ಅಚ್ಚಳಿಯದ ಬೌದ್ದಿಕ ರತ್ನ- ಎ. ಕೆ. ರಾಮಾನುಜನ್

ನಮ್ಮ ಸುತ್ತ ಕಟ್ಟಲಾಗುತ್ತಿರುವ ‘ಒಂದೇ’ ರಾಷ್ಟ್ರ , ವ್ಯಕ್ತಿ , ನಂಬಿಕೆಗಳೆಂಬ ಮಿಥ್ ಗಳ ನಡುವೆ, ತಮ್ಮ ಮೆಲು ಧನಿಯಲ್ಲೇ ಭಾರತದ ಸಾಂಸ್ಕ್ತ್ರತಿಕ ಬಹುತ್ವವನ್ನು ಸಾರಿದ ಎ. ಕೆ. ರಾಮಾನುಜನ್ ಮಾತುಗಳನ್ನು ನಾವು ಈಗಿನ ಸಂಧರ್ಭದಲ್ಲಿ ಅವಶ್ಯವಾಗಿ ಕೇಳಿಸಿಕೊಳ್ಳಬೇಕು.

ರಾಮಾನುಜನ್ ರ ಶಿಷ್ಯೆಯಾಗಿದ್ದ ಲೇಖಕಿ ಅರ್ಷಿಯಾ ಸತ್ತರ್ ತಮ್ಮ ಗುರುವನ್ನು ನೆನೆದ ಲೇಖನ.

ಏಪ್ರಿಲ್ 2016. ಶಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾದ ವಿಷಯಗಳ ಕಲಿಕೆ ಶುರುವಾಗಿ 60 ವರ್ಷಗಳಾಗಿದ್ದವು. ಅದನ್ನು ಸಂಭ್ರಮಿಸುವುದಕ್ಕಾಗಿ ನಾವು ಹಲವರು ಅಲ್ಲಿ ಸೇರಿದ್ದೆವು. ಹಲವು ತಲೆಮಾರುಗಳ, ಹಲವು ವಿಭಾಗಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು. ಹಿಂದೆ ವಿದ್ಯಾರ್ಥಿಗಳಾಗಿದ್ದವರಲ್ಲಿ ಅನೇಕರು ಈಗ ಶಿಕ್ಷಕರಾಗಿದ್ದೆವು. ಆದಾಗ್ಯೂ, ನಮ್ಮ ಭವಿಷ್ಯ ರೂಪಿಸಿದ ವಿವಿಯನ್ನು, ಶಿಕ್ಷಕರನ್ನು ಮತ್ತೊಮ್ಮೆ ಭೆಟ್ಟಿಯಾಗುವುದಕ್ಕೆ ನಾವೆಲ್ಲಾ ಮತ್ತೆ ಅಲ್ಲಿ ಸೇರಿದ್ದೆವು.

          80ರ ದಶಕದಲ್ಲಿ ನಾನು ಶಿಕಾಗೋ ವಿವಿಯಲ್ಲಿ ಎ.ಕೆ. ರಾಮಾನುಜನ್ ರ ವಿದ್ಯಾರ್ಥಿಯಾಗಿದ್ದೆ. ಆ ಸಮಾರಂಭದಲ್ಲಿ ನನ್ನಂತಹ ಹಲವರಿದ್ದರು. ಎಲ್ಲರ ಭಾಷಣಗಳಲ್ಲಿ, ನಮ್ಮ ಹರಟೆಗಳಲ್ಲಿ, ನೆನಪುಗಳಲ್ಲಿ ‘ರಾಮನ್’ ಹಾಸುಹೊಕ್ಕಾಗಿದ್ದರು. ರಾಮಾನುಜನ್ ಬಗೆಗಿನ ಪ್ರೀತಿ ಗೌರವಗಳು, ಅವರನ್ನು ಹತ್ತಿರದಿಂದ ನೋಡಿ, ಅವರಲ್ಲಿ ಕಲಿತ, ಅವರ ಒಡನಾಟ ಸಿಕ್ಕ ಅದೃಷ್ಟದ ಬಗ್ಗೆಯೇ ಎಲ್ಲರ ಮಾತು. 30ಕ್ಕೂ ಹೆಚ್ಚು ವರ್ಷಗಳ ತಮ್ಮ ವೃತ್ತಿಯಲ್ಲಿ, ಶಿಕಾಗೋ ವಿವಿ ಹಾಗೂ ಬೇರೆಡೆಗಳಲ್ಲಿ ರಾಮಾನುಜನ್ ಅನೇಕರ ಮೇಲೆ ಗಾಢ ಪ್ರಭಾವ ಬೀರಿದ್ದರು. ಸಾಹಿತ್ಯ, ಇತಿಹಾಸ, ಮಾನವಶಾಸ್ತ್ರಗಳ ಪಂಡಿತರು ಅವರ ಪ್ರಭಾವಕ್ಕೊಳಗಾಗಿದ್ದರು. ಭಾಷಾಂತರ ಕಲೆಗೆ ಒಂದು ಆಯಾಮ, ಒಂದು ಸಿದ್ಧಾಂತ ಒದಗಿಸಿಕೊಟ್ಟು ಅದನ್ನು ಬೆಳೆಸಿದುದಲ್ಲದೇ,  ರಾಮಾನುಜನ್, ಅಮೇರಿಕಾದಲ್ಲಿ ದಕ್ಷಿಣ ಏಷ್ಯಾದ ವಿಷಯಗಳ ವ್ಯಾಸಂಗ, ಸಂಶೋಧನೆಗಳ ವಿಧಿ ವಿಧಾನಗಳನ್ನು ಬದಲಿಸಿದರು. ಇವೆಲ್ಲದರ ಜೊತೆಗೆ, ಅವರೊಬ್ಬ ಕವಿಯಾಗಿದ್ದರು ಕೂಡ.

