ಸಂದರ್ಶಕರು : ತೀ.ನಂ.ಶಂಕರನಾರಾಯಣ ಮತ್ತು ಎಸ್.ಎ.ಕೃಷ್ಣಯ್ಯ
೧೯೯೦ರ ಜೂನ್ ತಿಂಗಳಲ್ಲಿ ತಮಿಳುನಾಡಿನ ಪಾಲಿಯೆಂಕೋಟ್ ನ ಸೈಂಟ್ ಝೇವಿಯರ್ ಕಾಲೇಜಿನ ಜಾನಪದ ಅಧ್ಯಯನ ಕೇಂದ್ರದವರು ಫೋರ್ಡ್ ಫೌಂಡೇಶನ್ ನೆರವಿನಿಂದ ತಮಿಳುನಾಡು ಮತ್ತು ಕೇರಳದ ಯುವ ಜಾನಪದ ವಿದ್ವಾಂಸರಿಗಾಗಿ ಕಮ್ಮಟವನ್ನು ನಡೆಸಿದರು. ಎ. ಕೆ. ರಾಮಾನುಜನ್ ಈ ಕಮ್ಮಟದಲ್ಲಿ ಉಪನ್ಯಾಸಗಳನ್ನು ನೀಡಿದರು. ಸಂದರ್ಶಕರಿಬ್ಬರು ೬-೬-೯೦ರಂದು ರಾಮಾನುಜನ್ ಅವರನ್ನು ಭೇಟಿಮಾಡಿ ಈ ಸಂದರ್ಶನ ಮಾಡಿದರು . ಆ ಸಂದರ್ಶನದ ಧ್ವನಿಯನ್ನು ಇಲ್ಲಿ ಕೊಡಲಾಗಿದೆ . ಮಾತುಗಳು ಇಂಗ್ಲಿಷಿನಲ್ಲಿ ಇರುವುದರಿಂದ ಸಂದರ್ಶನದ ಪಠ್ಯ ರೂಪವನ್ನು ಕನ್ನಡದಲ್ಲಿ ಕೊಡಲಾಗಿದೆ . ಈ ಅಮೂಲ್ಯ ಧ್ವನಿಮುದ್ರಣವನ್ನು ಋತುಮಾನಕ್ಕಾಗಿ ನೀಡಿದ ಎಸ್. ಎ. ಕೃಷ್ಣಯ್ಯ ಅವರಿಗೆ ಋತುಮಾನ ಆಭಾರಿ.
ರಾಮಾನುಜನ್ ಅವರು ಜಾನಪದ ಅಧ್ಯಯನದ ಬಗ್ಗೆ, ಕಾವ್ಯ ಮೀಮಾಂಸೆಯ ಬಗ್ಗೆ ಆ ಕಾಲದ ನಮ್ಮ ಕನ್ನಡದ ಇತರ ವಿದ್ವಾಂಸರಿಗಿಂತ ಭಿನ್ನವಾಗಿ ಆಲೋಚನೆ ಮಾಡಿರುವುದನ್ನು, ಆ ಬಗ್ಗೆ ಅನೇಕ ಒಳನೋಟಗಳನ್ನು ನೀಡಿರುವುದನ್ನು ಈ ಸಂದರ್ಶನದಲ್ಲಿ ಕಾಣಬಹುದು.
ಎ.ಕೆ. ರಾಮಾನುಜನ್ ಸಂದರ್ಶನ – ಭಾಗ ೧ ಕೇಳಲು ಇಲ್ಲಿ ಕ್ಲಿಕ್ ಮಾಡಿ
ಅಮೆರಿಕಾದಲ್ಲಿ ರೂಪಿಸಿಕೊಂಡಿರುವ ನಗರ ಜಾನಪದದ ಬಗ್ಗೆ ನಿಮ್ಮ ಅನಿಸಿಕೆಗಳು …
ಅಮೆರಿಕಾದಲ್ಲಿರುವಂತಹ ನಗರಗಳು ನಮ್ಮಲ್ಲಿಯೂ ರೂಪುಗೊಳ್ಳುತ್ತಿವೆ. ಜಾನಪದ ಕೇವಲ ಹಳ್ಳಿಗೆ ರೈತಾಪಿ ಜನರಿಗೆ ಮಾತ್ರ ಸೀಮಿತವಾದದ್ದಲ್ಲ. ನಮ್ಮಲ್ಲಿಯೂ ಪಟ್ಟಣಗಳಲ್ಲಿ ಹಲವಾರು ಕೈಗಾರಿಕೆಗಳು ಬೆಳೆಯುತ್ತಿವೆ. ಆದ್ದರಿಂದ ಜಾನಪದ ಕೇವಲ ರೈತ ಸಮುದಾಯಗಳಿಗೆ ಮತ್ತು ಮೂಢ ನಂಬಿಕೆಗಳಿಗೆ ಸಂಬಂಧಪಟ್ಟದ್ದು ಎಂದು ನಾವು ಭಾವಿಸುವುದು ಸರಿಯಲ್ಲ. ಅಲೆನ್ ಡೆಂಡಸ್ ಮತ್ತಿತರರು ಸರಿಯಾಗಿಯೇ ಗುರ್ತಿಸಿರುವಂತೆ ಎಲ್ಲೆಲ್ಲಿ ಜನರಿದ್ದಾರೋ ಅಲ್ಲೆಲ್ಲಾ ಜಾನಪದ ಇರುತ್ತದೆ. ಪ್ರತಿಯೊಂದು ಸಮುದಾಯದಲ್ಲಿಯೂ ಕಂಠಸ್ಥ ಸಂಪ್ರದಾಯಗಳಿರುತ್ತವೆ. ಹಾಗೆಯೇ ಶಿಷ್ಟ ಸಂಪ್ರದಾಯಗಳಿರುತ್ತವೆ. ಇವು ಎಲ್ಲವೂ ಸಾಹಿತ್ಯವಲ್ಲದೆ ಇರಬಹುದು. ಅಲೆನ್ ಡೆಂಡಸ್ ಆಫೀಸ್ ಜಾನಪದದ ಬಗ್ಗೆ ಹೇಳುತ್ತಾರೆ. ಆಫೀಸುಗಳಲ್ಲಿ ಮತ್ತು ಕೈಗಾರಿಕಾ ಕೆಲಸಗಾರರ ಸಮುದಾಯಗಳಲ್ಲಿ ಹೊಸ ಹೊಸ ಜೋಕ್ ಗಳು ಸೃಷ್ಟಿಯಾಗುತ್ತವೆ. ಹೊಸ ಸಂಪ್ರದಾಯಗಳೂ ರೂಪುಗೊಳ್ಳುತ್ತವೆ. ಪಟ್ಟಣಗಳಲ್ಲಿ ಕಂಪ್ಯೂಟರಗಳನ್ನೂ ಆಯುಧಪೂಜೆಯ ದಿನ ಪೂಜಿಸುತ್ತಾರೆ. ಮುಂದೆ ನಾವು ಹಳೆಯ ಸಂಪ್ರದಾಯಗಳು ಹೊಸ ಸಂಪ್ರದಾಯಗಳು, ಹಳೆಯ ನಂಬಿಕೆಗಳು – ಹೊಸನಂಬಿಕೆಗಳು ಇವನ್ನೆಲ್ಲಾ ಆಭ್ಯಾಸ ಮಾಡಬೇಕಾಗಿದೆ. ಏಕೆಂದರೆ ಅವು ನಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಕೈಗಾರಿಕೀಕರಣಕ್ಕೆ, ನಗರೀಕರಣಕ್ಕೆ ಮತ್ತು ಆಧುನೀಕರಣಕ್ಕೆ ನಾವು ಹೊಂದಿಕೊಳ್ಳುವ ಸಲುವಾಗಿ ನಮ್ಮ ಸಂಪ್ರದಾಯಗಳನ್ನು ಉಪಯೋಗಿಸುತ್ತಿದ್ದೇವೆ ಎಂಬುದರ ಬಗ್ಗೆ ಅವು ತಿಳುವಳಿಕೆ ನೀಡುತ್ತವೆ. ಈ ಪ್ರಕ್ರಿಯೆ ಅಮರಿಕಾದ ಪರಿಸ್ಥಿತಿಗಿಂತ ಭಿನ್ನವಾಗಿದೆ. ಅಮೆರಿಕಾದಲ್ಲಿ ಬೇರೆ ಬೇರೆ ದೇಶಗಳಿಂದ ಜನ ಬಂದು ನೆಲೆಸಿದ್ದಾರೆ. ಹಲವಾರು ಸಾಂಸ್ಕೃತಿಕ ವರ್ಗಗಳಿಗೆ ಅವರು ಸೇರಿದವರಾಗಿದ್ದಾರೆ. ಹಾಗೆ ಬರುವಾಗ ಅವರು ತಮ್ಮೊಂದಿಗೆ ತಮ್ಮ ಜನಪದ ಹಾಗೂ ನಂಬಿಕೆಗಳನ್ನು ತಂದಿದ್ದಾರೆ. ಅವೆಲ್ಲಾ ಅಲ್ಲಿ ಹೇಗೆ ಹೊಂದಿಕೊಳ್ಳುತ್ತವೆ. ಅವೆಲ್ಲವೂ ಹಾಗೆಯೇ ಉಳಿಯುತ್ತವೆಯೇ? ಅವರ ಮೇಲೆ ಅಲ್ಲಿಯೂ ಅವು ಪ್ರಭಾವ ಬೀರಿ ಕೆಲಸ ಮಾಡುತ್ತವೆಯೇ? ನನಗನ್ನಿಸುವುದು ಅದು ಉಳಿದೆಲ್ಲ ನಗರ ಜಾನಪದಕ್ಕಿಂತ ಬಹಳ ಭಿನ್ನವಾದುದು ಎಂದು. ಅದರಿಂದಾಗಿ ಅದನ್ನು ನಾವು ಅಧ್ಯಯನ ಮಾಡಬೇಕು. ಅದನ್ನು ಅಧ್ಯಯನ ಮಾಡುವುದು ಬಹಳ ಒಳ್ಳೆಯದು. ಅದು ಬಹಳ ಎಕ್ಸೈಟಿಂಗ್ ಕೂಡ. ಈ ಜಾನಪದದ ಜೊತೆಗೇ ನಾವು ಅಭ್ಯಾಸ ಮಾಡಬೇಕಾದ ಇನ್ನೊಂದು ಅತಿ ಮುಖ್ಯವಾದ ಅಂಶವೆಂದರೆ ‘ಜನಪ್ರಿಯ ಸಂಸ್ಕೃತಿ’ (ಪಾಪ್ಯುಲರ್ ಕಲ್ಟರ್) ಅಥವಾ ನಾವೀಗ ಯಾವುದನ್ನು ಸಾರ್ವಜನಿಕ ಸಂಸ್ಕೃತಿ’ ಎಂದು ಕರೆಯಲಾರಂಭಿಸಿದ್ದೇವೆಯೋ ಆ ರೀತಿಯ ಜಾಹೀರಾತುಗಳೂ, ಮದುವೆ ವೀಡಿಯೋಗಳು ಮತ್ತು ಭಿತ್ತಿಪತ್ರಗಳು ಮೊದಲಾದವನ್ನು ಅಭ್ಯಾಸ ಮಾಡಬೇಕಾಗಿದೆ. ಸಮೂಹ ಪ್ರೇಕ್ಷಕರಿಗಾಗಿ ಸಿದ್ಧಪಡಿಸಿದ ‘ಮಹಾಭಾರತ’ದ ರೀತಿ ಅಲ್ಲದೆ ಕಲಾತ್ಮಕ ಚಿತ್ರಗಳು ಪಾಪ್ಯುಲರ್ ಫಿಲ್ಮಗಳಂತೆ ಅಲ್ಲ. ಟಿ.ವಿ.ಯಲ್ಲೂ ಕೂಡ ಅಷ್ಟೆ.ಇಲ್ಲೆಲ್ಲಾ ಹೊಸ ಸಂಸ್ಕೃತಿ ಬೆಳೆದಿರುವುದನ್ನು ನಾವು ಕಾಣಬಹುದು ಮತ್ತು ಅದನ್ನು ಅಭ್ಯಾಸ ಮಾಡಬೇಕಾದ ಅವಶ್ಯಕತೆ ಕೂಡ ಇದೆ.
ಈ ‘ನಗರ ಜಾನಪದ’ದಲ್ಲಿ ಪುರಾಣಗಳಂತಹ ಕೆಲವು ಪ್ರಕಾರಗಳು ದೊರೆಯಲಾರವು ಅಲ್ಲವೆ?
ದೊರಕಲಿಕ್ಕಿಲ್ಲ. ಪ್ರತಿ ಸಂದರ್ಭವೂ ಒಂದು ರೀತಿಯ ನಿರ್ದಿಷ್ಟ ಮಾದರಿಯ ಪ್ರಕಾರಗಳನ್ನು ಹೊತ್ತಿರುತ್ತವೆ. ಆಧುನಿಕ ಸಾಹಿತ್ಯದಲ್ಲಿ ಕಾದಂಬರಿಗಳು ಪುರಾಣಗಳ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಆದರೆ ಎಷ್ಟು ಜನ ಹತ್ತು ಸಾವಿರ ಪುಟಗಳ ಪುರಾಣ ಬರೆಯುತ್ತಾರೆ. ಅವರು ಕೆಲವರು ಮಾತ್ರ. ಆದರೆ ಐನೂರು ಪುಟಗಳ ಕಾದಂಬರಿ ಬರೆಯುವವರು ಬಹಳ ಮಂದಿ ಇದ್ದಾರೆ. ಹಲವು ಆಧುನಿಕ ಸಂಸ್ಕೃತಿಗಳಲ್ಲಿ ಪುರಾಣಗಳನ್ನು ಬರೆಯುವವರೂ ಕೆಲವು ಮಂದಿ ಖಂಡಿತವಾಗಿಯೂ ಇದ್ದಾರೆ. ಆದರೆ ಅವರ ಸಂಖ್ಯೆ ತೀರಾ ತೀರಾ ಕಡಿಮೆ. ದೇ ಆರ್ ರಿಯಲಿ ಮಾರ್ಜಿನಲ್.
ಈ ‘ಆಧುನಿಕ ಜಾನಪದ’ದ ಪರಿಕಲ್ಪನೆ ಜಾನಪದ ವಿದ್ವಾಂಸರಿಗೆ ವೃತ್ತಿಯ ಅವಶ್ಯಕತೆಯಾಗಿತ್ತು ಎಂದು ನಿಮಗನಿಸುವುದಿಲ್ಲವೆ?
