`ಶ್ರೀ ರಾಮನವಮಿಯ ದಿವಸ’ : ಶ್ರೀ ರಾಮ ಮತ್ತು ಎ.ಕೆ. ರಾಮಾನುಜನ್‍ರನ್ನು ನೆನೆಯುತ್ತಾ…

ಇಂದು ರಾಮನವಮಿ. ಮುಂದಿನ ಅವಧಿಗೆ ದೇಶದ ಚುಕ್ಕಾಣಿ ಹಿಡಿಯಲು ನಡೆಯುವ ಚುನಾವಣೆಗೆ ಸುಮಾರು ಒಂದು ವರ್ಷವಿರುವಾಗ ಪ್ರಮುಖ ರಾಜಕೀಯ ಪಕ್ಷವೊಂದರ ರಾಮರಾಜ್ಯರಥ ರಾಮೇಶ್ವರದತ್ತ ಹೊರಟಿದೆ. ಚುನಾವಣೆಯ ಈ ಸೀಸನ್ನಿನಲ್ಲಿ ನಮಗೆ ರಾಮನನ್ನು ಮತ್ತೆ ಮತ್ತೆ ನೆನಪಿಸಲಾಗುತ್ತಿದೆ. ಆದರೆ ಯಾವ ರಾಮನನ್ನು?.

ತಮ್ಮ ಹೆಸರಿನಲ್ಲೇ ರಾಮನನ್ನಿಟ್ಟುಕೊಂಡಿರುವ ರಾಮಾನುಜನ್ ಬರೆದ ಮುನ್ನೂರು ರಾಮಾಯಣ ಎಂಬ ಪುಸ್ತಕದ ಮೇಲೆ ಜಿ. ರಾಜಶೇಖರ್ ಬರೆದಿರುವ ಈ ಲೇಖನದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಹೇಳುವ ಮಾತೊಂದು ಬರುತ್ತದೆ. ಅದು ಹೀಗಿದೆ:
“ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸಿ ಧ್ವಂಸಗೊಂಡಿತು. ಆ ಕುರಿತು ಮಾತನಾಡುತ್ತ ನಾಯನಾರ್, ‘ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಸ್ಥಳವೇ ರಾಮಜನ್ಮ ಭೂಮಿಯೋ? ನಾನು ಇದುವರೆಗೆ ರಾಮ ಹುಟ್ಟಿದ್ದು ನಮ್ಮ ಕೇರಳದಲ್ಲೇ ಎಂದು ಭಾವಿಸಿದ್ದೆ’ ಎಂದರಂತೆ” . ನಾಯನಾರ್ ಎತ್ತಿದ ಪ್ರಶ್ನೆ ನಮ್ಮೆಲ್ಲರದ್ದೂ ಆಗಿದೆ. ನಮ್ಮೆಲ್ಲರ ಊರುಗಳಲ್ಲೂ ರಾಮನಿದ್ದಾನೆ. ಇಂದು ರಾಮನವಮಿಯ ದಿವಸ ನಮ್ಮ ಮನೆ ಮನಗಳಲ್ಲಿ ರಾಮನ ಹುಟ್ಟುಹಬ್ಬ ಆಚರಿಸುತ್ತೇವೆ. ಹಾಗಾದರೆ ರಾಮೇಶ್ವರದತ್ತ ಹೊರಟ ರಾಮನ್ಯಾರು?

ಎಂಥ ಸಂಕೀರ್ಣ ವಿಚಾರಗಳನ್ನೂ ಸರಳವಾಗಿ ದಾಟಿಸುವ ಹಿರಿಯ ರಾಜಶೇಖರರು ದೇಶ-ಕಾಲ-ಪುರಾಣ-ರಾಜಕಾರಣಗಳನ್ನೆಲ್ಲ ಒಂದೇ ಹೂಮಾಲೆಯಲ್ಲಿ ಪೋಣಿಸಿ ಈ ರಾಮನವಮಿಯಂದು ರಾಮಾನುಜನ್ ರಿಗೆ ನುಡಿನಮನವರ್ಪಿಸಿದ್ದಾರೆ. ಪಾನಕ ,ಕೋಸಂಬರಿಯ ಜೊತೆಗೆ ಈ ಸಕಾಲಿಕ ಲೇಖನವು ನಿಮ್ಮ ರಾಮನವಮಿಯಯನ್ನು ಸಂಪನ್ನವಾಗಿಸಲಿ.

`ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪರೇಖೆ?’

ಕವಿ ಗೋಪಾಲ ಕೃಷ್ಣ ಅಡಿಗರ ಶ್ರೇಷ್ಠ ಕವಿತೆಗಳಲ್ಲಿ ಒಂದಾಗಿರುವ `ಶ್ರೀ ರಾಮನವಮಿಯ ದಿವಸ’ ಕೊನೆಗೊಳ್ಳುವುದು ಮೇಲೆ ಉದ್ಗೃತವಾದ ಪ್ರಶ್ನೆಯೊಡನೆ. ಎ.ಕೆ. ರಾಮನುಜನ್‍ರ ಲೋಕಖ್ಯಾತ ಪ್ರಬಂಧ `ಮುನ್ನೂರು ರಾಮಾಯಣಗಳು’ – ಶುರುವಾಗುವುದು ಅಡಿಗರ ಈ ಪ್ರಶ್ನೆಯನ್ನೇ ಪ್ರತಿಧ್ವನಿಸುವಂತಹ ಮತ್ತೊಂದು ಪ್ರಶ್ನೆಯಿಂದ. `ರಾಮಾಯಣಗಳೆಷ್ಟು?’ ಮುನ್ನೂರೆ? ಮೂರು ಸಾವಿರವೆ? [ಎ.ಕೆ. ರಾಮಾನುಜನ್ ಅವರ ಆಯ್ದ ಬರಹಗಳು – ಅಕ್ಷರ ಪ್ರಕಾಶನ, ಹೆಗ್ಗೋಡು 2009. ಈ ಪ್ರಬಂಧದ ಅನುವಾದ ಮಹಾಬಲೇಶ್ವರರಾವ್] ಸಾವಿರಾರು ವರ್ಷಗಳಿಂದ ವಿವಿಧ ದೇಶಗಳ ಭಾಷೆ ಮತ್ತು ಜನರ ಆಡು ನುಡಿಯಲ್ಲಿ ಪ್ರಚಲಿತವಾಗಿರುವ ರಾಮಾಯಣದ ಅಸಂಖ್ಯ ಪಠ್ಯಗಳು ಮಾತ್ರವಲ್ಲ, ಶಿಲ್ಪ, ನೃತ್ಯ, ಸಂಗೀತ, ರಂಗಭೂಮಿ ಮುಂತಾದ ಕಲಾಪ್ರಕಾರಗಳಲ್ಲಿ ಬಗೆ ಬಗೆಯ ರೂಪ ರೂಪಾಂತರಗಳನ್ನು ತಳೆದು ನಿಂತಿರುವ ಈ ಕತೆಯ ಪ್ರತಿಯೊಂದು ಅಭಿವ್ಯಕ್ತಿಯೂ ಶ್ರೀರಾಮನ ರೂಪರೇಖೆಯನ್ನು ಕಲ್ಪಿಸಿಕೊಳ್ಳಲು ನಿರಂತರವಾಗಿ ನಡೆದಿರುವ ಯತ್ನ. ಅಡಿಗರ ಕವಿತೆಯ ಕೊನೆಯಲ್ಲಿ ಕವಿ ಕೇಳಿಕೊಳ್ಳುವ ಪ್ರಶ್ನೆ ಮತ್ತು ರಾಮಾನುಜನ್‍ರ ಪ್ರಬಂಧದಲ್ಲಿ ನಮಗೆ ಎದುರಾಗುವ ಪ್ರಶ್ನೆ ಮತ್ತು ಅವರಿಬ್ಬರೂ ಸೂಚಿಸುವ ಉತ್ತರ ಮೂಲತಃ ಒಂದೇ. ರಾಮಾಯಣ ಕತೆಯನ್ನು ಮತ್ತೆ ಮತ್ತೆ ಆಲಿಸುವುದರ ಉದ್ದೇಶವೇನು? `ಮುನ್ನೂರು ರಾಮಾಯಣಗಳು : ಅನುವಾದ ಕುರಿತು ಮೂರು ವಿಚಾರಗಳು- ಐದು ಉದಾಹರಣೆಗಳೊಂದಿಗೆ’ – ಈ ಪ್ರಬಂಧದ ಮೊದಲ ಪಾಠವನ್ನು ರಾಮಾನುಜನ್ ಸಿದ್ಧಪಡಿಸಿದ್ದು 1985ರ ಸುಮಾರಿಗೆ. ತನ್ನ ಪ್ರಬಂಧದಲ್ಲಿ ಅವರು ಕೇಳಿದ ಪ್ರಶ್ನೆಯನ್ನು 2018ರಲ್ಲಿ ಯಾರಾದರೂ ಕೇಳಿದರೆ ಅದರಿಂದ ಹಲವರು ಸಿಟ್ಟಿಗೇಳಬಹುದು; ಅದರ ಬೆನ್ನಿಗೇ ದೊಂಬಿ ಮಾರಾಮಾರಿಗಳು ನಡೆದರೂ ಆಶ್ಚರ್ಯವಿಲ್ಲ. ಭಾರತದ ವಿವಿಧ ಪ್ರಾಂತ್ಯಗಳು ಮತ್ತು ಭಾರತದ ಹೊರಗೂ ವಿವಿಧ ದೇಶಗಳಲ್ಲಿ ಒಟ್ಟು ಎಷ್ಟು ರಾಮಾಯಣಗಳು ಇವೆ ಎಂಬ ಜಿಜ್ಞಾಸೆ ಹಾಗಿರಲಿ, ರಾಮಾನುಜನ್ ಹೇಳುವಂತೆ ಕನ್ನಡ ಮತ್ತು ತೆಲುಗು ಕೇವಲ ಈ ಎರಡು ಭಾಷೆಗಳಲ್ಲೇ ರಾಮಾಯಣದ ಎರಡು ಸಾವಿರಕ್ಕೂ ಹೆಚ್ಚಿನ ಪಠ್ಯಗಳು ಅಸ್ತಿತ್ವದಲ್ಲಿ ಇವೆ. ಹಾಗಾಗಿ ತನ್ನ ಪ್ರಬಂಧ `ಮುನ್ನೂರು ರಾಮಾಯಣಗಳು’ ಎಂಬ ಶೀರ್ಷಿಕೆಯನ್ನು ಪದಶಃ ಅರ್ಥದಲ್ಲಿ ಸ್ವೀಕರಿಸಬಾರದು ಎಂದು ಅವರು ಓದುಗರನ್ನು ವಿನಂತಿಸಿಕೊಳ್ಳುತ್ತಾರೆ! [ಆಯ್ದ ಬರಹಗಳು – ಪುಟ 67]