          ರಾಮಾನುಜನ್ ಭಾಷಾಂತರಿಸಿದ ತಮಿಳಿನ ಸಂಗಮ್  ಸಾಹಿತ್ಯವನ್ನು ಓದುವಾಗ ಆಗುವ ರೋಮಾಂಚನ ಮರೆಯಲಸಾಧ್ಯ. ಆ ಅನುವಾದಿತ ಕವಿತೆಗಳನ್ನು ಓದುವಾಗ ಮೈನವಿರೇಳುತ್ತದೆ. ಮೂಲ ಸಾಹಿತ್ಯದ ಜೊತೆಗೆ ಅನುವಾದಿತದಲ್ಲಿರುವ ಪ್ರತಿಭೆಯೂ ನಿಚ್ಚಳವಾಗಿ ತೋರುತ್ತದೆ.

ರಾಮಾನುಜನ್ ಅನುವಾದಿಸಿರುವ ಶಂಗಂ ಕ್ಲಾಸಿಕಲ್ ತಮಿಳು ಕಾವ್ಯದ “ಕುರುಂತೊಗೈ -೨” . ಕೃಪೆ: ಟ್ವಿಟರ್

ಈ ಕವಿತೆಗಳು ನಿಮಗಾಗಿಯೇ ಅನುವಾದಗೊಂಡವೆಂದು ನಿಮಗೆ ಅನಿಸದಿರದು. ಶಬ್ದಗಳ ಏರಿಳಿತ ನಿಮ್ಮ ಹೃದಯಕ್ಕೇ ನಾಟಿದಂತೆ, ಕವಿತೆಗಳ ಚಿತ್ರಗಳು ನಿಮ್ಮ ಮನಃಪಟಲಕ್ಕೇ ಅಂಟಿದಂತೆ, ಆ ಎಲ್ಲಾ ಪದ್ಯಗಳು ನಿಮಗಾಗಿಯೇ, ನಿಮ್ಮ ಮಾತಿನಲ್ಲೇ ಬರೆದಂತೆ ನಿಮಗನ್ನಿಸುತ್ತದೆ. ಅದು ರಾಮಾನುಜನ್ ರ ಅನುವಾದಗಳಲ್ಲಿರುವ ಅಸಾಧಾರಣ ಶಕ್ತಿ. ಅನುವಾದಗಳು, ಸುಮ್ಮನೆ ಪದಗಳ ಜೋಡಣೆಯಾಗಿರದೇ, ಪದಗಳ ಮೂಲಕ ಭಾಷೆಗಳು, ಸಂಸ್ಕೃತಿಗಳನ್ನು ಬೆಸೆಯುವ ಅದ್ಭುತ ಕೆಲಸ ಮಾಡುತ್ತವೆ. ವಿಚಾರಗಳು, ಸಿದ್ಧಾಂತಗಳನ್ನು (ಅವರೇ ಇನ್ನೆಲ್ಲೋ ಹೇಳಿದಂತೆ) ಒಂದು ತೆಳು ಪದರದ ಮೂಲಕ ಸೋಸಿದಂತೆ, ರೂಪಕಗಳು ಒಂದರಿಂದ ಇನ್ನೊಂದು ಭಾಷೆಗೆ ತೆರಳುವಾಗ ಅರ್ಥಹೀನವಾಗದೆ, ಹೊಳೆಯುವಂತೆ ಮಾಡುವದು ರಾಮಾನುಜನ್ ರ ವೈಶಿಷ್ಟ್ಯ.

          ಅವರೇ ಹೇಳುತ್ತಿದ್ದಂತೆ, ರಾಮಾನುಜನ್, ಯಾವುದೇ ಪದ್ಯವನ್ನು ಭಾಷಾಂತರಿಸುವಾಗ, ಮೊದಲು, ಅದರ ಭಾವವನ್ನರಿತು, ಅದರ ಅಚ್ಚನ್ನು ಮತ್ತೊಂದು ಭಾಷೆಯಲ್ಲಿ ಮೂಡಿಸಿ, ಅದರ ಒಳಾರ್ಥವನ್ನು ಬಗೆದು, ಕರಡನ್ನು ಸಿದ್ಧಪಡಿಸುತ್ತಿದ್ದರು. ಪದಗಳನ್ನು ಪೋಣಿಸುವುದೂ, ಪೋಷಿಸುವುದೂ ಎಲ್ಲಾ ನಂತರದ ಕೆಲಸ. ಅವರ ವಿದ್ಯಾರ್ಥಿಗಳಾದ ನಮಗೆ, ಹೀಗೆ ಅನುವಾದಿಸಲು ಎಲ್ಲಿಲ್ಲದ ಪ್ರೋತ್ಸಾಹ ಸಿಗುತ್ತಿತ್ತು. ಪದಗಳಿಗೆ ನಾವು ತಡಕಾಡದೇ ಭಾವಗಳಿಗೆ ಒತ್ತು ಕೊಟ್ಟಲ್ಲಿ, ಪದಗಳೇ ನಮ್ಮನ್ನು ಹುಡುಕಿ ಬರುವುದಾಗಿ ಅವರು ನಮಗೆ ಧೈರ್ಯ ತುಂಬುತಿದ್ದರು.

ಮೂರ್ತಿ ಲೈಬ್ರರಿ ಹಾಗೂ ಇತರೆ ಯೋಜನೆಗಳು ಭಾರತೀಯ ಸಾಹಿತ್ಯವನ್ನು ಅನುವಾದ ಮಾಡಲು ಉತ್ಸುಕರಾಗಿರುವ ಈ ಹೊತ್ತಿನಲ್ಲಿ, ರಾಮಾನುಜನ್ ರ ಅನುವಾದ ಸಿದ್ಧಾಂತವನ್ನು ನಾವು ಹೆಚ್ಚೆಚ್ಚು ರೂಢಿಸಿಕೊಳ್ಳಬೇಕು. ಹಾಗೆ ಮಾಡಿದಲ್ಲಿ ಮಾತ್ರ, ನಮ್ಮಲ್ಲಿರುವ ಸಾಹಿತ್ಯ ಸಂಪತ್ತಿಗೆ ನ್ಯಾಯ ಒದಗಿಸಿಕೊಡುವುದು ಸಾಧ್ಯ.

          ಭಾರತೀಯ ಉಪಖಂಡಕ್ಕೆ ಬರೀ ಸಂಸ್ಕೃತ, ಬ್ರಾಹ್ಮಣ ಸಂಪ್ರದಾಯಗಳ ಹೊರತಾಗಿಯೂ ಬೇರೆ ಹಲವು ಆಯಾಮಗಳಿವೆ; ಅವುಗಳನ್ನು ತಿಳಿಯಲು ಆಧ್ಯಾತ್ಮ, ಧರ್ಮಗಳ ಮಾರ್ಗವಷ್ಟೇ ಅಲ್ಲದೇ ಬೇರೆ ದಾರಿಗಳನ್ನು ಅನುಸರಿಸಬೇಕೆಂದು ಅಕಾಡೆಮಿಗೆ ಮನವರಿಕೆ ಮಾಡಿಕೊಟ್ಟದ್ದು ರಾಮಾನುಜನ್ ರ ಅನುವಾದಗಳು, ಪ್ರಬಂಧಗಳು. ಅವರ ವಿದ್ಯಾರ್ಥಿಗಳಿಗೆ ಅವರು ಸದಾ ಕೇಳುತ್ತಿದ್ದ ಪ್ರಶ್ನೆಯೆಂದರೆ – “ನೀವು ಕೇಳಿರುವ ಕಥೆಯನ್ನು ಹೇಳಿ, ಓದಿರುವುದನಲ್ಲ”.