ಇರಬಹುದು. ಭಾರತಕ್ಕೆ ಮತ್ತು ಅಮೆರಿಕಕ್ಕೆ ವ್ಯತ್ಯಾಸಗಳಿವೆ. ಇಂಡಿಯಾದಲ್ಲಿ ಈಚೆಗೆ ಶೇಕಡಾ ೨೦ರಷ್ಟು ಜನ ಪಟ್ಟಣಗಳಲ್ಲಿ ವಾಸ ಮಾಡಿದರೆ ೮೦%ರಷ್ಟು ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ೮೦%ರಷ್ಟು ಜನ ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ ಮತ್ತು ೨೦%ರಷ್ಟು ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದಕ್ಕನುಗುಣವಾಗಿ ಅಲ್ಲಿ ಜಾನಪದದ ಪರಿಕಲ್ಪನೆಯೂ ಹೊಂದಿಕೊಳ್ಳಬೇಕಾಗುತ್ತದೆ. ಅಲ್ಲಿ ಆದದ್ದು ಹೀಗೆಯೇ. ಆದರೆ ಅಮೆರಿಕಾದಲ್ಲಿ ‘ವಲಸೆ ಬಂದ ‘ ಅನೇಕ ಸಾಂಸ್ಕೃತಿಕ ಸಮುದಾಯದ ಜನರಿದ್ದಾರೆ. ಇದನ್ನು ನಾವು ಮರೆಯಬಾರದು. ಅಲ್ಲಿ ಎಲ್ಲವೂ ಜನರಿದ್ದಾರೆ. ಇದನ್ನು ನಾವು ಮರೆಯಬಾರದು. ಅಲ್ಲಿ ಎಲ್ಲವೂ ಏಕರೂಪವಾಗಿಲ್ಲ. ಉದಾಹರಣೆಗೆ, ಷಿಕಾಗೋ ನಗರವನ್ನೇ ತೆಗೆದುಕೊಳ್ಳಿ. ಕೆಲವು ರಸ್ತೆಗಳಲ್ಲಿ ಗ್ರೀಕರನ್ನು ಮಾತ್ರ ಕಾಣಬಹುದು. ಕೆಲವು ಜಾಗಗಳ ಕೆಲವು ರಸ್ತೆಗಳಲ್ಲಿ ಪೋಲಂಡಿನ ಜನರನ್ನೇ ಕಾಣಬಹುದು. ಮಹಾಯುದ್ದಗಳ ಅನಂತರ ಪೋಲಂಡಿನ ಜನ ಷಿಕಾಗೋ ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಮಿಲಿಯನ್ ಅಥವಾ ಎರಡು ಮಿಲಿಯನ್ ಪೋಲಿಷ್ ಮೂಲದ ಜನರಿದ್ದಾರೆ. ಆ ಜನ ನಿರಂತರವಾಗಿ ಬರುತ್ತಿದ್ದಾರೆ. ಅಲ್ಲಿಯೂ ಅಜ್ಜಿಯರಿದ್ದಾರೆ. ಅಲ್ಲಿಯೂ ಪೋಲಿಷ್ ಸಂಪ್ರದಾಯಗಳು, ಪೋಲಿಷ್ ಆಹಾರ, ಪೋಲಿಷ್ ಉಡುಗೆ ತೊಡುಗೆ, ನೃತ್ಯಗಳಿವೆ. ಅವರ ಮದುವೆಗಳು ವಿಶಿಷ್ಟವಾಗಿವೆ. ಅಲ್ಲಿಯೂ ವೈವಿಧ್ಯವನ್ನು ಕಾಣಬಹುದು. ಆದ್ದರಿಂದ ಅಮೆರಿಕನ್ನರು ‘ನಗರ ಜಾನಪದ’ ಎಂದು ಹೇಳುವಾಗ ಈ ಅಂಶಗಳನ್ನೆಲ್ಲಾ ಪರಿಗಣಿಸಬೇಕಾಗುತ್ತದೆ. ಇದು ಸಂಕೀರ್ಣವಾದದ್ದು. ಇದನ್ನು ಸರಳಗೊಳಿಸಿ ನೋಡಬಾರದು. ಇಡೀ ಅಮೆರಿಕಾ ದೇಶ ಸಂಪೂರ್ಣ ನಗರಮಯವಾದುದು ಮತ್ತು ಅಲ್ಲಿರುವುದೆಲ್ಲ ‘ಆಫೀಸ್ ಜಾನಪದ’ ಎಂದೇನೂ ನಾವು ಭಾವಿಸಬೇಕಾಗಿಲ್ಲ. ಹಾಗೆ ಭಾವಿಸುವುದೂ ಸರಿಯಲ್ಲ. ಉದಾಹರಣೆಗೆ ಚರ್ಚುಗಳಲ್ಲಿ ನಡೆಯುವ ಸರ್ಮನ್ನುಗಳನ್ನು ಗಮನಿಸಬಹುದು. ಕರಿಯ ಜನ ತಮ್ಮ ಧಾರ್ಮಿಕ ಗೀತೆಗಳನ್ನು ಹಾಡುವ ರೀತಿ, ಅವರು ಬೋಧನೆ ಮಾಡುವ ರೀತಿ, ಇವೆಲ್ಲಾ ಆವೇಶದ ರೀತಿ ಇರುತ್ತವೆ. ಅವರು ವಾಸ್ತವವಾಗಿ ಆವೇಶಕ್ಕೊಳಗಾಗಿರುತ್ತಾರೆ. ಅವರ ಈ ಜಾನಪದ ಸಾಮಗ್ರಿಯಲ್ಲಿ ಬಹಳಷ್ಟು ಸಾಂಸ್ಕೃತಿಕ ವೈವಿಧ್ಯವಿದೆ. ಆದರೆ ಇಂಡಿಯಾ ದೇಶ ಸಾಂಸ್ಕೃತಿಕ ವೈವಿಧ್ಯದ ಸ್ವರ್ಗವಿದ್ದಂತೆ. ಇಂಡಿಯಾದ ಯಾವದೇ ಪಟ್ಟಣದಲ್ಲಿಯೂ ಅಪಾರವಾದ ಸಾಂಸ್ಕೃತಿಕ ವೈವಿಧ್ಯವನ್ನು ಕಾಣಬಹುದು. ಒಂದೇ ಜಾತಿಯೊಳಗೆ ಇರುವ ಉಪಜಾತಿಗಳಲ್ಲಿಯೇ ಊಟ, ಉಡುಪು ಮೊದಲಾದ ವಿಷಯವಾಗಿ ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು.
ಅಮೆರಿಕಾದ ಆವೇಶದ ಸಂಪ್ರದಾಯಗಳಲ್ಲಿ ಆವಾಹನಾ, ಉಪಾಸನಾ, ವಿಸರ್ಜನಾ ಈ ಮೂರು ಹಂತಗಳನ್ನು ಗುರುತಿಸಲು ಸಾಧ್ಯವಾಗುತ್ತದೆಯೇ?
