ನಾಡೋಜ ಪಂಡಿತ್ ರಾಜೀವ ತಾರಾನಾಥ್ ಜೊತೆ ಮಾತುಕತೆ – ಭಾಗ ೧

ಜನವರಿ 1, 2018. ಇಡೀ ವಿಶ್ವ ಹೊಸ ವರುಶದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಋತುಮಾನ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ಅದಕ್ಕೆ ಕಾರಣ ಹೊಸ ವರುಶದ ಆಗಮನವಾಗಿರಲಿಲ್ಲ. ವಿಶ್ವಮಾನ್ಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥರೊಂದಿಗೆ ನಡೆಸಿದ ಸಂದರ್ಶನವಾಗಿತ್ತು.

ಎಂಭತ್ತೈದರ ಹರೆಯದ ಪಂಡಿತ್ ರಾಜೀವ್ ತಾರಾನಾಥರು ಮೈಸೂರಿನ ತಮ್ಮ ಸರಸ್ವತೀಪುರಂನ ಮನೆಯಲ್ಲಿ ಒಳ್ಳೆಯ ಲಹರಿಯಲ್ಲಿ ಕುಳಿತಿದ್ದರು. ಋತುಮಾನದ ಗೆಳೆಯರಾದ ಶ್ರೀ ವೇಣುಗೋಪಾಲ್ ಹಾಗೂ ಶಶಿಕುಮಾರ್ ಸಂದರ್ಶನ ನಡೆಸಿಕೊಟ್ಟರು.

ಪಂಡಿತ್ ರಾಜೀವ್ ತಾರಾನಾಥರ ಪರಿಚಯ ಕರ್ನಾಟಕದ ಬಹಳಷ್ಟು ಮಟ್ಟಿಗೆ ಇದೆ, ನಿಜ. ಆದರೆ, ಇಂದಿನ ತಲೆಮಾರಿಗೆ ಅವರು ಚಿರಪರಿಚಿತರೇನಲ್ಲ. ಹೊಸ ತಲೆಮಾರಿಗೆ ಅವರನ್ನು ತಲುಪಿಸುವುದ ಒಂದು ಕಿರು ಪ್ರಯತ್ನವೇ ಈ ಸಂದರ್ಶನ. ಅದಕ್ಕೆ ಪೂರಕವಾಗಿ ಈ ಪೀಠಿಕೆ.

ಆಧುನಿಕ ಕನ್ನಡದ ಆರಂಭ ಕಾಲದ ಬಹುಶ್ರುತರಲ್ಲೊಬ್ಬರಾದ ಪಂಡಿತ್ ತಾರಾನಾಥರ ಮಗ ರಾಜೀವ್ ತಾರಾನಾಥ್. ಚಿಕ್ಕಂದಿನಿಂದಲೇ ದಿಗ್ಗಜರಿಂದ ಸಂಗೀತ ತರಬೇತಿ ಪಡೆದು ಇಪ್ಪತ್ತನೇ ವಯಸ್ಸಿಗೆ ಸಂಗೀತ ಕಚೇರಿ ನೀಡಿದರೂ, ಅವರು ಮೊದಲು ಮುಖ ಮಾಡಿದ್ದು ಸಾಹಿತ್ಯದತ್ತ. ಇಂಗ್ಲಿಶ್ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ಯು. ಆರ್. ಅನಂತಮೂರ್ತಿ, ಷ. ಶೆಟ್ಟರ್ ಅಂತಹ ದಿಗ್ಗಜರು ಸಹಪಾಠಿಗಳಾಗಿದ್ದರು. ಇಂಗ್ಲಿಶ್ ಸಾಹಿತ್ಯದಲ್ಲಿ ಎಂಎ ಪದವಿ ಪಡೆದ ಬಳಿಕ, ತಾರಾನಾಥರು ಆಧುನಿಕತಾವಾದಿ ಕವಿ ಟಿ ಎಸ್ ಎಲಿಯಟ್ ಕಾವ್ಯದ ಕುರಿತು ಪಿಎಚ್ಡಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಪದವಿ ಪಡೆದರು. ನಂತರದಲ್ಲಿ ಇಂಗ್ಲಿಶ್ ಪ್ರೊಫೆಸರ್ ಆಗಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಸಂಸ್ಥೆಗಳಲ್ಲಿ ದುಡಿದರು. ನವ್ಯದ ಉತ್ತುಂಗದಲ್ಲಿ ಪ್ರಮುಖ ವಿಮರ್ಶಕರಾಗಿದ್ದ ಇವರು, ಅನುವಾದಕರಾಗಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಕಂಬಾರರ ಕೆಲ ಕೃತಿಗಳನ್ನು ಇಂಗ್ಲಿಶ್ ಗೆ ಅನುವಾದಿಸಿದ್ದರು. ತಾರಾನಾಥರು ತಮ್ಮ ತಲೆಮಾರಿನ ಅತ್ಯಂತ ಪ್ರಖರ ವಿಚಾರವಾದಿ ಕೂಡ ಹೌದು. “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂದು ಹೇಳುವ ಹಾಗೆ, ತಾರಾನಾಥರು ಎಲ್ಲವನ್ನೂ ತೊರೆದು ಸರೋದ್ ಗೆ ಶರಣಾಗಿ, ಕಲಕತ್ತೆಯ ಉಸ್ತಾದ್ ಅಲಿ ಅಕ್ಬರ್ ಖಾನ್ ರ ಶಿಷ್ಯತ್ವ ಸ್ವೀಕರಿಸಿದರು. ಆನಂತರದಲ್ಲಿ ಪಂಡಿತ್ ರವಿಶಂಕರ್ ಹಾಗೂ ಅವರ ಪತ್ನಿ ಅನ್ನಪೂರ್ಣಾದೇವಿ ಅವರಿಂದಲೂ ಸಂಗೀತ ಶಿಕ್ಷಣ ಪಡೆದರು.