1992 ರಲ್ಲಿ ನವದೆಹಲಿಯ ಲೋಧಿ ಗಾರ್ಡನ್ಸ್ ನಲ್ಲಿ ಎ. ಕೆ. ರಾಮಾನುಜನ್ | © Ketaki Sheth

ರಾಮಾನುಜನ್ ಪ್ರಕಾರ ಎಲ್ಲ ರಾಮಾಯಣಗಳೂ, ಮೂಲತಃ ಜನ, ತಮ್ಮ ಮಾತಿನಲ್ಲಿ ಹೇಳಿದ ಮತ್ತು ಕೇಳಿ ಕಿವಿಯಿಂದ ಕಿವಿಗೆ ದಾಟಿಸಿದ ಕತೆಗಳು ಅಥವಾ ವಕ್ತವ್ಯಗಳು. ಇಂಗ್ಲಿಷ್‍ನಲ್ಲಿರುವ ತಮ್ಮ ಪ್ರಬಂಧದ ಮೂಲ ಪಾಠದಲ್ಲಿ ಅವರು ಅದನ್ನು ರಾಮಾಯಣದ ವಿವಿಧ `tellings‘ ಎಂದೇ ಕರೆಯುತ್ತಾರೆ. ರಾಮಾಯಣಗಳೆಲ್ಲವೂ ಹಲವು ಪಾಠ, ಪಾಠಾಂತರಗಳನ್ನು ಹಾದು ಬಂದಿರುವಂತಹವು ಎಂಬ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ರಾಮಾನುಜನ್ ತಮಗೆ ಪ್ರಿಯವಾದ `ಆಧ್ಯಾತ್ಮ ರಾಮಾಯಣ’ದ ಒಂದು ಪ್ರಸಂಗವನ್ನು ನಿರೂಪಿಸುತ್ತಾರೆ. [ಆಧ್ಯಾತ್ಮ ರಾಮಾಯಣ ಸಂಸ್ಕೃತದಲ್ಲಿರುವ ಒಂದು ವಕ್ತವ್ಯ ಆ ಕಥಾನಕದ ಪ್ರತಿಯೊಂದು ಸನ್ನಿವೇಶಕ್ಕೂ ಆಧ್ಯಾತ್ಮಿಕ ಅರ್ಥ ಹಚ್ಚುವ ಪ್ರಯತ್ನವನ್ನು ಅಲ್ಲಿ ಗುರುತಿಸಬಹುದು. ಅದು ಕನ್ನಡಕ್ಕೂ ಅನುವಾದಗೊಂಡಿದೆ.] ತಮ್ಮ ತಂದೆ ದಶರಥನ ಮಾತಿಗೆ ಅನುಸಾರವಾಗಿ ರಾಮಲಕ್ಷ್ಮಣರು ವನವಾಸಕ್ಕೆಂದು ಕಾಡಿಗೆ ಹೊರಟು ನಿಂತಿದ್ದಾರೆ; ಅವರ ಜೊತೆ ತಾನೂ ಕಾಡಿಗೆ ಬರುವುದಾಗಿ ಸೀತೆ ಹಠ ಮಾಡುತ್ತಾಳೆ. ರಾಮನಿಗೆ ಅದು ಇಷ್ಟವಿಲ್ಲ. ಅರಮನೆಯ ಸುಖದಲ್ಲಿ ಬೆಳೆದ ಸೀತೆ ವನವಾಸದ ಕಷ್ಟಕಾರ್ಪಣ್ಯಗಳನ್ನು ಸಹಿಸಿಯಾಳೆ? ಎಂಬುದು ಅವನ ಆತಂಕ; ಸೀತೆ ತನ್ನ ಹಠ ಬಿಡುವುದಿಲ್ಲ. ಪತಿಯ ಕಷ್ಟಗಳಲ್ಲಿ ಪತ್ನಿಯಾಗಿ ತಾನು ಸಹ ಪಾಲುಗೊಳ್ಳಬೇಕು, ಅದು ತನ್ನ ಹಕ್ಕು ಎಂಬಂತೆ ಸೀತೆ ವಾದಿಸುತ್ತಾಳೆ. ಅವಳ ಯಾವ ಮಾತಿಗೂ ರಾಮ ಕಿವಿಗೊಡದಾಗ ಸೀತೆ `ಇಷ್ಟರವರೆಗೆ ಅಸಂಖ್ಯ ರಾಮಾಯಣಗಳು ರಚನೆಯಾಗಿವೆ. ರಾಮನು ಜೊತೆ ಸೀತೆ ಕಾಡಿಗೆ ಹೋಗದೇ ಇರುವ ಯಾವುದಾದರೂ ಒಂದು ರಾಮಾಯಣ ಗೊತ್ತಾ ನಿನಗೆ?’ ಎಂದು ಆಕ್ರೋಶದಲ್ಲಿ ಪ್ರಶ್ನಿಸುತ್ತಾಳೆ. [ಆಯ್ದ ಬರಹಗಳು ಪುಟ 44]. ರಾಮಾಯಣದ ನೂರಾರು ಪಾಠಗಳು ವಾಸ್ತವವಾಗಿ ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ಧಾರ್ಮಿಕ ಪರಂಪರೆಗಳಲ್ಲಿ ಕಂಡುಬರುವ ಒಂದೇ ಕಥೆಯ ನೂರಾರು ವಕ್ತವ್ಯಗಳು’ ಎಂದು ರಾಮಾನುಜನ್ ಹೇಳುತ್ತಾರೆ [ಪುಟ 37]. ಆದರೆ ಈ ವಿಭಿನ್ನ ವಕ್ತವ್ಯಗಳಲ್ಲಿ ಒಂದು ಇನ್ನೊಂದರ ಹಾಗಿಲ್ಲ. ಉದಾಹರಣೆಗೆ ವಾಲ್ಮೀಕಿ ರಾಮಾಯಣದ ರಾಮ ದೇವರಲ್ಲ; ಅವನು ದೇವಮಾನವ ಅಥವಾ ಪುರುಷೋತ್ತಮ. ಆದರೆ ತಮಿಳುನಾಡಿನ ಭಕ್ತಿ ಪರಂಪರೆಯ 12ನೆಯ ಶತಮಾನದ ಕವಿ ಕಂಬನ ರಾಮಾಯಣ `ಇರಾಮಾವತಾರ’ದ ರಾಮ ನಿಶ್ಚಯವಾಗಿಯೂ ದೇವರೇ. ರಾಮನ ಪಾತ್ರ ಚಿತ್ರಣದ ಈ ವ್ಯತ್ಯಾಸದಿಂದಾಗಿ ಈ ಎರಡು ಕಾವ್ಯಗಳ ಕಥಾ ಹಂದರದಲ್ಲೂ ವ್ಯತ್ಯಾಸಗಳು ಕಾಣುತ್ತವೆ. ರಾಮಾನುಜನ್ ತನ್ನ ಪ್ರಬಂಧದಲ್ಲಿ ಈ ವ್ಯತ್ಯಾಸಗಳನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. [ಆಯ್ದ ಬರಹಗಳು. ಪುಟ 37-45] ಹಾಗೆಯೇ ಜೈನ ರಾಮಾಯಣಗಳಲ್ಲಿ ರಾವಣ ದುಷ್ಟನಲ್ಲ. ಕನ್ನಡದ ಒಂದು ಜಾನಪದ ರಾಮಾಯಣದ ಪ್ರಕಾರ ಸೀತೆ ರಾವಣನ [ಅಥವಾ ರಾವುಳನ] ಮಗಳು. ರಾಮಾಯಣದ ವಿವಿಧ ವಕ್ತವ್ಯಗಳಲ್ಲಿನ ಈ ವ್ಯತ್ಯಾಸ ಮತ್ತು ಸಮಾನಗುಣಗಳ ವಿಪರ್ಯಾಸದಂತೆ ಕಾಣುವ ಸಹಬಾಳ್ವೆಗೆ ವಿವರಣೆಯಾಗಿ ರಾಮಾನುಜನ್, ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್‍ನ ಕಣ್ಣಿಗೆ ಬಿದ್ದ ಒಂದು ಚೂರಿಯ ನಿದರ್ಶನವನ್ನು ಕೊಡುತ್ತಾರೆ. ಒಮ್ಮೆ ಅರಿಸ್ಟಾಟಲ್, ವಯಸ್ಸಾದ ಬಡಗಿಯೊಬ್ಬನ ಬಳಿ ಇದ್ದ ಚೂರಿಯನ್ನು ನೋಡಿ “ಈ ಚೂರಿ, ನಿನ್ನಲ್ಲಿ ಎಷ್ಟು ಸಮಯದಿಂದ ಇದೆ?’’ ಎಂದು ಕೇಳಿದನಂತೆ; ಬಡಗಿ `ಇದು ಕಳೆದ ಮೂವತ್ತು ವರ್ಷಗಳಿಂದಲೂ ನನ್ನ ಬಳಿ ಇದೆ. ಕೆಲವು ಸಲ ನಾನು ಇದರ ಅಲಗು ಬದಲಾಯಿಸಿದ್ದೇನೆ. ಮತ್ತೆ ಕೆಲವು ಸಲ ಇದರ ಹಿಡಿ ಬದಲಾಯಿಸಿದ್ದೇನೆ. ಆದರೆ ಚೂರಿ ಮಾತ್ರ ಅದೇ’ ಎಂದು ಉತ್ತರಿಸಿದ. ಬಡಗಿಯ ಆ ಚೂರಿ ಏಕಕಾಲಕ್ಕೆ ಪ್ರಾಚೀನವೂ ಸಮಕಾಲೀನವೂ ಆಗಿರುವ ಹಾಗೆ, ರಾಮಾಯಣದ ವಕ್ತವ್ಯಗಳು ಸಹ ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದ್ದರೂ, ಸದಾ ನವೀಕರಣಗೊಳ್ಳುತ್ತವೆ. ಹಾಗಾಗಿ ರಾಮಾಯಣ ಒಂದು ಕಾವ್ಯ ಅಥವಾ ಕಥಾನಕಕ್ಕಿಂತ ಹೆಚ್ಚಾಗಿ, ಒಂದು ಸಾವಿರ ವರ್ಷಗಳಿಂದ ಸಾಗಿ ಬಂದಿರುವ ಒಂದು ಕಥನ ಪರಂಪರೆ. ಅದು ಏಕಕಾಲಕ್ಕೆ ಪ್ರಾಚೀನವೂ ಹೌದು; ಆಧುನಿಕವೂ ಹೌದು. ಉದಾಹರಣೆಗೆ ರಾಮಾಯಣದ ವಸ್ತುವನ್ನು ಆಧರಿಸಿದ ಕರ್ನಾಟಕದ ಮೂಡಲಪಾಯದ ಬಯಲಾಟ ಮತ್ತು ಕರಾವಳಿಯ ಯಕ್ಷಗಾನ ಪ್ರಸಂಗಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಇತ್ಯಾದಿ ಪೌರಾಣಿಕ ಪಾತ್ರಗಳೊಂದಿಗೆ ಇದ್ದಕ್ಕಿದ್ದಂತೆ ಸಮಕಾಲೀನ ಜನರು ಗ್ರಾಮಸ್ಥರು ಪ್ರತ್ಯಕ್ಷರಾಗಿ ಬಿಡುತ್ತಾರೆ! ರಾಮನ ಆಗ್ರಹಕ್ಕೆ ತುತ್ತಾಗಿ ಅರಮನೆಯಿಂದ ಹೊರಹಾಕಲ್ಪಟ್ಟು ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಗರ್ಭಿಣಿ ಸೀತೆಯ `ಹೂ ಮುಡಿಸುವ ಶಾಸ್ತ್ರ’ಕ್ಕೆ ಕನ್ನಡನಾಡಿನ ಈಗಿನ ಹಳ್ಳಿಗಳ ಹೆಂಗಸರೆಲ್ಲ ಹಾಜರಾಗುತ್ತಾರೆ!.