ಬಹುಶಃ ಸಾಧ್ಯವಾಗುತ್ತದೆ. ಚಂದ್ರಶೇಖರ ಕಂಬಾರ, ನಾನು ಮತ್ತು ಇತರರು ಈ ಆವೇಶದ ಸಂಪ್ರದಾಯಗಳನ್ನು ಈ ರೀತಿ ಅರ್ಥಮಾಡಿಕೊಂಡಿದ್ದೇವೆ. ಈ ಬಗೆಯ ಆವೇಶ ಸಂಪ್ರದಾಯಗಳಿಗೆ ಒಂದು ರೀತಿಯ ಚೌಕಟ್ಟು ಇರಬೇಕಾಗುತ್ತದೆ. ಪ್ರದರ್ಶನದಲ್ಲಿ ಒಂದು ರೀತಿಯ ಫ್ರೇಮಿಂಗ್ ಇರಬೇಕಾಗುತ್ತದೆ. ಒಂದು ಆವೇಶ ಸಂಪ್ರದಾಯ, ಆವೇಶವನ್ನು ವ್ಯಕ್ತಿಗೆ ಮತ್ತು ಆ ಸಮಾಜಕ್ಕೆ ಅಪಾಯಕಾರಿಯೆಂದು ಪರಿಗಣಿಸುತ್ತದೆ. ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಫ್ರೇಮಿಂಗ್ ಮಾಡಬೇಕಾದುದು ಅಗತ್ಯ. ಆದ್ದರಿಂದ ಒಂದು ನಿರ್ದಿಷ್ಟ ರೀತಿಯಲ್ಲಿ ಆವೇಶಕ್ಕೆ ಒಳಗಾಗಬೇಕಾಗುತ್ತದೆ. ಹಾಗೆಯೇ ಒಂದು ನಿರ್ದಿಷ್ಟ ರೀತಿಯಲ್ಲಿ ಆವೇಶದಿಂದ ಬಿಡುಗಡೆ ಪಡೆಯಬೇಕಾಗುತ್ತದೆ. ಹೀಗಾಗಿ ಈ ಮೂರು ಹಂತಗಳೂ ಅಗತ್ಯವಾಗುತ್ತವೆ. ಆವೇಶದ ಕಡೆಗೆ ಸಾಗುವ ಹಂತ, ಆವೇಶದ ಹಂತ, ಆವೇಶದ ಬಿಡುಗಡೆಯ ಹಂತ ಹೀಗೆ ಮೂರು ಹಂತಗಳಿರುತ್ತವೆ. ಸಂಸ್ಕೃತದ ರಂಗಭೂಮಿಯಲ್ಲಿಯೂ ಇದೇ ಕ್ರಮವನ್ನು ಅನುಸರಿಸಲಾಗಿದೆ. ನಾ೦ದಿಯಿಂದ ಆರಂಭವಾದ ನಾಟಕ, ಮಂಗಳದೊಂದಿಗೆ ಮುಕ್ತಾಯವಾಗುತ್ತದೆ. ಸಂಗೀತದ ಕಾರ್ಯಕ್ರಮಗಳಲ್ಲೂ ಹೀಗೆಯೇ ನಡೆಯುತ್ತದೆ. ನಮ್ಮ ಆಧುನಿಕ ಮೀಟಿಂಗ್ಗಳ ಸ್ವರೂಪವೂ ಹೀಗೆಯೇ ಇರುತ್ತದೆ. ಪ್ರಾರ್ಥನೆಯಿಂದ ಆರಂಭವಾಗಿ ವಂದನಾರ್ಪಣೆ, ರಾಷ್ಟ್ರಗೀತೆಗಳೊಂದಿಗೆ ಮುಕ್ತಾಯವಾಗುತ್ತದೆ. ಯಾವದೇ ರಿಚುವಲ್ ಸಂದರ್ಭಕ್ಕೂ ಕೂಡ ವಾನ್ ಗೆನೆಪ್ ಹೇಳುವಂತೆ ರಿಚುವಲ್ ಸೆಪರೇಶನ್, ಲಿಮಿನಲ್ ಪಿರಿಯಡ್ – ಅಂದರೆ ಘಟನೆಗಳು ನಡೆಯುತ್ತಿರುವುದು ಮತ್ತು ಕೊನೆಯದಾಗಿ ರಿ-ಅಗ್ನಿಗೇಶನ್ ಈ ಮೂರು ಹಂತಗಳಿರುತ್ತವೆ. ಜನಪದ ಕಥೆಯೂ ಹೀಗೆಯೇ ಇರುತ್ತವೆ. ಒಂದಾನೊಂದು ಕಾಲದಲ್ಲಿ …ಎಂದು ಆರಂಭವಾಗುವ ಕಥೆಯೊಳಗೆ ನಾವೂ ಸೇರಿಕೊಂಡು ಅದರೊಳಗಿನ ಭ್ರಾಮಕ ಜಗತ್ತಿನಲ್ಲಿ ನಾವೂ ಒಂದಾಗಿ ಬಾಳಿ ಕೊನೆಗೆ ‘ಅವರಲ್ಲಿ, ನಾವಿಲ್ಲಿ’ ಎಂದು ಅದರಿಂದ ಬಿಡುಗಡೆ ಹೊಂದಿ ಬರುತ್ತೇವೆ. ಆದ್ದರಿಂದ ಅದಕ್ಕೂ ಈ ರಚನೆ ಇದೆ. ಈ ರಿಚುವಲ್ ಸ್ಟ್ರಕ್ಚರ್, ರಂಗಭೂಮಿಗೂ, ಆವೇಶ ಸಂಪ್ರದಾಯಕ್ಕೂ ಬಹಳಷ್ಟು ಸಾರ್ವಜನಿಕ ಪ್ರದರ್ಶನಗಳಿಗೂ ಅನ್ವಯಿಸುತ್ತದೆ. ವಾನ್ ಗೆನಪ್ ಹೇಳುವಂತೆ ಎಲ್ಲೆಲ್ಲಿ ಆಚರಣೆಗಳಿವೆಯೋ ಅಲ್ಲೆಲ್ಲಾ ಈ ಮೂರು ಹಂತಗಳು ಇದ್ದೇ ಇರುತ್ತವೆ.
ಜಾನಪದ ಅಧ್ಯಯನದಲ್ಲಿ ಅನೇಕ ಸಿದ್ಧಾಂತಗಳಿವೆ.ಯಾವುದಾದರೂ ಒಂದು ಸಿದ್ಧಾಂತದಿಂದಲೇ ಜಾನಪದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?
ಅದೆಲ್ಲಾ ನೀವು ಸಿದ್ಧಾಂತ ಎಂದರೆ ಏನು ಎಂದು ಅರ್ಥಮಾಡಿಕೊಂಡಿದ್ದೀರೋ ಅದನ್ನು ಅವಲಂಬಿಸಿದೆ. ನಿಮಗೇ ಗೊತ್ತಿರುವಂತೆ ಮನೋವಿಶ್ಲೇಷಣಾತ್ಮಕ ಸಿದ್ಧಾಂತ, ಮಾರ್ಕ್ಸಿಸ್ಟ್ ಸಿದ್ಧಾಂತ ಮೊದಲಾದವು ನಿಮ್ಮ ಐಡಿಯಾಲಾಜಿಕಲ್ ಬಯಾಸ್ ಅನ್ನು ಅವಲಂಬಿಸಿರುತ್ತದೆ. ನನ್ನಂತಹ ಕೆಲವರಿಗೆ ಎಷ್ಟು ಹೆಚ್ಚು ವಿಧಾನಗಳನ್ನು ಬಳಸಲು ಸಾಧ್ಯವೋ ಅಷ್ಟರಲ್ಲಿಯೂ ಆಸಕ್ತಿ ಇರುತ್ತದೆ. ನೀವು ನನ್ನನ್ನು ಎಕ್ಲೆಕ್ಟಿಕ್ ಅಥವಾ ಮಿಸಲೇನಿಯಸ್ ಅಥವಾ ಇನ್ನೇನು ಬೇಕೋ ಹಾಗೆ ಕರೆಯಬಹುದು. ಆದರೆ ನಾನು ನನಗೆ ಇಷ್ಟವಾದರೆ ನನಗೆ ಒಳನೋಟ (ಇನ್‌ಸೈಟ್) ಕೊಡುತ್ತದೆಯೋ ಅದು ಕವನವಾಗಲಿ, ಗಾದೆಯಾಗಲಿ, ಅಥವಾ ಜಾನಪದದ ಒಂದು ಅಂಶವಾಗಲಿ ಅದನ್ನು ನಾನು ಸ್ವೀಕರಿಸುತ್ತೇನೆ ಮತ್ತು ಬಳಸುತ್ತೇನೆ.