ತಮಿಳು ಹಾಗೂ ಕನ್ನಡ ಸಾಹಿತ್ಯದ ಅವರ ಮಂಡನೆ ‘ಶಾಸ್ತ್ರೀಯ’ದ ಅರ್ಥವನ್ನು ವಿಸ್ತರಿಸಿತು. ಜಾನಪದ ಕಥೆಗಳು, ಹಾಡು, ಒಗಟುಗಳು, ನಗೆ ಚಟಾಕಿಗಳಲ್ಲಿ ಅವರಿಗಿದ್ದ ಅಪಾರ ಆಸಕ್ತಿಯಿಂದಾಗಿ, ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ಚಿಕ್ಕ ಚೊಕ್ಕ, ಬಹುವಿಧ ವಿವೇಕಗಳು ನಮಗೆ ಸಿಗುವಂತಾದವು. ಪುರುಷ ಪ್ರಧಾನವಾದ ತತ್ವಶಾಸ್ತ್ರ, ತಾತ್ವಿಕ ಸಿದ್ಧಾಂತಗಳಲ್ಲಿ ಇರುವಷ್ಟೇ ಜ್ಞಾನ, ವಿವೇಚನೆಗಳು, ಮಹಿಳೆಯರ ಹಾಡುಗಳಲ್ಲಿ, ದೈನಂದಿನ ಕಥೆಗಳಲ್ಲಿ ಇದೆ ಎಂಬುದು ರಾಮಾನುಜನ್ ರ ಅಚಲವಾದ ನಂಬಿಕೆಯಾಗಿತ್ತು.

ತಮ್ಮ ಮೈಸೂರಿನ ಮನೆಯ ಛಾವಣಿಯ ಮೇಲೆ ಎ. ಕೆ. ರಾಮಾನುಜನ್ . ಚಿತ್ರ ತೆಗೆದದ್ದು ಹಿರಿಯ ಸಹೋದರ ಎ. ಕೆ . ಶ್ರೀನಿವಾಸನ್ (ಬಾಕ್ಸ್ ಕ್ಯಾಮೆರಾದಲ್ಲಿ ) | ಕೃಪೆ : ರಾಮಾನುಜನ್ ಎಸ್ಟೇಟ್

          ಎಲ್ಲಕ್ಕಿಂತ ಮಿಗಿಲಾಗಿ ರಾಮಾನುಜನ್ ನಮಗೆ ಕಳಿಸಿದ್ದು ಬಹುತ್ವದ ಮಹತ್ವವನ್ನು. ದಕ್ಷಿಣ ಏಷ್ಯಾದಲ್ಲಿ ಸಾಹಿತ್ಯ ಹಾಗೂ ಸಂಪ್ರದಾಯ ಒಂದಕ್ಕೊಂದು ಸವಾಲೆಸದರೂ ಪೂರಕವಾಗಿವೆ ಕೂಡ; ಎಂದೂ ತೊಂದರೆ ತಂದಿಲ್ಲ ಎಂದು ಅವರ ವಾದ. “Is There An Indian Way Of Thinking” – ರಾಮಾನುಜನ್ ರ ಮಹಾಪ್ರಬಂಧದಲ್ಲಿ, ಧರ್ಮ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಮಂಡಿಸುತ್ತಾರೆ. ಕಾಂತ್ ಹೇಳಿದಂತೆ ಧರ್ಮ ಬದಲಾಗದ ಬಂಡೆಯಲ್ಲ. ನಾವು ಆ ಹೊತ್ತಿನಲ್ಲಿ ಯಾವ ಪಾತ್ರ ನಿಭಾಯಿಸುತ್ತೇವೋ(ತಾಯಿ, ಹೆಂಡತಿ ಇತ್ಯಾದಿ) ಅದಕ್ಕೆ ತಕ್ಕಂತೆ ನಮ್ಮ ಪ್ರತಿಕ್ರಿಯೆ ಬದಲಾಗುತ್ತದೆ. ಧರ್ಮದ ವ್ಯಾಕರಣಗಳು ಸನ್ನಿವೇಶಕ್ಕೆ ಹೊಂದಿಕೊಂಡಿರುತ್ತವೆ ಎಂದು ರಾಮಾನುಜನ್ ಸಿದ್ಧ ಪಡಿಸಿದ್ದಾರೆ. ರಾಮಾನುಜನ್ ರ ಅನುವಾದಗಳು ಸಮಗ್ರತೆಯ ಚಿತ್ರಣ. ಅವರ ಪದ್ಯಗಳು, ಪ್ರಬಂಧಗಳು ಒಂದಕ್ಕೊಂದು ಹೆಣೆದುಕೊಂಡಿವೆ, ಜಾನಪದಗಳು ಹಾಸುಹೊಕ್ಕಾಗಿವೆ, ಅವುಗಳಲ್ಲಿ ಅನೇಕತೆಗೆ ಪ್ರಾಮುಖ್ಯವಿದೆ. “Three Hundred Ramayanas” ಇದಕ್ಕೆ ಸಾಕ್ಷಿ.