ಉಸ್ತಾದ್ ಅಲಿ ಅಕ್ಬರ್ ಖಾನ್ ತಮ್ಮ ಶಿಷ್ಯಂದಿರಿಗೆ ಹೇಳಿದ್ದರು: “ನೀವು ಹತ್ತು ವರುಶ ಸಂಗೀತ ಕಲಿತರೆ, ನಿಮ್ಮನ್ನು ನೀವು ಮೆಚ್ಚಿಸಬಹುದು. ಇಪ್ಪತ್ತು ವರುಶ ಕಲಿತರೆ, ಸಾಧಕನಾಗಿ ಪ್ರೇಕ್ಷಕರನ್ನು ಮೆಚ್ಚಿಸಬಹುದು. ಮೂವತ್ತು ವರುಶಗಳ ನಂತರ ನಿಮ್ಮ ಗುರುವನ್ನೂ ಮೆಚ್ಚಿಸಬಹುದು. ಆದರೆ, ನಿಜವಾದ ಕಲಾವಿದನಾಗಬೇಕೆಂದರೆ, ಇನ್ನೂ ಹೆಚ್ಚು ವರುಶಗಳ ಕಾಲ ಸಾಧನೆ ಮಾಡಬೇಕು. ಆಗ ಪರಮಾತ್ಮನನ್ನೂ ಮೆಚ್ಚಿಸಬಹುದು.” ಅಂತೆಯೇ, 85ರ ಹರೆಯದಲ್ಲೂ ತಾರಾನಾಥರು ಸರೋದನ್ನು ಕೈಬಿಟ್ಟಿಲ್ಲ.

ದೇಶವಿದೇಶಗಳಲ್ಲಿ ಅಸಂಖ್ಯಾತ ಸಂಗೀತ ಕಚೇರಿ ನೀಡಿದ್ದು ಮಾತ್ರವಲ್ಲದೆ, ಫೋರ್ಡ್ ಫೌಂಡೇಶನ್ ನ ವಿದ್ವಾಂಸ ಕೂಡ ಆಗಿದ್ದರು. 1995-2005ರವರೆಗೆ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಪ್ರತಿಷ್ಠಿತ California Insitute of the Arts ನ ಸಂಗೀತ ವಿಭಾಗದ ಸದಸ್ಯ ಕೂಡ ಆಗಿದ್ದರು. ಇವರು ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನ ಅಂಕಿತಾ ಪ್ರಕಾಶನದ ‘ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್’ ಹಾಗೂ ಮೈಸೂರಿನ ರಾಗಮಾಲಾ ಪ್ರಕಾಶನದ ‘ವಾದಿ-ಸಂವಾದಿ’ ತಾರಾನಾಥರ ಕುರಿತು ಇಲ್ಲಿಯವರೆಗೆ ಕನ್ನಡದಲ್ಲಿ ಪ್ರಕಟವಾಗಿರುವ ಪ್ರಮುಖ ಕೃತಿಗಳು.

ನಾವು ನುಡಿಸಿದ್ದು ಕಡಿಮೆಯೇ. ಅವರೇ ನುಡಿದದ್ದು ಹೆಚ್ಚು. ಗುರೂಜಿ ಸಂಗೀತದ ಬಗ್ಗೆ , ಭಾಷೆಯ ಬಗ್ಗೆ, ತಮ್ಮ ಗುರುಗಳಾದ ಅಲ್ಲಾವುದ್ದೀನ್ ಖಾನ್ ಸಾಬ್ ರ ಬಗ್ಗೆ , ನೆಹರೂ , ಟಾಗೋರ್, ವಿವೇಕಾನಂದರ ವ್ಯಕ್ತಿತವದ ಬಗ್ಗೆ ಸುಮಾರು ಹೊತ್ತು ಮಾತಾಡಿದರು. ಅದರಲ್ಲಿ ನಾವು ದಾಖಲಿಸಲು ಸಾಧ್ಯವಾದದ್ದು ಮುಂದೆ 3-4 ಭಾಗಗಳಲ್ಲಿ ಪ್ರಕಟವಾಗಲಿದೆ.


One comment to “ನಾಡೋಜ ಪಂಡಿತ್ ರಾಜೀವ ತಾರಾನಾಥ್ ಜೊತೆ ಮಾತುಕತೆ – ಭಾಗ ೧”
  1. Having known Rajeev Taranath for more than 50 years, both as a literary critic and musician, I look forward to seeing more of his interviews.

ಪ್ರತಿಕ್ರಿಯಿಸಿ