ನಾನು ನಿಮ್ಮ ಇಂಡಿಯನ್ ಈಡಿಪಸ್ ಲೇಖನವನ್ನು ಕುರಿತು ಹೇಳುತ್ತಿದ್ದೇನೆ…
ನನಗೆ ಮನೋವಿಶ್ಲೇಷಣೆಯಲ್ಲಿ ಆಸಕ್ತಿ ಇದೆ. ಏಕೆಂದರೆ ಜನಪದ ಕಥೆಗಳ ವಿಶ್ಲೇಷಣೆಯಲ್ಲಿ ಅದು ಹೆಚ್ಚು ಉಪಯುಕ್ತವಾಗುತ್ತದೆ. ಭಾರತೀಯ ಜನಪದ ಕಥೆಗಳು ತಂದೆ ಮಗಳನ್ನು ತಾಯಿ ಮಗನನ್ನು ಅಕ್ಕ ತಂಗಿಯರನ್ನು ಕುರಿತ ಕಥೆಗಳಾಗಿವೆ. ಕುಟುಂಬದೊಳಗಣ ಸಂಬಂಧಗಳು ಮನೋವಿಶ್ಲೇಷಣೆಯ ಕೇಂದ್ರದಲ್ಲಿವೆ. ಅದರಿಂದಾಗಿಯೇ ಮನೋವಿಶ್ಲೇಷಣೆ ನನಗೆ ಹೆಚ್ಚು ಸಮಂಜಸವೆನಿಸಿದೆ. ಫ್ರಾಯ್ಡ್ ಹೇಳುವ ಎಲ್ಲವನ್ನೂ ನಾನು ಒಪ್ಪಿಕೊಳ್ಳುತ್ತೇನೆ ಎಂದಲ್ಲ. ಶೈಶವಾವಸ್ಥೆಗೆ ನಮ್ಮ ಅನೇಕ ಕ್ರಿಯೆಗಳಿಗಿರುವ ಅಪ್ರಜ್ಞೆಯ ಪ್ರಭಾವ ಹಾಗೂ ಮನಸ್ಸನ್ನು ಹಾಗೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೌಟುಂಬಿಕ ಸಂಬಂಧಗಳ ಮಹತ್ವ – ಈ ಮೂರು ಅಂಶಗಳ ಪ್ರಭಾವಗಳನ್ನು ಜನಪದ ಕಥೆಗಳಲ್ಲಿ ಸದಾ ಕಾಣಲು ಸಾಧ್ಯ ಎಂದು ತೋರಿಸಿದ್ದೇನೆ.
ನೀವು ಅಂತರರಾಷ್ಟ್ರೀಯ ಜಾನಪದ ಅಧ್ಯಯನದ ಬಗ್ಗೆ ಆಂಧ್ರ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬೋಧಿಸಿದ್ದೀರಿ. ಈ ಸಂಬಂಧವಾಗಿ ನಿಮ್ಮ ಅನಿಸಿಕೆ ಅನುಭವಗಳೇನು?
ಅದನ್ನು ಹೇಗೆ ಹೇಳಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಏಕೆಂದರೆ ಅವು ಬೇರೆ ಬೇರೆ ಜನಗಳ ಗುಂಪುಗಳು. ಈ ಪ್ರತಿಭಾಷೆಯಲ್ಲೂ ಮಾಡತಕ್ಕ ಕೆಲಸಗಳಿವೆ ಮತ್ತು ಇದುವರೆಗೆ ನಾವು ಹೊಂದಿರದಿದ್ದ ಈ ನಾಲ್ಕು ಪ್ರಮುಖ ದ್ರಾವಿಡ ಭಾಷೆಗಳೊಳಗಿನ ಸಂಬಂಧವಾಗಲೀ, ಅದರಲ್ಲಿ ಕೆಲಸ ಮಾಡುತ್ತಿದ್ದವರ ನಡುವೆಯೇ ಆಗಲಿ ಇದುವರೆಗೂ ಇರದಿದ್ದ ಸಂಬಂಧ ಇಂದು ಇರುವುದನ್ನು ತಿಳಿಯಬಹುದಾಗಿದೆ. ಏಕೆಂದರೆ ಈ ಭಾಷೆಗಳ ನಡುವೆ ಬಹಳಷ್ಟು ಸಾಮ್ಯತೆಗಳಿವೆ ಹಾಗೂ ಅವು ಒಂದರಿಂದ ಮತ್ತೊಂದು ಕಲಿಯುವಂತಹದು ಬಹಳಷ್ಟಿದೆ. ಕನ್ನಡ – ಮಲೆಯಾಳಂ, ಕನ್ನಡ – ತಮಿಳು ಹೀಗೆ ಈ ಭಾಷೆಗಳ ಸಾಂಸ್ಕೃತಿಕ ಸಮೂಹಗಳಲ್ಲಿನ ಸಮಾನ ಅಂಶಗಳು, ವೈರುಧ್ಯಗಳು ಇತ್ಯಾದಿ ಅಂಶಗಳು ಒಂದರಿಂದ ಮತ್ತೊಂದಕ್ಕೆ ಸುಲಭವಾಗಿ ಸಾಗಿ ಬರುವಂತಹವು. ಅವು ಸಾಂಸ್ಕೃತಿಕವಾಗಿ ಶ್ರೀಮಂತವಾದವು. ಈ ರೀತಿಯ ನೆಟ್‌ವರ್ಕ್ ಕೇವಲ ತಮಿಳು ಜಾನಪದ ವಿದ್ವಾಂಸರಲ್ಲಾಗಲೀ, ಕನ್ನಡ ಜಾನಪದ ವಿದ್ವಾಂಸರಲ್ಲಾಗಲೀ ಮಾತ್ರ ಇರುವಂತಹುದಲ್ಲ. ಈ ಸೀಮಾ ರೇಖೆಗಳ ನಡುವೆ ಸೇತುವೆಗಳನ್ನು ಹುಡುಕಲು ನಾನು ನನ್ನ ಸ್ವಂತ ಜೀವನದಲ್ಲಿ ಕೂಡ ಪ್ರಯತ್ನ ಪಡುತ್ತಿದ್ದೇನೆ. ಇಲ್ಲಿ ಗಮನಿಸುವುದು ಸಾಮ್ಯತೆ, ವೈರುದ್ಧ ಸಮಾಂತರತೆ ಇತ್ಯಾದಿ. ಆದರೆ ಕೇವಲ ಭಿನ್ನತೆ (ಕಾಂಟ್ರಾಸ್ಟ್) ಮತ್ತು ಸಾಮ್ಯತೆ (ಸಿಮಿಲಾರಿಟೀಸ್)ಗಳನ್ನು ಮಾತ್ರವೇ ಅಭ್ಯಸಿಸಿದರೆ ಸಾಲದು. ಇದುವರೆಗೂ ವಿದ್ವಾಂಸರು ಅಧ್ಯಯನ ನಡೆಸಿದ್ದು ಈ ಸಾಮ್ಯತೆಗಳನ್ನೇ. ಏಕೆಂದರೆ ಇದು ವಿಶ್ವವ್ಯಾಪಕ ಗುಣಗಳ ಕಡೆಗೆ ಒಯ್ಯುವಂತಹದು. ಆದರೆ ಇನ್ನೂ ಬೇರೆ ದಿಕ್ಕುಗಳಲ್ಲಿಯೂ ನಮಗೆ ಕೆಲಸವಿದೆ. ಪ್ರತಿಯೊಂದರ ವಿಶೇಷತೆ ಗುರುತಿಸಲು ಬೇರೆ ದಿಕ್ಕುಗಳಲ್ಲಿ ಪ್ರತಿಯೊಂದರ ಭಿನ್ನತೆಗಳನ್ನು ಗುರುತಿಸಬೇಕು. ಏಕೆಂದರೆ ಅವೆಲ್ಲವುಗಳ ರಚನೆ ಒಂದೇ ರೀತಿ ಕಂಡರೂ ಅವುಗಳ ಕೆಲಸ ಕಾರ್ಯಗಳು ಭಿನ್ನವಾಗುತ್ತಿರುತ್ತವೆ. ಹಾಗೂ ಅದನ್ನು ಮೊದಲೇ ಊಹಿಸುವುದೂ ಸಾಧ್ಯವಿಲ್ಲ.