          “Speaking of Shiva”ದ ಉಪಸಂಹಾರದಲ್ಲಿ ಬರುವ ರಾಮಾನುಜನ್ ರ ವಾದಗಳನ್ನು ಕಬೀರನ ಕೃತಿಗಳಿಗೆ ಆರೋಪಿಸಬೇಕಿತ್ತು – ಭಕ್ತಿ ಸಾಹಿತ್ಯದ ಪರೀಕ್ಷೆಯಲ್ಲಿ ನಾನು ಎದುರಿಸಿದ ಬಹು ದೊಡ್ಡ ಸವಾಲು ಅದು. ರಾಮಾನುಜನ್ ಹೇಳಿದ್ದೆಲ್ಲವನ್ನೂ ಸಂಕ್ಷಿಪ್ತಗೊಳಿಸಲು ಸಾಧ್ಯವೋ ನೋಡಿದೆ, ಆಗಲಿಲ್ಲ. ಬೇರೆ ದೃಷ್ಟಿಕೋನದಿಂದ ನೋಡಿದರೆ ಹೊಸದೇನನ್ನಾದರೂ ಸೇರಿಸಬಹುದೇನೋ ನೋಡಿದೆ, ಆಗಲಿಲ್ಲ. ಏನಾದರೂ ಅಳಿದುಳಿದ ವಿಚಾರಗಳೇನಾದರೂ ಇದ್ದರೆ, ಅದನ್ನು ಬೆಳೆಸಬಹುದೇನೋ ನೋಡಿದೆ, ಆಸ್ಪದವಿರಲಿಲ್ಲ. ಏನಾದರೂ ಸಾಧ್ಯವಿದ್ದರೆ, ಅದು ರಾಮಾನುಜನ್ ಬರೆದಿದ್ದನ್ನು ಯಥಾವತ್ ಅಚ್ಚಿಳಿಸುವುದು ಮಾತ್ರ. ಸಮಗ್ರವನ್ನು ಎಲ್ಲ ರೀತಿಯಿಂದ ಅವಲೋಕಿಸಿ, ಉಪಯುಕ್ತವಾಗಿ, ಸಂಕ್ಷಿಪ್ತವಾಗಿ ಕ್ರೋಢೀಕರಿಸಿವುದು ರಾಮಾನುಜನ್ ಗೆ ಸಾಧ್ಯವಾಗಿತ್ತು. ಹಾಗಾಗಿಯೇ ಅವರ ಕೆಲಸಗಳು ಎಂದಿಗೂ ಅಪ್ರಸ್ತುತವಾಗಲಾರವೇನೋ!

ವೆಂಡಿ ಡೋಣಿಗರ್ ಒಮ್ಮೆ ರಾಮಾನುಜನ್ ರನ್ನು, ಶಿಕಾಗೋದಲ್ಲಿ ದಕ್ಷಿಣ ಏಷ್ಯಾದ ಅನರ್ಘ್ಯ ರತ್ನ ಎಂದು ಕರೆದಿದ್ದರು. ರಾಮಾನುಜನ್ ರ ಜ್ಞಾನ, ಪಾಂಡಿತ್ಯ, ಅವರ ನಂತರವೂ ನಮಗಾಗಿ ಉಳಿದಿರುವ ಎಂದೂ ಹೊಳೆಯುವ ರತ್ನಗಳು ಎಂದೇ ನನ್ನ ಭಾವನೆ.