ಮಿಥಿಲಾ ಪ್ರದೇಶದಲ್ಲಿ ಕಂಡುಬರುವ ಮಧುಬನಿ ಚಿತ್ರಕಲೆಯಲ್ಲಿ ಮೂಡಿಬಂದ ಬುಡಕಟ್ಟು ಸಂಸ್ಕೃತಿಯ ರಾಮಾಯಣದ ಒಂದು ದೃಶ್ಯ .

ಖ್ಯಾತ ಕಮ್ಯುನಿಸ್ಟ್ ನೇತಾರ ಇ.ಕೆ. ನಾಯನಾರ್ ಕೇರಳದಲ್ಲಿ ಅತ್ಯಂತ ದೀರ್ಘ ಕಾಲಾವಧಿಗೆ ಮುಖ್ಯಮಂತ್ರಿಯಾಗಿದ್ದರು. 1980ರಿಂದ 2001ರ ವರೆಗೆ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಅವರ ಅಧಿಕಾರಾವಧಿಯ ದಿನಗಳಲ್ಲೇ ಬಿ.ಜೆ.ಪಿ. ನೇತೃತ್ವದ ರಾಮಜನ್ಮ ಭೂಮಿ ಚಳುವಳಿ ದೇಶಾದ್ಯಂತ ಯಶಸ್ವಿಯಾಗಿ ನಡೆದು, ಉತ್ತರಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸಗೊಂಡಿತು. ಆ ಕುರಿತು ಮಾತಾಡುತ್ತ ನಾಯನಾರ್, `ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಸ್ಥಳವೇ ರಾಮಜನ್ಮ ಭೂಮಿಯೋ? ನಾನು ಇದುವರೆಗೆ ರಾಮ ಹುಟ್ಟಿದ್ದು ನಮ್ಮ ಕೇರಳದಲ್ಲೇ ಎಂದು ಭಾವಿಸಿದ್ದೆ’ ಎಂದರಂತೆ. ಪ್ರಾಯಶಃ ನಯನಾರ್ ಅವರು ಕೇಳಿಸಿಕೊಂಡ ರಾಮಾಯಣದ ಮಲಯಾಳಂ ವಕ್ತವ್ಯಗಳಿಂದಾಗಿ ಅವರಿಗೆ ಹಾಗೆ ಅನ್ನಿಸಿರಬೇಕು.ರಾಮಾಯಣದ ರಾಮ, ಸೀತೆ, ಲಕ್ಷ್ಮಣ, ಹನುಮಂತ, ವಾಲಿ, ಸುಗ್ರೀವರ ಜೊತೆ ಗುರುತಿಸಿಕೊಳ್ಳುವ ನೂರಾರು ಹಳ್ಳಿ ಪಟ್ಟಣಗಳು ದೇಶಾದ್ಯಂತ ಇವೆ. ಜನಜನಿತವಾಗಿರುವ ಐತಿಹ್ಯವೊಂದರ ಪ್ರಕಾರ ಕರ್ನಾಟಕದ ಈಗಿನ ಹಂಪಿಯೇ, ರಾಮಾಯಣದ ಕಿಷ್ಕಿಂದೆ. ರಾಮಾಯಣದ ಕೋಸಲ ಹಾಗೂ ಶ್ರೀಲಂಕೆಗಳನ್ನು ಭಾರತ ಉಪಖಂಡದ ಭೂಪಟದಲ್ಲಿ ಹಲವೆಡೆ ಗುರುತಿಸಲಾಗುತ್ತದೆ. ಹೀಗೆ ರಾಮಾಯಣದ ವೈವಿಧ್ಯಮಯ ಕಥನ ಪರಂಪರೆಯಿಂದಾಗಿ ರಾಮಾಯಣಕ್ಕೆ ಸಾರ್ವಕಾಲಿಕ ಪ್ರಸ್ತುತತೆಯ ಜೊತೆ, ಸಾರ್ವತ್ರಿಕತೆಯೂ ದಕ್ಕಿದೆ. ಕೇರಳದಲ್ಲೇ ರಾಮಜನ್ಮಭೂಮಿ ಇರುವುದು ಎಂದು ಆ ರಾಜ್ಯದ ಮುಖ್ಯಮಂತ್ರಿ ಭಾವಿಸಿದರೆ, ಕನ್ನಡಿಗರು, ತಮ್ಮ ಹಂಪಿಯೇ ರಾಮಾಯಣದ ಕಿಷ್ಕಿಂದೆ ಎಂದು ಹೆಮ್ಮೆ ಪಟ್ಟುಕೊಂಡರೆ, ಮಧ್ಯಪ್ರದೇಶದ ಜನ, ಲಂಕೆ ಇರುವುದು ತಮ್ಮ ರಾಜ್ಯದಲ್ಲೇ ಎಂದು ತಿಳಿದರೆ, ಮಹಾರಾಷ್ಟ್ರ, ಜಾರ್ಖಂಡ, ಛತ್ತೀಸ್‍ಗಡ ಮತ್ತು ಒರಿಸ್ಸಾಗಳ ಆದಿವಾಸಿಗಳ ನೆಲೆಯಾದ ಅರಣ್ಯ ಪ್ರದೇಶವೇ ದಂಡಕಾರಣ್ಯ ಎಂದು ಅಲ್ಲಿನ ಜನ ಹೇಳಿಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ರಾಮಾಯಣ ಎಲ್ಲ ಕಾಲ ದೇಶಗಳಲ್ಲಿಯೂ ಪ್ರಸ್ತುತವಾಗಿರುವ ವಕ್ತವ್ಯ. ಈ ಕಾರಣಕ್ಕೇನೆ, ಎಲ್ಲ ಕಾಲದಲ್ಲೂ, ರಾಮಾಯಣದ ಕತೆಯನ್ನು ಆಲಿಸುವವರು ಮತ್ತು ನೋಡುವವರು ಅದು ಕತೆ ಎಂಬುದನ್ನು ಮರೆತು ಕತೆಯ ಪಾತ್ರಗಳನ್ನೇ ಕನ್ನಡಿ ಮಾಡಿಕೊಂಡು ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ; ತಮ್ಮ ಜೀವನಾನುಭವಕ್ಕೆ ಮುಖಾಮುಖಿಯಾಗುತ್ತಾರೆ. ತೀರ ಸಾಮಾನ್ಯ ಜನರೂ ರಾಮಾಯಣದ ಕಥಾನಕದಲ್ಲಿ ತಮ್ಮನ್ನು ಗುರುತಿಸಿಕೊಂಡು, ಅದರಲ್ಲೇ ತಲ್ಲೀನರಾಗಿ ಬಿಡುತ್ತಾರೆ. ಒಂದು ಜಾನಪದ ಕತೆ ಪ್ರಕಾರ ರಾಮಾಯಣದ ಮಾರೀಚವಧೆ ಕುರಿತ ನಾಟಕ, ಒಂದು ಊರಲ್ಲಿ ನಡೆದಿತ್ತು. ಜಿಂಕೆಯ ಛದ್ಮವೇಷದಲ್ಲಿದ್ದ ಮಾರೀಚನ ಬೆನ್ನತ್ತಿ ಹೋದ ರಾಮ, ಬಹು ದೂರ ಸಾಗಿ ಕಾಡಿನಲ್ಲಿ ಕಣ್ಮರೆಯಾಗಿ ಬಿಟ್ಟ. ಮಾರೀಚನ ಕಪಟದಿಂದಾಗಿ, ರಾಮನ ಆಕ್ರಂದನ, ಕೇಳಿಸಿದಂತೆ ಗುಡಿಸಲಿನಲ್ಲಿದ್ದ ಸೀತೆಗೆ ಭ್ರಮೆಯಾಗುತ್ತದೆ. ಸೀತೆ, ರಾಮನ ಸಹಾಯಕ್ಕೆ ಧಾವಿಸಿ ಹೋಗಲು ಲಕ್ಷ್ಮಣನಿಗೆ ಬೇಡಿಕೊಳ್ಳುತ್ತಾಳೆ. ಲಕ್ಷ್ಮಣ ಅದಕ್ಕೆ ಕಿವಿಗೊಡುವುದಿಲ್ಲ. ವನವಾಸದ ವೇಳೆ, ಸೀತೆಯನ್ನು ಒಬ್ಬಂಟಿಗಳಾಗಿ ಇರಲು ಬಿಟ್ಟು ಹೋಗುವಂತಿಲ್ಲ ಎಂದು ತಮ್ಮ ಲಕ್ಷ್ಮಣನಿಗೆ ರಾಮನ ಕಟ್ಟಪ್ಪಣೆಯಾಗಿದೆ. ಸೀತೆ ಆರ್ತಳಾಗಿ ಲಕ್ಷ್ಮಣನಲ್ಲಿ ಮೊರೆ ಇಡುತ್ತಾಳೆ; ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಾಳೆ. `ನನ್ನ ಕುರಿತ ನಿನಗೆ ಲೈಂಗಿಕ ಬಯಕೆ ಇದೆ; ಅದಕ್ಕೋಸುಗ ನೀನು ರಾಮನನ್ನು ಉಪೇಕ್ಷಿಸುತ್ತಿರುವೆ’ ಎಂದು ಲಕ್ಷ್ಮಣನ ಮೇಲೆ ಆರೋಪ ಹೊರಿಸುತ್ತಾಳೆ. `ಹಾಗಲ್ಲವಾದರೆ ರಾಮನ ನೆರವಿಗೆ ನೀನು ಧಾವಿಸದೆ ಇರಲು ಕಾರಣವಾದರೂ ಏನು? ಹೇಳು ಲಕ್ಷ್ಮಣಾ ಹೇಳು ಲಕ್ಷ್ಮಣಾ’ ಎಂದು ಮತ್ತೆ ಮತ್ತೆ ಕೇಳುತ್ತಾಳೆ. ಆದರೆ ಲಕ್ಷಣ ಆ ಕೊಂಕು ಮಾತನ್ನು ಸಹ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ನಾಟಕ ನೋಡಲು ನೆರೆದಿದ್ದ ಪ್ರೇಕ್ಷಕರ ಪೈಕಿ ಚೌಕುಳಿ ಮುಂಡು ಉಟ್ಟು ಬೀಡಿ ಸೇದುತ್ತ ನಿಂತಿದ್ದ ಒಬ್ಬ ಸಾಬಣ್ಣನೂ ಇದ್ದ. ಮತ್ತೆ ಮತ್ತೆ ಸೀತೆ `ಹೇಳು ಲಕ್ಷ್ಮಣ, ಹೇಳು ಲಕ್ಷ್ಮಣಾ’ ಎಂದು ಮೊರೆ ಇಟ್ಟರೂ ಮೌನವಾಗಿದ್ದನ್ನು ಕಂಡು ಸಾಬಿಗೆ ರೇಗಿ ಹೋಯಿತು, ಲಕ್ಷ್ಮಣನ ಕಡೆಗೆ ತಿರುಗಿ, ಅವನು, `ಬೋಲ್‍ರೇ ಹರಾಮೀ!’ ಎಂದು ಕಿರುಚಿಕೊಂಡ. ತಾನು ನೋಡುತ್ತಿರುವುದು ನಾಟಕ ಎಂಬುದೇ ಅವನಿಗೆ ಮರೆತ್ತು ಹೋಗಿತ್ತು!