ದಕ್ಷಿಣ ಭಾರತದ ಜಾನಪದ ಅಧ್ಯಯನದ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ನಿಮ್ಮ ಸಲಹೆಗಳೇನು?
ಮಾಡಬೇಕಾದ ಕೆಲಸಗಳು ಅಲ್ಲಿ ಬಹಳ ಇವೆ. ಅವುಗಳಲ್ಲೊಂದು ನೆಟ್‌ವರ್ಕ್ ಆಫ್ ವರ್ಕರ್ಸ್ ಮತ್ತು ಇನ್ನೊಂದು ಅಸೋಸಿಯೇಶನ್. ಇದು ಪ್ರತಿ ಭಾಷೆಯ ಒಳಗೂ ಹಾಗೂ ಪ್ರತಿ ಭಾಷೆಗಳ ನಡುವೆ, ಹೀಗೆ ಎರಡೂ ಕಡೆಯೂ ಇರಬೇಕು. ಅಲ್ಲೆಲ್ಲಾ ವಿಫುಲವಾದ ಸಂಪರ್ಕ ಸಾಧ್ಯವಾಗಬೇಕು. ಕ್ಷೇತ್ರಕಾರ್ಯ ತುಂಬಾ ಆಗಬೇಕಾಗಿದೆ. ಅದು ಆಗುತ್ತದೆ ಎಂದು ನನಗನ್ನಿಸುತ್ತದೆ. ಆದರೆ ನಡೆದ ಕಾರ್ಯ ಬೇರೆಯವರಿಗೆ ತಿಳಿಯುವಂತಾಗಬೇಕು. ಬೇರೆ ಭಾಷೆಗಳವರಿಗೂ ಅದು ಗೊತ್ತಾಗಬೇಕು. ಭಾರತದ ವಿವಿಧ ಭಾಷಾ ವಿದ್ವಾಂಸರಿಗೂ ಅದು ನಿಧಾನವಾಗಿಯಾದರೂ ತಲುಪಬೇಕು. ನಮಗೆ ಜನಪದ ಕಥೆಗಳ ಬಗ್ಗೆ ನಮ್ಮದೇ ಆದ ಟೈಪ್ ಇಂಡೆಕ್ಸ್ ಬೇಕೆಂಬುದೇನೋ ನಿಜ. ಇದು ಪ್ರತಿ ಭಾಷೆಗೂ ಬೇಕು. ಹಾಗೆಯೇ ಈ ಎಲ್ಲಾ ಭಾಷೆಗಳನ್ನು ಸೇರಿಸಿಕೊಂಡು ಎಲ್ಲಕ್ಕೂ ಅನ್ವಯವಾಗುವಂತಹದೊಂದು ಟೈಪ್ ಇಂಡೆಕ್ಸ್ ಕೊಡಬೇಕು. ಅಂತಿಮವಾಗಿ ಅದನ್ನು ಇಂಗ್ಲೀಷಿಗೆ ತರ್ಜಮೆಗೊಳಿಸಿ ಬಿಡುವುದರಿಂದ ಎಲ್ಲಾ ಭಾಷೆಗಳವರಿಗೂ ಅದರ ಉಪಯೋಗ ಸಾಧ್ಯವಾಗುತ್ತದೆ. ಇದು ನಮಗೀಗ ಆಗಬೇಕಾಗಿರುವ ಕೆಲಸಗಳಲ್ಲಿ ಒಂದು. ಅಲ್ಲದೆ… ಮತ್ತೆ ಇನ್ನೇನು? ಕಾಲಕಾಲಕ್ಕೆ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನೂ ನಮ್ಮ ಗಮನಕ್ಕೆ ತರುವಂತಹ ಜಾನಪದ ಸಂಸ್ಥೆಗಳು ಬೆಳೆಯುತ್ತವೆ. ಇನ್ನು ಮುಂದೆ ಅವು ಬೆಳೆಯಬೇಕು. ಜಾನಪದ ಸಂಸ್ಥೆಗಳು ಜಾನಪದ ಕ್ಯಾಂಪ್ ಗಳು ಇದ್ದರೆ ಅವು ನಮ್ಮನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುತ್ತವೆ. ವಿವಿಧ ವಿದ್ವಾಂಸರೊಂದಿಗೆ ಸಂಪರ್ಕವನ್ನು ಒದಗಿಸುತ್ತವೆ. ನಮ್ಮಲ್ಲಿ ಒಬ್ಬರು ವಿದೇಶಕ್ಕೆ ಹೋಗುವ ಬದಲು ವಿದೇಶೀಯ ವಿದ್ವಾಂಸರೊಬ್ಬರನ್ನು ಇಲ್ಲಿಗೆ ಬರಮಾಡಿಕೊಂಡರೆ ನಮ್ಮಲ್ಲಿನ ಇಪ್ಪತ್ತು ಜನ ಅವರನ್ನು ಭೇಟಿ ಮಾಡಬಹುದು. ಅವರು ನಮ್ಮ ದೇಶದ ಎಲ್ಲಾ ಕಡೆ ಭೇಟಿ ನೀಡಬಹುದು. ಅವರ ಇಂತಹ ಒಂದು ಭೇಟಿ ಬಹಳಷ್ಟು ಪ್ರಭಾವಪೂರ್ಣವಾಗಿರಬಲ್ಲುದು. ಇದು ಒಂದು ಸಾಧ್ಯವಾಗಬಹುದಾದ ಅಂಶ. ಅಂತಹ ಪ್ರವಾಸಕ್ಕೆ ಲೈಬ್ರರಿಗೆ ಪುಸ್ತಕಗಳನ್ನು ತಗ್ಗಿಸಲಿಕ್ಕೆ ಇತ್ಯಾದಿಗಳಿಗೆ ಹಣದ ಸಹಾಯವು ಒದಗಿ ಬರುತ್ತದೆಂದು ನಂಬಿದ್ದೇನೆ. ಫೋರ್ಡ್ನ ಹಣ ಇನ್ನೂ ಎಷ್ಟು ದಿನಗಳಲ್ಲಿ ಖರ್ಚಾಗುವುದೋ? (ಎಂದರೆ ಬಹಳ ಕಾಲ ಅದರ ಉಪಯೋಗ ಮಾಡಿಕೊಳ್ಳಲು ಸಾಧ್ಯ). ಅಲ್ಲದೆ ಕೆಲವು ಲೋಕಲ್ ಯುನಿವರ್ಸಿಟಿಗಳು ಇಂತಹ ಕೆಲಸಗಳನ್ನು ಮಾಡಲು ಸಾಧ್ಯ. ಅಲ್ಲದೆ ಜಾನಪದ ಶಾಸ್ತ್ರಜ್ಞರು ಹುಮ್ಯಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಅದು ಬಹಳ ಒಳ್ಳೆಯ ಕೆಲಸ. ಜಾನಪದ ಈ ಎರಡೂ ವಿಭಾಗಗಳಿಗೆ ಸೇರಿದ ವಿಷಯವಾಗಿದೆ. ಒಳ್ಳೆಯ ಕ್ಷೇತ್ರಕಾರ್ಯ ಮತ್ತು ಗ್ರಂಥಾಲಯದ ಅಧ್ಯಯನದ ಕಾರ್ಯಗಳಿಂದ ಜಾನಪದವು ಉಳಿದ ಅಧ್ಯಯನ ವಿಷಯಗಳಿಗೂ ಡಿಸಿಪ್ಲಿನ್ ಸಾಕಷ್ಟು ಕೊಡುಗೆ ನೀಡಬಲ್ಲುದು. ಆ ವಿಷಯಗಳೆಂದರೆ ಮಾನವ ವಿಜ್ಞಾನ ಸಾಹಿತ್ಯ ವಿಮರ್ಶೆ, ಜೀನರ್ ಥಿಯರಿ ಇತ್ಯಾದಿ. ಜಾನಪದವು ಈಗಾಗಲೇ ಈ ಕೆಲಸಗಳನ್ನು ಆರಂಭಿಸಿದೆ.