          ಕಥೆಗಳೇನೇ ಇರಲಿ, ಅವನು ನಾವು ಹೇಗೆ ಓದಬೇಕು, ಹೇಗೆ ಕೇಳಬೇಕು, ಬರೆಯಬೇಕು? ಒಂದು ಭಾಷೆ ಇನ್ನೊಂದಕ್ಕಿಂತ ಸಾಹಿತ್ಯಕವಾಗಿ ಮಿಗಿಲು ಎಂದು ಭಾಸವಾಗದಿರಲು ಏನು ಮಾಡಬೇಕು ಎಂಬಿತ್ಯಾದಿ ಸೂಚನೆಗಳನ್ನು ರಾಮಾನುಜನ್ ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಸಮಾಜದ ಒಂದು ವರ್ಗ ಇನ್ನೊಂದರ ಮೇಲೆ ಮೇಲುಗೈ ಸಾಧಿಸಲು ಹೆಣಗುತ್ತವೆಯಷ್ಟೇ! ಆದರೆ, ಗಂಡುಧ್ವನಿ ಎಷ್ಟೇ ಗಟ್ಟಿಯಿದ್ದರೂ, ಹೆಣ್ಣಿನ ಧ್ವನಿ ಅದಕ್ಕೆ ಸರಿಸಮಾನವಾದುದು. ಪ್ರಪಂಚದ ಬಗ್ಗೆ ಮೇಲ್ಜಾತಿಯವರ ತಿಳುವಳಿಕೆ ಏನಿದೆಯೋ, ಕೆಳಜಾತಿಯವರದ್ದೂ ಅಷ್ಟೇ ಮುಖ್ಯ. ರಾಮಾನುಜನ್ ರಿಗೆ ಕಿವಿಗೊಟ್ಟರೆ ನಮಗೆ ಪದೇ ಪದೇ ಕೇಳುವುದು ಬಹುತ್ವದ ಮಹತ್ವ. ಯಾವುದೇ ಆಗುಹೋಗುಗಳಿಗೆ ಬಹಳ ಆಯಾಮಗಳಿರುತ್ತವೆ. ಅವನೆಲ್ಲಾ ಒಂದೇ ಕಿಂಡಿಯಲ್ಲಿ ನೋಡಿ, ಸರಳೀಕರಿಸಿ, ಮಿಕ್ಕಿದ್ದನ್ನೆಲ್ಲಾ ಸುಳ್ಳು ಎನ್ನಲಾಗುವುದಿಲ್ಲ. ಎಲ್ಲಾ ಕಥೆಗಳು ಮುಖ್ಯ. ಬಾಹುಳ್ಯವನ್ನು ಮರೆತು, ಒಂಟಿ ಸತ್ಯದ ಹಿಂದೆ ಬಿದ್ದಿರುವ ಸಮಾಜದಲ್ಲಿ, ರಾಮಾನುಜನ್ ರ ಧೋರಣೆಗಳು ಇಂದಿಗೂ ಪ್ರಸ್ತುತ.

ಕೃಪೆ : thewire.in


ಅನುವಾದ : ಯಶಸ್ವಿನಿ ಪ್ರಕಾಶ್ 

One comment to “ಅಚ್ಚಳಿಯದ ಬೌದ್ದಿಕ ರತ್ನ- ಎ. ಕೆ. ರಾಮಾನುಜನ್”
  1. ಸುಲಲಿತ, ಸುಂದರ ಅನುವಾದ. 🙂 ರಾಮಾನುಜನ್ ನಿಜಕ್ಕೂ ಒಂದು ರತ್ನವೇ.

    ಅದರ ಹೊರತಾಗಿ, ‘ಸಂಗಮ್’ ‘ನ್ನು ಪ್ರೊ. ಶೆಟ್ಟರ್ ಅವರು ‘ಶಂಗಂ'(ತಮ್ಮ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ’ ಯಲ್ಲಿ) ಎಂದು ಬಳಸಿರುವುದನ್ನು ಗಮನಿಸಬಹುದು. ಹಾಗೆಯೇ, ‘ಅನುವಾದ’ ಮತ್ತು ‘ಭಾಷಾಂತರ’ ಎಂಬ ಬೇರೆಬೇರೆ ಪದಗಳ ಬದಲು ಒಂದೇ ಪದವನ್ನು ಬಳಸಬಹುದೇನೋ.

ಪ್ರತಿಕ್ರಿಯಿಸಿ