾಂತ ರಸವನ್ನು ಸೃಷ್ಟಿಸಿದೆ ಎಂದು ಹೇಳುವುದು ಐರಾನಿಕ್ ಆಗಿ ನನಗೆ ಕಾಣುತ್ತದೆ. ಭಯಂಕರ ಹಿಂಸೆಯ, ಕೊಲೆಯ ಈ ಕಾವ್ಯ ಗೊಂದಲದಿಂದ ಕೂಡಿದೆ. ಈ ಕಾವ್ಯ ಓದಿದ ಮೇಲೆ ನಮ್ಮ ಮನಸ್ಸು ಕಲಕಿ ಹೋಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇದರ ಮುಖ್ಯರಸ ಶಾಂತ ರಸ ಎಂದು ಹೇಳುವುದು ನನಗೆ ತೀರಾ ಕೃತಕವೆಂದು ಕಾಣುತ್ತದೆ. ಏಕೆಂದರೆ ಇದು ವೀರ ಮತ್ತು ಶೃಂಗಾರಗಳ ಬಗ್ಗೆ ಮಾತ್ರ ವಿಚಾರಮಾಡುವುದಿಲ್ಲ. ಭೀಮ ದುಶ್ಯಾಸನನನ್ನು ಕೊಲ್ಲುವ ಸಂದರ್ಭ ಬೇರೆ ಯಾವುದೇ ರಸಕ್ಕಿಂತಲೂ ಹೆಚ್ಚಾಗಿ ಭೀಭತ್ಸ ಮತ್ತು ಭಯಾನಕ ರಸವನ್ನು ವ್ಯಕ್ತಪಡಿಸುತ್ತದೆ. ಈ ವಿಷಯ ಜನಪದ ಮಹಾಕಾವ್ಯಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಪಾಡ್ದನಗಳನ್ನು ನೋಡಿರಿ. ಇವುಗಳಲ್ಲಿ ಕೆಲವು ಕೊಲೆಗೆ ಸಂಬಂಧಿಸಿವೆ. ಸ್ತ್ರೀ ದೇವತೆಗಳ ಪುರಾಣಗಳೂ ಹೀಗೆಯೇ. ಇವುಗಳ ಬಗ್ಗೆ ನಾವು ವಿಚಾರ ಮಾಡುತ್ತಿದ್ದೇವೆ. ಇವುಗಳು ಹಿಂಸೆ, ಮೋಸ, ಆತ್ಮಹತ್ಯೆ, ಅತ್ಯಾಚಾರ ಮತ್ತು ರಕ್ತಪಾತದಿಂದ ಕೊನೆಗೊಳ್ಳುತ್ತವೆ. ಈ ಬಗೆಯ ಕಥೆಗಳು ಭಾರತೀಯ ಸಾಹಿತ್ಯದ ಬಗ್ಗೆ ಈಗಿರುವ ಕಲ್ಪನೆಗಳನ್ನೇ ಬದಲಾಯಿಸುತ್ತವೆ. ಮೊದಲಿಗೆ ಭಾರತದ ಸಾಹಿತ್ಯವೆಲ್ಲ ಮಂಗಳಾಂತವಾದುದು, ದುರಂತವಾದುದಲ್ಲ ಎಂಬ ಅಭಿಪ್ರಾಯವಿತ್ತು. ಕೀತ್ ಮೊದಲಾದ ವಿದ್ವಾಂಸರು ಈ ಅಭಿಪ್ರಾಯ ಇಟ್ಟುಕೊಂಡಿದ್ದರು. ಇದರಿಂದಾಗಿ ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ಭಾರತೀಯ ಸಾಹಿತ್ಯವನ್ನು ಹೊಸರೀತಿಯಲ್ಲಿ ಅರ್ಥೈಸಬೇಕಾಗಿದೆ. ಹಾಗೆಯೇ ದುರಂತ ನಾಟಕ ಎಂದರೇನು ಎಂಬುದನ್ನೂ ಅರ್ಥೈಸಬೇಕಾಗುತ್ತದೆ. ಭಾರತೀಯ ದುರಂತನಾಟಕ ಅರಿಸ್ಟಾಟಲ್‌ನ ದುರಂತ ನಾಟಕದಂತೆ ಇಲ್ಲದಿರಬಹುದು. ಅದು ನಮ್ಮ ಕಲ್ಪನೆಯನ್ನು ವಿಸ್ತಾರಗೊಳಿಸುತ್ತದೆ .