ಚಿತ್ರ : ಕ್ರೌಂಚ ವಧೆ ಘಟನೆ , ಚಿತ್ರಕಾರ – ಮೋಹನ ( ಮೊಘಲ್ ಸಾಮ್ರಾಜ್ಯದ ಚಿತ್ರಕಾರ )

ರಾಮಾಯಣವನ್ನು ಆಲಿಸುವ, ನೋಡುವ ಅಥವಾ ಓದುವ ಯಾರೇ ಆಗಲಿ, ಅದೊಂದು ಅದ್ಭುತ ರಮ್ಯ ಪೌರಾಣಿಕ ಕತೆ ಎಂದು ಯಾವತ್ತೂ ಭಾವಿಸಿದವರಲ್ಲ. ಆ ಕತೆಯ ಪಾತ್ರಗಳೆಲ್ಲ ಥೇಟು ತಮ್ಮ ಹಾಗೇನೆ ನಿತ್ಯದ ಬದುಕಿನ ದುಃಖ ದುಮ್ಮಾನಗಳನ್ನೆಲ್ಲ ಅನುಭವಿಸುವ ಮನುಷ್ಯ ಮಾತ್ರರು ಎಂಬುದು ಜನರ ತಿಳುವಳಿಕೆ; ರಾಮಾಯಣದ ಪಾತ್ರಗಳು ಸಹ ಜನರ common senseಗೆ ತಕ್ಕಂತಿವೆ. ಯಾವುದೋ ಮುಖಹೀನ ಅಗಸನ ಮಾತು ನಂಬಿ ತನ್ನ ಪತ್ನಿಯ ಶೀಲವನ್ನು ಶಂಕಿಸುವ ಜೋಭದ್ರ ಗಂಡ ರಾಮ, ಗಂಡನಿದ್ದೂ ವಿರಹಿಯಾದ ಲಕ್ಷ್ಮಣನ ಪತ್ನಿ ಊರ್ಮಿಳೆ, ವ್ಯಾಮೋಹಿ ದಶರಥ, ಹೆಣ್ಮರುಳ ರಾವಣ, ಸಜ್ಜನ ಹಾಗೂ ವಿನಯಿ ವಿಭೀಷಣ, ಸ್ವಾಮಿಭಕ್ತ ಹನುಮಂತ, ಧೂರ್ತ ಸುಗ್ರೀವ, ಅಮಾಯಕ ವಾಲಿ- ರಾಮಾಯಣದ ಆ ಎಲ್ಲ ಪಾತ್ರಗಳ ದಿರುಸು ಮಾತ್ರ ಪೌರಾಣಿಕ; ಆದರೆ ತಮ್ಮ ನಡವಳಿಕೆ ಮತ್ತು ಗುಣಸ್ವಭಾವಗಳಲ್ಲಿ ಆ ಪಾತ್ರಗಳು ನಮ್ಮದೇ ತದ್ರೂಪ. ಉದಾಹರಣೆಗೆ ಜಾನಪದ ರಾಮಾಯಣವೊಂದರ ಪ್ರಕಾರ, ತಂದೆಯ ಆಣತಿಯಂತೆ, ರಾಮ ಅರಮನೆ ಬಿಟ್ಟು ವನವಾಸಕ್ಕೆ ಹೊರಟಾಗ, ಅವನೊಟ್ಟಿಗೆ ತಾನೂ ಬರುವುದಾಗಿ ಸೀತೆ ಹೇಳುತ್ತಾಳೆ. ಆ ನಿರ್ಧಾರ ಕೈ ಬಿಡುವಂತೆ ರಾಮ ಸೀತೆಯನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ; ವನವಾಸ, ಅವಳಂತಹ ಕೋಮಲಾಂಗಿಗೆ ಹೇಳಿಸಿದ್ದಲ್ಲ ಎಂದು ವಾದಿಸುತ್ತಾನೆ. ರಾಮನ ಯಾವ ಮಾತಿಗೂ ಸೀತೆ ಕಿವಿಗೊಡುವುದಿಲ್ಲ. ಆತನೂ ತನ್ನ ಹಠ ಬಿಡುವುದಿಲ್ಲ. ಕೊನೆಗೂ ಸೀತೆ ಒಂದು ಮಾತು ಹೇಳಿ ರಾಮನ ಬಾಯಿ ಮುಚ್ಚಿಸುತ್ತಾಳೆ “ನೀನು ವನವಾಸಕ್ಕೆ ಹೋದ ನಂತರ ನಾನು ಒಂಟಿಯಾಗಿ ಬಿಡುತ್ತೇನೆ; ಸೊಸೆಯಾದವಳಿಗೆ ಒಬ್ಬಳು ಅತ್ತೆಯೇ ಸಾಕೋ ಸಾಕು ಅನ್ನಿಸುತ್ತದೆ. ಅಂತಹದ್ದರಲ್ಲಿ ಇಲ್ಲಿ ಅರಮನೆಯಲ್ಲಿ ನಾನು ಮೂವರು ಅತ್ತೆಯರೊಂದಿಗೆ ಏಗುವುದಕ್ಕಿಂತ ವನವಾಸವೇ ಮೇಲಲ್ಲವೆ?’’ ಎಂದು ಸೀತೆ ರಾಮನಿಗೆ ಸವಾಲು ಹಾಕುತ್ತಾಳೆ. ಎಷ್ಟೆಂದರೂ ರಾಮ ಮತ್ತು ಸೀತೆ ಸಂಸಾರವಂದಿಗರು, ಹೆಚ್ಚಿನ ಗೃಹಿಣಿಯರಂತೆ, ಅತ್ತೆಯರನ್ನು ಕಂಡರೆ ಸೀತೆಗೂ ಅಷ್ಟಕ್ಕಷ್ಟೆ. ಹೀಗೆ ರಾಮಾಯಣದ ಪಾತ್ರಗಳೆಲ್ಲ ಮನುಷ್ಯಮಾತ್ರರು. ಹೆಚ್ಚೆಂದರೆ ದೈವಸಂಕಲ್ಪವನ್ನು ಈಡೇರಿಸಲು ಮನುಷ್ಯ ಜನ್ಮ ತಳೆದವರು; ಆದರೂ ಮನುಷ್ಯರು.