ಭಾರತದಲ್ಲಿ ಜಾನಪದ ವಿದ್ವಾಂಸರಿಗೆ ಉದ್ಯೋಗಾವಕಾಶಗಳು ಬಹಳ ಕಡಿಮೆ. ಅಮರಿಕ ಮತ್ತು ಇತರ ದೇಶಗಳಲ್ಲಿನ ಸಂಸ್ಕೃತಿ ಈ ವಿಷಯಗಳ ಬಗ್ಗೆ ಹೇಗಿದೆ?
ಇದೊಂದು ದೊಡ್ಡ ಸಮಸ್ಯೆಯೇ ನಿಜ. ಅಮೇರಿಕಾದಲ್ಲಿಯೂ ಹೀಗೆಯೇ. ಡಂಡೆಸ್ ನಿಮಗೆ ಹೇಳಿದಂತೆ ಅಲ್ಲಿಯೂ ಜಾನಪದಕ್ಕೆ ಸೇರಿದ ಹಲವಾರು ಕಾರ್ಯಕ್ರಮಗಳೇನೂ ಇರುವುದಿಲ್ಲ. ಅಲ್ಲಿ ನಾಲ್ಕು ಜಾನಪದ ಕಾರ್ಯಕ್ರಮಗಳಿರುತ್ತವೆ. ಅಂದರೆ ನಾವೂ ಅಲ್ಲಿಯಂತೆಯೇ ಇರುವುದರಲ್ಲಿಯೇ ತೃಪ್ತಿ ಪಡಬೇಕಾಗುತ್ತದೆ. ಇತರೆ ವಿಭಾಗಗಳಲ್ಲಿನವರು ಜಾನಪದಕ್ಕೆ ಸಂಬಂಧಿಸಿದವುಗಳ ಅಧ್ಯಯನ ಮಾಡಬೇಕು. ಹಾಗೆಯೇ ಜಾನಪದವು ಇತರೆ ವಿಷಯಗಳ ಒಂದು ಭಾಗವಾಗಬೇಕು. ಆಗ ನೀವು ಮನೋವಿಜ್ಞಾನಿಯಾಗಿದ್ದರೂ ಜಾನಪದವನ್ನು ಬೋಧಿಸಬಹುದು. ಈಗಿನಂತೆ ನೀವು ಕನ್ನಡ ವಿಭಾಗದಲ್ಲಿದ್ದೂ ಜಾನಪದವನ್ನು ಬೋಧಿಸಬಹುದು. ಈ ರೀತಿಯ ವ್ಯವಸ್ಥೆ ಸಾಧ್ಯ ಅಮೆರಿಕಾದಲ್ಲಿ ಹೀಗೆಯೇ ಆಗುತ್ತಿದೆ. ಮಾನವ ವಿಜ್ಞಾನ ಮತ್ತು ಇಂಗ್ಲೀಷ್ ವಿಭಾಗಗಳಲ್ಲಿ ಹಾಗೂ ಕನ್ನಡ ವಿಭಾಗಗಳಲ್ಲಿ ಜಾನಪದವನ್ನು ಸೇರಿಸಲಾಗಿದೆ. ಇದು ಜಾನಪದ ಬೆಳೆಯಲು ಒಂದು ರೀತಿ ಸಹಕಾರಿಯಾಗುತ್ತದೆ ಎಂದೆನಿಸುತ್ತದೆ. ಅತಿ ಕಡಿಮೆ ಸಂಖ್ಯೆಯಲ್ಲಿ ಪೂರ್ಣ ಜಾನಪದ ಅಧ್ಯಯನದ ವಿಭಾಗಗಳಿವೆ. ಎರಡು ವಿಭಾಗಗಳಲ್ಲಿ ಕೆಲಸ ಮಾಡುವ ಜನರಿರುವ ಅನೇಕ ವಿಭಾಗಗಳಿವೆ. ಉದಾಹರಣೆಗೆ ನಾನು ಜಾನಪದ ವಿಭಾಗದಲ್ಲಿ ಕೆಲಸ ಮಾಡುತ್ತಿಲ್ಲ. ನಾನು ದಕ್ಷಿಣ ಏಷ್ಯಾ ವಿಭಾಗದಲ್ಲಿದ್ದೇನೆ. ನಾನು ಅಂತ್ರೋಪಾಲಾಜಿ ಮತ್ತು ಲಿಂಗ್ವಿಸ್ಟಿಕ್ಸ್ಗೆ ಸಂಬಂಧಪಟ್ಟವನು. ಆದರೆ ಯಾವಾಗ ಜಾನಪದ ತರಗತಿಗಳನ್ನು ಅಥವಾ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕೆನ್ನಿಸುವುದೋ ಆಗ ಅಂತ್ರೋಪಾಲಾಜಿ ಡಿಪಾರ್ಟ್‌ಮೆಂಟ್‌ನಲ್ಲಿ ತೆಗೆದುಕೊಳ್ಳುತ್ತೇನೆ. ಈಗ ನಾನು ಹೇಳುವುದು ಈ ಸಮಸ್ಯೆಗೆ ಒಂದು ಪರಿಹಾರ ಅಷ್ಟೆ. ನೀವು ಪೂರ್ಣ ಪ್ರಮಾಣದ ಜಾನಪದ ವಿದ್ವಾಂಸರಾಗಿಲ್ಲದೇ ಇರಬಹುದು. ಅಕಸ್ಮಾತ್ ಅಂತಹ ನೂರಾರು ಮಂದಿ ಇದ್ದರೆ ಅವರಿಗೆ ಕೆಲಸವೂ ಇರುತ್ತಿರಲಿಲ್ಲ. ಭಾರತದಂತಹ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಆಹಾರ ಪದ್ದತಿಯ, ಆರೋಗ್ಯ ಸುಧಾರಣೆಯ ಪದ್ಧತಿಗಳ ಬದಲಾವಣೆ ಬಯಸುವವರು ಜಾನಪದವನ್ನು ಅಭ್ಯಾಸ ಮಾಡಬೇಕು. ಆದರೆ ಇದೂ ಕೂಡ ಪೂರ್ಣಕಾಲಿಕ ಜಾನಪದ ವಿದ್ವಾಂಸರಿಗೆ ಸೂಕ್ತ ಕೆಲಸವಾಗುವುದಿಲ್ಲ. ಕೆಲವರು ಅಪ್ಲೈಡ್ ಫೋಕ್ಲೋರಿಸ್ಟ್ – ಈ ಆನ್ವಯಿಕ ಜಾನಪದದ ಅಪಾಯವೆಂದರೆ ಸರ್ಕಾರವೇ ಕೆಲವು ಯೋಜನೆಗಳನ್ನು ಪ್ರಸ್ತುತಪಡಿಸಬಹುದು. ಇಲ್ಲಿ ಜಾನಪದ ವಿದ್ವಾಂಸರು ಹೆಚ್ಚು ಎಚ್ಚರದಿಂದ ಇರಬೇಕು. ಅವರು ಜಾನಪದ ಕಥೆಯನ್ನು ತೆಗೆದುಕೊಂಡು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಿಬಿಡಬಹುದು. ಅದನ್ನು