ಅಂದರೆ ನಮ್ಮ ಪ್ರಕಾರಗಳ ಪರಿಮಿತಿಯನ್ನು ಮೀರಿ ನಾವು ಈ ವಿಷಯಗಳ ಬಗ್ಗೆ ವಿಚಾರಮಾಡಬೇಕಾಗುತ್ತದೆ ಅಲ್ಲವೆ?

ನಿಜ .ನಾವು ಜಾನಪದ ಸಾಮಗ್ರಿಯನ್ನು ಕುರಿತು ವಿಚಾರ ಮಾಡುವಾಗ ಸಂಸ್ಕೃತದಲ್ಲಿರುವ ಮತ್ತು ಪಾಶ್ಚಾತ್ಯರಲ್ಲಿರುವ ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನೂ ಮೀರಿ ವಿಚಾರ ಮಾಡಬೇಕು. ನಾವು ಮುಂದೆ ರೂಪಿಸಬೇಕಾಗಿರುವ ಕಾವ್ಯಮೀಮಾಂಸೆ ಮತ್ತು ಸೌಂದರ್ಯ ಮೀಮಾಂಸೆ ಕೇವಲ ರಸಸಿದ್ಧಾಂತ ಆಗಬಾರದು, ಅರಿಸ್ಟಾಟಲ್‌ನ ಸಿದ್ಧಾಂತ ಆಗಬಾರದು; ಅದಕ್ಕಿಂತ ಭಿನ್ನವಾಗಿರಬೇಕು.

ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ಪ್ರದರ್ಶಕ ಮತ್ತು ಪ್ರೇಕ್ಷಕರ ನಡುವೆ ಅಂತರ ಇದ್ದೇ ಇರುತ್ತದೆ ಅಲ್ಲವೆ?

ನಿಜ, ರಸನಿಷ್ಪತ್ತಿ ಆಗಬೇಕಾದರೆ ಮಧ್ಯೆ ಮೂರು ನಾಲ್ಕು ಡಿಸ್‌ಜಂಕ್ಷನ್ ಗಳಿವೆ. ರಾಮನಾಗಿ ನಟಿಸುತ್ತಿರುವವನು ರಾಮನಲ್ಲ, ಹಾಗೂ ರಾಮನ ಬಗ್ಗೆ ಬರೆಯುತ್ತಿರುವವನೂ ರಾಮನಲ್ಲ ಎಂಬುದು ಪ್ರೇಕ್ಷಕನಿಗೆ ಗೊತ್ತಿರುತ್ತದೆ ಅಲ್ಲಿ ಪ್ರದರ್ಶಿತವಾಗುತ್ತಿರುವುದು ಆತನ ಭಾವಗಳಲ್ಲ. ಆದರೆ ರಾಮನನ್ನು ನೋಡುತ್ತಾ ಕುಳಿತ ಪ್ರೇಕ್ಷಕರು ಇದನ್ನು ಗುರುತಿಸುವುದಿಲ್ಲ. ಇದರಲ್ಲಿ ಯಾವುದೊಂದು ಛಿದ್ರಗೊಂಡರೂ ಅಲ್ಲಿ ರಸ ನಿಷ್ಪತ್ತಿಯಾಗುವುದಿಲ್ಲ. ರಸಸಿದ್ಧಾಂತದ ಪ್ರಕಾರ ಇದು ನಿಜ. ಆದರೆ ನಮ್ಮ ಕೆಲವು ಪ್ರಕಾರಗಳಲ್ಲಿ ಇದು ನಿಜವಲ್ಲ. ಭಕ್ತಿಯಲ್ಲಿ ಇದು ನಿಜವಲ್ಲ ಎನಿಸುತ್ತದೆ. ಒಬ್ಬ ಕವಿ ಕೃಷ್ಣನ ಬಗ್ಗೆ ಹಾಡುವಾಗ ಅಳುತ್ತಾನೆ. ತನ್ನನ್ನೇ ಕೃಷ್ಣನೊಂದಿಗೆ ಗುರುತಿಸಿಕೊಳ್ಳುತ್ತಾನೆ. ಒಬ್ಬ ನಟ ನರಸಿಂಹನಾಗಿ ನಟಿಸುವಾಗ ನಿಜವಾಗಿಯೂ ಆತನ ಮೇಲೆ ನರಸಿಂಹನ ಆವಾಹನೆಯಾಗಿಬಿಡುತ್ತದೆ. ನಿಜಕ್ಕೂ ಆಗಾಗ ನರಸಿಂಹನನ್ನು ಶಾಂತಗೊಳಿಸಬೇಕಾಗುತ್ತದೆ. ಹಾಗೆ ನಟಿಸುವುದನ್ನೂ ಕೆಲವೊಮ್ಮೆ ನಿಷೇಧಿಸಲಾಗಿದೆ .ನಮ್ಮೆಲ್ಲಾ ಈ ಆವಾಹನಾ ಆಚರಣೆಗಳು (ಪೊಸೆಶನ್ ರಿಚುವಲ್ಸ್)  ನಮ್ಮ ಸಾಹಿತ್ಯ ಪ್ರಕಾರಗಳಿಗೆ ತುಂಬಾ ಹತ್ತಿರವಾಗಿವೆ. ಅಥವಾ ಉದಾಹರಣೆಗೆ, ಒಬ್ಬ ಪ್ರೇಕ್ಷಕ (ಭಕ್ತ) ಕೃಷ್ಣನನ್ನು ನೋಡಿದೊಡನೆ ಆತ ತನ್ನನ್ನು ಕೃಷ್ಣನೊಂದಿಗೆ ಗುರ್ತಿಸಿಕೊಳ್ಳುತ್ತಾನೆ. ತಮ್ಮ ಸ್ಥಳವನ್ನು ಗೋಕುಲ ಎಂದುಕೊಳ್ಳುತ್ತಾನೆ. ಚೈತನ್ಯಪಂಥದ ಭಕ್ತಿಯಲ್ಲಿ ಇದನ್ನು ಗುರ್ತಿಸಬಹುದು. ರಸಸಿದ್ಧಾಂತದ ಪ್ರಕಾರ ಹೀಗೆ ಗುರ್ತಿಸಿಕೊಳ್ಳಬಾರದು. ಆದರೆ ಕವಿ ವಾಸ್ತವವಾಗಿ ಕೃಷ್ಣನ ಕಥೆಯ ವಿಭಿನ್ನ ಪಾತ್ರಗಳೊಡನೆ ತನ್ನನ್ನು ತಾನು ಗುರ್ತಿಸಿಕೊಂಡುದರಲ್ಲಿ ಸಂಪೂರ್ಣವಾಗಿ ಮಗ್ನನಾಗುತ್ತಾನೆ. ಆದುದರಿಂದ ಭಕ್ತಿಪಂಥದಲ್ಲಿ ಪ್ರೇಕ್ಷಕರು ನಟರು, ಕಥೆಯ ವಿಷಯದಲ್ಲಿ ಸಂಪೂರ್ಣ ಮಗ್ನರಾಗಿರುತ್ತಾರೆ.

ಆದರೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸಾನುಭವ ಮತ್ತು ಭಾವಾನುಭವ ಇವೆರಡಕ್ಕೂ ವ್ಯತ್ಯಾಸವನ್ನು ಗುರ್ತಿಸಲಾಗಿದೆಯಲ್ಲವೆ?

ಅದು ನಿಜ. ಅವರಡೂ ವಾಸ್ತವವಾಗಿ ಭಿನ್ನವಾದುವು. ಆದರೆ ಜನಪದ ಸೌಂದರ್ಯ ಮೀಮಾಂಸೆಯಲ್ಲಿ ಅದರಲ್ಲಿಯೂ ಭಕ್ತಿಗೆ ಸಂಬಂಧಿಸಿದಂತೆ ಈ ಬಗ್ಗೆ ಭಿನ್ನವಾದ ರೀತಿಯಲ್ಲಿ ಆಲೋಚನೆ ಮಾಡಲೇಬೇಕು. ಏಕೆಂದರೆ ಈ ಸಂದರ್ಭಗಳಲ್ಲಿ ರಸ ಮತ್ತು ಭಾವ ಇವೆರಡಕ್ಕೂ ಗಡಿರೇಖೆಯನ್ನು ಎಳೆಯುವುದು ಕಷ್ಟ.

ಅಂದರೆ ಕಾವ್ಯಮೀಮಾಂಸೆಯ ಅಧ್ಯಯನಕ್ಕೆ ನೀವು ಪ್ರತಿಪಾದಿಸುತ್ತಿರುವ ಈ ವಿಚಾರ ಒಂದು ಹೊಸ ಆಯಾಮವನ್ನು ಕೊಡುತ್ತದೆ ಅಲ್ಲವೆ?