ರಾಮಾಯಣ ಬದುಕಿನ ರೂಪಕ, ಪ್ರತಿಮೆ ಮತ್ತು ಪುನರಾವರ್ತತೆಗೊಳ್ಳುವ ವಿನ್ಯಾಸವುಳ್ಳ ಒಂದು ಕಥನ. ಉದಾ: ಆದಿ ಕವಿ ವಾಲ್ಮೀಕಿಯ ಕಾವ್ಯ ಪ್ರಾರಂಭವಾಗುವುದೇ ಅದರ ಹುಟ್ಟಿಗೆ ಕಾರಣವಾದ ಒಂದು ಘಟನೆಯ ವೃತ್ತಾಂತದೊಂದಿಗೆ. ಕಾಡಿನಲ್ಲಿ ಬೇಟೆಗಾರನೊಬ್ಬ, ಮೈಥನದಲ್ಲಿ ತೊಡಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಹೊಡೆದು ನೆಲಕ್ಕೆ ಉರುಳಿಸುತ್ತಾನೆ. ತನ್ನ ಗೆಳೆಯ ಬೇಟೆಗಾರನ ಬಾಣಕ್ಕೆ ಬಲಿಯಾದದ್ದನ್ನು ಕಂಡು ಹೆಣ್ಣು ಪಕ್ಷಿ ರೋಧಿಸುತ್ತದೆ. ಈ ದೃಶ್ಯವನ್ನು ನೋಡುತ್ತಿದ್ದ ಋಷಿ ವಾಲ್ಮೀಕಿ ಬೇಟೆಗಾರನನ್ನು ಶಪಿಸುತ್ತಾನೆ; ವಾಲ್ಮೀಕಿ ತನ್ನ ಮಾತು ಬಿರುನುಡಿಯ ಶಾಪವಾದರೂ ಶ್ಲೋಕವಾಗಿ ಹೊರಹೊಮ್ಮಿರುವುದರ ಬಗ್ಗೆ ಹಿಗ್ಗುತ್ತಾನೆ. ವಾಲ್ಮೀಕಿ ಈ ಶ್ಲೋಕದ ಛಂದಸ್ಸಿನಲ್ಲೇ ರಾಮನ ಕತೆ ರಚಿಸಲು ನಿಶ್ಚಯಿಸುತ್ತಾನೆ. ಕಾಡಿನಲ್ಲಿ ವಾಲ್ಮೀಕಿ ಕಣ್ಣಾರೆ ಕಂಡ ಕ್ರೌಂಚವಧೆ, ರಾಮಾಯಣದ ಉದ್ದಕ್ಕೂ ಮರುಕಳಿಸುವ ಒಂದು ವಿನ್ಯಾಸವಾಗಿದೆ. ಹಾಗಾಗಿ ರಾಮಾಯಣ, ಪ್ರಜ್ಞಾಪೂರ್ವಕವಾಗಿ ಹೆಣೆಯಲ್ಪಟ್ಟ ಒಂದು ಕತೆ; ವಕ್ತವ್ಯ, ಪಾಠಾಂತರ, ಮರು ಅರ್ಥೈಸುವಿಕೆಗಳಿಗೆ ಅವಕಾಶವೇ ಇಲ್ಲದ ಪವಿತ್ರಗ್ರಂಥವಲ್ಲ; ಸಾಕ್ಷ್ಯಾಧಾರಗಳ ಸಮೇತ ಸಾಬೀತು ಪಡಿಸಬೇಕಾದ ಚರಿತ್ರೆಯೂ ಅಲ್ಲ. ಈ ವರೆಗಿನ ಎಲ್ಲ ರಾಮಾಯಣಗಳಲ್ಲೂ ರಾಮನ ಒಟ್ಟಿಗೆ ಸೀತೆಯೂ ಕಾಡಿಗೆ ಹೋಗುತ್ತಾಳೆ. ಅದೊಂದು ಕಾರಣಕ್ಕಾದರೂ ತಾನು ಕಾಡಿಗೆ ಹೋಗುವವಳೇ ಎಂದು ಹಠ ಸಾಧಿಸುವ ಸೀತೆಗೆ ತಾನು ಪುನರಪಿ ಹೇಳಲ್ಪಟ್ಟ ಕತೆಯೊಂದರ ಪಾತ್ರ ಎಂಬ `ಸ್ವ’ದ ಪ್ರಜ್ಞೆ ಇದೆ. ಭವಭೂತಿಯ ನಾಟಕ `ಉತ್ತರರಾಮ ಚರಿತ’ದಲ್ಲಿ ಅಯೋಧ್ಯೆಗೆ ಮರಳಿದ ರಾಮ ಸೀತೆಯರು, ತಮ್ಮ ವನವಾಸ ಕುರಿತ ಚಿತ್ರಮಾಲಿಕೆಗೆ ತಾವೇ ಪ್ರೇಕ್ಷಕರಾಗುತ್ತಾರೆ. ನಾಟಕದಲ್ಲಿ ಮುಂದೆ, ರಾಮಾಯಣವನ್ನು ಆಧರಿಸಿದ ನಾಟಕ ಪ್ರದರ್ಶನವೊಂದು ವಾಲ್ಮೀಕಿ ಆಶ್ರಮದಲ್ಲಿ ನಡೆದಾಗ, ರಾಮಸೀತೆ, ಮಾತ್ರವಲ್ಲ ಆದಿಕವಿ ವಾಲ್ಮೀಕಿ ಕೂಡ ಅದರ ಪ್ರೇಕ್ಷಕರು!