ಕೆಲವು ಬಾರಿ ಒಳ್ಳೆಯದಕ್ಕೆ ಬಳಸುತ್ತಾರೆ. ನಾನು ಅಂತಹ ಅಪ್ಲೈಡ್ ಫೋಕ್ಲೋರಿಸ್ಟ್ ಒಬ್ಬರ ಜೊತೆಗೆ ಮಾತನಾಡುತ್ತಿದ್ದೆ. ಅವರಿಗೆ ನಾನು ಸಲಹೆ ನೀಡುವಾಗ ಹೇಳಿದ್ದೇನೆಂದರೆ ನೀವು ಒಂದು ಸಮೂಹದ ಅಥವಾ ಪಂಗಡದ ಜನರ ಜಾನಪದವನ್ನು ಬಳಸಿಕೊಂಡಲ್ಲಿ ಅದೇ ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ. ಏಕೆಂದರೆ ಅವರಿಗೆ ತಮ್ಮ ಹಾಡನ್ನೋ, ಕಥೆಯನ್ನೋ, ಜೀವನಶೈಲಿಯ ಚಿತ್ರಣವನ್ನೋ ಪಟ್ಟಣದ ಕಲಿತ ಜನ ಬಳಸಿಕೊಂಡರು ಎಂದು ಸಂತೋಷವಾಗುತ್ತದೆ. ನೀವು ಕೇವಲ ವಿಧಿ ಅದೃಷ್ಟ ಇವುಗಳಿಗೆ ಸಂಬಂಧಿಸಿದ ಹಾಡು, ಕಥೆಗಳನ್ನೇ ಬಳಸಬೇಕೆಂದೇನೂ ಇಲ್ಲ. ಪರಿಸರ ಶಿಕ್ಷಣದ ಬಗ್ಗೆ ಕಥೆಗಳಿವೆ. ಅವುಗಳಲ್ಲಿ ಸೂಕ್ತವಾದುದನ್ನು ಆಯ್ದುಕೊಳ್ಳುವುದು ಬಹು ಮುಖ್ಯ. ಅದಕ್ಕಾಗಿ ಹೊಸ ಕಥೆಯನ್ನು ಹೊಸೆಯಬೇಕಾದ ಅಗತ್ಯವಿಲ್ಲ. ಸ್ತ್ರೀಯೊಬ್ಬಳು ತನ್ನೆಲ್ಲ ಕಷ್ಟಗಳಿಗೆ ಪರಿಹಾರ ಕಂಡುಕೊಂಡ ಬಗ್ಗೆ ಕಥೆಯಿದೆ. ಬಹಳಷ್ಟು ಸ್ತ್ರೀವಾದಿ ಕಥೆಗಳು ಪ್ರಸ್ತುತ ಸ್ಥಿತಿಯನ್ನು ವಿಮರ್ಶಿಸುತ್ತವೆ. ನೀವು ಬಯಸಿದಲ್ಲಿ ಹೆಚ್ಚು ಬದಲಾವಣೆಗೊಳಪಡಿಸದೆ ಜಾನಪದದಲ್ಲಿ ಇದ್ದುದನ್ನು ಇದ್ದಂತೆಯೇ ಬಳಸಲು ಸಾಧ್ಯವಿದೆ. ಈ ಮೂಲಕ ಜನಕ್ಕೆ ಸಂದೇಶ ನೀಡಲು ಸಾಧ್ಯ. ಈ ದಿಕ್ಕಿನಲ್ಲಿ ವಿದ್ವಾಂಸರು ಹೆಚ್ಚು ಚಿಂತನೆ ನಡೆಸಿಲ್ಲ. ಏಕೆಂದರೆ ಜಾನಪದವೆಲ್ಲಾ ಕಂಜರ್ವೇಟಿವ್ ಎಂಬ ಒಂದೇ ರೀತಿಯ ಆಲೋಚನಾ ಕ್ರಮ ಪ್ರಚಲಿತವಾಗಿದೆ. ಅದು ನಿಜವಲ್ಲ. ಜಾನಪದ ನಿಜಕ್ಕೂ ಬಂಡಾಯದ ಧ್ವನಿ.
… ಟೆಲಿವಿಜನ್ ಅಥವಾ ವಿಡಿಯೋಗಳಂತಹ ವಿದ್ಯುನ್ಮಾನ ಮಾಧ್ಯಮಗಳು ಇಂಥ ಕಥೆ ಹೇಳುವ ಪರಂಪರೆಯನ್ನು ಕೊನೆಗಾಣಿಸುತ್ತವೆಯೇ? ಈ ಪ್ರಶ್ನೆಗೆ ಉತ್ತರಿಸುವುದು ತುಂಬ ಕಷ್ಟ. ನಗರಗಳಲ್ಲಿನ ಬಹುತೇಕ ಜನ ಇಂಥ ಕಲೆ ಇನ್ನೂ ಜೀವಂತವಾಗಿರುವ ವಾಸ್ತವವನ್ನು ಅರಿತುಕೊಂಡಿಲ್ಲ. ಅತ್ಯಂತ ಆಧುನಿಕ ನಗರಗಳಾದ ಮುಂಬೈ, ಮದ್ರಾಸ್ ಮತ್ತು ಕಲ್ಕತ್ತೆಗಳಲ್ಲಿ ರಾಮಾನುಜನ್ ಹೇಳುವಂತೆ ಜಾನಪದ ಕೇವಲ ಉಪನಗರಗಳಷ್ಟು ದೂರದಲ್ಲಿದೆ. ಚಿಗದೊಡಪ್ಪನ ಮಗ ಇಲ್ಲವೆ ಅಜ್ಜಿಯ ಸಂಬಂಧರಷ್ಟು ಮಾತ್ರ ದೂರವಾಗಿದೆ ! ಇಂಥ ಕಥಾ ಪರಂಪರೆಯು ದರಿಗಡದಂತೆ ಕಥೆ ಹೇಳುತ್ತಿರುವ ರಾಮಾನುಜನ್ರಿಗೆ ನಾವು ಕೃತಜ್ಞರಾಗಿರಬೇಕು. ಈ ಕಥೆಗಳು ಕಲೆಯಾಗಿ ಹೋಗದಂತೆ ಉಳಿಸಿದ್ದಕ್ಕಾಗಿ ಮಾತ್ರ ರಾಮಾನುಜನ್ ಅವರನ್ನು ಸ್ಮರಿಸುವುದಲ್ಲ .ಈ ಕಥೆಗಳನ್ನು ಸುಂದರವಾಗಿ ಮಾತೃವಾತ್ಸಲ್ಯ ಮತ್ತು ತಿಳುವಳಿಕೆಗಳೊಂದಿಗೆ ಮುಂದಿನವರಿಗೆ ದಾಟಿಸುತ್ತಿರುವ ಮೂಲಕ ಕಥೆ ಹೇಳುವ ಸಂಪ್ರದಾಯವನ್ನು ಮುಂದುವರಿಸುತ್ತಿರುವುದಕ್ಕಾಗಿ ರಾಮಾನುಜನ್ ರನ್ನು ಸ್ಮರಿಸಬೇಕು.
– ಗಿರೀಶ ಕಾರ್ನಾಡ್( ‘ಫೋಕ್ ಟೇಲ್ಸ್ ಫ್ರಮ್ ಇಂಡಿಯಾ ‘ ಬಗ್ಗೆ ಬರೆಯುತ್ತಾ)