ಹೌದು, ನಾನು ಭಾವದ ಮೀಮಾಂಸೆಯ ಬಗ್ಗೆ ಮಾತನಾಡುತ್ತಿದ್ದೇನೆ. ಕೇವಲ ರಸದ ಮೀಮಾಂಸೆಯ ಬಗ್ಗೆ ಮಾತ್ರ ಅಲ್ಲ. ಭಾವಕ್ಕೆ ಸಂಬಂಧಿಸಿದ ಮೀಮಾಂಸೆಯನ್ನು ನಾವು ಗಂಭೀರವಾಗಿ ಪರಿಗಣಿಸಲೇ ಬೇಕಾಗುತ್ತದೆ. ಅದರಲ್ಲಿಯೂ ಜಾನಪದ ಸಾಮಗ್ರಿಯನ್ನು ಕುರಿತು ತಮಿಳು ಭಕ್ತಿ ಸಾಹಿತ್ಯವನ್ನು ಕುರಿತು ಮಾತನಾಡುವಾಗ ಇವುಗಳಿಗಿರುವ ಸಂಬಂಧಗಳನ್ನು ಕುರಿತು ವಿಚಾರ ಮಾಡಬೇಕಾಗುತ್ತದೆ. ಭಾವ ಮತ್ತು ರಸ ಇವೆರಡಕ್ಕೂ ಗಡಿರೇಖೆಯನ್ನು ಎಳೆಯುವುದರ ಬಗ್ಗೆ ಮಾತ್ರ ನಾನು ವಿಶೇಷವಾಗಿ ಆಸಕ್ತನಾಗಿದ್ದೇನೆ ಎಂದರ್ಥವಲ್ಲ. ಒಂದು ಇನ್ನೊಂದರ ಮೇಲೆ ಯಾವ ರೀತಿಯ ಬೆಳಕನ್ನು ಚೆಲ್ಲುತ್ತದೆ ಎಂಬುದರ ಬಗ್ಗೆಯೂ ನಾನು ಆಸಕ್ತನಾಗಿದ್ದೇನೆ. ಏಕೆಂದರೆ ಒಂದು ಸಂಸ್ಕೃತಿಯ ಒಳಗೆ ಇವೆಲ್ಲಾ ವಾಟರ್ ಟೈಟ್ ಕಂಪಾರ್ಟ್ಮೆಂಟ್ ಗಳಲ್ಲ. ಒಂದರೊಡನೊಂದು ಸಂವಾದ ಮಾಡುತ್ತಿರುತ್ತವೆ. ಒಂದು ಸಂಸ್ಕೃತಿಯಲ್ಲಿ ಈ ಬಗೆಯ ಅನೇಕ ಸಂವಾದಗಳ ಸರಣಿಯೇ ಇರುತ್ತದೆ. ಸಂಸ್ಕೃತಿಯ ಚಲನಶೀಲತೆ ಈ ರೀತಿ ಇರುತ್ತದೆ. ಇಲ್ಲದಿದ್ದಲ್ಲಿ ಭಾರತೀಯ ಸಂಸ್ಕೃತಿಯನ್ನು ಸ್ಥಿರವಾದ ಸಂಪೂರ್ಣವಾಗಿ ಚಲನರಹಿತವಾದ್ದು ಎಂದು ಭಾವಿಸಿದಂತಾಗುತ್ತದೆ .ನಾವು ಜಾನಪದದ ಬಗ್ಗೆ ಹೀಗೆಯೇ ಆಲೋಚನೆ ಮಾಡುತ್ತೇವೆ. ಅಜ್ಜಿ ಕಥೆಯನ್ನು ಹೇಳುವಾಗ ಪ್ರತಿಸಾರಿಯೂ ಹೊಸದಾಗಿಯೇ ಹೇಳುತ್ತಾಳೆ. ಆಕೆ ಕೇವಲ ಒಂದೇ ರೀತಿಯಲ್ಲಿ ಹೇಳುವುದಿಲ್ಲ. ಪ್ರತಿಬಾರಿಯೂ ಅದನ್ನು ಹೊಸದಾಗಿ ಪುನಸೃಷ್ಟಿ ಮಾಡುತ್ತಾಳೆ.

One comment to “ಎ.ಕೆ. ರಾಮಾನುಜನ್ ಸಂದರ್ಶನ – ಭಾಗ ೧”
  1. Pingback: ಋತುಮಾನ | ಎ.ಕೆ. ರಾಮಾನುಜನ್ ಸಂದರ್ಶನ – ಭಾಗ ೨

ಪ್ರತಿಕ್ರಿಯಿಸಿ