ಎ.ಕೆ. ರಾಮಾನುಜನ್‍ರ `ಮುನ್ನೂರು ರಾಮಾಯಣಗಳು’ ಒಂದು ವಿದ್ವತ್‍ಪೂರ್ಣ ಬರಹವಾಗಿದ್ದರೂ, ಅವರ ಕತೆ ಮತ್ತು ಕವಿತೆಗಳ ಹಾಗೇನೆ ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ಪಂಡಿತ ಪಾಮರರೆಲ್ಲರಿಗೂ ಶಿಫಾರಸು ಮಾಡಬಹುದಾದ ಈ ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಸಿಲೆಬಸ್‍ನಲ್ಲಿ ಒಂದು ಪಠ್ಯವನ್ನಾಗಿ ಮಾಡಲಾಗಿತ್ತು. ಆದರೆ 2006ರಲ್ಲಿ ಒಂದು ವಿದ್ಯಾರ್ಥಿ ಸಂಘಟನೆ ಎ.ಬಿ.ವಿ.ಪಿ. ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ಪ್ರತಿಭಟಿಸಿತು. ಎ.ಬಿ.ವಿ.ಪಿಯ ಸದಸ್ಯರು ಪಾಠ ನಡೆಯುತ್ತಿರುವಾಗಲೇ ತರಗತಿಗಳಿಗೆ ನುಗ್ಗಿ ಗದ್ದಲ ಮಾಡಿದರು. ದೇಶದ ಬಹು ಸಂಖ್ಯಾತ ಪ್ರಜೆಗಳು ಭಕ್ತಿಯಿಂದ ಪೂಜಿಸುವ ರಾಮಸೀತೆಯರನ್ನು ರಾಮಾನುಜನ್‍ರ ಪ್ರಬಂಧದಲ್ಲಿ ಕೇವಲ ಗಂಡಹೆಂಡಿರು ಎಂಬಂತೆ ಚಿತ್ರಿಸಲಾಗಿದೆ. ನಮ್ಮ ಪರಂಪರೆಯನ್ನು ಅವಹೇಳನ ಮಾಡುವ ಪ್ರಬಂಧವೊಂದನ್ನು ಪಠ್ಯವನ್ನಾಗಿ ಅಳವಡಿಸಿಕೊಂಡ ವಿಶ್ವವಿದ್ಯಾಲಯದ ಕ್ರಮ ಜನರನ್ನು ನೋಯಿಸಿದೆ ಎಂದು ಕೋರ್ಟುನಲ್ಲಿ ಕೇಸು ದಾಖಲಾಯಿತು. ನ್ಯಾಯಾಲಯದ ತೀರ್ಪು, ರಾಮಾನುಜನ್‍ರ ಪ್ರಬಂಧವನ್ನು ಸಿಲೆಬಸ್‍ನಲ್ಲಿ ಅಳವಡಿಸಿಕೊಂಡ ವಿಶ್ವವಿದ್ಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು. ಆದಾಗ್ಯೂ 2011ರಲ್ಲಿ ದೆಹಲಿ ವಿಶ್ವವಿದ್ಯಾಲಯ, ಬಿಜೆಪಿ ಹಾಗೂ ಎ.ಬಿ.ವಿ.ಪಿಗಳ ಒತ್ತಡಕ್ಕೆ ಮಣಿದು, `ಮುನ್ನೂರು ರಾಮಾಯಣಗಳು’ – ಪ್ರಬಂಧವನ್ನು ಸಿಲೆಬಸ್‍ನಿಂದ ಹೊರಗೆ ಇಟ್ಟಿತು; ಕೇಂದ್ರದಲ್ಲಿ ಆಗ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ. ಸರಕಾರವಿತ್ತು. ದೇಶದ ರಾಜಧಾನಿಯಲ್ಲಿ ತನ್ನ ಬರಹಕ್ಕೆ ಎರಗಿದ ಈ ಅರ್ಧಚಂದ್ರ ಪ್ರಯೋಗಕ್ಕೆ ಸಾಕ್ಷಿಯಾಗುವ ಪಾಡು, ಸದ್ಯ ರಾಮಾನುಜನ್‍ರಿಗೆ ಬರಲಿಲ್ಲ. 1993ರ ಜುಲೈ 13ರಂದು ಅವರು ತೀರಿಕೊಂಡರು. ಆ ವೇಳೆಗೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡು 6 ತಿಂಗಳು ಕಳೆದಿದ್ದವು. ಅಯೋಧ್ಯೆಯ ದುರ್ಘಟನೆಗೆ ಕಾರಣವಾದದ್ದು `ರಾಮಾಯಣ ಹಿಂದುಗಳ ಪವಿತ್ರ ಗ್ರಂಥ; ಬಾಬರಿ ಮಸೀದಿ ಇರುವ ಜಾಗವೇ ರಾಮಜನ್ಮಭೂಮಿ; ಮಂದಿರವಲ್ಲೇ ಕಟ್ಟುವೆವು’ ಎಂಬ ಬಿ.ಜೆ.ಪಿ.ಯ ದುರಾಗ್ರಹ. ಎ.ಕೆ. ರಾಮಾನುಜನ್ ತಮ್ಮ ಬರಹಗಳ ಮುಖಾಂತರ ಬಿ.ಜೆ.ಪಿಯ ಈ ವಾಗ್ವಾದದ ಬುದ್ಧಿಗೇಡಿತನವನ್ನು ಬಯಲು ಮಾಡಿದರು. ಎ.ಬಿ.ವಿ.ಪಿ.ಯ ಧಾಂಡಿಗರು, ದೆಹಲಿಯಿಂದ ಸಾವಿರಾರು ಮೈಲಿ ದೂರದ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ತನ್ನ ಓದು ಬರವಣಿಗೆಗಳಲ್ಲಿ ಮುಳುಗಿದ್ದ ರಾಮಾನುಜನ್ ವಿರುದ್ಧ ಅವರು ಮರಣ ಹೊಂದಿದ ಹಲವು ವರ್ಷಗಳ ನಂತರ ಬೀದಿಗಿಳಿದು ದೊಂಬಿ ನಡೆಸಿದ್ದು ಸುಮ್ಮನೆ ಅಲ್ಲ.

2 comments to “`ಶ್ರೀ ರಾಮನವಮಿಯ ದಿವಸ’ : ಶ್ರೀ ರಾಮ ಮತ್ತು ಎ.ಕೆ. ರಾಮಾನುಜನ್‍ರನ್ನು ನೆನೆಯುತ್ತಾ…”

ಪ್ರತಿಕ್ರಿಯಿಸಿ